ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ಮುದ್ರಣ ಯಂತ್ರದ ನೆರವಿನಿಂದ ಕನ್ನಡದ ಮೊದಲ ಪುಸ್ತಕವನ್ನು ಮುದ್ರಿಸಲಾಯಿತು. ಆನಂತರ ಕನ್ನಡ ಬರೆವಣಿಗೆಯ ಸ್ವರೂಪವೇ ಬದಲಾಗಿಬಿಟ್ಟಿತು. ಬರೆವಣಿಗೆಯ ಪ್ರಸಾರದಲ್ಲೂ ಹಿಂದೆಂದೂ ಕಾಣದ ಅಪೂರ್ವ ವ್ಯತ್ಯಾಸಗಳು ಕಾಣತೊಡಗಿದವು. ಬರೆಹದ ಬಹುಪ್ರತಿಗಳನ್ನು ಪಡೆದುಕೊಳ್ಳುವುದು ಈಗ ಸಾಧ್ಯವಾಯಿತು. ಬರೆವಣಿಗೆಯ ಪ್ರಸಾರ ತೀವ್ರತೆ ಅಧಿಕವಾಯಿತು. ಮುದ್ರಣದ ಅನಂತರ ಕನ್ನಡ ಬರೆವಣಿಗೆಯನ್ನು ಪ್ರಭಾವಿಸಿದ ತಂತ್ರಜ್ಞಾನವೆಂದರೆ ಬೆರಳಚ್ಚು ಯಂತ್ರ. ಇದರ ಪ್ರಭಾವ ಕೆಲವು ದಶಕಗಳ ಕಾಲ ಇದ್ದಿತು. ಆದರೆ ಇದರ ಪ್ರಭಾವದ ಪಳೆಯುಳಿಕೆಗಳು ಇನ್ನೂ ಇವೆ. ಸರಕಾರಿ ಕಚೇರಿಗಳಲ್ಲಿ ಈ ಪಳೆಯುಳಿಕೆಗಳನ್ನು ನೋಡಲು ಸಾಧ್ಯ. ಮುದ್ರಣವಾಗಲೀ ಬೆರಳಚ್ಚಾಗಲೀ ಬರೆವಣಿಗೆ ಎನ್ನುವ ಪರಿಕಲ್ಪನೆಯನ್ನೇ ಮರುವ್ಯಾಖ್ಯಾನಿಸಿದವು. ಮುದ್ರಣದಲ್ಲಿ ಬೆರಳುಗಳನ್ನು ಬಳಸಿ ಬರೆಯುವ ಸಾಧ್ಯತೆಯೇ ಇಲ್ಲ. ಬೆರಳಚ್ಚು ಮಾಡುವಾಗ ಬೆರಳುಗಳ ಚಲನೆ ಇರುತ್ತದೆ. ಆದರೆ ಅದು ಅಕ್ಷರಗಳನ್ನು ರೂಪಿಸುವ ವಿಧಾನ ಸಂಪೂರ್ಣವಾಗಿ ಬೇರೆ. ಅಲ್ಲದೆ ಇದರಿಂದ ಅಕ್ಷರ ಮತ್ತು ಅಕ್ಷರ ಸಂಯೋಜನೆಯನ್ನು ಗ್ರಹಿಸುವ ವಿಧಾನದಲ್ಲೇ ಬಹುಮುಖ್ಯ ಬದಲಾವಣೆಯಾಯಿತು. ಕೈಬರೆಹದ ಪ್ರತಿಗಳನ್ನು ನೋಡಿದರೆ ಅವುಗಳ ಅಕ್ಷರ ಸಂಯೋಜನೆ ಮತ್ತು ವಿನ್ಯಾಸಗಳು ಪರಿಣತಿುುಳ್ಳ ಓದುಗರನ್ನು ಬಯಸುತ್ತವೆ. ಆದರೆ ಮುದ್ರಣ ಮತ್ತು ಬೆರಳಚ್ಚುಗಳು ಬರೆಹ ವಿನ್ಯಾಸವನ್ನು ಪ್ರಮಾಣೀಕರಿಸಿದುದರ ಪರಿಣಾಮವಾಗಿ ಓದುವುದು ವಿಶೇಷ ತಜ್ಞತೆಯ ಕೆಲಸವಾಗಿ ಉಳಿಯಲಿಲ್ಲ.

