ಕನ್ನಡ ಭಾಷೆ ತುಂಬಾ ಪ್ರಾಚೀನವಾದುದು, ಇದಕ್ಕೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಕಳೆದ ಹದಿನೈದು ನೂರು ವರ್ಷಗಳಿಂದ ಇದು ಪೂರ್ವದ ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಘಟ್ಟಗಳಲ್ಲಿ; ಅಂದರೆ ಅವಸ್ಥೆಗಳಲ್ಲಿ ಭಿನ್ನ- ಭಿನ್ನ ರೂಪ ತಾಳುತ್ತಾ, ಬದಲಾಗುತ್ತಾ, ತನ್ಮೂಲಕ – ಬೆಳೆಯುತ್ತಾ ಬಂದುದನ್ನು ಶಾಸನ, ತಾಮ್ರಪಟ, ಕಾವ್ಯಗಳು ಹಾಗೂ ಸಮೂಹ ಸಂವಹನ ಮಾಧ್ಯಮಗಳಾದ ಪತ್ರಿಕೆ, ಚಲನಚಿತ್ರ, ನಾಟಕ, ದೂರದರ್ಶನ, ಬಾನುಲಿ ಮುಂತಾದವುಗಳಿಂದ ತಿಳಿಯುವೆವು.

ಕನ್ನಡ ಭಾಷೆಯು ಆಯಾ ಕಾಲದ ಅಗತ್ಯಗಳಿಗೆ ಅನುಗುಣವಾಗುವ ರೀತಿಯಲ್ಲಿ ಹಾಗೂ ಆಧುನಿಕ ವಿದ್ಯಮಾನಗಳಿಗೆ ಸರಿಹೊಂದುವ ಬಗೆಯಲ್ಲಿ ತನ್ನ ಸ್ವರೂಪದಲ್ಲಿ  ಬದಲಾಗುತ್ತಾ ಬಂದುದನ್ನು ಗುರುತಿಸುವೆವು. ಭಾಷೆ ತನ್ನ ಸ್ವರೂಪದಲ್ಲಿ ಬದಲಾಗುತ್ತದೆಯೆಂದರೆ; ಅದು ಬೆಳೆಯುತ್ತಿದೆ ಎಂದೇ ಅರ್ಥ. ಅದರಲ್ಲೂ ಭಾಷೆಯಲ್ಲಿ ಧ್ವನ್ಯಾತ್ಮಕವಾಗಿ, ಅರ್ಥಾತ್ಮಕವಾಗಿ ಬದಾಲಾವಣೆಗಳು ಆದುವು ಎಂದರೆ ಅದು ಪರ್ಯಾಯವಾಗಿ ಬೆಳೆಯುತ್ತಿದೆಯೆಂದೇ ತಿಳಿಯಬೇಕು. ಬದಲಾವಣೆಯು ಭಾಷೆಯ ಜೀವಂತಿಕೆಯ ಲಕ್ಷಣವೂ ಆಗಿದೆ.

ಭಾಷೆಯಲ್ಲಿ ಪಡೆಯುವ ಧ್ವನಿ ಹಾಗೂ ಅರ್ಥ ವ್ಯತ್ಯಾಸಗಳಿಗೆ  ಮಾನವನೇ ಕಾರಣನಾಗಿದ್ದಾನೆ. ಆತ ತನ್ನ ನಿತ್ಯದ ಕೆಲಸಗಳನ್ನು ನೆರವೇರಿಸಿಕೊಳ್ಳುವುದಕ್ಕಾಗಿ ನಿರಂತರವಾಗಿ ಹೊಸ- ಹೊಸ ಶಬ್ದಗಳನ್ನು ಬಳಸುತ್ತಲೇ ಇರುತ್ತಾನೆ. ಹೀಗೆ ಬಳಸುತ್ತಾ ಬರುವುದರಿಂದ ಭಾಷೆಯು ಬೆಳೆಯುವುದು. ಅದೊಂದು ನಿರಂತರವಾಗಿ ಹರಿಯುವ ನದಿಯಿದ್ದಂತೆ. ಅದು ತನ್ನ ಬೆಳವಣಿಗೆಯ ಕ್ರಮದಲ್ಲಿ ಎಲ್ಲ ಬಗೆಯ ಪ್ರಭಾವ, ಪ್ರೇರಣೆಗಳಿಗೆ ಮುಕ್ತವಾಗಿದ್ದು , ಈ ಪ್ರೇರಣೆ ಹಾಗೂ ಪ್ರಭಾವಗಳಿಂದಾಗಿ ಬೆಳೆಯುತ್ತ  ನಿತ್ಯಪರಿವರ್ತನಶೀಲವಾಗಿ ಸಾಗುತ್ತಲೇ ಇರುತ್ತದೆ.

