ಮಾತನಾಡುವ ಸಾಮರ್ಥ್ಯ ಮಾನವರ ಒಂದು ಮೂಲ ಲಕ್ಷಣವಾಗಿದೆ. ಹಾಗಾಗಿ ಮಾತನಾಡುವುದು ಹಾಗೂ ಮಾತು ಕಲಿಯುವುದು ತೀರ ಸ್ವಾಭಾವಿಕ ಎಂದು ನಾವೆಲ್ಲರೂ ಭಾವಿಸುತ್ತೇವೆ. ಮಾತು ಉಸಿರಾಟದಂತೆಯೇ ಸಹಜವಾಗಿ ನಮಗೆ ಬರುತ್ತದೆ ಎಂಬ ಭಾವನೆ ಇದೆ. ಒಂದು ಅರ್ಥದಲ್ಲಿ ಮಗುವಿನ ಉಸಿರು ಭಾಷೆಯ ಕಲಿಯುವಿಕೆಯಲ್ಲಿ ಮೊದಲ ಹೆಜ್ಜೆ ಎನ್ನಬಹುದು. ಆದರೆ ಉಸಿರಾಡುವುದನ್ನು ಒಮ್ಮೆಗೇ ಕಲಿತಂತೆ ಭಾಷೆಯನ್ನು ಕಲಿಯಲು ಸಾಧ್ಯವಿಲ್ಲ. ಮಗುವಿನ ಮೆದುಳು, ನರಾಂಗಕ್ರಿಯೆ ಪಕ್ವವಾದಂತೆ ಭಾಷೆ, ಕ್ರಮೇಣ ಬೆಳೆಯುತ್ತದೆ. ಈ ಭಾಷಾ ಬೆಳವಣಿಗೆ ಮತ್ತು ಅದರ  ಹಿಂದಿರುವ ರಚನೆ ಹಾಗೂ ಸಂಯೋಜನೆ ಬಹಳ ಕಾಲದಿಂದಲೂ ಮಾನವ ಭಾಷೆಯ ಅಧ್ಯಯನದಲ್ಲಿ ಒಂದು ಮುಖ್ಯ ಅಂಶವಾಗಿದೆ. ವಾಕ್ ಸಾಮರ್ಥ್ಯದ ಕಡೆಗಾಗಲಿ, ಅದರ ಕಲಿಕೆಯ ಹಿಂದೆ ಇರುವ ಕ್ಲಿಷ್ಟ ಗತಿಯ ಬಗೆಗಾಗಲೀ ಯಾರೂ ಹೆಚ್ಚು ಗಮನ ಕೊಡುವುದಿಲ್ಲ. ಸಹಜವಾಗಿ ಒಂದು ಮಗುವು ಮಾತನ್ನು ಕಲಿಯಬೇಕು, ಹಾಗೆ ಕಲಿಯದಿದ್ದಾಗ, ವಾಕ್ ಶಕ್ತಿ ಕುಂದಿದಾಗ ಅಥವಾ ಭಾಷಾ ವಿಕಲತೆ ಹೊಂದಿದಾಗ ಇದರ ಬಗ್ಗೆ ಗಮನ ಹರಿಯುವುದು. ಇದನ್ನು ಅರ್ಥ ಮಾಡಿಕೊಳ್ಳಲು ಮಾತು ಹಾಗೂ ಭಾಷೆಯನ್ನು ಮಕ್ಕಳು ಸಹಜವಾಗಿ ಕಲಿಯುವುದರಲ್ಲಿ ಇರುವ ಕೆಲವು ಸಾಮಾನ್ಯ ಲಕ್ಷಣಗಳನ್ನು ಗಮನಿಸುವುದು ಒಳ್ಳೆಯದು.

ಎಲ್ಲ ಮಾನವ ಜನಾಂಗ, ಯಾವುದೇ ಬಣ್ಣ, ಬುಡಕಟ್ಟುಗಳಿಗೆ ಸೇರಿದ್ದರೂ ವ್ಯವಹರಿಸುವುದು ಮಾತು, ಭಾಷೆಯ ಮೂಲಕವೇ. ಜೀವಿಗಳಲ್ಲಿ ಮಾನವರು ಮಾತ್ರ ಜಟಿಲವಾದ ಭಾಷಾ ಸಂಪರ್ಕವನ್ನು ಹೊಂದಿದ್ದಾರೆ. ಮಾನವರು ಉಪಯೋಗಿಸುವ ಎಲ್ಲಾ ಭಾಷೆಗಳಿಗೂ ಅನ್ವಯಿಸುವ ಕೆಲವು ಲಕ್ಷಣಗಳಿವೆ. ಎಲ್ಲ ಭಾಷೆಗಳೂ ಶಬ್ದ ಮತ್ತು ಅರ್ಥಗಳನ್ನು ಒಳಗೊಂಡಿರು ತ್ತವೆ. ಎಲ್ಲ ಭಾಷೆಗಳಲ್ಲಿಯೂ ಅವುಗಳಲ್ಲಿರುವ ಶಬ್ದ ಮತ್ತು ಅರ್ಥಗಳ ಪರಸ್ಪರ ಜೋಡಣೆ ಜಟಿಲವಾದ ನಿಯಮಗಳಿಗೆ ಒಳಗೊಂಡಿರುತ್ತದೆ. ಈ ಜಟಿಲ ನಿಯಮಗಳನ್ನೇ ವ್ಯಾಕರಣವೆಂದು ಹೆಸರಿಸಲಾಗಿದ್ದು, ವ್ಯಾಕರಣವನ್ನು ಎಲ್ಲಾ ಭಾಷೆಗಳಲ್ಲೂ ಕಾಣಬಹುದು. ಮಾನವ ಭಾಷೆಯಲ್ಲಿ ಕೀಳು-ಮೇಲು, ಮುಂದುವರಿದದ್ದು-ಹಿಂದುಳಿದದ್ದು ಎಂಬುದಿಲ್ಲ. ಮಗುವು ಮಾತು, ಭಾಷೆಯೊಂದಿಗೆ ಹುಟ್ಟುವುದಿಲ್ಲ. ಮಕ್ಕಳು ತಮ್ಮ ಪರಿಸರದಲ್ಲಿ ಆಡುವ ಉಪಯೋಗಿಸುವ ಭಾಷೆಯನ್ನು ಕ್ರಮೇಣವಾಗಿ ಒಂದು ನಿಯಮಿತ ಕಾಲದಲ್ಲಿ ಸುಮಾರು 2 ವರ್ಷದಿಂದ ಹರೆಯದವರೆಗೆ – ಮಾತನಾಡಲು ಉಪಯೋಗಿಸಲೂ ಕಲಿಯುತ್ತಾರೆ. ಸಾಮಾನ್ಯವಾಗಿ ಮಗುವಿಗೆ ಉದ್ದೆಶಪೂರ್ವಕವಾಗಿ ಭಾಷೆಯನ್ನು ಯಾರೂ ಕಲಿಸುವುದಿಲ್ಲ. ಆದರೆ ಮಗು ಮಾತನ್ನು ಉಪಯೋಗಿಸುವ ಮೊದಲು, ಪರಿಸರದಲ್ಲಿ ಉಪಯೋಗಿ ಸುವ ಭಾಷೆ ಮಗುವಿನ ಕಿವಿಯ ಮೇಲೆ ಸಾಕಷ್ಟು ಬೀಳಬೇಕು. ಎಷ್ಟೇ ಪ್ರಯತ್ನಪಟ್ಟರೂ, ಮಗು 6 ತಿಂಗಳ ವಯಸ್ಸಿನ ಮೊದಲು ಮಾತನಾಡಲು ಪ್ರಾರಂಭಿಸುವಂತೆ ಮಾಡಲಾಗದು. ವಾಸ್ತವಿಕ ವಯಸ್ಸಿನಲ್ಲಿ, ಅಂದರೆ ಎರಡು ವರ್ಷಗಳಿಂದ ಏಳು ವರ್ಷ ಅವಧಿಯಲ್ಲಿ, ಮಗುವು ತನ್ನ ಪರಿಸರ ದಲ್ಲಿರುವ ಸಹಜ ಭಾಷಾ ಸಂಪರ್ಕದಿಂದಲೇ ಜಟಿಲವಾದ ಭಾಷಾ ಸೂತ್ರ ಗಳನ್ನು ಅರಗಿಸಿಕೊಂಡು ಕ್ರಮೇಣ, ಶ್ರಮವಿಲ್ಲದೆ ಆ ಭಾಷೆಯ ಮೇಲೆ ಪ್ರಭುತ್ವವನ್ನು ಸಾಧಿಸುತ್ತದೆ. ಆದರೆ ಶ್ರವಣ ದೋಷಗಳಿರುವ ಮಕ್ಕಳು ಇದನ್ನು ಸಾಧಿಸಲಾರವು. ಇದು ಎಲ್ಲ ಭಾಷೆಯ, ವರ್ಣದ, ಬುಡಕಟ್ಟಿನ ಮಕ್ಕಳಿಗೆ ಅನ್ವಯಿಸುತ್ತದೆ.