ಬರೆವಣಿಗೆ ಮತ್ತು ಅದರ ಓದು ಹೀಗೆ ತಂತ್ರಜ್ಞಾನದ ಪ್ರಭಾವದಿಂದ ಸಾಮಾಜೀಕರಣಗೊಂಡದ್ದು ಕನ್ನಡದ ಬಳಕೆಯ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿದೆ. ಮುದ್ರಣದ ವಿನ್ಯಾಸದಲ್ಲಿ ಪದಗಳ ನಡುವಿನ ತೆರಪನ್ನು ಸೂಚಿಸುವುದು ಸಾಧ್ಯವಾಯಿತು. ಮೊದಲ ಮಾದರಿಯ ಬರೆವಣಿಗೆಯಲ್ಲಿ ಪದಗಳನ್ನು ತೆರಪಿಲ್ಲದೆ ಬರೆಯುವುದು ರೂಢಿಯಲ್ಲಿತ್ತು. ಈಗ ಪ್ರಮಾಣಬದ್ಧ ಅಕ್ಷರವಿನ್ಯಾಸದಲ್ಲಿ ಪದಗಳ ನಡುವೆ ತೆರಪನ್ನು ಕಣ್ಣು ನೋಡುವುದು ಸಾಧ್ಯವಾದದ್ದರಿಂದ ಓದಿನ ವೇಗ ಹೆಚ್ಚಾಗುವ ಅವಕಾಶಗಳು ಒದಗಿಬಂದವು. ಇದು ಶಿಕ್ಷಣದ ವಿಸ್ತಾರಕ್ಕೆ ನೆರವಾಗುವ ಸಂಗತಿಯಾಗಿದೆ. ಓದುವವರು ಹೆಚ್ಚು ಶ್ರಮವಿಲ್ಲದೆ ಮತ್ತು ಹೆಚ್ಚು ವೇಗವಾಗಿ ಓದುವುದು ಸಾಧ್ಯವಾದುದರಿಂದ ಓದಿನ ಸಾಮರ್ಥ್ಯವನ್ನು ಪಡೆದುಕೊಳ್ಳುವುದು ಮತ್ತು ಬಳಸುವುದು ಯಾರಿಗೆ ಬೇಕಾದರೂ ಲಭ್ಯವಾಗಬಹುದಾದ ಸಂಗತಿಯಾಯಿತು. ಓದಿನ ವೇಗ ಹೆಚ್ಚಾದುದರ ಪರಿಣಾಮವೆಂದರೆ ಹೆಚ್ಚು ಮಾಹಿತಿಯನ್ನು ಕಡಿಮೆ ಕಾಲದಲ್ಲಿ ಪಡೆಯುವ ಅವಕಾಶ ಒದಗಿ ಬಂದದ್ದು. ಹೆಚ್ಚು ವಿಷಯಗಳನ್ನು ಕಡಿಮೆ ಕಾಲದಲ್ಲಿ ಯಾರು ಬೇಕಾದರೂ ತಿಳಿಯುವ ಅವಕಾಶ ಒದಗಿದ್ದು, ಹೀಗಾಗಿ ತಂತ್ರಜ್ಞಾನವು ಭಾಷೆಯ ಅಭಿವೃದ್ದಿಗೆ ನೀಡಿದ ಕೊಡುಗೆಯಾಗಿದೆ. ಇದರ ಅಡ್ಡ ಪರಿಣಾಮಗಳು ನಿಧಾನವಾಗಿ ಗೋಚರಿಸತೊಡಗಿದವು. ಮುಖ್ಯವಾಗಿ ಲಿಖಿತವಾದದ್ದು ಹೆಚ್ಚು ಶಾಶ್ವತವಾಗಿ ಉಳಿಯಬೇಕೆಂಬ ತಿಳುವಳಿಕೆಯಲ್ಲಿ ಪಲ್ಲಟ ಉಂಟಾಯಿತು. ಅಂದರೆ ಬರೆದದ್ದು ಕೂಡಲೇ ಪ್ರಸಾರವಾಗುವುದು ಮತ್ತು ಬಹುಪ್ರತಿಗಳಲ್ಲಿ ಲಭ್ಯವಾಗುವುದು ಸಂಭವಿಸಿದ್ದರಿಂದ  ಲಿಖಿತ ದಾಖಲೆಗಳು ಓದಿಗಾಗಿಯೇ, ಮನನ ಮಾಡಿಕೊಳ್ಳುವುದಕ್ಕಾಗಿಯೇ ಶತಮಾನಗಟ್ಟಲೆ ಕಾಯಬೇಕಾದ ಅಗತ್ಯ ಈಗ ಇಲ್ಲವಾಗಿದೆ. ಇದರಿಂದ ಲಿಖಿತವಾದದ್ದು ಹೆಚ್ಚು ಶಾಶ್ವತವಾಗಿರಬೇಕಾಗಿಲ್ಲ. ಈ ತ್ವರಿತ ನಾಶಕ್ಕೆ ನಾವು ಲೇಖನಕ್ಕಾಗಿ ಬಳಸಿದ ಸಾಮಗ್ರಿಗಳ ಸ್ವರೂಪ ಕೂಡ ತನ್ನ ಕೊಡುಗೆಯನ್ನು ನೀಡಿದೆ. ಮೊದಲು ಶಿಲೆಯ ಮೇಲೆ ಅಥವಾ ತಾಳೆಯ ಗರಿಗಳ ಮೇಲೆ ಬರೆದಾಗ ಅವು ಬಹುಕಾಲ ಉಳಿಯಬೇಕೆಂಬ ಅಪೇಕ್ಷೆ ಇರುತ್ತಿತ್ತು. ಹಾಗಲ್ಲದೆ ಅವು ಹೆಚ್ಚು ಕಾಲ ಉಳಿಯಬಲ್ಲ ಮಾಧ್ಯಮಗಳೂ ಆಗಿದ್ದವು. ಈಗ ಬಳಸಲಾದ ಕಾಗದಕ್ಕೆ ಜೀವಿತಾವಧಿಯೇ ಕಡಿಮೆ. ಬೇಗ ಮರೆಯಾಗುವುದಕ್ಕೆ ಹೀಗೆ ಮಾಧ್ಯಮವೂ ಕೂಡ ಪರೋಕ್ಷವಾಗಿ ಕೊಡುಗೆಯನ್ನು ನೀಡಿದೆ. ಇದು ಒಂದು ಮುಖ್ಯ ಸಂಗತಿಯಾಗಿದೆ. ಏಕೆಂದರೆ ಈ ಅಂಶವೇ ತಂತ್ರಜ್ಞಾನದ ಮುಂದಿನ ಸ್ವರೂಪವನ್ನು ನಿರ್ದೇಶಿಸಿದೆ.