ಮಾನವನು ಸೌಲಭ್ಯಾಕಾಂಕ್ಷೆಯಿಂದ, ಅನ್ಯ ಭಾಷೆ– ಸಂಸ್ಕೃತಿಗಳ ಸಂಪರ್ಕದಿಂದ, ಅನೇಕಾನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡ ಬರಹಗಳಿಂದ ಹಾಗೂ ಆಯಾ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ವಿಶಿಷ್ಟ ಶಬ್ದಗಳಿಂದ ಪ್ರಭಾವಗೊಂಡು, ಪ್ರೇರಣೆ ಪಡೆದು ತನ್ನದೇ ಆದ ರೀತಿಯಲ್ಲಿ ಭಾಷೆಯನ್ನು ಬಳಸುವನು. ಹೀಗೆ ಪ್ರಯೋಗಿಸುತ್ತಾ ಬಂದಂತೆ  ಭಾಷೆಯು ತನ್ನ ಸ್ವರೂಪದಲ್ಲಿ ಬದಲಾಗುತ್ತ ಬರುವುದು. ಒಂದು ಸಂಸ್ಕೃತಿಯ ಜನತೆಯ ಸಹಚರ್ಯಕ್ಕೆ ಬಂದಾಗ ಸಾಂಸ್ಕೃತಿಕ ಪದಗಳ ಸ್ವೀಕರಣ ಕ್ರಿಯೆ ಪರಸ್ಪರರಲ್ಲಿ ಸಹಜವಾಗಿ ನಡೆಯುವುದು. ಒಂದು ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಶಬ್ದಗಳು ಜನರ ಸುತ್ತಾಟದ ಪರಿಣಾಮದಿಂದಾಗಿ ಇನ್ನೊಂದು ಪ್ರದೇಶದಲ್ಲಿ ಪ್ರಚಲಿತಗೊಳ್ಳುವುದುಂಟು. ಹೀಗಾಗಿ ಭಾಷೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪಯಣಿಸುವುದು.

ಸಾಂಸ್ಕೃತಿಕ ಪಳಿಯುಳಿಕೆಯಂತಿರುವ ಅದು ಇನ್ನೊಂದು, ಮತ್ತೊಂದು, ಮಗದೊಂದು ಭಾಷೆಗಳನ್ನಾಡುವ, ಭಿನ್ನ- ಭಿನ್ನ ಸಂಸ್ಕೃತಿಯನ್ನು ಹೊಂದಿರುವ ಜನಸಮುದಾಯಗಳಲ್ಲಿ ಸಮ್ಮಿಳನಗೊಳ್ಳುವುದು. ಹೀಗಾಗಿ ಭಾಷೆ- ಭಾಷೆಗಳಲ್ಲಿ ಸಾಂಸ್ಕೃತಿಕ ಶಬ್ದಗಳ ಸ್ವೀಕರಣ, ಕೊಡು- ಕೊಳ್ಳುವಿಕೆ ನಡೆಯುವುದು. ಹೀಗೆ ನಡೆಯುವುದರಿಂದ ಭಾಷೆಯಲ್ಲಿ ಬದಲಾವಣೆಗಳಾಗುವವು. ತನ್ಮೂಲಕ ಅದು ಬೆಳೆಯುತ್ತಾ ಸಾಗುವುದು.

