ನಕ್ಷತ್ರಗಳನ್ನು ನಾವು ಬಲ್ಲೆವು; ಹೂವುಗಳನ್ನು ಕಂಡಿದ್ದೇವೆ; ಹೀಗಿದ್ದರೂ ನಕ್ಷತ್ರ ಎಂದರೇನು, ಹೂವು ಎಂದರೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೊರಟಾಗ ಅವುಗಳನ್ನು ಕುರಿತ ನಮ್ಮ ತಿಳುವಳಿಕೆ ಉಪಯುಕ್ತವಾಗಲಾರದು. ಖಗೋಳಶಾಸ್ತ್ರ ಜೀವಶಾಸ್ತ್ರಗಳು ಆಯಾ ವಸ್ತುಗಳನ್ನು ಅರಿಯಲು ನಮಗೆ ಹೊಸ ಪರಿಕರಗಳನ್ನು ಒದಗಿಸುತ್ತವೆ. ಭಾಷೆಯ ಸ್ವರೂಪವನ್ನು ಅರಿಯಲು ಹೊರಟವರ ಪರಿಸ್ಥಿತಿ ಇದಕ್ಕಿಂತ ಕೊಂಚ ಭಿನ್ನ. ಏಕೆಂದರೆ ನಾವೆಲ್ಲರೂ ಭಾಷೆಯನ್ನು ಬಳಸುವವರು; ಭಾಷೆಯ ಲಕ್ಷಣ, ಸ್ವರೂಪದ ಬಗ್ಗೆ ನಮ್ಮದೇ ಆದ ತಿಳುವಳಿಕೆಯನ್ನು ಹೊಂದಿರುವವರು. ಈ ತಿಳುವಳಿಕೆಗಳಲ್ಲಿ ಕೆಲವು ಸಾಮಾಜಿಕ ಮನ್ನಣೆಯನ್ನೂ ಪಡೆದಿರುತ್ತವೆಯಲ್ಲದೆ ಬಹುಕಾಲದಿಂದಲೂ ಭಾಷಿಕರ ನಂಬಿಕೆಯಲ್ಲಿ ಸೇರಿರುತ್ತವೆ. ಆದ್ದರಿಂದ ಭಾಷೆಯ ಸ್ವರೂಪವನ್ನು ತಿಳಿಯ ಹೊರಡುವ ಯಾವುದೇ ಹೊಸ ಪ್ರಯತ್ನವಾದರೂ ಈ ಪಾರಂಪರಿಕ ತಿಳುವಳಿಕೆಗಳಿಂದಲೇ ಮೊದಲಾಗುವುದು ಅನಿವಾರ್ಯ. ಇದೇ ಸೂಕ್ತ ಮಾರ್ಗ.

ಭಾಷೆಯ ಸ್ವರೂಪವನ್ನು ನಾವು ಹುಟ್ಟಿನಿಂದಲೇ ಅರಿತಿರುವುದಿಲ್ಲ. ಸಮಾಜದಲ್ಲಿ ಬೆಳೆಯುತ್ತ ಅಲ್ಲಿ ಪ್ರಚಲಿತವಿರುವ ತಿಳುವಳಿಕೆಯನ್ನು ಪಡೆದುಕೊಳ್ಳುತ್ತೇವೆ. ಶಿಕ್ಷಣ ಮತ್ತಿತರ ಸಾಮಾಜೀಕರಣ ಪ್ರಕ್ರಿಯೆಗಳೂ ನಮಗೆ ಇಂಥ ತಿಳುವಳಿಕೆಯನ್ನು ಒದಗಿಸುತ್ತವೆ. ಈ ತಿಳುವಳಿಕೆಯನ್ನು ವಿವರಿಸಿಕೊಳ್ಳುವುದು ಮುಖ್ಯ. ನಮಗೆಷ್ಟು ಗೊತ್ತು ಎಂದು ತಿಳಿಯುವ ಮೂಲಕವೇ ನಮಗೆಷ್ಟು ಗೊತ್ತಿಲ್ಲವೆಂಬುದರ ಅರಿವು ಮೂಡುತ್ತದೆ. ಅಲ್ಲದೆ ಗೊತ್ತಿರುವುದರಲ್ಲಿ ಎಷ್ಟು ಸರಿ ಎನ್ನುವುದೂ ತಿಳಿಯುತ್ತದೆ.

