ಭಾಷಾ ಸಮಸ್ಯೆಯ ಪರಿಹಾರಕ್ಕಾಗಿ ಉದ್ದೇಶ ಪೂರ‌್ವಕವಾಗಿ ರೂಪಿಸುವ ಕಾರ್ಯತಂತ್ರವೇ ಭಾಷಾ ಯೋಜನೆ. ಇದು 1960ರ ನಂತರ ಸಾಮಾಜಿಕ ಭಾಷಾ ವಿಜ್ಞಾನದ ಅಂಗವಾಗಿ ವ್ಯವಸ್ಥಿತವಾಗಿ ರೂಪುಗೊಳ್ಳುತ್ತಿದೆ. ಇದರ ಅಂಗಗಳು ಎರಡು : (ಅ) ಭಾಷಾಸ್ಥಿತಿ ಯೋಜನೆ (ಸ್ಟೇಟಸ್ ಪ್ಲಾನಿಂಗ್) ಮತ್ತು (ಆ) ಭಾಷಾಂಶ ಯೋಜನೆ/ಭಾಷಾಂಗಯೋಜನೆ (ಕಾರ್ಪಸ್ ಪ್ಲಾನಿಂಗ್). ಭಾಷಾಸ್ಥಿತಿ ಯೋಜನೆಯು ಯಾವ ಯಾವ ಕ್ಷೇತ್ರದಲ್ಲಿ ಯಾವ ಯಾವ ಭಾಷೆಗಳನ್ನು ಬಳಸಬೇಕು ಎಂಬುದರತ್ತ ಗಮನಹರಿಸಿದರೆ ಭಾಷಾಂಶಯೋಜನೆಯು ಹಾಗೆ ಬಳಕೆಗೊಳ್ಳುವ ಭಾಷೆಯ ಲಕ್ಷಣಗಳು ಯಾವುವು ಎಂಬುದನ್ನು ಗುರುತಿಸುತ್ತದೆ. ಭಾಷಾ ಯೋಜನೆಯಲ್ಲಿ ನಾಲ್ಕು ಹಂತಗಳನ್ನು ಗುರುತಿಸಲಾಗಿದೆ (ಅ) ಆಯ್ಕೆ : (ಸೆಲೆಕ್ಷನ್) ಅಂದರೆ ಎರಡು ಮೂರು ಭಾಷೆಗಳು ಅಥವಾ ಒಂದೇ ಭಾಷೆಯ ಎರಡು ಮೂರು ರೂಪುಗಳೇ ಇದ್ದಾಗ ಉದ್ದೇಶಕ್ಕೆ ತಕ್ಕಂತಹ ಭಾಷೆಯನ್ನು ಅಥವಾ ಭಾಷೆಯ ರೂಪವನ್ನು ಆಯ್ಕೆ ಮಾಡುವುದು (ಆ) ಸ್ಥಿರೀಕರಣ (ಕೋಡಿಫಿಕೇಶನ್) : ಆಯ್ಕೆಗೊಂಡ ಭಾಷಾರೂಪಗಳನ್ನು ನಿಘಂಟು, ವ್ಯಾಕರಣ, ಶೈಲಿ ಕೈಪಿಡಿ ಮುಂತಾದುವುಗಳ ರಚನೆಯ ಮೂಲಕ ನಿರ್ದಿಷ್ಟವಾಗಿ  ಬಳಕೆಗೊಳ್ಳುವಂತೆ ಮಾಡುವುದು (ಇ) ಆಧುನೀಕರಣ (ಮಾಡರ್ನೈಜೇಷನ್). ಭಾಷೆ ನಿಂತ ನೀರಲ್ಲ. ಅದು ಜನಬಳಕೆಯಲ್ಲಿದ್ದಾಗ ನಿರಂತರವಾಗಿ ಹೊಸ ವಿಷಯಗಳನ್ನು ತನ್ಮೂಲಕ ಅಭಿವ್ಯಕ್ತಿಗೊಳಿಸಬೇಕಾಗುತ್ತಿರುತ್ತವೆ. ಇಂತಹ ವಿಷಯವನ್ನು ಇಂತಹ ಭಾಷೆಯ ಮೂಲಕ ಅಭಿವ್ಯಕ್ತಿಸಲು ಆಗುವುದಿಲ್ಲ ಎನ್ನುವಂತಿರಬಾರದು. ಎಲ್ಲ ಅರಿವಿನ ಅಂಶಗಳನ್ನು ಅರಗಿಸಿಕೊಂಡು ಅಭಿವ್ಯಕ್ತಿಸುತ್ತ ಜೀವಂತ ಭಾಷೆ ಬೆಳೆಯುತ್ತದೆ. ಅನುದಿನವೂ ಸಮರ್ಥವಾಗುತ್ತಾ ಹೋಗುತ್ತದೆ ಆಧುನಿಕಗೊಳ್ಳುತ್ತದೆ. ಹೀಗೆ ನಿತ್ಯನೂತನವಾಗುವ ಭಾಷೆಯ ಕ್ರಿಯೆಯೆ ಆಧುನೀಕರಣ. (ಈ) ಅನುಷ್ಠಾನ: ಭಾಷೆಯ ಬಗ್ಗೆ, ಭಾಷೆಯ ರೂಪಗಳ ಬಗ್ಗೆ ತೆಗೆದುಕೊಂಡ ತೀರ್ಮಾನಗಳು ಕಾರ್ಯರೂಪದಲ್ಲಿ ಜಾರಿಗೊಳಿಸುವುದೇ ಅನುಷ್ಠಾನ.

ವಿಶಿಷ್ಟ ಭಾಷೆಗಳಲ್ಲಿ ಭಾಷಾ ಯೋಜನೆಯ ಪ್ರಯತ್ನಗಳನ್ನು ಹಲವಾರು ದೇಶಗಳಲ್ಲಿ ಕಾಣಬಹುದು. ಭಾಷೆಯ ಶುದ್ಧತೆಯನ್ನು ನೈರ್ಮಲ್ಯವನ್ನು ಕಾಪಾಡಲು ಫ್ರಾನ್ಸ್ (1635), ಫ್ಲಾರೆನ್ಸ್ (1582), ಸ್ಪೆಯಿನ್ (1713), ಸ್ವೀಡನ್ (1786)ಗಳಲ್ಲಿ ಭಾಷಾ ಅಕಾಡೆಮಿಗಳನ್ನು ಸ್ಥಾಪಿಸಲಾಯಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಫಿನ್ಲೆಂಡ್ (1917), ಐರ‌್ಲೆಂಡ್ (1921) ಮುಂತಾದ ದೇಶಗಳು ಅಸ್ತಿತ್ವಕ್ಕೆ ಬಂದವು. ಹಾಗೆಯೇ ನಾರ್ವೆ (1814), ಗ್ರೀಸ್ (1829), ಇಸ್ರೇಲ್ (1948) ಮೊದಲಾದ ಹಳೆಯ ದೇಶಗಳು ಮರುಹುಟ್ಟು ಪಡೆದವು. ಭಾರತ, ಪಾಕಿಸ್ತಾನ ಮುಂತಾದವುಗಳಲ್ಲಿ ವಸಾಹತುಶಾಹಿ ಕೊನೆಗೊಂಡು ಸ್ವಾತಂತ್ರ್ಯವನ್ನು ಪಡೆದವು. ಈ ಸಂದರ್ಭ ಗಳಲ್ಲಿ ಈ ದೇಶಗಳಲ್ಲಿ ಆಡಳಿತ ಭಾಷೆಗಳ ಆಂಗೀಕಾರವಾಯಿತು. ಶಿಕ್ಷಣ ದಲ್ಲಿ ಬಳಸಬೇಕಾದ ಭಾಷೆಗಳ ಬಗ್ಗೆ ತೀರ್ಮಾನಗಳಾದವು. ಆ ಭಾಷೆಗಳ ಪುನರುತ್ಥಾನಕ್ಕೆ ಕಾರ್ಯಸೂಚಿಯನ್ನು ಸಿದ್ಧಪಡಿಸಿ ಜಾರಿಗೆ ತರುವ ಪ್ರಯತ್ನ ಮೊದಲಾಯಿತು.

ಭಾಷಾಯೋಜನೆಯನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ, ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಸ್ವಾಯತ್ತ ಸಂಸ್ಥೆಗಳು, ಸ್ವಯಂ ಸೇವಾಸಂಸ್ಥೆಗಳು, ಸಮಿತಿಗಳು, ಪ್ರಾಧಿಕಾರಗಳು, ನ್ಯಾಯಾಲಯಗಳು ತಜ್ಞರು ಮತ್ತು ಆಸಕ್ತ  ವ್ಯಕ್ತಿಗಳು ಸಕ್ರಿಯ ಪಾತ್ರ ವಹಿಸುತ್ತಾರೆ.

ಭಾಷಾ ನೀತಿ ಎಂದರೇನು?

ವಿಶ್ವದಲ್ಲಿ ಮೂರು ರೀತಿಯ ಭಾಷಾ ಪರಿಸ್ಥಿತಿಗಳನ್ನು ಕಾಣಬಹುದು. ಒಂದೇ ಒಂದು ಭಾಷೆ ಬಳಕೆಯಲ್ಲಿರುವ ದೇಶಗಳು, ಎರಡು ಭಾಷೆಗಳು ಬಳಕೆಯಲ್ಲಿರುವ ದೇಶಗಳು ಮತ್ತು ಎರಡಕ್ಕಿಂತ ಹೆಚ್ಚು ಎಂದರೆ ಬಹುಭಾಷೆಗಳನ್ನು ಬಳಸುತ್ತಿರುವ ಜನರಿರುವ ದೇಶಗಳು. ಸಾಮಾನ್ಯವಾಗಿ ಒಂದೇ ಭಾಷೆ ಬಳಕೆಯಲ್ಲಿರುವ ದೇಶದಲ್ಲಿ ಅದು ಅಲ್ಲಿಯ ಜನರ ಜೀವನದ ಎಲ್ಲ ಸಂದರ್ಭದಲ್ಲಿಯೂ ಬಳಕೆಗೊಂಡು ಅವರ ಎಲ್ಲ ಅಗತ್ಯಗಳನ್ನು ಪೂರೈಸುತ್ತಿರುತ್ತದೆ. ಎರಡು ಭಾಷೆಗಳು ಬಳಕೆಯಲ್ಲಿರುವ ದೇಶದಲ್ಲಿ ಎರಡೂ ಬೇರೆ ಬೇರೆ ಗುಂಪಿನ ಜನರ ಮಾತೃಭಾಷೆಗಳಾಗಿರ ಬಹುದು. ಅವು ಎರಡೂ ಗುಂಪುಗಳವರಿಗೂ ಗೊತ್ತಿರಬಹುದು ಅಥವಾ ಒಂದು ಭಾಷೆ ಕೆಲವು ಸಂದರ್ಭಗಳಿಗೆ, ಇನ್ನೊಂದು ಭಾಷೆ ಉಳಿದ ಸಂದರ್ಭ ಗಳಿಗೂ ಅಗತ್ಯವಾಗಿರಬಹುದು. ಬಹುಭಾಷಾ ಸಂದರ್ಭದಲ್ಲಿ ಭಾಷೆಗಳ ಬಳಕೆಯ ಸಂದರ್ಭ ಮತ್ತು ಸಾಧ್ಯತೆಗಳೂ ಬಹುವಾಗಿಯೇ ಇರುತ್ತವೆ. ಬಳಕೆದಾರರಿಗೆ ಆಯ್ಕೆ, ತ್ಯಾಜ್ಯದ ಸಾಧ್ಯತೆಗಳೂ ಸಾಕಷ್ಟು ಇರುತ್ತವೆ.

ಇಂತಹ ಪರಿಸ್ಥಿತಿಯಲ್ಲಿ ಯಾವ ಯಾವ ಸಂದರ್ಭಗಳಲ್ಲಿ ಯಾವ ಯಾವ ಭಾಷೆಗಳು ಬಳಕೆಗೊಳ್ಳಬೇಕು, ಅವುಗಳ ಲಕ್ಷಣಗಳು ಹೇಗಿರಬೇಕು ಮುಂತಾದ ಅಂಶಗಳ ನಿರೂಪಣೆಯೇ ಭಾಷಾನೀತಿ.

ಭಾಷಾನೀತಿ ಏಕೆ ಬೇಕು, ಅದು ಯಾವ ಕಾರ್ಯವನ್ನು ಮಾಡುತ್ತದೆ?

ಭಾಷೆ ಸಮಾಜದಲ್ಲಿ ನಾನಾ ಕಾರ್ಯಗಳನ್ನು ಮಾಡುತ್ತದೆ. ಅದು ಜನರ ಸಂಪರ್ಕ ಮಾಧ್ಯಮ. ಅವರ ಸಂಸ್ಕೃತಿಯ ವಾಹಕ. ಅವರ ಅಭಿವೃದ್ದಿಯ ಸಾಧನ. ಪ್ರತಿಕ್ಷಣವೂ ಅದು ಅವರ ಬುದ್ದಿ ಮತ್ತು ಭಾವಗಳಿಗೆ ಇಂಬು ಕೊಡುತ್ತಿರುತ್ತದೆ. ಅನ್ನ, ನೀರು, ಗಾಳಿಯಷ್ಟೇ ಸಾಮೀಪ್ಯವನ್ನು ಅವರ ಬದುಕಿನೊಟ್ಟಿಗೆ ಪಡೆದುಕೊಂಡಿರುತ್ತದೆ.

ಜೀವನದ ವಿವಿಧ ಕ್ಷೇತ್ರಗಳಲ್ಲಿ ಭಾಷೆಯ ಬಳಕೆಯನ್ನು ಆಡಳಿತ ವ್ಯವಸ್ಥೆ ನಿಯಂತ್ರಿಸತೊಡಗಿದ ಮೇಲೆ ಈ ನಿಯಂತ್ರಣದ ರೂಪುರೇಷೆಗಳನ್ನು ಸಹ ಸರ್ಕಾರವೇ ತೀರ್ಮಾನಿಸುತ್ತದೆ. ಭಾಷಾನೀತಿ ಜನಜೀವನದಲ್ಲಿ ಭಾಷೆಯ ಅಥವಾ ವಿವಿಧ ಭಾಷೆಗಳ ಪಾತ್ರವನ್ನು ನಿಯಂತ್ರಿಸುತ್ತದೆ. ಶಿಕ್ಷಣದ ವಿವಿಧ ಹಂತಗಳಲ್ಲಿ ಯಾವ ಮತ್ತು ಎಷ್ಟು ಭಾಷೆಗಳನ್ನು ಮಕ್ಕಳು ಕಲಿಯಬೇಕು ಸರ್ಕಾರವು ತನ್ನ ಆಡಳಿತದ ಬೇರೆಬೇರೆ ಹಂತಗಳಲ್ಲಿ ಯಾವ ಯಾವ ಮತ್ತು ಎಂತಹ ಭಾಷೆಯನ್ನು ಬಳಸಬೇಕು, ಜನರು ಯಾವ ಯಾವ ಭಾಷೆಯ ಮೂಲಕ ಮನೋರಂಜನೆಯನ್ನು ಪಡೆಯಬೇಕು ಇತ್ಯಾದಿ ಪ್ರಶ್ನೆಗಳಿಗೆ ಭಾಷಾನೀತಿ ಸೂಕ್ತ ಮಾರ್ಗದರ್ಶನವಾಗಿರುತ್ತದೆ.

ಭಾಷಾ ಯೋಜನೆಯ ಎರಡು ಮಾದರಿಗಳು

1. ರಚನಾ ಕೇಂದ್ರಿತ ಮಾದರಿ. ಭಾಷೆಯ ಲಿಪಿ, ಕಾಗುಣಿತ, ಬರೆವಣಿಗೆಯ ವಿಧಾನ, ಉಚ್ಚಾರಣೆಯ ಬಗೆಗಳು, ವ್ಯಾಕರಣ ನಿಯಮಗಳು ಮುಂತಾದ ವಲಯಗಳಲ್ಲಿ ನಿರ್ದಿಷ್ಟ ಬದಲಾವಣೆಗಳನ್ನು ಉದ್ದೇಶಿಸಿದ ಯೋಜನೆ.