ಕನ್ನಡ ಭಾಷೆ ಕೂಡ ಇದಕ್ಕೆ ಹೊರತಾಗಿಲ್ಲ. ಅದು ಯಾವುದೇ ಮಡಿವಂತಿಕೆಯಿಲ್ಲದೆ  ತನ್ನ ಸಂಪರ್ಕಕ್ಕೆ ಬಂದ ಎಲ್ಲ ಭಾಷೆಗಳಿಂದ ಶಬ್ದಗಳನ್ನು ಸ್ವೀಕರಿಸುತ್ತಾ ಬಂದುದನ್ನು ಲಕ್ಷಿಸುವೆವು. ಇದು ಒಂದರ್ಥದಲ್ಲಿ ಎಲ್ಲಾ ಕ್ಷೇತ್ರಗಳಿಂದ ಬರಬಹುದಾದ ಹೊಸ ನೀರಿನ ಅಲೆಗೆ ಎದೆಕೊಟ್ಟು ಮುಕ್ತವಾಗಿ ನಿಂತಿದೆ. ಕನ್ನಡ ಭಾಷೆಯ ಬೆಳವಣಿಗೆಯನ್ನು ನಾವು ಅರ್ಥ ಮತ್ತು ಧ್ವನಿ ಬದಲಾವಣೆಯ ಮೂಲಕ ಹಾಗೂ ಅನ್ಯ ಭಾಷೆಗಳಿಂದ ಶಬ್ದಗಳನ್ನು ಸ್ವೀಕರಿಸುವುದರ ಮೂಲಕ ಗುರುತಿಸಬಹುದಾಗಿದೆ.

ಧ್ವನಿ- ಅರ್ಥ ವ್ಯತ್ಯಾಸ ಪ್ರಕ್ರಿಯೆ

ಭಾಷೆಯಲ್ಲಿ ನಡೆಯುವ ಅರ್ಥ ಮತ್ತು ಧ್ವನಿ ಬದಲಾವಣೆಯಿಂದ ರೂಢಿಯಲ್ಲಿರುವ, ನಿತ್ಯ ಬಳಸುತ್ತಿರುವ ಅನೇಕ ಶಬ್ದಗಳು ಹೊಸ- ಹೊಸ ರೂಪ ಪಡೆದುಕೊಂಡು ಬಳಕೆಗೊಳ್ಳಬಹುದು, ಇಲ್ಲವೇ ಶಬ್ದಗಳಲ್ಲಿ ಕೆಲವು ವಿಕಾಸ, ಸಂಕೋಚ, ಉತ್ತಮ, ಹೀನ ಹಾಗೂ ಅನ್ಯ ಅರ್ಥದಲ್ಲಿ ವ್ಯತ್ಯಾಸವನ್ನು ಹೊಂದುವುದರ ಮೂಲಕ ಕನ್ನಡ ಭಾಷೆಯ ಶಬ್ದಗಳು ಕಾಲಕ್ರಮದಲ್ಲಿ ಬದಲಾಗುತ್ತಾ ಬಂದುದನ್ನು ಗುರುತಿಸುವೆವು. ಕನ್ನಡ ಭಾಷೆಯಲ್ಲಿ ಧ್ವನಿ ವ್ಯತ್ಯಾಸ ಹೊಂದಿದ ಕೆಲವು ಶಬ್ದಗಳನ್ನು ಉದಾಹರಿಸಬಹುದು.

