ಅಕ್ಷರವು ಅ-ಕ್ಷರ(ಅವಿನಾಶಿ) ಎನ್ನುವ ಮಾತು ಇಂದಿನ ಕಂಪ್ಯೂಟರ್ ಕ್ರಾಂತಿಯಿಂದ ಹುಸಿಯಾಗಿ ಕಾಣುತ್ತಿದೆ. ಲಿಪಿ ಅಥವಾ ಬರವಣಿಗೆ ಪವಿತ್ರ ಶಾಶ್ವತ ಮತ್ತು ಅಧಿಕೃತ ಎಂದು ನಂಬಿಕೊಂಡು ಬಂದ ಪರಂಪರೆಯಲ್ಲಿ ಅಕ್ಷರ ಅಮೂಲ್ಯವಾದದ್ದಾಗಿತ್ತು. ಅದಕ್ಕೊಂದು ಸೊಗಸೂ ಇತ್ತು. (ಬಿಂದುವಿನೊಂದು ಶೋಭೆ…….) ಇಂಥ ಸೊಗಸುಗಾರರ, ಲಿಪಿೊ- ಲಿಪಿಕಾರರ ಪರಂಪರೆಯೇ ಕನ್ನಡದಲ್ಲಿತ್ತು. ಲಿಪಿ ಮಾಡುವುದು ಒಂದು ಸೃಜನಾತ್ಮಕ ಕಾಯಕವೂ ಆಗಿತ್ತು. ಇಂಥ ಪರಂಪರೆಯೊಂದರಲ್ಲಿ ಇಂದು ಕಂಪ್ಯೂಟರಿನ ಕೀಲಿಮಣೆಯೊಂದಿಗೆ ಬೆಸೆದುಕೊಂಡು ಮೂಡಿ ಮಾಯವಾಗುವ ಅಕ್ಷರಗಳ ಭ್ರಮಾತ್ಮಕ ಮತ್ತು ಅಮೂರ್ತ ಜಗತ್ತೇ ತೆರೆದುಕೊಳ್ಳುತ್ತಿದೆ. ಲಿಖಿತ ರೂಪವೊಂದರಲ್ಲಿ ಮೈತಳೆಯುವ ಮೊದಲೇ ಅಕ್ಷರಗಳು ಕಂಪ್ಯೂಟರ್‌ನಲ್ಲಿ ಮೂಡುತ್ತಿವೆ. ಕನ್ನಡದ ವೃತ್ತಿಪರ ಪತ್ರಿಕೋದ್ಯೋಗಿಗಳು ದಿನವೂ ತಮ್ಮ ಪತ್ರಿಕಾ ಬರಹಗಳನ್ನು ಕಂಪ್ಯೂಟರ್ ನಲ್ಲಿಯೇ ಮೂಡಿಸುತ್ತಿದ್ದಾರೆ. ಅಂತರ್ಜಾಲದಲ್ಲಿ ಇ-ಮೇಲ್ ಕಳಿಸುವವರು ಕೂಡ ನೇರವಾಗಿ ಕಂಪ್ಯೂಟರ್ ಮೇಲೆ ಬರೆಯುತ್ತಿದ್ದಾರೆ. ಇನ್ನು ಮುಂದುವರಿದು ಹೇಳುವುದಾದರೆ ಇಂದು ಧ್ವನಿ ಸಹಾಯದಿಂದಲೇ ನೇರವಾಗಿ ಕಂಪ್ಯೂಟರ್ ಮೇಲೆ ಲೇಖನ ಮಾಡುವ ದಾರಿಗಳು ತೆರೆದುಕೊಂಡಿವೆ ಎಂಬುದು ಗಮನಾರ್ಹ. ಪೆನ್ನು ಪೇಪರ್ ರಹಿತ ಸಾಮಾಜಿಕ ಆವರಣ ಅನಾವರಣಗೊಳ್ಳುತ್ತಿದೆ. ಬರವಣಿಗೆಯ ಕ್ರಮಕ್ಕೂ ಕೀಲಿಮಣೆಯ ಕಸರತ್ತಿಗೂ ಅಗಾಧವಾದ ವ್ಯತ್ಯಾಸ ಕಾಣುತ್ತಿದೆ. ಒಂದು ರೀತಿಯಲ್ಲಿ ಇದನ್ನು ಕನ್ನಡ ಬರವಣಿಗೆಯ ಪಲ್ಲಟವೆಂದರೂ ನಡೆದೀತು. ಉದಾಹರಣೆಗೆ ‘ತಂತ್ರಜ್ಞಾನ’ ಎಂದು ಬರೆಯುವಲ್ಲಿ ‘‘ಜ್ಞಾ’’ ಬರೆಯಬೇಕೆಂದರೆ ಸಾಮಾನ್ಯವಾಗಿ ‘ಜಾ’ ಬರೆದು ‘ಞ’ ಒತ್ತನ್ನು ಕೊಡುವುದು ವಾಡಿಕೆ. ಆದರೆ ಕಂಪ್ಯೂಟರ್ ಕೀಬೋರ್ಡಿನಲ್ಲಿ ‘ಜ’ ಬರೆದು (ಆಂಗ್ಲ, ಜೆ) ‘ಞ’ ಒತ್ತು ನೀಡಿ ಆಮೇಲೆ ‘ಆ’ ಸ್ವರ ಸೇರಿಸಿ ‘ಜಾ’ ಮಾಡಿ ‘ಜ್ಞಾ’ ಅಕ್ಷರವನ್ನು ಸಿದ್ಧಪಡಿಸಿಕೊಳ್ಳುವ ಸೌಲಭ್ಯಗಳು ನಿಹಿತವಾಗಿವೆ. ಇಂದು ವಿವಿಧ ಕಂಪನಿಗಳು ವಿವಿಧ ಸಾಫ್ಟ್‌ವೇರ್‌ಗಳು ವಿವಿಧ ರೀತಿಯ ಅಕ್ಷರ ಸಂಯೋಜನೆಯನ್ನು ಹೊಂದಿದ್ದು ಕಾಣುತ್ತದೆ. ಹೀಗೆ ತಂತ್ರಜ್ಞಾನ ನಮ್ಮ ಭಾಷಾ ಬರವಣಿಗೆಯ ಕೌಶಲವೊಂದನ್ನು ಅಮೂಲಾಗ್ರವಾಗಿ ಬದಲಾಯಿಸಲು ಸನ್ನದ್ಧವಾಗಿದೆ. ಯೋಚಿಸುತ್ತ ತಾಳೆಗರಿ ಅಥವಾ ಹಾಳೆಯ ಮೇಲೆ ಬರೆಯುವ ಕ್ರಮಕ್ಕೂ ಕಂಪ್ಯೂಟರ್ ತೆರೆಯ ಮೇಲೆ ನೇರವಾಗಿ ಮೈತಳೆಯುವ ಭಾಷಾ ಸ್ವರೂಪಕ್ಕೂ ಅಗಾಧ ವ್ಯತ್ಯಾಸವಿದೆ.

