. ಕನ್ನಡ ಕಚೇರಿ

ಕನ್ನಡ ಸಾಫ್ಟ್‌ವೇರ್ ಬೆಳವಣಿಗೆ ಹಂತದಲ್ಲಿ ಸಾಕಷ್ಟು ಪ್ರಯೋಗಗಳು ನಡೆದಿವೆ. ಖಾಸಗಿ ಸಂಸ್ಥೆಗಳ ಪೈಕಿ ಇಂಡಿಯನ್ ಸಾಫ್ಟ್‌ವೇರ್ ಲ್ಯಾಬೋರೇಟರಿ (ಐ.ಎಸ್.ಎಲ್.) ಪ್ರಮುಖವಾದದ್ದು. ಕೇಂದ್ರ ಸರಕಾರಿ ಸ್ವಾಮ್ಯದ ಸಿಡಾಕ್ ಸಂಸ್ಥೆಯು ಅಧಿಕೃತ ಪ್ರತಿನಿಧಿಯಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ತಂತ್ರಾಂಶ ತಯಾರಿಕೆಯಲ್ಲಿ ಇದು ಮೊದಲ ಸ್ಥಾನದಲ್ಲಿದೆ. ಈ ಸಂಸ್ಥೆ ರೂಪಿಸಿದ ಕನ್ನಡ ಕಚೇರಿ ಎಂಬ ಸಾಫ್ಟ್ ವೇರ್ ನ್ನು ಸರಕಾರ ಹತ್ತು ಇಲಾಖೆಗಳಲ್ಲಿ ಪ್ರಾಯೋಗಿಕವಾಗಿ ಬಳಸುತ್ತಿದೆ. ಕಂಪ್ಯೂಟರಿನಲ್ಲಿ ಬರೀ ಕಾಗದ ಪತ್ರಗಳ ತಯಾರಿಕೆ, ಮುದ್ರಣಕ್ಕೆ ಮಾತ್ರ ಸೀಮಿತವಾಗಿದ್ದ ಕನ್ನಡವನ್ನು ಈ ‘ಕನ್ನಡ ಕಚೇರಿ’ ಅಗತ್ಯಕ್ಕೆ ತಕ್ಕಂತೆ ಮಾಹಿತಿ ಕ್ರೋಢಿಕರಣ, ಸಂಸ್ಕರಣೆ, ಮಾಹಿತಿಗಳ ವಿಂಗಡಣೆಯಂತಹ ಬಹುಬಳಕೆಯ ಸಾಧ್ಯತೆಗಳನ್ನು ಗರ್ಭೀಕರಿಸಿಕೊಂಡಿದೆ.

ಕನ್ನಡ ಕಚೇರಿ ಸಾಫ್ಟ್‌ವೇರ್ ಎಂ.ಎಸ್.ವಿಂಡೋಸ್ (೩.೧/೯೫)ನಲ್ಲಿಯೂ ಕೆಲಸ ಮಾಡುವ ಅನುಕೂಲವನ್ನು ಪಡೆದುಕೊಂಡಿದೆ. ಸಿ-ಡಾಕ್ ನ ಜಿಸ್ಟ್-ಐ.ಎಸ್.ಎಮ್. ಸಾಫ್ಟ್ ಅಕ್ಷರಗಳನ್ನು ಉಪಯೋಗಿಸುವ ಸೌಲಭ್ಯವಿದೆ. ಅಲ್ಲದೇ ಉಪಯೋಗಿಸುವಾತ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಬಹುದಾದ ಕೀಲಿಮಣೆಯನ್ನು ಇದು ಹೊಂದಿದೆ.

ಇಷ್ಟೇ ಅಲ್ಲದೆ ಪ್ರಕಾಶಕ, ಶಬ್ದರತ್ನ, ಕ ಬರಹ, ಕುವೆಂಪು, ಆಕೃತಿ, ಶ್ರೀಲಿಪಿ, ಕೆಬಿಲಿಪಿ, ಲೀಪ್ ಲೈಟ್, ಲೀಪ್ ಆಫೀಸ್ ಮೊದಲಾದ ಕನ್ನಡ ಸಂಬಂಧಿ ಅಪ್ಲಿಕೇಶನ್ ಸಾಫ್ಟ್‌ವೇರ್‌ಗಳು ಬಳಕೆಗೆ ಬಂದಿವೆ. ಸಾಮಾನ್ಯವಾಗಿ ವಿಂಡೋಸ್ ೩.೧ ಹಾಗೂ ವಿಂಡೋಸ್ ೯೫/೯೮ಗಳಲ್ಲಿ ಇವೆಲ್ಲವು ಕಾರ್ಯನಿರ್ವಹಿಸುವಂತೆ ಸಿದ್ಧಪಡಿಸಲಾಗಿದೆ. ಶ್ರೀಲಿಪಿ, ಕೆಬಿಲಿಪಿ, ಪ್ರಕಾಶಕ ಇವು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಪುಟಗಳನ್ನು ಮುದ್ರಿಸುವ ಶೀಘ್ರ ಕಾರ್ಯಕ್ಷಮತೆಯನ್ನು ಹೊಂದಿವೆ.

ಶ್ರೀಲಿಪಿ ಪ್ಯಾಕೇಜ್ ಹತ್ತಾರು ವೈವಿಧ್ಯ ಮತ್ತು ಅವಕಾಶಗಳೊಂದಿಗೆ ಮುಂಚೂಣಿ ಯಲ್ಲಿದೆ. ಎಲ್ಲ ರೀತಿಯ ಕಂಪ್ಯೂಟರಿಗೂ ಹೊಂದುವಂತೆ ಇದನ್ನು ಸಿದ್ಧಪಡಿಸಲಾಗಿದೆ. ಭಾರತದ ಹದಿನೆಂಟು ಭಾಷೆಗಳು ಮತ್ತು ಇಂಗ್ಲಿಶ್ ಭಾಷೆಯ ಸುಲಭ ಇಂಟರ್‌ಫೇಸ್ ಇರುವ ಪ್ಯಾಕೇಜಿನಲ್ಲಿ ಪ್ರತಿಯೊಂದು ಭಾಷೆಗೂ ಕನಿಷ್ಠ ೫ ರಿಂದ ೧೦ ವಿವಿಧ ರೀತಿಯ ಕೀಬೋರ್ಡ್ ಲೇಔಟ್‌ಗಳನ್ನು ಹೊಂದಿದೆ. ಸಂಸ್ಕೃತ, ಹಿಂದಿ, ಮರಾಠಿ ಮುಂತಾದ ಭಾಷೆಗಳಿಗೂ ಬಳಸಬಹುದಾದ ೩೨೦ ಫಾಂಟ್‌ಗಳಿವೆ. ಇದೂ ಅಲ್ಲದೆ ಹೆಚ್ಚುವರಿಯಾಗಿ (ಇತ್ರ್) ೨೯೬ ಫಾಂಟ್ ಗಳನ್ನು ಹೊಂದಿದೆ. ಕನ್ನಡಕ್ಕೆ ಬಂದರೆ ಮಾಡ್ಯೂಲರ್ ಫಾಂಟ್ ಗಳು ೬೮ ಇದ್ದು ಇತ್ರ್ ಫಾಂಟ್‌ಗಳು ೬೬ ಇವೆ. ಇವೆಲ್ಲವೂ ವಿವಿಧ ಹೆಸರಿನ ಪ್ಯಾಕೇಜಿನಲ್ಲಿವೆ.

ಶ್ರೀಲಿಪಿಯಂತೆ ಬಹುಭಾಷೆ ಮತ್ತು ಬಹುಸಾಧ್ಯತೆಗಳನ್ನೊಳಗೊಂಡ ‘ಲೀಪ್ ಆಫೀಸ್’ ಎನ್ನುವ ತಂತ್ರಾಂಶವನ್ನು ಸಿ-ಡಾಕ್ ಸಂಸ್ಥೆ ತಂದಿರುವುದು ಇಲ್ಲಿ ಗಮನಾರ್ಹ. ಲೀಪ್ ಆಫೀಸ್ ಕೂಡ ವಿಂಡೋಸ್ ಸೌಲಭ್ಯವುಳ್ಳ ಪೆಂಟಿಯಮ್ ಕಂಪ್ಯೂಟರ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ದಾಖಲೆಗಳು, ದಸ್ತಾವೇಜುಗಳು, ಅರ್ಜಿನಮೂನೆಗಳು, ಅಂಕಿ-ಅಂಶಗಳ ಕೋಷ್ಠಕ, ಚಿತ್ರಮಾಹಿತಿಗಳು, ಸ್ತಂಭ, ವೃತ್ತ, ನಕ್ಷತ್ರಗಳು ಮುಂತಾದ ಸವಲತ್ತುಗಳನ್ನು ಅಳವಡಿಸಿ ಅಧ್ಯಯನ ಮಾಡಲು ಇದು ಹೆಚ್ಚು ಸೂಕ್ತವಾಗಿದೆ. ಭಾರತೀಯ ಭಾಷೆಗಳನ್ನು ಒಳಗೊಂಡಂತೆ ೧೮ ಭಾಷೆಗಳಿಗೆ ಸಹಾಯಕವಾಗುವಂತೆ ಇದನ್ನು ಸಂಯೋಜಿಸಲಾಗಿದೆ. ಬ್ರಾಹ್ಮೀಲಿಪಿಯ ಮೂಲಾಧಾರದಿಂದ ಈ ಏಕತ್ರತೆಯನ್ನು ಸಾಧ್ಯಗೊಳಿಸಲಾಗಿದೆ. ಇದರ ಸಹಾಯದಿಂದ ವಿವಿಧ ಭಾಷಾ ಸಂಕೇತಗಳನ್ನು ಇಂಗ್ಲಿಶಿನ ನೆರವಿನಿಂದ ಕಂಪ್ಯೂಟರಿಗೆ ಪರಿವರ್ತಿಸಿ ನಮಗೆ ಬೇಕಾದ ಭಾಷೆಯ ಅಕ್ಷರಗಳನ್ನು ತೆರೆಯ ಮೇಲೆ ಮೂಡಿಸಬಹುದಾಗಿದೆ.

ಈ ಕಾರಣಕ್ಕಾಗಿ ಶ್ರೀಲಿಪಿ ಮತ್ತು ಲೀಪ್ ಆಫೀಸ್‌ಗೂ ಹತ್ತಿರದ ಸಾಮ್ಯತೆಗಳಿವೆ. ಶ್ರೀಲಿಪಿಯ ಕನ್ನಡದ ೬೮ ಮಾಡ್ಯುಲರ್, ಫಾಂಟ್‌ಗಳು ೬೬ ಇತ್ರ್ ಫಾಂಟ್ ಗಳು, ಕ್ಲಿಪ್ ಆರ್ಟ್, ಪ್ರತಿಯೊಂದಕ್ಕೂ ಬೋಲ್ಡ್, ಇಟಾಲಿಕ್ ಹಾಗೂ ಅಕ್ಷರವನ್ನು ದೊಡ್ಡದು ಸಣ್ಣದು ಮಾಡಿಕೊಳ್ಳುವ ಸಾಧ್ಯತೆಗಳನ್ನು ಒದಗಿಸಲಾಗಿದೆ. ಕನ್ನಡದ ಟೈಪಿಂಗ್ ಬರುವವರೂ ಬಾರದವರೂ ಕೂಡ ಏಕ ಪ್ರಕಾರವಾಗಿ ಇದನ್ನು ಬಳಸಲು ಬರುವ ಹಾಗೆ ೧೦ ವಿವಿಧ ಕೀಬೋರ್ಡ್ ಲೇ ಔಟ್ ಅಳವಡಿಸಲಾಗಿದೆ. ಅವುಗಳೆಂದರೆ -೪೧ ಅಸೈರಿಕ್ಸ್, ಸಿ-೪೨ ಅವೆನ್ಯೂ, ಸಿ-೪೩ ಬೃಂದಾ, ಸಿ-೪೪ ಡೋ, ಸಿ-೪೫ ಗೋದ್ರೇಜ್, ಸಿ-೪೬ ಇತ್ರ್ (ITR), ಸಿ-೪೮ ಕೆಪಿರಾವ್, ಸಿ-೪೮ ಸೊನಾಟ, ಸಿ-೪೯ ಎಸ್ ಆರ್ ಜಿ ಹಾಗೂ ಸಿಸಿ-೫೦ ವಿ.ಎಸ್.ಎಸ್.

ಕಂಪ್ಯೂಟರಿನಲ್ಲಿ ತುಂಬಾ ಸರಳವಾಗಿ ಕೆಲಸ ಮಾಡಬಹುದಾದ ತಂತ್ರಾಂಶಗಳೆಂದರೆ, ಕೆಪಿರಾವ್ ಹಾಗೂ ಶಬ್ದರತ್ನ ತಂತ್ರಾಂಶಗಳು ಟೈಪಿಂಗ್ ಬರದವರೂ ಕೂಡ ಇದರಲ್ಲಿ ಕೆಲಸ ಮಾಡಬಹುದು. ಶಬ್ದರತ್ನದ ವಿಶೇಷತೆ ಎಂದರೆ ಇದು ಕನ್ನಡ-ಇಂಗ್ಲಿಷ್, ಹಿಂದಿ-ಇಂಗ್ಲಿಷ್ , ದ್ವಿಭಾಷಾ ಆವೃತ್ತಿಗಳಲ್ಲಿ ದೊರಕುತ್ತದೆ. ಇವುಗಳಲ್ಲಿ ಕನ್ನಡ ವರ್ಣಮಾಲೆಯನ್ನು ಇಂಗ್ಲಿಷ್ ವರ್ಣಮಾಲೆಯ ಉಚ್ಚಾರಣೆಗಳಿಗೆ ಸಂವಾದಿಯಾಗುವಂತೆ ಹೊಂದಿಸಲಾಗಿದೆ. ಉದಾಹರಣಗೆ ಚಿ=ಅ, ೦-ಆ, K=ಕ, K=ಖ, b=ಬ, B+೦=ಭಾ ಇತ್ಯಾದಿ. ಇದು ಅಲ್ಲದೆ ಅರ್ಕಾವೊತ್ತು, ಇಳಿ, ಒತ್ತು ‘ಞ’, ಔ ಅಕ್ಷರಗಳಿಗೆ ಪ್ರತ್ಯೇಕ ಕೀಲಿಗಳಿವೆ.

