ಧ್ವನಿರಚನಾ ಶಾಸ್ತ್ರವು ವರ್ಣನಾತ್ಮಕ ಭಾಷಾ ವಿಜ್ಞಾನದ ಮಹತ್ವದ ಶಾಖೆ. ಭಾಷಾಧ್ವನಿಗಳ ಶಾಸ್ತ್ರೀಯ ಅಧ್ಯಯನವೇ ಅದರ ಮುಖ್ಯ ಉದ್ದೇಶ. ಅದರಲ್ಲಿ ಧ್ವನಿಶಾಸ್ತ್ರ (ಫೊನೆಟಿಕ್ಸ್) ಧ್ವನಿಮಾಶಾಸ್ತ್ರ (ಫೊನೆಮಿಕ್ಸ್) ಎಂಬ ವಿಭಾಗಗಳಿವೆ. ಅಲ್ಲಿ ಧ್ವನಿ, ಧ್ವನಿಮಾ, ಉಪಧ್ವನಿ ಎಂಬ ಪಾರಿಭಾಷಿಕ ಪದಗಳಿಗೆ ವಿಶಿಷ್ಟ ಸ್ಥಾನವಿದೆ.

ಧ್ವನಿಶಾಸ್ತ್ರ ಮತ್ತು ಧ್ವನಿಮಾಶಾಸ್ತ್ರಗಳ ಸಂಬಂಧ: ಮನುಷ್ಯರ ಧ್ವನ್ಯಂಗಗಳು ಉತ್ಪಾದಿಸುವ ಅಸಂಖ್ಯಾತ ಧ್ವನಿಗಳನ್ನು ಅವುಗಳ ಉಚ್ಚಾರಣಾ ರೀತಿಗಳಿಗನು ಗುಣವಾಗಿ ಪರಿಶೀಲಿಸಿ ವಿವೇಚಿಸುವುದು ಧ್ವನಿಶಾಸ್ತ್ರ. ಯಾವುದೇ ಭಾಷೆ ಅಥವಾ ಉಪಭಾಷೆಯ ಉಚ್ಚರಿತ ಧ್ವನಿಗಳಲ್ಲಿ ಕಂಡುಬರುವ ಕ್ರಿಯಾಶೀಲ ಹಾಗೂ ಮಹತ್ವದ ಧ್ವನಿಗಳನ್ನು ವಿಶ್ಲೇಷಿಸಿ ವಿವೇಚಿಸುವುದು ಧ್ವನಿಮಾಶಾಸ್ತ್ರ. ಭಾಷಾಧ್ವನಿಗಳ ಸ್ವರೂಪವನ್ನು ವಿವರಿಸುವುದು ಧ್ವನಿಶಾಸ್ತ್ರದ ಗುರಿ. ಒಂದು ಭಾಷೆಗೆ ಅವಶ್ಯವಾದ ಧ್ವನಿಗಳನ್ನು ಶೋಧಿಸಿ ವರ್ಣಮಾಲೆಗೆ ಅಳವಡಿಸುವುದು ಧ್ವನಿಮಾಶಾಸ್ತ್ರದ ಗುರಿ. ಧ್ವನಿಶಾಸ್ತ್ರದಲ್ಲಿ ಧ್ವನಿ ಹುಟ್ಟುವ  ಬಗೆ, ಹವೆಯಲ್ಲಿ ಅವು ಪ್ರಸಾರವಾಗುವಾಗ ಪಡೆಯುವ ಭೌತಿಕ ಗುಣಗಳ ಬಗೆಗೆ ಹಾಗೂ ಕೇಳುಗ ಅವುಗಳನ್ನು ಗ್ರಹಿಸುವ ಕ್ರಮಗಳ ಬಗ್ಗೆ ಅಭ್ಯಸಿಸುತ್ತೇವೆ. ಭಾಷಾ ಧ್ವನಿಗಳ ಲಕ್ಷಣವೇ ಇಲ್ಲಿ ಮುಖ್ಯ. ಉದಾ

[ಕ್] ಇದು ವಿಭಾಜಕ, ಕಂಠ್ಯ, ವ್ಯಂಜಕ, ಸ್ಪರ್ಶ ಅಘೋಷಧ್ವನಿ. ಈ ತೆರನಾದ ವಿವರಣೆ ಧ್ವನಿಶಾಸ್ತ್ರದಲ್ಲಿ ಸಿಗುತ್ತದೆ. ಉಚ್ಚರಿತ ಧ್ವನಿ ಒಂದು ಭಾಷೆ ಅಥವಾ ಉಪಭಾಷೆಯಲ್ಲಿ ವ್ಯವಹರಿಸುವ ರೀತಿಯನ್ನು ಧ್ವನಿಮಾಶಾಸ್ತ್ರದಲ್ಲಿ ಅಭ್ಯಸಿಸಲಾಗುತ್ತದೆ. ಉದಾ. ಇಂಗ್ಲಿಶಿನಲ್ಲಿ ‘k’ ಆರಂಭದಲ್ಲಿ ಮಹಾಪ್ರಾಣವಾಗಿ, ಮಧ್ಯದಲ್ಲಿ ಅಘೋಷ ಸ್ಪರ್ಶವಾಗಿ, ಉಳಿದೆಡೆ (ಅಂತ್ಯದಲ್ಲಿ) ಅವಿವೃತವಾಗಿ ಬಳಕೆಯಾಗುತ್ತದೆ. ಧ್ವನಿಗಳನ್ನು ಸೂಚಿಸಲು [ ] ಚೌಕಕಂಸ ಉಪಯೋಗಿಸುವ ಬರೆಹ ‘ಧ್ವನಿಬರೆಹ’. ಇದು ಸೂಕ್ಷ್ಮವಾದುದು. ಧ್ವನಿಮಾಗಳನ್ನು ಸೂಚಿಸಲು / / ಓರೆಗೆರೆ ಸಿದ್ಧಪಡಿಸಿದ ಬರೆಹ ‘ಧ್ವನಿಮಾಬರೆಹ’. ಇದು ಸ್ಥೂಲವಾದುದು. ಧ್ವನಿಮಾಶಾಸ್ತ್ರದ ಮುನ್ನಡೆಗೆ ಧ್ವನಿಶಾಸ್ತ್ರದ ನೆರವು ಅತ್ಯಗತ್ಯ. ಅವರೆಡು ಪರಸ್ಪರ ಪೂರಕ ಪೋಷಕಗಳಾಗಿವೆ. ಕೆ.ಎಲ್. ಪೈಕ್ ಅವರು ಅಭಿಪ್ರಾಯಪಟ್ಟಂತೆ ಧ್ವನಿಶಾಸ್ತ್ರ ಸಾಮಗ್ರಿಯನ್ನು ಒದಗಿಸಿದರೆ ಧ್ವನಿಮಾಶಾಸ್ತ್ರ ಅದನ್ನು ಸಂಯೋಜಿಸಿ ಕೊಡುತ್ತದೆ.

