ನಮ್ಮ ಸುತ್ತಲಿನ ಸುಂದರ ನಿಸರ್ಗ ಮಾನವನಿಗೆ ಸತತವಾಗಿ ಎಂದಿನಿಂದಲೂ ಭಗವಂತನಿಂದ ದೊರೆತಿರುವ ಒಂದು ಮಿಗಿಲಾದ ಕೊಡುಗೆಯಾಗಿದೆ. ತನ್ನೊಳಗೆ ಅಭೇದ್ಯವಾದ ರಹಸ್ಯವನ್ನು ಅಡಕ ಮಾಡಿಕೊಂಡಿರುವ ನಿಸರ್ಗವನ್ನು ಮಾನವನು ತನ್ನ ಸಂಶೋಧಕ ಬುದ್ದಿಮತ್ತೆಯಿಂದ ಮತ್ತೆ ಮತ್ತೆ ರಹಸ್ಯಭೇದನ ಕಾರ್ಯದ ಮೂಲಕ ಅರ್ಥೈಸಿಕೊಳ್ಳಲು ಹೆಣಗುತ್ತಾ ಬಂದಿದ್ದರೂ ಇದು ತಾನು ಗರ್ಭೀಕರಿಸಿಕೊಂಡಿರುವ ರಹಸ್ಯವೆಲ್ಲವನ್ನೂ ಅನಾವರಣಗೊಳಿಸಿದೆ ಎಂದು ಎದೆತಟ್ಟಿ ಹೇಳಬರುವಂತಿಲ್ಲ.

ಮಾನವನು ನಿಸರ್ಗದ ಮಡಿಲಲ್ಲಿ ಉಸಿರಾಡುತ್ತಿರುವ ಒಂದು ಕೂಸು ಮಾತ್ರ. ಜನಿಸಿದ ಮಗುವಿಗೆ ನಿಸರ್ಗವು ಒಂದು ವಿಸ್ಮಯ, ಈ ವಿಸ್ಮಯ ವನ್ನು ತನ್ನ ಬೆರಗುಗಣ್ಣಿನಿಂದ ನೋಡುನೋಡುತ್ತ ಅದನ್ನು ತನಗರಿವಿಲ್ಲದಂತೆ ಆರಾಧಿಸುತ್ತ ಅದರ ಆಂತರ್ಯವನ್ನು ಅರಸುತ್ತಾ ಸಾಗಿದಂತೆ ಜ್ಞಾನದ ಶಾಖೋಪಶಾಖೆಗಳು ಆವಿರ್ಭವಿಸುತ್ತ ಸಾಗಿವೆ. ಎಲ್ಲ ಜ್ಞಾನದ ಶಾಖೆಗಳ ಬೆಳವಣಿಗೆಗೆ ಮಾಧ್ಯಮವಾದ ಭಾಷೆಯ ಹುಟ್ಟು ಮಾನವನ ಮೊದಲನೆಯ ದಿಗ್ವಿಜಯವಾಗಿದೆ. ಭಾಷೆಯ ಹುಟ್ಟಿನಿಂದ ಮೊದಲಾದ ಅವನ ನಿಸರ್ಗ ರಹಸ್ಯದ ಹುಡುಕಾಟ ಎಣೆಯಿಲ್ಲದ್ದು ಹಾಗೂ ಅಂತ್ಯವಿಲ್ಲದ್ದು.

ನಿಸರ್ಗ ಸೃಷ್ಟಿಯ ಸೂರ್ಯನಡಿಯ ಪ್ರತಿಯೊಂದು ಗಿಡಮರಬಳ್ಳಿ, ಕಾಡು-ಮೇಡು ಕಣಿವೆ, ಸರೀಸೃಪ, ಹಳ್ಳ-ಕೊಳ್ಳ, ಪಶು-ಪಕ್ಷಿ-ಪ್ರಾಣಿ, ಗುಡ್ಡ-ಬೆಟ್ಟ, ನದಿ-ಸಮುದ್ರ ಇವುಗಳನ್ನು ಹೊರತುಪಡಿಸಿ ಮಾನವನ ಬದುಕೆಂಬುದೇ ಇಲ್ಲ. ಅವನ ಬುದ್ದಿ ವಿಕಸಿಸದೆ, ಆಲೋಚನಾಶಕ್ತಿ ಬೆಳೆಯದೆ ಇವುಗಳಿಗೆ ಹೆಸರಿಲ್ಲ ಅವನಿಗೂ ಹೆಸರಿಲ್ಲ. ಇವುಗಳೊಂದಿಗೆ ಸಹಾನುವರ್ತಿಯಾಗಿದ್ದ ಅವನ ಬದುಕಿನ ಯಾವುದೋ ಹಂತದಲ್ಲಿ ಅವನಿಗೆ ಹೆಸರು ಅನಿವಾರ್ಯ ವಾದಂತೆ ನಿಸರ್ಗ ಸೃಷ್ಟಿಯ ಪ್ರತಿಯೊಂದಕ್ಕೂ ಹೆಸರು ಲಭ್ಯವಾಯಿತು.

ಜಗತ್ತಿನಲ್ಲಿ ಮಾನವರು ಎಷ್ಟು ಸಂಖ್ಯೆಯಲ್ಲಿರುವರೋ ಅವರೆಲ್ಲರಿಗೂ ಮತ್ತು ಸೃಷ್ಟಿಯ ಚರಾಚರವಸ್ತು ವೈವಿಧ್ಯಗಳಲ್ಲೆವುಗಳಿಗೂ ಹೆಸರುಗಳು ಮಾನವನಿಂದಲೇ ದೊರೆತಿವೆ.

ಭವ್ಯ ಸೃಷ್ಟಿಯ ಚರಾಚರ ವಸ್ತು ವಿಶೇಷಗಳ ರೂಪ, ಚಹರೆ, ಲಕ್ಷಣಗಳಿಗೆ ಸಂಗತವಾಗುವಂಥ ಅಲ್ಲದೆ ಮಾನವನ ಗುಣ, ಸ್ವರೂಪ, ಲಕ್ಷಣ, ಸ್ವಭಾವ, ಭಾವನೆಗಳಿಗೆ ಯುಕ್ತವಾಗುವಂಥ ನಾಮದೇವಗಳನ್ನು ಅಭಿದಾನಗೈದಿರುವುದು ಗೋಚರವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮಾನವನ ಕಲಾತ್ಮಕತೆ, ಭಾವುಕತೆ ಮತ್ತು ವಾಸ್ತವತೆಗಳು, ನಿಗೂಢದ ಆಂತರ್ಯದ ಸತ್ಯಾಂಶ ಸಾಮಗ್ರಿಯನ್ನು ಲಭ್ಯವಾಗಿಸಿ ಜ್ಞಾನಶಾಖೆಗಳ ನಿಯಮಾನುಸಾರ ಶಾಸ್ತ್ರ ಸಂಗತಿಯ ವ್ಯಕ್ತಿತ್ವ ರೂಪುಗೊಳ್ಳುತ್ತ ವಿಕಾಸವಾಗುತ್ತ ಸಾಗುತ್ತದೆ. ಹೀಗೆ ಮಾನವನ ಅನ್ವೇಷಣೆ ಮತ್ತು ಪರಿಷ್ಕರಣ ಕಾರ್ಯಗಳು ಇಲ್ಲಿಯತನಕ ಮುಂದುವರಿದಿರುವುದನ್ನು ಕಾಣಬಹುದು. ಉದಾಹರಣೆಗೆ ಭೌತಶಾಸ್ತ್ರ, ಜೀವಶಾಸ್ತ್ರ, ಶಿಲ್ಪಶಾಸ್ತ್ರ, ವ್ಯಾಕರಣಶಾಸ್ತ್ರ, ಭಾಷಾಶಾಸ್ತ್ರ, ಸಂಗೀತಶಾಸ್ತ್ರ ಮುಂತಾದವು.

ಯಾವುದೇ ವಿಷಯವನ್ನು ಕುರಿತಾದ ವ್ಯವಸ್ಥಿತ ಅಧ್ಯಯನವನ್ನು ಶಾಸ್ತ್ರ ಎಂದು ಕರೆಯಲಾಗುತ್ತದೆ. ಬಹುಕಾಲದವರೆಗೆ ಭಾಷೆಯ ಬಗೆಗಿನ ಅಧ್ಯಯನವನ್ನು ವಿಜ್ಞಾನ ಎಂದು ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಭಾಷೆಯ ವಿವಿಧ ಹಂತಗಳಲ್ಲಿ ಅಧ್ಯಯನವು ವ್ಯವಸ್ಥಿತವಾಗುತ್ತ, ಹೆಚ್ಚು ನಿಖರವಾಗುತ್ತ ನಡೆದಂತೆ ಪ್ರಪಂಚದಾದ್ಯಂತ ಎಲ್ಲೆಡೆ ಭಾಷೆಯ ಬಗೆಗಿನ ಅಧ್ಯಯನಗಳು ಬಹುಶ್ರುತರಿಂದ ಚುರುಕುಗೊಳ್ಳುತ್ತ ನಡೆದಂತೆ ಅದರ ಕುರಿತಾದ ಅಧ್ಯಯನವನ್ನು ‘ಭಾಷಾವಿಜ್ಞಾನ’ ಎಂದು ಒಪ್ಪಿಕೊಳ್ಳುವಂತಾ ಯಿತು. ಭಾಷೆಯು ವ್ಯಾಕರಣದ ನಿಯಮಗಳಿಗೆ ಅನುಸಾರವಾಗಿ ಅಧ್ಯಯನಕ್ಕೆ ಒಳಪಟ್ಟಂತೆ ಭಾಷೆಯಲ್ಲಿನ ಎಲ್ಲ ಶಬ್ದಗಳಂತೆ ಹೆಸರುಗಳೂ ಕೂಡಾ ಅಧ್ಯಯನಕ್ಕೆ ಒಳಪಡುವಂತಾಯಿತು. ಕೇವಲ ಹೆಸರುಗಳನ್ನು ಮಾತ್ರ ವ್ಯಾಕರಣದ ನಿಯಮಾನುಸಾರ ವೈಜ್ಞಾನಿಕವಾಗಿ ಅಭ್ಯಸಿಸುವುದು ಪ್ರತ್ಯೇಕ ಶಾಸ್ತ್ರವಾಗಿ ಪರಿಗಣನೆ ಹೊಂದಿ ಅದನ್ನು ‘ನಾಮಾಧ್ಯಯನ ಶಾಸ್ತ್ರ’ (ಒನೊಮಸ್ಟಿಕ್ಸ್) ಎಂದು ಕರೆಯಲಾಯಿತು.

ಯಾವುದೇ ಭಾಷೆಯಿರಲಿ ಅದರ ವ್ಯಾಕರಣದ ಹಲವು ರೀತಿಗಳು ಭಾಷೆ ರೂಪುತಳೆದಾದ ಮೇಲೆ ಯಾವುದೋ ಒಂದು ಘಟ್ಟದಲ್ಲಿ ಹುಟ್ಟಿದವುಗಳಾಗಿವೆ. ಭಾಷೆಯು ಮೊದಲು ಹುಟ್ಟಿಕೊಳ್ಳುತ್ತದೆ. ಅನಂತರ ಅದಕ್ಕೆ ವ್ಯಾಕರಣವು ರೂಪಿತವಾಗುತ್ತದೆ. ಭಾಷೆಯು ಹುಟ್ಟಿಕೊಂಡು ತನ್ಮೂಲಕ ಹೆಚ್ಚಿನ ಚಿಂತನೆಗೆ ಅವಕಾಶವಾಗಿ ಮಾತುಗಳ ಸಂಖ್ಯೆ ನೂರಾರು ಪಟ್ಟು ಬೆಳೆಯುತ್ತಾ ಹೋಗುತ್ತದೆಯಲ್ಲದೆ ಪದಗಳು ಪದಗುಚ್ಛಗಳಾಗಿ ವರ್ಧಿಸುತ್ತವೆ. ಬಳಸಿದಂತೆಲ್ಲ ಭಾಷೆ ಬೆಳೆಯುತ್ತಾ ಹೋಗುತ್ತದೆ. ಈ ಮದ್ಯೆ ನಮಗರಿವಿಲ್ಲ ದಂತೆ ಭಾಷೆಯು ಒಂದು ನಿಯಮಕ್ಕೊಳಪಡುತ್ತದೆ. ಮಾತುಗಳು ಸ್ಪಷ್ಟ ರೂಪವನ್ನು ಪಡೆದುಕೊಳ್ಳುತ್ತವೆ.

ಭಾಷೆಯಲ್ಲಿ ಇರುವಂಥ ಎಲ್ಲ ಪದಗಳು ಅದರ ಆರಂಭಿಕ ಹಂತದಲ್ಲಿ ನಮಗೆ ತೋಚಿದಂತೆ ಕೇವಲ ಗುರುತಿಸುವುದಕೋಸ್ಕರ ಇಟ್ಟುಕೊಂಡ ಹೆಸರುಗಳನ್ನು ತಿಳಿಸುವ ಅಂಕಿತನಾಮ ಅಥವಾ ಅರ್ಥಾನುಸಾರಿಯಾಗಿ ಬಂದ ಅನ್ವರ್ಥನಾಮಗಳಾಗಿರಬಹುದೆಂದು ಭಾವಿಸಲಾಗಿದೆ.

ಆಂಗ್ಲ ಭಾಷೆಯಲ್ಲಿ ಎಲ್ಲ ಪದಗಳನ್ನು ವ್ಯಾಕರಣಾತ್ಮಕವಾಗಿ ಪ್ರಾರ್ಟ್ಸ್‌ ಆಫ್ ಸ್ಪೀಚ್ ಎಂದು ಎಂಟು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಹೆಸರುಗಳು ಇದರಲ್ಲಿ ‘ನಾಮಪದ’ವೆಂಬ ಗುಂಪಿಗೆ ಸೇರುತ್ತವೆ. ನಾಮಪದ ಗಳಲ್ಲಿ ರೂಢನಾಮ ರೂಢಿಯಲ್ಲಿರುವ ಹೊಲ, ಗದ್ದೆ, ನದಿ, ನಾಲೆ, ಕೆರೆ, ಕುಂಟೆ, ಗುಡ್ಡ, ಬೆಟ್ಟ ಇತ್ಯಾದಿ ಹೆಸರುಗಳನ್ನು ತಿಳಿಸಿದರೆ ಅಂಕಿತನಾಮ ನಮಗೆ ಬೇಕಾದ ರೀತಿಯಲ್ಲಿ ನಮ್ಮ ಗುರುತು ಮತ್ತು ಸೌಲಭ್ಯಕ್ಕಾಗಿ ನಾವೇ ಇಟ್ಟುಕೊಂಡಿರುವ ಕಾವೇರಿ, ಗೋದಾವರಿ, ಕೌದಿಹೊಳೆ, ಗೌರೀಶಂಕರ, ಕೆಂಚನಗುಡ್ಡ, ಸುಬ್ರಹ್ಮಣ್ಯ ಇತ್ಯಾದಿ ಹೆಸರುಗಳನ್ನು ತಿಳಿಸುತ್ತದೆ. ಅರ್ಥಾನು ಸಾರಿಯಾಗಿ ಬಂದ  ಕಳ್ಳ, ಕಿವುಡ, ಹುಚ್ಚ, ತುಂಟ, ಕುಂಚ, ಗಂಡುಬೀರಿ, ಸಿಡುಕ ವಯ್ಯರಿ ಇತ್ಯಾದಿಗಳು ಅನ್ವರ್ಥನಾಮಗಳಾದರೆ, ಭಯ, ಶಾಂತಿ, ಖೇದ, ಗರ್ವ, ಪ್ರಾರ್ಥನೆ ಎಂಬವು ಭಾವನಾಮಗಳು. ಗುಂಪುಗಳಿಗೆ ಇಟ್ಟ ಹೆಸರುಗಳಾದ ತೆನೆ, ರಾಶಿ, ಸೈನ್ಯ, ಸಂತೆ, ಗೊಂಚಲು, ಹಿಂಡು ಎಂಬ ಹೆಸರುಗಳು ಸಂಘನಾಮಗಳಾಗಿವೆ.

‘ಮನುಷ್ಯ’ ಎಂಬ ಶಬ್ದವು ಎಲ್ಲ ಹೆಸರುಗಳ ಮನುಷ್ಯರು ಎಂಬ ಅರ್ಥವನ್ನು ಸೂಚಿಸುತ್ತದೆ. ಹಾಗೆಯೇ ಮರ, ನದಿ ಎಂಬ ಶಬ್ದಗಳು ಎಲ್ಲ ಹೆಸರುಗಳ ಮರಗಳು ಮತ್ತು ನದಿಗಳು ಎಂಬ ಅರ್ಥವನ್ನು ನೀಡುತ್ತವೆ. ಇವು ರೂಢನಾಮಗಳಾಗಿವೆ. ಈ ಕಾರಣದಿಂದಾಗಿ ಒಬ್ಬ ಮನುಷ್ಯನನ್ನು ಇನ್ನೊಬ್ಬ ಮನುಷ್ಯನಿಂದ ಮತ್ತು ಒಂದು ಮರ ನದಿಯನ್ನು ಇನ್ನೊಂದು ಮರ, ನದಿಯಿಂದ ಪ್ರತ್ಯೇಕಿಸಿ ನೋಡಬೇಕಾದ ಅನಿವಾರ್ಯತೆ ಉದ್ಭವಿಸುತ್ತದೆ. ಅದೇ ರೀತಿಯಲ್ಲಿ ಊರು, ಕೇರಿ, ಬೀದಿ, ಗದ್ದೆ, ತೋಟ, ಹೊಲ, ಬಾವಿ, ಕೆರೆ ಇವುಗಳ ಸಂಖ್ಯೆಯೂ ಅಸಂಖ್ಯವಾಗಿರುವುದರಿಂದ ಅವುಗಳನ್ನು ಪ್ರತ್ಯೆಕ ಹೆಸರುಗಳಿಂದ ಕರೆಯದೆ ಹೋದರೆ ಅದು ವ್ಯಾವಹಾರಿಕ ಗೊಂದಲಕ್ಕೆ ಕಾರಣವಾಗುತ್ತದೆ ಆದ್ದರಿಂದ ಅಂಕಿತನಾಮಗಳು ಅಥವಾ ಸಂಜ್ಞಾವಾಚಕಗಳು ಭಾಷೆಯಲ್ಲಿ ಎಡೆ ಪಡೆಯುತ್ತವೆ.

ಸಂಜ್ಞಾವಾಚಕವು ನಿರ್ದಿಷ್ಟವಾದ ಯಾವುದೇ ಒಂದು ವಸ್ತು, ಮನುಷ್ಯ ಅಥವಾ ಸಂಗತಿಯನ್ನು ಪ್ರತ್ಯೆಕವಾಗಿ ಮತ್ತು ವಿಶಿಷ್ಟವಾಗಿ ಸೂಚಿಸಿದರೆ ರೂಢನಾಮಗಳು ಇಡೀ ಒಂದು ವರ್ಗಕ್ಕೆ ಅನ್ವಯವಾಗುತ್ತವೆ. ವಿಶಾಲವಾದ ಅರ್ಥದಲ್ಲಿ ಹೆಸರುಗಳೆಲ್ಲವೂ ಅಂಕಿತನಾಮಗಳ ವರ್ಗಕ್ಕೆ ಸೇರ್ಪಡೆಯಾಗುತ್ತವೆ ಎಂಬ ಮಾತು ಗಮನಿಸುವಂಥದ್ದಾಗಿದೆ.

