ಈ ವಾದ ಪ್ರತಿವಾದಗಳ ಮಾತನ್ನು ದೂರವಿರಿಸಿ ಎರಡೂ ಚಿಂತನೆಗಳನ್ನು ಪರಿಶೀಲಿಸಿದರೆ ಎರಡರಲ್ಲೂ ಸ್ವೀಕಾರ ಯೋಗ್ಯವಾದ ವಿಚಾರಗಳಿರುವುದು ತಿಳಿಯುತ್ತದೆ. ಮಾತ್ರವಲ್ಲ; ನಾವು ತಿಳಿದುಕೊಂಡಂತೆ ಅಥವಾ ವಾದ ವಿವಾದಗಳಲ್ಲಿ ಮಂಡಿತವಾದಂತೆ ಎರಡು ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ವಿರುವಷ್ಟೇ ಸಮಾನಾಂಶಗಳಿರುವುದು ಕಾಣುತ್ತದೆ. ಭಾಷೆಯ ಬಳಕೆಯಲ್ಲಿ ಸುಭಗತೆ, ಗ್ರಾಹ್ಯತೆ, ನಿರ್ದುಷ್ಟತೆ ಇರಬೇಕೆಂಬ ವಿಷಯದಲ್ಲಿ ಈ ಎರಡೂ ಪಕ್ಷಗಳ ನಡುವೆ ವಿವಾದಗಳಿರುವುದು ಸಾಧ್ಯವಿಲ್ಲ. ಶುದ್ಧವಾದುದು ಯಾವುದೆಂದು ನಿರ್ಣಯಿಸುವುದು ಹೇಗೆ? ಇರುವ ಎಲ್ಲ ಪ್ರಭೇದಗಳನ್ನು ಪರಿಶೀಲನೆ ಮಾಡುವುದು; ಅವುಗಳಲ್ಲಿ ಭಾಷೆಯ ಮೂಲಭೂತ ಆವಶ್ಯಕತೆಗಳಿಗೆ ಅಡ್ಡಿಯಾಗುವ ಅಂಶಗಳನ್ನು ಕಂಡುಕೊಳ್ಳುವುದು. ಅನಂತರವೇ ಸರ್ವಗ್ರಾಹ್ಯವಾದ ಪ್ರಭೇದವನ್ನು, ಅದರ ಸಾಧ್ಯತೆಗಳನ್ನು ರೂಪಿಸುವುದು ಸಾಧ್ಯ. ಹೀಗಾಗಿ ದೀಪಧಾರಿಗಳ ವಿಧಾನ ಅತ್ಯವಶ್ಯ. ದಂಡಧಾರಿಗಳು ಮೇಲುನೋಟಕ್ಕೆ ನಿಯಮಪಾಲಕರಂತೆ, ವೈವಿಧ್ಯಗಳ ನಿವಾರಕರಂತೆ ಕಂಡರೂ ಅವರ ಚಿಂತನೆಗಳು ಸಾಮಾಜಿಕ ಸಂರಚನೆಗಳನ್ನು ಸಂಕೇತಿಸುತ್ತವೆ ಹಾಗೂ ಇವರ ನಿಲುವುಗಳನ್ನು ಅರಿಯುವ ಮೂಲಕವೇ ಸಮಾಜದ ಅಧ್ಯಯನದ ನೆಲೆಗಳು ಪೂರ್ಣಗೊಳ್ಳುತ್ತವೆ. ಇಂದಿನ ದಿನಗಳಲ್ಲಿ ಭಾಷಾಧ್ಯಯನಕಾರರು ನಿರ್ದೇಶಾತ್ಮಕ ಚಿಂತನೆಗಳನ್ನು ನಿರ್ಲಕ್ಷಿಸುವ ಬದಲು ಆ ಚಿಂತನೆಗಳ ಮೂಲಕ ಅವುಗಳನ್ನು ರೂಪಿಸಿದ ಸಾಮಾಜಿಕ ಸಂರಚನೆಗಳನ್ನು ಅಭ್ಯಾಸ ಮಾಡತೊಡಗಿದ್ದಾರೆ.