ಈವರೆಗೆ ನಾವು ಬರೆಹದ ದಾಖಲಾತಿಯನ್ನು ಕುರಿತು ಮಾತ್ರ ಪರಿಗಣನೆಗೆ ತೆಗೆದುಕೊಂಡಿದ್ದೇವೆ. ಮೌಖಿಕವಾಗಿದ್ದುದು ನೆನಪಿನ ಶಕ್ತಿಯನ್ನು ಅವಲಂಬಿಸಿ ಕೆಲವರ ಮೂಲಕ ಮಾತ್ರ ಹೆಚ್ಚು ಕಾಲದವರೆಗೆ ತಲೆಮಾರಿನಿಂದ ತಲೆಮಾರಿಗೆ ದಾಟಿ ಬರುವುದು ಸಾಧ್ಯವಾಗಿತ್ತು. ಈ ಆವರ್ತನೆ ಕೂಡ ಸೇರ್ಪಡೆ ಬೇರ್ಪಡೆಗಳಿಗೆ ಹೊರತಾಗಿರಲಿಲ್ಲ. ಆದರೆ ಧ್ವನಿ ಮುದ್ರಣದ ಸಾಧ್ಯತೆಯಿಂದಾಗಿ ಈಗ ಆಡಿದ ಮಾತುಗಳನ್ನು ದೀರ್ಘಕಾಲ ಕಾಯ್ದಿರಿಸುವುದು ಈಗ ಸಾಧ್ಯ. ಹೀಗಾಗಿ ಆಡು ಮಾತಿಗೆ ಇದ್ದ ಕಾಲದೇಶಗಳ ಮಿತಿಯ ಚೌಕಟ್ಟನ್ನು ಮೀರುವುದು ಸಾಧ್ಯವಾಗಿದೆ. ಈ ಸೌಲಭ್ಯದ ಅವಕಾಶವು ಕನ್ನಡದ ಅಭಿವೃದ್ದಿಗೆ ಹೇಗೆ ನೆರವಾಗಿದೆ ಎನ್ನುವುದನ್ನು ಪರಿಶೀಲಿಸುವುದು ಅಗತ್ಯ. ಕನ್ನಡದ ಉಪಭಾಷೆಗಳು ಲಿಖಿತ ಮಾಧ್ಯಮಕ್ಕೆ ಪರಿವರ್ತನೆಯಾಗುವ ಸಾಧ್ಯತೆಗಳು ಕಡಿಮೆ. ಹೀಗಾಗಿ ಈ ಉಪಭಾಷೆಯ ಪ್ರಭೇದಗಳು ಹೆಚ್ಚು ಜನರಿಗೆ ಪರಿಚಿತವಾಗುವ ಸಂದರ್ಭಗಳು ಕಡಿಮೆಯಾಗಿರುತ್ತವೆ. ಆಯಾ ಪ್ರದೇಶಗಳಲ್ಲಿ, ಆಯಾ ಸಾಮಾಜಿಕ ವಲಯಗಳಲ್ಲಿ ಮಾತ್ರ ಪ್ರಚಲಿತವಿದ್ದ ಉಪಭಾಷಿಕ ಪ್ರಭೇದಗಳು ಇಡೀ ಭಾಷಿಕ ಸಮುದಾಯಕ್ಕೆ ಪರಿಚಿತವಾದ ಹೊರತು ತಮ್ಮದಲ್ಲದ ಉಪಭಾಷೆಯ ಮಾದರಿಗಳನ್ನು ಕೇಳಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಯುವುದು ಕಷ್ಠ. ಈಗ ಧ್ವನಿ ದಾಖಲಾತಿಯ ಸೌಲಭ್ಯದಿಂದಾಗಿ ಈ ಉಪಭಾಷಾ ಪ್ರಭೇದಗಳು ತಮ್ಮ ಪರಿಸರ ಆಚೆಗೂ ಇರುವ ಭಾಷಿಕರ ಕಿವಿಯ ಮೇಲೆ ಬೀಳುವುದು ಸಾಧ್ಯವಾಗಿದೆ. ಬೀದರ ಕನ್ನಡವನ್ನು ಚಾಮರಾಜನಗರದವರೂ ಕೇಳಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿದೆ. ಉಪಭಾಷಿಕ ಬಾಹುಳ್ಯವು ಭಾಷಿಕರ ಸಾಮರ್ಥ್ಯವನ್ನು ಬೆಳೆಸುವುದಕ್ಕೆ ಅನುಕೂಲಕರವಾದ ವಾತಾವರಣ ತಂತ್ರಜ್ಞಾನದಿಂದಾಗಿ ಸಾಧ್ಯವಾಗಿದೆ. ಆಕಾಶವಾಣಿ, ದೂರದರ್ಶನ ಮತ್ತು ಇತರ ದೃಶ್ಯ ಮಾಧ್ಯಮಗಳು (ನಾಟಕ, ಸಿನೆಮಾ) ಹೀಗೆ ಕನ್ನಡದ ವ್ಯಾಪಕ ಗ್ರಹಿಕೆಗೆ ಅನುಕೂಲವಾದ ಪರಿಸರವನ್ನು ನಿರ್ಮಿಸಿಕೊಟ್ಟಿವೆ.