ಮಗುವು ಭಾಷೆಯನ್ನು ಕಲಿಯಲು ಅಡ್ಡಿಯಾಗುವ ಕಾರಣಗಳಲ್ಲಿ ಶ್ರವಣದೋಷ ಅತಿ ಮುಖ್ಯವಾದದ್ದು. ಹುಟ್ಟುವಾಗಲೇ ಕಿವುಡಾದ ಮಗು ಮಾತನ್ನು ಕಲಿಯಲಾರದು. ಸಾಮಾನ್ಯವಾಗಿ ನಾವೆಲ್ಲಾ ತಿಳಿದಿರುವುದಕ್ಕೆ ವ್ಯತಿರಿಕ್ತವಾಗಿ ಕಿವುಡು ಮಗು ಮೂಕವಲ್ಲ. ಅಂತಹ ಮಗುವು ಕಿವುಡುತನ ದಿಂದಾಗಿ ಮಾತನ್ನು ಕೇಳಿಸಿಕೊಳ್ಳಲಾಗದೆ ಮಾತನ್ನು ಕಲಿಯುವುದಿಲ್ಲವೇ ಹೊರತು ಮೂಕತನ ಹುಟ್ಟಿನಿಂದ ಬರುವಂತಹುದಲ್ಲ. ಇಂತಹ ಮಕ್ಕಳಲ್ಲಿ ಧ್ವನಿ, ಮಾತಿನ ಉತ್ಪತ್ತಿಗೆ ಸಹಾಯಕವಾಗುವ ಅಂಗಾಂಗಗಳು ಸಾಮಾನ್ಯರಂತೆ ಚೆನ್ನಾಗಿಯೇ ಇರುತ್ತವೆ. ಇಂತಹ ಹಲವರಲ್ಲಿ ಹುಟ್ಟುವಾಗಲೇ ಶ್ರವಣ ದೋಷವಿದ್ದಲ್ಲಿ, ಇನ್ನು ಕೆಲವರಿಗೆ ಗಂಭೀರವಾದ ಕಾಯಿಲೆಗಳಿಗೆ ಉಪಯೋಗಿ ಸುವ ಜೀವವುಳಿಸುವ ಕೆಲವು ಅವಶ್ಯಕ ಔಷಧಿಗಳಿಂದಾಗಿ ಶ್ರವಣ ದೋಷ ಉಂಟಾಗಬಹುದು. ಇಂದಿನವರೆಗೂ ಚಿಕ್ಕ ಮಕ್ಕಳಲ್ಲಿ ಉಂಟಾಗುವ ಬಹಳಷ್ಟು ತೀವ್ರ ಶ್ರವಣ ದೋಷಗಳಿಗೆ ಔಷಧಿಯ ಮೂಲಕವಾಗಿಯಾಗಲೀ, ಶಸ್ತ್ರಚಿಕಿತ್ಸೆಯ ಮೂಲಕವಾಗಿಯಾಗಲೀ ಶ್ರವಣಶಕ್ತಿ ಮರಳಿ ಬರುವ ಸಂಭವ ಕಡಿಮೆ. ಇಂತಹ ಶ್ರವಣ ದೋಷವಿರುವ ಮಕ್ಕಳಲ್ಲಿ ಉಳಿದಿರಬಹು ದಾದ ಅಲ್ಪಸ್ವಲ್ಪ ಶ್ರವಣಶಕ್ತಿಯನ್ನು, ಸೂಕ್ತವಾದ ಶ್ರವಣೋಪಕರಣಗಳನ್ನು ಕೊಡಿಸುವ ಮೂಲಕ, ಅದರ ಸದುಪಯೋಗದಿಂದ ಹಾಗೂ ದೃಢ ಪ್ರಯತ್ನ, ತೀವ್ರ ತರಬೇತಿಯ ಸಹಾಯದಿಂದ ಆ ಮಗುವು ಮಾತನಾಡಲು ಕಲಿಯುವಂತೆ ಮಾಡಬಹುದು. ಶ್ರವಣೋಪಕರಣ, ಶಬ್ದವನ್ನು ವೃದ್ದಿಸಿ ಮಗುವು ಕೇಳುವ ಮಟ್ಟದಲ್ಲಿ ಮಗುವಿಗೆ ಕಿವಿಗೆ ಒಯ್ಯುತ್ತದೆ. ದೃಢ ಪ್ರಯತ್ನ, ತೀವ್ರ ಹಾಗೂ ದೀರ್ಘ ಕಾಲದ ತರಬೇತಿ, ಶ್ರವಣ ಶಕ್ತಿಯ ಜೊತೆಗೆ ತುಟಿ ಚಲನೆಯಿಂದ ಮಾತನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಉಪಯೋಗಿಸಿಕೊಂಡು ಮಗುವಿಗೆ ಮಾತನ್ನು ಕಲಿಸಬಹುದು. ಹೊರಕಿವಿ ಹಾಗೂ ಮಧ್ಯ ಕಿವಿಯ ದೋಷಗಳಿಂದ ಉಂಟಾಗುವ ಅಲ್ಪ ಪ್ರಮಾಣದ ಶ್ರವಣ ದೋಷಗಳನ್ನು ಔಷಧೋಪಚಾರದಿಂದ, ಶಸ್ತ್ರ ಚಿಕಿತ್ಸೆಯಿಂದ ಸರಿಪಡಿಸಬಹುದು. ಈ ಅಲ್ಪ ಪ್ರಮಾಣದ ಶ್ರವಣ ದೋಷ ಗಳು ಮಗುವು ಮಾತು, ಭಾಷೆಯನ್ನು ಕಲಿಯಲು ಅಷ್ಟಾಗಿ ಅಡ್ಡಿಯಾಗುವು ದಿಲ್ಲ. ಇವರ ಮಾತಿನಲ್ಲಿ ಉಚ್ಚಾರಣೆದೋಷದಂತಹ ಸಣ್ಣಪುಟ್ಟ ದೋಷಗಳು ಕಾಣಿಸಿಕೊಳ್ಳಬಹುದು. ಇಂತಹ ದೋಷಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಸರಿಪಡಿಸಬಹುದು; ಸರಿಪಡಿಸಬೇಕು.

ಮಗು ಮಾತು ಕಲಿಯುವುದು ತಡವಾಗಲು ಇನ್ನೊಂದು ಮುಖ್ಯ ಕಾರಣ ವೆಂದರೆ ಬುದ್ದಿ ಮಾಂದ್ಯತೆ. ಇಂತಹ ಮಕ್ಕಳ ಸರ್ವಾಂಗೀಣ ಬೆಳವಣಿಗೆಯು ಬೇರೆ ಸಮ ವಯಸ್ಕ ಮಕ್ಕಳಿಗಿಂತ ನಿಧಾನ. ಬುದ್ದಿಮಾಂದ್ಯದ ಪ್ರಮಾಣಕ್ಕೆ ಅನುಗುಣವಾಗಿ ಭಾಷೆ ಕಲೆಯುವ ವೇಗ ಹಾಗೂ ಪ್ರಮಾಣ ಕಡಿಮೆ ಯಾಗಿರುತ್ತದೆ.

ಈ ಮೇಲ್ಕಂಡ ಎರಡು ಕಾರಣಗಳಲ್ಲದೆ (ಶ್ರವಣದೋಷ ಮತ್ತು ಬುದ್ದಿಮಾಂದ್ಯತೆ) ಇತರ ಹಲವಾರು ದೈಹಿಕ, ಮಾನಸಿಕ, ಅಥವಾ ಸಾಮಾಜಿಕ ಕಾರಣಗಳು ಮಕ್ಕಳ ಭಾಷೆಯ ಬೆಳವಣಿಗೆಗೆ ಅಡ್ಡಿಯಾಗಬಹುದು. ಮೆದುಳಿನ ಕೆಲವೊಂದು ಭಾಗಗಳಿಗೆ ಉಂಟಾಗುವ ಆಘಾತಗಳು, ಮಾನಸಿಕ ಉದ್ರೇಕ, ತುಯ್ದಟಗಳು, ಸಂಸಾರದಲ್ಲಿರುವ ಒಡಕು, ತೀವ್ರವಾದ ಮನೋದ್ರೇಕ, ಮನೋವ್ಯಾಧಿ, ಪರಿಸರದಲ್ಲಿ ಸಾಕಷ್ಟು ಉತ್ತೇಜನದ ಕೊರತೆ, ಒಮ್ಮೆಗೇ ಹಲವಾರು ಭಾಷೆಗಳನ್ನು ಮಗು ಕಲಿಯಬೇಕಾದ ಸನ್ನಿವೇಶ, ಇವು ಮತ್ತಿತರ ಕೆಲವು ಕಾರಣಗಳು. ಮಗು ತನ್ನ ಎರಡನೇ ವರ್ಷದಲ್ಲಿ ಮಾತನಾಡದಿದ್ದಲ್ಲಿ ಕಾರಣವನ್ನು ತಿಳಿಯಲು ಅಮೂಲಾಗ್ರವಾಗಿ ಪರೀಕ್ಷೆಗೆ ಒಳಪಡುವುದು ಒಳಿತು. ಇಂತಹ ಸಕಾಲ ಪರೀಕ್ಷೆಗಳಿಂದ ಚಿಕಿತ್ಸಾ ಕ್ರಮಗಳನ್ನು ಬೇಗ ಪ್ರಾರಂಭಿಸಲು ಸಹಾಯಕವಾಗುತ್ತದೆ. ಫಲಿತಾಂಶವೂ ಆಶಾದಾಯಕವಾಗುತ್ತದೆ.

ಮೇಲೆ ನಮೂದಿಸಿದ ತೀವ್ರ ದೋಷಗಳಲ್ಲದೆ ಮಕ್ಕಳಲ್ಲಿ ಕೆಲವು  ಸಾಮಾನ್ಯ ವಾಕ್ ದೋಷಗಳನ್ನು ಕಾಣಬಹುದು. ಇವುಗಳಲ್ಲಿ ಸಾಮಾನ್ಯವಾಗಿ ತೊದಲು ಒಂದು. ಮಗುವಿನ ಉಚ್ಚಾರಣೆಯಲ್ಲಿ ದೋಷವಿದ್ದಾಗ ಒಂದು ಧ್ವನಿಗೆ ಬದಲು ಬೇರೊಂದು ಧ್ವನಿಯನ್ನು ಉಚ್ಚರಿಸುವುದು, ಅಥವಾ ಮಗುವಿನ ಮಾತು ಸರಾಗವಾಗಿ ಹರಿಯದೆ ನಿಧಾನಿಸುವುದು, ತಡವರಿಸುವುದು. ಪದದ ಮೊದಲಕ್ಷರವನ್ನು ಅಥವಾ ಪದವನ್ನು ಹಲವಾರು ಬಾರಿ ಪುನರುಚ್ಚರಿಸುವುದು. ಇವೆಲ್ಲವನ್ನೂ ಜನಸಾಮಾನ್ಯರು ತೊದಲು ಎನ್ನುತ್ತಾರೆ. ಮೇಲೆ ವಿವರಿಸಿದ ಮೊದಲನೆಯ ರೀತಿಯ ತೊದಲು ಅಥವಾ ಉಚ್ಚಾರ ದೋಷ ಎಲ್ಲ ಚಿಕ್ಕ ಮಕ್ಕಳಲ್ಲಿ ಸರ್ವೇಸಾಮಾನ್ಯ. ಕಷ್ಟವಾದ ಶಬ್ದವನ್ನು ಸರಿಯಾಗಿ ಉಚ್ಚರಿಸಲು 4-5 ವರ್ಷಗಳಾದರೂ ಬೇಕು. ಈ ಪ್ರಯತ್ನ 2ನೇ ವರ್ಷದಲ್ಲಿ ಪ್ರಾರಂಭವಾಗಿ 4 5 ವರ್ಷಗಳಾದರೂ ಮುಂದುವರೆಯಬಹುದು. ಅ, ಈ, ಊ, ಮುಂತಾದ ಸ್ವರಗಳ ಜೊತೆಯಲ್ಲಿ ಪ, ಮ, ಇಂತಹ ಧ್ವನಿಗಳನ್ನು ಮಕ್ಕಳು ಬೇಗನೆ ಕಲಿಯುತ್ತಾರೆ. ಸ, ರ, ಮುಂತಾದ ವ್ಯಂಜನಗಳು ಅನಂತರ. ಹೀಗೆ ಮೂರು ವರ್ಷದ ಒಂದು ಮಗು ‘ರಾಮ’ನಿಗೆ ಬದಲು ‘ಲಾಮ’ ಎಂದಾಗ ಬಹಳ ಮುದ್ದಾಗಿದೆ ಎಂದರೂ ಅದನ್ನೇ ಒಬ್ಬ ಎಂಟು ವರ್ಷದ ಹುಡುಗ ಹೇಳಿದಾಗ ಹುಬ್ಬೇರಿಸುವುದು, ಗದರಿಸುವದು, ತಮಾಷೆ ಮಾಡುವುದುಂಟು. ಉಚ್ಚಾರ ದೋಷಗಳಿಗೆ ನಾಲಿಗೆ ತಡೆ, ಮನೆಯ ಬೇರೆಯ ಮಕ್ಕಳ, ದೊಡ್ಡವರ ಉಚ್ಚಾರ ದೋಷಗಳ ಅನುಕರಣೆ ಇತ್ಯಾದಿ ಹಲವಾರು ಕಾರಣಗಳು ಇರಬಹುದು. ಈ ದೋಷಗಳನ್ನು ಸುಲಭವಾಗಿ ಸರಿಪಡಿಸಬಹುದು.

