ಕನ್ನಡ ಭಾಷೆಗೆ ಸಂಬಂಧಿಸಿದ ಹಾಗೆ ಭಾಷೆಯನ್ನು ಹಳಗನ್ನಡ, ನಡುಗನ್ನಡ, ಹೊಸಗನ್ನಡ ಮತ್ತು ಮಂಗಳೂರು ಕನ್ನಡ ಬೆಂಗಳೂರು ಕನ್ನಡ, ಧಾರವಾಡ ಕನ್ನಡ ಎಂದು ವರ್ಗೀಕರಣ ಮಾಡಲಾಗುತ್ತದೆ. ಈ ವರ್ಗೀಕರಣಗಳ ಬಗೆಯಲ್ಲಿ ಇರುವ ಬದಲಾವಣೆಗಳನ್ನು ಗಮನಿಸಿದವು ಗಳಾಗಿರುತ್ತವೆ. ಅಂದರೆ ಭಾಷೆಯಲ್ಲಿರುವ ಈ ಬದಲಾವಣೆಗಳು ಸಾಮಾನ್ಯ ಭಾಷಿಕರ ಗಮನಕ್ಕೆ ಬರುತ್ತದೆ ಎಂದಾಯಿತು. ಹೀಗೆ ಕಾಲದಿಂದ ಕಾಲಕ್ಕೆ, ಪಂಗಡದಿಂದ ಪಂಗಡಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಕಾಣಿಸಿಕೊಳ್ಳುವ ಬದಲಾವಣೆಯನ್ನು ಭಾಷಾ ಬದಲಾವಣೆ ಎಂದು ಕರೆಯಲಾಗುತ್ತದೆ.

ಭಾಷಾ ಬದಲಾವಣೆಗಳು ಹೇಗೆ ಆಗುತ್ತವೆ?

ಬಹುತೇಕ ಭಾಷೆಗಳಿಗೆ ಭಾಷೆಯ ಎರಡು ರೂಪಗಳಿರುತ್ತವೆ. 1. ಬರಹದ ಭಾಷೆ 2. ಆಡುಮಾತಿನ ಭಾಷೆ. ಆಡುಮಾತಿನಲ್ಲಿ ಬದಲಾವಣೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಹಾಗೆ ಬರಹದ ಭಾಷೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆಡುಭಾಷೆ ಹಾಗೂ ಬರಹದ ಭಾಷೆಗಳ ನಡುವೆ ಅಂತರ ಹೆಚ್ಚಾದಾಗ ಅವು ಭಿನ್ನ ಭಾಷೆಗಳಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳೂ ಉಂಟು. ಆಡುಮಾತನ್ನು ಭಾಷಿಕರು ಕಲಿಯುವ ಮತ್ತು ಬಳಸುವ ಹಂತಗಳಲ್ಲಿ ಬದಲಾವಣೆಗೆ ಒಳಗಾಗುತ್ತಿರುತ್ತದೆ. ಭಾಷಾ ವ್ಯತ್ಯಾಸಗಳಾಗಲು ಇರುವ ಪ್ರಮುಖ ಕಾರಣ ವೆಂದರೆ ಒಂದು ಭಾಷೆಯನ್ನು ಬಳಸುವ ಜನ ಪರಸ್ಪರ ದೂರವಾದ ಹಾಗೆ ಭಾಷೆಯಲ್ಲಿ ಬದಲಾವಣೆಗಳಾಗುತ್ತಿರುತ್ತವೆ. ಪರಸ್ಪರ ದೂರವಾದ ಜನ ದೀರ್ಘಕಾಲದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದ್ದು ತಮ್ಮ ಸಮಸ್ಯೆಗಳನ್ನು ಪರಿಹಾರಮಾಡಿಕೊಳ್ಳಲು ಭಾಷೆಯಲ್ಲಿ ಹಲವಾರು ರೀತಿಯ ವ್ಯತ್ಯಾಸಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ರೀತಿ ಉಂಟಾಗುವ ವ್ಯತ್ಯಾಸಗಳು ಒಂದು ಭಾಷೆಯ ಉಪಭಾಷೆಗಳು ಎನ್ನಿಸಿಕೊಳ್ಳಬಹುದು. ಇಲ್ಲವೇ ಮೂಲಭಾಷೆಯಿಂದ ಕವಲೊಡೆದ ಸಹೋದರಿ ಭಾಷೆಗಳು ಎನ್ನಿಸಿಕೊಳ್ಳಬಹುದು. ಒಂದೇ ಪಂಗಡದ ಅಥವಾ ಜಾತಿಯ ಜನ ಪರಸ್ಪರ ದೂರವಾದ ಹಾಗೆ ಉಂಟಾಗುವ ಬದಲಾವಣೆಗಳನ್ನು ಸಾಮಾಜಿಕ ಬದಲಾವಣೆಗಳೆಂದೂ, ಪ್ರಾದೇಶಿಕವಾಗಿ ಉಂಟಾದ ಬದಲಾವಣೆಗಳನ್ನು ಪ್ರಾದೇಶಿಕ ಬದಲಾವಣೆಗಳು ಅಥವಾ ಉಪಭಾಷೆಗಳು ಎಂದೂ, ಕಾಲದ ಅಂತರದಲ್ಲಿ ಉಂಟಾದ ಬದಲಾವಣೆಗಳನ್ನು ಚಾರಿತ್ರಿಕ ಬದಲಾವಣೆಗಳೆಂದೂ ಕರೆಯಬಹುದು.

ಒಂದು ನಿರ್ದಿಷ್ಟ ಭಾಷೆಯನ್ನು ಬಳಸುತ್ತಿರುವ ಭಾಷಿಕರು ಒಂದು ಸಲ ಮಾತನಾಡಿದ ಹಾಗೆ ಇನ್ನೊಂದು ಸಲ ಮಾತನಾಡುವುದಿಲ್ಲ. ಸಮುದಾಯದ ಜೊತೆ ಭಾಷಿಕರು ಬೆರೆಯುವುದು ಹೆಚ್ಚಾದ ಹಾಗೆ ಮತ್ತು ಅವರ ಜೀವನದ ಕ್ಷೇತ್ರಗಳು ಬದಲಾದ ಹಾಗೆ ಭಾಷೆಯಲ್ಲಿ ವೈಯಕ್ತಿಕವಾಗಿ ಹಾಗೂ ಸಮಾಜಿಕವಾಗಿ ಬದಲಾವಣೆಗಳಾಗುತ್ತಿರುತ್ತವೆ. ಭಾಷಿಕರು ಹೊಸ ಪದ ಗಳನ್ನೋ, ಉಚ್ಚಾರಣೆಯನ್ನೋ ಕಲಿಯುತ್ತಾ ಹೋಗುತ್ತಾರೆ. ಕೆಲವು ಸಂದರ್ಭಗಳಲ್ಲಿ ಪದಗಳನ್ನೋ, ಧ್ವನಿಗಳನ್ನೋ ಭಾಷಿಕರು ಆಕಸ್ಮಿಕವಾಗಿ ಬಳಸಬಹುದು. ಭಾಷಿಕನೊಬ್ಬನಲ್ಲಿ ಉಂಟಾಗುವ ಈ ಬದಲಾವಣೆಗಳು ಭಾಷೆಯಲ್ಲಿ ಮತ್ತೆ ಮತ್ತೆ ಬಳಕೆಯಾದಾಗ ಮತ್ತು ಭಾಷಾ ಸಮುದಾಯ ವೊಂದು ಈ ಬದಲಾವಣೆಯನ್ನು ಒಪ್ಪಿಕೊಂಡಾಗ ಭಾಷಾ ವ್ಯತ್ಯಾಸಗಳಾಗುತ್ತವೆ. ಒಂದು ಭಾಷಾ ಸಮುದಾಯದ ಎಲ್ಲರಲ್ಲಿ ನಡೆದ ವ್ಯತ್ಯಾಸದ ಮೊತ್ತವನ್ನು ಭಾಷಾವ್ಯತ್ಯಾಸವೆಂದು ಕರೆಯಲಾಗುತ್ತದೆ. ಬದಲಾವಣೆಗಳು ನಡೆಯುತ್ತ ವಾದರೂ ಸಮಾಜ ಇವನ್ನು ತಕ್ಷಣ ಸ್ವೀಕರಿಸುತ್ತದೆಯೇ ಎಂದರೆ ಇಲ್ಲ ಎಂಬುದೇ ಉತ್ತರ. ಅದರಲ್ಲೂ ಬರಹದ ಭಾಷೆ ಇದನ್ನು ಒಪ್ಪಿಕೊಳ್ಳ ಬೇಕಾದರೆ, ಸಾಕಷ್ಟು ಸಮಯವೆ ಬೇಕಾಗುತ್ತದೆ. ಭಾಷಾ ಬದಲಾವಣೆಗಳಿಗೆ ವಯಸ್ಕರಿಗಿಂತ ಯುವಕರೇ ಹೆಚ್ಚು ಕಾರಣರಾಗಿರುತ್ತಾರೆ. ಭಾಷಾ ವ್ಯತ್ಯಾಸವು ಚಾರಿತ್ರಿಕವಾಗಿರಬಹುದು. ಎಲ್ಲವೂ ನಿಯಮಬದ್ಧವಾಗಿರುತ್ತದೆ ಮತ್ತು ನಿಶ್ಚಿತವಾದ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಭಾಷಾ ವ್ಯತ್ಯಾಸಗಳಲ್ಲಿ ನಿರ್ದಿಷ್ಟ ಭಾಷೆಯ ಬರಹ ಹಾಗೂ ಉಚ್ಚಾರಣೆಗೆ ಸಂಬಂಧಿಸಿದ ಹಾಗೆಯೂ ವ್ಯತ್ಯಾಸಗಳಿರಬಹುದು. ಉದಾಹರಣೆ ಕನ್ನಡ ಭಾಷೆಯಲ್ಲಿ ಮಹಾಪ್ರಾಣಗಳು, ‘ಋ’ ಕಾರ ಶ, ಷ ಗಳ ನಡುವಿನ ಗೊಂದಲ ಬರವಣಿಗೆಯಲ್ಲೂ ಕಾಣಿಸಿಕೊಳ್ಳುತ್ತದೆ. ಈ ಗೊಂದಲಗಳು ಕ್ರಮೇಣ ಭಾಷಾವ್ಯತ್ಯಾಸಕ್ಕೆ ಕಾರಣವಾಗಬಹುದು. ಹಾಗೆಯೇ ಇಂಗ್ಲಿಶಿನ Coffee, Zeebra, X-mas ಮೊದಲಾದ ಪದಗಳ ಉಚ್ಚಾರಣೆಗೆ ಹಾಗೂ ಬರವಣಿಗೆಯಲ್ಲಿ ವ್ಯತ್ಯಾಸಗಳಿದ್ದು ಇತ್ತೀಚಿನ ಬರಹಗಳಲ್ಲಿ ಉಚ್ಚರಿಸುವ ಹಾಗೆಯೇ ಬರೆಯುತ್ತಿರುವುದನ್ನು ಕಾಣಬಹುದಾಗಿದೆ Kaffee, U ಮೊದಲಾದವು. ಹಿಂದೆ ಬರಹವನ್ನು ಕೆಲವೇ ಮಂದಿ ಬಳಸುತ್ತಿದ್ದಾಗ ಈ ಗೊಂದಲಗಳು ಇರಲಿಲ್ಲ. ಈಗ ಬರೆಯುವವರ ಸಂಖ್ಯೆ ಹೆಚ್ಚಾದಷ್ಟು ಬದಲಾವಣೆಯ ಗೊಂದಲಗಳು ಹೆಚ್ಚಾಗುತ್ತಿವೆ.