ಭಾಷೆಯ ಅಧ್ಯಯನ ಸುಲಭವಲ್ಲ. ಅದರಲ್ಲೂ ನಿರ್ಮಮವಾಗಿ, ವ್ಯವಸ್ಥಿತವಾಗಿ ಅಧ್ಯಯನ ಮಾಡುವುದಂತೂ ಇನ್ನೂ ಕಷ್ಟ. ಈ ಅಧ್ಯಯನದಲ್ಲಿ ಮಂಡಿತವಾದ ಸಂಗತಿಗಳ ಚರ್ಚೆ ಉದ್ವೇಗಕ್ಕೆ, ವಾಗ್ವಾದ ಗಳಿಗೆ ಅವಕಾಶ ನೀಡುವ ಸಂದರ್ಭಗಳೇ ಹೆಚ್ಚು. ಭಾಷೆ ನಮ್ಮ ಸ್ವತ್ತು ಎಂದು ತಿಳಿದ ಎಲ್ಲರೂ ಭಾಷೆಯನ್ನು ವ್ಯಾಖ್ಯಾನಿಸುವ, ನಿರ್ದಿಷ್ಟ ಅಭಿಪ್ರಾಯವನ್ನು ಹೊಂದುವ ಹಕ್ಕು ತಮಗಿದೆಯೆಂದು ತಿಳಿಯುತ್ತಾರೆ. ಆದ್ದರಿಂದ ಭಿನ್ನಾಭಿಪ್ರಾಯ ಸಾಧ್ಯ ಅಲ್ಲದೆ ಸಹಜ. ಅಂದರೆ ವಾಗ್ವಾದಗಳು ಬೆಳೆಯಲು ಅವಕಾಶ ಉಂಟು. ಶಿಕ್ಷಣ ಮಧ್ಯಮ ಯಾವುದಾಗಬೇಕು, ನಮ್ಮ ಶಾಲೆಗಳಲ್ಲಿ ಯಾವ ಭಾಷೆ ಯಾವಾಗ ಕಲಿಸಬೇಕು, ವಾರ್ತಾ ಪ್ರಸಾರದಲ್ಲಿ ಹೇಗೆ ಭಾಷೆಯನ್ನು ಉಚ್ಚರಿಸಬೇಕು ಎಂಬಿವೇ ಪ್ರಶ್ನೆಗಳನ್ನು ಚರ್ಚಿಸತೊಡಗಿದ ಕೂಡಲೇ ಅಭಿಪ್ರಾಯ ಭೇದಗಳು ಮುನ್ನೆಲೆಗೆ ಬರುತ್ತದೆ. ನಿಲುಗಡೆಯಿಲ್ಲದ ವಾಗ್ವಾದ ಮೊದಲಾಗುತ್ತದೆ.

