ಮೊದಲಿನ ಕನ್ನಡ ಕಾರ್ಯವಾಹಿಗಳು ‘ಡಾಸ್’ ನಿರ್ವಹಣ ವ್ಯವಸ್ಥೆಯನ್ನು ಆಧರಿಸಿ ನಿರ್ಮಾಣಗೊಂಡಿದ್ದು ಅತೀವೇಗದಲ್ಲಿ ಆದ ಬದಲಾವಣೆಗಳಿಂದಾಗಿ ಮೈಕ್ರೋಸಾಫ್ಟ್ ನ ವಿಂಡೋಸ್ ನಿರ್ವಹಣಾ ವ್ಯವಸ್ಥೆ ಗಣಕಗಳಲ್ಲಿ ಅಳವಟ್ಟಿತು. ಈ ಸಂಸ್ಥೆಯೂ ಕೂಡ ತನ್ನ ನಿರ್ವಹಣಾ ವ್ಯವಸ್ಥೆಯನ್ನು ಅತೀ ವೇಗವಾಗಿ ಬದಲಿಸುತ್ತಾ ನಡೆದಿದೆ. ೧ರ್ರ್೫, ರ್೮, ೨೦೦೦ ಮತ್ತು ಅನಂತರದ ಅವಧಿಯಲ್ಲಿ ಒಮ್ಮೆ ಹೀಗೆ ಹಲವು ಹಂತಗಳಲ್ಲಿ ಹೊಸ ಮಾದರಿಗಳನ್ನು ಮಾರುಕಟ್ಟೆಗೆ ತಂದಿದೆ. ಈ ವಿವರಗಳು ನಮಗೇಕೆ ಅಗತ್ಯವೆಂದರೆ ಈ ಜಾಗತಿಕ ನೆಲೆಯ ಕಂಪನಿಗಳು ತಂತ್ರಜ್ಞಾನದಲ್ಲಿ ಅತೀ ವೇಗದ ಜಿಗಿತಗಳನ್ನು ಮಾಡುತ್ತಿರುವುದರಿಂದ ಕನ್ನಡದಂತಹ ಭಾಷೆಯು ಅದೇ ವೇಗದಲ್ಲಿ ತನ್ನ ಅಗತ್ಯಗಳನ್ನು ಹೊಂದಿಸಿಕೊಳ್ಳುವುದು ಕಷ್ಟವಾಗುತ್ತಿದೆ.

ಖಾಸಗಿ ವಲಯದಿಂದ ಸಾಂಸ್ಥಿಕ ವಲಯಗಳಿಗೆ ಕಾರ್ಯವಾಹಿ ಸಿದ್ಧತೆ ರವಾನೆಯಾದರೂ ಪ್ರಮಾಣೀಕರಣ ಮಾತ್ರ ಇನ್ನೂ ಸಾಧ್ಯವಾಗಿಲ್ಲ. ಕರ್ನಾಟಕ ಸರ್ಕಾರ ಕನ್ನಡ ಗಣಕ ಪರಿಷತ್ತು ಎಂಬ ಸಂಸ್ಥೆಯು ತಯಾರಿಸಿದ ನುಡಿ ಎಂಬ ಕನ್ನಡ ಕಾರ್ಯವಾಹಿಯನ್ನು ಅಧಿಕೃತಗೊಳಿಸಿದೆ. ತನ್ನ ಎಲ್ಲಾ ಕಛೇರಿಗಳಲ್ಲಿ ಅದನ್ನು ಬಳಸಬೇಕೆಂಬ ಆದೇಶ ನೀಡಿದೆ. ಸರ್ಕಾರದ ಜಾಲತಾಣದಲ್ಲಿ ಈ ಕಾರ್ಯವಾಹಿಯೂ ಉಚಿತ ಬಳಕೆಗೆಂದು ಲಭ್ಯವಿದೆ. ಹೀಗಿದ್ದರೂ ಪ್ರಮಾಣೀಕರಣದ ಸಮಸ್ಯೆ ಪರಿಹಾರವಾಗಿಲ್ಲ. ವಿವಿಧ ವಲಯಗಳಲ್ಲಿ ಗಣಕಗಳಲ್ಲಿ ಕನ್ನಡವನ್ನು ಬಳಸುವವರು ಮತ್ತು ಹಾಗೆ ಬಳಸಲು ಬೇಕಾದ ಕಾರ್ಯವಾಹಿಯನ್ನು ಸಿದ್ಧ ಮಡುವವರು ನುಡಿಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಕೆಲವು ವರ್ಷಗಳ ಹಿಂದೆ ಈ ಬಗೆಗೆ ಒಂದು ಸಾರ್ವಜನಿಕ ವಾಗ್ವಾದವೇ ನಡೆದು ಹೋಯಿತು. ಆದರೆ ಖಚಿತ ಫಲಿತಾಂಶ ಮಾತ್ರ ದೊರಕಲಿಲ್ಲ. ಈಗಲೂ ನುಡಿಯ ಬಳಕೆಯ ಬಗೆಗೆ ಇರುವ ಸಮ್ಮತಿ ಮತ್ತು ಗೊಂದಲ ಹಾಗೆಯೇ ಮುಂದುವರೆದಿದೆ.

ಜಾಗತೀಕರಣದ ಪ್ರಭಾವದಿಂದ ಗಣಕ ವಲಯ ಇಂಗ್ಲಿಶ್ ಮಯವಾಗುವುದೆಂದು ಮೊದಮೊದಲು ಆತಂಕ ಉಂಟಾದುದು ನಿಜ. ಆದರೆ ಮಾರುಕಟ್ಟೆಯ ವಿಸ್ತರಣೆಯ ಅಗತ್ಯ ಕಂಡ ಬಹುರಾಷ್ಟ್ರೀಯ ಕಂಪನಿಗಳು ದೇಶೀಯ ಭಾಷೆಗಳನ್ನು ಸಂಪೂರ್ಣವಾಗಿ ಅವಗಣಿಸುವುದು ಮಾರುಕಟ್ಟೆಯ ವಿಸ್ತರಣೆಗೆ ಮಾರಕವಾಗುವ ಅಂಶವೆಂದು ಬೇಗನೆ ತಿಳಿದುಕೊಂಡವು. ಮೈಕ್ರೋಸಾಫ್ಟ್ ತನ್ನ ವಿಂಡೋಸ್‌ನ ಎಕ್ಸ್‌ಪಿ ಆವೃತ್ತಿಯಲ್ಲಿ ಕನ್ನಡವನ್ನು ಬಳಸಲು ಅನುಕೂಲವಾಗುವಂತಪ ವ್ಯವಸ್ಥೆಯನ್ನು ರೂಪಿಸಿದೆ. ಇದರಿಂದ ಮೊದಲಿದ್ದ ಆತಂಕಗಳು ಇಲ್ಲವಾದವು. ಬೃಹತ್ ಜಾಲದ ಸಂಸ್ಥೆಯೊಂದು ರೂಪಿಸಿದ ಕನ್ನಡ ಕಾರ್ಯವಾಹಿ ಇನ್ನೂ ಉಳಿದ ಕಾರ್ಯವಾಹಿಗಳೊಡನೆ ಪೈಪೋಟಿಗೆ ನಿಲ್ಲ ಬೇಕಾಯಿತು. ಆದರೆ ವೈಯಕ್ತಿಕ ಪ್ರಯತ್ನಗಳ ನೆಲೆಯಲ್ಲಿ ಈಗ ಗೊಂದಲಗಳನ್ನು ಗೋಜಲುಗಳಾಗಲು ಬಿಡದೇ ನಿವಾರಿಸುವ ಪ್ರಯತ್ನಗಳು ನಡೆಯುತ್ತಲಿವೆ. ಇದರಿಂದ ಯಾವುದಾದರೂ ಸಮಸ್ಯೆಯನ್ನು ಪರಿಹರಿಸಲು ಸಿದ್ಧರಿರುವ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಅವರ ಜಾಲಗಳು ಸಿದ್ಧವಿದೆ. ಬರಲಿರುವ ದಶಕಗಳಲ್ಲಿ ಈ ಪ್ರಮಾಣೀಕರಣದ ಪ್ರಯತ್ನಗಳು ನಿರ್ದಿಷ್ಟ ಮತ್ತು ಖಚಿತ ನೆಲೆಯಲ್ಲಿ ನಡೆಯಬೇಕು. ಇಲ್ಲದಿದ್ದರೆ ಅಲ್ಲಲ್ಲಿ ತೇಪೆ ಹಂಚುವ ಕೆಲಸದಲ್ಲಿ ಮಾತ್ರ ತೃಪ್ತರಾಗಬೇಕಾಗುತ್ತದೆ.

ಕರ್ನಾಟಕ ಸರ್ಕಾರ ತನ್ನ ಅಂಗಸಂಸ್ಥೆಗಳ ಮುಖಾಂತರವಾಗಲೀ ತಾನೇ ನೇರವಾಗಿ ಯಾಗಲೀ ಗಣಕಗಳಲ್ಲಿ ಕನ್ನಡದ ಬಳಕೆಗೆ ಇರುವ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ವ್ಯವಸ್ಥೆಯನ್ನು ರೂಪಿಸಿಲ್ಲ. ಭಾರತ ಸರ್ಕಾರವು ಭಾರತೀಯ ಭಾಷೆಗಳ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಅಗಾಧ ಪ್ರಮಾಣದ ಹಣದ ನೆರವಿನೊಂದಿಗೆ ಕೇಂದ್ರಗಳನ್ನು ರೂಪಿಸಿಕೊಂಡಿದೆ. ಇಲ್ಲಿ ಕನ್ನಡದ ಬಗೆಗೆ ಏನು ಕೆಲಸ ನಡೆಯುತ್ತಿದೆ, ಅದರ ಪ್ರಯೋಜನವನ್ನು ಪಡೆಯುವುದು ಹೇಗೆ ಎಂಬುದು ಯಾರಿಗೂ ಗೊತ್ತಾಗದ ಹಾಗಾಗಿದೆ. ಇದರ ಪ್ರಯೋಜನ ಈಗಂತೂ ಕಾಣುತ್ತಿಲ್ಲ.

ಗಣಕಯಂತ್ರದಲ್ಲಿ ಕನ್ನಡ ಬಳಕೆಗೆ ಇರುವ ಮುಖ್ಯ ಸಮಸ್ಯೆ ಎಂದರೆ ತಾಂತ್ರಿಕ ಪರಿಣತರು, ಭಾಷಾ ತಜ್ಞರು ಮತ್ತು ಬಳಕೆದಾರರು ಇವರು ಒಂದೇ ವೇದಿಕೆಯಲ್ಲಿ ಸಂವಾದಕ್ಕೆ ತೊಗದಿರುವುದೇ ಆಗಿದೆ. ತಾಂತ್ರಿಕ ಪರಿಣಿತರು ತಾತ್ವಿಕವಾಗಿ ಕನ್ನಡದ ಸಾಧ್ಯತೆಯನ್ನು ಹೊಂದಿರುವ ತಂತ್ರಜ್ಞಾನವನ್ನು ರೂಪಿಸಿಕೊಡುವಾಗ ಭಾಷಾ ತಜ್ಞರ ನೆರವನ್ನು ಪಡೆಯಬೇಕಾಗುತ್ತದೆ. ಕನ್ನಡ ಭಾಷಾ ರಚನೆಯ ಲಕ್ಷಣಗಳನ್ನು ಅರಿತು ಅದಕ್ಕನುಗುಣವಾಗಿ ಕಾರ್ಯವಾಹಿಯನ್ನು ರೂಪಿಸಿದರೆ ಕೆಲಸ ಹೆಚ್ಚು ಪರಿಪೂರ್ಣವಾಗುತ್ತದೆ. ಇದರೊಡನೆ ಬಳಕೆದಾರರ ಅಗತ್ಯಗಳನ್ನು ಮನಗಾಣಬೇಕು. ಇಲ್ಲದಿದ್ದರೆ ಸಿದ್ಧಗೊಂಡ ಕಾರ್ಯವಾಹಿ ಬಳಕೆಯಾಗದೇ ಹೋಗುವ ಸಾಧ್ಯತೆ ಇವೆ. ತಂತ್ರಜ್ಞಾನದ ಇನ್ನೊಂದು ಮುಖ್ಯ ಸಮಸ್ಯೆಯೆಂದರೆ ಅದು ಕನ್ನಡಕ್ಕಾಗಿಯೇ ವಿಶೇಷ ಕಾರ್ಯವಾಹಿಯನ್ನು ರೂಪಿಸಲಾರದು. ಹಲವು ಭಾಷೆಗಳ ಅದರಲ್ಲೂ ಇಂಗ್ಲಿಶಿನ ಸಹ ಬಳಕೆಗೆ ಅನುಕೂಲವಾದಂತಹ ಕಾರ್ಯವಾಹಿಯನ್ನು ರೂಪಿಸಲಾಗುತ್ತದೆ. ಇದು ಸೌಲಭ್ಯಗಳ ದೃಷ್ಟಿಯಿಂದ ಯೋಗ್ಯವಾದ ವಿಧಾನ. ಆದರೆ ದಾಖಲಾತಿಗಳನ್ನು ವ್ಯವಹಾರಗಳಲ್ಲಿ ಕನ್ನಡವನ್ನಷ್ಟೇ ಬಳಸಬೇಕು ಎಂಬ ನಿರೀಕ್ಷೆ ಗಣಕದ ಮೂಲಕ ನೆರವೇರುವುದು ಕಷ್ಟವೆಂದು ತೋರುತ್ತದೆ.

