ನಮ್ಮ ಸಮಾಜದ ಬಹುಮುಖ್ಯ ವ್ಯವಹಾರಗಳೆಲ್ಲವೂ ಭಾಷೆಯ ಮುಖಾಂತರವೇ ನಡೆಯಬೇಕು. ಭಾಷೆ ಅನುವಂಶಿಕವಾಗಿ ಬಂದದ್ದಲ್ಲ. ನಾವು ಕಲಿತೇ ಬಂದದ್ದು. ಒಂದು ಭಾಷೆ ಇನ್ನೊಂದು ಭಾಷೆಯಿಂದ ಹೇಗೆ ವ್ಯತ್ಯಾಸವಾಗುವುದೆಂಬುದನ್ನು ತಿಳಿಯಲು ಹಲವು ವಿಧಾನಗಳಿವೆ. ಭಾಷೆ ಅನುವಂಶಿಕವಾಗಿ ಬಂದಿದ್ದರೆ ನಾವು ಹುಟ್ಟಿದ ಕೂಡಲೇ ನಮಗೆ ಒಂದಲ್ಲ ಒಂದು ಭಾಷೆಯನ್ನು ಮಾತಾಡಲು ಬರುತಿತ್ತು. ಅದಲ್ಲದೆ ಹೀಗೆ ಊರಿಗೊಂದು ಭಾಷೆ ಇರುತ್ತಿರಲಿಲ್ಲ. ಆದ್ದರಿಂದ ಭಾಷೆ ಸಹಜವಾಗಿ ಕಲಿತ ಒಂದು ಕ್ರಿಯೆ ಎಂದು ಹೇಳಬಹುದು.

ರೂಪಮಾದರಿಗಳು

ಜಗತ್ತಿನ ಮೂಲೆ ಮೂಲೆಗಳಲ್ಲಿ ಬಳಸುತ್ತಿರುವ ಬೇರೆ ಬೇರೆ ಭಾಷೆಗಳನ್ನು ಪರಿಶೀಲಿಸಿದಾಗ ಅವು ಸಂಕೇತ ಅಥವಾ ಧ್ವನಿ ಸಂಕೇತಗಳ ವ್ಯವಸ್ಥೆ ಎಂದು ಕರೆಯಬಹುದು. ಭಾಷೆಯು ಅನುಭವ, ಆಲೋಚನೆ ಅಲ್ಲದೆ ಅನಿಸಿಕೆಗಳನ್ನು ವ್ಯಕ್ತಪಡಿಸಲು ಬಳಸುವ ಒಂದು ಮಾಧ್ಯಮವೆಂದು ಹೇಳಬಹುದು ಅಥವಾ ಭಾಷೆ ಎನ್ನುವುದು ಒಂದು ಸಮಾಜದ ಜನರು ಆಡುವ ಮಾತು ಎಂದು ಹೇಳಬಹುದು.

ಆಡುಭಾಷೆಯ ರೂಪಮಾದರಿಗಳನ್ನು ಭಾಷಾ ವೈಜ್ಞಾನಿಕವಾಗಿ ಮುಖ್ಯವಾಗಿ ಈ ರೀತಿ ಕೊಡಬಹುದು. ಅದನ್ನು ರೇಖಾಚಿತ್ರದ ಮೂಲಕ ಅಧ್ಯಾಯದ ಕೊನೆಯಲ್ಲಿ ಕೊಡಲಾಗಿದೆ.

ಒಂದು ಭಾಷೆಯ ಒಳರಚನೆಗೆ ಸಂಬಂಧಿಸಿದ ಬೇರೆ ಬೇರೆ ಅಂಶಗಳನ್ನು ಭಾಷಾ ವೈಜ್ಞಾನಿಕ ರೀತಿಯಿಂದ ವಿಶ್ಲೇಷಿಸಿದಾಗ ಮೇಲೆ ರೇಖಾಚಿತ್ರದ ಮೂಲಕ ತೋರಿಸಲಾದ ವಿವಿಧ ರೂಪಮಾದರಿಗಳು ಹುಟ್ಟಿಕೊಳ್ಳಲು ಸಾಧ್ಯ ವಾಗಿದೆ. ಅವು ಮುಖ್ಯವಾಗಿ ಯಾವುವೆಂದರೆ, 1. ಧ್ವನಿಶಾಸ್ತ್ರ, 2. ಧ್ವನಿಮಾ ಶಾಸ್ತ್ರ, 3. ಆಕೃತಿಮಾ ಶಾಸ್ತ್ರ, 4. ವಾಕ್ಯರಚನಾ ಶಾಸ್ತ್ರ, 5. ಶಬ್ದಕೋಶ ಶಾಸ್ತ್ರ ಹಾಗೂ 6. ಅರ್ಥರಚನಾ ಶಾಸ್ತ್ರ.

ಒಂದು ಭಾಷೆಯ ಧ್ವನಿಮಾ, ಆಕೃತಿಮಾ, ಪದ, ವಾಕ್ಯ ಮುಂತಾದವುಗಳ ಅಧ್ಯಯನ ಮಾಡಬೇಕಾದಲ್ಲಿ ಧ್ವನಿಶಾಸ್ತ್ರ ಹಾಗೂ ಅರ್ಥಶಾಸ್ತ್ರಗಳ ಬಗ್ಗೆ ತಿಳಿದಿರಬೇಕಾಗುತ್ತದೆ. ಉಚ್ಚರಿತ ಧ್ವನಿಗಳ ಅಧ್ಯಯನವೇ ಧ್ವನಿಶಾಸ್ತ್ರವೆಂದು ಕರೆಯಬಹುದು. ಇವು ಜಗತ್ತಿನ ಎಲ್ಲಾ ಭಾಷೆಗಳಿಗೂ ಸಂಬಂಧಿಸಿದ ವಿಚಾರಗಳು. ಧ್ವನಿಶಾಸ್ತ್ರದಲ್ಲಿ ಭಾಷಾ ಧ್ವನಿಗಳು, ಅವುಗಳ ಉಚ್ಚಾರ, ಉಚ್ಚಾರ ಸ್ಥಾನ, ಉಚ್ಚರಣಾ ರೀತಿ, ಉಚ್ಚಾರಣಾಕರಣ ಮೊದಲಾದವುಗಳು ಒಳಗೊಂಡಿರುತ್ತವೆ.