ಹಾಗೆ ನೋಡಿದರೆ ಕನ್ನಡ ಬರವಣಿಗೆಯ ಸ್ವರೂಪವೇ ಮುದ್ರಣಯಂತ್ರದಲ್ಲಿ ಕನ್ನಡದ ಮೊದಲ ಗ್ರಂಥ ಪ್ರಕಟವಾದಾಗಿನಿಂದಲೂ ಬದಲಾಗಿದೆ. ಮುದ್ರಣಯಂತ್ರ, ಬೆರಳಚ್ಚು ಯಂತ್ರ, ಮೈಕ್ರೋಫಿಲ್ಮಗಳ ಆವಿಷ್ಕಾರಗಳು ಅಕ್ಷರ ಸಂಯೋಜನೆಗೆ ಮತ್ತು ಅದನ್ನು ಗ್ರಹಿಸುವ ವಿಧಾನದಲ್ಲಿಯೇ ಬದಲಾವಣೆ ತಂದವು. ಬರವಣಿಗೆಯ ಮಾಧ್ಯಮದ ಬದಲಾವಣೆಯೂ ಇಂತಹ ಸ್ವರೂಪ ವ್ಯತ್ಯಾಸಕ್ಕೆ ಕಾರಣಗಳೂ ಆಗಿವೆ. ಹಸ್ತಪ್ರತಿಗಳಂತಹ ಕೈಬರಹಗಳು ಪರಿಣತ ಓದುಗರನ್ನು ಬಯಸುತ್ತವೆ. ಆದರೆ ಮುದ್ರಣ, ಬೆರಳಚ್ಚು, ಕಂಪ್ಯೂಟರ್ ಯಂತ್ರಗಳಂತಹ ತಂತ್ರಜ್ಞಾನದ ಪ್ರಭಾವಗಳು ಬರಹದ ವಿನ್ಯಾಸವನ್ನು ಪ್ರಮಾಣೀಕರಿಸಿದ ಕಾರಣವಾಗಿ ಇಂದು ಒದುವುದು ಎಂದರೆ ಅಂತಹ ವಿಶೇಷ ತಜ್ಞತೆಯ ಕೆಲಸವಾಗಿ ಉಳಿದಿಲ್ಲ. ಪ್ರಮಾಣಬದ್ಧವಾದ ಈ ಅಕ್ಷರ ವಿನ್ಯಾಸದ ಆವಿಷ್ಕಾರಗಳು ಓದುವ ಕ್ರಿಯೆಯನ್ನು ಹೆಚ್ಚು ಶ್ರಮವಿಲ್ಲದೆ ವೇಗವಾಗಿ ಓದುವ, ಹೆಚ್ಚು ತಿಳಿಯುವ, ಸಾರ್ವತ್ರಿಕ ಸಾಮರ್ಥ್ಯವನ್ನು ಒದಗಿಸಿವೆ ಎಂಬುದು ಗಮನಾರ್ಹ.

ಕನ್ನಡ ಹಸ್ತಪ್ರತಿಯಂತಹ ತೀರ ಪ್ರಾಚೀನ ಮತ್ತು ಸಾಂಪ್ರದಾಯಿಕವಾದ ಕ್ಷೇತ್ರದಲ್ಲಿ ಕಂಪ್ಯೂಟರ್ ಬಳಕೆ ಇಂದು ಸಾಂಪ್ರದಾಯಿಕ ಮನಸ್ಸುಗಳ ಮೂಗುಮುರಿಯುವಿಕೆಯ ಮಧ್ಯೆಯೂ ಸಾಧ್ಯವಾಗುತ್ತಿರುವುದು ಸಂತಸದ ವಿಷಯ. ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ೧೯೯೯ ರಿಂದಲೂ (ಈ ಕ್ಷೇತ್ರದಲ್ಲಿ ಮೊಟ್ಟಮೊದಲಬಾರಿಗೆ) ಕಂಪ್ಯೂಟರನ್ನು ಬಳಸಿ ಹಸ್ತಪ್ರತಿಗಳನ್ನು ಸಂರಕ್ಷಿಸುವ, ಸಂಗ್ರಹಿಸಿಡುವ, ಅಧ್ಯಯನಿಸುವ ಕೆಲಸವನ್ನು ಮಾಡುತ್ತಿದೆ. ಭೂತಗನ್ನಡಿ ಹಿಡಿದು ಕೆಲವರು ಮಾತ್ರ ಓದಲು ಸಾಧ್ಯವಾಗುತ್ತಿದ್ದ ಹಸ್ತಪ್ರತಿಗಳನ್ನು ಇಂದು ಗಣಕೀಕರಣಕ್ಕೆ ಅಳವಡಿಸುವ ಮೂಲಕ ಅದನ್ನು ಸಾರ್ವತ್ರಿಕ ಓದಿಗೆ ಒಳಪಡಿಸಲಾಗುತ್ತದೆ. ಹಸ್ತಪ್ರತಿಯೊಂದನ್ನು ಸ್ಕ್ಯಾನ್ ಮಾಡುವ ಮೂಲಕ ಗಣಕ ಪರದೆಯ ಮೇಲೆ ತಂದು ಗ್ರಾಫಿಕ್ ಸಾಫ್ಟ್ ವೇರಿನ (ಫೋಟೋಶಾಪ್ -ಫೋಟೋಫಿನಿಷ್) ಸಹಾಯದಿಂದ ಇಮೇಜ್ ರೂಪದಲ್ಲಿರುವ ಹಸ್ತಪ್ರತಿಯಲ್ಲಿನ ಕೊಳೆಯನ್ನು ಸ್ವಚ್ಚ ಮಾಡುವ ಮತ್ತು ಕಣ್ಣಿಗೆ ಹಿತವಾಗುವಂತೆ ವಿವಿಧ ಆಕಾರ ಮತ್ತು ಬಣ್ಣಗಳಲ್ಲಿ ಹಿಗ್ಗಿಸುವ- ಕುಗ್ಗಿಸುವ ಕೆಲಸ ಮಾಡಬಹುದಾಗಿದೆ. ಹಸ್ತಪ್ರತಿಯಲ್ಲಿ ಅಸ್ಪಷ್ಟವಾಗಿ ಕಾಣುವ ಅಕ್ಷರವನ್ನು ಮತ್ತಷ್ಟು ಆಳವಾಗಿ ಮತ್ತು ಸೂಕ್ಷ್ಮವಾಗಿ ಇಲ್ಲಿ ಗಮನಿಸಬಹುದಾಗಿದೆ. ಹಾಗೆಯೇ ತ್ರುಟಿತಗೊಂಡ ಹಸ್ತಪ್ರತಿಯನ್ನು ರಿಪೇರಿ ಮಾಡುವ, ಲುಪ್ತಗೊಂಡ ಮತ್ತು ಅಕ್ಷರಗಳಿಲ್ಲದ ಭಾಗಗಳನ್ನು ಪುನಾರಚಿಸುವ ಸಾಧನಗಳು ಕಂಪ್ಯೂಟರಿನಿಂದ ಪ್ರಾಪ್ತವಾಗಿವೆ. ಹೀಗೆ ಇಲ್ಲವಾದ ಅಕ್ಷರಗಳನ್ನು ಗಣಕೀಕೃತ ಪಠ್ಯದಲ್ಲಿಯೇ ಹುಡುಕಿ ತೆಗೆಯುವುದು ಒಂದು ರೀತಿಯಾದರೆ, ಸ್ಕೈಲೆಸ್ ಎನ್ನುವ ಪೆನ್ನಿನಂತಹ ಉಪಕರಣದಿಂದ ಬರೆದು ಸೇರಿಸುವುದು ಮತ್ತೊಂದು ರೀತಿಯ ಸಾಧ್ಯತೆಯಾಗಿದೆ. ಗಣಕ ಪರದೆಯ ಮೇಲೆ ಊನಗೊಂಡ ಹಸ್ತಪ್ರತಿಯನ್ನು ಹೀಗೆ ಹಲವು ಉಪಾಯಗಳಿಂದ ಪುನಾರಚಿಸಿ ಕೊಳ್ಳಬಹುದಾಗಿದೆ.