ಕನ್ನಡ ಬರವಣಿಗೆಯ ಚರಿತ್ರೆಯನ್ನು ಕಂಡವರಿಗೆ ಮೊದಲು ಶಾಸನಗಳಲ್ಲಿ ಕಾಲ, ದೇಶ ಬದ್ಧವಾದ ಒಂದು ಪ್ರತಿ ಮಾತ್ರ ಸಿದ್ಧಗೊಳ್ಳುತ್ತಿದುದನ್ನು ಬಲ್ಲರು, ತಾಳೆಗರಿಗಳ ಮೇಲೆ ಸಿದ್ಧಗೊಂಡಾಗ ಬಹುಪ್ರತಿಗಳು ಸಾಧ್ಯವಾದವು. ಕಾಲದೇಶಗಳ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಿತ್ತು. ಬೆರಳಚ್ಚು ಯಂತ್ರ ಈ ಸಾಧ್ಯತೆಯನ್ನು ಹೆಚ್ಚಿಸಿತ್ತು. ಮುದ್ರಣದಿಂದ ಅತಿ ಹೆಚ್ಚು ಪ್ರತಿಗಳು ಸಿದ್ಧಗೊಂಡು ಬಹುದೂರದ ಪ್ರಸಾರವನ್ನು ಪಡೆದುಕೊಂಡವು. ಆದರೆ ಶಿಲೆಯಿಂದ ಕಾಗದಕ್ಕೆ ಬರುವ ಹೊತ್ತಿಗೆ ಮಾಧ್ಯಮಗಳ ಆಯಸ್ಸು ಕಡಿಮೆಯಾದುದನ್ನು ಕಾಣುತ್ತೇವೆ. ಶಿಲೆಗೆ ಅನಂತಕಾಲದ ಸಾಧ್ಯತೆ ಇದೆ. ತಾಳೆಗರಿಗಳಿಗೆ ಕೆಲವು ಶತಮಾನಗಳ ಆಯಸ್ಸು ಇದ್ದಿತ್ತು. ಕಾಗದಕ್ಕೆ ನಾಲ್ಕೈದು ದಶಕಗಳಿಗಿಂತ ಹೆಚ್ಚಿನ ಆಯಸ್ಸು ಇರಲಾರದು. ಗಣಕ ಈ ಎಲ್ಲಾ ಲಕ್ಷಣಗಳನ್ನು ಬದಲಾಯಿಸಿ ಬಿಟ್ಟಿದೆ. ಈಗ ಸಿದ್ಧಗೊಂಡ ದಾಖಲೆ ಕೆಲವೇ ಕ್ಷಣಗಳಲ್ಲಿ ಮಾಯವಾಗಿ ಬಿಡುವುದು. ನಶ್ವರತೆಯೇ ಅದರ ಪ್ರಮುಖ ಲಕ್ಷಣವಾಗಿದೆ. ತಂತ್ರಜ್ಞಾನ ಹೊಸ ಸಾಧ್ಯತೆಗಳನ್ನು ರೂಪಿಸುವಾಗಲೇ ಹೇಗೆ ಹೊಸ ಮಿತಿಯನ್ನು ರೂಪಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

ಬರಲಿರುವ ದಿನಮಾನಗಳಲ್ಲಿ ಗಣಕ, ಕನ್ನಡದ ಮಟ್ಟಿಗೆ ಇನ್ನೂ ಕೆಲವು ಇಕ್ಕಟ್ಟು ಮತ್ತು ಸಾಧ್ಯತೆಗಳನ್ನು ತರಲಿದೆ. ಅದರ ಸೂಚನೆಗಳು ಈಗಾಗಲೇ ದೊರಕತೊಡಗಿವೆ. ಅಂತಹ ಕೆಲವನ್ನು ಮುಂದೆ ಚರ್ಚಿಸಲಾಗುತ್ತಿದೆ. ಬಂದು ಲಿಪಿಯ ಸಮಸ್ಯೆ. ಕನ್ನಡದ ಲಿಪಿ ಕಳೆದ ೨೦ ಶತಮಾನಗಳಲ್ಲಿ ವಿಕಾಸ ಹೊಂದುತ್ತಾ ಒಂದು ಮುದ್ರಣ ತಂತ್ರಜ್ಞಾನದ ಹೊತ್ತಿಗೆ ಒಂದು ಸಾರ್ವತ್ರಿಕ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಹಿಂದೆಯೇ ಇದ್ದ ದಾಖಲೆಗಳ ಲಿಪಿ ವೈವಿಧ್ಯಗಳು ಈಗ ಇಲ್ಲ ಮತ್ತು ಅವು ಬೇಕಾಗಿಯೂ ಇಲ್ಲ ಕೂಡ. ಗಣಕದಲ್ಲಿ ಕನ್ನಡ ಲಿಪಿಯೂ ತೆರೆಯ ಮೇಲಾಗಲೀ ಅಥವಾ ಕಾಗದದ ಮೇಲಾಗಲೀ ಮೂಡುವ ಕ್ರಮ ಸಂಕೀರ್ಣವಾಗಿದೆ. ಸದ್ಯ ಅದನ್ನೊಂದು ಚಿತ್ರವೆಂದು ತಿಳಿಯೋಣ ಈ ಲಿಪಿಕರಣ ಕ್ರಿಯೆಯೂ ಕೂಡ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಅದರಲ್ಲೂ ಸಂವಹನದ ಸಾಧ್ಯತೆ ಮತ್ತು ವೇಗಗಳು ನಿರೀಕ್ಷೆಯನ್ನು ಮೀರಿ ಹೆಚ್ಚುತ್ತಿರುವ ಇಂದಿನ ದಿನಮಾನಗಳಲ್ಲಿ ಲಿಪಿಕರಣ ಒಂದು ಸವಾಲಾಗಿ ಪರಿಣಮಿಸಲಿದೆ. ಅಂತರ್ ಜಾಲದಲ್ಲಿ ಬಳಕೆಯಲ್ಲಿರುವ ಇ-ಮೇಲ್ ಸೌಲಭ್ಯವನ್ನೇ ಗಮನಿಸೋಣ. ಇಲ್ಲಿ ದೂರದೂರಿನ ಜನರು ಖಾಸಗಿಯಾಗಿ ಮತ್ತು ಸಾರ್ವಜನಿಕವಾಗಿ ತಮ್ಮ ಪತ್ರಗಳನ್ನು ಸಿದ್ಧಪಡಿಸಿ ರವಾನಿಸುವ ಅವಕಾಶಗಳಿವೆ. ಈ ಸೌಲಭ್ಯವನ್ನು ಅದರ ವೇಗ ನಿಕರತೆಗಳಿಗಾಗಿಯೇ ತರುಣ ಪೀಳಿಗೆಯವರು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ಇಲ್ಲಿ ಕನ್ನಡ ಭಾಷೆಯ ಬಳಕೆ ಸಾಧ್ಯ. ಆದರೆ ಲಿಪಿಕರಣ ಕನ್ನಡ ಲಿಪಿಯಲ್ಲೇ ಆಗಬೇಕೆಂಬ ಶರತ್ತು ಪಾಲನೆ ಯಾವಾಗಲೂ ಯಶಸ್ಸು ಪಡೆಯುವುದಿಲ್ಲ. ಇದಕ್ಕೆ ಹಲವು ತಾಂತ್ರಿಕ ಕಾರಣಗಳಿವೆ.

ಈ ಸಂವಹನ ವ್ಯವಸ್ಥೆಯಲ್ಲಿ ಎರಡು ತುದಿಗಳಿದ್ದು ಒಂದೆಡೆ ಇರುವವರು ತಮ್ಮ ಗಣಕದಲ್ಲಿ ಕನ್ನಡ ಕಾರ್ಯವಾಹಿಯನ್ನು ಇರಿಸಿಕೊಂಡು ಅದರಿಂದ ಸಂದೇಶವನ್ನು ಕನ್ನಡ ಲಿಪಿಯಲ್ಲಿ ರವಾನಿಸಿದರೆ ಇನ್ನೊಂದು ತುದಿಯಲ್ಲಿ ಇರುವವರು ತಮ್ಮ ಗಣಕದಲ್ಲೂ ಅದೇ ಕಾರ್ಯವಾಹಿಯನ್ನು ಹೊಂದಿದ್ದರೆ ಮಾತ್ರ ಕನ್ನಡ ಲಿಪಿಯಲ್ಲಿ ಸಂದೇಶವನ್ನು ಓದಬಹುದು. ಮರಳಿ ಕಳುಹಿಸಬಹುದು. ಆದರೆ ಈ ಸಾಧ್ಯತೆಗಳು ಕಡಿಮೆ. ಕಾರಣ ಈ ಕಾರ್ಯವಾಹಿಗಳ ಲಭ್ಯತೆಯ ಕೊರತೆ ಮತ್ತು ಪ್ರಮಾಣಬದ್ಧತೆಯ ಕೊರತೆ. ಈ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುವ ಸಂದರ್ಭಗಳು ಮೈತಳೆದಿವೆ. ಅವುಗಳಲ್ಲಿ ಮುಖ್ಯವಾಗಿ ಅಂಕೀಕರಣದ ಮಾಹಿತಿಯನ್ನು ನೆನಪಿನಲ್ಲಿ ಇರಿಸಿಕೊಳ್ಳಲು ಗಣಕಗಳು ಬಳಸುವ ಹಲವು ಸಂಕೇತ ವ್ಯವಸ್ಥೆಗಳು ಜಾರಿಯಲ್ಲಿವೆ. ಇವುಗಳಲ್ಲಿ ಒಂದು ಸಂಕೇತ ವ್ಯವಸ್ಥೆಯ ದಾಖಲೆಗಳನ್ನು ಇನ್ನೊಂದು ಸಂಕೇತ ವ್ಯವಸ್ಥೆಗಳಲ್ಲಿ ಓದುವುದು ಆಗದು. ಇದಕ್ಕೆ ಎರಡು ಪರಿಹಾರಗಳನ್ನು ಸೂಚಿಸಲಾಗಿದೆ. ಒಂದು : ಬೇರೆ ಬೇರೆ ಸಂಕೇತ ವ್ಯವಸ್ಥೆಗಳ ನಡುವೆ ಪರಿವರ್ತನೀಯತೆಯನ್ನು ರೂಪಿಸುವುದು. ಎರಡು : ಜಾಗತಿಕವಾಗಿ ಒಂದೇ ಸಂಕೇತ ವ್ಯವಸ್ಥೆಯನ್ನು ರೂಪಿಸುವುದು. ಮೊದಲನೆಯದು ತಾತ್ಕಾಲಿಕ ಪರಿಹಾರ ಕ್ಕಾಗಿ ಹಲವು ಪ್ರಯತ್ನಗಳು ಕನ್ನಡದಲ್ಲಿ ನಡೆದಿದೆ. ಬಹುರಾಷ್ಟ್ರೀಯ ಕಂಪನಿಗಳು ಭಾಗೀದಾರರಾಗಿರುವ ಈ ಪ್ರಯತ್ನದಿಂದಾಗಿ ಯೂನಿಕೋಡ್ ಎಂದು ಕರೆಯಲಾಗುವ ಜಾಗತಿಕ ನೆಲೆಯ ಸಾಮಾನ್ಯ ಸಂಕೇತ ವ್ಯವಸ್ಥೆಯಲ್ಲಿ ಕನ್ನಡ ಲಿಪಿಗಳನ್ನು ರೂಪಿಸುವುದು ಸಂಗ್ರಹಿಸುವುದು ಸಾಧ್ಯವಾಗಿದೆ. ಅಲ್ಲಲ್ಲಿ ಕೊರತೆಗಳಿದ್ದರೂ ಹೆಚ್ಚು ಪರಿಣಾಮಕಾರಿಯಾದ ಪರಿಹಾರವಾಗಿ ಕಾಣುತ್ತಿದೆ. ಇದರಲ್ಲಿ ಕರ್ನಾಟಕ ಸರ್ಕಾರ ಯಾವುದೇ ರೀತಿಯಲ್ಲೂ ಕ್ರಿಯಾತ್ಮಕವಾಗಿ ಪಾಲು ತೆಗೆದುಕೊಂಡಿಲ್ಲ. ತಾನು ಅಧಿಕೃತಗೊಳಿಸಿದ ನುಡಿ ಕಾರ್ಯ ವಾಹಿಯನ್ನು ಈ ಜಾಗತಿಕ ಸಂಕೇತ ವ್ಯವಸ್ಥೆಗೆ ಹೊಂದಿಸುವ ಪ್ರಯತ್ನವನ್ನು ಕೂಡ ಅರೆ ಮನಸ್ಸಿನಿಂದ ಮಾಡಿದೆ.