ಮತ್ತೆ ಬರೆಹಕ್ಕೆ ಬರೋಣ. ಮುದ್ರಣ ಮತ್ತು ಬೆರಳಚ್ಚು ಸೌಲಭ್ಯಗಳು ಕನ್ನಡದ ಲಿಖಿತ ದಾಖಲಾತಿಯ ಮೇಲೆ ಬೀರಿದ ಪರಿಣಾಮಗಳ ಸ್ವರೂಪವನ್ನು ಈಗಾಗಲೇ ಗಮನಿಸಿದ್ದೇವೆ. ಇಪ್ಪತ್ತನೆಯ ಶತಮಾನದ ಕೊನೆಯ ಭಾಗಕ್ಕೆ ಬಂದಾಗ ಇನ್ನೊಂದು ವೈಜ್ಞಾನಿಕ ಆವಿಷ್ಕಾರ ಬೇರೊಂದು ಬಗೆಯ ಪರಿಣಾಮಕ್ಕೆ ಕಾರಣವಾಯಿತು. ಕಂಪ್ಯೂಟರ್ ನ ವ್ಯಾಪಕ ಬಳಕೆಯಿಂದಾಗಿ ಕನ್ನಡವನ್ನು ಆ ಯಂತ್ರದ ಮೂಲಕ ಪ್ರಸಾರ ಮಾಡುವ ಸಂದರ್ಭ ಒದಗಿಬಂದಿದೆ. ಕಂಪ್ಯೂಟರ್ ಮತ್ತು ಭಾಷೆಯ ಸಂಬಂಧವನ್ನು ಆಮೂಲಾಗ್ರವಾಗಿ ಅರಿಯಲು ತೊಡಗುವುದಕ್ಕೆ ಇಲ್ಲಿ ಅವಕಾಶವಿಲ್ಲ. ಕನ್ನಡವನ್ನು ಕಂಪ್ಯೂಟರಲ್ಲಿ ಬರೆಯುವುದು ಎಂದರೇನು? ಈಗಾಗಲೇ ಕೈ ಬರೆಹದಲ್ಲಿ ಬರೆದದ್ದನ್ನು ಕಂಪ್ಯೂಟರ್ ನೆನಪಿಗೆ ವರ್ಗಾಯಿಸುವುದು ಒಂದು ಕ್ರಮ. ಇದಲ್ಲದೆ ಲಿಖಿತ ರೂಪವೊಂದರಲ್ಲಿ ಮೈತಳೆಯುವ ಮೊದಲೇ ಕಂಪ್ಯೂಟರ್‌ಗೆ ಹೋಗಿ ಸೇರಿಕೊಳ್ಳುವುದು ಇನ್ನೊಂದು ಬಗೆ. ಮೊದಲ ಬಗೆಯಲ್ಲಿ ಕಂಪ್ಯೂಟರ್ ಮುದ್ರಣ ಯಂತ್ರದ ಕೆಲಸವನ್ನು ಹೆಚ್ಚು ವೃತ್ತಿಪರವಾಗಿ ನಿರ್ವಹಿಸುತ್ತವೆ.

ಈಗೀಗ ಬರೆಯುವುದು ಎಂದರೆ ನೇರವಾಗಿ ಕಂಪ್ಯೂಟರ್‌ನಲ್ಲಿ ಬರೆಯುವುದು ಎಂದಾಗುತ್ತಿದೆ. ಕನ್ನಡದ ವೃತ್ತಿಪರ ಪತ್ರಿಕೋದ್ಯೋಗಿಗಳು ದಿನವೂ ತಮ್ಮ ಪತ್ರಿಕಾ ಬರೆಹಗಳನ್ನು ಕೈಬರೆಹದಲ್ಲಿ ರೂಪಿಸುವುದಿಲ್ಲ; ನೇರವಾಗಿ ಕಂಪ್ಯೂಟರ್‌ನಲ್ಲಿ ಮೂಡಿಸುತ್ತಾರೆ. ಅಂತರ್ಜಾಲದ ಅಂಚೆಯಲ್ಲಿ ಪತ್ರ(ಇ-ಮೇಲ್) ಬರೆಯುವವರೂ ಕೂಡ ನೇರವಾಗಿ ಕಂಪ್ಯೂಟರ್ ಮೇಲೆ ಬರೆಯುತ್ತಿರುವುದು ಒಂದು ಗಮನಾರ್ಹ ಬದಲಾವಣೆಯಾಗಿದೆ. ಹೀಗೆ ತಂತ್ರಜ್ಞಾನ ನಮ್ಮ ಭಾಷಾ ಕೌಶಲವೊಂದನ್ನು ಬುಡಸಹಿತ ಬದಲಾಯಿಸಲು ಸನ್ನದ್ಧವಾಗಿದೆ. ಈ ತುರ್ತು ಮತ್ತು ನೇರ ಬರೆಹ ಭಾಷೆಯ ಸ್ವರೂಪದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಯೋಚಿಸುತ್ತ ಹಾಳೆಯ ಮೇಲೆ ಲೇಖನಿಯಿಂದ ಬರೆಯುವಾಗ ಆಕಾರ ಪಡೆಯುವ ಭಾಷಾರೂಪಕ್ಕೂ ಕಂಪ್ಯೂಟರ್ ತೆರೆಯ ಮೇಲೆ ನೇರವಾಗಿ ಮೈತಳೆಯುವ ಭಾಷಾರೂಪಕ್ಕೂ ಆಗಾಧವಾದ ವ್ಯತ್ಯಾಸಗಳಿವೆ. ಇಂಗ್ಲಿಶ್ ನಂತಹ ಭಾಷೆಗಳ ಮೇಲೆ ಈ ತಂತ್ರಜ್ಞಾನದ ಸಂದರ್ಭವು ಉಂಟುಮಾಡಿರುವ ಪ್ರಭಾವಗಳನ್ನು ಕುರಿತು ಅಧ್ಯಯನಗಳು ಮೊದಲಾಗಿವೆ. ಕನ್ನಡದ ಮಾಹಿತಿಯನ್ನು ನಾವಿನ್ನೂ ಈ ನೆಲೆಯ ವಿಶ್ಲೇಷಣೆಗೆ ಬಳಸಿಕೊಂಡಿಲ್ಲ.