ಯಾವುದಾದರೊಂದು ಭಾಷೆಯ ಅಥವಾ ಉಪಭಾಷೆಯ ಉಚ್ಚರಿತ ಧ್ವನಿಗಳ ಸಮೂಹದಲ್ಲಿ ಅಡಗಿರುವ ಹೆಚ್ಚು ಕ್ರಿಯಾಶೀಲವಾದ ಧ್ವನಿಗಳನ್ನು ಧ್ವನಿಮಾಗಳನ್ನಾಗಿ ವಿಶ್ಲೇಷಿಸಿ ನಿರ್ಧರಿಸಿಕೊಳ್ಳುವುದು ಧ್ವನಿಮಾ ಶಾಸ್ತ್ರವೆಂದು ಕರೆಯಲ್ಪಡುತ್ತದೆ. ಇದು ಒಂದು ಭಾಷೆಯ ಅಥವಾ ಉಪಭಾಷೆಯ ಧ್ವನಿಮಾ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸಹಾಯಮಾಡುತ್ತದೆ.

ಧ್ವನಿಶಾಸ್ತ್ರ ಮತ್ತು ಧ್ವನಿಮಾಶಾಸ್ತ್ರ ಇವುಗಳ ನಡುವೆ ಇರುವ ಮುಖ್ಯವಾದ ವ್ಯತ್ಯಾಸವೆಂದರೆ, ಮೊದಲನೆಯದು ಜಗತ್ತಿನ ಎಲ್ಲಾ ಭಾಷೆಗಳ ಉಚ್ಚರಿತ ಧ್ವನಿಗಳ ಅಧ್ಯಯನಕ್ಕೆ ಸಂಬಂಧಿಸಿದೆಯಾದರೆ ಎರಡನೆಯದು, ಯಾವುದಾದರೊಂದು ಭಾಷೆ ಅಥವಾ ಉಪಭಾಷೆಯ ಧ್ವನಿಮಾಗಳ ಅಧ್ಯಯನಕ್ಕೆ ಮಾತ್ರ ಸಂಬಂಧಿಸಿದೆ. ಜಗತ್ತಿನ ಯಾವುದೇ ಒಂದು ಭಾಷೆ ಅಥವಾ ಉಪಭಾಷೆಯಲ್ಲಿ ಅರ್ಥ ವ್ಯತ್ಯಾಸಗೊಳಿಸಬಲ್ಲ ಭಾಷಾ ಧ್ವನಿಗಳನ್ನು ಧ್ವನಿಮಾಗಳೆಂದು ಕರೆಯುತ್ತಾರೆ. ಉದಾಹರಣೆಗಾಗಿ, ಕನ್ನಡದಲ್ಲಿ ‘ಮರ’ ಎಂಬ ಪದವನ್ನು ವಿಶ್ಲೇಷಿಸಿದಾಗ ಮ್+ಅ+ರ್+ಅ ಎಂದು ವಿಂಗಡಿಸಿದಾಗ ಮೂರು ಧ್ವನಿಮಾಗಳು ದೊರಕುತ್ತವೆ. ಈ ಘಟಕಗಳಿಗೆ ಅರ್ಥವಿಲ್ಲ. ‘ಮ್’ ಹಾಗೂ ‘ರ್’ ಎಂಬುದು ‘ವ್ಯಂಜನ’ ಘಟಕಗಳಾದರೆ ‘ಅ’ ಎಂಬುದು ‘ಸ್ವರ’ ಘಟಕವಾಗಿದ್ದು ಒಟ್ಟಿಗೆ ಮೂರು ಧ್ವನಿಮಾಗಳಿರುತ್ತವೆ. ‘ಅ’ ಎಂಬ ಘಟಕ ಎರಡು ಕಡೆ ಬಂದಿದ್ದರೂ ಅದು ಒಂದೇ ಧ್ವನಿಮಾವೆನಿಸಿಕೊಳ್ಳುತ್ತದೆ. ಮರ ಎಂಬ ಪದದಲ್ಲಿರುವ ‘ಮ್’ ಧ್ವನಿಮಾ ಬದಲು ‘ನ್’ ಧ್ವನಿಮಾ ಬಂದಲ್ಲಿ ಅರ್ಥ ವ್ಯತ್ಯಾಸ, ಹೊಂದಿ ಇನ್ನೊಂದು ಪದ ಉಂಟಾಗುತ್ತದೆ. ಹೇಗೆಂದರೆ, ನ್+ಅ+ರ್+ಅ ‘ನರ’ ಎಂದು. ಹೀಗೆ ಅರ್ಥ ಇರದ ಘಟಕವು ಪದದ ಆದಿಯಲ್ಲಿ ಅಥವಾ ಮಧ್ಯದಲ್ಲಿ ಅಥವಾ ಅಂತ್ಯದಲ್ಲಿ ಬಂದು ಅರ್ಥ ವ್ಯತ್ಯಾಸವನ್ನು ಸೂಚಿಸಿದರೆ ಅವುಗಳನ್ನು ಧ್ವನಿಮಾಗಳೆಂದು ಕರೆಯಬಹುದು. ಮೇಲೆ ಸೂಚಿಸಿರುವ ‘ಮರ’ ಮತ್ತು ‘ನರ’ ಎಂಬ ಪದಗಳಲ್ಲಿ ಪದದ ಆದಿಯಲ್ಲಿ ಬರುವ ‘ಮ್’ ಹಾಗೂ ‘ನ್’ ಎಂಬುವು ಎರಡು ಪ್ರತ್ಯೇಕ ಧ್ವನಿಮಾಗಳು. ಈ ರೀತಿ ಒಂದು ಭಾಷೆ ಅಥವಾ ಉಪಭಾಷೆಯಲ್ಲಿರುವ ಧ್ವನಿಮಾ ವ್ಯವಸ್ಥೆ ರೂಪಿಸಿಕೊಳ್ಳ ಬಹುದು. ಇದು ಜಗತ್ತಿನ ಯಾವುದೇ ಒಂದು ಭಾಷೆಯಲ್ಲಿರುವ ಧ್ವನಿ ವ್ಯವಸ್ಥೆಯನ್ನು ಕಂಡು ಹಿಡಿಯಲು ಸಹಕಾರಿಯಾಗುತ್ತದೆ.