ಇದಲ್ಲದೆ ಇನ್ನೊಂದು ಪರಿಹಾರವನ್ನು ಗಣಕ ಬಳಕೆದಾರರು ಅನುಸರಿಸುವುದುಂಟು. ಅದರಂತೆ ಅವರು ಕನ್ನಡ ಭಾಷಾ ಸಂದೇಶವನ್ನು ರೋಮನ್ ಲಿಪಿಯಲ್ಲಿ ನಿರೂಪಿಸುತ್ತಾರೆ. ಸಾಮಾನ್ಯವಾಗಿ ಈಗ ಗಣಕಗಳನ್ನು ಬಳಸುತ್ತಿರುವವರು ಕನ್ನಡದ ಜೊತೆಗೆ ಇಂಗ್ಲಿಶ್ ಲಿಪಿ ವ್ಯವಸ್ಥೆಯನ್ನು ಬಲ್ಲವರಾದ್ದರಿಂದ ಈ ಲಿಪಿಯನ್ನು ಬಳಸುವುದು ಅವರಿಗೆ ಸುಲಭವಾಗಿದೆ. ಹೀಗೆ ಕಾರ್ಯವಾಹಿಗಳ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ರೋಮನ್ ಲಿಪಿಯನ್ನು ಕನ್ನಡ ಲಿಪಿಗೆ ಪರ್ಯಾಯವಾಗಿ ಬಳಸುವುದನ್ನು ಸಾರ್ವತ್ರಿಕವಾಗಿ ಯಾರೂ ಸಮರ್ಥಿಸ ಲಾರರು. ಆದರೆ ಬಳಕೆದಾರರನ್ನು ಯಾರು ನಿಯಂತ್ರಿಸುತ್ತಾರೆ? ರೋಮನ್ ಲಿಪಿಯನ್ನು ಬಳಸಿ ಕನ್ನಡವನ್ನು ಬರೆಯುವ ಅವರ ಯತ್ನ ಮುಂದುವರೆಯುತ್ತಲೇ ಇದೆ(ಈ ಒಳ ಮಾರ್ಗ ಈಗ ಮೊಬೈಲ್ ಪೋನ್ ಗಳ ಮೂಲಕ ಕಿರು ಸಂದೇಶಗಳನ್ನು ಕಳುಹಿಸುವವರಲ್ಲೂ ಹೆಚ್ಚಾಗಿ ಬಳಕೆಯಲ್ಲಿದೆ). ಗಣಕದಲ್ಲಿ ಕನ್ನಡ ಲಿಪಿಗೆ ರೋಮನ್ ಲಿಪಿಯನ್ನು ಬಳಸಿದರೆ ಅದರಿಂದ ಬದಲಿಸಲಾಗದ ತಪ್ಪು ಆಗಿ ಹೋಗುತ್ತದೆ ಎಂದು ಕೊರಗುವ ಕಾಲ ಇದಲ್ಲ. ಏಕೆಂದರೆ ಈಗಾಗಲೇ ಒಂದು ಲಿಪಿ ವ್ಯವಸ್ಥೆಯಿಂದ ಇನ್ನೊಂದು ಲಿಪಿ ವ್ಯವಸ್ಥೆಗೆ ಲಿಪ್ಯಂತರ ಮಾಡುವ ಕಾರ್ಯವಾಹಿಗಳು ಬಳಕೆಯಲ್ಲಿವೆ. ಇದರಿಂದ ರೋಮನ್ ಲಿಪಿಯ ದಾಖಲೆಗಳನ್ನು ಕನ್ನಡ ಲಿಪಿಗೆ ಪರಿವರ್ತಿಸುವುದು ಈಗ ಅಸಾಧ್ಯವೆನ್ನುವಂತಿಲ್ಲ. ಈಗ ಹೆಚ್ಚು ಬಳಕೆಯಲ್ಲಿರುವ ಕನ್ನಡ ಕಾರ್ಯವಾಹಿಗಳಲ್ಲಿ ಒಂದಾದ ‘ಬರಹ’ದಲ್ಲಿ ವಾಸ್ತವವಾಗಿ ಮೂಲ ದಾಖಲಾತಿಗಳು ರೋಮನ್ ಲಿಪಿಯಲ್ಲೇ ಆಗುತ್ತವೆ. ಆನಂತರ ಅದನ್ನು ಕನ್ನಡ ಲಿಪಿಗೆ ಬದಲಿಸಿಕೊಳ್ಳುವ ಅವಕಾಶವನ್ನು ಆ ಕಾರ್ಯವಾಹಿಯಲ್ಲಿ ರೂಪಿಸಲಾಗಿದೆ. ಈ ಪರ್ಯಾಯ ಲಿಪಿ ಬಳಕೆ ಹೊಸದೇನೂ ಅಲ್ಲ. ಕನ್ನಡ ಹಸ್ತಪ್ರತಿಗಳ ಪರಿಚಯವಿದ್ದವರಿಗೆ ಈ ವಿಧಾನ ಬಹು ಹಿಂದಿನಿಂದಲೂ ನಡೆದಿರುವುದು ಗೊತ್ತಿದೆ. ಸಂಸ್ಕೃತ ಕೃತಿಗಳನ್ನು ಕನ್ನಡ ಲಿಪಿಯಲ್ಲಿ ಬರೆದಿರುವುದು, ಕನ್ನಡ ಕೃತಿಗಳನ್ನು ತೆಲುಗು ಲಿಪಿಯಲ್ಲಿ ಬರೆದಿರುವುದು ಹೀಗೆ ಹಲವು ಪರ್ಯಾಯ ವಿಧಾನಗಳು ಜಾರಿಯಲ್ಲಿದ್ದವು. ಹೀಗೆ ಮಾಡಲು ಈ ಲಿಪಿಕಾರರಿಗೆ ಇದ್ದಂತಹ ಕಾರಣಗಳೇ ಈಗಲೂ ಇವೆ ಎಂದು ಹೇಳುತ್ತಿಲ್ಲ. ಆದರೆ ನಮ್ಮ ಕಾಲದ ಅಗತ್ಯಗಳಿಗಾಗಿ ಹೀಗೆ ಲಿಪಿಕರಣಕ್ಕೆ ರೋಮನ್ ಲಿಪಿ ವ್ಯವಸ್ಥೆಯನ್ನು ಬಳಸುವುದು ಮಧ್ಯವರ್ತಿ ವಿಧಾನವಾಗಿ ಸೂಕ್ತವೇ ಆಗಿದೆ. ಆದರೆ ಈ ಲಿಪ್ಯಂತರಕ್ಕೆ ಎಲ್ಲರೂ ಅನುಸರಿಸಬೇಕಾದ ಒಂದು ಪರಿವರ್ತನಾ ಕೋಷ್ಟಕವನ್ನು ಸಿದ್ಧಪಡಿಸಿ ಅದನ್ನು ಅಧಿಕೃತಗೊಳಿಸಬೇಕಾಗುತ್ತದೆ.

ಇದಲ್ಲದೆ ಈ ಹೊಸ ತಂತ್ರಜ್ಞಾನ ಕನ್ನಡ ಬರವಣಿಗೆಯ ಮತ್ತೊಂದು ವಲಯವನ್ನು ಪ್ರಭಾವಿಸಿದೆ. ದಾಖಲೆಗಳ ಸಂರಕ್ಷಣೆಯ ವಲಯವಿದು. ಲಿಖಿತ ದಾಖಲೆಗಳನ್ನು ಅವು ಯಾವ ಸಾಮಗ್ರಿಯ ಮೇಲೆ ಭಿತ್ತಿಯ ಮೇಲೆ ಶಿಲೆಯ ಮೇಲೆ ರೂಪಗೊಂಡಿದ್ದವೋ ಅವುಗಳನ್ನು ನಮ್ಮ ಅನುಕೂಲಕ್ಕಾಗಿ ಮುದ್ರಣದ ನೆರವಿನಿಂದ ಕಾಗದಕ್ಕೆ ರವಾನಿಸಿಕೊಂಡಿದ್ದೇವೆ. ೨೦ನೇ ಶತಮಾನವಿಡೀ ಹೀಗೆ ಮಾಧ್ಯಮ ಪರಿವರ್ತನೆಯ ಕೆಲಸ ಅಗಾಧ ಪ್ರಮಾಣದಲ್ಲಿ ನಡೆದಿದೆ. ಕಳೆದ ಐವತ್ತು ವರ್ಷದಲ್ಲಿ ಇಂತಹ ಕೆಲಸ ನಡೆಯುತ್ತಲೇ ಬಂದಿದೆ. ಆದರೆ ನಮಗೆ ಈಗ ಖಚಿತವಾಗಿರುವ ಸಂಗತಿ ಎಂದರೆ ಕಾಗದದ ಜೀವಿತಾವಧಿ ದಿನಕಳೆದಂತೆ ಕುಗ್ಗುತ್ತಿದೆ. ಮೊದಮೊದಲು ಹಲವು ದಶಕಗಳ ಕಾಲ ಹಾಳಾಗದೆ ಇರುತ್ತಿದ್ದ ಕಾಗದ ಈಗ ಒಂದು ದಶಕ ಕಾಲ ಕೂಡ ಉಳಿಯುವುದು ದುಸ್ತರವಾಗಿದೆ. ಹಾಗಾಗಿ ಕಾಗದದ ಮೇಲಿರುವ ದಾಖಲೆಗಳನ್ನು ಹೆಚ್ಚು ಸ್ಥಿರವಾದ ಮಾಧ್ಯಮಕ್ಕೆ ರವಾನಿಸುವ ಅಗತ್ಯ ಕಂಡುಬಂದಿದೆ. ಕಾಗದದ ಇನ್ನೊಂದು ಮಿತಿ ಎಂದರೆ ಅದೊಂದು ಭೌತಿಕ ವಸ್ತುವಾದರಿಂದ ಅದರಲ್ಲಿ ಆಗಿರುವ ಭಾಷಾ ದಾಖಲಾತಿಗಳು ಸೀಮಿತ ಕಾಲದೇಶದಲ್ಲಿ ಮಾತ್ರ ಪ್ರಸಾರವಾಗುತ್ತವೆ. ಕಾಗದದ ಈ ಎರಡು ಮಿತಿಗಳನ್ನು ಮೀರಲು ಈಗ ಗಣಕವನ್ನು ಬಳಸಲಾಗುತ್ತಿದೆ. ಲಿಖಿತ ದಾಖಲೆಗಳನ್ನು ಅವು ಇರುವಂತೆಯೇ ಗಣಕಗಳ ನೆನಪಿನಲ್ಲಿ ಇರಿಸಬಹುದು ಮತ್ತು ಯಾರಿಗಾದರೂ ಅವು ತಕ್ಷಣ ದೊರೆಯುವಂತೆ ಮಾಡಬಹುದು. ಕನ್ನಡದಲ್ಲಿ ಈ ಸಾಧ್ಯತೆಯನ್ನು ಈಗೀಗ ಬಳಸಲಾಗುತ್ತಿದೆ. ಸರ್ಕಾರವು ತನ್ನ ಬಲು ದೀರ್ಘ ಕಾಲದ ದಾಖಲೆಗಳನ್ನು ಹೀಗೆ ಗಣಕದಲ್ಲಿ ಕಾಯ್ದಿರಿಸುವ ಯತ್ನವನ್ನು ಮಾಡುತ್ತಿದೆ. ವಿಶ್ವವಿದ್ಯಾಲಯಗಳು, ಸಾರ್ವಜನಿಕ ಸಂಸ್ಥೆಗಳು, ಬರಹವನ್ನು ಕಾಗದರಹಿತ ಸ್ಥಿತಿಗೆ ಪರಿವರ್ತಿಸುವ ದಾರಿಯನ್ನು ಹಿಡಿದಿದ್ದಾರೆ.