ಈ ಹೊಸ ಶತಮಾನದಲ್ಲಿ ಕನ್ನಡ ಈ ಹಿಂದಿನಿಂದಲೂ ಎದುರಿಸುತ್ತಿರುವ ಕೆಲವು ಸಮಸ್ಯೆಗಳ ಭಾರದೊಡನೆ ಹೊಸದಾದ ಕೆಲವು ಸವಾಲುಗಳನ್ನು ಎದುರಿಸಬೇಕಾಗಿದೆ ಎಂಬುದನ್ನು ಮೇಲೆ ವಿವರಿಸಲು ಯತ್ನಿಸಲಾಗಿದೆ. ಈ ಸವಾಲುಗಳ ಬಗ್ಗೆ ಅರಿವನ್ನು ಪಡೆಯುವುದು ನಿವಾರಣೆಗಾಗಿ ಚಿಂತಿಸುವುದಕ್ಕಿಂತಲೂ ಮುಖ್ಯವಾದ ಸಂಗತಿ. ಏಕೆಂದರೆ ಎಷ್ಟೋ ವೇಳೆ ಸಮಸ್ಯೆಗಳ ಸ್ವರೂಪವನ್ನು ಅರಿಯುವುದೆಂದರೆ ಆ ಸಮಸ್ಯೆಯನ್ನು ಬಹುಪಾಲು ಬಿಡಿಸಿದಂತೆಯೇ ಸರಿ.

ತಂತ್ರಜ್ಞಾನದ ದಾಪುಗಾಲು : ಮುಂದಿನ ದಾರಿ

ಅಂತರ್ಜಾಲದಲ್ಲಿ ನಿಮಗೆ ಬೇಕಾದ ಮಾಹಿತಿ ಇಲ್ಲಿ ಸಿಗಬಹುದೆಂದು ಹುಡುಕಿ ತೋರಿಸುವ ಶೋಧಕಗಳಿವೆ. ‘ಗೂಗಲ್ ’ ಎಂಬುದೊಂದು ಅಂಥ ತುಬ್ಬುಗಾರ. ತೀರಾ ಈಚೆಗೆ ಅಲ್ಲಿ ‘ನಿಮ್ಮ ಭಾಷೆಯಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಿಕೊಳ್ಳಿ’ ಎಂಬ ಆಯ್ಕೆಯನ್ನು ನೀಡಲಾಗಿದೆ. ಆ ಭಾಷೆಗಳ ಪಟ್ಟಿಯಲ್ಲಿ ಕನ್ನಡವೂ ಇದೆ. ಕುತೂಹಲದಿಂದ ಮುನ್ನುಗ್ಗಿದರೆ ನಿಮಗೆ ಅಚ್ಚರಿ ಕಾದಿದೆ. ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಲು ನೀವು ಸಿದ್ಧರಾದಿರೆಂದರೆ ಮಾಹಿತಿ ಲಭಿಸುತ್ತದೆ. ಆದರೆ ರೋಮನ್ ಲಿಪಿಯಲ್ಲಿ ಅದು ಸಿಗುತ್ತದೆ. ನೀವು ‘Kuvempu ಎಂಬ ಪದವನ್ನು ನೀಡಿ ಉಲ್ಲೇಖಗಳನ್ನು ಹುಡುಕಲು ಹೇಳಿದರೆ ಕೆಲವೇ ಸೆಕೆಂಡುಗಳಲ್ಲಿ ೧೬ ಸಾವಿರಕ್ಕೂ ಮಿಕ್ಕಿ ಉಲ್ಲೇಖಗಳ ಪಟ್ಟಿಯಾಗುತ್ತದೆ. ಆದರೆ ನೀವು ಕನ್ನಡವನ್ನು ರೋಮನ್ ಲಿಪಿಯಲ್ಲಿ ಓದಲು ಸಿದ್ಧರಿರಬೇಕು. ಗೂಗಲ್‌ಗೆ ಕನ್ನಡವನ್ನು ರೋಮನ್ ಲಿಪಿಗೆ ಪರಿವರ್ತಿಸಲು ಹೇಳಿಕೊಟ್ಟವರು ಯಾರೋ ತಿಳಿಯದು. ಅವರು ಯಾವ ಮಾದರಿಯನ್ನೂ ಅವಲಂಬಿಸಿಲ್ಲ. ಈ ಬಗ್ಗೆ ಮತ್ತೆ ಚರ್ಚಿಸುವುದಿದೆ.

