ಮಾನವನಿಗೆ ಆಲೋಚನಾಶಕ್ತಿಯಿರುವ ಕಾರಣ ಆತ ಬೇರೆಲ್ಲ ಪ್ರಾಣಿ ಗಳಿಗಿಂತ ಭಿನ್ನವೆನಿಸಿಕೊಂಡಿದ್ದಾನೆ. ಇಂತಹ ಆಲೋಚನಾ ಶಕ್ತಿಯೇ ಸಂವಹನಕ್ಕೆ ದಾರಿ ಮಾಡಿಕೊಟ್ಟಿರಬೇಕು. ಹಾಗಾಗಿ ತನ್ನ ಅನುಭವಗಳನ್ನು ಭಾವನೆಗಳನ್ನು ವ್ಯಕ್ತಪಡಿಸಿ ಬೇರೊಬ್ಬರ ಮನಸ್ಸನ್ನು ಅರಿಯಲು ಸನ್ನೆ, ಸಂಕೇತ ಇತ್ಯಾದಿಗಳನ್ನು ಬಳಸಿ ಆನಂತರ ಒಂದು ಮಾಧ್ಯಮವನ್ನು ಕಂಡು ಕೊಂಡ. ಅದೇ ಭಾಷೆ ಆರಂಭದಲ್ಲಿ ಈ ಭಾಷೆ ಕೇವಲ ಮಾತಿನ ಸ್ವರೂಪ ದ್ದಷ್ಟೇ ಆಗಿತ್ತು. ಯಾವುದೇ ವ್ಯವಹಾರವಾಗಲೀ ಮಾತು ಸರ್ವಸ್ವವಾಗಿತ್ತು. ಈ ಮಾತನ್ನು ಯಾವ ರೂಪದಲ್ಲೂ ದಾಖಲಿಸುವ ರೂಢಿಯಿರಲಿಲ್ಲ. ಮಾತನ್ನು ದಾಖಲಿಸುವ ಸಲುವಾಗಿ ಬಂದದ್ದೇ ಬರಹ. ಅದುವರೆಗೂ ಬರೆಹ ಇರಲಿಲ್ಲವೆಂದಲ್ಲ. ತನ್ನ ಮನಸ್ಸಿನಲ್ಲಿರುವುದನ್ನು ಕರಡು ಚಿತ್ರಗಳ ಮೂಲಕ ಅಭಿವ್ಯಕ್ತಿಪಡಿಸುತ್ತಿದ್ದ. ಆದರೆ ಸಂವಹನ ಮಾಧ್ಯಮವಾದ ಮಾತನ್ನು ಬರಹ ರೂಪಕ್ಕೆ ತಂದುದು ಒಂದು ಅಸಮಾನ್ಯ ತಂತ್ರಜ್ಞಾನ ಎನ್ನಬಹುದು. ಪ್ರತಿಯೊಂದು ಧ್ವನಿಗೂ ಒಂದೊಂದು ಅಕ್ಷರ ರೂಪವನ್ನು ನೀಡಿ ಅದನ್ನು ಬಳಕೆಗೆ ತರಲಾಯಿತು. ಅಂದರೆ ಭಾಷಾ ತಂತ್ರಜ್ಞಾನದ ಆರಂಭವೆಂದರೆ ಲಿಪಿಯ ಉಗಮ.