ಯಾವುದೇ ಭಾಷೆಯ ಉಪಭಾಷೆಯ ಶಬ್ದದಲ್ಲಿರುವ ಅರ್ಥವತ್ತಾದ ಘಟಕಗಳನ್ನು ವಿಶ್ಲೇಷಿಸಿ ವಿವರಿಸುವುದನ್ನು ಆಕೃತಿಮಾ ಶಾಸ್ತ್ರವೆನ್ನಬಹುದು. ಈ ಅರ್ಥವತ್ತಾದ ಘಟಕಗಳನ್ನು ಆಕೃತಿಮಾಗಳೆಂದು ಕರೆಯುತ್ತೇವೆ. ಉದಾಹರಣೆಗಾಗಿ, ಕನ್ನಡದ ‘ಮರಗಳು’ ಎಂಬ ಶಬ್ದದಲ್ಲಿ ಮರ+ಗಳು ಎಂದು ಎರಡು ಆಕೃತಿಮಾಗಳಾಗಿ ವಿಶ್ಲೇಷಿಸಿ ಹೇಳಬಹುದು. ಈ ಅರ್ಥವತ್ತಾದ ಘಟಕಗಳನ್ನು ಕೆಲವರು ಅರ್ಥವತ್ತಾದ ಪದಾಂಶವೆಂದೂ, ಕೆಲವರು ಅರ್ಥವತ್ತಾದ ಧ್ವನಿಮಾಗಳ ಸಮೂಹವೆಂದೂ ಕರೆಯುತ್ತಾರೆ. ಆಕೃತಿಮಾ ಎಂಬುದು ಯಾವಾಗಲೂ ಸ್ವತಂತ್ರ ರೂಪವೇ ಆಗಿರಬೇಕಾಗಿಲ್ಲ. ಮೇಲೆ ಸೂಚಿಸಿರುವಂತೆ ಅದು ಅರ್ಥವತ್ತಾದ ಪದಾಂಶವೆಂದೂ ಕರೆಯಲ್ಪಡುತ್ತದೆ. ಅದಕ್ಕೆ ಬದ್ದ ಆಕೃತಿಮಾವೆಂದು ಹೆಸರು. ಆದ್ದರಿಂದ ಆಕೃತಿಮಾಗಳಲ್ಲಿ ಮುಖ್ಯವಾಗಿ ಸ್ವತಂತ್ರ ಆಕೃತಿಮಾ ಹಾಗೂ ಬದ್ಧ ಆಕೃತಿಮಾ ಎಂದು ಎರಡು ವಿಧ. ಮೇಲೆ ಕನ್ನಡದಲ್ಲಿ ಕೊಟ್ಟಿರುವ ಉದಾಹರಣೆಯಲ್ಲಿ ಮರ ಎಂಬುದು ಸ್ವತಂತ್ರ ಆಕೃತಿಮಾವಾದರೆ,‘-ಗಳು’ ಎಂಬುದು ಬದ್ಧ ಆಕೃತಿಮಾ. ‘-ಗಳು’ ಎಂಬುದು ಅರ್ಥವತ್ತಾದ ಘಟಕ ವಾದರೂ ಸ್ವತಂತ್ರ ಆಕೃತಿಮಾದೊಟ್ಟಿಗೆ ಮಾತ್ರ ಕಾಣಿಸಿಕೊಳ್ಳುತ್ತದೆ. ಇವು ಭಾಷೆ ಅಥವಾ ಒಂದು ಭಾಷೆಯ ಉಪಭಾಷೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.

ಧ್ವನಿ ಭಾಷೆಯ ಕಿರಿಯ ಘಟಕವಾದರೆ ವಾಕ್ಯ, ಅದರ ಹಿರಿಯ ಘಟಕವಾಗಿದೆಯೆಂದು ಹೇಳಬಹುದು. ನಾವು ಭಾಷೆಯನ್ನು ಬಳಸುವುದು ವಾಕ್ಯದ ರೂಪದಲ್ಲಿ ಎಂದು ನಮಗೆಲ್ಲಾ ತಿಳಿದಿರುವ ವಿಷಯ. ನಾವು ಬಳಸುವ ಯಾವುದೇ ಒಂದು ವಾಕ್ಯದಲ್ಲಿ ಉಚ್ಚರಿತ ಧ್ವನಿಗಳು, ಧ್ವನಿಮಾಗಳು, ಆಕೃತಿಮಾಗಳು ಹಾಗೂ ಶಬ್ದಗಳು ಸೇರಿಕೊಂಡಿರುತ್ತವೆ. ಇವುಗಳೆಲ್ಲಾ ಸೇರಿ ಭಾಷೆಯ ವಿವಿಧ ಬಗೆಯಾದ ವಾಕ್ಯಗಳು ರೂಪುಗೊಂಡಿವೆ. ಆದ್ದರಿಂದ ಇಂತಹ ವಿವಿಧ ಬಗೆಯ ವಾಕ್ಯಗಳನ್ನು ವಿಶ್ಲೇಷಿಸಿ ವಿವರಿಸುವುದು ವಾಕ್ಯ ವಿಜ್ಞಾನವೆಂದು ಕರೆಯಬಹುದು. ಆಕೃತಿಮಾ ಶಾಸ್ತ್ರ ಹಾಗೂ ವಾಕ್ಯ ರಚನಾ ಶಾಸ್ತ್ರ ಇವುಗಳನ್ನು ಒಟ್ಟಿಗೆ ಸೇರಿಸಿ ‘ವ್ಯಾಕರಣ’ವೆಂದು ಕರೆಯುತ್ತಾರೆ. ಬಿಡಿ ಬಿಡಿಯಾದ ಘಟಕಗಳ ಜೋಡಣೆಯಿಂದಾಗಿ ವಾಕ್ಯರೂಪ ಹೊಂದುತ್ತವೆಯೇ ಹೊರತು ಯಾವ ಘಟಕವೂ ಭಾಷೆ ಎನಿಸುವುದಿಲ್ಲ. ವಾಕ್ಯವನ್ನು ಸಾಮಾನ್ಯವಾಗಿ ಪದಪುಂಜ, ವಾಕ್ಯಗಳು ಮತ್ತು ಉಪವಾಕ್ಯ ಗಳನ್ನಾಗಿ ವಿಂಗಡಿಸಬಹುದು.