. ಮತ್ತು ಬರಹಗಳು

ಕನ್ನಡವನ್ನು ಕಂಪ್ಯೂಟರಿಗೆ ಅಳವಡಿಸುವಲ್ಲಿ, ಕಂಪ್ಯೂಟರ್ ಮೂಲಕ ಕನ್ನಡವನ್ನು ಕಲಿಯಬೇಕೆನ್ನುವವರಿಗೆ ಈ ಎರಡು ಸಾಫ್ಟ್‌ವೇರ್‌ಗಳು ತುಂಬಾ ಅನುಕೂಲವಾಗಿವೆ. ಕನ್ನಡದ ಖ್ಯಾತ ಬರಹಗಾರ ಅನಕೃ ಅವರ ನೆನಪಿನಲ್ಲಿ ‘ಕ’ ಬರಹವನ್ನು ಕೆಪಿರಾವ್ ಅವರು ಅಭಿವೃದ್ದಿಪಡಿಸಿದ್ದಾರೆ. ಈ ಎರಡೂ ತಂತ್ರಾಂಶಗಳು ಕನ್ನಡದಲ್ಲಿ ಅಪಾರ ತಾಂತ್ರಿಕ ಸಾಧ್ಯತೆಗಳನ್ನು ತೆರೆದಿಟ್ಟಿವೆ. ಕನ್ನಡದ ಮಟ್ಟಿಗೆ ಇವು ಅಮೂಲ್ಯ ರತ್ನಗಳಾಗಿವೆ. ಅಂತರಾಷ್ಟ್ರೀಯ ಗಣಕ ಜಾಲದಲ್ಲಿ (ಇಂಟರ್ ನೆಟ್) ಬಿಡಲಾಗಿರುವ ಇವು ಕೇಳಿದ್ದನ್ನು ಕೊಡಬಲ್ಲ ಕಲ್ಪತರುಗಳಾಗಿವೆ. ‘ಕ-ಬರಹದ’ ಪರಿಷ್ಕೃತ ಆವೃತ್ತಿ ‘ಬ-ಬರಹ’. ಇಂಗ್ಲೀಷ್ ವರ್ಣಮಾಲೆಗಳನ್ನು ಬಳಸಿ ಕಂಪ್ಯೂಟರ್‌ನ್ನು ಕಾರ್ಯಕ್ಷಮತೆಗೊಳಿಸುತ್ತಿದ್ದ ಹಳೆ ಪ್ಯಾಕೇಜ್‌ಗಳಿಗಿಂತ ಕನ್ನಡದ ಸಂಕೇತಗಳನ್ನೇ ಬಳಸಿಕ ಗಣಕಯಂತ್ರವನ್ನು ಕಾರ್ಯ ಸಿದ್ದಿಗೊಳಿಸಬಲ್ಲ ಶಕ್ತಿಯನ್ನು ಪಡೆದಿರುವ ಕ ಮತ್ತು ಬ ಬರಹಗಳು ತುಂಬ ವಿಶಿಷ್ಟತೆಯನ್ನು ಪಡೆದಿವೆ.

ಮತ್ತೊಬ್ಬರ ಕೈಬರಹಗಳನ್ನು ಕಷ್ಟಪಟ್ಟು ಓದಬೇಕಾದ ಪರಿಸ್ಥಿತಿಗೆ ಈ ತಂತ್ರಾಂಶಗಳು ಸಂಜೀವಿನಿಯಾಗಿವೆ. ನೇರವಾಗಿ ಗಣಕ ತೆರೆಯ ಮೇಲೆ ಲೇಖನವನ್ನು ಬರೆಯುವ ಸಾಧ್ಯತೆಗಳು ಇಲ್ಲಿವೆ. ಕೈಗೆ ಮಸಿ ಅಂಟುವ, ಅಕ್ಷರಗಳು ಚಿತ್ತಾಗುವ ಪ್ರಮೇಯವೇ ಇಲ್ಲಿಲ್ಲ. ಎಲ್ಲವೂ ಶಿಸ್ತು ಹಾಗೂ ಸುಂದರ. ಇಂಗ್ಲಿಶ್ ಟೈಪಿಂಗ್ ಬರುವ ಯಾರಾದರೂ ಗಣಕದ ಮೂಲಕ ಕನ್ನಡದಲ್ಲಿ ಬರೆಯಬಹುದಾಗಿದೆ. ಸರಳವಾಗಿ ಹೇಳುವುದಾದರೆ ಗಣಕಯಂತ್ರದ ಬಿಳಿಯ ಬಣ್ಣದ ತೆರೆಯ ಭಾಗದಲ್ಲಿ ನೀವು ಆಂಗ್ಲಭಾಷೆಯಲ್ಲಿ ಬೆರಳಚ್ಚಿಸಿದರೆ ಆ ಆಂಗ್ಲ ಅಕ್ಷರಗಳ ಹಳದಿ ಭಾಗದ ತೆರೆಯಲ್ಲಿ ಕನ್ನಡ ಅಕ್ಷರಗಳಾಗಿ ರೂಪ ತಳೆಯುತ್ತ ಹೊಗುತ್ತವೆ. ಇದೇ ಗಣಕ ಯಂತ್ರದ ಚೋದ್ಯವಾಗಿದೆ. ಈ ಮೂಲಕ ಕನ್ನಡ ಬಾರದವರೂ ಕನ್ನಡದ ಬರವಣಿಗೆ ಮತ್ತು ಉಚ್ಚಾರಗಳನ್ನು ಕಲಿಯಬಹುದಾಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಇತ್ತೀಚೆಗೆ ಬ-ಬರಹದ ಕನ್ನಡ ಅಕ್ಷರಗಳನ್ನು ಓದಬಲ್ಲ ಮಲ್ಟಿಮೀಡಿಯ ಸಾಫ್ಟ್‌ವೇರ್‌ನ್ನು ರೂಪಿಸಿರುವುದು ಬ-ಬರಹದ ಉಪಯುಕ್ತತೆಯನ್ನು ಇನ್ನೂ ಹೆಚ್ಚಿಸಿದೆ.