ಮಾತು ಸರಾಗವಾಗಿ ಹರಿಯದೆ ನಿಧಾನಿಸುವುದು, ಪದದ ಮೊದಲ ಅಕ್ಷರವನ್ನು ಅಥವಾ ಪದವನ್ನು ಹಲವಾರು ಬಾರಿ ಪುನರುಚ್ಚರಿಸುವುದು -ಇದಕ್ಕೂ ತೊದಲು ಅಥವಾ ಉಗ್ಗು ಎನ್ನುವುದುಂಟು. ತೊದಲು, ಉಗ್ಗು ಅಥವಾ ತಡವರಿಕೆಯನ್ನು ಅರ್ಥ ಮಾಡಿಕೊಳ್ಳುವುದಾಗಲಿ ನಿವಾರಿಸುವುದಾಗಲಿ ಉಚ್ಚಾರ ದೋಷದ ನಿವಾರಣೆಯಷ್ಟು ಸುಲಭವಲ್ಲ. ಉಗ್ಗು ಮನೆತನದಲ್ಲಿ ಇರಬಹುದು, ಇದು ಗಂಡು ಮಕ್ಕಳಲ್ಲಿ ಹೆಚ್ಚು. ಉಗ್ಗುತನವನ್ನು ಅರಿವಿಲ್ಲದೆ ಅನುಕರಿಸುವುದರಿಂದ ಬರಬಹುದು. ತೊದಲುವಿಕೆಯ ಬಗ್ಗೆ ಬಹಳಷ್ಟು ಸಂಶೋಧನೆ ಇದುವರೆಗೂ ನಡೆದಿದ್ದರೂ, ತೊದಲುವಿಕೆಗೆ ಕಾರಣ ಇನ್ನೂ ಪೂರ್ಣವಾಗಿ ಅರ್ಥವಾಗಿಲ್ಲ. ಇತರ ಕೆಲವು ವಾಕ್ ದೋಷಗಳಂತೆ ಉಗ್ಗಿಗೂ ವೈದ್ಯಕೀಯ ಅಥವಾ ಶಸ್ತ್ರ ಚಿಕಿತ್ಸೆ ಇಲ್ಲ. ವಾಕ್ ತರಬೇತಿಯ ಮೂಲಕ ಉಗ್ಗನ್ನು ಸಮರ್ಪಕವಾಗಿ ಹೋಗಲಾಡಿಸಬಹುದು. ಇಲ್ಲವೇ ತಗ್ಗಿಸಬಹುದು. ತರಬೇತಿ ಬೇಗ ಪ್ರಾರಂಭವಾದಷ್ಟೂ ಫಲಿತಾಂಶ ಉತ್ತಮ.

ತುಟಿ ಮತ್ತು ಅಂಗಳ ಸೀಳು, ಸೆರಿಬ್ರಲ್ ಪ್ಯಾಲ್ಸಿ ಮೆದುಳಿನ ಆಘಾತದಿಂದಾಗಿ ಚಾಲಕಸ್ನಾಯು, ನರಗಳ ಮೇಲೆ ಸರಿಯಾದ ನಿಯಂತ್ರಣ ಉಂಟಾಗದಿರುವಿಕೆ ಇಂತಹ ಅಂಗವಿಕಲತೆಗಲಿಂದ ಉಚ್ಚಾರದೋಷ, ಅಸ್ಪಷ್ಟ ಮಾತನ್ನು ಮಕ್ಕಳಲ್ಲಿ ಕಾಣಬಹುದು. ತುಟಿ ಮತ್ತು ಅಂಗಳಸೀಳು ಇರುವ ಮಕ್ಕಳ ಮಾತು ಅಸ್ಪಷ್ಟವಾಗಿದ್ದದು ಮೂಗಿನಿಂದ ಮಾತನಾಡಿದಂತಿರುತ್ತದೆ. ಅಲಂಕಾರಿಕ ಶಸ್ತ್ರ ಚಿಕಿತ್ಸೆ ಬಹಳ ಮುನ್ನಡೆ ಸಾಧಿಸಿದ್ದು, ಇಂತಹ ದೋಷಗಳನ್ನು ಸರಿಪಡಿಸುವುದರಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಈ ಶಸ್ತ್ರ ಚಿಕಿತ್ಸೆಯ ನಂತರವೂ ವಾಕ್ ದೋಷ ಉಳಿದಿದ್ದಲ್ಲಿ ಅರ್ಥೋಡಾಂಟಿಸ್ಟ್ ಹಾಗೂ ವಾಕ್ ತಜ್ಞರು ಕೂಡಿ ವಾಕ್ ದೋಷವನ್ನು ಕಡಿಮೆ ಮಾಡಬಹುದು.

ಗರ್ಭದಲ್ಲಿ ಇರುವಾಗ ಅಥವಾ ಹುಟ್ಟುವಾಗ ಆಗುವ ಆಘಾತದಿಂದಾಗಿ ಹಲವು ಮಕ್ಕಳಲ್ಲಿ ಚಾಲಕ ನರ, ಸ್ನಾಯುಗಳ ಮೇಲೆ ಮೆದುಳಿನ ನಿಯಂತ್ರಣ ಸಮರ್ಪಕವಾಗಿ ಇಲ್ಲದೆ, ಕೈಕಾಲು ಮುಂತಾದ ಅಂಗಾಂಗಗಳ ಚಲನೆ ಹಿಡಿತ ಬಾರದಿರುವುದುಂಟು. ಇದನ್ನು ಆಂಗ್ಲ ಭಾಷೆಯಲ್ಲಿ ಸೆರಿಬ್ರಲ್ ಪಾಲ್ಸಿ ಎನ್ನುತ್ತಾರೆ. ಮಾತಿನ ಸ್ಪಷ್ಟ ಉಚ್ಚಾರಕ್ಕೆ ಮಾತನ್ನು ಉತ್ಪತ್ತಿ ಮಾಡುವ ಅಂಗಾಂಗಗಳ ಮೇಲೆ ನರ – ಸ್ನಾಯುಗಳ ಅತಿ ಸೂಕ್ಷ್ಮ ಹೊಂದಾಣಿಕೆ, ನಿಯಂತ್ರಣ ಸಾಕಷ್ಟು ಇಲ್ಲದಿರುವುದರಿಂದ ಇಂತಹ ಮಕ್ಕಳು ನಿಧಾನವಾಗಿ ಕಷ್ಟಪಟ್ಟು ಅಸ್ಪಷ್ಟವಾಗಿ ಮಾತನಾಡುತ್ತಾರೆ. ದೈಹಿಕ ಶಿಕ್ಷಕರ ಸಹಯೋಗದಲ್ಲಿ ವಾಕ್ ತಜ್ಞರನ್ನು ಈ ಮಕ್ಕಳು ತನ್ನ ನರ ಸ್ನಾಯುಗಳ ಹೊಂದಾಣಿಕೆಯನ್ನು ಉತ್ತಮ ಪಡಿಸಲು ಸಹಾಯ ಮಾಡಿದರೆ ಕೈಕಾಲುಗಳ ಚಲನೆಯಲ್ಲದೆ, ಮಾತು ಕೂಡ ಉತ್ತಮವಾಗಲು ನೆರವಾಗುತ್ತಾರೆ.

ಮಕ್ಕಳ ಧ್ವನಿ ತೊಂದರೆ ಬಹಳ ಸಾಮಾನ್ಯವಾದರೂ ಹಿರಿಯರು ಸಾಕಷ್ಟು ಗಮನ ಕೊಡದೆ ತೊಂದರೆಗಳಲ್ಲಿ ಒಂದು ಹದಿವಯಸ್ಸಿಗೆ ಬಂದ ಹುಡುಗರಲ್ಲಿ ದೈಹಿಕ ಬದಲಾವಣೆ : ಬೆಳವಣಿಗೆಯೊಂದಿಗೆ ಧ್ವನಿಯು ಬದಲಾಗದಿದ್ದಾಗ ಹುಡುಗನ ಧ್ವನಿ ಹುಡುಗಿಯ ಧ್ವನಿಯಂತೆ ಅನಿಸಬಹುದು. ಅಂತೆಯೇ ಹುಡುಗಿಯ ಧ್ವನಿ ಹುಡುಗನ ಧ್ವನಿಯನ್ನು ಹೋಲಬಹುದು. ಮಕ್ಕಳಲ್ಲಿ ಧ್ವನಿಯ ದುರುಪಯೋಗವೂ ಹೆಚ್ಚು. ನಮ್ಮ ಶಬ್ದಮಯ ವಾತಾವರಣದಲ್ಲಿ ಬೇರೆಯವರ ಗಮನ ಸೆಳೆಯಲು ದೊಡ್ಡ ಗಂಟಲು ಬೇಕೇ ಬೇಕು ಎಂದು ತಿಳಿದರೆ ಆಶ್ಚರ್ಯವಿಲ್ಲ. ಆದರೆ ಧ್ವನಿಯ ಸತತ ದುರುಪಯೋಗದ ಪರಿಣಾಮವಾಗಿ ಧ್ವನಿ ತಂತುಗಳ ಮೇಲೆ ದುಷ್ಪರಿಣಾಮ ಆಗಬಹುದು. ಧ್ವನಿ ತಂತುಗಳ ಮೇಲೆ ಸಣ್ಣ ಬೊಕ್ಕೆಗಳು ಏಳುವುದುಂಟು. ಧ್ವನಿ ತರಬೇತಿಯಿಂದ ಇದರ ನಿವಾರಣೆ ಸಾಧ್ಯ.

ವಾಕ್- ಶ್ರವಣ ದೋಷಗಳು ಮಕಳಿಗೆ  ಮಾತ್ರ ಮೀಸಲಿಲ್ಲ. ಅವು  ದೊಡ್ಡವರಲ್ಲೂ ಕಾಣಿಸಿಕೊಳ್ಳಬಹುದು. ಖಾಯಿಲೆ, ವೃದ್ಧಾಪ್ಯ, ದೀರ್ಘಕಾಲ ಹೆಚ್ಚಿನ ಪ್ರಮಾಣದ ಶಬ್ದಕ್ಕೆ ಒಡ್ಡಿಕೊಳ್ಳುವುದೇ ಮುಂತಾದ ಕಾರಣಗಳಿಂದ ದೊಡ್ಡವರಲ್ಲೂ ಶ್ರವಣ ದೋಷ ಉಂಟಾಗಬಹುದು.