ಭಾಷೆಯನ್ನು ಬಳಸುವವರು ವ್ಯಕ್ತಿಗಳೇ ಆದರೂ ಅವರೆಲ್ಲರೂ ಒಂದಿಲ್ಲೊಂದು ಸಾಮಾಜಿಕ ಸಂದರ್ಭಗಳಲ್ಲಿಯೇ ಅದನ್ನು ಬಳಸುತ್ತಾರೆ. ಆದ್ದರಿಂದ ಭಾಷೆಯ ಉಪಯೋಗಕ್ಕೆ ಸಾಮಾಜಿಕ ಆಯಾಮಗಳಿರುತ್ತವೆ. ಯಾವುದು ಸಾಮಾಜಿಕವೋ ಅದು ಚರ್ಚೆಗೆ ಗ್ರಾಸವಾಗುತ್ತದೆ. ಅಲ್ಲದೆ ಭಾಷೆಯ ಬಳಕೆಯಲ್ಲಿ ನಾವು ಸುಲಭವಾಗಿ ಭಾಗಿಗಳಾಗುವುದರಿಂದ ವ್ಯಕ್ತಿಗಳ ವ್ಯಕ್ತಿತ್ವ, ಬುದ್ದಿವಂತಿಕೆ, ಸಾಮರ್ಥ್ಯ ಇತ್ಯಾದಿಗಳನ್ನು ಗ್ರಹಿಸುವಾಗ, ನಮ್ಮ ತೀರ್ಮಾನಗಳು ಆಯಾ ಸಂದರ್ಭದ ಭಾಷಾಬಳಕೆ ಪ್ರಭಾವಿಸುತ್ತಿರುತ್ತದೆ. ಹೆಚ್ಚು ಮಾತಾಡುವ, ಹಿಂಜರಿಕೆಯಿಲ್ಲದೆ ಮಾತಾಡುವ ಹೆಂಗಸನ್ನು ಗಂಡುಬೀರಿ ಎನ್ನುತ್ತೇವೆ. ಮಾತುಗಾರರನ್ನು ಜಾಣರೆಂದು ನಂಬುತ್ತೇವೆ. ‘ಮಾತುಬಲ್ಲವರಿಗೆ ಜಗಳವಿಲ್ಲ’ವೆನ್ನುತ್ತೇವೆ. ಮಾತಾಡದವರನ್ನು ಮುಖೇಡಿಗಳೆನ್ನುತ್ತೇವೆ. ನಮ್ಮ ಇಂಥ ತಿಳುವಳಿಕೆಗಳನ್ನು ಬಳಸಿಯೇ ಸಾಮಾಜಿಕ ವ್ಯವಹಾರಗಳನ್ನು ನಾವು ನಡೆಸುತ್ತೇವೆ.

ವ್ಯಕ್ತಿಗಳಿಗೂ ಅವರು ಬಳಸುವ ಭಾಷೆಯ ಸ್ವರೂಪಕ್ಕೂ ಒಂದು ಬಗೆಯ ನಂಟಿದೆಯೆಂದು ನಾವು ತಿಳಿಯುವುದರಿಂದಾಗಿ, ವ್ಯಕ್ತಿಗಳನ್ನು ಹೊಗಳಲು, ನೋಯಿಸಲು, ಉದ್ವಿಗ್ನಗೊಳಿಸಲು ಅವರ ಭಾಷಾಬಳಕೆಯ ವಿಶಿಷ್ಟಾಂಶಗಳನ್ನು ಬಳಸುತ್ತೇವೆ.

ನಮಗೂ ಭಾಷೆಗೂ ಇರುವ ಸಂಬಂಧವನ್ನು ಮೂರು ಹಂತಗಳಲ್ಲಿ ವಿವರಿಸಿಕೊಳ್ಳಬಹುದು. ಭಾಷೆಯನ್ನು ವ್ಯವಹಾರಿಕವಾಗಿ ದಿನನಿತ್ಯವೂ ಬಳಸುವುದು ಮೊದಲ ಹಂತ. ಭಾಷೆಯ ಸ್ವರೂಪವನ್ನು ಅರಿತವರಂತೆ ಕೆಲವು ನಿರ್ಣಯಗಳಿಗೆ ಕಟ್ಟುಬೀಳುವುದು ಎರಡನೆಯ ಹಂತ. ಈ ಹಂತದಲ್ಲಿನ ನಮ್ಮ ನಿರ್ಣಯಗಳು ಬಲವಾದ ಅಭಿಪ್ರಾಯಗಳೂ ಆಗಿರುತ್ತವೆ. ಈ ನಿರ್ಣಯಗಳನ್ನು