ನಿರ್ದೇಶಾತ್ಮಕ ಪರಂಪರೆ ಕಾರ್ಯಶೀಲವಾಗುವ ವಿಧಾನಗಳಲ್ಲಿ ಭಾಷಾ ಪರಿಷತ್ತುಗಳ ನಿರ್ಮಾಣವೂ ಒಂದು. ಭಾಷಿಕರು ತಮ್ಮ ಭಾಷೆಯನ್ನು, ಅದರ ಬಳಕೆಯನ್ನು ಗಮನಿಸತೊಡಗಿದ ಕೂಡಲೇ ತಂತಮ್ಮ ಭಾಷೆಗಾಗಿ ಭಾಷಾಪರಿಷತ್ತುಗಳನ್ನು ರಚಿಸಿಕೊಳ್ಳುತ್ತಾರೆ. 1896 ರಲ್ಲಿ  ಮೈಸೂರಿನಲ್ಲಿ ಭಾಷೋಜ್ಜೀವಿನಿ ಸಭಾ ಎಂಬೊಂದು ಸಂಸ್ಥೆ ಮೊದಲಾಯಿತು. ಅದಕ್ಕೂ ಮೊದಲು 1881 ರಲ್ಲಿ ಧಾರವಾಡದಲ್ಲಿ ಮೊದಲಾದ ಕರ್ನಾಟಕ ವಿದ್ಯಾ ವರ್ಧಕ ಸಂಘ ಮತ್ತು 1916 ರಲ್ಲಿ ಪ್ರಾರಂಭಗೊಂಡ ಕರ್ನಾಟಕ ಸಾಹಿತ್ಯ ಪರಿಷತ್ತು ಇವೆಲ್ಲವೂ ಒಂದಿಲ್ಲೊಂದು ಬಗೆಯಲ್ಲಿ ಕನ್ನಡ ಭಾಷಾ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದ್ದವು. ಇಂಥದ್ದೇ ಪರಿಸ್ಥಿತಿಯನ್ನು ಎಲ್ಲ ದೇಶಗಳಲ್ಲೂ ನೋಡಬಹುದಾಗಿದೆ. 1582 ರಲ್ಲಿ ‘ಅಕಾಡೆಮಿಯ ದೆಲ್ಲ ಕ್ರುಸ್ಕ’ ಎಂಬ ಸಂಸ್ಥೆ ಇಟಲಿಯಲ್ಲಿ ಪ್ರಾರಂಭಗೊಂಡಿತು. 1635 ರಲ್ಲಿ ಅಕಾಡೆಮಿ ಫ್ರಾಂಕ್ವಾ ಎಂಬ ಸಂಸ್ಥೆಯನ್ನು ಕಾರ್ಡಿನಲ್ ರಿಚ್ಲೂ ಸ್ಥಾಪಿಸಿದನು. ಉದ್ದೇಶ: ನಮ್ಮ ಭಾಷೆಗೆ ನಿರ್ದಿಷ್ಟವಾದ ನಿಯಮ ಗಳನ್ನು ನೀಡಲು ಎಚ್ಚರಿಕೆಯಿಂದ ನಿಯತವಾದ ಕ್ರಮಗಳನ್ನು ಕೈಗೊಳ್ಳುವುದು. ಭಾಷೆಗೆ ಎಲ್ಲ ಬಗೆಯ ಅಭಿವ್ಯಕ್ತಿಗಳೂ ಸಾಧ್ಯವಾಗುವಂತೆ ಶುದ್ಧಗೊಳಿಸುವುದು ಸರಳಗೊಳಿಸುವುದು. ಈ ಅಕಾಡೆಮಿ ಇಂದೂ ಇದೆ. ಚರ್ಚ್, ಶ್ರೀಮಂತ ವರ್ಗ ಮತ್ತು ಸೇನೆಯಿಂದ ಆಯ್ದ ನಲವತ್ತು ಜನರು ಅದರ ಸದಸ್ಯರು. 1694 ರಲ್ಲಿ ಈ ಅಕಾಡೆಮಿ ಮೊದಲ ನಿಘಂಟನ್ನು ಪ್ರಕಟಿಸಿತು.

ಫಿಲಿಫ್.ವಿ ಎಂಬಾತ 1713 ರಲ್ಲಿ ಸ್ಪ್ಯಾನಿಶ್ ಅಕಾಡೆಮಿಯನ್ನು ಸ್ಥಾಪಿಸಿದನು. ದಕ್ಷಿಣ ಅಮೆರಿಕದ ಸ್ಪಾನಿಶ್ ವಸಾಹತುಗಳಲ್ಲಿ ಅನಂತರದ ಇನ್ನೂರು ವರ್ಷಗಳೊಳಗೆ ಈ ಅಕಾಡೆಮಿಯ ಶಾಖೆಗಳು ಸ್ಥಾಪನೆಯಾದವು. 1786 ರಲ್ಲಿ ಸ್ವೀಡಿಶ್ ಅಕಾಡೆಮಿ ಸ್ಥಾಪನೆಯಾಯಿತು. ಸಿರಿಯಾ, ಇರಾಕ್ ಮತ್ತು ಈಜಿಪ್ಟ್ ಹೀಗೆ ಮೂರು ಕಡೆ ಅರಾಬಿಕ್ ಅಕಾಡೆಮಿಗಳು ಸ್ಥಾಪನೆಯಾದವು. 1830ರಲ್ಲಿ ಹಂಗೇರಿಯನ್ ಭಾಷಾ ಸಮಿತಿ ಮೊದಲಾಯಿತು. ಹಿಬ್ರೂ ಅಕಾಡೆಮಿಯು ಈಚೆಗೆ 1953 ರಲ್ಲಿ ಸ್ಥಾಪನೆ ಯಾಯಿತು.