ಕನ್ನಡದಲ್ಲಿ ಗಣಕಕ್ಕೆ ಆಜ್ಞೆಗಳನ್ನು ನೀಡಿ ಕಾರ್ಯಮಾಡಿಸಲು ಮಾದರಿಯಾದ ಬ-ಬರಹ ವಿಂಡೋ-೯೫ ಅಪರೇಟಿಂಗ್ ಸಿಸ್ಟಂನಲ್ಲಿ ಮಾತ್ರ ಕಾರ್ಯಪ್ರವೃತ್ತವಾಗುತ್ತದೆ. ಬಣ್ಣದ ಗಣಕ ತೆರೆಯೂ ಅತ್ಯಗತ್ಯ IBM ಸಂಸ್ಥೆಯ ಗಣಕಗಳಾದ AT ೪೮೬ ಅಥವಾ AT ೫೮೬ ಪೆಂಟಿಯಂ ಗಣಕಯಂತ್ರಗಳಲ್ಲಿ ಬಣ್ಣದ ಗಣಕತೆರೆ ಪಡೆದ ವಿಂಡೋ ೯೫ ಇರುವ ಗಣಕದಲ್ಲಿ ಮಾತ್ರ ನಿರ್ವಹಿಸುತ್ತದೆ. ಕಪ್ಪು ಬಿಳುಪು ಗಣಕತೆರೆ ಪಡೆದ ಐಬಿಎಂ ಗಣಕ ಅಥವಾ ಆಯಪಲ್ ಸಂಸ್ಥೆಯ ಮ್ಯಾಕಿಂಟೋಷ್ ಗಣಕದಲ್ಲಿ ಈ ಅಳವಡಿಕೆ ಸಾಧನ (ಕನ್ನಡ ಅಪ್ಲಿಕೇಷನ್ ಸಾಫ್ಟವೇರ್) ಕಾರ್ಯನಿರ್ವಹಿಸದು. ಕ-ಬರಹ ಅಥವಾ ಬ-ಬರಹದ ಆಜ್ಞಾ ಆಕೃತಿಯ ಚಿತ್ರವನ್ನು ಎರಡು ಸಲ (ಮೂಷಕದ ಗುಂಡಿಯನ್ನು) ಕ್ಲಿಕ್ಕಿಸಿದರೆ ಕ-ಬರಹ ಅಥವಾ ಬ-ಬರಹ ಹೆಸರಿನ ಸಾಲು ಮೇಲ್ತುದಿಯ ಎಡಬದಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದರ ಕೆಳಗಿನ ಸಾಲಿನಲ್ಲಿ ಕಡತ(ಫೈಲ್), ಸಂಕಲನ(ಎಡಿಟ್), ನೋಟ(ವ್ಯೆ), ಸಿದ್ಧತೆ(ಫಾರ್ಮೆಟ್), ಬಣ್ಣ(ಕಲರ್), ಸಹಾಯ(ಹೆಲ್ಪ್) ಪದಗಳು ಸಾಲಾಗಿ ಕಾಣಿಸುತ್ತವೆ.

ಹೀಗೆ ಕ್ರಾಂತಿಕಾರಕ ರೀತಿಯಲ್ಲಿ ರೂಪ ಪಡೆದಿರುವ ಈ ಬ-ಬರಹ ಕನ್ನಡ ಅಳವಡಿಕೆ ಸಾಧನ ಡಿಟಿಪಿ ವಿಭಾಗದಲ್ಲಿ ಹಾಗೂ ಅಂತರಾಷ್ಟ್ರೀಯ ಜಾಲದಲ್ಲಿ ಕನ್ನಡ ಭಾಷೆಯಲ್ಲಿ ನಡೆಸುವ ಸಂವಹನ ಕ್ರಿಯೆಗೆ ಒಂದು ಹೊಸ ಆಯಾಮವನ್ನು ನೀಡಿದೆ ಎಂದೇ ಹೇಳಬೇಕು.

. ಕಲಿತ

ಕನ್ನಡ ಗಣಕ ಪರಿಷತ್ತು ಕನ್ನಡಿಗರಿಗೆ ನೀಡಿದ ರಾಜ್ಯೋತ್ಸವದ ಕಾಣಿಕೆ ಕಲಿತ ‘ಸಾಫ್ಟ್ ವೇರ್’, ಕಂಪ್ಯೂಟರಿನಲ್ಲಿ ಬಳಸಲು ಲಭ್ಯವಿರುವ ಏಕೈಕ ಮಾನಕ ತಂತ್ರಾಂಶ. (ಬೆಂಚ್ ಮಾರ್ಕ್ ಸಾಫ್ಟ್‌ವೇರ್) ಕಲಿತ ಸಾಫ್ಟವೇರ್ ಈ ವೆಬ್ ಎಲೆಬಲ್ ಆಗಿ ವೆಬ್ ಸೈಟಿನಲ್ಲಿಯೇ ದೊರಕುವುದರಿಂದ ಬೇಕೆಂದಾಗ ಡೌನ್ ಲೋಡ್ ಮಾಡಿಕೊಳ್ಳುವ ಸೌಲಭ್ಯವಿದೆ. ಹೀಗಾಗಿ ಹಿಂದಿನಂತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಸ ಕನ್ನಡ ತಂತ್ರಾಂಶ ಖರೀದಿಸುವ ಸಮಸ್ಯೆಯಿಲ್ಲ. ಇಂಥ ಒಂದು ಉಪಯುಕ್ತ ಮತ್ತು ಉಚಿತವಾದ ಭಾಷಾ ಸಾಫ್ಟ್‌ವೇರ್‌ನ್ನು ಅಭಿವೃದ್ದಿಪಡಿಸುವ ಮೂಲಕ ಕರ್ನಾಟಕ ಸರ್ಕಾರವು ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಕಂಪ್ಯೂಟರಿನಲ್ಲಿ ಕನ್ನಡವನ್ನು ಅಳವಡಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿಯಾದ ಹೆಜ್ಜೆಯನ್ನಿಟ್ಟಿದೆ. ಮೈಕ್ರೋಸಾಫ್ಟ್ ಕಾರ್ಪೋರೇಷನ್ ಅವರು ವಿಂಡೋಸ್ ಮೂಲಕ ಸಂಪೂರ್ಣ ಕನ್ನಡಮಯ ಕಂಪ್ಯೂಟರ್ ಸಿಸ್ಟಮನ್ನು  ತಯಾರಿಸಿದ್ದು ಗಮನಾರ್ಹ. ಇದುವರೆಗೆ ಬರೀ ಶಬ್ದ ಸಂಸ್ಕರಣೆಯನ್ನು ಅವು ತೀವ್ರವಾಗಿ ಪರಿಗಣಿಸಿರಲಿಲ್ಲ. ‘ಕಲಿತ ಸಾಫ್ಟ್‌ವೇರ್’ ಶಿಷ್ಟತೆ ಹಾಗೂ ಏಕರೂಪತೆಯನ್ನು ಪಡೆದು ಕೊಳ್ಳುವ ಮೂಲಕ ಅಂಥ ಒಂದು ಕೊರತೆಯನ್ನು ತುಂಬಿಕೊಟ್ಟಿದೆ. ಕನ್ನಡದಲ್ಲಿ ಅಕಾರಾದಿ, ಸೂಚೀಕರಣದಂತಹ ಬಹುಮುಖ್ಯ ಸಾಧ್ಯತೆಗಳನ್ನು ಈ ತಂತ್ರಾಂಶ ಒದಗಿಸಿಕೊಟ್ಟಿದೆ.

. ಕುವೆಂಪು ಕನ್ನಡ ತಂತ್ರಾಂಶ .