2. ಸ್ಥಾನಮಾನ ಕೇಂದ್ರಿತ ಮಾದರಿ. ಭಾಷೆಯ ವಿವಿಧ ಬಳಕೆಗಳ ಸ್ವರೂಪ ಮತ್ತು ಉದ್ದೇಶಗಳಲ್ಲಿ ಪರಿವರ್ತನೆ ತರಲು ಉದ್ದೇಶಿಸಿದ ಯೋಜನೆ. ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವನ್ನಾಗಿ ಬಳಸುವುದು, ನ್ಯಾಯಾಲಯಗಳಲ್ಲಿ ಬಳಕೆ, ವಾಣಿಜ್ಯೋದ್ದೇಶಗಳಿಗೆ ಬಳಕೆ, ಆಡಳಿತದಲ್ಲಿ ಬಳಕೆ ಇತ್ಯಾದಿ, ನಿರ್ಣಯಗಳನ್ನು ಯೋಜನೆಯಲ್ಲಿ ಜಾರಿಗೊಳಿಸಿದರು.

ಕನ್ನಡದಲ್ಲಿ ಎರಡನೆಯ ಮಾದರಿಯ ಯೋಜನೆಗೆ ನಿದರ್ಶನಗಳು ಹೆಚ್ಚು ಸರಕಾರದ ಭಾಷಾನೀತಿಯ ಅನುಷ್ಠಾನದಲ್ಲಿ ಇಂಥ ಯೋಜನೆಗಳನ್ನು ರೂಪಿಸುವುದು, ಜಾರಿಗೊಳಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಸೇರುತ್ತವೆ. ಕನ್ನಡ ಅಭಿವೃದ್ದಿ ಪ್ರಾಧಿಕಾರ ಇದಕ್ಕೊಂದು ನಿದರ್ಶನ. ಮೊದಲ ಮಾದರಿಯ ಯೋಜನೆಗಳಲ್ಲೂ ಸರಕಾರದ ಪಾತ್ರವಿದೆ. ಆದರೆ ಇದು ಅನೌಪಚಾರಿಕ ನೆಲೆಯಲ್ಲಿ ನಡೆಯುತ್ತದೆ. ಉದಾ.ಗೆ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ವರ್ಣಮಾಲೆಯಿಂದ ಋೂಕಾರವನ್ನು ಕೈಬಿಡುವುದು. ಮುದ್ರಣಾಕ್ಷರಗಳಲ್ಲಿ ಪು ಲಿಪಿಯನ್ನು ¥ÀÄ ಎಂದು ನಿಯತಗೊಳಿಸುವುದು. ಮಾದರಿಯ ಯೋಜನೆಗಳು ಕನ್ನಡದಲ್ಲಿ ಅಧಿಕೃತವಾಗುವುದು, ವ್ಯಾಪಕವಾಗುವುದು ನಿಧಾನ.

ಮಾದರಿಗಳಲ್ಲಿ ಎಲ್ಲ ಭಾಷಾಯೋಜನಾ ಕ್ರಮಗಳನ್ನು ವಿಂಗಡಿಸುವುದು ಕಷ್ಟ. ಆದರೆ ಹೀಗೆ ವಿಭಜಿಸಿರುವುದರಿಂದ ಸ್ಥೂಲವಾಗಿ ಇಂತ ಕ್ರಮಗಳ ಮುಖ್ಯ ಗುರಿಯನ್ನು ತಿಳಿಯುವುದು ಸಾಧ್ಯವಾಗುತ್ತದೆ.