ಧ್ವನಿ, ಧ್ವನಿಮಾ ಮತ್ತು ಉಪಧ್ವನಿ : ಮನುಷ್ಯನ ಧ್ವನ್ಯಂಗಗಳು ಉತ್ಪಾದಿಸುವ ಧ್ವನಿಗಳನ್ನು ಭಾಷಾಧ್ವನಿಗಳೆಂದು ಕರೆಯುವರು. ಉಚ್ಚರಿತ ಧ್ವನಿಗಳಲ್ಲಿ ಕಂಡುಬರುವ ಕ್ರಿಯಾಶೀಲ ಮಹತ್ವದ ಧ್ವನಿಗಳು ಆ ಭಾಷೆಯ ಧ್ವನಿಮಾಗಳೆನಿಸುವುವು. ಧ್ವನಿಮಾಗಳು ಒಂದು ಭಾಷೆಯಲ್ಲಿ ಪರಿಮಿತ ಸಂಖ್ಯೆ ಯಲ್ಲಿರುತ್ತವೆ. ಧ್ವನಿಗಳು ಧ್ವನಿಮಾಗಳೆನಿಸಿಕೊಳ್ಳಬೇಕಾದರೆ ಅವು ಪರಸ್ಪರ ವೈದೃಶ್ಯ ಪ್ರಸಾರದಲ್ಲಿರಬೇಕು. ಅರ್ಥ ವ್ಯತ್ಯಾಸಕ್ಕೆ ಹಾಗೂ ಪ್ರತ್ಯೇಕ ಶಬ್ದ ನಿರ್ಮಾಣಕ್ಕೆ ಕಾರಣವಾಗುವಂತಿರಬೇಕು. ಇಂತಹ ಧ್ವನಿಗಳಿಗೆ ಆ ಭಾಷೆಯಲ್ಲಿ ಮಹತ್ವ ಹೆಚ್ಚು. ಅವು ಧ್ವನಿಮಾಗಳು. ಧ್ವನಿಸಾಮ್ಯವುಳ್ಳ ಹಾಗೂ ಪರಸ್ಪರ ವ್ಯಾವರ್ತಕ ಪರಿಸರದಲ್ಲಿ ಬರುವ ಒಂದು ಧ್ವನಿಯ ಪ್ರಭೇದಗಳನ್ನು ಉಪಧ್ವನಿಗಳೆಂದು ಕರೆಯುವರು. ಉಪಧ್ವನಿಗಳು ಒಂದು ಧ್ವನಿಮಾದ ಸದಸ್ಯ ಧ್ವನಿಗಳಾಗಿ ಕಂಡುಬರುತ್ತವೆ.

ಒಂದು ಭಾಷೆಯ ಉಚ್ಚರಿತ ಧ್ವನಿಗಳೆಲ್ಲವೂ ಧ್ವನಿಮಾಗಳಲ್ಲ. ಅದೇ ರೀತಿ ಒಂದು ಭಾಷೆಯಲ್ಲಿ ಕಂಡುಬರುವ ಧ್ವನಿಮಾಗಳು ಎಲ್ಲ ಭಾಷೆಗಳಲ್ಲಿಯೂ ಧ್ವನಿಮಾಗಳಾಗಿರುವುದಿಲ್ಲ. ಒಂದು ಭಾಷೆಯಲ್ಲಿ ಕ್ರಿಯಾಶೀಲ ಧ್ವನಿಗಳು ಬಳಕೆಯಲ್ಲಿದ್ದರೆ ಅದೇ ಧ್ವನಿಗಳು ಮತ್ತೊಂದು ಭಾಷೆಯಲ್ಲಿ ಕ್ರಿಯಾಶೀಲ ಧ್ವನಿಗಳಾಗಿ ಬಳಕೆಯಲ್ಲಿರದೆ ಇರಬಹುದು. ಇಂತಹ ಧ್ವನಿಗಳು ಭಾಷೆಯಿಂದ ಭಾಷೆಗೆ ಬೇರೆಯಾಗಿರುತ್ತವೆ. ಉದಾ: ಕನ್ನಡದಲ್ಲಿ ಕಂಠ್ಯ ಸ್ಪರ್ಶ ವ್ಯಂಜನಗಳಾದ ‘ಕ್’ ಮತ್ತು ‘ಗ್’ ಧ್ವನಿಗಳು ಹೆಚ್ಚು ಕ್ರಿಯಾತ್ಮಕವಾದವುಗಳು. ಇದೇ ಧ್ವನಿಗಳು ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿಯೂ ಸಹ ಕ್ರಿಯಾತ್ಮಕ ಧ್ವನಿ ಗಳಾಗಿಯೇ ಕಂಡುಬರುತ್ತವೆ. ಆದರೆ ಅವುಗಳ ಗುಣಧರ್ಮ ಒಂದೇ ಆಗಿರುವುದಿಲ್ಲ. ಧ್ವನಿಗಳು ತಮ್ಮ ಹಿಂದೆ ಮುಂದೆ ಕಂಡುಬರುವ ಬೇರೆಬೇರೆ ಧ್ವನಿಗಳ ಪ್ರಭಾವದಿಂದ ಉಚ್ಚಾರಣೆಯಲ್ಲಿ ವ್ಯತ್ಯಾಸವಾಗುತ್ತವೆ. ಉದಾ: ಇಂಗ್ಲಿಷಿನ pin (ಗುಂಡುಸೂಜಿ) spin (ನೂಲು) lip (ತುಟಿ) ಈ ಪದಗಳನ್ನು ಗಮನಿಸಿದಾಗ ಮೂರು p ಧ್ವನಿಗಳು ಕಂಡುಬರುತ್ತವೆ. ಅವುಗಳ ಉಚ್ಚಾರಣೆ ಭಿನ್ನವಾಗಿದೆ. /p/ ಧ್ವನಿಗಳು [p] ಆದಿಯಲ್ಲಿ ಮಹಾಪ್ರಾಣ ಯುಕ್ತವಾಗಿ ಪದಮಧ್ಯದಲ್ಲಿ ಬಂದಾಗ ಅಘೋಷ ಸ್ಪರ್ಶವಾಗಿ ಪದಾಂತ್ಯದಲ್ಲಿ ಬಂದಾಗ ಅವಿವೃತವಾಗಿ ಕಾಣಿಸಿಕೊಳ್ಳುತ್ತದೆ. ಈ ಮೂರು p  ಧ್ವನಿಗಳು ಬೇರೆ ಬೇರೆ ಸ್ಥಾನದಲ್ಲಿ ಬಂದಿರುವುದರಿಂದ ಇವು ಒಂದೇ ಧ್ವನಿಯ ಪ್ರಭೇದಗಳಾಗಿ ಕಾಣಿಸಿಕೊಂಡಿವೆ. ಧ್ವನಿಮಾ ಎಂಬುದು ಹಲವಾರು ಉಪಧ್ವನಿಗಳ ಸಮುದಾಯ ವಾಗಿದೆ ಎಂಬ ಮಾತು ಸಮಂಜಸವಾಗಿದೆ. ಒಂದು ಧ್ವನಿಮಾಕ್ಕೆ ಇಷ್ಟೇ ಉಪಧ್ವನಿಗಳಿರಬೇಕೆಂಬ ನಿಯಮವೇನೂ ಇಲ್ಲ. ಉಪಧ್ವನಿಗಳ ಸಂಖ್ಯೆ ಹೆಚ್ಚಿರಬಹುದು ಅಥವಾ ಕಡಿಮೆ ಇರಬಹುದು. ಇವು ಭಾಷೆಯಿಂದ ಭಾಷೆಗೆ ಆಯಾ ಭಾಷೆಯ ಜಾಯಮಾನಕ್ಕೆ ತಕ್ಕಂತೆ ಕಂಡುಬರುತ್ತವೆ.

