ದಿನವೂ ನಾವು ನೂರಾರು ವಾಕ್ಯಗಳನ್ನು ಉಚ್ಚರಿಸುತ್ತೇವೆ; ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುತ್ತೇವೆ. ನಾವೇ ಎಷ್ಟೋ ವಾಕ್ಯಗಳನ್ನು ಬರೆಯಲೂ ಬಹುದು. ಬೇರೆ ಬೇರೆ ಮೂಲಗಳಲ್ಲಿ ಬರೆದದ್ದನ್ನು, ಮುದ್ರಿಸಿದ್ದನ್ನು ಓದುತ್ತೇವೆ. ಅವುಗಳಲ್ಲಿ ಒಂದೊಂದು ಸಂದರ್ಭವೂ ಎಷ್ಟೊಂದು ಸಂಕೀರ್ಣ ವಾಗಿರುವುದೆಂಬ ಸಂಗತಿ ನಮಗೆ ಗೊತ್ತಾಗುವುದು ಅಪರೂಪ. ‘ಅಮ್ಮಾ, ತಾಯಿ’ ಎಂಬ ನುಡಿಗಳನ್ನು ಕೇಳುತ್ತೇವೆಂದು ಕೊಳ್ಳೋಣ. ಕೇಳಿಸಿ ಕೊಂಡದ್ದೇನು? ನಿಜವಾಗಿ ಹಲವಾರು ಧ್ವನಿಗಳ ಸರಣಿಯೊಂದನ್ನು. ಆ ಸರಣಿಯಲ್ಲಿ ‘ಅಮ್ಮಾ’ ಮತ್ತು ‘ತಾಯಿ’ ಎಂಬ ಎರಡು ಬೇರೆಬೇರೆ ಘಟಕ ಗಳಿವೆಯೆಂದೂ ಗ್ರಹಿಸಿರುತ್ತೇವೆ. ಇಡೀ ನುಡಿಯ ಅರ್ಥವೇನು? ಯಾರು ಇದನ್ನು ಉಚ್ಚರಿಸಿದವರು? ಯಾರನ್ನು ಉದ್ದೇಶಿಸಿದ ಮಾತುಗಳಿವು? ಏಕಾಗಿ ಈ ನುಡಿಗಳನ್ನು ಉಚ್ಚರಿಸಿದ್ದಾರೆ? ಉಚ್ಚಾರಣೆಯ ಧ್ವನಿಯ ಏರಿಳಿತಕ್ಕೆ ವಿಶಿಷ್ಟ ವಾದ ಮಹತ್ವವಿದೆಯೇ? ಈ ಎಲ್ಲ ಪ್ರಶ್ನೆಗಳಿಗೂ ನಮ್ಮಲ್ಲಿ ಉತ್ತರಗಳಿವೆ. ಆದರೆ ಆ ಮಾತುಗಳನ್ನು ಕೇಳಿಸಿಕೊಂಡಾಗ ಈ ಪ್ರಶ್ನೆಗಳು ಹೀಗೆಯೇ ಉಂಟಾಗುತ್ತವೆ ಎನ್ನಲಾಗದು ಹಾಗೂ ಉತ್ತರಗಳನ್ನು ಹುಡುಕುತ್ತ ನಾವು ಕುಳಿತಿರುವುದಿಲ್ಲ. ಸಂವಹನ ತಂತಾನೇ ಸಂಭವಿಸಿರುತ್ತದೆ. ಹಾಗೆಂದ ಮಾತ್ರಕ್ಕೆ ಈ ಮೇಲೆ ಹೇಳಿದ ನುಡಿಗಳ ಸಂದರ್ಭಕ್ಕೆ ಸಂಕೀರ್ಣತೆ ಇಲ್ಲವೆಂದಲ್ಲ. ಇರುತ್ತದೆ. ಆದರೆ ನಾವು  ಅದರತ್ತ ಗಮನಹರಿಸುವುದಿಲ್ಲ.

