ಭಾಷೆ ಮನುಷ್ಯರ ನಡುವೆ ಸಂಪರ್ಕ ಬೆಳೆಸಲು ಇರುವ ಮುಖ್ಯ ಸಾಧನವೆಂದು ನಾವು ತಿಳಿದಿದ್ದೇವೆ. ಆದರೆ ಭಿನ್ನ ಭಾಷಿಕ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳ ನಡುವೆ ಅವರವರ ಭಾಷೆಗಳು ಸಂಪರ್ಕಕ್ಕೆ ನೆರವಾಗುವುದಿಲ್ಲ, ಭಾಷೆ ಅಲ್ಲಿ ಗೋಡೆ. ನಮ್ಮ ಭಾಷೆಯನ್ನಾಡದ ಜನರಿರುವ ಪ್ರದೇಶಗಳಿಗೆ ಪ್ರವಾಸಕ್ಕೆ, ಹೆಚ್ಚಿನ ಶಿಕ್ಷಣಕ್ಕೆ, ವಾಣಿಜ್ಯೋದ್ದೇಶಗಳಿಗೆ ನಾವು ಹೋದಾಗ ನಮ್ಮ ಭಾಷೆ ನಮಗೆ ನೆರವಾಗುವುದಿಲ್ಲ. ಭಾರತದ ವಿವಿಧ ರಾಜ್ಯಗಳಿಗೆ ಹೋದಾಗ ಇಂಥ ಪರಿಸ್ಥಿತಿಯನ್ನು ಎದುರಿಸುವುದು ಅನಿವಾರ್ಯ. ತಮಿಳುನಾಡಿನಲ್ಲಿ ಯಾರೂ ತಮಿಳನ್ನು ಬಿಟ್ಟು ಬೇರೆ ಮಾತಾಡುವುದಿಲ್ಲ, ಎಲ್ಲಾ ಬೋರ್ಡುಗಳೂ ತಮಿಳಿನಲ್ಲಿರುತ್ತವೆ ಎಂದು ಕನ್ನಡಿಗರು ಗೊಣಗುತ್ತಾರೆ. ಬಂಗಾಳಿಗಳು ಕೇರಳಕ್ಕೆ ಬಂದರೆ, ಕೇರಳದವರು ಅಸಾಮಿಗೆ ಹೋದರೂ ಅವರು ಇಂಥದೇ ಮಾತನ್ನು ಆಡುವುದರಲ್ಲಿ ಆಶ್ಚರ್ಯವಿಲ್ಲ.
ಸಾಮಾಜಿಕ ಪರಿವರ್ತನೆಯಿಂದಾಗಿ ಬೇರೆ ಬೇರೆ ಭಾಷೆಗಳನ್ನು ಬಲ್ಲವರು ಪರಸ್ಪರ ಸಂಪರ್ಕ ಬೆಳೆಸಬೇಕಾದ ಪರಿಸ್ಥಿತಿ ಈಗ ಎಂದಿಗಿಂತ ಹೆಚ್ಚಾಗಿದೆ. ದೀರ್ಘಕಾಲದ ಭಾಷಾ ಸಂಪರ್ಕದ ಸಂದರ್ಭಗಳನ್ನು ಮೇಲೆ ಹೇಳಿದಂತೆ ಪ್ರವಾಸಿಗರು, ವಾಣಿಜ್ಯ ವ್ಯವಹಾರಗಳಿಗಾಗಿ ಬೇರೆ ಬೇರೆ ಪ್ರದೇಶಗಳಿಗೆ ಹೋಗುವವರು, ಶಿಕ್ಷಣಗಳಿಗೆ ಅನ್ಯಭಾಷಾ ಪ್ರದೇಶಗಳಿಗೆ ಹೋಗುವರು, ವಿವಿಧ ಬಗೆಯ ಮಾಹಿತಿಗಳನ್ನು ಅನ್ವೇಷಿಸುತ್ತಿರುವವರು ದಿನವೂ ಇಂಥ ಇಕ್ಕಟ್ಟಿನ ಸಂದರ್ಭಗಳನ್ನು ಎದುರಿಸುತ್ತಾರೆ. ಭಾಷೆಯ ತೊಡಕಿನಿಂದಾಗಿ ವ್ಯವಹಾರಗಳು ನಿಲ್ಲುವಂತಾಗಬಾರದು. ನಮ್ಮ ಗಮನಕ್ಕೆ ಬಾರದೇ ಉಳಿಯುವ ದಿನ ದಿನದ ಇಂಥ ಸಂದರ್ಭಗಳಿಗೆ ಪರಿಹಾರಗಳನ್ನು ಕಂಡುಕೊಳ್ಳ ಲಾಗುತ್ತಿದೆ.
