ಭಾಷೆ ಎಂದ ತಕ್ಷಣ ಇಬ್ಬರು ವ್ಯಕ್ತಿಗಳ ನಡುವಿನ ಸಂಭಾಷಣೆ ನೆನಪಿಗೆ ಬರುತ್ತದೆ. ಹಾಗೆಯೇ ಜನರು ಆಡುವ, ಬರೆಯುವ ಪ್ರಕ್ರಿಯೆ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಇಂಥ ಭಾಷೆಯ ಬಗ್ಗೆ ಸಾಮಾನ್ಯವಾಗಿ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಜನಸಾಮಾನ್ಯರಿಗೆ (ಸಾಮಾನ್ಯವಾಗಿ ಎಲ್ಲರಿಗೂ) ಇದರ ಪರಿವೇ ಇರುವುದಿಲ್ಲ. ಹಾಗೆ ಚಿಂತಿಸಬೇಕಾದ ಸಂದರ್ಭವೂ ಬರುವುದಿಲ್ಲ. ಇದ್ದಕಿದ್ದಂತೆ ನಾನು ಆಡುವ ಭಾಷೆ ಹೇಗೆ ಹುಟ್ಟಿತು ಎಂದು ಯೋಚಿಸಿದರೆ ಒಂದು ಕ್ಷಣ ದಿಗಿಲಾಗುತ್ತದೆ. ಆದರೆ ಭಾಷೆಯ ಬಳಕೆಯಿಲ್ಲದ ಸಮಾಜವೊಂದನ್ನು ಭೂಮಿ ಮೇಲೆ ನೋಡಲು ಸಾಧ್ಯವಿಲ್ಲ ಎನ್ನುವುದು ಅಪ್ಪಟ ಸತ್ಯ. ಭಾಷೆಯ ಅವಶ್ಯಕತೆ ಮನುಷ್ಯನಿಗೆ ಎಷ್ಟರ ಮಟ್ಟಿಗಿದೆ ಎಂದು ಹೆಚ್ಚಿಗೆ ವಿವರಿಸಬೇಕಿಲ್ಲ. ಭಾಷೆಯೇ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದೂ ಕೂಡ ಕಷ್ಟ. ಏಕೆಂದರೆ ಭಾಷೆಯಿಲ್ಲದೆ ಪ್ರಾಣಿಗಳಂತೆ ಬದುಕುವುದು ಕಲ್ಪನಾತೀತವಾದದ್ದು. ಮನುಷ್ಯ ತನ್ನ ಭಾವನೆಗಳನ್ನು ಇತರರಿಗೆ ಹೇಳಲು, ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು, ಪರಸ್ಪರ ಸಂವಹನಕ್ಕಾಗಿ ಇರುವ ಮಾಧ್ಯಮವೇ ಭಾಷೆ. ಭಾಷೆ ಇಲ್ಲದಿದ್ದರೆ ಸಮಾಜದಲ್ಲಿ ಪರಸ್ಪರ ಸಂವಹನವೇ ನಿಂತುಬಿಡುತ್ತದೆ. ಸಂವಹನವೇ ಇಲ್ಲದಿದ್ದರೆ ಸಮಾಜ, ಸಮುದಾಯದ ನಿರ್ಮಾಣವೇ ಅಸಾಧ್ಯ. ಭಾಷೆ ಇಲ್ಲದ ಮನುಷ್ಯನ ಬದುಕು ಊಹಿಸಲು ಕೂಡ ಸಾಧ್ಯವಿಲ್ಲ. ಏಕೆಂದರೆ ಮನುಷ್ಯ ಯೋಚನೆ ಮಾಡುವುದು ಕೂಡ ಭಾಷೆಯಲ್ಲಿಯೇ. ಹಾಗಾಗಿ ಭಾಷೆಯಿಲ್ಲದಿದ್ದರೆ ಮನುಷ್ಯ ಕೂಡ ಬೇರೆ ಪ್ರಾಣಿಗಳಿಗಿಂತ ಭಿನ್ನವಾಗಿಯೇನೂ ಇರುತ್ತಿರಲಿಲ್ಲ. ಭಾಷೆ ಮನುಷ್ಯನನ್ನು ಜೀವಿಸಲು, ಸಂಘಜೀವಿಯಾಗಲು, ನಾಗರಿಕನಾಗಿ ಬಾಳಲು ಕಾರಣವಾಗಿದೆ. ಭಾಷೆ ಒಂದು ವಿಧದಲ್ಲಿ ಮುಷ್ಯನ ಒಂದು ಅಂಗವೇ ಆಗಿದೆ. ಮನುಷ್ಯ ಹುಟ್ಟಿ ಅನಂತರ ಭಾಷೆ ಕಲಿತರೂ ಆತನಿಂದ ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲ.

ಇಷ್ಟೊಂದು ಪ್ರಾಮುಖ್ಯತೆ ಪಡೆದಿರುವ ಭಾಷೆಯ ಉಗಮ ಹೇಗಾಯಿತು ಎನ್ನುವುದು ಬಹಳ ಕುತೂಹಲಕಾರಿ ಸಂಗತಿ. ಭಾಷೆ ಮನುಷ್ಯನಿಗೆ ದೇವರು ನೀಡಿದ ವರವೆ? ಅಥವಾ ಮನುಷ್ಯನ ಪ್ರಯತ್ನದ ಫಲವೆ? ಎಂದೆಲ್ಲ ಅನೇಕರು ಯೋಚಿಸಿದ್ದಾರೆ. ಅನೇಕ ವಿದ್ವಾಂಸರು ಭಾಷೆ ಮನುಷ್ಯನಿಗೆ ದೈವದತ್ತವಾಗಿ ಬಂದಿರುವ ವರ ಎಂದು ಹೇಳಿದರೆ ಮತ್ತೆ ಕೆಲವರು ಭಾಷೆ ಇದ್ದಕ್ಕಿದ್ದಂತೆ ರೂಪುಗೊಂಡಿಲ್ಲ. ಮನುಷ್ಯ ಕ್ರಮೇಣವಾಗಿ ರೂಪಿಸಿಕೊಂಡಿ ದ್ದಾನೆ ಎಂದು ಹೇಳುತ್ತಾರೆ.

ನಾಲ್ಕು ಶತಮಾನಗಳಿಂದ ಭಾಷೆಯ ಉಗಮದ ಬಗ್ಗೆ ಜನರು ತಲೆಕೆಡಿಸಿಕೊಂಡಿರುವುದು ತಿಳಿದುಬರುತ್ತದೆ. ಭಾಷೆ ಹೇಗೆ ಉಗಮವಾಯಿತು? ಜಗತ್ತಿನಲ್ಲಿ ಮಾತನಾಡುವ ಅತ್ಯಂತ ಹಳೆಯ ಭಾಷೆ ಯಾವುದು? ಜಗತ್ತಿನ ಎಲ್ಲ ಭಾಷೆಗಳು ಯಾವುದಾದರೂ ಒಂದು ಭಾಷೆಯಿಂದ ರೂಪು ತಳೆದಿವೆಯೇ? ಅಥವಾ ಜಗತ್ತಿನಲ್ಲಿ ಇರುವ ಎಲ್ಲ ಭಾಷೆಗಳಿಗೂ ಒಂದು ಮೂಲ ಭಾಷೆ ಇದೆಯೇ? ಎಂಬೆಲ್ಲ ಪ್ರಶ್ನೆಗಳು ಬಹಳ ಹಿಂದಿನಿಂದಲೇ ವಿದ್ವಾಂಸರನ್ನು ಕಾಡಿವೆ. ಒಬ್ಬೊಬ್ಬ ವಿದ್ವಾಂಸ ಇದಕ್ಕೆ ಒಂದೊಂದು ರೀತಿಯ ಉತ್ತರ ಕಂಡುಕೊಂಡಿರುವುದು ತಿಳಿದುಬರುತ್ತದೆ. ಕೆಲವರು ಭಾಷೆ ಮಾನವ ನಿರ್ಮಿತವಲ್ಲ, ಅದು ದೈವಿಕವಾದದ್ದು ಎಂದು ವಾದಿಸಿದರೆ ಮತ್ತೆ ಕೆಲವರು ಅದು ಮಾನವನ ಪ್ರಯತ್ನದಿಂದ ಉಗಮವಾಗಿದೆ ಎಂದು ಹೇಳುತ್ತಾರೆ. ಹೀಗೆ ಚರ್ಚಿಸುತ್ತಾ ಹೋದಂತೆ ಭಾಷೆಯ ಇತಿಹಾಸ ಬಹಳ ಹಿಂದಕ್ಕೆ ಹೋಗುತ್ತದೆ. ವಿದ್ವಾಂಸರು ಚರ್ಚಿಸುತ್ತಾ ಮೂರು ಸಾವಿರ ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗುತ್ತಾರೆ.

ಭಾಷೆಯ ಉಗಮವನ್ನು ಕುರಿತು ಯಾರು ಚರ್ಚಿಸಬೇಕು ಎನ್ನುವುದರ ಬಗೆಗೆ ಬಹಳ ಚರ್ಚೆಯಾಗಿದೆ. ಭಾಷಾಶಾಸ್ತ್ರ ಕ್ಷೇತ್ರದಲ್ಲಿ ಭಾಷೆಯ ಬಗೆಗೆ ಚರ್ಚಿಸಬೇಕು, ಬಾರದು ಎನ್ನುವುದರ ಬಗ್ಗೆಯೂ ವಾದ ವಿವಾದಗಳು ಆಗಿವೆ. ಹಾಗೆಯೇ ಮಾನವಶಾಸ್ತ್ರ ವಿಭಾಗ ಇದನ್ನು ಅಧ್ಯಯನ ಮಾಡಬೇಕು ಎಂದು ಸೂಚಿಸಿದವರೂ ಕಂಡುಬರುತ್ತಾರೆ. ಹಾಗಾಗಿ 1866 ರಲ್ಲಿ ಫ್ರಾನ್ಸ್‌ನಲ್ಲಿ ‘ಭಾಷಾ ಶಾಸ್ತ್ರ ಪರಿಷತ್ತು’ ನಡೆಸಿದ ಸಭೆಯಲ್ಲಿ ಭಾಷೆಯ  ಉಗಮದ ಬಗ್ಗೆ ಪ್ರಸ್ತಾಪ ಆಗಲಿಲ್ಲ. ಇದರಿಂದ ನಿರಾಶೆಗೊಂಡ ಯಸ್ಪರ್ಸ್‌ನ್ ಎನ್ನುವ ವಿದ್ವಾಂಸ ಭಾಷೆಯ ಉಗಮದ ಬಗ್ಗೆ ಸಂಶೋಧನೆ ಕೈಗೊಳ್ಳಲು ಕಾರಣವಾಯಿತು. ಆದರೂ ಯಸ್ಪರ್ಸ್‌ನ್ ಅವರ ಚರ್ಚೆ ಫಲ ನೀಡಲಿಲ್ಲ.