ಹೀಗೆ ಲಿಪಿಯ ಉಗಮವಾದ ನಂತರ ಅದನ್ನು ದಾಖಲಿಸಲು ವಿಧವಿಧವಾದ ವಸ್ತುಗಳನ್ನು ಬಳಸಲಾಯಿತು. ಅಂದರೆ ಬರೆಯಲು ಬಳಸಲಾದ ವಸ್ತುಗಳು ಹಲವಾರಿವೆ. ಇದಕ್ಕೆ ಕಾರಣ, ಆಯಾ ಪ್ರದೇಶದಲ್ಲಿ ಸಿಗುವ ಬರವಣಿಗೆಯ ಸಾಮಗ್ರಿ, ಅದರ ಪ್ರಮಾಣ, ಬಳಸಲು ಅಗತ್ಯವಾದ ತಾಂತ್ರಿಕ ಜ್ಞಾನ, ಒಂದು ಪ್ರದೇಶದಲ್ಲಿ ಬಿದಿರು ಅನುಕೂಲವಾಗಿ ಕಂಡರೆ ಮತ್ತೊಂದು ಕಡೆ ತಾಳೆಗರಿ, ಇನ್ನೊಂದು ಕಡೆ ಆವೆ ಮಣ್ಣಿನ ಹಲಗೆಗಳು, ಶಿಲೆಗಳು ಹೀಗೆ ಅನೇಕ ವಸ್ತುಗಳು ಬರವಣಿಗೆಯ ಸಾಮಗ್ರಿಗಳಾದವು. ಈಜಿಪ್ತಿನ ನೈಲ್ ನದಿ ತೀರದಲ್ಲಿ ಬೆಳೆಯುತ್ತಿದ್ದ ‘ಪ್ಯಾಪಿರಸ್’ ಎಂಬ ಒಂದು ವಿಧದ ಹುಲ್ಲನ್ನು ಸಂಸ್ಕರಿಸಿ ಬರಹಕ್ಕಾಗಿ ಉಪಯೋಗಿಸಲಾಯಿತು. ಈ ಹುಲ್ಲಿನ ಸುರುಳಿಗಳು ಬಹುಬೇಗ ಜೀರ್ಣವಾಗುತ್ತಿದ್ದ ಕಾರಣ, ಇನ್ನಿತರ ಸಾಧನ ಸಲಕರಣೆಗಳ ಕಡೆಗೆ ಮನಸ್ಸು ತಿರುಗಿತು. ಕೆಲವು ಪ್ರದೇಶಗಳಲ್ಲಿ ಹದಮಾಡಿದ ಪ್ರಾಣಿಗಳ ಚರ್ಮದ ಮೇಲೆ ಬರೆಯಲಾಯಿತು. ಮರದ ತೊಗಟೆಗಳ ಮೇಲೆ ಬರೆದರು. ಹೀಗೆ ಪರ್ಯಾಯವಾಗಿ ಬಂದ ಸಲಕರಣೆಗಳೂ ಕೂಡ ಬೇಗ ಹಾಳಾಗುತ್ತಿದ್ದವು. ಹಲಗೆಗಳು, ಬೊಂಬುಗಳ ಮೇಲೆ ಬೃಹದ್ಗ್ರಂಥಗಳನ್ನು ಬರೆಯುವುದು ಮತ್ತು ಅವುಗಳನ್ನು ಬಳಸುವುದು ಸುಲಭದ ಮಾತಾಗಿರಲಿಲ್ಲ. ಸಾಂಸ್ಕೃತಿಕ ಅಂಶ ಹಾಗೂ ಪರಂಪರೆಯೂ ಸಹ ಪರ್ಯಾಯ ಸಲಕರಣೆಗಳಿಗೆ ಕಾರಣವಾಗಿರಬೇಕು. ಉದಾಹರಣೆಗೆ, ಸತ್ತ ಪ್ರಾಣಿಯ ಚರ್ಮದ ಮೇಲೆ ಧಾರ್ಮಿಕ ಗ್ರಂಥಗಳನ್ನು, ನೀತಿ ಪಾಠಗಳನ್ನು ಬರೆಯುವುದು ಅಮಾನವೀಯ ಎಂದು ಭಾವಿಸಲಾಗಿತ್ತು ನಂತರದ ಹಂತದಲ್ಲಿ ಲೋಹದ ಪಟ್ಟಿಗಳ ಮೇಲೆ, ಬಟ್ಟೆಯ ಮೇಲೆ ಬರೆಯಲಾಯಿತು. ಆದರೆ ಇವುಗಳ ಬೆಲೆಯೂ ಅಧಿಕವಾಗಿ ದ್ದುದು, ಶಿಲೆಗಳನ್ನು ಬರಹಕ್ಕಾಗಿ ಬಳಸಿದರೂ ಬೇಕೆಂದ ಕಡೆಗೆ ಒಯ್ಯುವುದು ಸಾಧ್ಯವಿರಲಿಲ್ಲ. ಅಲ್ಲದೆ ಅವುಗಳ ಮೇಲೆ ಬರೆಯುವುದು ತ್ರಾಸದಾಯಕವಾಗಿತ್ತು. ಹಾಗಾಗಿ ತಾಳೆಗರಿಗಳ ಬಳಕೆ ಬಂದಿತು. ಇವು ಒಂದೆರಡು ಶತಮಾನಗಳ ಕಾಲ ಬಳಕೆ ಬರುವಂತಿದ್ದು ಬೆಲೆಯೂ ಸಹ ಕಡಿಮೆ. ಅಲ್ಲದೆ ಅವುಗಳನ್ನು ಒಟ್ಟಿಗೆ ಸೇರಿಸಿ ಚಿಕ್ಕ ಚಿಕ್ಕ ಕಟ್ಟುಗಳಾಗಿ ಮಾಡಿ ಕೈಯಲ್ಲಿ ಸಾಗಿಸಲು ಅನುಕೂಲವಾಗು ವಂತಿತ್ತು. ಹೀಗಾಗಿ ತಾಳೆಗರಿಗಳು ಭಾಷಾಧ್ಯಯನಕ್ಕೆ ಪೂರಕವಾಗಿ ಬಂದಿವೆ.

