೧. ಭಾಷೆ ಮತ್ತು ತಂತ್ರಜ್ಞಾನದ ಕುರಿತಂತೆ ಗಂಭೀರವಾದ ಚರ್ಚೆಗಳು ಮತ್ತೊಮ್ಮೆ ಆರಂಭಗೊಂಡಿವೆ. ಈ ಮತ್ತೊಮ್ಮೆ ಎಂದು ಹೇಳುವುದಕ್ಕೆ ಒಂದು ಕಾರಣವಿದೆ. ಮೂರು ದಶಕಗಳ ಹಿಂದೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಇಂಥದ್ದೇ ಒಂದು ಚರ್ಚೆಯನ್ನು ಕನ್ನಡ ಸಾರಸ್ವತ ಲೋಕ ನಡೆಸಿತ್ತು. ಕನ್ನಡ ವಿಜ್ಞಾನದ ಭಾಷೆಯೂ ಆಗಬೇಕೆಂಬ ಗಂಭೀರ ಪ್ರಯತ್ನ ನಡೆದಿತ್ತು. ಉನ್ನತ ಶಿಕ್ಷಣದ ಮಟ್ಟಕ್ಕೂ ಸಲ್ಲುವ ವಿಜ್ಙಾನ ಪಠ್ಯಗಳನ್ನು ಕನ್ನಡದಲ್ಲಿಯೇ ರಚಿಸಲಾಗಿತ್ತು. ಈ ಪುಸ್ತಕಗಳು ಏನಾಗಿವೆ? ಕನ್ನಡ ಎಷ್ಟರ ಮಟ್ಟಿಗೆ ವಿಜ್ಞಾನದ ಭಾಷೆಯಾಯಿತು? ಎಂಬ ಪ್ರಶ್ನೆಗಳು ಮಾತ್ರ ಇನ್ನೂ ಉಳಿದುಕೊಂಡಿವೆ.

೨. ಕನ್ನಡವನ್ನು ವಿಜ್ಞಾನದ ಭಾಷೆಯನ್ನಾಗಿಸುವ ಪ್ರಯತ್ನದಲ್ಲಿ ಮಾಡಿದ ತಪ್ಪನ್ನೇ ಕನ್ನಡವನ್ನು ತಂತ್ರಜ್ಞಾನದ ಭಾಷೆಯನ್ನಾಗಿಸುವ ಕ್ರಿಯೆಯಲ್ಲಿಯೂ ಮಾಡುತ್ತಿದ್ದೇವೆಯೇ ಎಂದು ಅನುಮಾನ ನನ್ನದು.

೩. ಮುದ್ರಣ ತಂತ್ರಜ್ಞಾನ ೫೦ ಲಕ್ಷಮಂದಿಯನ್ನು ತಲುಪುವುದಕ್ಕೆ ಒಂದು ಶತಮಾನ ಬೇಕಾಯಿತು. ರೇಡಿಯೋ ೫೦ ಲಕ್ಷ ಮಂದಿಯನ್ನು ತಲುಪಲು ೩೮ ವರ್ಷಗಳು ತಗುಲಿದವು. ಟಿ.ವಿ.ಯ ಜನಪ್ರಿಯತೆ ಈ ಮಟ್ಟಕ್ಕೆ ಏರಲು ೧೩ ವರ್ಷಗಳು ಬೇಕಾದವು. ಇಂಟರ್ನೆಟ್ ೫೦ ಲಕ್ಷಮಂದಿಗೆ ತಲುಪಲು ತೆಗೆದುಕೊಂಡಿದ್ದು ಕೇವಲ ನಾಲ್ಕು ವರ್ಷಗಳು! ಈ ಅಸಾಧ್ಯವೇಗದಲ್ಲಿ ಬೆಳೆಯುತ್ತಿರುವ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ)ಗಳ ಭಾಷೆಯಾಗಿ ಕನ್ನಡ ಬೆಳೆಯಬೇಕು ಎಂದು ಆಶಯದೊಂದಿಗೆ ಹಲವು ಪ್ರಯತ್ನಗಳು, ಚರ್ಚೆಗಳು ಚಾಲನೆಯಲ್ಲಿವೆ. ಈ ಚರ್ಚೆಗಳ ಅತಿದೊಡ್ಡ ಮಿತಿ ಎಂದರೆ ಪರಿಕಲ್ಪನಾತ್ಮಕ ಸ್ಪಷ್ಟತೆಯ (ಕಾನ್ಸೆಪ್ಚುಯಲ್ ಕ್ಲಾರಿಟಿ)ಯ ಕೊರತೆ. ಈ ಕೊರತೆ ಹಿಂದೆ ಕನ್ನಡವನ್ನು ವಿಜ್ಞಾನದ ಭಾಷೆಯಾಗಿಸುವ ಪ್ರಯತ್ನದಲ್ಲಿಯೂ ಇತ್ತು.

೩. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡಕ್ಕೆ ಸಂಬಂಧಿಸಿದ ಈಗಿನ ಚರ್ಚೆಗಳು ‘ಮಾಹಿತಿ ತಂತ್ರಜ್ಞಾನ’ ಅಥವಾ ‘ಕಂಪ್ಯೂಟರ್ ತಂತ್ರಜ್ಞಾನವೇ’ವೇ ಇಂಗ್ಲಿಶ್ ಎಂಬ ಪೂರ್ವಗ್ರಹಿಕೆಯೊಂದಿಗೆ ಆರಂಭಗೊಂಡು ತಂತ್ರಜ್ಞಾನವನ್ನು ಕನ್ನಡಕ್ಕೆ ಅಳವಡಿಸಬೇಕಿದೆ ಎಂಬಲ್ಲಿಗೆ ಕೊನೆಗೊಳ್ಳುತ್ತವೆ.

೪. ವಾಸ್ತವದಲ್ಲಿ ಕಂಪ್ಯೂಟರ್ ತಂತ್ರಜ್ಞಾನವೆಂಬುದು ಇಂಗ್ಲಿಶ್ ಅಲ್ಲ. ಅಥವಾ ಈ ತಂತ್ರಜ್ಞಾನ ಯಾವ ಭಾಷೆಯದ್ದೂ ಅಲ್ಲ. ಆದರೆ ಕಂಪ್ಯೂಟರ್ ತಯಾರಿಸುವವರು, ಅದಕ್ಕೆ ಅವಶ್ಯವಿರುವ ಸಾಫ್ಟ್ ವೇರ್ ಬರೆಯುವವರು. ಅದನ್ನು ಬಳಸುವವರಲ್ಲಿ ಹೆಚ್ಚಿನವರು ಇಂಗ್ಲಿಶ್ ಬಳಸುತ್ತಾರೆ. ಈ ಕಾರಣದಿಂದಾಗಿ ಕಂಪ್ಯೂಟರ್ ತಂತ್ರಜ್ಞಾನ ಎಂಬುದೇ ಇಂಗ್ಲಿಶ್ ನದ್ದು ಎಂಬ ಭಾವನೆ ಬಂದಿದೆ. ಹಾಗಾಗಿ ಈ ತಂತ್ರಜ್ಞಾನವನ್ನು ಕನ್ನಡದ ಸಂದರ್ಭದಲ್ಲಿ ಗ್ರಹಿಸುವ ಕ್ರಿಯೆ ಪ್ರತಿಕ್ರಿಯಾತ್ಮಕವಾಗಿ ಅಂದರೆ ಇಂಗ್ಲಿಶ್ ಗೆ ಕನ್ನಡದ ಪ್ರತಿಕ್ರಿಯೆ ಎಂಬಂತೆ ರೂಪುಗೊಳ್ಳುತ್ತಿದೆ. ಇದನ್ನೇ ನಾನು ವಿಜ್ಞಾನದ ಗ್ರಹಿಕೆಯಲ್ಲಿ ಮಾಡಿದ ತಪ್ಪು ಎಂದದ್ದು.

೫. ಇಷ್ಟಕ್ಕೂ ನಾವು ‘ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ’ ಎಂಬ ವಿಷಯಕ್ಕೇಕೆ ಇಷ್ಟೊಂದು ಮಹತ್ವ ಕೊಡುತ್ತಿದ್ದೇವೆ? ಈ ಮೊದಲು ನಮಗೆ ಬಹಳಷ್ಟು ತಂತ್ರಜ್ಞಾನಗಳು ಪಶ್ಚಿಮದಿಂದಲೇ ಬಂದವು. ವಿದ್ಯುತ್ , ನೀರಾವರಿ ಪಂಪ್ ಸೆಟ್, ಮೋಟಾರು ವಾಹನಗಳು, ರೈಲು ಹೀಗೆ ಪಟ್ಟಿ ಮಾಡಿದಷ್ಟೂ ಇದು ಬೆಳೆಯುತ್ತದೆ. ಈ ಸಂದರ್ಭಗಳಲ್ಲಿ ನಾವು ಕನ್ನಡದ ಪಾತ್ರವನ್ನು ಕುರಿತು ಚರ್ಚಿಸಿದ್ದೇವೆಯೇ?