ಭಾಷೆಯಲ್ಲಾಗುವ ವ್ಯತ್ಯಾಸಗಳನ್ನು ಹೇಗೆ ಗುರುತಿಸಬಹುದು

19ನೇ ಶತಮಾನದಲ್ಲಿ ಭಾಷಾವಿಜ್ಞಾನಿಗಳು ಭಾಷೆಗಳನ್ನು ಪರಸ್ಪರ ಹೋಲಿಸುವುದರ ಮೂಲಕ ಭಾಷೆಯಲ್ಲಿ ಆಗಿರುವ ವ್ಯತ್ಯಾಸಗಳನ್ನು ತೋರಿಸಿಕೊಟ್ಟರು. ಎರಡು ಬೇರೆ ಬೇರೆ ಕಾಲಗಳಿಗೆ ಸೇರಿದ ಬರವಣಿಗೆಯ ಸಾಮಗ್ರಿಗಳನ್ನು ಹೋಲಿಸುವುದರ ಮೂಲಕ ಭಾಷೆಯಲ್ಲಾಗಿರುವ ಬದಲಾವಣೆಗಳನ್ನು ಗುರುತಿಸಬಹುದು. ಬೇರೆ ಬೇರೆ ಕಾಲಘಟ್ಟದಲ್ಲಿ ಜೀವಿಸಿದ ವ್ಯಕ್ತಿಗಳು ಆ ಕಾಲದ ಭಾಷೆಯನ್ನು ಶಾಸನ ಇಲ್ಲವೇ ಸಾಹಿತ್ಯ ಕೃತಿಗಳ ಮೂಲಕ ಬರೆದಿಟ್ಟಿದ್ದರೆ ಅವುಗಳ ಆಧಾರದ ಮೇಲೆ ಭಾಷೆ ಹೇಗಿತ್ತು ಎಂಬುದನ್ನು ಗುರುತಿಸಲಾಗುತ್ತದೆ. ಭೌಗೋಳಿಕವಾಗಿ ಹತ್ತಿರವಿರುವ ಉಪಭಾಷೆ ಯನ್ನು ಮತ್ತು ಒಂದಕ್ಕೊಂದು ಹೋಲಿಕೆಯಿರುವ ಭಾಷೆಗಳನ್ನು ಹೋಲಿಸುವುದ ರಿಂದಲೂ ಭಾಷಾ ಬದಲಾವಣೆಗಳನ್ನು ಗುರುತಿಸಬಹುದು.

ಈ ರೀತಿ ಹೋಲಿಕೆಯನ್ನು ಮಾಡಿ ವ್ಯತ್ಯಾಸಗಳನ್ನು ಗುರುತಿಸುವಾಗ, ಭಾಷೆಯ ಯಾವ ಲಕ್ಷಣಗಳು ಬದಲಾಗಿವೆ, ಯಾವಾಗ ಬದಲಾಗಿರಬಹುದು ಹೇಗೆ ಬದಲಾಗಿರಬಹುದು ಎಂದು ಅಧ್ಯಯನ ಮಾಡಲಾಗುತ್ತದೆ. ಇತ್ತೀಚಿಗಿನ ಅಧ್ಯಯನಗಳು ಏಕೆ ಎಂಬುದರ ಕಡೆಗೂ ಗಮನಹರಿಸುತ್ತಿವೆ. ಈಗಾಗಲೇ ಆಗಿರುವ ಭಾಷಾ ವ್ಯತ್ಯಾಸಗಳನ್ನು ಗುರುತಿಸಬಹುದೇ ಹೊರತು ವ್ಯತ್ಯಾಸಕ್ಕೆ ಭವಿಷ್ಯವನ್ನು ನುಡಿಯುವುದು ಸಾಧ್ಯವಿಲ್ಲ.

ಭಾಷಾ ವ್ಯತ್ಯಾಸ  

ಗ್ರಿಮ್ ನಿಯಮ

ಮೂಲ ಇಂಡೋಯುರೋಪಿಯನ್ ಧ್ವನಿಗಳು ಜರ್ಮಾನಿಕ್ ಭಾಷೆಗಳಲ್ಲಿ ಯಾವ ಬಗೆಯಲ್ಲಿ ಬದಲಾದವು ಎಂಬುದನ್ನು ನಿಯಮ ವಿವರಿಸುತ್ತದೆ.

ಅ. ಘೋಷ ಮಹಾಪ್ರಾಣಗಳು ಘೋಷ ಅಲ್ಪಪ್ರಾಣಗಳಾದವು
bh b
ಆ. ಘೋಷ ಅಲ್ಪಪ್ರಾಣ ಅಘೋಷ ಅಲ್ಪಪ್ರಾಣಗಳಾದವು
B p
ಇ. ಅಘೋಷ ಅಲ್ಪಪ್ರಾಣಗಳು ಘೋಷ ಅಲ್ಪಪ್ರಾಣಗಳಾದವು
p V

 

ಮೂಲ ಪದ ಪಟ್ಟಿ
ನಾನು ಎಲೆ ಮೊಲೆ ಮಳೆ
ನೀನು ಬೇರು ಎದೆ ಕಲ್ಲು
ನಾವು ತೊಗಟೆ ಪಿತ್ತಕೋಶ ಮರಳು
ಇದು ಮಾಂಸ ಕುಡಿ ಭೂಮಿ
ಅದು ಚರ್ಮ ತಿನ್ನು ಮೋಡ
ಯಾರು ರಕ್ತ ಕಚ್ಚು ಹೊಗೆ
ಏನು ಮೊಳೆ ನೋಡು ಬೆಂಕಿ
ಅಲ್ಲ ಜಿಡ್ಡು ಕೇಳು ಬೂದಿ
ಎಲ್ಲ ಮೊಟ್ಟೆ ತಿಳಿ ಸುಡು
ತುಂಬ ಕೋಡು ನಿದ್ರಿಸು ದಾರಿ
ಒಂದು ಬಾಲ ಸಾಯಿ ಬೆಟ್ಟ
ಎರಡು ಗರಿ ಪುಕ್ಕ ಕೊಲ್ಲು ಕೆಂಪು
ದೊಡ್ಡ ಕೂದಲು ಈಜು ಹಸಿರು
ಉದ್ದ ತಲೆ ಹಾರು ಹಳದಿ
ಚಿಕ್ಕ ಕಿವಿ ನಡೆ ಬಿಳಿ
ಹೆಣ್ಣು ಕಣ್ಣು ಬಾ ಕಪ್ಪು
ಗಂಡು ಮೂಗು ಬೀಳು ರಾತ್ರಿ
ಆಳು ಬಾಯಿ ಕೂರು ಬಿಸಿ
ಮೀನು ಹಲ್ಲು ನಿಲ್ಲು ತಣ್ಣಗೆ
ಹಕ್ಕಿ ನಾಲಿಗೆ ಕೊಡು ಪೂರ್ತಿ
ನಾಯಿ ದೊಕ್ಕು ಹೇಳು ಹೊಸ
ಹೇನು ಪಾದ ಸೂರ್ಯ ಒಳ್ಳೆಯ
ಮರ ಮಂಡಿ ಚಂದ್ರ ಗುಂಡು
ಬೀಜ ಕೈ ನಕ್ಷತ್ರ ಒಣ
ಕತ್ತು ಹೊಟ್ಟೆ ನೀರು ಹೆಸರು

ಭಾಷೆಯ ಯಾವ ಅಂಶಗಳು ಬದಲಾವಣೆಗೆ ಒಳಾಗಾಗುತ್ತವೆ

ಭಾಷೆ ಬದಲಾಗುತ್ತದೆ ಎಂದಾಗ ಭಾಷೆಯಲ್ಲಿನ ಏನು ಬದಲಾಗುತ್ತದೆ ಎಂಬುದು ಪ್ರಶ್ನೆ 1. ಭಾಷೆಯಲ್ಲಿನ ಶಬ್ದಗಳ ಉಚ್ಚಾರಣೆಯಲ್ಲಿ ಬದಲಾವಣೆಗಳಾಗಬಹುದು. 2. ಕೆಲವು ರೂಢಿಯಿಂದ ಬಿದ್ದು ಹೋಗ ಬಹುದು. 3. ಹೊಸ ಹೊಸ ಶಬ್ದಗಳನ್ನು ನಿರ್ಮಾಣ ಮಾಡಿಕೊಳ್ಳಬಹುದು 4. ನೆರೆಹೊರೆಯ ಭಾಷೆಯಿಂದಲೂ ಬಂದು ಸೇರಿಸಿಕೊಳ್ಳಬಹುದು. ಒಟ್ಟಾರೆಯಾಗಿ ಭಾಷೆಯಲ್ಲಿನ ಎಲ್ಲ ಅಂಶಗಳೂ ಬದಲಾವಣೆಗೆ ಒಳಗಾಗು ತ್ತವೆ. ಮುಖ್ಯವಾಗಿ ಭಾಷೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುವುದು ಅದರ ಉಚ್ಚಾರಣೆ ಮತ್ತು ಶಬ್ದಗಳಲ್ಲಿ, ಬದಲಾವಣೆಯಾದ ಈ ಎರಡೂ  ವಿಧಾನ ಗಮನಕ್ಕೆ ಬರುತ್ತದೆ. ಭಾಷೆಯಲ್ಲಿ ಉಂಟಾದ ಈ ಬದಲಾವಣೆಯನ್ನು ಧ್ವನಿಬದಲಾವಣೆ, ಅರ್ಥಬದಲಾವಣೆ ವ್ಯಾಕರಣ ಬದಲಾವಣೆ ಎಂದೂ ವಿಂಗಡಿಸಬಹುದು.

ಹೀಗೆ ಬೇರೆ ಬೇರೆ ರೀತಿಗಳಲ್ಲಿ ಉಂಟಾದ ಬದಲಾವಣೆಗಳು ಒಂದು ಪ್ರದೇಶದಲ್ಲಿ ನಡೆದ ಹಾಗೆ ಇನ್ನೊಂದು ಪ್ರದೇಶದಲ್ಲಿ ಒಂದು ಜಾತಿಯಲ್ಲಿ ನಡೆದ ಹಾಗೆ ಇನ್ನೊಂದು ಪಂಗಡದಲ್ಲಿ ನಡೆಯುವುದಿಲ್ಲ. ಇದು ಪ್ರದೇಶ ದಿಂದ ಪ್ರದೇಶಕ್ಕೆ ಜಾತಿಯಿಂದ ಜಾತಿಗೆ ಭಿನ್ನವಾಗಿರುತ್ತದೆ.

ಭಾಷೆ ಏಕೆ ಬದಲಾಗುತ್ತದೆ?