ಉದಾ:  ಮಲೈ > ಮಲೆ, ಎಷ್ಟು > ಏಟು, ಪಾಲು > ಹಾಲು, ಅಸಗ > ಅಗಸ, ಗರ್ದೆ > ಗದ್ದೆ, ಚಮ್ಮಟಿಗೆ > ಚಾಟಿ, ಚಂದ್ರ > ಚಂದಿರ, ಮಯಣ > ಮೇಣ, ಕಳ್ತೆ > ಕತ್ತೆ, ಶ್ರೇಣಿ > ಏಣಿ, ಸ್ನೇಹ > ನೇಹ, ಸ್ತಂಭ > ಕಂಬ, ಸ್ಥೂಲ > ತೊಲ, ಪಲ್ಲಿ >  ಹಲ್ಲಿ, ಪಾವು > ಹಾವು, ಖಡ್ಗ > ಖಡುಗ, ಭಕ್ತಿ > ಭಕುತಿ, ಯುಕ್ತಿ > ಯುಕುತಿ, ಹರ್ಷ > ಹರುಷ,  ಬ್ರಹ್ಮ > ಬರಮ,  ಹಸಿರು > ಹಸುರು.

ಈ ಮೇಲಿನ ಶಬ್ದಗಳು ಉಚ್ಛಾರಗೊಳ್ಳುವಾಗ ಮಿತವ್ಯಯಾಸಕ್ತಿ, ಸೌಲಭ್ಯಾಕಾಂಕ್ಷೆ ಹಾಗೂ ಸಹಜ ಉಚ್ಚಾರಣಾ ಕಾರಣಗಳಿಂದಾಗಿ ಧ್ವನಿ ವ್ಯತ್ಯಾಸ ಹೊಂದಿರುವುದನ್ನು ಲಕ್ಷಿಸಿದೆವು. ಇಲ್ಲಿ ಶಬ್ದಗಳಲ್ಲಾದ ಧ್ವನಿವ್ಯತ್ಯಾಸ ಪ್ರಕ್ರಿಯೆಯು ಅರ್ಥವ್ಯತ್ಯಾಸಕ್ಕೆ ಎಡೆಮಾಡಿಕೊಡದೆ, ರೂಪವ್ಯತ್ಯಾಸಕ್ಕೆ ಮಾತ್ರ ಎಡೆಮಾಡಿಕೊಟ್ಟಿರುವುದನ್ನು ಗುರುತಿಸುವೆವು.

ಹಳಗನ್ನಡ ಸಂದರ್ಭದಲ್ಲಿ ಬಳಕೆಯಲ್ಲಿದ್ದ ‘ರ’ (ಹಳಗನ್ನಡ ‘ರ’) ಧ್ವನಿಯ ಸ್ಥಾನದಲ್ಲಿ ಮುಂದೆ ‘ರ’ ಧ್ವನಿಯು, ‘ವಿ’ ಸ್ಥಾನದಲ್ಲಿ ‘ಳ’ವು ನಡುಗನ್ನಡ ಕಾಲದಲ್ಲಿ ಉಚ್ಚಾರಗೊಳ್ಳತೊಡಗಿದ್ದನ್ನು ಗುರುತಿಸುವೆವು. ‘ ರ ಳ ’ (ಹಳಗನ್ನಡದಲ್ಲಿ)ಗಳು ಪ್ರಯೋಗಗೊಂಡ ಶಬ್ದಗಳ ಅರ್ಥಕ್ಕೂ ಅವುಗಳಿಗೆ ಪ್ರತಿಯಾಗಿ ಅನಂತರದಲ್ಲಿ ಉಚ್ಚಾರಣೆಗೊಂಡು ಬಳಕೆಗೊಳ್ಳುತ್ತ ಬಂದ ‘ರ ಳ’ ಯುಕ್ತ  ಶಬ್ದಗಳು ಹೊಂದಿದ ಅರ್ಥಕ್ಕೂ ವ್ಯತ್ಯಾಸವಿರುವುದನ್ನು ಕಾಣುವೆವು. ಇದಕ್ಕೆ ಇಲ್ಲಿ ಕೆಲ ಯದಾಹರಣೆಗಳನ್ನು ನೋಡಬಹುದು.

ಉದಾ: ಅಳೆ(ಹಗ)- ಕಲ್ಲು, ಅರೆ- ಅರೆ

ಬಾಳೆ(ಹಗ)- ಬಾಳೆ ಹಣ್ಣು, ಬಾಳೆ- ಮೀನು

ಮುಂದೆ ಬರಬರುತ್ತಾ ನಡುಗನ್ನಡ ಸಂಧರ್ಭದಲ್ಲಿ ‘ರ ಳ’ (ಹಗ) ಅಕ್ಷರಗಳ ಬಳಕೆಯು ನಿಂತು ಹೋದುದನ್ನು ಗುರುತಿಸುವೆವು.