ಉದಾಹರಣೆಗೆ ಎಲೆಕ್ಟ್ರಿಕ್ ಸ್ವಿಚ್ ಒಂದರ ಮೇಲೆ ಇರುವ on ಮತ್ತು offಗಳನ್ನು ಕನ್ನಡಕ್ಕೆ ಅನುವಾದಿಸಿ ಮುದ್ರಿಸಬೇಕು ಎಂದು ವಾದಿಸಿದ್ದೇವೆಯೇ?

ಈ ಪ್ರಶ್ನೆಗೆ ಇಲ್ಲ ಎಂಬ ಉತ್ತರವನ್ನು ಬಹಳ ಸುಲಭವಾಗಿ ಕೊಡಬಹುದು. ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ನಮ್ಮ ಮನೆ, ಕಚೇರಿ ಹೀಗೆ ಬೇಕೆಂದೆಡೆ ಅಳವಡಿಸಿಕೊಡುವ ‘ತಂತ್ರಜ್ಞ’ರು ಅಥವಾ ಕುಶಲಕರ್ಮಿಗಳೂ ಇಂಗ್ಲಿಶ್ ಕಲಿಯದೆಯೇ ಇದನ್ನೆಲ್ಲಾ ಮಾಡುತ್ತಿಲ್ಲವೇ? ಮೋಟಾರ್ ಸೈಕಲ್ ನ ಬಿಡಿಭಾಗಗಳ್ಯಾವುದಕ್ಖೂ ಕನ್ನಡ ಪದಗಳಿಲ್ಲ. ಅದರೆ ಕನ್ನಡ ಮಾತ್ರ ಬಲ್ಲ ಅಥವಾ ಅನಕ್ಷರಸ್ಥ ಮೆಕಾನಿಕ್ ಕೂಡಾ ಮೋಟಾರ್ ಸೈಕಲನ್ನು ರಿಪೇರಿ ಮಾಡುತ್ತಾನೆ. ಹಾಗೆಯೇ ಅನಕ್ಷರಸ್ಥನೊಬ್ಬ ಇವುಗಳನ್ನೆಲ್ಲಾ ಯಶಸ್ವಿಯಾಗಿ ಬಳಸುತ್ತಾನಲ್ಲವೇ?

೭. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಇದು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ತಂತ್ರಜ್ಞಾನ ಎಲೆಕ್ಟ್ರಿಕ್ ಸ್ವಿಚ್ ಅಥವಾ ಮೋಟಾರ್ ಸೈಕಲ್ ನಂತೆ ಸ್ಟಾಟಿಕ್ ತಂತ್ರಜ್ಞಾನ ಅಲ್ಲ. ಇದು ಮಲ್ಟಿಫಂಕ್ಷನಾಲಿಟಿ ಇರುವ ಒಂದು ತಂತ್ರಜ್ಞಾನ. ಈ ಕಾರಣದಿಂದಾಗಿ ಇಲ್ಲಿ ಭಾಷೆಯೂ ಒಂದು ಮುಖ್ಯ ವಿಷಯವಾಗುತ್ತಿದೆ.

೮. ಮೂಲಭೂತವಾಗಿ ಮಾಹಿತಿ ತಂತ್ರಜ್ಞಾನ ಎಂಬುದು ದತ್ತಾಂಶಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ಸಂವಹಿಸುವ ತಂತ್ರಜ್ಞಾನ. ಯಂತ್ರದೊಳಗೆ ನಡೆಯುವ ಸಂಸ್ಕರಣಾ ಪ್ರಕ್ರಿಯೆಗೆ ಅವಶ್ಯವಿರುವ ದತ್ತಾಂಶವನ್ನು ಊಡಿಸುವ ಕ್ರಿಯೆಗೆ ಮತ್ತು ಸಂಸ್ಕರಿತ ದತ್ತಾಂಶವನ್ನು ಅವಶ್ಯವಿರುವರಿಗೆ ತಲುಪಿಸುವ ಕ್ರಿಯೆಯಲ್ಲಿ ಭಾಷೆಯ ಪಾತ್ರ ದೊಡ್ಡದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಇಲ್ಲಿ ಕನ್ನಡ ಭಾಷೆ ಬಳಕೆಯಾಗುತ್ತಿಲ್ಲವೇ? ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಭಾಷೆಗೆ ಸಂಬಂಧಿಸಿದಂತೆ ನಮಗಿರುವ ಸಮಸ್ಯೆ ಯಾವುದು?