ಭಾಷೆಯನ್ನು ಬಳಸುವುದು ಬೇರೆ: ಅದು ಹೇಗೆ ಕೆಲಸ ಮಾಡುವುದೆಂದು ತಿಳಿಯಲು ಯತ್ನಿಸುವುದು ಬೇರೆ. ಬಳಸುವವರಿಗೆ ಕಾರ್ಯವಿಧಾನದ ಸೂಕ್ಷ್ಮಗಳು ತಿಳಿದಿರಬೇಕೆಂಬ ನಿಯಮವಿಲ್ಲ. ಗಡಿಯಾರ ನೋಡಿ ಸಮಯ ಹೇಳುವ ನಮಗೆ ಅದರ ಒಳಗಿರುವ ಚಕ್ರಗಳು ಹೇಗೆ ಕೆಲಸ ಮಾಡುತ್ತವೆ ಎಂಬುದು ಗೊತ್ತಿರುವುದಿಲ್ಲ. ಆದರೆ ಕಾರ್ಯವಿಧಾನವನ್ನು ಅರಿಯಲು ಹೊರಟ ಕೂಡಲೇ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಭಾಷೆಯಂಥ ವ್ಯವಸ್ಥೆಯನ್ನು ಹೇಗೆ ಗ್ರಹಿಸಬೇಕು? ವ್ಯವಸ್ಥೆ ಇಡಿಯಾಗಿದ್ದರೂ ಅದರಲ್ಲಿ ಹಲವಾರು ಘಟಕಗಳಿರುತ್ತವೆ. ಘಟಕಗಳಿಗೂ ಇಡೀ ರಚನೆಗೂ ಇರುವ ಸಂಬಂಧ ಸಾಮಾನ್ಯವಾಗಿ ಎರಡು ರೀತಿಯಲ್ಲಿರುತ್ತವೆ. ಮೊದಲನೆಯದು; ಘಟಕ ತಂತಾನೇ ಸಂಪೂರ್ಣವಾಗಿದ್ದು ಇಡೀ ರಚನೆ ಕಾರ್ಯನಿರ್ವಹಿಸುವಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ನಮ್ಮ ದೇಹದಲ್ಲಿ ಅಂಗಗಳು ಸ್ವತಂತ್ರ ಘಟಕಗಳಾಗಿದ್ದು ದೇಹದ ಕಾರ್ಯದಲ್ಲಿ ಭಾಗಿಗಳಾಗಿರುತ್ತವೆ. ಆದರೂ ದೇಹವನ್ನು ಹೊರತುಪಡಿಸಿ ಅವುಗಳಿಗೆ ಪ್ರತ್ಯೇಕ ಅಸ್ತಿತ್ವವಿರುವುದಿಲ್ಲ. ಈ ಸಂಬಂಧ ಮಾದರಿಯನ್ನು ಅಂಗಾಂಗೀಭಾವ ಎನ್ನುತ್ತಾರೆ. ಇನ್ನೊಂದು ವಿಧಾನ: ಘಟಕಗಳು ಇಡೀ ರಚನೆಯ ಎಲ್ಲ ಲಕ್ಷಣಗಳನ್ನು ಪೂರ್ಣವಾಗಿ ಪಡೆದಿರುತ್ತವೆ. ಪ್ರತ್ಯೇಕಗೊಳಿಸಿದಾಗಲೂ ರಚನೆಯ ಲಕ್ಷಣಗಳನ್ನೇ ಉಳಿಸಿಕೊಂಡಿರುತ್ತವೆ. ನೀರಿನ ಪಾತ್ರೆಯಿಂದ ನೀರು ಹನಿಯನ್ನು ತೆಗೆದರೆ ಪ್ರತಿ ಹನಿಯಲ್ಲೂ ನೀರಿನ ಲಕ್ಷಣಗಳೆಲ್ಲವೂ ಇರುತ್ತವೆ; ಅಲ್ಲದೆ ಆ ಹನಿ ತೆಗೆದದ್ದರಿಂದ ಮೂಲ ನೀರಿನ ಲಕ್ಷಣಕ್ಕೆ ಕುಂದು ಬರುವುದಿಲ್ಲ. ಇದು ಅಂಶಾಂಶಿ ಭಾವದ ಸಂಬಂಧ. ಭಾಷೆಯಲ್ಲಿ ಧ್ವನಿಗಳಿವೆ, ಪದಗಳಿವೆ, ಪದಗಳಿಗೆ ಅರ್ಥವಿದೆ. ಪದಗಳ ನಡುವೆ ಸಂಬಂಧವಿದೆ. ಉಚ್ಚಾರಣೆಯಲ್ಲಿ ಏರಿಳಿತವಿದೆ. ಹೇಳುವ ವ್ಯಕ್ತಿ ಕೇಳುವ ವ್ಯಕ್ತಿ ಇರುತ್ತಾರೆ. ಇವೆಲ್ಲವೂ ಘಟಕಗಳು. ಈ ಘಟಕಗಳ ನಡುವೆ ಅಂಗಾಂಗೀ ಭಾವದ ಸಂಬಂಧವಿರುತ್ತದೆ.