ಕನ್ನಡ ತಂತ್ರಾಂಶದ ಸಮಸ್ಯೆಯು ಸಂಕೀರ್ಣವೂ ಜಠಿಲವೂ ಆಗಿರುವ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಕುವೆಂಪು ಕನ್ನಡ ತಂತ್ರಾಂಶ ೧.೦ ಎಂಬ ಕನ್ನಡ ತಂತ್ರಾಂಶವನ್ನು ಸಿದ್ಧಪಡಿಸುವ ಮೂಲಕ ಕನ್ನಡಿಗರ ಅಗತ್ಯ ಮತ್ತು ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿಯನ್ನು ಹೊತ್ತಿದೆ. ಕನ್ನಡ ಭಾಷೆಯು ತಂತ್ರಾಂಶಕ್ಷೇತ್ರದಲ್ಲಿ ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಮನಗಂಡು ಕನ್ನಡ ವಿಶ್ವವಿದ್ಯಾಲಯವು ನುರಿತ ತಂತ್ರಜ್ಞರ ನೆರವು ಪಡೆದು ಕುವೆಂಪು ಕನ್ನಡ ತಂತ್ರಾಂಶವನ್ನು ಸಿದ್ಧಪಡಿಸಿದೆ. ಈ ತಂತ್ರಾಂಶವು ಮುಖ್ಯವಾಗಿ ಮೂರು ರೀತಿಯ ವಿಶೇಷ ಸೌಲಭ್ಯಗಳನ್ನು ಹೊಂದಿದೆ.

೧. ಕನ್ನಡ ಭಾಷೆಗೆ ಒಗ್ಗುವ ವಿವಿಧ ಇಪ್ಪತ್ತು ನಮೂನೆಯ ಕನ್ನಡ ಅಕ್ಷರಗಳ (ಟಿ.ಟಿ.ಎಫ್. ಫಾಂಟ್ಸ್) ಸೌಲಭ್ಯ.

೨. ವಿವಿಧ ಇಪ್ಪತ್ತು ನಮೂನೆಯ ಅಂಚಿನ ವಿನ್ಯಾಸಗಳ ಫಾಂಟ್ಸ್‌ಗಳ(ಬಾರ್ಡರ್ ಡಿಸೈನ್‌ಗಳು) ಸೌಲಭ್ಯ.

೩. ಹೇಮಾವತಿ, ನೇತ್ರಾವತಿ, ಶರಾವತಿ, ಕಾವೇರಿ ಎಂಬ ನಾಲ್ಕು ಬಗೆಯ ಕೀಲಿಮಣೆ ವಿನ್ಯಾಸಗಳ ಅಳವಡಿಕೆ.

೪. ನಾಲ್ಕು ಪರಿವರ್ತಕಗಳನ್ನು (Converters) ಹೊಂದಿದೆ. ಅಲ್ಲದೆ ಕರ್ನಾಟಕ ಸರ್ಕಾರವು ನಿಗದಿಪಡಿಸಿದ ಗ್ಲಿಫ್ ಹಾಗೂ ಕೀಲಿಮಣೆಯ ಶಿಷ್ಟತೆ ಹಾಗೂ ಏಕರೂಪತೆಗೆ ಅನುಗುಣವಾಗಿ ಈ ತಂತ್ರಾಂಶ ಇದೆ.

ಕುವೆಂಪು ಕನ್ನಡ ತಂತ್ರಾಂಶ ೧.೦ ಆವೃತ್ತಿಯ ಜೊತೆಗೆ ತಂತ್ರಾಂಶದ ಓಪನ್ ಸೋರ್ಸ್ ಕೋಡ್‌ನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಕ್ರಮವು ಕನ್ನಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಥಮ ಹೆಜ್ಜೆಯಾಗಿದೆ. ಈವರೆಗೂ ಕನ್ನಡ ಲಿಪಿ ತಂತ್ರಾಂಶಗಳನ್ನು ಅಭಿವೃದ್ದಿಪಡಿಸಿರುವ ತಂತ್ರಜ್ಞರು ಸೋರ್ಸ್‌ಕೋಡನ್ನು ನೀಡಿರುವುದಿಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆಗೆ ಸಹಾಯಕವಾಗಲು ವಿಶ್ವವಿದ್ಯಾಲಯವು ಓಪನ್ ಸೋರ್ಸ್‌ಕೋಡ್ ನೀಡುತ್ತಿದೆ. ಇದನ್ನು ವಿಶ್ವವಿದ್ಯಾಲಯದ ಅಂತರ್ಜಾಲ ತಾಣ www.kannada university.orgನಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ಈ ತಂತ್ರಾಂಶದ ಹಿಂದಿನ ರೂಪಿಕೆಯ ಪ್ರಮುಖ ರೂವಾರಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರೆಂಬುದು ಗಮನಾರ್ಹ. ವಿಂಡೋಸ್ ೯೮, ೨೦೦೦ ಎನ್.ಟಿ.ಎಕ್ಸ್ ಪಿ, ಮಿಲೇನಿಯಂ, ವಿಸ್ತಾ ಈ ಎಲ್ಲಾ ಆವತರಣಿಕೆಗಳಲ್ಲಿ ಇದು ಕೆಲಸ ಮಾಡುತ್ತದೆ. ಕನಿಷ್ಠ ೧೨೮ ಎಂಬಿ ಸಾಮರ್ಥ್ಯದ ರ್ಯಾಮ್ ೮೦೦ ಮೆ.ಹ. ಅಥವಾ ಅದಕ್ಕಿಂತ ಮೇಲ್ಪಟ್ಟ ಪ್ರೊಸೆಸರ್ ಇದಕ್ಕೆ ಅಗತ್ಯ.

. ಎಂ.ಎಸ್.ವರ್ಡ್ ಮತ್ತು ನುಡಿ

ಕನ್ನಡ ಅಭಿವೃದ್ದಿ ಪ್ರಾಧಿಕಾರ ಮತ್ತು ಕನ್ನಡ ಗಣಕಪರಿಷತ್ತು ಸಂಯುಕ್ತವಾಗಿ ಅಭಿವೃದ್ದಿಪಡಿಸಿರುವ ನುಡಿ ತಂತ್ರಾಂಶ ಕೆ.ಪಿ.ರಾವ್ ಅವರ ಕೀಬೋರ್ಡ್‌ನ್ನೇ ಆಧರಿಸಿದೆ. ಇದರ ಗಮನಾರ್ಹ ಸಂಗತಿಗಳೆಂದರೆ

೧. ಅಕ್ಷರ ಅಭ್ಯಾಸ ಮಾಡಲು ನುಡಿ ಪ್ರೋಮೊದಲ ವಿಂಡೋ ಸಾಕು. ಕಚೇರಿ ಕೆಲಸಗಳಿಗೆ ನುಡಿ ಡೈರೆಕ್ಟರಿ ಅತ್ಯಂತ ಉಪಯುಕ್ತವಾಗಿದೆ.

೨. ಎಂ.ಎಸ್.ವರ್ಡ್, ಎಕ್ಸೆಲ್ ಇತ್ಯಾದಿ ಅಪ್ಲಿಕೇಷನ್ ಮೂಲಕ ಈ ಕನ್ನಡ ತಂತ್ರಾಂಶ ವನ್ನು ತೆರೆಯಬಹುದಾಗಿದೆ. ಉದಾ : Programs/Nudi ೪.೦/Nudi Direct.