ಜಾನ್ ಡ್ರೈಡನ್ ಮತ್ತು ಡೇನಿಯಲ್ ಡಫೋ 17 ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಇಂಥದೊಂದು ಸಂಸ್ಥೆಯನ್ನು ರೂಪಿಸಲು ಯತ್ನಿಸಿದರು. ಇಂಥದೊಂದು ಸಂಸ್ಥೆಯ ಸದಸ್ಯರು ಭಾಷೆಯ ಬಳಕೆಯ ಸರಿತಪ್ಪುಗಳ ಬಗ್ಗೆ ನಿರ್ಣಯ ನೀಡುವಂತಿರಬೇಕೆಂದೂ ಅವರ ಅಪ್ಪಣೆಯಿಲ್ಲದೆ ಯಾರೂ ಹೊಸ ಪದಗಳನ್ನು ಟಂಕಿಸುವ ಅಪರಾಧವನ್ನು ಮಾಡುವಂತಿರಬಾರದೆಂದೂ ಹೊಸ ಪದಗಳನ್ನು ರೂಪಿಸುವುದು ಬದಲಿ ನಾಣ್ಯಗಳನ್ನು ಮುದ್ರಿಸುವ ಬಗೆಯ ಅಪರಾಧವೆಂದೂ ಇವರು ಹೇಳುತ್ತಾರೆ.

1712 ರಲ್ಲಿ ಜೋನಾಥನ್ ಸ್ವಿಫ್ಟ್, ಅರ್ಲ್ ಆಫ್ ಆಕ್ಸ್‌ಫರ್ಡ್ – ಈತ ಇಂಗ್ಲೆಂಡಿನ ಖಜಾಂಚಿ-ಗೆ ನೀಡಿದ ಅಹವಾಲು (ಪ್ರಪೋಸಲ್ ಫಾರ್ ಕರೆಕ್ಟಿಂಗ್, ಇಂಪ್ರೂವಿಂಗ್ ಅಂಡ್ ಅಸರ್ಟೈನಿಂಗ್ ಇಂಗ್ಲಿಷ್ ಟಂಗ್)ನಲ್ಲಿ ಹೀಗೆಂದಿದ್ದಾನೆ: ನಮ್ಮ ಭಾಷೆ ಮೇಳ ತಪ್ಪಿದೆ. ಅದರಲ್ಲಿ ದಿನವಹಿ ನಡೆಯುತ್ತಿರುವ ತಿದ್ದುಪಾಟುಗಳಿಗಿಂತ ಹೆಚ್ಚಾಗಿ ದಿನದಿನವೂ ದೋಷಗಳು ಸಂಭವಿಸುತ್ತವೆ. ತಿದ್ದುವ ಹೊಣೆ ಹೊತ್ತವರು ಮತ್ತಷ್ಟು ಕುಲಗೆಡಿಸಿದ್ದಾರೆ. ಭಾಷೆ ಅಪರಿಪೂರ್ಣವಾಗಿದ್ದರೂ ಚಿಂತೆಯಿಲ್ಲ; ನಿರಂತರವಾಗಿ ಪರಿವರ್ತನೆ ಯಾಗುವುದನ್ನು ತಡೆಯಬೇಕು. ಈ ನಿಲುವಿಗೆ ಸಹಮತ ದೊರಕಲಿಲ್ಲ. ಮುಂದಿನ ದಶಕಗಳಲ್ಲಿ ಈ ನಿಲುವನ್ನು ನಿರಾಕರಿಸುವ ಪ್ರವೃತ್ತಿ ಮೊದಲಾಯಿತು. ಫ್ರಾನ್ಸ್, ಇಟಲಿಗಳಲ್ಲಿ ಶುದ್ದೀಕರಣ ಯತ್ನ ಯಶಸ್ಸು ಪಡೆದಿಲ್ಲವೆಂಬುದನ್ನು ಅರಿತವರು ಭಾಷೆಯ ಬೆಳವಣಿಗೆ ಸಹಜವೆಂದು ತಿಳಿದರು. ಇಂಗ್ಲಿಷ್ ಭಾಷೆಯ ಮಹಾನ್ ನಿಘಂಟುಕಾರ ಜಾನ್‌ಸನ್ ಕಟ್ಟುಪಾಡುಗಳನ್ನು ಸೂಚಿಸುವ ಸಂಸ್ಥೆಗಳು ನಿರುಪಯುಕ್ತವೆಂದು