ಧ್ವನಿಶಾಸ್ತ್ರವು ಕಚ್ಚಾ ಸಾಮಗ್ರಿಗಳನ್ನು ಒದಗಿಸಿದರೆ ಧ್ವನಿಗೂ ಅವನ್ನು ಸಂಯೋಜಿಸಿ ಕೊಡುತ್ತದೆ. ಭಾಷಾ ಧ್ವನಿಗಳ ಶಾಸ್ತ್ರೀಯ ಅಧ್ಯಯನಕ್ಕೆ ಯುಗ್ಮಗಳ ಪ್ರಸಾರ ಮತ್ತು ಪರಿಸರ ತುಂಬ ಮಹತ್ವದ ಪಾತ್ರ ವಹಿಸುತ್ತವೆ.

ಯುಗ್ಮಗಳು : ‘ಯುಗ್ಮ’ ಎಂದರೆ ಜೋಡಿ ಎಂದರ್ಥ. ಧ್ವನಿಮಾಗಳನ್ನು ಗುರುತಿಸುವಾಗ ಇವುಗಳ ಪಾತ್ರ ಹಿರಿದು. ಇವುಗಳಲ್ಲಿ ಎರಡು ವಿಧ. ಕನಿಷ್ಠತಮ ಯುಗ್ಮ ಹಾಗೂ ಉಪಕನಿಷ್ಠತಮಯುಗ್ಮ. ಒಂದು ಯುಗ್ಮದಲ್ಲಿ ಎರಡು ಧ್ವನಿಗಳು ಸಮಾನ ಪರಿಸರದಲ್ಲಿ ಬಂದು ಅವು ಭಿನ್ನವಾಗಿದ್ದು ಉಳಿದೆಲ್ಲ ಧ್ವನಿಗಳು ಒಂದೇ ರೀತಿಯಾಗಿದ್ದರೆ ಅಂತಹ ಯುಗ್ಮ ಕನಿಷ್ಠತಮ ಯುಗ್ಮ. ಇನ್ನೊಂದರ್ಥದಲ್ಲಿ ಹೇಳಬೇಕಾದರೆ ಕನಿಷ್ಠವಾದ ವ್ಯತ್ಯಾಸವನ್ನು ಹೊಂದಿರುವ ಎರಡು ಶಬ್ದಗಳ ಗುಂಪು ಕನಿಷ್ಠತಮ ಯುಗ್ಮ ಎನಿಸಿಕೊಳ್ಳುತ್ತದೆ. ಉದಾ: ಮರ, ನರ ಎಂಬ ಯುಗ್ಮವನ್ನು ಗಮನಿಸಿದಾಗ ಇಲ್ಲಿ ಮ್, ನ್, ಧ್ವನಿಗಳು ಸಮಾನ ಪರಿಸರದಲ್ಲಿ ಬಂದು ಭಿನ್ನವಾಗಿವೆ. ಉಳಿದೆಲ್ಲ ಧ್ವನಿಗಳು ಸಮಾನವಾಗಿವೆ. ಈ ಭಿನ್ನವಾಗಿರುವ ಧ್ವನಿಗಳು ವೈದೃಶ್ಯ ಪ್ರಸಾರದಲ್ಲಿ ಬಂದಿವೆ ಮತ್ತು ಅರ್ಥ ವ್ಯತ್ಯಾಸವನ್ನು ಕೊಡುತ್ತವೆ. ಕನಿಷ್ಠತಮ ಯುಗ್ಮಗಳ ಸಹಾಯದಿಂದ ಭಾಷೆಯಲ್ಲಿಯ ಧ್ವನಿಗಳನ್ನು ಸಂದೇಹಕ್ಕೆಡೆಯಿಲ್ಲದಂತೆ ಧ್ವನಿಮಾಗಳೆಂದು ಗುರುತಿಸಬಹುದು. ಕೆಲವು ಸಂದರ್ಭದಲ್ಲಿ ಕನಿಷ್ಠತಮ ಯುಗ್ಮಗಳು ಸಿಗದೇಯಿದ್ದಾಗ ಒಂದಕ್ಕಿಂತ ಹೆಚ್ಚು ಸ್ಥಾನದಲ್ಲಿ ವ್ಯತ್ಯಾಸವಿರುವ ವೈದೃಶ್ಯ ಪ್ರಸಾರದಲ್ಲಿರುವ ಯುಗ್ಮಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಉದಾ: ಕರಗು, ಕಲಕು ಈ ಯುಗ್ಮಗಳನ್ನು ಗಮನಿಸಿದಾಗ ಅವುಗಳಲ್ಲಿ ರ್ ಮತ್ತು ಲ್, ಗ್ ಮತ್ತು ಕ್ ಈ ನಾಲ್ಕು ಧ್ವನಿಗಳು ಭಿನ್ನವಾಗಿದ್ದು ಉಳಿದೆಲ್ಲ ಧ್ವನಿಗಳು ಸಮಾನವಾಗಿವೆ. ಆದ್ದರಿಂದ ಇವು ಉಪಕನಿಷ್ಠತಮ ಯುಗ್ಮಗಳಾಗಿವೆ.