ಹರ್ಡರ್ ಎಂಬ ವಿದ್ವಾಂಸ ಬರ್ಲಿನ್ ಅಕಾಡೆಮಿಯಲ್ಲಿ ಭಾಷೆಯ ಉಗಮದ ಬಗ್ಗೆ ಪ್ರಥಮ ಬಾರಿಗೆ ಒಂದು ಪ್ರಬಂಧ ಮಂಡಿಸಿ ಭಾಷೆ ದೈವದತ್ತವಾದುದಲ್ಲ ಎಂಬುದನ್ನು ಮೊದಲ ಬಾರಿಗೆ ಮಂಡಿಸಿದನು. ಭಾಷೆ ಮನುಷ್ಯ ನಿರ್ಮಿತ ಎನ್ನುವುದನ್ನು ಹೇಳಿದನು. ಇದು ಅನೇಕರ ಮನ್ನಣೆಗೆ ಪಾತ್ರವಾಯಿತು ಎಂದು ಹೇಳಬಹುದು. ಅಲ್ಲಿಯ ತನಕ ಭಾಷೆಯ ಬಗೆಗೆ, ಭಾಷೆಯ ಉಗಮದ ಬಗೆಗೆ ಚಿಂತಿಸುವವರು ಭಾಷೆ ದೈವದತ್ತವಾದುದು, ಪ್ರತಿಯೊಬ್ಬ ಮನುಷ್ಯನಿಗೆ ಹುಟ್ಟಿನಿಂದಲೇ ಭಾಷೆ ಬರುತ್ತದೆ ಎಂದು ನಂಬಿದ್ದರು. ಹರ್ಡರ್ ಎಂಬ ವಿದ್ವಾಂಸ ಭಾಷೆ ದೈವದತ್ತವಾದುದಲ್ಲ ಎಂದು ಹೇಳಿದ ಮೇಲೂ ಭಾಷೆ ದೈವದತ್ತವಾದುದು ಎಂದು ಕೆಲವರ ಸಿದ್ಧಾಂತವಾಗಿದೆ. ಈ ಸಿದ್ಧಾಂತವನ್ನು ಸಂಪೂರ್ಣವಾಗಿ ಇತ್ತೀಚಿಗೆ ಕೈಬಿಟ್ಟಿದ್ದರೂ ಸಾಮಾನ್ಯರಲ್ಲಿ ಈ ನಂಬಿಕೆ ಹೆಚ್ಚಾಗಿಯೇ ಇದೆ. ಏಕೆಂದರೆ ಪ್ರಕೃತಿ, ಭೂಮಿ, ನದಿ, ಪರ್ವತ, ಆಕಾಶಗಳಂತೆ ಭಗವಂತನ ಸೃಷ್ಟಿಯಿಂದಲೇ ಭಾಷೆ ರೂಪುಗೊಡಿತು ಎನ್ನುವ ನಂಬಿಕೆ ಈ ಹಿಂದೆ ಅನೇಕರಲ್ಲಿ ಅಚಲವಾಗಿತ್ತು. ಈಗಲೂ ಕೆಲವರಲ್ಲಿ ಈ ನಂಬಿಕೆ ಹಾಗೇ ಉಳಿದಿದೆ. ಹಾಗಾಗಿ ಆಯಾ ದೇಶದವರು ತಮಗೆ ತಿಳಿದಂತೆ ತಮ್ಮಲ್ಲಿ ಇರುವ ಹಳೆಯ ಒಂದು ಭಾಷೆಯೇ ಎಲ್ಲ ಭಾಷೆಗಳಿಗೂ ಮೂಲ ಎಂದು ಭ್ರಮೆಗೊಳಗಾಗಿ ದ್ದರು. ಧಾರ್ಮಿಕ ಪಂಥದವರು, ಇದರಲ್ಲಿಯ ಅನೇಕರು (ಬೇರೆ ಬೇರೆ ಧಾರ್ಮಿಕ ಪಂಥದವರು) ಜಗತ್ತಿನ ಭಾಷೆಗಳಿಗೆ ತಮ್ಮ ಭಾಷೆಯೇ ಮೂಲ ಎಂದು ವಾದಿರಿಸಿರುವುದು ತಿಳಿದುಬರುತ್ತದೆ. ಉದಾ. ಬೌದ್ಧರು ಪಾಳಿ ಭಾಷೆಯನ್ನು ಸರ್ವಶ್ರೇಷ್ಠ ಮತ್ತು ಜಗತ್ತಿನ ಹಳೆಯ ಭಾಷೆ ಎಂದು ಹೇಳಿಕೊಂಡರೆ, ಜೈನರು ಅರ್ಧಮಾಗಧಿಯನ್ನು ಜಗತ್ತಿನ ಅತ್ಯಂತ ಹಳೆಯ ಭಾಷೆ ಎಂದರು. ಹಾಗೆಯೇ ಯಹೂದಿಗಳು ಹಿಬ್ರೂ ಭಾಷೆಯೇ ಜಗತ್ತಿನ ಮೂಲ ಭಾಷೆ ಎಂದು ಸಾರಿದರು. ಈ ರೀತಿಯ ವಾದಗಳು, ನಂಬಿಕೆಗಳು ಧಾರ್ಮಿಕ ವಲಯದಿಂದ ಹುಟ್ಟಿದವುಗಳು. ಈ ಧಾರ್ಮಿಕ ಪಂಥದವರಿಗೆ ತಮ್ಮ ಭಾಷೆ ದೈವತ್ವದಿಂದ ಹುಟ್ಟಿದೆ, ಹಾಗಾಗಿ ಇದು ಅತ್ಯಂತ ಹಳೆಯ ಭಾಷೆ ಎಂದರು. ಭಾರತದಲ್ಲಿ ಸಂಸ್ಕೃತವನ್ನು ಈ ರೀತಿಯಲ್ಲಿ ನೋಡಲಾಗುತ್ತದೆ.

ಭಾಷೆಯ ಉಗಮ ಕುರಿತ ಪುರಾಣಗಳು

ಭಾಷೆಯ ಹುಟ್ಟಿನ ಬಗೆಗೆ ಅನೇಕ ದಂತಕತೆಗಳು, ಪುರಾಣಗಳು ಇವೆ. ಭಾಷೆ ದೈವದತ್ತವಾದುದು, ಭಾಷೆ ಮನುಷ್ಯನಿಗೆ ದೇವರು ನೀಡಿದ ವರ ಎನ್ನುವ ನಂಬಿಕೆ ಜಗತ್ತಿನಾದ್ಯಂತ ಇತ್ತು. ಈಗಲೂ ಅನೇಕರಲ್ಲಿ ಇದೆ. ಭಾಷೆ ದೈವದತ್ತವಾದುದು ಎಂದು ವಾದಿಸುವವರು ಹೀಗೆ ಹೇಳುತ್ತಾರೆ. ಬೇರೆ ಪ್ರಾಣಿಯಂತೆ ಮನುಷ್ಯ ಕೂಡ ಒಂದು ಪ್ರಾಣಿ, ಆದರೆ ಬೇರೆ ಪ್ರಾಣಿಗಳಿಗೆ ಇಲ್ಲದೇ ಇರುವ ಈ ಸೌಲಭ್ಯ ಮನುಷ್ಯನಿಗೆ ಮಾತ್ರ ಏಕಿದೆ? ನಮ್ಮಂತೆ ಪ್ರಾಣಿಗಳು ಏಕೆ ಮಾತಾಡುವುದಿಲ್ಲ. ಇಡೀ ಜೀವರಾಶಿಯಲ್ಲಿ ಯಾವುದೇ ಜೀವಿಗೆ ಇಲ್ಲದ ಈ ಸೌಲಭ್ಯ ಮನುಷ್ಯನಿಗೆ ಇರಬೇಕಾದರೆ ಸೃಷ್ಟಿಕರ್ತನೆ ಅಂದರೆ ದೇವರೇ ಇದಕ್ಕೆ ಕಾರಣೀಭೂತನಲ್ಲವೆ ಎನ್ನುವುದು ಇವರ ವಾದ. ಜಗತ್ತಿನ ಎಲ್ಲ ಸೃಷ್ಟಿಗೂ ಭಗವಂತನೇ ಕಾರಣ. ಆದ್ದರಿಂದ ಭಾಷೆ ಕೂಡ ದೈವಸೃಷ್ಟಿ ಎಂಬುದು ಇವರ ಅಚಲವಾದ ನಂಬಿಕೆ ಇತ್ತು. 17 ನೇ ಶತಮಾನದಲ್ಲಿ ಪ್ರಸಿದ್ಧವಾದ ವೈಯಾಕರಣಿ ಭಟ್ಟಾಕಳಂಕನೂ ಕೂಡ ‘ಭಾಷೆಗಳೆಲ್ಲವೂ ಭಗವಂತನಿಂದಲೇ ಸೃಷ್ಟಿಯಾದವು ’ಎಂದು ಸ್ಪಷ್ಪವಾಗಿ ಹೇಳಿದ್ದಾನೆ.