ಯಾವುದೇ ಒಂದು ಶಬ್ದಕ್ಕೆ ಎಲ್ಲಾ ಕಾಲಕ್ಕೂ ಒಂದೇ ಅರ್ಥ ಇರಬೇಕೆಂದೇನೂ ನಿಯಮವಿಲ್ಲ. ಬಹುಶಃ ಹಾಗೆ ಇರುವುದೂ ಇಲ್ಲ. ಒಂದು ಶಬ್ದಕ್ಕಿರುವ ಅರ್ಥ ಕಾಲ- ಕಾಲಕ್ಕೆ ಬದಲಾಗುತ್ತಾ ಬರುವುದುಂಟು. ಒಂದು ಶಬ್ದಕ್ಕೆ  ಅರ್ಥ ಬರಬೇಕಾದರೆ ಆ ಶಬ್ದವನ್ನು ಉಚ್ಛರಿಸುವವ, ಅದನ್ನು ಕೇಳುವವ ಹಾಗೂ ಆ ಶಬ್ದವನ್ನುಉಚ್ಛರಿಸುವ ಸಂದರ್ಭ-  ಮೂರೂ ಕಾರಣವಾಗುವವು. ಇದರಿಂದಾಗಿ ಯಾವುದೇ ಶಬ್ದವು ಖಾಯಂ ಆಗಿ ಒಂದೇ ಅರ್ಥವನ್ನು ಎಲ್ಲಾ ಕಾಲಕ್ಕೂ ಹೊಂದಿರಲಾರದು. ಅದು ಕಾಲ- ಕಾಲಕ್ಕೆ ಬಗೆ- ಬಗೆಯ ಅರ್ಥಗಳನ್ನು ಹೊಂದುತ್ತ ಬರುವುದು. ಹಳಗನ್ನಡದಲ್ಲಿ ಪ್ರಯೋಗದಲ್ಲಿದ್ದ ಎಷ್ಟೋ ಶಬ್ದಗಳ ಅರ್ಥಗಳು ಹೊಸಗನ್ನಡದ ಸಂದರ್ಭದಲ್ಲಿ ಭಿನ್ನ- ಭಿನ್ನವಾದುದನ್ನು ಕಾಣುವೆವು.

ಉದಾ:

 ಶಬ್ದ  ಹಳಗನ್ನಡ   ಹೊಸಗನ್ನಡ 
 ಸಮಯ  ಧರ್ಮ  ವೇಳೆ
 ಅಮ್ಮ  ತಂದೆ  ತಾಯಿ
 ಕುನ್ನಿ  ಗಂಡುಮಗು  ನಾಯಿಮರಿ
 ಕೂಸು  ಹೆಣ್ಣುಮಗು  ಚಿಕ್ಕಮಗು
 ಟೀಕೆ  ವ್ಯಾಖ್ಯಾನ  ಟೀಕಿಸು, ನಿಂದಿಸು
 ಭದ್ರ  ಮಂಗಳ  ಜೋಪಾನ
 ಮರ್ಯಾದೆ  ಎಲ್ಲೆ, ಗಡಿ  ಗೌರವ
 ಸೀರೆ  ವಸ್ತ್ರ  ಹೆಂಗಸರ ಉಡುಪು

ಕೆಲವು ಶಬ್ದಗಳು ಕಾಲಾಂತರದಲ್ಲಿ ಅವು ಹೊಂದಿದ ಅರ್ಥದಲ್ಲಿ ವಿಕಾಸ, ಸಂಕೋಚ, ಹೀನ, ಉತ್ತಮ ಹಾಗೂ ಅನ್ಯ– ಅರ್ಥಗಳನ್ನು ಪಡೆದು ಬಳಕೆಗೊಳ್ಳುತ್ತ ಬಂದುದನ್ನು ಗುರುತಿಸುವೆವು. ಇಂಥ ಶಬ್ದಗಳಿಗೆ ಇಲ್ಲಿ ಕೆಲವು ಉದಾಹರಣೆಗಳನ್ನು ಕೊಡಬಹುದು.