ಪ್ರಸಾರ : ಭಾಷೆಯಲ್ಲಿ ಧ್ವನಿಗಳ ಬರುವಿಕೆಯನ್ನು ಆ ಧ್ವನಿಯ ಪರಿಸರ ಎನ್ನುತ್ತೇವೆ. ಶಬ್ದದಲ್ಲಿರುವ ಪ್ರತಿಯೊಂದು ಧ್ವನಿಗೂ ತನ್ನದೇ ಆದ ಪರಿಸರ ಇರುತ್ತದೆ. ಭಾಷೆಯಲ್ಲಿ ಒಂದು ಧ್ವನಿ ಬರುವ ಎಲ್ಲ ಪರಿಸರಗಳ ಮೊತ್ತವನ್ನು ಪ್ರಸಾರವೆನ್ನುವರು. ಪ್ರಸಾರದಲ್ಲಿ ವೈದೃಶ್ಯ, ಪೂರಕ ಮತ್ತು ವೈಕಲ್ಪಿಕ ಅಥವಾ ಸ್ವಚ್ಛಂದ ಪರಿವರ್ತನೆ ಎಂದು ಮೂರುವಿಧ.

ಎರಡು ಬೇರೆ ಬೇರೆ ಭಾಷಾ ಘಟಕಗಳ ಅಥವಾ ಒಂದು ಯುಗ್ಮದ ಒಂದು ಸ್ಥಾನದಲ್ಲಿ ಭಿನ್ನಧ್ವನಿಗಳಿದ್ದು ಅವು ಅರ್ಥ ವ್ಯತ್ಯಾಸಕ್ಕೆ ಮತ್ತು ಪ್ರತ್ಯೇಕ ಶಬ್ದ ನಿರ್ಮಾಣಕ್ಕೆ ಕಾರಣವಾಗುತ್ತಿದ್ದು ಉಳಿದ ಧ್ವನಿಗಳು ಒಂದೇ ತೆರನಾಗಿದ್ದರೆ ಅಂತಹ ಪ್ರಸಾರ ವೈದೃಶ್ಯ ಪ್ರಸಾರವಾಗಿದೆ. ಉದಾ : ಕಲ್ಲು, ಕಳ್ಳು. ಇಲ್ಲಿ ‘ಲ್’ ಮತ್ತು ‘ಳ್’ ಎಂಬೆರಡು ಧ್ವನಿಗಳು ಸಮಾನ ಪರಿಸರದಲ್ಲಿ ಬಂದು ಭಿನ್ನವಾಗಿವೆ. ಅವು ಅರ್ಥ ವ್ಯತ್ಯಾಸಗಳಿಸಬಲ್ಲ ಶಕ್ತಿ ಯನ್ನು ಪಡೆದುಕೊಂಡಿವೆ. ಉಳಿದೆಲ್ಲ ಧ್ವನಿಗಳು ಸಮಾನವಾಗಿವೆ. ಅಂತಹ ಧ್ವನಿಗಳು ವೈದೃಶ್ಯ ಪ್ರಸಾರದಲ್ಲಿ ಬಂದಿವೆ ಎಂದರ್ಥ. ವೈದೃಶ್ಯತೆ ಶಬ್ದದ ಆದಿ, ಮಧ್ಯ, ಅಂತ್ಯ ಎಲ್ಲಿಯಾದರೂ ಬರಬಹುದು. ಎರಡು ಅಥವಾ ಎರಡಕ್ಕಿಂತ ಹೆಚ್ಚು ಧ್ವನಿಗಳು ಅರ್ಥದ ದೃಷ್ಟಿಯಿಂದ ಒಂದೇ ಆಗಿದ್ದು, ಭಿನ್ನ ಭಿನ್ನ ರೂಪಗಳನ್ನು ಪಡೆದಿದ್ದು, ನಿರ್ದಿಷ್ಟ ಪರಿಸರದಲ್ಲಿ ಬಂದು ಒಂದು ಇನ್ನೊಂದರ ಸ್ಥಳದಲ್ಲಿ ಬರದಿದ್ದರೆ ಅಂತಹ ಧ್ವನಿಗಳು ಪೂರಕ ಪ್ರಸಾರದಲ್ಲಿವೆ ಎಂದರ್ಥ. ಅಂತಹ ಧ್ವನಿಗಳ ಪರಿಸರವನ್ನು ಪೂರಕ ಪ್ರಸಾರ ಎನ್ನುವರು. ಉದಾ : ಇಂಗ್ಲಿಷಿನ /k/ [k] ಶಬ್ದಾರಂಭದಲ್ಲಿ [k] ಶಬ್ದಾಂತ್ಯದಲ್ಲಿ, ಉಳಿದೆಡೆ ಇಂತಹ ಧ್ವನಿಗಳ ಪ್ರತಿನಿಧಿ ಒಂದನ್ನಾಯ್ದು ಅದನ್ನು ಧ್ವನಿಮಾ /k/ ಎಂದು ಗುರುತಿಸಲಾಗುತ್ತದೆ. ಇದು ಅವುಗಳಲ್ಲಿ ಹೆಚ್ಚು ಪ್ರಸಾರದಲ್ಲಿರುತ್ತದೆ. ಉಳಿದ ಧ್ವನಿಗಳನ್ನು ಆ ಧ್ವನಿಮಾದ ಉಪಧ್ವನಿಗಳೆಂದು ಕರೆಯುತ್ತೇವೆ. ಕೆಲವು ಪದಗಳಲ್ಲಿ ಧ್ವನಿಗಳು ಸಾಮ್ಯ ಪರಿಸರದಲ್ಲಿ ಬಂದರೂ ಅವು ಅರ್ಥ ವ್ಯತ್ಯಾಸ ಮಾಡಲಾರವು. ಅಂತಹ ಧ್ವನಿಗಳು ಬರುವ ಪರಿಸರವನ್ನು ವೈಕಲ್ಪಿಕ ಪ್ರಸಾರ ಎಂದು ಕರೆಯುತ್ತೇವೆ. ಉದಾ : ಗೊಂಬೆ – ಬೊಂಬೆ, ಚುನಮರಿ – ಚುರಮರಿ ಇವು ವೈಕಲ್ಪಿಕ ಅಥವಾ ಸ್ವಚ್ಛಂದ ಪರಿವರ್ತನೆಯಲ್ಲಿವೆ.