ತಿಳಿದಿದ್ದನು. ಬದಲಾಗದ ಭಾಷೆಗಳಿಲ್ಲ. ಹಾಗಾಗಿ ನಿಘಂಟುಕಾರನೊಬ್ಬ ತನ್ನ ಭಾಷೆಯನ್ನು ಭ್ರಷ್ಟಗೊಳಿಸುವುದರಿಂದ, ನಾಶದಿಂದ ತಡೆಯುತ್ತೇನೆನ್ನುವುದು, ಭಾಷೆಯ ಅಂತರ್ಗತ ಗುಣಗಳನ್ನು ಬದಲಾಯಿಸುತ್ತೇನೆನ್ನುವುದು, ಎಲ್ಲ ದೋಷಗಳಿಂದ ಮುಕ್ತಗೊಳಿಸುವೆನೆನ್ನುವುದು ಹುಚ್ಚುತನವೆಂದು ಆತನ ತಿಳುವಳಿಕೆ. ಹಾಗಾಗಿ ಇಂಗ್ಲೆಂಡ್‌ನಲ್ಲಾಗಲೀ ಇಂಗ್ಲಿಷ್ ಭಾಷೆಗಾಗಲೀ ಯಾವುದೇ ಭಾಷಾಪರಿಷತ್ತು ಸ್ಥಾಪನೆಯಾಗಲಿಲ್ಲ. ಅನಂತರದ ಪ್ರಯತ್ನಗಳೂ ನೆಲೆಗಾಣಲಿಲ್ಲ. ಆದ್ದರಿಂದಲೇ ವ್ಯಾಕರಣಗಳನ್ನು, ನಿಘಂಟುಗಳನ್ನು, ಭಾಷಾಕೈಪಿಡಿಗಳನ್ನು ರಚಿಸುವ ಹೊಣೆಗಾರಿಕೆಯನ್ನು ವ್ಯಕ್ತಿಗಳೇ ನಿರ್ವಹಿಸಿದ್ದಾರೆ. ಭಾಷೆಯಲ್ಲಿ ಆಗುವ ಪರಿವರ್ತನೆಗಳು ಸುಲಭವಾಗಿ ಆಯಾ ಭಾಷಿಕರ ಗಮನವನ್ನು ಸೆಳೆಯುತ್ತವೆ. ಎಲ್ಲ ತಲೆಮಾರಿನವರೂ ತಮಗಿಂತ ಕಿರಿಯರ ಭಾಷಾ ಬಳಕೆಯನ್ನು ಕೇಳಿ ಭಾಷೆಗೆ ಒದಗಿರುವ ದುಃಸ್ಥಿತಿಯನ್ನು ಹೇಳಿಕೊಂಡು ಮರುಗುತ್ತಾರೆ. ಭಾಷೆಯ ಮಟ್ಟ ಕುಸಿದಿದೆಯೆಂದು ಹಲುಬುತ್ತಾರೆ. ಅಂದರೆ ಬಹುಮಟ್ಟಿಗೆ ಬದಲಾವಣೆಯನ್ನು ಹೀನಸ್ಥಿತಿಯತ್ತ ಇಟ್ಟ ಹೆಜ್ಜೆಯೆಂದೇ ತಿಳಿಯುತ್ತಾರೆ. ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಭಾಷಾ ಲಕ್ಷಣಗಳನ್ನು ಬೋಧಿಸುತ್ತಿಲ್ಲವೆಂದು ಹೇಳುತ್ತಾರೆ. ಜನ ಸಂಪರ್ಕಮಾಧ್ಯಮ ಗಳ ಭಾಷಾಬಳಕೆಯಲ್ಲಿ ಭಾಷಾಮಟ್ಟ ಕೆಳಗಿಳಿದಿದೆಯೆಂದು ವಾದಿಸುತ್ತಾರೆ. ವಾರ್ತಾಪ್ರಸಾರ, ಚರ್ಚೆ, ವರದಿಗಳ ಭಾಷೆಯಲ್ಲಿ  ಈಗಾಗಲೇ ಸಾಮಾನ್ಯವಾಗಿ ಒಪ್ಪಿತವಾಗಿರುವ ಭಾಷೆಯ ಲಕ್ಷಣಗಳನ್ನು ಸ್ವಲ್ಪ ಬದಲಾಯಿಸಿದರೂ ಅದನ್ನು ಚರ್ಚೆಗೆ ಗುರಿಪಡಿಸುತ್ತಾರೆ.