ಘಿಣರಾ ಇತ್ತೀಚಿನ ವರ್ಷಗಳಲ್ಲಿ ಲಿಖಿತ ದಾಖಲೆಗಳಲ್ಲಿ ಕಾಲದೇಶ ಮೀರಿದ ಮಹತ್ವ ವುಳ್ಳವನ್ನು ಹೀಗೆ ಅಂಕೀಕರಣ ಮಾಡಿ ಕಾಯ್ದಿರಿಸುವ ಪ್ರಯತ್ನ ಬದಲಾಗಿದೆ. ತಾಳೆ ಎಲೆ ಮೇಲಿರುವ ಗ್ರಂಥಗಳು ಹೀಗೆ ಗಣಕವನ್ನು ಸೇರುತ್ತಿವೆ. ಇಲ್ಲಿರುವ ಸೌಲಭ್ಯ ಮತ್ತು ಅಪಾಯಗಳನ್ನು ಒಟ್ಟಿಗೆ ಇರಿಸಿ ನೋಡಬೇಕು. ಸೌಲಭ್ಯವೆಂದರೆ ಸಂಗ್ರಹವು ದೀರ್ಘಕಾಲ ಉಳಿಯುವುದು ಮತ್ತು ಯಾರಿಗಾದರೂ ಎಲ್ಲೇ ಇದ್ದರೂ ಲಭ್ಯವಾಗುತ್ತದೆ. ಅಪಾಯವೆಂದರೆ ಈಗಾಗಲೇ ಹೇಳಿದಂತೆ ಗಣಕದ ನೆನಪು ಭ್ರಮಾತ್ಮಕವಾದದ್ದು, ಅದಕ್ಕೆ ಭೌತಿಕವಾದ ಚಹರೆಗಳಿಲ್ಲ. ತಾಂತ್ರಿಕವಾದ ಇಕ್ಕಟ್ಟುಗಳಲ್ಲಿ ಸಾವಿರಾರು ಪುಟಗಳನ್ನು ಮಾಹಿತಿ ಮರಳಿ ಪಡೆಯಲು ಸಾಧ್ಯವಾಗದಂತೆ ಅಳಿಸಿ ಹೋಗಬಹುದು. ಕನ್ನಡದಂತಹ ಭಾಷೆ ನಿಡುಕಾಲದ ಭಾಷಾ ದಾಖಲೆಗಳನ್ನು ಹಲವು ರೂಪಗಳಲ್ಲಿ ಹೊಂದಿದೆ. ಅವುಗಳನ್ನು ಕಾಯ್ದಿರಿಸಲು ಪ್ರಚುರಪಡಿಸಲು ಗಣಕತಂತ್ರಜ್ಞಾನವು ನೆರವಿಗೆ ಬರಲಿದೆ. ಕನ್ನಡದಲ್ಲಿ ಈ ಬಗೆಯ ತಂತ್ರಜ್ಞಾನದ ಬಳಕೆ ಮೊದಲಾಗಿದ್ದರೂ ಅದು ತಳೆಯುವ ಆಕಾರವಿನ್ನೂ ಸ್ಪಷ್ಟವಾಗಿಲ್ಲ.

ಜಾಗತಿಕವಾಗಿ ಗಣಕವನ್ನು ಮಾಹಿತಿ ಕಣಜವನ್ನಾಗಿ ಬಳಸಲಾಗುತ್ತಿದೆ. ಕಾಗದದ ಮೇಲೆ ಮುದ್ರಣಗೊಂಡ ಸೃಜನಾತ್ಮಕ ಕೃತಿಗಳು ಸೇರಿದಂತೆ ಹಲವು ಸಾವಿರ ಕೃತಿಗಳನ್ನು ಗಣಕದ ನೆನಪಿನಲ್ಲಿ ಇರಿಸುವ ಪ್ರಯತ್ನಗಳು ನಡೆದಿವೆ. ಇಂಗ್ಲಿಶ್ ಮತ್ತಿತರ ಭಾಷೆಗಳಲ್ಲಿ ಈ ಯತ್ನ ಸಾಗಿರುವ ರೀತಿಗೆ ಹೋಲಿಸಿದರೆ ಕನ್ನಡದಲ್ಲಿ ನಡೆದಿರುವ ಪ್ರಯತ್ನಗಳು ತೀರಾ ಅಲ್ಪ. (ಉತ್ತರ ಅಮೆರಿಕಾದ) ಫಿಲಿಡೆಲ್ಪಿಯಾದ ಕಾರ್ನಿಗಿ ಮಿಲನ್ ಪುದುವಟ್ಟು ಜಾಗತಿಕ ವ್ಯಾಪ್ತಿಯ ಒಂದು ಯೋಜನೆಯನ್ನು ರೂಪಿಸಿದೆ. ಅದರಂತೆ ಜಗತ್ತಿನ ಹಲವು ಭಾಷೆಗಳಲ್ಲಿರುವ ದಾಖಲೆಗಳನ್ನು ಅಂಕೀಕರಣ ಮಾಡಲು ಈ ಯೋಜನೆ ರೂಪಿತವಾಗಿದೆ. ಕನ್ನಡದ ಗ್ರಂಥಗಳು ಹೀಗೆ ಅಂಕೀಕರಣ ಪ್ರಕ್ರಿಯೆಗೆ ಒಳಗಾಗಲಿವೆ. ಇಂಥಾ ಯೋಜನೆಯನ್ನು ರೂಪಿಸುವವರಲ್ಲಿ ಕೆಲವೊಮ್ಮೆ ಮಾಹಿತಿಯ ಕೊರತೆ ಇರುತ್ತದೆ. ಕನ್ನಡದಲ್ಲಿ ಒಂದು ಲಕ್ಷ ಕೃತಿಗಳನ್ನು ಹೀಗೆ ಗಣಕದ ನೆನಪಿಗೆ ಅಳವಡಿಸಲಾಗುವುದೆಂಬ ಯೋಜನೆಯನ್ನು ಸರ್ಕಾರದ ಮಂತ್ರಿಗಳು, ಅಧಿಕಾರಿಗಳು, ಹೇಳುತ್ತಿದ್ದಾರೆ. ಕನ್ನಡದಲ್ಲಿ ಈವರೆಗೆ ಮುದ್ರಿತ ರೂಪದಲ್ಲಿ ಪ್ರಕಟಗೊಂಡಿದ್ದು, ಈಗಲೂ ಓದಲು ಲಭ್ಯವಿರಬಹುದಾದ ಪುಸ್ತಕಗಳ ಸಂಖ್ಯೆ ಒಂದು ಲಕ್ಷ ತಲುಪುವುದಿಲ್ಲ ಎಂಬುದನ್ನು ಯಾರು ಗಮನಿಸಿದಂತೆ ತೋರುವುದಿಲ್ಲ.

ಈ ಅಂಕೀಕರಣವು ತರಲಿರುವ ಎರಡು ಸಮಸ್ಯೆಗಳನ್ನು ನಾವಿಲ್ಲಿ ಗಮನಿಸಬೇಕು. ಒಂದು : ಹೀಗೆ ಗಣಕದಲ್ಲಿ ಅಳವಟ್ಟ ಕನ್ನಡ ಪುಸ್ತಕವನ್ನು ಓದುವವರು ಯಾರು ಎಂಬುದು? ಬರಹ ಅನಕ್ಷರತೆಯೇ ತುಂಬಿರುವ ಈ ಸಂದರ್ಭದಲ್ಲಿ ಗಣಕ ಅನಕ್ಷರತೆಯೂ ಇನ್ನೂ ತೀವ್ರರೂಪದಲ್ಲಿದೆ. ಹಾಗಾಗಿ ಗಣಕದಲ್ಲಿ ಮರೆಯಾಗಿ ನಿಂತ ಕನ್ನಡ ಗ್ರಂಥಗಳು ಸುರಕ್ಷಿತವಾಗಿ ಉಳಿಯಬಹುದೇನೋ ನಿಜ. ಆದರೆ ಅದು ಹೆಚ್ಚು ಜನರ ಓದಿಗೆ ದೊರಕದೇ ಹೋಗಬಹುದು. ಅಲ್ಲದೆ ಮುದ್ರಿತ ಪುಸ್ತಕದ ಹಾಳೆಯೊಂದನ್ನು ಓದಲು ನಮ್ಮ ದೇಹದ ವಿವಿಧ ಅಂಗಾಂಗಗಳು ತರಬೇತು ಪಡೆದಂತೆ ಗಣಕದ ತೆರೆಯ ಮೇಲೆ ಓದಲು ಸಿದ್ಧವಾಗಿಲ್ಲ. ಇದು ತುಂಬಾ ಆಯಾಸದ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತು. ಈಗಂತೂ ಕನ್ನಡ ಗ್ರಂಥಗಳ ಅಂಕೀಕರಣ ಯೋಜನೆ ತಂತ್ರಜ್ಞಾನದ ತೆರಪಿನೊಳಗೆ ನುಗ್ಗುತ್ತಿರುವ ಪ್ರವಾಹದಂತೆ ತೋರುತ್ತದೆಯೇ ಹೊರತು ಕನ್ನಡ ಭಾಷೆಯ ಮೂಲಭೂತ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಇಲ್ಲ.

