ದೂರವಾಣಿ ಬಂದಾಗ ಸಂಪರ್ಕ ಸಾಧನರಂಗದಲ್ಲಿ ಮಹತ್ತರ ಬದಲಾವಣೆ ಗಳಾದವು. ವಿಶ್ವ ಹತ್ತಿರವಾಯಿತು ಎಂದು ಹೇಳಲು ಶುರುವಾಯಿತು. ಕ್ಷಣಾರ್ಧದಲ್ಲಿ ಬೇಕಾದವರೊಡನೆ ಎದುರು-ಬದುರು ಕುಳಿತಿರುವಂತೆ ಮಾತನಾಡುವ ಸೌಲಭ್ಯ ಸಿಕ್ಕಿಬಿಟ್ಟಿತು. ಇಲ್ಲಿ ಒಂದೇ ಲೋಪ ಎಂದರೆ ಎದುರಿಗಿರುವವನ ಭಾವಭಂಗಿ. ಮುಖ ಕಾಣದೇ ಇರುವುದು (ಆ ನಂತರ ಅದೂ ಸಾಧ್ಯವಾಯಿತು). ಆರಂಭದಲ್ಲಿ ದೂರವಾಣಿ ಎಲ್ಲರಿಗೂ ಲಭ್ಯವಾಗದ ಕಾರಣ ಅದು ಒಂದು ಐಷಾರಾಮದ ವಸ್ತು ಎಂದೇ ಭಾವಿಸಲಾಗಿದ್ದಿತು. ಆ ನಂತರ ದೂರವಾಣಿಯ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆಯಾಗಿ ಪೇಜರ್‌ಗಳು ಬಂದವು, ಸ್ಥಿರದೂರವಾಣಿಯ ಸಂದರ್ಭದಲ್ಲಿ ವ್ಯಕ್ತಿ ದೂರವಾಣಿ ಉಪಕರಣದ ಸಮೀಪ ಬಂದು ಮಾತನಾಡಬೇಕಾಗಿತ್ತು. ಪೇಜರ್‌ಗಳು ಬಂದ ನಂತರ ಅವರನ್ನು ಸಂಪರ್ಕಿಸುವ ಸೌಲಭ್ಯ ಬಂದಿತು. ಅಂದರೆ ಅಲ್ಲಿ ಇಂತಹ ಸಂಖ್ಯೆಯನ್ನು ಸಂಪರ್ಕಿಸಬೇಕೆಂಬ ಸಂದೇಶ ಪೇಜರ್ ಇರುವವರಿಗೆ ರವಾನೆಯಾಗಿ ಅವರು ಸಂಪರ್ಕಿಸಬಹುದಾಗಿತ್ತು. ಬಂದ ಕೆಲವು ಕಾಲ ಇದು ಬಳಕೆಯಲ್ಲಿದ್ದರೂ, ಆ ಸ್ಥಳವನ್ನು ಸೆಲ್‌ಫೋನ್‌ಗಳು ಆವರಿಸಿಕೊಂಡುಬಿಟ್ಟವು.

ಪೇಜರ್‌ಗಳಿಗೆ ಮುಂಚೆಯೇ ವೈರ್‌ಲೆಸ್‌ಸೆಟ್‌ಗಳ ಮೂಲಕ ಸಂಪರ್ಕ ಸಾಧ್ಯವಿತ್ತಾದರೂ ಇದು ಕೇವಲ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಬಳಕೆಯಲ್ಲಿದ್ದು ಸಾರ್ವಜನಿಕರಿಗೆ ಲಭ್ಯವಿರಲಿಲ್ಲ.