ಈ ಸುದ್ದಿಯನ್ನು ಹೇಳುತ್ತಿರುವುದಕ್ಕೆ ಕಾರಣಗಳಿವೆ. ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಅಳವಡಿಸುವ ನಮ್ಮ ಹತ್ತಾರು ಪ್ರಯತ್ನಗಳು ನಡೆಯುತ್ತಿರುವಾಗಲೇ ತಂತ್ರಜ್ಞಾನದ ದಾಪುಗಾಲುಗಳು ಒಳದಾರಿಗಳನ್ನು ಕಂಡುಕೊಳ್ಳುತ್ತಿವೆ. ಗೂಗಲ್ ಶೋಧಕ ಕನ್ನಡವನ್ನು ಒಂದು ಆಯ್ಕೆಯ ಭಾಷೆಯನ್ನು ನೀಡಬೇಕೆಂದು ತೀರ್ಮಾನಿಸಿದ್ದೇಕೆ ಎಂಬುದು ಬೇರೆಯೇ ಪ್ರಶ್ನೆ. ಹಾಗೆ ನಿರ್ಧರಿಸಿದ ಮೇಲೆ ಅದನ್ನು ಜಾರಿಗೆ ತರಲು ಇರುವ ಅಡ್ಡಿಗಳನ್ನು ನಿವಾರಿಸಿಕೊಳ್ಳಲು ಹಿಂದೆ ಮುಂದೆ ನೋಡಲಿಲ್ಲ. ಕನ್ನಡದ ಯಾವ ಫಾಂಟ್‌ಗಳನ್ನು ಆಯ್ದುಕೊಳ್ಳಬೇಕೆಂದು ಚಿಂತಿಸುತ್ತ ಕೂರಲಿಲ್ಲ. ಯಾವುದಾದರೊಂದನ್ನು ಆಯ್ದು ಅದನ್ನು ಶೋಧಕದ ಬಳಕೆದಾರರು ಡೌನ್ ಲೋಡ್ ಮಾಡಿಕೊಳ್ಳಲು ಹೇಳಬಹುದಿತ್ತು. ಆದರೆ ಇದು ಯಾವುದೂ ಬೇಡವೆಂದು ರೋಮನ್ ಲಿಪಿಯನ್ನು ಆಯ್ದುಕೊಂಡುಬಿಟ್ಟಿತು. ಇದೆಲ್ಲದರ ನೀತಿ ಇಷ್ಟೆ, ಭಾಷೆಯ ಬಳಕೆ ಮತ್ತು ತಂತ್ರಜ್ಞಾನದ ಸಂಬಂಧವೀಗ ಹಿಂದಿನಂತಿಲ್ಲ. ತಂತ್ರಜ್ಞಾನದ ತುರ್ತುಗಳು ಈಗ ಭಾಷಾಬಳಕೆಯ ದಿಕ್ಕುಗಳನ್ನು ನಿಯಂತ್ರಿಸುತ್ತಿವೆ; ನಿರ್ದೇಶಿಸುತ್ತಿವೆ. ತಂತ್ರಜ್ಞಾನವನ್ನು ನಮಗೆ ಅವಶ್ಯವಿರುವಂತೆ ಬಳಸುವ ಅವಕಾಶಗಳು ಕನ್ನಡದಂಥ ಭಾಷೆಗಳಿಗೆ ಕಡಿಮೆಯಾಗುತ್ತಿವೆ.

ತಾಳೆಗರಿಗಳಿಂದ ಕಾಗದಕ್ಕೆ, ಕಂಟದಿಂದ ಮುದ್ರಣಕ್ಕೆ ಬದಲಾಗುವ ಸಂದರ್ಭ ಶತಮಾನಗಳ ಹದವನ್ನು ಪಡೆದಿತ್ತು. ಭಾಷಿಕರುೊ- ಅಕ್ಷರಸ್ಥೊ ಭಾಷಿಕರುೊ- ಹಲವು ತಲೆಮಾರುಗಳವರೆಗೆ ತಂತಮ್ಮ ಆಯ್ಕೆಗಳನ್ನು ಕಾಯ್ದುಕೊಳ್ಳಬಹುದಿತ್ತು. ಅಥವಾ ಬದಲಾವಣೆಯ ಮಂದಗತಿಯಿಂದಾಗಿಯೇ ಪರಿಣಾಮ ಅಷ್ಟೊಂದು ತೀವ್ರವಾಗಿದ್ದಂತೆ ತೋರುವುದಿಲ್ಲ. ಈಗ ಪರಿಸ್ಥಿತಿ ಹಾಗಿಲ್ಲ. ತಂತ್ರಜ್ಞಾನ ಗತಿಯ ತೀವ್ರತೆಯಿಂದ ಒಂದೇ ತಲೆಮಾರಿನಲ್ಲಿ ಆಯ್ಕೆಗಳು ಕಡಿಮೆಯಾಗುತ್ತಿರುವುದನ್ನು ನಾವು ಅನುಭವಿಸುತ್ತಿದ್ದೇವೆ.