ಈ ಗಣಕ ಅಳವಡಿಕೆಯು ಇನ್ನೊಂದು ಸಮಸ್ಯೆಯನ್ನು ಮುಂದೆ ತರಲಿದೆ. ಪುಸ್ತಕ ಗಳನ್ನು ರಚಿಸಿದವರಿಗೆ ಸ್ವಾಮ್ಯ ಇರುತ್ತದೆ. ರ್೧೫೮ರ ಬರ್ನ್ ಸಮ್ಮೇಳನ ರೂಪಿಸಿದ ಕಾಪಿ ರೈಟ್ ಶರತ್ತುಗಳು ಬರೆದ ಪುಸ್ತಕದ ಮೇಲೆ ಬರೆದವರಿಗೆ ಹಕ್ಕುಗಳನ್ನು ನೀಡುತ್ತದೆ. ಗಣಕದಲ್ಲಿ ಹೀಗೆ ಪುಸ್ತಕಗಳು ಅಳವಟ್ಟಾಗ ಇಂತಹ ಹಕ್ಕುಗಳು ತೋರಿಕೆಯ ನೆಲೆಯಲ್ಲಿ ಮಾತ್ರ ಉಳಿದುಕೊಳ್ಳುತ್ತವೆ. ಏಕೆಂದರೆ ಪುಸ್ತಕವನ್ನು ಕೊಂಡು ಓದಿದ್ದಾಗ ಬರೆದವರಿಗೆ ಅದರಲ್ಲಿ ರಾಯಧನ ಸಿಗುತ್ತದೆ. ಆದರೆ ಅಂಕೀಕೃತ ಕೃತಿಗಳ ವಿಷಯದಲ್ಲಿ ಈ ಮಾತು ಹೇಳುವಂತಿಲ್ಲ. ಅಳವಡಿಸುವ ಈ ಮಹಾನ್ ಯೋಜನೆಯ ನಿರ್ಮಾತೃಗಳು ಕೂಡ ಹೊಸ ಚಿಂತನೆಯೊಂದನ್ನು ಮಂಡಿಸಿದ್ದಾರೆ. ಅದರಂತೆ ಪುಸ್ತಕ ಅಂತರ್ ಜಾಲದಲ್ಲಿ ಪ್ರಕಟಗೊಂಡ ಕೂಡಲೇ ಬರೆದವರಿಗೆ ನಿಯಮಿತ ರಾಯಧನ ಸಿಗುವುದಿಲ್ಲ. ಮುಂದೆ ಹೀಗೆ ಸಂಗ್ರಹಗೊಂಡ ಪುಸ್ತಕಗಳನ್ನು ಯಾರಾದರೂ ತಮ್ಮ ತಮ್ಮ ಗಣಕಗಳಲ್ಲಿ ಓದಿದರೆ ಹೀಗೆ ಓದಿದ ಓದುಗರ ಸಂಖ್ಯೆಯನ್ನು ಅವಲಂಬಿಸಿ ರಾಯಧನವನ್ನು ನೀಡುವ ಹೊಸ ವ್ಯವಸ್ತೆಯನ್ನು ಕಲ್ಪಿಸಿದ್ದಾರೆ. ಅಂದರೆ ಹೆಚ್ಚು ಜನ ಓದಿದರೆ ಲೇಖಕರಿಗೆ ಹೆಚ್ಚು ರಾಯಧನ. ಯಾರೂ ಓದದಿದ್ದರೆ ಏನೂ ಸಿಗುವುದಿಲ್ಲ. ಇಡೀ ಚಿಂತನಾಕ್ರಮವನ್ನೇ ಬುಡಮೇಲು ಮಾಡುವ ಇಂತಹ ವ್ಯವಸ್ಥೆಯನ್ನು ಕನ್ನಡ ಬರವಣಿಗೆಯ ಲೋಕ ಹೇಗೆ ಒಪ್ಪಿಕೊಂಡೀತು ಎಂಬುದನ್ನು ಕಾಯು್ದ ನೋಡಬೇಕಾಗಿದೆ.

ಎರಡು : ತಂತ್ರಜ್ಞಾನದ ಆವಿಷ್ಕಾರದಲ್ಲಿ ಬರೆದ ಪಠ್ಯವನ್ನು ಗಣಕಕ್ಕೆ ಅಳವಡಿಸಿದಾಗ ಅದನ್ನು ಓದುವ ಕಾರ್ಯವಾಹಿಗಳು ಸಿದ್ಧವಾಗುತ್ತವೆ. ಇಲ್ಲಿ ಓದುವ ಎಂದರೆ ಓದಿ ಹೇಳುವ ಎಂಬರ್ಥ. ಇಂಗ್ಲಿಶ್ ನಂತಹ ಭಾಷೆಯಲ್ಲಿ ಇದು ಈಗ ಬಳಕೆಯಲ್ಲಿದೆ. ಹಾಗೆಯೇ ನಾವು ಗಣಕಕ್ಕೆ ಮಾತನ್ನು ಕೂಡಿಸಿದರೆ ಅದು ಒಂದು ಓದಿದ ಪಠ್ಯವಾಗಿ ಪರಿವರ್ತನೆ ಆಗುವ ತಾಂತ್ರಿಕತೆಯೂ ರೂಪುಗೊಳ್ಳುತ್ತಿದೆ. ಇದು ಇನ್ನೂ ಪರಿಷ್ಕಾರ ಗೊಳ್ಳಬೇಕಾದ ತಂತ್ರಜ್ಞಾನ. ಆದರೂ ಮಾತು ಮತ್ತು ಬರಹಗಳ ನಡುವೆ ಇರುವ ಗಡಿಗೆರೆಗಳನ್ನು ಇದು ಅಳಿಸಿ ಹಾಕಲಿದೆ. ಜೊತೆಗೆ ಅಕ್ಷರಸ್ಥರಾಗುವ ಪರಿಕಲ್ಪನೆಯನ್ನೇ ಬದಲಾಯಿಸಲಿದೆ. ಜನರು ತಾವೇ ಬರೆಯಲೆಂದು ಅಥವಾ ಇತರರು ಬರೆದುದನ್ನು ಓದಲೆಂದು ಅಕ್ಷರಸ್ಥರಾಗುತ್ತಾರಷ್ಟೇ. ಮಾತನ್ನು ಬರಹವನ್ನಾಗಿ, ಬರಹವನ್ನು ಮಾತನ್ನಾಗಿ ಗಣಕವೇ ಪರಿವರ್ತಿಸಿ ಬಿಟ್ಟರೆ ಆಗ ಅಕ್ಷರಸ್ಥರಾಗುವುದು ಎಂಬ ಪರಿಕಲ್ಪನೆಯೇ ಮರುವ್ಯಾಖ್ಯಾನಕ್ಕೆ ಗುರಿಯಾಗಬೇಕಾಗಿ ಬರುತ್ತದೆ. ಕನ್ನಡದಂತಹ ಭಾಷೆ ಮತ್ತು ಅದನ್ನಾಡುವ ಭಾಷಿಕರಿಗೆ ಈ ತಂತ್ರಜ್ಞಾನ ಹೊಸ ಸಾಧ್ಯತೆಗಳನ್ನು ತೆರೆಯುತ್ತದೆಯೋ ಅಥವಾ ಸಂದರ್ಭವನ್ನು ಮತ್ತಷ್ಟು ಗೋಜಲುಗೊಳಿಸುತ್ತದೆಯೋ ಈಗಲೇ ಹೇಳ ಬರುವುದಿಲ್ಲ.

ಕೈಬರಹದ ದಾಖಲೆಗಳನ್ನು ಗಣಕಕ್ಕೆ ಅಳವಡಿಸುವ ಸರಳ ವಿಧಾನವೆಂದರೆ ಸ್ಕ್ಯಾನಿಂಗ್. ಹೀಗೆ ಮಾಡಿದಾಗ ಮೂಲ ಕೈಬರಹದ ದಾಖಲೆ ಒಂದು ಚಿತ್ರವಾಗಿ ಗಣಕದಲ್ಲಿ ಉಳಿಯುತ್ತದೆ. ಈ ಮೊದಲೇ ಹೇಳಿದ ಹಳೆಗಾಲದ ದಾಖಲೆಗಳ ಗಣಕೀಕರಣವು ಇದೇ ಮಾದರಿಯಲ್ಲಿ ನಡೆಯುವುದು. ಕೈಬರಹದಲ್ಲಿಲ್ಲದಿದ್ದರೂ ಮುದ್ರಿತರೂಪದಲ್ಲಿದ್ದ ಬಿ.ಎಲ್.ರೈಸ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ಕರ್ನಾಟಕದ ದಕ್ಷಿಣ ಭಾಗದ ಶಾಸನ ಸಂಪುಟಗಳ ಹಾಳೆಗಳನ್ನು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು ಸ್ಕ್ಯಾನ್ ಮಾಡುವ ಮೂಲಕ ಹೀಗೆ ಅಂಕೀಕರಿಸಿದೆ. ಇಂತಹ ಪ್ರಯತ್ನಗಳು ಕೈಬರಹದ ದಾಖಲೆಗಳಿಗೂ ಸಾಧ್ಯ. ಆದರೆ ಕೈಬರಹದ ದಾಖಲೆಗಳನ್ನು ಚಿತ್ರಗಳನ್ನಾಗಿ ಮಾಡದೆ, ಪಠ್ಯಗಳನ್ನಾಗಿ ಬದಲಿಸಲು ಬೇರೆಯೇ ತಂತ್ರಜ್ಞಾನಬೇಕು. ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಎಂದು ಕರೆಯಲಾಗುವ ಈ ತಂತ್ರಜ್ಞಾನ ಇಂಗ್ಲಿಶಿನಂತಹ ಭಾಷೆಗಳಿಗೆ ಲಭ್ಯವಿದೆ. ಕನ್ನಡದ ಮಟ್ಟಿಗಂತೂ ತೀರಾ ಪ್ರಾಥಮಿಕ ಹಂತದ ಕೆಲವು ಪ್ರಯತ್ನಗಳನ್ನು ಹೊರತುಪಡಿಸಿದರೆ ಈ ತಾಂತ್ರಿಕ ಸೌಲಭ್ಯ ಇನ್ನೂ ದುರ್ಲಭವಾಗಿಯೇ ಉಳಿದಿದೆ. ಇಂತಹ ತಾಂತ್ರಿಕತೆ ನೆನಪಿನಲ್ಲಿ ಸಂಗ್ರಹವಾಗುವ ಬಗೆಯನ್ನು ಈಗಿರುವ ಚೌಕಟ್ಟಿಗಿಂತ ಬೇರೆ ರೀತಿಯಲ್ಲಿ ರೂಪಿಸಬಲ್ಲುದು. ಬರಲಿರುವ ದಶಕಗಳಲ್ಲಿ ಕನ್ನಡ ಬರವಣಿಗೆ ಈ ತಂತ್ರಜ್ಞಾನ ಪ್ರಭಾವಕ್ಕೆ ಒಳಗಾಗಲಿದೆ.