ಭಾಷೆಯ ರಚನೆಯನ್ನು ಅರಿಯುವುದೆಂದರೆ ಅದರ ಘಟಕಗಳ ಸ್ವರೂಪ ಮತ್ತು ಘಟಕಗಳ ನಡುವೆ ಇರುವ ಸಂಬಂಧವನ್ನು ಅರಿಯುವುದು ಎಂದರ್ಥ. ಆದ್ದರಿಂದ ಪ್ರತಿ ಘಟಕದ ಸ್ವರೂಪವನ್ನು ಅರಿಯಲು ತೊಡಗುವುದು ಅನಿವಾರ್ಯ. ಧ್ವನಿಗಳ ಸ್ವರೂಪವನ್ನು ಪ್ರತ್ಯೇಕವಾಗಿ ಗಮನಿಸುವಾಗ  ಅದರದೇ ಆದ ಪರಿಭಾಷೆಯನ್ನು ಬಳಸಿ ಅಧ್ಯಯನ ಮಾಡಲಾಗುವುದು. ಆ ಘಟಕಕ್ಕೂ ಉಳಿದ ಘಟಕಗಳಿಗೂ ಇರುವ ಸಂಬಂಧಗಳನ್ನು ಗೌಣಗೊಳಿಸಿ ಇಂಥ ಅಧ್ಯಯನಗಳು ನಡೆಯುತ್ತವೆ. ಹಾಗೆಯೇ ಅರ್ಥರಚನೆ, ವ್ಯಾಕರಣ ಮುಂತಾದ ಘಟಕಗಳ ಅಧ್ಯಯನ ಕೂಡ ತಂತಾನೇ ಸ್ವಯಂಪೂರ್ಣವೆಂಬಂತೆ ನಡೆಯುತ್ತವೆ.

ಭಾಷೆಯ ರಚನೆಯನ್ನು ಇಂತಿಷ್ಟೇ ಘಟಕಗಳೆಂದು, ಸ್ತರಗಳೆಂದು ವಿಂಗಡಿ ಸುವುದು ಹೇಗೆ? ಇಂಥ ವಿಂಗಡಣೆಗಳು ಯಾದೃಚ್ಛಿಕವೇ? ಅಂದರೆ ಬೇಕೆನಿಸಿದ ರೀತಿಯಲ್ಲಿ ಭಾಷೆಯನ್ನು ಇನ್ನೂ ಭಿನ್ನವಾದ ಘಟಕಗಳನ್ನಾಗಿ ವಿಭಜಿಸ ಬಹುದೇ? ಇಲ್ಲವೆಂದು ತೋರುತ್ತದೆ. ಭಾಷೆಯಲ್ಲಿ ಈಗ ಗುರುತಿಸಲಾಗುತ್ತಿರುವ ಘಟಕಗಳ ವಿಭಜನೆಗೆ ಅನ್ಯ ಸಮರ್ಥನೆಗಳು ಸಾಧ್ಯ. ನಮಗೆ ಅಪರಿಚಿತವಾದ ಭಾಷೆಯ ವಾಕ್ಯಗಳನ್ನು ಕೇಳುತ್ತೇವೆಂದು ಕೊಳ್ಳೋಣ. ನಮಗೆ ಅದು ಒಂದು ಭಾಷೆಯ ಧ್ವನಿಸ್ತರವೆಂಬುದು ಗೊತ್ತಾಗುತ್ತದೆ. ಆದರೆ ಅರ್ಥ ತಿಳಿಯದಿರ ಬಹುದು. ಅಂದರೆ ಭಾಷಾ ಧ್ವನಿಗಳ ಸಮೂಹವನ್ನು ನಾವು ಗುರುತಿಸಲು ಸಮರ್ಥರಾಗುತ್ತೇವೆ. ನಮಗೆ ಪರಿಚಿತವಾದ ಭಾಷೆಯ ವಾಕ್ಯಗಳನ್ನು ಕೇಳು ವಾಗಲೂ ಎಲ್ಲ ಪದಗಳನ್ನೂ ಎಲ್ಲ ಧ್ವನಿಗಳನ್ನೂ ಕೇಳಿಸಿಕೊಳ್ಳದಿದ್ದರೂ ಅರ್ಥವನ್ನು ಗ್ರಹಿಸಲು ಸಾಧ್ಯವಾಗಬಹುದು. ವ್ಯಾಕರಣದ ನಿಯಮಗಳನ್ನು ಉಲ್ಲಂಘಿಸಿದ ವಾಕ್ಯವೊಂದನ್ನು ಕೇಳಿದಾಗ ಅದರಲ್ಲಿ ಇರಬೇಕಾದ ನಿಯಮಕ್ಕೆ ಅನುಗುಣವಾಗಿ ವಾಕ್ಯವನ್ನು ನಾವು ಪುನಾರಚಿಸಿಕೊಳ್ಳಬಲ್ಲೆವು. ಇವೆಲ್ಲ ಸಂಗತಿಗಳು ಭಾಷೆಯಲ್ಲಿ ಗುರುತಿಸಲಾದ ಸ್ತರಗಳು ವಾಸ್ತವವಾಗಿ ನಮ್ಮ ಗ್ರಹಿಕೆಯ ಭಾಗಗಳೂ ಆಗಿರುತ್ತವೆಂದು ತಿಳಿಸುತ್ತವೆ.