ಪೌರ್ವಾತ್ಯ ಮತ್ತು ಪಾಶ್ಚಾತ್ಯ ವಿದ್ವಾಂಸರು ಸುಮಾರು ಹತ್ತಾರು ಶತಮಾನಗಳಿಂದ ಸಂಜ್ಞಾವಾಚಕವು ಕೇವಲ ವಸ್ತುವನ್ನು ಸೂಚಿಸುವಂಥ ಶಬ್ದವೇ ಅಥವಾ ಅದಕ್ಕೆ ಅಭಿಧಾವೃತ್ತಿ ಇದೆಯೇ ಎಂಬ ವಿಚಾರವಾಗಿ ಸತತ ಚರ್ಚೆ ನಡೆಸಿದ್ದಾರೆ. ವಿದ್ವಾಂಸರಲ್ಲಿ ಹಲವರು ಅದು ವಸ್ತು ಸೂಚಕ ಶಬ್ದವಾಗಿದೆಯೇ ಹೊರತು ಅರ್ಥಪೂರ್ಣವಾದುದಲ್ಲ ಎಂದು ಅಭಿಪ್ರಾಯ ಹೊಂದಿರುವುದನ್ನು ಸಾರ್ವತ್ರಿಕವಾಗಿ ಎಲ್ಲರೂ ಒಪ್ಪಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲದಿರುವುದು ವಾಸ್ತವದ ಸಂಗತಿಯಾಗಿ ಕಂಡುಬರುತ್ತದೆ. ಏಕೆಂದರೆ ಹೊಲ, ಬೀದಿ, ನದಿ, ಗುಡ್ಡ, ಬೆಟ್ಟ ಮೊದಲಾದ ರೂಢನಾಮಗಳಿಗೆ ಇರುವಂತೆ ಅಂಕಿತನಾಮಗಳಿಗೂ ಕೂಡಾ ಅರ್ಥವಿರುತ್ತದೆ. ಉದಾಹರಣೆಗೆ ರಾಮ, ಲಕ್ಷ್ಮಣ, ಬಸವ, ಕೃಷ್ಣ ಎಂದಾಕ್ಷಣ ಆ ವ್ಯಕ್ತಿಗಳ ಗುಣ, ಸಾಹಸ, ಹಿರಿಮೆಗಳು ಸ್ಮರಣೆಗೆ ಬಂದು ನಮ್ಮ ನಮ್ಮ ಅಭಿರುಚಿ ಮತ್ತು ಮನೋಧರ್ಮವನ್ನವಲಂಬಿಸಿ ಗೌರವ ಮತ್ತು ಭಕ್ತಿಭಾವಗಳು ಮೂಡಿ ಬರುವುದು ಸಹಜವಾಗಿದೆ. ಆದರೆ ಇಲ್ಲಿ ಒಂದು ಅಂಶವನ್ನು ಗಮನಿಸಬೇಕಾಗುತ್ತದೆ. ಅದೆಂದರೆ ಅಂಕಿತನಾಮಗಳು ಎಲ್ಲ ಸಂದರ್ಭಗಳಲ್ಲಿ ಎಲ್ಲರಿಗೂ ಅರ್ಥಯುಕ್ತವಾಗಿ ಕಂಡುಬರಲಾರವು. ಮಾವು, ಬೇವು ಎಂಬ ಪದಗಳು ಕನ್ನಡ ಮಾತನಾಡುವವರೆಲ್ಲರಿಗೂ ಅರ್ಥಪೂರ್ಣವಾಗಿ ಕಂಡುಬರುವ ಹಾಗೆ ನಮ್ಮ ಮನೆಯ ರಮೇಶ ಎಂಬ ಒಬ್ಬ ಹುಡುಗನ ಹೆಸರು ಅವನ ಗುರುತು ಪರಿಚಯ ಇಲ್ಲದವರಿಗೆ ಅರ್ಥಹೀನನಾಗಿ ಕಂಡುಬರುವುದುಂಟು. ಇಂತಹ ಕಾರಣಗಳಿಂದಾಗಿ ಅಂಕಿತನಾಮಗಳ ಅರ್ಥವು ಸೀಮಿತವಾದದ್ದು ಎಂದು ಅಭಿಪ್ರಾಯ ಪಡಲಾಗುತ್ತಿದೆ.

ಸಂಜ್ಞೆಗಳಾಗಲಿ ಅಥವಾ ಸಂಕೇತಗಳೇ ಆಗಿರಲಿ ಗಾತ್ರದಲ್ಲಿ ಕಿರಿದಾಗಿಯೂ ಅಮೂರ್ತವಾಗಿಯೂ ಇರುವ ಕಾರಣವಾಗಿ ಒಂದು ಸಂಜ್ಞೆಯೊಂದಿಗೆ ಇನ್ನೊಂದು ಸಂಜ್ಞೆಯನ್ನು ಸಂಯೋಜಿಸಿಯೋ ಅಥವಾ ಭ್ರಮಿಸಿಯೋ ಗೊಂದಲಗೊಳ್ಳುವ ಸಂಭಾವ್ಯತೆ ಇದೆ. ಸಂಜ್ಞೆಗಳ ಬಳಕೆಯಲ್ಲಿ ಸೌಲಭ್ಯದ ಪ್ರಜ್ಞೆ, ಸ್ಮರಣಯೋಗ್ಯವಾಗಿರಬೇಕು ಎಂಬ ಆಶಯ ಕಂಡುಬಂದರೂ, ಸುಲಭ ಉಚ್ಚಾರಣೆಯ ಉದ್ದೇಶ ಇರುವುದಾದರೂ ಗೊಂದಲ ಉಂಟಾಗದಂತೆ ಮತ್ತು ಅಮೂರ್ತತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೆಸರುಗಳನ್ನು ಸ್ಪಷ್ಟವಾದ ಮಾತುಗಳಲ್ಲಿ ಸಾರುವುದು ಅತಿ ಅವಶ್ಯವಾದುದಾಗಿದೆ. ಈ ಪರಿಯಲ್ಲಿ ವ್ಯಕ್ತಿ, ವಸ್ತು ಮತ್ತು ಸ್ಥಳಗಳ ಹೆಸರುಗಳು ಹುಟ್ಟಿಕೊಳ್ಳುತ್ತವೆ. ಪ್ರತ್ಯೇಕಿಸುವುದು ಅಥವಾ ಗುರುತಿಸುವುದು ಮಾತ್ರ ಹೆಸರಿನ ಉದ್ದೇಶವಾಗಿರದೆ ನಾಮಕರಣದಲ್ಲಿ ಸಾಂಸ್ಕೃತಿಕ ಅಂಶವೂ ಕೂಡಿಕೊಂಡಿರುತ್ತದೆ. ನಾಮಕರಣಗೊಂಡ ವ್ಯಕ್ತಿ, ಸ್ಥಳ ಅಥವಾ ವಸ್ತುವಿನ ವೈಶಿಷ್ಟ್ಯತೆ, ಆಂತರಿಕ ಗುಣ, ಮೌಲ್ಯ, ಸ್ವರೂಪಗಳನ್ನೂ ಹೆಸರು ಹೊಂದಿರುತ್ತದೆ ಎಂಬ ಅಂಶ ವನ್ನು ಮರೆಯುವಂತಿಲ್ಲ.

ಅಸಂಖ್ಯಾತ ಅಂಕಿತನಾಮಗಳಿರುವುದರಿಂದ ಅವೆಲ್ಲವನ್ನು ವರ್ಗೀಕರಿಸಿ ನೋಡುವ ವಿದ್ವಾಂಸರ ಪ್ರಯತ್ನ ಯಶಸ್ಸನ್ನು ಕಂಡಿಲ್ಲವೆನ್ನದೆ ವಿಧಿಯಿಲ್ಲ. ಅವರಲ್ಲಿ ಏಕಾಭಿಪ್ರಾಯ ಸಾಧ್ಯವಾಗಿಲ್ಲ. ಇಂತಹ ಪ್ರಯತ್ನ ಜಟಿಲ ವಾಗಿರುವುದರಿಂದ ಏಕಾಭಿಪ್ರಾಯ ನಿರೀಕ್ಷಿಸುವುದು ಕಷ್ಟ ಸಾಧ್ಯವಾಗಿದೆ. ಅಲ್ಲದೆ ಸಮಂಜಸವೂ ಆಗಲಾರದು ಎಂಬ ಭಾವನೆಯಿದೆ. ವ್ಯಕ್ತಿನಾಮ, ಪ್ರಾಕೃತಿಕನಾಮ, ಸಾಂಸ್ಕೃತಿಕ ನಾಮ, ವಸ್ತುನಾಮ, ಸಂಕೀರ್ಣನಾಮಗಳೆಂದು ವರ್ಗೀಕರಿಸಿ ಅಭ್ಯಸಿಸಿದಾಗಲೂ ನ್ಯೂನತೆಗಳು ಇರಲಾರವು ಎಂದು ಹೇಳಲಾಗದು.

ಒಟ್ಟಾರೆಯಾಗಿ ಭಾಷೆಯಲ್ಲಿ ಹೆಸರುಗಳು. ಅದರಲ್ಲಿ ವ್ಯಕ್ತಿನಾಮಗಳು (Anthroponomostics) ಮತ್ತು ಸ್ಥಳನಾಮಗಳು ಹೇಗೆ ರೂಪು ಗೊಳ್ಳುತ್ತವೆ ಮತ್ತು ಅವುಗಳಿಗೆ ಕಾರಣಗಳೇನೆಂದರೆ, ವ್ಯಕ್ತಿ ನಾಮಗಳಿಗೆ ವ್ಯಕ್ತಿಗಳ ಕುಲ, ಕಸುಬು, ಜಾತಿ, ಮತ, ಧರ್ಮ, ನಂಬಿಕೆಗಳು, ದೈವ, ಸಂಪ್ರದಾಯ ಇವುಗಳು ಆಧಾರವಾದರೆ, ಸ್ಥಳನಾಮಗಳ ಮೆಲೆ ಪ್ರಕೃತಿ, ಪರಿಸರ ಬೆಟ್ಟ, ಗುಡ್ಡ, ತೋಟ, ಊರು, ಹೊಳೆ, ದಾರಿ, ಕೆರೆ ಇವುಗಳು ಪ್ರಭಾವ ಬೀರಿರು ತ್ತವೆ. ಪ್ರಾಕೃತಿಕ ಲಕ್ಷಣ, ಪರಿಸರದ ವೈಶಿಷ್ಟ್ಯತೆಯನ್ನು ಆಧರಿಸಿ ಬಂದ ಹೆಸರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.

ನೀರು ಮನುಷ್ಯನ ಜೀವನಾಧಾರವಾಗಿದೆ. ನಾಡನ್ನಾಳಿದ ರಾಜ ಮಹಾರಾಜರುಗಳು, ಮುಖಂಡರು ಜನತೆಯ ಜೀವನ ಸೌಲಭ್ಯಕ್ಕಾಗಿ ಅನೇಕ ಕೆರೆಕಟ್ಟೆಗಳನ್ನು ನಿರ್ಮಿಸಿದ್ದಾರೆ. ಹೀಗಾಗಿ ಅವರ ಹೆಸರಿನಲ್ಲಿ ಕೆರೆಕಟ್ಟೆಗಳು ಸಾಕಷ್ಟಿರುತ್ತವೆ. ಉದಾಹರಣೆಗಾಗಿ ಡಣಾಯಕನ ಕೆರೆ, ನಾರಾಯಣಕೆರೆ, ಅರಸಿಕೆರೆ, ವ್ಯಾಸನಕೆರೆ, ಸೂಳೆಕೆರೆ ಇತ್ಯಾದಿಗಳನ್ನು ನೋಡಬಹುದಾಗಿದೆ.

ಮಾನವನ ಸಂಸ್ಕೃತಿ ಮತ್ತು ನಾಗರಿಕತೆಗಳು ನದಿಗಳ ದಡಗಳ ಮೇಲೆ ಅರಳಿಕೊಂಡಿವೆ. ನದಿಗಳು ಜನರ ಬದುಕಿನ ಅವಿಭಾಜ್ಯ ಅಂಗಗಳಾಗಿವೆ ಅವುಗಳಿಗೆ ಸಾಮಾನ್ಯವಾಗಿ ಅರ್ಥವತ್ತಾದ ಹೆಸರುಗಳಿರುತ್ತವೆ. ಆ ಹೆಸರುಗಳು ದೇವತೆಗಳಿಂದ ಇಲ್ಲವೆ ಋಷಿ ಮುನಿಗಳಿಂದ ಬಂದಿರಲಿಕ್ಕೆ ಸಾಕು. ಅಪವಾದಗಳೇ ಇಲ್ಲವೆಂಬಂತೆ ನದಿಗಳ ಬಹುತೇಕ ಹೆಸರುಗಳು ಸ್ತ್ರೀಲಿಂಗ ವಾಚಕಗಳೇ ಆಗಿದೆ.

ವ್ಯಕ್ತಿನಾಮಗಳು ಸಂದರ್ಭವಶಾತ್ ಕೆಲವು ಕಾರಣಗಳಿಂದಾಗಿ ಬದಲಾವಣೆ ಪಡೆಯುವ ಸಾಧ್ಯತೆಗಳಿವೆ. ಸ್ಥಳನಾಮಗಳೂ ಬದಲಾವಣೆ ಹೊಂದುತ್ತವೆ. ಆದರೆ ನದಿಗಳು, ಪರ್ವತಗಳು, ಹಳ್ಳಕೊಳ್ಳ, ಕಣಿವೆ ಮುಂತಾದವುಗಳ ಹೆಸರುಗಳು ಸಾಮಾನ್ಯವಾಗಿ ಬದಲಾವಣೆ ಹೊಂದಲಾರವೆಂದು ಹೇಳಬಹುದು.

ವ್ಯಕ್ತಿನಾಮಗಳು ಮತ್ತು ಸ್ಥಳನಾಮಗಳಿಗೆ ಇರಬಹುದಾದ ಕಾರಣಗಳು ಮತ್ತು ಅವುಗಳ ಸ್ವರೂಪ, ಸ್ಥಾನಮಾನಗಳನ್ನು ವಿಸ್ತೃತ ಅಧ್ಯಯನದಿಂದ ಕಂಡುಕೊಳ್ಳಬಹುದಾಗಿದೆ.

ವ್ಯಕ್ತಿನಾಮ ಮತ್ತು ಸ್ಥಳನಾಮ: ನೈಜವಾಗಿ ಜ್ಞಾನದ ವಿಕಾಸವು ಆರಂಭಗೊಳ್ಳುವುದು ವಸ್ತು, ವ್ಯಕ್ತಿಗಳಿಗೆ ಯೋಗ್ಯವಾದ ಹೆಸರನ್ನು ನೀಡಿದಾಗಲೇ ಎಂದು ಚೀನಾದೇಶದ ಗಾದೆಯೊಂದು ಹೇಳುತ್ತದೆ.

ಆತ್ಮವು ಅವಿನಾಶಿಯಾದುದು, ಅಕಳಂಕವಾದುದು. ಆತ್ಮನಿಗೆ ಲೋಕ ವ್ಯವಹಾರದ ಯಾವ ಸೋಂಕೂ ಇರದು. ಆತ್ಮವು ಪರಮಾತ್ಮನ ಅಂಶವನ್ನೇ ಧರಿಸಿ ಲೋಕಕ್ಕೆ ಅವತರಿಸುತ್ತದೆ. ದೇಹರೂಪಿ ಆತ್ಮವು ಲೋಕದಲ್ಲಿ ಹುಟ್ಟಿ ಬಂದ ಮೇಲೆ ಪ್ರತಿಯೊಂದು ಆತ್ಮವು ಒಂದೊಂದು ಹೆಸರನ್ನು ಪಡೆದುಕೊಳ್ಳುತ್ತದೆ. ಹೆಸರನ್ನು ಪಡೆಯುವ ಮುನ್ನ ಅದು ಕೇವಲ ‘ನಾನು’ ಮಾತ್ರವಾಗಿದ್ದು ಹೆಸರು ಪಡೆದಾದ ಮೇಲೆ ಆ ಹೆಸರಿನಿಂದ ಇಹದಲ್ಲಿ ಅದರ ಲೋಕವ್ಯವಹಾರ ಆರಂಭಗೊಳ್ಳುತ್ತದೆ ಎಂಬುದಾಗಿ ಆಧ್ಯಾತ್ಮಿಗಳು, ವೇದಾಂತಿಗಳು ವ್ಯಾಖ್ಯಾನಿಸುತ್ತಾರೆ.

ಮಕ್ಕಳು ಜನಿಸಿದ ಕೂಡಲೇ ತಾಯಿ ತಂದೆಯರು. ಹಿರಿಯರು ಹೆಸರು ಕಟ್ಟುತ್ತಾರೆ. ಹುಟ್ಟದ ಪ್ರತಿಯೊಬ್ಬರಿಗೂ ಹೆಸರೊಂದು ಇರಲೇ ಬೇಕು. ವ್ಯಕ್ತಿಗಳಿಗೆ ಹೆಸರೇ ಇರದೆ ಹೋದರೆ? ಎಂದು ಒಮ್ಮೆ ಪ್ರಶ್ನಿಸಿಕೊಂಡರೆ ಆಗುವ ಗೊಂದಲ ಊಹಿಸಲು ಅಸಾಧ್ಯವಾದುದು.

ಮಾನವ ಸಮಾಜದಲ್ಲಿ ವ್ಯಕ್ತಿಗಳಿಗೆ ಹೆಸರನ್ನು ಇಡುವುದು ಸಹಜಕ್ರಿಯೆ ಎನ್ನುವ ಮಟ್ಟಿಗೆ ಒಂದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಹುಟ್ಟುವ ಮಗು ಗಂಡೇ ಇರಲಿ ಹೆಣ್ಣೇ ಇರಲಿ ತಾಯಿಯ ಗರ್ಭದಲ್ಲಿರುವಾಗಲೇ ಆ ಮಗುವಿಗೆ ಏನೆಂದು ನಾಮಕರಣ ಮಾಡಬೇಕು ಎಂದು ಮನೆಮಂದಿ ಆಲೋಚನೆ ಮಾಡಿಟ್ಟುಕೊಳ್ಳುವತನಕ ಪ್ರಾಮುಖ್ಯತೆ ಬೆಳೆದು ಬಂದಿದೆ. ಮಗುವಿನ ಜನನವಾದ ಕೆಲದಿನಗಳಲ್ಲಿ ಇಂದಿಗೂ ಎಲ್ಲ ಕುಟುಂಬಗಳಲ್ಲಿ ‘ನಾಮಕರಣ’ ಎಂಬ ಶಾಸ್ತ್ರವನ್ನು ಆಚರಿಸುವುದು ಕಾಣುತ್ತೇವೆ. ಪುರೋಹಿತರನ್ನು ಬರಮಾಡಿಕೊಂಡು ಪೂಜೆ ಪುನಸ್ಕಾರಗಳನ್ನು ಆಚರಿಸಿ ಮಗುವಿನ ಜನನಕಾಲ, ನಕ್ಷತ್ರ, ಗ್ರಹ ಇತ್ಯಾದಿಗಳ ಬಗ್ಗೆ ಪರಿಶೀಲಿಸಿ ‘ಜನ್ಮನಾಮ’ವನ್ನು ಕರೆಯುವುದು ಪದ್ಧತಿಯಾಗಿ ಬೆಳೆದು ಬಂದಿದೆ. ಇಷ್ಟದೈವ, ಮನೆದೇವರು, ಕುಟುಂಬದ ಹಿರಿಯರು, ಪ್ರಿಯನಾಮ ಹೀಗೆ ತಂದೆ ತಾಯಿಗಳು ಕೆಲವು ಹೆಸರುಗಳನ್ನು ನೀಡಿದರೂ ಮುಂದೆ ಇವುಗಳಲ್ಲಿ ಒಂದು ಹೆಸರನ್ನು ಉಳಿಸಿಕೊಂಡು ಬರಲಾಗುತ್ತದೆ. ಇದು ಮಗುವಿನ ಭವಿಷ್ಯ ಜೀವನದ ಸ್ಥಿರನಾಮವಾಗಿ ನಿಲ್ಲುತ್ತದೆ. ವ್ಯಕ್ತಿಯ ಬದುಕಿನ ಭಾಗವಾದ ಆ ಹೆಸರಿನ ಮೂಲಕ ಅವನು ಜಗತ್ತಿನಲ್ಲಿ ಗುರುತಿಸಲ್ಪಟ್ಟು ಅವನ ಸಾಧನೆ ಮತ್ತು ಸಿದ್ದಿಗಳು ಜಗತ್ತಿಗೆ ತಿಳಿಯಲು ಅವನ ಆ ಹೆಸರು ಮೂಲವಾಗಿ, ಹೆಸರಿನೊಂದಿಗೆ ಅವನೂ ಬೆಳೆದು ಅವನೊಂದಿಗೆ ಹೆಸರೂ ಬೆಳೆಯುತ್ತದೆ.

