ಒಂದು ದಶಕದಿಂದ ಭಾರತದಲ್ಲಿ ಕಂಪ್ಯೂಟರ್ ಬಳಕೆ ವ್ಯಾಪಕವಾಗಿ ಆಗುತ್ತಿದೆ. ಮಾಹಿತಿ ತಂತ್ರಜ್ಞಾನದ ಮೂಲಭೂತ ಯಂತ್ರವಾದ ಕಂಪ್ಯೂಟರ್ ಉಪಕರಣವು ಕೊಡುವ ವೇಗದ ಸೇವೆ. ಮಾನವನ ಪರಿಶ್ರಮ ಮತ್ತು ಸಮಯವನ್ನು ಉಳಿಸುತ್ತಿದೆ. ಕಂಪ್ಯೂಟರ್‌ಗಳ ಬಳಕೆ ಕಛೇರಿ ಬ್ಯಾಂಕ್‌ಗಳಿಂದ ಹಿಡಿದು ನಾನಾ ರೀತಿಯ ಉದ್ಯೋಗವಲಯದಲ್ಲಿ ಮಾಹಿತಿ ಬಳಕೆ, ಸಂಗ್ರಹ, ವಿಶ್ಲೇಷಣೆ ಮತ್ತು ಸಂಸ್ಕೃರಣೆಗೆ ಉಪಯೋಗವಾಗುತ್ತಿದೆ. ಕಂಪ್ಯೂಟರ್ ಬಳಸುವುದಕ್ಕೆ ಉಪಯೋಗಿಸುವ ಸಾಫ್ಟ್‌ವೇರ್ಗಳು ಇಂಗ್ಲಿಶ್ ಭಾಷೆಯಲ್ಲಿದ್ದು, ಇಂಗ್ಲಿಶ್‌ನಲ್ಲಿಯೇ ವ್ಯವಹರಿಸಬೇಕಾಗಿದ್ದುದು ಅನಿವಾರ್ಯವಾಗಿದೆ. ಕಂಪ್ಯೂಟರ್ ಬಳಸುವ ಉದ್ಯೋಗಿಗಳಿಗೆ ಇಂಗ್ಲಿಶ್ ತಿಳುವಳಿಕೆ ಅಗತ್ಯವಾಗಿದೆ. ಇಂಗ್ಲಿಶ್ ಜ್ಞಾನ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ.

ಭಾರತವು ಮಾಹಿತಿ ಜ್ಞಾನದಲ್ಲಿ ಎಷ್ಟೇ ಪ್ರಗತಿ ಸಾಧಿಸಿದ್ದರೂ ಭಾರತದ ಜನಸಂಖ್ಯೆಗೆ ಕಂಪ್ಯೂಟರ್ ಬಳಸುವವರ ಸಂಖ್ಯೆ ಬಹಳ ಕಡಿಮೆ. ಇದಕ್ಕೆ ಕಾರಣ ಭಾರತವು ವೈವಿಧ್ಯಮಯ ಸಂಸ್ಕೃತಿ ಭಾಷೆಗಳನ್ನು ಹೊಂದಿದ ದೇಶವಾಗಿದೆ. ಕಂಪ್ಯೂಟರ್ ಬಳಕೆಯಲ್ಲಿ ಆಂಗ್ಲಭಾಷೆ ಬಿಟ್ಟು ಬೇರೆ ಭಾಷೆಗೆ ಅವಕಾಶವಿಲ್ಲದ ಕಾರಣ ವ್ಯಾಪಕ ಬಳಕೆ ಆಗುತ್ತಿಲ್ಲ. ಈಗಿನ ಸಾಫ್ಟ್‌ವೇರ್‌ಗಳಲ್ಲಿ(ತಂತ್ರಾಂಶ) ಭಾಷೆಗಳ ಲಿಪಿ ಬೆರಳಚ್ಚು (Typing) ಮತ್ತು ಮುದ್ರಣ (Printing)ಕ್ಕೆ ಮಾತ್ರ ಅವಕಾಶವಿದ್ದು, ಸಾಫ್ಟ್‌ವೇರ್ ನಿರ್ವಹಣೆ ಇಂಗ್ಲಿಶ್‌ನಲ್ಲಿಯೆ ಇದೆ.

ಹಲವಾರು ಭಾಷೆಗಳನ್ನು ಹೊಂದಿರುವ ಭಾರತದ ಪ್ರಜೆಗಳಿಗೆ ತಮ್ಮ ಭಾಷೆಯಲ್ಲಿ ಕಂಪ್ಯೂಟರ್ ಬಳಸಲು ಇರುವ ಪ್ರಮುಖ ಅಡ್ಡಿಯೆಂದರೆ, ಪ್ರಾದೇಶಿಕ ಭಾಷೆಗಳಲ್ಲಿ ಸಾಫ್ಟ್‌ವೇರ್ ಲಭ್ಯವಿಲ್ಲದಿರುವುದು. ಅನೇಕ ರಾಜ್ಯಗಳ ಭಾಷಿಕರ ಜನಸಂಖ್ಯೆ ಆಯಾ ಪ್ರದೇಶಕ್ಕೆ ಸೀಮಿತವಾಗಿರುವುದು, ಮಾರುಕಟ್ಟೆ ದೃಷ್ಟಿಯಿಂದ ಲಾಭದಾಯಕವಲ್ಲದಿರು ವುದರಿಂದ ಖಾಸಗಿ ಕಂಪನಿಗಳು ಹಣ ಹೂಡಿ ಸಾಫ್ಟ್‌ವೇರ್ ತಯಾರಿಸಲು ಆಸಕ್ತಿ ವಹಿಸದೇ ಇರುವುದು ಕಾರಣವಾಗಿದೆ.

ಭಾರತದಲ್ಲಿ ಜನರು ತಮ್ಮ ವ್ಯಾಪಾರ, ವಹಿವಾಟು, ಸಂಪರ್ಕ, ಶಿಕ್ಷಣ, ಕಛೇರಿ ಕೆಲಸಗಳು ಇತ್ಯಾದಿಗಳಿಗೆ ಕಂಪ್ಯೂಟರ್ ಅವಲಂಬಿಸುವ ಬಗ್ಗೆ ಆಸಕ್ತಿ ಬೆಳೆಯದಿರುವುದು, ಇಂಟರ್ ನೆಟ್ ಬಳಕೆಯ ಬಗ್ಗೆ ಹೆಚ್ಚಿನ ತಿಳುವಳಿಕೆ ಕಾಣಬರದಿರುವುದು ಕಾರಣಗಳಾಗಿವೆ. ನಮ್ಮ ದೇಶದ ನಾಗರಿಕರ ಆರ್ಥಿಕ ಪರಿಸ್ಥಿತಿಯು ಕಂಪ್ಯೂಟರ್‌ಗಳನ್ನು ಕೈಗೆಟುಕುವ ಮಟ್ಟಿಗೆ ಕೊಳ್ಳಲು ಅನುಕೂಲವಾಗಿಲ್ಲದಿರುವುದು ಪ್ರಮುಖ ಕಾರಣವಾಗಿದೆ.