ಸಾಮಾನ್ಯವಾಗಿ ಭಾಷೆಯು ಗೋಡೆಯಾದಾಗ, ಸಂವಹನಕ್ಕೆ ತೊಡಕುಂಟಾ ದಾಗ ಎರಡು ವಿಧಾನಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳುವ ಪರಿಪಾಠವಿದೆ. 1. ಒಂದು ಸಮಾನ ಭಾಷೆಯನ್ನು ಆಶ್ರಯಿಸುವುದು 2. ತರ್ಜುಮೆಗಳ, ತರ್ಜುಮೆಗಾರರ ಮೊರೆ ಹೋಗುವುದು. ಸಮಾನ ಭಾಷೆಯೆಂದರೆ ಸಂವಹನದಲ್ಲಿ ತೊಡಗಿರುವವರಿಗೆ ಪರಿಚಯವಿರುವ ಭಾಷೆ ಸಂವಹನದ ತೊಡಕನ್ನು ಎದುರಿಸುವವರ ಮೊದಲ ಭಾಷೆಯಾಗಿರಬೇಕಿಲ್ಲ. ಕೇರಳಕ್ಕೆ ನೀವು ಹೋಗಿ ಅಲ್ಲಿಯ ಬಸ್ ನಿಲ್ದಾಣದಲ್ಲಿ ಟಿಕೆಟ್ ಪಡೆಯಲು ಯತ್ನಿಸುವಾಗ ಇಂಗ್ಲಿಶ್ ಬಳಸುವಿರಿ ಎಂದುಕೊಳ್ಳೋಣ. ನಿಮಗಾಗಲೀ ಟಿಕೇಟ್ ಕೌಂಟರಿನಲ್ಲಿ ಕುಳಿತ ವ್ಯಕ್ತಿಗಾಗಲಿ ಇಂಗ್ಲಿಶ್ ಮೊದಲ ಭಾಷೆಯಲ್ಲ. ಆದರೆ ಸಂಪರ್ಕ ಭಾಷೆಯಾಗಿ ಅದನ್ನು ಬಳಸಿ ಆ ಸಂದರ್ಭ ಸಮಸ್ಯೆಯನ್ನು ಇಬ್ಬರೂ ಪರಿಹರಿಸಿಕೊಳ್ಳಬಹುದು.
ಸಂಪರ್ಕ ಭಾಷೆಯನ್ನು ಯೋಜಿತ ಮತ್ತು ಅಯೋಜಿತವೆಂಬ ಎರಡು ನೆಲೆಗಳಲ್ಲಿ ನೋಡಲು ಸಾಧ್ಯ. ವಿಭಿನ್ನ ಭಾಷಾ ಸಮುದಾಯಗಳನ್ನೊಳಗೊಂಡ ರಾಜ್ಯವ್ಯವಸ್ಥೆಯಲ್ಲಿ ಸರ್ಕಾರವೇ ಸಂಪರ್ಕ ಭಾಷೆಯನ್ನು ಆಯ್ದು ಸೂಚಿಸ ಬಹುದು. ಭಾರತದಲ್ಲಿ ಇಂಗ್ಲಿಶನ್ನು ಹೀಗೆ ಸಂಪರ್ಕ ಭಾಷೆಯನ್ನಾಗಿ ಯೋಜಿಸಲಾಗಿದೆ. ರಾಷ್ಟ್ರೀಯ ಮಟ್ಟದ ವಿಚಾರ ಗೋಷ್ಠಿಗಳಲ್ಲಿ ಶಾಸಕಾಂಗದ ಸಭೆಗಳಲ್ಲಿ ನ್ಯಾಯಾಲಯಗಳಲ್ಲಿ ಇಂಗ್ಲಿಶನ್ನು ಅಧಿಕೃತವಾಗಿ ಬಳಸಲಾಗುತ್ತದೆ. ಬಹುಮಟ್ಟಿಗೆ ಅಂಥ ಸಂದರ್ಭಗಳಲ್ಲಿ ಭಾಗಿಯಾಗುವ ಯಾರಿಗೂ ಅದು ಇಂಗ್ಲಿಶ್ ಮೊದಲ ಭಾಷೆಯಾಗಿರುವುದಿಲ್ಲ. ಅವರೆಲ್ಲರೂ ಬೇರೆ ಬೇರೆ ಭಾಷೆಗಳನ್ನಾಡುವವರಾಗಿದ್ದು ಆ ಭಾಷೆಗಳೇ ಗೋಡೆಗಳಾಗಿರುತ್ತವೆ. ಇಂಗ್ಲಿಶ್ ಬಳಸಿ ಈ ಮಿತಿಯನ್ನು ಮೀರುವ ಯತ್ನವನ್ನು ಮಾಡುತ್ತಾರೆ.