ಧ್ವನಿ ತೊಂದರೆ ದೊಡ್ಡವರಲ್ಲೂ ಸಾಮಾನ್ಯ. ದೀರ್ಘಕಾಲದ ನೆಗಡಿ, ಹಾಗೂ ಗಂಟಲು ಸೋಂಕು, ಧ್ವನಿ ಸತತ ದುರುಪಯೋಗ, ಧ್ವನಿ ತಂತುವಿನ ಪಾರ್ಶ್ಚವಾಯು, ಅರ್ಬುದ ಮುಂತಾದವುಗಳಿಂದ ಧ್ವನಿಯ ತೊಂದರೆಗಳು ಉಂಟಾಗುತ್ತವೆ. ಧ್ವನಿ ತಂತು ಅರ್ಬುದ ಔಷಧೋಪಚಾರ ಹಾಗೂ ಕ್ಷಕಿರಣ ಚಿಕಿತ್ಸೆಯಿಂದ ಗುಣವಾಗದಿದ್ದಲ್ಲಿ ಧ್ವನಿ ಪೆಟ್ಟಿಗೆಯನ್ನು ಶಸ್ತ್ರ ಚಿಕಿತ್ಸೆಯಿಂದ ತೆಗೆಯಬೇಕಾಗಬಹುದು. ಹೀಗಾದಾಗ ಧ್ವನಿ ಪೆಟ್ಟಿಗೆಯನ್ನು ಕಳೆದುಕೊಂಡವರು ಮಾತನಾಡುವ ಶಕ್ತಿಯನ್ನು ಕಳೆದುಕೊಂಡೆವೆಂದು ಚಿಂತಿಸಬೇಕಾಗಿಲ್ಲ. ಅವರು ಕೃತಕ ಧ್ವನಿ ಉತ್ಪತ್ತಿ ಮಾಡುವ ಉಪಕರಣಗಳ ಸಹಾಯದಿಂದ, ಸೂಕ್ತ ತರಬೇತಿಯಿಂದ ಅನ್ನನಾಳಕ್ಕೆ ಗಾಳಿ ತೆಗೆದುಕೊಂಡು ಅದನ್ನೇ ಧ್ವನಿಯನ್ನಾಗಿ ಉಪಯೋಗಿಸಿಕೊಳ್ಳುವ ವೂಲಕ ಪುನಃ ಮಾತನಾಡಬಹುದು.

ಪಾರ್ಶ್ವವಾಯು, ತಲೆಗೆ ಬೀಳುವ ಪೆಟ್ಟಿನಿಂದಾಗಿ ಮೆದುಳುಗಡ್ಡೆಯಲ್ಲಿ ಉಂಟಾಗುವ ವಾಕ್‌ಸ್ತಂಭನ (ಅಫೇಸಿಯಾ) ವಯಸ್ಕರನ್ನು ಕಾಡುವ ಇನ್ನೊಂದು ಪ್ರಮುಖ ವಾಕ್‌ದೋಷ. ಇದರ ಪರಿಣಾಮವಾಗಿ ಮಾತನಾಡುವುದು, ಮಾತನ್ನು ಅರ್ಥ ಮಾಡಿಕೊಳ್ಳುವುದು, ಓದುವುದು ಮತ್ತು ಬರೆಯುವುದು ಇತ್ಯಾದಿ ಕ್ರಿಯೆಗಳಲ್ಲಿ ಆಡಚಣೆ ಆಗುತ್ತದೆ. ಇದರ ಜೊತೆಗೆ ವಾಕ್‌ಸ್ತಂಭನಕ್ಕೆ ಗುರಿಯಾದ ವ್ಯಕ್ತಿಗೆ ತನ್ನ ಹಾಗೂ ಬಾಹ್ಯ ಸಂಬಂಧದ (ಸ್ಥಳ, ಕಾಲ, ಅಂತರ ಇತ್ಯಾದಿ ಸಂಬಂಧಗಳು) ಅರಿವಿನಲ್ಲಿ ಗೊಂದಲವುಂಟಾಗುತ್ತದೆ. ಅನವಶ್ಯಕ ಭಾವಾವೇಶಗಳನ್ನು ಕಾಣಬಹುದು. (ಬೇರೆ ವಾಕ್‌ದೋಷಗಳಂತೆ ವಾಕ್‌ಸ್ತಂಭನಕ್ಕೆ ವೈದ್ಯಕೀಯ ಸ್ವಾಭಾವಿಕ ಚೇತರಿಕೆ ಹಾಗೂ ದೀರ್ಘಕಾಲದ ತೀವ್ರ ವಾಕ್ ತರಬೇತಿಯನ್ನು ಅವಲಂಬಿ ಸುತ್ತದೆ).

ಮಾನವನಿಗೆ ಮಾತ್ರ ಲಭ್ಯವಾಗಿರುವ ಭಾಷೆ ಮತ್ತು ಮಾನವ ಮಿದುಳಿ ನೊಡನೆ ಅದಕ್ಕೆ ಇರುವ ಸಂಬಂಧದ ಅರಿವು ಮತ್ತು ಜಿಜ್ಞಾಸೆ ಇಪ್ಪತ್ತು ಶತಮಾನಗಳಿಗೂ ಹಿಂದಿನದು. ಆದರೆ ಈ ಜಟಿಲ ಸಂಬಂಧವನ್ನು ಅರಿಯಲು ವೈಜ್ಞಾನಿಕ ಶೋಧ ಆರಂಭವಾದದ್ದು ಕಳೆದ ಒಂದು ಶತಮಾನದಿಂದ ಮಾತ್ರ. ಭಾಷೆ ಮತ್ತು ಮೆದುಳಿಗಿರುವ ಸಂಬಂಧವನ್ನು ಕುರಿತು ವೈಜ್ಞಾನಿಕ ಅಧ್ಯಯನವನ್ನು ಮೊದಲು ಮಾಡಿದ ಕೀರ್ತಿ ಫ್ರಾನ್ಸಿನ ಪಾಲ್ ಬ್ರೋಕಾನ್‌ಗೆ ಸಲ್ಲುತ್ತದೆ. ಈತ 1861 ರಿಂದ 1865 ರವರೆಗೆ ಮೆದುಳಿನ ಮುಂದಿನ ಪಾಲೆಯ ಹಿಂದೊರಗಿನ ಭಾಗದಲ್ಲಿ ಉಂಟಾದ ಗಾಯಗಳ ಪರಿಣಾಮವಾಗಿ ವಾಕ್‌ಶಕ್ತಿಯನ್ನು ಕಳೆದುಕೊಂಡ ಹಲವಾರು ರೋಗಿಗಳ ಈ ಭಾಗಕ್ಕೆ ಬ್ರೋಕನ ಕ್ಷೇತ್ರ ಎಂಬ ಹೆಸರು ಬಂತು. ಬ್ರೋಕಾನ ಇನ್ನೂ ಮಿಗಿಲಾದ ಕೊಡುಗೆಯೆಂದರೆ ಮೆದುಳಿನ ಎಡ ಅರೆಗೋಳಕ್ಕೆ ಆಗುವ ಪೆಟ್ಟು ಭಾಷೆಯ ಕ್ಷೋಭೆಗೆ ಕಾರಣವಾಗುತ್ತದೆ ಎಂದು ಗುರುತಿಸಿದ್ದು. ಈ ಕೊಡುಗೆಗಾಗಿ ಆತ ಇಂದಿಗೂ ಸ್ಮರಣೀಯ. ಅನಂತರದ ಸಂಶೋಧನೆಗಳು ಹೆಚ್ಚು ಕಡಿಮೆ ಎಲ್ಲ ಬಲಚರು (ಬಲಗೈಯನ್ನು ಮುಂದಾಗಿ ಉಪಯೋಗಿಸುವವರು) ಮತ್ತು ಗಣನೀಯ ಪ್ರಮಾಣದಲ್ಲಿ ಎಡಚರ ಭಾಷಾ ಸಾಮರ್ಥ್ಯವನ್ನು ಮೆದುಳಿನ ಎಡಭಾಗ ನಿಯಂತ್ರಿಸುತ್ತದೆ ಎಂಬುದನ್ನು ದೃಢೀಕರಿಸಿದೆ. ಆದ್ದರಿಂದ ಮೆದುಳಿನ ಎಡಭಾಗಕ್ಕೆ ಆಘಾತವಾದಾಗ ಭಾಷಾ ಸಾಮರ್ಥ್ಯದಲ್ಲಿ ಲೋಪವಾದರೂ ಬಹಳ ಜನರಲ್ಲಿ ಅದೇ ರೀತಿಯ ಆಘಾತ ಮೆದುಳಿನ ಬಲಭಾಗದಲ್ಲಿ ಆದಲ್ಲಿ ಭಾಷೆಯ ಲೋಪ ಉಂಟಾಗುವುದಿಲ್ಲ.

ಮೆದುಳಿನ ಎಡ ಅರ್ಧ ಭಾಗದಲ್ಲಿರುವ ಮುಂದಿನ ಪಾಲೆಯ ಹಿಂದೊರಗಿನ ಆ ಭಾಗಕ್ಕೂ ಮಾತಿಗೂ ಸಮೀಪ ಸಂಬಂಧವಿದೆ ಎಂದು ಬ್ರೋಕಾನು ತನ್ನ ಅಭಿಪ್ರಾಯವನ್ನು ಮುಂದಿಟ್ಟ ಹದಿಮೂರು ವರ್ಷಗಳ ನಂತರ 1874 ರಲ್ಲಿ ಕಾರ್ಲ್ ವರ್ನಿಕ್ ಎಡ ಮೆದುಳಿನಲ್ಲಿರುವ ಮೊದಲ ಕಪಾಳ ಸುರುಳು ಭಾಗಕ್ಕೂ ಮಾತನ್ನು ಗ್ರಹಿಸಿ ಅರ್ಥ ಮಾಡಿಕೊಳ್ಳುವುದಕ್ಕೂ ನಿಕಟ ಸಂಬಂಧವಿರುವುದನ್ನು ಗುರುತಿಸಿದನು. ವರ್ನಿಕನ ಪ್ರಕಾರ, ಮೇಲೆ ತಿಳಿಸಿದ ಭಾಗಕ್ಕೆ ಆಘಾತವಾದಾಗ ಆಲಿಸುವುದಕ್ಕೆ ಸಂಬಂಧಿಸಿದ ಪದಬಿಂಬದ ಜ್ಞಾಪಕ ಶಕ್ತಿಗೆ ಕುಂದು ಉಂಟಾಗುತ್ತದೆ. ಇದರ ಪರಿಣಾಮವಾಗಿ ಭಾಷೆ ಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಗೊಂದಲ ಉಂಟಾಗುತ್ತದೆ. ವರ್ನಿಕನು ಗುರುತಿಸಿ ಮೆದುಳಿನ ಈ ಭಾಗಕ್ಕೆ ವರ್ನಿಕನ ಕ್ಷೇತ್ರ ಎಂದು ಹೆಸರಿಸಲಾಗಿದೆ.