ಕ್ರೈಸ್ತರ ಪ್ರಕಾರ ‘ಶಬ್ದವೆಂಬುದು ಕೂಡ ದೇವರಿಂದಲೇ ಹೊರಬಂದು ಅದು ಭಾಷೆಯಾಗಿ ರೂಪುಗೊಂಡಿತು. ಈ ದೈವಬಲದಿಂದಲೇ ಜನರು ಮಾತಾಡಲು ಪ್ರಾರಂಭಿಸಿದರು’ ಎನ್ನುವ ನಂಬಿಕೆ ಇರುವುದು ಅನೇಕ ಮೂಲಗಳಿಂದ ತಿಳಿದು ಬರುತ್ತದೆ.

ಹಾಗೆಯೇ ಈಜಿಪ್ಟ್ ದೇಶದ ಜನರಲ್ಲಿ ಒಂದು ನಂಬಿಕೆ ಇದೆಯಂತೆ. ‘ಥಾಥ್’ ಎಂಬ ದೇವತೆ ಜನರಿಗೆ ಭಾಷೆಯನ್ನು ವರದಾನ ನೀಡಿದೆಯಂತೆ. ಹಾಗಾಗಿ ಇವರಿಗೆ ಭಾಷೆಗಾಗಿ ದೇವತೆಯೇ ಪ್ರತ್ಯೇಕವಾಗಿ ಇರುವುದು ಕಂಡುಬರುತ್ತದೆ.

ಚೀನಾ ದೇಶದವರಲ್ಲಿಯೂ ದೇವರಿಂದಲೇ ಮನುಷ್ಯನಿಗೆ ಭಾಷೆ ದೈವದತ್ತವಾಗಿ ಬಂದಿದೆ ಎನ್ನುವ ನಂಬಿಕೆ ಇದೆ.

ಎಲ್ಲ ದೇಶದ ಜನಪದರಲ್ಲಿ ಭಾಷೆಯ ಹುಟ್ಟಿನ ಬಗೆಗೆ ದಂತಕತೆಗಳಿವೆ. ಇಡೀ ಸೃಷ್ಟಿಯಲ್ಲಿ ಮೊದಲು ಬರೀ ನೀರಿತ್ತು. ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಬ್ರಹ್ಮ ಇಡೀ ಜೀವರಾಶಿಯನ್ನು ಸೃಷ್ಟಿ ಮಾಡಿದ. ಇದೇ ದೇವರು ಮನುಷ್ಯನಿಗೆ ಮಾತಾಡುವ ಶಕ್ತಿಯನ್ನು ನೀಡಿದ ಎನ್ನುವ ನಂಬಿಕೆ ಇದೆ. ಇಡೀ ಜೀವರಾಶಿಯಲ್ಲಿ ಸರ್ವಶ್ರೇಷ್ಠವಾದ ಜನ್ಮ, ಮನುಷ್ಯ ಜನ್ಮ. ಏಕೆಂದರೆ ಬೇರೆ ಜೀವರಾಶಿಗಿಂತ ಮನುಷ್ಯನಿಗೆ ಪ್ರತ್ಯೇಕ ಗುಣಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಭಾಷೆ. ಇದು ದೇವರು ನೀಡಿದ ವರ. ಇದರಿಂದಲೇ ಎಲ್ಲ ಪ್ರಾಣಿಗಳಿಗಿಂತ ಮನುಷ್ಯ ಮೇಲು.

ಪ್ರಾರಂಭಿಕ ಪ್ರಯೋಗಗಳು

ಪ್ರಪಂಚದಲ್ಲಿ ಇರುವ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆ ಯಾವುದು ಇರಬಹುದು ಎಂದು ಬಹಳ ಹಿಂದೆಯೇ ಅನೇಕರಿಗೆ ಕುತೂಹಲ ಮೂಡಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಸುಮಾರು ಕ್ರಿ.ಶ. 7 ನೇ ಶತಮಾನದ ಗ್ರೀಕ್ ಇತಿಹಾಸಕಾರ ಹೆರೋಡೋಟಸ್ ಪ್ಲಮೆತಿಕಸ್ ಎಂಬ ಈಜಿಪ್ಟ್ ದೊರೆಯ ಬಗ್ಗೆ ಒಂದು ಕತೆ ಹೇಳುತ್ತಾನೆ. ಈತ ಪ್ರಪಂಚದ ಅತ್ಯಂತ ಹಳೆಯ ಭಾಷೆ ಯಾವುದು ಇರಬಹುದು ಎಂದು ತಿಳಿಯಲು ಇಬ್ಬರು ಪುಟ್ಟ ಬಾಲಕರನ್ನು ಜನರ ಸಂಪರ್ಕದಿಂದ ದೂರ ಇರಿಸುತ್ತಾನೆ. ಇವರನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ನೇಮಿಸುತ್ತಾರೆ. ಒಂದು ದಿನ ಆ ಹುಡುಗರು ಆತನ ಹತ್ತಿರ ಓಡಿ ಬಂದು ‘ಬೇಕುಸ್’ ಎಂದು ಹೇಳುತ್ತವೆ. ಈ ಪದಕ್ಕೆ ಫ್ರಿಜಿಯನ್ ಭಾಷೆಯಲ್ಲಿ ರೊಟ್ಟಿ ಎಂಬ ಅರ್ಥವಿರುವುದರಿಂದ ಅದೇ ಅತ್ಯಂತ ಪ್ರಾಚೀನ ಭಾಷೆ ಎಂದು ಪ್ಲಮೆತಿಕಸ್ ರಾಜ ನಿರ್ಧರಿಸುತ್ತಾನೆ. ಇಂತಹ ಘಟನೆ ಅಥವಾ ಪ್ರಯೋಗಗಳು ನಡೆದಿರಬಹುದು. ಆದರೆ ಇಂಥ ಪ್ರಯೊಗಗಳು ಎಷ್ಟರ ಮಟ್ಟಿಗೆ ಸತ್ಯವನ್ನು ಹೇಳುತ್ತವೆ ಎನ್ನುವುದನ್ನು ಯೋಚಿಸಬೇಕು. ಪ್ಲಮೆತಿಕಸ್ ರಾಜನ ಆಸ್ಥಾನದಲ್ಲಿ ಕನ್ನಡದ ವಿದ್ವಾಂಸರಿದ್ದಿದ್ದರೆ ಆ ಮಕ್ಕಳು ಕನ್ನಡದ ‘ಬೇಕು’ ಎಂಬ ಪದವನ್ನು ಉಚ್ಚರಿಸಿದುವೆಂದು ಕನ್ನಡವೇ ಅತ್ಯಂತ ಪ್ರಾಚೀನ ಭಾಷೆಯೆಂದು ತಮ್ಮ ತೀರ್ಮಾನ ಹೇಳಿಬಿಡುತ್ತಿದ್ದರೆಂದು ಕಾಣುತ್ತದೆ ಎಂದು ಹೇಳಿ, ಡಾ. ಚಿದಾನಂದ ಮೂರ್ತಿಯವರು ಈ ವಾದವನ್ನು ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲದೆ ಭಾರತದಲ್ಲೇ ಅಕ್ಬರನು ಒಂದು ಪ್ರೋಗ ಮಾಡಿದನೆಂದು ತಿಳಿಸುತ್ತಾರೆ. ಆದರೆ ಮನುಷ್ಯರಿಂದ ಪ್ರತ್ಯೇಕಿಸಿ, ಮನುಷ್ಯರಿಂದ ದೂರವಿಡಿಸಿ,  ಮಾತನ್ನು ಕೇಳದ ಹಾಗೆ ಇರಿಸಿದ ಮಕ್ಕಳು ಯಾವುದೇ ಶಬ್ದ ನುಡಿಯಲೇ ಇಲ್ಲ ಎಂದು ಹೇಳುತ್ತಾರೆ. ಇದನ್ನು ಸರಿ ಎಂತಲೂ ಒಪ್ಪಿಕೊಳ್ಳುತ್ತಾರೆ. ಯಾವುದೇ ಒಂದು ಭಾಷೆ ಕಲಿಕೆಯಿಂದ ಬರುತ್ತದೆ.

ಈ ರೀತಿಯ ಪ್ರಯೋಗಗಳು ಇನ್ನು ಅನೇಕ ನಡೆದಿವೆ. ಅವು ಆಯಾ ಪ್ರಾಂತ, ಭಾಷೆಗಳಿಗೆ ಸೀಮಿತವಾಗಿರುವುದನ್ನು ನೋಡುತ್ತೇವೆ. ಭಾರತದ ಪರಿಸ್ಥಿತಿಯಲ್ಲಿ ಭಾರತದ ಯೋವುದೋ ಒಂದು ಭಾಷೆ ಪ್ರಾಚೀನವಾದುದು ಎಂದರೆ ಬೇರೆ ಬೇರೆ ದೇಶಗಳಲ್ಲಿ ನಡೆಸಿದ ಉದಾ: ಮೇಲೆ ಹೇಳಿದ ಈಜಿಪ್ಟ್ ದೊರೆ ಪ್ಲಮೆತಿಕಸ್‌ನ ಪ್ರದೇಶದ ಫ್ರಿಜಿಯನ್ ಭಾಷೆ ಪ್ರಯೋಗದಲ್ಲಿ ಕಂಡುಬರುತ್ತದೆ. ಇದು ಎಷ್ಟೋ ಸಲ ಆಯಾ ಪ್ರದೇಶದ ವಿದ್ವಾಂಸರನ್ನು ಅವಲಂಬಿಸಿರುತ್ತದೆ.