ಜನ ಭಾಷೆಯಲ್ಲಾಗುವ ಪರಿವರ್ತನೆಗಳನ್ನು ಎಷ್ಟೇ ವಿರೋಧಿಸಿದರೂ ಅವು ಸಂಭವಿಸುತ್ತಲೇ ಇರುತ್ತವೆ. ಇಂಥ ಪರಿವರ್ತನೆಗಳನ್ನು ಅಸಹನೆಯಿಂದ ನೋಡಿ ತಿರಸ್ಕರಿಸಲು ದೂರವಿಡಲು ಯತ್ನಿಸಿದರೂ ಭಾಷೆ ನಿರಂತರವಾಗಿ ಬದಲಾಗುವುದನ್ನು ತಡೆಯಲಾಗುವುದಿಲ್ಲ. ಎಲ್ಲ ಕಾಲದಲ್ಲೂ ಪರಿವರ್ತನೆಗಳನ್ನು ವಿರೋಧಿಸುವ ಯತ್ನಗಳು ನಡೆದಿವೆ. ಪ್ರಮಾಣ ಹಾಗೂ ಸ್ವರೂಪ ಗಳು ಭಿನ್ನವಾಗಿರಬಹುದು. ಬದಲಾವಣೆಗಳು ಹೀಗೆ ನಡೆಯುತ್ತ ಹೋದರೆ ಒಂದಿಲ್ಲೊಂದು ದಿನ ಭಾಷೆ ನಾಶವಾಗುವುದೆಂದು ಕಣಿ ಹೇಳಿರುವ ಪ್ರಸಂಗಗಳಿವೆ. ಏನೇ ಆಗಲಿ ಬದಲಾವಣೆ ಹೊಂದುವುದರಿಂದಲೇ ಭಾಷೆ ನಾಶವಾಗುವುದೆಂಬ ನಂಬಿಕೆಗೆ ಆಧಾರಗಳಿಲ್ಲ. ಬದಲಾಗುವುದು ಭಾಷೆಯ ಮುಖ್ಯ ಲಕ್ಷಣ.

ರಾಜಕೀಯ ಸಂದರ್ಭ, ತೀವ್ರ ಭಾಷಾ ಸಂಪರ್ಕ, ವಾಣಿಜ್ಯ ಸನ್ನಿವೇಶಗಳಿಂದಾಗಿ ಕೆಲವೊಮ್ಮೆ ಒಂದೇ ಭಾಷಾ ಸಮುದಾಯದ ಒಂದು ವಲಯದಲ್ಲಿ ನಡೆಯುವ ಬದಲಾವಣೆಗಳು ಅಲ್ಲಿನ ಭಾಷೆಯನ್ನು ಎಷ್ಟು ಪರಿವರ್ತಿಸಿ ಬಿಡುತ್ತವೆಯೆಂದರೆ ಇನ್ನೊಂದು ವಲಯದ ಜನರಿಗೆ ಅದು ಅರ್ಥವಾಗದೇ ಹೋಗಬಹುದು; ಅಸ್ಪಷ್ಟತೆ, ಅರ್ಥ ಸಂದಿಗ್ಧತೆಗಳು ಉಂಟಾಗಬಹುದು. ಇದರಿಂದ ಸಾಮಾಜಿಕ ಸಂವಹನವೂ ಕುಸಿದು ಬೀಳುವುದು ಸಾಧ್ಯ. ಆದರೆ ಇಂಥ ಅತಿರೇಕ ಪರಿಸ್ಥಿತಿಗಳು ಅಪರೂಪ. ಸಾಮಾನ್ಯವಾಗಿ ಬದಲಾವಣೆಗಳು ನಿಧಾನವಾಗಿ ಸಂಭವಿಸುತ್ತವೆ ಮತ್ತು ಭಾಷೆಯ ಯಾವುದೋ ಒಂದು ಅಂಗವನ್ನು ಪ್ರಭಾವಿಸುತ್ತಿರುತ್ತವೆ. ಬದಲಾವಣೆಯಿಂದ ಪ್ರಭಾವಿತವಾಗದ ಭಾಷಾಂಗಗಳ ಪ್ರಮಾಣ ಅಧಿಕವಾಗಿರುತ್ತದೆ. ಹಾಗಾಗಿ ತೀವ್ರಗೊಳ್ಳದ ಯಾವ ಪರಿವರ್ತನೆಯೂ ಜನರ ಗಮನವನ್ನು ಸೆಳೆಯಲಾರದು. ಕನ್ನಡದಲ್ಲಿ ‘ೞ’ ಮತ್ತು ‘ಳ’ ಧ್ವನಿಗಳನ್ನು ಭಿನ್ನವಾಗಿ ಉಚ್ಚರಿಸಲಾಗುತ್ತಿತ್ತು. ಸುಮಾರು ಒಂದು ಸಾವಿರ ವರ್ಷದ ಹಿಂದೆ ಇವೆರಡೂ ಧ್ವನಿಗಳನ್ನು ಉಚ್ಚರಿಸುವ ವಿಧಾನದಲ್ಲಿ ಬದಲಾವಣೆ ಮೊದಲಾಯಿತು. ಎರಡನ್ನೂ ‘ಳ’ ಕಾರದಂತೆಯೇ ಉಚ್ಚರಿಸಲು ತೊಡಗಿದ್ದಾರೆ. ಸುಮಾರು ಒಂದು ಶತಮಾನ ಕಾಲ ಈ ಪಲ್ಲಟ ನಡೆದು ಕೊನೆಗೆ ೞ ಕಾರದ ಉಚ್ಚಾರಣೆ ಸಂಪೂರ್ಣ ನಿಂತುಹೋಗಿದೆ. ಈಗ ಕನ್ನಡದ ಮೂರ್ಧನ್ಯ ಧ್ವನಿಗಳಾದ ಟ, ಠ, ಡ, ಢ, ಣಗಳನ್ನು ವರ್ತ್ಸ್ಯ ಧ್ವನಿಗಳನ್ನಾಗಿ ಉಚ್ಚರಿಸುವ ಪ್ರವೃತ್ತಿ ಬೆಳೆಯುತ್ತಿದೆ. ಈ ಬದಲಾವಣೆ ಎಚ್ಚರಿಕೆಯಿಂದ ಗಮನಿಸಿದ ಹೊರತು ಗೊತ್ತಾಗುವುದೇ ಇಲ್ಲ. ಇದು ಸ್ಥಿರಗೊಳ್ಳಲು ಹಲವಾರು ದಶಕಗಳೇ ಬೇಕಾಗಬಹುದು. ಈಗ ಯಾರೂ ಆ ಧ್ವನಿಗಳನ್ನು ಮೂರ್ಧನ್ಯಗಳನ್ನಾಗಿ ಉಚ್ಚರಿಸಲು ಒತ್ತಾಯಿ ಸುತ್ತಿಲ್ಲ.

ಶಾಲೆಯ ವ್ಯಾಕರಣಗಳು :ಭಾಷೆಯ ರಚನೆಯನ್ನು ವಿವರಿಸುವ ನಿಯಮಗಳನ್ನು ವ್ಯಾಕರಣಗಳು ಸಾದರಪಡಿಸುತ್ತವೆ. ಲಿಖಿತ ಮತ್ತು ಪ್ರಮಾಣ ಭಾಷೆಯೇ ವ್ಯಾಕರಣಗಳಿಗೆ ಆಧಾರ. ಇವು ಪಾರಿಭಾಷಿಕ ಪದಗಳನ್ನು ಧಾರಾಳವಾಗಿ ಬಳಸುತ್ತವೆ. ಭಾಷೆಯ ರಚನೆಯನ್ನು ವಿವರಿಸುವಾಗ ಹೇಗೆ’?ಎಂಬುದು ವ್ಯಾಕರಣಗಳಿಗೆ ಮುಖ್ಯ. ಏಕೆ’?ಎಂಬುದು ಅಷ್ಟು ಮುಖ್ಯವಲ್ಲ. ಉದಾ.ಗೆ ಮನೆಯನ್ನುಮತ್ತು ಕಾಲನ್ನುಎಂಬ ಎರಡು ರೂಪಗಳನ್ನು ವಿವರಿಸುವಾಗ ಮೊದಲನೆಯದು ಆಗಮಸಂಧಿಗೂ ಎರಡನೆಯದು ಲೋಪಸಂಧಿಗೂ ಉದಾಹರಣೆಯೆಂದು ಹೇಳುತ್ತಾರೆ. ಆದರೆ ಒಂದೆಡೆ ಯಕಾರಾಗಮವೂ (ಮನೆ+ಅನ್ನು)ಮತ್ತೊಂದೆಡೆ ಉಕಾರ ಲೋಪವೂ (ಕಾಲು+ಅನ್ನು)ಏಕೆ ನಡೆಯುತ್ತವೆ ಎಂದು ವಿವರಿಸುವುದಿಲ್ಲ.