ಬ್ರೋಕಾನ್ ಮತ್ತು ವರ್ನಿಕ್ ಇವರುಗಳು ಮೆದುಳಿನಲ್ಲಿ ಭಾಷೆಯ ಉತ್ಪತ್ತಿ ಮತ್ತು ಭಾಷೆಯ ಗ್ರಹಿಕೆಗಳಿಗೆ ಸಂಬಂಧಪಟ್ಟ ಕ್ಷೇತ್ರಗಳನ್ನು ಗುರುತಿಸಿದ್ದು ಭಾಷೆ ಮತ್ತು ಮೆದುಳಿಗೆ ಸಂಬಂಧಿಸಿದಂತೆ ವ್ಯಾಪಕವಾದ ಮಾದರಿಯನ್ನು ಸೂತ್ರೀಕರಿಸಲು ಒಂದು ವೇದಿಕೆಯ ನಿರ್ಮಾಣವಾಗಲು ಸಹಾಯಕವಾಯಿತು.

ವರ್ನಿಕನು ವಾಕ್‌ಸ್ತಂಭನದ ಅಗತ್ಯ ಜಟಿಲ ಲಕ್ಷಣಗಳಲ್ಲಿರುವ ತೊಡಕನ್ನು ಬಿಡಿಸಿ, ಅದನ್ನು ಆವರಿಸಿದ ಒಂದು ಮೇಲ್ಪಂಕ್ತಿಯನ್ನು ಒದಗಿಸುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಿದನು. (ಚೆನ್ನಾಗಿ ಮಾತನಾಡುವ ಮನುಷ್ಯರಲ್ಲಿ, ಮೆದುಳಿನ ನಿರ್ದಿಷ್ಟ ಭಾಗಕ್ಕೆ ಆಘಾತವಾಗುವುದರಿಂದ ಭಾಷೆಯಲ್ಲಿ ಉಂಟಾಗುವ ಅವ್ಯವಸ್ಥೆಯನ್ನು ವಾಕ್‌ಸ್ತಂಭನ ಎನ್ನಬಹುದು). ಹೀಗೆ ಬ್ರೋಕಾನ ಚಾಲಕ ವಾಕ್‌ಸ್ತಂಭನ ದೋಷವುಳ್ಳವರು ಮಾತನ್ನು ಅರ್ಥ ಮಾಡಿಕೊಂಡರೂ ಮಾತನಾಡುವುದರಲ್ಲಿ ಅಸಮರ್ಥರಾಗಿರುತ್ತಾರೆ, ವರ್ನಿಕನ ಅರಿವು ವಾಕ್‌ಸ್ತಂಭನ ದೋಷವುಳ್ಳವರು ಹೆಚ್ಚು ಮಾತನಾಡಿದರೂ ಅವರ ಭಾಷೆ ಅಸಂಗತವಾಗಿದ್ದು, ಬೇರೆಯವರು ಹೇಳಿದ್ದನ್ನು ಅರ್ಥಮಾಡಿಕೊಳ್ಳುವುದ ರಲ್ಲಿ ಅಸಮರ್ಥರಾಗಿರುತ್ತಾರೆ. ಪೂರ್ಣ ಅಥವಾ ಸರ್ವವ್ಯಾಪ್ತಿ ವಾಕ್‌ಸ್ತಂಭ ಪೀಡಿತರಲ್ಲಿ ಮೆದುಳಿನಲ್ಲಿ ಭಾಷೆಗೆ ಸಂಬಂಧಪಟ್ಟ ಕ್ಷೇತ್ರವೆಲ್ಲಾ ಆಘಾತಕ್ಕೆ ಒಳಗಾಗಿದ್ದು, ಅವರ ಮಾತನಾಡುವಿಕೆ ಹಾಗೂ ಮಾತನ್ನು ಗ್ರಹಿಸುವ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚುಕಡಿಮೆ ಇಲ್ಲದಂತಾಗುತ್ತದೆ. ಮೆದುಳಿನಲ್ಲು ವರ್ನಿಕನ ಕ್ಷೇತ್ರವನ್ನು ಮತ್ತು ಬ್ರೋಕಾನ ಕ್ಷೇತ್ರವನ್ನು ಪರಸ್ಪರ ಸೇರಿಸುವ ನರತಂತುಗಳಿಗೆ ಆಘಾತವಾದಾಗ ಆ ವ್ಯಕ್ತಿಯು ಬೇರೆಯವರು ಹೇಳಿದ್ದನ್ನು ಅರ್ಥಮಾಡಿಕೊಳ್ಳಬಲ್ಲ ಮತ್ತು ವಿವೇಚನೆಯಿಂದ ಮಾತನಾಡಬಲ್ಲ. ಆದರೆ ಈ ಎರಡು ಕ್ಷೇತ್ರಗಳ ನಡುವಿನ ಸಂಪರ್ಕ ಕಡೆದಿರುವುದರಿಂದ ಬೇರೆಯವರು ಹೇಳಿದ್ದನ್ನು ತಕ್ಷಣವೇ ಪುನರುಚ್ಚರಿಸಲು ಆಗುವುದಿಲ್ಲ. ಈ ಪರಿಸ್ಥಿತಿಯನ್ನು ಪ್ರವಹಕ ವಾಕ್‌ಸ್ತಂಭನ ಎಂದು ಹೆಸರಿಸಲಾಗಿದೆ.

ಮೆದುಳಿನ ಬೇರೆ ಬೇರೆ ಭಾಗಗಳು ಭಾಷೆಯ ನಿರ್ದಿಷ್ಟ ಕಾರ್ಯಗಳನ್ನು ನಿಯಂತ್ರಿಸುತ್ತವೆ ಎಂಬ ತಿಳುವಳಿಕೆ ಒಂದು ಶತಮಾನಕ್ಕೂ ಹಳೆಯದು. ಇತ್ತೀಚಿನ ಸಂಶೋಧಕರು ಇವರ ಬಗ್ಗೆ ಹೆಚ್ಚಿನ ಸ್ಪಷ್ಟ ವಿವರಣೆಗಳನ್ನು ಒದಗಿಸಿದ್ದಾರೆ. ಮೆದುಳಿನ ವಿವಿಧ ಭಾಗಗಳು ಭಾಷೆಯ ನಿರ್ದಿಷ್ಟ ಕಾರ್ಯಗಳನ್ನು ನಿಯಂತ್ರಿಸುತ್ತವೆ ಎಂಬ ಸಿದ್ಧಾಂತದ ಪ್ರತಿಪಾದಕರನ್ನು ನಿರ್ದಿಷ್ಟ ವಾದಿಗಳು ಎಂದು ಕರೆದರು.

1890 ರ ಸುಮಾರಿನಲ್ಲಿ, ಮೆದುಳಿನ ಬೇರೆ ಬೇರೆ ಭಾಗಗಳು ಭಾಷೆಯ ಬೇರೆ ಬೇರೆ ಕಾರ್ಯಗಳನ್ನು ನಿಯಂತ್ರಿಸುತ್ತವೆ ಎಂಬ ಅಭಿಪ್ರಾಯಕ್ಕೆ ವಿರೋಧ ವ್ಯಕ್ತವಾಯಿತು. ಮೆದುಳಿನ ನಿರ್ದಿಷ್ಟ ಭಾಗಗಳಿಗೆ ಮತ್ತು ಭಾಷೆಯ ನಿರ್ದಿಷ್ಟ ಕಾರ್ಯಗಳಿಗೆ ನೇರ ಸಂಬಂಧ ಕಲ್ಪಿಸುವುದು ತಪ್ಪು ಎಂದು ಹೇಳಿದವರಲ್ಲಿ ಹ್ಯೂಲಿಂಗ್ಸ್ ಜಾಕ್‌ಸನ್, ಪಿಯೆರಿ ಮಾರಿ, ಹೆಡ್ ಮತ್ತು ಮೋನ್ ವಾನ್‌ಕೊವ್ ಮುಖ್ಯರು. ನಿರ್ದಿಷ್ಟವಾದಿಗಳ ಕಟು ಟೀಕಾಕಾರ ಎಂದರೆ ಮಾರಿ. ಈತ ಮೆದುಳು ಒಂದು ಸಮಗ್ರ ಅಂಗ ಎಂದೂ ಅದು ಒಂದು ಪೂರ್ಣ ಅಂಗವಾಗಿ ಭಾಷೆಯ ವಿವಿಧ ಕಾರ್ಯಗಳಿಗೆ ಕಾರಣವಾಗಿದೆ ಎಂದು ವಾದಿಸಿದನು. ಮೆದುಳಿನ ಆಘಾತದಿಂದ ಒಂದೇ ಬಗೆಯ ವಾಕ್ ಸ್ತಂಭನ ಉಂಟಾಗುವುದು ಎಂದು ಅಭಿಪ್ರಾಯ ಪಟ್ಟನು. ಈ ಅಭಿಪ್ರಾಯ ಉಳ್ಳವರನ್ನು ಸಮಗ್ರವಾದಿಗಳು (ಹೋಲಿಸ್ಟ್) ಎನ್ನಬಹುದು. ಭಾಷೆಯಂತಹ ಜಟಿಲ ಕಾರ್ಯಕ್ಕೆ ವಿವಿಧ ನರತಂತುಗಳ ಜಾಲಗಳು ನಿರ್ದಿಷ್ಟ ಕ್ಷಣಗಳಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂಬುದು ಸಮಗ್ರವಾದಿಗಳ ವಾದ. ಗೆಸ್ಟಾಲ್ಟ್ ಮನಶಾಸ್ತ್ರ ಪಂಥದ ಪ್ರಭಾವಕ್ಕೆ ಒಳಗಾದ ಗೋಲ್ಡ್‌ಸ್ಟೀನ್ ಮೆದುಳಿನ ಆಘಾತದಿಂದ ಉಂಟಾದ ಭಾಷಾ ಗೊಂದಲ ನಿರ್ದಿಷ್ಟವಾದುದಲ್ಲ. ಮೆದುಳಿನ ಆಘಾತದಿಂದ ಭಾಷೆಯಲ್ಲಿ ಉಂಟಾದ  ಅಸಮತೋಲನವನ್ನು ನಿವಾರಿಸಿ ಸಮತೋಲನವನ್ನು ಪುನರ್ ಸ್ಥಾಪಿಸಲು ಶರೀರ ವ್ಯಕ್ತಪಡಿಸುವ, ಭಾಷೆಗೆ ಸಂಬಂಧಿಸಿದ ಒಂದು ನಡುವಳಿಕೆ ಎಂದು ಅಭಿಪ್ರಾಯ ಪಡುತ್ತಾರೆ. ಈ ಶತಮಾನದ ಮೊದಲ ಅರ್ಧಭಾಗದಲ್ಲಿ  ಭಾಷೆ ಮತ್ತು ಮೆದುಳನ್ನು ಕುರಿತ ಅಧ್ಯಯನ ಮತ್ತು ಇದರಿಂದ ಪಡೆದ ತಿಳುವಳಿಕೆ ಈ ಗೆಸ್ಟಾಲ್ಟ್ ಮಾರ್ಗಕ್ಕೆ ಸಲ್ಲುತ್ತದೆ. ಹೀಗೆ ಭಾಷೆಯ ಮತ್ತು ಮೆದುಳಿಗೆ ಸಂಬಂಧಪಟ್ಟ ತಿಳುವಳಿಕೆ ಮೊದಲು ಭಾಷೆಯ ವಿವಿಧ ಅಂಗಗಳಿಗೂ ಹಾಗೂ ಮೆದುಳಿನ ವಿವಿಧ ನಿರ್ದಿಷ್ಟ ಭಾಗಗಳಿಗೂ ನೇರವಾದ ಸಂಬಂಧವಿದೆ ಎಂದಿದ್ದು ಈ ಶತಮಾನದ ಮೊದಲಾರ್ಧದಲ್ಲಿ ಮಾನಸಿಕ ಭೌತಿಕ ಸ್ಥಿತಿಗತಿಗಳ ಕಡೆಗೆ ಹರಿಯಿತು.