ಲಿಪಿ ಬಳಕೆ : ಲಿಪಿ ಇಲ್ಲದ ಭಾಷೆಗಳಿಗೆ ಲಿಪಿ ವ್ಯವಸ್ಥೆಯನ್ನು ಆಯ್ಕೆ ಮಾಡುವುದು ಒಂದು ಬಗೆ. ಲಿಪಿ ಇರುವ ಭಾಷೆಗಳೂ ಬೇರೆ ಬೇರೆ ಕಾರಣಗಳಿಗಾಗಿ ಬೇರೊಂದು ಲಿಪಿ ವ್ಯವಸ್ಥೆಗೆ ಬದಲಾಗುವುದು ಇನ್ನೊಂದು ಬಗೆ. ತುಳು ಭಾಷೆಯನ್ನು ಬರೆಯಲು ಕೆಲವು ಪರಿಷ್ಕರಣಗಳೊಡನೆ ಕನ್ನಡ ಲಿಪಿಯನ್ನು ಬಳಸುತ್ತಿದ್ದಾರೆ. ಕೊಂಕಣಿ ಭಾಷೆಯ ಬರವಣಿಗೆಗೆ ಕರ್ನಾಟಕದಲ್ಲಿ ಕನ್ನಡವನ್ನು ಮಹಾರಾಷ್ಟ್ರ ಗೋವಾಗಳಲ್ಲಿ ಮರಾಠಿಯನ್ನೂ ಬಳಸುವ ಪದ್ಧತಿಯಿದೆ. ಹೀಗೆ ಹೊಸದಾಗಿ ಲಿಪಿಕರಣಗೊಳ್ಳುವುದು ತುಂಬ ಸಂಕೀರ್ಣವಾದ ಪ್ರತಿಕ್ರಿಯೆ. ಲಿಪಿಯ ಚಿಹ್ನೆಗಳು ಉಪಯುಕ್ತವಾಗುವಂತೆ ಹೊಂದಿಸಿಕೊಳ್ಳುವುದು ಮತ್ತು ಹೆಚ್ಚುವರಿ ಚಿಹ್ನೆಗಳನ್ನು ರೂಪಿಸಿಕೊಳ್ಳುವುದು ಶ್ರಮ ಬಯಸುವ ಕೆಲಸ. ಇರುವ ಲಿಪಿಯ ಬದಲು ಬೇರೊಂದು ಲಿಪಿಗೆ ಬದಲಾಗುವುದರಿಂದ ಎರಡು ಬಗೆಯ ಬರವಣಿಗೆಯ ವ್ಯವಸ್ಥೆಗಳು ಸಹ ಅಸ್ಥಿತ್ವವನ್ನು ಪಡೆಯುತ್ತವೆ. ಭಾರತಕ್ಕೆ ಇದು ಅಪರೂಪ ಸನ್ನಿವೇಶವೇನಲ್ಲ. ಸಂಸ್ಕೃತವನ್ನು ದೇವನಾಗರಿಯಂತೆ ಕನ್ನಡ, ಮಲೆಯಾಳಮ್, ತೆಲುಗು ಲಿಪಿಗಳಲ್ಲಿ ಬರೆಯುವುದು. ಕನ್ನಡವನ್ನು ತೆಲಗು ತಿಗಳಾರಿ, ನಂದಿನಾಗರಿ, ದೇವನಾಗರಿಯಲ್ಲಿ ಬರೆಯುವುದು ಬಳಕೆಯಲ್ಲಿರುವುದೇ ಆಗಿದೆ. ಚೀನೀ ಭಾಷೆಯನ್ನು ರೋಮನ್ ಲಿಪಿಯಲ್ಲಿ ಬರೆಯುವುದಕ್ಕೆ ಅವಕಾಶವಾಗುವಂತೆ ಫಿನ್ಯಿನ್ ಎಂಬ ಲಿಪಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕನ್ನಡವನ್ನು ಅಂತಾರಾಷ್ಟ್ರೀಯ ಗಣಕ ಜಾಲಕ್ಕಾಗಿ (ಇಂಟರ್ನೆಟ್) ರೋಮನ್ ಲಿಪಿಯಲ್ಲಿ ಬರೆಯುವುದು ಚಿನ ಪ್ರವೃತ್ತಿಯಾಗಿದೆ.

3. ಭಾರತದ ಎಲ್ಲ ಲಿಪಿಗಳನ್ನೂ ಬಿಟ್ಟು ರೋಮನ್ ಲಿಪಿಯನ್ನು ಮಾತ್ರ ಬಳಸಬೇಕೆಂದು ಪ್ರತಿಪಾದಿಸುವ ಸಂಸ್ಥೆ (ರೋಮನ್ ಲಿಪಿ ಪರಿಷದ್) ಸಂಸ್ಥೆ ಸೌಲಭ್ಯದ ಕಾರಣಗಳನ್ನು ಮುಂದಿಟ್ಟು ರೋಮನ್ ಲಿಪಿಯನ್ನು ಬಳಸಲು ಸೂಚಿಸುತ್ತದೆ. ಬೆರಳಚ್ಚು ಯಂತ್ರಗಳು, ಗಣಕಕಾರ್ಯವಾಹಿಗಳು ಮತ್ತಿತರ ಆಧುನಿಕ ಸೌಲಭ್ಯಗಳ ಉಪಯುಕ್ತ ಬಳಕೆಗಾಗಿ ಮತ್ತು ಆರ್ಥಿಕ ಮಿತವ್ಯಯಕ್ಕಾಗಿ ಒಂದೇ ಲಿಪಿಯನ್ನು ಅದು ರೋಮನ್ ಲಿಪಿ ಬಳಸುವುದು ಸೂಕ್ತವೆಂದು ವಾದಿಸುತ್ತದೆ. ಆದರೆ ಭಾರತೀಯ ಭಾಷೆಗಳಲ್ಲಿ ಯಾವುವೂ ಪರ್ಯಾಯ ವ್ಯವಸ್ಥೆಗೆ ಒಪ್ಪಿಗೆ ನೀಡಿಲ್ಲ. ಲಿಪಿಗಳು ಆಯಾ ಭಾಷಾ ಸಮುದಾಯಗಳ ಚಹರೆಗಳಾಗಿವೆ. ಅವನ್ನು ಬಿಟ್ಟುಕೊಡಲು ಯಾರೂ ಸಿದ್ಧರಿಲ್ಲ.