ಗಣಕ ಪರದೆಯ ಮೇಲೆ ಹೀಗೆ ಊನಗೊಂಡ ಹಸ್ತಪ್ರತಿಯೊಂದನ್ನು ಪುನಾರಚಿಸಲು ಮತ್ತು ಪರಿಷ್ಕರಿಸಲು ಬಹುಮುಖ್ಯವಾಗಿ ಬೇಕಾಗಿದ್ದು ಕಾರ್ಪಸ್ . ಹಸ್ತಪ್ರತಿಗಳಂತಹ ಭಾಷಾ ಸಾಮಗ್ರಿಗಳ ಸಂಸ್ಕರಣೆಯ ಎಲ್ಲಾ ಕಾರ್ಯಗಳಿಗೆ ಆಧಾರವಾಗಿರುವುದೇ ಈ ಕಾರ್ಪಸ್ , ಕಾರ್ಪಸ್ ಎಂದರೆ ಸೂಕ್ಷ್ಮವಾಗಿ ಎಚ್ಚರಿಕೆಯಿಂದ ಆಯ್ದ ಪ್ರಾತಿನಿಧಿಕ ಪಠ್ಯಗಳ ಎಲೆಕ್ಟ್ರಾನಿಕ್ ರೂಪದ ಸಂಗ್ರಹ, ಹಸ್ತಪ್ರತಿಗಳು ಪ್ರಧಾನವಾದ ಕಾರ್ಪಸ್ಸನ್ನು ಮೂರು ರೀತಿಯಲ್ಲಿ ಸೃಷ್ಟಿಸಬಹುದಾಗಿದೆ. ಅಂದರೆ ಹಸ್ತಪ್ರತಿಯೊಂದನ್ನು ಗಣಕೀಕರಣಕ್ಕೆ ಅಳವಡಿಸಲು ಮೂರು ರೀತಿಯ ವಿಧಾನಗಳನ್ನು ಬಳಸಬಹುದು.

೧. ಡಿ.ಟಿ.ಪಿ ಸಾಫ್ಟ್‌ವೇರ್ ಅಥವಾ ಪದಸಂಸ್ಕರಣ ಅಥವಾ ಸಂಕಲನ ಬಳಸಿಕೊಂಡು ಕೀಬೋರ್ಡ್ ಸಹಾಯದಿಂದ ಕಂಪ್ಯೂಟರ್ ಗೆ ಅಳವಡಿಸುವುದು. ಇದನ್ನು ಕೀ ಇನ್ ಮಾಡುವುದು ಎಂದು ಹೇಳಬಹುದು.

೨. ಸ್ಕ್ಯಾನರ್ ಯಂತ್ರದ ಮೂಲಕ ಸ್ಕ್ಯಾನ್ ಮಾಡುವುದು, ಅಥವಾ ಡಿಜಿಟಲ್ ಕ್ಯಾಮರಾ ಮೂಲಕ ಸೆರೆ ಹಿಡಿಯುವುದು.

೩. ಮೈಕ್ರೋಫೋನ್ ಮುಖಾಂತರ ಓದಿ ರೆಕಾರ್ಡ್ ಮಾಡುವುದು.

ಮೊದಲನೆಯ ವಿಧಾನವು ಹಸ್ತಪ್ರತಿಯಲ್ಲಿರುವ ಪಠ್ಯವನ್ನು ಕಂಪ್ಯೂಟರ್ ಕೀಬೋರ್ಡ್ ಮೂಲಕ ಬೆರಳಚ್ಚಿಸುವುದು. ಹಳಗನ್ನಡದಲ್ಲಿರುವ ಇಂಥ ಪಠ್ಯವನ್ನು ಬೆರಳಚ್ಚಿಸಲು ತಜ್ಞತೆ ಬೇಕು. ಇಲ್ಲವೇ ತಜ್ಞರಿದ್ದವರು ಬರೆದು ಕೊಡಬೇಕು. ಇದು ಶ್ರಮ ಮತ್ತು ಹೆಚ್ಚು ಸಮಯವನ್ನು ಬೇಡುವಂಥದ್ದು. ಹಸ್ತಪ್ರತಿಯ ಮೂಲರೂಪ ನಮಗಿಲ್ಲಿ ದೊರಕದು.

ಎರಡನೆಯ ವಿಧಾನವೂ ಹಸ್ತಪ್ರತಿಯ ಮೂಲರೂಪವನ್ನು ಯಥಾವತ್ತಾಗಿ ಹಿಡಿದಿಟ್ಟುಕೊಳ್ಳಲು ಸಹಾಯಕವಾಗುವಂಥದ್ದು. ಇದಕ್ಕೆ ಸ್ಕ್ಯಾನರ್ ಜೊತೆಗೆ ಡಿಜಿಟಲ್ ಕ್ಯಾಮರಾವನ್ನು ಬಳಸಿಕೊಳ್ಳಬಹುದಾಗಿದೆ. ಹಸ್ತಪ್ರತಿಗಳ ಸ್ಥಿರ ಚಿತ್ರಣ ಪಡೆಯುವಲ್ಲಿ ಮತ್ತು ಅದನ್ನು ವಿವಿಧ ರೀತಿಯಲ್ಲಿ ಪರಿಷ್ಕರಿಸುವ ಮತ್ತು ಪುನಾರಚಿಸುವ ನಿಟ್ಟಿನಲ್ಲಿ ಈ ವಿಧಾನ ತುಂಬಾ ಉಪಯುಕ್ತವಾಗಿದೆ. ಹೀಗೆ ಸ್ಥಿರ ರೂಪದಲ್ಲಿ ಮತ್ತು ಸ್ವಸ್ಥಸ್ಥಿತಿಯಲ್ಲಿ ಇಮೇಜ್ ರೂಪದಲ್ಲಿ ಸಿಗುವ ಹಸ್ತಪ್ರತಿಯಲ್ಲಿ ICR (Intelligent Character Recognaition) ಮತ್ತು OCR (optical Character Recognaiser)ಗಳ ಸಹಾಯದಿಂದ ಟೈಪಿನ ಅಗತ್ಯವಿಲ್ಲದೆ ನೇರವಾಗಿ ನಮಗೆ ಬೇಕಾದ ಭಾಷೆಗೆ ಪರಿವರ್ತಿಸಿಕೊಳ್ಳಬಹುದಾಗಿದೆ. ಹಸ್ತಪ್ರತಿಯೊಳಗಡೆ ನಮಗೆ ಬೇಕಾದಲ್ಲಿ ಪ್ಯಾರಾ ಮಾಡುವ, ತೆರಪನ್ನು ಸೂಚಿಸುವ, ಅಕ್ಷರಗಳನ್ನು ಬೋಲ್ಡ್ ಮಾಡುವ, ಬೇಡವಾದದ್ದನ್ನು ತೆಗೆದುಹಾಕುವ, ಬೇಕಾದ್ದನ್ನು ಸೇರಿಸುವ ಸಾಧ್ಯತೆಗಳು ಮೈಚಾಚಿವೆ. ಇಂಥ ಕೈ ಬರಹವನ್ನು ಅರ್ಥಮಾಡಿಕೊಳ್ಳುವಲ್ಲಿ ಕಂಪ್ಯೂಟರ್‌ನಲ್ಲಿ ಎರಡು ವಿಧಗಳಿವೆ. ೧. ಆಫ್ ಲೈನ್ ಹ್ಯಾಂಡ್ ರೈಟಿಂಗ್ ರಿಕಗ್ನಿಷನ್ (Offline Hand Writing) ೨. ಆನ್ ಲೈನ್ ರಿಕಗ್ನಿಷನ್(O-Line recognition) ಮೊದಲನೆಯದು ಹಾಳೆಯ ಮೇಲಿರುವ ಅಕ್ಷರಗಳನ್ನು ಗುರುತಿಸಲು ಮತ್ತು ಅರ್ಥೈಸಲು ಸಹಾಯಕವಾದರೆ, ಎರಡನೆಯದು ಎಲ್‌ಸಿಡಿ ಮಾನಿಟರ್‌ನಲ್ಲಿ ಪೆನ್ನಿನಂತಹ ಒಂದು ವಸ್ತುವಿನ ಚಲನೆಯನ್ನಾಧರಿಸಿ ಅಕ್ಷರ ಗುರುತಿಸುತ್ತದೆ. ಅಂದರೆ ಗಣಕ ಪರದೆಯ ಮೇಲೆ ಪೆನ್ನಿನಂತಹ ಉಪಕರಣದಿಂದ ನಾವು ಬರೆದಾಗ ಕಂಪ್ಯೂಟರ್ ಈ ವಿಶಿಷ್ಟ ಲೇಖನಿಯ ಚಲನೆಯ ಗತಿಯನ್ನು ಆಧರಿಸಿ ಕೈಬರಹಗಳನ್ನು ಅರ್ಥೈಸುತ್ತದೆ.