ಅ. ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಕನ್ನಡ ಬಳಕೆ ಸಾಧ್ಯವಾಗಬೇಕೆ?

ಆ. ಯೂಸರ್ ಇಂಟರ್‌ಫೇಸ್ ಕನ್ನಡದ್ದಾದರೆ ಸಾಕೆ?

ಇ. ಇಂಟರ್ನೆಟ್‌ನಲ್ಲಿ ದೊರೆಯುವ ಮಾಹಿತಿ ಕನ್ನಡದಲ್ಲಿ ಇರಬೇಕೆ?

ಈ. ಕನ್ನಡ ಭಾಷೆಯ ಅಕ್ಷರಗಳನ್ನೇ ಬಳಸಿ ಪ್ರೋಗ್ರಾಮಿಂಗ್ ಸಾಧ್ಯವಾಗಬೇಕೆ?

ಈ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ಹುಡುಕೋಣ.

ಅ. ಯೂನಿಕೋಡ್ ನಿಧಾನವಾಗಿ ವ್ಯಾಪಕವಾಗುತ್ತಿದೆ. ಹಾಗಾಗಿ ಒಂದು ಸಾಫ್ಟ್ ವೇರ್‌ನ ಕನ್ನಡ ಮತ್ತೊಂದು ಸಾಫ್ಟ್‌ವೇರ್‌ಗೆ ಅರ್ಥವಾಗುವುದಿಲ್ಲ ಎಂಬ ಪರಿಸ್ಥಿತಿ ದೂರವಾಗಲಿದೆ. ವಿವಿಧ ಅಪ್ಲಿಕೇಶನ್‌ಗಳಲ್ಲಿ ಈಗಾಗಲೇ ಕನ್ನಡ ಬಳಕೆ ಸಾಧ್ಯ.

ಆ. ಯೂಸರ್ ಇಂಟರ್‌ಫೇಸನ್ನು ಕನ್ನಡಕ್ಕೆ ತರಲಾಗಿದೆ.

ಇ. ಇಂಟರ್ನೆಟ್‌ನಲ್ಲಿ ಕನ್ನಡದಲ್ಲೂ ಮಾಹಿತಿ ದೊರೆಯುತ್ತಿದೆ. ಕನ್ನಡ ಪತ್ರಿಕೆಗಳೆಲ್ಲವೂ ಈಗ ವಿಶ್ವಸಂಚಿಕೆಗಳನ್ನು ಹೊಂದಿವೆ.

ಈ. ಇದುವರೆಗೂ ಯಾರೂ ಮಾಡಿಲ್ಲ. ತಂತ್ರಜ್ಞರು ಪ್ರಯತ್ನ ಪಟ್ಟರೆ ಇದೂ ಸಾಧ್ಯವಾಗಬಹುದು.

೯. ಅಂದರೆ ನಾವು ಸಮಸ್ಯೆಗಳು ಅಂದುಕೊಳ್ಳುತ್ತಿರುವುದೆಲ್ಲಾ ತಾಂತ್ರಿಕ ಮಟ್ಟದವು. ಇವುಗಳನ್ನು ಬರೆಹರಿಸುವುದು ಸುಲಭ. ಇನ್ನು ಇಂಗ್ಲಿಶ್‌ನ ಯಾಜಮಾನ್ಯದ ಪ್ರಶ್ನೆ. ಇದು ಕೇವಲ ಕನ್ನಡದ ಸಮಸ್ಯೆ ಮಾತ್ರ ಅಲ್ಲ. ಈ ಸಮಸ್ಯೆಯನ್ನು ಇತರ ಭಾಷೆಗಳು ಎದುರಿಸುತ್ತಿವೆ. ಕಳೆದ ಒಂದು ತಿಂಗಳಿನಿಂದ ಗೂಗ್ಲ್ ಲೈಬ್ರರಿಗೆ ಸಂಬಂಧಿಸಿದಂತೆ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ವಿವಾದ ಇದಕ್ಕೆ ಅತ್ಯುತ್ತಮ ಉದಾಹರಣೆ. ಫ್ರೆಂಚ್, ಸ್ಪ್ಯಾನಿಶ್ ನಂಥ ಪ್ರಬಲ ಭಾಷೆಗಳೇ ಈ ತೊಂದರೆಗೆ ಒಳಗಾಗಿವೆ. ಈ ಸಮಸ್ಯೆಗೆ ಇನ್ನೂ ಹಲವಾರು ಮುಖಗಳಿವೆ. ಇದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಆಯಾಮಗಳಿರುವ ಬಹುದೊಡ್ಡ ಪ್ರಶ್ನೆ.