ವಿದ್ವಾಂಸರು ಭಾಷೆಯ ಉಗಮದ ಬಗ್ಗೆ ಬಹಳಷ್ಟು ತಲೆಕೆಡಿಸಿ ಕೊಂಡಿದ್ದಾರೆ. ಅನೇಕ ವಿದ್ವಾಂಸರು ಭಾಷೆಯ ಉಗಮದ ಬಗ್ಗೆ ತಮ್ಮದೇ ಆದ ಸಿದ್ಧಾಂತಗಳನ್ನು ಹುಟ್ಟುಹಾಕಿದ್ದಾರೆ. ಅತ್ಯಂತ ಪ್ರಾಚೀನರಲ್ಲಿ ಭಾಷೆಯನ್ನೂ ಭಗವಂತನೇ ಸೃಷ್ಟಿಸಿದ ಎನ್ನುವ ನಂಬಿಕೆ ಹೊಂದಿದವರು, ಇವರು ‘ದೈವಮೂಲ ಸಿದ್ಧಾಂತ’ದವರು ಎಂದು ಹೇಳಬಹುದು. ಭಾಷೆಯ ಉಗಮದ ಬಗ್ಗೆ ಚಿಂತನೆ ಮಾಡಿದ ಅತ್ಯಂತ ಪ್ರಾಚೀನ ಸಿದ್ಧಾಂತ ಇದು. ಭಾಷೆಯ ಉಗಮಕ್ಕೆ ಮನುಷ್ಯನ ಪ್ರಯತ್ನ ಮುಖ್ಯ ಅಲ್ಲವೇ ಅಲ್ಲ. ಅದು ದೈವದತ್ತವಾಗಿ ಮನುಷ್ಯನಿಗೆ ಬರುವಂಥದ್ದು. ದೇವರು ಗಿಡ, ಮರ,ಗಾಳಿ, ನೀರು, ಪರ್ವತಗಳನ್ನು ಹೇಗೆ ಸೃಷ್ಟಿ ಮಾಡಿದ್ದಾನೋ ಹಾಗೆ ಭಾಷೆಯನ್ನು ಸೃಷ್ಟಿ ಮಾಡಿದ್ದಾನೆ ಎನ್ನುವುದು ಇವರ ವಾದ.

ಭಾಷೆ ಪ್ರಕೃತಿದತ್ತವಾದುದು

ಭಾಷೆ ಪ್ರಕೃತಿದತ್ತವಾದುದು ಎಂದು 18 ನೇ ಶತಮಾನದ ವಿದ್ವಾಂಸರು ಹೇಳಿದರು. ರೂಸೋ ಎನ್ನುವ ವಿದ್ವಾಂಸ ಭಾಷೆ ಒಂದು ಸಾಮಾಜಿಕ ಒಪ್ಪಂದ ಎಂದು ಕರೆದ.ಇದನ್ನು ಕಾಂಡಿಲಾಕ್ ಎನ್ನುವ ವಿದ್ವಾಂಸ ಮತ್ತೊಂದು ರೀತಿಯಲ್ಲಿ ಹೇಳಿದ. ಈತನ ಪ್ರಕಾರ ಪ್ರಕೃತಿಯಲ್ಲಿ ಬಂದ ಮೊದಲ ಪುರುಷ ಮತ್ತು ಸ್ತ್ರೀ ಇವರಿಬ್ಬರೂ ಭಾಷೆಯಂತೆ ಇರುವ ಮತ್ತೊಂದು ಬಗೆಯ ಸಾಧನವನ್ನು ನಿರ್ಮಿಸಿಕೊಂಡಿರಬಹುದು ಎಂದು ಊಹಿಸಿದನು. ಈ ಇಬ್ಬರ ಸ್ವಭಾವದಲ್ಲಿರುವ ಭಾವಾವೇಶದ ಫಲವಾಗಿ ಬಂದ ಉಚ್ಚಾರಗಳು, ಶಬ್ದಗಳು, ಉತ್ಕಟ ಭಾವನೆಯ ಫಲವಾಗಿ ಹೊರಬಿದ್ದ ಉದ್ಗಾರಗಳು ಕ್ರಮೇಣ ಶಬ್ದಗಳಾಗಿ, ಈ ಶಬ್ದಗಳು ಸಂಕೇತಗಳಾಗಿ ಭಾಷೆಯಾಗಿ ರೂಪುಗೊಂಡಿರಬಹುದು ಎಂದು ಹೇಳಿದ್ದಾನೆ.

ಈ ಹಿಂದೆ ಹರ್ಡರ್ ಕೂಡ ಭಾಷೆಯ ಉಗಮದ ಬಗ್ಗೆ ಹೇಳುತ್ತಾ ಭಾಷೆ ದೈವದತ್ತವಾಗಿದೆ ಎನ್ನುವುದನ್ನು ಖಂಡಿಸುತ್ತಾನೆ ಎಂದು ಹೇಳಲಾಗಿದೆ. ಈತನ ಚಿಂತನೆ ಮುಂದುವರೆದು ಭಾಷೆಯು ದೈವದತ್ತ ಎಂಬುದನ್ನು ತಿರಸ್ಕರಿಸುತ್ತಾನೆ. ಪ್ರಶ್ನಿಸುತ್ತಾನೆ. ಭಾಷೆ ದೈವದತ್ತವಾಗಿದ್ದರೆ ಒಂದು ಸುವ್ಯವಸ್ಥಿತ ಜೋಡಣೆಯಾಗಿರುತ್ತಿತ್ತು. ಆದರೆ ಯಾವುದೇ ಭಾಷೆ ಹಾಗಿರುವುದಿಲ್ಲ. ಅವ್ಯವಸ್ಥೆಯೇ ಹೆಚ್ಚು. ಈತ ಭಾಷೆಯನ್ನು ಮನುಷ್ಯ ಕಂಡುಕೊಂಡ ಎಂದು ಹೇಳದೇ ಇದ್ದರೂ, ಆತ ಬುದ್ದಿಪೂರ್ವಕವಾಗಿ ರೂಪಿಸಿಕೊಂಡಿದ್ದಾನೆ. ಆತನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ತನ್ನಿಂದ ತಾನೇ ಉದಯವಾಗಿರಬಹುದು ಎನ್ನುವುದು ಈತನ ತರ್ಕ ಅಲ್ಲ. ಇದು ಸ್ವಲ್ಪ ಮಟ್ಟಿಗೆ ಸರಿ ಇರಬಹುದು. ಏಕೆಂದರೆ ಭಾವಾವೇಶದಿಂದ ಭಾವೋದ್ರೇಕದ ಕೂಗುಗಳು, ಶಬ್ದಗಳು ಭಾಷೆಗೆ ಮೂಲ ಎಂದು ಭಾವಿಸುವುದು ತಪ್ಪು. ಏಕೆಂದರೆ ಈ ರೀತಿಯ ಶಬ್ದಗಳು, ಕೂಗುಗಳು ಇತರ ಪ್ರಾಣಿಗಳೂ ಮಾಡುತ್ತವೆ. ಅವುಗಳು ಭಾಷೆ ಸೃಷ್ಟಿಸಿಕೊಂಡಿಲ್ಲ. ಹಾಗಾಗಿ ಭಾಷೆ ಮನುಷ್ಯನ ಮಾನಸಿಕ ಬುದ್ದಿಯಿಂದಲೇ ರೂಪುಗೊಂಡಿವೆ ಎನ್ನುವುದರಲ್ಲಿ ಅನುಮಾನವಿಲ್ಲ.

ಬಹಳ ಹಿಂದೆ ಆದಿಮಾನವ ತನ್ನ ಸುತ್ತಮುತ್ತಲು ಇರುವ ಪ್ರಾಣಿಗಳಿಂದ, ವಸ್ತುಗಳಿಂದ ಉಂಟಾಗುವ ಶಬ್ದಗಳ ಅನುಕರಣೆ ಮಾಡತೊಡಗಿದ. ಆಗ ತನ್ನ ಧ್ವನಿಗಳಿಂದ ಅನುಕರಣೆ ಮಾಡಲು ಪ್ರಯತ್ನಿಸಿದ ಫಲವೇ ಭಾಷೆ. ಇದನ್ನು ಮೊದಲಿಗೆ ಲೀಬ್ನಿಜ್ ಎನ್ನುವ ವಿದ್ವಾಂಸ ಹೇಳಿದ. ಈ ವಾದವನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ. ಕಾರಣ ಆದಿಮಾನವ ತಾನು ಕಾಡಲ್ಲಿ ಕಂಡ ಪ್ರಾಣಿಗಳ ಕೂಗಿನ ಮೇಲೆ ಅವುಗಳನ್ನು ಗುರುತಿಸುವುದು ನಡೆದಿರಬೇಕು. ಅರ್ಥ ಇಲ್ಲದ ಕೂಗಿಗೆ ಅನಂತರ ಅರ್ಥ ಬಂದಿರಬೇಕು. ಗುಡುಗು, ಕೋಳಿ, ಕಾಗೆ, ಗೂಬೆ ಮುಂತಾದ ಪದಗಳು ಈ ರೀತಿಯ ಶಬ್ದಗಳ ಧ್ವನಿಯ ಅನುಕರಣೆಯೇ ಎನ್ನಬಹುದು. ಉದಾ: ಮಕ್ಕಳು ಭಾಷೆಯನ್ನು ಕಲಿಯುವಾಗ ಗಮನಿಸಿದರೆ ಗೊತ್ತಾಗುತ್ತದೆ. ನಾಯಿಯನ್ನು ಅವು ಚಾಚಾ ಎಂದು ಕೋ ಕೋ ಕೋ ಎಂದೆಲ್ಲ ಅನುಕರಣೆ ಮಾಡುವುದು ಗಮನಕ್ಕೆ ಬರುತ್ತದೆ. ಇದು ಕಲಿಕೆಯ ಮೊದಲ ಹಂತ ಇರಬಹುದು ಎನ್ನುವ ತೀರ್ಮಾನಕ್ಕೆ ಬರಬಹುದು.