ಉದಾ: ಅರ್ಥ ವಿಕಾಸ-

 ಶಬ್ದ   ಮೊದಲಿದ್ದ ಅರ್ಥ    ಈಗಿನ ಅರ್ಥ
 ಸಮಾಚಾರ  ಒಳ್ಳೆಯ ಸುದ್ದಿ  ಯಾವುದೇ ತರದ ಸುದ್ದಿ
 ಎಣ್ಣೆ  ಎಳ್ಳಿನಿಂದ ತೆಗದ ಜಿಡ್ಡು  ಎಲ್ಲ ರೀತಿಯ ಜಿಡ್ಡು ಪದಾರ್ಥ
 ಓಲೆ  ತಾಳೆಗರಿಯಿಂದ ಮಾಡಿದ ಕಿವಿಯ ಆಭರಣ  ಬೆಂಡೋಲೆ, ಮುತ್ತಿನೋಲೆ, ವಜ್ರದೋಲೆ
 ಭೀಮ  ಪಾಂಡವರಲ್ಲಿ ಒಬ್ಬ  ಭೀಮನಂತೆ ಬಲಶಾಲಿಯಾದ ವ್ಯಕ್ತಿ

          ಅರ್ಥಸಂಕೋಚ:

 ಶಬ್ದ   ಮೊದಲಿದ್ದ ಅರ್ಥ    ಈಗಿನ ಅರ್ಥ
 ಸೀರೆ  ವಸ್ತ್ರ  ಹೆಂಗಸರು ಉಡುವ ವಸ್ತ್ರ
 ಜಂಗಮ  ನೆಲೆ ಇಲ್ಲದೆ ಅಲೆದಾಡುವವ  ಒಂದು ಜಾತಿಗೆ ಸೇರಿದವ
 ಒಡವೆ  ಆಸ್ತಿ, ಸಂಪತ್ತು  ಆಭರಣ
 ಮೀನ್  ಮಿನುಗುವ ವಸ್ತು  ಮೀನು
 ಕುರುಬ  ಗುಡ್ಡಗಾಡು ವಾಸಿ  ಕುರಿ ಕಾಯುವ ಜನಾಂಗ, ಒಂದು ಜಾತಿಯ ಹೆಸರು

           ಹೀನಾರ್ಥಪ್ರಾಪ್ತಿ:

 ಶಬ್ದ  ಮೊದಲಿದ್ದ ಅರ್ಥ   ಈಗಿನ ಅರ್ಥ 
 ಕೂಳ್  ಆಹಾರ  ಸತ್ತವರ ಮನೆಯ ಊಟ
 ತಿಥಿ  ಪಂಚಾಂಗ ರೀತಿ ಗೊತ್ತುಪಡಿಸಿದ ದಿನ  ಸತ್ತವರ ದಿನ
 ಆಳ್  ಶೂರ  ಸೇವಕ
 ಶಿಕ್ಷಾ  ಶಿಕ್ಷಣ  ದಂಡನೆ
 ಗಾಳಿ  ವಾಯು  ಪಿಶಾಚಿ, ದೆವ್ವ, ಭೂತ
 ಅಗ್ಗ  ಶ್ರೇಷ್ಠ  ಕನಿಷ್ಟ, ಸೋವಿ
 ಪೆದ್ದ  ಪಂಡಿತ  ದಡ್ಡ, ಮೂರ್ಖ
 ಟೀಕೆ  ವ್ಯಾಖ್ಯಾನ , ವಿಶ್ಲೇಷಣೆ  ಟೀಕಿಸು, ನಿಂದಿಸು
 ಅವಸ್ಥೆ  ಸ್ಥಿತಿ  ಹೀನಸ್ಥಿತಿ