ತಾಳೆಗರಿಗಳ ಮೇಲೆ ಬರೆಯುವ ಕ್ರಮ ಮುಂದೆ ಕಲ್ಲಚ್ಚು, ಮುದ್ರಣ ಬರುವವರೆಗೂ ಮುಂದುವರಿಯುತ್ತದೆ. ಅಂದರೆ ಯಾಂತ್ರಿಕ ಸಾಧನದ ಆವಿಷ್ಕಾರವಾಗುವವರೆಗೂ ಮುಂದುವರಿಯುತ್ತದೆ. ಕಲ್ಲಚ್ಚಿ (ಲಿಥೋಗ್ರಫಿ) ನಲ್ಲಿ ಕಲ್ಲಿನ ಮೇಲೆ ಕೊರೆದ ವಿಷಯದ ಮೇಲೆ ಮಸಿಯನ್ನು ಹಚ್ಚಿ ಪ್ರತಿಗಳನ್ನು ತೆಗೆಯಲಾಗುತ್ತಿತ್ತು. ಅಂದರೆ ಇಲ್ಲಿ ಒಂದಕ್ಕಿಂತ ಹೆಚ್ಚು ಪ್ರತಿಗಳ ಆವಶ್ಯಕತೆ ಇದ್ದಾಗ ಈ ಮಾದರಿ ಅನುಸರಿಸಲಾಗುತ್ತಿತ್ತು. ಮುದ್ರಣ ಬಂದ ನಂತರ ಜ್ಞಾನ ಪ್ರಸಾರ, ಭಾಷಾಪ್ರಸಾರ ತೀವ್ರವಾಯಿತು.