ಅರ್ಥರಚನಾ ಶಾಸ್ತ್ರವನ್ನು ಸಾಮಾನ್ಯವಾಗಿ ಶಬ್ದಕೋಶ ಶಾಸ್ತ್ರ ಹಾಗೂ ಅರ್ಥಶಾಸ್ತ್ರವೆಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಶಬ್ದಕೋಶ ಗಳನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಿಕೊಳ್ಳುವ ವಿಧಾನವನ್ನು ಶಬ್ದಕೋಶಶಾಸ್ತ್ರ ಎನ್ನುತ್ತಾರೆ. ಶಬ್ದಕೋಶಗಳಲ್ಲಿ ಹಲವಾರು ಬಗೆಗಳಿವೆ.  ವಿವರಣಾತ್ಮಕ ಶಬ್ದ ಕೋಶ, ಐತಿಹಾಸಿಕ ಶಬ್ದಕೋಶ, ತೌಲನಿಕ ಶಬ್ದಕೋಶ, ಪಾರಿಭಾಷಿಕ ಶಬ್ದಕೋಶ, ಪರ್ಯಾಯ ಶಬ್ದಕೋಶ ಇತ್ಯಾದಿ. ಇಂತಹ ಶಬ್ದಕೋಶಗಳ ತಯಾರಿಕೆಗೆ ಶಬ್ದಗಳ ಸಂಗ್ರಹ ಬಹಳ ಮುಖ್ಯವಾದದ್ದು. ಶಬ್ದಗಳನ್ನು ಸಂಗ್ರಹಿಸಿಕೊಳ್ಳದೆ ಯಾವ ಬಗೆಯ ಶಬ್ದಕೋಶವನ್ನೂ ತಯಾರಿಸಲು ಕಷ್ಯ. ಅವುಗಳ ತಯಾರಿಕೆಗೆ ಶಬ್ದಗಳನ್ನು ಅವುಗಳ ಅರ್ಥಕ್ಕೆ ಅನುಗುಣವಾಗಿ ಜೋಡಿಸಿಕೊಳ್ಳಬೇಕು. ಶಬ್ದಗಳ ಸ್ಪಷ್ಟ ಅರ್ಥವನ್ನು ತಿಳಿಸುವುದು ಶಬ್ದ ಕೋಶಗಳ ಮುಖ್ಯ ಉದ್ದೇಶವೆನ್ನಬಹುದು.

ಭಾಷೆಯ ಪ್ರತಿಯೊಂದು ಶಬ್ದವೂ ತನ್ನದೇ ಆದ ಅರ್ಥವನ್ನು ಹೊಂದಿರುತ್ತದೆ. ಭಾಷೆಯ ಧ್ವನಿ, ಧ್ವನಿಮಾ, ಆಕೃತಿಮಾ ಹಾಗೂ ಶಬ್ದ, – ವಾಕ್ಯಗಳನ್ನು ವಿಶ್ಲೇಷಿಸಿ ವಿವರಿಸುವ ಹಾಗೆ ಅರ್ಥವನ್ನು ಕೂಡಾ ವಿಶ್ಲೇಷಿಸಿ ಭಾಷಾ ಶಾಸ್ತ್ರೀಯವಾಗಿ ವಿವರಿಸಬಹುದು. ಇದಕ್ಕೆ ಅರ್ಥರಚನಾ ಶಾಸ್ತ್ರವೆಂದು ಕರೆಯುತ್ತಾರೆ. ಪರ್ಯಾಯವಾಗಿ ಶಬ್ದಗಳು, ಭಿನ್ನಾರ್ಥಕ ಶಬ್ದಗಳು, ಅನೇಕಾರ್ಥಕ ಶಬ್ದಗಳು, ಸಮೂಹಾರ್ಥಕ ಶಬ್ದಗಳು ಮುಂತಾದವುಗಳನ್ನು ಅರ್ಥರಚನಾ ಶಾಸ್ತ್ರದಲ್ಲಿ ವಿಶ್ಲೇಷಿಸಿ ವಿವರಿಸಬಹುದು. ಇವೆಲ್ಲಾ ಭಾಷೆಯ ಶಾಸ್ತ್ರೀಯ ರೂಪ ಮಾದರಿಗಳೆಂದು ಹೇಳಬಹುದು.

ಸಾರ್ವತ್ರಿಕಾಂಶಗಳು

ಭಾಷೆಗಳು ಸಾಮಾನ್ಯವಾಗಿ ಸಮಾನವಾದ ವ್ಯಾಕರಣಾಂಶಗಳನ್ನು ಹೊಂದಿರುತ್ತವೆ. ಅಂತಹ ಸಮಾನ ಅಂಶಗಳನ್ನು ಹೊಂದಿರುವ ಜಗತ್ತಿನ ಎಲ್ಲ ಭಾಷೆಗಳ ವ್ಯಾಕರಣವೊಂದನ್ನು ರೂಪಿಸಿಕೊಂಡಲ್ಲಿ ಭಾಷೆಯ ಸಾರ್ವತ್ರಿ ಕಾಂಶಗಳನ್ನು ಕಂಡುಹಿಡಿಯಲು ಅನುಕೂಲವಾಗುವುದು. ಜಗತ್ತಿನ ಎಲ್ಲ ಭಾಷೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾರ್ವತ್ರಿಕಾಂಶಗಳನ್ನು ವಿಶ್ಲೇಷಿಸಿ ವಿವರಿಸಿದರೆ ಅದು “ಸಾರ್ವತ್ರಿಕ ವ್ಯಾಕರಣ”ವೆನಿಸುವುದು. ಹನ್ನೆರಡನೆಯ ಶತಮಾನದಲ್ಲಿ ಗ್ರೀಕರು ಮತ್ತು ರೋಮನರು, ಹದಿನೆಂಟನೆಯ ಶತಮಾನದಲ್ಲಿ ಫ್ರೆಂಚರು ಮತ್ತು ಇಂಗ್ಲೀಷರು, ಅನಂತರ ಅಮೆರಿಕನರು ಮುಂತಾದವರು ಈ ಸಾರ್ವತ್ರಿಕ ವ್ಯಾಕರಣವನ್ನು ರೂಪಿಸಿಕೊಳ್ಳಲು ಶ್ರಮಿಸಿದವರಲ್ಲಿ ಪ್ರಮುಖರು.