ಯಾರಾದರೂ ಪ್ರಶ್ನಿಸಿದರೆ, ನಿರ್ಣಯಗಳಿಗೆ ವಿರುದ್ಧವಾಗುವ ಪ್ರಸಂಗಗಳು ಒದಗಿದರೆ ಆಗ ನಮ್ಮ ಪ್ರತಿಕ್ರಿಯೆ ಮೂರನೆಯ ಹಂತವಾಗಿರುತ್ತದೆ. ಕನ್ನಡವನ್ನು ದಿನವೂ ಬಳಸುವುದು ಮೊದಲ ಹಂತ. ಕನ್ನಡದ ಮೂಲಕವೇ ಮಕ್ಕಳಿಗೆ ಶಿಕ್ಷಣ ನೀಡುವುದು ಸೂಕ್ತವೆಂದು ತಿಳಿಯುವುದು ಎರಡನೆಯ ಹಂತ. ಕನ್ನಡದ ಬದಲು ಬೇರೆ ಯಾವುದೇ ಭಾಷೆಯನ್ನು ಶಿಕ್ಷಣಮಾಧ್ಯಮ ಮಾಡಿದಾಗ ಅಥವಾ ಮಾತೃಭಾಷೆಯ ಮೂಲಕ ಕಲಿಯುವುದು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಡ್ಡಿಯೆಂದು ಯಾರಾದರೂ ವಾದಿಸಿದಾಗ ವಾಗ್ವಾದಕ್ಕಿಳಿಯುವುದು, ಚಳುವಳಿ ನಡೆಸುವುದು ಮೂರನೆಯ ಹಂತ.

ಒಂದು ಭಾಷೆಗೆ ಹಲವು ವಿಕಲ್ಪಗಳಿರುತ್ತವೆ. ಭೌಗೋಳಿಕವಾಗಿ ಒಂದು ಪ್ರದೇಶದಲ್ಲಿ ವಾಸಿಸುವ ಜನರು ಬಳಸುವ ಭಾಷೆಯ ಸ್ವರೂಪಕ್ಕೆ ಇನ್ನೊಂದು ಪ್ರದೇಶದಲ್ಲಿ ಬಳಕೆಯಾಗುವ ಅದೇ ಭಾಷೆಯ ಸ್ವರೂಪಕ್ಕೂ ಎದ್ದು ಕಾಣುವ ವ್ಯತ್ಯಾಸಗಳಿರುತ್ತವೆ. ಇಂಥ ಹಲವು ಪ್ರಭೇದಗಳಲ್ಲಿ ಯಾವುದಾದರೊಂದನ್ನು ಶುದ್ಧವೆಂದು, ಅನುಸರಣೀಯ ಮಾದರಿಯೆಂದು ಸಿದ್ಧಾಂತ ಮಾಡುವ ಪ್ರವೃತ್ತಿ ಕಂಡುಬರುತ್ತದೆ. ಇಂಥ ಚಿಂತನೆಯನ್ನು ನಿರ್ದೇಶಾತ್ಮಕ ಪರಂಪರೆಯೆಂದು ಗುರುತಿಸಬಹುದು. ಹೀಗೆ ಶುದ್ಧವೆಂದು ಪರಿಗಣಿಸಿದ ಮಾದರಿಯನ್ನು ಎಲ್ಲ ಭಾಷಿಕರೂ ಬಳಸಬೇಕೆನ್ನಲಾಗುತ್ತದೆ. ಪದಕೋಶ ಮತ್ತು ವ್ಯಾಕರಣದ ಕೆಲವು ನಿಯಮಗಳಿಗೆ ಮಾತ್ರವಲ್ಲದೆ ಉಚ್ಚಾರಣೆಯ ಬಗೆಗಳಿಗೂ ಶುದ್ಧಮಾದರಿಯನ್ನು ಆದರ್ಶವನ್ನಾಗಿ ಸೂಚಿಸಲಾಗುತ್ತದೆ. ಈ ಶುದ್ಧ ಮಾದರಿಯು ಸಾಮಾನ್ಯವಾಗಿ ಲಿಖಿತರೂಪದ ಶಿಷ್ಟ ಭಾಷೆಯಾಗಿರುತ್ತದೆ. ಲಿಖಿತ ಸಾಹಿತ್ಯ ಕೃತಿಗಳಲ್ಲಿ ಔಪಚಾರಿಕವಾದ ಮಾತುಕತೆಗಳಲ್ಲಿ ಈ ಮಾದರಿಯ ನಿದರ್ಶನಗಳು ಸಿಗುತ್ತವೆ. ಈ ಶುದ್ಧ ಮಾದರಿಗೆ ಹೊರತಾದ ಎಲ್ಲ ಪ್ರಭೇದಗಳನ್ನು ಗ್ರಾಮ್ಯ ವೆನ್ನಲಾಗುತ್ತದೆ. ಹಾಗೂ ಅಂಥ ಗ್ರಾಮ್ಯ ಮಾದರಿಗಳನ್ನೂ ಬಿಟ್ಟುಕೊಡುವಂತೆ ಮಾಡುವುದು ಶಿಕ್ಷಣದ ಮುಖ್ಯ ಗುರಿಯಾಗಿರುತ್ತದೆ. ಬಹುಪಾಲು ಲಿಪಿಯುಳ್ಳ ಭಾಷೆಗಳಿಗೆ ಬರೆಯಲಾದ ವ್ಯಾಕರಣಗಳು ನಿರ್ದೇಶಾತ್ಮಕ ಪರಂಪರೆಗೆ ಸೇರುತ್ತವೆ. ನಿಘಂಟುಗಳೂ ಕೂಡ ಆಯ್ದ ಶಿಷ್ಟ ಪ್ರಭೇದದ ಪದಕೋಶ ಮತ್ತು ಅರ್ಥವಿವರಣೆಯನ್ನು ನೀಡುತ್ತವೆ. ನಾಗವರ್ಮ, ಕೇಶಿರಾಜ ಮತ್ತು ಭಟ್ಟಾಕಳಂಕ ಇವರು ರಚಿಸಿದ ಕನ್ನಡ ಭಾಷೆಯ ವ್ಯಾಕರಣಗಳನ್ನು, ಹಳಗನ್ನಡದ ನಿಘಂಟುಗಳನ್ನು ನೋಡಿದರೆ ಅಲ್ಲಿ ಶಿಷ್ಟ ಪ್ರಭೇದದ ಪರವಾದ ನಿಲುವುಗಳು ಗಮನಕ್ಕೆ ಬರುತ್ತವೆ. ಮೊದಮೊದಲು ವ್ಯಾಕರಣಗಳನ್ನು ಬರೆದವರು ಆಯಾ ಭಾಷೆಯ ಸ್ವರೂಪವನ್ನು ಸೂತ್ರೀಕರಿಸಲು ಯತ್ನಿಸಿದವರು. ಹೀಗೆ ಸೂತ್ರೀಕರಿಸುವಾಗ ಭಾಷೆಯ ಬಳಕೆಯ ಅನಂತ ವೈವಿಧ್ಯಗಳ ನಡುವೆ ಸಮಾನವಾದ ನಿಯಮ ವ್ಯವಸ್ಥೆಯೊಂದಿದೆಯೆಂದು ತೋರಿಸಲು ಯತ್ನಿಸುತ್ತಾರೆ. ಯಾವ ಪ್ರೋಗ ಸರಿ ಯಾವುದು ತಪ್ಪು ಎಂಬ ವಿವಾದಗಳಲ್ಲಿ ನಿರ್ಣಯಗಳನ್ನು ನೀಡಲು ಸಿದ್ಧರಾಗುತ್ತಾರೆ. ತಪ್ಪುಗಳಿಗೆ ಪರ್ಯಾಯವಾಗಿ ಸರಿಯಾದ ಪ್ರಯೋಗಗಳನ್ನು ಸೂಚಿಸುತ್ತಾರೆ. ಹೀಗೆ ತಪ್ಪುಗಳನ್ನು ತಿದ್ದಿಕೊಂಡಾಗ ಭಾಷೆಯ ಬಳಕೆ ಶುದ್ಧವಾಗುತ್ತದೆ, ಸೂಕ್ತವಾಗುತ್ತದೆಂದು ನಿರ್ಣಯಿಸುತ್ತಾರೆ. ವ್ಯಾಕರಣದ ಸೂತ್ರಗಳು ಭಾಷಾಬಳಕೆಯನ್ನು ನಿರ್ದೇಶಿಸುವ ನಿಯಮಗಳಾಗುತ್ತವೆ. ಅನುಸರಣೀಯ ಪ್ರಭೇದದ ರೀತಿಗಳನ್ನು ಕಲಿಸಲಾಗುತ್ತದೆ; ಗ್ರಾಮ್ಯ ರೂಪಗಳನ್ನು ನಿವಾರಿಸಲು ತರಬೇತು ನೀಡಲಾಗುತ್ತದೆ.

ಈ ಚಿಂತನಾ ಪರಂಪರೆಯ ಜತೆಗೆ ಇನ್ನೊಂದು ಚಿಂತನೆಯೂ ಬೆಳೆದು ಬರುತ್ತಿದೆ. ಭಾಷೆಯ ಪ್ರಭೇದ ವೈವಿಧ್ಯಗಳಲ್ಲಿ ಸರಿತಪ್ಪುಗಳ ವಿಭಜನೆಗಿಂತ ಎಲ್ಲ ಪ್ರಭೇದಗಳನ್ನು ವರ್ಣಿಸುವುದು ಸೂಕ್ತ ವಿಧಾನವೆಂದು ಈ ಚಿಂತನೆ ಹೇಳುತ್ತದೆ. ನಿರ್ದೇಶಾತ್ಮಕ ಪರಂಪರೆಯ ಬೇರುಗಳು ಇನ್ನೂ ಸಡಿಲ ವಾಗಿಲ್ಲ. ನಮ್ಮ ಸಾಮಾಜಿಕ ಆಚರಣೆ, ಶಿಕ್ಷಣ ಪದ್ಧತಿಗಳಲ್ಲಿ ಇನ್ನೂ ಅದರ ಪ್ರಭಾವವಿದೆ. ಆದರೂ ಪರ್ಯಾಯವಾದ ಚಿಂತನೆ ಬಲಗೊಳ್ಳುತ್ತಿದೆ. ವೈವಿಧ್ಯವನ್ನು ನಿರಾಕರಿಸುವ, ಪರಿವರ್ತನೆಗಳಿಗೆ ಅಡ್ಡಿ ತರುವ ನಿರ್ದೇಶನಗಳಿಗೆ ವಸ್ತುಸ್ಥಿತಿಯ ಸಮಗ್ರ ಗ್ರಹಿಕೆ ಸೂಕ್ತವೆಂಬುದು ಈ ವರ್ಣನಾತ್ಮಕ ಪರಂಪರೆಯ ಚಿಂತನೆಯ ಸಾರ. ಆಡುನುಡಿಯ ವೈವಿಧ್ಯಗಳಿಗೆಲ್ಲ ಅನುವು ಮಾಡಿಕೊಡುವ ಈ ಚಿಂತನೆ ಹಳೆಯದಾದರೂ ಬಲವಾಗಿ ಬೇರುಬಿಟ್ಟಿಲ್ಲ. ನಿರ್ದೇಶಾತ್ಮಕ ಪರಂಪರೆಯ ವ್ಯಾಕರಣಕಾರರು ಭಾಷೆಯ ಬೆಳವಣಿಗೆಯ ತುಡಿತಗಳಿಗೆ ಗಮನ ಕೊಡದೆ ಅದನ್ನು ನಿರ್ಲಕ್ಷಿಸುತ್ತಾರೆ. ಆದರೆ ಭಾಷೆ ಅವರನ್ನು ನಿರ್ಲಕ್ಷಿಸಿ ತನ್ನ ಪಾಡಿಗೆ ತಾನು ವೈವಿಧ್ಯಗಳನ್ನು ಕಾಯ್ದುಕೊಳ್ಳುತ್ತದೆ.