ಇದಲ್ಲದೆ ಆಯಾ ಸಂದರ್ಭಕ್ಕೆ ಅನುಗುಣವಾಗಿ ಸಂಪರ್ಕ ಭಾಷೆ ಯೊಂದನ್ನು ಅವಲಂಬಿಸುವ ವಿಧಾನವೂ ಬಳಕೆಯಲ್ಲಿದೆ. ಇದು ಆಯೋಜಿತ. ಇಂಥದೇ ಸಂಪರ್ಕ ಭಾಷೆಯನ್ನು ಬಳಸಬೇಕೆಂಬ ಪೂರ್ವ ಯೋಜನೆ, ನಿದರ್ಶನ ಗಳಿರುವುದಿಲ್ಲ. ಆಯಾ ಸಂದರ್ಭದ ಅವಶ್ಯಕತೆಯನ್ನು ಅನುಸರಿಸಿ ಪರಿಹಾರವನ್ನು ಕಂಡುಕೊಳ್ಳಲಾಗುತ್ತದೆ.
ಭಾಷೆಯ ಮಿತಿಗಳನ್ನು ಮೀರುವ ಇನ್ನೊಂದು ವಿಧಾನ ತರ್ಜುಮೆ ಮತ್ತು ತರ್ಜುಮೆಗಾರರನ್ನು ಅವಲಂಬಿಸುವುದು. ಪ್ರವಾಸಿ ಸ್ಥಳಗಳಲ್ಲಿ, ವಾಣಿಜ್ಯೋ ದ್ಯಮಗಳಲ್ಲಿ ನಿರೀಕ್ಷಿತ ಭಾಷಿಕರು ವ್ಯವಹರಿಸುವುದು ಖಚಿತವಿರುವಾಗ ಮಾಹಿತಿಯನ್ನು ವಿವರಗಳನ್ನು ಎಲ್ಲ ಭಾಷೆಗಳಲ್ಲೂ ತರ್ಜುಮೆ ಮಾಡಿ ದೊರಕುವಂತೆ ಮಾಡುತ್ತಾರೆ. ಹಂಪಿಯ ರಥಬೀದಿಯ ಅಂಗಡಿಗಳಲ್ಲಿ, ಹೋಟೆಲ್ಗಳಲ್ಲಿ ತಿಂಡಿಯ ವಿವರಗಳನ್ನು ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ, ಕೆಲವು ಕಡೆ ಹಿಬ್ರೂ ಲಿಪಿಗಳನ್ನು ಬರೆದಿರುವುದನ್ನು ಗಮನಿಸಬಹುದು. ವಿವಿಧ ಸಾಮಗ್ರಿಗಳನ್ನು ಮಾರುಕಟ್ಟೆಗೆ ತರುವ ಕಂಪನಿಗಳು ಆಯಾ ಸಾಮಗ್ರಿಗಳ ಬಗ್ಗೆ ನೀಡುವ ಮಾಹಿತಿಗಳನ್ನು, ಬಳಕೆಯ ವಿಧಾನಗಳನ್ನು ಎಲ್ಲಾ ಗ್ರಾಹಕರ ಭಾಷೆಗಳಲ್ಲೂ ಅನುವಾದ ಮಾಡಿಕೊಡುತ್ತಾರೆ.