ಈ ಮೊದಲು ಬೆರಳಚ್ಚು ಯಂತ್ರದ ಮಾತು ಬಂದಾಗ ಕೈಬರಹದ ದಾಖಲೆಯೊಂದು ಈ ಯಂತ್ರದಲ್ಲಿ ಪ್ರಮಾಣ ರೂಪಕ್ಕೆ ಪರಿವರ್ತನೆಯಾಗುತ್ತದೆ ಎಂಬುದನ್ನು ನಾವು ಗಮನಿಸಿದೆವು. ಅಂದರೆ ಬೆರಳಚ್ಚು ಯಂತ್ರ ನಮಗೆ ಒದಗಿರುವ ದಾಖಲೆ ಮೂಲವಾದ ಒಂದು ಕೈಬರಹದ ಪ್ರತಿ ಇರುತ್ತದೆ. ಅಂದರೆ ಕೈಬರಹದ ದಾಖಲೆ ಒಬ್ಬರಿಂದ ಸಿದ್ಧಗೊಂಡರೆ ಪ್ರಮಾಣಿತ ರೂಪದ ದಾಖಲೆ ಮತ್ತೊಬ್ಬರಿಂದ ಸಿದ್ಧವಾಗುತ್ತದೆ. ಈ ಮೂಲ ಕೈಬರಹದ ಪ್ರತಿಯನ್ನು ಸಿದ್ಧಪಡಿಸುವ ಹಂತವನ್ನು ಕೈಬಿಟ್ಟು ನೇರವಾಗಿ ಬೆರಳಚ್ಚು ಯಂತ್ರದಲ್ಲೇ ದಾಖಲೆ ಸಿದ್ಧಪಡಿಸುವ ಸಾಧ್ಯತೆಯು ಇತ್ತು. ಆದರೆ ಕನ್ನಡದ ಸಂದರ್ಭದಲ್ಲಿ ಈ ಸಾಧ್ಯತೆಯ ಬಳಕೆ ಹೆಚ್ಚಾಗಿ ಆಗಲಿಲ್ಲ. ಇದಕ್ಕೆ ಕೆಲವು ಕಾರಣಗಳಿವೆ. ಮೊದಲಿಗೆ ಇಂತಹ ಯಂತ್ರಗಳು ವ್ಯಾಪಕವಾಗಿ ಲಭ್ಯವಿರಲಿಲ್ಲ. ಬರೆಯುವವರಿಗೆ ಅವು ದುಬಾರಿ ಎನ್ನಿಸಿದವು. ಅಲ್ಲದೇ ಹೆಚ್ಚು ಕಾಲಾವಧಿಯಲ್ಲಿ ಈ ಯಂತ್ರಗಳು ಉಳಿಯಲಿಲ್ಲ. ಆದರೆ ಈಗ ಗಣಕ ಹೆಚ್ಚು ವ್ಯಾಪಕವಾಗಿ ಲಭ್ಯವಾಗುತ್ತಿದೆ. ಅವುಗಳನ್ನು ಬಳಸುವವರು ಕೂಡ ಹೆಚ್ಚುತ್ತಿದ್ದಾರೆ. ಇವರಲ್ಲಿ ಹಲವು ತಾವು ರೂಪಿಸಬೇಕಾದ ಬರಹ ದಾಖಲೆಯನ್ನು ಮೊದಲು ಕೈಬರಹದಲ್ಲಿ ಸಿದ್ಧಪಡಿಸಿಕೊಂಡು ಅನಂತರ ಗಣಕಕ್ಕೆ ಹಾಕುವ ವಿಧಾನವನ್ನು ಕೈಬಿಟ್ಟಿದ್ದಾರೆ. ರಾಜ್ಯಮಟ್ಟದ ಪತ್ರಿಕೆಗಳ ವರದಿಗಾರರು ಈಗ ವರದಿಗಳನ್ನು ತಮ್ಮ ಕೈಯಿಂದ ಬರೆದು ರವಾನಿಸುತ್ತಿಲ್ಲ. ಅವುಗಳನ್ನು ನೇರವಾಗಿ ಗಣಕದಲ್ಲೇ ಸಿದ್ಧಪಡಿಸುತ್ತಿ ದ್ದಾರೆ. ಅಷ್ಟಿಷ್ಟು ಬದಲಾವಣೆಗಳೊಂದಿಗೆ ಅವು ಮುದ್ರಿತವಾಗುತ್ತವೆ. ಕೈಬರಹದ ಹಂತ ತೊರೆದು ಹೋಗಲಿರುವ ಈ ಪ್ರಕ್ರಿಯೆ ಕನ್ನಡ ಬರವಣಿಗೆಯ ಮೇಲೆ ಯಾವ ಪರಿಣಾಮವನ್ನು ಬೀರಿದೆ ಎಂಬುದು ಕುತೂಹಲದ ವಿಷಯ.

ಕೈಬರಹದಲ್ಲಿ ಬರವಣಿಗೆ ಮಾಡುವಾಗ ನಮ್ಮ ಆಲೋಚನಾ ಕ್ರಮ ಪ್ರವಹಿಸುವ ವಿಧಾನ ಎಳವೆಯಿಂದಲೇ ರೂಪಗೊಂಡಿರುತ್ತದೆ. ವಿಷಯವನ್ನು ವಾಕ್ಯಗಳಲ್ಲಿ ಅಳವಡಿಸುವಾಗ ಒಂದು ನಿಗದಿತ ಮಾದರಿಯನ್ನು ರೂಪಿಸಿಕೊಂಡಿರುತ್ತೇವೆ. ಬರಹದಲ್ಲಿ ವಿಚಾರಗಳ ಪ್ರವಹಿಸುವಿಕೆ ತರ್ಕಬದ್ಧವಾಗಿ ಮತ್ತು ಓದುಗರ ಗ್ರಹಿಕೆಗೆ ಅನುಕೂಲಕರವಾಗಿ ಇರಬೇಕೆಂಬ ಉದ್ದೇಶ ಮುಖ್ಯವಾಗಿರುತ್ತದೆ. ಸಾಧ್ಯವಿದ್ದಷ್ಟು ಈ ಎಲ್ಲಾ ಉದ್ದೇಶಗಳು ಒಂದೇ ಬಾರಿ ಅಂದರೆ ಒಂದೇ ಬರಹದಲ್ಲಿ ಸಾಧಿತವಾಗಬೇಕೆಂಬ ಅಪೇಕ್ಷ ಇರುತ್ತದೆ. ಹೆಚ್ಚೆಂದರೆ ಒಂದೆರಡು ಬಾರಿ ಇಡೀ ಬರವಣಿಗೆಯನ್ನು ತಿದ್ದಿ ಬರೆಯಲು ಸಿದ್ಧರಿರುತ್ತೇವೆ. ಇದು ಅಪಾರ ಶ್ರಮ ಮತ್ತು ಸಮಯವನ್ನು ಕೋರುತ್ತದೆ. ಆದರೆ ಗಣಕಕ್ಕೆ ನೇರವಾಗಿ ಬರವಣಿಗೆಯನ್ನು ಅಳವಡಿಸುವಾಗ ಈ ಇಕ್ಕಟ್ಟು ಇರುವುದಿಲ್ಲ. ಎಲ್ಲವನ್ನೂ ತಿದ್ದಿ ಬರೆಯಬೇಕೆಂಬ ಇಚ್ಚೆ ಇದ್ದರೆ ಅದು ಇಲ್ಲಿ ಸುಲಭ. ವಿಚಾರಗಳನ್ನು ನಾವು ಬಯಸಿದ ರೀತಿಯಲ್ಲಿ ಮರಳಿ ಜೋಡಿಸಬಹುದು. ಆದ್ದರಿಂದ ಬರೆಯುವಾಗ ಅಂದರೆ ಗಣಕಕ್ಕೆ ನಮ್ಮ ವಾಕ್ಯಗಳನ್ನು ಕೂಡಿಸುವಾಗ ಹೆಚ್ಚು ನಿರಾಳವಾಗಿರುತ್ತೇವೆ. ನಮ್ಮ ಯೋಚಿಸುವ ಸಾಮರ್ಥ್ಯ ಹೆಚ್ಚು ಒತ್ತಡವಿಲ್ಲದೆ ಕಾರ್ಯಪ್ರವೃತ್ತವಾಗುತ್ತದೆ. ಇದು ಭಾಷೆಯ ರಚನೆಯ ಮೇಲೂ ಪರಿಣಾಮ ಬೀರುವುದು ಸಹಜ. ಕನ್ನಡದ ರಚನೆಯ ಮೇಲೆ ಇದರ ಪರಿಣಾಮಗಳೇನಾಗಿವೆ ಎಂಬುದನ್ನು ಅಧ್ಯಯನ ಮಾಡಲು ಇದು ಸೂಕ್ತ ಸಮಯವಾಗಿದೆ. ಏಕೆಂದರೆ ಬರಲಿರುವ ದಿನಗಳಲ್ಲಿ ಕನ್ನಡ ಬರವಣಿಗೆ ಕೈಬರಹದ ಹಂತವನ್ನು ಕ್ರಮಕ್ರಮವಾಗಿ ಕಡಿಮೆ ಮಾಡಿಕೊಳ್ಳಲಿದೆ.

ಅಂತರ್ ಜಾಲದ ಮಾಧ್ಯಮದಲ್ಲಿ ಹೊಸದಾಗಿ ರೂಪಗೊಂಡಿರುವ ಸಂವಹನ ಸಾಧ್ಯತೆಯನ್ನು ಜಾಗತಿಕವಾಗಿ ಚಾಟಿಂಗ್ ಎನ್ನುತ್ತಾರೆ. ದೇಶಸ್ಥವಾಗಿ ದೂರದಲ್ಲಿರುವ ಅಥವಾ ದೂರದಲ್ಲಿದ್ದೇವೆಂದು ತಿಳಿದಿರುವ ಇಬ್ಬರು ತಮ್ಮ ತಮ್ಮ ನಡುವೆ ನಡೆಸುವ ಸಂಭಾಷಣೆಯೇ ಚಾಟಿಂಗ್ . ಇದರಲ್ಲಿ ಯಾವ ವಿಷಯವನ್ನು ಕುರಿತು ಮಾತಾಡಲಾಗುತ್ತದೆ ಎಂಬುದು ನಮಗೆ ಮುಖ್ಯವಲ್ಲ. ಆದರೆ ಇದರ ತಾಂತ್ರಿಕ ನೆಲೆಗಳು ಭಾಷೆಯ ಮೇಲೆ ಬೀರುತ್ತಿರುವ ಪರಿಣಾಮಗಳು ಮಾತ್ರ ನಮಗಿಲ್ಲಿ ಮುಖ್ಯ. ಈ ಬಗೆಯ ಸಂವಹನವನ್ನು ಗಣಕದ ನೆರವಿನ ಸಂವಹನ (ಕಂಪ್ಯೂಟರ್ ಮೀಡಿಯೇಟೆಡ್ ಕಮ್ಯೂನಿಕೇಷನ್ ) ಎನ್ನುತ್ತಾರೆ. ಈ ಸಂವಹನವು ಭಾಷೆಯ ಮೇಲೆ ಬೀರುವ ಪರಿಣಾಮಗಳನ್ನು ಕುರಿತು ಡೇವಿಡ್ ಕ್ರಿಸ್ಟಲ್ ತನ್ನ ‘ಲಾಂಗ್ವೇಜ್ ಆಂಡ್ ಇಂಟರ್ ನೆಟ್ ’ ಎಂಬ ಕೃತಿಯಲ್ಲಿ ವಿವರಿಸುತ್ತಾರೆ. ಆತನ ಉದಾಹರಣೆಗಳು ಇಂಗ್ಲಿಶ್ ಭಾಷೆಗೆ ಸೇರಿವೆ. ಆದರೆ ಯಾವುದೇ ಭಾಷೆಗೆ ಅನ್ಯಯವಾಗುವ ಕೆಲವು ಸಂಗತಿಗಳು ಅಲ್ಲಿವೆ. ಹೀಗಾಗಿ ಆ ಕುರಿತು ಕೆಲವು ಸಂಗತಿಗಳನ್ನು ನಾವಿಲ್ಲಿ ಗಮನಿಸುವುದು ಅಗತ್ಯ.

ಚಾಟಿಂಗ್ ನಲ್ಲಿ ಕನ್ನಡ ಬಲ್ಲ ಇಬ್ಬರು ಸಂವಾದಕ್ಕೆ ತೊಡಗಿದ್ದಾರೆ ಎಂದುಕೊಳ್ಳೋಣ. ಈಗಿರುವಂತೆ ಅವರು ತಮ್ಮ ಮಾತಿನ ಮಾಧ್ಯಮವಾಗಿ ಕನ್ನಡವನ್ನು ಬಳಸಲು ಇಚ್ಚಿಸಿದರೆ ಬಹುಮಟ್ಟಿಗೆ ಅವರ ಆಯ್ಕೆ ರೋಮನ್ ಲಿಪಿಯಾಗಿರುತ್ತದೆ. ಲಿಪ್ಯಂತರಕ್ಕಾಗಿ ತಮ್ಮದೇ ಆದ ವ್ಯವಸ್ಥೆಯೊಂದನ್ನು ರೂಪಿಸಿ ಬಳಸುತ್ತಾರೆ. ಈ ಮಾತು ಇಂಗ್ಲಿಶ್ ಹೊರತುಪಡಿಸಿದ ಎಲ್ಲಾ ಭಾಷೆಗಳಿಗೂ ನಿಜ. ಅಂತರ್ ಜಾಲದಲ್ಲಿ ಇರುವ ಬ್ಲಾಗ್ ತಾಣಗಳಿಗೆ ಹೋದರೆ ಅಲ್ಲಿ ಬೇರೆ ಬೇರೆ ಭಾಷೆಗಳ ಜನರು ರೋಮನ್ ಲಿಪಿಯನ್ನು ಬಳಸುತ್ತಿರುವುದನ್ನು ಗಮನಿಸಬಹುದು. ಹೀಗೆ ಕನ್ನಡಿಗರು ಆ ಸಂದರ್ಭದ ಒತ್ತಡದಿಂದ ಕನ್ನಡ ಲಿಪಿಯ ಬದಲು ರೋಮನ್ ಲಿಪಿಯನ್ನೇ ಆಯ್ದುಕೊಳ್ಳುತ್ತಾರೆ.