ಯಂತ್ರಗಳ ಯುಗ

ಮುದ್ರಣ ಯಂತ್ರದ ಆವಿಷ್ಕಾರವಾದುದು ಜ್ಞಾನ ಪ್ರಸಾರದಲ್ಲಿ ಬಹು ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಿತು. ಮೊದಲು ಧಾರ್ಮಿಕ ಗ್ರಂಥಗಳ ಪ್ರಸಾರದಲ್ಲಿ ಆರಂಭಗೊಂಡು ಆ ನಂತರ ಇನ್ನಿತರ ವಲಯಗಳಿಗೂ ವಿಸ್ತರಿಸಿತು. ಈ ಅಚ್ಚಿನ ಕಲೆಯ ತಂತ್ರಜ್ಞಾನ ಅದುವರೆಗೂ ಇದ್ದಂತಹ ಬರೆಯುವ ಕ್ರಮದಿಂದ ಅಕ್ಷರವನ್ನು ಮೂಡಿಸುವ ಕ್ರಮಕ್ಕೆ ಪಲ್ಲಟಗೊಳ್ಳಲು ಕಾರಣವಾಯಿತು. ಒಂದೇ ಬಾರಿಗೆ ಪುಸ್ತಕಗಳ ಅನೇಕ ಪ್ರತಿಗಳನ್ನು ತೆಗೆಯುವುದು ಮುದ್ರಣದಿಂದ ಸಾಧ್ಯವಾದುದು ಜ್ಞಾನ ಪ್ರಸಾರಕ್ಕೆ ಸಹಾಯಕವಾಯಿತು.

ಭಾಷೆಗೆ ಸಂಬಂಧಿಸಿದಂತೆ ಬಂದಂತಹ ಇನ್ನೊಂದು ಉಪಕರಣವೆಂದರೆ ಬೆರಳಚ್ಚು ಯಂತ್ರ. ಇದೂ ಸಹ ಅಕ್ಷರಗಳನ್ನು ಬರೆಯವುದರ ಬದಲಾಗಿ ಮೂಡಿಸಬಲ್ಲಂತಹ ಒಂದು ಆವಿಷ್ಕಾರ. ಇದರಲ್ಲಿ ಅಕ್ಷರಗಳನ್ನು ಮುದ್ರಣ ಮಾಧ್ಯಮಕ್ಕೆ ಸಮೀಪವಿರುವಂತೆ ಮೂಡಿಸಿ ಇಚ್ಛಿತ ಕೆಲಸವನ್ನು ಮಾಡಿಕೊಳ್ಳ ಬಹುದಾಗಿದೆ. ಮೊದಲು ಸಾಮಾನ್ಯ ರೀತಿಯ ಬೆರಳಚ್ಚು ಯಂತ್ರಗಳು ಬಂದವು. ಸ್ವಲ್ಪಕಾಲದ ನಂತರ ವಿದ್ಯುಚ್ಛಾಲಿತ ಬೆರಳಚ್ಚು ಯಂತ್ರ ಬಂದು ಇಂದು ಮುದ್ರಣದಂತೆಯೇ ಎರಡೂ ಭಾಗದಲ್ಲಿ ನಿರ್ದಿಷ್ಟ ಮಾರ್ಜಿನ್, ಫಾಂಟ್‌ಗಳನ್ನು ಹೊಂದಿತ್ತು.

ಬೆರಳಚ್ಚು ಯಂತ್ರದಲ್ಲಿ ಒಮ್ಮೆಗೆ ಮೂರುನಾಲ್ಕು ಪ್ರತಿಗಳನ್ನು ಮಾತ್ರ ತೆಗೆಯಬಹುದಾಗಿತ್ತು. ಹೆಚ್ಚಿನ ಸಂಖ್ಯೆಯ ಪ್ರತಿಗಳನ್ನು ತೆಗೆಯಲು ಹಲವು ಬಾರಿ ಬೆರಳಚ್ಚಿಸಬೇಕಾಗುತ್ತಿತು. ಹಾಗಾಗಿ ಪ್ರತಿ ತೆಗೆಯುವ ಯಂತ್ರದ ಗೆಸ್ಟೆಟ್ನರ್ ಆವಿಷ್ಕಾರವಾಯಿತು. ಬೆರಳಚ್ಚು ಯಂತ್ರದಲ್ಲಿ ಒಂದು ಬಗೆಯ ಕಾಗದದ ಮೇಲೆ ಟೈಪು ಮಾಡಿದ ಹಾಳೆಯನ್ನು ಈ ಯಂತ್ರಕ್ಕೆ ಜೋಡಿಸಿ, ಮಸಿ ಲೇಪಿಸಿ ಅನೇಕ ಪ್ರತಿಗಳನ್ನು ತೆಗೆಯಬಹುದಾಗಿತ್ತು.