ಹಲವಾರು ಸಂದರ್ಭಗಳಲ್ಲಿ ತರ್ಜುಮೆಗಾರರು ಭಾಷೆಯ ಮಿತಿಗಳನ್ನು ಮೀರಲು ನೆರವಾಗುತ್ತಾರೆ. ವಿವಿಧ ದೇಶಗಳ ನಾಯಕರು ಭೇಟಿಯಾದಾಗ, ಉನ್ನತ ಮಟ್ಟದ ಸಭೆಗಳಲ್ಲಿ, ಉಪನ್ಯಾಸಗಳಲ್ಲಿ ಸಂಪರ್ಕ ಭಾಷೆಯಲ್ಲಿ ತರ್ಜುಮೆ ಮಾಡುವವರನ್ನು ನಿಯೋಜಿಸಲಾಗುತ್ತದೆ. ಸಂಪರ್ಕ ಭಾಷೆಯಿಲ್ಲದೆಯೂ ತರ್ಜುಮೆಗಾರರು ಈ ಸಂದರ್ಭಗಳನ್ನು ನಿರ್ವಹಿಸಬಲ್ಲರು. ಕನ್ನಡ ಮಾತ್ರ ಮಾತನಾಡುವ ನಾಯಕರು ತಮಿಳು ಮಾತ್ರ ಬಳಸುವ ನಾಯಕರನ್ನು ಭೇಟಿಯಾಗಿದ್ದಾರೆಂದುಕೊಳ್ಳೋಣ. ಆಗ ಕನ್ನಡ ಮತ್ತು ತಮಿಳನ್ನು ಬಲ್ಲವರು ತರ್ಜುಮೆ ಮಾಡಬಹುದು. ಅಥವಾ ಇಬ್ಬರೂ ತರ್ಜುಮೆಗಾರರು ಇದ್ದು ಒಬ್ಬರ ತಮಿಳಿನಿಂದ ಕನ್ನಡಕ್ಕೆ ಮತ್ತೊಬ್ಬರು ಕನ್ನಡದಿಂದ ತಮಿಳಿಗೆ ತರ್ಜುಮೆ ಮಾಡುತ್ತಿರುತ್ತಾರೆ. ಪಾರ್ಲಿಮೆಂಟ್, ವಿಶ್ವಸಂಸ್ಥೆ, ವಿವಿಧ ರಾಷ್ಟ್ರಗಳ ಶೃಂಗಸಭೆಗಳಲ್ಲಿ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ತರ್ಜುಮೆ ಮಾಡುವ ಕ್ರಮವಿದೆ.
ಭಾಷೆಯ ಮಿತಿಯ ಅನುಭವ ಈಗಾಗಲೇ ಸೂಚಿಸಿದಂತೆ ಹಲವು ನೆಲೆಗಳಲ್ಲಿ ಒದಗುತ್ತದೆ. ವಿವಿಧ ಭಾಷೆಯ ಜನರು ಈ ಅನುಭವಗಳನ್ನು ಮೀರಲು ನಡೆಸುವ ಯತ್ನಗಳು ಬೇರೆ ಬೇರೆಯಾಗಿರುತ್ತವೆ. ವಸಾಹತುಗಳಾಗಿದ್ದು ಈ ಸ್ವಯಮಾಡಳಿತವನ್ನು ಹೊಂದಿರುವ ದೇಶಗಳ ಜನರು ಸಂಪರ್ಕ ಭಾಷೆಯನ್ನಾಗಿ ವಸಾಹತುಗಾರರ ಭಾಷೆಯನ್ನೇ ಉಳಿಸಿಕೊಂಡಿರುವ ಪ್ರಸಂಗಗಳು ಹೆಚ್ಚು. ಕರ್ನಾಟಕದಲ್ಲಿ ಅಧ್ಯಯನ ಮಾಡುವವರೂ ಫ್ರೆಂಚ್, ಜರ್ಮನ್, ಇಟಾಲಿಯನ್ ಮುಂತಾದ ಭಾಷೆಗಳಲ್ಲಿರುವ ಮಾಹಿತಿಯನ್ನು ಇಂಗ್ಲಿಶಿನ ಮೂಲಕ ಪಡೆಯುತ್ತಾರೆ. ಹೀಗೆ ಸಂಪರ್ಕ ಭಾಷೆಯ ಮೂಲಕವಾದರೂ ಮಾಹಿತಿಯನ್ನು ಪಡೆಯದಿರುವುದು ಅಧ್ಯಯನದ ಕೊರತೆಯಾಗುವುದು ಸಾಧ್ಯ. ಹಾಗಾಗಿ ಅಧ್ಯಯನಕಾರರ ಗ್ರಂಥಸೂಚಿ, ಲೇಖನ ಸೂಚಿಗಳಲ್ಲಿ ಬಹುಪಾಲು ಇಂಗ್ಲಿಶ್ ಭಾಷೆಗಳ ಆಕರಗಳೇ ಇರುತ್ತವೆ. ಆದರೆ ಅನ್ಯದೇಶೀಯ ಸಂದರ್ಭಗಳೆಲ್ಲವೂ ಹೀಗೆ ಇರುವುದಿಲ್ಲ. ವಿಜ್ಞಾನದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಅಧ್ಯಯನಗಳು ಏಕಕಾಲಕ್ಕೆ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತಿರುತ್ತವೆ. ಆ ಸಂಬಂಧಿತ ಸಂಪ್ರಬಂಧಗಳು ವಿವಿಧ ಭಾಷೆಗಳಲ್ಲಿ ಪ್ರಕಟಗೊಳುತ್ತಿರುತ್ತವೆ. ಯುರೋಪು ಮತ್ತು ಅಮೆರಿಕಾದ ಅಧ್ಯಯನಕಾರರು ತಮ್ಮದಲ್ಲದ ಭಾಷೆಗಳಲ್ಲಿ ಹೀಗೆ ಪ್ರಕಟವಾಗುವ ಮಾಹಿತಿಯನ್ನು, ಶೋಧಗಳನ್ನು ಪರಿಚಯ ಮಾಡಿ ಕೊಳ್ಳಲು ಯಾವ ವಿಶೇಷ ಪ್ರಯತ್ನವನ್ನು ಮಾಡುವುದಿಲ್ಲವೆಂಬುದು ಗ್ರಂಥಾಲಯ ಬಳಕೆ ಕುರಿತ ಸಂಶೋಧನೆಗಳಿಂದ ತಿಳಿದುಬಂದಿದೆ. ಅಂದರೆ ಈ ಭಾಷಿಕರು ಮುಖ್ಯವಾಗಿ ಇಂಗ್ಲಿಶ್ ಭಾಷಿಕರು ತಮ್ಮ ಭಾಷೆಯ ಮಿತಿಯನ್ನು ಮೀರಲು ವಿಶೇಷವಾಗಿ ಯತ್ನಿಸುವುದಿಲ್ಲವೆಂದಾಯ್ತು.
ಮಾರುಕಟ್ಟೆಯ ಜಗತ್ತು: ಸಾಮಾನ್ಯ ಸಂತೆಯ ಮಾರಾಟಗಾರರೂ ಕೊಳ್ಳುವವರ ಭಾಷೆಯಲ್ಲಿ ತಮ್ಮ ವ್ಯವಹಾರವನ್ನು ನಡೆಸುವುದು ಲಾಭ ದಾಯಕವೆಂದು ಬಲ್ಲರು. ಹಲವು ಭಾಷೆಗಳಲ್ಲಿ ವ್ಯವಹಾರಕ್ಕೆ ಅವಶ್ಯವಾದ ತಜ್ಞತೆಯನ್ನು ಪಡೆದು ಅವರು ವ್ಯಾಪಾರ ನಡೆಸುತ್ತಾರೆ. ಬೃಹತ್ ಪ್ರಮಾಣದ ವ್ಯಾಪಾರ ನಡೆಸುವ ವ್ಯಾಪಾರೀ ಸಂಸ್ಥೆಗಳೂ ಈ ಸಾಮಾನ್ಯ ನಿಯಮವನ್ನು ಅನುಸರಿಸುವುದು ಅನಿವಾರ್ಯ. ಆದರೆ ವಸಾಹತುಗಳಲ್ಲಿ ಸಾಮಗ್ರಿಯನ್ನು ತಂದು ತುಂಬುವ ಬಹುರಾಷ್ಟ್ರೀಯ ಕಂಪೆನಿಗಳು ಮಾರುಕಟ್ಟೆಯ ಕೆಳಸ್ತರದ ಮಾತು ಹೆಚ್ಚು ಬಳಕೆಯಾಗುವ ಸ್ತರದ – ವ್ಯವಹಾರವನ್ನು ಸ್ಥಳೀಯರಿಗೆ ಹಾಗೂ ಆ ಮೂಲಕ ಸ್ಥಳೀಯ ಭಾಷೆಗಳಿಗೆ ಮೀಸಲಿರಿಸಿ ಉನ್ನತ ಸ್ತರದಲ್ಲಿ ತಮ್ಮ ಭಾಷೆಯನ್ನು ಮುಖ್ಯವಾಗಿ ಇಂಗ್ಲಿಶ್ ಬಳಸುವುದು ವಾಡಿಕೆ. ಇದು ಒಂದು ವ್ಯಾವಹಾರಿಕ ತಂತ್ರವಾಗಿ ಕಾಣುತ್ತದೆ. ಮಾರುಕಟ್ಟೆಗಳು ಮೊದಲು ವಸಾಹತುಗಳಾಗಿದ್ದವು. ಆದುದರಿಂದ ಸಹಜವಾಗಿಯೇ ಇಂಗ್ಲಿಶ್ ಕಲಿಕೆ ಅಲ್ಲಿ ಬೇರೂರಿತ್ತು. ವಾಣಿಜ್ಯ, ಕೈಗಾರಿಕೆ ತಂತ್ರಜ್ಞಾನದ ವಲಯಗಳಲ್ಲಿ ಇಂಗ್ಲಿಶ್ನಲ್ಲಿ ವ್ಯವಹರಿಸುವುದು ಒಪ್ಪಿತವಾದ ಕಾರ್ಯವಿಧಾನವೆಂಬಂತೆ ತೋರುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಮಾರುಕಟ್ಟೆಯ ತುಯ್ತಗಳು ಬದಲಾಗಿವೆ. ಸ್ಥಳೀಯರು ಭಾಷೆಗಳನ್ನು ಸೀಮಿತ ಬಳಕೆಗೆ ಮಾತ್ರ ಇರಿಸಿ ಕೊಳ್ಳುವುದು ಅಸಾಧ್ಯವೆಂದು ಕಂಪನಿಗಳ ಮಾಲೀಕರಿಗೆ ಅನ್ನಿಸತೊಡಗಿದೆ. ಇಂಗ್ಲಿಶ್ ಕೇಂದ್ರಿತ ದೃಷ್ಟಿಯನ್ನು ಬಿಟ್ಟುಕೊಡುವುದು ಅವಶ್ಯವಾಗಿದೆ.