ಭಾಷೆಯ ಸಾರ್ವತ್ರಿಕಾಂಶಗಳ ಬಗ್ಗೆ ಎರಡು ಚೌಕಟ್ಟುಗಳಲ್ಲಿ ಸಂಶೋಧನೆ ನಡೆದಿದೆ.

1. ಗ್ರೀನ್‌ಬರ್ಗ್ ರೂಪಿಸಿದ ಚೌಕಟ್ಟಿನಲ್ಲಿ

2. ನೋಮ್ ಚೊಮ್‌ಸ್ಕಿ ರೂಪಿಸಿದ ಚೌಕಟ್ಟಿನಲ್ಲಿ

ಗ್ರೀನ್ ಬರ್ಗ್ ರೂಪಿಸಿದ ಸಾರ್ವತ್ರಿಕಾಂಶಗಳು

ಗ್ರೀನ್‌ಬರ್ಗ್‌ನ ಚೌಕಟ್ಟಿನಲ್ಲಿ ಅಧ್ಯಯನ ನಡೆಸಲಾದ ಸಾರ್ವತ್ರಿಕಾಂಶಗಳಲ್ಲಿ ಒಂದನೆಯದಾಗಿ ಈ ರೂಪವನ್ನು ಗಮನಿಸಬಹುದು.

“ಎಲ್ಲಾ ‘X’ ಗಳಿಗೆ, ‘X’ ಒಂದು ಭಾಷೆ ಎಂದಾದರೆ. ಆಗ ……..”

ಇದು ಬಹಳ ಸಣ್ಣ ರೂಪ. ಆದರೆ ವಿನಾಯಿತಿ ಇಲ್ಲದ ಸಾರ್ವತ್ರಿಕಾಂಶ. ಇದರ ರೂಪವನ್ನು ಈ ರೀತಿ ಮುಂದುವರಿಸಬಹುದು.

“ಎಲ್ಲಾ ‘X’ಗಳಿಗೆ, ‘X’ ಒಂದು ಭಾಷೆ ಎಂದಾದರೆ, ಆಗ ‘X’ ಗೆ ‘P’ ಎಂಬ ಲಕ್ಷಣ ಇದೆ.

ಇದೇ ರೀತಿ ವಿನಾಯಿತಿ ಇಲ್ಲದ ಸಾರ್ವತ್ರಿಕಾಂಶಗಳನ್ನು ವ್ಯಾಕರಣಾಂಗಗಳ ಮೂಲವರ್ಗವೆಂದು ಕರೆಯಬಹುದು. ಉದಾಹರಣೆಗಾಗಿ, ಸ್ವರ ಹಾಗೂ ವ್ಯಂಜನಗಳಿಗಿರುವ ಧ್ವನಿಮಾತ್ಮಕ ಲಕ್ಷಣಗಳಲ್ಲಿರುವ ವ್ಯತ್ಯಾಸ ಅಥವಾ ವ್ಯಾಕರಣಾಂಶಗಳಲ್ಲಿ ನಾಮಪದ ಹಾಗೂ ಕ್ರಿಯಾಪದಗಳಿಗಿರುವ ವ್ಯತ್ಯಾಸ. ಆದರೆ ಈಗ ಕೆಲವೊಂದು ವ್ಯಾಕರಣಾಂಗಗಳ ಮೂಲವರ್ಗ ಸಾರ್ವತ್ರಿಕಾಂಶ ವಲ್ಲವೆನಿಸುತ್ತದೆ. ಉದಾಹರಣೆಗಾಗಿ, ಇಂಗ್ಲಿಶ್‌ನಲ್ಲಿರುವ ವಿಶೇಷಣ ಪದ ಗಳನ್ನು ಈಗೀಗ ನಾಮಪದ ಅಥವಾ ಕ್ರಿಯಾಪದಗಳೆಂದು ಚರ್ಚಿಸ ಲಾಗುತ್ತಿದೆ.

ಸಂಖ್ಯಾತ್ಮಕ ಸಾರ್ವತ್ರಿಕಾಂಶವು ಈ ರೂಪವನ್ನು ಪಡೆದಿರುತ್ತದೆ :

ಎಲ್ಲಾ ‘X’ಗಳಿಗೆ, ‘X’ ಒಂದು ಭಾಷೆ ಎಂದಾದರೆ, ಆಗ ‘X’ ಗೆ ‘P’ ಎಂಬ ಲಕ್ಷಣ ಇರುವ ಸಾಧ್ಯತೆಯು ‘X’ ಗೆ ‘Q’ ಎಂಬ ಲಕ್ಷಣ ಇರುವ ಸಾಧ್ಯತೆಗಿಂತ ಹೆಚ್ಚಿರುತ್ತದೆ.

ಈ ತರದ ಸಾರ್ವತ್ರಿಕಾಂಶ ರೂಪಕ್ಕೆ ಈ ರೀತಿಯ ಉದಾಹರಣೆ ಕೊಡಬಹುದು : ಒಂದು ಭಾಷೆಗೆ ಕನಿಷ್ಠ ಪಕ್ಷ ಒಂದು ಅನುನಾಸಿಕ ಸ್ಪರ್ಷ ಇದ್ದರೆ ಕೆಲವೊಂದು ಭಾಷೆಗಳಿಗೆ ಅನುನಾಸಿಕ ಸ್ಪರ್ಷವೇ ಇಲ್ಲದಿದ್ದಲ್ಲಿ ಈ ತರದ “ಲಕ್ಷಣ ಇರುವ ಸಾಧ್ಯತೆ ಇದೆ” ಎಂಬ ಸಾರ್ವತ್ರಿಕಾಂಶ ರೂಪ ಇರುವುದಕ್ಕೆ ಅವಕಾಶ ಮಾಡಿಕೊಡುತ್ತದೆ.

ಗ್ರೀನ್‌ಬರ್ಗ್‌ನ ಚೌಕಟ್ಟಿನಲ್ಲಿ ಅಧ್ಯಯನ ನಡೆಸಿರುವ ಸಾರ್ವತ್ರಿಕಾಂಶ ಗಳಲ್ಲಿ ಹೆಚ್ಚು ಗಮನವು ಸೂಚಿತ ಸಾರ್ವತ್ರಿಕಾಂಶಗಳಿಗೆ ಕೊಡಲಾಗುತ್ತಿತ್ತು. ಇದರ ರೂಪ ಈ ರೀತಿ ಇದೆ:

ಎಲ್ಲಾ ‘X’ ಗಳಿಗೆ, ‘X’ ಒಂದು ಭಾಷೆ ಎಂದಾದರೆ, ಆಗ ‘X’ಗೆ ‘P’ ಲಕ್ಷಣ ಇದೆಯಾದರೆ, ‘X’ಗೆ ‘Q’ ಲಕ್ಷಣ ಇರುತ್ತದೆ.