. ಕನ್ನಡ ಸೌರಭ ತಂತ್ರಾಂಶ

ಕಂಪ್ಯೂಟರ್ ಮೂಲಕವೇ ಕನ್ನಡವನ್ನೂ ಕಲಿಯಲೂ ಸಾಧ್ಯ ಎನ್ನುವುದನ್ನು ಕನ್ನಡ ಸೌರಭ ತಂತ್ರಾಂಶದ ಮೂಲಕ ಬಾಗೂರು ಮಾರ್ಕಡೇಯ ಅವರು ಸಾಧ್ಯ ಮಾಡಿ ತೋರಿಸಿದ್ದಾರೆ. ಎಂಟು ವರ್ಷಗಳ ಸತತ ಪರಿಶ್ರಮದಿಂದ ‘ಕನ್ನಡ ಸೌರಭ’ ಹೆಸರಿನ ಕನ್ನಡ ಕಲಿಕಾ ತಂತ್ರಾಂಶವನ್ನು ಸಿದ್ಧಪಡಿಸಿದ್ದಾರೆ. ಇನ್ನೊಬ್ಬರ (ಗುರುವಿನ) ನೆರವಿಲ್ಲದೇ, ಕಡಿಮೆ ವೇಳೆಯಲ್ಲಿ, ಅತ್ಯಂತ ಕ್ಷಿಪ್ರಗತಿಯಲ್ಲಿ ಕನ್ನಡ ಕಲಿಯಲು ಈ ಸಾಫ್ಟ್ ವೇರ್ ನೆರವಾಗಲಿದೆ.

ಕಂಪ್ಯೂಟರ್ ಪರದೆ ಮೇಲೆ ಮೂಡುವ ಚಿಹ್ನೆಗಳ (ಐಕಾನ್) ಮೇಲೆ ಮೌಸ್ ಒತ್ತಿದರೆ ‘ಕನ್ನಡ ಸೌರಭ’ ತಂತ್ರಾಂಶದಲ್ಲಿನ ಪಾಠಗಳ ಪರಿವಿಡಿ, ಪರದೆ ಮೇಲೆ ಅನಾವರಣಗೊಳ್ಳುತ್ತದೆ. ಪಾಠ ಕಲಿಯಲು ಬಳಸಿರುವ ಬಣ್ಣಗಳೂ ನೋಡಲು ಹಿತಕರವಾಗಿವೆ. ಪ್ರತಿ ಅಂಕಿ ಮತ್ತು ‘ಅ’ಕಾರಾದಿ ಅಕ್ಷರಗಳಿಗೆ ಅರ್ಥಪೂರ್ಣ ಕವಿತೆ ರಚಿಸಿ ಸಂಗೀತ ಸಂಯೋಜಿಸಿ ಇಂಪಾಗಿ ಹಾಡಲಾಗಿದೆ. ಶಿಕ್ಷಣ ಮತ್ತು ಕಲಾ ಕ್ಷೇತ್ರದಲ್ಲಿನ ಪರಿಣತರು, ಕನ್ನಡ ಕಲಿತೆಯು ತಂತ್ರಜ್ಞಾನದೊಂದಿಗೆ ಸುಲಭವಾಗಿ ಅನಾವರಣಗೊಳ್ಳುವಂತೆ ಹಾಗೂ ಅರಗಿಸಿಕೊಳ್ಳುವಂತೆ ಮಾಡಲು ಶ್ರಮಿಸಿದ್ದಾರೆ. ಕನ್ನಡ ಕಲಿಸುವ ಈ ತಂತ್ರಾಂಶದ ನೆರವಿನಿಂದ ಯಾರೇ ಆಗಲಿ ಸುಲಭವಾಗಿ ಕನ್ನಡ ಕಲಿಯಬಹುದು. ಚಿಣ್ಣರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಸಾಫ್ಟ್‌ವೇರ್ ರೂಪಿಸಲಾಗಿದೆ. ಈ ಉದ್ದೇಶಕ್ಕೆ ಚಿತ್ರ, ಕವಿತೆ, ಹಿನ್ನೆಲೆ ಸಂಗೀತ, ಧ್ವನಿ ಉಚ್ಚಾರಣೆ, ಚಿತ್ರಗಳ ಚಲನೆಗೆ ಅನಿಮೇಷನ್ ಬಳಸಿಕೊಂಡಿರುವುದು ಇದರ ಹೆಗ್ಗಳಿಕೆಯಾಗಿದೆ. ಮಕ್ಕಳು ಮತ್ತು ಅನ್ಯ ಭಾಷಿಕರಿಗೂ ಇದು ಮೆಚ್ಚುಗೆ ಆಗಲಿದೆ.

ಪ್ರಾಥಮಿಕ ಶಾಲೆಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ ಕನ್ನಡ ಭಾಷೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಲಿಸಲೂ ಇದರಿಂದ ಸಾಧ್ಯವಾಗಲಿದೆ. ಇದರ ನೆರವಿನಿಂದಾಗಿ ಶಿಕ್ಷಕರು ಕನ್ನಡ ಕಲಿಸಲು ಹೆಚ್ಚು ಶ್ರಮ ವ್ಯಯಿಸಬೇಕಾದ ಅಗತ್ಯವೂ ಉದ್ಭವಿಸಲಾರದು.

ಕನ್ನಡ ಮತ್ತು ವಾಕ್ ಸಂಶ್ಲೇಷಣೆ

ಧ್ವನಿ ತರಂಗಗಳನ್ನು ಕಂಪ್ಯೂಟರಿನಲ್ಲಿ ಶೇಖರಿಸಿಕೊಂಡು ಅನಂತರ ಧ್ವನಿ ತರಂಗಗಳನ್ನು ಹೊಂದಿಸಿ ಮೂಡಿಸಲು ಅಲ್ಗಾರಿದಂಗಗಳನ್ನು ಬರೆದು ಅದರ ಅನುಸಾರ ಧ್ವನಿ ತರಂಗಗಳನ್ನು ವ್ಯವಸ್ಥೆಗೊಳಿಸುವುದಕ್ಕೆ ‘ವಾಕ್ ಸಂಶ್ಲೇಷಣೆ’ ಎಂದು ಕರೆಯುತ್ತಾರೆ. ಕನ್ನಡ ಭಾಷೆಯಲ್ಲಿನ ಧ್ವನಿಮಾಗಳನ್ನು ಭಾಷಾ ವಿಜ್ಞಾನದ ನಿಯಮಾನುಸಾರ ಕೂಡಿಸಿ ಅಲ್ಗಾರಿದಂಗಳನ್ನು ಬರೆದು ಜೋಡಿಸಲಾಗಿರುತ್ತದೆ. ನಾವು ಪದಗಳನ್ನು ಬೆರಳಚ್ಚು ಮಾಡಿದಾಗ ಅದು ವಾಕ್ ಆಗಿ ಪರಿವರ್ತನೆಯಾಗಿ ನಮಗೆ ಧ್ವನಿ ಕೇಳಿಸುತ್ತದೆ. ಇದನ್ನು ವಾಕ್ ಸಂಶ್ಲೇಷಣೆ ಎಂದು ಗುರುತಿಸಲಾಗುತ್ತದೆ. ಇಲ್ಲಿ ಪಠ್ಯದಿಂದ ವಾಕ್ಕನ್ನು ಪಡೆಯುವ ಅವಕಾಶ ಲಭ್ಯವಿದೆ.