ಭಾಷೆ ವ್ಯತ್ಯಾಸವಾಗುತ್ತದೆ ಎಂದ ಮೇಲೆ ವ್ಯತ್ಯಾಸವಾಗಲು ಕಾರಣವೇನು? ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳು ಭಾಷಾ ವ್ಯತ್ಯಾಸಕ್ಕೆ ಹಲವಾರು ಕಾರಣಗಳಿವೆ ಎಂಬುದನ್ನು ತೋರಿಸಿಕೊಟ್ಟಿವೆ. ಸ್ಥೂಲವಾಗಿ ಭಾಷೆಯ ಹೊರಗಿನ ಕಾರಣಗಳು ಭಾಷೆಯ ಒಳಗಿನ ಕಾರಣಗಳು ಎಂದು ವಿಂಗಡಿಸ ಬಹುದು.

ಭಾಷೆಯ ಹೊರಗಿನ ಕಾರಣಗಳು

ಭೌಗೋಳಿಕ ಕಾರಣಗಳು: ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದಾಗ ಒಂದು ಪ್ರದೇಶದ ಭಾಷೆ ಇನ್ನೊಂದು ಪ್ರದೇಶದ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ. ಏಕೆಂದರೆ, ಎರಡೂ ಗುಂಪುಗಳೂ ಬೇರೆ ಬೇರೆ ಅನುಭವ ಹಾಗೂ ಆಲೋಚನೆಗಳನ್ನು ಹೊಂದಿರುತ್ತವೆ. ಎರಡೂ ಭಾಷೆಗಳ ಅನುಭವಗಳೂ ಆಲೋಚನೆಗಳೂ ಒಂದು ಹಂತದಲ್ಲಿ ಧ್ವನಿ ಹಾಗೂ ಶಬ್ದಕೋಶದ ಬದಲಾವಣೆಗೆ ಕಾರಣಗಳಾಗುತ್ತವೆ. ವೃತ್ತಿಗಳು ಪರಸ್ಪರ ಸಂಪರ್ಕಕಕ್ಕೆ ಬಂದಾಗ ಭಾಷೆಯೂ ಒಂದರ ಜೊತೆ ಇನ್ನೊಂದು ಬೆರೆಯುತ್ತದೆ. ಒಂದು ಭಾಷೆಯ ಧ್ವನಿ, ವ್ಯಾಕರಣ ಮತ್ತು ಶಬ್ದಕೋಶ ಇವುಗಳು ಒಂದರ ಮೇಲೆ ಇನ್ನೊಂದು ಪ್ರಭಾವವನ್ನು ಬೀರುತ್ತವೆ. ಇತ್ತೀಚೆಗೆ ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಚಲಿಸುವುದು ಹೆಚ್ಚು ಸುಲಭವಾಗಿರುವುದರಿಂದ ಈ ವ್ಯತ್ಯಾಸಗಳು ಹೆಚ್ಚಾಗುತ್ತಿವೆ. ಒಂದು ಭಾಷೆಯ ಪ್ರಭಾವ ಇನ್ನೊಂದು ಭಾಷೆಯ ಮೇಲೆ ಆಗಿರುವುದಕ್ಕೆ ಉದಾಹರಣೆಯಾಗಿ ಮಕ್ಕಳು ಆಡುವ ಕುಂಟೇಬಿಲ್ಲೆ, ಎನ್ನುವ ಆಟವನ್ನು ಗಮನಿಸಬಹುದು. ಈ ಆಟವನ್ನು ಆಡುವಾಗ ಮಕ್ಕಳು ತಾವು ನಿಂತು ಸುಧಾರಿಸಿಕೊಳ್ಳಬೇಕಾದರೆ ಟೈಂಪ್ಲೀಸ್ ಎಂದೂ, ಆಟದ ಇನ್ನೊಂದು ಹಂತದಲ್ಲಿ ಕಣ್ಣುಮುಚ್ಚಿಕೊಂಡು ಮನೆಗಳನ್ನು ದಾಟಬೇಕಾದ ಸಂದರ್ಭದಲ್ಲಿ ಆ್ಯಂ ಐರೈಟ್ ಎಂದೂ ಗೆದ್ದ ಮನೆಯನ್ನು ಪಾಂಡಿಮನೆ ಎಂದೂ ಆಡಲು ಬಳಸುವ ಚಪ್ಪಟೆಯಾದ ಕಲ್ಲನ್ನು ಬಚ್ಚ ಎಂದೂ ಕರೆಯುತ್ತಾರೆ. ಇದು ಇಂಗ್ಲಿಶ್ ಹಾಗೂ ಇತರ ಭಾಷೆಗಳ ಜನ ಇಲ್ಲಿ ನೆಲೆಸಿದ್ದರಿಂದ ಆಟ ವೊಂದರಲ್ಲಿ ಸೇರ್ಪಡೆಯಾಗಿರುವ ಪದಗಳಾಗಿವೆ.

ಭೌಗೋಳಿಕ ಅಂಶಗಳು ಭಾರತದಂತಹ ದೇಶದಲ್ಲಿ ದ್ವಿಭಾಗಾವಲಯ ವನ್ನು ಕೂಡಾ ಉಂಟು ಮಾಡುತ್ತದೆ. ಈ ರೀತಿ ದ್ವಿಭಾಷಾವಲಯವಿದ್ದಾಗ ಬಹುಸಂಖ್ಯಾತ ಅಥವಾ ಪ್ರಭಾವಿ ಭಾಷೆ ಅಲ್ಪಸಂಖ್ಯಾತ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ. ಬೆಂಗಳೂರಿನಲ್ಲಿ ವಾಸಿಸುವ ತಮಿಳು ಭಾಷಿಕರು, ನಾಡಿದ್ದು ಎನ್ನಲು ನಾಳಿನ್ನಣ್ಣಿಕ್ಕಿ ಎಂದೂ, ಬಟ್ಟೆಯನ್ನು ಒಣಗಿಸು ಎಂಬಲ್ಲಿ ಒಣತ್ತು ಎಂದೂ, ಬಳಸುತ್ತಾರೆ. ತಮಿಳಿನಲ್ಲಿ ಈ ಪದಗಳಿಗೆ ಕ್ರಮವಾಗಿ ನಾೞಮರುನಾಳ್, ‘ಅರಪೋಡು’ ಎಂಬ ಪದಗಳಿದ್ದು ಈ ವ್ಯತ್ಯಾಸವು ಕನ್ನಡದ ‘ನಾಡಿದ್ದು’ ‘ಒಣಗಿಸು’ ಎಂಬುದರಿಂದ ಬಂದದ್ದಾಗಿದೆ. ಅದೇ ರೀತಿ ಕನ್ನಡವನ್ನು ಮಾತನಾಡುವಾಗ ಅವರನ್ನು ಕರಿ ಎಂದು ಹೇಳಬೇಕಾದ ಸಂದರ್ಭದಲ್ಲಿ ‘ಕೂಗು’ ಎಂದು ಬಳಸುತ್ತಾರೆ. ತಮಿಳಿನ ‘ಕೂಪ್ಪಿಡು’ಗೆ ಸಂವಾದಿಯೂ ಬಳಕೆಯಾಗುತ್ತಿದೆ.

2. ಸಾಮಾಜಿಕ ಪ್ರತಿಷ್ಠೆ

ವ್ಯಕ್ತಿಗಳು ಸಮಾಜದಲ್ಲಿ ತಾವು ಗುರುತಿಸುವ ಅಥವಾ ಆರಾಧಿಸುವ ವ್ಯಕತಿಗಳ ರೀತಿ ಮಾತನಾಡಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ ಸಿನಿಮಾ ನಟರು, ರಾಜಕೀಯ ನಾಯಕರು, ಕವಿಗಳು ಮೊದಲಾದವರು. ಈ ರೀತಿ ಮಾತನಾಡುವಾಗ ತಾವು ಸಾಮಾಜಿಕವಾಗಿ ಪ್ರತಿಷ್ಠೆಯ ಸ್ಥಾನದಲ್ಲಿರುವುದಾಗಿ ಭಾವಿಸುತ್ತಾರೆ. ಸಾಮಾಜಿಕವಾಗಿ ಮೇಲುದರ್ಜೆಯಲ್ಲಿರುವ ರಾಜಕೀಯ ನಾಯಕರುಗಳು ವಿಶಿಷ್ಠವಾದೊಂದು ಭಾಷಾಶೈಲಿಯನ್ನು ಹಾಗೂ ಭಾಷೆಯನ್ನು ರೂಢಿಸಿಕೊಂಡಿರುತ್ತಾರೆ. ನಾನು ಎಂಬ ಏಕವಚನವು ‘ನಾವು’ ಎಂಬ ಗೌರವ ಸಂಬೋಧನೆಯಾಗುತ್ತದೆ. ಅಂತಕ್ಕಂತಹ, ಮಾಡ್ತಕ್ಕಂತಹ ಎಂಬಂತಹ ಪದಗಳು ಹಾಗೂ ಕರ್ಮಣಿ ಪ್ರಯೋಗದ ಬಳಕೆ ಇವರ ಭಾಷೆಯಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳವುದನ್ನು ಗಮನಿಸಬಹುದು. ಇದರ ಜೊತೆಗೆ ಕೆಳವರ್ಗದ ಜನ ಮೇಲು ವರ್ಗದ ಜನರ ಭಾಷೆಯನ್ನು ಅನುಕರಿಸುವುದೂ ಕೂಡ ಸಾಮಾಜಿಕ ಪ್ರತಿಷ್ಠೆಯ ಫಲವಾಗಿ ಬಂದದ್ದೇ ಆಗಿದೆ. ಹಳ್ಳಿಯವರು ವಸಿ, ಇಕ್ಕು ಏಟು ಎಂಬ ಪದಗಳನ್ನು ಪಟ್ಟಣಿಗರು ಸ್ವಲ್ಪ, ಇಡು, ಎಷ್ಟು ಎಂದು ಬಳಸುತ್ತಾರೆ. ಇದನ್ನೇ ಹಳ್ಳಿಗಳೂ ಅನುಕರಿಸಲು ಪ್ರಯತ್ನಿಸುತ್ತಾರೆ. ಈಗ ಇಂಗ್ಲಿಶಿನ ಪ್ರಭಾವದಿಂದಾಗಿ ಹೆಚ್ಚು ಹೆಚ್ಚು ಪದಗಳನ್ನು ಆಂಗೀಕೃತಗೊಳಿಸಿ ಮಾತನಾಡು ವುದನ್ನು ಗಮನಿಸಬಹುದು. ಕನ್ನಡದ ರವೆ, ದೋಸೆ, ವಡೆ ಎಂಬ ಪದಗಳು ಹೋಟೆಲುಗಳ ‘ಮೆನು’ಗಳಲ್ಲಿ ಹಾಗೂ ಇಂಗ್ಲಿಶಿನ ವ್ಯಾಮೋಹವಿರುವ ಜನತೆಯಲ್ಲಿ  ‘ಎ’ಕಾರವನ್ನು ಕಳೆದುಕೊಂಡು, ರವಾ, ದೋಸಾ, ವಡಾ ಎಂದು ‘ಆ’ ಕಾರವನ್ನು ಪಡೆಯುವುದನ್ನು ಕಾಣಬಹುದಾಗಿದೆ. ಭಾಷಾ ವ್ಯತ್ಯಾಸಗಳು ಹೆಚ್ಚಾಗಿ ಈ ಸಾಮಾಜಿಕ ಪ್ರತಿಷ್ಠೆಯಿಂದಲೇ ಉಂಟಾಗುತ್ತಿದೆ ಎಂಬುದನ್ನು ಸಾಮಾಜಿಕ ಭಾಷಾ ಅಧಯಯನಗಳು ತೋರಿಸಿಕೊಟ್ಟಿವೆ.