         ಉತ್ತಮಾರ್ಥ ಪ್ರಾಪ್ತಿ:

 ಶಬ್ದ  ಮೊದಲಿದ್ದ ಅರ್ಥ  ಈಗಿನ ಅರ್ಥ
 ಮರ್ಯಾದೆ  ಗಡಿ, ಎಲ್ಲೆ  ಗೌರವ
 ಸಭಿಕ  ಜೂಜುಗಾರ  ಸಭೆಯಲ್ಲಿ ಉಪಸ್ಥಿತ
 ದಿಗ್ಗಜ  ಎಂಟು ದಿಕ್ಕುಗಳನ್ನು ಹೊತ್ತುನಿಂತ ಆನೆಗಳು  ಆಸ್ಥಾನ ಪಂಡಿತ, ಪ್ರಕಾಂಡ ಪಾಂಡಿತ್ಯ ಹೊಂದಿದವ

           ಅರ್ಥಾಂತರ:

 ಶಬ್ದ  ಮೊದಲಿದ್ದ ಅರ್ಥ   ಈಗಿನ ಅರ್ಥ 
 ಅಮ್ಮ  ತಂದೆ  ತಾಯಿ
 ದಾಹ  ಉರಿ  ಬಾಯಾರಿಕೆ
 ನಿಜ  ತನ್ನ ಸ್ವಂತ  ಸತ್ಯ
 ಅವಸರ  ಸಮಯ  ಆತುರ
 ಖಂಡಿತ  ಕತ್ತರಿಸು  ನಿಜ, ಸತ್ಯ
 ವಿಪರೀತ  ವಿರುದ್ಧ  ಬಹಳ
 ಭದ್ರ  ಮಂಗಳ  ಸುರಕ್ಷಿತ
 ಸಂಭ್ರಮ  ಗೊಂದಲ  ಸಡಗರ
 ನಿಧಾನ  ರೋಗ ಪರೀಕ್ಷೆ  ಸಾವಕಾಶ

ಹೀಗೆ ಅನೇಕ ಶಬ್ದಗಳು ಕಾಲದಿಂದ ಕಾಲಕ್ಕೆ ಅವು ಹೊಂದಿದ ಅರ್ಥದಲ್ಲಿ ವ್ಯತ್ಯಾಸವನ್ನು ಹೊಂದುತ್ತಾ ಬಂದುದನ್ನು ಲಕ್ಷಿಸುವೆವು. ಇದೂ ಒಂದು ರೀತಿಯಲ್ಲಿ ಭಾಷೆಯಲ್ಲಿ ನಡೆಯುವ ಬೆಳವಣಿಗೆಯನ್ನು ಸೂಚಿಸುವಂಥದ್ದಾಗಿದೆ ಎನ್ನಬಹುದು. ಆದರೆ ಕನ್ನಡ ಭಾಷಾ ಬೆಳವಣಿಗೆಯು ಶಬ್ದಗಳಲ್ಲಿ ಇಂಥ ಧ್ವನಿ ಹಾಗೂ ಅರ್ಥ ವ್ಯತ್ಯಾಸಗಳಂತಹ ಆಂತರಿಕ ಬದಲಾವಣೆಗಳಿಗಿಂತ ಅನ್ಯಭಾಷೆಗಳ ಶಬ್ದಗಳನ್ನು ಸ್ವೀಕರಿಸುವುದರ ಮೂಲಕ; ಹೊಸ- ಹೊಸ ಶಬ್ದಗಳ ಸೇರ್ಪಡೆಯು ಕನ್ನಡದ ನಿಘಂಟಿಗೆ ಆಗುವ ಮೂಲಕ ಘಟಿಸುವುದು .ತನ್ಮೂಲಕ ಕನ್ನಡದಲ್ಲಿ ಶಬ್ದಸಂಪತ್ತು ದ್ವಿಗುಣಗೊಂಡು ಭಾಷೆಯ ಬೆಳವಣಿಗೆಗೆ ಎಡೆಮಾಡಿಕೊಡುವುದು.