ಹೀಗೆ ಭಾಷೆ ಆಧಾರಿತ ಕಂಪ್ಯೂಟರ್ ಬಳಕೆ ಬಗ್ಗೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋದರೆ ಕೊನೆ ಕಾಣದು. ಭಾರತೀಯ ಭಾಷೆಗಳಲ್ಲಿ ಕಂಪ್ಯೂಟರ್ ಬಳಕೆ ಮಾಡುವ ಸಾಫ್ಟ್‌ವೇರ್ ಸಿಗದೇ ಇರುವುದು ಮೂಲಭೂತ ಕಾರಣವಾಗಿದೆ. ಇದನ್ನು ಪರಿಹರಿಸದೆ ಕಂಪ್ಯೂಟರ್ ಜನಬಳಕೆ ಹೆಚ್ಚಿಸುವುದು ಸಾಧ್ಯವಾಗದ ಮಾತು. ಪ್ರಸಕ್ತ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಭಾರತೀಯ ಭಾಷೆಗಳ ಲಿಪಿ ಮುದ್ರಣ ಸೌಲಭ್ಯವಿರುವ ತಂತ್ರಾಂಶಗಳಲ್ಲಿ ಸಿ-ಡ್ಯಾಕ್ ಸಂಸ್ಥೆಯ ಜಿಸ್ಟ್ ತಂತ್ರಾಂಶ ಮತ್ತು ಖಾಸಗಿ ಕಂಪನಿಯ ಶ್ರೀಲಿಪಿ ಇನ್ನೂ ಮುಂತಾದುವು ವಾಣಿಜ್ಯ ಉದ್ದೇಶಕ್ಕಾಗಿ ಲಭ್ಯವಿದ್ದು ಅವುಗಳಿಗೆ ದುಬಾರಿ ವೆಚ್ಚ ತಗುಲುವುದು.

ಕನ್ನಡ ಭಾಷೆಯಲ್ಲಿ ಬರಹ ಮತ್ತು ನುಡಿ ಎನ್ನುವ ತಂತ್ರಾಂಶಗಳು ಉಚಿತವಾಗಿ ಲಭ್ಯವಿದ್ದು, ಇವುಗಳನ್ನು ಬಳಸಲು ಇಂಗ್ಲಿಶ್ ಭಾಷೆಯಲ್ಲಿರುವ ಆಪರೇಟಿಂಗ್ ಸಿಸ್ಟಂಗಳನ್ನು ಉಪಯೋಗಿಸಬೇಕಾಗಿದೆ.

ಕಂಪ್ಯೂಟರ್ ತಂತ್ರಾಂಶಗಳಲ್ಲಿ ಸಾಮಾನ್ಯವಾಗಿರುವ ಮಾಲಿಕತ್ವ ಹೊಂದಿದ ಲೈಸೆನ್ಸ್ ಆಧಾರಿತ ತಂತ್ರಾಂಶಗಳನ್ನು ಕೊಳ್ಳಲು ಬೆಲೆ ತೆರಬೇಕು. ಬಹುತೇಕ ಎಲ್ಲರೂ ಬಳಸು ತ್ತಿರುವ M.S. ವಿಂಡೋಸ್ ತಂತ್ರಾಂಶವು ಈ ಬಗೆಯದಾಗಿದ್ದು, ಇದಕ್ಕೆ Propietary Software ಮಾಲೀಕತ್ವ ತಂತ್ರಾಂಶವೆಂದು ಕರೆಯುತ್ತಾರೆ. ಇಂತಹ ಸಾಫ್ಟವೇರ್‌ಗಳನ್ನು ನಕಲು ಮಾಡಿ ಬಳಸುವುದು ಅಪರಾಧವಾಗಿದೆ.

ಈಗ ಲಭ್ಯವಿರುವ ಕನ್ನಡ ಲಿಪಿ ತಂತ್ರಾಂಶಗಳು ಲೈಸೆನ್ಸ್ ಆಧಾರಿತವಾಗಿದ್ದು ವೆಚ್ಚ ತಗಲುವುದು. ಬೆರಳಚ್ಚು ಕೀಬೋರ್ಡ್‌ಗಳು ತಂತ್ರಾಂಶದಿಂದ ತಂತ್ರಾಂಶಕ್ಕೆ ಬೇರೆ ಬೇರೆಯಾಗಿವೆ. ವರ್ಷದಿಂದ ವರ್ಷಕ್ಕೆ ಸಾಫ್ಟ್‌ವೇರ್ ಅಭಿವೃದ್ದಿಗೊಂಡ ಬಗ್ಗೆ ಮತ್ತು ಅವುಗಳನ್ನು ಅಳವಡಿಸುವ ಬಗ್ಗೆ ಭರವಸೆ ಇರುವುದಿಲ್ಲ. ಲೈಸನ್ಸ್ ಪದ್ಧತಿಯ ಸಾಫ್ಟ್‌ವೇರ್ ತಯಾರಿಕರಿಗೆ ಹಣಗಳಿಕೆ ಮುಖ್ಯವೇ ಹೊರತು ಬಳಕೆದಾರರಿಗೆ ಅನುಕೂಲವಾಗುವ ಪ್ರಾದೇಶಿಕ ಭಾಷೆಯಲ್ಲಿ ತಯಾರಿಸಿಕೊಡಲು ಸಿದ್ಧರಿಲ್ಲ. ವಿಂಡೋಸ್ XP ಸಾಫ್ಟ್‌ವೇರ್‌ನಲ್ಲಿ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳ ಯುನಿಕೋಡ್ ತಾಂತ್ರಿಕತೆ ಬಳಸಿದ್ದು ಅವುಗಳನ್ನು ಉಪಯೋಗಿಸಲು ಸಾಫ್ಟ್‌ವೇರ್ ತಯಾರಿಸಲು MS ವಿಂಡೋಸ್ ಕಂಪನಿಗೆ ಲೈಸೆನ್ಸ್‌ಗಾಗಿ ಶುಲ್ಕ ತೆರಬೇಕಾಗುವುದು. ಅಲ್ಲದೆ ಇತರೆ Tools ಸಾಫ್ಟ್‌ವೇರ್‌ಗಳನ್ನು ಎರವಲು ಪಡೆಯಲು ಹಣ ಕೊಡಬೇಕಾಗಿರುವುದರಿಂದ ಖಾಸಗಿಯವರು ಈ ಪ್ರಯತ್ನಗಳಿಗೆ ಮುಂದೆ ಬರುತ್ತಿಲ್ಲ. ಲೈಸೆನ್ಸ್ ಪದ್ಧತಿಯಲ್ಲಿ ಸಾಫ್ಟ್‌ವೇರ್ ತಯಾರಿಸಿದಲ್ಲಿ ಕೊಳ್ಳುವವರಿಗೆ ದುಬಾರಿ ವೆಚ್ಚ ತಗಲುವುದು.