ಗ್ರೀನ್‌ಬರ್ಗ್‌ನ ಸಂಖ್ಯಾತ್ಮಕ ಸೂಚಿತ ಸಾರ್ವತ್ರಿಕಾಂಶದ ರೂಪ ಈ ರೀತಿ ಇದೆ:

“ಎಲ್ಲಾ ‘X’ಗಳಿಗೆ, ‘X’ ಒಂದು ಭಾಷೆ ಎಂದಾದರೆ, ಆಗ ‘X’ ಗೆ ‘P’ ಲಕ್ಷಣ ಇದೆಯಾದರೆ, ‘X’ಗೆ ‘Q’ ಲಕ್ಷಣ ಇರುವ ಸಾಧ್ಯತೆಯು ‘X’ ಗೆ ‘R’ ಲಕ್ಷಣ ಇರುವ ಸಾಧ್ಯತೆಗಿಂತ ಹೆಚ್ಚಿರುತ್ತದೆ.”

ಸಂಖ್ಯಾತ್ಮಕ ಸೂಚಿತ ಸಾರ್ವತ್ರಿಕಾಂಶಗಳಿಗೆ ಇದೇ ರೀತಿಯ ಪದಾನುಕ್ರಮ ಸಾರ್ವತ್ರಿಕಾಂಶಗಳೆಂಬ ಉದಾಹರಣೆಗಳನ್ನು ಕೊಡಬಹುದು. ಇವು ಮೂಲ ವಾಕ್ಯ ಘಟಕಗಳಾದ ಕರ್ತೃ, ಕ್ರಿಯಾಪದ, ಕರ್ಮಪದ ಎಂಬ ಪದಾನುಕ್ರಮ ಗಳಿಗೆ ಸಂಬಂಧಪಟ್ಟಿದ್ದು ಇವು ವಾಕ್ಯದ ಬೇರೆ ನಿಕಟತಮ ಘಟಕಗಳಿಗಿಂತ ಬಹಳ ಪ್ರಾಮುಖ್ಯವೆನಿಸಿವೆ. ಈ ಉದ್ದೇಶಗಳಿಗಾಗಿ, ಭಾಷೆಗಳನ್ನು ಸಾಮಾನ್ಯ ವಾಗಿ ಈ ರೀತಿ ವರ್ಗೀಕರಿಸಬಹುದು:

1. ವಾಕ್ಯದ ಅಂತ್ಯದಲ್ಲಿ ಕ್ರಿಯಾಪದಗಳು ಕಾಣಿಸಿಕೊಳ್ಳುವ ಭಾಷೆಗಳು. (ಇಲ್ಲಿ ಪದಾನುಕ್ರಮ “ಕರ್ತೃಪದ, ಕರ್ಮಪದ ಹಾಗೂ ಕ್ರಿಯಾಪದ” ಬಹಳ ಪ್ರಮುಖವೆನಿಸಿವೆ)

2. ವಾಕ್ಯದ ಮಧ್ಯದಲ್ಲಿ ಕ್ರಿಯಾಪದಗಳು ಕಾಣಿಸಿಕೊಳ್ಳುವ ಭಾಷೆಗಳು. (ಇಲ್ಲಿ ಪದಾನುಕ್ರಮಗಳ “ಕರ್ತೃಪದ, ಕ್ರಿಯಾಪದ ಹಾಗೂ ಕರ್ಮ ಪದ”ವಾಗಿರುತ್ತದೆ)

3. ವಾಕ್ಯದ ಆದಿಯಲ್ಲಿ ಕ್ರಿಯಾಪದಗಳು ಕಾಣಿಸಿಕೊಳ್ಳುವ ಭಾಷೆಗಳು (ಇಲ್ಲಿ ಪ್ರಾಮುಖ್ಯವೆನಿಸಿರುವ ಪದಾನುಕ್ರಮಗಳ “ಕ್ರಿಯಾಪದ, ಕರ್ತೃಪದ ಹಾಗೂ ಕರ್ಮಪದ” ಅಥವಾ ಪದಾನುಕ್ರಮವು “ಕ್ರಿಯಾಪದ, ಕರ್ಮಪದ ಹಾಗೂ ಕರ್ತೃಪದ”ವಾಗಿರುತ್ತದೆ.)

ಜಗತ್ತಿನ ಮೂವತ್ತು ಭಾಷೆಗಳ ನಮೂನೆಗಳನ್ನು ಆಧರಿಸಿ ಗ್ರೀನ್‌ಬರ್ಗ್ ನು ಒಂದು ಪದಾನುಕ್ರಮವನ್ನು ಸೂಚಿಸಿದನು. ಇದು ಮುಂದಿನ ಅಧ್ಯಯನ ಗಳಿಗೆ ಅವಕಾಶ ಮಾಡಿಕೊಟ್ಟಿತು. ಆದರೆ ಕೆಲವೊಂದು ಸಾರ್ವತ್ರಿ ಕಾಂಶಗಳನ್ನು ಸಾರ್ವತ್ರಿಕಾಂಶೀಯ ಆಪಾದನೆಗಳೆಂದು ಸೂತ್ರೀಕರಿಸಿದರು, ಸೂಚಿತವಲ್ಲದ ಸಾರ್ವತ್ರಿಕಾಂಶಗಳು ಹೆಚ್ಚು ಹೆಚ್ಚು ಕಂಡು ಬಂದಂತೆ ಹೆಚ್ಚು ಹೆಚ್ಚು ಭಾಷೆಗಳ ನಮೂನೆಗಳನ್ನು ತೆಗೆದುಕೊಂಡು ವಿಶ್ಲೇಷಿಸಲಾಯಿತು. ಇದರಿಂದಾ ಸಾರ್ವತ್ರಿ ಕಾಂಶಗಳು ಸಂಖ್ಯಾತ್ಮಕ ಸಾರ್ವತ್ರಿಕಾಂಶಗಳಾಗಿ ಮಾರ್ಪಾಡು ಹೊಂದಬಹುದು ಎಂದು ಹೇಳಬೇಕಾಗಿಲ್ಲ. ಗ್ರೀನ್‌ಬರ್ಗ್‌ನು ಮೊದಲು ಸೂಚಿಸಿರುವ ಸಾರ್ವತ್ರಿಕಾಂಶಗಳನ್ನು ಹೆಚ್ಚು ಹೆಚ್ಚು ಭಾಷೆಗಳ ನಮೂನೆಗಳನ್ನು ವಿಶ್ಲೇಷಿಸಿದಂತೆ ಪ್ರಾಮುಖ್ಯವೆನಿಸುವ ಸಾರ್ವತ್ರಿಕ ವ್ಯಾಕರಣಾಂಶಗಳನ್ನು ಕಂಡುಹಿಡಿಯಬಹುದು. ಐತಿಹಾಸಿಕ ಮಟ್ಟದಲ್ಲಿ ಅಧ್ಯಯನ ನಡೆಸಿಯೂ ಸಾರ್ವತ್ರಿಕ ವ್ಯಾಕರಣಾಂಶಗಳ ಪ್ರಾಮುಖ್ಯತೆಯನ್ನು ಕಂಡುಹಿಡಿಯಬಹುದು.