ಮೇಲೆ ಹೇಳಿದ ಸಂದರ್ಭವನ್ನೇ ನೋಡೋಣ. ಗೂಗಲ್ ಶೋಧಕ ಈಗ ಆಯ್ದುಕೊಂಡಿರುವ ಭಾಷೆಗಳ ಸಂಖ್ಯೆ ಇಂಗ್ಲಿಶ್ ಸೇರಿದಂತೆ ಅರವತ್ತು. ಇವುಗಳಲ್ಲಿ ಕನ್ನಡವನ್ನೂ ಸೇರಿಸಲು ಗೂಗಲ್ ನಿರ್ವಾಹಕರು ನಿರ್ಧರಿಸುವಲ್ಲಿ ಜಾಗತೀಕರಣದ ಇಂದಿನ ಅವತಾರದ ಪ್ರೇರಣೆಗಳಿವೆ. ‘ಇಂಗ್ಲಿಶ್ ಒಂದೇ’ ಅಥವಾ ‘ಇಂಗ್ಲಿಶ್ ಮಾತ್ರ’ ಎಂಬ ನಿಲುವಿನಿಂದ ಮಾರುಕಟ್ಟೆಯು ಮಿತವ್ಯಾಪ್ತಿ ಪಡೆಯುವವೆಂಬ ಸತ್ಯ ಈಗ ಗೋಚರವಾಗತೊಡಗಿದೆ. ಆದ್ದರಿಂದ ‘ಇಂಗ್ಲಿಶ್ ಜತೆಗೆ’ ಅಥವಾ ‘ಇಂಗ್ಲಿಶ್ ಕೂಡಾ’ ಎಂಬ ನಿಲುವನ್ನು ಆಶ್ರಯಿಸಬೇಕಾಗಿದೆ. ಇಲ್ಲದಿದ್ದರೆ ಅಮೇರಿಕದ ಯಾವುದೋ ಮೂಲೆಯ ಗೂಗಲ್ ಶೋಧಕದ ನಿರ್ವಾಹಕರಿಗೆ ಕನ್ನಡದ ಬಗ್ಗೆ ಪ್ರೀತಿ ಮೂಡಲು ಯಾವ ಕಾರಣಗಳೂ ಇಲ್ಲ. ಕನ್ನಡವನ್ನು ಒಳಗೊಳ್ಳುವ ನಿರ್ಣಯ ಕೈಗೊಂಡ ಮೇಲೆ ನಿರ್ವಾಹಕರು ತಮ್ಮಿಂದ ತಾವೇ ತಮಗೆ ಬೇಕಾದ ವಿಧಾನವನ್ನು ಆಯ್ದುಕೊಂಡರೂ ಅದಕ್ಕಾಗಿ ಕನ್ನಡಿಗರನ್ನಾಗಲೀ ಕರ್ನಾಟಕ ಸರಕಾರವನ್ನಾಗಲೀ ಸಮಾಲೋಚನೆಗೆ ಒಳಗು ಮಾಡುವ ಅವಶ್ಯಕತೆಯಿದೆಯೆಂದು ತಿಳಿಯಲಿಲ್ಲ. ಹೀಗಿರುವಾಗ ನಾವೇನು ಮಾಡಬೇಕು?

ನಾವಿಲ್ಲಿ ಕನ್ನಡ ಲಿಪಿಯ ಪ್ರಾಚೀನತೆ, ಸೌಷ್ಠವತೆ, ಚೆಲುವು ಇತ್ಯಾದಿಗಳನ್ನು ಕಾಯ್ದುಕೊಳ್ಳುವ ತರದೂದಿನಲ್ಲಿ ಕಾಲಹರಣ ಮಾಡುತ್ತಿದ್ದೇವೆ. ಇದು ಒಂದು ಹಂತದವರೆಗೆ ಸರಿ. ಆದರೆ ನಮ್ಮ ಹುನ್ನಾರಗಳಲ್ಲಿ ಹಲವು ಬದಲಾವಣೆ ಆಗಬೇಕಿದೆ; ನಾವು ಯೋಚಿಸುವ ವಿಧಾನದಲ್ಲೇ ಬದಲಾವಣೆ ಆಗಬೇಕಿದೆ. ಏಕೆಂಬುದನ್ನು ನೋಡೋಣ. ಲಿಪಿ ಇಲ್ಲವೇ ಬರವಣಿಗೆಯನ್ನು ಶಾಶ್ವತವೆಂದು ನಂಬುವವರು ನಾವು. ಮಾತಿನ ಅಲ್ಪಾಯುಷ್ಯವನ್ನು ವೃದ್ದಿಗೊಳಿಸಲು ಬರೆವಣಿಗೆಯನ್ನು ಸಾಧನವಾಗಿ ರೂಪಿಸಿಕೊಂಡಿದ್ದೇವೆಂದು ನಂಬಿದ್ದೇವೆ. ಸರಿ. ಆದರೆ ಬರೆವಣಿಗೆಗೆ ಬಳಸಲಾಗುವ ಭಿತ್ತಿಗಳು ಬದಲಾಗುತ್ತಾ ಬಂದಂತೆ ಬರೆವಣಿಗೆಯ ಆಯುಷ್ಯವೂ ಕಡಿಮೆಯಾಗುತ್ತ ಬಂದಿದೆ. ಸುಮ್ಮನೆ ಈ ಉದಾಹರಣೆ ಗಮನಿಸಿ. ಕ್ರಿ.ಶ.