ಮೂರನೆಯ ವಿಧಾನವು ಹಸ್ತಪ್ರತಿಗಳ ಸ್ಥಿರ ಚಿತ್ರಗಳ ಬದಲಾಗಿ ಆ ಪಠ್ಯದ ಧ್ವನಿ ರೂಪವನ್ನು ನಮಗೆ ಕೊಡುತ್ತದೆ. Speech to Text(ಮಾತಿನಿಂದ ಪಠ್ಯಕ್ಕೆ) ಸಾಫ್ಟ್ ವೇರ್‌ನ ಸಹಾಯದಿಂದ ಹಸ್ತಪ್ರತಿಗಳನ್ನು ಓದಿ ಅದನ್ನು ಸಂಕಲಿಸಬಹುದಾದ ಪಠ್ಯವನ್ನಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ.

ಸಂಕಲನ ಮತ್ತು ಪರಿಷ್ಕರಣ

ಹಸ್ತಪ್ರತಿಯೊಂದರ ಸಂಕಲನ ಮತ್ತು ಪರಿಷ್ಕರಣಕ್ಕೆ ಟೈಪ್ ಟೋಕನ್(Type Token) ಹಾಗೂ ಮಾರ್ಫಾಲಾಜಿಕಲ್ ವಿಶ್ಲೇಷಕಗಳು ತುಂಬ ಸಹಕಾರಿಯಾಗಿವೆ. ಕಾರ್ಪಸ್ ನಿಂದ ನಾವು ಎಲ್ಲಾ ನಿರ್ದಿಷ್ಟ ಪದರೂಪಗಳ ಮತ್ತು ಅವುಗಳ ಪುನರಾವರ್ತನೆಯ ಸಂಖ್ಯೆಯನ್ನು ಪಡೆಯಬಹುದಾಗಿದೆ. ಟೈಪ್ ಟೋಕನ್ ವಿಶ್ಲೇಷಕವು ನೀಡುವ ಸಂಪೂರ್ಣ ಪದರೂಪಗಳ ಮತ್ತು ನಿಷ್ಪತ್ತಿ ರೂಪಗಳ ಸಹಾಯದಿಂದ ಶಬ್ದ ವಿಶ್ಲೇಷಕ ಬಳಸಿ ಒಂದು ಪದದ ಮೂಲರೂಪವನ್ನು ಅದರ ಆಂತರಿಕ ರಚನೆಯ ವಿನ್ಯಾಸಗಳನ್ನು ಮತ್ತು ಸಹೋದರ ಭಾಷೆಗಳಲ್ಲಿ ಅದು ಪಡೆದಿರುವ ಅರ್ಥಗಳನ್ನು ಹುಡುಕಿ ಪಡೆಯಬಹುದಾಗಿದೆ. Key-word-in Context ಉಪಕರಣದ ಮೂಲಕ ಕಾರ್ಪಸ್ ನಲ್ಲಿ ನಿರ್ದಿಷ್ಟ ಪದವು ಬಳಕೆಯಾಗಿರುವ ಎಲ್ಲಾ ವಾಕ್ಯಗಳ ಪಟ್ಟಿಯನ್ನು ತಯಾರಿಸಬಹುದು. ಒಂದು ಪದವು ವಿಭಿನ್ನ ಸಂದರ್ಭದಲ್ಲಿ ಯಾವ ಯಾವ ಅರ್ಥದಲ್ಲಿ ಬಳಕೆಯಾಗಿದೆ. ಎಷ್ಟೆಷ್ಟು ಸಲ ಬಳಕೆಯಾಗಿದೆ ಎನ್ನುವುದನ್ನು ಕಂಡುಕೊಳ್ಳಬಹುದಾಗಿದೆ. ಇದು ಕೃತಿಕಾರನೊಬ್ಬನ ಜೀವನ ದೃಷ್ಟಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಉದಾಹರಣೆಗೆ ಮುದ್ದಣ ತನ್ನ ಒಟ್ಟು ಕಾವ್ಯಗಳಲ್ಲಿ ಉಪಯೋಗಿಸಿದ ಸ್ತ್ರೀವಾಚಿ ಶಬ್ದಗಳನ್ನು ಪಟ್ಟಿ ಮಾಡಿದರೆ ಸುಮಾರು ೯೦೦ ಬಾರಿ ಉಪಯೋಗಿಸಿದ್ದನ್ನು ಕಂಪ್ಯೂಟರ್ ಹೇಳುತ್ತದೆ. ಇದರಲ್ಲಿ ಮತ್ತೇ ಕಮಲ, ಚಂದ್ರ ಮುಂತಾದ ಹಳೆಯ ಕ್ರಮದ ಹೇಳಿಕೆಗಳಿರುವುದನ್ನು ಬೇರೆ ಮಾಡಬಹುದು. ಹೆಣ್ಣಿನ ಕೇಶ, ಕಣ್ಣು, ಮುಖ ಮೊದಲಾದ ಅಂಗಾಂಗಗಳನ್ನು ಹೇಳುವ ಶಬ್ದಗಳನ್ನು ಬೇರೆ ಪಟ್ಟಿಮಾಡಬಹುದು. ಅದರಂತೆ ಸ್ತ್ರೀಯ ಸ್ವಭಾವ ಹೇಳುವಂತಹ ಗಡಸುಗಾತಿ, ಚಂಚಲೆ ಇತ್ಯಾದಿ ಪದಗಳನ್ನು ಪ್ರತ್ಯೇಕಿಸಿ ನೋಡಬಹುದು. ಇದರಿಂದ ಮುದ್ದಣ ಸ್ತ್ರೀಯನ್ನು ಎಷ್ಟೊಂದು ಆಳವಾಗಿ ಪರಿಭಾವಿಸಬಲ್ಲ ಎಂಬುದು ಗೋಚರವಾಗುತ್ತದೆ.