MS ವಿಂಡೋಸ್ ಮತ್ತಿತರ ಲೈಸೆನ್ಸ್/ಮಾಲೀಕತ್ವ ಪದ್ಧತಿಯ ತಂತ್ರಾಂಶಗಳ ಬಳಕೆಯಿಂದ ತಂತ್ರಾಂಶಗಳ ಗುಲಾಮಗಿರಿ ಪರಿಣಾಮಗಳನ್ನು ತೊಡೆಯಲು ಕಳೆದ ಇಪ್ಪತ್ತು ವರ್ಷಗಳಿಂದ ತೆರೆದ/ಮುಕ್ತ ತಂತ್ರಾಂಶಗಳನ್ನು ಅಭಿವೃದ್ದಿಪಡಿಸುತ್ತಾ ಬಂದಿದ್ದಾರೆ. ತೆರೆದ/ಮುಕ್ತ ತಂತ್ರಾಂಶಗಳಲ್ಲಿ ಉಚಿತವಾಗಿ ಬಳಸುವ/ಇತರರಿಗೆ ಹಂಚಿಕೊಳ್ಳುವ, ಅಭಿವೃದ್ದಿಪಡಿಸುವ ಹಕ್ಕು ಸ್ವಾತಂತ್ರ್ಯ ಇರುತ್ತದೆ. ಕಳೆದ ವರ್ಷದಿಂದ ಭಾರತದಾದ್ಯಂತ ಭಾರತೀಯ ಭಾಷೆಗಳಲ್ಲಿ ತಂತ್ರಾಂಶ ಅಭಿವೃದ್ದಿಪಡಿಸುವ ಚಟುವಟಿಕೆಗಳು ನಡೆಯುತ್ತಿವೆ. ಈ ಚಟುವಟಿಕೆಗಳಿಗೆ ಆಧಾರ ಜಿಎನ್‌ಯು/ಲಿನಕ್ಸ್ ಎನ್ನುವ ತೆರೆದ/ಮುಕ್ತ ತಂತ್ರಾಂಶ.

ಇದರಿಂದಲೇ ಭಾರತದ ಬಹುಭಾಷಾ ಸಂಸ್ಕೃತಿಗೆ ಬೇಕಾದ ತಾಂತ್ರಕ ಬೆಂಬಲ ಮತ್ತು ಮುಕ್ತ ಬಳಕೆಗೆ ಯಾವುದೇ ಲೈಸನ್ಸ್ ಕಾನೂನು ತೊಡಕುಗಳಿಲ್ಲದ, ಉಚಿತವಾದ, ಸಾಮಾನ್ಯ ಬಳಕೆಯ ಲೈಸೆನ್ಸ್ (GPL) ಅಡಿಯಲ್ಲಿ ತಂತ್ರಾಂಶ ರೂಪಿಸುವುದು ಮುಂತಾದ ಅನುಕೂಲಗಳು ದೊರೆತಿವೆ.

ತೆರೆದ/ಮುಕ್ತ ತಂತ್ರಾಂಶಗಳನ್ನು ಅಭಿವೃದ್ದಿಪಡಿಸಲು ಕಡಿಮೆವೆಚ್ಚ ತಗಲುವುದು. ಕನ್ನಡದಲ್ಲಿ ತಂತ್ರಾಂಶ ತಯಾರಿಸಲು ಕೋಟಿಗಟ್ಟಲೆ ಹಣಹೂಡಬೇಕಾಗಿಲ್ಲ. ಈಗಾಗಲೇ ಭಾರತ ಸರ್ಕಾರದ NCST, -DAC, IIIT ಸಾಫ್ಟ್‌ವೇರ್ ಕೇಂದ್ರಗಳೂ ಅಭಿವೃದ್ದಿ ಪಡಿಸಿದ ಮುಕ್ತ/ತೆರೆದ ತಂತ್ರಾಂಶ ಯೋಜನೆಗಳನ್ನು ಉಪಯೋಗಿಸಿಕೊಳ್ಳಬಹುದು. ಈಗಾಗಲೇ ಲಿನಕ್ಸ್ ನಲ್ಲಿ ಹಿಂದಿ, ಬಾಂಗ್ಲಾ, ತಮಿಳು, ಮರಾಠಿ ಭಾಷೆಗಳಲ್ಲಿ ತಂತ್ರಾಂಶ ರೂಪಿಸಲಾಗಿದೆ.

ಲಿನಕ್ಸ್ ಆಧಾರಿತ ತೆರೆದ/ಮುಕ್ತ ತಂತ್ರಾಂಶದ ಅಡಿಯಲ್ಲಿ ಕನ್ನಡದಲ್ಲಿ ಲಿನಕ್ಸ್ ತಂತ್ರಾಂಶ ತಯಾರಿಸಲು ಬೇಕಾದ ತಾಂತ್ರಿಕ ಬೆಂಬಲ ಮತ್ತು ಕಾರ್ಯಪಡೆಯನ್ನು ರಚಿಸಲು ಮತ್ತು ತಂತ್ರಾಂಶ ಅಭಿವೃದ್ದಿ ಸಂಸ್ಥೆಯನ್ನು ಸ್ಥಾಪಿಸುವ ಅವಶ್ಯಕತೆಯಿದೆ.