೪೫೦ರ ಸುಮಾರಿನ ಕಲ್ಲಿನ ಶಾಸನದ ಬರೆವಣಿಗೆ ಇಂದೂ ಕಾಣಲು ಸಿಗುತ್ತದೆ. ಆದರೆ ತಾಳೆಗರಿ ಗ್ರಂಥಗಳಲ್ಲಿ ಆರು ಶತಮಾನಗಳಿಗಿಂತ ಹಿಂದೆ ಹೋಗುವಂತಿಲ್ಲ. ಇದು ಕಾಗದದ ಮಾತಿಗೆ ಬಂದರೆ ಅರವತ್ತು ಎಪ್ಪತ್ತು ವರ್ಷಗಳ ಹಿಂದಿನ ಪುಸ್ತಕವೂ ಕಾಯ್ದಿರಿಸಿದ ಪ್ರತಿಯಾಗಿದೆ. ಕಳೆದ ಒಂದೆರಡು ದಶಕಗಳಲ್ಲಿ ಬರೆಹದ ಆಯುಷ್ಯ ಮತ್ತಷ್ಟು ಕಡಿಮೆಯಾಗಿದೆ. ಈ ಆಯುಷ್ಯದ ಕೊರತೆಯನ್ನು ಪ್ರತಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ತುಂಬಿಕೊಳ್ಳಲಾಗುತ್ತದೆ. ಪ್ರತಿಗಳೂ ಬಾಹ್ಯ ಪ್ರತೀಕಗಳು. ಆದರೆ ಈಗ ಬೇಕೆಂದಾಗ ಕಂಪ್ಯೂಟರ್ ತೆರೆಯಮೇಲೆ ಪ್ರತಿ ಸಿದ್ಧ. ಆದರೂ ಇದು ಪರ್ಯಾಯವಾಗಿ ಕಾರ್ಯನಿರ್ವಹಿಸಬಲ್ಲುದು. ನಮ್ಮ ನೆನಪಿಗೆ ಇರುವ ಅನಿಯಂತ್ರಿತ ಮರೆವು ಕಂಪ್ಯೂಟರಿಗೆ ಇಲ್ಲ; ಇದ್ದರೂ ತೊಡಕುಗಳು ಅನಿಯಂತ್ರಿತ. ಅಂದರೆ ಅಕ್ಷರವೆಂಬುದು ಈಗ ಭ್ರಮೆಯಾಗತೊಡಗಿದೆ. ಕೀಲಿಮನೆಯ ಕೀಲಿ ಒತ್ತಿದೊಡನೆ ಎಲ್ಲಿಂದಲೋ ಮೂಡಿ, ಮತ್ತೊಂದು ಕೀಲಿ ಒತ್ತಿದಾಗ ಮಾಯವಾಗತೊಡಗಿದೆ. ಈ ಎಲ್ಲ ವಿವರಣೆ ಏಕೆ ಬೇಕಾಯ್ತು? ಲಿಪಿಯ ಬಗೆಗೆ, ಬರೆವಣಿಗೆಯ ಬಗೆಗೆ ನಾವು ಯೋಚಿಸುವ ವಿಧಾನ ಬದಲಾಗುವ ಅವಶ್ಯವಿದೆ ಎನ್ನುವುದಕ್ಕೆ ಹಿನ್ನೆಲೆಯಾಗಿ ಈ ಎಲ್ಲ ಮಾತೂ ಬಂದಿವೆ. ಗೂಗಲ್ ಶೋಧಕ ಆಯ್ದ ಮಾರ್ಗ ಒಂದು ಪರ್ಯಾಯ. ಕನ್ನಡ, ತಂತ್ರಜ್ಞಾನದ ದಾಪುಗಾಲಿನೊಡನೆ ಹೆಜ್ಜೆಯಿಡಬೇಕೆಂದರೆ ಕನ್ನಡವನ್ನು ರೋಮನ್ ಲಿಪಿಯ ಮೂಲಕ ಪ್ರತಿನಿಧಿಸುವ ವಿಧಾನವನ್ನು ಒಂದು ಪರ್ಯಾಯ ಮಾರ್ಗವನ್ನಾಗಿ ಒಪ್ಪಬೇಕು. ಕನ್ನಡ ಲಿಪಿಯ ಜತೆಗೆ ರೋಮನ್ ಲಿಪಿಯನ್ನು ಬಳಸಲು ಮನಸ್ಸನ್ನು ಒಗ್ಗಿಸಬೇಕು. ಇಲ್ಲದಿದ್ದರೆ ನಿಧಾನಗತಿಯ ನಮ್ಮ ಕ್ರಮಗಳು ಆಕಾರ ತಳೆಯುವ ಹೊತ್ತಿಗೆ ತಂತ್ರಜ್ಞಾನ ತನಗೆ ಬೇಕಾದ ಒಳದಾರಿಗಳನ್ನು ರೂಪಿಸಿಕೊಂಡು ಅದನ್ನೇ ರಾಜಮಾರ್ಗವೆಂದು ರೂಪಿಸತೊಡಗಿರುತ್ತದೆ.

ಹೆಚ್ಚಿನ ಮಾಹಿತಿ : ಈಗ ಗೂಗಲ್ ನಲ್ಲಿ ಸೀಮಿತ ಪ್ರಮಾಣದ ಕನ್ನಡ ಅಕ್ಷರಗಳನ್ನೂ ನೋಡಬಹುದು. ಹುಡುಕು, ಸಮುದಾಯಗಳು, ಸುದ್ದಿಗಳು, ಪುಟಗಳು ಇತ್ಯಾದಿ.