ಅಂದರೆ ಬರಹಕ್ಕೆ ಸಂಬಂಧಿಸಿದಂತೆ ಕಲ್ಲಚ್ಚು, ಮುದ್ರಣಯಂತ್ರ ಹಾಗೂ ಬೆರಳಚ್ಚು ಯಂತ್ರಗಳ ಬಳಕೆ ಭಾಷಾ ಚಟುವಟಿಕೆಗಳಿಗೆ ಪೂರಕವಾಗಿ ಬಂದಿತು. ಇಲ್ಲೆಲ್ಲಾ ಕಾಗದದ ಬಳಕೆ ಮುಖ್ಯವಾಯಿತು.

ಧ್ವನಿಯ ವಿಶ್ಲೇಷಣೆಗೆ ಸಂಬಂಧಿಸಿದಂತೆ, ಧ್ವನಿಯ ಉತ್ಪಾದನೆಯ ಸ್ವರೂಪವನ್ನು ತಿಳಿಯಲು, ಧ್ವನಿ ರಚನೆಯನ್ನು ತಿಳಿಯಲು ಭಾಷಾ ಪ್ರಯೋಗಶಾಲೆಗಳು ಬಂದವು. ಇವು ಮುಖ್ಯವಾಗಿ ಧ್ವನಿ ವಿಶ್ಲೇಷಣೆ ಹಾಗೂ ಭಾಷಾಬೋಧನೆಗೆ ನೆರವಾದವು.

ಧ್ವನಿ ವಿಶ್ಲೇಷಣೆಗೆ ಸಂಬಂಧಿಸಿದಂತೆ ಆಸಿಲೋಸ್ಕೋಪ್ ಮತ್ತು ಸ್ಪೆಕ್ಟ್ರೋಗ್ರಾಮ್ ಎಂಬ ಎರಡು ಯಂತ್ರಗಳು ಬಂದವು. ಧ್ವನಿ ಮುದ್ರಿಸಿಕೊಂಡ ಮಾತು ಅಥವಾ ಧ್ವನಿಯನ್ನು ಕಣ್ಣಿಗೆ ಕಾಣುವ ಅಲೆಗಳ ರೂಪದಲ್ಲಿ ಪಡೆಯಲು ಈ ಯಂತ್ರಗಳನ್ನು ಬಳಸಲಾಗುತ್ತದೆ. ಧ್ವನಿಮುದ್ರಿತ ರೂಪವನ್ನು ಕಣ್ಣಿಗೆ ಕಾಣುವ ತರಂಗಚಿತ್ರಗಳನ್ನಾಗಿ ಮೂಡಿಸುವ ಯಂತ್ರ ಆಸಿಲೋಸ್ಕೆಪ್. ಇಲ್ಲಿ ಧ್ವನಿಯ ಅಲೆಗಳ ಕಂಪನ ವಿಸ್ತಾರ ಮತ್ತು ತರಂಗಾಂತರಗಳನ್ನು ನೋಡಲು ಸಾಧ್ಯ. ನಿರಂತರವಾಗಿ ಹರಿಯುವ ಅಲೆಗಳಂತೆ ಕಾಣುವ ಈ ಚಿತ್ರಗಳು ಯಂತ್ರದ ಪರದೆಯ ಮೇಲೆ ಮಾಡುತ್ತವೆ.

ಧ್ವನಿಯ ಹಿಂದೆ ಅಡಗಿದ ಶಕ್ತಿಯ ತೀವ್ರತೆಯನ್ನು ವಿಶ್ಲೇಷಿಸಿ ತೋರಿಸುವ ಯಂತ್ರ ಸ್ಪೆಕ್ಟ್ರೋಗ್ರಾಮ್. ಇದರ ಮೂಲಕ ಒಂದು ಧ್ವನಿಯ ತೀವ್ರತೆ ಯಾವ ಕಾಲದಲ್ಲಿ ಎಷ್ಟು ಎಂಬುದನ್ನು ಗುರುತಿಸಬಹುದು. ಪ್ರತಿಯೊಂದು ಧ್ವನಿಯ ಉಚ್ಚಾರದ ಕಾಲಕ್ಕೆ ನಾಲಿಗೆಯ ಸ್ಥಿತಿ ಹೇಗಿರುತ್ತದೆ ಎಂಬುದು ತಿಳಿಯುತ್ತದೆ. ಈ ಧ್ವನಿ ವಿಶ್ಲೇಷಣೆಗೆ ಸಂಬಂಧಿಸಿದಂತಹ ಮಾಹಿತಿಯನ್ನು ಕಾಗದದ ಮೇಲೆ ಮುದ್ರಿಸಿಕೊಳ್ಳಬಹುದಾಗಿದೆ.

ಭಾಷಾಧ್ಯಯನಕ್ಕಾಗಿ ಮಾಹಿತಿ ಸಂಗ್ರಹ ಹಾಗೂ ದಾಖಲೀಕರಣ ಪ್ರಕ್ರಿಯೆ ಯಲ್ಲಿ ಅನುಕೂಲವಾಗುವ ಯಂತ್ರಗಳೆಂದರೆ ಟೇಪ್‌ರೆಕಾರ್ಡರ್ ಮೈಕ್ರೋಫಿಲಂ, ಮೈಕ್ರೋಫಿಶ್‌ಗಳು. ಅಧ್ಯಯನದ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಆಕರಗ್ರಂಥಗಳನ್ನು, ಇನ್ನಿತರ ಮಾಹಿತಿಗಳನ್ನು ಫೋಟೋ ತೆಗೆದು ಮೈಕ್ರೋ ಫಿಲಂಗಳ ರೂಪದಲ್ಲಿಡಬಹುದಾಗಿದೆ. ಅಂತೆಯೇ ಮೈಕ್ರೋಫಿಶ್ ಕಾರ್ಡುಗಳ ಮೇಲೆ ಅನೇಕ ಪುಟಗಳನ್ನು ದಾಖಲಿಸಿಡಬಹುದು. ಇವುಗಳನ್ನು ಇದಕ್ಕೆಂದೇ ರೂಪಿಸಲಾದ ಮೈಕ್ರೋಫಿಶ್ ರೀಡರ್‌ಗಳೆಂಬ ಯಂತ್ರಗಳ ಪರದೆಗಳ ಮೇಲೆ ಓದಬಹುದು. ಸಣ್ಣದಾದ ಅಕ್ಷರಗಳು ಈ ರೀಡರ್‌ಗಳಲ್ಲಿ ಓದಬಹುದಾದ ಗಾತ್ರದಲ್ಲಿ ಕಾಣುತ್ತವೆ. ಹಾಗಾಗಿ ಇವು ಭಾಷಾಧ್ಯಯನದ ತಂತ್ರಜ್ಞಾನದ ಸಲಕರಣೆಯಾಗಿ ಸಹಾಯಕವಾಗಿವೆ.