ಮನೆಯ ಕೆಲಸಕ್ಕೆ ಬರುವ ಕೆಲಸದ ಆಳುಗಳು ತಾವು ಕೆಲಸ ಮಾಡುತ್ತಿದ್ದ ಮನೆಯ ಯಜಮಾನಿಯನ್ನು ಅಕ್ಕ ಎಂದೋ ಅಮ್ಮ ಎಂದೋ ಕರೆಯುತ್ತಿದ್ದುದು ಹೋಗಿ ಈಗ ಆಂಟಿ ಎಂದೂ ‘ಮೇಡಮ್’ ಎಂದೂ ಅದೇ ರೀತಿ ಮನೆಯ ಯಜಮಾನವನ್ನು ಅಣ್ಣ, ಎಂದು ಕರೆಯುತ್ತಿದ್ದರು ಈಗ ‘ಸಾರ್’ ಆಗಿರುವುದನ್ನು ಈ ನೆಲೆಯಲ್ಲೇ ಗುರುತಿಸಬಹುದು. ಶಾಲೆ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಉಪಾಧ್ಯಾಯರನ್ನು ಟೀಚರ್, ಮಿಸ್ ಎಂದು ಕರೆಯುತ್ತಿದ್ದುದು ಈಗ ಎಲ್ಲರ ಬಾಯಲ್ಲೂ ಅದು ‘ಮ್ಯಾಮ್’ ಆಗಿ ಪರಿವರ್ತನೆಯಾಗಿದೆ.

ಭಾಷೆಯ ಒಳಗಿನ ಕಾರಣಗಳು

ಭಾಷಾ ಬದಲಾವಣೆಗೆ ಭಾಷೆಯೂ ತಾನೇ ತಾನಾಗಿ ಕಾರಣವಾಗುತ್ತದೆ.

1. ಉಚ್ಚಾರಣೆಯ ಸೌಲಭ್ಯ : ಭಾಷಿಕರು ಭಾಷೆಯನ್ನು ಎಷ್ಟು ಸಾಧ್ಯವೋ ಅಷ್ಟು ಮೊಟಕುಗೊಳಿಸಿ ಮಾತನಾಡಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ ಬರುತ್ತೇನೆ, ಬತ್ತೇನೆ, ಬತ್ತೀನಿ ಎಂದೂ, ಮಲಗು ಮಕ್ಕೋ ಎಂದೂ ಧ್ವನಿಗಳು ಮತ್ತು ಧ್ವನಿರಚನೆಗಳೂ ಕ್ರಮೇಣ ಭಾಷೆಯಲ್ಲಿ ಸರಳವಾಗುತ್ತಾ ಹೋಗುತ್ತದೆ. ಉಚ್ಚಾರಣೆಯ ಸೌಲಭ್ಯಕ್ಕಾಗಿ ಭಾಷೆಯಲ್ಲಿ ಬದಲಾವಣೆಗಳಾಗುವುದನ್ನು ಕಾಣಬಹುದು.

2. ಸಾದೃಶ್ಯ : ಒಂದು ಭಾಷೆಯಲ್ಲಿ ವ್ಯಾಕರಣವು ಕ್ರಮಪಾತ ನಿಯಮಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ಅಪವಾದಗಳು ಕೂಡ ಇರಬಹುದು. ಆದರೆ ಈ ಕ್ರಮವಾದ ನಿಯಮ ಕ್ರಮವಲ್ಲದ ನಿಯಮಗಳ ಮೇಲೆ ಪ್ರಭಾವ ಬೀರುವುದರಿಂದ ಭಾಷಾವ್ಯತ್ಯಾಸಗಳಾಗುತ್ತವೆ. ಉದಾಹರಣೆಗೆ ಇಂಗ್ಲಿಶಿನ book ಎಂಬ ಪದದ ಬಹುವಚನ ರೂಪ ‘beek’ ಎಂದೂ cow ಎಂಬ ಪದದ ಬಹುವಚನ ರೂಪ Kine ಎಂದೂ ಆಗಬೇಕು. ಆದರೆ ಇಂಗ್ಲಿಶ್ ಭಾಷೆಯಲ್ಲಿ ಪದಗಳನ್ನು ಬಹುವಚನಗಳು ಮಾಡಲು s ಬಹುವಚನ ಪ್ರತ್ಯಯ ಸೇರಿಸಲಾಗುತ್ತದೆ. ಈ ಸಾದೃಶ್ಯದ ಆಧಾರದ ಮೇಲೆ books, cows ಎಂಬ ಬಹುವಚನ ಪದಗಳನ್ನು ರೂಪಿಸಿಕೊಳ್ಳಲಾಗಿದೆ.

ಭಾಷೆಯ ಬದಲಾವಣೆಯ ರೀತಿಗಳು

ಭಾಷೆಯಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳನ್ನು ಸಾಮಾನ್ಯವಾಗಿ ಒಂದು ಭಾಷೆಯ ಧ್ವನಿಯಲ್ಲಾಗುವ ಬದಲಾವಣೆಗಳು, ಅರ್ಥದಲ್ಲಾಗುವ ಬದಲಾವಣೆಗಳು ಮತ್ತು ವ್ಯಾಕರಣದಲ್ಲಾಗುವ ಬದಲಾವಣೆಗಳು ಎಂದು ವಿಂಗಡಿಸಬಹುದು.

1. ಧ್ವನಿವ್ಯತ್ಯಾಸ : ಒಂದು ಭಾಷೆಯ ಧ್ವನಿಗಳಲ್ಲಿ ನಡೆಯುವ ವ್ಯತ್ಯಾಸಗಳನ್ನು ಧ್ವನಿವ್ಯತ್ಯಾಸ ಎಂದು ಕರೆಯಲಾಗುತ್ತದೆ. ಪರಸ್ಪರ ಸಂಬಂಧವುಳ್ಳ ಎರಡು ಭಾಷೆಗಳನ್ನು ಮಾತನಾಡುವ ಇಬ್ಬರು ಭಾಷಿಕರನ್ನು ಗಮನಿಸಿದಾಗ ಒಂದೇ ಪದಕ್ಕೆ ಅವರಿಬ್ಬರೂ ಬೇರೆ ಬೇರೆ ಧ್ವನಿಗಳನ್ನು ಬಳಸಿದರೆ ಆ ಪದದಲ್ಲಿ ಧ್ವನಿವ್ಯತ್ಯಾಸವಾಗಿದೆ ಎಂದು ಗುರುತಿಸಲಾಗುತ್ತದೆ. ಧ್ವನಿವ್ಯತ್ಯಾಸಗಳನ್ನು ಮೊಟ್ಟಮೊದಲ ಬಾರಿಗೆ 1822ರಲ್ಲಿ ತನ್ನ ‘ಜರ್ಮನಿರ್ ಗ್ರಾಮರ್’ ಎಂಬ ಪುಸ್ತಕದಲ್ಲಿ ಜಾಕೋಬ್‌ಗ್ರಿಮ್ ಎಂಬುವವನು ಗುರುತಿಸುತ್ತಾನೆ. ಈಗಲೂ ಇವು ‘ಗ್ರೀಮ್ಸ್ ಲಾ’ ಎಂದೇ ಕರೆಸಿಕೊಳ್ಳುತ್ತಿದೆ. ಉದಾಹರಣೆಗೆ ಮೂಲ ದ್ರಾವಿಡದ ಪದಾದಿಯ ‘ಪ’ ಕಾರ ತಮಿಳು ತೆಲುಗುಗಳಲ್ಲಿ ‘ಪ’ ಕಾರವಾಗಿಯೇ ಉಳಿದಿದ್ದರೆ ಕನ್ನಡದಲ್ಲಿ ‘ಹ’ ಕಾರವಾಗಿದೆ.

ಕನ್ನಡ ತಮಿಳು ತೆಲುಗು
ಹಾಲು ಪಾಲ್ ಪಾಲು
ಹಾವು ಪಾಂಬು ಪಾವು
ಹಸಿವು ಪಸಿ ಪಸಿ

ಅದೇ ರೀತಿ ಮೂಲ ದ್ರಾವಿಡ ‘ಕ’ ಕಾರವು ಕನ್ನಡದಲ್ಲಿ ಯಾವ ವ್ಯತ್ಯಾಸವನ್ನೂ ಪಡೆದಿಲ್ಲ. ಆದರೆ ತೆಲುಗು ತಮಿಳು ಭಾಷೆಗಳಲ್ಲಿ ಕೇಲವು ಸ್ವರಗಳ ಮುಂದೆ ಇದು ಚ್ ಆಗಿ ಮಾರ್ಪಟ್ಟಿದೆ ಉದಾ:

ರಂಗ ಸಿದ್ಧಾಂತ  

ಧ್ವನಿ ಪರಿವರ್ತನೆಗಳು ಭಾಷಾ ಪ್ರದೇಶದ ಯಾವುದೇ ಒಂದು ಭಾಗದಲ್ಲಿ ಮೊದಲಾಗಿ ಅನಂತರ ಎಲ್ಲ ಕಡೆಗೂ ಹರಡುವುದನ್ನು ಅಲೆಗಳ ಚಲನೆಗೆ ಹೋಲಿಸಿದ್ದಾರೆ. ಬದಲಾವಣೆ ಮೊದಲಾದ ಭಾಗಕ್ಕೆ ಸಮೀಪವಾಗಿರುವ ಪ್ರದೇಶದಲ್ಲಿ ಅದು ತೀವ್ರ ಮತ್ತು ಪೂರ್ಣವಾಗಿರುತ್ತದೆ. ಆದರೆ ದೂರಸರಿದಂತೆ ಬದಲಾವಣೆಗಳ ಪರಿಣಾಮ ಕಡಿಮೆಯಾಗುತ್ತದೆ. ಯಾವುದೇ ಒಂದು ಭಾಗದ ಆಚೆಗೆ ಯಾವ ಪರಿಣಾಮ ಕೂಡ ಇರುವುದಿಲ್ಲ.

ಹೊಸಪದಗಳು ಕೆಲವೊಮ್ಮೆ ಬಂದಂತೆ ಮಾಯವಾಗುವುದೂ ಉಂಟು. ಸೋವಿಯತ್ ರಶಿಯಾ ವಿಘಟಿತವಾಗುವ ಮೊದಮೊದಲು ವರ್ಷಗಳಲ್ಲಿ ಪೆರಸ್ಟ್ರೋಯಿಕ್ ಮತ್ತು ಗ್ಲಾಸ್ನಾಟ್ ಎಂಬ ಪದಗಳು ಮಾಧ್ಯಮಗಳಲ್ಲಿ ಚರ್ಚೆಗಳಲ್ಲಿ ಬಳಕೆಯಾಗುತ್ತಿದ್ದವು. ಪದಗಳನ್ನು ಓದದ ಕೇಳದ ದಿನಗಳೇ ಇರುತ್ತಿರಲಿಲ್ಲವೆಂಬಂತೆ ಅವು ನುಗ್ಗಿ ಬಂದವು. ಅವು ಕೇವಲ ನೆನಪಾಗಿವೆ.

ಎಲ್ಲಿಂದ?