ಜಿಎನ್ ಯು/ಲಿನಕ್ಸ್ ತಂತ್ತಾಂಶವು ಜಾಗತಿಕ ಮಟ್ಟದಲ್ಲಿ ಸಾವಿರಾರು ತಂತ್ರಜ್ಞರಿಂದ, ಕಂಪ್ಯೂಟರ್ ತಂತ್ರಜ್ಞಾನದ ಪ್ರತಿ ಬದಲಾವಣೆ, ಅಭಿವೃದ್ದಿಗಳ ಹಂತದಲ್ಲಿ ಕಾಲಕಾಲಕ್ಕೆ ಪರಿಷ್ಕರಣೆಗೊಳಿಸಿ ಬಿಡುಗಡೆಯಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸಂಸ್ಥೆಗಳು ತಮ್ಮದೇ ಆದ ಆವೃತ್ತಿ ಹಂಚಿಕೆಗಳ ರೂಪದಲ್ಲಿ ಲಿನಕ್ಸ್ ತಂತ್ರಾಂಶವನ್ನು ಬಿಡುಗಡೆ ಮಾಡುತ್ತಿವೆ. ಅವುಗಳಲ್ಲಿ ಸುಸೇ ಲಿನಕ್ಸ್, ಮಾಂಡ್ರೇಕ್ ಲಿನಕ್ಸ್ ಮತ್ತು ರೆಡ್ ಹ್ಯಾಟ್ ಲಿನಕ್ಸ್ ಪ್ರಸಿದ್ಧವಾದ ತಂತ್ರಾಂಶಗಳು.

ಇಂದು ಲಿನಕ್ಸ್ ತಂತ್ರಾಂಶವು ಯಾವುದೇ ವೈರಸ್‌ಗಳಿಂದ ತೊಂದರೆಗೊಳಗಾಗದ ಮತ್ತು ಇಂಟರ್ ನೆಟ್ ತಂತ್ರಜ್ಞಾನದಲ್ಲಿ ಅತ್ಯಂತ ಸುರಕ್ಷಿತ ಮಟ್ಟದ ತಂತ್ರಾಂಶವಾಗಿದೆ. ಜಗತ್ತಿನ ಬಹುತೇಕ ಕಂಪನಿಗಳು ತಮ್ಮ ಮಾಹಿತಿ ತಂತ್ರಾಂಶಗಳ ರಕ್ಷಣೆ, ಇಂಟರ್ ನೆಟ್  ಆಧಾರಿತ ಹಣಕಾಸು ಬ್ಯಾಂಕಿಂಗ್, ವಿಮಾ ಕ್ಷೇತ್ರ, ವಾಣಿಜ್ಯ ವಹಿವಾಟುಗಳಿಗೆ ವೈರಸ್ ನಿಂದ ಆಕ್ರಮಣಕ್ಕೊಳಗಾದ ಸುರಕ್ಷಿತ ಮಟ್ಟದ ಲಿನಕ್ಸ್ ತಂತ್ರಾಂಶವನ್ನು ಉಪಯೋಗಿಸುತ್ತಿವೆ.

ಲಿನಕ್ಸ್ ವೈಶಿಷ್ಟ್ಯಗಳಾದ ಲೈಸೆನ್ಸ್ ಶುಲ್ಕ ರಹಿತ ಬಳಕೆಯ ಸ್ವಾತಂತ್ರ್ಯ, ತಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ತಂತ್ರಾಂಶವನ್ನು ಹೊಂದಿಸಿಕೊಳ್ಳುವಿಕೆ, ವೈರಸ್ ಆಕ್ರಮಣ ನಿರೋಧಕ ಸುರಕ್ಷಿತ ಮಟ್ಟ, ಇಂಟರ್‌ನೆಟ್ ಬಳಕೆಗೆ ಲೈಸೆನ್ಸ್ ಮುಕ್ತ ತಂತ್ರಾಂಶಗಳ ಲಭ್ಯತೆ ಮತ್ತು ವಿಶ್ವವ್ಯಾಪಿಯಾಗಿರುವ ಲಿನಕ್ಸ್ ತಂತ್ರಜ್ಞರ ತಾಂತ್ರಿಕ ಬೆಂಬಲದೊಂದಿಗೆ ಲಿನಕ್ಸ್ ತಂತ್ರಾಂಶವು ಸಾಮಾನ್ಯ ಜನಬಳಕೆಯಿಂದ ಹಿಡಿದು ಬ್ಯಾಂಕಿಂಗ್, ವಾಣಿಜ್ಯ, ಮನರಂಜನೆ, ದೂರಸಂಪರ್ಕ, ಮಿಲಿಟರಿ, ಸಂಶೋಧನ ರಂಗ ಗಳಲ್ಲಿ ವ್ಯಾಪಿಸಿಕೊಂಡಿದೆ.

ಲಿನಕ್ಸ್‌ನ ಮತ್ತೊಂದು ವೈಶಿಷ್ಟವೆಂದರೆ ಲಿನಕ್ಸ್ ತಂತ್ರಾಂಶಗಳಿಗಾಗಿ ಲೈಸೆನ್ಸ್ ಶುಲ್ಕ ಇಲ್ಲದೆ, ಹಣ ತೆರೆಬೇಕಿಲ್ಲದಿರುವುದು. ಸಾಮಾನ್ಯ ಬಳಕೆಗೆ ಪುಕ್ಕಟೆಯಾಗಿ ಸಿಗುವುದು. ವಾಣಿಜ್ಯ, ಸಂಶೋಧನೆ, ಮಿಲಿಟರಿ ಉದ್ದೇಶಗಳಿಗೆ ಬಹಳ ಕಡಿಮೆ ವೆಚ್ಚದಲ್ಲಿ ತಂತ್ರಾಂಶ ಪೂರೈಕೆ ಮತ್ತು ತಾಂತ್ರಿಕ ಸೇವೆಯ ಬೆಂಬಲದೊಂದಿಗೆ ಲಭ್ಯವಿದೆ.

ಜಗತ್ತಿನ ದೂರಸಂಪರ್ಕ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿಗಳಾದ ಮೊಟೋರೋಲ, ಸ್ಯಾಮಸಂಗ್, ಎಲ್.ಜಿ. ಮುಂತಾದ ಕಂಪನಿಗಳು ಮತ್ತು ದೊಡ್ಡ ಕಂಪ್ಯೂಟರ್ ಸ್ವಾಫ್ಟ್‌ವೇರ್ ಕಂಪನಿಗಳಾದ ಐಬಿ ಎಂ.ಹ್ಯೂಲೆಟ್ ಪ್ಯಾಕರ್ಡ(ಹೆಚ್.ಪಿ) ಇನ್ ಪೋಸಿಸ್, ವಿಪ್ರೊ ಕಂಪನಿಗಳು ಮುಂತಾದವು ಲಿನಕ್ಸ್ ಬಳಕೆ ಮತ್ತು ಅಭಿವೃದ್ದಿಯಲ್ಲಿ ತೊಡಗಿಕೊಂಡಿವೆ.