ಮಗುವಿಗೆ ನಾಮಕರಣ ಮಾಡಿದ ಹೆಸರೊಂದಿದ್ದರೆ ತಂದೆ ತಾಯಿಗಳು ಮಕ್ಕಳ ಮೆಲಿನ ಪ್ರೀತಿಗಾಗಿ ‘ಪ್ರಿಯನಾಮ’ ಎಂಬಂತೆ ಗಂಡು ಮಗುವಿಗೆ ಪಾಪು, ಪಾಪಣ್ಣಿ, ಬಾಬು ಎಂತಲೂ ಹೆಣ್ಣು ಮಗುವಿಗೆ ಪಾಪಿ, ಪಾಪಚ್ಚಿ, ಬೇಬಿ ಎಂತಲೂ ಕರೆಯುತ್ತಿರಬಹುದು. ಹೀಗೆ ಒಂದೇ ಹೆಸರು ಇರುತ್ತದೆಂದು ಹೇಳಬರುವಂತಿಲ್ಲ. ಎರಡು ಮೂರು ಹೆಸರುಗಳೂ ಇರಬಹುದು. ಇಷ್ಟೇ ಅಲ್ಲದೆ ತೀರಿ ಹೋದ ತಮ್ಮ ಕುಟುಂಬದ ಹಿರಿಯರನ್ನು ಸ್ಮರಿಸಿ ಕೊಂಡಂತಾಗುವುದೆಂಬ ಕಾರಣಕ್ಕೆ ಮುದುಕಪ್ಪ, ಮುದುಕಮ್ಮ ಇಲ್ಲವೆ ಅಜ್ಜಪ್ಪ, ಅಜ್ಜಮ್ಮ ಎಂತಲೋ ಕರೆಯುವುದುಂಟು. ಮುಂದೆಯೂ ಇವೇ ಹೆಸರುಗಳಾಗಿ ಉಳಿದುಕೊಂಡು ಬಂದು ವ್ಯಕ್ತಿ ಬೆಳೆದಂತೆ ಕ್ರಮೇಣ ಬೆಳೆದು ಅಜ್ಜಪ್ಪಯ್ಯನವರುಗಳು ಆಗಿಬಿಡುತ್ತದೆ.

ಪ್ರಸಿದ್ಧ ಹಾಗೂ ಜನಪ್ರಿಯವ್ಯಕ್ತಿಗಳ, ಸಿನಿಮಾ ನಟ-ನಟಿಯರ, ಸಾಹಿತಿ ಕಲಾವಿದರ, ಆಟಗಾರರ, ರಾಜಕಾರಣಿಗಳ ಹೆಸರುಗಳನ್ನು ತಮ್ಮ ಮಕ್ಕಳಿಗೆ ತಾಯಿ ತಂದೆಯವರು ಕೆಲವರು ಇಡಬಯಸುತ್ತಾರೆ. ಇದರ ಹಿಂದಿನ ಕಾರಣ ಬಹುಶಃ ತಮ್ಮ ಮಕ್ಕಳ ಹೆಸರುಗಳು ಆಧುನಿಕವಾಗಿ, ಸುಂದರವಾಗಿ, ಇನ್ನೊಬ್ಬರಿಗೆ ಮೆಚ್ಚಿಕೆಯಾಗುವಂತೆ ಅಲ್ಲದೆ ತಮ್ಮ ಮಕ್ಕಳೂ ಕೂಡ ಪ್ರಸಿದ್ಧ ವ್ಯಕ್ತಿಗಳಂತೆ ಭವಿಷ್ಯ ಜೀವನದಲ್ಲಿ ಬಾಳಿ ಬದುಕಲಿ ಎಂಬ ಸದಾಶಯ ಅಡಗಿರುತ್ತದೆ. ಉದಾಹರಣೆಗೆ ಅನಿಲ್‌ಕುಮಾರ್, ಪವನ್ ಕಿಶೋರ್, ಜವಾಹರಲಾಲ್, ಅಶ್ವಿನಿ, ಐಶ್ವರ್ಯ, ದಿಲೀಪ್‌ಕುಮಾರ್, ರಾಜ್‌ಕುಮಾರ್, ಪ್ರಸನ್ನ, ಇಂದಿರಾ, ಪುಟ್ಟಪ್ಪ, ಗಾಂಧಿ, ರಾಜೇಂದ್ರಪ್ರಸಾದ್ ಮುಂತಾಗಿ. ನಮ್ಮ ಸಾಮಾನ್ಯ ಜನರು ಹೆಚ್ಚಿನಂಶ ವಿದ್ಯಾವಂತರಿರುವುದಿಲ್ಲವಾಗಿ ತಮ್ಮ ಜೀವನ ಭಾರವನ್ನು ತಾವು ಕಾಣದ ದೈವದ ಹೆಗಲಿಗೆ ಹಾಕಿ ದೈವವನ್ನೇ ಸರ್ವಸ್ವವೆಂದು ತಿಳಿದವರಾಗಿರುತ್ತಾರೆ. ಇಂಥವರು ತಮ್ಮ ಮಕ್ಕಳಿಗೆ ಈಶ್ವರಪ್ಪ, ಶಿವಮ್ಮ, ನಾರಾಯಣಪ್ಪ, ಕೃಷ್ಣಪ್ಪ, ಲಕ್ಷ್ಮಮ್ಮ, ಗೋಪಾಲಪ್ಪ, ಶಂಕರಮ್ಮ ಎಂಬ ದೇವರು ದಿಂಡರುಗಳ ಹೆಸರುಗಳನ್ನು ನೀಡಬಯಸುತ್ತಾರೆ. ಇಂತಹ ಹೆಸರುಗಳನ್ನಿಡುವಾಗ ದೈವದ ವಿಷಯದಲ್ಲಿ ಸ್ತ್ರೀಪುರುಷರೆಂಬ ಭೇದ ಕಾಣಿಸದು. ಸ್ತ್ರೀದೈವದ ಹೆಸರು ಗಂಡು ಮಗುವಿಗೂ, ಪುರುಷದೈವದ ಹೆಸರು ಹೆಣ್ಣು ಮಗುವಿಗೂ ನೀಡಿರುವ ಅನೇಕ ಹೆಸರುಗಳು ಚಲಾವಣೆ ಯಲ್ಲಿವೆ. ಉದಾಹರಣೆಗೆ ಶೀನಮ್ಮ, ನರಸಮ್ಮ, ಹನುಮಮ್ಮ, ಭರ‍್ಮಮ್ಮ, ಕೊಟ್ರಮ್ಮ, ರಾಮ್ಕ, ಚೌಡಪ್ಪ, ಮಾರಪ್ಪ, ಸೀತಪ್ಪ, ಲಕ್ಷ್ಮಪ್ಪ, ಗೌರಪ್ಪ ಇತ್ಯಾದಿಗಳನ್ನು ಲಕ್ಷಿಸಬಹುದಾಗಿದೆ.

ಕುಲ, ಕಸುಬುಗಳು, ಗುರು ಹಿರಿಯರು, ನೈಸರ್ಗಿಕ ವಸ್ತುಗಳು, ಉದಾತ್ತ ಭಾವನೆಗಳು ಮೊದಲಾದವು ನಾಮಕರಣದಲ್ಲಿ ಅಪಾರ ಪ್ರಭಾವ ಬೀರುತ್ತವೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮುಖ್ಯವಾಗಿ ಕಸುಬು ಅಥವಾ ಜಾತಿ ಸೂಚಕ ಹೆಸರುಗಳು ಹೆಚ್ಚು ಚಲಾವಣೆಗೊಳ್ಳುತ್ತಿರುವುದನ್ನು ಗಮನಿಸಬಹುದು.

ಆಂಗ್ಲರು ನಮ್ಮನ್ನು ನೂರಾರು ವರ್ಷಗಳ ಕಾಲ ಆಳಿದ್ದಾರೆ. ಹೀಗಾಗಿ  ಅವರ ವೇಷಭೂಷಣ, ಜೀವನಶೈಲಿ, ರೀತಿ ನೀತಿಗಳು ಸಹಜವಾಗಿಯೇ ನಮ್ಮ ಮೇಲೆ ಪ್ರಭಾವವನ್ನುಂಟು ಮಾಡಿದಂತೆ ನಮ್ಮ ನಾಮಕರಣ ಪ್ರಕ್ರಿಯೆ ಮೇಲೂ ಪರಿಣಾಮ ಆಗಿರುವುದನ್ನು ಉತ್ತರ ಭಾಗದ ಜಿಲ್ಲೆಗಳಲ್ಲಿ ಕಾಣಬಹುದಾಗಿದೆ.

ಕೆಲವು ಉಪನಾಮಗಳನ್ನು ಅವಲೋಕಿಸಿದಾಗ ವ್ಯಕ್ತಿಯೂ ಇಂಥದೇ ಜಾತಿ, ಮತ, ಪಂಗಡಕ್ಕೆ ಸೇರಿದವನು ಎಂದು ಹೇಳಬಹುದು ಎಂಬುದಕ್ಕೆ ಉದಾಹರಣೆಯಾಗಿ ಹಿರೇಮಠ, ಸಾಲಿಮಠ, ಮಠಪತಿ, ಹೆಗ್ಗಡೆ, ಕುಲಕರ್ಣಿ, ಪುರೋಹಿತ, ಭಟ್ಟ, ಗೌಡ, ಪಟೇಲ ಇತ್ಯಾದಿಗಳು  ನಮ್ಮ ಎದುರಿಗಿವೆ. ಅಲ್ಲದೆ ಉತ್ತರ ಕನಾರ್ಟಕದಲ್ಲಿ ಹೊಸಮನಿ, ಮೂಲಿಮನಿ, ಹಂಚಿನಮನಿ, ಹುಲ್ಮನಿ, ಬೆಲ್ಲದ, ಉಪ್ಪಿನ ಮುಂತಾಗಿ ವ್ಯಕ್ತಿಗಳಿಗೆ ಉಪನಾಮಗಳಿರುವು ದನ್ನೂ ನೋಡಬುಹುದು.

ವ್ಯಕ್ತಿಯ ಹೆಸರುಗಳೊಡನೆ ಗ್ರಾಮನಾಮಗಳೂ ಕೂಡ ಎಡೆ ಪಡೆದಿವೆ. ಯಾವುದೋ ಕಾರಣಗಳಿಂದ ತಮ್ಮ ಹುಟ್ಟಿಬೆಳೆದ ಊರನ್ನು ತೊರೆದು ಮತ್ತೊಂದು ಊರಿಗೆ ಬಂದು ನೆಲೆಸಿ ತಾವು ತೊರೆದು ಬಂದ ಊರಿನ ಅಭಿಮಾನದಿಂದ ತಮ್ಮ ಹೆಸರಿನ ಜೊತೆಗೆ ಅವುಗಳನ್ನು ಸೇರಿಸಿಕೊಳ್ಳುವುದು ಒಂದು ಕಾರಣವಾಗಿದ್ದರೆ ತಮ್ಮ ಹೆಸರಿನೊಂದಿಗೆ ತಮ್ಮ ಊರಿನ ಹೆಸರೂ ಬೆಳಗಲಿ ಎಂಬ ಆಶಯವೂ ಇದ್ದಿರಬೇಕು. ಮೈಸೂರು ಸಿದ್ದಪ್ಪ, ಹುಬ್ಬಳ್ಳಿ ಗಂಗಣ್ಣ, ಗದಗಿನ ಗದಿಗೆಪ್ಪ, ದಾವಣಗೆರೆ ಪತ್ರೆಪ್ಪ, ಹಾವೇರಿ ನೀಲಪ್ಪ, ಮೂಗೂರು ಮಲ್ಲಪ್ಪ, ಸಿದ್ಧವ್ವನಹಳ್ಳಿ ನಿಜಲಿಂಗಪ್ಪ, ಬೆಟಗೇರಿ ಕೃಷ್ಣಶರ್ಮ ಪೀಠಾಪುರಂ ನಾಗೇಶ್ವರ ರಾವ್, ಸರ್ವಪಲ್ಲಿ ರಾಧಾಕೃಷ್ಣನ್, ಮೋಕ್ಷಗುಂಡುಂ ವಿಶ್ವೇಶ್ವರಯ್ಯ, ಕಾಗೋಡು ತಿಮ್ಮಪ್ಪ ಮುಂತಾದ ಎಷ್ಟೋ ಹೆಸರುಗಳು ಉದಾಹರಣೆಗೆ ಇವೆ.

ವ್ಯಕ್ತಿಯ ಗುಣಶೀಲಗಳಿಗೆ ಅನುಗುಣವಾಗಿ ನೆರೆಹೊರೆಯವರು, ಅತಿ ಯಾದ ಪರಿಚಯ ಉಳ್ಳವರು ಅಭಿಮಾನ, ವ್ಯಂಗ್ಯ ಅಥವಾ ತಮಾಷೆಗಾಗಿ ನೀಡಿದ ಹೆಸರುಗಳು ಅಡ್ಡಹೆಸರುಗಳು ಎಂದು ಕರೆಸಿಕೊಳ್ಳುತ್ತವೆ. ವಿಚಿತ್ರವೆಂದರೆ ಮುಂದೆ ಈ ಅಡ್ಡ ಹೆಸರುಗಳೇ ನಿಜವಾದ ಹೆಸರುಗಳನ್ನು ಮರೆಸಿಬಿಡಬಹುದು. ಸ್ಥೂಲವಾಗಿರುವ ವ್ಯಕ್ತಿಗೆ ಗಣಪ್ಪ, ಮಹಾಸುಳ್ಳುಗಾರನಿಗೆ ಬುಳ್ಳಪ್ಪ, ಕುಳ್ಳಾಗಿರುವವನಿಗೆ ಗಿಡ್ಡಪ್ಪ ಎಂತಲೂ – ಕೆಲವೊಮ್ಮೆ ಇದು ತುಂಬಾ ಎತ್ತರವಾಗಿ ಬೆಳೆದ ವ್ಯಕ್ತಿಗೂ ವ್ಯಂಗ್ಯವಾಗಿ ಬಳಕೆಯಾಗಬಹುದು. ಈ ರೀತಿಯಲ್ಲೆ ಲಂಬೂ, ಸೈಂಧವ, ಬೃಹಸ್ಪತಿ, ಶ್ರೀರಾಮಚಂದ್ರ, ಧರ್ಮರಾಯ, ಗಾಂಧಿ ಮಹಾತ್ಮ ಎಂಬ ಅಡ್ಡ ಹೆಸರುಗಳನ್ನು ನೋಡಬಹುದು.

ಸಾಹಿತಿಗಳಾದವರು ತಮಗೆ ತಾವೇ ಪ್ರತಿನಾಮಗಳನ್ನು ಸೃಷ್ಟಿಕೊಳ್ಳುತ್ತಾರೆ. ಶ್ರೀರಂಗ, ಮಧುರಚೆನ್ನ, ಅಂಬಿಕಾತನಯದತ್ತ, ಶ್ರೀನಿವಾಸ, ಆನಂದಕಂದ, ಕಾವ್ಯಾನಂದ, ಕುವೆಂಪು, ಸತ್ಯಕಾಮ ಇತ್ಯಾದಿ.

ನಾಮಕರಣದಲ್ಲಿ ಭಾವನಾಮಗಳ ಬೆಡಗನ್ನಂತೂ ಕಡೆಗಣಿಸುವಂತಿಲ್ಲ. ಕರೆಯಲು ಸರಳ, ಸುಂದರ ಶ್ರವಣ ಮೇಲಾಗಿ ಆಧುನಿಕ ಎಂಬ ಹಣೆಪಟ್ಟಿಯ ಎರಡು ಅಥವಾ ಮೂರುಕ್ಷರದ ಸ್ಪೂರ್ತಿ, ದಯಾ, ವಿದ್ಯಾ, ರೂಪ, ದೀಪ, ವಿನಯ, ಅನನ್ಯ, ಸೃಜನಾ, ಕರುಣಾ, ಭಾವನಾ ಎಂಬಿತ್ಯಾದಿ ಭಾವನಾಮಗಳಂತೂ ವ್ಯಾಪಕವಾಗಿ ಚಾಲ್ತಿಯಲ್ಲಿವೆ. ಈಚೆಗೆ ಕಂಡುಬಂದ ಇತಿಹಾಸ, ಪ್ರಯತ್ನ, ಸೌಕರ್ಯಗಳೆಂಬ ಹೆಸರುಗಳಂತೂ ಮಾನವನ ನಾಮಕಾರಣಗೈಯುವ ಬುದ್ದಿ ಮತ್ತು ಸಿದ್ದಿಗಳ ಬಗೆಗೆ ಪುನರಪಿ ಚಿಂತನೆಗೆ ಒಳಪಡಿಸಿವೆ.

ಯಾವುದೋ ಕಲ್ಪನೆಗೆ ಮನಸೋತು ಸಂಪ್ರದಾಯ, ಶಿಷ್ಟಾಚಾರಗಳಿಗೆ ಒಳಗಾಗಿ ಹಿರಿಯರಾದವರು ಮಕ್ಕಳಿಗೆ ಹೆಸರಿಡುತ್ತಾರೆ. ವ್ಯಕ್ತಿನಾಮಗಳೆಲ್ಲವೂ ಸಂಪೂರ್ಣವಾಗಿ ಆಯಾ ವ್ಯಕ್ತಿಯ ಗುಣ, ಸ್ವರೂಪಗಳನ್ನು ಸಂಕೇತಿಸುತ್ತವೆ ಎಂದು ಹೇಳಲಾಗದು. ನಾಮಕರಣ ಕರ್ತೃಗಳ, ಜನಾಂಗದ ಅಥವಾ ಸಮಾಜದ ಅಭಿಲಾಷೆ, ಆಕಾಂಕ್ಷೆಗಳನ್ನು ಹೆಸರುಗಳಲ್ಲಿ ಗಮನಿಸಬಹುದಾಗಿದೆ. ಈ ಅಂಕಿತನಾಮಗಳಲ್ಲಿ ಸಾಮಾಜಿಕ, ಕೌಟುಂಬಿಕ ಹಾಗೂ ಜನಾಂಗಿಕ ಸಂಸ್ಕೃತಿಯ ಛಾಯೆಯನ್ನು ಗುರುತಿಸಬಹುದು.