ಹಾಗೆ ಯೀಟ್ಸ್ ಕವಿ ತನ್ನ ಕಾವ್ಯದಲ್ಲಿ ತಂದಿರುವ ಪ್ರಾಣಿ ರೂಪಗಳು ಯಾವುವು ಎಷ್ಟು ಸಲ ಯಾವ ಸಂದರ್ಭದಲ್ಲಿ ಬಳಸುತ್ತಾನೆ ಎನ್ನುವುದರ ಪಟ್ಟಿಮಾಡಬಹುದು. ಕುದುರೆ ೭೯ ಸಲ, ಮೊಲ ೨೩ ಸಲ, ಸಿಂಹ ೨೦ ಸಲ, ತೋಳ ೯ ಸಲ, ಬೆರ್ಚ ೯ ಸಲ, ಕರಡಿ ೩ ಸಲ, ಚಿರತೆ ೩ ಸಲ, ಕತ್ತೆ ೨ ಸಲ ಬಳಕೆಯಾಗಿದ್ದು ಕಂಡುಬರುತ್ತದೆ. ಮೊತ್ತದ ಮೂಲಕವಾದ ಈ ಬಗೆಯ ಅಭ್ಯಾಸವು ಕವಿಯ ಒಟ್ಟಿನ ಶಬ್ದ ಸಂಪತ್ತನ್ನು ಒಂದೆಡೆ ದೊರಕಿಸುವುದರಿಂದ ಅವರ ಭಾಷಾ ಸಂಪತ್ತನ್ನು ಭಾಷಾ ಪ್ರಭುತ್ವವನ್ನು ಆತನ ಒಲವಿನ ವಿಶಿಷ್ಟ ಶಬ್ದ ಪ್ರಯೋಗಗಳನ್ನು ಕಂಡುಕೊಳ್ಳಬಹುದಾಗಿದೆ. ಗ್ರಂಥಸಂಪಾದನೆಗೆ ಈ ವಿಧಾನ ತುಂಬ ಸೂಕ್ತವಾದದ್ದಾಗಿದೆ.

[1]

ಗ್ರಂಥಸಂಪಾದಕನಾದವನು ಒಂದು ಪದಪ್ರಯೋಗವನ್ನು ಅದರ ವೈವಿಧ್ಯಮಯ ಅರ್ಥವಿನ್ಯಾಸಗಳನ್ನು ಕಾಣಲು ಹಾಳೆ-ಲೇಖನಿ ಹಿಡಿದು ಪ್ರತಿ ಕೃತಿಯನ್ನು ಓದಿ ಗುರುತು ಹಾಕಿಕೊಂಡು ವರ್ಗೀಕರಿಸಿ ಅಭ್ಯಸಿಸಬೇಕಾಗುತ್ತದೆ. ಇದು ಶ್ರಮ ಮತ್ತು ಸಮಯಗಳೆರಡನ್ನು ಹೆಚ್ಚು ಬೇಡುತ್ತದೆ. ಕಂಪ್ಯೂಟರ್‌ನಿಂದಾಗಿ ಒಂದು ಪದದ ವೈವಿಧ್ಯಮಯ ಪ್ರಯೋಗಗಳು ವಿವಿಧಾರ್ಥ ಸಾಧ್ಯತೆಗಳು ಅದರ ಮೂಲ ರೂಪದ ಸ್ವರೂಪಗಳು ಒತ್ತಟ್ಟಿಗೇ ಸಿಕ್ಕು ಬಿಡುತ್ತವೆ. ಕನ್ನಡದಂತಹ ಸಂಕೀರ್ಣವಾದ ಆಂತರಿಕ ಪದರಚನಾ ವಿನ್ಯಾಸ ಹೊಂದಿರುವ ಭಾಷೆಗಳ ಸಂಸ್ಕರಣೆಯಲ್ಲಿ ಪದ ಸಂಸ್ಕರಣದ ಮಹತ್ವ ಇನ್ನು ಹೆಚ್ಚಿನದ್ದಾಗಿದೆ.

ಒಂದು ಕಾವ್ಯದ ಸಂಪಾದನೆಯಲ್ಲಿ ಅಥವಾ ಪಠ್ಯವೊಂದರ ಸಂಕಲನದಲ್ಲಿ ಅದರಲ್ಲಿನ ಅಕ್ಷರ, ಮಾತ್ರೆ, ಪದ, ವಾಕ್ಯ, ಸಾಲುಗಳ ಅಂಕಿ ಸಂಖ್ಯಾ ವಿಶ್ಲೇಷಣೆ ಕೂಡ ಬಹಳ ಮಹತ್ವದ ಪಾತ್ರವಹಿಸುತ್ತದೆ. ಇದಕ್ಕೆ Statistical Pos’Taggarನಂತಹ ಸಾಫ್ಟ್ ವೇರ್ ಗಳು ಸಹಾಯಕಾರಿಯಾಗಿವೆ. ಕುಮಾರವ್ಯಾಸನ ಪಠ್ಯವೊಂದನ್ನು ಸಂಕಲಿಸಬೇಕಾದರೆ ಭಾಮಿನಿ ಷಟ್ಪದಿಯ ಎಲ್ಲ ಲಕ್ಷಣಗಳನ್ನು ಸಂಕಲನಕಾರ ತಿಳಿದಿರಬೇಖಾಗುತ್ತದೆ. ವಚನಗಳ ಬಗ್ಗೆ ಕೆಲಸ ಮಾಡುವವರು ವಚನಗಳ ಬಗ್ಗೆ, ವಿವಿಧ ವಚನಕಾರರ ಬಗ್ಗೆ, ವಚನಗಳಲ್ಲಿ ಬಳಕೆಯಾಗುವ ಪದಬಳಕೆಯ ಬಗ್ಗೆ ಅರಿತಿರಬೇಕಾಗುತ್ತದೆ. ಇಲ್ಲದೆ ಹೋದರೆ ಸಂಕಲನಕಾರ ಅಂತಹ ಪಠ್ಯವೊಂದನ್ನು ಮರು ರಚನೆ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ, ವಚನ ಸಾಹಿತ್ಯ ಸಂಪಾದನೆ ಮಾಡ ಹೊರಟಾಗ ವಚನ ಮಿಶ್ರಣ ಮತ್ತು ಪಾಠಮಿಶ್ರಣದ ಹಾವಳಿ ಕಣ್ಣಿಗೆ ಹೊಡೆಯುತ್ತದೆ. ಶರಣರಲ್ಲದವರ ವಚನಗಳು ಇಲ್ಲಿ ಕಾಣಿಸುತ್ತವೆ. ಖೋಟಾ ಕಟ್ಟುಗಳಾದ ಮುಕ್ತಕಂಠಾಭರಣದಂತಹ ವಚನಗಳು ಸಿಗುತ್ತವೆ. ಇವುಗಳನ್ನು ಬೇರ್ಪಡಿಸಿ ನೋಡುವುದು ಕಷ್ಟಸಾಧ್ಯ. ಕಂಪ್ಯೂಟರ್ ಭಾಷಾ ಸಂಸ್ಕರಣ ಘಟಕಗಳು, ಶಬ್ದ ವಿಶ್ಲೇಷಕಗಳು ಇಂದು ಇಂತಹ ಕಷ್ಟಸಾಧ್ಯದ ಕೆಲಸವನ್ನು ಸಾಧ್ಯವಾಗುವಂತೆ ಮಾಡುವ ಸಾಮರ್ಥ್ಯ ಪಡೆದಿವೆ.