ಸೆಲ್‌ಫೋನ್‌ಗಳ ಆವಿಷ್ಕಾರದ ನಂತರ ಸಂಪರ್ಕ ಕ್ಷೇತ್ರ ಮತ್ತಷ್ಟು ಬೆಳವಣಿಗೆ ಹೊಂದಿ ಇಂದು ನಾಗಾಲೋಟದಲ್ಲಿ ಸಾಗುತ್ತಿದೆ. ಇಂದು ಯಾರ ಕೈಯಲ್ಲಿ ನೋಡಿದರೂ ಸೆಲ್‌ಫೋನ್‌ಗಳೇ. ಅದನ್ನು ಆಡುಮಾತಿನಲ್ಲಿ ಮೊಬೈಲುಗಳೆಂದು ಕರೆಯಲಾಗಿದೆ. ಮೊಬೈಲ್ ಫೋನ್ ಎಂಬುದು ಮೊಬೈಲ್‌ಗಳಾಗಿ ನಗರ-ಗ್ರಾಮೀಣ; ಶಿಕ್ಷಿತ-ಅಶಿಕ್ಷಿತ, ಪುರುಷ-ಮಹಿಳೆ ಹೀಗೆ. ಎಲ್ಲರ ಮನೆಮಾತಾಗಿ ಅವರವರ ಮಾತನ್ನು ಇಚ್ಛಿಸಿದವರಿಗೆ ತಲುಪಿಸಲು ಸಾಧ್ಯಮಾಡಿಕೊಡುವ ಕೈಫೋನುಗಳಾಗಿ ಬಳಕೆಯಲ್ಲಿವೆ. ಇದು ಕನ್ನಡದಲ್ಲಿ ನಡೆನುಡಿ, ಜಂಗಮವಾಣಿ ಎಂದು ಅನೇಕ ಪದಗಳ ರಚನೆಗೆ ಕಾರಣವೂ ಆಗಿದೆ.

ಈ ಉಪಕರಣದಲ್ಲಿ ಹತ್ತು ಹಲವು ಸೌಲಭ್ಯಗಳಿದ್ದರೂ ಮುಖ್ಯವಾಗಿ ಇದು ಬಳಕೆಯಾಗುತ್ತಿರುವುದು ಭಾಷಾ ಸಂಬಂಧಿ ಕೆಲಸಗಳಿಗೆ ಮಾತ್ರ ಅಂದರೆ ಮಾತು ಮತ್ತು ಬರಹಕ್ಕೆ. ಮೊದಲು ಮಾತಿಗಷ್ಟೇ ಸೀಮಿತವಾಗಿದ್ದ ಸೆಲ್ ಫೋನ್ ಗಳಲ್ಲಿ ಬರಹದ ಮೂಲಕ ಸಂದೇಶ ರವಾನೆ ಸಾಧ್ಯವೇ ಎಂದು ತಲೆಕೆಡಿಸಿಕೊಂಡಿದ್ದರ ಪರಿಣಾಮವಾಗಿ ಸಂದೇಶಗಳನ್ನು ಕಾಣುವುದು ಸಾಧ್ಯವಾಗಿದೆ. ಅಷ್ಟೇ ಅಲ್ಲ, ಇದು ಇಂದು ಪಡೆದುಕೊಂಡಿರುವ ಮಹತ್ವವನ್ನು ಗಮನಿಸಿದರೆ ಇದು ವಿಶ್ವವ್ಯಾಪಿಯಾಗಿರುವುದು ತಿಳಿಯುತ್ತದೆ. ಸುಮಾರು ೧೬೦ ಅಕ್ಷರಗಳ ಸೂತ್ರದಲ್ಲಿ ಪ್ರಸಾರವಾಗುವ ಇದು ಮನೆ-ಮನವನ್ನು ಇನ್ನಷ್ಟು ಹತ್ತಿರವಾಗಿಸಲು ಸಾಧ್ಯಮಾಡಿದೆ. ಹಾಗಾಗಿ ಮೊಬೈಲು/ಸೆಲ್ ಫೋನ್‌ಗಳು ಇಂದು ತಂತ್ರಜ್ಞಾನದ ಮೂಲಕ ಭಾಷೆಯ ಬಳಕೆಯನ್ನು ಮಾಡುತ್ತಿರುವ ಒಂದು ಪುಟ್ಟ ಸಾಧನವಾಗಿದೆ.