ಇಂಥ ಬದಲಾವಣೆಗಳು ವ್ಯಾಪಕವಾಗಿ ನಡೆದಿಲ್ಲ. ಆದರೂ ಭಾಷೆಯ ಮಿತಿಯನ್ನು ಮೀರುವ ಪ್ರಯತ್ನಗಳು ಈಗ ಏಕಪಕ್ಷೀಯವಾಗಿಲ್ಲ. ವ್ಯವಹಾರದಲ್ಲಿ ತೊಡಗಿರುವವರಲ್ಲಿ ಪರಸ್ಪರ ಇಂಥ ಮಿತಿಗಳನ್ನು ಬೇರೆ ಬೇರೆ ಪ್ರಮಾಣದಲ್ಲಿ ಮೀರುವ ಕ್ರಮವನ್ನು ಅನುಸರಿಸುತ್ತಿದ್ದಾರೆ. ಇಂಗ್ಲಿಶ್ ಒಂದು ಪ್ರಧಾನ ಭಾಷೆಯಾಗಿಲ್ಲದ ಭೂಪ್ರದೇಶಗಳಲ್ಲಿ ವ್ಯಾವಹಾರಿಕ ಜಗತ್ತನ್ನು ವಿಸ್ತರಿಸಲು ಇಂಥ ಕ್ರಮಗಳು ಅನಿವಾರ್ಯವಾಗಿವೆ. ಇದಕ್ಕೆ ಇನ್ನೊಂದು ಬಲವಾದ ಕಾರಣವೂ ಇದೆ. ವ್ಯವಹಾರಕ್ಕೆ ತಕ್ಕಷ್ಟು ಇಂಗ್ಲಿಶ್ ಬಲ್ಲವರಿಂದ ಹೇಗೋ ವ್ಯಾಪಾರದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದೆಂದು ತಿಳಿದಿದ್ದ ಕಾಲ ಬದಲಾಗಿದೆ. ಇಂಗ್ಲಿಶನ್ನು ಅನ್ಯ ಭಾಷೆಯನ್ನಾಗಿ ಕಲಿತವರಿಗೆ ಎಷ್ಟು ಬಗೆಯಲ್ಲಿ ಆ ಭಾಷೆಯನ್ನು ಬಳಸುತ್ತಿದ್ದಾರೆಂದರೆ ಅಂಥ ಭಾಷೆಗಳ ನಡುವೆ ಸಂವಹನ ಕೂಡ ತೊಡಕುಗಳನ್ನು ತರುವಂತಿದೆ. ಹೀಗಾಗಿ ಸಂಪರ್ಕ ಭಾಷೆಯ ಪರಿಕಲ್ಪನೆಯೇ ಬದಲಾಗತೊಡಗಿದೆ.