ಸಂಸ್ಕೃತ, ಪ್ರಾಕೃತ ಇಂಗ್ಲಿಶ್ ಭಾಷೆಗಳ ಸಾವಿರಾರು ಪದಗಳು ಕನ್ನಡದಲ್ಲಿವೆ. ಇವಲ್ಲದೆ ಇನ್ನೂ ಹಲವು ಭಾಷೆಗಳ ಪದಗಳು ಕೆಲವೊಮ್ಮೆ ಕನ್ನಡಕ್ಕೆ ಬಂದಿರುವುದುಂಟು.

ಭಾಷೆ ಪದ
ಪೋರ್ಚುಗೀಸ್ ಇಸ್ಪೇಟು
ಫ್ರೆಂಚ್ ಬೂರ್ಜ್ವಾ
ತುರ್ಕಿಸ್ ತುಬಾಕಿ
ಅರಾಬಿಕ್ ಅಸಲು

 

 

ಬದಲಾವಣೆಯ ಮಾದರಿಗಳು

1. ವಿಲಿಯಂ ಲೆಬೊವ್ ಎಂಬ ಭಾಷಾಶಾಸ್ತ್ರಜ್ಞ ಭಾಷಾ ವಿಕಲ್ಪಗಳನ್ನು ಸ್ವರೂಪವನ್ನು ಅರಿಯಲು ಒಂದು ಪ್ರಯೋಗವನ್ನು ಮಾಡಿದರು. ಅಮೆರಿಕನ್ನರಲ್ಲಿ ಕೆಲವು ಮುಖ್ಯವಾಗಿ ನ್ಯೂರ್ಯಾರ್ಕ್ ಪ್ರದೇಶದವರು ಇಂಗ್ಲಿಶ್ ಪದಗಳ ಕೊನೆಯಲ್ಲಿ ಅಥವಾ ನಡುವೆ r ಧ್ವನಿ ಇದ್ದರೆ ಅದನ್ನು ಉಚ್ಚರಿಸುತ್ತಿರಲಿಲ್ಲ. ಅಂಶವನ್ನು ಹಿಂದೆಯೇ ಗುರುತಿಸಲಾಗಿತ್ತು. ಇದು ಒಂದು ಮುಕ್ತಪ್ರಸಾರದಲ್ಲಿರುವ ಪರಿವರ್ತನೆಯೆಂದು ಭಾವಿಸಿದ್ದರು, ಎಂದರೆ ಯಾವಾಗ, ಎಲ್ಲಿ, ಯಾರು ಉಚ್ಚರಿಸುತ್ತಾರೆ ಅಥವಾ ಇಲ್ಲ ಎಂದು ಹೇಳಲು ನಿಯಮಗಳಿಲ್ಲವೆಂದು ತಿಳಿದಿದ್ದರು. ಲೆಬೊವ್ ತಿಳುವಳಿಕೆಯನ್ನು ಪರೀಕ್ಷಿಸಲು ನ್ಯೂಯಾಕ್ ಮೂರು ಬೇರೆಬೇರೆ ಅಂಗಡಿಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಿಸಿ ಉಚ್ಚಾರಣೆಯ ವಿಕಲ್ಪವು ನಿಯಮಬದ್ಧವಾಗಿದೆಯೆಂದು ತೋರಿಸಿದರು.

ಮೂರು ಅಂಗಡಿಗಳು ಸಾಮಾಜಿಕ ಶ್ರೇಣೀಕರಣಕ್ಕೆ ತಕ್ಕಂತಿದ್ದವು. ಶ್ರೀಮಂತರು ಹೋಗುವ ಅಂಗಡಿ, ಮಧ್ಯಮ ವರ್ಗದವರು ಹೋಗುವ ಅಂಗಡಿ ಮತ್ತು ಕೆಳವರ್ಗದವರು ಹೋಗುವ ಅಂಗಡಿ ಹೀಗೆ ಮೂರು. ಪ್ರಯೋಗದಲ್ಲಿ ಒಂದು ಪೂರ್ವನಿರ್ಧಾರವಿದೆ. ಅದರಂತೆ ಆಯಾ ಅಂಗಡಿಗಳಿಗೆ ಬರುವ ಜನರ ಉಚ್ಚಾರವನ್ನು ಆಯಾ ಅಂಗಡಿಗಳ ಮಾರಾಟಗಾರರ ಉಚ್ಚಾರ ಬಿಂಬಿಸುತ್ತದೆಯೆಂದು ತಿಳಿಯುವುದು ಅವಶ್ಯ. ಪ್ರಯೋಗದಲ್ಲಿ ಅಂಗಡಿಗಳಿಗೆ ಹೋಗಿ ಮಾರಾಟಗಾರರನ್ನು ಯಾವುದೋ ಒಂದು ವಸ್ತು ಅಂಗಡಿಯಲ್ಲಿ ಎಲ್ಲಿದೆ ಎಂದು ಕೇಳುತ್ತಿದ್ದರು. ವಸ್ತು ನಾಲ್ಕನೆಯ ಅಂತಸ್ತಿನಲ್ಲಿರುವುದು ಪ್ರಯೋಗಕಾರರಿಗೆ ತಿಳಿದಿತ್ತು. ಹೀಗಾಗಿ ನಿರೀಕ್ಷಿಸಿದ ಉತ್ತರ fourth ಎಂಬ ಪದ. ಮಾರಾಟಗಾರರು ಪದವನ್ನು ಉಚ್ಚರಿಸಿದ ಮೇಲೆ ಅದು ಕೇಳಿಸಲಿಲ್ಲವೆಂಬಂತೆ ಎಲ್ಲಿ?’ ಎಂಬರ್ಥದ ಪ್ರಶ್ನೆಯನ್ನು ಕೇಳುತ್ತಿದ್ದರು. ಮಾರಾಟಗಾರರು ಮತ್ತೊಮ್ಮೆ ಪದವನ್ನು ಎಚ್ಚರಿಕೆಯಿಂದ ಉಚ್ಚರಿಸುತ್ತಿದ್ದರು. ಇವೆಲ್ಲವನ್ನೂ ದಾಖಲು ಮಾಡಿಕೊಳ್ಳುತ್ತಿದ್ದರು.

ಮಾಹಿತಿ ವಿಶ್ಲೇಷಣೆಯಿಂದ ತಿಳಿದುಬಂದದ್ದು; ‘r’ ಕಾರವನ್ನು (ಪದಮಧ್ಯ ಅಥವಾ ಅಂತ್ಯದಲ್ಲಿ) ಉಚ್ಚರಿಸುವ ಪ್ರವೃತ್ತಿ ಸಮಾಜದ ಮೇಲುವರ್ಗದವರಲ್ಲಿ ಹೆಚ್ಚಿತ್ತು. ಕ್ರಮೇಣ ಅದು ಕಡಿಮೆಯಾಗುತ್ತ ಬಂದು ಕೆಳವರ್ಗದವರಲ್ಲಿ ಕನಿಷ್ಠ ಪ್ರಮಾಣದಲ್ಲಿತ್ತು. ಹೀಗಾಗಿ ಉಚ್ಚಾರಣಾವಿಕಲ್ಪದಲ್ಲಿ ನಿಯಮವೊಂದು ಕಂಡಿತು.

ಇನ್ನೂ ಗಮನಿಸಬೇಕಾದ ಸಂಗತಿಯೊಂದಿದೆ. ಎರಡನೆಯ ಪ್ರಶ್ನೆಗೆ ಉತ್ತರ ನೀಡುವಾಗ ಕೆಳವರ್ಗದವರು ಕಾರವನ್ನು (ಇಂಗ್ಲಿಶ್ ಅಕ್ಷರ) ಉಚ್ಚರಿಸುವ ಪ್ರಮಾಣ ಹೆಚ್ಚಾಗಿದ್ದುದು ಕಂಡಿತು. ಅಂದರೆ ಎಚ್ಚರಿಕೆಯಿಂದ ಉಚ್ಚರಿಸುವಾಗ ಅವರು ಮೇಲ್ವರ್ಗವನ್ನು ಅನುಕರಿಸುತ್ತಿದ್ದರು. ಒಂದು ಮುಖ್ಯ ಧ್ವನಿಪರಿವರ್ತನೆಗೆ ಪ್ರೇರಣೆ ಸಮಾಜದ ಮೇಲುವರ್ಗದಲ್ಲಿದೆ. ಅಲ್ಲಿನ ಲಕ್ಷಣಗಳು ಕೆಳಕ್ಕೆ ಹರಿದುಬರುವ ಮಾದರಿಯಿದು.

ಲೆಬೊವ್ ನಡೆಸಿದ ಇನ್ನೊಂದು ಪ್ರಯೋಗ ಉತ್ತರ ಅಮೆರಿಕಾದ ಮಸಾಚುಸೆಟ್ಸ್ ಪೂರ್ವ ಕರಾವಳಿಯ ಚಿಕ್ಕ ದ್ವೀಪ ಮಾರ್ಥಾಸ್ ವೈನ್ ಯಾರ್ಡ್ನಲ್ಲಿ ನಡೆದಿದೆ. ಅಲ್ಲಿನ ತೀರಾ ಪೂರ್ವಭಾಗದಲ್ಲಿ ಮೀನುಗಾರ ಸಮುದಾಯವೊಂದು ಬಹುಕಾಲದಿಂದ ವಾಸಮಾಡುತ್ತಿತ್ತು. ಅಲ್ಲಿ ಅನ್ಯರು ಹೋಗಿ ನೆಲಸತೊಡಗಿದರು. ಅಲ್ಲಿನ ಜನರ ಇಂಗ್ಲಿಶ್ನಲ್ಲಿ (ai) ಮತ್ತು (au) ಎಂಬ ಸ್ವರಗುಚ್ಚಗಳು ಭಿನ್ನ ಉಚ್ಚಾರಣಾ ರೂಪಗಳನ್ನು ಪಡೆದುಕೊಳ್ಳತೊಡಗಿದವು. ಇವುಗಳ ಮೊದಲ ಸ್ವರೂಪದ (a) ಮಧ್ಯ ತಟಸ್ಥಸ್ವರ ಆಗಿ ಉಚ್ಚಾರವಾಗುವುದು ಕೇಳಿಬಂತು. ವ್ಯತ್ಯಾಸಗಳು 3045 ವಯೋಮಾನದವರಲ್ಲಿ ಹೆಚ್ಚಾಗಿತ್ತು. 75 ಮೀರಿದವರಲ್ಲಿ ಇರಲಿಲ್ಲ. ಪೂರ್ವದ ಕರಾವಳಿಯ ಮೀನುಗಾರರಲ್ಲಿ ಉಚ್ಚಾರಣೆ ಹೆಚ್ಚಿನ ಪ್ರಮಾಣದಲ್ಲಿತ್ತು.

ವಾಸ್ತವವಾಗಿ ಉಚ್ಚಾರಣೆಯು ಮೀನುಗಾರರಲ್ಲಿ ಇದ್ದುದಕ್ಕೆ, ಲೆಬೊವ್ ಪ್ರಕಾರ, ಕಾರಣ ಅವರು ಹೊಸ ವಲಸೆಗಾರರಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುವುದೇ ಆಗಿತ್ತು. ಅವರ ಪ್ರತಿಭಟನೆಯ ವಿಧಾನವದು. ಆದರೆ ಸಮಯ ಸರಿದಂತೆ ವಲಸೆಗಾರರೂ ಉಚ್ಚಾರಣೆಯನ್ನು ಅನುಕರಿಸುವ ಮೂಲಕ ತಾವು ದ್ವೀಪದವರೇ ಎಂದು ತೋರಿಸಿಕೊಳ್ಳಲು ಪ್ರಾರಂಭಿಸಿದರು. ಅದೇನೇ ಇರಲಿ ಬದಲಾವಣೆಗೆ ಪ್ರೇರಣೆ ಬಂದದ್ದು ಕೆಳವರ್ಗದಿಂದ. ಅನಂತರ ಅದು ಮೇಲಕ್ಕೆ ಏರುತ್ತಾ ಹೋಯಿತು. ಇದು ಬದಲಾವಣೆಯ ಇನ್ನೊಂದು ಮಾದರಿ.