ಗೆಸ್ಟಾಲ್ಟ್ ಪಂಥಕ್ಕೆ ಸೇರಿದ ಈ ಸಂಶೋಧಕರು, ಭಾಷಾ ಗೊಂದಲ ಮೆದುಳಿನ ಬೇರೆ ಬೇರೆ ನಿರ್ದಿಷ್ಟ ಭಾಗಗಳ ಆಘಾತದಿಂದ ಆಗಿದ್ದರೂ, ಇದರಿಂದ ಉಂಟಾಗುವ ಭಾಷಾಗೊಂದಲ ಒಂದೇ ಎಂದು ಅಭಿಪ್ರಾಯ ಪಟ್ಟರು. ಇದಲ್ಲದೆ ಭಾಷಾ ಗೊಂದಲವನ್ನು ಭಾವನಾತ್ಮಕ ಕಲ್ಪನೆಯಲ್ಲಿ ಉಂಟಾಗುವ ಗೊಂದಲ ಎಂದು ಅಭಿಪ್ರಾಯಪಟ್ಟು ಭಾಷೆ ಭಾವನಾತ್ಮಕ ಕಲ್ಪನೆಯನ್ನು ವ್ಯಕ್ತಪಡಿಸಲು ಒಂದು ಸಾಧನ ಮಾತ್ರ ಎಂದರು.

ಈ ಶತಮಾನದ ಮಧ್ಯಭಾಗದಲ್ಲಿ, ಭಾಷೆ ಮತ್ತು ಮಿದುಳಿಗೆ ಸಂಬಂಧಿಸಿದ ತಿಳುವಳಿಕೆಗೆ ಇನ್ನೊಂದು ದೃಷ್ಟಿಕೋನ ಸೇರಿತು. ಈ ದೃಷ್ಟಿಕೋನ ಭಾಷಾಶಾಸ್ತ್ರಜ್ಞರಿಂದ ಬಂತು. ಮೆದುಳಿನ ಆಘಾತದಿಂದ ಉಂಟಾಗುವ ಭಾಷಾ ಗೊಂದಲವನ್ನು ಭಾಷಾಶಾಸ್ತ್ರಜ್ಞರು ಕ್ರಮಬದ್ಧವಾಗಿ ಅಧ್ಯಯನ ಮಾಡಿದರು. ಭಾಷೆಯಲ್ಲಿ ಮೆದುಳಿನ ಆಘಾತದಿಂದ ಉಂಟಾದ ಗೊಂದಲವನ್ನು ಭಾಷೆಯ ವಿವಿಧ ಮಟ್ಟಗಳು (ಧ್ವನಿ, ಸಂಯೋಜನೆ, ಪದವಿನ್ಯಾಸ, ವ್ಯಾಕರಣ ಅರ್ಥ ಇತ್ಯಾದಿ) ಅವುಗಳ ಕ್ರಮಬದ್ಧತೆ, ಜಟಿಲತೆ, ಮತ್ತು ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಿದರು. ಈಗ ಭಾಷಾ ಗೊಂದಲವನ್ನು, ವಾಕ್‌ಸ್ತಂಭನ ರೋಗಿಯು ಧ್ವನಿಗಳನ್ನು ಪದಗಳಾಗಿ, ಪದಗಳನ್ನು ವಾಕ್ಯಗಳಾಗಿ ಮತ್ತು ವಾಕ್ಯಗಳನ್ನು ಸಂವಾದದಲ್ಲಿ ಉಪಯೋಗಿಸುವಾಗ ಎದುರಿಸುವ ತೊಡಕು ಎಂದ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಪರ್ಯಾಯವಾಗಿ ವಾಕ್‌ಸ್ತಂಭ ರೋಗಿಗೆ ಮೆದುಳಿನಲ್ಲಿರುವ ಸ್ಮರಣ ಭಂಡಾರದಿಂದ ಮಾತನಾಡುವಾಗ ನಿರ್ದಿಷ್ಟ ಶಬ್ದ ಅಥವಾ ಪದವನ್ನು ಸ್ಮರಿಸಿಕೊಳ್ಳಲು, ಮಾತಿನಲ್ಲಿ ಉಪಯೋಗಿಸಲು ಕಷ್ಟವಾಗಬಹುದು. ಈ ಕ್ಷೇತ್ರದಲ್ಲಿ ಗಣನೀಯ ಕಾಣಿಕೆ ಸಲ್ಲಿಸಿದವರಲ್ಲಿ ಮುಖ್ಯರೆಂದರೆ ಭಾಷಾಶಾಸ್ತ್ರಜ್ಞ ರೊಮನ್ ಯಾಕೊಬ್‌ಸನ್ ಹಾಗೂ ರಶ್ಯದ ನರ ಮನಶಾಸ್ತ್ರಜ್ಞನಾದ ಅಲೆಕ್ಸಾಂಡರ್ ಲೂರಿಯ. ಲೂರಿಯನು 1964 ರಲ್ಲಿ ತನ್ನ ಅನುಭವ ಮತ್ತು ಜಾಕೊಬ್‌ಸನ್ನನ ತಾತ್ವಿಕ ತರ್ಕವನ್ನು ಆಧರಿಸಿ ವಾಕ್‌ಸ್ತಂಭನದ ವಿವಿಧ ವಾಕ್‌ದೋಷಗಳನ್ನು ನರ ಭಾಷಾಶಾಸ್ತ್ರವನ್ನು ಆಧರಿಸಿ ವರ್ಗೀಕರಣ ಮಾಡಿದನು. ಈ ವಿವಿಧ ವಾಕ್‌ದೋಷಗಳು ಮಿದುಳಿನ ವಿವಿಧ ನಿರ್ದಿಷ್ಟ ಭಾಗಗಳಲ್ಲಿ ಉಂಟಾದ ಆಘಾತಗಳಿಗೆ ತಾಳೆ ಹೊಂದುತ್ತದೆ. ಹಾಗೆಯೇ, ಲೂರಿಯನ ವರ್ಗೀಕರಣವು ಭಾಷೆಯ ಬಗ್ಗೆ ಲೂರಿಯನ ಭಾವನೆಗಳನ್ನು ವಿವರಿಸುತ್ತದೆ. ಲೂರಿಯನು ಭಾಷೆಯನ್ನು ಮೆದುಳಿನ ವಿವಿಧ ಭಾಗಗಳ ಜಟಿಲ ಹಾಗೂ ಕ್ರಮಬದ್ಧ ವ್ಯವಸ್ಥಿತ ಕ್ರಿಯೆಯ ನಿವ್ವಳ ಫಲಿತಾಂಶ ಎಂದು ಅಭಿಪ್ರಾಯ ಪಟ್ಟನು. ಈ ಕ್ರಿಯೆಗಳು ಮೆದುಳು ತೊಗಟೆಯ ಬೇರೆ ಬೇರೆ ಕ್ಷೇತ್ರಗಳಿಗೆ ಹೊಂದಿಕೆ ಆಗುತ್ತದೆ. ಈ ಪ್ರತಿಯೊಂದು ಕ್ಷೇತ್ರವು ತನ್ನದೇ ಆದ ಕ್ರಿಯಾವ್ಯವಸ್ಥೆಯನ್ನು ಹೊಂದಿದ್ದು ಮೆದುಳಿನ ಕ್ರಿಯೆಯಲ್ಲಿ ತನ್ನದೇ ಆದ ಕಾಣಿಕೆಯನ್ನು ಸಲ್ಲಿಸುತ್ತದೆ.

ಸುಮಾರು ಇದೇ ಕಾಲದಲ್ಲಿ ಅಮೆರಿಕಾದ ನಾರ್ಮನ್ ಗೆಶ್‌ವಿಂಡನು ವಾಕ್‌ಸ್ತಂಭನವು ಸಂಬಂಧ ಕಳಚಿದ ಲಕ್ಷಣಾವಳಿ ಎಂದು ತನ್ನ ಆಲೋಚನೆಗಳನ್ನು ಮುಂದಿಟ್ಟನು. ಮೆದುಳಿನಲ್ಲಿ ಭಾಷಾ ಕೇಂದ್ರದ ಬಗ್ಗೆ ಮೊದಲು ಇದ್ದ ಭಾವನೆಗಳನ್ನು ಅವಲಂಬಿಸದೇ ಇದ್ದರೂ ಗೆಶ್‌ವಿಂಡನು ಬೇರೆ ಬೇರೆ ಬಗೆಯ ವಾಕ್‌ಸ್ತಂಭನಗಳಲ್ಲಿ ಕಾಣುವ ಭಾಷಾ ಗೊಂದಲಗಳಿಗೂ ಮತ್ತು ಮೆದುಳಿನ ಆಘಾತದ ನಿರ್ದಿಷ್ಟ ಭಾಗಗಳಿಗೂ ಇರುವ ಹೋಲಿಕೆಗಳನ್ನು ದೃಢಪಡಿಸಿದನು. ವಾಕ್‌ಸ್ತಂಭನದಿಂದ ಭಾಷೆಯಲ್ಲಿ ಆಗುವ ಗೊಂದಲ, ಮೆದುಳಿನ ಮೇಲ್ಪದರದ ನಿರ್ದಿಷ್ಟ ಭಾಗಗಳನ್ನು ಅಥವಾ ಮೇಲ್ಪದರದ ವಿವಿಧ ಭಾಗಗಳನ್ನು ಕೂಡಿಸುವ ನರತಂತುಗಳಿಗೆ ಉಂಟಾಗುವ ಆಘಾತದ ಪರಿಣಾಮ ಎನ್ನಲಾಗಿದೆ.