ಆದಿ ಮಾನವ ಪ್ರಾರಂಭದಲ್ಲಿ ಭಾವನೆಗಳನ್ನು ಅಭಿವ್ಯಕ್ತಿಪಡಿಸಲು ತನ್ನಷ್ಟಕ್ಕೆ ತಾನೆ ಹೊರಗೆ ಬಂದ ಉದ್ಗಾರಗಳೇ ಶಬ್ದಗಳಾಗಿ ಹೊರಬಂದು ಮುಂದೆ ಭಾಷೆಯಾಗಿ ರೂಪುಗೊಂಡಿರಬಹುದು ಎನ್ನುವುದು ಹಲವರ ವಾದ. ಇದನ್ನು ಉದ್ಗಾರವಾದ ಎಂದು ಕರೆದಿದ್ದಾರೆ. ಉದಾ: ಮನುಷ್ಯ ತನ್ನ ಭಾವನೆಗಳನ್ನು ಹೊರಹಾಕಲು ಹೋ, ಓಹೋ, ಹಾ, ಏ ಮುಂತಾದ ಉದ್ಗಾರಗಳು ಭಾಷೆಯ ಹುಟ್ಟಿಗೆ ಮೂಲ ಎನ್ನುವುದು ಒಪ್ಪಿಕೊಂಡರೂ ಇದೇ  ಅಂತಿಮ ಸತ್ಯವಲ್ಲ. ಏಕೆಂದರೆ ಒಂದು ಕರು ಹಸಿವಾದಾಗ ಅಂಬಾ ಎಂದು ಕೂಗುತ್ತದೆ. ಕೋತಿ, ಹಂದಿ ಮುಂತಾದ ಪ್ರಾಣಿಗಳು ಅನೇಕ ಸಂದರ್ಭದಲ್ಲಿ ಬೇರೆ ಬೇರೆ ಉದ್ಗಾರಗಳನ್ನು, ಶಬ್ದಗಳನ್ನು ಹೊರಹಾಕುತ್ತದೆ. ಅವುಗಳೇ ಭಾಷೆಯಾಗಿ ರೂಪುಗೊಳ್ಳಲು ಕಾರಣವಾಗಿದ್ದರೆ, ಇತರ ಪ್ರಾಣಿಗಳ ಉದ್ಗಾರಗಳೂ ಕೂಡ ಇಲ್ಲಿವರೆಗೆ ಭಾಷೆಯಾಗಿ ರೂಪುಗೊಳ್ಳಬಹುದಿತ್ತಲ್ಲ? ಆದರೆ ರೂಪುಗೊಂಡಿಲ್ಲ. ಹಾಗಾಗಿ ಉದ್ಗಾರಗಳೇ ಭಾಷೆಯ ಹುಟ್ಟಿಗೆ ಮೂಲ ಕಾರಣವಲ್ಲ ಎನ್ನುವುದು ಒಪ್ಪಿಕೊಳ್ಳಬೇಕಾಗುತ್ತದೆ.

ಜಿ. ರಿವೇಜ ಎನ್ನುವ ಮನೋವಿಜ್ಞಾನದ ವಿದ್ವಾಂಸ ಭಾಷೆ ಹೇಗೆ ಉಗಮವಾಗಿರಬಹುದು ಎಂಬುದನ್ನು ವಿವರಿಸಲು ಸಂಪರ್ಕ ಸಿದ್ಧಾಂತ’ವನ್ನು ರೂಪಿಸಿದ್ದಾನೆ. ಈತನ ಪ್ರಕಾರ ‘ಭಾಷೆ ಎಂಬುದು ಸಂಪರ್ಕದ ಫಲ. ಮೊದಲು ಕ್ರಿಯೆ, ಅನಂತರ ಸಂಜ್ಞೆ. ಇನ್ನೊಬ್ಬರೊಡನೆ ಸಂಪರ್ಕ ಬೆಳೆಸುವ ಮಾನವನ ತೀವ್ರವಾದ ಅಭಿಲಾಷೆಯ ಫಲಿತಾಂಶವೇ ಭಾಷೆ’ ಎಂದು ಹೇಳಿದ್ದಾನೆ. ಬಹಳ ಹಿಂದೆ ಸಮಾಜದ ಅಥವಾ ಸಮುದಾಯದ ವ್ಯವಸ್ಥೆ ರೂಪುಗೊಂಡಾಗ ಮನುಷ್ಯರು ತಮ್ಮ ತಮ್ಮ ನಡುವೆ ಭಾವನೆಗಳನ್ನು ಅಭಿವ್ಯಕ್ತಿಪಡಿಸಲು ಅಥವಾ ಮನದ ಇಂಗಿತವನ್ನು ಹೇಳಿಕೊಳ್ಳಲು ಬೇರೆ ಬೇರೆ ರೀತಿಯಲ್ಲಿ ಸಂವಹನವನ್ನು ಸ್ಥಾಪಿಸಿಕೊಂಡಿರಬೇಕು. ಈ ಸಂವಹನದಲ್ಲಿ ಸ್ಪಶರ್ ಮೊದಲಾದವುಗಳೊಡನೆ ತಾವು ಉಚ್ಚರಿಸುವ ಧ್ವನಿಗಳ ನೆರವನ್ನು ಕ್ರಮೇಣ ಪಡೆದಿರಬಹುದು. ಹಾಗೆ ಕಾಲಾಂತರದಲ್ಲಿ ಅದು ವಿಕಸನಗೊಂಡ ಸ್ಪರ್ಶ ವೊದಲಾದ ಸಂಹವನ ಮಾಧ್ಯಮಗಳಿಗಿಂತ ಹೆಚ್ಚು ತನ್ನಿಂದ ಉಚ್ಚಾರಣೆಗೊಂಡ ಶಬ್ದಗಳೇ ಮಾಧ್ಯಮವಾಗಿ ಬಳಸಿಕೊಂಡಿರಬೇಕು. ನಂತರ ಅದರ ವಿಕಾಸದ ರೂಪವೇ ಭಾಷೆಯಾಗಿದೆ ಎನ್ನುವುದು ರಿವೇಜನ ಸಿದ್ಧಾಂತ.

ಮ್ಯಾಕ್ಸ್‌ಮುಲ್ಲರ್ ಎನ್ನುವ ವಿದ್ವಾಂಸ ಭಾಷೆಯ ಉಗಮಕ್ಕೆ ಸಂಬಂಧಿಸಿದಂತೆ ತನ್ನದೇ ಆದ ‘ಅನುಕರಣನ ವಾದ’ವನ್ನು ಪ್ರತಿಪಾದಿಸಿದ್ದಾನೆ. ಈತನ ಪ್ರಕಾರ ಶಬ್ದ ಮತ್ತು ಅರ್ಥಕ್ಕೂ ಒಂದು ರೀತಿಯ ವಿಚಿತ್ರವಾದ ಮತ್ತು ಗೂಢವಾದ ಸಂಬಂಧವಿದೆ ಎಂದು ಈತ ಹೇಳುತ್ತಾನೆ. ಪ್ರಕೃತಿಯಲ್ಲಿ ಯಾವುದೇ ಒಂದು ವಸ್ತುವನ್ನು ಬಡಿದರೆ ತನ್ನದೇ ಆದ ಒಂದು ಶಬ್ದವನ್ನು ಉಂಟುಮಾಡುತ್ತದೆ. ಎಲ್ಲ ವಸ್ತುಗಳು ಒಂದೇ ರೀತಿಯ ಶಬ್ದ ಮಾಡುವುದಿಲ್ಲ. ಅದು ತನ್ನದೇ ಆದ ಒಂದು ಶಬ್ದ ಮಾಡುವುದು ಒಂದು ನಿಯಮ ಬದ್ಧವಾಗಿಯೇ ಇದೆ. ಉದಾ: ಕಟ್ಟಿಗೆಗೆ ಬಡಿದರೆ ಅದರಿಂದ ಉಂಟಾಗುವ ಶಬ್ದಕ್ಕೂ, ಕಲ್ಲಿಗೆ ಬಡಿದರೆ ಅದರಿಂದ ಉಂಟಾಗುವ ಶಬ್ದಕ್ಕೂ ಬಹಳ ವ್ಯತ್ಯಾಸವಿದೆ. ಆದರೆ ಅದೇ ಕಲ್ಲಿಗೆ ಅಥವಾ ಅದೇ ಕಟ್ಟಿಗೆೆಗೆ ಪುನಃ ಪುನಃ ಬಡಿದಾಗ ತನ್ನದೇ ಆದ ಪ್ರತಿ ಸಲವೂ ಅದೇ ಶಬ್ದವನ್ನು ಹೊರಡಿಸುತ್ತದೆ ಹೊರತು ಪ್ರತಿ ಬಡಿತಕ್ಕೂ ಬೇರೆ ಬೇರೆ ಶಬ್ದ ಹೊರಡಿಸಲಾರದು. ಇಂಥಹ ಬಾಹ್ಯ ಪ್ರಕೃತಿ ಮನುಷ್ಯನ ಮನಸ್ಸಿನ ಮೇಲೆ ಬೀರಿದ ಭಾವನೆಗಳ ಧ್ವನಿಗಳ ಅನುಕರಣವೇ ಭಾಷೆ ಎಂದು ಈತ ಪ್ರತಿಪಾದಿಸುತ್ತಾನೆ. ಮುಂದೆ ಈತನಿಗೇ ಸಮಾಧಾನವಾಗದೆ ಬೇರೆ ಸಿದ್ದಾಂತದೆಡೆಗೆ ವಾಲಿದ ಎಂಬುದು ತಿಳಿದು ಬರುತ್ತದೆ.

19 ನೇ ಶತಮಾನದ ಪ್ರಸಿದ್ಧ ವಿದ್ವಾಂಸ ನೋರಿ ಕೂಡ ಭಾಷೆಯ ಉಗಮದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡ ವಿದ್ವಾಂಸ. ಈತ ತನ್ನ ಸಿದ್ಧಾಂತಕ್ಕೆ ಯೋ-ಹೆ-ಹೊ ಸಿದ್ಧಾಂತ ಎಂದು ಕರೆದಿದ್ದಾನೆ. ಈತನ ವಾದದ ಪ್ರಕಾರ ಮನುಷ್ಯ ಆದಿ ಮಾನವ ತನ್ನ ಹೊಟ್ಟೆಗಾಗಿ, ದೇಹದ ಅವಶ್ಯಕತೆ ಗಳಿಗಾಗಿ ಪರಿಶ್ರಮ ಮಾಡತೊಡಗಿದಾಗ, ಮಾಂಸಖಂಡಗಳಿಗೆ ಶ್ರಮವಾದಂತಾ ದಾಗ ಉಸಿರನ್ನು ಜೋರಾಗಿ ಬಿಡುವುದು, ತೆಗೆದುಕೊಳ್ಳುವುದು ಮಾಡುವಾಗ ಆತನಿಗೆ ಶ್ರಮ ಕಡಿಮೆಯಾದ ಅನುಭವವಾಗಿದೆ. ಹೀಗೆ ತನ್ನ ಶ್ರಮ ಕಡಿಮೆ ಮಾಡಿಕೊಳ್ಳಲು ತನ್ನ ಬಾಯಿಂದ ಉಸಿರಿನ ಜೊತೆಗೆ ಕೆಲವು ಧ್ವನಿಗಳೂ ಬಂದಿರಬೇಕು. ಈ ಧ್ವನಿಗಳೇ ಮುಂದೆ ಭಾಷೆಯಾಗಿ ಬೆಳೆದಿರಬೇಕು ಎನ್ನುವುದು ಈತನ ವಾದ. ಈ ವಾದ ಕೂಡ ಸಮರ್ಥವಾಗಿ ಪ್ರತಿಪಾದನೆ ಆಗದೇ ಇರುವುದರಿಂದ ಇದನ್ನು ಕೈ ಬಿಡಲಾಯಿತು.