ಗ್ರೀನ್‌ಬರ್ಗ್‌ನ ಸಾರ್ವತ್ರಿಕಾಂಶಗಳು ಬಹಳಷ್ಟು ಪ್ರಾಮುಖ್ಯ ಪಡೆದಿವೆ. ಸಮಯ ಹೋದಂತೆ ಭಾಷೆಗಳ ಬೇರೆ ಬೇರೆ ವ್ಯಾಕರಣಾಂಶಗಳನ್ನು ಅಧ್ಯಯನ ನಡೆಸಿದಲ್ಲಿ ವ್ಯಾಕರಣ ವರ್ಗಗಳ ಪ್ರಾಮುಖ್ಯವನ್ನು ಸಾರ್ವತ್ರಿಕಾಂಶವಾಗಿ ಕಂಡುಹಿಡಿಯಲು ಅನುಕೂಲವಾಗಬಹುದು. ಯಾಕೆಂದರೆ ಭಾಷೆಯ ವ್ಯಾಕರಣಾಂಶಗಳು ಸಮಯ ಹೋದಂತೆ ಹೋದಂತೆ ಐತಿಹಾಸಿಕವಾಗಿ ಒಂದು ನಿರ್ದಿಷ್ಟ ಮಟ್ಟದಲ್ಲಿ ಬೆಳವಣಿಗೆ ಹೊಂದುತ್ತಾ ಇರುತ್ತವೆ. ಆದ್ದರಿಂದ ಜಗತ್ತಿನ ಭಾಷೆಗಳ ವ್ಯಾಕರಣಾಂಶಗಳನ್ನು ಸಮಯ ಹೋದಂತೆ ಹೋದಂತೆ ಅವುಗಳ ಅಧ್ಯಯನವನ್ನು ತುಲನಾತ್ಮಕವಾಗಿಯೂ ಐತಿಹಾಸಿಕವಾಗಿಯೂ ಮಾಡಿದರೆ ಇನ್ನೂ ಹೆಚ್ಚು ಹೆಚ್ಚು ಸಾರ್ವತ್ರಿಕ ವ್ಯಾಕರಣಾಂಶಗಳನ್ನು ಕಂಡು ಹಿಡಿಯಲು ತುಂಬ ಸಹಕಾರಿಯಾದೀತು.

ನೋಮ್ ಚೋಮ್‌ಸ್ಕಿ ರೂಪಿಸಿದ ಸಾರ್ವತ್ರಿಕಾಂಶಗಳು

ಇಪ್ಪತ್ತನೇ ಶತಮಾನದ ಪ್ರಸಿದ್ಧ ಭಾಷಾಶಾಸ್ತ್ರಜ್ಞ ನೋಮ್ ಚೋಮ್‌ಸ್ಕಿ ಎಂಬುವರು ವಾಕ್ಯ ರಚನೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ಜಗತ್ತಿನ ಎಲ್ಲಾ ಭಾಷೆಗಳಿಗೂ ಅನ್ವಯವಾಗುವ ವಾಕ್ಯರಚನಾ ನಿಯಮಗಳನ್ನು ಹಾಗೂ ಸಿದ್ಧಾಂತಗಳನ್ನು ಸಾರ್ವತ್ರಿಕ ಅಂಶಗಳಾಗಿ ರೂಪಿಸಿದರು. ಇದು ಆಧುನಿಕ ಭಾಷಾ ಶಾಸ್ತ್ರಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಕಾರಕ ಪರಿಣಾಮವನ್ನುಂಟು ಮಾಡಿತು. ಇದು ರೂಪಾಂತರ ವ್ಯಾಕರಣ ಎಂಬ ಹೆಸರಿನಲ್ಲಿ ಜಗತ್ತಿನಲ್ಲೆಲ್ಲಾ ಪ್ರಸಿದ್ದಿಗೆ ಬಂತು. ಈ ನಿಯಮ ‘ಸಾಮರ್ಥ್ಯ’ ಮತ್ತು ‘ಆಚರಣೆ’ ಎಂಬ ಎರಡು ಸಿದ್ಧಾಂತಗಳ ಮೇಲೆ ಹೊಂದಿಕೊಂಡಿದೆ. ಇವರ ಪ್ರಕಾರ ‘ಸಾಮರ್ಥ್ಯ’ ಎಂಬ ಸಿದ್ಧಾಂತವು ವ್ಯಕ್ತಿಯು ಭಾಷೆಯನ್ನು ಬಳಸಬಹುದಾದ ಸಾಮರ್ಥ್ಯಕ್ಕೆ ಸಂಬಂಧಿಸಿದೆ. ಹಾಗೂ ‘ಆಚರಣೆ’ ಎಂಬ ಸಿದ್ಧಾಂತವು ಒಬ್ಬ ವ್ಯಕ್ತಿಯು ಭಾಷೆಯನ್ನು ಬಳಸುವ ರೀತಿಗೆ ಸಂಬಂಧಿಸಿದ್ದು ರೂಪಾಂತರ ವ್ಯಾಕರಣಕ್ಕೆ ಪೂರಕವಾಗಿದ್ದು ಮುಂದೆ ಇದು ಉತ್ಪಾದನಾತ್ಮಕ ವ್ಯಾಕರಣ ಎನಿಸಿಕೊಂಡಿತು. ಮೂಲ ವ್ಯಾಕರಣಗಳನ್ನು ಆಧಾರವಾಗಿಟ್ಟುಕೊಂಡು ಬೇರೆ ಬೇರೆ ವಾಕ್ಯಗಳನ್ನು ಉತ್ಪಾದಿಸಿದರೆ ಅದನ್ನು ಉತ್ಪಾದನಾತ್ಮಕ ವ್ಯಾಕರಣವೆನ್ನಬಹುದು. ಇದನ್ನು ಗಮನಿಸಿದಾಗ ಚೋಮ್‌ಸ್ಕಿ ಪ್ರಕಾರ ಭಾಷೆ ಎಂಬುದು ಅಪರಿಮಿತ ವಾಕ್ಯಗಳ ಒಂದು ಸಮೂಹವೆಂದು ಹೇಳಬಹುದು.