ಎಸ್ಸೆಮ್ಮೆಸ್‌ಗಳು ಇರದೇ ಬದುಕು ಇಲ್ಲ ಎನ್ನುವಷ್ಟರ ಮಟ್ಟಿಗೆ ಈಗ ಅನಿವಾರ್ಯವಾಗಿದೆ. ಇಲ್ಲಿ ಬಳಕೆಯಾಗುವ ಸಂದೇಶಗಳಲ್ಲಿ ಬಹಳಷ್ಟು ಶುಭಾಶಯಗಳಿಗೆ ಸೀಮಿತವಾಗಿದ್ದರೆ, ರಸಪ್ರಶ್ನೆ, ಜಾಹೀರಾತು ಮತ್ತು ಇತರೆ ವ್ಯವಹಾರಗಳಿಂದಾಗಿ ಇಂದು ಜನಪ್ರಿಯವಾಗಿದೆ. ಇಲ್ಲೆಲ್ಲ ಭಾಷೆಯ ಬಳಕೆಯೇ ಮುಖ್ಯವಾದುದನ್ನು ಗಮನಿಸಬಹುದು.

ಇದೇ ಅಲ್ಲದೆ ಇನ್ನೂ ಅನೇಕ ಸಂದೇಶ ವ್ಯವಸ್ಥೆಗಳು ಬರುತ್ತಿವೆ. ಜಿ ಮೇಲ್ , ಫೋಟೋ ಮೆಸೇಜಿಂಗ್, ಈ ಮೇಲ್ ಇವುಗಳಲ್ಲಿ ಮುಖ್ಯವಾದವು. ಇವುಗಳ ಸಂಕೀರ್ಣತೆ ಮತ್ತು ಖರ್ಚಿನ ಕಾರಣ ಇವು ಸಾಮಾನ್ಯ ಜನರಿಗೆ ಲಭ್ಯವಾಗದೇ ಹೋದರೂ, ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾಷೆಯನ್ನು ಅವಲಂಬಿಸಿರುವ ಪ್ರಮುಖ ಸಂದೇಶವಾಹಕಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಈ-ಮೇಲ್ ಎಂಬುದು ಕಂಪ್ಯೂಟರ್ ನ ಸಹಾಯದಿಂದ ನಡೆಸಲಾಗುವ ಪತ್ರವ್ಯವಹಾರ ಅಥವಾ ಸಂದೇಶ ವಿನಿಮಯ ವಿಧಾನ. ಇದನ್ನು ಕನ್ನಡದಲ್ಲಿ ವಿದ್ಯುನ್ಮಾನ ಅಂಚೆ ಅಥವಾ ವಿ-ಅಂಚೆ ಎಂದು ಕರೆಯಲಾಗುತ್ತದೆ. ಇಂದು ಇದೂ ಸಹ ಯುವಕರನ್ನು ಬಹುವಾಗಿ ಆಕರ್ಷಿಸುತ್ತಿದೆ. ಮೊಬೈಲುಗಳಲ್ಲಿ ಸಂಖ್ಯೆಗಳಿರುವಂತೆ ಇಲ್ಲಿ ಈ-ಅಂಚೆ ವಿಳಾಸವಿರುತ್ತದೆ.