ನಾವು ಸಂಭಾಷಣೆ ಎಂಬ ಮಾತನ್ನು ಬಳಸಿದೆವು. ಎಂದರೆ ಇಲ್ಲಿ ಭಾಷೆ ಮಾತಿನ ರೂಪದಲ್ಲಿ ಬಳಕೆಯಾಗುತ್ತದೆ ಎಂದರ್ಥ. ಆದರೆ ವಾಸ್ತವವಾಗಿ ಚಾಟಿಂಗ್ ನಲ್ಲಿ ಯಾರೂ ಮಾತಾಡುತ್ತಿರುವುದಿಲ್ಲ. ಒಬ್ಬರ ಧ್ವನಿ ಇನ್ನೊಬ್ಬರಿಗೆ ಕೇಳಿಸುವುದಿಲ್ಲ. ಅದಕ್ಕೆ ದೂರ ಕಾರಣವಲ್ಲ. ಅವರು ಮಾತಾಡುವ ಬದಲು ಬರೆಯುತ್ತಿರುತ್ತಾರೆ. ನಾವು ಈವರೆಗೆ ಭಾಷೆಯ ಆವಿಷ್ಕಾರಕ್ಕೆ ಎರಡೇ ಸಾಧ್ಯತೆಗಳನ್ನು ಕಲ್ಪಿಸಿಕೊಂಡಿದ್ದೇವೆ. ಒಂದು ಮಾತು, ಇನ್ನೊಂದು ಬರಹ. ಇವೆರಡಕ್ಕೂ ನಿರ್ದಿಷ್ಟ ಲಕ್ಷಣಗಳಿವೆ. ಅದರಲ್ಲೂ ಸಂಭಾಷಣೆಯಲ್ಲಿ ತೊಡಗಿದಾಗ ಬಳಕೆಯಾಗುವ ಮಾತಿಗೆ ಇನ್ನಷ್ಟು ಖಚಿತವಾದ ರೂಪವಿದೆ. ಮುಖ್ಯವಾಗಿ ನಾವು ಮಾತಾಡುವಾಗ ನಮ್ಮ ಮಾತು ಅದನ್ನು ಕೇಳಿಸಿಕೊಂಡವರ ಸಾಮಾಜಿಕ ಹಿನ್ನೆಲೆ ಮತ್ತು ಸಂದರ್ಭದ ಸ್ವರೂಪಗಳನ್ನು ಅವಲಂಬಿಸಿರುತ್ತದೆ. ಕೇಳುವವರ ಮಾತಿಗೆ ಪ್ರತಿಕ್ರಿಯೆಯಾಗಿ ನಮ್ಮ ಮಾತು ಆಕಾರ ತಳೆಯುತ್ತದೆ. ಒಂದು ರೀತಿಯ ಕೊಳುಕೊಡೆಗಳು ಇಬ್ಬರ ನಡುವೆಯೂ ರೇಖಾತ್ಮಕವಾಗಿ ಚಲಿಸುತ್ತಿರಬೇಕು. ಹೀಗೆಯೇ ಬರಹಕ್ಕೂ ಗೊತ್ತಾದ ಲಕ್ಷಣಗಳಿವೆ. ಬರಹ ಬರೆದ ಮೇಲೆ ಓದುಗರಿಗೆ ಸಿಗುವಂತದ್ದು. ಅಲ್ಲದೆ ಅದು ಹೆಚ್ಚು ಕಾಲ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳುತ್ತದೆ. ಚಾಲಿಂಗ್ ನಲ್ಲಿ ಇರುವುದು ಮಾತೂ ಅಲ್ಲ ಬರಹವೂ ಅಲ್ಲ. ನಾವು ಮಾತಾಡುವಾಗ ಅನುಸರಿಸಬೇಕಾದ ನಿಯಮಗಳು ಇಲ್ಲಿ ಉಲ್ಲಂಘನೆಯಾಗುತ್ತವೆ. ಎದುರುಗಡೆ ಇ್ನೊಂದು ತುದಿಯಲ್ಲಿ ಇರುವವರ ಸಾಮಾಜಿಕ ಹಿನ್ನೆಲೆ ಮತ್ತು ಸಂದರ್ಭದ ಉದ್ದೇಶ ನಮಗೆ ಗೊತ್ತಿರುವುದಿಲ್ಲ. ಗೊತ್ತಾಗುವುದೂ ಇಲ್ಲ. ಇಲ್ಲವೆ ನಮಗೆ ಗೊತ್ತಿರುವುದು ಸತ್ಯವೇ ಆಗಿರಬೇಕಾಗಿಲ್ಲ. ಆದರೂ ಚಾಟಿಂಗ್ ನಲ್ಲಿ ನಮ್ಮ ಮಾತುಕತೆ ನಡೆಯುತ್ತದೆ. ನಮ್ಮ ಬರಹ ಎದುರು ಕುಳಿತವರ ಹಿಂದಿನ ಮಾತನ್ನು ಅವಲಂಬಿಸಿ ರೂಪುಗೊಂಡಿರುವುದಿಲ್ಲ. ಚಾಟಿಂಗ್ ಸಂದರ್ಭ ಟ್ರಾನ್ಸ್‌ಸ್ಕ್ರಿಪ್ಟ್‌ಗಳನ್ನು ಅವಲಂಬಿಸಿ ರೂಪುಗೊಂಡಿರುವುದಿಲ್ಲ. ಚಾಟಿಂಗ್ ಸಂದರ್ಭದ ಟ್ರ್ಯಾನ್ಸ್‌ಸ್ಕ್ರಿಪ್ಟ್‌ಗಳನ್ನು ನಾವು ಪರಿಶೀಳಿಸಿದರೆ ಈ ಅಂಶ ಗೊತ್ತಾಗುತ್ತದೆ. ಒಂದು ತುದಿಯಲ್ಲಿರುವವರು ಕೇಳಿದ ಪ್ರಶ್ನೆಗೆ ಇನ್ನೊಂದು ತುದಿಯಲ್ಲಿರುವವರು ಕಾಯ್ದುಕೂರುವುದಿಲ್ಲ. ಬೇರೆ ಏನನ್ನೋ ಬರೆಯುತ್ತಾರೆ. ಯಾವಾಗಲೂ ಕೇಳಿದ ಪ್ರಶ್ನೆಗೆ ಮತ್ತೆ ಯಾವಾಗಲೋ ಉತ್ತರ ಬರುತ್ತದೆ. ಅಥವಾ ಬರದೆಯೂ ಇರಬಹುದು. ಹಾಗೆಂದು ಸಂಭಾಷಣೆ ಕಡಿದು ಹೋಗುವುದಿಲ್ಲ. ಇದು ಅಕ್ಷರಗಳಲ್ಲಿ ರೂಪಗೊಳ್ಳುತ್ತಿದ್ದರೂ ಇದಕ್ಕೆ ಬರಹದ ಲಕ್ಷಣವೂ ಇಲ್ಲ. ಕ್ರಿಸ್ಟಲ್ ಇದು ಭಾಷೆಯ ಅಭಿವ್ಯಕ್ತಿಯ ಮತ್ತೊಂದು ಹೊಸ ರೂಪವೆಂದು ಭಾವಿಸುತ್ತಾನೆ. ನಾವು ಈ ಮಾದರಿಯನ್ನು ಬರೆಮಾತು ಎಂದು ಕರೆಯಬಹುದಾಗಿದೆ. ಕನ್ನಡ ಭಾಷೆಯು ಚಾಟಿಂಗ್‌ಗೆ ಅಲ್ಲಲ್ಲಿ ಬಳಕೆಯಾಗುತ್ತಿರುವ ನಿದರ್ಶನಗಳಿವೆ. ಬಹುಮಟ್ಟಿಗೆ ಇವು ದ್ವಿಭಾಷಿಕ ಸಂವಹನಗಳು. ಇಂಗ್ಲಿಶ್ ಮತ್ತು ಕನ್ನಡಗಳನ್ನು ಅನುಕೂಲಕ್ಕೆ ತಕ್ಕಂತೆ ಜೋಡಿಸಿಕೊಂಡು ಮಾತಿನ ದಾರಿಗಳನ್ನು ತೆರೆಯಲಾಗುತ್ತದೆ. ಕನ್ನಡದ ಮೇಲೆ ಈ ಹೊಸ ತಾಂತ್ರಿಕತೆ ಯಾವ ರಾಚನಿಕ ಪರಿಣಾಮ ಬೀರುತ್ತದೆ ಎಂಬುದು ತಿಳಿಯದು. ಮುಖ್ಯವಾಗಿ ಅತಿ ಚಿಕ್ಕ ವಾಕ್ಯಗಳು, ಆಖ್ಯಾತ ಪ್ರತ್ಯಯಗಳ ಬಳಕೆ ಕಡಿಮೆ ಇರುವ ವಾಕ್ಯ ರಚನೆಗಳು ಮತ್ತು ಸಂಕ್ಷೇಪಗಳು. ಇವು ಈ ಹೊಸ ಭಾಷಾ ಪ್ರಭೇದದ ಲಕ್ಷಣಗಳಾಗಲಿವೆ. ಸಂಕ್ಷೇಪಗಳು ಮಾತಿನಲ್ಲಿ ಬಳಕೆಯಾಗುವುದಿಲ್ಲ. ಅಥವಾ ಬಳಸಿದರೂ ಕಡಿಮೆ ಪ್ರಮಾಣದಲ್ಲಿ ನಿಯಮಬದ್ಧವಾಗಿ ಉಪಯೋಗವಾಗಿರುತ್ತವೆ. ಆದರೆ ಬರಹಕ್ಕೆ ಈ ಇಕ್ಕಟ್ಟು ಇಲ್ಲ. ಉದಾಹರಣೆಗೆ ಬರಹದಲ್ಲಿ ‘ರೂ’ ಎಂದು ಬರೆಯಬಹುದು. ಆದರೆ ಬರೆದಂತೆ ಉಚ್ಚರಿಸುವುದು ಅಪೇಕ್ಷಣೀಯವಲ್ಲ. ‘ರೂಪಾಯಿ’ ಎಂದೇ ಉಚ್ಚರಿಸಬೇಕು. ನಾವು ಗಮನಿಸುತ್ತಿರುವ ಬರೆಮಾತಿನಲ್ಲಿ ಕನ್ನಡ ಭಾಷೆ ಯಾವ ಯಾವ ರೀತಿ ಹ್ರಸ್ಪೀಕರಣ ಮತ್ತು ಸಂಕ್ಷೇಪೀಕರಣಗಳಿಗೆ ಒಳಗಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕು.

ತಂತ್ರಜ್ಞಾನ, ಮುದ್ರಣದಲ್ಲಿ ಹೊಸ ಅಧ್ಯಾಯವನ್ನೇ ತೆರೆದಿದೆ; ಶ್ರಮ, ಸಮಯಗಳು ಉಳಿತಾಯವಾಗಿವೆ ಎಂದೇನೋ ಹೇಳಲಾಗುತ್ತಿದೆ. ಆದರೆ, ಇಲ್ಲಿ ಹೊಸ ಸಮಸ್ಯೆಗಳು ಭಾಷೆಯ ಹಂತದಲ್ಲಿ ತಲೆ ಎತ್ತುತ್ತಿವೆ. ಅಂತಹ ಕೆಲವನ್ನು ಮುಂದೆ ಗಮನಿಸಬಹುದು. ಒಂದು : ಲಿಪಿಗಳು ಹಲವಾರಿವೆ. ಕಳೆದ ಐದಾರು ವರ್ಷಗಳಲ್ಲಿ ನಿಜವಾಗಿಯೂ ಲಿಪಿಗಳ ಸಂಖ್ಯೆ ನೂರನ್ನು ದಾಟಿದೆ. ಇಲ್ಲಿ ಲಿಪಿ ಎಂದರೆ ಲಿಪಿವಿನ್ಯಾಸ ಎಂದಷ್ಟೇ ತಿಳಿಯಬೇಕು. ಮುದ್ರಣದ ಸಂದರ್ಭದಲ್ಲಿ ಇಷ್ಟೊಂದು ಲಿಪಿ ಸಾಧ್ಯತೆಗಳು ಇರಲಿಲ್ಲ. ಅವುಗಳಲ್ಲಿ ಅಕ್ಷರ ವಿನ್ಯಾಸ ಒಂದು ಪ್ರಮಾಣ ಬದ್ಧತೆ ಇಲ್ಲ ಎಂಬುದು ತಜ್ಞ ಮುದ್ರಕರ ಅಭಿಪ್ರಾಯ. ಅದರಲ್ಲೂ ದೀರ್ಘ ಪಠ್ಯಗಳನ್ನು ಮುದ್ರಿಸಲು ಬಳಸುವ ಗಣಕ ಲಿಪಿಗಳು ಗಾತ್ರದಲ್ಲಾಗಲೀ ವಿನ್ಯಾಸದಲ್ಲಾಗಲೀ ಪ್ರಮಾಣ ಬದ್ಧತೆಯನ್ನು ಕಾಯ್ದುಕೊಂಡಿಲ್ಲ ಅಥವಾ ಈ ಲಕ್ಷಣಗಳಿರುವ ಲಿಪಿಗಳು ಹೆಚ್ಚಿಲ್ಲ. ಇದು ಗಣಕದ ನೆರವಿನ ಕನ್ನಡ ಮುದ್ರಣವನ್ನು ಅಂದಗೇಡಿಯನ್ನಾಗಿಸಿದೆ. ಶ್ರಮ, ಸಮಯಗಳು ಉಳಿತಾಯವಾಗಲೂ ಅದಕ್ಕಾಗಿ ಗುಣವತ್ತತೆಯನ್ನು ಬಿಟ್ಟುಕೊಡಬೇಕಾಗಿ ಬಂಧಿದೆ. ಇದು ಕಳೆದ ಏಳೆಂಟು ವರ್ಷಗಳಿಂದ ಮುದ್ರಕರನ್ನು ಕಾಡುತ್ತಿರುವ ಸಮಸ್ಯೆ. ದೊಡ್ಡ ಪ್ರಮಾಣದ ಮುದ್ರಣವನ್ನು ದಿನವೂ ಮಾಡುತ್ತಿರುವ ಕನ್ನಡ ದಿನ ಪತ್ರಿಕೆಗಳು ತಮ್ಮ ತಮ್ಮ ಲಿಪಿ ವಿನ್ಯಾಸಗಳನ್ನು ಮಾಡಿಕೊಂಡಿವೆ. ತ್ವರಿತಗತಿಯಲ್ಲಿ ಮುದ್ರಣ ಸಾಧ್ಯವಾಗುತ್ತಿದೆ. ಎಂಬುದನ್ನು ಬಿಟ್ಟರೆ ಲಿಪಿ ವಿನ್ಯಾಸ ಇನ್ನಷ್ಟು ಓದುಗಸ್ನೇಹಿ ಆಗಬೇಕಾಗಿದೆ. ವಿವಿಧ ಗಾತ್ರದ ಲಿಪಿಗಳನ್ನು ಬಳಸುವಾಗಲೂ ಕೂಡ ಪ್ರಮಾಣೀಕರಣದ ಕೊರತೆ ಕಾಡುತ್ತಿದೆ.

ತಂತ್ರಜ್ಞಾನದ ಮುಂದಿನ ಆವಿಷ್ಕಾರಗಳು ಕನ್ನಡ ಭಾಷೆಗೆ ಹೇಗೆ ನೆರವಾಗಬಹುದು ಎಂಬುದಕ್ಕೆ ಕೆಲವು ನಿದರ್ಶನಗಳನ್ನು ಮುಂದೆ ಚರ್ಚಿಸಲಾಗುತ್ತದೆ. ಈಗ ಗಣಕದಲ್ಲಿ ಬರೆಯುತ್ತಿರುವವರು ಭಾಷೆಯ ರಚನೆಯ ಬಗೆಗೆ ತಜ್ಞರಾದವರಲ್ಲ. ಬರಹಗಾರರು ಗಣಕಗಳನ್ನು ಬಳಸುತ್ತಿರುವ ಬಹುಕಡಿಮೆ ನಿದರ್ಶನಗಳು ಕನ್ನಡದಲ್ಲಿವೆ. ಹೀಗಾಗಿ ಬರೆದದ್ದನ್ನು ಗಣಕಕ್ಕೆ ಕೂಡಿಸುವ ದಾಖಲುದಾರರು ತಪ್ಪುಗಳನ್ನು ಮಾಡುವುದು ಸಹಜ. ಇಂತಹ ತಪ್ಪುಗಳನ್ನು ಸರಿಪಡಿಸಲು ಕರಡು ತಿದ್ದುವ ಇನ್ನೊಂದು ಹಂತ ಹಿಂದಿನಂತೆಯೇ ಈಗಲೂ ಜಾರಿಯಲ್ಲಿದೆ. ಇಂಗ್ಲಿಶಿನಂತಹ ಭಾಷೆಗಳಿಗೆ ಬರೆಯುತ್ತಿರುವಾಗಲೇ ಕಾಗುಣಿತ ದೋಷಗಳನ್ನು ಎತ್ತಿ ತೋರಿಸುವ ವ್ಯವಸ್ಥೆ ಲಭ್ಯವಿದೆ. ಸಾಮಾನ್ಯವಾಗಿ ಸ್ಪೆಲ್‌ಚೆಕ್ ಎಂದು ಕರೆಯಲಾಗುವ ಈ ವ್ಯವಸ್ಥೆ ಕೆಲವು ಭಾಷೆಗಳಿಗೆ ಲಭ್ಯವಿದೆ. ಆದರೆ ಕನ್ನಡಕ್ಕೆ ಇಂಥಾ ವ್ಯವಸ್ಥೆಯೊಂದನ್ನು ರೂಪಿಸಲು ಅಲ್ಲಲ್ಲಿ ಪ್ರಯತ್ನಗಳು ನಡೆದಿದ್ದರೂ ಅವು ಪ್ರಮಾಣೀಕರಣಗೊಂಡು ಅಧಿಕೃತವಾಗಿ ಬಳಕೆಗೆ ಲಭ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ ಈ ವ್ಯವಸ್ಥೆಯ ರೂಪಣದಲ್ಲಿ ಭಾಷಾ ತಜ್ಞರ ಭಾಗವಹಿಸುವಿಕೆ ಕಡಿಮೆ. ಭಾಗವಹಿಸುವ ಜನರು ಕೂಡ ಆಧುನಿಕ ಕನ್ನಡದ ರಚನೆಯನ್ನು ಅಭ್ಯಾಸ ಮಾಡಿದವರಲ್ಲ. ಇದರಿಂದಾಗಿ ಸಮಸ್ಯೆಗಳನ್ನು ವಿಶದೀಕರಿಸಿಕೊಳ್ಳುವ ಮತ್ತು ಪರಿಹಾರಗಳನ್ನು ಕಂಡುಕೊಳ್ಳುವ ಸಾಧ್ಯತೆಗಳು ಕಡಿಮೆಯಾಗಿವೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಪರಿಹಾರವಾಗಬಹುದೆಂದು ನಾವು ಆಶಿಸಬಹುದು.

ಭಾಷೆ ಮತ್ತು ತಂತ್ರಜ್ಞಾನದ ಸಂಬಂಧಗಳ ಒಂದು ನೆಲೆಯನ್ನು ನಾವು ಗಮನಿಸಿದ್ದೇವೆ. ಇದಲ್ಲದೆ ಇನ್ನೂ ಹಲವು ನೆಲೆಗಳಲ್ಲಿ ತಂತ್ರಜ್ಞಾನ ಕನ್ನಡಕ್ಕೆ ನೆರವಾಗಬಹುದಾಗಿದೆ. ಉದಾ.ಗೆ ಭಾಷೆಯ ಕಲಿಕೆಯ ವಲಯದಲ್ಲಿ ತಂತ್ರಜ್ಞಾನ ಈಗ ಹೊಸ ಸಾಧ್ಯತೆಗಳನ್ನು ತೆರೆದಿದೆ. ವಯಸ್ಕ ಭಾಷಾ ಕಲಿಕೆಗೆ ಅನುಕೂಲವಾಗುವ ತಾಂತ್ರಿಕ ಆವಿಷ್ಕಾರಗಳು ಜಗತ್ತಿನ ಹಲವು ಭಾಷೆಗಳಿಗೆ ಲಭ್ಯವಿದೆ. ಮುಖ್ಯವಾಗಿ ವಯಸ್ಕ ಭಾಷಾ ಕಲಿಕೆಗೆ ಅಗತ್ಯವಾದ ಕೆಲವು ಶರತ್ತುಗಳನ್ನು ತಾಂತ್ರಿಕತೆಯ ನೆರವಿನಿಂದ ಈಗ ಪೂರೈಸಬಹುದಾಗಿದೆ. ಭಾಷಾ ಮಾದರಿಗಳ ಉಚ್ಚಾರಣೆಗಳ ಧ್ವನಿ ಲೇಖನ; ಅದನ್ನು ವ್ಯಕ್ತಿಗತವಾಗಿ ಕೇಳಿ ಪುನರುಚ್ಚರಿಸಿ, ವಿಕಲ್ಪಗಳನ್ನು ಸರಿಪಡಿಸಿಕೊಳ್ಳಲು ಅನುಕೂಲ ಮಾಡಿಕೊಡುವ ಉಪಕರಣಗಳು; ಪಾಠ ಹೇಳುವವರ ಕನಿಷ್ಠ ಭಾಗವಹಿಸುವಿಕೆಗೆ ಕಾರಣವಾಗುವ ಹೆಚ್ಚು ಕಡಿಮೆ ಸ್ವಯಂಪೂರ್ಣವಾದ ಬೋಧನಾ ಸಾಮಗ್ರಿಯನ್ನು ದೃಕ್ ಶ್ರವಣ ರೂಪದಲ್ಲಿ ಸಿದ್ಧಪಡಿಸುವುದು- ಇವೆಲ್ಲ ಕನ್ನಡದಲ್ಲೂ ಈಗ ಸಾಧ್ಯವಾಗಿದೆ. ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ತನ್ನ ಒಂದು ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಹೀಗೆ ಕನ್ನಡವನ್ನು ಅಂತರ್ ಜಾಲದ ಮೂಲಕ ಕಲಿಸುವ ವ್ಯವಸ್ಥೆಯನ್ನು ಮಾಡುತ್ತಿದೆ. ಇವೆಲ್ಲವೂ ತಾಂತ್ರಿಕತೆಯ ಆವಿಷ್ಕಾರ ಭಾಷೆಯ ಅಭಿವೃದ್ದಿಗೆ ನೆರವಾಗುವ ನೆಲೆಗಳಾಗಿವೆ.