1. ಶಬ್ದಮಣಿ ದರ್ಪಣಂ : ಕೇಶಿರಾಜನ ವ್ಯಾಕರಣ ಬಹು ಚರ್ಚಿತವಾಗಿದೆ. ವ್ಯಾಕರಣದಲ್ಲಿ ಕನ್ನಡ ಭಾಷೆಯ ಪ್ರಮಾಣೀಕೃತ ರೂಪವನ್ನು ವಿವರಿಸಲು ಯತ್ನ ನಡೆದಿದೆ. ಸಂಸ್ಕೃತ ಭಾಷೆಯ ರಚನೆಯನ್ನು ಕನ್ನಡ ಭಾಷೆಯಲ್ಲಿ ಕಾಣಲು ತೊಡಗುವಾಗ ಉಂಟಾಗುವ ತೊಡಕುಗಳು ಇಲ್ಲಿ ಕಾಣಸಿಗುತ್ತವೆ. ಉದಾರಹಣೆಗಳನ್ನು ನೀಡುವಾಗ ಕೇಶಿರಾಜನು ತನಗಿಂತ ಹಿಂದಿನ ಕನ್ನಡ ಕೃತಿಗಳನ್ನು ಆಶ್ರಯಿಸುತ್ತಾನೆ. ಅವನ ಹೊತ್ತಿಗೆ ಕನ್ನಡ ಭಾಷೆಯ ಧ್ವನಿ ರಚನೆಯಲ್ಲಿ ನಡೆಯುತ್ತಿದ್ದ ಬದಲಾವಣೆಗಳನ್ನು ದಾಖಲಿಸುತ್ತಲೇ ನಿರ್ದೇಶಾತ್ಮಕ ವ್ಯಾಕರಣದ ಮಾದರಿಯಲ್ಲಿ ಕೆಲವು ಸೂಚನೆಗಳನ್ನೂ ನೀಡುತ್ತಾನೆ. ಆಡುಮಾತು ಮತ್ತು ಲಿಪಿಕರಣದ ನಡುವೆ ಇರುವ ಎಷ್ಟೋ ಇಕ್ಕಟ್ಟುಗಳನ್ನು ಕೇಶಿರಾಜನ ಕೃತಿ ನಮ್ಮ ಗಮನಕ್ಕೆ ತರುತ್ತದೆ.

ಭಾಷೆಯ ವೈವಿಧ್ಯಗಳಲ್ಲಿ ‘ಶುದ್ಧ’ವಾದುದುರ ಪರವಾಗಿ ನಿಲ್ಲುವ ‘ದಂಡಧಾರಿ’ಗಳು ಮತ್ತು ಭಾಷೆಯ ಎಲ್ಲ ವೈವಿಧ್ಯಗಳನ್ನು ವರ್ಣಿಸಿ ಬೆಳಕು ಚೆಲ್ಲುವ ‘ದೀಪಧಾರಿ’ಗಳ ನಡುವೆ ಚರ್ಚೆಗಳು ಮುಂದುವರೆದಿವೆ. ಎರಡೂ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ವರ್ಣನಾತ್ಮಕ ಪರಂಪರೆಯವರು ಅರಾಜಕತೆಯನ್ನು ಪ್ರೇರೇಪಿಸುತ್ತಾರೆಂದು ಒಂದು ಪಕ್ಷದವರು ಹೇಳಿದರೆ ನಿರ್ದೇಶಾತ್ಮಕ ಪರಂಪರೆಯವರು ಕಣ್ಣಪಟ್ಟಿ ಕಟ್ಟಿದ ಕುದುರೆಯಂತಿದ್ದಾರೆಂದೂ ವಾಸ್ತವದ ಸಮಗ್ರ ಗ್ರಹಿಕೆಗೆ ದೂರವಾಗಿ ದ್ದಾರೆಂದೂ ಆರೋಪಿಸಲಾಗಿದೆ.