ಭಾಷಾಧ್ವನಿಗಳನ್ನು ವಿಭಾಜಕಗಳು ಮತ್ತು ಅವಿಭಾಜಕಗಳೆಂದು ಸ್ಥೂಲವಾಗಿ ವರ್ಗೀಕರಿಸಬಹುದು. ವಿಭಾಜಕಗಳನ್ನು ಸ್ವತಂತ್ರವಾಗಿ ಉಚ್ಚರಿಸಲು ಸಾಧ್ಯ. ಸ್ವರ ಮತ್ತು ವ್ಯಂಜನಗಳು ವಿಭಾಜಕಗಳಾಗಿವೆ. ಇವುಗಳಲ್ಲಿಯೂ ಕೂಡ ಅನೇಕ ಬಗೆಯ ಒಳಪ್ರಭೇದಗಳು ಕಂಡುಬರುತ್ತವೆ.

ಸ್ವರ ಧ್ವನಿಮಾಗಳು : ಸ್ವರಗಳನ್ನು ನಾಲಿಗೆಯ ಎತ್ತರ, ಪ್ರಗತಿ ಹಾಗೂ ತುಟಿಗಳ ಸ್ಥಿತಿಗಳನ್ನಾಧರಿಸಿ ಮೂರು ರೀತಿಯಾಗಿ ವರ್ಗೀಕರಿಸಲಾಗಿದೆ. ಕನ್ನಡ ದಲ್ಲಿ ಸ್ವರ ಧ್ವನಿಮಾಗಳು ಇಂತಿವೆ :

 

ಪೂರ್ವ ಮಧ್ಯ ಪಶ್ಚ

ಆವೃತ್ತ

ಆವೃತ್ತ ಸಂವೃತ್ತ

ಉನ್ನತ

ಇ,ಈ   ಉ,ಊ

ಮಧ್ಯ

ಎ,ಏ  

ಒ,ಓ

ಅವನತ   ಅ,ಆ,ಆ್ಯ

 

. ಉನ್ನತ ಹಾಗೂ ಉನ್ನತೇತರ ಸ್ವರಗಳು

ನಾಲಿಗೆಯ ಎತ್ತರವನ್ನು ಹೆಚ್ಚು ಕಡಿಮೆ ಮಾಡುವುದರ ಮೂಲಕ ಉನ್ನತ, ಅವನತೋನ್ನತ, ಉನ್ನತ ಮಧ್ಯ, ನಡುಮಧ್ಯ, ಅವನತಮಧ್ಯ, ಉನ್ನತಾವನತ, ಅವನತವೆಂದು ಏಳು ರೀತಿಯ ವಿಭಿನ್ನ ಸ್ವರಗಳನ್ನು ಉಚ್ಚರಿಸಬಹುದು. ಕನ್ನಡದಲ್ಲಿ ಇ, ಈ, ಉ, ಊ, ಉನ್ನತ ಸ್ವರಗಳಾಗಿವೆ. ನಾಲಿಗೆಯ ಎತ್ತರವನ್ನಾಧರಿಸಿ ಉಚ್ಚಾರವಾಗುವ ಸ್ವರಧ್ವನಿಗಳು ಎಲ್ಲ ಭಾಷೆಗಳಲ್ಲಿಯೂ ಇರಬೇಕೆಂದಿಲ್ಲ. ಕೆಲವು ಭಾಷೆಗಳಲ್ಲಿ ಅವು ಧ್ವನಿಮಾಗಳಾಗಿ  ಕಾಣಿಸಿಕೊಳ್ಳುತ್ತವೆ. ಕೆಲವು ಭಾಷೆಗಳಲ್ಲಿ ಕಾಣಿಸಿಕೊಳ್ಳದೆ ಇರಬಹುದು.

. ಪೂರ್ವ, ಮಧ್ಯ ಮತ್ತು ಪಶ್ಚ ಸ್ವರಗಳು

ಕೆಲವು ಸ್ವರಗಳನ್ನು ಉಚ್ಚರಿಸುವಾಗ ನಾಲಿಗೆಯ ಮುಂಭಾಗವನ್ನು ಉಪಯೋಗಿಸಿದರೆ, ಕೆಲವು ಸ್ವರಗಳನ್ನು ಉಚ್ಚರಿಸುವಾಗ ನಾಲಿಗೆಯ ಹಿಂಭಾಗವನ್ನು, ನಾಲಿಗೆಯ ಮಧ್ಯ ಭಾಗವನ್ನು ಉಪಯೋಗಿಸುತ್ತೇವೆ. ಹೀಗೆ ನಾಲಿಗೆಯ ಪ್ರಗತಿಗನುಗುಣವಾಗಿ ಮೂರು ತೆರನಾದ ಸ್ವರಗಳನ್ನು ಕಾಣಬಹು ದಾಗಿದೆ. ಕನ್ನಡದಲ್ಲಿ ಇ, ಈ, ಎ, ಏ ಇವು ಪೂರ್ವ ಸ್ವರಗಳಾದರೆ, ಅ,ಆ,ಆ್ಯ ಮಧ್ಯ ಸ್ವರಗಳಾಗಿವೆ. ಉ,ಊ,ಒ,ಓ ಇವು ಪಶ್ಚ ಸ್ವರಗಳಾಗಿವೆ. ಬೇರೆ ಬೇರೆ ಭಾಷೆಗಳಲ್ಲಿ ನಾಲಿಗೆಯ ಪ್ರಗತಿಗನುಗುಣವಾಗಿ ಇನ್ನೂ ಕೆಲವು ಧ್ವನಿಮಾ ಗಳಿರಬಹುದು.