ಪಂಪನ ಒಂದು ಪದ್ಯದ ಸಾಲಿನಲ್ಲಿ ಬರುವ ಸುಪುಷ್ಪವೃಷ್ಟಿ ಎನ್ನುವ ಪದ ತುಂಬ ಚರ್ಚೆಗೆ ಒಳಗಾದದ್ದಿದೆ. ಡಿ.ಎಲ್.ನರಸಿಂಹಚಾರ್ಯರಿಂದ ಹಿಡಿದು ಟಿ.ವಿ. ವೆಂಕಟಾಚಲಶಾಸ್ತ್ರಿಗಳವರೆಗಿನ ಹಿರಿಯ ವಿದ್ವಾಂಸರು ಸುಪುಷ್ಪವೃಷ್ಟಿಯೋ ಅಥವಾ ಸುಪುಷ್ಪದೃಷ್ಟಿಯೋ ಎಂದು ಆಳವಾದ ವಿವೇಚನೆಗೆ ಒಳಪಡಿಸಿದ್ದಿದೆ. ಪಾಠ ನಿರ್ಣಯದ ಈ ವಿಧಾನ ತುಂಬಾ ಶ್ರಮದಾಯಕವಾದದ್ದು. ಪಾಠ ನಿರ್ಣಯಿಸುವುದೆಂದರೆ ರೂಪ ನಿರ್ಣಯಿಸುವುದು; ರೂಪ ನಿರ್ಣಯಿಸುವುದೆಂದರೆ ಗುಣ ನಿರ್ಣಯಿಸುವುದೆಂದರ್ಥ. ಶಬ್ದದ ರೂಪ ನಿರ್ಣಯವಾದರೆ ಅದರ ಅರ್ಥಗುಣ ತಾನಾಗೇ ಸರಿಯಾಗುತ್ತದೆ. ಶಬ್ದದ ಆಕೃತಿ ನಿರ್ಣಯ ಮಾಡುವುದರಿಂದ ಆಶಯದ ನಿರ್ಣಯವಾಗುತ್ತದೆ.

ಪಠ್ಯವೊಂದರ ಗಣಕೀಕರಣದಿಂದಾಗಿ ಪದ ಮತ್ತು ವಾಕ್ಯಗಳಲ್ಲಿ ಸತತ ಬಳಕೆಯಾಗಲಿರುವ ವಿರಳ ಬಳಕೆಯಲ್ಲಿರುವ ವಿಶಿಷ್ಟವಾದ ಸಂದರ್ಭಕ್ಕೆ ಸೀಮಿತವಾದ ಭಾಷೆಯ ನಿಜಪ್ರತಿನಿಧಿಯಾದ ಮತ್ತು ಅಲ್ಲದ ವಿವರಗಳನ್ನು ಕಂಡುಕೊಳ್ಳಬಹುದಾಗಿದೆ. ನಮ್ಮ ಕಂಪ್ಯೂಟರ್‌ನಲ್ಲಿ ಒಳ್ಳೆಯ ಎಲೆಕ್ಟ್ರಾನಿಕ್ ನಿಘಂಟುಗಳ ಮಾರ್ಫಾಲಾಜಿಕಲ್ ವಿಶ್ಲೇಷಕಗಳು, ವಾಕ್ಯ ವಿಶ್ಲೇಷಕಗಳು(ಫೆಸಸ್) ಅರ್ಥವಿವೇಚಕಗಳು(ಸೆಮ್ಯಾಂಟಿಕ್ ಇಂಟರ್ ಪ್ರಿಟರ್ ) ಧ್ವನಿಲಿಪಿ ವಿಶ್ಲೇಷಕಗಳು (ಫೊನೆಟಿಕ್ ಸ್ಕ್ರಿಫ್ಟ್) ಮತ್ತು ಜನರೇಟರ್‌ಗಳು (ಪದ ಉತ್ಪಾದಕಗಳು) ಇದ್ದರೆ ಅವುಗಳ ಸಹಾಯದಿಂದ ಕಾಗುಣಿತ ಪರಿಶೀಲಕ(Spell Checker)ಗಳನ್ನು ರೂಪಿಸಿಕೊಳ್ಳಬಹುದು. ಸಂಕಲನನುಸಂಧಾನವನ್ನು ಸರಳ ಮಾಡಿಕೊಳ್ಳಬಹುದು.

ಕಾಗುಣಿತ ಪರಿಶೀಲಕಗಳು ಗ್ರಂಥಸಂಪಾದನೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಇದರಲ್ಲಿ ಎರಡು ವಿಧ. ಒಂದು ಪತ್ತೆ ಹಚ್ಚುವ ಭಾಗ, ಎರಡನೆಯದು ತಿದ್ದುವ ಭಾಗ, ಕಂಪ್ಯೂಟರ್‌ಗೆ ಅಳವಡಿಸಿದ ಪಠ್ಯದಲ್ಲಿ ಎಲೆಕ್ಟ್ರಾನಿಕ್ ನಿಘಂಟುವಿನ ಸಹಾಯದಿಂದ ಸೂಕ್ತ ಸಂಜ್ಞೆಗಳೊಂದಿಗೆ ಇಂತಹ ತಪ್ಪುಗಳನ್ನು ಪತ್ತೆ ಮಾಡಬಹುದು. ತಿದ್ದುವ ಭಾಗವು ಪರಿಮಾಣಾತ್ಮಕ ಮತ್ತು ನಿರ್ದಿಷ್ಟ ವಾಕ್ಯಕ್ಕೆ ಕನಿಷ್ಠೊದೂರ (Minimum Edit Distance) ಮುಂತಾದವುಗಳನ್ನು ಬಳಸಲಾಗುತ್ತದೆ. Statistical pOs Taggar, HIdden matuer Model ಆಧಾರಿತ ಒಂದು ಸಾಫ್ಟ್ ವೇರ್ ಕೂಡ ಪದ್ಯದಲ್ಲಿನ ಪದ ಬಳಕೆಯ ಸಂದರ್ಭ ಅದರ ವ್ಯಾಕರಣ ಅಂಶಗಳನ್ನು ನೀಡುತ್ತದೆ. ಹೀಗೆ ಪಠ್ಯಗಳನ್ನು Tag ಮಾಡಲು ಸಂಸ್ಕರಿಸಲು ಮಾರ್ಫಾಲಾಜಿ ಆಧರಿಸಿದ ಭಾಷಾವಿಜ್ಞಾನದ ತಂತ್ರಗಳು ತುಂಬ ಉಪಯುಕ್ತವಾಗಿವೆ. ಇದೂ ಅಲ್ಲದೆ Speech Corpus & Text Corpusಗಳು ಮಾತಿನಿಂದ ಪಠ್ಯಕ್ಕೆ-ಪಠ್ಯದಿಂದ ಮಾತಿಗೆ ಪರಿವರ್ತಿತವಾಗುವ ವ್ಯವಸ್ಥೆಗಳಲ್ಲಿ, ಭಾಷೆ ಉಪಭಾಷೆಗಳ ಗುರುತಿಸುವಿಕೆಯಲ್ಲಿ ತುಂಬಾ ಸಹಾಯಕವಾಗಿವೆ. ವಿಶೇಷವಾಗಿ ಕನ್ನಡ ಸಾಹಿತ್ಯದ ಅಧ್ಯಯನ ಮತ್ತು ಪರಿಷ್ಕರಣದಲ್ಲಿ ಈ ಸಾಫ್ಟವೇರ್ ಗಳು ಅತ್ಯುಪಯುಕ್ತವಾಗಿವೆ ಎಂದು ಹೇಳಬಹುದು.

