ಭಾಷಾ ವರ್ಗಗಳು

ಜಗತ್ತಿನ ಸಾವಿರಾರು ಭಾಷೆಗಳು ತಮಗೆ ತಾವು ಪ್ರತ್ಯೇಕವೆಂಬಂತೆ ತೋರಿದರೂ ಅವೆಲ್ಲವನ್ನೂ ವರ್ಗೀಕರಿಸುವ ಪ್ರಯತ್ನಗಳು ಕಳೆದ ಎರಡು ಶತಮಾನಗಳಿಂದ ನಡೆಯುತ್ತ ಬಂದಿದೆ. ಪ್ರತಿಯೊಂದು ವರ್ಗೀಕರಣವೂ ಕೆಲವು ತತ್ವಗಳನ್ನು ಅವಲಂಬಿಸುವುದಷ್ಟೆ. ಮೊದಮೊದಲು ಭಾಷಾಶಾಸ್ತ್ರಜ್ಞರು ಜಗತ್ತಿನ ಎಲ್ಲ ಭಾಷೆಗಳಿಗೆ ಮೂಲವಾದ ಭಾಷೆಯೊಂದು ಇದ್ದಿತೆಂದು ಕಲ್ಪಿಸಿಕೊಂಡರು. ಕಾಲ ಕಳೆದಂತೆ ಆ ಭಾಷೆ ಹಲವು ಭಾಷಾ ರೂಪಗಳಾಗಿ ಒಡೆಯಿತೆಂದೂ ಅನಂತರ ಆ ಭಾಷಾರೂಪಗಳೇ ಪ್ರತ್ಯೇಕ ಭಾಷೆಗಳಾದವೆಂದು ತಿಳಿದರು. ಈ ಪ್ರಕ್ರಿಯೆ ಮುಂದುವರೆದು ಹಲವಾರು ಸಾವಿರ ಭಾಷೆಗಳು ಬಳಕೆಗೆ ಬಂದಿವೆಯೆಂದು ಭಾವಿಸಿದರೆ ಆಗ ಈ ಎಲ್ಲ ಭಾಷೆಗಳಿಗೂ ವಾಂಶಿಕ ಸಂಬಂಧವಿದೆಯೆಂದಾಯಿತು. ಇದು ವೃಕ್ಷ ಮಾದರಿ ರಚನೆ. ಮೂಲ ಕಾಂಡದಿಂದ ಉಪಕಾಂಡಗಳೂ, ಅವುಗಳಿಂದ ಕೊಂಬೆರೆಂಬೆಗಳೂ ಟಿಸಿಲೊಡೆದ ಮಹಾಭಾಷಾ ವೃಕ್ಷವನ್ನು ಪುನಾರಚಿಸುವ ಕೆಲಸದಲ್ಲಿ ಭಾಷಾಶಾಸ್ತ್ರರು ತೊಡಗಿದರು.

ಯುರೋಪಿಯನ್ನರು ತಂತಮ್ಮ ಭಾಷೆಗಳು ಲ್ಯಾಟಿನ್ ಜನ್ಯವೆಂಬ ಅಂಶವನ್ನು ಮನಗಂಡಿದ್ದರು. ಭಾರತದಲ್ಲೂ ಭಾಷೆಗಳ ನಡುವೆ ಇರುವ ಸಂಬಂಧವನ್ನು ಅರಿತಿದ್ದಕ್ಕೆ ಸೂಚನೆಗಳಿವೆ. ಪ್ರಾಕೃತ ಭಾಷೆಗಳೆಂದು ಹಲವು ಭಾಷೆಗಳನ್ನು ಒಟ್ಟಾಗಿರಿಸಿದ್ದು ಇದಕ್ಕೊಂದು ನಿದರ್ಶನ. ಯುರೋಪಿನ ಭಾಷಾಶಾಸ್ತ್ರಜ್ಞರು ತಮ್ಮ ಭಾಷೆಗಳ ಜತೆಗೆ ಜಗತ್ತಿನ ಇನ್ನಿತರ ಭಾಷೆಗಳೆಷ್ಟೋ ಸೇರುವುದನ್ನು ವ್ಯವಸ್ತಿತವಾಗಿ ಕಂಡುಕೊಂಡರು. ಮೂಲಭಾಷೆ: ಅದರಿಂದ ಬೆಳೆದ ಉಪವಂಶಗಳು: ಆಯಾ ಉಪವಂಶದ ಸದಸ್ಯಭಾಷೆಗಳು ಇವೆಲ್ಲವನ್ನೂ ಗುರುತಿಸುವ ವಿಧಾನವನ್ನು ಬೆಳೆಸಿದರು.

ಭಾಷಾ ವಂಶಗಳ ಪುನಾರಚನೆಯಲ್ಲಿ ಎರಡು ಮುಖ್ಯ ವಿಧಾನಗಳಿವೆ. 1. ತೌಲನಿಕ ಮತ್ತು 2. ಆಂತರಿಕ. ಭಾಷಾವಂಶಗಳ ಸದಸ್ಯ ಭಾಷೆಗಳನ್ನು ಜ್ಞಾತಿಗಳೆನ್ನುತ್ತಾರೆ. ಜ್ಞಾತಿಗಳಲ್ಲಿ ದೊರೆತ ಭಾಷಾ ಮಾಹಿತಿಗಳನ್ನು ಹೋಲಿಸಿ ಮೂಲ ರೂಪ ಯಾವುದೆಂದು ಊಹಿಸುವುದು ತೌಲನಿಕ ವಿಧಾನ. ಒಂದೇ ಭಾಷೆಯ ವಿವಿಧ ಚಾರಿತ್ರಿಕ ಘಟ್ಟಗಳ ಭಾಷಾ ಮಾಹಿತಿಗಳನ್ನು ಪರಿಗಣಿಸಿ ಆ ಭಾಷೆಯಲ್ಲಿ ನಡೆದ ಪರಿವರ್ತನೆಗಳನ್ನು ಗುರುತಿಸುವುದು ಆಂತರಿಕ ವಿಧಾನ. ಭಾಷಾವಂಶಗಳ ಪುನಾರಚನೆಯಲ್ಲಿ ಇವೆರಡನ್ನೂ ಪೂರಕವಾಗಿ ಬಳಸಿ ಕೊಳ್ಳುತ್ತಾರೆ.

ಒಂದು ಚಿಕ್ಕ ಉದಾಹರಣೆಯಿಂದ ತೌಲನಿಕ ಪುನಾರಚನೆಯ ವಿಧಾನದ ಕೆಲವು ನೆಲೆಗಳನ್ನೂ ತಿಳಿಯಬಹುದು. ಸಂಸ್ಕೃತ, ಅವೆಸ್ತನ್ (ಪಾರ್ಸಿಗಳ ಧರ್ಮಗ್ರಂಥದ ಭಾಷೆ), ಗ್ರೀಕ್, ಲ್ಯಾಟಿನ್ ಮತ್ತು ಗಾಥಿಕ್‌ಗಳು ಜ್ಞಾತಿ ಭಾಷೆಗಳು. ಈ ಭಾಷೆಗಳಲ್ಲಿ ಒಂದೇ ಅರ್ಥವುಳ್ಳ ಪದಗಳ ಪಟ್ಟಿಯೊಂದನ್ನು ಈ ಕೆಳಗೆ ಕೊಟ್ಟಿದೆ.

ಕ್ರಸಂ ಸಂಸ್ಕೃತ ಅವೆಸ್ತನ್ ಗ್ರೀಕ್ ಲ್ಯಾಟಿನ್ ಗಾಥಿಕ್ ಅರ್ಥ
1 yugam yugam Zugon iugum juk ‘ನೊಗ’
2 idam idam idam   ita ‘ಅದು’
3 rikta rixta lipto re-lictus   ‘ಹಿಂದಕ್ಕೆ ಬಿಟ್ಟ’
4 dasa dasa desk decem taihunm ‘ಹತ್ತು’
5 astau asta okto octo ahtau ‘ಎಂಟು’
6 ajati azaiti ago aka   ‘ಓಡಿಸು ಒತ್ತಾಯಿಸು’
7 pita pita pates pater fadar ‘ತಂದೆ’

ಈ ಪದಗಳ ಮೊದಲ ಸ್ವರವನ್ನು ಪುನಾರಚಿಸಬೇಕು. ಅಂದರೆ ಈ ಭಾಷೆಗಳ ಮೂಲಭಾಷೆಯಲ್ಲಿ ಯಾವ ಸ್ವರ ಇದ್ದಿತೆಂದು ತಿಳಿಯಬೇಕು.

1, 2 ಮತ್ತು 5 ನೇ ಸಾಲಿನ ಪದಗಳನ್ನು ಗಮನಿಸಿದಾಗ ಎಲ್ಲ ಜ್ಞಾತಿ ಭಾಷೆಗಳ ಪದಗಳಲ್ಲೂ ಒಂದೇ ಸ್ವರವಿರುವುದು ಗೊತ್ತಾಗುತ್ತದೆ. ಆದ್ದರಿಂದ ಮೂಲಭಾಷೆಯ ಪದಗಳಲ್ಲಿ ಕ್ರಮವಾಗಿ *u, *i ಮತ್ತು*a  ಸ್ವರಗಳು ಇದ್ದವೆಂದು ನಿರ್ಣಯಿಸಲು ಸಾಧ್ಯ. 3ನೇ ಸಾಲಿನ ಪದಗಳಲ್ಲಿ a,e ಮತ್ತು aiಗಳಿವೆ. ಹೆಚ್ಚು ಭಾಷೆಗಳಲ್ಲಿ a ಸ್ವರವಿದೆಯಾಗಿ ಮೂಲಪದದಲ್ಲೂ *a ಇದ್ದಿತೆನ್ನುವುದು ಸಾಧ್ಯ. ಆದರೆ ಬಹುಮತದ ಸೂತ್ರವನ್ನು ಎಲ್ಲ ಕಡೆಯೂ ಅನ್ವಯಿಸಬಾರದು. 4 ಮತ್ತು 6ನೇ ಸಾಲಿನ ಪದಗಳನ್ನು ನೋಡೋಣ.