ಭಾರತದಲ್ಲಿ ಸರ್ಕಾರದ ಎನ್.ಸಿ. ಎಸ್.ಟಿ. ಮತ್ತು ಸಿ-ಡಿ ಎ ಸಿ ಸಂಸ್ಥೆಗಳ ಸಹಯೋಗದಲ್ಲಿ ಇಂಡ್ ಲಿನಕ್ಸ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಲಿನಕ್ಸ್‌ನಲ್ಲಿ ಭಾರತೀಯ ಭಾಷೆಗಳನ್ನು ಅಳವಡಿಸುವುದು, ಭಾಷೆ ಆಧಾರಿತ ಕಂಪ್ಯೂಟರ್ ಬಳಕೆ ಹೆಚ್ಚಿಸುವುದಕ್ಕೆ ಬೇಕಾದ ತಂತ್ರಾಂಶ ಅಭಿವೃದ್ದಿಗೆ ಪೂರಕವಾಗಿ ಯೋಜನಾವರದಿ, ತಾಂತ್ರಿಕ ಬೆಂಬಲ ಸಂಪನ್ಮೂಲಗಳನ್ನು ಒದಗಿಸುವ ಸಲುವಾಗಿ www.indlinux.org ಅಂತರ್‌ಜಾಲ ತಾಣವನ್ನು ಹುಟ್ಟು ಹಾಕಲಾಗಿದೆ.

ಇದಲ್ಲದೆ ಲಿನಕ್ಸನ್ನು ಭಾಷೆಗಳಲ್ಲಿ ಅಳವಡಿಸುವ ಬಗ್ಗೆ ತಂತ್ರಾಂಶಗಳ ಯೂನಿಕೋಡ್‌ಗೆ ಭಾಷಾಂತರಿಸಲು, ಮಾರ್ಗದರ್ಶನ ಮತ್ತು ತಾಂತ್ರಿಕ ಬೆಂಬಲ ಕೊಡುವುದಕ್ಕೆ www.indictrans.org ಸ್ಥಾಪಿಸಲಾಗಿದೆ. ಅಭಿವೃದ್ದಿ ತಂತ್ರಾಂಶಗಳನ್ನು ಒಳಗೊಂಡ ಸಿಡಿರೋಂ ಡಿಸ್ಕ್ ಲಭ್ಯವಿದೆ. ಯುನಿಕೋಡ್ ಭಾಷಾಂತರ ತಂತ್ರಾಂಶಗಳು, ಕೀಬೋರ್ಡ್ ವಿನ್ಯಾಸ ತಂತ್ರಾಂಶ ಭಾಷಾಂತರ ಮತ್ತು ಇತರ ಸಂಬಂಧಿತ ತಂತ್ರಾಂಶಗಳು ಲಭ್ಯವಿದೆ.

Yuedit (www.yuedit.org), poedit (www.poedit.sourceforge.net.) G Translator (www.indlinux.org), K Bable (www.kde.org). ಮುಂತಾದ ಭಾಷಾಂತರ ತಂತ್ರಾಂಶಗಳು ಮೇಲೆ ತಿಳಿಸಿದ ಅಂತರಜಾಲ ತಾಣಗಳಲ್ಲಿ ತಂತ್ರಾಂಶಗಳನ್ನು ಇಳಿಸಿಕೊಳ್ಳಬಹುದು.

ಕೇವಲ ಲಿನಕ್ಸ್ ತಂತ್ರಾಂಶಕ್ಕೆ ಮಾತ್ರ ಭಾಷೆಗಳನ್ನು ಅಳವಡಿಸದೆ ಲಿನಕ್ಸ್ ಉಪಯೋಗಿ ತಂತ್ರಾಂಶಗಳಲ್ಲಿ, ಶಿಕ್ಷಣ, ಇಂಟರ್‌ನೆಟ್, ಕಛೇರಿ ನಿರ್ವಹಣೆ ಎನ್ನುವ ಉಪಯೋಗಿ ತಂತ್ರಾಂಶಗಳಿಗೆ ಭಾಷೆಗಳನ್ನು ಅಳವಡಿಸುತ್ತಿದ್ದಾರೆ. ಈಗಾಗಲೇ ತಮಿಳು, ಹಿಂದಿ, ಗುಜರಾತಿಗಳಲ್ಲಿ ತಂತ್ರಾಂಶ ಬಿಡುಗಡೆಯಾಗಿದೆ.

ಲಿನಕ್ಸ್ ತೆರೆದ/ಮುಕ್ತ ತಂತ್ರಾಂಶವು ಸಾಂಸ್ಕೃತಿಕ ದೃಷ್ಟಿಯಿಂದ ಮುಖ್ಯವಾಗಿದೆ. ಸ್ಥಳೀಯ ಸಂಸ್ಕೃತಿ ಭಾಷೆಗಳಿಗೆ ಅನುಗುಣವಾದ ಚೌಕಟ್ಟಿನೊಳಗೆ ಕಂಪ್ಯೂಟರ್ ನಿರ್ವಹಣ ತಂತ್ರಾಂಶ ತಯಾರಿಸಲು ತೆರೆದ ತಂತ್ರಾಂಶ ತಂತ್ರಜ್ಞಾನ ಉಪಯೋಗಿಸ ಬಹುದಾಗಿದೆ. ಇದರಿಂದ ಸೀಮಿತ ಪ್ರದೇಶದ ಅಲ್ಪ ಜನಸಂಖ್ಯೆ ಭಾಷಿಕರ ಅನುಕೂಲಗಳಿಗೆ ಒಗ್ಗುವ ಹಾಗೆ ತಂತ್ರಾಂಶ ರೂಪಿಸುವ ಅವಕಾಶ ದೊರಕುವುದಲ್ಲದೆ ಅಲ್ಪ ವೆಚ್ಚದಲ್ಲಿ ತಂತ್ರಾಂಶ ತಯಾರಿಕೆ ಸಾಧ್ಯವಾಗುವುದು.

ಕನ್ನಡಕ್ಕೆ ಸಂಬಂಧಿಸಿದಂತೆ ಲಿನಕ್ಸದಲ್ಲಿ ಕನ್ನಡ ಕೀಬೋರ್ಡ್ ಅಳವಡಿಸಲಾಗಿದ್ದು, ಓಪನ್ ಆಫೀಸ್ ತಂತ್ರಾಂಶದಲ್ಲಿ ಭಾಗಶಃ ಕನ್ನಡ ಲಿಪಿಯ ಬಳಕೆ ಮಾಡಲಾಗಿದೆ.

ಇನ್ನು ಕೀಬೋರ್ಡ್ ವಿಚಾರವಾಗಿ ಅವಲೋಕಿಸಿದಾಗ ಲಭ್ಯವಿರುವ ಎಲ್ಲಾ ಕೀಬೋರ್ಡ್ ವಿನ್ಯಾಸಗಳನ್ನು ಬಳಕೆದಾರರ ಅನುಕೂಲಕ್ಕೆ ಆಯ್ಕೆ ಮಾಡುವ ಸ್ವಾತಂತ್ರ್ಯ ವಿರುವಂತೆ ಅಭಿವೃದ್ದಿಪಡಿಸಿದರೆ ಕೀಬೋರ್ಡ್‌ಗಳ ಗೊಂದಲಕ್ಕೆ ಪರಿಹಾರವಾಗುವುದು.