ಟೇಪ್‌ರೆಕಾರ್ಡರ್‌ಗಳು ಯಾವುದೇ ಧ್ವನಿಯನ್ನು ದಾಖಲಿಸಿಕೊಳ್ಳ ಬಹುದಾದ ಸಾಧನವಾಗಿವೆ. ಭಾಷಾಧ್ಯಯನಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಕ್ಕೆ ಅಗತ್ಯವಾದ ಉಪಕರಣವಾಗಿದೆ. ಮತ್ತೆ ಮತ್ತೆ ಕೇಳಬಹುದಾದ ಸೌಲಭ್ಯವಿರುವುದರಿಂದ ಮಾಹಿತಿ ವಿಶ್ಲೇಷಣೆಯಲ್ಲಿ ಸಹಕಾರಿಯಾಗಿದೆ. ಮ್ಯಾಗ್ನೆಟಿಕ್ ಟೇಪ್‌ಗಳ ಮೇಲೆ ಮಾಹಿತಿಯನ್ನು ಹಿಡಿದಿಡಬಹುದಾದ ಇದರ ಹೆಗ್ಗಳಿಕೆ ಎಂದರೆ ದಾಖಲಿಸಿದ ಮಾತನ್ನು ಹಲವು ವರ್ಷಗಳ ಬಳಿಕವೂ ಕೇಳಬಹುದಾಗಿರುವುದು.

ಭಾಷಾಧ್ಯಯನವೆಂದರೆ ಭಾಷಾ ಬೋಧನೆ ಕಲಿಕೆಯೂ ಸೇರುತ್ತದೆ. ಇಲ್ಲಿ ಬಳಕೆಯಾಗುವ ತಂತ್ರಜ್ಞಾನಿಕ ಸಲಕರಣೆಗಳೆಂದರೆ ದೃಶ್ಯಶ್ರವ್ಯ ಸಾಧನ ಗಳು ಇವುಗಳಲ್ಲಿ ಟಿವಿ, ಟೇಪ್‌ರಿಕಾರ್ಡರ್‌ಗಳು ಮುಖ್ಯವಾದವು.

ಉನ್ನತ ತಂತ್ರಜ್ಞಾನ

ಈಚಿನ ದಿನಗಳಲ್ಲಿ ಮಾನವ ಭಾಷೆಯನ್ನು ವಿವಿಧ ರೀತಿಯಲ್ಲಿ, ಸಂಸ್ಕರಿಸಲು ಅಧ್ಯಯನ ಮಾಡಲು ರೂಪಿಸಲಾಗಿರುವ ಕಂಪ್ಯೂಟರ್ ತಂತ್ರಜ್ಞಾನ, ಈ ಮುಂದೆ ಸಾಂಪ್ರದಾಯಿಕವಾಗಿ ಬಳಸಲಾದ ಎಲ್ಲ ಬಗೆಯ ತಂತ್ರ, ಬಳಕೆ, ರೀತಿ ಇತ್ಯಾದಿಗಳನ್ನು ಮೀರಿ ಉನ್ನತ ಬಗೆಯ ತಂತ್ರಜ್ಞಾನ ಎನಿಸಿಕೊಂಡಿದೆ. ವಿವಿಧ ರೀತಿಯ ಅಧ್ಯಯನಗಳಾಗಿ ಅದಕ್ಕೆಂದೇ ರೂಪಿಸಲಾದ ತಂತ್ರಾಂಶಗಳ ನೆರವಿನಿಂದ ಅಧ್ಯಯನ ಕೈಗೊಂಡು ನಿಖರವಾದ ಫಲಿತಾಂಶವನ್ನು ಪಡೆಯಲು ಸಹಕಾರಿಯಾಗಿದೆ. ಭಾಷಾಧ್ಯಯನದಲ್ಲಿ ಕಂಪ್ಯೂಟರ್ ಬಳಕೆಯ ನಂತರ ಸಹಾಯಕವಾದ ಮುಖ್ಯ ಅಂಶಗಳೆಂದರೆ ವೇಗ ಮತ್ತು ಒಮ್ಮೆಗೇ ಹಲವು ಅಂಶಗಳನ್ನು ಸಂಸ್ಕರಿಸಬಹುದಾದ ಅನುಕೂಲ. ಒಂದೇ ಅಂಶವನ್ನು ಅವಶ್ಯಕತೆಗೆ ಅನುಗುಣವಾಗಿ ವಿವಿಧ ರೀತಿಯ ವಿಶ್ಲೇಷಣೆಗೆ ಒಳಗುಮಾಡಿ ಫಲಿತಾಂಶವನ್ನು ಪಡೆಯಲು ಸೌಲಭ್ಯವಿರುವ ಈ ತಂತ್ರಜ್ಞಾನದ ಮೂಲಕ ಭಾಷೆಗೆ ಸಂಬಂಧಿಸಿದ ಅಧ್ಯಯನಗಳು ನಡೆಯುತ್ತಿವೆ.