ಗ್ರಾಮೀಣ ಹಾಗೂ ನಾಗರಿಕ ನಾಮಗಳಲ್ಲಿ ಅಗಾಧ ವ್ಯತ್ಯಾಸಗಳಿವೆ. ಗ್ರಾಮೀಣ ನಾಮಗಳಲ್ಲಿ ಸಾಮಾನ್ಯವಾಗಿ ಜನಪದ ಸಂಸ್ಕೃತಿ ಪ್ರಭಾವವನ್ನು ಬೀರಿದರೆ ನಾಗರಿಕ ನಾಮಗಳಲ್ಲಿ ಶಿಷ್ಟ ಸಂಸ್ಕೃತಿಯ ಪ್ರಭಾವ ಎದ್ದು ತೋರುತ್ತದೆ. ಮಾನವನು ತನ್ನ ಮನದಲ್ಲಿ ಮೂಡುವ ಭಾವನೆಗಳಿಗೆ ಹೆಸರುಗಳನ್ನು ಕೊಡಲು ಉಪಕ್ರಮಿಸಿರದಿದ್ದರೆ ಅವನು ಆದಿಮಾನವ ಹಂತದಲ್ಲಿಯೆ ಉಳಿದು ಬಿಡುವ ಸಾಧ್ಯತೆ ಇತ್ತೆನಿಸುತ್ತದೆ. ಏಕೆಂದರೆ ಈ ಹೆಸರು ಕೊಡುವ ಸಾಮರ್ಥ್ಯ ಅವನಲ್ಲಿ ಆಲೋಚನಾ ಶಕ್ತಿಯನ್ನು ತುಂಬಿ ಜ್ಞಾನವಿಕಾಸತೆಯತ್ತ ಅವನನ್ನು ಕರೆತಂದಿದೆ.

ಮಾನವನ ಎಲ್ಲ ಬೌದ್ದಿಕ ಕ್ರಿಯಾ ಸಿದ್ದಿಗಳಲ್ಲಿ ನಾಮಕರಣ ಅತ್ಯಂತ ಪ್ರಾಚೀನವಾದುದೆಂಬುದು ನಿಸ್ಸಂಶಯ. ಈ ಕಾರಣವಾಗಿ ನಾಮ ಸಮುದಾಯವೇ ಭಾಷೆ ಎಂಬ ಅಭಿಪ್ರಾಯ ಸಾಧುವಾದುದಾಗಿದೆ.

ಹೆಸರುಗಳ ಬದಲಾವಣೆ: ಸಾಂಪ್ರದಾಯಿಕ ಹೆಸರುಗಳನ್ನು ತಮ್ಮ ಹಿರಿಯರಿಂದ ಪಡೆದವರಲ್ಲಿ ಕೆಲವರು ತಮ್ಮ ಹೆಸರಿನೊಂದಿಗಿರುವ ಕುಲ, ಕಸುಬು, ಜಾತಿ ಸೂಚಕವಾದ ಉಪನಾಮಗಳನ್ನು ತ್ಯಜಿಸುತ್ತಾರೆ. ಇಲ್ಲವೇ ಪೂರ್ಣವಾಗಿ ಹೊಸ ಹೆಸರುಗಳನ್ನು ಧರಿಸುತ್ತಾರೆ. ನಾರಾಯಣಾಚಾರಿ ನಾರಾಯಣ್, ಗೋಪಾಲ್ ಮುದಲಿಯಾರ್ ಗೋಪಾಲ್, ವೆಂಕಟರಮಣ ಭಟ್ಟ ವೆಂಕಟರಾಮ್, ಸಿಂಗ್ರೇಗೌಡ ಕುಮಾರ್ ಆಗುತ್ತಾನೆ.

ಹಳ್ಳಿಯ ಹುಡುಗನೊಬ್ಬ ಓದಲೆಂದು ಪಟ್ಟಣಕ್ಕೆ ಬಂದು ಕರಿಗುಂಡ ಕಿಶೋರ್‌ಕುಮಾರ್ ಆದರೆ ಚೆಂಗಳಪ್ಪ ಚೇತನ್ ಆಗಿ ಬದಲಾಗುತ್ತಾನೆ. ಕೆಲವು ಸಿನಿಮಾ ನಟ ನಟಿಯರು ರಮಣೀಯತೆಗೆಂದು ತಮ್ಮ ಮೂಲ ಹೆಸರುಗಳನ್ನು ಬದಲಾಯಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ನಟರು ವಹಿಸಿದ ಒಂದು ಉತ್ತಮ ಪಾತ್ರದ ಹೆಸರಿನಿಂದ ಜನರೇ ಅವರನ್ನು ಕರೆಯಬಹುದು. ಕನ್ನಡದ ಹಾಸ್ಯ ನಟನೊಬ್ಬನನ್ನು ಆತನು ವಹಿಸಿದ ‘ಕಾಶಿ’ ಪಾತ್ರದಿಂದಲೇ ಆತನನ್ನು ಕರೆಯಲಾಗುತ್ತಿತ್ತು.

ಧರ್ಮಾಂತರ ಅಥವಾ ಮತಾಂತರಗೊಂಡಾಗಲೂ ವ್ಯಕ್ತಿಯು ಹೆಸರನ್ನು ಬದಲಾಯಿಸಿಕೊಳ್ಳುತ್ತಾನೆ. ನರಸಿಂಹ ಮುಸ್ಲಿಮನಾಗಿ ಇಕ್ಬಾಲ್ ಎಂಬ ಹೆಸರು ಧರಿಸುತ್ತಾನೆ. ಮಾರಪ್ಪನು ಮ್ಯಾಥ್ಯುಸ್ ಆಗುತ್ತಾನೆ. ಜಾಗತಿಕ ಉದಾಹರಣೆಯಾಗಿ ವಿಶ್ವಶ್ರೇಷ್ಠ ಬಾಕ್ಸಿಂಗ್ ಪಟುವಾಗಿದ್ದ ಕ್ಯಾಷಿಯಸ್ ಕ್ಲೇ ಮುಸ್ಲಿಂ ಪಂಥಕ್ಕೆ ಮತಾಂತರಗೊಂಡು ಮಹಮದ್ ಅಲಿ ಆಗಿರುವುದನ್ನು ನೆನಪಿಸಿಕೊಳ್ಳ ಬಹುದಾಗಿದೆ.

ಧಾರ್ಮಿಕ ಸಂಪ್ರದಾಯದ ರೀತಿಯಲ್ಲಿ ಸಂನ್ಯಾಸ ಸ್ವೀಕರಿಸಿದ ವ್ಯಕ್ತಿಗೆ ಪೂರ್ವಾಶ್ರಮದ ಹೆಸರನ್ನು ತೆಗೆದು ಹಾಕಿ ಸಂನ್ಯಾಸಾಶ್ರಮದ ಹೊಸತು ಹೆಸರನ್ನು ನೀಡುವುದುಂಟು. ವೀರಬಸಯ್ಯನು ಸಿದ್ಧೇಶ್ವರ ಶಿವಾಚಾರ್ಯನಾದರೆ ಸಚ್ಚಿದಾನಂದನು ಷಣ್ಮುಖಾನಂದಸ್ವಾಮಿಯಾಗುತ್ತಾನೆ. ಗುಡ್ಡದಪ್ಪನು ಬೀರೇಶ್ವರಾನಂದಪುರಿ ಸ್ವಾಮಿಯಾದರೆ ಕರಿಬಸವನು ವಿಭುವಾನಂದ ಪ್ರಭುಸ್ವಾಮಿಯಾಗುತ್ತಾನೆ. ಇದು ತಾನು ಪೂರ್ವಾಶ್ರಮದ ಐಹಿಕ ಸಂಬಂಧ ಗಳನ್ನು ತೊರೆದಿದ್ದೇನೆ ಎಂಬುದರ ಬಾಹ್ಯ ಸಂಕೇತ ಎನಿಸಿಕೊಳ್ಳುತ್ತದೆ.

ಆಧುನಿಕ ತರುಣರ ಮದುವೆಯ ಸಮಯದಲ್ಲಿ ತಮ್ಮ ಪತ್ನಿಯ ಹೆಸರನ್ನು ಆಧುನಿಕತೆಗೆ ಅನುಗುಣವಾಗಿ ಬದಲಾಯಿಸುವುದು ರೂಢಿಗೆ ಬಂದಿದೆ. ತಿರುಕಮ್ಮ ತ್ರಿವೇಣಿ, ಚನ್ನಬಸಮ್ಮ ಚಂಪಕ, ಗುರವಮ್ಮ ಗೀತಾ, ಈರಮ್ಮ ಮೀರಾ ಆಗಿ ಬದಲಾಗುತ್ತಾರೆ. ಮನೆಯಲ್ಲಿ ಹೊಸದಾಗಿ ಬಂದ ಸೊಸೆ ಮತ್ತು ಅತ್ತೆಯ ಹೆಸರುಗಳು ಒಂದೇ ಆಗಿದ್ದಲ್ಲಿ ಆಗ ಸೊಸೆಯು ಬೇರೆ ಹೆಸರನ್ನು ಧರಿಸುತ್ತಾಳೆ. ಹೀಗೆ ಸಾಮಾಜಿಕ ಸಂಪ್ರದಾಯಗಳು, ಧಾರ್ಮಿಕ ವಿಧಿ ಆಚರಣೆಗಳಿಂದಾಗಿ ನಾಮಾಂತರ ಕಾರ್ಯವು ಕೆಲವೊಮ್ಮೆ ಅನಿವಾರ್ಯವಾಗಿ ಕಂಡುಬರುತ್ತದೆ.

ಸ್ಥಳನಾಮಗಳು: ಒಟ್ಟಾರೆಯಾಗಿ ನಾಮವಿಜ್ಞಾನವನ್ನು ಕುರಿತಾದ ಅಧ್ಯಯನವನ್ನು ಒನೊಮಸ್ಟಿಕ್ಸ್ ಎಂದು ಕರೆಯಲಾಗುತ್ತದೆ. ಅದರಲ್ಲಿ ವ್ಯಕ್ತಿನಾಮಗಳನ್ನು ಕುರಿತಾದ ಅಧ್ಯಯನವನ್ನು ಆಂಗ್ಲ ಭಾಷೆಯಲ್ಲಿ ಆಂತ್ರಪೊನಮಿ ಎಂದು ಕರೆಯಲಾದರೆ ಸ್ಥಳನಾಮಗಳನ್ನು ಕುರಿತಾದ ಅಧ್ಯಯನಕ್ಕೆ ಟೋಪೊನಮಿ ಎಂಬ ಅಭಿದಾನವಿದೆ. ಇದು ಗ್ರೀಕ್ ಮೂಲದಲ್ಲಿ ಟೊಪೊಸ್+ನೊಮೊಸ್ ಎಂಬ ಎರಡು ಪದಗಳಿಂದ ಮೂಡಿಬಂದುದಾಗಿದೆ. ಟೊಪೊಸ್ ಎಂದರೆ ಸ್ಥಳ ಎಂಬ ಅರ್ಥವನ್ನು ನೋಮೊಸ್ ಎಂದರೆ ಕುರಿತಾದ ಅಧ್ಯಯನ ಎಂಬರ್ಥವನ್ನು ನೀಡುತ್ತದೆ.

ದೇಶ, ಗ್ರಾಮ, ಊರು ಎಂಬ ಪದಗಳಿಗೆ ಪರಂಪರಾಗತವಾದ ಸೀಮಿತ ಅರ್ಥವಿದೆ. ಅವುಗಳು ಸಾಮುದಾಯಿಕ ಮಾನವ ನೆಲೆಗಳ ಅರ್ಥವನ್ನು ತುಂಬಿಕೊಳ್ಳುವುದಿಲ್ಲವಾದ್ದರಿಂದ ನವೀನವಾಗಿ ಚಲಾವಣೆಗೆ ಬಂದಿರುವ ಸ್ಥಳನಾಮವೆಂಬ ಪದ ತುಂಬಾ ಸೂಕ್ತ ಮತ್ತು ಸಮರ್ಪಕ ಎಂದು ಭಾವಿಸಬಹುದಾಗಿದೆ.

ಸ್ಥಳನಾಮಗಳ ಅಧ್ಯಯನವೆಂದರೆ ಒಂದರ್ಥದಲ್ಲಿ ಭಾಷೆಯ ಅಧ್ಯಯನವೇ ಆಗಿದೆ. ಭಾಷಾವಿಜ್ಞಾನದ ದೃಷ್ಟಿಯಿಂದ ಸ್ಥಳನಾಮಗಳ ಸಂಶೋಧನೆಗೆ ಎತ್ತರವಾದ ಸ್ಥಾನವಿದೆ. ಸ್ಥಳನಾಮಗಳು ಮಾನವನ ಕಲ್ಪನಾಶಕ್ತಿಗೆ ಅವಕಾಶವನ್ನೂ ಚೋದನೆಯನ್ನೂ ಒದಗಿಸಿ ತಮ್ಮ ಸುತ್ತ ಕಟ್ಟುಕಥೆಗಳ ಹುತ್ತ ಬೆಳೆಯುವಂತೆ ಮಾಡಿವೆ. ಅವುಗಳ ಅಧ್ಯಯನವೆಂದರೆ ಮಾನವ ಜೀವಿಯ ಸರ್ವಾಂಗೀಣ ಹಾಗೂ ಸಮಸ್ತ ಅಧ್ಯಯನವೆಂದು ಅರ್ಥೈಸಲಾಗುತ್ತದೆ.

ಸ್ಥಳನಾಮಗಳು ಸಾಮಾನ್ಯವಾಗಿ ಸಂಯುಕ್ತ ಪದಗಳಾಗಿರುತ್ತವೆ. ಭಾಷಾ ಶಾಸ್ತ್ರಜ್ಞರು ನಾಮಗಳ ರಚನೆಯನ್ನಾಧರಿಸಿ ಪೂರ್ವಪದವನ್ನು ‘ಪ್ರಿಫಿಕ್ಸ್’ ಎಂದೂ, ಉತ್ತರ ಪದವನ್ನು ‘ಸಫಿಕ್ಸ್’ ಎಂದೂ ಕರೆಯುತ್ತಾರೆ. ಪೂರ್ವಪದ ವಿಶಿಷ್ಟಾರ್ಥಕವಿದ್ದು ಉತ್ತರಪದ ಸಾಮಾನ್ಯಾರ್ಥಕವಾಗಿರುತ್ತದೆ. ಆಯಾ ಸ್ಥಳಕ್ಕೆ ವಿಶಿಷ್ಟವಾದ ಪೂರ್ವಪದವನ್ನು ಹೆಚ್ಚು ಖಚಿತ ಅರ್ಥವನ್ನು ಕೊಡುವ ಸ್ಪೆಸಿಫಿಕ್ ಎಂಬ ಶಬ್ದದಿಂದ ಕರೆಯಲಾಗುತ್ತದೆ. ಉತ್ತರ ಪದವು ಅನೇಕ ಸ್ಥಳನಾಮಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದನ್ನು ಸಫಿಕ್ಸ್  ಎಂಬ ಸ್ಥೂಲ ಅರ್ಥಕ್ಕೆ ಪ್ರತಿಯಾಗಿ ಜೆನೆರಿಕ್ ಎಂಬ ಶಬ್ದದಿಂದ ಕರೆಯಲಾಗುತ್ತದೆ. ಕನ್ನಡದಲ್ಲಿ ಸ್ಪೆಸಿಫಿಕ್ ಎಂಬುದಕ್ಕೆ ‘ವಿಶಿಷ್ಟ’ ಅಥವಾ ‘ನಿರ್ದಿಷ್ಟ’ ಎಂಬ ಪದವೂ ಜೆನೆರಿಕ್ ಎಂಬುದಕ್ಕೆ ‘ಸಾಮಾನ್ಯ’ ಅಥವಾ ‘ವಾರ್ಗಿಕ’ ಎಂಬ ಪಾರಿಭಾಷಿಕ ಪದಗಳು ಇಂದು ರೂಢಿಯಲ್ಲಿವೆ.

ಸ್ಥಳನಾಮ ಪದಗಳು ತಮ್ಮ ಬೆಳವಣಿಗೆಯ ಮೂಲದಲ್ಲಿ ಸಾಮಾನ್ಯಾರ್ಥಕ ವಾದ ಹಳ್ಳಿ, ಪುರ, ಊರು ಮುಂತಾದ ರೂಪದಲ್ಲಿದ್ದು ಇವುಗಳ ಸಂಖ್ಯೆ ಮತ್ತು ಆವರ್ತನೆಗಳು ಹೆಚ್ಚಾದಂತೆ ಒಂದು ಸ್ಥಳವನ್ನು ಇನ್ನೊಂದರಿಂದ ಪ್ರತ್ಯೇಕಿಸಿ ಹೇಳುವ ಅವಶ್ಯಕತೆ ಕಂಡುಬಂದು, ಸಹಜವಾಗಿಯೆ ಈ ಪದಗಳ ಪೂರ್ವದಲ್ಲಿ ವಿಶಿಷ್ಟಾರ್ಥಕವಾದ ಇನ್ನೊಂದು ಪದವು ಸೇರಿಕೊಂಡು ಪ್ರತ್ಯೇಕ  ಅಂಕಿತಗಳು ಪ್ರಾಪ್ತವಾಗುತ್ತವೆ.

ನಿರ್ದಿಷ್ಟ ಹೆಸರುಗಳುಳ್ಳ ಪದಗಳೇ ಸ್ಥಳನಾಮಗಳು. ಭೌಗೋಳಿಕ ವೈಲಕ್ಷಣಗಳನ್ನು ಸೂಚಿಸುವಂತಹ ಎಂಬ ಸಾಮಾನ್ಯಾರ್ಥದಲ್ಲಿ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯವನ್ನು ಸೂಚಿಸುವಂತಹ ಎಂಬ ವಿಶೇಷಾರ್ಥದಲ್ಲಿ ಸ್ಥಳನಾಮಗಳನ್ನು ಅರ್ಥೈಸಬಹುದು. ಸ್ಥಳಗಳ ವಿಸ್ತೀರ್ಣತೆ ಮತ್ತು ಅಲ್ಲಿ ನೆಲೆ ನಿಂತ ಜನಸಂಖ್ಯೆ ಮೊದಲಾದವುಗಳ ಆಧಾರದಿಂದ ಅವುಗಳನ್ನು ಗ್ರಾಮ, ವಾಡ, ಖೇಡ, ನಗರ, ಪುರ, ಪಾಳಯ, ಪಟ್ಟಣ ಮೊದಲಾಗಿ ಕರೆಯಲಾಗುವುದು. ಇದರ ಜೊತೆಯಲ್ಲಿ ಆಯಾ ಸ್ಥಳಕ್ಕೆ ಪ್ರಾಪ್ತವಾದ ವಿಶಿಷ್ಟ ಘಟಕಗಳೂ ಬೆರೆಯುತ್ತವೆ. ಉದಾ:

ಚಪ್ಪರದ ಹಳ್ಳಿ

ಉಜ್ಜಿನಿ ಪುರ

ಗುಡ್ಡದೂರು

ಧಾರವಾಡ

ನಂದಿಗ್ರಾಮ

ಸಖರಾಯ ಪಟ್ಟಣ

ಚಪ್ಪರ (ವಿಶಿಷ್ಟ ಘಟಕ)

ಉಜ್ಜಿನಿ (ವಿಶಿಷ್ಟ ಘಟಕ)

ಗುಡ್ಡ (ವಿಶಿಷ್ಟ ಘಟಕ)

ಧಾರ (ವಿಶಿಷ್ಟ ಘಟಕ)

ನಂದಿ (ವಿಶಿಷ್ಟ ಘಟಕ)

ಸಖರಾಯ (ವಿಶಿಷ್ಟ ಘಟಕ

ಹಳ್ಳಿ (ವಾರ್ಗಿಕ)

ಪುರ (ವಾರ್ಗಿಕ)

ಊರು (ವಾರ್ಗಿಕ)

ವಾಡ (ವಾರ್ಗಿಕ)

ಗ್ರಾಮ (ವಾರ್ಗಿಕ)

ಪಟ್ಟಣ (ವಾರ್ಗಿಕ)

ಈ ಮೇಲಿನ ಸ್ಥಳನಾಮಗಳ ಕೊನೆಯ ಘಟಕ ಸಾಮಾನ್ಯ ಅಥವಾ ವಾರ್ಗಿಕ ಆಗಿದೆ.