ಅನೇಕ ವಾಕ್ಯಗಳ ಮೇಲ್ಮೈ ರಚನೆಯಲ್ಲಿ ಒಂದು ವಾಕ್ಯ ಒಂದು ಅರ್ಥವನ್ನು ಹೊಂದಬಹುದು. ಆದರ ಆಳ ರಚನೆಯಲ್ಲಿ ವಾಕ್ಯಗಳು ಬೇರೆ ಬೇರೆ ಅರ್ಥವನ್ನು ಹೊಂದಬಹುದು. ಮೇಲೆ ನಮೂದಿಸಿರುವ ಚೋಮ್‌ಸ್ಕಿಯ ಈ ಎರಡು ಸಿದ್ಧಾಂತಗಳ ಮೂಲಕ ಜಗತ್ತಿನ ಎಲ್ಲಾ ಭಾಷೆಗಳು ವ್ಯಾಕರಣ ಗಳನ್ನು ಸೂತ್ರದ ಮೂಲಕ ತಂದು “ಸಾರ್ವತ್ರಿಕ ವ್ಯಾಕರಣ” ಒಂದನ್ನು ರೂಪಿಸಿಕೊಳ್ಳಬಹುದು. ಇವರ ಈ “ಸಾರ್ವತ್ರಿಕ ವ್ಯಾಕರಣ” ನಿಯಮಗಳನ್ನು ಮುಖ್ಯವಾಗಿ ಪದಪುಂಜ ರಚನಾ ನಿಯಮ, ರೂಪಾಂತರ ನಿಯಮ ಮತ್ತು ಸಂಧಿ ನಿಯಮಗಳೆಂದು ಮೂರು ವರ್ಗಗಳಾಗಿ ವಿಂಗಡಿಸಬಹುದು.

ಉತ್ಪಾದನಾತ್ಮಕ ವ್ಯಾಕರಣದಲ್ಲಿ ಮೊದಲು ಪದಪುಂಜ ರಚನಾ ನಿಯಮಗಳನ್ನು ನಂತರ ರೂಪಾಂತರ ನಿಯಮಗಳನ್ನು ಆಮೇಲೆ ಕೊನೆಗೆ ಸಂಧಿ ನಿಯಮಗಳನ್ನು ವಿಶ್ಲೇಷಿಸಿ ವರ್ಣಿಸಬಹುದು. ಪದಪುಂಜ ರಚನಾ ನಿಯಮಗಳು ಮುಖ್ಯವಾಗಿ ವಾಕ್ಯಗಳ ನಿಕಟತಮ ಘಟಕಗಳನ್ನು ಅಲ್ಲದೆ ಅವುಗಳ ಅರ್ಥವನ್ನು ಸೂಚಿಸುತ್ತವೆ. ಈ ನಿಯಮಗಳು ವಾಕ್ಯ ಎಂಬ ಸಂಕೇತದಿಂದ ಪ್ರಾರಂಭವಾಗಿ ನಿಯಮಗಳಿಗೆ ಅನುಗುಣವಾಗಿ ಬೆಳೆದು ಬಂದು ಕೊನೆಗೆ ಆಕೃತಿಮಾಗಳನ್ನು ಸೂಚಿಸುತ್ತವೆ. ಈ ಆಕೃತಿಮಾಗಳು ಪದಪುಂಜ ವಿನ್ಯಾಸಕಗಳಾಗಿ ಕಾಣಿಸುತ್ತವೆ. ಇವುಗಳನ್ನು ಮೇಲಿನ ರೇಖಾಚಿತ್ರದ ಮೂಲಕವೂ ತೋರಿಸಲಾಗಿದೆ.

ಗ್ರೀನ್‌ಬರ್ಗ್‌ನ ಚೌಕಟ್ಟಿಲ್ಲಿ ಅಧ್ಯಯನ ನಡೆಸಿದ ಸಾರ್ವತ್ರಿಕಾಂಶಗಳು ಒಂದು ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದರೆ, ನೋಮ್ ಚೋಮ್‌ಸ್ಕಿಯ ಚೌಕಟ್ಟಿನಲ್ಲಿ ಅಧ್ಯಯನ ನಡೆಸಿದ ಸಾರ್ವತ್ರಿಕಾಂಶಗಳು ಇನ್ನೊಂದು ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದಿದ್ದು ಹೆಚ್ಚು ಪ್ರಸಿದ್ದಿಗಳಿಸಿದೆ. ಇನ್ನೂ ಹೆಚ್ಚು ಮಟ್ಟಿಗೆ ಜಗತ್ತಿನ ಭಾಷೆಗಳ ಸಮಾನ ಅಂಶಗಳನ್ನು ತುಲನಾತ್ಮಕವಾಗಿ ಹಾಗೂ ಐತಿಹಾಸಿಕವಾಗಿ ಅಧ್ಯಯನ ನಡೆಸಿದಲ್ಲಿ ಜಗತ್ತಿನ ಎಲ್ಲ ಭಾಷೆಗಳಿಗೆ ಸಾಮಾನ್ಯ ವ್ಯಾಕರಣ ಅಥವಾ ಸಾರ್ವತ್ರಿಕ ವ್ಯಾಕರಣ ಒಂದನ್ನು ರಚಿಸಲು ಇನ್ನೂ ತುಂಬಾ ಮಟ್ಟಿಗೆ ಸಹಕಾರಿಯಾದೀತು.