ಕನ್ನಡ ತೆಲಗು ತಮಿಳು
ಕೆಱು ಚಿಱು ಚಿಱು
ಕೆಯ್ ಚೇಯು ಚೆಯ್
ಕೆಡು ಚೆಡು ಕೆಟು

ಇದು ಮೂಲಭಾಷೆಯಿಂದ ಕವಲೊಡೆದ ಸಹೋದರಿ ಭಾಷೆಗಳಲ್ಲೂ ಕಾಣಿಸಿಕೊಳ್ಳುವ ವ್ಯತ್ಯಾಸವಾದರೆ, ಒಂದೇ ಭಾಷೆಯ ಉಪಭಾಷೆಗಳಲ್ಲೂ ಕೂಡ ಈ ವ್ಯತ್ಯಾಗಳು ಕಾಣಿಸಿಕೊಳ್ಳಬಹುದು. ಉದಾಹರಣೆ ಈಗಾಗಲೇ ಮೂಲ ದ್ರಾವಿಡರ ‘ಪ’ಕಾರ ‘ಹ’ ಕಾರವಾಗಿರುವುದನ್ನು ಹೇಳಲಾಗಿದೆ. ಕನ್ನಡದ ಕೆಲವು ಉಪಭಾಷೆಗಳಲ್ಲಿ ಈ ಹ ಕಾರವು ಸ್ವರವಾಗುವುದನ್ನು ಗುರುತಿಸಲಾಗಿದೆ.

ಹಕ್ಕಿ ಅಕ್ಕಿ
ಹಾಲು ಅಲು
ಹಾವು ಆವು

ಈ ವ್ಯತ್ಯಾಸವು ಚಾಮರಾಜನಗರ, ಗುಂಡ್ಲುಪೇಟೆ, ನಂಜನಗೂಡು ಕೊಳ್ಳೇಗಾಲ ಪ್ರದೇಶಗಳಲ್ಲಿ ಆಗಿರುವುದನ್ನು ವಿದ್ವಾಂಸರು ಗುರುತಿಸುತ್ತಾರೆ.

ಧ್ವನಿ ವ್ಯತ್ಯಾಸಗಳು ಒಂದು ಭಾಷೆಯ ಧ್ವನಿ ಇನ್ನೊಂದು ಭಾಷೆಗೆ ಬಂದಾಗಲೂ ಉಂಟಾಗಬಹುದು. ಉದಾಹರಣೆಗೆ ಇಂಗ್ಲಿಶಿನ ಫ(f) ಮತ್ತು ಜ್(z) ಗಳು ಕನ್ನಡ ಭಾಷೆಗೆ ಸೇರಿರುವುದನ್ನು ಗಮನಿಸಬಹುದು ಹಾಗೆಯೇ ಸಂಸ್ಕೃತದಿಂದ ಕನ್ನಡಕ್ಕೆ ಋ ಋೂ ಗಳು, ಐ ಶ, ಷ ಔ ಮಹಾಪ್ರಾಣಾಕ್ಷರಗಳು ಕನ್ನಡ ವರ್ಣಮಾಲೆಗೆ ಸೇರಿರುವುದನ್ನು ಗಮನಿಸಬಹುದಾಗಿದೆ.

ಅರ್ಥದಲ್ಲಾಗುವ ಬದಲಾವಣೆಗಳು

ಇದು ಭಾಷಾವ್ಯತ್ಯಾಸದಲ್ಲಿ ಬಹಳ ಸ್ಪಷ್ಟವಾದ ಕ್ಷೇತ್ರವಾಗಿವೆ. ಒಂದು ಪದವನ್ನು ಒಂದು ಸನ್ನಿವೇಶದಲ್ಲಿ ಬಳಸುತ್ತಿದ್ದು ಕಾಲಾನಂತರ ಇನ್ನೊಂದು ಸನ್ನಿವೇಶದಲ್ಲಿ ಬಳಸಲಾರಂಭಿಸಿದರೆ ಆ ಪದವು ಅರ್ಥವ್ಯತ್ಯಾಸವನ್ನು ಪಡೆಯಿತು ಎಂದು ಹೇಳಲಾಗುವುದು. ಒಂದು ಪದಕ್ಕೆ ಅರ್ಥ ಎಂದರೆ ಏನು ಒಂದು ಶಬ್ದವನ್ನು ಯಾರು ಬಳಸುತ್ತಿರುತ್ತಾರೆ. ಯಾವ ಸಂದರ್ಭದಲ್ಲಿ ಬಳಸುತ್ತಿರುತ್ತಾರೆ. ಆ ಶಬ್ದವನ್ನು ಅವರು ಬಳಸಿದಾಗ ಕೇಳುವವರ ಪ್ರತಿಕ್ರಿಯೆ ಏನು ಎಂಬುದರ ಮೇಲೆ ಪದದ ಅರ್ಥ ನಿರ್ಧಾರವಾಗುತ್ತದೆ. ಉದಾಹರಣೆಗೆ ಕನ್ನಡಿಗನೊಬ್ಬ ಪೆದ್ದ ಎಂಬ ಪದವನ್ನು ಬಳಸಿದರೆ, ಅದನ್ನು ಕನ್ನಡಿಗರೇ ಕೇಳಿಸಿಕೊಂಡರೆ ‘ದಡ್ಡ’ ಎಂದು ಅರ್ಥವಾಗುತ್ತದೆ ತೆಲುಗು ಮಾತನಾಡುವವ ಕೇಳಿಸಿಕೊಂಡರೆ, ದೊಡ್ಡದು ಎಂಬ ಅರ್ಥವನ್ನು ಪಡೆದುಕೊಳ್ಳುತ್ತದೆ.

ಅರ್ಥವ್ಯತ್ಯಾಸವು ಸಮಾಜದ ಜೀವನ, ಸಾಹಿತ್ಯ ಮತ್ತು ಸಂಸ್ಕೃತಿಯ ಜೊತೆಗೆ ಗಾಢವಾದ ಸಂಬಂಧವನ್ನು ಪಡೆದುಕೊಂಡಿದೆ. ಅರ್ಥವ್ಯತ್ಯಾಸದಲ್ಲಿ ಗಮನಿಸಬಹುದಾದ ಎರಡು ಸ್ಪಷ್ಟವಾದ ಅಂಶಗಳೆಂದರೆ, ಹೊಸ ಪದಗಳು ಬಂದು ಸೇರುವುದು ಹಳೆಯ ಪದಗಳು ಕಣ್ಮರೆಯಾಗವುವುದು. ಸಾಮಾನ್ಯವಾಗಿ ಎಲ್ಲಾ ಭಾಷೆಗಳು, ಸಮಾಜವು ಬೆಳೆದ ಹಾಗೆ ಅಧುನಿಕತೆಗೆ ಅನುಗುಣವಾಗಿ ಬೇರೆ ಬೇರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸುವುದು ಅನಿವಾರ್ಯ ವಾಗಿರುತ್ತದೆ. ಹೀಗಾದಾಗ ಆ ಭಾಷೆಗೆ ಹೊಸ ಹೊಸ ಪದಗಳು ಬಂದು ಸೇರುತ್ತವೆ. ಈ ಹೊಸ ಪದಗಳು ಕ್ರಮೇಣ ಆ ಭಾಷೆಯ ಪದಗಳೇ ಆಗಿಬಿಡುತ್ತವೆ. ಹೊಸ ಪದಗಳು ಬಂದಾಗ ಹಳೆಯ ಪದಗಳು ಕಣ್ಮರೆಯಾಗಿ ಬಿಡುತ್ತವೆ.

ಹಳೆಗನ್ನಡದಲ್ಲಿ ಅಮ್ಮ, ತಾತ ಎಂಬುದಕ್ಕೆ ತಂದೆ, ತಾಯಿ ಎಂಬರ್ಥವಿದ್ದು ಹೊಸಗನ್ನಡದಲ್ಲಿ ತಂದೆ, ಅಜ್ಜ ಎಂಬ ಅರ್ಥ ಪಡೆದುಕೊಂಡಿರುವುದನ್ನು ಕಾಣಬಹುದಾಗಿದೆ. ಹೊಸ ವಸ್ತುಗಳ ಅವಿಷ್ಕಾರವಾದ ಒಂದು ಭಾಷೆ ತಾನು ಇನಾವುದೋ ವಸ್ತು ವ್ಯಕ್ತಿಗಳಿಗೆ ಬಳಸುತ್ತಿದ್ದ ಪದಗಳನ್ನು ಹೊಸದಾಗಿ ಬಂದ ಪದಗಳಿಗೆ ಕೊಡುವುದನ್ನು ಗಮನಿಸಬಹುದು. ಕನ್ನಡದ ಜಂಗಮ ಸ್ಥಾವರ ಎಂಬ ಪದಗಳು ಈಗ ಮೊಬೈಲ್ ಹಾಗೂ ಲ್ಯಾಂಡ್‌ಲೈನ್ ದೂರವಾಣಿಗಳಿಗೆ ಬಳಕೆಯಾಗುತ್ತಿರುವುದನ್ನು ಕಿಕ್ಕಿರಿತ, ದಟ್ಟಣೆ ಎಂಬ ಪದಗಳು Traffic Jam ಎಂಬ ಅರ್ಥದಲ್ಲಿ ಬಳಕೆಯಾಗುತ್ತಿರುವುದನ್ನು ಗಮನಿಸಬಹುದು.

ಅರ್ಥವ್ಯತ್ಯಾಸಗಳು ಒಂದು ಭಾಷೆಯ ಉಪಭಾಷೆಗಳಲ್ಲಿ ಕಾಣಿಸಿ ಕೊಳ್ಳುತ್ತವೆ. ದಕ್ಷಿಣ ಕರ್ನಾಟಕದಲ್ಲಿ ತಿಂಡಿ ಎಂದರೆ ತಿನಿಸು ಎಂದೂ, ಉತ್ತರ ಕರ್ನಾಟಕದಲ್ಲಿ ತೀಟೆ ಎಂದೂ ಅರ್ಥ. ಬಯಲುಸೀಮೆಯ ಪಲ್ಯ ಮಲೆನಾಡಿದಲ್ಲಿ ಸಾರು ಎಂದಾಗುತ್ತದೆ. ಮಲೆನಾಡಿನಲ್ಲಿ ಪಲ್ಯಕ್ಕೆ ‘ಹುರುಗಲು’ ಎಂಬ ಪದವಿದೆ.