ಆರಂಭದ ಹಂತದಲ್ಲಿ ಭಾಷಾಧ್ಯಯನ ಮಾನವನ ಸ್ವಯಂಶ್ರಮದಿಂದ ನಡೆಯಿತು. ಆನಂತರ ಯಂತ್ರಗಳು, ಸಲಕರಣೆಗಳು ಅಧ್ಯಯನಕ್ಕೆ ಸಹಾಯಕ ವಾಗಿ ಬಂದವು. ಮುದ್ರಣ ಮಾಧ್ಯಮದಲ್ಲಿ ಬರಹದ ದಿಶೆ ಬದಲಾಯಿತು. ಮುದ್ರಣದ ಅಗತ್ಯಕ್ಕೆ ತಕ್ಕಂತೆ ಅಕ್ಷರಗಳನ್ನು ರೂಪಿಸುವ ದಿಶೆ ಬದಲಾಯಿತು. ಮುದ್ರಣದ ಅಗತ್ಯಕ್ಕೆ ತಕ್ಕಂತೆ ಅಕ್ಷರಗಳನ್ನು ರೂಪಿಸುವ ಕ್ರಿಯೆ ಕಂಡುಬರು ತ್ತದೆ. ಇದು ಜ್ಞಾನಪ್ರಸಾರದ ಬಹುಮುಖ್ಯವಾದ ಮೈಲಿಗಲ್ಲು. ಆ ಬಳಿಕ ಇಂದಿನ ಕಂಪ್ಯೂಟರ್ ತಂತ್ರಜ್ಞಾನದವರೆಗೆ ಅನೇಕ ಸಾಧನ-ಸಲಕರಣೆಗಳು ಭಾಷಾಧ್ಯಯನಕ್ಕೆ ಪೂರಕವಾಗಿ ಬಂದಿವೆ. ಹೀಗೆ ಭಾಷಾಧ್ಯಯನದಲ್ಲಿ ಬಳಸಲಾದ ತಂತ್ರಜ್ಞಾನವನ್ನು ಮೂರು ರೀತಿಯಲ್ಲಿ ವರ್ಗೀಕರಿಸಬಹುದು. ಓದು ಕುರಿತಂತೆ ಮೈಕ್ರೋ ಫಿಲಂ, ಮೈಕ್ರೋ ಫಿಶ್, ಮುದ್ರಣ, ಪ್ರಾರಂಭದ ಬರಹಗಳು ಒಳಗೊಂಡರೆ, ಬರಹದ ತಂತ್ರಜ್ಞಾನವಾಗಿ ವಿವಿಧ ವಸ್ತುಗಳ ಮೇಲಿನ ಬರಹ, ಕೈ ಬರಹದಿಂದ ಯಂತ್ರ ಬರಹ ಸೇರುತ್ತದೆ. ಧ್ವನಿ ಕುರಿತಂತೆ ಆಲಿಸುವಿಕೆ ಆಸಿಲೋಸ್ಕೋಪ್, ಸ್ಪೆಕ್ಟ್ರೋಗ್ರಾಮ್, ಭಾಷಾ ಪ್ರಯೋಗಾಲಯ ಹೀಗೆ ವಿವಿಧ ತಂತ್ರಜ್ಞಾನದ ಸ್ವರೂಪವನ್ನು ಗುರುತಿಸಬಹುದು.