ಭಾಷೆಯ ಮಿತಿಗಳನ್ನು ಮೀರಲು ಸಂಪರ್ಕ ಭಾಷೆ ಮತ್ತು ತರ್ಜುಮೆಯ ವಿಧಾನಗಳನ್ನು ಈಗ ವ್ಯಾಪಕವಾಗಿ ಬಳಸಲಾಗುತ್ತಿದೆಯಷ್ಟೆ. ಇದರಿಂದಾಗಿ ಅನ್ಯ ಭಾಷೆಯ ಕಲಿಕೆ ಮತ್ತು ಬೋಧನೆಯ ವಿಧಾನಗಳಲ್ಲೂ ಬದಲಾವಣೆ ಗಳಾಗಿವೆ. ವಿಶೇಷ ಉದ್ದೇಶಕ್ಕಾಗಿ ಒಂದು ಭಾಷೆಯನ್ನು ಬಳಸಬೇಕಾಗಿ ಬರುವುದರಿಂದ ಭಾಷೆಯ ಕಲಿಕೆಗೂ ಹೊಸ ವಿಧಾನಗಳು ಅವಶ್ಯ. ಪ್ರತ್ಯೇಕ ಪ್ರೇಕ್ಷಣೀಯ ಸ್ಥಳದಲ್ಲಿ ಮಾರ್ಗದರ್ಶಿಯಾಗಿರುವ ವ್ಯಕ್ತಿ ಹಲವು ಭಾಷೆಗಳಲ್ಲಿ ವ್ಯವಹರಿಸಬೇಕಾಗುತ್ತದೆ. ಆದರೆ ಆ ಎಲ್ಲ ಭಾಷೆಗಳಲ್ಲೂ ಪೂರ್ಣ ಪ್ರಮಾಣದ ಪರಿಣತಿ ಅವಶ್ಯವಲ್ಲ. ಪ್ರವಾಸಿಗರಿಗೆ ಮಾಹಿತಿ ನೀಡಲು, ಸ್ಥಳದ ವಿವರಗಳನ್ನು ಒದಗಿಸಲು ಅವಶ್ಯವಾದಷ್ಟು ವ್ಯವಹಾರವನ್ನು ಆಯಾ ಭಾಷೆಗಳಲ್ಲಿ ಒದಗಿಸಲು ಆ ವ್ಯಕ್ತಿಗೆ ಸಾಧ್ಯವಾಗಬೇಕು. ಇದಕ್ಕೆ ಬೇಕಾದಷ್ಟು ಭಾಷಾ ಸಾಮರ್ಥ್ಯವನ್ನು ಪಡೆದಿರಬೇಕು. ಕ್ಲುಪ್ತಕಾಲದಲ್ಲಿ ಉದ್ದೇಶಿತ ಭಾಷಾ ಸಾಮರ್ಥ್ಯವನ್ನು ಪಡೆಯಲು ಅವಕಾಶ ನೀಡುವ ವಿಶೇಷ ಭಾಷಾ ಬೋಧನಾ ವಿಧಾನಗಳು ಈಗ ಪ್ರಪಂಚಾದ್ಯಂತ ಬೆಳೆಯುತ್ತಿವೆ.
ಸಹಜ ಭಾಷೆಗಳ ಪರಿಷ್ಕರಣ ಮತ್ತು ಸರಳೀಕರಣ : ಭಾಷೆ ಭಾಷೆಗಳ ನಡುವೆ ಗೋಡೆ ಇರುವಂತೆ ಒಂದೊಂದು ಭಾಷೆಯೊಳಗೂ ಗೋಡೆಗಳಿರುವುದು ಸಾಧ್ಯ. ಭಾಷೆಯನ್ನು ವಿವಿಧ ಉದ್ದೇಶಗಳಿಗಾಗಿ ಬಳಸುತ್ತ ಹೋದಂತೆ ರಚನೆಯಲ್ಲಿ ಜಟಿಲತೆ ಉಂಟಾಗುತ್ತದೆ. ಪದಕೋಶ ವಿಸ್ತಾರವಾಗುತ್ತದೆ. ಇದು ಭಾಷೆಯೊಳಗೇ ನಡೆಯಬೇಕಾದ ಸಂವಹನಕ್ಕೆ ಅಡ್ಡಿಯನ್ನುಂಟು ಮಾಡುತ್ತದೆಯೆಂದು ಕೆಲವರ ನಂಬಿಕೆ. ಇದರಿಂದಾಗಿ ಅವರು ಭಾಷೆಯನ್ನು ಸರಳೀಕರಿಸುವ ಪ್ರಯತ್ನಗಳನ್ನು ಮೊದಲು ಮಾಡಿದರು. ಇಂಥದೇ ಪ್ರಯತ್ನ ಬೇರೆ ಭಾಷೆಗಳಲ್ಲಿ ಭಿನ್ನ ಪ್ರಮಾಣದಲ್ಲಿ ನಡೆದೇ ಇದೆ. ಪಶ್ಚಿಮ ಯುರೋಪಿನ ಹಲವಾರು ಭಾಷೆಗಳನ್ನು ಹೀಗೇ ಸರಳೀಕರಿಸಲಾಯಿತು. 