ಮುಂದಿನ ದಿನಗಳಲ್ಲಿ ಕೀಬೋರ್ಡ್ ಅವಶ್ಯಕತೆಯಿಲ್ಲದಂತೆ ಕಂಪ್ಯೂಟರ್‌ನಲ್ಲಿ ಲಿಪಿ ಮೂಡಿಸುವ ತಂತ್ರಜ್ಞಾನ ಬರಲಿದೆ. ಕೈ ಬರವಣಿಗೆಯನ್ನು ಗುರುತಿಸಿ ಅದಕ್ಕೆ ತಕ್ಕಂತೆ ಅಕ್ಷರಗಳನ್ನು ಕಂಪ್ಯೂಟರ್ ಸ್ಕ್ರೀನ್‌ನಲ್ಲಿ ಮೂಡಿಸುವ ಮುದ್ರಿಸುವ ತಂತ್ರಾಂಶಗಳನ್ನು ಅಭಿವೃದ್ದಿಪಡಿಸುತ್ತಿದ್ದಾರೆ. www.indictrans.orgನಲ್ಲಿ ಮರಾಠಿ, ಹಿಂದಿ, ಗುಜರಾತಿಗಳಲ್ಲಿ ಕೈ ಬರಹ ಗುರುತಿಸಿ ಲಿಪಿ ಮೂಡಿಸುವ ಮುದ್ರಿಸುವ ತಂತ್ರಾಂಶ ಅಭಿವೃದ್ದಿಪಡಿಸಿದ್ದು, ಆಸಕ್ತರಿಗೆ ತಂತ್ರಾಂಶ ಉಚಿತವಾಗಿ ಲಭ್ಯವಿದೆ. ಮುಂದಿನ ದಿನಗಳಲ್ಲಿ, ಕಂಪ್ಯೂಟರ್ ಮತ್ತು ಸ್ಕ್ರೀನ್‌ನ ಆವಶ್ಯಕತೆ ಇಲ್ಲದೆ ಸಣ್ಣ ಪ್ರಿಂಟರ್ ಮತ್ತು ಕೈಬರಹ ಗುರುತಿಸುವ ಉಪಕರಣವಿದ್ದರೆ ಸಾಕು, ಮುದ್ರಿಸಿದ ಮಾಹಿತಿ ಪಡೆಯುವ ದಿನಗಳು ದೂರವಿಲ್ಲ ಎಂದೆನಿಸುತ್ತದೆ.

ಇದಕ್ಕೆ ಪೂರಕವಾಗಿಯೇ, ತಂತ್ರಜ್ಞಾನದ ಬಳಕೆ ಈಗಾಗಲೇ ಬಂದಿದ್ದು, ಅಂಗೈ ಕಂಪ್ಯೂಟರ್ ಎಂದು ಕರೆಯುವ ಸಿಂಪ್ಯೂಟರ್ ಸ್ಕ್ರೀನ್ ಮೇಲೆ ಕೈ ಬರಹದಲ್ಲಿ ಬರೆದ ಮಾಹಿತಿಯನ್ನು ಇಂಟರ್ ನೆಟ್ ಮುಖಾಂತರ ಈ ಮೇಲ್ ಕಳಿಸಬಹುದು ಕೀಬೋಡ್ ರ್ ಅವಶ್ಯಕವಿಲ್ಲದೆ, IM-Imformation mark up Ianguage ಎನ್ನುವ ತಂತ್ರಾಜ್ಞಾನದಿಂದ ಕೆಲವೇ ಒತ್ತು ಕೀಲಿಗಳನ್ನು ಬಳಸಿ ಸಿಂಪ್ಯೂಟರ್‌ನಿಂದ ಇಂಟರ್‌ನೆಟ್, ಮಾಹಿತಿ ಸಂಗ್ರಹಣೆ, ಬ್ಯಾಂಕಿಂಗ್ ವ್ಯಾಪಾರ ಮುಂತಾದವುಗಳಿಗೆ ಉಪಯೋಗಿಸಬಹುದು. ಸಿಂಪ್ಯೂಟರ್‌ನಲ್ಲಿ ಲಿನಕ್ಸ್ ತಂತ್ರಾಂಶ ಬಳಸಲಾಗಿದ್ದು, ಕನ್ನಡ ಅಕ್ಷರ ಪದಗಳನ್ನು, ಶಬ್ಧಕೋಶವನ್ನು ಅಳವಡಿಸಿದ್ದಾರೆ. ಕರ್ನಾಟಕ ಸರ್ಕಾರವು ತನ್ನ ಭೂಮಿ ಯೋಜನೆಯಲ್ಲಿ ಸಿಂಪ್ಯೂಟರ್ ಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಸಿಂಪ್ಯೂಟರ್‌ನಲ್ಲಿ ಕೂಡಾ ಇನ್ನಷ್ಟು ಕನ್ನಡ ಭಾಷೆಯ ಉಪಯೋಗಿ ತಂತ್ರಾಂಶಗಳನ್ನು ಅಭಿವೃದ್ದಿಪಡಿಸಲು ಅವಕಾಶವಿದೆ. ಆಸಕ್ತರು ತಾಂತ್ರಿಕ ಮಾಹಿತಿಗಾಗಿ www.simputer.com ನೋಡಬಹುದು.

ನಮ್ಮ ದೇಶದಲ್ಲಿ ಲಿನಕ್ಸ್ ತಂತ್ರಾಂಶಕ್ಕೆ ಬೆಂಬಲವಾಗಿ EFY ಎಂಟರ್‌ಪ್ರೈಜಸ್ ಎನ್ನುವ ಸಂಸ್ಥೆ ಲಿನಕ್ಸಸ್ ಫಾರ್ ಯು ಎನ್ನುವ ಮಾಸಪತ್ರಿಕೆ ಬಿಡುಗಡೆ ಮಾಡಿ ಒಂದು ವರ್ಷವಾಯಿತು. ಪ್ರತಿ ತಿಂಗಳು ಲಿನಕ್ಸ್ ತಂತ್ರಾಂಶಗಳ ಬಗ್ಗೆ ಮಾಹಿತಿ, ತಂತ್ರಾಂಶ ಪೂರೈಕೆ, ತಾಂತ್ರಿಕ ಬೆಂಬಲ, ಸೇವೆ ನೀಡುವ ಸಾಫ್ಟ್‌ವೇರ್ ಸಂಸ್ಥೆಗಳ ಬಗ್ಗೆ ಮಾಹಿತಿ ಮತ್ತು ಇಂಟರ್‌ನೆಟ್‌ನಲ್ಲಿ ದೊರಕುವ ಉಚಿತ ಲಿನಕ್ಸ್ ತಂತ್ರಾಂಶಗಳ ಆವೃತ್ತಿಗಳನ್ನು ಸಿಡಿರೋಮ್‌ನ ಡಿಸ್ಕ್‌ನಲ್ಲಿ ಕೊಡುತ್ತಿದೆ.

ಡಿಸ್ಕ್ ಮೂಲಕ ತಂತಾನೇ ಸ್ಥಾಪನೆಗೊಳ್ಳುವ (Automatic Self Installation) ವ್ಯವಸ್ಥೆಯಲ್ಲಿ ಸಿಡಿರೊಂ ಡಿಸ್ಕ್ ಮೂಲಕ ಲಿನಕ್ಸ್ ತಂತ್ರಾಂಶ ಕಂಪ್ಯೂಟರನಲ್ಲಿ ಸ್ಥಾಪನೆ ಗೊಳ್ಳುತ್ತದೆ. ತಿಂಗಳಿಗೊಮ್ಮೆ ಪ್ರಪಂಚದಾದ್ಯಂತ ಮತ್ತು ಬಾರತದಲ್ಲಿ ಬಿಡುಗಡೆಯಾಗುವ ಹೊಸ/ಪರಿಷ್ಕೃತಗೊಂಡ ಲಿನಕ್ಸ್ ತಂತ್ರಾಂಶಗಳು, ಮುದ್ರಣ ತಂತ್ರಾಂಶಗಳು, ಸಂಗೀತ, ಕಂಪ್ಯೂಟರ್ ಗೇಮ್ಸ್ ತಂತ್ರಾಂಶಗಳು ಇತ್ಯಾದಿಗಳನ್ನು ಪುಕ್ಕಟೆಯಾಗಿ ಡಿಸ್ಕ್‌ನಲ್ಲಿ ಕೊಡಲಾಗುತ್ತಿದೆ. ಅಂತರಜಾಲ www.Iinuxforu.com ಸಂದರ್ಶಿಸಬಹುದು.

ನಮ್ಮ ದೇಶದಲ್ಲಿ ಮೂರ್ನಾಲ್ಕು ಲಿನಕ್ಸ್ ತಂತ್ರಾಂಶಗಳು ಬಿಡುಗಡೆಯಾಗಿವೆ. ಇತ್ತೀಚೆಗೆ ಪಂಜಾಬಿನ ನಾಲ್ವರು ಯುವಕರು ಸೇರಿ ಪಂಜಾಬಿ ಲಿನಕ್ಸ್ ಬಿಡುಗಡೆ ಮಾಡಿದ್ದಾರೆ. ಕಂಪ್ಯೂಟರ್ ಪ್ರಾರಂಭದಿಂದ, ಕೊನೆಗೆ ಬಂದ್ ಮಾಡುವವರೆಗೆ ಪಂಚಾಬಿ ಭಾಷೆಯಲ್ಲಿ ಕಾರ್ಯನಿರ್ವಹಿಸುತ್ತದೆ. ತಂತ್ರಾಂಶ ಅಳವಡಿಸುವಾಗ ಲಿಪಿಗಳ ಗ್ರಾಫಿಕ್ಸ್ ಸಂಯೋಜನೆ ಮತ್ತು ಭಾಷಾಂತರ ಕಾರ್ಯ ಮುಖ್ಯವಾದುದು ಭಾಷಾಂತರ ಕಾರ್ಯದ ನಿರ್ವಹಣೆ ಕೆಲವರಿಂದ ಸಾಧ್ಯವಿಲ್ಲ. ಇದಕ್ಕೆ ಎಲ್ಲರೂ ಕೈಗೂಡಿಸಬೇಕಾಗಿದೆ. ಭಾಷಾಂತರ ನಿರ್ವಹಣೆ ಕನ್ನಡ ವಿಶ್ವವಿದ್ಯಾಲಯ ನಿರ್ವಹಿಸಿದಲ್ಲಿ ಶೀಘ್ರವಾಗಿ ಕನ್ನಡ ಲಿನಕ್ಸ್ ತಂತ್ರಾಂಶ ರೂಪಿಸಬಹುದು.

ಕನ್ನಡದಲ್ಲಿ ಲಿನಕ್ಸ್ ರೂಪಿಸಿದಾಗ ಲಿನಕ್ಸ್‌ನ ಮೂಲವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಪಂಚದ ಇತರ ಇಂಗ್ಲಿಶ್ ಇಲ್ಲದೆ ಯಾವುದೇ ಭಾಷೆ ಆಧಾರಿತ ಲಿನಕ್ಸ್ ತಂತ್ರಾಂಶದೊಂದಿಗೆ ಹೊಂದಿಕೆ(Compatible)ಯಾಗುತ್ತದೆ. ಕಾರ್ಯನಿರ್ವಹಣೆ ಕನ್ನಡದಲ್ಲಿ ಇದ್ದರೂ ಇಂಟರ್-ನೆಟ್ ಮತ್ತು ನೆಟ್‌ವರ್ಕಿಗ್ (ಅಂತರಜಾಲ)ದಲ್ಲಿ ಯೂನಿಕೋಡ್ ತಾಂತ್ರಿಕತೆಯ ಮುಖಾಂತರ ಆಂತರಿಕವಾಗಿ ಇಂಗ್ಲಿಶ್ ಭಾಷೆಯ ತಂತ್ರಾಂಶದೊಂದಿಗೆ ವ್ಯವಹರಿಸುವುದರಿಂದ ಯಾವುದೇ ತೊಡಕು ತೊಂದರೆಗಳು ಉಂಟಾಗುವುದಿಲ್ಲ. ಒಂದು ಸಾರಿ ಕನ್ನಡ ಭಾಷೆಯಲ್ಲಿ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ತಂತ್ರಾಂಶ ರೂಪುಗೊಂಡರೆ, ಅದರ ತಂತ್ರಾಂಶಗಳೆಲ್ಲ ಮುಕ್ತವಾಗಿ ದೊರಕುವುದರಿಂದ ಬೇರೆಯವರು ಅಂದರೆ ಖಾಸಗಿಯವರೂ ಕೂಡಾ ಭಾಷೆಗಳ ಆಧಾರಿತ Application Softwareಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು. ಯಾರು ಹೇಗೆ ಬೇಕಾದರೂ ಮಾರ್ಪಡಿಸಿ ಇಲ್ಲವೇ ಅಭಿವೃದ್ದಿಪಡಿಸಿ ಹಂಚಿಕೊಳ್ಳಬಹುದು. ಕನ್ನಡದಲ್ಲಿಯೇ ತಂತ್ರಾಂಶ ಅಭಿವೃದ್ದಿಗೊಳ್ಳುವ ದಿನಗಳೂ ಕೂಡಾ ದೂರವಿಲ್ಲ.