4 ನೇ ಸಾಲಿನ ಪದಗಳಲ್ಲಿ ಹೆಚ್ಚಿನವು a ಸ್ವರವನ್ನು ಹೊಂದಿವೆ. ಆದ್ದರಿಂದ ಮೂಲಭಾಷೆಯಲ್ಲಿ *a ಸ್ವರವಿದ್ದಿತೆಂದು ತೀರ್ಮಾನಿಸಿದರೆ ಹೇಗೆ? ಈಗ 5 ನೇ ಸಾಲಿನ ಪದಗಳ ಪುನಾರಚಿತ ರೂಪದಲ್ಲಿ *a  ಸ್ವರವನ್ನು ಇರಿಸಿದ್ದೇವೆ. ಮತ್ತು ಗ್ರೀಕ್ ಮತ್ತು ಲ್ಯಾಟಿನ್‌ಗಳಲ್ಲೂ ಅದೇ ಸ್ವರ ಉಳಿದಿದೆ. ಒಂದು ವೇಳೆ ಮೂಲ *a  ಸ್ವರ ಬದಲಾದರೂ ಅದು ಗ್ರೀಕ್ ಮತ್ತು ಲ್ಯಾಟಿನ್‌ಗಳಲ್ಲಿ a ಆಗಿರುವುದಕ್ಕೆ 3 ನೇ ಸಾಲಿನ ಪದಗಳಲ್ಲಿ ನಿದರ್ಶನವಿದೆ. ಹಾಗಾಗಿ ಮೂಲ *a ಗ್ರೀಕ್ ಮತ್ತು ಲ್ಯಾಟಿನ್‌ಗಳಲ್ಲಿ o ಆಗಿ ಪರಿವರ್ತನೆಯಾಗಿದೆ ಎಂದು ಸಾಧಿಸುವುದು ತಪ್ಪಾಗುತ್ತದೆ. ಏಕೆಂದರೆ ಧ್ವನಿ ಪರಿವರ್ತನೆಗಳು ನಿಯತವಾಗಿ ನಡೆಯುತ್ತವೆ. ಆದ್ದರಿಂದ 4ನೇ ಸಾಲಿನ ಪದಗಳಲ್ಲಿ ಮೂಲರೂಪದಲ್ಲಿ *o ಸ್ವರವಿದ್ದಿತೆಂದೂ ಅದು ಸಂಸ್ಕೃತ ಅವೆಸ್ತನ್ ಮತ್ತು ಗಾಥಿಕ್‌ಗಳಲ್ಲಿ ಅನಂತರ a ಸ್ವರವಾಯಿತೆಂದು ಹೇಳುವುದು ಹೆಚ್ಚು ಸರಿ.

6ನೇ ಸಾಲಿನ ಪದಗಳು ಇನ್ನೂ ಕಠಿಣವಾದ ಸಮಸ್ಯೆಯನ್ನು ತಂದೊಡ್ಡುತ್ತದೆ. i ಮತ್ತು a  ಎಂಬ ಎರಡು ಸ್ವರಗಳಿವೆ. ಅವುಗಳಲ್ಲಿ ಯಾವುದನ್ನು ಮೂಲಸ್ವರವೆಂದು ಪರಿಗಣಿಸಿದರೂ ಕಷ್ಟ. ಏಕೆಂದರೆ i ಸ್ವರ a ಆಗುವುದಕ್ಕೆ ಅಥವಾ a ಸ್ವರವು i ಆಗುವುದಕ್ಕೆ ಈ ಭಾಷೆಗಳಲ್ಲಿ ನಿದರ್ಶನಗಳು ಲಭಿಸುವುದಿಲ್ಲ. ಹಾಗಾಗಿ ಪುನಾರಚಿತವಾದ ಮೂಲಪದದಲ್ಲಿ ಬೇರೊಂದು ಸ್ವರವನ್ನು ಕಲ್ಪಿಸಿಕೊಂಡು, ಅದು ಸಂಸ್ಕೃತ ಮತ್ತು ಅವೆಸ್ತನ್‌ಗಳಲ್ಲಿ i ಆಗಿಯೂ ಉಳಿದೆಡೆ a ಆಗಿಯೂ ಬದಲಾಯಿತೆಂದು ಹೇಳುವುದು ಸಾಧ್ಯ.

ಈ ಮೇಲಿನ ನಿದರ್ಶನದಿಂದ ಚಾರಿತ್ರಿಕ ಪುನಾರಚನೆಯ ವಿಧಾನದ ಕೆಲವು ನೆಲೆಗಳು ತಿಳಿದು ಬರುತ್ತದೆ. ಪೂರ್ವ ಭಾಷಾರೂಪವನ್ನು ನಿರ್ಣಯಿಸುವಾಗ ಕೊನೆಯ ಮಾತನ್ನು ಹೇಳಲು ಸಾಧ್ಯವಾಗುವುದಿಲ್ಲ. ಹೊಸ ಮಾಹಿತಿಗಳು ದೊರೆತಾಗ ಮತ್ತು ಪರ್ಯಾಯವಾದ ವಿಶ್ಲೇಷಣಾ ವಿಧಾನಗಳು ದೊರೆತಾಗ ನಿರ್ಧಾರಗಳು ಬದಲಾಗುವುದು ಸಾಧ್ಯ.

ಜಗತ್ತಿನ ಭಾಷೆಗಳನ್ನು ವರ್ಗೀಕರಿಸಲು ಹಲವು ವಿಧಾನಗಳನ್ನು ಅನುಸರಿಸುವರು. ಅವುಗಳಲ್ಲಿ ಕೆಲವು ಸರಳವಾದವು. ಮತ್ತೆ ಕೆಲವು ಸಂಕೀರ್ಣ ಅಲ್ಲದೆ ಒಂದೊಂದೂ ಬೇರೆ ಬೇರೆ ಎಂದು ಹೇಳುವುದೂ ಸಾಧ್ಯವಿಲ್ಲ. ಎಲ್ಲ ಭಾಷೆಗಳಲ್ಲೂ ಭೌಗೋಳಿಕವಾಗಿ ವರ್ಗೀಕರಿಸುವುದು ಒಂದು ವಿಧಾನ. ಭಾರತದ ಭಾಷೆಗಳು, ಆಫ್ರಿಕಾದ ಭಾಷೆಗಳು, ಅಮೆರಿಕಾದ ಭಾಷೆಗಳು, ಚೈನಾದ ಭಾಷೆಗಳು ಹೀಗೆ. ಈ ವಿಧಾನ ಸರಳ. ಅಲ್ಲದೆ ಕೆಲವೊಮ್ಮೆ ನಿರುಪಯುಕ್ತ ಭೌಗೋಳಿಕ ವ್ಯಾಪ್ತಿಯನ್ನು ರಾಜಕೀಯವಾಗಿ ನಿರ್ಧರಿಸಲು ಹೊರಟಾಗ ಏನಾಗುತ್ತದೆ? ಕೆಲವು ನೂರು ಚದರ ಮೈಲು ವಿಸ್ತಾರದ ಚಿಕ್ಕ ರಾಷ್ಟ್ರಗಳಿವೆ. ಹಾಗೇ ಹಲವಾರು ಸಾವಿರ ಚದರ ಮೈಲು ವಿಸ್ತೀರ್ಣದ ಬೃಹದ್ ರಾಷ್ಟ್ರಗಳಿವೆ. ಅಲ್ಲದೆ ಬದಲಾಗುವ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಗಡಿರೇಖೆಗಳೂ ಬದಲಾಗುತ್ತವೆ. ರಶಿಯಾ ಈಗ ಪ್ರತ್ಯೇಕ ರಾಷ್ಟ್ರ. ಒಂದೆರೆಡು ದಶಕಗಳ ಹಿಂದೆ ಅದು ಹಲವು ರಾಷ್ಟ್ರಗಳ ಸಮುದಾಯವಾಗಿತ್ತು. ಹೀಗೆ ಭೌಗೋಳಿಕವಾಗಿ ಭಾಷೆಗಳನ್ನು ಒಗ್ಗೂಡಿಸಲು ಸೀಮಿತ ಉದ್ದೇಶಕ್ಕೆ ಉಪಯುಕ್ತವಾಗಿದೆ. ಅಲ್ಲದೆ ಬೃಹತ್ ವಲಯಗಳ ಭಾಷೆಗಳನ್ನು ಗಮನಿಸಿದಾಗ ಮಾತ್ರ ಮುಖ್ಯವೆನಿಸುತ್ತದೆ.