ಮನುಷ್ಯನ ತೊದಲು ನುಡಿಯೇ ಭಾಷೆಯ ಉಗಮಕ್ಕೆ ಮೂಲ ಎಂದು ಭಾವಿಸುವವರೂ ಇದ್ದಾರೆ. ಉದಾ: ಒಂದು ಮಗುವನ್ನು ಗಮನಿಸಿದರೆ ಅದು ಭಾಷೆಯನ್ನು ಕಲಿಯುವ ರೀತಿ ಗೊತ್ತಾಗುತ್ತದೆ. ಮೊದಲಿಗೆ ಅದು ತನ್ನ ಕಿವಿಯ ಮೇಲೆ ಬಿದ್ದ ಪದವನ್ನು ಹಲವಾರು ಬಾರಿ ಉಚ್ಚರಿಸುತ್ತದೆ. ಮತ್ತು ತನ್ನಷ್ಟಕ್ಕೆ ತಾನೆ ಬೇರೆಯವರು ಮಾತಾಡುವುದನ್ನು ಅನುಕರಣೆ ಮಾಡಿ ಕಲಿತು ಬಿಡುತ್ತದೆ. ಆದರೆ ಈ ವಾದಕ್ಕೆ ಅನೇಕ ವಿರೋಧಗಳು ಕಂಡು ಬರುತ್ತವೆ. ಮಗು ಸಾಮಾನ್ಯವಾಗಿ ದೊಡ್ಚವರು ಆಡುವ ಮಾತನ್ನು ಅನುಕರಿ ಸುತ್ತದೆಯೇ ಹೊರತು, ಅವುಗಳೇ ಸ್ವತಂತ್ರವಾಗಿ ಅನುಕರಿಸುವುದಿಲ್ಲ. ಹಾಗೇನಾದರೂ ತೊದಲಿದರೆ ಅದಕ್ಕೆ ಯಾವುದೇ ಅರ್ಥ ಇರುವುದಿಲ್ಲ. ಆದ್ದರಿಂದ ಈ ವಾದ ಕೂಡ ಅಷ್ಟೊಂದು ಸಮಂಜಸವಾಗಿ ಕಂಡುಬರುವುದಿಲ್ಲ.

ಸಂಜ್ಞೆಯಿಂದ ಭಾಷೆ

ಭಾಷೆಯ ಜೊತೆಗೆ ಆಂಗಿಕ ಸಂಜ್ಞೆಗಳನ್ನು ಮನುಷ್ಯ ಭಾಷೆಯಂತೆಯೇ ಸಹಜವಾಗಿ ಬಳಸುತ್ತಾನೆ. ಇದು ಸಾಮಾನ್ಯವಾಗಿ ಎಲ್ಲರಿಗೂ ಅರ್ಥ ವಾಗುತ್ತದೆ. ಬಾ ಎನ್ನಲು ಕೈ ಮಾಡಿ ಕರೆಯುವುದು, ಹೋಗು ಎನ್ನಲು ಕೈ ಸಂಜ್ಞೆ ಮಾಡುವುದು. ನೀರು ಕುಡಿಯಲು ಕೈಯೊಡ್ಡುವುದು, ಊಟ ಮಾಡಲು ಸಂಜ್ಞೆ ಮಾಡುವುದು ಅನೇಕ ಸಂದರ್ಭದಲ್ಲಿ ಭಾಷೆಯಷ್ಟೇ ಸಮರ್ಥವಾಗಿ ಬಳಕೆಯಾಗುವುದನ್ನು ಕಾಣುತ್ತೇವೆ. ಕೆಲವು ವಿದ್ವಾಂಸರು ಈ ಸಂಜ್ಞೆಗಳೇ ಭಾಷೆ ಹುಟ್ಟಿಕೊಳ್ಳಲು ಕಾರಣವಾದವು ಎಂತಲೂ, ಸಂಜ್ಞೆಯು ಭಾಷೆಯ ಶಾಬ್ದಿಕ ರೂಪದ ಹಿಂದಿನ ರೂಪವೆಂತಲೂ ವಾದಿಸುತ್ತಾರೆ. ಶಾಬ್ದಿಕ ಭಾಷೆ ರೂಪುಗೊಳ್ಳುವ ಮೊದಲು ಮನುಷ್ಯ ಪ್ರಾಣಿಯಂತೆಯೇ ಇದ್ದ. ಈತನಿಗೆ ಮೆದುಳಿನ ಚಿಂತನ ಶಕ್ತಿಯಿಂದ ಮೊದಲು ಸಂಜ್ಞೆಗಳನ್ನು ಕಲಿತ. ನಂತರ ತನ್ನಿಂದ ಹೊರಡುವ ಶಬ್ದಗಳನ್ನೇ ಭಾಷೆಯಾಗಿ ಮಾರ್ಪಡಿಸಿ ಕೊಂಡ ಎನ್ನುವುದು ಇವರ ವಾದ. ಪ್ರಪಂಚದ ಕೆಲವೆಡೆ ಈಗಲೂ ಭಾಷೆಗಿಂತ ಹೆಚ್ಚು ಸಂಜ್ಞೆಗಳನ್ನು ಬಳಸುವುದು ಕಂಡುಬಂದಿದೆ. ಈ ಎಲ್ಲ ಕಾರಣದಿಂದಲೇ ವುಂಡ್ತ್ ಎಂಬ ವಿದ್ವಾಂಸ ಈ ವಾದವನ್ನು ಮುಂದೆ ಇಟ್ಟ.

ಈ ಸಿದ್ಧಾಂತದ ಪ್ರಮುಖ ವಕ್ತಾರನಾದ ವುಂಡ್ತ್‌ನ ಪ್ರಕಾರ ಮನುಷ್ಯನಲ್ಲಿ ಮೊದಮೊದಲು ಚಿತ್ತಸ್ಥಿತಿಯ ಬಾಹ್ಯವಾದ ಆಂಗಿಕ ಸಂಜ್ಞೆಗಳ ಮೂಲಕ ವ್ಯಕ್ತವಾಗುತ್ತಿದ್ದು, ಕ್ರಮೇಣ ಧ್ವನಿ ಸಂಕೇತಗಳ ವ್ಯವಸ್ಥೆಯಾದ ಭಾಷೆ ಆಂಗಿಕ ಸಂಜ್ಞೆಗಳನ್ನು ಹಿಂದಕ್ಕೆ ಹಾಕಿದ್ದಿರಬಹುದು. ಈ ವಾದವನ್ನು ಕೂಡ ಸಂಪೂರ್ಣವಾಗಿ ನಂಬಲು ಆಗುವುದಿಲ್ಲ. ಎಲ್ಲ ಪ್ರಾಣಿಗಳೂ ತಮ್ಮದೇ ಆದ ಸಂಜ್ಞೆಗಳನ್ನು ಬಳಸಿಕೊಳ್ಳುತ್ತವೆ. ಸಂಜ್ಞೆಯಿಂದಲೇ ಒಂದು ಭಾಷೆ ರೂಪುಗೊಳ್ಳುವಂತಿದ್ದರೆ, ಹಲವಾರು ಪ್ರಾಣಿಗಳು ತಮ್ಮದೇ ಆದ ಶಾಬ್ದಿಕ ಭಾಷೆ ರೂಪಿಸಿಕೊಂಡಿರಬೇಕಿತ್ತು. ಆದರೆ ಇದುವರೆಗೆ ಹಾಗಾಗಿಲ್ಲ. ಆದ್ದರಿಂದ ಈ ವಾದ ಕೂಡ ಭಾಷೆಯ ಉಗಮದ ಬಗ್ಗೆ ಖಚಿತವಾಗಿ ಏನನ್ನೂ ಹೇಳುವುದಿಲ್ಲವೆಂದು ಅನೇಕ ವಿದ್ವಾಂಸರು ಇದನ್ನು ತೊಡೆದುಹಾಕಿದ್ದಾರೆ.

ಭಾಷೆಯ ಹುಟ್ಟಿನ ಬಗೆಗೆ ಜಗತ್ತಿನ ಅನೇಕ ವಿದ್ವಾಂಸರು ತಮ್ಮದೇ ಆದ ಇನ್ನೂ ಹಲವಾರು ಸಿದ್ಧಾಂತಗಳನ್ನು ರೂಪಿಸಿದ್ದಾರೆ. ತರಂಗ ಸಿದ್ಧಾಂತ, ವಂಶವೃಕ್ಷ ಸಿದ್ಧಾಂತ, ನಿರ್ಣಯ ಸಿದ್ಧಾಂತ, ಸಂಗೀತ ಸಿದ್ಧಾಂತ, ಏಕಪರಿಹಾರ ಸಿದ್ಧಾಂತ, ಸಮನ್ವಯ ಸಿದ್ಧಾಂತ ಹೀಗೆ ಸೃಷ್ಟಿಯಾದ ಅನೇಕ ಸಿದ್ಧಾಂತಗಳು ತಮ್ಮದೇ ಆದ ವ್ಯಾಖ್ಯಾನವನ್ನು ನೀಡುತ್ತವೆ. ಆದರೆ ಈ ಎಲ್ಲ ಸಿದ್ಧಾಂತಗಳು ಇದುವೆರೆಗೆ ಭಾಷೆಯ ಉಗಮದ ಬಗ್ಗೆ ಖಚಿತವಾಗಿ ಭಾಷೆ ಹೀಗೇ ಹುಟ್ಟಿತು ಎಂದು ಹೇಳಲಾರವು. ಆದರೂ ಈ ವಾದಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲು ಸಾಧ್ಯವಿಲ್ಲ. ಏಕೆಂದರೆ ಈ ಸಿದ್ಧಾಂತಗಳೂ ಕೂಡ ಅಲ್ಪಸ್ವಲ್ಪ ಸತ್ಯವನ್ನು ಹೇಳುತ್ತವೆ. ಈ ಬಗೆಯ ಚಿಂತನೆ ಈಗಲೂ ನಡೆಯುತ್ತಲೇ ಇದೆ.