ವ್ಯಾಕರಣದಲ್ಲಿ ಆಗುವ ಬದಲಾವಣೆಗಳು

ಪ್ರತಿಯೊಂದು ಭಾಷೆಗೂ ಅದನ್ನು ಬಳಸುವ ಜನರ ಅರಿವಿಗೆ ಎಟುಕದಂತೆ ವ್ಯಾಕರಣ ಗ್ರಂಥಗಳು ರಚನೆಯಾಗಿರುತ್ತವೆ. ಇಲ್ಲಿ ಭಾಷೆಯ ಪದ, ಪದರೂಪ, ವಾಕ್ಯ ಮೊದಲಾದವುಗಳ ತಯಾರಿಕೆಯಲ್ಲಿ ಎಂತಹ ನಿಯಮಗಳನ್ನೆಲ್ಲ ಬಳಸಬೇಕಾಗುತ್ತವೆ ಎಂಬುದನ್ನು ವಿವರಿಸಿ ಹೇಳಲಾಗುತ್ತದೆ. ಒಂದು ಭಾಷೆಯು ಬಳಸುವ ವ್ಯಾಕರಣ ಮೂಲತತ್ವಗಳಲ್ಲಿ ಹೆಚ್ಚಿನವನ್ನು ಆ ಭಾಷೆ ಅದು ಯಾವ ಭಾಷಾಕುಟುಂಬಕ್ಕೆ ಸೇರಿದೆಯೋ ಆ ಕುಟುಂಬದ ಮೂಲ ಭಾಷೆಯಿಂದ ಅನುವಂಶಿಕವಾಗಿ ಪಡೆದಿರುತ್ತದೆ. ಭಾಷೆಯಲ್ಲಿ ಬದಲಾವಣೆ ಗಳಾಗುವ ಹಾಗೆ ವ್ಯಾಕರಣದಲ್ಲಿ ಬದಲಾವಣೆಗಳಾಗಲು ಸಾಧ್ಯವಿಲ್ಲ. ಒಂದು ಭಾಷೆ ಪದಗಳನ್ನು ಎರವಲಾಗಿ ಪಡೆದಾಗಲೂ ತನ್ನ ವ್ಯಾಕರಣದ ನಿಯಮಗಳಿಗನು ಗುಣವಾಗಿ ಆ ಪದಗಳನ್ನು ವಾಕ್ಯರಚನೆಯಲ್ಲಿ ಇಲ್ಲವೇ ಪದ ರಚನೆಯಲ್ಲಿ ಬಳಸಿಕೊಳ್ಳಬೇಕಾಗುತ್ತದೆ. ಹೀಗೆ ಎರವಲಾಗಿ ಪಡೆದ ಪದಗಳು ಒಂದೇ ಭಾಷಾಕುಟುಂಬಕ್ಕೆ ಸೇರಿದ ಪದವಾಗಿರಬಹುದು. ಇಲ್ಲವೇ ಅನ್ಯಭಾಷಾ ಕುಟುಂಬಕ್ಕೆ ಸೇರಿದ ಪದಗಳಾಗಿರಬಹುದು.

ಉದಾಹರಣೆಗೆ ಹಳಗನ್ನಡದ ಕಾಲದಲ್ಲಿ ಸಂಸ್ಕೃತದಿಂದ ಹಳಗನ್ನಡವು ಎರವಲಾಗಿ ಪಡೆದ ಪದಗಳನ್ನು ಕನ್ನಡದ ವ್ಯಾಕರಣದ ಮೂಲತತ್ವಗಳಿಗೆ ಹೊಂದಿಕೆಯಾಗುವಂತೆ ಬದಲಾವಣೆಗಳನ್ನು ಮಾಡಿಕೊಂಡಿದೆ. ಉದಾಹರಣೆಗೆ ಶ್ರೀ-ಸಿರಿ, ವರ್ಷ-ಬರಿಸ, ಅಕ್ಷರ-ಅಕ್ಕರ ಮೊದಲಾದವು ಹಾಗೆ ಬದಲಾಗದೆ ಉಳಿಯುವ ಪದಗಳೂ ಕನ್ನಡ ವಾಕ್ಯಗಳಲ್ಲಿ ಬಳಕೆಯಾಗಬೇಕಾದ್ದಲ್ಲಿ ಕನ್ನಡದವೇ ಅದ ವ್ಯಾಕರಣ ನಿಯಮಗಳನ್ನು ಒಳಪಡಿಸಬೇಕಾಗುತ್ತದೆ.

ಹಳಗನ್ನಡದ ಪೋಯ್ತು ಕಿಚ್ಚು, ಪೊೞ್ತು ಮೊದಲಾದ ಸಮಾನವಲ್ಲದ ವ್ಯಂಜನಗಳು ಹೊಸಗನ್ನಡದಲ್ಲಿ ಹೋಯ್ತು, ಕಿಚ್ಚು, ಹೊತ್ತು ಎಂಬ ಸಮಾನವಾದ ವ್ಯಂಜನಗಳಾಗಿ ಬದಲಾಗಿವೆ. ಆದರೆ ಎರಡು ಸ್ಪರ್ಶಗಳು ಒಟ್ಟಿಗೆ ಬರುವುದಿದ್ದಲ್ಲಿ ಅವೆರಡೂ ಒಂದೇ ಸ್ಪರ್ಶವಾಗಿರಬೇಕೆಂಬ ಕನ್ನಡ ವ್ಯಾಕರಣ ನಿಯಮಕ್ಕನುಗುಣವಾಗಿ ಬದಲಾಗಿರುವುದನ್ನು ಕಾಣಬಹುದು. ಪದಗಳ ಆದಿಯಲ್ಲಿ ಒಂದಕ್ಕಿಂತ ಹೆಚ್ಚು ವ್ಯಂಜನಗಳು ಬರಲಾರವು. ಹಳಗನ್ನಡವು ಸಂಸ್ಕೃತದಿಂದ ಸ್ವೀಕರಿಸಿದ ಕ್ಷಾರ-ಕಾರ, ಸ್ಮಶಾನ-ಮಸಣ, ಪ್ರಾಯ-ಹರೆಯ ಮಾಡಿಕೊಂಡ ಹಾಗೆ ಅದೇ ನಿಯಮವು ಹೊಸಗನ್ನಡದಲ್ಲೂ ಉಳಿದಿರುವುದನ್ನು ಕಾಣಬಹುದು. ಇಂಗ್ಲಿಶಿನಿಂದ ಎರವಲಾಗಿ ಪಡೆದ ಎರಡು ವ್ಯಂಜನಗಳು ಪದಗಳು ಆಡುಮಾತಿನಲ್ಲಿ ಉದಾಹರಣೆಗೆ ಸ್ಕೂಲು-ಇಸ್ಕೂಲು, ಸ್ಕ್ರೂ-ಇಸ್ಕ್ರೂ ಎಂದು ಹಿಂದೆ ಸ್ವರ ಸೇರಿಸಿ ಉಚ್ಚರಿಸುವುದನ್ನು ಕಾಣಬಹುದಾಗಿದೆ.

ಹಳಗನ್ನಡದಲ್ಲಿ ಕ್ರಿಯಾಪದಗಳ ಗುಣರೂಪದಿಂದ ನಾಮರೂಪಗಳನ್ನು ತಯಾರಿಸಬಹುದೇ ಹೊರತು ಕ್ರಿಯಾಪದಗಳಿಂದ ನಾಮರೂಪಗಳನ್ನು ತಯಾರಿಸಲು ಸಾಧ್ಯವಿಲ್ಲ. ಅದರೆ ಹೊಸಗನ್ನಡದಲ್ಲಿ ಇಕೆ ಪ್ರತ್ಯಯ ಬಳಸಿ ನೇರವಾಗಿ ಹೊಗಳುವಿಕೆ, ಹಿಡಿಯುವಿಕೆ, ಹಾಡುವಿಕೆ ಎಂಬ ನಾಮರೂಪಗಳನ್ನು ತಯಾರಿಸಬಹುದು ಮತ್ತು ಎರವಲಾಗಿ ಬರುವ ಕ್ರಿಯಾಪದಗಳನ್ನು ‘ಇಕು’ ಸೇರಿಸಿ ಬಳಸಬೇಕಾಗುತ್ತದೆ.

ಹಳಗನ್ನಡದ ಅಂ, ನೀಂ, ತಾಂ ಎಂಬ ಸರ್ವನಾಮಗಳು ಹೊಸಗನ್ನಡದಲ್ಲಿ ನಾನು, ನೀನು, ಅವರು ಎಂದು ಬದಲಾಗುತ್ತದೆ. ವಾಕ್ಯರಚನೆಯಲ್ಲೂ ಕೂಡ ಈ ಸರ್ವನಾಮಗಳು ಹೊಸಗನ್ನಡದಲ್ಲಿ ಸ್ಥಾನ ಬದಲಾವಣೆ ಯಾಗುವುದನ್ನು ಗಮನಿಸಬಹುದು.

ಉದಾ:

ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ

(ನೀವು) ಬೇಡುವುದಾದರೆ ನಮ್ಮ ತಂದೆಯನ್ನು ಪ್ರಾರ್ಥಿಸಿ,

ತೊಡರ್ದರ್ ನಮ್ಮಯ ಭಕ್ಷದೊಳ್

ನಮ್ಮ ಅಹಾರದಲ್ಲಿ ಸಿಕ್ಕಿಬಿದ್ದರು.

ಹಳಗನ್ನಡದಲ್ಲಿ ಪದಮಧ್ಯ ಬರುವ ಸರ್ವನಾಮಗಳು ಹೊಸಗನ್ನಡದಲ್ಲಿ ಪದಾರಂಭದಲ್ಲಿ ಬರಬಹುದು ಇಲ್ಲವೇ ಬರದಿರಬಹುದು. ಅದೇ ರೀತಿ ಹಳಗನ್ನಡದ ಅವನ್, ಇವನ್, ಉವನ್ ಎಂಬ ನಿರ್ದೇಶಕ ಪದಗಳಲ್ಲಿ ಹೊಸಗನ್ನಡದಲ್ಲಿ ಅವನ್ ಇವನ್ ಉಳಿದುಕೊಂಡು ಉವನ್ ಬಳಕೆ ಇಲ್ಲದಿರುವುದನ್ನು ಗಮನಿಸಬಹುದು.