ಕಣ್ಣಿಲ್ಲದವರಿಗೆ ಇದು ತುಂಬ ಉಪಯೋಗವಾಗುತ್ತದೆ. ಇದೇ ಮಾದರಿಯಲ್ಲಿ ವಾಕ್ ನಿಂದ ಪಠ್ಯವನ್ನು ಪಡೆಯಬಹುದು. ಕಂಪ್ಯೂಟರಿಗೆ ಅಳವಡಿಸಿದ ಧ್ವನಿವರ್ಧಕದಿಂದ ಮಾತನಾಡಿದಾಗ ನಮ್ಮ ಧ್ವನಿ ತರಂಗಗಳು ಧ್ವನಿಮಾಗಳಾಗಿ ಪರಿವರ್ತಿಸಲ್ಪಟ್ಟು ಅಕ್ಷರಗಳಾಗಿ ಪರದೆಯ ಮೇಲೆ ಮೂಡುತ್ತವೆ. ಇದಕ್ಕೆ ಸ್ಪೀಚ್ ರಿಕಗ್ನಿಷನ್ ಎಂದು ಕರೆಯುತ್ತಾರೆ.

.ಸಿ.ಆರ್.(OCR)

ಓ.ಸಿ.ಆರ್. ಅಂದರೆ ಆಪ್ಟಿಕಲ್ ಕ್ಯಾರೆಕ್ಟರ್ ರೀಡರ್. ಕನ್ನಡದ ಸಂದರ್ಭದಲ್ಲಿ ಇದರ ಅಗತ್ಯ ಜರೂರಿದೆ. ಇಂಗ್ಲಿಶಿನಲ್ಲಿ ಮಾತ್ರ ಸಾಧ್ಯವಿರುವ ಇದು ಟೈಪಿಂಗ್ ಮತ್ತು ಸ್ಕ್ಯಾನಿಂಗ್ ನ ಲಕ್ಷಣಗಳಿಗಿಂತ ಭಿನ್ನವಾದುದು. ಅಪಾರ ಹಸ್ತವೈವಿಧ್ಯವಿರುವ ಕನ್ನಡದ ಹಸ್ತಪ್ರತಿಗಳ ಸಂದರ್ಭದಲ್ಲಿ ಈ ಘಟಕ ಬಹುಮುಖ್ಯವಾದುದಾಗಿದೆ. ಪತ್ರಿಕೆಗಳಿಗಂತೂ ಇದು ವರದಾನವಾಗಿದೆ.

ಸ್ಕ್ಯಾನರ್ ಮೂಲಕ ಯಾವುದೇ ತರಹದ ಕೈ ಬರಹವುಳ್ಳ ಕನ್ನಡದ ಹಸ್ತಪ್ರತಿಯನ್ನು ಕಂಪ್ಯೂಟರಿಗೆ ಅಳವಡಿಸಿದಾಗ ಅದು ದರ್ಶಕದ ಮೇಲೆ ಮೂಡುವ ಹೊತ್ತಿಗೆ ಶುದ್ಧಪ್ರತಿಯಾಗಿ ಪ್ರಕಟವಾಗುತ್ತದೆ. ಅಂದರೆ ನಾವು ಬಳಸುವ ಹಲವಾರು ಫಾಂಟುಗಳಲ್ಲಿ ಕೈ ಬರಹವನ್ನು ಟೈಪಿಂಗ್ ಸಹಾಯವಿಲ್ಲದೆಯೇ ನೇರವಾಗಿ ಮುದ್ರಿಸಿಕೊಳ್ಳಬಹುದಾಗಿದೆ. ಹೀಗಾಗಬೇಕಾದರೆ ಕನ್ನಡದಲ್ಲಿ ಬಳಕೆಯಾಗುವ ಅಕ್ಷರಗಳ, ಅದರ ಎಲ್ಲ ಸಾಧ್ಯತೆಗಳ ಗುಣಲಕ್ಷಣಗಳನ್ನು ಗಣಕಕ್ಕೆ ಉಣಿಸಬೇಕಾಗುತ್ತದೆ. ಇದಕ್ಕೆ ಭಾಷಾಶಾಸ್ತ್ರಜ್ಞರ, ಕಂಪ್ಯೂಟರ್ ಮತ್ತು ಸಾಫ್ಟ್ ವೇರ್ ತಂತ್ರಜ್ಞರ ಜಂಟಿಪ್ರಯತ್ನ ಅನಿವಾರ್ಯವಾಗುತ್ತದೆ. ಈ ಪ್ರಯತ್ನ ಕನ್ನಡಕ್ಕೆ ಜರೂರಾಗಿ ಬರಬೇಕಾಗಿದೆ. ಇದರಿಂದ ಮುದ್ರಿತ ಸಂದರ್ಭದ ವೇಳೆ, ಹಣ, ಶ್ರಮ ಎರಡೂ ಉಳಿತಾಯವಾಗುತ್ತದೆ.

ಇದುವರೆಗೂ ಸ್ಕ್ಯಾನಿಂಗ್ ನಲ್ಲಿ ಪೋಟೋಗ್ರಫಿಯಂತೆ ಮೂಲಪ್ರತಿಯ ಯಥಾವತ್ತಾದ ನಕಲನ್ನು ಮಾತ್ರ ನೋಡುವ ಸಾಧ್ಯತೆ ನಮಗಿತ್ತು. ಈ OCRದ ಸಹಾಯದಿಂದ ಹಸ್ತಪ್ರತಿಗಳಲ್ಲಿನ ಬರಹವನ್ನು ನಮಗೆ ಬೇಕಾದಲ್ಲಿ ಬೇಕಾದ ಹಾಗೆ ಬದಲಾಯಿಸಬಹುದಾಗಿದೆ. ಅಂದರೆ ಗಣಕೀಕೃತ ಪಠ್ಯದಲ್ಲಿನ ಅಕ್ಷರಗಳನ್ನು ಬೋಲ್ಡ್ ಮಾಡುವ, ಪ್ಯಾರಾ ಮಾಡಿಕೊಳ್ಳುವ, ಬೇಕಾದ ಅಳತೆಗೆ ಹಿಗ್ಗಿಸುವ ಮತ್ತು ಕುಗ್ಗಿಸಿಕೊಳ್ಳುವ, ಪಠ್ಯವೊಂದಕ್ಕೆ ಬೇಕಾದ ತಲೆಬರಹ ಕೊಡುವ ಸೌಲಭ್ಯಾಕಾಂಕ್ಷೆಗಳು ಪ್ರಾಪ್ತವಾಗಿವೆ.

ಪತ್ರಿಕೆಯ ಸಂದರ್ಭಕ್ಕೆ ಬಂದಾಗ ವರದಿಗಾರರಿಂದ ದಿನನಿತ್ಯ ಬರುವ ವರದಿಗಳನ್ನು ಬೆರಳಚ್ಚು ಮಾಡದೆ ನೇರ ಮುದ್ರಿತ ಹಂತಕ್ಕೆ ಬದಲಾಯಿಸಿಕೊಳ್ಳುವುದರಿಂದ ಪತ್ರಿಕೆಯನ್ನು ನಿಗದಿತ ಸಮಯಕ್ಕೆ ಹೊರತರಬಹುದಾಗಿದೆ. ಅಲ್ಲದೆ ಯಾವುದೇ ಒಬ್ಬ ಕವಿ, ಅಥವಾ ಕಾದಂಬರಿಕಾರ ಬರೆದುಕೊಡುವ ಕವನ, ಧಾರಾವಾಹಿಗಳ ಹಸ್ತಪ್ರತಿ ರೂಪಗಳನ್ನು ಈ OCR ಮೂಲಕ ತಪ್ಪುಗಳಿಲ್ಲದೆ ಲಗುಬಗೆಯಿಂದ ಮುದ್ರಿಸಬಹುದಾಗಿದೆ. ಇದರಿಂದ ಕರಡು ತಿದ್ದುವ ಕಿರಿಕಿರಿಯೇ ಮಾಯವಾಗುತ್ತದೆ. ಹಾಗೇನಾದರೂ ದೋಷಗಳಿದ್ದರೆ ಎಡಿಟಿಂಗ್ ಮೂಲಕ ಅದನ್ನು ಸರಿಪಡಿಸಿಕೊಳ್ಳಬಹುದಾಗಿದೆ.