ಈ ಎಲ್ಲ ಭಾಷಾ ಸಂಸ್ಕರಣೆಗೆ ಪ್ರಮುಖ ಆಧಾರವೇ ಕಾರ್ಪಸ್ . ಉತ್ತಮ ಕಾರ್ಪಸ್ ನ ಸೃಷ್ಟಿ ಕನ್ನಡ ಹಸ್ತಪ್ರತಿಗಳ ಸಂಕಲನ ಮತ್ತು ಅಧ್ಯಯನಕ್ಕೆ ಸಹಾಯಕಾರಿಯಾಗಿದೆ. ಕಂಪ್ಯೂಟರ್ ತಂತ್ರಜ್ಞಾನ ನನ್ನ ದೃಷ್ಟಿಯಲ್ಲಿ ಅದೊಂದು ಟೆಕ್ನಿಕಲ್ ಏಡ್ (ತಾಂತ್ರಿಕ ಉಪಕರಣ) ಮಾತ್ರವಲ್ಲ. ಅದನ್ನು ಮೀರಿದ ಒಂದು ಗುಣ ಅದಕ್ಕಿದೆ. ಇಂದು ದೇಶ-ವಿದೇಶಗಳ ಮಧ್ಯೆ ಅದೊಂದು ಸಾಂಸ್ಕೃತಿಕ ರಾಯಭಾರಿಯಂತೆ ಆರ್ಥಿಕ, ರಾಜಕೀಯ, ಸಾಮಾಜಿಕವಾದಂತಹ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪ್ಯೂಟರ್‌ಗಿರುವ ಇಂತಹ ಅನನ್ವಯೊಸಾಮರ್ಥ್ಯೊಸಾಹಿತ್ಯ ಮತ್ತು ಭಾಷಿಕವಾದ ಸಂಸ್ಕರಣದ ಕೆಲಸವನ್ನು ನಿರ್ವಹಿಸಲು ಪ್ರೇರಣೆಯಾಗಿದೆ.

ಇಂದು ದೇಶದೆಲ್ಲೆಡೆ ಹಸ್ತಪ್ರತಿಗಳ ಸಂಗ್ರಹ ಸಂರಕ್ಷಣೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳು ತುಂಬಾ ಸಾಂಪ್ರದಾಯಿಕ ರೀತಿಯಲ್ಲಿಯೇ ಇವೆ. ಯಾವ ಮಾಧ್ಯಮದಲ್ಲಿ ಬರಹ ಸಂಗ್ರಹ ಆಗಿರುತ್ತದೊ ಆ ಮಾಧ್ಯಮದ ಸ್ಥಿರತೆ ಮತ್ತು ಬರಹದ ಪ್ರಸಾರದ ನಡುವೆ ಒಂದು ವಿಲೋಮ ಸಂಬಂಧವಿದೆ. ಅಂದರೆ ಹೆಚ್ಚು ಸ್ಥಿರವಾದ ಮಾಧ್ಯಮವಿದ್ದರೆ ಬರಹಕ್ಕೆ ತಾಳಿಕೆ ಹೆಚ್ಚು ಎನ್ನುವ ನಂಬಿಕೆ. ಆದರೆ ಇಂಥದರ ಪ್ರಸಾರ ಕಡಿಮೆ ಇರುತ್ತದೆ. ಪ್ರಸಾರ ಹೆಚ್ಚಿದಷ್ಟು ಮಾಧ್ಯಮದ ತಾಳಿಕೆಯ ಗುಣ ಕಡಿಮೆಯಾಗುತ್ತದೆ. ಇಂದು ಹಸ್ತಪ್ರತಿ ಸಂಗ್ರಹ, ಸಂರಕ್ಷಣೆ ಮತ್ತು ಪ್ರಸಾರಕ್ಕೆ ಸಂಬಂಧಿಸಿದಂತೆ ಅಮೂಲ್ಯ ಪರಿಕರಗಳು ಕೈಗೆಟಕುತ್ತಿವೆ. ಪ್ಲಾಪಿ, ಸಿಡಿ, ಡಿ ವಿಡಿ, ಪೆನ್ ಡ್ರೈವ್ ಮುಂತಾದ ಅಪಾರ ಸಂಗ್ರಹ ಸಾಮರ್ಥ್ಯವುಳ್ಳ ಸಾಮಗ್ರಿಗಳು ಸಾವಿರಾರು ಹಸ್ತಪ್ರತಿಗಳನ್ನು ಒಂದೇ ಬಾರಿಗೆ ಹೊತ್ತೊಯ್ಯಬಲ್ಲಂಥವಾಗಿವೆ. ಪೆನ್ನಿನೋಪಾದಿಯಲ್ಲಿ ಇಡೀ ಹಸ್ತಪ್ರತಿ ಭಂಡಾರವನ್ನೆ ಜೇಬಲ್ಲಿಟ್ಟುಕೊಳ್ಳಬಹುದಾಗಿದೆ. ಹಾಗೆ ಇಂಟರ್‌ನೆಟ್ ಮೂಲಕ ಇಂತಹ ಸಂಗ್ರಹಿತ ಹಸ್ತಪ್ರತಿಗಳನ್ನು ಸದಾ ಬಳಕೆಗನುಕೂಳವಾಗುವಂತೆ ವಿಶ್ವವ್ಯಾಪಿಯಾಗಿಸಬಹುದಾಗಿದೆ. ವಿದ್ಯುನ್ಮಾನ ನೆಲೆಗಳು ಇಂದು ಅತ್ಯಧಿಕ ಕಾಲ – ದೇಶಗಳನ್ನು ಕ್ಷಣ ಮಾತ್ರದಲ್ಲಿ ಮೀರಿಸುವ ಪಸರಿಸುವ ಶಕ್ತಿ ಪಡೆದಿವೆ. ಅಷ್ಟೇ ತಾಳಿಕೆಯ ಗುಣದಲ್ಲಿ ಕಡಿಮೆ ಆಯುಸ್ಸು ಹೊಂದಿವೆ. ಮುಖ್ಯವಾಗಿ ತಂತ್ರಜ್ಞಾನವು ಲಿಖಿತವಾದದ್ದು ಹೆಚ್ಚು ಶಾಶ್ವತವಾದದ್ದು ಮತ್ತು ಪ್ರಮಾಣಬದ್ಧವಾದದ್ದು ಎನ್ನುವ ನಂಬಿಕೆಯನ್ನೇ ಪಲ್ಲಟಗೊಳಿಸಿವೆ. ಬರೆದದ್ದನ್ನು ಹೆಚ್ಚು ಶ್ರಮವಿಲ್ಲದೆ ಓದಲು, ತಿಳಿಯಲು ಸಾಧ್ಯವಾಗುತ್ತದೆ. ಮತ್ತು ವೇಗವಾಗಿ ಪ್ರಸಾರಮಾಡಲು ಬರುತ್ತದೆ. ಬಹುಪ್ರತಿಗಳಲ್ಲಿ ಸಿಗುವ ಕಾರಣದಿಂದಾಗಿ ಯಾರು ಬೇಕಾದರೂ ಇಂದು ಹಸ್ತಪ್ರತಿಗಳನ್ನು ಓದಬಹುದಾಗಿದೆ. ಓದಿಗಾಗಿ, ಯಾರಿಗೋ ಕಾಯಬೇಕಿಲ್ಲ ಅಷ್ಟೇ ಪ್ರಮಾಣದಲ್ಲಿ ಅದರ ಶಾಶ್ವತತೆಯ ಕಲ್ಪನೆಗೂ ಭಂಗಬಂದಿದೆ. ಈ ಅಪಾಯದ ಅರಿವು ನಮಗಿರಬೇಕು. ಓ.ಸಿ.ಆರ್ ಕನ್ನಡಕ್ಕೆ ಬಂದರಂತೂ ಗ್ರಂಥಸಂಪಾದನೆ ಕ್ಷೇತ್ರದಲ್ಲಿ ಹೊಸದಿಗಂತವೇ ತೆರೆದುಕೊಂಡಂತಾಗುತ್ತದೆ. ತ್ರುಟಿತ, ಸ್ಕಾಲಿತ್ಯ, ಮೂಲ, ಇಂತಹ ಪಾರಂಪರಿಕ ಪಾರಿಭಾಷಿಕ ಪದಗಳ ಬದಲಿಗೆ ಸ್ಕ್ಯಾನು, ಇಮೇಜ್ , ಪುನರಚನೆ, ಸಾಫ್ಟ್ ವೇರ್ ಎನ್ನುವ ಹೊಸಪದಗಳ ಬಳಕೆ ಈ ಕ್ಷೇತ್ರದಲ್ಲಿ ಚಾಲ್ತಿಗೆ ಬರುತ್ತಿವೆ.