ಜನಾಂಗಿಕವಾಗಿ ಭಾಷೆಗಳನ್ನು ಗುಂಪು ಮಾಡುವುದು ಇನ್ನೊಂದು  ವಿಧಾನ. ಇದೂ ಸೀಮಿತಿ ವ್ಯಾಪ್ತಿಯನ್ನು ಹೊಂದಿದೆ. ಏಕೆಂದರೆ ಜನಾಂಗಗಳ ಸ್ವರೂಪ ಮತ್ತು ಅವುಗಳಿಗೆ ಸೇರಿದ ಜನರು ಆಡುವ ಭಾಷೆಗಳು ಇವುಗಳ ಸಂಬಂಧ ಅಸ್ಪಷ್ಟವಾಗಿದೆ. ಈಗಲೂ ಆರ್ಯನ್ ಭಾಷೆಗಳು, ದ್ರಾವಿಡ ಭಾಷೆಗಳು, ಸೆಮಿಟೆಕ್ ಭಾಷೆಗಳು ಎಂದು ಭಾಷಾ ಗುಂಪುಗಳನ್ನು ಹೇಳುವಾಗ ಜನಾಂಗಗಳನ್ನು ಆಧರಿಸಿದ ವರ್ಗೀಕರಣದ ಸೂಚನೆಯೇ ಇದೆ. ಚರಿತ್ರೆಯ ಬೆಳವಣಿಗೆಯೊಡನೆ ಜನಾಂಗಗಳ ನಡುವಣ ಸಂಪರ್ಕಗಳು ಬೆಳೆದಿವೆ. ಭೌಗೋಳಿಕ ಗಡಿರೇಖೆಗಳ ಪಲ್ಲಟಗಳು ನಡೆದಿವೆ. ಆದ್ದರಿಂದ ಭೌಗೋಳಿಕ ಮತ್ತು ಜನಾಂಗಿಕ ವರ್ಗೀಕರಣಗಳು ಖಚಿತಗೊಳ್ಳದೇ ಹೋಗುತ್ತವೆ. ಈ ಬಗೆಯ ವರ್ಗೀಕರಣದ ಸೂಚನೆಗಳು ಮಾತ್ರ ಇನ್ನಿತರ ವರ್ಗೀಕರಣಗಳಲ್ಲಿ ಕೊಡಲಾದ ಹೆಸರುಗಳಲ್ಲಿ ಉಳಿದುಕೊಂಡಿವೆ. ಭೌಗೋಳಿಕ: ಫೆಸಿಫಿಕ್ ಭಾಷೆಗಳು, ಫಿನೋ – ಉಗ್ರಿಕ್ ಭಾಷೆಗಳು. ಜನಾಂಗಿಕ: ದ್ರಾವಿಡ, ಇಂಡೋ – ಆರ್ಯನ್.

ಹೆಚ್ಚು ಪ್ರಚಲಿತದಲ್ಲಿರುವ ಮತ್ತೆರಡು ಭಾಷಾ ವರ್ಗೀಕರಣದ ಮಾದರಿಗಳು: ವಾಂಶಿಕ ಮತ್ತು ರಾಚನಿಕ.

ವಾಂಶಿಕ ವರ್ಗೀಕರಣದ ವಿಧಾನವನ್ನು ಈಗಾಗಲೇ ಮೇಲೆ ವಿವರಿಸ ಲಾಗಿದೆ. ಜ್ಞಾತಿ ಭಾಷೆಗಳಿಗೆ ಮೂಲಭಾಷೆಯೊಂದು ಇರುವುದೆಂದು ಕಲ್ಪಿಸಿ ಕೊಂಡು ಆ ಭಾಷೆಯಿಂದ ಕಾಲಾನುಕ್ರಮದಲ್ಲಿ ಬೇರೆ ಬೇರೆ ಭಾಷೆಗಳು ಆಕಾರ ಪಡೆದದ್ದನ್ನು ಈ ವರ್ಗೀಕರಣದಲ್ಲಿ ನಿರೂಪಿಸುವರು. ಜ್ಞಾತಿ ಪದಗಳನ್ನು ಗುರುತಿಸಿ ಅವುಗಳ ನೆರವಿನಿಂದ ಭಾಷಾ ವಂಶದ ವಿಕಸನದ ಕ್ರಮವನ್ನು ಪುನಾರಚಿಸುವ ವಿಧಾನವಿಲ್ಲಿ ಮುಖ್ಯ. ಬೇರೆ ಬೇರೆ ಕಾಲದ ಲಿಖಿತ ದಾಖಲೆಗಳಿದ್ದರೆ ಈ ವರ್ಗೀಕರಣ ಸುಲಭವಾಗುತ್ತದೆ. ಇಂಡೋ ಯುರೋಪಿ ಯನ್ ಭಾಷೆಗಳ ವಂಶವೊಂದನ್ನು ಕಂಡುಕೊಳ್ಳುವ ಮೂಲಕ ಈ ಬಗೆಯ ವರ್ಗೀಕರಣ ಮೊದಲಾಗಿ ಕಳೆದ ಎರಡು ಶತಮಾನಗಳಿಂದ ಮುಂದುವರೆಯುತ್ತಿದೆ. ಲಿಖಿತ ದಾಖಲೆಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯದ ಎಷ್ಟೋ ಭಾಷೆ ಗಳಿಗೆ ಸಂಬಂಧಿಸಿದಂತೆ ಈ ವರ್ಗೀಕರಣ ಅಷ್ಟು ಯಶಸ್ವಿಯಾಗಿಲ್ಲ.

ರಾಚನಿಕ ವರ್ಗೀಕರಣದಲ್ಲಿ ಭಾಷೆಗಳ ರಚನೆಯಲ್ಲಿ ಕಂಡು ಬರುವ ಸಾಮ್ಯಗಳನ್ನು ಆಧರಿಸಿ ವರ್ಗೀಕರಿಸಲಾಗುತ್ತದೆ. ಭಾಷೆಯ ವಿವಿಧ ಅಂಗ ಗಳೆಂದರೆ ಧ್ವನಿ, ಪದ ಮತ್ತು ವಾಕ್ಯ. ಈ ಅಂಗಗಳ ಸ್ವರೂಪದಲ್ಲಿ ಇರುವ ಹೋಲಿಕೆಯನ್ನು ಆಧರಿಸಿ ಭಾಷೆಗಳನ್ನು ವರ್ಗೀಕರಿಸುವುದು ಸಾಧ್ಯ. ಉದಾ.ಗೆ ಸ್ವರಗಳ ಸಂಖ್ಯೆಯನ್ನು ಗಮನಿಸುವುದಾದರೆ ಮೂರು ಸ್ವರಗಳಿಂದ ಭಾಷೆಗಳು, ಐದು ಸ್ವರಗಳಿರುವ ಭಾಷೆಗಳು ಎಂದು ಗುಂಪುಗೂಡಿಸುವುದು ಸಾಧ್ಯ. ವಾಕ್ಯಗಳಲ್ಲಿ ಬರುವ ಪದಾನುಕ್ರಮಣಿಯನ್ನು ಆಧರಿಸಿದರೆ ಆಗ ಮುಖ್ಯವಾಗಿ ಮೂರು ಪದವರ್ಗಗಳನ್ನು ಗಮನಿಸಬೇಕಾಗುವುದು. ವಿಷಯ, ಕರ್ಮ ಮತ್ತು ಕ್ರಿಯೆ ಎಂಬ ಈ ವರ್ಗಕ್ಕೆ ಸೇರಿದ ವಾಕ್ಯ ಭಾಗಗಳು ಯಾವ ಅನುಕ್ರಮದಲ್ಲಿ ವಾಕ್ಯದಲ್ಲಿ ಬರುತ್ತವೆಂದು ಗುರುತಿಸಿಕೊಂಡು ಅದಕ್ಕನುಗುಣವಾಗಿ ವಿಂಗಡಿಸುವುದು ವಿಷಯ, ಕರ್ಮ ಮತ್ತು ಕ್ರಿಯೆ ಒಂದು ಅನುಕ್ರಮವಾದರೆ (ಉದಾ: ಕನ್ನಡ) ವಿಷಯ, ಕ್ರಿಯೆ ಮತ್ತು ಕರ್ಮ ಇನ್ನೊಂದು ಅನುಕ್ರಮ (ಉದಾ: ಇಂಗ್ಲಿಶ್)

ರಾಚನಿಕ ವರ್ಗೀಕರಣದಲ್ಲಿ ವಾಂಶಿಕವಾಗಿ ಸಂಬಂಧಪಡದ ಭಾಷೆಗಳು ಒಂದೇ ಬಗೆಯ ರಚನೆಯನ್ನು ಹೊಂದಿದ್ದರೆ ಆಗ ಒಂದೇ ರಾಚನಿಕ ವರ್ಗಕ್ಕೆ ಸೇರುತ್ತವೆ. ಕನ್ನಡದಂತೆ ಜಪಾನೀ ಭಾಷೆಯಲ್ಲಿಯೂ ಪದಾನುಪೂರ್ವಿ ವಿಷಯ, ಕರ್ಮ ಮತ್ತು ಕ್ರಿಯೆ. ಆದ್ದರಿಂದ ಜಪಾನೀ ಮತ್ತು ಕನ್ನಡಗಳು ವಾಂಶಿಕವಾಗಿ ಭಿನ್ನವಾಗಿದ್ದರೂ ರಾಚನಿಕವಾಗಿ ಸಮೀಪವಾಗಿಬಿಡುತ್ತವೆ.

ರಾಚನಿಕ ವರ್ಗೀಕರಣದಲ್ಲಿ ಬಹುಹಿಂದಿನಿಂದಲೂ (ಹದಿನೆಂಟನೆಯ ಶತಮಾನ) ಪದರಚನೆಯನ್ನು ಆಧರಿಸಿದ ವಿಂಗಡನೆ ಹೆಚ್ಚು ಪ್ರಚಲಿತವಾಗಿದೆ. ಹೀಗೆ ಪದರಚನೆಗೆ ಅನುಗುಣವಾಗಿ ರೂಪಿಸಿದ ವರ್ಗಗಳು ಹೀಗಿವೆ.

1. ವಿವಿಕ್ತ ಭಾಷೆಗಳು : ಈ ಭಾಷೆಗಳಲ್ಲಿ ಪ್ರತಿಯೊಂದು ಪದವೂ ಸ್ವಯಂಪೂರ್ಣ ವಾಕ್ಯ ರಚನೆಯಲ್ಲಿ ಪದಗಳ ನಡುವಣ ಸಂಬಂಧವನ್ನು ಸೂಚಿಸಲು ಪ್ರತ್ಯಯಗಳನ್ನು ಬಳಸುವ ಕ್ರಮವಿಲ್ಲ. ಪದಗಳ ಅನುಕ್ರಮವೇ ಆ ಸಂಬಂಧದಲ್ಲಿ ಸೂಚಿಸಲು ಶಕ್ತವಾಗಿರುತ್ತದೆ. ಚೈನೀಸ್, ವಿಯತ್ನಾಮಿಸ್, ಸಮಾವೋನ್ ಇಂಥ ಭಾಷೆಗಳು.

ಈ ಭಾಷೆಗಳಲ್ಲಿ ಪ್ರತ್ಯಯಗಳೇ ಇರುವುದಿಲ್ಲ. ಇವುಗಳನ್ನು ವಿಶ್ಲೇಷಕ ಇಲ್ಲವೇ ಕಾಂಡ ಭಾಷೆಗಳೆಂದೂ ಕರೆಯುವರು.

2. ಅಂಟು ಭಾಷೆಗಳು : ಈ ಗುಂಪಿನ ಭಾಷೆಗಳಲ್ಲಿ ಪದಗಳು ವಾಕ್ಯ ರಚನೆಯಲ್ಲಿ ಭಾಗಿಯಾಗುವಾಗ ಅವುಗಳೊಡನೆ ಹಲವು ಪ್ರತ್ಯಯಗಳು ಬಂದು ಸೇರುತ್ತವೆ. ಈ ಪ್ರತ್ಯಯಗಳು ಪದಗಳ ನಡುವಣ ಸಂಬಂಧವನ್ನು ಸೂಚಿಸುತ್ತದೆ. ಅಲ್ಲದೆ ಪದಗಳಿಂದ ಪ್ರತ್ಯಯಗಳನ್ನು ಬೇರ್ಪಡಿಸಿ ತೋರಿಸುವುದು ಸಾಧ್ಯ. ಕನ್ನಡದ ವಿಭಕ್ತಿ ಪ್ರತ್ಯಯಗಳು ಇದಕ್ಕೆ ಒಳ್ಳೆಯ ನಿದರ್ಶನ. ‘ಮನೆಯಲ್ಲಿ ನಾಯಿ’ ಎಂಬ ರಚನೆಯನ್ನು ಗಮನಿಸಿದರೆ ಮನೆ ಮತ್ತು ನಾಯಿಗಳ ಸಂಬಂಧವನ್ನು ಸೂಚಿಸಲು ಅಲ್ಲಿ ಎಂಬ ಪ್ರತ್ಯಯ ಬಳಕೆಯಾಗಿ ರುವುದೂ ಮತ್ತು ಆ ಪ್ರತ್ಯಯವನ್ನು ರಚನೆಯಲ್ಲಿ ಬೇರ್ಪಡಿಸಲು ಸಾಧ್ಯ ವಿರುವುದೂ ಗೊತ್ತಾಗುತ್ತದೆ. ಇಂಥ ಇನ್ನೊಂದು ನಿದರ್ಶನವನ್ನು ಟರ್ಕಿಶ್ ಭಾಷೆಯಿಂದ ಈ ಕೆಳಗೆ ನೀಡಿದೆ.

ev ಮನೆ
ev-ler ಮನೆಗಳು
ev-ler-de ಮನೆಗಳಲ್ಲಿ
ev-ler-den ಮನೆಗಳಿಂದ

ಪ್ರತ್ಯಯಗಳಿಗೆ ನಿರ್ದಿಷ್ಟ ರೂಪ ಮತ್ತು ವಾಕ್ಯ ರಚನೆಯಲ್ಲಿ ನಿರ್ದಿಷ್ಟ ಕೆಲಸ ಇರುತ್ತದೆ.

3. ಸಂಶ್ಲೇಷಕ ಭಾಷೆಗಳು : ಈ ಗುಂಪಿನ ಭಾಷೆಗಳಲ್ಲಿ ಪದಗಳೊಡನೆ ಸೇರುವ ಪ್ರತ್ಯಯಗಳಿಗೆ ನಿಗದಿಪಡಿಸಿದ ಒಂದೇ ಅರ್ಥವಿರುವ ಬದಲು ಹಲವಾರು ಅರ್ಥಗಳಿರುತ್ತವೆ.

ptits-i peli ಎಂಬ ರಶಿಯನ್ ಭಾಷೆಯ ವಾಕ್ಯದ ಅರ್ಥ ‘ಹಕ್ಕಿಗಳು ಹಾಡುತ್ತಿವೆ’ ಈ ವಾಕ್ಯದಲ್ಲಿ i ಎಂಬುದು ಪ್ರತ್ಯಯವಾಗಿದ್ದು ತಾನು ಹತ್ತಿರದ ನಾಮಪದ ಸ್ತ್ರೀಲಿಂಗಿಯೆಂದೂ, ವಾಕ್ಯದಲ್ಲಿ ಅದು ಕರ್ತೃ ವಾಗಿದೆಯೆಂದೂ ಮತ್ತು ಬಹುವಚನದಲ್ಲಿದೆಯೆಂದೂ ಸೂಚಿಸಲು ಶಕ್ತವಾಗಿದೆ.

4. ಬಹು ಸಂಶ್ಲೇಷಕ ಭಾಷೆಗಳು : ಈ ವರ್ಗದ ಭಾಷೆಗಳಲ್ಲಿ ಪದಗಳಿಗೆ ಹಲವಾರು ಪ್ರತ್ಯಯಗಳು ಒಮ್ಮೆಗೇ ಸೇರಿರುತ್ತವೆ. ಕೆಲವು ಪ್ರತ್ಯಯಗಳು ಬೇರ್ಪಟ್ಟು ಒಂದೇ ಅರ್ಥವನ್ನು ಪ್ರಕಟಿಸಬಲ್ಲುವಾದರೆ ಮತ್ತೆ ಕೆಲವು ಪ್ರತ್ಯಯಗಳಿಗೆ ಬಹು ಅರ್ಥಗಳಿರುತ್ತವೆ. ಎಸ್ಕಿಮೋ, ಮೊಹವಾಕ್ ಎಂಹ ಅಮೆರಿಕಾದ ಮೂಲನಿವಾಸಿಗಳ ಭಾಷೆ, ಹಲವು ಆಸ್ತ್ರೇಲಿಯಾ ಖಂಡದ ಆದಿವಾಸಿ ಭಾಷೆಗಳಲ್ಲಿ ಇಂಥ ಲಕ್ಷಣವಿದೆ.

ಇನುಕ್ತಿತುತ್ ಎಂಬ ಅಮೆರಿಕದ ಮೂಲ ನಿವಾಸಿ ಭಾಷೆಯ ಈ ಕೆಳಗಿನ ರಚನೆಯನ್ನು ಗಮನಿಸಿ. ನಡುವಣ ಕಿರುಗೆರೆಗಳನ್ನು ಪ್ರತ್ಯಯಗಳನ್ನು ಬೇರ್ಪಡಿಸಲೆಂದು ಬಳಸಲಾಗಿದೆ.

Qasu-iin-sar-vig-s=sar-si-ngit-luinar-nar-puq

ಇವು ಬೇರೆ ಬೇರೆ ಪದಗಳಲ್ಲ. ಒಂದೇ ರಚನೆಯ ವಿವಿಧ ಭಾಗಗಳು.

ಅರ್ಥವಿಷ್ಟೇ:

‘ಅವನಿಗೆ ಉಳಿದುಕೊಳ್ಳಲು ತಕ್ಕ ಜಾಗ ಸಿಗಲಿಲ್ಲ’

ಹೀಗೆ ರಾಚನಿಕವಾಗಿ ಭಾಷೆಗಳನ್ನು ವರ್ಗೀಕರಿಸುವಾಗ ಕೆಲವು ಸಮಸ್ಯೆಗಳು ಉಂಟಾಗುತ್ತವೆ. ಧ್ವನಿ ರಚನೆಯ ನೆಲೆಯಿಂದ ಗುಂಪುಗೂಡುವ ಭಾಷೆಗಳು ಪದ ರಚನೆಯಲ್ಲಿ ಸಾಮ್ಯತೆಯನ್ನು ಪಡೆಯುತ್ತವೆನ್ನಲು ಬರುವುದಿಲ್ಲ. ಹಾಗಾಗಿ ಬೇರೆ ಬೇರೆ ನೆಲೆಗಳಿಂದ ನೋಡಿದಾಗ ಬೇರೆ ಬೇರೆ ಗುಂಪುಗಳೇ ಸಿದ್ಧವಾಗುತ್ತವೆ. ಅಲ್ಲದೆ ಒಂದೇ ನೆಲೆಯಲ್ಲೂ ವಿಭಜನೆ ಕರಾರುವಾಕ್ಕಾಗಿರುವು ದಿಲ್ಲ. ಉದಾ.ಗೆ ಪದ ರಚನೆಯ ನೆಲೆಯಲ್ಲಿ ಕನ್ನಡವನ್ನು ಅಂಟುಭಾಷೆ ಎನ್ನಬೇಕೋ ಅಥವಾ ಸಂಶ್ಲೇಷಕ ಭಾಷೆ ಎನ್ನಬೇಕೋ ಎಂಬ ಸಮಸ್ಯೆ ಉಂಟಾಗುತ್ತದೆ. ಕನ್ನಡ ಕ್ರಿಯಾ ಪದಗಳ ಆಖ್ಯಾತ ಪ್ರತ್ಯಯಗಳು ಸಂಶ್ಲೇಷಕ ಭಾಷೆಗಳಲ್ಲಿರುವಂತೆ ಒಂದಕ್ಕಿಂತ ಹೆಚ್ಚು ಅರ್ಥಗಳನ್ನು (ಪುರುಷ, ವಚನ, ಲಿಂಗ) ಸೂಚಿಸುತ್ತವೆ.