ಸ್ಥಳನಾಮದ ಘಟಕಗಳ ಅರ್ಥವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವುಗಳ ವರ್ಗೀಕರಣ ಮಾಡಲಾಗುತ್ತದೆ.

ಮುಖ್ಯವಾಗಿ ಪ್ರಾಕೃತಿಕ ಸ್ಥಳನಾಮಗಳನ್ನು 1. ಭೂಸ್ಥಿತಿವಾಚಕ 2. ಶಿಲಾವಾಚಕ 3. ಭೂವರ್ಣವಾಚಕ 4. ಜಲವಾಚಕ 5. ಸಸ್ಯವಾಚಕ 6. ಪಶು, ಪಕ್ಷಿ, ಪ್ರಾಣಿವಾಚಕ ಎಂದು ಆರು ಬಗೆಯಿಂದ ವಿಭಾಗಿಸಬಹುದಾಗಿದೆ. ಅವುಗಳ ಕೆಲವು ಘಟಕಗಳನ್ನು ಮುಂದೆ ತೋರಿಸಿದಂತೆ ಗಮನಿಸಬಹುದು.

1. ಭೂಸ್ಥಿತಿ ವಾಚಕ ಘಟಕಗಳು : ಗುಡ್ಡ, ಕೋಡು, ಮರಡಿ, ಮಲೆ, ಘಟ್ಟ, ಕೋಟೆ, ದುರ್ಗ. ಅನುಕ್ರಮವಾಗಿ ಕೆಂಚನಗುಡ್ಡ, ಸಿದ್ಧರಗುಡ್ಡ, ಕುರುಗೋಡು, ಬೆಳಗೋಡು, ತಿಪ್ಪನ ಮರಡಿ, ಬಿಕ್ಕಿಮರಡಿ, ರಾಮನ ಮಲೆ, ಸ್ವಾಮಿಮಲೆ, ಉಪ್ಪಾರ ಘಟ್ಟ, ಬೊಮ್ಮಘಟ್ಟ, ಗುಡೇಕೋಟೆ, ತೆಕ್ಕಲಕೋಟೆ ಉದಾಹರಣೆಗಳಾಗಿವೆ.

2. ಶಿಲಾವಾಚಕ ಘಟಕಗಳು : ಕಲ್ಲು. ಉದಾಹರಣೆಗೆ ಕಲ್ಲಹಳ್ಳಿ, ಕಂದಗಲ್ಲು ಕೊಳಗಲ್ಲು, ಕಪ್ಪಗಲ್ಲು, ಸಂಗನಕಲ್ಲು ಇತ್ಯಾದಿ.

3. ಭೂವರ್ಣ ವಾಚಕ ಘಟಕ : ಕರಿ, ತಾಮ್ರ. ಉದಾಹರಣೆ: ಕರಿಚೇಡು, ಕರೆಕಲ್ಲು, ಕಪ್ಪಗಲ್ಲು, ತಾಮ್ರಹಳ್ಳಿ.

4. ಜಲವಾಚಕ ಘಟಕ : ಅಲ್, ಅಪ್ಪು, ಕಟ್ಟೆ, ಕುಂಟೆ, ಸಾಗರ, ಮಡು ಉದಾಹರಣೆಗೆ ಅಲಬನೂರು, ಅಲ್ಲೀಪುರ, ಅಪ್ಪೇನಹಳ್ಳಿ, ಅಪ್ಪಲಪುರ, ನಾಗರಕಟ್ಟೆ, ತೊಗರಿಕಟ್ಟೆ, ಹುಲಿಕುಂಟೆ, ಜಾನಕುಂಟೆ, ಬುಕ್ಕಸಾಗರ, ಹಂಪಸಾಗರ, ಆವಿನಮಡು, ಮೊಸಳೆಮಡು.

5. ಸಸ್ಯವಾಚಕ ಘಟಕ : ಅರಳಿ, ಅತ್ತಿ, ಬೇವು, ಜಾಲಿ, ಕ್ಯಾದಿಗಿ, ಬದನೆ. ಉದಾಹರಣೆಗೆ ಅನುಕ್ರಮವಾಗಿ ಅರಳಿಹಳ್ಳಿ, ಅರಳಿಗನೂರು, ಉಳುವತ್ತಿ, ಕಾಡತ್ತಿ, ಬೇವಿನಹಳಿ, ಬೇವೂರು, ಜಾಲಿಹಾಳ, ಜಲಿಬೆಂಚೆ, ಬದನೆ ಹಾಳು, ಬದನೆಹಟ್ಟಿ, ಕ್ಯಾದಿಗಿಹಾಳ, ಕ್ಯಾದಿಗಿಹಳ್ಳಿ.

6. ಪ್ರಾಣಿವಾಚಕ ಘಟಕ : ನಂದಿ, ನಾಗ, ಮೀನ, ಹುಲಿ. ಉದಾಹರಣೆಗೆ ಅನುಕ್ರಮವಾಗಿ ನಂದಿಹಳ್ಳಿ, ನಂದಿಬಂಡೆ, ನಾಗರಕಟ್ಟೆ, ನಾಗರಹಾಳು, ಮೀನಹಳ್ಳಿ, ಮೀನಕೇರಿ, ಹುಲಿಕೇರಿ, ಹುಲಿಕಟ್ಟೆ ಇತ್ಯಾದಿ.

ಜಗತ್ತಿನ ಒಟ್ಟು ಜನಸಮುದಾಯವು ಒಂದೇ ಆದರೂ ಒಂದು ಸೀಮಿತ ಭೌಗೋಳಿಕ ಆವರಣದಲ್ಲಿ ವಾಸಿಸುವ ಜನಗಳ ಜೀವನ ವಿಧಾನದಿಂದ ಮತ್ತೊಂದು ಸೀಮಿತ ಆವರಣದಲ್ಲಿ ವಾಸಿಸುವ ಜನಗಳ ಜೀವನ ವಿಧಾನವು ಬೇರೆ ಬೇರೆ ಬಗೆಯಲ್ಲಿರುತ್ತದೆ. ಪ್ರಾಚೀನ ಕಾಲದಿಂದಲೂ ಭಾರತವು ಪ್ರತ್ಯೇಕವಾಗಿ ಒಂದು ಭೌಗೋಳಿಕ ಕ್ಷೇತ್ರವಾಗಿದೆ. ಇಲ್ಲಿ ವಿವಿಧ ಬಗೆಯ ಜನಾಂಗಗಳು ನೆಲೆಸಿವೆ. ಅವುಗಳಿಗೆಲ್ಲ ತಮ್ಮದೇ ಆದ ಜೀವನರೀತಿ, ನೀತಿ, ವಿಧಿ ವಿಧಾನಗಳುಂಟು. ಒಂದು ಜನಾಂಗದಲ್ಲಿ ಸಂಸ್ಕೃತಿ ಎಂಬುದು ಒಡಮೂಡಿ ಬರಲು ಅದು ಬಲು ದೀರ್ಘಕಾಲಾವಧಿಯನ್ನು ದಾಟಿ ಬರ ಬೇಕಾಗುತ್ತದೆ. ನಾವು ಏನಾಗಿದ್ದೇವೆ ಮತ್ತು ನಾವು ಹೇಗೆ ಬದುಕನ್ನು ಸಾಗಿಸುತ್ತಿದ್ದೇವೆ ಎಂಬುದೇ ಸಂಸ್ಕೃತಿಗಿರುವ ಸ್ಥೂಲವಾದ ವ್ಯಾಖ್ಯೆ. ಒಂದು ಸಮಾಜದ ಅಥವಾ ಒಂದು ಗುಂಪಿನಲ್ಲಿ ಕಂಡುಬರುವ ಜೀವನ ವಿಧಾನ ಎನ್ನುವುದೇ ಆಯಾ ಕ್ಷೇತ್ರದ ಸಂಸ್ಕೃತಿಯಾಗಿರುತ್ತದೆ. ಬದುಕನ್ನು ಬೆಳೆಸಿಕೊಳ್ಳುವುದು ಮತ್ತು ಉತ್ತಮಿಕೆಯನ್ನು ವೃದ್ದಿಗೊಳಿಸಿಕೊಳ್ಳಬೇಕೆಂಬ ಹಂಬಲ ಮಾನವನ ಸಹಜ ಮನೋವೃತ್ತಿಯಾಗಿದೆ. ಈ ದಿಸೆಯಲ್ಲಿನ ಅವನ ಪ್ರಯತ್ನವನ್ನೇ ಸಂಸ್ಕೃತಿ ಎಂದು ಕರೆಯಬಹುದು. ಇಂಥ ಪ್ರಯತ್ನಗಳು ಭಾರತದಲ್ಲಿ ಸಹಸ್ರಾರು ವರ್ಷಗಳಿಂದ ನಡೆಯುತ್ತಲೇ ಬಂದಿವೆ. ಇದನ್ನೇ ನಾವು ಭಾರತೀಯ ಸಂಸ್ಕೃತಿ ಎನ್ನುತ್ತೇವೆ. ಆಚಾರ- ವಿಚಾರ, ನಡೆ-ನುಡಿ, ರೀತಿ-ನೀತಿ, ವೇಷ-ಭಾಷೆ ಮೊದಲಾವುಗಳಿಂದಾಗಿ ಪ್ರಾಂತೀಯವಾಗಿ  ಭಾರತೀಯ ಸಂಸ್ಕೃತಿಯಲ್ಲಿ ಅನೇಕ ವೈವಿಧ್ಯತೆಗಳು ಕಂಡುಬರುತ್ತವೆ. ಇದರಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟಂಥ ವೈಶಿಷ್ಟ್ಯಗಳು ಕರ್ನಾಟಕ ಸಂಸ್ಕೃತಿ ಎಂದು ಕರೆಯಲ್ಪಡುತ್ತದೆ. ವ್ಯಕ್ತಿಗಳ ಜೀವನದ ಕ್ರಮದಿಂದಾಗಿ ಅವರ ಸಂಸ್ಕೃತಿಯನ್ನರಿಯಲು ಸಾಧ್ಯವಿದೆ. ಕರ್ನಾಟಕದ ಸ್ಥಳ ನಾಮಗಳಲ್ಲಿ ಅವರ ಬದುಕಿಗೆ ಸಂಬಂಧಪಟ್ಟ ಹಲವು ವಿಷಯಗಳುಂಟು. ಅವುಗಳು ಇಲ್ಲಿನ ಮಾನವರ ಭಾಷಿಕ ಅಭಿವ್ಯಕ್ತಿಯ ಸಂಕೇತಗಳಾಗಿವೆ. ಅವುಗಳ ಅಧ್ಯಯನದಿಂದ ಜನಗಳ ಮನೋಭಾವನೆ, ವ್ಯಕ್ತಿತ್ವದ ಪರಿ, ದುಃಖದುಮ್ಮಾನ, ಸುಖ ಸೌಕರ್ಯ, ರಾಜಕೀಯ ಮತ್ತು ಸಾಮಾಜಿಕ ವಿಕಸನ ಮೊದಲಾವುಗಳನ್ನು ಅರಿಯಲು ಸಾಧ್ಯವಾಗಿದೆ.

ಪ್ರಾಕೃತಿಕ ಸ್ಥಳನಾಮಗಳು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದವುಗಳಾಗಿದ್ದು ಅವುಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿರುತ್ತದೆ. ಇವುಗಳು ಪ್ರಾಚೀನ ಕಾಲಕ್ಕೆ ಸಂಬಂಧ ಪಡೆದವುಗಳಾಗಿದ್ದು ಆಯಾ ಕಾಲ ಪರಿಮಿತ ಅವಧಿಯಲ್ಲಿ ಅಸ್ತಿತ್ವ ಪಡೆದವುಗಳಾಗಿವೆ. ಆದರೆ ಸಾಂಸ್ಕೃತಿಕ ಸ್ಥಳನಾಮಗಳು ವಿವಿಧ ಭಾಷೆ ಮತ್ತು ವಿವಿಧ ಸಂಸ್ಕೃತಿಗಳಿಗೆ ಸಂಬಂಧಪಟ್ಟವುಗಳಾಗಿದ್ದು ಅಧಿಕ ಸಂಖ್ಯೆಯಲ್ಲಿ ಕಾಣಬರುತ್ತವೆ. ಪ್ರಾಚೀನ ಕಾಲದಿಂದ ಅರ್ವಾಚೀನದವರೆಗಿನ ದೀರ್ಘಾವಧಿಯಲ್ಲಿ ಇವು ಅಸ್ತಿತ್ವಕ್ಕೆ ಬಂದ ಕಾರಣದಿಂದ ಈ ಸ್ಥಳನಾಮಗಳು ಕಾಲಕಾಲಕ್ಕೆ ರೂಪುಗೊಂಡ ಸಾಂಸ್ಕೃತಿಕ ವಿಕಾಸವನ್ನು ಬಿತ್ತರಿಸುವಂಥವುಗಳಾಗಿವೆ.

ಸ್ಥಳನಾಮಗಳನ್ನು ಪ್ರಾಕೃತಿಕ ಸ್ಥಳನಾಮಗಳು ಮತ್ತು ಸಾಂಸ್ಕೃತಿಕ ಸ್ಥಳ ನಾಮಗಳೆಂದು ಎರಡು ದೊಡ್ಡ ಗುಂಪುಗಳಾಗಿ ವಿಂಗಡಿಸಲಾಗಿದೆ. ಸ್ಥಳನಾಮ ಶಾಸ್ತ್ರಜ್ಞರು ಸಾಂಸ್ಕೃತಿಕ ಸ್ಥಳನಾಮಗಳಿಗಿಂತ ಪ್ರಾಕೃತಿಕ ಸ್ಥಳನಾಮಗಳು ಹೆಚ್ಚು ಪ್ರಾಚೀನವಾದವು ಎಂಬ ಧೋರಣೆ ಹೊಂದಲು ಪ್ರಾಚೀನ ಮಾನವನು ತನ್ನ ಸುತ್ತಲಿನ ಸ್ಥಳನಾಮಗಳನ್ನು ಅಲ್ಲಲ್ಲಿಯ ಪ್ರಾಕೃತಿಕ ಪರಿಸರದ ಅಂಶಗಳಿಂದ ಅಂಕಿತಗೊಳಿಸಿರುವುದೇ ಕಾರಣವಾಗಿದೆ. ಈ ಕಾರಣದಿಂದಾಗಿ ಪ್ರಾಕೃತಿಕ ಸ್ಥಳನಾಮಗಳು ತುಂಬಾ ಮಹತ್ವಪೂರ್ಣ ವಾದವುಗಳಾಗಿವೆ.

ಭಾರತದ ವಿವಿಧ ಭಾಗಗಳಲ್ಲಿ ಇಲ್ಲಿಯತನಕ ನಡೆದ ಸ್ಥಳನಾಮಗಳ ಅಧ್ಯಯನದಿಂದ ಆರ್ಯರು ದ್ರಾವಿಡರಿಂದ ಪ್ರಾಕೃತಿಕ ಸ್ಥಳನಾಮಗಳನ್ನೂ, ದ್ರಾವಿಡರು ಆರ್ಯರಿಂದ ಸಾಂಸ್ಕೃತಿಕ ಸ್ಥಳನಾಮಗಳನ್ನು ಸ್ವೀಕರಿಸಿರುವುದು ಸ್ಥಿರಗೊಂಡಿದೆ. ಜನರ ಆಚರಣೆ, ನಂಬಿಕೆ, ಜೀವನಧರ್ಮ, ಮತ, ಶಾಸ್ತ್ರ, ಕಲೆ ಮೊದಲಾದವುಗಳು ಪ್ರಾಣಿ, ಪಶು, ಪಕ್ಷಿ, ಜಲ, ತರುಮರಾದಿಗಳೊಂದಿಗೆ ಸಂಬಂಧ ಪಡೆದಿರುವುದರಿಂದಾಗಿ ಶಾಸ್ತ್ರದ ವಿಧಿ ವಿಧಾನಗಳಿಂದ ಅವುಗಳನ್ನು ವಿಂಗಡಿಸಿದರೂ ಅವುಗಳ ಹಿನ್ನೆಲೆಯಲ್ಲಿನ ಸಾಂಸ್ಕೃತಿಕ ಅಂಶಗಳನ್ನೂ ಸಹ ಅವಲೋಕಿಸುವುದು ವಿಹಿತವಾಗಿದೆ. ಈ ಕಾರಣಗಳಿಂದ ಪ್ರಾಕೃತಿಕ ಸ್ಥಳನಾಮಗಳನ್ನು ಆರುಬಗೆಯಿಂದ ಉಪವಿಭಾಗಿಸಿ ನೋಡಿಯಾಗಿದೆ. ಅಂತೆಯೇ ಸಾಂಸ್ಕೃತಿಕ ಸ್ಥಳನಾಮಗಳನ್ನು ಐದು ಬಗೆಯಿಂದ ಉಪವಿಭಾಗಿಸಿ ನೋಡಬಹುದು.

1. ಪೌರಾಣಿಕ ಸ್ಥಳನಾಮಗಳು : ನಮ್ಮ ಸನಾತನ ಪುರಾಣಗಳು, ಪುರಾಣ ಕಾವ್ಯಗಳು ಜನತೆಯ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿವೆ. ಒಂದು ರೀತಿಯಲ್ಲಿ ಇವು ಭಾರತೀಯ ಸಂಸ್ಕೃತಿಯ ನಿಂಯತ್ರಕ ಗಳಾಗಿ ಮಹತ್ವಪೂರ್ಣ ಪಾತ್ರವನ್ನುವಹಿಸಿವೆ. ರಾಮಾಯಣ, ಮಹಾಭಾರತ ಕಾವ್ಯಗಳು ರಾಜರುಗಳ ಕಥೆಯನ್ನು ಅರುಹುತ್ತಿದ್ದರೂ ಪರಂಪರಾಗತ ಭಾರತೀಯ ನಂಬಿಕೆಯಂತೆ ಅವು ನಮಗೆ ಪುರಾಣ ಕಾವ್ಯಗಳೇ ಆಗಿವೆ. ಉದಾಹರಣೆಗೆ ರಾಮದುರ್ಗ, ಶಾಮಘಟ್ಟ, ರಾಮೇಶ್ವರ ಬಂಡಿ, ಹನುಮನಹಳ್ಳಿ, ಕೃಷ್ಣಪುರ, ಕನ್ನಳ್ಳಿ ಇಟ್ಟಿಗಿ, ವ್ಯಾಸಪುರ, ವ್ಯಾಸಯಲ್ಲಾಪುರ, ರಾಧಾನಗರ, ಹಂಪೆ, ಹಂಪಾಪುರ, ಹಂಪಾಪಟ್ಟಣ, ಮೈಲಾರ, ಪಂಪಾತೀರ್ಥ ಇತ್ಯಾದಿ.