. ಗೋಳ ಮತ್ತು ಅಗೋಳ ಸ್ವರಗಳು

ತುಟಿಗಳ ಆಕಾರವನ್ನನುಸರಿಸಿ ಸ್ವರಗಳನ್ನು ಗೋಳ ಮತ್ತು ಅಗೋಳ ಸ್ವರಗಳೆಂದು ಎರಡು ವಿಧವಾಗಿ ವಿಂಗಡಿಸುತ್ತಾರೆ. ಕನ್ನಡದಲ್ಲಿ ಉ,ಊ,ಒ,ಓ, ಗೋಳ ಸ್ವರಗಳಾದರೆ ಇ,ಈ,ಎ,ಏ,ಅ,ಆ,ಅ್ಯ ಅಗೋಳ ಸ್ವರಗಳಾಗಿವೆ.

ವ್ಯಂಜನ ಧ್ವನಿಮಾಗಳು : ಸ್ವರಗಳಂತೆ ವ್ಯಂಜನಗಳನ್ನು ಉಚ್ಚಾರಣಾ ರೀತಿಗಳಿಗೆ ಅನುಗುಣವಾಗಿ ಸ್ಪರ್ಶಗಳು, ಘರ್ಷಗಳು, ಈಷತ್‌ಸ್ಪರ್ಶಗಳು, ಅನುನಾಸಿಕಗಳು, ಪಾರ್ಶ್ವಿಕಗಳು, ಕಂಪಿತಗಳು, ತಾಡಿತಗಳು ಮತ್ತು ಅರ್ಧಸ್ವರ ಗಳೆಂದು ವರ್ಗೀಕರಿಸುವುದು ಧ್ವನಿಮಾಶಾಸ್ತ್ರದಲ್ಲಿ ಹೆಚ್ಚು ರೂಢಿ. ಅವುಗಳ ಉಚ್ಚಾರಣಾ ಸ್ಥಾನಗಳನ್ನಾಧರಿಸಿ ಉಭಯೋಷ್ಠ್ಯ, ದಂತೋಷ್ಠ್ಯ, ದಂತ್ಯ, ವರ್ತ್ಸ್ಯ, ಪರಿವೇಷ್ಠಿತ, ತಾಲವ್ಯ ಕಂಠ್ಯ, ಗಲಕುಹರೀಯ, ಕಲ್ಯ ಎಂದು ವರ್ಗೀಕರಿಸುತ್ತಾರೆ. ಕನ್ನಡದಲ್ಲಿ ವ್ಯಂಜನ ಧ್ವನಿಮಾಗಳು ಇಂತಿವೆ.

ಸ್ಪರ್ಶಗಳು : ಧ್ವನಿಗಳ ಉಚ್ಚಾರದಲ್ಲಿ ಶ್ವಾಸಕೋಶದಿಂದ ಹೊರಬರುವ ಶ್ವಾಸವನ್ನು ಮುಖವಿವರದಲ್ಲಿಯ ಉಚ್ಚಾರಣಾಂಗಗಳು ಸ್ಪಲ್ಪಕಾಲ ತಡೆಹಿಡಿದು ತಕ್ಷಣ ಬಿಟ್ಟಾಗ ಸ್ಪರ್ಶ ವ್ಯಂಜನಗಳು ಉಂಟಾಗುತ್ತವೆ. ಕನ್ನಡದಲ್ಲಿ ಪ್, ಬ್, ತ್, ದ್, ಟ್, ಡ್, ಕ್, ಗ್, ಸ್ಪರ್ಶ ವ್ಯಂಜನಗಳಾಗಿವೆ. ಈ ವ್ಯಂಜನ ಧ್ವನಿಮಾಗಳನ್ನು ಅವುಗಳ ಉಚ್ಚಾರಣಾ ಸ್ಥಾನಗಳಿಗನುಗುಣವಾಗಿ ಉಭಯೋಷ್ಠ್ಯಸ್ಪರ್ಶ, ದಂತ್ಯಸ್ಪರ್ಶ, ಪರಿವೇಷ್ಠಿತಸ್ಪರ್ಶ ಹಾಗೂ ಕಂಠ್ಯಸ್ಪರ್ಶ ವೆಂದು ವರ್ಗೀಕರಿಸಿಕೊಳ್ಳಬಹುದಾಗಿದೆ.

ಘರ್ಷಗಳು : ಶ್ವಾಸಕೋಶ ಮುಖವಿವರದ ಉಚ್ಚಾರಣಾಂಗಗಳಲ್ಲಿ ಹರಿದು ಬರುವಾಗ ಒಂದು ರೀತಿಯ ಸಂಕುಚಿತ ಮಾರ್ಗ ಏರ್ಪಟ್ಟು ಹವೆ ಘರ್ಷಣೆಯೊಂದಿಗೆ ಮುಂದೆ ಸಾಗುತ್ತದೆ. ಆಗ ಘರ್ಷಧ್ವನಿ ಉಂಟಾಗುತ್ತದೆ. ಕನ್ನಡದಲ್ಲಿ ಫ್, ವ್, ಸ್, ಷ್, ಶ್ ಇವು ಘರ್ಷ ಧ್ವನಿಗಳಾಗಿವೆ. ಅವುಗಳ ಉಚ್ಚಾರಣಾ ಸ್ಥಾನಗಳಿಗೆ ಅನುಗುಣವಾಗಿ ದಂತೋಷ್ಠ್ಯ ಘರ್ಷ, ದಂತ್ಯ, ವರ್ತ್ಸ್ಯ ಘರ್ಷ ಧ್ವನಿಗಳೆಂದು ವರ್ಗೀಕರಿಸಬಹುದಾಗಿದೆ.

ಅನುಘರ್ಷ : ಸ್ಪರ್ಶ ಹಾಗೂ ಘರ್ಷ ಧ್ವನಿಗಳ ಲಕ್ಷಣಗಳನ್ನೊಳಗೊಂಡು ಉಚ್ಚಾರವಾಗುವ ಧ್ವನಿಗಳು ಅನುಘರ್ಷ ಧ್ವನಿಗಳೆನಿಸಿಕೊಳ್ಳುತ್ತವೆ. ಕನ್ನಡದಲ್ಲಿ ಚ್ ಮತ್ತು ಜ್ ಅನುಘರ್ಷ ಧ್ವನಿಗಳಾಗಿವೆ.

ಅನುನಾಸಿಕಗಳು : ಕೆಲವು ಧ್ವನಿಗಳನ್ನು ಉಚ್ಚರಿಸುವಾಗ ಮುಖವಿವರ ಮುಚ್ಚಲ್ಪಟ್ಟು ಹವೆ ನಾಸಿಕ ವಿವರದ ಮೂಲಕ ಹರಿಯುತ್ತದೆ. ಆಗ ಉಚ್ಚಾರಣಾ ಅಂಗಗಳಿಗೆ ಅನುಗುಣವಾಗಿ ಬೇರೆ ಬೇರೆ ಅನುನಾಸಿಕ ಧ್ವನಿಗಳು ಹುಟ್ಟುತ್ತವೆ. ಕನ್ನಡದಲ್ಲಿ ಮ್, ನ್, ಣ್, ಞ್, ಙ್ ಎಂಬವು ಅನುನಾಸಿಕಗಳಾಗಿವೆ. ಅವುಗಳ ಉಚ್ಚಾರಣಾ ಸ್ಥಾನಗಳಿಗೆ ಅನುಗುಣವಾಗಿ ಉಭಯೋಷ್ಠ್ಯ, ದಂತ್ಯ, ವರ್ತ್ಸ್ಯ, ಪರಿವೇಷ್ಠಿತ, ತಾಲವ್ಯ, ಕಂಠ್ಯ ಅನುನಾಸಿಕ ಗಳೆಂದು ವರ್ಗೀಕರಿಸಲಾಗಿದೆ.

ಪಾರ್ಶ್ವಿಕಗಳು : ಧ್ವನಿಗಳ ಉಚ್ಚಾರಣೆಯಲ್ಲಿ ನಾಲಿಗೆ ಸ್ಥಾನಕ್ಕೆ (ಮೇಲ್ದಂತ, ವರ್ತ್ಸ್ಯ) ಸ್ಪರ್ಶಿಸಿ ಮಧ್ಯದಲ್ಲಿ ಶ್ವಾಸಕ್ಕೆ ತಡೆಯನ್ನುಂಟು ಮಾಡಿ ನಾಲಿಗೆಯ ಒಂದು ಬದಿ ಅಥವಾ ಎರಡೂ ಬದಿಗಳಿಂದ ಶ್ವಾಸ ಪ್ರವಾಹ ಸಾಗಿದರೆ ಆಗ ಉಂಟಾಗುವ ಧ್ವನಿಗಳು ಪಾರ್ಶ್ವಿಕಗಳು. ಕನ್ನಡದಲ್ಲಿ ಲ್, ಳ್ ಗಳು ಕ್ರಮವಾಗಿ ವರ್ತ್ಸ್ಯ, ಪರಿವೇಷ್ಠಿತ ಪಾರ್ಶ್ವಿಕ ಧ್ವನಿಗಳಾಗಿವೆ.

ಕಂಪಿತಗಳು : ಶ್ವಾಸಪ್ರವಾಹ ಸಾಗುತ್ತಿದ್ದಾಗ, ಕರಣ (ನಾಲಿಗೆ) ಮೇಲ್ದಂತ, ವರ್ತ್ಸ್ಯಕ್ಕೆ ಸ್ಪರ್ಶಿಸಿ ಕಂಪಿತವಾದರೆ ಆ ಕಂಪನದಿಂದ ಉಂಟಾದ ಧ್ವನಿಗಳು ಕಂಪಿತ ಧ್ವನಿಗಳಾಗಿವೆ. ಕನ್ನಡದಲ್ಲಿ ಱ್, ರ್ ಕಂಪಿತಗಳಾಗಿವೆ. ಇಂತಹ ಧ್ವನಿಗಳು ಭಾಷೆಯಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತವೆ.

ತಾಡಿತಗಳು : ಜಿಹ್ವಾಗ್ರವು ಒಂದೇ ಒಂದು ಸಾರಿ ಉಚ್ಚಾರಣಾ ಸ್ಥಾನಕ್ಕೆ ಲಘುವಾಗಿ ಸ್ಪರ್ಶಿಸಿದರೆ ಉಂಟಾಗುವ ಧ್ವನಿ ತಾಡಿತ ಧ್ವನಿ. ಇಂಡೋ ಯುರೋಪಿಯನ್ ಭಾಷಾ ವರ್ಗದ ಭಾಷೆಗಳಲ್ಲಿ ತಾಡಿತ ಧ್ವನಿಗಳಿವೆ. ಕನ್ನಡದಲ್ಲಿ ಸ್ವರಗಳ ನಡುವೆ ಬರುವ ‘ಡ’ ಕಾರ (ಉದಾ: ಮಡಕೆ, ಬಡವ) ತಾಡಿತ ಧ್ವನಿ.