1930ರಲ್ಲಿ ಕೆ. ಆಗ್ಡೆನ್ (1889-1957)ಅವರು ಬೇಸಿಕ್ ಇಂಗ್ಲಿಶ್ ಎಂಬ ಪರಿಕಲ್ಪನೆಯನ್ನು ರೂಢಿಸಿದರು. ಬೇಸಿಕ್ ಪದದಲ್ಲಿ ಬಿ,ಎ,ಎಸ್,ಐ ಮತ್ತು ಸಿ ಎಂಬ ಐದು ಅಕ್ಷರಗಳಿವೆ. ‘ಬ್ರಿಟಿಷ್ ಅಮೆರಿಕನ್ ಸೈಂಟಿಫಿಕ್ ಇಂಟರ್ನ್ಯಾಷನಲ್ ಕಮರ್ಷಿಯಲ್’ಎಂಬ ಉಕ್ತಿಯಲ್ಲಿರುವ ಐದು ಪದಗಳ ಪ್ರಥಮಾಕ್ಷರಗಳು ಅವು (ಇಂಗ್ಲಿಷ್ ಲಿಪಿಯಲ್ಲಿ). ಈಇಂಗ್ಲಿಶ್ನಲ್ಲಿ ಇರುವುದು 850 ಪದಗಳು ಮಾತ್ರ. ಅವುಗಳಲ್ಲಿ ದಿನವೂ ಬಳಕೆಯಾಗುವ ಪದಗಳನ್ನು ಉಳಿಸಿಕೊಳ್ಳಲಾಗಿದೆ. ಸುಮಾರು 400 ನಾಮಪದಗಳು, 200 ಮೂರ್ತಾಕಾರವುಳ್ಳ ವಸ್ತುಗಳನ್ನು ಪ್ರತಿನಿಧಿಸುವ ಪದಗಳು. ಸಾಮಾನ್ಯ ಗುಣವಾಚಕಗಳಾಗಿರುವ 100 ಪದಗಳಿವೆ. 50 ವಿರುದ್ಧಾರ್ಥಕಗಳು. ವಿವಿಧ ಕ್ರಿಯೆಗಳನ್ನು ಸೂಚಿಸುವ 100 ಪದಗಳಿವೆ.
ಚರ್ಚಿಲ್, ರೂಸ್ವೆಲ್ಟ್ ಇಬ್ಬರೂ ಈಮಾದರಿಯ ಇಂಗ್ಲಿಶ್ ಬಳಕೆ ಪರವಾಗಿದ್ದರು. ಆದರೆ ಟೀಕೆಗಳಿದ್ದವು. ಸಂಕೀರ್ಣವಾದ ವ್ಯಾಕರಣ ವ್ಯವಸ್ಥೆಯನ್ನು ಮತ್ತು ವಾಗ್ರೂಢಿಗಳನ್ನು ಬಳಸುವ ಕ್ರಮವನ್ನು ಬಿಟ್ಟುಕೊಟ್ಟಿರುವ ಈಇಂಗ್ಲಿಶ್ ಕುಬ್ಜವಾಗಿದೆಯೆಂದರು. ಪದಕೋಶದ ಸೀಮಿತತೆಯಿಂದಾಗಿ ನೇರವಾಗಿ ಹೇಳಬಹುದಾದದನ್ನು ಸುತ್ತು ಬಳಸಿ ಹೆಚ್ಚು ಪದಗಳನ್ನು ಉಪಯೋಗಿಸಿ ಹೇಳಬೇಕಾದ ಪ್ರಸಂಗ ಬರುತ್ತದೆ. ಇದರಿಂದ ರಚನೆಗಳು ಜಡವಾಗಿ ಅರ್ಥ ಸ್ಪಷ್ಟತೆ ಕುಗ್ಗುವುದೇ ಹೆಚ್ಚು. ಈಗ ಈಮಾದರಿಯ ಇಂಗ್ಲಿಶ್ಗೆ ಮನ್ನಣೆಯಿಲ್ಲ. ಆದರೂ ಭಾಷಾ ಕಲಿಕೆಯಲ್ಲಿ, ಅದರಲ್ಲೂ ವಿಶೇಷ ಸಂದರ್ಭಗಳಲ್ಲಿ, ಈಇಂಗ್ಲಿಶಿನ ಮಾದರಿಯನ್ನು ಉಜ್ಜೀವಿಸುವ ಬಗೆ ಕಂಡುಬರುತ್ತದೆ.