ಇತ್ತೀಚಿನ ಚಿಂತನೆಯ ಪ್ರಕಾರ ಭಾಷೆಯ ಉಗಮಕ್ಕೆ ವೈಜ್ಞಾನಿಕವಾಗಿ ಕಾರಣಗಳನ್ನು ಹೇಳಲಾಗುತ್ತದೆ. ಈ ವಾದ ಹಿಂದಿನ ಎಲ್ಲ ವಾದಗಳಿಗಿಂತಲೂ ಹೆಚ್ಚು ಸಮಂಜಸವಾಗಿದೆ ಎಂದು ತಿಳಿದು ಬಂದಿದೆ. ಮನುಷ್ಯನ ದೇಹರಚನೆಯೇ ಆತನ ಭಾಷಾ ಸೃಷ್ಟಿಗೆ ಕಾರಣ ಎಂಬುದು ಇವರ ವಾದ. ಮೆದುಳಿನ ಒಂದು ಭಾಗದಲ್ಲಿರುವ ಭಾಷಾ ಸೃಷ್ಟಿಗೆ, ಮಾತನಾಡಲು ಪ್ರೇರೇಪಿಸುವ ಸೆಲ್ಸ್‌ಗಳು ಭಾಷೆಯನ್ನು ಹುಟ್ಟುಹಾಕಲು ಕಾರಣವಾಗಿದೆ ಎನ್ನುವುದು ಇವರ ವಾದದ ಮುಖ್ಯ ಸಾರಾಂಶ.

ಒಂದು ಮಗುವಿನ ಮೆದಳಿನಲ್ಲಿ ಅದರ  ಹುಟ್ಟಿನಿಂದಲೇ ಒಂದು ಸಾರ್ವತ್ರಿಕ ವ್ಯಾಕರಣ ಹೊಂದಿರುತ್ತದೆ. ಈ ಸಾರ್ವತ್ರಿಕ ವ್ಯಾಕರಣ ಹೇಗಿರುತ್ತದೆ ಎಂದರೆ ಜಗತ್ತಿನ ಯಾವುದೇ ಭಾಷೆಗೂ ಈ ವ್ಯಾಕರಣ ಮಾರ್ಪಡಬಲ್ಲದು. ಜಗತ್ತಿನ ಯಾವುದೇ ಭಾಷೆಗೂ ಈ ವ್ಯಾಕರಣ ಹೊಂದಿಕೊಳ್ಳುತ್ತದೆ. ಆದ್ದರಿಂದಲೇ ನಿರ್ದಿಷ್ಟ ವಯಸ್ಸಿನ ಮಗುವಿಗೆ ಜಗತ್ತಿನ ಯಾವುದೇ ಭಾಷೆ ಕಲಿಸಿದರೂ ಆ ಮಗು ಅಲ್ಲಿನ ಮಕ್ಕಳಂತೆ ಸಹಜವಾಗಿಯೇ ಕಲಿಯುತ್ತದೆ. ಉದಾ: ಜಪಾನಿನ ಅಥವಾ ಚೀನಾದ ಭಾಷೆಯ ಉಚ್ಚಾರಣೆ ಮತ್ತು ವ್ಯಾಕರಣ ಕನ್ನಡಕ್ಕೆ ಬಹಳ ದೂರ. ಅಲ್ಲಿಯ ಭಾಷೆಯ ಅನೇಕ ಶಬ್ದಗಳು ನಮಗೆ ಉಚ್ಚರಿಸಲು ಬರುವುದೇ ಇಲ್ಲ. ಆದರೆ ಕರ್ನಾಟಕದಲ್ಲಿ ಹುಟ್ಟಿದ ಮಗು ನಿರ್ದಿಷ್ಟ ವಯಸ್ಸಿನಲ್ಲಿ ಆ ದೇಶದಲ್ಲಿ ಬೆಳೆಸಿದರೆ ಆ ಮಗು ಆ ಪರದೇಶದ ಭಾಷೆಯನ್ನು ಬಹಳ ಸಹಜವಾಗಿ ಕಲಿಯುತ್ತದೆ. ಜನ್ಮಭೂಮಿಯ ಭಾಷೆಯಾದ ಕನ್ನಡವೇ ಅದಕ್ಕೆ ಪರಭಾಷೆ ಯಾಗಿ ಪರಿಣಮಿಸುತ್ತದೆ. ಇದನ್ನೆಲ್ಲ ವಿವರಿಸಲು ಮುಖ್ಯವಾದ ಕಾರಣ ಇಷ್ಟೆ, ಒಂದು ಮಗುವಿನ ದೇಹರಚನೆ ಅಥವಾ ಮೆದುಳಿನ ರಚನೆಯಲ್ಲಿಯೇ ಭಾಷೆಯ ಲಕ್ಷಣಗಳು ಇರುವುದು ವೈಜ್ಞಾನಿಕವಾಗಿ ಸಾಬೀತಾಗಿರುವುದರಿಂದ ಭಾಷೆ ಮೆದುಳಿನಲ್ಲಿರುವ ವಿಶೇಷ ಸೆಲ್ಸ್‌ಗಳಿಂದಲೇ ಭಾಷೆ ಸೃಷ್ಟಿಯಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮನುಷ್ಯ ಮಂಗನಿಂದ ಮಾನವನವರೆಗೆ ಅನೇಕ ಹಂತಗಳನ್ನು ತಲುಪಿದ್ದಾನೆ. ಹಾಗೆಯೇ ಆತನ ಭಾಷಾ ಬೆಳವಣಿಗೆಯಲ್ಲಿ ಈ ಅವಸ್ಥಾಂತರಗಳನ್ನು ನೋಡಬಹುದಾಗಿದೆ.

ಪ್ರಪಂಚದಲ್ಲಿ ಮೊದಲು ಒಂದು ಭಾಷೆಯನ್ನರಿತು ಕಾಲಾಂತರದಲ್ಲಿ ಇದರಿಂದ ಹಲವಾರು, ನೂರಾರು ಭಾಷೆಗಳು ಹೇಗೆ ರೂಪುಗೊಂಡಿವೆ ಎನ್ನುವ ವಾದ. ಇದನ್ನು ಚಿತ್ರದ ಮೂಲಕ ಈ ರೀತಿ ತೋರಿಸಬಹುದು.

ಮೇಲಿನ ಚಿತ್ರದಲ್ಲಿ ಉದಾಹರಣೆಗೆ L1 ರಿಂದ L11 ರವರೆಗಿನ ಎಲ್ಲ ಭಾಷೆಗಳಿಗೂ L ಭಾಷೆಯೇ ಮೂಲವಾಗಿದೆ. L ಭಾಷೆಯಿಂದಲೇ ಹುಟ್ಟಿ ಬೇರೆ ಬೇರೆ ಅವಸ್ಥಾಂತರಗಳನ್ನು ಪಡೆದಿದೆ. ಅಥವಾ ಬೇರೆ ಬೇರೆ ಭಾಷೆಗಳನ್ನೇ ಸೃಷ್ಟಿ ಮಾಡಿಕೊಂಡಿದೆ. ಅಂದರೆ ಇವತ್ತು ಮೂಲಭಾಷೆ ಮರೆತು ಹೋಗಿರಬಹುದು. ಅದರಿಂದ ಹುಟ್ಟಿದ ಭಾಷೆಯಿಂದ ಇನ್ನೊಂದು ಭಾಷೆಯೇ ರೂಪು ತಳೆದಿರಬಹುದು. ಆದರೆ ಅವುಗಳಿಗೆಲ್ಲ ಒಂದೇ ಒಂದು ಭಾಷೆ ಮೂಲ ಭಾಷೆಯಾಗಿರುತ್ತದೆ. ಉದಾ: ಕನ್ನಡ ಮೂಲ ದ್ರಾವಿಡ ಭಾಷೆಯಿಂದ ಹುಟ್ಟಿದೆ. ಕನ್ನಡ ಭಾಷೆಯಿಂದ ಯಾವುದೇ ಭಾಷೆ  ಹುಟ್ಟಿದರೂ ಇದಕ್ಕೆ ಮೂಲವಾದ ತಾಯಿಭಾಷೆ ಮೂಲ ದ್ರಾವಿಡಭಾಷೆ ಇದ್ದಂತೆ.