ಹೀಗೆ ಬೇರೆ ಬೇರೆ ಸ್ತರಗಳು ಇವೆಯೆಂದು ತಿಳಿದು ಬಿಡಿಬಿಡಿಯಾಗಿ ಅಧ್ಯಯನ ಮಾಡುವಾಗಲೂ ಎಚ್ಚರಿಕೆ ಅಗತ್ಯ. ಧ್ವನಿ ರಚನೆಗೆ ಪ್ರತ್ಯೇಕತೆ ಇದ್ದರೂ ಇವೇ ಧ್ವನಿಗಳು ವ್ಯಾಕರಣ ಸಂಬಂಧಕ್ಕೂ ಕಾರಣವಾಗುತ್ತವೆ. ವ್ಯಾಕರಣ ಸಂಬಂಧ ಕೇವಲ ರಾಚನಿಕವೆಂದು ಅಧ್ಯಯನ ಮಾಡುವಾಗಲೂ ಅರ್ಥದ ಮಹತ್ವವನ್ನು ಮರೆಯುವಂತಿಲ್ಲ. ಅಧ್ಯಯನಕ್ಕಾಗಿ ಭಾಷಾರೂಪಗಳನ್ನು ರಚಿಸಿಕೊಂಡು ಅಭ್ಯಾಸ ಮಾಡುತ್ತಿದ್ದರೂ ಆ ಭಾಷಾ ರೂಪಗಳಿಗೆ ಇರುವ ಸಾಮಾಜಿಕ ನೆಲೆಗಟ್ಟನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಈ ಎಲ್ಲ ಮಾತಿನ ಅರ್ಥವಿಷ್ಟೆ. ಒಂದು ಇಡೀ ರಚನೆಯನ್ನು ಒಡೆದು ಬಿಡಿಬಿಡಿಗಳನ್ನು ಗಮನಿಸು ವಾಗ ಆ ಬಿಡಿಗಳ ನಡುವೆ ಇರುವ ಸಂಬಂಧವನ್ನು ಮರೆಯಬಾರದು. ಅಲ್ಲದೇ ಆ ಸಂಬಂಧದಿಂದಾಗಿಯೇ ರಚನೆಯಲ್ಲಿ ಆ ಘಟಕಕ್ಕೆ ಸ್ಥಾನ ದೊರಕಿದೆಯೆಂದು ತಿಳಿದಿರಬೇಕಾಗುತ್ತದೆ.

ಆಡುಮಾತಿನ ರಚನೆಯ ಸ್ತರಗಳು : ವಿವಿಧ ಮಾದರಿಗಳು

ಎಷ್ಟು ಸ್ತರಗಳು

ಸಾಮಾನ್ಯವಾಗಿ ಭಾಷೆಯಲ್ಲಿ ಶಬ್ದ ಮತ್ತು ಅರ್ಥಗಳೆಂಬ ಎರಡು ಸ್ತರಗಳನ್ನು ಒಪ್ಪಲಾಗಿದೆ. ಶಬ್ದವೆಂಬುದನ್ನು ವಾಹಕ, ಸಾಧನವೆಂದರೆ, ಅರ್ಥವನ್ನು ಶಬ್ದದ ಮೂಲಕ ಪ್ರತೀತವಾಗುವ ಸಾಧ್ಯ ಅಥವಾ ಗುರಿಯೆಂದು ತಿಳಿಯುತ್ತಾರೆ. ಆಗ ಅರ್ಥರಹಿತವಾದ ಪದವಾಗಲೀ, ಪದವಿಲ್ಲದ ಅರ್ಥ ವಾಗಲೀ ಭಾಷೆಯಲ್ಲಿ ಅಸಾಧ್ಯವೆಂದು ಒಪ್ಪಬೇಕಾಗುತ್ತದೆ. ಅದೇನೇ ಇದ್ದರೂ ಶಬ್ದಸ್ತರವೆಂಬುದನ್ನು ಅರ್ಥಸ್ತರದೊಡನೆ ಬೆಸೆದಾಗಲೇ ಭಾಷೆಯೂ ರೂಪು ತಳೆಯುವುದೆಂದಾಯಿತು. ಮುಂದುವರೆದು ಕೆಲವರು ಶಬ್ದಸ್ತರದಲ್ಲೇ ಕೆಲವು ಉಪಸ್ತರಗಳನ್ನು ಮಾಡುತ್ತಾರೆ. ಮೊದಲನೆಯದು ಧ್ವನಿ ಸ್ತರ. ಭಾಷಾಧ್ವನಿಗಳ ಸ್ವರೂಪ, ಆ ಧ್ವನಿಗಳು ಉಂಟಾಗುವ ವಿಧಾನ, ಪೂರಕವಾದ ಅಂಗರಚನೆ, ಉಂಟಾದ ಧ್ವನಿಗಳ ಪ್ರಸರಣ, ಕೇಳಿಸಿಕೊಳ್ಳುವ ಪ್ರಕ್ರಿಯೆ ಇವೆಲ್ಲವನ್ನೂ ಅಭ್ಯಾಸ ಮಾಡುವುದೇ ಧ್ವನಿಶಾಸ್ತ್ರ. ಉಚ್ಚಾರಣಾಂಗಗಳು, ಉಚ್ಚಾರಣಾ ವಿಧಾನ, ಧ್ವನಿಯ ಅಲೆಗಳ ಪ್ರಸಾರ, ಕಿವಿಯ ರಚನೆ, ಧ್ವನಿಗ್ರಹಣ ವಿಧಾನ ಇತ್ಯಾದಿಯೆಲ್ಲವೂ ಈ ಶಾಸ್ತ್ರದ ಅಧ್ಯಯನದ ವ್ಯಾಪ್ತಿಗೆ ಬರುತ್ತವೆ. ಪ್ರತಿಭಾಷೆ ಯಲ್ಲಿ ಉಪಯುಕ್ತವಾಗಿ ಬಳಕೆಯಾಗುವ ಧ್ವನಿಗಳು ಮತ್ತು ಅವುಗಳ ನಡುವೆ ಏರ್ಪಡುವ ವಿಶಿಷ್ಟ ಸಂಬಂಧವನ್ನು ಪರಿಶೀಲಿಸುವ ಕೆಲಸವನ್ನು ಧ್ವನಿರಚನಾ ಶಾಸ್ತ್ರ ಮಾಡುತ್ತದೆ. ವಾಕ್ಯಗಳಲ್ಲಿ ಅರ್ಥಪೂರ್ಣ ಘಟಕಗಳ ಮೂಲಕ ಇಡಿಯಾದ ವ್ಯವಸ್ಥೆ ಹೇಗೆ ರೂಪುತಳೆಯುವುದೆಂಬ ಸಂಗತಿಯನ್ನು ವ್ಯಾಕರಣವು ಅಧ್ಯಯನ ಮಾಡುತ್ತದೆ. ಅರ್ಥರಚನೆಯ ಅಭ್ಯಾಸ ಅರ್ಥರಚನಾಶಾಸ್ತ್ರದ ಗುರಿ.

ಧ್ವನಿಶಾಸ್ತ್ರ, ಧ್ವನಿರಚನಾ ಶಾಸ್ತ್ರ, ವ್ಯಾಕರಣ ಮತ್ತು ಅರ್ಥರಚನಾಶಾಸ್ತ್ರ ಎಂಬ ಈ ನಾಲ್ಕು ಸ್ತರಗಳನ್ನು ಭಾಷಾರಚನೆಯ ಅಧ್ಯಯನದಲ್ಲಿ ತೊಡಗು ವವರು ಸಾಮಾನ್ಯವಾಗಿ ಒಪ್ಪಿಕೊಳ್ಳುತ್ತಾರೆ. ಮತ್ತೆ ಕೆಲವರು ಇವುಗಳಲ್ಲಿ ಮತ್ತೆ ಕೆಲವು ಒಳಸ್ತರ ವಿಭಜನೆ ಸಾಧ್ಯವೆಂದು ತಿಳಿಯುವುದುಂಟು. ವ್ಯಾಕರಣ ವೆಂಬ ಸಾಮಾನ್ಯ ಸ್ತರದಲ್ಲಿ ಪದರಚನೆಯನ್ನು ಅಧ್ಯಯನ ಮಾಡುವ ಒಂದು ಶಾಖೆಯನ್ನು (ಪದರಚನಾ ಶಾಸ್ತ್ರ) ಮತ್ತು ವಾಕ್ಯರಚನೆಯನ್ನು ಅಧ್ಯಯನ ಮಾಡುವ (ವಾಕ್ಯರಚನಾಶಾಸ್ತ್ರ) ಮತ್ತೊಂದು ಶಾಖೆಯನ್ನು ರೂಪಿಸಿಕೊಳ್ಳ ಲಾಗಿದೆ. ಪದರಚನಾಶಾಸ್ತ್ರದ ವ್ಯಾಪ್ತಿಗೆ ಧ್ವನಿರಚನೆ ಮತ್ತು ಪದರಚನೆಗಳ ನಡುವಣ ಹಂತದ ಕೆಲವು ವಿವರಗಳನ್ನು (ಉದಾ.ಗೆ ಸಂಧಿ) ತರುವುದುಂಟು. ಅರ್ಥರಚನಾ ಶಾಸ್ತ್ರದಲ್ಲಿ ಪದಕೋಶ ಸ್ವರೂಪ, ಅದರ ರಚನೆ ವಿಕಾಸಗಳನ್ನು ಅಧ್ಯಯನ ಮಾಡುವ ಗುರಿಯುಳ್ಳ ಶಾಖೆಯೊಂದನ್ನು (ನಿಘಂಟು ಶಾಸ್ತ್ರ) ಪ್ರತ್ಯೇಕಗೊಳಿಸಲಾಗಿದೆ. ಈ ನಾಲ್ಕು ಮುಖ್ಯಸ್ತರಗಳ ಆಚೆಗೆ ಭಾಷೆಯ ಸ್ವರೂಪವನ್ನು ಗ್ರಹಿಸುವ ಉದ್ದೇಶದಿಂದ ಸಂಕಥನಶಾಸ್ತ್ರ ವೆಂಬ ಸ್ತರವೊಂದನ್ನು ಕಲ್ಪಿಸಿಕೊಳ್ಳಲಾಗಿದೆ. ವಾಕ್ಯವೆಂಬ ಘಟಕದ ಆಚೆಗೆ ವಾಕ್ಯಗಳ ನಡುವೆ ರೂಪುಗೊಳ್ಳುವ ಸಂಬಂಧವನ್ನು ಅಧ್ಯಯನ ಮಾಡುವುದು ಈ ಶಾಸ್ತ್ರ ಶಾಖೆಯ ಉದ್ದೇಶವಾಗಿದೆ.

ಹೀಗೆ ಭಾಷಾ ವ್ಯಾಪಾರವನ್ನು ನಿಕಟವಾಗಿ ಮತ್ತು ಸೂಕ್ಷ್ಮವಾಗಿ ಪರಿಶೀಲಿಸುತ್ತ ಹೋದಂತೆ ಮತ್ತಷ್ಟು ಹೊಸಸ್ತರಗಳನ್ನು ಕಲ್ಪಿಸಿಕೊಳ್ಳ ಬೇಕಾಗುತ್ತದೆ. ಇದು ಕೊನೆಯಿಲ್ಲದೆ ವಿಭಜನೆಯಾಗುವ ಸಾಧ್ಯತೆ ಹೆಚ್ಚು. ಹೊಸ ಸ್ತರವೊಂದು ವಿವರಗಳಲ್ಲಿ ಪ್ರತ್ಯೇಕವಾಗಿ ಕಂಡರೂ ಆ ಸ್ತರದ ಅಧ್ಯಯನಕ್ಕೆ ಬಳಸುವ ತಾತ್ತ್ವಿಕ ಚೌಕಟ್ಟು, ಬಳಸುವ ಪರಿಭಾಷೆ ಇನ್ನೊಂದು ಸ್ತರದ ತಾತ್ತ್ವಿಕತೆ ಮತ್ತು ಪರಿಭಾಷೆಯನ್ನೇ ಅನುಸರಿಸುತ್ತಿರುವುದು ಸಾಧ್ಯ. ಪದರಚನೆ ಮತ್ತು ವಾಕ್ಯರಚನೆಗಳೆಂಬ ಸ್ತರಗಳನ್ನು ಈ ದೃಷ್ಟಿಯಿಂದ ಬೇರೆ ಬೇರೆ ಸ್ತರಗಳೆಂದು ಪ್ರತ್ಯೇಕಗೊಳಿಸುವ ಅವಶ್ಯಕತೆಯಿಲ್ಲವೆಂದು ವಾದಿಸ ಲಾಗಿದೆ. ಏನೇ ಆಗಲಿ ಭಾಷೆಯ ವಿಭಿನ್ನ ಸ್ತರಗಳ ಅಧ್ಯಯನ ಮಾಡುವಾಗ ಭಾಷೆಯೆಂಬ ಇಡೀ ರಚನೆಯ ಸಮಗ್ರತೆಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅತ್ಯವಶ್ಯ.

ವಿವಿಧ ಸ್ತರಗಳ ಅಧ್ಯಯನ ಸಂಬಂಧ

ಭಾಷೆಯ ಅಧ್ಯಯನವನ್ನು ಯಾವ ಸ್ತರದಿಂದ ಮೊದಲು ಮಾಡಬೇಕು. ಧ್ವನಿಯನ್ನು ಭಾಷೆಯ ಅತ್ಯಂತ ಚಿಕ್ಕ ಘಟಕವೆಂದೂ ವಾಕ್ಯವನ್ನು ದೊಡ್ಡ ಘಟಕವೆಂದೂ ಸದ್ಯಕ್ಕೆ ತಿಳಿಯೋಣ. ಮೊದಲು ಧ್ವನಿಯ ಸ್ವರೂಪದ ಅಧ್ಯಯನವನ್ನು ಮಾಡುವ ಮೂಲಕ ಭಾಷೆಯನ್ನು ಅರಿಯಲು ತೊಡಗುವುದು ಒಂದು ಮಾದರಿ. ವಾಕ್ಯಗಳ ರಚನೆಯನ್ನು ತಿಳಿಯುವ ಮೂಲಕವೇ ಭಾಷೆಯ ರಚನೆಯನ್ನು ಅಧ್ಯಯನ ಮಾಡಲು ತೊಡಗುವುದು ಇನ್ನೊಂದು ಮಾದರಿ. ಇವೆರಡರಲ್ಲಿ ಮೊದಲನೆಯದು ಹೆಚ್ಚು ವ್ಯಾಪಕ ನೆಲೆಯ ಅಧ್ಯಯನಕಾರರನ್ನು ಪಡೆದಿದೆ. ಭಾಷೆಯ ವಿಶಿಷ್ಟತೆಯೆಂಬುದು ಧ್ವನಿರಚನೆ ಮತ್ತು ಪದರಚನೆಗಳ ಹಂತದಲ್ಲೇ ಅಧಿಕವಾಗಿ ಪ್ರಕಟವಾಗುವುದರಿಂದ ಈ ಸ್ತರಗಳ ಅಧ್ಯಯನಕ್ಕೇ ಅವಧಾರಣೆ ದೊರಕಿರುವ ಸಾಧ್ಯತೆಯಿದೆ. ಆಧುನಿಕ ಭಾಷಾಶಾಸ್ತ್ರಜ್ಞರು ಮೊದಲ ಮಾದರಿಯ ಪ್ರವರ್ತಕರು. ಅಮೆರಿಕದ ಭಾಷಾಶಾಸ್ತ್ರಜ್ಞ ಲಿಯೊನಾರ್ಡ್ ಬ್ಲೂಂ ಫೀಲ್ಡ್ (1887-1949) ಬಹುಶ್ರುತವಾದ ಅಧ್ಯಯನ ಮಾದರಿಯೊಂದನ್ನು ರೂಪುಗೊಳಿಸಿದ್ದಾರೆ. ಧ್ವನಿಗಳ ಅಧ್ಯಯನ, ಧ್ವನಿರಚನೆ, ಪದರಚನೆಗಳನ್ನು ಅಭ್ಯಸಿಸಿ ಅನಂತರ ವಾಕ್ಯರಚನೆಯನ್ನು ಗಮನಿಸುವ ವಿಧಾನವಿದು. ಇದು ಸಾಧುವಾದ ಕ್ರಮವೆನಿಸಿದರೂ ಕೆಲವು ತೊಡಕುಗಳಿವೆ. ಈ ಕ್ರಮದಲ್ಲಿ, ಸಂಗ್ರಹಿಸಿದ ಮಾಹಿತಿಯನ್ನು ವಿವಿಧ ಸ್ತರಗಳ ಅವಶ್ಯಕತೆಗೆ ಅನುಗುಣವಾಗಿ ಬಳಸಿಕೊಳ್ಳಲಾಗುತ್ತದೆ. ಪ್ರತಿ ಸ್ತರದ ಅಧ್ಯಯನಕ್ಕೂ ಪ್ರತ್ಯೇಕ ವಿಧಾನವಿದೆ ಯಾಗಿ ಒಂದೊಂದು ಸ್ತರವನ್ನೂ ದಾಟಿ ಮತ್ತೊಂದು ಸ್ತರಕ್ಕೆ ಬರುವುದು ತ್ರಾಸದಾಯಕ. ಅಡಿಯಿಂದ ಮೊದಲಾಗಿ ಮುಡಿಯವರೆಗೆ  ತಲುಪುವುದಂತೂ ಮತ್ತಷ್ಟು ಇಕ್ಕಟ್ಟಿನ ಕೆಲಸ. ಕ್ಷೇತ್ರಕಾರ್ಯಕ್ಕೆ ಹೋದ ತಜ್ಞರು ಭಾಷೆಯ ಧ್ವನಿರಚನೆ, ಪದರಚನೆಯನ್ನು ಅಧ್ಯಯನ ಮಾಡಿ ಪೂರೈಸುವ ವೇಳೆಗೆ ಮಾಹಿತಿ ನೀಡುತ್ತಿದ್ದ ವಕ್ತೃಗಳು ಮೃತರಾಗಿ, ವಾಕ್ಯ, ಅರ್ಥರಚನೆಗೆ ಸಂಬಂಧಿಸಿದ ಮಾಹಿತಿಯೇ ಇಲ್ಲವಾದ ಪ್ರಸಂಗಗಳಿವೆ. ಇದೆಲ್ಲ ವಿವರಣೆಯ ಅರ್ಥವಿಷ್ಟೆ. ಭಾಷಾ ಸ್ತರಗಳ ಅಧ್ಯಯನದಲ್ಲಿ ಮೆಟ್ಟಿಲುಗಳ ಮಾದರಿ ಸರಿಯಾಗದು. ಮೊದಲ ಮೆಟ್ಟಿಲನ್ನು ಹತ್ತಿದ ಮೇಲೇ ಎರಡನೇ ಮೆಟ್ಟಿಲು, ಅನಂತರ ಮೂರನೆಯದು, ಕೊನೆಗೆ ತುದಿಯ ಮೆಟ್ಟಿಲು ಎನ್ನುವುದು ಅನುಸರಣೀಯ ವಿಧಾನವಲ್ಲ.