ಆಡಳಿತ ಭಾಷೆ : ಸರ್ಕಾರದ ಆಡಳಿತವನ್ನು ಯಾವ ಭಾಷೆಯ ಮೂಲಕ ನಡೆಸಬೇಕೆಂದು ಸಂವಿಧಾನಾತ್ಮಕವಾಗಿ/ಕಾನುನುಬದ್ಧವಾಗಿ ನಿರ್ದೇಶಿತ ವಾಗುತ್ತದೆಯೋ ಆ ಭಾಷೆಯೇ ಆಡಳಿತ ಭಾಷೆ. ಕೆಲವು ದೇಶಗಳಲ್ಲಿ ಹಾಗೆ ನಿರ್ದೇಶಿತವಾಗಿಲ್ಲದೇ ಇದ್ದರೂ ಸಾಮಾಜಿಕ ಪರಿಸ್ಥಿತಿಯೇ ಯಾವುದೇ ಆಡಳಿತ ಭಾಷೆಯಾಗಿರಬೇಕು ಎಂಬುದನ್ನು ತೀರ್ಮಾನಿಸಿ ಬಳಕೆಗೆ ತಂದು ಕೊಂಡಿರುತ್ತದೆ.

ರಾಷ್ಟ್ರಭಾಷೆ : ರಾಷ್ಟ್ರಧ್ವಜ, ರಾಷ್ಟ್ರಪಕ್ಷಿ, ರಾಷ್ಟ್ರಗೀತೆಯಂತೆ ರಾಷ್ಟ್ರ ಚಿಹ್ನೆಗಳಲ್ಲೊಂದು ರಾಷ್ಟ್ರಭಾಷೆ. ಇದು ದೇಶದ ಜನರ ಭಾಷಾ ಅಗತ್ಯಗಳನ್ನು ಪೂರೈಸುತ್ತದೆ ಎಂಬುದು ಒಂದು ನಂಬಿಕೆ. ಭಾರತದಲ್ಲಿ ಆಡಳಿತ ಭಾಷೆಗಳನ್ನು ಸಂವಿಧಾನಾತ್ಮಕವಾಗಿ ಶಾಸನಾತ್ಮಕವಾಗಿ ಗುರುತಿಸಲಾಗಿದೆ. ಭಾರತದಲ್ಲಿ ರಾಷ್ಟ್ರಭಾಷೆಯನ್ನು ಗುರುತಿಸಿಲ್ಲ. ಆದರೆ ಕೆಲವೊಮ್ಮೆ ಹಿಂದಿಯನ್ನು, ಕೆಲವೊಮ್ಮೆ ಎಂಟನೆಯ ಅನುಸೂಚಿಯಲ್ಲಿ ಉಲ್ಲೇಖ ಗೊಂಡಿರುವ ಭಾಷೆಗಳನ್ನು, ಮತ್ತೆ ಕೆಲವೊಮ್ಮೆ ದೇಶದಲ್ಲಿ ಬಳಕೆ ಗೊಳ್ಳುತ್ತಿರುವ ಎಲ್ಲ ಭಾಷೆಗಳನ್ನು ಸಮಯೋಚಿತವಾಗಿ ರಾಷ್ಟ್ರಭಾಷೆ ಎಂದು ಕರೆಯುವುದು ರೂಢಿಯಾಗಿದೆ.