ಹಳೆಗನ್ನಡದಲ್ಲಿ ಕುಂ (ಗುಂ) ಪ್ರತ್ಯಯಗಳು ಭವಿಷ್ಯದರ್ಥದಲ್ಲಿ ಮಾತ್ರವೇ ಅಲ್ಲದೆ ಸಂಭಾವ್ಯತೆಯ ಅರ್ಥದಲ್ಲೂ ಬಳಕೆಯಾಗುತ್ತದೆ. ಉದಾಹರಣೆ ಎನ್ನುಮನಿಂತು ತುತ್ತುಗುಂ ಎಂದೂ, ಭೂತಕಾಲದ ಬಳಕೆಗಳಲ್ಲೂ ಇದೇ ರೀತಿಯಲ್ಲಿ ಭೂತಕಾಲದ ಸಾಮಾನ್ಯ ಕ್ರಿಯಾರೂಪ ಗಳಿಗಿಂತ ಭಿನ್ನವಾಗಿರುವ ರೂಢಿಯಲ್ಲಿ ಜರುಗುವ ಘಟನೆಯೊಂದನ್ನು ಸೂಚಿಸುವ ಅರ್ಥವನ್ನು ಈ ಕ್ರಿಯಾರೂಪಗಳು ಕೊಡುತ್ತವೆ ಉದಾ ನುಡಿಯಿತಿ ಕೇಳ್ಗುಂ ಹರಿಗನ ಪಡೆಮಾತನೆ. ಈ ಪ್ರತಯಯಗಳ ಹೊಸಗನ್ನಡ ದಲ್ಲಿ ಕಾಣಿಸುವುದಿಲ್ಲ. ಈ ಕ್ರಿಯಾ ರೂಪಗಳು ಹೊಸಗನ್ನಡದಲ್ಲಿ ಕಾಣಿಸುವು ದಿಲ್ಲ. ಈ ಕ್ರಿಯಾ ರೂಪಗಳು ಹೊಸಗನ್ನಡದ ದ ಮತ್ತು ವ (ಪ) ಪ್ರತ್ಯಯ ಗಳಿರುವ ಕ್ರಿಯಾರೂಪಗಳಿಗಿಂತ ಅರ್ಥದಲ್ಲಿ ಭಿನ್ನವಾದುದು. ಆದರೆ ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಈ ಗುಂ (ಕುಂ) ಪ್ರತ್ಯಯವು ಗು (ಕು) ಎಂಬ ರೂಪದಲ್ಲಿ ಉಳಿದುಕೊಂಡಿದ್ದು ಸಂಭಾವ್ಯತೆಯ ಅರ್ಥವೂ ಮತ್ತು ರೂಢಿಯ ಅರ್ಥವೂ ಇವೆ.

ಹಳೆಗನ್ನಡದಲ್ಲಿ ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಮೇಣ್ ಮತ್ತು ಉಮ್ ಪ್ರತ್ಯಯಗಳನ್ನು ಬಳಸಲಾಗುತ್ತಿತ್ತು. ಮತ್ತು ಸಾಮಾನ್ಯವಾಗಿ ಪದಗಳಿ ಗಿಂತಲೂ ಪ್ರತ್ಯಯಗಳನ್ನು ಬಳಸುವುದೇ ಹೆಚ್ಚು ಮತ್ತು ಕ್ರಿಯಾರೂಪಗಳಿಗೆ ಕೆಲವು ವಿಶಿಷ್ಟವಾದ ಜೋಡಿಸುವ ರೂಪಗಳಿವೆ. ಹೊಸಗನ್ನಡದಲ್ಲಿ ಅಥವಾ ಮತ್ತು ಹಾಗೂ ಎಂಬ ಪದಗಳನ್ನು ವಾಕ್ಯಗಳನ್ನು ಜೊಡಿಸಲು ಬಳಸಲಾಗುತ್ತದೆ. ಹಳಗನ್ನಡದ ಸಂಬಂಧ ವಾಕ್ಯಗಳಲ್ಲಿ ಸಾಮಾನ್ಯವಾಗಿ ಒಳ್ (ಉಳ್) ಕ್ರಿಯಾಪದ ರೂಪವಿದೆ.

ಉದಾ: ಎನಗೆ ಅಯ್ವರ್ ಮಕ್ಕಳ್ ಒಳರ್ (ಇದ್ದಾರೆ)

ಈ ರೀತಿಯ ಒಳ್ ಪ್ರಯೋಗ ಹೊಸಗನ್ನಡದಲ್ಲಿ ಬಳಕೆಯಲ್ಲಿ ಇಲ್ಲ. ನನಗೆ ಐಯ್ವರು ಮಕ್ಕಳು (ಇದ್ದಾರೆ) ಎಂಬುದು ಶೂನ್ಯಾರ್ಥದಲ್ಲಿ ಬಳಕೆ ಯಾಗುತ್ತದೆ. ಆದರೆ ಉತ್ತರ ಕರ್ನಾಟಕದ ವಾಕ್ಯರಚನೆಯಲ್ಲಿ ಇದು ಈಗಲೂ ಇರುವುದನ್ನು ಕಾಣಬಹುದು. ಉದಾ: ಅವರು ಕಾಲೇಜಿನಲ್ಲಿ ಪ್ರೊಫೆಸರ್ ಇದ್ದಾರೆ. ಹಳೆಗನ್ನಡದಲ್ಲಿ ಈ ಒಳ್ ಪ್ರತ್ಯಯ ಎಂಬು ಎಂಬರ್ಥದಲ್ಲಿ ಬಳಕೆಯಾಗುತ್ತಿತ್ತು. ಆ ಅರ್ಥವನ್ನು ಹೊಸಗನ್ನಡ ಉಳಿಸಿಕೊಂಡಿವೆ.

ವ್ಯಾಕರಣದಲ್ಲಿನ ಈ ಬದಲಾವಣೆಗಳಿಗೆ ಖಚಿತತೆಯನ್ನು ನಿರ್ಧರಿಸುವುದು ಕಷ್ಟ. ಏಕೆಂದರೆ ನಮ್ಮ ಗ್ರಹಿಕೆಗೆ ಬರುವ ಭಾಷೆಯ ವ್ಯಾಕರಣಗಳಿಗೆ ಮಿತಿಗಳಿರುತ್ತವೆ. ಭಾಷಿಕನೊಬ್ಬನು ವ್ಯಾಕರಣದಲ್ಲಿ ಮಾಡಿಕೊಳ್ಳುವ ಬದಲಾವಣೆಗಳಿಗೆ ನಿರ್ದಿಷ್ಟ ಕಾರಣವನ್ನು ಸೂಚಿಸಲು ಸಾಧ್ಯವಾಗುವುದಿಲ್ಲ.

ಭಾಷಾ ಕಾಲಾನುಕ್ರಮಶಾಸ್ತ್ರ ಭಾಷೆಗಳು ಯಾವ ಶತಮಾನಗಳಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಬದಲಾವಣೆಗಳನ್ನು ಹೊಂದುತ್ತಾ ಬಂದಿತು ಎಂಬುದನ್ನು ಕಂಡುಹಿಡಿಯುವ ಶಾಸ್ತ್ರ. ಪರಸ್ಪರ ಸಂಬಂಧವುಳ್ಳ ಎರಡು ಭಾಷೆಗಳ ನಡುವೆ ನಡೆಯುವ ವ್ಯತ್ಯಾಸವು ಭಾಷೆಗಳು ಬೇರೆ ಬೇರೆ ಭಾಷೆಗಳಾಗಲು ಎಷ್ಟು ಕಾಲ ಹಿಡಿಯಿತು ಎಂಬುದನ್ನು ಶಾಸ್ತ್ರ ಅಧ್ಯಯನ ಮಾಡುತ್ತದೆ. ಭಾಷಾ ಕಾಲಾನುಕ್ರಮ ಶಾಸ್ತ್ರವೆಂಬುದು ಅಧ್ಯಯನದ ಹೆಸರಾದರೆ, ನಿಘಂಟು ಸಂಖ್ಯಾಶಾಸ್ತ್ರವೆಂಬುದು ಶಾಸ್ತ್ರಕ್ಕೆ ಅಳವಡಿಕೆಯಾಗುವ ತಂತ್ರವಾಗಿದೆ.

ಎರಡು ಭಾಷೆಗಳಲ್ಲಿನ ಶಬ್ದಕೋಶದಿಂದ ಹೋಲಿಕೆಯಿರುವ ಮೂಲಭೂತ ವಾದ ಪದಗಳನ್ನು ಮಾದರಿಗಾಗಿ ಆರಿಸಿಕೊಳ್ಳಲಾಗುತ್ತದೆ. ನಂತರ ಅವುಗಳನ್ನು ಎಣಿಸಿ ಅವುಗಳಲ್ಲಿ ಅಗಿರುವ ಧ್ವನಿವ್ಯತ್ಯಾಸಗಳನ್ನು ಗುರುತಿಸಲಾಗುತ್ತದೆ. ಉದಾ. ಕನ್ನಡ, ತಮಿಳು, ತೆಲುಗು ಮೂರೂ ಭಾಷೆಗಳೂ ಒಂದಕ್ಕೊಂದು ಸಂಬಂಧವಿರುವ ಭಾಷೆಗಳಾಗಿವೆ. ತಲೆ ಎಂಬ ಪದ ಮೂರು ಭಾಷೆಗಳಲ್ಲಿ ತಲೆ ಎಂದೇ ಬಳಕೆಯಾಗುತ್ತದೆ ಕೈ, ತಮಿಳಿನಲ್ಲಿ ಕೈ, ತೆಲುಗಿನಲ್ಲಿ ಚೈ ಆಗುತ್ತದೆ. ಹಲ್ಲು ತಮಿಳು ತೆಲುಗುಗಳಲ್ಲಿ ಪಲ್ ಆಗುತ್ತದೆ.

ಶಾಸ್ತ್ರವು ಧ್ವನಿವ್ಯತ್ಯಾಸಗಳನ್ನು ರೀತಿ ತೋರಿಸಿ ಕೊಡುತ್ತದೆಯೇ ಹೊರತು ಧ್ವನಿಮಾತ್ಮಕ ವಿವರಣೆಯನ್ನು ಕೊಡದಿರಬಹುದು. ಭಾಷೆಯಲ್ಲಿನ ಶಬ್ದಕೋಶದಿಂದ ಪಟ್ಟಿಯನ್ನು ತಯಾರಿಸುವಾಗ, ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಪ್ರಭಾವ ಬೀರಿದ ಪದಗಳನ್ನು ಇದರಿಂದ ಕೈಬಿಡಬೇಕಾಗು ತ್ತದೆ. ಉದಾ. ಪ್ರಾಣಿ ಅಥವಾ ಗಿಡಗಳಂತಹ ಹೆಸರುಗಳು ಪ್ರಪಂಚದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವ್ಯತ್ಯಾಸವಾಗುತ್ತಾ ಹೋಗುತ್ತದೆ.

ರೀತಿ ಎರಡೂ ಭಾಷೆಗಳಲ್ಲಿನ ಮಾದರಿಯ ಶಬ್ದಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಶೇ. 60 ಸಾಮ್ಯವಿದ್ದು ಇನ್ನೊಂದು ಭಾಷೆಯಲ್ಲಿ ಶೇ. 80ರಷ್ಟು ಸಾಮ್ಯವಿದ್ದರೆ, ಶೇ. 60 ಸಾಮ್ಯವಿರುವ ಭಾಷೆ ಶೇ. 80 ಸಾಮ್ಯವಿರುವ ಭಾಷೆಗಿಂತ ಬಹಳ ಹಿಂದೆಯೇ ಒಂದು ಭಾಷೆಯಿಂದ ಬೇರೆಯಾಗಿತ್ತು ಎಂದು ಗುರುತಿಸಲಾಗುತ್ತದೆ. ಇವುಗಳು ಯಾವ ವರ್ಷಗಳಲ್ಲಿ ಬೇರೆಯಾಗಿರಬಹುದು ಎಂಬುದನ್ನು ಶಾಸ್ತ್ರ ಗುರುತಿಸುತ್ತದೆ.

ಅಧ್ಯಯನವು ಪ್ರಾಚೀನ ಭಾಷೆಗಳ ಸ್ಥಿತಿಯನ್ನು ವಿವರಿಸುವುದರ ಜೊತೆಗೆ ಆಧುನಿಕ ಭಾಷೆಗಳಲ್ಲಿ ಪರಸ್ಪರ ಇರುವ ಸಂಬಂಧ ಹಾಗೂ ಅವುಗಳ ವಂಶಾನುಕ್ರಮಣಿಕೆಯ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.