ವಾಂಶಿಕ ವರ್ಗೀಕರಣದಲ್ಲೂ ಸಮಸ್ಯೆಗಳು ಹಲವಾರಿವೆ. ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೊಂದಿದೆ. ಎರಡು ಭಾಷೆಗಳ ನಡುವೆ ಉಂಟಾಗುವ ಸಾಮ್ಯತೆಗೆ ಆ ಎರಡೂ ಒಂದೇ ಮೂಲದಿಂದ ಬಂದ ಜ್ಞಾತಿ ಭಾಷೆಗಳಾಗಿರು ವುದೇ ಮುಖ್ಯ ಕಾರಣವಲ್ಲ. ಆ ಭಾಷೆಗಳ ನಡುವೆ ಉಂಟಾದ ನಿಡುಗಾಲದ ಸಂಪರ್ಕ ಕೂಡ ಇಂಥ ಸಮಾನಾಂಶಗಳಿಗೆ ಕಾರಣವಾಗುತ್ತದೆ. ಆಗ ಸಮಾನ ಅಂಶಗಳಿಗೆ ಕಾರಣವಾಗಿರುವುದು ಭಾಷಾ ಸಂಪರ್ಕವೋ ಅಥವಾ ವಾಂಶಿಕ ಸಂಬಧವೋ ಎಂದು ನಿರ್ಧರಿಸುವುದು ಕಷ್ಟ. ಅಥವಾ ಇಂಥ ಸಂದರ್ಭಗಳಲ್ಲಿ ತಪ್ಪು ನಿರ್ಧಾರಗಳನ್ನೂ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಭಾಷೆಗಳ ವರ್ಗೀಕರಣದ ವಿಧಾನಗಳ ಕೊರತೆಯಿಂದಾಗಿ ಖಚಿತವಾಗಿ ಭಾಷಾ ವರ್ಗಗಳನ್ನು ಗುರುತಿಸುವುದು ಕಷ್ಟಸಾಧ್ಯವಾಗಿದೆ. ರಾಚನಿಕ ವರ್ಗೀಕರಣದ ಹಿಂದಿನ ತಾತ್ತ್ವಿಕ ಗ್ರಹಿಕೆಯಾದ ರಾಚನಿಕ ಸಮಾನಾಂಶಗಳ ಗುರುತಿಸುವಿಕೆಯನ್ನು ಮುಂದುವರೆಸಿ ಭಾಷಾ ಸಾರ್ವತ್ರಿಕಾಂಶಗಳನ್ನು ಕಂಡುಕೊಳ್ಳುವ ಯತ್ನವೀಗ ನಡೆದಿದೆ. ಎಲ್ಲ ಭಾಷೆಗಳಿಗೂ ಸಮಾನವಾಗಿರುವ ಅಂಶಗಳೇ ಭಾಷಾ ಸಾರ್ವತ್ರಿಕಾಂಶಗಳು. ಪ್ರತಿ ಭಾಷೆಯಲ್ಲೂ ಆ ಭಾಷೆಗೆ ವಿಶಿಷ್ಟವಾಗಿರುವ ಅಂಶಗಳಿರುವಂತೆ ಎಲ್ಲ ಭಾಷೆಗಳಿಗೂ ಸಮಾನವಾಗಿರುವ ಕೆಲವು ಅಂಶಗಳಿರುತ್ತವೆ. ಇವುಗಳಲ್ಲಿ ಮೂರು ಬಗೆ: 1. ಪೂರ್ಣ ಸಾರ್ವತ್ರಿ ಕಾಂಶಗಳು, 2. ಸಾರ್ವತ್ರಿಕ ಪ್ರವೃತ್ತಿಗಳು, 3. ಸೂಚ್ಯ ಸಾರ್ವತ್ರಿಕಾಂಶಗಳು. ಇವುಗಳಲ್ಲಿ ಮೊದಲನೆಯ ಬಗೆಯವು ಜಗತ್ತಿನ ಎಲ್ಲ ಭಾಷೆಯಲ್ಲೂ ಇರುವಂತವು. ಬಹುಪಾಲು ಭಾಷೆಗಳಲ್ಲಿ ಕಂಡುಬರುವ ಸಾಮಾನ್ಯಾಂಶಗಳನ್ನು ಎರಡನೆಯ ಬಗೆಯಲ್ಲಿ ಸೇರಿಸುತ್ತಾರೆ. ಒಂದು ಭಾಷೆಯಲ್ಲಿರುವ ಯಾವುದಾದರೊಂದು ಲಕ್ಷಣದಿಂದ ಮತ್ತೊಂದು ಲಕ್ಷಣ ಇದ್ದೇ ಇರುವುದೆಂದು ನಿರ್ಧರಿಸಲು ಸಾಧ್ಯವಾದರೆ ಆಗ ಅಂಥವನ್ನು ಮೂರನೆಯ ಬಗೆಯಲ್ಲಿ ಸೇರಿಸುವರು. ಎಲ್ಲ ಭಾಷೆಗಳಲ್ಲೂ ಸ್ವರಗಳು ಮತ್ತು ವ್ಯಂಜನ ಗಳು ಇದ್ದೇ ಇರುತ್ತವೆ. ಹಾಗಾಗಿ ಇದೊಂದು ಪೂರ್ಣ ಸಾರ್ವತ್ರಿಕಾಂಶ. ಪೂರ್ವ ಸ್ವರಗಳು ಸಾಮಾನ್ಯವಾಗಿ ವಿವೃತ್ತವಾಗಿರುತ್ತವೆ ಮತ್ತು ಪಶ್ಚೋನ್ನತ ಸ್ವರಗಳು ಸಾಮಾನ್ಯವಾಗಿ ಸಂವೃತ್ತವಾಗಿರುತ್ತವೆ. ಆದರೆ ಮೇಲೆ ಹೇಳಿದ ಲಕ್ಷಣ ಬಹುಪಾಲು ಭಾಷೆಗಳಲ್ಲಿ ಕಂಡುಬರುತ್ತದೆ. ಒಂದು ಭಾಷೆಯಲ್ಲಿ ಘರ್ಷ ಧ್ವನಿಗಳಿದ್ದರೆ (ಫ್, ಸ್) ಆ ಭಾಷೆಯಲ್ಲಿ ಸ್ಪರ್ಶ ವ್ಯಂಜನಗಳಿದ್ದೇ ತೀರುತ್ತವೆ. ಇದೊಂದು ಸೂಚ್ಯ ಸಾರ್ವತ್ರಿಕಾಂಶ. A ಎನ್ನುವ ಲಕ್ಷಣ ಕಂಡು ಬಂದರೆ B ಎನ್ನುವ ಲಕ್ಷಣ ಇದ್ದೇ ಇರುತ್ತದೆ. ಆದರೆ B ಇದ್ದಲ್ಲಿ A ಇದ್ದೇ ಇರುವುದೆಂದು ಹೇಳಬರುವುದಿಲ್ಲ. ಸ್ಪರ್ಶ ವ್ಯಂಜನಗಳಿದ್ದಲ್ಲಿ ಘರ್ಷ ವ್ಯಂಜನಗಳಿದ್ದೇ ತೀರುತ್ತವೆಂದು ವಾದಿಸಲು ಬರುವುದಿಲ್ಲ.

ಜಗತ್ತಿನ ಮುಖ್ಯ ಭಾಷಾ ವಂಶಗಳು ಮತ್ತು ಅವುಗಳ ಉಪವರ್ಗಗಳು

ಇಂಡೋ ಯುರೋಪಿಯನ್ (ಭಾರೋಪಿಯಾ)

ಇದೊಂದು ಬೃಹತ್ ಭಾಷಾವಂಶ. ಇದರ ಉಪವರ್ಗಗಳು ಹೀಗಿವೆ.

ಅಲ್ಬೇನಿಯನ್ : ಇದೊಂದು ಪ್ರತ್ಯೇಕ ಭಾಷೆ. ಇದರೊಡನೆ ನಿಕಟ ಸಂಬಂಧವುಳ್ಳ ಬೇರೆ ಯಾವುದೇ ಭಾಷೆಯೂ ತಿಳಿದಿಲ್ಲ. ಅಲ್ಬೇನಿಯಾ ದೇಶದ ಮೂವತ್ತು ಲಕ್ಷ ಜನರು ಈ ಭಾಷೆಯನ್ನು ಆಡುತ್ತಾರೆ.