ವಾಕ್‌ಸ್ತಂಭನದಿಂದ ಉಂಟಾಗುವ ಭಾಷಾ ಗೊಂದಲದ ಕಾರಣ ಕುರಿತ ಜಿಜ್ಞಾಸೆ 1869 ರಿಂದ ಪ್ರಾರಂಭವಾಗಿ 1960 ರವರೆಗೆ ಒಂದು ವೃತ್ತವನ್ನು ಪೂರ್ಣ ಬಳಸಿ ಬಂದಿದೆ. ಮೊದಲು ಮೆದುಳಿನ ನಿರ್ದಿಷ್ಟ ಭಾಗಗಳು ಭಾಷೆಯ ನಿರ್ದಿಷ್ಟ ಕ್ರಿಯೆಗಳನ್ನು ನಿಯಂತ್ರಿಸುತ್ತವೆ ಎಂಬ ಅಭಿಪ್ರಾಯವನ್ನು ಮುಂದಿಟ್ಟರು. ಅನಂತರ ಸಂಶೋಧಕರ ಗಮನ ಮೆದುಳು – ಭಾಷೆಗೆ ಸಂಬಂಧಿಸಿದ ಗತಿ ಮತ್ತು ವಿಧಾನಗಳ ಕಡೆಗೆ, ಭಾಷೆಯ ಪ್ರಯೋಗ ಮತ್ತು ಗ್ರಹಣದ ಕಡೆಗೆ ಹರಿಯಿತು. ಇದರ ನಂತರ ಭಾಷೆ ಮತ್ತು ಮೆದುಳಿಗೆ ಸಂಬಂಧಿಸಿದ ಗತಿ ಮತ್ತು ವಿಧಾನಗಳು ಪ್ರತ್ಯೇಕವಲ್ಲ, ಇವು ಮೆದುಳಿನ ಅವಿಭಾಜ್ಯ ಕಾರ್ಯ ಎಂಬ ಅಭಿಪ್ರಾಯ ಮೂಡಿತು. ಮೆದುಳಿನ ಯಾವುದೇ ಭಾಗಕ್ಕೆ ಉಂಟಾಗುವ ಆಘಾತ, ಮೆದುಳಿನ ಕಾರ್ಯ ನಿರ್ವಹಣೆಯಲ್ಲಿ ಅಡ್ಡಿಯುಂಟು ಮಾಡಬಲ್ಲದು ಎಂಬ ಅಭಿಪ್ರಾಯಕ್ಕೆ ಬರಲಾಯಿತು. ಮತ್ತೆ ಇತ್ತೀಚೆಗೆ ನವೀನ ವಿಧಾನಗಳ ಸಹಾಯದಿಂದ ಮೆದುಳಿನ ನಿರ್ದಿಷ್ಟ ಭಾಗಗಳು ಮತ್ತು ಭಾಷೆಯ ನಿರ್ದಿಷ್ಟ ಕಾರ್ಯಗಳಿಗೆ ಇರುವ ಸಂಬಂಧವನ್ನು ಅತಿಸೂಕ್ಷ್ಮವಾಗಿ ಗುರುತಿಸಿ, ಮೆದುಳಿನ ಬೇರೆ ಬೇರೆ ಭಾಗಗಳಿಗೆ ಇರುವ ಪರಸ್ಪರ ಸಂಬಂಧವನ್ನು ಗುರುತಿಸಲಾಗುತ್ತಿದೆ.

ಭಾಷೆ ಮತ್ತು ಮೆದುಳಿನ ಸಂಬಂಧವನ್ನು ಕುರಿತು ಕಳೆದ ಒಂದು ನೂರು ವರ್ಷಗಳಿಂದ ನಡೆದ ಸಂಶೋಧನೆಯಿಂದ ಪಡೆದ ಮಾಹಿತಿಯಲ್ಲಿ ಬಹು ಭಾಗ, ಭಾಷೆಯ ವಿವಿಧ ಗೊಂದಲಗಳನ್ನು ಶವ ಪರೀಕ್ಷೆಯಲ್ಲಿ ಗುರುತಿಸಿದ ಮೆದುಳಿನ ವಿವಿಧ ಭಾಗಗಳಿಗೆ ಉಂಟಾದ ಆಘಾತಕ್ಕೆ ತಾಳೆ ಮಾಡುವುದರ ಮೂಲಕ ಪಡೆಯಲಾಯಿತು. ಇತ್ತೀಚೆಗೆ ಇಂತಹ ಮಾಹಿತಿಗಳನ್ನು ಜೀವಂತ ರೋಗಿಗಳಲ್ಲಿ ಪೆಟ್‌ಸ್ಕ್ಯಾನ್ ಮುಂತಾದ ವಿಧಾನಗಳಿಂದ ಮೆದುಳಿನ ದಿನ ನಿತ್ಯದ ಕಾರ್ಯದಲ್ಲಿ ಅಡಚಣೆ ಉಂಟಾಗದ ರೀತಿಯಲ್ಲಿ ಪಡೆಯಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಮೆದುಳಿನ ಶಸ್ತ್ರಕ್ರಿಯೆಯಲ್ಲಿ ನೇರವಾಗಿ ಮೆದುಳಿನ ವಿವಿಧ ಭಾಗಗಳನ್ನು ಪ್ರಚೋದಿಸುವ ಮೂಲಕ ಅಥವಾ ಅದರ ಕಾರ್ಯದಲ್ಲಿ ಅಡ್ಡಿಯುಂಟು ಮಾಡುವುದರ ಮೂಲಕ ಭಾಷೆ ಮೆದುಳಿನ ಸಂಬಂಧದ ಕುರಿತ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ಒಂದು ಶತಮಾನಕ್ಕೂ ಹಿಂದೆ ಬ್ರೋಕಾನನು 1865 ರಲ್ಲಿ ಭಾಷೆ ಮೆದುಳಿಗಿರುವ ಸಂಬಂಧವನ್ನು ಪ್ರಕಟಿಸಿದಂದಿನಿಂದ ಇದುವರೆಗೂ ನಡೆದಿರುವ ಸಂಶೋಧನೆಯಲ್ಲಿ ಕಾಲವನ್ನು ಮೆಟ್ಟಿನಿಂತಿರುವ ಒಂದು ಮುಖ್ಯ ಅಂಶವೆಂದರೆ ಭಾಷೆಗೆ ಸಂಬಂಧಿಸಿದ ಮೆದುಳಿನ ಕಾರ್ಯವನ್ನು ಮೆದುಳಿನ ಎಡ ಅರ್ಧ ಭಾಗವು ನಿರ್ವಹಿಸುವುದು ಎಂಬ ತಿಳುವಳಿಕೆ. ಇತ್ತೀಚಿನ ವರ್ಷಗಳಲ್ಲಿ ಈ ಕಾರ್ಯವನ್ನು ಕುರಿತು ಸೂಕ್ಷ್ಮ ಪರಿಶೋಧನೆ ನಡೆಯುತ್ತಿದೆ. ಬಲಚರಲ್ಲದವ ರಲ್ಲಿ, ಎಡಗೈ ಬಲಗೈಯನ್ನು ಸಮವಾಗಿ ಉಪಯೋಗಿಸುವವರಲ್ಲಿ, ಹಲವಾರು ಭಾಷೆಗಳಲ್ಲಿ ಮಾತನಾಡುವವರಲ್ಲಿ, ನಿರಕ್ಷರಸ್ಥರಲ್ಲಿ, ಮೆದುಳಿನ ಆಘಾತದಿಂದ ಉಂಟಾಗುವ ಪರಿಣಾಮಗಳನ್ನು ಹಾಗೂ ಬಲಚರು, ಒಂದೇ ಭಾಷೆಯಲ್ಲಿ ಮಾತನಾಡುವವರು ಮತ್ತು ವಿದ್ಯಾವಂತರಲ್ಲಿ ಮೆದುಳಿನ ಆಘಾತದಿಂದ ಉಂಟಾಗುವ ಪರಿಣಾಮಗಳನ್ನು ಹೋಲಿಸಿ ಅದರಲ್ಲಿರುವ ವಿರೋಧಾಭಾಸಗಳನ್ನು, ವ್ಯತ್ಯಾಸಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಅವುಗಳ ಫಲಿತಾಂಶಗಳು ಹೊರಬರುತ್ತಿವೆ. ವಿದ್ಯಾವಂತರಾಗಿದ್ದು ಒಂದೇ ಭಾಷೆಯಲ್ಲಿ ಮಾತನಾಡುವ ಬಲಚರಲ್ಲಿ, ಭಾಷಾ ನಿಯಂತ್ರಣದಲ್ಲಿ ಮೆದುಳಿನ ಎಡ ಅರ್ಧಭಾಗದ ಪಾತ್ರ ಹೆಚ್ಚು. ಬಲಚರಲ್ಲದ, ಹಲವಾರು ಭಾಷೆಗಳ ಅರಿವಿರುವವರಲ್ಲಿ ಮತ್ತು ನಿರಕ್ಷಸ್ಥರಲ್ಲಿ, ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಮೆದುಳಿನ ಎರಡೂ ಭಾಗಗಳು ಪಾತ್ರ ವಹಿಸುತ್ತವೆ ಎಂಬ ಊಹೆಗಳು ಮೂಡಿಬಂದಿದೆ.