ಎರಡನೆಯ ಜಗತ್ತಿನ ಎಲ್ಲ ಭಾಷೆಗಳು ಮೂಲ ಭಾಷೆಯೊಂದರಿಂದಲೇ ಹುಟ್ಟಿವೆ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ. ಏಕೆಂದರೆ ಎಲ್ಲ ಭಾಷೆಗಳಿಗೆ ಮೂಲ ಒಂದೇ ಭಾಷೆಯಾಗಿದ್ದರೆ ಅವುಗಳ ರಚನೆಯಲ್ಲಿಯೇ ಅದಕ್ಕೆ ಅನೇಕ ಕುರುಹುಗಳು ಸಿಗುತ್ತವೆ. ಉದಾಹರಣೆಗೆ ಕನ್ನಡ, ತಮಿಳು, ಮಲಯಾಳಂ ಭಾಷೆಗಳು, ದಕ್ಷಿಣ ದ್ರಾವಿಡ ಭಾಷೆಯಿಂದ ರೂಪು ಗೊಂಡಿರುವುದರಿಂದ ಈ ಎಲ್ಲ ಭಾಷೆಗಳಲ್ಲಿ ಮೂಲ ಭಾಷೆಯ ಲಕ್ಷಣಗಳನ್ನು ಕಾಣುತ್ತೇವೆ. ಒಂದೇ ಭಾಷೆಯಿಂದ ಜಗತ್ತಿನ ಎಲ್ಲ ಭಾಷೆಗಳು ಹುಟ್ಟಿ ಕೊಂಡಿದ್ದರೆ, ಈ ರೀತಿಯ ಸಾದೃಶ್ಯಗಳು ಕಂಡುಬರುತ್ತಿದ್ದವು. ಆದರೆ ಜಗತ್ತಿನ ಅನೇಕ ಭಾಷೆಗಳು ಬೇರೆ ಬೇರೆ ಗುಂಪುಗಳಿಗೆ ಸೇರುತ್ತವೆ. ಹಾಗಾಗಿ ಕೆಲವು ಭಾಷೆಗಳಿಂದ ಹಲವಾರು ಭಾಷೆಗಳು ರೂಪುಗೊಂಡಿವೆ ಎನ್ನಬಹುದು. ಇದನ್ನು ಚಿತ್ರದ ಮೂಲಕ ಈ ರೀತಿ ತೋರಿಸಬಹುದು.

ಕನ್ನಡ ಭಾಷೆಯ ಉಗಮ

ಭಾಷೆಯ ಉಗಮದ ಬಗ್ಗೆ ಇದುವರೆಗೂ ಖಚಿತವಾಗಿ ಯಾರಿಂದಲೂ ಹೇಳಲು ಆಗಿಲ್ಲ. ಅನೇಕ ವಿದ್ವಾಂಸರು ಪ್ರಯತ್ನಪಟ್ಟರೂ ಅವರೆಲ್ಲರ ವಾದಗಳು ತಮ್ಮದೇ ಆದ ಮಿತಿಗಳನ್ನು ಹೊಂದಿವೆ. ಭಾಷೆ ಉಗಮದ ಬಗ್ಗೆ ಸಮಸ್ಯೆಗಳನ್ನು ಬಿಡಿಸುತ್ತ ಹೋದಷ್ಟು ಅದು ಜಟಿಲವಾಗುತ್ತಲೇ ಹೋಗುತ್ತದೆ. ಆದರೆ ಕನ್ನಡ ಭಾಷೆಯ ಉಗಮದ ಬಗ್ಗೆ ಸಂಪೂರ್ಣವಾಗಿ ಹೀಗೇ ಉಗಮ ವಾಯಿತು ಎಂದು ಹೇಳಲಾಗದಿದ್ದರೂ ಆ ಸತ್ಯದ ಹತ್ತಿರಕ್ಕೆ ಹೋಗಬಹುದು. ಕನ್ನಡ ಭಾಷೆಯ ಚರಿತ್ರೆಯನ್ನು ಕೆದಕುತ್ತ ಹೋದರೆ ಈ ಭಾಷೆ ಎಷ್ಟು ಹಳೆಯದು ಎನ್ನಲು ಕೆಲವು ಕುರುಹುಗಳು ದೊರೆಯುತ್ತವೆ. ಏಕೆಂದರೆ ಕನ್ನಡ ಭಾಷೆಗೆ ಒಂದು ಮೂಲ ಭಾಷೆಯೊಂದಿದೆ. ಕ್ರಿ.ಶ.ಪೂ. ಸುಮಾರು 2500 ವರ್ಷಗಳಿಗಿಂತಲೂ ಹಿಂದೆ ಬಳಕೆಯಲ್ಲಿ ಇದ್ದಿರಬಹುದು ಎಂದು ನಂಬಲಾದ ಮೂಲ ದ್ರಾವಿಡ ಭಾಷೆಯಿಂದ ಕಾಲಾನುಗತಿಯಲ್ಲಿ ಬೇರೆ ಬೇರೆ ಭಾಷೆಗಳು ಹುಟ್ಟಿಕೊಂಡವು ಎನ್ನುವುದನ್ನು ವಿದ್ವಾಂಸರು ಈಗಾಗಲೇ ವಿಶದಪಡಿಸಿದ್ದಾರೆ. ಅವುಗಳನ್ನು ಈ ರೀತಿ ವಿಂಗಡಿಸಬಹುದು. 1. ಉತ್ತರ ದ್ರಾವಿಡ, 2. ಮಧ್ಯ ದ್ರಾವಿಡ, 3. ದಕ್ಷಿಣ ಮಧ್ಯ ದ್ರಾವಿಡ, 4. ದಕ್ಷಿಣ ದ್ರಾವಿಡ ಭಾಷೆಗಳು. ಇವುಗಳಲ್ಲಿ ದಕ್ಷಿಣ ದ್ರಾವಿಡ ಭಾಷಾ ಗುಂಪಿಗೆ ಕನ್ನಡ ಸೇರುತ್ತದೆ. ಮೂಲ ದ್ರಾವಿಡ ಶಾಖೆಯಿಂದ ಕನ್ನಡ ಭಾಷೆ ಕ್ರಿ.ಪೂ. 5 ರಿಂದ 3ನೇ ಶತಮಾನದ ವೇಳೆಗೆ ತನ್ನಷ್ಟಕ್ಕೆ ಸ್ವತಂತ್ರ ಭಾಷೆಯಾಗಿ ರೂಪು ತಳೆದಿರಬಹುದು ಎಂದು ವಿದ್ವಾಂಸರು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಭಾಷೆಯ ಪ್ರಾಚೀನತೆಗೆ ಅನೇಕ ದಾಖಲೆಗಳನ್ನು ವಿದ್ವಾಂಸರು ಕಂಡುಕೊಂಡಿದ್ದಾರೆ. ಇದುವರೆಗೆ ಲಿಖಿತ ರೂಪದಲ್ಲಿ ಕನ್ನಡ ಭಾಷೆಯ ಬಗ್ಗೆ ದಾಖಲೆ ಸಿಗುವುದು ಹಲ್ಮಿಡಿ ಶಾಸನದಲ್ಲಿ. ಇದರ ಕಾಲ ಕ್ರಿ.ಶ. 450. ಸಾಹಿತ್ಯ ಕೃತಿಗಳಲ್ಲಿ ‘ಕವಿರಾಜ ಮಾರ್ಗ’ವೇ ಮೊದಲು. ಈ ಕೃತಿ ರಚನೆಯಾದ ಕಾಲ ಕ್ರಿ.ಶ. 884-880. ಆದರೆ ಕನ್ನಡ ಭಾಷೆ, ಕನ್ನಡ ನೆಲ, ಕನ್ನಡ ಜನದ ಬಗ್ಗೆ ಬೇರೆ ಬೇರೆ ದಾಖಲೆಗಳ ಮೂಲಕ ಇನ್ನೂ ಬಹಳ ಹಿಂದೆ ಹೋಗಲು ಸಾಧ್ಯವಿದೆ. ತಮಿಳಿನ ಶಿಲಪ್ಪದಿಕಾರಂ, ಕ್ರಿ.ಶ.2ನೇ ಶತಮಾನದ ಗ್ರೀಕಿನ ಒಂದು ಪ್ರಹಸನದಲ್ಲಿ ದೊರೆಯುವ ಕನ್ನಡ ಪದಗಳ ಬಗ್ಗೆ, ಕನ್ನಡದ ಕೆಲವು ಸ್ಥಳಗಳ ಬಗ್ಗೆ ದಾಖಲೆಗಳು ಸಿಗುವುದರಿಂದ ಕನ್ನಡ ಭಾಷೆ ಇದಕ್ಕಿಂತ ಹಳೆಯದು ಎಂದು ಹೇಳಿದ್ದಾರೆ. ಹೀಗೆ ಇದರ ಹುಟ್ಟನ್ನು ಕ್ರಿ.ಶ.ಪೂ. 4 ರಿಂದ 3ನೇ ಶತಮಾನಕ್ಕೆ ತೆಗೆದುಕೊಂಡು ಹೋಗುತ್ತಾರೆ.

ಕನ್ನಡ ಭಾಷೆಯ ಹುಟ್ಟಿನ ಇತಿಹಾಸದ ಬಗೆಗೆ ಸಾಕಷ್ಟು ಆಧಾರಗಳನ್ನು ಹುಡುಕಿ ಅದರ ಚರಿತ್ರೆ ಇನ್ನೂ ಹಿಂದಕ್ಕೆ ತೆಗೆದುಕೊಂಡು ಹೋಗಬಹುದು. ಆದರೂ ಕನ್ನಡ ಭಾಷೆ ಇಂಥ ದಿವಸದಿಂದ, ಇದೇ ರೀತಿ ಉಗಮವಾಯಿತು ಎಂದು ಹೇಳಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಅನೇಕ ವಿದ್ವಾಂಸರು ಅನೇಕ ಆಧಾರಗಳ ಹಿನ್ನೆಲೆಯಲ್ಲಿ ಹೀಗೆ ರೂಪು ತಳೆದಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದು ಭಾಷೆ ಇದ್ದಕ್ಕಿದ್ದಂತೆ ಧುತ್ತೆಂದು ಉದ್ಭವಿಸುವುದಿಲ್ಲ. ಎಲ್ಲೋ ಪ್ರಾರಂಭವಾಗುತ್ತದೆ. ಬೆಳೆಯುತ್ತ ಹೋಗುತ್ತದೆ. ಬದಲಾಗುತ್ತ ಹೋಗುತ್ತದೆ. ಕನ್ನಡ ಭಾಷೆ ಕೂಡ ಹೀಗೆ ಎಂದೋ ನಿಧಾನವಾಗಿ ಜನ್ಮ ತಾಳಿದೆ. ಬೆಳೆದು ಬಂದಿದೆ. ಬೆಳೆಯುತ್ತಲೇ ಇದೆ. ಬದಲಾಗುತ್ತಲೇ ಇರುತ್ತದೆ.