OCR ಕನ್ನಡದಲ್ಲಿ ಬಂದರೆ ಹಸ್ತಪ್ರತಿಶಾಸ್ತ್ರ ಮತ್ತು ಪತ್ರಿಕಾರಂಗಕ್ಕೆ ಉಪಯುಕ್ತ ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ. ಕನ್ನಡದ ಸಾಫ್ಟ್ ವೇರ್ ತಂತ್ರಜ್ಞರು ಇದನ್ನು ಸಾಧ್ಯವಾಗಿಸಿದರೆ ಕನ್ನಡಕ್ಕೆ ಮತ್ತೊಂದು ತಾಂತ್ರಿಕ ಸಾಧ್ಯತೆ ದಕ್ಕಿದಂತಾಗುತ್ತದೆ.

ಇಂದು ಕಂಪ್ಯೂಟರೀಕರಣವು ಆಡಳಿತದ ಅವಿಭಾಜ್ಯ ಅಂಗವಾಗುತ್ತಿರುವ ಹೊತ್ತಿರುವ ಕನ್ನಡ ಅಭಿವೃದ್ದಿ ಪ್ರಾಧಿಕಾರವು ಕಂಪ್ಯೂಟರೀಕರಣದಲ್ಲಿ ಸಮಗ್ರ ಕನ್ನಡ ಕ್ರಿಯಾಯೋಜನೆ’ ಯನ್ನು ಹಾಕಿಕೊಳ್ಳುವುದರ ಮೂಲಕ ಅನೇಕ ಹೊಸತನಗಳಿಗೆ ನಾಂದಿ ಹಾಡಿದೆ. ಈ ಕ್ರಿಯಾ ಯೋಜನೆ ಆಡಳಿತ ಹಾಗೂ ಆಡಳಿತೇತರವಾದ ವಾಣಿಜ್ಯ-ವ್ಯವಹಾರ, ಶಾಲಾ-ಕಾಲೇಜುಗಳ ಆಡಳಿತ ನಿರ್ವಹಣೆ, ಅನವಾದ, ಮೈಕ್ರೋಸಾಫ್ಟ್ ಆಫೀಸ್, ಗ್ರಂಥಾಲಯದಂಥ ತಂತ್ರಾಂಶಗಳ ತಯಾರಿಕೆಯನ್ನು ಒಳಗೊಂಡಿದೆ. ವಿಶ್ವಕೋಶಗಳಂಥ ಬೃಹತ್ ಮಾಹಿತಿ ಗ್ರಂಥಗಳನ್ನು ಸಂಗ್ರಹಿಸುವಂಥ ಡೇಟಾ ಬ್ಯಾಂಕ್ ಅಪ್ಲೈಡ್ (ಅನ್ವಯಿಕ) ಸಾಫ್ಟ್ ವೇರ್ ಗಳಂಥ ತಂತ್ರಾಂಶಗಳನ್ನು ತಯಾರಿಸಿ ಕನ್ನಡವನ್ನು ವಿವಿಧ ವಲಯಗಳಲ್ಲಿ ಸಶಕ್ತಗೊಳಿಸಲು ಪ್ರಯತ್ನಿಸುತ್ತಿದೆ. ಅಷ್ಟೇ ಅಲ್ಲದೆ ಅಕಾರಾದಿ ವಿಂಗಡಣೆ (ಸಾರ್ಟಿಗ್), ಸೂಚೀಕರಣ (ಇಂಡೆಕ್ಸಿಂಗ್), ‘ಪದ’ ಮತ್ತು ‘ವ್ಯಾಕರಣ ಪರೀಕ್ಷೆ’ (ಸ್ಪೆಲ್ ಚೆಕ್ ಆಯಂಡ್ ಗ್ರಾಮರ್ ಚೆಕ್), ಕನ್ನಡ ಲಿಪಿ ಸಾಫ್ಟ್ ವೇರ್ ನ ಯುನಿಕೋಡ್ (ಈಗಿನ ‘ಇಸ್ಕಿ’ ಬದಲು) ಲೋಗೋ ತಂತ್ರಜ್ಞಾನ ಮುಂತಾದ ತಂತ್ರಾಂಶಗಳ ಹೊಣೆಯನ್ನು ಪ್ರಾಧಿಕಾರ ಹೊತ್ತುಕೊಂಡಿದೆ. ಈ ಕ್ರಿಯಾಯೋಜನೆ ಸಾರ್ಥಕವಾದರೆ ಮತ್ತಷ್ಟು ಹೊಸ ತಂತ್ರಾಂಶಗಳು, ಕಾರ್ಯದ ಸಾಧ್ಯತೆಗಳು, ಕೆಲಸದ ವಿಸ್ತಾರಗಳು ಲಭ್ಯವಾಗುತ್ತವೆ. ತಂತ್ರಜ್ಞಾನದ ಫಲಿತಾಂಶಗಳನ್ನು ಅದರ ಆಡಚಣೆಗಳನ್ನು ನೀಗಿಕೊಳ್ಳುವ ಮೂಲಕ ಜನಸಮುದಾಯದ ಸಮಗ್ರ ಹಿತಕ್ಕೆ ಬಳಸಿಕೊಳ್ಳಲು ಲಾಗೂ ಆಗುತ್ತದೆ. ಹಾಗೆ ನೋಡಿದರೆ ಶಾಲೆ, ಕಾಲೇಜು, ಕಂದಾಯ ಇಲಾಖೆ, ಬ್ಯಾಂಕು, ಪ್ರಯಾಣದ ಕೇಂದ್ರಗಳು ಹಾಗೂ ವ್ಯವಹಾರ ರಂಗಗಳು ಹೀಗೆ ಸಾರ್ವಜನಿಕ ಉಪಯುಕ್ತ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ನಡೆಯುತ್ತಿದೆ. ಈ ರೀತಿ ಸಾಮಾನ್ಯ ಮತ್ತು ವಿಶಿಷ್ಟ ಕ್ಷೇತ್ರಗಳಲ್ಲಿನ ಕಂಪ್ಯೂಟರ್ ಕನ್ನಡೀಕರಣವು ಇನ್ನಷ್ಟು ವ್ಯಾಪಕವಾಗಿ ಮತ್ತು ಗುಣಾತ್ಮಕವಾಗಿ ನಡೆದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಹೊಸದೊಂದು ಚೈತನ್ಯ ಮತ್ತು ಸ್ವರೂಪ ಬರುವುದರಲ್ಲಿ ಸಂದೇಹವೇ ಇಲ್ಲ.