2. ಧಾರ್ಮಿಕ ಸ್ಥಳನಾಮಗಳು : ಬೌದ್ಧ, ಜೈನ, ವೈಷ್ಣವ, ಶಾಕ್ತ, ಶೈವ, ವೀರಶೈವ ಧರ್ಮಗಳು ಒಂದೊಂದು ಕಾಲದಲ್ಲಿ ಪ್ರಸಾರ ಮತ್ತು ಪ್ರಚುರತೆ ಪಡೆದಿವೆ. ಕರ್ನಾಟಕದಲ್ಲಿ ಆಳಿಹೋದ ಅರಸರುಗಳು ಸರ್ವಧರ್ಮ ಸಹಿಷ್ಣು ಗಳಾಗಿ ಎಲ್ಲ ಧರ್ಮಗಳಿಗೂ ಸಮಾನಾವಕಾಶ ಕಲ್ಪಿಸಿ ಪ್ರಜೆಗಳ ಗೌರವಾದರ ಗಳಿಗೆ ಪಾತ್ರರಾಗಿದ್ದಾರೆ. ಎರಡು ಧರ್ಮಗಳ ನಡುವೆ ತಲೆದೋರಿದ ಧಾರ್ಮಿಕ ಕಲಹಗಳನ್ನು ನಮ್ಮ ಆಳರಸರು ಬಗೆಹರಿಸಿದ ಸಂಗತಿಗಳು ವಿರಳವಾಗಿಯಾದರೂ ಶಾಸನಗಳಲ್ಲಿ ದೊರಕುತ್ತವೆ. ಒಂದೊಂದು ಧರ್ಮ ಪ್ರಬಲವಾಗಿದ್ದ ಕಾಲದಲ್ಲಿ ಆಯಾಧರ್ಮಕ್ಕೆ ಸಂಬಂಧಿಸಿದ ಸ್ಥಳನಾಮಗಳು ಅಸ್ತಿತ್ವ ಪಡೆಯುತ್ತವೆ. ಉದಾಹರಣೆಗೆ ಕಂಪಿಲಿ, ಬುದ್ಧನೂರು, ಬುದ್ಧಾಪುರ, ಅಮರಾವತಿ, ಆನಂದ ದೇವನನಹಳ್ಳಿ, ಉಪ್ಪಲಪುರ, ದಮ್ಮರ, ಉಜ್ಜಿನಿ, ಬೊಮ್ಮನಹಳ್ಳಿ, ಬೊಮ್ಮಲಾಪುರ, ಅನಂತಶಯನಗುಡಿ, ಅನಂತಪುರ, ತಿಮ್ಮಲಾಪುರ, ರಂಗಾಪುರ, ವಿಠಲಪುರ, ಕಾಳಾಪುರ, ಲಕ್ಷ್ಮೀಪುರ, ಶಿವುರ, ಭೈರಾಪುರ, ಸೋಮಲಾಪುರ, ಲಿಂಗದೇವನಹಳ್ಳಿ, ಅಹಮದಪುರ, ಇಬ್ರಾಹಿಂಪುರ ಇತ್ಯಾದಿ.

3. ಐತಿಹಾಸಿಕ ಸ್ಥಳನಾಮಗಳು : ರಾಜಮಹಾರಾಜರು, ಸಾಮಂತರು, ಮಂಡಲಾಧೀಶ್ವರರು ಶೌರ್ಯ, ಸಾಹಸ ಮತ್ತು ದಕ್ಷತೆಗಳಿಂದ ರಾಜ್ಯಭಾರ ಮಾಡಿ ಜನ ಸಾಮಾನ್ಯರ ಪ್ರೀತಿ ವಿಶ್ವಾಸವನ್ನು ಗಳಿಸಿದ ಸಂಕೇತವಾಗಿ ಹೆಸರು ಪಡೆದವುಗಳು. ಉದಾಹರಣೆ ಕಡಬಗೆರೆ, ಸಿಂದಗೇರಿ, ಗಂಡರಾದಿತ್ಯನ ಪೊಲಲ್, ನಾಗಲಾದೇವಿಪುರ, ಉತ್ತಂಗಿ, ತಿರುಮಲಾದೇವಿ ಪಟ್ಟಣ, ಕನ್ನಕಟ್ಟಿ ಇತ್ಯಾದಿ.

4. ಆಡಳಿತಾತ್ಮಕ ಸ್ಥಳನಾಮಗಳು : ರಾಜರುಗಳು ತಮ್ಮ ಅಧೀನ ದಲ್ಲಿರುವ ವಿಶಾಲ ಪ್ರದೇಶದ ಮೇಲುಸ್ತುವಾರಿಗಳಾಗಿ ರಾಜ್ಯಪಾಲ, ಪ್ರಾಂತ್ಯಾಧಿಕಾರಿ, ಗಾವುಂಡ ಮುಂತಾದವರನ್ನು ನೇಮಿಸಿ ಗ್ರಾಮ, ಹಳ್ಳಿ, ಪಾಳ್ಯ, ನಗರ ಎಂಬಿತ್ಯಾದಿ ಭಾಗಗಳನ್ನು ಮಾಡಿ ಅವುಗಳನ್ನು ತಮ್ಮ ಆಡಳಿತ ಕಕ್ಷೆಯೊಳಗೆ ತರುವ ಯೋಜನೆ ಇಟ್ಟುಕೊಂಡಿದ್ದರು. ಈ ರೀತಿಯ ಗ್ರಾಮ, ಹಳ್ಳಿ, ಪಾಳ್ಯ, ನಗರ, ಪುರ ಎಂಬ ವಾಸದ ನೆಲೆಗಳಿಗೆ ಅಲ್ಲಿಯ ಪ್ರಾದೇಶಿಕ ವೈಲಕ್ಷಣ್ಯ ಸೂಚಕ ಘಟಕವು ಬೆರೆತು ಸ್ಥಳನಾಮ ರೂಪು ಪಡೆದವುಗಳನ್ನು ಆಡಳಿತಾತ್ಮಕ ಸ್ಥಳನಾಮಗಳೆನ್ನಲಾಗುತ್ತದೆ. ಉದಾಹರಣೆಗೆ ಅಂಬಳಿ, ಪೊಳ್ಲುಂದೆ, ಕಂದಗಲ್ಲುಪುರ, ಇಬ್ರಾಹಿಂಪುರ, ಗಜಾಪುರ, ಕಮಲಾಪುರ, ವೆಂಕಟಾಪುರ ಇತ್ಯಾದಿ.

5. ಸಾಮಾಜಿಕ ಸ್ಥಳನಾಮಗಳು : ಸಮಾಜದಲ್ಲಿ ಸಾಮಾನ್ಯವಾಗಿ ಕಂಡುಬರುವ ಜಾತಿ, ವರ್ಗ ಮತ್ತು ಕಾಯಕವನ್ನವಲಂಬಿಸಿ ಜೀವಿಸುವ ಜನಗಳ ನೆಲೆಗಳು. ಗ್ರಾಮ, ಹಾಳು, ಹಳ್ಳ, ಹಳ್ಳಿ ಮೊದಲಾದ ಸ್ಥಳನಾಮಗಳ ವಾರ್ಗಿಕಗಳು ಆಯಾ ಸ್ಥಳದಲ್ಲಿ ನೆಲೆನಿಂತು ವ್ಯವಸಾಯ ನಿರತರಾದ ಬೇಸಾಯಗಾರರ ಮನೆಗಳನ್ನು ನಿರ್ದೇಶಿಸುತ್ತವೆಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಉದಾಹರಣೆ ಕಮ್ಮಾರಚೇಡು, ಕಂಚುಗಾರ ಬೆಳಗಲ್ಲು, ಗೊಲ್ಲರಹಳ್ಳಿ, ಅಗಸನೂರು, ಹಾರೋಹಳ್ಳಿ, ಕಲ್ಲುಕುಟಿಗನಹಾಳು, ವಡ್ಡರ ಹಟ್ಟಿ, ತುರವೀಹಾಳ ಇತ್ಯಾದಿ.

ಊರುಗಳ ನಾಮಕರಣದ ಹಿಂದೆ ಅದಕ್ಕೆ ಕಾರಣವಾಗಿ ಒಂದು ಜನಸಮುದಾಯದ ಸಾಮೂಹಿಕ ಶಕ್ತಿ ಅಥವಾ ಒಬ್ಬ ವ್ಯಕ್ತಿಯು ಇರಲೇಬೇಕು. ಆರಂಭದಲ್ಲಿ ನೆಲೆನಿಂತ ಕುಟುಂಬಗಳು ತಾವು ನಿಂತ ಸ್ಥಳಕ್ಕೆ ತಮ್ಮಲ್ಲಿಯೇ ಒಬ್ಬ ವ್ಯಕ್ತಿಯ ಹೆಸರನ್ನು ನೀಡಬಹುದು. ಆ ಹೆಸರೇ ಎಲ್ಲ ಜನಗಳ ಒಪ್ಪಿಗೆ ಪಡೆದು ಮನ್ನಣೆಗೆ ಪಾತ್ರವಾಗುತ್ತದೆ. ಸ್ಥಳಗಳಿಗೆ ಹೆಸರುಗಳು ಜನ್ಮತಾಳಲು ಪ್ರಬಲವಾದ ಕಾರಣವಿರುತ್ತದೆ. ಚಾರಿತ್ರಿಕ ವ್ಯಕ್ತಿ, ಚಾರಿತ್ರಿಕ ಮಹತ್ವದ ಘಟನೆ, ದೈವ ಇವುಗಳ ಸ್ಮರಣೆಗಾಗಿ, ಇಲ್ಲವೇ ಭೌಗೋಳಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳ ಅಭಿವ್ಯಕ್ತಿ ರೂಪವಾಗಿ ಸ್ಥಳಗಳು ಹೆಸರು ಪಡೆದಿವೆ. ಊರು, ಸಮಾಜ, ಸಂಸ್ಥೆಯ ದೃಷ್ಟಿಯಲ್ಲಿ ವ್ಯಕ್ತಿನಾಮಗಳಿಗೆ ಮಹತ್ವವಿರುವಂತೆ ಪ್ರಾಂತೀಯ ದೃಷ್ಟಿಯಿಂದ ನೋಡಿದಾಗ ಊರಿನ ಹೆಸರಿಗೂ ಮಹತ್ವವುಂಟು. ಪ್ರತಿಯೊಂದು ಊರಿಗೂ ಸಾವಿರಾರು ವರ್ಷಗಳ ಇತಿಹಾಸ ಮತ್ತು ಸಾಂಸ್ಕೃತಿಕ ಮೌಲ್ಯವಿರುತ್ತದೆ. ಸ್ಥಳನಾಮಗಳು ನಮ್ಮ ನಾಗರಿಕತೆ, ಜೀವನ ಮೌಲ್ಯಗಳ ಆಕರಗಳೆಂದರೆ ಅತಿಶಯೋಕ್ತಿಯಲ್ಲ. ಶಾಸ್ತ್ರ ಮತ್ತು ಇತಿಹಾಸಗಳ ದೃಷ್ಟಿಯಿಂದ ಸ್ಥಳನಾಮಗಳನ್ನು ಅವಲೋಕಿಸುವುದು ಔಚಿತ್ಯಪೂರ್ಣ ಎನಿಸಿದರೂ ಅವುಗಳನ್ನು ಕೇವಲ ಶಾಸ್ತ್ರೀಯವಾಗಿ ನೋಡದೆ ಜಾನಪದ ದೃಷ್ಟಿಯಿಂದಲೂ ಗಮನಿಸಿದಾಗ ಅನೇಕ ಹೊಸ ಅಂಶಗಳನ್ನು ಅರಿಯಲು ಸಹಾಯಕವಾಗುತ್ತದೆ.

ಪುನರ್ನಾಮಕರಣ : ಶಾಸನಗಳು, ಕೈಫಿಯತ್ತು, ಸ್ಥಳಪುರಾಣಗಳನ್ನು ನೋಡಿದಾಗ ಕೆರೆ, ದೇವಾಲಯ, ಸ್ಥಳ ಇವುಗಳಿಗೆ ದಾನ, ದತ್ತಿ ನೀಡಿದ ಪ್ರಸಂಗಗಳಲ್ಲಿ ರಾಜರುಗಳು, ದಂಡನಾಯಕರು ಪುನರ್ನಾಮಕರಣ ಮಾಡುತ್ತಿದ್ದ ಸಂಗತಿ ವೇದ್ಯವಾಗುತ್ತದೆ. ದಿಗ್ವಿಜಯದ ಸಂಕೇತವಾಗಿಯೂ ಸ್ಥಳಗಳಿಗೆ ಮರುನಾಮಕರಣವಾಗುತ್ತಿತ್ತು.

ರಾಜರು, ಸಾಮಂತರು, ಸೇನಾಪತಿಗಳು, ಗುರುಗಳು, ವೀರಸೇನಾನಿಗಳು, ವಿದ್ವಾಂಸರು, ಅರ್ಚಕರು ಮುಂತಾದವರ ಹೆಸರುಗಳ ಜೊತೆಗೆ ಅಂಬುಧಿ, ಅಗ್ರಹಾರ, ಮಂಡಳ, ಗ್ರಾಮ, ಪುರ, ಸಮುದ್ರ, ಸಾಗರ ಮುಂತಾದ ಘಟಕಗಳನ್ನು ಸೇರಿಸಿ ಸ್ಥಳದ ಹೆಸರನ್ನು ಪುನರ್ನಾಮಕರಣ ಮಾಡಿರುವ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಉದಾಹರಣೆಗೆ ನಾಗಲಾದೇವಿ ಪಟ್ಟಣ > ನಾಗಸಮುದ್ರ, ರಾಣಿಪೇಟೆ > ಹೊಸಪೇಟೆ, ಪಾಡುಗಲ್ಲು > ಕಡಬಗೆರೆ, ವೀರನದುರ್ಗ > ಬಡ್ಲಡ್ಕಿ ಇತ್ಯಾದಿ.

ಇತ್ತೀಚೆಗೆ ಸ್ಥಳನಾಮಗಳ ಪುನರ್ನಾಮಕರಣ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿರುವುದನ್ನು ಕಾಣಬಹುದಾಗಿದೆ. ಈ ಬದಲಾವಣೆಗೆ ಸಾಮಾಜಿಕ, ರಾಜಕೀಯ, ಐತಿಹಾಸಿಕ ಪ್ರಬಲ ಕಾರಣಗಳು ಇದ್ದೇ ಇರುತ್ತವೆ. ಉದಾಹರಣೆಗೆ ಬಾಂಬೆ > ಮುಂಬಯಿ, ಮದ್ರಾಸ್ > ಚೆನ್ನೈ, ಕಲ್ಕತ್ತಾ > ಕೊಲ್ಕೊತ, ತ್ರಿವೇಂಡ್ರಂ > ತಿರುವನಂತಪುರ, ಹೊಸಳ್ಳಿ> ವಿಜಯನಗರ, ಮಾದಿಗರಹಳ್ಳಿ > ಹೊಸೂರು, ದಾಸರಹಳ್ಳಿ > ರಾಬರ್ಟ್‌ಸನ್‌ಪೇಟೆ, ಮಂಜರಾಬಾದ್ > ಸಕಲೇಶಪುರ, ಶಕಟಪುರ > ಬಂಡಿಪುರ, ಬೃಹಚ್ಛಿಲಾಮಠ > ಹಿರೇಮಠ ಇತ್ಯಾದಿ.

ಇದು ತನಕ ನಾಮಶಾಸ್ತ್ರದ ಪರಿಕಲ್ಪನೆ, ಪರಿವ್ಯಾಖ್ಯಾನ ನಾಮಗಳ ಬಗೆಗಿನ ಅಧ್ಯಯನ ಕುತೂಹಲ, ಕಂಡುಕೊಂಡ ಶಾಸ್ತ್ರ ಖಚಿತತೆ, ಅರ್ಥಾಭಿವ್ಯಕ್ತಿ, ವರ್ಗೀಕರಣ, ಸ್ವರೂಪ ಇವುಗಳನ್ನು ಈ ಪ್ರಬಂಧದ ಪರಿಮಿತಿಯಲ್ಲಿ ಸ್ಥೂಲವಾಗಿ ನೋಡಲಾಗಿದೆ.

ಜಾಗತಿಕವಾಗಿ ನೋಡುವುದಾದರೆ ಪರರಾಷ್ಟ್ರಗಳಲ್ಲಿ ಹಲವು ದಶಕಗಳ ಪೂರ್ವದಲ್ಲಿಯೇ ನಾಮಶಾಸ್ತ್ರದ ಬೆಳವಣಿಗೆ ಪ್ರಾರಂಭವಾಗಿದ್ದರೂ ನಮ್ಮ ದೇಶದಲ್ಲಿ ಅದರ ಮಹತ್ವ ಅರಿತುಕೊಂಡದ್ದು ಇತ್ತೀಚೆಗೆ ಮಾತ್ರ. ಕಳೆದ ಶತಮಾನದ ಪೂರ್ವಾರ್ಧದಲ್ಲಿ ನಾಮಾಧ್ಯಯನವು ನಮ್ಮ ದೇಶದಲ್ಲಿ ಒಂದು ಕುತೂಹಲಕಾರಿ ಹೊಸ ವಿಷಯವಾಗಿತ್ತು. ಈಚೆಗೆ ವಿದೇಶೀ ಬರವಣಿಗೆಗಳ ಪ್ರೇರಣೆಯಿಂದ ನವೀನ ಅಧ್ಯಯನ ಪದ್ಥತಿಯನ್ನು ಅಳವಡಿಸಿಕೊಂಡು ವ್ಯವಸ್ಥಿತ ಅಧ್ಯಯನವಾಗಿ ರೂಪುಗೊಂಡಿದೆ. ಭಾರತವು ವಿವಿಧ ಭಾಷೆ, ಮತ, ಸಂಸ್ಕೃತಿಗಳನ್ನೊಳಗೊಂಡ ಪ್ರಾಚೀನ ದೇಶವಾಗಿದೆ. ಇಲ್ಲಿನ ಭಾಷೆ, ಮತ ಮತ್ತು ಸಂಸ್ಕೃತಿಗಳು ಕಾಲಕಾಲಕ್ಕೆ ನಡೆದ ಜನಸಂಚಾರ, ವಲಸೆಗಳಿಂದಾಗಿ ಪರಸ್ಪರ ಪ್ರಭಾವ ಪಡೆದಿದ್ದು ಸಹಜವಾಗಿ ಇಲ್ಲಿನ ನಾಮಗಳನ್ನು ಕುರಿತಾದ ಅಧ್ಯಯನದಲ್ಲಿ ಸಂಕೀರ್ಣತೆ ತೋರಿ ಬರುತ್ತದೆ. ಈ ಕಾರಣದಿಂದಾಗಿ ವಿದೇಶೀ ಸ್ಥಳನಾಮಾಧ್ಯಯನಕ್ಕಿಂತ ಭಾರತೀಯ ಸ್ಥಳನಾಮಾಧ್ಯಯನ ಕ್ಲಿಷ್ಟಕರವಾದುದಾಗಿದೆ.