ಅರ್ಧ ವ್ಯಂಜನಗಳು / ಸ್ವರಗಳು : ವ್ಯಂಜನ ಹಾಗೂ ಸ್ವರಗಳ ಗುಣಧರ್ಮವನ್ನು ಹೊಂದಿದಂತಹ ಧ್ವನಿಗಳು ಅರ್ಧವ್ಯಂಜನ ಧ್ವನಿಮಾ ಗಳಾಗಿವೆ. ಇವು ಪೂರ್ಣ ಸ್ವರಗಳೂ ಅಲ್ಲ, ವ್ಯಂಜನಗಳೂ ಅಲ್ಲ. ಎರಡರ ಗುಣಗಳನ್ನು ಹೊಂದಿರುತ್ತವೆ. ಕನ್ನಡದಲ್ಲಿ ಯ್, ವ್ ಅರ್ಧ ಸ್ವರಗಳಾಗಿವೆ. ಉಚ್ಚಾರಣಾ ಸ್ಥಾನಗಳಿಗನುಗುಣವಾಗಿ ತಾಲವ್ಯ ಉಭಯೋಷ್ಠ್ಯ ಎಂದು ಇವುಗಳನ್ನು ವರ್ಗೀಕರಿಸಲಾಗಿದೆ. ಇವು ಜಗತ್ತಿನ ಅನೇಕ ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಮೇಲೆ ಹೇಳಿದ ಸ್ವರ ಮತ್ತು ವ್ಯಂಜನ ಧ್ವನಿಮಾಗಳು ಜಗತ್ತಿನ ಅನೇಕ ಭಾಷೆಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಕೆಲವು ಘೋಷ ಧ್ವನಿಗಳಾದರೆ ಕೆಲವು ಅಘೋಷ ಧ್ವನಿಗಳಾಗಿವೆ. ಮೇಲಿನ ಧ್ವನಿಮಾಗಳು ಕನ್ನಡದಲ್ಲಿ (ದ್ರಾವಿಡ ಭಾಷೆಗಳಲ್ಲಿ) ಬಳಕೆಯಲ್ಲಿವೆ. ಇವುಗಳಲ್ಲದೆ ಇನ್ನೂ ಅನೇಕ ಬಗೆಯ ಧ್ವನಿಮಾಗಳು ಬೇರೆ ಬೇರೆ ಭಾಷೆಗಳಲ್ಲಿ ಆಯಾ ಭಾಷೆಗಳ ಜಾಯಮಾನಕ್ಕೆ ಅನುಗುಣವಾಗಿ ಕಾಣಿಸಿಕೊಳ್ಳಬಹುದಾದ ಸಾಧ್ಯತೆಗಳಿವೆ.

ಮಾನಸ್ವರಗಳು : ಯಾವುದೇ ಭಾಷೆಯ ಸ್ವರಗಳನ್ನು ವರ್ಗೀಕರಿಸಲು ಸಹಾಯಕವಾದ ಸ್ವರಗಳ್ನು ಮಾನಸ್ವರಗಳೆಂದು ಅಥವಾ ಪ್ರಮಾಣ ಸ್ವರಗಳೆಂದು ಕರೆಯುವರು. ಮಾನಸ್ವರಗಳ ಸಹಾಯದಿಂದ ಯಾವುದೇ ಭಾಷೆಯ ಸ್ವರಗಳ ಸ್ವರೂಪವನ್ನು ತಿಳಿಯಬಹುದು. i,u,a,e,E, ಇವು ಎಲ್ಲ ಭಾಷೆಗಳಲ್ಲಿಯೂ ಪ್ರಧಾನ ಸ್ವರಗಳಾಗಿರುವುದರಿಂದ ಹಾಗೂ ಇತರ ಸ್ವರಗಳಿಗೆ ಮಾನದಂಡವಾಗಿರು ವುದರಿಂದ ಇವುಗಳಿಗೆ ಮಾನ ಸ್ವರಗಳೆಂದು ಕರೆಯುವರು.

ಈ ಚಿತ್ರದಲ್ಲಿ ಚೌಕಾಕಾರವು ಮುಖ ವಿವರವನ್ನು, ತ್ರಿಕೋನಾಕಾರವು ನಾಲಗೆಯನ್ನು ಸೂಚಿಸುತ್ತದೆ.

ಅಕ್ಷರ : ಅಕ್ಷರದ ವ್ಯಾಖ್ಯೆಯನ್ನು ಖಚಿತವಾಗಿ ಹೇಳುವುದು ತುಂಬ ಕಷ್ಟಸಾಧ್ಯ. ನಾದ ಶಿಖರತೆಯನ್ನು ಒಳಗೊಂಡ ಉಚ್ಚಾರದ ಚಿಕ್ಕ ಘಟಕ ಅಕ್ಷರವೆಂದು ಸಾಮಾನ್ಯಾರ್ಥದಲ್ಲಿ ಹೇಳಬಹುದು. ಹೆಚ್ಚಿನ ನಾದಶಕ್ತಿಯನ್ನು ಸ್ವರಗಳು ಹೊಂದಿರುವುದರಿಂದ ಅವುಗಳ ಆ ಗುಣವೇ ಅಕ್ಷರ ನಿರ್ಮಾಣವಾಗಲು ಕಾರಣವಾಗುತ್ತದೆ. ಈ ನಾದಗುಣದಿಂದ ಉಚ್ಚಾರಕ್ಕೆ ಸ್ಪಷ್ಟತೆ ಬಂದು ನಿಖರತೆ ಪ್ರಾಪ್ತವಾಗುತ್ತದೆ. ಆದ್ದರಿಂದ ಸ್ವರವೇ ಯಾವಾಗಲೂ ಅಕ್ಷರದ ಕೇಂದ್ರವಾಗುತ್ತದೆ. ಉದಾ. ಇಲಿ (ili)

ಬ್ಲೂಮ್ ಫೀಲ್ಡ್‌ರ ಪ್ರಕಾರ ಅಕ್ಷರ ಸಾಮಾನ್ಯವಾಗಿ ಪ್ರಾರಂಭ, ಶಿಖರ ಮತ್ತು ಮುಕ್ತಾಯಗಳನ್ನೊಳಗೊಂಡಿರುತ್ತದೆ. ಅಕ್ಷರ ವ್ಯವಸ್ಥೆಯ ಬಗ್ಗೆ ಭಾಷಾಶಾಸ್ತ್ರಜ್ಞರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆಯಾದರೂ ಅಕ್ಷರ ವ್ಯವಸ್ಥೆಯನ್ನು ಯಾರೂ ಅಲ್ಲಗಳೆಯುಂತಿಲ್ಲ.

ಹೀಗೆ ಒಂದು ಭಾಷೆಯ ಧ್ವನಿಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವಾಗ ಯುಗ್ಮಗಳು, ಪ್ರಸಾರ, ವಿಭಾಜಕಗಳ ಸ್ವರೂಪ, ಮಾನಸ್ವರಗಳು ಮತ್ತು ಅಕ್ಷರ ವ್ಯವಸ್ಥೆ ಈ ಎಲ್ಲ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ.