ತಂತ್ರಜ್ಞಾನ ನಾಗರಿಕ ಸಮಾಜದ ದೈನಂದಿನ ಜೀವನವನ್ನು ಸೌಲಭ್ಯ ಪೂರ್ಣವಾಗಿಸಲು, ಅಂದರೆ ಯಾವುದೇ ಉದ್ದೇಶ ಗುರಿಸಾಧನೆಗಳ ಮಾರ್ಗದ ಎದುರಾಗಬಹುದಾದ ತೊಡಕುಗಳನ್ನು ಪರಿಹರಿಸಿಕೊಳ್ಳಲು ಬಳಕೆಯಾಗುವ ಅಸ್ತ್ರ. ಒಂದು ಅರ್ಥದಲ್ಲಿ ನಮ್ಮ ಭಾಷೆಯೂ ಒಂದು ತಾಂತ್ರಿಕ ಸಾಧನವೇ ಆದರೂ ಪ್ರಸ್ತುತ ಸಂದರ್ಭಕ್ಕೆ ಭಾಷೆಯ ಉಪಯುಕ್ತತೆಯ ಸಾಧ್ಯತೆಯನ್ನು ವಿಸ್ತರಿಸಲು ನೆರವಾಗುವ ತಾಂತ್ರಿಕ ವಿಷಯಗಳನ್ನು ಭಾಷಾ ತಂತ್ರಜ್ಞಾನವೆಂದು ನಿರ್ದಿಷ್ಟಪಡಿಸಿಕೊಳ್ಳುವುದು ಸೂಕ್ತವೆನಿಸುತ್ತದೆ.

ಈಗ ನಡೆಯುತ್ತಿರುವ ಭಾಷೆ ಮತ್ತು ತಂತ್ರಜ್ಞಾನ ಸಂಬಂಧಿ ಚರ್ಚೆಗಳಲ್ಲಿ ಭಾಷೆ ಮತ್ತು ತಂತ್ರಜ್ಞಾನವನ್ನು ಎರಡು ಪ್ರತ್ಯೇಕ ವಿಷಯಗಳಾಗಿ ಭಾವಿಸಿ ಒಂದನ್ನೊಂದು ಮುಖಾಮುಖಿಯಾಗುವ ಅಥವಾ ಅನುಸಂಧಾನಗೊಳ್ಳುವ ಪ್ರಕ್ರಿಯೆಯ ಸುತ್ತ ಚರ್ಚೆ ನಡೆಯುತ್ತಿದೆ. ನಾನು ಇವೆರಡೂ ವಿಷಯಗಳನ್ನು ಒಂದೇ ಘಟಕವಾಗಿ ಭಾವಿಸಿದ್ದೇನೆ. ಇಲ್ಲಿ ನನಗೆ ಮುಖ್ಯವೆನಿಸಿದ್ದು ಭಾಷೆ ಮತ್ತು ತಂತ್ರಜ್ಞಾನ ಒಂದನ್ನೊಂದು ಎದುರುಗೊಳ್ಳುವ ಅಥವಾ ಅನುಸಂಧಾನಗೊಳ್ಳುವ ವಿಷಯದಷ್ಟೇ ಮುಖ್ಯವಾದದ್ದು ಇವೆರಡನ್ನೂ ಎದುರಾಗಬೇಕಾದ ಸಮಾಜಕ್ಕೆ ಸಂಬಂಧಿಸಿದ್ದು. ಈ ಟಿಪ್ಪಣಿಯ ಶೀರ್ಷಿಕೆಯನ್ನು ಆ ಕಾರಣದಿಂದಲೇ ಭಾಷಾತಂತ್ರಜ್ಞಾನ ಮತ್ತು ಸಮಾಜ ಎಂದು ಕೊಡಲಾಗಿದೆ. ಭಾಷೆ ಮತ್ತು ತಂತ್ರಜ್ಞಾನದ ಚರ್ಚೆಯ ಸಂದರ್ಭದಲ್ಲಿ ಬಹಳಷ್ಟು ಜನರು ಭಾಷೆಯನ್ನು ಸಮಾಜಮುಕ್ತ ಘಟಕವನ್ನಾಗಿ ಭಾವಿಸಿದಂತೆ ಕಾಣುತ್ತದೆ. ಇದು ಪ್ರಜ್ಞಾಪೂರ್ವಕವಲ್ಲದಿದ್ದರೂ ಆಕಸ್ಮಿಕವಲ್ಲ. ಯಾಕೆಂದರೆ ನಮ್ಮ ಕನ್ನಡ ಭಾಷಾಧ್ಯಯನ ಪರಂಪರೆ ಕನ್ನಡದ ಸಾಮಾಜಿಕ ವಿನ್ಯಾಸಗಳ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಭಾಷಿಕ ವೈವಿಧ್ಯತೆಗಳನ್ನು ಗುಣಾತ್ಮಕ ವೈಶಿಷ್ಟ್ಯಗಳನ್ನಾಗಿ ಭಾವಿಸಿಲ್ಲ. ಆ ಕಾರಣದಿಂದಲೇ ಇಂದಿಗೂ ಕನ್ನಡದ ಉಚ್ಚಾರಣಾ ವ್ಯತ್ಯಾಸಗಳನ್ನು ಪರ್ಯಾಯ ರೂಪಗಳೆಂದು ಭಾವಿಸದೇ ಉಚ್ಚಾರಣಾ ದೋಷಗಳೆಂದೇ ಪರಿಗಣಿಸುತ್ತಿದ್ದೇವೆ. ಕನ್ನಡ ಭಾಷೆ ಚಾರಿತ್ರಿಕವಾಗಿ ತಂತ್ರಜ್ಞಾನದೊಂದಿಗೆ ಸಾಗಿಬಂದಿದ್ದರೂ ಸಮಕಾಲೀನವಾಗಿಯೂ ಬಹುಪಾಲು ಕನ್ನಡ ಸಾಮಾಜಿಕರಿಗೆ ಇದರ ಪ್ರಯೋಜನವಾಗಿದೆಯೇ ಎಂದು ಪ್ರಶ್ನೆಗಳಿವೆ. ಈ ಹಿನ್ನೆಲೆಯಲ್ಲಿ ಭಾಷಾತಂತ್ರಜ್ಞಾನ ಮತ್ತು ಅದರ ಸಾಮಾಜಿಕ ಸಂಬಂಧಗಳನ್ನು ಅರಿಯುವ ಅಗತ್ಯವಿದೆ. ಭಾಷಾತಂತ್ರಜ್ಞಾನ ಸಮಾಜದೊಂದಿಗಿನ ಸಂಬಂಧ ಮತ್ತು ಪರಿಣಾಮಗಳನ್ನು ಅರಿಯಲು ತಂತ್ರಜ್ಞಾನ ಬೆಳವಣಿಗೆಯ ಎರಡು ಘಟ್ಟಗಳನ್ನು ಗುರ್ತಿಸಿಕೊಳ್ಳುವುದು ಸೂಕ್ತ. ಮೊದಲ ಹಂತದ ಭಾಷಾತಂತ್ರಜ್ಞಾನವು ಇತರೆ ಕ್ಷೇತ್ರಗಳಲ್ಲಿನ ತಾಂತ್ರಿಕ ಬೆಳವಣಿಗೆಗಳಂತೆ ನಮ್ಮ ಸಾಮಾಜಿಕ ಅಗತ್ಯಗಳಿಗೆ, ಅಪೇಕ್ಷೆಗಳಿಗೆ ಪೂರಕವಾಗಿ ಬೆಳೆದುಬಂದಿದೆ. ಉದಾಹರಣೆಗೆ ಮೊದಲು ಮೌಖಿಕವಾಗಿದ್ದ ಸಾಹಿತ್ಯ ಪರಂಪರೆಯು ತಮ್ಮ ಅನುಭವಗಳನ್ನು ಮುಂದಿನ ತಲೆಮಾರಿಗೆ ರವಾನಿಸುವ ಮನುಷ್ಯನ ಅಪೇಕ್ಷೆಗೆ ಅನುಸಾರವಾಗಿ ಬರೆಹದ ದಾಖಲೆಯ ತಂತ್ರಜ್ಞಾನವನ್ನು ರೂಪಿಸಿಕೊಂಡಿತೆನ್ನಬಹುದು. ಈ ಮಾದರಿಯ ತಂತ್ರಜ್ಞಾನದ ಆವಿಷ್ಕಾರ ಅಳವಡಿಕೆಗಳು ಸಾಮಾಜಿಕ ಅಗತ್ಯಗಳನ್ನು ಕಂಡುಕೊಂಡು ಅದಕ್ಕನುಸಾರವಾಗಿ ಬೆಳೆಯುತ್ತಾ ಬಂದಿವೆ. ಆದರೆ ಇಪ್ಪತ್ತನೇ ಶತಮಾನದಲ್ಲಾದ ಕ್ಷಿಪ್ರಗತಿಯ ತಾಂತ್ರಿಕ ಸಾಧನೆಗಳು ನಾವು ನಮ್ಮ ಅಗತ್ಯ ಅಪೇಕ್ಷೆಗಳನ್ನು ಕಂಡುಕೊಳ್ಳುವ ಮೊದಲೇ ನಮ್ಮ ಅಗತ್ಯಗಳು ಅಪೇಕ್ಷೆಗಳನ್ನು ರೂಪಿಸುವ ಮಾದರಿಯಲ್ಲಿ ಬೆಳೆದು ನಿಂತಿವೆ. ಇದೊಂದು ಸಂಕೀರ್ಣ ವಿಷಯ. ಯಾಕೆಂದರೆ ಭಾಷಾತಂತ್ರಜ್ಞಾನದಿಂದ ಪಡೆದಿರುವ, ಪಡೆಯುತ್ತಿರುವ ಅನುಕೂಲ ಮತ್ತು ಪ್ರಯೋಜನದ ಹಿನ್ನೆಲೆಯಲ್ಲಿ ಇಂತಹ ಬೆಳವಣಿಗೆಯನ್ನು ಸಮಸ್ಯೆಯಾಗಿ ಏಕೆ ನೋಡಬೇಕು ಎನ್ನುವ ಪ್ರಶ್ನೆಯಿಂದಾಗಿ ಭಾಷಾ ತಂತ್ರಜ್ಞಾನದ ಅಡ್ಡಪರಿಣಾಮಗಳೂ, ಸಾಮಾಜಿಕವಾಗಿ ಉಂಟುಮಾಡುವ ವ್ಯತಿರಿಕ್ತ ಪರಿಣಾಮಗಳೂ ಗೌಣವಾಗಿ ಬಿಡುತ್ತವೆ.

ಭಾಷಾತಂತ್ರಜ್ಞಾನದ ಅಳವಡಿಕೆಯ ಅಥವಾ ವ್ಯವಸ್ಥಿತವಲ್ಲದ ಅಳವಡಿಕೆಯ ವ್ಯತಿರಿಕ್ತ ಪರಿಣಾಮಗಳನ್ನು ತಕ್ಷಣದಲ್ಲಿ ಖಚಿತವಾಗಿ ಗುರುತಿಸಲಾಗದಿದ್ದರೂ, ಇತರ ಕ್ಷೇತ್ರಗಳಲ್ಲಿನ ಆಧುನಿಕ ತಂತ್ರಜ್ಞಾನದ ಅಳವಡಿಕೆಯ ದುಷ್ಪರಿಣಾಮಗಳ ಉದಾಹರಣೆಗಳು ಮುಂದಿರುವುದರಿಂದ ತಂತ್ರಜ್ಞಾನದ ಬಳಕೆಯ ವಿಧಾನದ ಬಗೆಗೆ ಎಚ್ಚರವಾಗಿರುವುದು ಅಗತ್ಯವೆನಿಸುತ್ತದೆ.

ಉದಾಹರಣೆಗೆ ಎರಡು ಮೂರು ಶತಮಾನಗಳ ಹಿಂದೆ ಕೈಗಾರಿಕಾ ಕ್ರಾಂತಿಗೆ ಕಾರಣವಾದ ತಂತ್ರಜ್ಞಾನದ ಬೆಳವಣಿಗೆಗಳು ಮಾನವ ಸಮುದಾಯಕ್ಕೆ ಅನೇಕ ಉಪಯೋಗಗಳ ಸೌಲಭ್ಯಗಳನ್ನು ಒದಗಿಸಿದೆ. ಆದರೆ ಆ ತಂತ್ರಜ್ಞಾನದ ಅಳವಡಿಕೆಯಲ್ಲಿನ, ವಿತರಣೆಯಲ್ಲಿನ ಲೋಪದಿಂದಾಗಿ ಉಂಟಾಗಿರುವ ಸಾಮಾಜಿಕ ಸಮಸ್ಯೆಗಳು ಕಣ್ಣಮುಂದಿವೆ. ನಾವು ಕಂಡುಕೊಂಡ ಹೊಸ ತಂತ್ರಜ್ಞಾನವನ್ನು ಬೃಹತ್ ಉದ್ದಿಮೆಗಳ ಸ್ಥಾಪನೆಗೆ ಅಳವಡಿಸಿದಾಗ ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ವಾವಲಂಬನೆಯ ಪ್ರತೀಕವಾಗಿದ್ದ ಗುಡಿಕೈಗಾರಿಕೆಗಳು, ಪಾರಂಪರಿಕ ವೃತ್ತಿ ಕಸುಬುಗಳು ಅದರೊಂದಿಗೆ ಮಿಳಿತವಾಗಿ ಹಾಸುಹೊಕ್ಕಾಗಿದ್ದ ವೃತ್ತಿ ಕೌಶಲ್ಯ, ಕಲೆ, ಜ್ಞಾನ ಪರಂಪರೆ ಎಲ್ಲವೂ ಏಕಕಾಲಕ್ಕೆ ಛಿದ್ರಗೊಂಡಿದ್ದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಈ ಹಿನ್ನೆಲೆಯಲ್ಲಿ ಭಾಷಾ ತಂತ್ರಜ್ಞಾನವೆಂಬ ಅಸ್ತ್ರ ಸಮಾಜಮುಖಿಯಾಗದೆ ಏಕಪಕ್ಷೀಯವಾಗಿ ಭಾಷಾ ಸಮುದಾಯಗಳ ಮೇಲೆ ಸವಾರಿ ಮಾಡುವಂತಾಗಬಾರದು.

ಈ ಮೊದಲು ಹೇಳಿದ ಸಮಾಜದ ಸಹವರ್ತಿಯಾಗಿ ಬೆಳೆದ ಭಾಷಾತಂತ್ರಜ್ಞಾನದ ಭಾಗವಾದ ಬರೆಹ ಮತ್ತು ಲಿಖಿತ ಪರಂಪರೆಗಳ ಸಮಾಜದೊಂದಿಗಿನ ಸಂಬಂಧಗಳನ್ನೇ ಗಮನಿಸೋಣ. ಬರೆಹ, ಅಕ್ಷರ ಆ ಮೂಲಕ ಜ್ಞಾನವಿತರಣೆ, ತಿಳುವಳಿಕೆ ಅಂಶಗಳ ಆವಿಷ್ಕಾರವಾಗಿ ಸಹಸ್ರಾರು ವರ್ಷಗಳೇ ಆಗಿದ್ದರೂ ವಾಸ್ತವವಾಗಿ ಎಷ್ಟು ಜನರಿಗೆ ಇದರ ಪ್ರಯೋಜನವಾಗಿದೆ ಮತ್ತು ಇಂದಿಗೂ ಎಷ್ಟು ಜನ ಭಾಷೆಯ ಈ ಪ್ರಾಥಮಿಕ ತಂತ್ರಜ್ಞಾನದಿಂದ ಸಿಗುವ ಲಾಭಗಳಿಂದ ವಂಚಿತರಾಗಿದ್ದಾರೆ ಎಂಬುದನ್ನು ಗಮನಿಸಬೇಕು. ಭಾಷಾತಂತ್ರಜ್ಞಾನವೆನ್ನುವುದು ಇಲ್ಲಿ ಸಾಮಾಜಿಕ ಅಂತರಗಳನ್ನು ನಿರ್ವಹಿಸುವ ಅಸ್ತ್ರವಾಗಿದೆ. ಹಾಗೆಯೇ ಅನೇಕ ಭಾಷೆಗಳು ಬರೆಹ, ಲಿಪಿಯಂತಹ ತಂತ್ರಜ್ಞಾನದ ಕನಿಷ್ಠ ಲಾಭಗಳನ್ನು ಪಡೆಯಲಾಗಿಲ್ಲ. ರಾಜಕೀಯ, ಸಾಮಾಜಿಕ ಒತ್ತಾಸೆಯಿರುವ ಯಜಮಾನ ಭಾಷೆಗಳ ಅನುಕೂಲ ಅಪೇಕ್ಷೆಗಳಿಗೆ ತಕ್ಕಂತೆ ರೂಪುಗೊಳ್ಳುವ ತಂತ್ರಜ್ಞಾನದ ಹುನ್ನಾರಗಳ ಭರಾಟೆಯಲ್ಲಿ ಇಂತಹ ಯಾವ ಒತ್ತಾಸೆಗಳೂ ಇಲ್ಲದ ಭಾಷೆಗಳ ಗತಿ ಏನು ಹಾಗೂ ಆ ಭಾಷಿಕ ಸಮುದಾಯದ ಭವಿಷ್ಯಗಳೇನು ಎನ್ನುವ ಪ್ರಶ್ನೆಗಳೂ ಪ್ರಸ್ತುತವಾಗುತ್ತವೆ. ಯಾಕೆಂದರೆ ತಂತ್ರಜ್ಞಾನ ಹೇರಿಕೆಯ ಭರದಲ್ಲಿ ಬದುಕಿಗೂ ಭಾಷೆಗೂ ಇರುವ ಅನನ್ಯ ಸಂಬಂಧವನ್ನು ನಿರ್ಲಕ್ಷಿಸಿದರೆ ತಂತ್ರಜ್ಞಾನವನ್ನು ಸಾಮಾಜಿಕ ಅಭಿವೃದ್ದಿಯ ಅಸ್ತ್ರವೆಂದು ತಿಳಿದು ರೂಪಿಸುವ ಯೋಜನೆಗಳು ಫಲಪ್ರವಾಗಲಾರವು. ಒಂದು ಉದಾಹರಣೆಯನ್ನು ನೋಡಬಹುದಾದರೆ ಬಹುಸಂಖ್ಯೆಯ ಜನರಾಡುವ ಕನ್ನಡದಂತಹ ಭಾಷೆಗೆ ಕಂಪ್ಯೂಟರ್ ನ ಅಳವಡಿಕೆ ಇಂಗ್ಲಿಶ್ ಮುಖಾಂತರ ಮಾತ್ರವಾಗಬೇಕು. ಕನ್ನಡವನ್ನೂ ತಂತ್ರಜ್ಞಾನದ ವ್ಯಾಪ್ತಿಗೆ ತಂದು ಅದರ ಗರಿಷ್ಠ ಲಾಭಗಳನ್ನು ಪಡೆಯುತ್ತಿದ್ದೇವೆಂದರೂ ಕನ್ನಡದ್ದೇ ಕೀಬೋರ್ಡ್ ಯಾಕೆ ಸಿದ್ಧಗೊಂಡಿಲ್ಲ? ಇದನ್ನು ತಂತ್ರಜ್ಞಾನದ ಮಿತಿ ಎಂದು ಭಾವಿಸಬೇಕಿಲ್ಲ. ಈ ಮೊದಲೇ ಹೇಳಿದಂತೆ ತಂತ್ರಜ್ಞಾನ ಕನ್ನಡ ಸಮಾಜದೊಡನೆ ರೂಪುಗೊಳ್ಳದೆ ತನ್ನಷ್ಟಕ್ಕೆ ತಾನೇ ರೂಪುಗೊಂಡು ‘ನಾನು ಈ ಸಿದ್ಧತೆಯಲ್ಲಿದ್ದೇನೆ ಬೇಕಿದ್ದರೆ ಕನ್ನಡಕ್ಕೂ ಅಳವಡಿಸಿಕೊಳ್ಳಬಹುದು’ ಎನ್ನುವ ಸ್ಥಿತಿ ನಿರ್ಮಿಸಲಾಗಿದೆ. ಕನ್ನಡಿಗರು ಅನಿವಾರ್ಯವಾಗಿ ಇದನ್ನು ಒಪ್ಪಬೇಕಾಗಿದೆ.

ಅಕಸ್ಮಾತ್ ಯಾವತ್ತೋ ಒಂದು ದಿನ ಇಂತಹ ಕನ್ನಡದ ಮೂಲಕವೇ ಕಂಪ್ಯೂಟರ್ ತಂತ್ರಜ್ಞಾನ ಲಭ್ಯವಾದರೂ ಅಲ್ಲಿಯವರೆಗೆ ಇಂಗ್ಲಿಶ್‌ಗಾಗಿ ರೂಪಿಸಿದ ತಂತ್ರಜ್ಞಾನವನ್ನು ಅವಲಂಬಿಸಿದ ಕನ್ನಡದ ಸ್ಥಿತಿ ಏನು? ಇದರ ಪರಿಣಾಮಗಳು ಈಗಾಗಲೇ ಸಾಮಾಜಿಕವಾಗಿ ಕಾಣಿಸಿಕೊಳ್ಳುತ್ತಿವೆ. ಈಗ ಗ್ರಾಮಾಂತರ ಪ್ರದೇಶಗಳಲ್ಲೂ ಇಂಗ್ಲಿಶ್ ಕಾನ್ವೆಂಟ್‌ಗಳು ಹುಟ್ಟುತ್ತಿರಲು ಕಾರಣ ಕೇವಲ ಜನರ ಇಂಗ್ಲಿಶ್ ಪ್ರೀತಿಯಾಗಲಿ, ಕನ್ನಡದೆಡೆಗಿನ ನಿರ್ಲಕ್ಷ್ಯವಾಗಲಿ ಅಲ್ಲ. ಇಂಗ್ಲಿಶ್ ಕಲಿಯದಿದ್ದರೆ ಕಂಪ್ಯೂಟರ್ ಬರಲ್ಲ, ಕಂಪ್ಯೂಟರ್ ಗೊತ್ತಿಲ್ಲದಿದ್ರೆ ಕೆಲಸ ಸಿಗಲ್ಲ ಬದುಕುವುದಕ್ಕಾಗುವುದಿಲ್ಲ ಎಂಬ ಭವಿಷ್ಯದ ಕುರಿತು ಇರುವ ಪ್ರಶ್ನೆಯೂ ಒಂದು ಕಾರಣ.

ಭಾಷಾತಂತ್ರಜ್ಞಾನದ ಸಾಮಾಜಿಕ ಪರಿಣಾಮಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನಿತ್ಯವೂ ಭಾಷೆಯ ಮುಖಾಂತರ ವ್ಯಕ್ತವಾಗುತ್ತಿದ್ದ ಸಾಮಾಜಿಕ ಸಂಬಂಧಗಳೂ ನೆಲೆ ಕಳೆದುಕೊಳ್ಳುತ್ತಿವೆ.

ಉದಾಹರಣೆಗೆ ಬರೆಹದ ತಂತ್ರಜ್ಞಾನ ಜಾರಿಯಲ್ಲಿದ್ದಾಗ, ಪತ್ರಗಳಲ್ಲಿ ಕಾಣಿಸುತ್ತಿದ್ದ ತೀ.ಸ.ಮಹಾರಾಜಶ್ರೀ, ತೀರ್ಥರೂಪ, ಪ್ರಿಯಮಿತ್ರ, ಚಿ., ಇಂತಿ, ಆಶೀರ್ವಾದ, ನಮಸ್ಕಾರ ಇತ್ಯಾದಿಗಳು ಸ್ಥಾನ ಕಳೆದುಕೊಂಡು ಹಲೊ, ಬಾಯ್, ಇಡ್ಲಾಗಳು ಮಾತ್ರ ನಿರ್ವಹಣೆಯಾಗುತ್ತಿವೆ. ಇನ್ನು ಎಸ್.ಎಂ.ಎಸ್.ಗಳಲ್ಲಿಯ ಸಂವಹನ ಮಾದರಿಗಳೇ ಬೇರೆ. ಹಾಗೆಯೇ ಕಲೆ, ಸೃಜನಶೀಲ ಕ್ಷೇತ್ರಗಳ ಮೇಲೆಯೂ ಭಾಷಾ ತಂತ್ರಜ್ಞಾನದ ಅಳವಡಿಕೆಯ ಮಿತಿಯಿಲ್ಲದ ಅಳವಡಿಕೆ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ಹೇಳುವುದು ಕಷ್ಟ. ಒಂದು ಚಿಕ್ಕ ಉದಾಹರಣೆಗೆ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾನ್ ಸ್ಟಾಪ್ ಆಲಾಪನೆ ಅಥವಾ ದೀರ್ಘವಾಗಿ ಉಸಿರು ಹಿಡಿದು ರಾಗ ಎಳೆಯುವುದು ಕಲೆ, ಪ್ರತಿಭೆ, ಸೃಜನಶೀಲತೆಯ ಸಾಮರ್ಥ್ಯದ ಪ್ರತೀಕವಾಗಿತ್ತು. ಒಮ್ಮೆ ಎಸ್ .ಪಿ.ಬಾಲಸುಬ್ರಮಣ್ಯಂ ಅವರೇ ಸಂದರ್ಶನದಲ್ಲಿ ಒಪ್ಪಿಕೊಂಡಂತೆ ಆಧುನಿಕ ತಂತ್ರಜ್ಞಾನ ಇಂತಹ ದೀರ್ಘ ಆಲಾಪನೆ, ಗಾಯನ ವೈವಿಧ್ಯತೆಗಳಿಗೆ ಗಾಯಕರು ಕಷ್ಟಪಡದೆ ತಾಂತ್ರಿಕವಾಗಿಯೇ ಅದನ್ನು ನಿರ್ವಹಿಸುವುದು ಸುಲಭ ಮತ್ತು ಈಗ ಇರುವ ಕ್ರಮವೂ ಅದೇ ಎನ್ನುತ್ತಾರೆ. ಅಂದರೆ ಮುಂದೊಂದು ದಿನ ಸಂಗೀತ, ಗಾಯನವೆನ್ನುವ ಕಲೆಯನ್ನು ತಂತ್ರಜ್ಞಾನದ ಸುಪರ್ದಿಗೆ ಪೂರ್ಣ ಒಪ್ಪಿಸಿಬಿಡಬಹುದು. ಇಲ್ಲಿ ನಾನು ತಂತ್ರಜ್ಞಾನದ ಅವಶ್ಯಕತೆಯನ್ನು ನಿರಾಕರಿಸುತ್ತಿಲ್ಲ. ಧ್ವನಿವರ್ಧನೆಗೆ ಡಿ.ಟಿ.ಎಸ್., ಎಪೆಕ್ಟ್ ಗೆ, ಸರೌಂಡ್ ಸೌಂಡ್ ಎಫೆಕ್ಟ್‌ಗಳಿಗೆ ಬಳಸಿದರೆ ಅದು ಉಪಯುಕ್ತ ನಿಜ. ಆದರೆ ಸಂಗೀತವನ್ನೇ ಯಂತ್ರಗಳು ನಿರ್ವಹಿಸುವುದರ ಸಾಮಾಜಿಕ ಪರಿಣಾಮಗಳನ್ನು ಊಹಿಸುವುದೂ ಕಷ್ಟ. ಈ ನನ್ನ ಟಿಪ್ಪಣಿಯಲ್ಲಿ ನಾನು ಮುಖ್ಯವಾಗಿ ಹೇಳಬೇಕೆಂದಿರುವ ವಿಷಯ ಅಥವಾ ಸಮಸ್ಯೆಯೆಂದರೆ ಭಾಷಾತಂತ್ರಜ್ಞಾನವೆನ್ನುವುದು ನಮ್ಮ ಅಗತ್ಯಗಳನ್ನು ಪೂರೈಸಬೇಕೇ ಹೊರತು ತಂತ್ರಜ್ಞಾನದ ಅಗತ್ಯಗಳಿಗೆ ನಮ್ಮನ್ನು ಹೊಂದಿಕೊಳ್ಳುವುದು ಸೂಕ್ತವಾಗಲಾರದು ಎಂಬುದು. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ ಭಾಷೆಗಾಗಿ ತಂತ್ರಜ್ಞಾನವೋ ತಂತ್ರಜ್ಞಾನಕ್ಕಾಗಿ ಭಾಷೆಯೋ?