ಗಾಟ್‌ಫ್ರೀಡ್ ವಿಲ್‌ಹೆಲ್ಮ್ ಲೀಬ್ನಿಜ್ ಎಂಬ ಜರ್ಮನ್ ವಿದ್ವಾಂಸನು ಮೊದಲಬಾರಿಗೆ ಸುಮಾರು 1768ರಲ್ಲಿ ನಾಮಾಧ್ಯಯನದ ಅದರಲ್ಲೂ ಸ್ಥಳನಾಮಾಧ್ಯಯನದ ಅವಶ್ಯಕತೆಯನ್ನು ಪ್ರತಿಪಾದಿಸಿದನು. ಅಂತೆಯೆ ಆತನನ್ನು ಸ್ಥಳನಾಮ ವಿಜ್ಞಾನದ ಪಿತಾಮಹ ಎಂದು ಕರೆಯಲಾಗಿದೆ. ಇಂಗ್ಲೆಂಡಿನ ಸ್ಟ್ರೀಟ್ ಮಹಾಶಯ ಸ್ಥಳನಾಮ ವಿಜ್ಞಾನಕ್ಕೆ ಭದ್ರ ತಳಪಾಯವನ್ನು ಹಾಕಿದನು. ಇವನ ಹಾದಿಯಲ್ಲಿ ಅನಂತರ ಫ್ರಾನ್ಸ್, ಡೆನ್ಮಾರ್ಕ್ ಮತ್ತು ನಾರ್ವೆ ವಿದ್ವಾಂಸರು ಮುನ್ನಡೆಯನ್ನು ಸ್ಥಾಪಿಸಿದರು. 1871 ರಿಂದ 1885ರ ಅವಧಿ ಸ್ಥಳನಾಮಾಧ್ಯಯನದ ವಿಕಾಸಶೀಲ ಘಟ್ಟವಾಗಿದೆ. ಜರ್ಮನ್ ಹಾಗೂ ಅಮೇರಿಕಾ ವಿದ್ವಾಂಸರು ತಮ್ಮ ಮೌಲಿಕ ಕಾಣಿಕೆಗಳನ್ನು ಸಂದಾಯಮಾಡಿದ್ದಾರೆ. 1921ರಲ್ಲಿ ಆಂಗ್ಲ ಸ್ಥಳನಾಮ ನಿಘಂಟುವಿನ ರಚನೆಯಾಯಿತು. ಅಮೇರಿಕಾದಲ್ಲಿ ಸ್ಥಳನಾಮ ಸಂಘವು ರಚನೆಗೊಂಡು ‘NAMES’ ಎಂಬ ತ್ರೈಮಾಸಿಕದ ಮೂಲಕ ಹಲವು ಸಂಶೋಧನಾ ಲೇಖನಗಳನ್ನು ಪ್ರಕಟಿಸಲಾಯಿತಲ್ಲದೆ ಸಮ್ಮೇಳನಗಳನ್ನು ನಡೆಸುವುದರ ಮೂಲಕ ಜಗತ್ತಿನ ಗಮನ ಸೆಳೆಯಿತು.

ಭಾರತದ ಪ್ರಾಚೀನ ಮಹಾವಿದ್ವಾಂಸರು ಭಾಷೆಯ ಪ್ರತಿಯೊಂದು ಪದಕ್ಕೂ ನಿರುಕ್ತ ಹೇಳುವ ಧೋರಣೆಯನ್ನು ಹೊಂದಿದ್ದರು. ಉದಾಹರಣೆ ಯಾಗಿ ಯಾಸ್ಕ ಮತ್ತು ಪಾಣಿನಿಯನ್ನು ಹೆಸರಿಸಬಹುದು. ಭೌಗೋಳಿಕ ನಾಮಗಳಿಗೂ ಅರ್ಥವನ್ನು ಹೇಳುವ ಪರಿಪಾಠ ಅವರು ಇಟ್ಟುಕೊಂಡಿದ್ದರು. ಪಾಣಿನಿಯು ‘ಗ್ರಾಮ’ ಎಂಬ ಪದವನ್ನು ಒಂದು ಸ್ಥಳೀಯ ಜನಸಂಖ್ಯೆ ಯನ್ನೊಳಗೊಂಡ ಸ್ಥಳನಾಮ ‘ವಾರ್ಗಿಕ’ ಎಂಬ ಅರ್ಥದಲ್ಲಿ ಬಳಸಿದ್ದಾನೆ. ನಗರ, ಪುರ, ಗ್ರಾಮ, ಖೇಟ, ಘೋಷ, ಕೂಲ, ಸ್ಥಲ, ಕರ್ಷ, ತೀರ, ವಕ್ತ್ರ, ಅರ್ಮ, ಹ್ರದ, ಪ್ರಸ್ಥ, ಕಂಥಾ ಮುಂತಾದ ನಾಮ ವಾರ್ಗಿಕಗಳು ಬರುತ್ತವೆ. ಊರುಗಳ ಹೆಸರು ಆಕಸ್ಮಿಕವಾಗಿರದೆ ಸಾಮಾಜಿಕ, ಚಾರಿತ್ರಿಕ ಸ್ಥಿತಿಗತಿಗಳ ಪರಿಣಾಮದಿಂದ ಉದ್ಭವಗೊಂಡ ಅರ್ಥ ಘಟಕಗಳೆಂಬುದು ಪಾಣಿನಿಯ ಅಭಿಪ್ರಾಯವಾಗಿತ್ತು. ಮುಖ್ಯ ಪಟ್ಟಣ ಮತ್ತು ಅದರ ಬಡಾವಣೆಗಳು ಕ್ರಮವಾಗಿ ‘ಮುಖ್ಯನಗರ’ ಮತ್ತು ‘ಶಾಖಾನಗರ’ವೆಂದು ಅಮರಸಿಂಹನ ಅಮರ ಕೋಶದಲ್ಲಿ ಸೂಚಿತವಾಗಿದೆ. ಇದರಲ್ಲಿ ಪುರ, ಪುರಿ, ನಗರಿ, ಪಟ್ಟಣ, ಸ್ಥಾನೀಯ ಮತ್ತು ನಿಗಮಗಳನ್ನು ಸಮಾನಾರ್ಥಕವಾಗಿ ಭಾವಿಸಲಾಗಿದೆ. ಅಮರಸಿಂಹನು ಭಾರತದ ಪ್ರಾಚೀನ ಕೋಶಕಾರನಾಗಿದ್ದಾನೆ. ಅವನು ನಾಮಪದಗಳನ್ನು ‘ಸ್ವರ್ಗ ಭೌಮ ಪಾತಾಲೀಯ’ವಾಗಿ ವಿಂಗಡಿಸಿದ್ದಾನೆ. ಪೌರಾಣಿಕ ಸ್ಥಳನಾಮಗಳನ್ನು ಆಯಾಲೋಕದಲ್ಲಿ ಸೇರಿಸಿ ಭೂಲೋಕದಲ್ಲಿರುವ ಸ್ಥಳನಾಮಗಳನ್ನು ಭೌಮವರ್ಗದ ‘ಪುರೋವರ್ಗ’ದಲ್ಲಿ ಸೇರಿಸಿದ್ದಾನೆ. ಹೇಮಚಂದ್ರನು ತನ್ನ ‘ದೇಶೀಯ ನಾಮಮಾಲಾ’ದಲ್ಲಿ ಸ್ಥಳನಾಮಗಳನ್ನು ದೇಶಾನುಕ್ರಮದಲ್ಲಿ ವಿಂಗಡಿಸಿಕೊಂಡಿದ್ದಾನೆ. ಕನ್ನಡದ ಪ್ರಸಿದ್ಧ ವೈಯಾಕರಣಿ ಯಾದ ಕೇಶಿರಾಜನ ನಾಮಪದಗಳು ‘ರೂಢಾ ನ್ವರ್ಥಾಂಕಿತಮೆಂದಾನಾಮವರಿಗೆ ಮೂದೆರ’ ಎಂಬ ಅಭಿಪ್ರಾಯವೂ ಗಮನಿಸುವಂಥದಾಗಿದೆ. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಬರುವ ಎಷ್ಟೋ ಸ್ಥಳನಾಮಗಳು ಕಲ್ಪಿತವೆನಿಸಿದರೂ ಅವುಗಳು ವಾಸ್ತವ ಸಂಗತಿಗಳಾಗಿವೆ ಯೆಂಬುದನ್ನು ಮರೆಯುವಂತಿಲ್ಲ.

‘ಜನಪದ’ ಎಂದರೆ ಒಂದು ನಿರ್ದಿಷ್ಟ ಮಂಡಲಗಳ ಅಧೀನ ಪ್ರದೇಶ ಎಂಬುದು ಕೌಟಿಲ್ಯನ ಅಭಿಮತವಾಗಿದೆ. ಪ್ರಾಚೀನ ಆರ್ಯಾವರ್ತದಲ್ಲಿ ಇಂತಹ ಹದಿನಾರು ‘ಜನಪದ’ಗಳಿದ್ದುವೆಂಬುದು ಬೌದ್ಧಕಾಲದ ಸಾಹಿತ್ಯದಿಂದ ತಿಳಿದು ಬರುತ್ತದೆ. ಯಾಜ್ಞವಲ್ಕ್ಯನು ‘ಪೂಗ’ವೆಂಬ ಶಬ್ದವನ್ನು ಬಳಸಿದ್ದಾನೆ. ಪೂಗ ಎಂದರೆ ವಿಭಿನ್ನ ಜಾತಿ ಮತ್ತು ವೃತ್ತಿಗಳ ಜನರು ಒಂದೆಡೆ ನೆಲೆನಿಂತ ‘ಗ್ರಾಮ’ ಇಲ್ಲವೆ ‘ಪಟ್ಟಣ’ ಎಂದು ‘ಮಿತಾಕ್ಷರಿ’ಯಲ್ಲಿ ಸೂಚಿತವಾಗಿದೆ.

ಪ್ರಾಚೀನ ಮಾನವನು ತನ್ನ ಉದರ ಪೋಷಣೆಗೆ ವನ್ಯ ಪ್ರಾಣಿಗಳಂತೆ ಪ್ರಕೃತಿಯನ್ನವಲಂಬಿಸಿ ಒಂದೇ ಕಡೆ ನೆಲೆ ನಿಲ್ಲದೆ ಬದುಕನ್ನು ಅರಸಿಕೊಂಡು ಒಂದೆಡೆಯಿಂದ ಇನ್ನೊಂದೆಡೆಗೆ ಗುಳೆಹೊರಡುವ ಅಲೆಮಾರಿಯಾಗಿ ಎಷ್ಟೋ ಶತಮಾನಗಳವರೆಗೆ ಕಾಲವನ್ನು ಸವೆಸಿ ಕಾಲಕ್ರಮದಲ್ಲಿ ತನ್ನ ಜೀವನಕ್ಕೆ ಹೊಂದಿಕೆಯಾಗುವಂತಹ ಪರಿಸರವೊಂದರಲ್ಲಿ ನೆಲೆನಿಂತಿದ್ದಾನೆ. ತಾನು ಹೀಗೆ ನೆಲೆ ನಿಂತ ಸ್ಥಳಗಳೇ ಹಟ್ಟಿಗಳಾದವು. ಸ್ಥಳನಾಮಗಳಲ್ಲಿ ಹಟ್ಟಿಗಳೇ ಆರಂಭಕಾಲದ ವಸತಿಗಳು ಮತ್ತು ಪ್ರಾಚೀನತಮ ಘಟಕ ಎಂದು ಭಾವಿಸಲಾಗಿದೆ.

ಸ್ಥಳನಾಮಗಳ ಅಧ್ಯಯನಕ್ಕೆ ದೇಶವಿದೇಶಗಳಲ್ಲಿ ಹೆಚ್ಚಿನ ರೀತಿಯ ಪ್ರಾಶಸ್ತ್ಯ ಲಭ್ಯವಾಗತೊಡಗಿದ ನಂತರ ಈಗ ಭಾರತದಲ್ಲಿ ಸ್ಥಳನಾಮಗಳ ಅಧ್ಯಯನಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ. ಉತ್ತರ ಭಾರತದಲ್ಲಿ ಸ್ಥಳನಾಮಗಳಿಗೆ ಸಂಬಂಧಿಸಿದ ಅಧ್ಯಯನ ವಿಶೇಷವಾಗಿ ಇತಿಹಾಸಕಾರರಿಂದ ಆರಂಭಗೊಂಡುದಾಗಿದೆ. ಈ ದಿಕ್ಕಿನಲ್ಲಿ ಮ್ಯಾಕ್‌ಡೋನೆಲ್, ಎ.ಬಿ. ಕೀತ್, ಎಂ.ಅರ್.ಸಿಂಗ್, ಎಸ್.ಬಿ. ಚೌಧರಿ, ಎಸ್.ಎಸ್. ಮಜುಮದಾರ, ತೇಜರಾಮಶರ್ಮಾ, ಅಮಿತ್ ರೇ, ಎ. ಘೋಷ್, ಎನ್.ಎಲ್.ಡೇ, ಜಿ.ಪಿ. ಮಲಾಳ ಳೇಕೇರಾ, ಎಂ.ಎಸ್. ಅಳತೇಕರ, ಡಿ.ಸಿ. ಸರ್ಕಾರ, ಮನಮೋಹನ ಕುಮಾರ, ಜಯದೇವ ವಿದ್ಯಾಲಂಕಾರ, ಕೆ.ಡಿ.ವಾಜಪೇಯಿ, ಜೆ.ಸಿ. ಬೌಲಿ, ಬಿ.ಕಾಕತಿ, ಸುನೀತಿಕುಮಾರ್ ಚಟರ್ಜಿ ಮುಂತಾದವರು ಗಣನೀಯ ಕಾರ್ಯವನ್ನು ಮಾಡಿ ತೋರಿಸಿದ್ದಾರೆ.

ದಕ್ಷಿಣ ಭಾರತದ ತಮಿಳುನಾಡು, ಕೇರಳ, ಆಂಧ್ರ ಪ್ರದೇಶಗಳಲ್ಲಿ  ರಾವ್‌ಬಹಾದ್ದೂರ್ ಸಿ.ಎಂ. ರಾಮಚಂದ್ರ ಚೆಟ್ಟಿಯಾರ್, ಡಾ. ಆರ್.ಪಿ. ಸೇತುಪಿಳ್ಳೆ, ಜಿ.ಎ. ಚೊಕ್ಕಲಿಂಗಂ, ಡಾ. ಎಸ್. ಜ್ಞಾನಮುತ್ತು, ವಿ.ಡಿ. ಸುಬ್ರಮಣಿಯಮ್, ಡಾ. ಕೆ. ನಾಚಿಮುತ್ತು, ಟಿ.ಕೆ. ಪರಮಶಿವಂ, ಟಿ.ಕೆ.ಶೇಷಾದ್ರಿ, ಡಾ. ಸುಬ್ಬರಾಯಲು, ಕೆ.ಎಸ್. ವೈದ್ಯನಾಥನ್, ಎಂ.ಸಿ. ಷಣ್ಮುಖನಯನಾರ್, ಎ. ರಾಜೇಂದ್ರನ್, ಟಿ.ಎಸ್. ನಾರಾಯಣ ಪಿಳ್ಳೆ, ಎಂ. ನಾಯನಾರ, ವೇಲುಸ್ವಾಮಿ, ಪಿ.ಎ. ಮಣಿಮಾರನ್, ಟಿ.ಕೆ. ಪರಮಶಿವಂ, ಚಿಲಕೂರಿ ನಾರಾಯಣರಾವ್, ಎಂ.ಎಸ್.ತ್ಯಾಗರಾಜು, ಶ್ರೀಮತಿ ಎಸ್. ಕೃಷ್ಣಕುಮಾರಿ, ಶ್ರೀ ಪ್ರಸಾದ ಭೂಪಾಲುಡು, ಪ್ರೊ. ಟಿ. ದೋಣಪ್ಪ, ಜಿ. ರಾಮಮೂರ್ತಿ ಪಂತಲು, ಎಂ. ಸೋಮಶೇಖರಶರ್ಮಾ, ಕೆ. ಈಶ್ವರದತ್ತ, ಕೆ. ರಾಮಕೃಷ್ಣಯ್ಯ, ಡಿ. ವೆಂಕಟಾವಧಾನಿ, ಕೆ. ಮಹದೇವ ಶಾಸ್ತ್ರಿ, ಪ್ರೊ. ಎಸ್.ವಿ. ಜೋಗಾರಾವ್, ಡಾ. ಕೆ. ವಿಶ್ವನಾಥ ರೆಡ್ಡಿ ಮುಂತಾದ ಅನೇಕ ವಿದ್ವಾಂಸರು ಅತ್ಯುತ್ಸಾಹ ಮತ್ತು ಅದಮ್ಯ ಶ್ರದ್ಧೆ, ಆಸಕ್ತಿಗಳಿಂದ ನಾಮಾಧ್ಯಯನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ದಕ್ಷಿಣ ಭಾರತದ ಇತರ ಭಾಷೆಗಳೊಂದಿಗೆ ಹೋಲಿಸಿ ನೋಡಿದಾಗ ಕನ್ನಡದಲ್ಲಿ ಸ್ಥಳನಾಮಗಳ ಮೇಲೆ ನಡೆದ ಅಧ್ಯಯನ ಕ್ವಚಿತ್ತಾದುದೆಂದು ಹೇಳದೆ ವಿಧಿಯಿಲ್ಲ.

‘ವಡ್ಡಾರಾಧನೆ’ಯು ಕನ್ನಡದ ಪ್ರಾಚೀನ ಗದ್ಯ ಗ್ರಂಥ. ಅಲ್ಲಿಯ ಕಥೆಗಳು ಮೇರು ಪರ್ವತದ ದಕ್ಷಿಣ ದಿಗ್ಭಾಗದ ‘ಜಂಬೂದ್ವೀಪ’ವನ್ನು ಕುರಿತು ಹೇಳಿ ಅಲ್ಲಿಯ ನಾಡು, ಪುರ ಅದನ್ನಾಳುವ ದೊರೆಗಳ ವಿವರಣೆ ನೀಡಿ ಪ್ರಾರಂಭಗೊಳ್ಳುತ್ತವೆ. ಜೈನಮುನಿಗಳು ‘ಗ್ರಾಮನಗರ ಖೇಡ ಖರ್ವಡ ಮಡಂಬ ಪತ್ತನ ದೋಣಾಮುಖಂಗಳೊಳಾರೈಸಿ’ ಸಾಗುತ್ತಾರೆ. ಅಶೋಕನ ಶಾಸನದಲ್ಲಿ ಕಂಡುಬರುವ ‘ಇಸಿಲ’ ಪ್ರಾಚೀನಕಾಲದ ಕನ್ನಡ ಸ್ಥಳನಾಮ ಪದವಾಗಿದೆಯೆಂದು ಡಾ. ಡಿ.ಎಲ್.ನರಸಿಂಹಾಚಾರ್ಯರು ಅಭಿಪ್ರಾಯಪಟ್ಟಿದ್ದಾರೆ. ‘ರಾಮನಾಥ ಚರಿತೆ’ಯಲ್ಲಿ ನಂಜುಂಡಕವಿಯು “ಗ್ರಾಮ, ನಗರ, ಖೇಡ, ಖರ್ವಡ, ದುರ್ಗ, ದ್ರೋಣಾಮುಖ ಸಂದೋಹದಿಂ ಕಾಮನಾಡುಂಬೊಲದಂತೆ ಕರ್ಣಾಟಕ ಭೂಮಿ ಕಣ್ಣೆಸೆದಿರುತಿಹುದು” ಎಂದು ಹೇಳಿದ್ದಾನೆ. ಲಕ್ಕಣ ದಂಡೇಶನ ‘ಶಿವತತ್ವ ಚಿಂತಾಮಣಿ’ಯಲ್ಲಿ ನೂತನ ಶರಣರ ದೇಶ, ನಾಡು, ಗ್ರಾಮಗಳ ಬಗ್ಗೆ ವಿವರ ಸಿಕ್ಕುತ್ತದೆ. ಹರಿಹರನು ತನ್ನ ಅನೇಕ ರಗಳೆಗಳಲ್ಲಿ ಆಯಾ ಶರಣರ ದೇಶ, ನಾಡು, ಗ್ರಾಮಗಳನ್ನು ಹೇಳುತ್ತಾನೆ. ಗ್ರಾಮದ ಬಗ್ಗೆ ಹೆಚ್ಚಿನ ವಿವರ ಗೊತ್ತಾಗದ ಎಡೆಗಳಲ್ಲಿ ‘ಶಿವಪುರ’ ಎಂದು ಹೇಳಿ ಮುಂದೆ ಸಾಗುತ್ತಾನೆ. ಹಲ್ಮಿಡಿ ಶಾಸನದಲ್ಲಿ ‘ಪಲ್ಮಿಡಿಉಂ ಮೂಳವಳ್ಳಿಉಂ’ ಎಂಬ ಗ್ರಾಮಗಳ ಉಲ್ಲೇಖ ಬಂದಿದೆ. ಕನ್ನಡದಲ್ಲಿಯ ಎಲ್ಲ ಸ್ಥಳ ಪುರಾಣಗಳಲ್ಲೂ ಆಯಾ ಸ್ಥಳಗಳ ಮಾಹಿತಿ ಲಭ್ಯವಾಗುತ್ತದೆ.

ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತುಪಡಿಸಿದಂತೆ ಉಳಿದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಸ್ಥಳನಾಮಗಳ ಅಧ್ಯಯನಕ್ಕೆ ವಿಪುಲ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಇದರಿಂದ ಪ್ರೇರಿತರಾಗಿ ಭಾರತೀಯ ಶಾಸನ ಮತ್ತು ಪೂರಾತತ್ವ ಇಲಾಖೆಯ ಡಾ. ಕೆ.ವಿ. ರಮೇಶ ಮತ್ತು ಮಾಧವ ಎನ್. ಕಟ್ಟಿ ಮುಂತಾದವರು ಪ್ರೊ. ದೇ. ಜವರೆಗೌಡರ ಮಾರ್ಗದರ್ಶನದಲ್ಲಿ 1978ರಲ್ಲಿ “Indian Place Name Society” ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯು ಅಖಿಲಭಾರತ ಮಟ್ಟದ ಸ್ಥಳನಾಮ ಸಮ್ಮೇಳನವನ್ನು ಪ್ರತಿವರ್ಷ ಒಂದೊಂದು ಕಡೆಯಲ್ಲಿ ನಡೆಸುವುದರ ಮೂಲಕವಾಗಿ ಭಾರತೀಯ ಸ್ಥಳನಾಮ ವಿಜ್ಞಾನಿಗಳು ಒಂದೆಡೆ ಸೇರಿ ಪರಸ್ಪರ ಚರ್ಚಿಸಲು ಅನುವು ಮಾಡಿಕೊಡುತ್ತಲಿದೆ. “Studies in Indian Place Names” ಈ ಸಂಸ್ಥೆಯಿಂದ ಪ್ರಕಟವಾಗುತ್ತಿರುವ ವಾರ್ಷಿಕ ಸಂಚಿಕೆಯಾಗಿದೆ.

ಬೆಂಗಳೂರಿನ “Mythic Society of India” ಎಂಬ ಸಂಸ್ಥೆ ತನ್ನ ನಿಯತಕಾಲಿಕದಲ್ಲಿ ಸ್ಥಳನಾಮಗಳನ್ನು ಕುರಿತಾದ ಕೆಲವು ಲೇಖನಗಳನ್ನು ಪ್ರಕಟಿಸಿದೆ. ಕನ್ನಡದಲ್ಲಿ ಜಾನಪದ ಅಕಾಡೆಮಿಯ ಜಾನಪದ ಜಗತ್ತು, ಜಾನಪದ ಗಂಗೋತ್ರಿ ಹಾಗೂ ಇನ್ನಿತರೆ ಸಾಹಿತ್ಯಿಕ ಪತ್ರಿಕೆಗಳಲ್ಲೂ ಅಲ್ಲಲ್ಲಿ ಕೆಲವಾರು ಲೇಖನಗಳು ಕಂಡುಬಂದಿವೆ. ಹಳೆಯ ಮೈಸೂರು ಸಂಸ್ಥಾನದಲ್ಲಿ ಪ್ರಥಮವಾಗಿ ಸುವ್ಯವಸ್ಥಿತವಾಗಿ ಸ್ಥಳನಾಮಗಳ ಅಧ್ಯಯನವನ್ನು ಕೈಗೊಂಡವರೆಂದರೆ ಶ್ರೀ ಸಿ. ಹಯವದನರಾಯರು. 1915ರಲ್ಲಿಬರೆದು ಪ್ರಕಟಿಸಿದ ಅವರ “The Place Names of Mysore” ಎಂಬ ಲೇಖನದಲ್ಲಿ ಸುಮಾರು ಅರವತ್ತಕ್ಕಿಂತ ಹೆಚ್ಚು ವಿಶಿಷ್ಟ ಮತ್ತು ವಾರ್ಗಿಕ ಘಟಗಳನ್ನು ಗುರುತಿಸಿ ಚರ್ಚಿಸಿದ್ದಾರೆ. ದ್ರಾವಿಡ ಭಾಷಾ ಸ್ಥಳನಾಮಗಳ ತುಲನಾತ್ಮಕ ಅಧ್ಯಯನಕ್ಕೆ ಇದು ಸಹಕಾರಿಯಾಗಬಲ್ಲದು ಎಂಬುದು ಈ ಲೇಖನದ ಮಹತ್ವವನ್ನು ಹೆಚ್ಚಿಸಿದೆ. ಇಷ್ಟಲ್ಲದೆ ಹಲವು ಕಾರಣಗಳಿಂದ ಹಯವದನರಾಯರ  ಸ್ಥಳನಾಮಗಳನ್ನು ಕುರಿತಾದ ಅಧ್ಯಯನ ಪ್ರಶಂಸೆಗೆ ಪಾತ್ರವಾದುದಾಗಿದೆ.

ಡಾ. ಜಿ.ಎಸ್. ಗಾಯಿ, ಡಾ. ಎ.ಎನ್. ನರಸಿಂಹಯ್ಯ, ಡಾ. ಪಿ.ಬಿ. ದೇಸಾಯಿ, ಡಾ. ಶ್ರೀನಿವಾಸ ರಿತ್ತಿ ಮುಂತಾದ ಇತಿಹಾಸಕಾರರು ತಮ್ಮ ಲೇಖನಗಳಲ್ಲಿ ಐತಿಹಾಸಿಕ ಸ್ಥಳನಾಮಗಳಿಗೆ ಸಂಬಂಧಿಸಿದ ಅನೇಕ ಉಲ್ಲೇಖ ಗಳನ್ನು ನೀಡಿದ್ದಾರೆ. ಭಾರತೀಯ ಸ್ಥಳನಾಮ ಸಂಸ್ಥೆಯ ಮೊದಲನೆಯ ಅಧ್ಯಕ್ಷರಾಗಿದ್ದ ಡಾ. ದೇಜಗೌರವರು ಸ್ಥಳನಾಮಾಧ್ಯಯನ ಕ್ಷೇತ್ರಕ್ಕೆ ಹಲವು ಲೇಖನಗಳು ಮತ್ತು ಪುಸ್ತಕಗಳನ್ನು ನೀಡಿ ಪ್ರಶಂಸಾರ್ಹ ಸೇವೆ ಸಲ್ಲಿಸಿದ್ದಾರೆ.

ಡಾ. ಶಂ.ಬಾ. ಜೋಶಿಯವರು “Ethnology of Place Names Pathi-Hathi” ಎಂಬ ಲೇಖನವನ್ನು 1952ರಲ್ಲಿ ಪ್ರಕಟಿಸಿದ್ದಾರೆ. ಡಾ. ಆರ್.ಸಿ. ಹಿರೇಮಠ, ಡಾ. ಎಂ.ಎಂ. ಕಲಬುರ್ಗಿ, ಶ್ರೀ ಎಸ್. ಸಿಲ್ವಾರವರುಗಳು ಸ್ಥಳನಾಮಾಧ್ಯಯನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಕರ್ನಾಟಕದ ಸ್ಥಳನಾಮಗಳು ಶಾಸನಗಳಲ್ಲಿ, ಎಪಿಗ್ರಾಫಿಯಾ ಕರ್ನಾಟಕ ಮತ್ತು ಮೈಸೂರು ಗೆಜೆಟಿಯರ್‌ನಲ್ಲಿ ಲಭ್ಯವಿವೆ. ಕರ್ನಾಟಕ ಸರ್ಕಾರವು “Population of Villages and Towns” ಎಂಬ ಹೊತ್ತಿಗೆಯನ್ನು 1971ರಲ್ಲಿ ಪ್ರಕಟಿಸಿದೆ. ಇದರಲ್ಲಿ ಎಲ್ಲ ಜಿಲ್ಲೆಗಳ ಸ್ಥಳನಾಮಗಳು ಮಾತ್ರ ಲಭ್ಯವೇ ಹೊರತು ಸ್ಥಳನಾಮಗಳ ಅಧ್ಯಯನ ಕಂಡುಬರುವುದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕದ ಎಲ್ಲ ಜಿಲ್ಲೆಗಳ ತಾಲ್ಲೂಕುವಾರು ಊರುಗಳ ಯಾದಿಯ ಹೊತ್ತಿಗೆಯನ್ನು 1985ರಲ್ಲಿ ಪ್ರಕಟಿಸಿದೆ. ಕರ್ನಾಟಕದ ಸ್ಥಳನಾಮಗಳ ಅಧ್ಯಯನದಲ್ಲಿ ಮೊಟ್ಟಮೊದಲ ಹೊರಬಂದ ಪುಸ್ತಕವೆಂದರೆ 1963ರಲ್ಲಿ ಮುಂಬಯಿಯ ಪಾಪ್ಯೂಲರ್ ಪ್ರಕಾಶನದವರು ಪ್ರಕಟಿಸಿದ ಸೆವೆರಿನ್ ಸಿಲ್ವಾರವರ “Toponomy of Canara” ಆಗಿದೆ. ಇದು ತುಂಬಾ ವೈಜ್ಞಾನಿಕ ಹಾಗೂ ವ್ಯವಸ್ಥಿತವಾಗಿ ಮೂಡಿಬಂದಿದೆ.

ಕರ್ನಾಟಕ ಸ್ಥಳನಾಮಗಳನ್ನು ಕುರಿತು ಬಹುಪೂರ್ವದಲ್ಲಿಯೇ ಅಧ್ಯಯನ ಆರಂಭಿಸಿದವರೆಂದರೆ ಡಾ. ಶಂ.ಬಾ. ಜೋಷಿಯವರು. ಇವರು 1936ರಲ್ಲಿ ‘ಎಡೆಗಳು ಹೇಳುವ ಕಂನಾಡ ಕಥೆ’, ಅನಂತರ ‘ಕನ್ನಡದ ನೆಲೆ’ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಡಾ. ಆರ್.ಸಿ. ಹಿರೇಮಠ ಅವರ “Linguistic Investigation of some Place’s in Karnataka” ಒಂದು ಮಹತ್ವದ ಲೇಖನವಾಗಿದೆ. ಸೇಡಿಯಾಪು ಕೃಷ್ಣಭಟ್ಟರ ‘ಕೆಲವು ದೇಶನಾಮ ಗಳು’ ಎಂಬ ಪುಸ್ತಕ ಸ್ಥಳನಾಮಗಳನ್ನು ಕುರಿತು ಚರ್ಚಿಸುವಂಥದಾಗಿದೆ. ಶ್ರೀ. ಶಂಭು ಶರ್ಮಾರವರು ತಮ್ಮ ‘ತುಳು ದೇಶ ಭಾಷಾ ವಿಚಾರವು’ ಎಂಬ ಪುಸ್ತಕದಲ್ಲಿ ದಕ್ಷಿಣ ಕನ್ನಡದ ಕೆಲವು ಸ್ಥಳನಾಮಗಳನ್ನು ಕುರಿತು ಬರೆದಿದ್ದಾರೆ. ಪ್ರೊ. ಎಂ. ಮರಿಯಪ್ಪ ಭಟ್ಟರು ಬರೆದ ‘ತುಳುನಾಡಿನಲ್ಲಿ ಕೆಲವು ಮನೆಗಳ ಮತ್ತು ಕುಲಗಳ ಹೆಸರು’ ಎಂಬ ಲೇಖನ ‘ಕನ್ನಡ ಸಂಸ್ಕೃತಿ’ ಎಂಬ ಅವರದೇ ಪುಸ್ತಕದಲ್ಲಿ ಮೂಡಿ ಬಂದಿದೆ. ಕೆಮ್ತೂರು ರಘುಪತಿ ಭಟ್ಟರ ‘ತುಳುನಾಡಿನ ಸ್ಥಳನಾಮಗಳು’ ಪಿಎಚ್.ಡಿ. ಸಂಸೋಧನ ಮಹಾಪ್ರಬಂಧ ವಾಗಿದೆ. ಅಲ್ಲದೆ ಇವರು ‘ಕನ್ನಡ ಸ್ಥಳನಾಮಗಳು’ ಎಂಬ ಕೈ ಹೊತ್ತಿಗೆಯನ್ನು ಮತ್ತು ‘ತುಳುನಾಡಿನ ಸ್ಥಳನಾಮಗಳು’ ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ.

“A Glossory of Place Names-Elements in Tulu and Kannada” ಎಂಬ ಅವರ ಕೃತಿ ನಾಮವಿಜ್ಞಾನ ಕ್ಷೇತ್ರಕ್ಕೆ ಅನನ್ಯವಾದುದಾಗಿದೆ. ಪಂಜೆ ಮಂಗೇಶರಾಯ, ಎಂ. ಗೋವಿಂದ ಪೈ, ಡಾ. ಪಿ. ಗುರುರಾಜ ಭಟ್, ಕೆ. ವೆಂಕಟಾಚಾರ್ಯ. ಪಿ. ಶಿವರಾಮಯ್ಯ ಮೊದಲಾದವರೂ ಕೆಲ ಲೇಖನ ಗಳನ್ನು ಬರೆದಿದ್ದಾರೆ. ಡಾ. ರಂ.ಶ್ರೀ. ಮುಗಳಿ, ಎಸ್. ಕುಮಾರಸ್ವಾಮಿ, ಬಿ.ಬಿ. ರಾಜಪುರೋಹಿತ, ಕೆ.ಎಂ. ಭದ್ರಿ, ಎಸ್.ಕೆ. ಹಾವನೂರ ಮುಂತಾದವರ ಲೇಖನಗಳೂ ಪ್ರಕಟವಾಗಿವೆ.

ಕನ್ನಡದ ಸುಪ್ರಸಿದ್ಧ ಸಂಶೋಧಕರೂ, ಭಾಷಾಶಾಸ್ತ್ರಜ್ಞರೂ ಮತ್ತು ಶಾಸನ ತಜ್ಞರೂ ಆದ ಡಾ. ಎಂ. ಚಿದಾನಂದಮೂರ್ತಿಯವರು ‘ವಾಗರ್ಥ’ವೆಂಬ ತಮ್ಮ ಕೃತಿಯಲ್ಲಿ ಪ್ರಕಟಿಸಿರುವ ನಾಲ್ಕು ಲೇಖನಗಳು ಸ್ಥಳನಾಮವ್ಯಾಸಂಗಕ್ಕೆ ನೀಡಿದ ಅಮೂಲ್ಯ ಕಾಣಿಕೆಗಳಾಗಿವೆ. ನಾಡಿನ ಖ್ಯಾತ ವಿದ್ವಾಂಸ, ಭಾಷಾವಿಜ್ಞಾನಿ ಹಾಗೂ ಸಂಶೋಧಕರಾದ ಡಾ. ಸಂಗಮೇಶ ಸವದತ್ತಿ ಮಠ ಅವರು, ‘ಮನೆತನದ ಅಡ್ಡ ಹೆಸರುಗಳು’ ಎಂಬ ಕೃತಿಯಲ್ಲಿ ನಾಮಾಧ್ಯಯನವನ್ನು ಕುರಿತಾದ ಎರಡು ಮಹತ್ವದ ಲೇಖನಗಳು ಪ್ರಕಟವಾಗಿವೆ. ಡಾ. ವಿ.ಗೋಪಾಲ ಕೃಷ್ಣರವರು ‘ಕೋಲಾರ ಜಿಲ್ಲೆಯ ಸ್ಥಳನಾಮಗಳು’ ಎಂಬ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಸಂಪಾದಿಸಿದ್ದಾರೆ. ಡಾ. ವೈಜನಾಥ ಭಂಡೆ ಅವರ ‘ಬೀದರ ಜಿಲ್ಲೆಯ ಸ್ಥಳನಾಮಗಳು’ ಇನ್ನೊಂದು ಪಿಎಚ್.ಡಿ. ಸಂಶೋಧನ ಮಹಾಪ್ರಬಂಧವಾಗಿದೆ. ಪ್ರಸ್ತುತ ಲೇಖಕ ಡಾ. ಕೆ.ಎಂ. ವೀರಭದ್ರಶರ್ಮಾ ಅವರು ರಚಿಸಿದ ‘ಬಳ್ಳಾರಿ ಜಿಲ್ಲೆಯ ಸ್ಥಳನಾಮಗಳು’ ಸಂಶೋಧನ ಮಹಾಪ್ರಬಂಧಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯ ದಿಂದ ಡಾಕ್ಟೊರೇಟ್ ಪದವಿ ಲಭ್ಯವಾಗಿದೆ. ಅಲ್ಲದೆ ಡಾ. ಎಚ್.ಎಂ. ಮಹೇಶ್ವರಯ್ಯ ಅವರು ಸ್ಥಳನಾಮಗಳನ್ನು ಕುರಿತು ರಚಿಸಿದ ಲೇಖನಗಳು ಹಲವು ಪ್ರಮುಖ ಪತ್ರಿಕೆಗಳಲ್ಲಿ ಹೊರಬಂದಿವೆ. ಡಾ. ಬಿ.ಆರ್. ಹಿರೇಮಠ ಅವರ ಐಹೊಳೆ ಸ್ಥಳನಾಮದ ಬಗೆಗಿನ ಲೇಖನ ಅಧ್ಯಯನ ಯೋಗ್ಯವಾಗಿದೆ. ಈ ಬಗೆಯಲ್ಲಿ ಇನ್ನೂ ಹಲವು ವಿದ್ವಾಂಸರು ನಾಮಾಧ್ಯಯನ ಕ್ಷೇತ್ರಕ್ಕೆ ತಮ್ಮದೇ ಆದ ಅಮೂಲ್ಯ ಕಾಣಿಕೆ ನೀಡಿದ್ದಾರೆ.

ಇತ್ತೀಚೆಗೆ ಕನ್ನಡದಲ್ಲಿ ಹಾಸನ ತಾಲ್ಲೂಕು, ಸಕಲೇಶಪುರ ತಾಲ್ಲೂಕು, ಚಾಮರಾಜನಗರ ತಾಲ್ಲೂಕು, ಬೆಳಗಾವಿ ಜಿಲ್ಲೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಭಾಗಗಳ ಸ್ಥಳನಾಮಗಳನ್ನು ಕುರಿತು ಅಧ್ಯಯನ ಕೈಗೊಂಡಿರುವುದು ವೇದ್ಯವಾಗಿದೆ. ಆದರೂ ದೇಶದ ಇತರೆ ಭಾಗಗಳೊಂದಿಗೆ ಹೋಲಿಸಿದರೆ ನಾವು ಕ್ರಮಿಸಬೇಕಾದ ಹಾದಿ ಸುದೀರ್ಘವಾಗಿದೆ. ವಿಳಂಬಿಸದೆ ಮುಂದೆ ಸಾಗುವುದು ನಮ್ಮ ಗುರಿಯಾಗಬೇಕಾಗಿದೆ.