ಇದಕ್ಕೆ ಕಾರಣಗಳು ಹಲವಾರು. ಉದಾಹರಣೆಗೆ ಎರಡು ಭಾಷೆಗಳನ್ನು ತಿಳಿದ ವ್ಯಕ್ತಿಯ ಮೆದುಳಿಗೆ ಏಟು ಬಿದ್ದು ಅಥವಾ ಲಕ್ವ ಹೊಡೆದಾಗ ಒಂದು ಭಾಷೆಯಲ್ಲಿ ಅತಿಯಾಗಿ ಹಾಗೂ ಇನ್ನೊಂದು ಭಾಷೆಯಲ್ಲಿ ಕಡಿಮೆ ಮಟ್ಟಿಗೆ ತೊಂದರೆ ಕಾಣಿಸಿಕೊಂಡರೆ ಅದು ಈ ಎರಡು ಭಾಷೆಗಳ ಜ್ಞಾನ ಮಿದುಳಿನ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿರುವುದರಿಂದ ಆಗಿರಬಹುದೇ? ಇಲ್ಲಿ ಗಮನದಲ್ಲಿಡಬೇಕಾದ ವಿಷಯವೇನೆಂದರೆ ಇತ್ತೀಚಿನವರೆಗೆ ಭಾಷೆ ಮಿದುಳಿನ ಸಂಬಂಧದ ಕುರಿತ ತಿಳುವಳಿಕೆ ಹೆಚ್ಚಾಗಿ ಯುರೋಪ್ ಮತ್ತು ಉತ್ತರ ಅಮೆರಿಕಾದಂತಹ ಂಡಗಳಲ್ಲಿ ನಡೆದಿದ್ದು ಅದು ಹೆಚ್ಚಾಗಿ ಒಂದೇ ಭಾಷೆ ತಿಳಿದ ವಿದ್ಯಾವಂತರಲ್ಲಿ ದಾಖಲೆಯದ್ದಾಗಿದೆ. ನಮ್ಮಂತಹ ದೇಶಗಳಲ್ಲಿ ಹಲವಾರು ಭಾಷೆಗಳನ್ನು ತಿಳಿದ ಅವಿದ್ಯಾವಂತರೂ ಎಷ್ಟೋ ಜನ ಇದ್ದಾರೆ. ಇಂತಹವರಲ್ಲಿ ಮಿದುಳು ಮತ್ತು ಭಾಷೆಯ ಹೊಂದಾಣಿಕೆ ನಾವು ಈಗ ತಿಳಿದಿರುವುದಕ್ಕಿಂತ ಭಿನ್ನವಾಗಿರಬಹುದೇ? ಇಲ್ಲಿ ವಿಭಿನ್ನ ಭಾಷೆಗಳ ಶೈಲಿ, ಅವುಗಳ ಆಂತರಿಕ ರಚನೆಯಲ್ಲಿನ ವ್ಯತ್ಯಾಸ, ವಿಭಿನ್ನ ಲಿಪಿಗಳ ಶೈಲಿ ಮುಂತಾದ ಹಲವಾರು ಕಾರಣಗಳಿಂದ ಭಾಷಾ ವಿಕಲತೆಯಲ್ಲಿ ವ್ಯತ್ಯಾಸ ಕಂಡು ಬರಬಹುದೇ. ಉದಾಹರಣೆಗೆ ಬ್ರೋಕನ ಜಾಗಕ್ಕೆ ಏಟಾದಾಗ ಸಾಮಾನ್ಯವಾಗಿ ವ್ಯಾಕರಣದಲ್ಲಿ ತೊಂದರೆ ಕಂಡು ಬರುತ್ತದೆ. ಇಂಗ್ಲಿಷ್ ಮತ್ತು ಕನ್ನಡ ಗೊತ್ತಿರುವವರಲ್ಲಿ ಇಂತಹ ದೋಷ ಇಂಗ್ಲಿಶ್ ಭಾಷೆಯಲ್ಲಿ ಜಾಸ್ತಿಯಾಗಿಯೂ, ಕನ್ನಡದಲ್ಲಿ ಕಡಿಮೆ ಮಟ್ಟಿಗೂ ಕಂಡುಬರಬಹುದು. ಇದಕ್ಕೆ ಕಾರಣ ಆಂಗ್ಲ ಭಾಷೆಯಲ್ಲಿ ಹೆಚ್ಚಿನ ವ್ಯಾಕರಣಾರ್ಥಕ ಬಿಡಿ ಬಿಡಿ ಪದಗಳಲ್ಲಿರುತ್ತವೆ. ಆದರೆ ಕನ್ನಡದಂತಹ ಭಾಷೆಯಲ್ಲಿ ಇವು ಚೆನ್ನಾಗಿ ಪದಗುಚ್ಛದೊಳಗೆ ಸೇರಿಕೊಂಡಿರುವುದರಿಂದ ಅವುಗಳು ಭಾಷಾ ವಿಕಲತೆ ಯುಳ್ಳವರಲ್ಲಿ ಬಿಟ್ಟು ಹೋಗುವ ಸಂಭವ ಕಡಿಮೆ. ಹಾಗಿದ್ದರೆ ಒಬ್ಬನೇ ವ್ಯಕ್ತಿಯಲ್ಲಿ ಈ ದೋಷ ಇಂಗ್ಲಿಶಿನಲ್ಲಿ ಜಾಸ್ತಿಯಾಗಿಯೂ ಕನ್ನಡದಲ್ಲಿ ಕಡಿಮೆ ಮಟ್ಟಿಗೂ ತೋರಬಹುದು.

ಭಾಷಾ ವಿಕಲರಲ್ಲಿ ನಡೆಯುತ್ತಿರುವ ಇತ್ತೀಚಿನ ಸಂಶೋಧನೆಗಳು ಇಂತಹವೇ ಹಲವಾರು ಪ್ರಶ್ನೆಗಳನ್ನೊಳಗೊಂಡಿವೆ. ಇದೇ ಓದು ಬರಹದ ತೊಂದರೆಗಳನ್ನೂ ಇವೇ ದೃಷ್ಟಿಕೋನಗಳಿಂದ ಪರೀಕ್ಷಿಸಲಾಗುತ್ತಿದೆ. ಇದರಲ್ಲದೆ ಈ ವಿಜ್ಞಾನದಲ್ಲಿ ಮೊದಲನೆ ನೂರು ವರ್ಷಗಳಲ್ಲಿ, ಅಂದರೆ 1860-1960ರ ಕಾಲದಲ್ಲಿ ಹೆಚ್ಚಿನ ಸಂಶೋಧನೆ ನಡೆದದ್ದು ಪಾರ್ಶ್ವವಾಯು ಹೊಡೆದವರಲ್ಲಿ. ಇತ್ತೀಚೆಗೆ ಇದಲ್ಲದೆ ವಯಸ್ಸಾದವರಲ್ಲಿ ಕಂಡು ಬರುವ ಆಲ್‌ಜೈಮರ್, ಡಿಮೆನ್‌ಶಿಯಾ ಮುಂತಾದ ರೋಗಗಳಿಂದುಂಟಾಗುವ ಭಾಷಾ ವಿಕಲತೆಗಳನ್ನೂ ಕೂಲಂಕಷವಾಗಿ ಪರೀಕ್ಷಿಸಲಾಗುತ್ತದೆ. ಇದರ ಜೊತೆಯಲ್ಲಿ ಈ ಸಂಶೋಧನೆಗೆ ಅನುಗುಣವಾಗುವಂತೆ ಆರೋಗ್ಯವಂತ ಹಳಬರ ಮಾತು ಭಾಷೆಯಲ್ಲಿ ಕಂಡು ಬರುವ ವ್ಯತ್ಯಾಸಗಳನ್ನು ದಾಖಲು ಮಾಡಲಾಗುತ್ತಿದೆ.

ಹೀಗೆ ಹಲವಾರು ದಿಕ್ಕುಗಳಲ್ಲಿ ಮುನ್ನಡೆಯುತ್ತಿರುವ ಭಾಷಾ ವಿಕಲತೆ ಯಲ್ಲಿನ ಸಂಶೋಧನೆ ಮಾತು – ಭಾಷೆ – ಮೆದುಳುಗಳಲ್ಲಿನ ಸಂಬಂಧದ ಅರಿವನ್ನು ಹೆಚ್ಚಿಸುವುದಲ್ಲದೆ ಭಾಷಾ ವಿಕಲತೆಯುಳ್ಳ ಮಕ್ಕಳು ಹಾಗೂ ವಯಸ್ಕರ ತರಬೇತಿಯಲ್ಲಿ ನೆರವಾಗುತ್ತದೆ.

ನಮ್ಮ ದೇಶದಲ್ಲಿ ಈ ತೆರನ ಸಂಶೋಧನೆ ಸುಮಾರು 1980 ರಲ್ಲಿ ಶುರುವಾಗಿದ್ದು ಅದರಲ್ಲಿ ಗಣನೀಯ ಅಂಶ ಕನ್ನಡ ಭಾಷೆ ಮಾತನಾಡುವ ಹಾಗೂ ಓದು ಬರೆಯುವವರಲ್ಲಿ ನಡೆದಿದೆ. ಮೆದುಳು ಮತ್ತು ಭಾಷೆಯನ್ನು ಕುರಿತು ತಿಳಿಯುವುದು ಇನ್ನೂ ಬಹಳವಿದೆ. ಮೆದುಳಿನ ಕಾರ್ಯದಲ್ಲಿ ನೇರವಾಗಿ ಅಡ್ಡಿಯಾಗದೆ, ಅದನ್ನು ಅಧ್ಯಯನ ಮಾಡುವ ನೂತನ ವಿಧಾನಗಳನ್ನು ಕಂಡು ಹಿಡಿದು ವೃದ್ದಿಪಡಿಸಲಾಗುತ್ತಿದೆ. ಈ ಅಧ್ಯಯನಕ್ಕೆ ಲಭ್ಯವಾಗುತ್ತಿರುವ ವೈವಿಧ್ಯ ಹಾಗೂ ಸೂಕ್ಷ್ಮ ತಂತ್ರಜ್ಞತೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವ ಆಶ್ವಾಸನೆ ನೀಡುತ್ತದೆ.

ವಾಕ್ – ಶ್ರವಣ ತಜ್ಞರು ವ್ಯವಹರಿಸುವ ಪ್ರಮುಖ ವಾಕ್ ಶ್ರವಣ ದೋಷಗಳಲ್ಲಿ ಮೇಲ್ಕಂಡವು ಕೆಲವು. ವಾಕ್- ಭಾಷಾ – ಶ್ರವಣ ತಜ್ಞರ ಕೆಲಸ ವೈದ್ಯಕೀಯ ಚಿಕಿತ್ಸೆ ನಿಂತ ನಂತರ ಇಲ್ಲವೇ ವೈದ್ಯರ ಚಿಕಿತ್ಸೆ ಫಲಿಸುವುದಿಲ್ಲ ವೆಂದಾಗ ಪ್ರಾರಂಭವಾಗುತ್ತದೆ. ವಾಕ್ – ಶ್ರವಣ ಚಿಕಿತ್ಸಕರ ವೈದ್ಯಕೀಯ ಶಾಸ್ತ್ರವನ್ನು ಶಸ್ತ್ರ ಚಿಕಿತ್ಸೆಯನ್ನು ಅವಲಂಬಿಸಿಲ್ಲ. ವಾಕ್ ಶಾಸ್ತ್ರದಲ್ಲಿ ಅನುಸರಿಸುವ ಚಿಕಿತ್ಸಾ ಕ್ರಮಗಳು, ಮಸಶ್ಶಾಸ್ತ್ರ ಹಾಗೂ ಬೋಧನಾ ಶಾಸ್ತ್ರ ಪದ್ಧತಿಗಳ ತಳಹದಿಯ ಮೇಲೆ ಬೆಳೆದಿದೆ. ವಾಕ್ ಚಿಕಿತ್ಸೆ ನಿಧಾನವಾಗಿ ಹಂತಹಂತವಾಗಿ ಮುಂದುವರೆಯುವ ಕಾರ್ಯವಿಧಾನ. ವಾಕ್ ಚಿಕಿತ್ಸೆಯಲ್ಲಿ ಚಿಕಿತ್ಸೆಗೆ ಒಳಗಾಗುವ ವ್ಯಕ್ತಿ ಹಾಗೂ ಅವರ ಮನೆಯವರು ಸ್ನೇಹಿತರು ಕ್ರಿಯಾತ್ಮಕವಾಗಿ ಭಾಗಿಗಳಾಗುವುದು, ಸಹಕರಿಸುವುದು ಅವಶ್ಯಕ. ವಾಕ್ ತರಬೇತಿಯ ಪ್ರತಿಫಲ ವಾಕ್‌ಶಾಸ್ತ್ರಜ್ಞ, ವಾಕ್ ದೋಷವಿರುವ ವ್ಯಕ್ತಿ ಹಾಗೂ ಅವರ ಕುಟುಂಬದ ಸದಸ್ಯರು ಇವರುಗಳ ನಡುವಣ ಸಹಕಾರ ಮನೋಭಾವವನ್ನು ಅವಲಂಬಿಸಿರುತ್ತದೆ.