ಭಾಷಿಕ ಸಮುದಾಯಗಳು ಭಾಷಾ ಪರಿವರ್ತನೆಗಳನ್ನು ಒಪ್ಪಿಕೊಂಡರೂ ಇಡೀ ಸಮುದಾಯದ ನಡುವೆ ಭಾಷಿಕ ಸಾಮರಸ್ಯವನ್ನು ಕಾಯ್ದುಕೊಳ್ಳಲು ಮತ್ತು ಸಾಮಾಜಿಕ ಸ್ಥಿರತೆಯನ್ನು ಸಾಧಿಸಲು ಪರಿವರ್ತನೆಗಳ ದಿಕ್ಕು ಮತ್ತು ವೇಗಗಳನ್ನು ನಿಯಂತ್ರಿಸುವುದು ಅವಶ್ಯ. ಈ ಶತಮಾನದಲ್ಲಿ ಈ ನೆಲೆಯಲ್ಲಿ ಸಾಕಷ್ಟು ಯತ್ನಗಳು ನಡೆದಿವೆ. ಈ ಯತ್ನಗಳು ಬದಲಾವಣೆಗಳನ್ನು ನಿರಾಕರಿ ಸಲು ಉದ್ದೇಶಿತವಾಗಿರುವುದಿಲ್ಲ. ಬದಲಾವಣೆಗಳ ಸ್ವರೂಪವನ್ನು ಗ್ರಹಿಸಿ ಅವುಗಳನ್ನು ಯೋಜಿತ ರೀತಿಯಲ್ಲಿ ಅಳವಡಿಸುವ ಗುರಿ ಹೊಂದಿರುತ್ತವೆ.

ಭಾಷೆಗೆ ಸಾಮಾಜಿಕ ಆಯಾಮವಿದೆ. ಸಮಾಜದಲ್ಲಿ ಸಂಭವಿಸುವ ಹಲವು ಪರಿವರ್ತನೆಗಳು ಭಾಷೆಯ ಮೇಲೂ ಪರಿಣಾಮ ಬೀರುತ್ತವೆ; ಭಾಷೆಯಲ್ಲಿ ಪರಿವರ್ತನೆಗಳನ್ನು ಉಂಟುಮಾಡುತ್ತವೆ. ಸಮಾಜದ ಬದಲಾವಣೆಯನ್ನು ತಡೆಯುವುದು ಸಾಧ್ಯವಿಲ್ಲ. ತಡೆಯುವ ಯತ್ನಗಳು ನಿರರ್ಥಕ. ಆದರೆ ಬದಲಾವಣೆಗಳನ್ನು ಯೋಜಿತ ರೀತಿಯಲ್ಲಿ ನಿಯಂತ್ರಿಸ ಬಹುದು. ಅಂದರೆ ಆಗ ಪರೋಕ್ಷವಾಗಿ ಭಾಷಾ ಪರಿವರ್ತನೆಗಳಿಗೂ ನಿರ್ದಿಷ್ಟ ದಿಕ್ಕು ಒದಗಿದಂತಾಗುತ್ತದೆ. ಆಧುನಿಕ ಸಮಾಜಗಳಲ್ಲಿ ಬಹುಭಾಷಾ ಸಮುದಾಯಗಳಿವೆ. ಹಾಗೇ ಒಂದು ಭಾಷಿಕ ಸಮುದಾಯದಲ್ಲಿ ಹಲವಾರು ಜನಾಂಗಗಳು, ಬುಡಕಟ್ಟುಗಳು, ಜಾತಿಗಳು ಬೆರೆತಿರುತ್ತವೆ. ಸಾಮಾಜಿಕ ಪರಿವರ್ತನೆಯ ಸಂಕಷ್ಟಗಳನ್ನು ಎಲ್ಲ ಸಮಾಜಗಳೂ ಅನುಭವಿಸುತ್ತವೆ. ಇದನ್ನು ಎದುರಿಸಲು ಸಿದ್ಧವಾಗುವ ಭಾಷಾಪರಿವರ್ತನೆಗಳ ಸ್ವರೂಪವನ್ನೂ ಗ್ರಹಿಸುವುದು ಅನಿವಾರ್ಯ. ಸಮಾಜಗಳ ಸಹಬಾಳ್ವೆಯನ್ನು ಯೋಜಿಸುವಾಗ ಭಾಷಿಕ ಸಹಬಾಳ್ವೆಯನ್ನು ಬೆಳೆಸಬೇಕಾಗುತ್ತದೆ. ಶಾಲೆಗಳು ಭಾಷೆಯ ವೈವಿಧ್ಯವನ್ನು ಒಪ್ಪಿಕೊಳ್ಳುತ್ತಲೇ ಪ್ರಮಾಣಭಾಷೆಯ ಉಪಯುಕ್ತತೆಯ ಕಡೆಗೆ ಗಮನ ಸೆಳೆಯಬೇಕು. ಇವೆರಡನ್ನೂ ಎದರುಬದುರು ನಿಲ್ಲಿಸುವಂತಿಲ್ಲ. ಭಾಷೆಯಲ್ಲಿ ನಡೆಯುತ್ತಿರುವ ಬದಲಾವಣೆಗಳು ಧ್ವನಿ, ಉಚ್ಚಾರಣೆ, ಪದಕೋಶ, ವ್ಯಾಕರಣ ಹೀಗೆ ಯಾವುದೇ ಹಂತದಲ್ಲಿಯಾದರೂ ಸಂಭವಿಸಲಿ ಅವುಗಳನ್ನು ಒಪ್ಪಿ ಅಳವಡಿಸಿ ಕೊಳ್ಳುವ ಮನೋಭಾವವನ್ನು ಬೆಳೆಸಬೇಕಾಗುತ್ತದೆ. ಆ ಬದಲಾವಣೆಗಳ ಸ್ವರೂಪವನ್ನು ಅಧ್ಯಯ ಮಾಡಿ ಅವುಗಳ ಅನಿವಾರ್ಯತೆಯನ್ನು ಗ್ರಹಿಸಿ ವಿವರಿಸಬೇಕಾಗುತ್ತದೆ. ಪರೋಕ್ಷವಾಗಿ ಇದರಿಂದ ಸಾಮಾಜಿಕ ಕ್ಷೋಭೆಗಳ ತೀವ್ರತೆ ಕಡಿಮೆಯಾಗುವುದು ಸಾಧ್ಯ.

ಭಾಷೆಯನ್ನು ಜೀವಂತ ವ್ಯವಸ್ಥೆಯೆಂದು ಪರಿಗಣಿಸುವ ಕೆಲವರು ಜೀವಂತ ವ್ಯವಸ್ಥೆಯ ಹುಟ್ಟು-ಬೆಳವಣಿಗೆ-ಸಾವು ಸರಣಿಯನ್ನು ಭಾಷೆಗೂ ಅನ್ವಯಿಸುತ್ತಾರೆ. ವ್ಯವಸ್ಥೆಗಳು ಬೆಳೆಯುತ್ತ ಹೋದಂತೆ ಸರಳತೆಯಿಂದ ಸಂಕೀರ್ಣತೆಯ ಕಡೆಗೆ ಹೋಗುವಂತೆ ಭಾಷೆಯಲ್ಲೂ ಸಂಭವಿಸುವುದೆಂದು ತಿಳಿಯುತ್ತಾರೆ. ಭಾಷೆಗಳು ಬೆಳೆದು ಬಳಕೆಯಿಂದ ಮುದಿಯಾಗಿ ಕೊನೆಗೊಮ್ಮೆ ಸಾಯುತ್ತವೆಂದು ತಿಳಿಯಲು ಯಾವ ಆಧಾರಗಳೂ ಇಲ್ಲ. ಭಾಷೆಗಳಲ್ಲಿ ನಡೆಯುವ ಯಾವ ಬದಲಾವಣೆಯೂ ಪೂರ್ವ ನಿದರ್ಶನಗಳನ್ನು ಹೊಂದಿರ ಬೇಕಿಲ್ಲ. ಒಂದು ಭಾಷೆ ಮಹಾಪ್ರಾಣಗಳನ್ನು ಕೈಬಿಡುತ್ತಿದ್ದರೆ ಇನ್ನೊಂದು ಭಾಷೆ ಆ ಧ್ವನಿಗಳನ್ನು ಹೊಸದಾಗಿ ಪಡೆದುಕೊಳ್ಳುತ್ತಿರಬಹುದು. ಅಂದರೆ ಬದಲಾವಣೆಗಳು ಏಕಮುಖಿಯಲ್ಲ. ಭಾಷೆಯಲ್ಲಿ ಬದಲಾವಣೆಗಳು ನಡೆದರೂ ವ್ಯವಸ್ಥೆಯ ಸಮತೋಲನ ಮಾತ್ರ ಉಳಿದುಕೊಂಡಿರುತ್ತದೆ. ಭಾಷೆಗಳು ನಾಶವಾದರೆ ಅದಕ್ಕೆ ಬದಲಾವಣೆಗಳು ಕಾರಣವಲ್ಲ. ರಾಜಕೀಯ, ಸಾಮಾಜಿಕ ವಾದ ಪ್ರಸಂಗಗಳು ಅಲ್ಲಿ ಪ್ರಭಾವ ಬೀರುತ್ತಿರುತ್ತವೆ.