ಅರ್ಮೇನಿಯನ್ : ಈ ಉಪವರ್ಗದಲ್ಲಿರುವುದು ಇದೇ ಹೆಸರಿನ ಒಂದೇ ಭಾಷೆ. ಆರ‌್ಮೇನಿಯಾ ಮತ್ತು ತುರ್ಕಿಯಲ್ಲಿ 50 – 60 ಲಕ್ಷ ಜನರು ಬಳಸುತ್ತಾರೆ. ಈ ಪ್ರದೇಶಗಳಿಂದ ವಲಸೆ ಹೋದ ಜನರು ಮಧ್ಯ ಪ್ರಾಚ್ಯ, ಯುರೋಪು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ನೆಲೆಸಿದ್ದು ಅಲ್ಲಿಯೂ ಈ ಭಾಷೆಯನ್ನಾಡುತ್ತಿದ್ದಾರೆ. ಕ್ರಿ.ಪೂ. 1000 ದಲ್ಲಿ ರೂಪು ಗೊಂಡಿರಬಹುದಾದ ಈ ಭಾಷೆಗೆ 38 ಚಿಹ್ನೆಗಳ ಲಿಪಿವ್ಯವಸ್ಥೆ ಇದೆ. ಈ ಲಿಪಿ ವ್ಯವಸ್ಥೆಯೂ ಕ್ರಿ.ಶ. 5 ನೇ ಶತಮಾನದ ವೇಳೆಗೆ ರೂಪುಗೊಂಡಿದ್ದು ಈಗಲೂ ಬಳಕೆಯಲ್ಲಿದೆ.

ಅನತೋಲಿಯನ್ : ಈ ಉಪವರ್ಗವೀಗ ನಿಶ್ಶೇಷವಾಗಿದೆ. ಇಂದಿನ ಸಿರಿಯಾ ಮತ್ತು ತುರ್ಕಿಗಳ ಪ್ರದೇಶದಲ್ಲಿ ಕ್ರಿ.ಪೂ. 20 ನೇ ಶತಮಾನದ ವೇಳೆಗೆ ಬಳಕೆಯಲ್ಲಿದ್ದ ಭಾಷೆಗಳಿದ್ದವು. ಹಿಟೈಟ್ ಈ ಉಪವರ್ಗದ ಪ್ರಧಾನ ಭಾಷೆ. ಪಾಲಿಕ್, ಲೈಡಿಯನ್, ಲೈಸಿಯನ್ ಮತ್ತು ಲುವೈನ್ ಇತರ ಭಾಷೆ. ಇಂಡೋ ಯುರೋಪಿಯನ್ ಭಾಷೆಗಳಲ್ಲಿ ಅತಿ ಪ್ರಾಚೀನ ಲಿಖಿತ ದಾಖಲೆ ದೊರೆತಿರುವುದು ಹೀಟೈಟ್ ಭಾಷೆಯಲ್ಲಿದೆ. (ಕ್ರಿ.ಪೂ. 17 ನೇ ಶತಮಾನ)

ಇಂಡೋ ಇರಾನಿಯನ್ : ಇದರಲ್ಲಿ ಎರಡು ವಿಭಾಗಗಳಿವೆ. ಇಂಡೋ ಆರ್ಯನ್ ಮತ್ತು ಇರಾನಿಯನ್. ಭಾರತ ಉಪಖಂಡದಲ್ಲಿ 50 ಕೋಟಿಗೂ ಮಿಕ್ಕಿದ ಜನರು ಇಂಡೋ ಆರ್ಯನ್ ಗುಂಪಿನ ಭಾಷೆಗಳನ್ನು ಮಾತಾಡುತ್ತಾರೆ. ಇರಾನಿಯನ್ ಭಾಷೆಗಳನ್ನು ಇಂದಿನ ಅಫಘಾನಿಸ್ಥಾನ, ಇರಾನ್‌ಗಳಲ್ಲಿ ಬಳಸುವರು. ಪರ್ಶಿಯನ್, ತಾಡ್ಜಿಕ್, ಪುಶ್ತೋ, ಒಸ್ಸೆಟಿಕ್, ಕುರ್ದಿಶ್ ಮತ್ತು ಬಲೂಚಿ ಇವು ಮುಖ್ಯ ಭಾಷೆಗಳು. 5 – 6 ಕೋಟಿ ಜನ ಭಾಷಿಕರಿದ್ದಾರೆ.

ಇಟಾಲಿಕ್ : ಲ್ಯಾಟಿನ್ ಈ ವರ್ಗದ ಪ್ರಮುಖ ಭಾಷೆ. ಫಾಲಿಸ್ಕಾನ್, ಓಸ್ಕನ್, ಉಂಬ್ರಿಯಾನ್ ವೆನೆಟಿಕ್ ಇನ್ನಿತರ ಭಾಷೆಗಳು ಲ್ಯಾಟಿನ್‌ನ ಆಡುರೂಪದಿಂದ ಆಧುನಿಕ ಯುರೋಪಿಯನ್ ಭಾಷೆಗಳಾದ ಫ್ರೆಂಚ್, ಸ್ಪ್ಯಾನಿಶ್, ಪೋರ್ಚುಗೀಸ್, ಇಟಾಲಿಯನ್ ರೋಮಾನಿಯನ್, ಸಾರ್ಡಿನಿ ಯನ್, ಕೆಟಲಾನ್ ಉಗಮಗೊಂಡವು. ಇವನ್ನು ರೋಮಾನ್ಸ್ ಭಾಷೆಗಳೆಂದೂ ಕರೆಯುವರು.

ಗ್ರೀಕ್ : ಇದರಲ್ಲೂ ಇರುವುದು ಒಂದೇ ಭಾಷೆ. ಕ್ರಿ.ಪೂ. 14 ನೇ ಶತಮಾನದಿಂದ ಬಳಕೆಯಿದ್ದುದ್ದಕ್ಕೆ ದಾಖಲೆಗಳಿವೆ. ಇದರ ಆಧುನಿಕ ರೂಪವನ್ನು ಗ್ರೀಸ್, ಸೈಪ್ರಸ್ ತುರ್ಕಿಗಳಲ್ಲಿ ಬಳಸುವರು.

ಜರ್ಮಾನಿಕ್ : ಈ ವರ್ಗದ ಭಾಷೆಗಳನ್ನಾಡುವ ಜನರ ಸಂಖ್ಯೆ ಸುಮಾರು 50 ಕೋಟಿಯಷ್ಟಿದೆ. ಇವು ಮೂರು ವಿಭಾಗಗಳಲ್ಲಿ ವಿಭಜಿತ ವಾಗಿವೆ.

ದ್ರಾವಿಡ : (ವಿವರಗಳಿಗೆ ಲೇಖನ 49 ನೋಡಿ)

ಪೂರ್ವ ಜರ್ಮಾನಿಕ್ : ಈ ವರ್ಗದ ಯಾವ ಭಾಷೆಯೂ ಈಗ ಬಳಕೆಯಲ್ಲಿಲ್ಲ.

ಉತ್ತರ ಜರ್ಮಾನಿಕ್ : ಡೆನಿಶ್, ನಾರ‌್ವೆಯನ್, ಐಸ್‌ಲ್ಯಾಂಡಿಕ್ ಮುಂತಾದ ಭಾಷೆಗಳಿವೆ. ಪಶ್ಚಿಮ ಜರರ್ಮಾನಿಕ್, ಇಂಗ್ಲೀಶ್ ಪ್ರಮುಖ ಭಾಷೆ ಫ್ರಿಶಿಯನ್, ಜರ್ಮನ್, ಯಿದಿಶ್, ಡಚ್, ಆಫ್ರಿಕಾನ್ಸ್ ಇನ್ನಿತರ ಭಾಷೆಗಳು.

ತೋಟಾರಿಯನ್ : ಈ ಉಪವರ್ಗದಲ್ಲಿದ್ದ ಇದೇ ಹೆಸರಿನ ಭಾಷೆಯೀಗ ನಶಿಸಿಹೋಗಿದೆ. ಚೈನಿಸ್ ತುರ್ಕಿಸ್ತಾನದಲ್ಲಿ ಈ ಭಾಷೆ  ಬಳಕೆಯಲ್ಲಿದ್ದುದಕ್ಕೆ ದಾಖಲೆಗಳಿವೆ.

ಬಾಲ್ಟೋ ಸ್ಲಾವಿಕ್ : ಈ ಉಪವರ್ಗದಲ್ಲಿ ಬಾಲ್ಟಿಕ್ ಮತ್ತು ಸ್ಲಾವಿಕ್ ಎಂಬ ಉಪವಿಭಾಗಗಳಿವೆ. ಬಾಲ್ಡಿಕ್ ಭಾಷೆಗಳೆಂದರೆ ಲಿಥುವೇನಿ ಯನ್, ಲ್ಯಾಟ್ವಿಯನ್, ರಶಿಯಾ ಮತ್ತು ಯುರೋಪುಗಳ ಸಂಧಿ ಪ್ರದೇಶ ದಲ್ಲಿರುವ ಭಾಷೆಗಳಿವು. ಸ್ಲಾವಿಕ್ ಭಾಷೆಗಳಲ್ಲಿ ಮೂರು ಉಪವಿಭಾಗಗಳಿವೆ.

ದಕ್ಷಿಣ ಸ್ಲಾವಿಕ್ : ಬಲ್ಗೇರಿಯನ್, ಮೆಸಿಡೋನಿಯನ್, ಸರ್ಬೋ ಕ್ರೋಟ್, ಸ್ಲೋತಿನ್.