ಕರ್ನಾಟಕದಲ್ಲಿ ಆಸಕ್ತ ತಂತ್ರಜ್ಞರು ಅಂತರಜಾಲ ವೆಬ್‌ಸೈಟ್ ನಿರ್ಮಿಸಿ ಅದರಲ್ಲಿ ಕನ್ನಡ ಭಾಷೆಯನ್ನು ಲಿನಕ್ಸ ಆಪರೇಟಿಂಗ್ ಸಿಸ್ಟಂನಲ್ಲಿ ಅಳವಡಿಸುವ ಬಗ್ಗೆ ಮತ್ತು ಶಿಕ್ಷಣ, ವ್ಯಾಪಾರ ತಂತ್ರಜ್ಞಾನ, ಸಾಹಿತ್ಯ, ಸಂಗೀತ ಮುಂತಾದವುಗಳ ಬಗ್ಗೆ ಉಪಯೋಗಿ ತಂತ್ರಾಂಶಗಳನ್ನು ಅಭಿವೃದ್ದಿಪಡಿಸುವ ಬಗ್ಗೆ ಚರ್ಚೆ, ತಂತ್ರಜ್ಞಾನ ವಿನಿಮಯ, ಸಂಪನ್ಮೂಲ ವಿನಿಮಯ ಬಗ್ಗೆ ತಂತ್ರಾಂಶ ಅಭಿವೃದ್ದಿಪಡಿಸುವ ಗುಂಪುಗಳನ್ನು ರಚಿಸಬೇಕಾದ ಅವಶ್ಯಕತೆಯಿದೆ.

ಲಿನಕ್ಸ್ ಆಧಾರಿತ ಪ್ರಾದೇಶಿಕ/ಸ್ಥಳೀಯ ಭಾಷೆಗಳಲ್ಲಿ ರೂಪುಗೊಂಡ ತಂತ್ರಾಂಶ ಬಳಸಿದಾಗ ಆಗುವ ಅನುಕೂಲಗಳು

೧. ಯಾವುದೇ ಭಾಷೆ ಇರಲಿ ಲಿನಕ್ಸ್ ಮೂಲಕ ಪ್ರಪಂಚದಾದ್ಯಂತ ಯಾವುದೇ ಕಂಪ್ಯೂಟರ್ ಮೂಲಕ ಇಂಟರ್ ನೆಟ್ ಸಂಪರ್ಕ ಸಾಧ್ಯ.

೨. ಪ್ರಾದೇಶಿಕ/ಸ್ಥಳೀಯ ಭಾಷೆಗಳಲ್ಲಿ (ವೆಬ್ ಸೈಟ್ ) ಅಂತರಜಾಲ ತಾಣಗಳ ನಿರ್ಮಾಣ ಮತ್ತು ಜಾಗತಿಕ ಅಂತರಜಾಲ ಪಟ್ಟಿಯಲ್ಲಿ ನೋಂದಣೀ ಅನುಕೂಲ.

೩. ಯಾವುದೇ ಭಾಷೆಯಿಂದ ಯಾವುದೇ ಭಾಷೆಯ ವೆಬ್ ಸೈಟ್ ವೀಕ್ಷಣೆ ಮತ್ತು -mail ಬಳಕೆಯ ಅನುಕೂಲ ಒಗಿಸಲು ಸಾಧ್ಯ.

೪. ಪ್ರಾದೇಶಿಕ ಭಾಷೆಗಳಲ್ಲಿ ಇಂಗ್ಲಿಶ್ ತಂತ್ರಾಂಶಗಳ ಸುಲಭ ಭಾಷಾಂತರ ಅನುಕೂಲ ಲಭ್ಯವಾಗುವುದರಿಂದ ಯಾವುದೇ ಬಳಕೆಯ ತಂತ್ರಾಂಶಗಳನ್ನು ಒದಗಿಸಲು ಸಾಧ್ಯ.

೫. ಕ್ರಮೇಣ ಇಂಗ್ಲಿಶ್ ಭಾಷೆಯ ಅವಲಂಬನೆ ಕಡಿಮೆಯಾಗಿ ಮಾತೃಭಾಷೆಯಲ್ಲಿಯೇ ಕಂಪ್ಯೂಟರ್ ತಂತ್ರಜ್ಞಾನ ಶಿಕ್ಷಣ ಒದಗುವುದು.

೬. ಸರಕಾರದ ಆಡಳಿತಗಳ ಕಂಪ್ಯೂಟರ್‌ನಲ್ಲಿ ಪ್ರಾದೇಶಿಕ ಭಾಷೆಗಳ ಅಳವಡಿಕೆ ಲಿನಕ್ಸ್ ತಂತ್ರಾಂಶದ ಮೂಲಕ ಇನ್ನಷ್ಟು ಸರಳ ಮತ್ತು ತಂತ್ರಾಂಶ ವೆಚ್ಚ ಕಡಿಮೆಯಾಗುವುದು.

೭. ಜಾಗತಿಕ ತಾಂತ್ರಿಕ ಬೆಂಬಲದ ತಂತ್ರಾಂಶ ಅಭಿವೃದ್ದಿಗಳನ್ನು ಪ್ರಾದೇಶಿಕ ಭಾಷೆಗಳ ತಂತ್ರಾಂಶಗಳಿಗೆ ಹೊಂದಿಸುವುದು ಸರಳವಾದ ಕಾರ್ಯ – ಇದರಿಂದ ಕಾಲಕಾಲಕ್ಕೆ ತಂತ್ರಾಂಶ ಮೇಲ್ದರ್ಜೆ ಏರಿಸುವುದರಿಂದ ಭವಿಷ್ಯದಲ್ಲಿ ಜನಬಳಕೆಯ ತಂತ್ರಾಂಶಗಳು (Upgrade) ಕಾರ್ಯನಿರ್ವಹಿಸುವ ಬಗ್ಗೆ ಖಾತರಿಯ ಬೆಂಬಲ ಲಿನಕ್ಸ್ ನಿಂದ ಸಿಗುವುದು. ಇದಕ್ಕೆ ವೆಚ್ಚ ತಗಲುವ ಸಮಸ್ಯೆಗಳಿಲ್ಲ.