ಭಾಷೆಯ ವಿವಿಧ ಸ್ತರಗಳ ಸ್ವರೂಪ ಮತ್ತು ಅವುಗಳ ನಡುವಣ ಸಂಬಂಧ ಇವುಗಳನ್ನು ಈಗ ಹೆಚ್ಚು ಖಚಿತವಾಗಿ ಅರಿಯುವುದು ಸಾಧ್ಯವಾಗಿದೆ. ಒಂದು ಸ್ತರವನ್ನು ಕುರಿತಂತೆ ಸಾಮಾನ್ಯ ತಿಳುವಳಿಕೆ ಇಲ್ಲದಿದ್ದರೆ ಇನ್ನೊಂದು ಸ್ತರವನ್ನು ಅರಿಯುವುದು ಕಷ್ಟಸಾಧ್ಯವೆಂದು ಈಗ ಗೊತ್ತಾಗಿದೆ. ಒಂದು ಭಾಷೆಯ ಧ್ವನಿಗಳೆಲ್ಲವನ್ನು ವಿವರಿಸುವಾಗ ಸಾಮಾನ್ಯವಾಗಿ ಆ ಭಾಷೆಯಲ್ಲಿ ಉಪಯುಕ್ತ ವಾಗುವ ಭಾಷಿಕ ಧ್ವನಿಗಳು ಮತ್ತು ಅವುಗಳ ಸಂಬಂಧ ಕುರಿತು ತಿಳುವಳಿಕೆ ಇರುವುದು ಅವಶ್ಯ. ವಾಸ್ತವವಾಗಿ ಈ ಅಂಶ ಧ್ವನಿರಚನಾಶಾಸ್ತ್ರಕ್ಕೆ ಸೇರಿದ್ದಾ ದರೂ ಅದರ ಅರಿವು ಇಲ್ಲದಿದ್ದರೆ ಧ್ವನಿ ವಿವರಣೆಯಲ್ಲಿ ನಿರರ್ಥಕ ವಾದುದೆಲ್ಲವೂ ಸೇರಿಕೊಳ್ಳಬಹುದು. ಎಂದರೆ ಎಷ್ಟೋ ಧ್ವನಿಗಳನ್ನು ಕುರಿತ ವಿವರಣೆ ವ್ಯರ್ಥವೆನಿಸಬಹುದು. ಹೀಗೆಯೇ ವಾಕ್ಯರಚನೆಯ ಅಧ್ಯಯನದ ಸಂದರ್ಭದಲ್ಲಿ ಅರ್ಥರಚನೆಗೆ ಸಂಪೂರ್ಣವಾಗಿ ಅಪರಿಚಿತವಾಗಿರುವುದು ಅಸಾಧ್ಯ. ಆದ್ದರಿಂದ ಭಾಷೆಯ ವಿವಿಧ ಸ್ತರಗಳ ಅಧ್ಯಯನಗಳು ಪರಿಸ್ಪರಾವಲಂಬಿಗಳೆಂದು ತಿಳಿಯುವುದು ಸೂಕ್ತ. ಒಂದು ಸ್ತರದ ಅಧ್ಯಯನ ಮಾಡುವವರು ಇನ್ನೊಂದು ಸ್ತರವನ್ನು ಪ್ರವೇಶಿಸುವುದು ಅವಶ್ಯಕ ಮಾತ್ರವಷ್ಟೇ ಅಲ್ಲ, ಅನಿವಾರ್ಯ ಕೂಡ. ಬ್ರಿಟಿಷ್ ಭಾಷಾಶಾಸ್ತ್ರಜ್ಞ ಜೆ.ಆರ್. ಫರ್ತ್ (1890-1960) ವಿವಿಧ ಮಹಡಿಗಳ ನಡುವೆ ಚಲಿಸುವ ಲಿಫ್ಟ್‌ನ ಮಾದರಿ ಯನ್ನು ಭಾಷಾಸ್ತರಗಳ ಅಧ್ಯಯನದಲ್ಲಿ ಬಳಸಲು ಸೂಚಿಸುತ್ತಾನೆ. ಲಿಫ್ಟ್‌ನಿಂದ ಮೇಲೆ ಕೆಳಗೆ ಮಾತ್ರವಲ್ಲ. ಯಾವ ಮಹಡಿಯಿಂದ ಬೇಕಾದರೂ ಇನ್ನೊಂದು ಮಹಡಿಗೆ ಚಲಿಸಬಹುದು.

ಭಾಷೆಯಲ್ಲಿ ಧ್ವನಿಸ್ತರ, ಧ್ವನಿರಚನಾಸ್ತರ, ಪದರಚನಾಸ್ತರ, ವಾಕ್ಯರಚನಾ ಸ್ತರ, ಅರ್ಥರಚನಾಸ್ತರ ಮತ್ತು ಇತರ ಸ್ತರ ಹೀಗೆ ಆರು ಸ್ತರಗಳನ್ನು ಒಪ್ಪುವುದಾದರೆ ಅವುಗಳ ನಡುವಣ ಸಂಬಂಧವನ್ನು ಈ ಕೆಳಗೆ ಸೂಚಿಸಿದ ಚಿತ್ರದಂತೆ ಗ್ರಹಿಸಬಹುದು.

ಭಾಷಾಶಾಸ್ತ್ರಜ್ಞ ಯಾವುದೇ ಸ್ತರದಿಂದ ಬೇಕಾದರೂ ಇನ್ನೊಂದು ಸ್ತರಕ್ಕೆ ದಾಟುವುದು ಈ ಮಾದರಿಯಲ್ಲಿ ಸಾಧ್ಯ.