ಪಶ್ಚಿಮ ಸ್ಲಾವಿಕ್ : ಜೆಕ್, ಸ್ಲೊವಾಕ್, ಸೊರ್ಬಿಯನ್ ಮತ್ತು ಪೋಲಿಶ್.

ಸೆಲ್ಟಿಕ್ : ಕಾರ್ನಿಶ್ ಮಾಂಕ್ಸ್ (ಇನೆರಡೂ ನಶಿಸಿವೆ.) ಬ್ರೆಟೊನ್, ಐರಿಶ್‌ಗೆರಿಕ್, ಸ್ಕಾಟಿಶ್ ಗೆಲಿಕ್, ವೆಲ್‌ಲ್ ಇವು ಮುಖ್ಯ ಭಾಷೆಗಳು. ಯುರೋಪಿನ ಬಹುಪಾಲು ಪ್ರದೇಶದಲ್ಲಿ ಈ ಭಾಷೆಯನ್ನಾಡುವ ಜನರು ಹರಡಿಹೋಗಿದ್ದಾರೆ. ಭೌಗೋಳಿಕ ಚಹರೆಯಿಲ್ಲದ ಈ ಭಾಷಿಕರ ಸಂಖ್ಯೆ ಒಂದೇ ಸಮನೆ ಇಳಿಯುತ್ತಿದೆ. ವೆಲ್ಷ್ ಒಂದೇ ಇದಕ್ಕೆ ವಿನಾಯಿತಿ, ಭಾಷಾ ಪುನರುತ್ಥಾನ ಆಸಕ್ತಿಯಿಂದ ಈ ಭಾಷೆಯನ್ನಾಡುವವರ ಸಂಖ್ಯೆಯು ಇಳಿಮುಖ ಪ್ರವೃತ್ತಿಗೆ ತಡೆಯೊಡ್ಡುವುದು ಸಾಧ್ಯವಾಗುವಂತಿದೆ.

ಉರಾಲಿಕ್

ಸುಮಾರ ಏಳು ಸಾವಿರ ವರ್ಷಗಳ ಹಿಂದೆ ರಶಿಯಾದ ಉರಾಲ್ ಪರ್ವತ ಶ್ರೇಣಿಗಳಲ್ಲಿ ಬಳಕೆಯಲ್ಲಿದ್ದ ಭಾಷೆಯಿಂದ ಬೆಳೆದು ಬಂದಿದೆ. 13 ನೇ ಶತಮಾನದ ಲಿಖಿತ ದಾಖಲೆಗಳು ದೊರಕಿವೆ. ಪರಿಸರದ ಪ್ರಭಾವಿ ಭಾಷೆಗಳಿಂದಾಗಿ ಉರಾಲಿಕ್ ಭಾಷಿಕರ ಸಂಖ್ಯೆ ಇಳಿಮುಖವಾಗುತ್ತಿದೆ. ಈ ಭಾಷೆಗಳಿಗೆ ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಹೆಸರುಗಳಿದ್ದು ಅವುಗಳ ಲ್ಲೊಂದು ಅನ್ಯರು ಆ ಭಾಷೆಯನ್ನು ಗುರುತಿಸುವ ಕೀಳು ಹೆಸರಾಗಿರುತ್ತದೆ.

ಉರಾಲಿಕ್ ಭಾಷೆಗಳಲ್ಲಿ ಎರಡು ವಿಭಾಗಗಳು: ಫಿನೋ ಉಗ್ರಿಕ್, ಫಿನ್ಲೆಂಡ್, ಎಸ್ತೋನಿಯಾಗಳಲ್ಲಿ ಈ ಭಾಷೆಗಳನ್ನಾಡುವವರಿದ್ದಾರೆ. ಫಿನಿಶ್, ಎಸ್ರೊನಿಯನ್, ಲಾಪ್ ಮುಖ್ಯ ಭಾಷೆಗಳು. ಹಂಗೇರಿಯನ್ ಕೂಡ ಇದೇ ವಿಭಾಗಕ್ಕೆ ಸೇರಿದ ಭಾಷೆ. ಆದರೆ ಭೌಗೋಳಿಕವಾಗಿ ದೂರ ಉಳಿದಿದೆ.

ಈ ವಿಭಾಗಕ್ಕೆ ಸೇರಿದ ಕೆಲವು ಅಲ್ಪಸಂಖ್ಯಾತ ಭಾಷೆಗಳನ್ನು ರಶಿಯಾದ ಉತ್ತರದಲ್ಲಿರುವ ಕೊಲಾ ಪರ್ಯಾಯ ದ್ವೀಪಗಳಲ್ಲಿನ ಜನರು ಬಳಸುತ್ತಾರೆ. ಅಲ್ಲದೆ ದಕ್ಷಿಣದ ರಿಗಾ ಕೊಲ್ಲಿಯ ಬಳಿಯಲ್ಲಿಯೂ ಈ ಭಾಷಿಕರಿದ್ದಾರೆ. ಇಂಗ್ರಿಯನ್, ಲಿವೋನಿಯನ್, ವೊಟಿಕ್ ಕರೆಲಿಯನ್, ವೆಪ್ಸ್, ಮೊರ್ಡ್‌ವಿನ್, ಮರಿ, ಉದ್ಮುರ್ಟ್ ಮತ್ತು ಕೋಮೀ ಮುಖ್ಯ ಭಾಷೆಗಳು. ಇವುಗಳಲ್ಲಿ ಕೆಲವನ್ನು ಆಡುವ ಜನರ ಸಂಖ್ಯೆ ಅತಿ ಕಡಿಮೆ. ಹಾಗಾಗಿ ನಾಶವಾಗುವ ಹಂತದಲ್ಲಿವೆ.

ಸಮೊಯೆಡಿಕ್ : ಸೈಬಿರಿಯಾ ಮತ್ತು ಅರ್ಕೆಟಿಕ್ ಪ್ರದೇಶದಲ್ಲಿನ ಜನರ ಭಾಷೆಗಳಿವು. ನೆನೆಟ್ಸ, ಸೆಲ್ಕಸ್, ನ್ಗ್‌ನಾಸನ್, ಎನೆಟ್ಸ್ ಎಂಬ ಭಾಷೆಗಳು ಈ ವಿಭಾಗದಲ್ಲಿದೆ. ಕ್ಷೀಣಿಸುತ್ತಿರುವ ಭಾಷಿಕರ ಸಂಖ್ಯೆಯಿಂದಾಗಿ ಈ ಭಾಷೆಗಳು ನಾಶವಾಗುತ್ತಿವೆ.

ಕಕೇಸಿಯನ್ : ಇರಾನ್, ತುರ್ಕಿಗಳ ಉತ್ತರ ಭಾಗದಲ್ಲಿರುವ ಕಾಕಸಸ್ ಪರ್ವತ ಶ್ರೇಣಿ ಪ್ರದೇಶದಲ್ಲಿ ಈ ವರ್ಗದ ಭಾಷೆಗಳನ್ನಾಡುವ ಭಾಷಿಕರಿದ್ದಾರೆ. ಜಗತ್ತಿನಲ್ಲೇ ಅತಿ ಭಾಷಾ ಸಾಂದ್ರತೆಯುಳ್ಳ ಪ್ರದೇಶಗಳಲ್ಲಿ ಇದೂ ಒಂದು. ಸುಮಾರು 40 ಭಾಷೆಗಳ ವರ್ಗವಿದು. ಈ ವರ್ಗದಲ್ಲಿ ಮೂರು ವಿಭಾಗ ಗಳನ್ನು ಮಾಡಲಾಗಿದೆ.

ಅಬ್ಖಜೊ ಆದಿಘಿಯನ್ : ವಾಯುವ್ಯ ಭಾಗದಲ್ಲಿ ಬಳಕೆಯಾಗುವ ಭಾಷೆಗಳು. ಕಬರ‌್ದಿಯನ್, ಅದಿಘಿ, ಅಬ್‌ಖಜ್, ಅಬಜ ಮುಖ್ಯ ಭಾಷೆಗಳು. ಉಬೈಖ್ ಎಂಬೊಂದು ಭಾಷೆಯನ್ನು ಅತಿ ಕಡಿಮೆ ಜನರು ಆಡುತ್ತಾರೆ. ಈ ಭಾಷೆಯಲ್ಲಿ ಸುಮಾರು 80 ವ್ಯಂಜನಗಳಿದ್ದು ಭಾಷಾ ಶಾಸ್ತ್ರಜ್ಞರಿಗೆ ಕುತೂಹಲ ತಂದಿದೆ.

ದಾಗೆಸ್ತಾನಿಯನ್ : ಈಶಾನ್ಯ ಪ್ರದೇಶದ ಭಾಷೆಗಳು. ಅವರ್, ಲೆಜ್‌ಘಿಯನ್, ದರ್‌ಗ್ವಾ, ತಬರಸನ್ ಮುಖ್ಯ ಭಾಷೆಗಳು. ಇದರಲ್ಲಿ ನಖ್ ಎಂಬ ಉಪವಿಭಾಗವಿದ್ದು, ಅದರಲ್ಲಿ ಇಂಗುಶ್, ಚೆಚನ್ ಮತ್ತು ಬತ್‌ಸ್ ಎಂಬ ಭಾಷೆಗಳು ಸೇರುತ್ತವೆ.