ಮೇಲಿನ ಎಲ್ಲ ವಿಧಾನಗಳಲ್ಲೂ ಭಾಷೆಯನ್ನು ಬರೆಯುವುದರ ಬದಲಾಗಿ ಮುದ್ರಿಸುವ ವ್ಯವಸ್ಥೆಯನ್ನು ಕಾಣಬಹುದು. ಮೊಬೈಲ್- ಸೆಲ್‌ಫೋನ್‌ಗಳಲ್ಲಿ ನೀಡಲಾದ ಚಿಕ್ಕದಾದ, ಅಷ್ಟೇ Compact ಆದ ಕೀಲಿಮಣೆಯನ್ನು ಉಪಯೋಗಿಸಿ ಸುಮಾರು ೧೬೦ ಅಕ್ಷರಗಳನ್ನು ಮುದ್ರಿಸಿ ಆ ನಂತರ ಅದನ್ನು ಕಳುಹಿಸಬೇಕಾದವರ ದೂರವಾಣಿ ಸಂಖ್ಯೆಗೆ ಕಳುಹಿಸಿದರೆ ಅದು ಅಲ್ಲಿ ಮುದ್ರಣವಾಗಿ ಓದಲು ಸಾಧ್ಯವಾಗುವಂತೆ ಸ್ಕ್ರೀನಿನ ಮೇಲೆ ಮೂಡುತ್ತದೆ. ಹೀಗೆ ಕೀಲಿಸಲು ಸಾಕಷ್ಟು ಸಮಯವೂ ಬೇಕಾಗುತ್ತದೆ. ಸದ್ಯಕ್ಕೆ ಇದು ಇಂಗ್ಲಿಶ್ ಭಾಷೆಗೆ ಮಾತ್ರ ಸೀಮಿತವಾಗಿದ್ದು, ಕನ್ನಡದಲ್ಲಿ ಸಂದೇಶ ಕಳುಹಿಸುವ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಅಕ್ಷರಗಳಷ್ಟೇ ಅಲ್ಲದೆ ಲೇಖನ ಚಿಹ್ನೆಗಳೂ ಇದ್ದು ಬಳಕೆ ಮಾಡಬಹುದಾಗಿದೆ.

ಕಂಪ್ಯೂಟ್‌ರ್‌ಗಳ ಮೂಲಕ ಕಳುಹಿಸಬಹುದಾದ ಸಂದೇಶವ್ಯವಸ್ಥೆ ಈ – ಮೇಲ್ ವಿದ್ಯುನ್ಮಾನ ಅಂಚೆಯಲ್ಲಿ ಇಂಗ್ಲಿಶಿನ ಪ್ರತಿಯೊಂದು ಅಕ್ಷರಕ್ಕೆ ಒಂದರಂತೆ ಇರುವ ಕೀಲಿಮಣೆಯ ಗುಂಡಿಗಳನ್ನು ಬಳಸಿ ಅಕ್ಷರಗಳನ್ನು ಮುದ್ರಿಸಲಾಗುವುದು. ಇಲ್ಲಿ ಅಕ್ಷರಗಳಷ್ಟೇ ಅಲ್ಲದೆ ಲೇಖನ ಚಿಹ್ನೆಗಳೂ ಇವೆ.

ಇಂದು ಇ-ಮೇಲ್ ನಿಂದ ಭಾಷಾ ಚಟುವಟಿಕೆ ತೀವ್ರಗೊಂಡಿದೆ. ಇದು ಶೈಕ್ಷಣಿಕ ರಂಗದಲ್ಲಿ ಹಾಗೂ ಸಾಮಾನ್ಯ ಸಂವಹನದ ದೃಷ್ಟಿಯಿಂದ ಬಹುವಾಗಿ ಬಳಕೆಯಲ್ಲಿದೆ. ಸಂದೇಶ ಅಥವಾ ಇನ್ನಾವುದೇ ರೀತಿಯ ಭಾಷಾ ಸಂಬಂಧಿ ಚಟುವಟಿಕೆಗಳನ್ನು ಇದರ ಮೂಲಕ ಅಪೇಕ್ಷಿಸಿದವರಿಗೆ ತಲುಪಿಸಬಹುದು. ಇದು ಮುಖ್ಯವಾಗಿ ಭಾಷಿಕ ಚಟುವಟಿಕೆಗಾಗಿಯೇ ರೂಪಿಸಿದಂತಹುದಾಗಿದೆ. ಹಾಗಾಗಿ ಇಂದು ವಿಶ್ವದಲ್ಲಿ ನಡೆಯುವ ಯಾವುದೇ ಆವಿಷ್ಕಾರ ಅಥವಾ ಚರ್ಚೆ, ಸಂವಾದ, ಪ್ರಬಂಧಗಳು ಯಾವುದೇ ಮೂಲೆಗಾದರೂ ಕೂಡಲೇ ತಲುಪುವುದು ಸಾಧ್ಯವಾಗಿ ಜ್ಞಾನಕ್ಷೇತ್ರ ವಿಸ್ತಾರಗೊಳ್ಳಲು ಸಹಾಯಕವಾಗಿದೆ.