ಒಟ್ಟಿನಲ್ಲಿ ಕಂಪ್ಯೂಟರ್ ಆಗಮನವು ಕೈಬರಹ ಪ್ರಧಾನವಾದ ಹಸ್ತಪ್ರತಿಗಳಂತಹ ಬರಹ ಸಾಮಗ್ರಿಗಳನ್ನು ಸರಳವಾಗಿ ಓದುವ ಮತ್ತು ತಿಳಿಯುವ ಅವಕಾಶವನ್ನು ತೆರೆದಿಟ್ಟಿದ್ದು ಸ್ಪಷ್ಟ. ನೇರವಾಗಿ ಗಣಕ ಪರದೆಯ ಮೇಲೆ ಲೇಖನ ಬರೆಯುವ ಇಂದಿನ ರೀತಿಯು ಕೈಗೆ ಮಸಿ ಅಂಟದ ಅಕ್ಷರಗಳು ಚಿತ್ತು, ಕಾಟ್ ಆಗುವ, ಬರೆದ ಬರಹಗಳನ್ನು ಕಲ್ಪಿಸಿ, ಹೊಂದಿಸಿ ಇಟ್ಟು ಮತ್ತೊಬ್ಬರಿಗೆ ತಲುಪಿಸುವ ಸಮಸ್ಯೆ ಮತ್ತು ವಿಳಂಬವನ್ನು ಇಲ್ಲವಾಗಿಸುತ್ತಿವೆ. ಹಸ್ತಪ್ರತಿಯಲ್ಲಿ ಚಂದದ ಬರವಣಿಗೆಯ ಅಕ್ಷರಗಳಿವೆ ಈ ಬರವಣಿಗೆಯನ್ನು ಬಳಸಿ ನಾವು ಹೊಸ ಫಾಂಟ್ ಗಳನ್ನು ರೂಪಿಸಬಹುದು. ಈಗಾಗಲೇ ಕನ್ನಡದಲ್ಲಿ ಬಳಕೆಯಿರುವ ರನ್ನ, ಪಂಪ, ಕುವೆಂಪು, ಕುಮಾರವ್ಯಾಸ ಇತ್ಯಾದಿ ಹೆಸರಿನ ಅಕ್ಷರ ವಿನ್ಯಾಸಗಳು ರೂಪುಗೊಂಡಿವೆ. ಆದರೆ ಇವೆಲ್ಲ ತಲೆ ಬರಹಕ್ಕೆ ಯೋಗ್ಯವಾದಂತಹವು. ರನ್ನಿಂಗ್ ಮ್ಯಾಟರಿಗೆ ಅಂತಹ ಉಪಯುಕ್ತವಾಗಿ ಮತ್ತು ಪ್ರಮಾಣಬದ್ಧವಾಗಿ ಕಾಣುತ್ತಿಲ್ಲ. ಹೀಗಾಗಿ ಹಸ್ತಪ್ರತಿಗಳ ಡಿಜಿಟಲ್ ರೂಪದಿಂದ ಅಕ್ಷರಗಳನ್ನು ಅವುಗಳ ಕಾಗುಣಿತಗಳನ್ನು ಆಯ್ಕೆ ಮಾಡಿ ಬೇರೆ ಒಂದು ಬರವಣಿಗೆಯ ಪ್ರಮಾಣಬದ್ಧ ಮಾದರಿಯನ್ನು ರೂಪಿಸಲು ಸಾಧ್ಯವಿದೆ. ಒಟ್ಟಿನಲ್ಲಿ ಆಧುನಿಕ ವಿದ್ಯುನ್ಮಾನ ಮಾಧ್ಯಮಗಳು ಕನ್ನಡ ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿಗಳಲ್ಲಿ ಹೊಸ ಸಂಚಲನೆಯನ್ನು ತಂದಿರುವುದನ್ನು ಮರೆಯಲಾಗದು.

 

ಹೆಚ್ಚಿನಓದಿಗಾಗಿ

೧. ಸಂ. ಡಾ. ವೀರೇಶ ಬಡಿಗೇರ ಮತ್ತು ಎಸ್.ಆರ್. ಚನ್ನವೀರಪ್ಪ, ೨೦೦೨ ಹಸ್ತಪ್ರತಿವ್ಯಾಸಂಗ-೩. ಕಂಪ್ಯೂಟರ್ ಮತ್ತು ಕನ್ನಡ ಅಭಿವೃದ್ದಿ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ

೨. ಡಾ. ಕೆ.ವಿ. ನಾರಾಯಣ, ೨೦೦೫, ನಮ್ಮೊಡನೆ ನಮ್ಮ ನುಡಿ, ಲೋಹಿಯಾ ಪ್ರಕಾಶನ ಬಳ್ಳಾರಿ


[1]       ಡಾ. ಶ್ರೀನಿವಾಸ ಹಾವನೂರು, ೨೦೦೨, ಕಾವ್ಯಾಭ್ಯಾಸಕ್ಕೆ ಕಂಪ್ಯೂಟರ್ ಸಹಾಯ (ಹಸ್ತಪ್ರತಿ ವ್ಯಾಸಂಗ-೩, ಪುಟ.೩೪), ಕನ್ನಡ ವಿಶ್ವವಿದ್ಯಾಲಯ, ಹಂಪಿ