ಕರ್ತ್ವೆಲಿಯನ್ : ದಕ್ಷಿಣ ಪ್ರದೇಶದ ಭಾಷೆಗಳು. ಜಾರ್ಜಿಯಾದಲ್ಲಿ ಈ ವರ್ಗದ ಮುಖ್ಯ ಭಾಷೆಯಾದ ಕರ್‌ತ್ವೆಲಿಯನ್ ಅನ್ನು ಆಡುವ 30 ಲಕ್ಷ ಜನರಿದ್ದಾರೆ. ಜನ್, ಮಿಂಗ್ರೆಲಿಯನ್ ಮತ್ತು ಸ್ವನ್ ಇತರ ಮುಖ್ಯ ಭಾಷೆಗಳು.

ಪೆಲಿಯೋ ಸೈಬಿರಿಯನ್ : ಸೈಬಿರಿಯಾದ ವಿಶಾಲ ಭೂಪ್ರದೇಶದಲ್ಲಿರುವ ಅತಿ ವಿರಳ ಜನ ಸಮುದಾಯಗಳ ಭಾಷಾ ವರ್ಗ. ಈ ವರ್ಗದಲ್ಲಿ ನಾಲ್ಕು ಉಪವಿಭಾಗಗಳಿವೆ. ಆದರೆ ಅವುಗಳ ನಡುವೆ ವಾಂಶಿಕ ಸಂಬಂಧವಿರುವಂತೆ ತೋರುವುದಿಲ್ಲ. ಸಹ ಅಸ್ತಿತ್ವ ಮತ್ತು ಸಂಪರ್ಕಗಳು ಈ ಉಪವಿಭಾಗಗಳ ಭಾಷೆಗಳ ನಡುವೆ ಇದೆ.

ಲುವರವೆತ್ಲನ್ : ಸೈಬಿರಿಯಾದ ದೂರ ವಾಯುವ್ಯ ಭಾಗ ಛುಕ್ಚಿ, ಕೊರ್ಯಕ್, ಕಂಚಡಲ್, ಅಲಿಯುತರ್, ಕೆರಕ್

ಯುಕಘಿರ್ : ಪಶ್ಚಿಮ ಯುಕಘಿರ್

ಯೆನಿಸೈನ್ : ಪಶ್ಚಿಮದ ಯೆನಿಸ್ ನದಿಯ ಕೆಲಬಲದಲ್ಲಿ ಬಳಕೆ ಯೆನಿಸೈ – ಒಸ್ತೈಕ್ (ಕೆತ್)

ಗಿಲಿಯಕ್ : ದಕ್ಷಿಣ ಗಿಲಿಯಕ್

ಅಲ್ಮೈಕ್ : ಏಶಿಯಾದ ಬಾಲ್ಕಾನ್ ಪರ್ಯಾಯ ದ್ವೀಪದಿಂದ ವಾಯುವ್ಯ ಭಾಗದವರೆಗಿನ ಅಲ್ಮೈ ಪರ್ವತ ಪ್ರದೇಶ ಸುಮಾರು 40 ಭಾಷೆಗಳು.

ಲಿಪಿ : ರುನಿಕ್ ಲಿಪಿಯಲ್ಲಿನ ಬರೆಹಗಳ ದಾಖಲೆಗಳು. ಎಂಟನೇ ಶತಮಾನದಿಂದ ದೊರಕುತ್ತದೆ. ಮಂಗೋಲಿಯನ್ ಲಿಪಿಯ ದಾಖಲೆಗಳು 13ನೇ ಶತಮಾನಗಳಿಂದ ದೊರಕುತ್ತವೆ.

 

 

ಪ್ರಮುಖ ಭಾಷೆಗಳು : ಅಂಡಮನೀಸ್, ಫಿಲಿಫಿನೋ, ಮಲಯ್, ಮಲಗಸಿ, ಜಾವನೀಸ್, ಮೊತು, ತಾಸ್ಮೇನಿಯನ್, ತಾಹಿತಿಯನ್, ಟೊಂಗನ್, ಫಿಜಿಯನ್.

ಅಮೆರಿಕಾದ ಭಾಷೆಗಳು (ಉತ್ತರ x ಮಧ್ಯ)

ಸುಮಾರು 17 ಉಪವರ್ಗಗಳನ್ನು ಗುರುತಿಸಿದ್ದಾರೆ.

ಎಸ್ಕಿಮೋ – ಅಲೆವುತ್ ಇನುಕ್ತಿತುತ್
ಅತಪಸ್ಕನ್ ನವಾಹೋ, ಹುಪ, ಕುತ್‌ಚಿನ್
ವಕಶನ್ ಮಖ, ನೂತ್ಕ, ನಿತಿನತ್
ಸಲಿಶ್ ಸ್ಪೋಕನ್, ಕಲಿಸ್ಪಲ್
ಕ್ಲಮತ್ – ಸಹಪ್ತಿನ್ ಸಹತ್ತಿನ್, ಕ್ಲಮತ್
ಪೆನುಶಿಯನ್ ಪತ್ವಿನ್, ವಿಂತು, ನೋಮ್ಲಕಿ
ಅಲ್ಗಾಂಕಿಯನ್ ಜೆಯೆನ್ನೆ, ಪೊಟವತೊಮಿ, ಮಿಕ್‌ಮಾಕ್
ಸಿಯೋವುಸ್ ವಿನ್ನೆಬಗೊ, ಒಮಹ
ಇರೊಕ್ವೊಯಿನ್ ಸೆನೆಕಾ, ಮೊಹವಾಕ್, ಒನೈರಾ
ಕದ್ದೋವನ್ ಕದ್ದೊ, ವಿಚಿತ, ಪಾವ್ನೀ
ಮುಸ್ಕೋಗಿಯನ್ ಚೊಕ್ತಾ, ಕೋಸ್ವಿ, ಮಿಕಸುತಿ
ಹೊಕನ್ ಡಿಗುನೊ, ಯುಮ, ಮೊಹವೆ
ಕೊವಾಹುಯಿಲ್ತೆಕನ್ ಕೊಮೆಕ್ರುದೊ, ಕೊತೊನಮ್, ಪಕವ
ಉತೊ – ಅಜ್ದೆಕನ್ ಸ್ನೆಕ್, ಕೊಮಾಂಚೆ
ಒತೋಮಿಯನ್ ಪಮೆ ಒತೊಮಿ, ಪಮೆ, ಪಿರಿಂದ
ಮಾಯನ್ ಚೊಲನ್, ಮಾಯಾ, ತೊಜೊಲಬಲ್
ಚಿಬ್‌ಚನ್ ತನಮನಕ, ಚೆನ ಕುಮ

ವೃಕ್ಷವೆಂದರೆ ವೃಕ್ಷನಲ್ಲ

ಭಾಷಾ ವಂಶವೃಕ್ಷಕ್ಕೂ ಸಾಮಾನ್ಯ ವೃಕ್ಷಕ್ಕೂ ಹೋಲಿಕೆ ಇರುವಂತೆ ವ್ಯತ್ಯಾಸಗಳೂ ಇವೆ. ಮರದಲ್ಲಿ ಹಳೇಯ ಕಾಂಡದಿಂದ ಹೊಸ ರೆಂಬೆ ಬೆಳೆದಿರುವದು. ಅವೆರಡರ ವಯೋಮಾನದಲ್ಲಿ ಅಗಾಧ ಅಂತರವಿರುತ್ತದೆ. ಆದರೆ ಎರಡೂ ಜೀವಂತವಿರುತ್ತವೆ. ತಂತಮ್ಮ ಬಗೆಯಲ್ಲಿ ಚಟುವಟಿಕೆಯಿಂದ ಇರುತ್ತವೆ. ಆದರೆ ಭಾಷಾ ವಂಶವೃಕ್ಷದ ಕಲ್ಪನೆಯಲ್ಲಿ ಮೂಲ ಕಾಂಡರೂಪಿ ಯಾದ ಭಾಷೆ ಮತ್ತು ಬಳಕೆಯಲ್ಲಿರುವ ಭಾಷೆ ಇವೆರಡೂ ಒಟ್ಟಾಗಿ ಇರುವುದಿಲ್ಲ. ಗಿನ ಭಾಷೆಗಳ ಮೂಲಕ ಇಲ್ಲದ ಮೂಲ ಭಾಷೆಯನ್ನು ಪುನಾರಚಿಸಬೇಕಾಗುತ್ತದೆ.

ದಕ್ಷಿಣ ಆಫ್ರಿಕಾ
ಆಂಡಿಯನ್ – ಈಕ್ವಟೋರಿಯಲ್ ಆಯಮರ, ಗೊವಾಜಿಕೊ
ಗೆ – ಪನೊ – ಕರಿಬ್ ಕರಿಬ್
ಮ್ಯಾಕ್ರೋ – ಚಿಚ್‌ಚನ್ ಗುಯಾಮಿ, ವೈಕ, ಪೆಜ್
ಪೆನುಶಿಯನ್  

ಆಸ್ಟ್ರೇಲಿಯಾದ ಆದಿವಾಸಿ ಭಾಷೆಗಳು

ಸುಮಾರು 28 ಉಪವರ್ಗಗಳಲ್ಲಿ 250ರ ಆಸುಪಾಸಿನ ಸಂಖ್ಯೆಯ ಭಾಷೆಗಳು ಹಂಚಿಹೋಗಿವೆ. ಎಲ್ಲ ಭಾಷೆಗಳ ಒಟ್ಟು ಭಾಷಿಕರ ಸಂಖ್ಯೆ 50,000ವನ್ನು ಮೀರುವುದಿಲ್ಲವೆಂದು ಒಂದು ಅಂದಾಜು.

ತಿವಿ, ವಲ್ಮತೈರಿ, ಅರಂದ, ಮಬುಯಗ್ ಪ್ರಮುಖ ಭಾಷೆಗಳು.