ನಮ್ಮ ನಿತ್ಯದ ವ್ಯವಹಾರಗಳಲ್ಲಿ ಭಾಷೆಯನ್ನು ಎಷ್ಟೊಂದು ಬಳಸುತ್ತೇ ವೆಂದರೆ ಯಾರಾದರೂ ಸುಮ್ಮನೆ ‘ನೀವೇಕೆ ಭಾಷೆಯನ್ನು ಬಳಸುವಿರೆಂದು’ ಕೇಳಿದರೆ ಒಂದೋ ತಬ್ಬಿಬ್ಬಾಗುತ್ತೇವೆ; ಇಲ್ಲವೇ ಪ್ರಶ್ನೆಯಲ್ಲಿ ಹುರುಳಿಲ್ಲವೆಂದು ತಿಳಿಯುತ್ತೇವೆ. ಭಾಷೆ ನಮ್ಮೊಡನೆ ಎಷ್ಟು ಸಹಜವಾಗಿ ಬೆರೆತಿರುವುದೆಂದರೆ ಅದನ್ನು ಕುರಿತು ಯೋಚಿಸುವ ಅವಕಾಶಗಳೇ ನಮಗೆ ಒದಗುವುದಿಲ್ಲ. ಎಷ್ಟೊಂದು ಬಗೆಯ ಬಳಕೆಗಳು ಭಾಷೆಗಿವೆಯೆಂದು ಲೆಕ್ಕ ಹಾಕಲು ಹೊರಟಾಗಲೂ ಗೊಂದಲಗಳಾಗುತ್ತವೆ. ಗೊಂದಲಕ್ಕೆ ಅಸ್ಪಷ್ಟತೆ ಕಾರಣವಲ್ಲ; ಭಾಷೆಗೆ ಇರುವ ಬಳಕೆಯ ಸಾಧ್ಯತೆಗಳು ಪಟ್ಟಿಮಾಡಿದಷ್ಟೂ ಉಳಿಯುತ್ತವೆ. ನಾವು ಭಾಷೆಯನ್ನು ಬಳಸುವಾಗ ನಮ್ಮಲ್ಲಿನ ಭಾಷಾ ಕೌಶಲಗಳು ಪ್ರಯುಕ್ತವಾಗುತ್ತವೆ. ಈ ಕೌಶಲಗಳು ಅಂಗಾಂಗ ಚಲನೆಯಷ್ಟೇ ಸಹಜ ಮಾತ್ರವಲ್ಲ ಅತ್ಯಂತ ಜಟಿಲವೂ ಆಗಿರುತ್ತವೆ. ಆದರೆ ಈ ಜಟಿಲ ಕೌಶಲಗಳೂ ನಮ್ಮ ಭಾಷಿಕ ಸಾಮರ್ಥ್ಯದಲ್ಲಿ ಸೇರಿಕೊಂಡಿರುತ್ತವೆ. ಈ ಕೌಶಲಗಳು ಇಲ್ಲದಿದ್ದಾಗ ಅಥವಾ ಇದ್ದರೂ ಬಳಸಲು ಸಾಧ್ಯವಾಗದಿದ್ದಾಗ ಮಾತ್ರ ಅವುಗಳ ಮಹತ್ವ ನಮಗೆ ತಿಳಿಯುತ್ತದೆ.

ಭಾಷೆಯಿರುವುದು ಸಾಮಾಜಿಕ ಸಂಪರ್ಕಕ್ಕೆ, ಅಭಿಪ್ರಾಯ ಸಂವಹನಕ್ಕೆ ಎಂದು ಎಲ್ಲರೂ ಸಾಮಾನ್ಯವಾಗಿ ಒಪ್ಪುತ್ತಾರೆ. ನಾವು ಇನ್ನೊಬ್ಬರೊಡನೆ ಅಭಿಪ್ರಾಯ ಸಂವಹನ ಮಾಡಲು ಮಾತ್ರವಲ್ಲ, ಆ ಇನ್ನೊಬ್ಬರ ಅಭಿಪ್ರಾಯ ನಮಗೆ ಸಂವಹನಗೊಳ್ಳಲು ಭಾಷೆ ಅವಶ್ಯ. ಸುದ್ದಿಗಳನ್ನು ಹರಡಲು, ಯೋಗಕ್ಷೇಮ ವಿಚಾರಿಸಲು, ಮಾಹಿತಿಯನ್ನು ಪಡೆಯಲು, ಸರಳವಾದ ವ್ಯವಹಾರಗಳನ್ನು ನಡೆಸಲು ಹೀಗೆ ಭಾಷೆಯನ್ನು ಬಳಸುತ್ತೇವೆ. ಕುವೆಂಪು ಅವರು ಬಳಸಿದ ಮಾತಿನಲ್ಲಿ ಹೇಳುವುದಾದರೆ ಭಾಷೆ ಇಂಥ ಕಡೆಗಳಲ್ಲಿ ‘ಲೋಕೋಪಯೋಗಿ’. ಇಲ್ಲಿ ಭಾಷೆಗೆ ವಾಚ್ಯಾರ್ಥ ಪ್ರತೀತಿಯೇ ಮುಖ್ಯ ವಾಗಿರುತ್ತದೆ. ಹಾಗೂ ಕೇಳಿದವರಿಗೆ, ಓದಿದವರಿಗೆ ನಿರ್ದಿಷ್ಟ ಸಂಗತಿಯನ್ನು ತಿಳಿಸುವ ಗುರಿ ಈ ಭಾಷೆಗೆ ಇರುತ್ತದೆ.

ಆದರೆ ಭಾಷೆಯನ್ನು ನಾವು ಎಷ್ಟು ವೈವಿಧ್ಯಮಯ ನೆಲೆಗಳಲ್ಲಿ ಬಳಸುತ್ತೇವೆಯೆಂದರೆ ಅವುಗಳಲ್ಲಿ ‘ಲೋಕೋಪಯೋಗಿ’ ಬಳಕೆಗೆ ಸ್ಥಾನ ಅತಿ ಕಡಿಮೆ. ಆದ್ದರಿಂದ ಅಭಿಪ್ರಾಯ ಸಂವಹನಕ್ಕೆ, ಸಾಮಾಜಿಕ ಸಂಪರ್ಕಕ್ಕೆ ಭಾಷೆಯನ್ನು ಬಳಸುತ್ತೇವೆನ್ನುವುದು ಸುಳ್ಳಲ್ಲವಾದರೂ ಅದಷ್ಟೇ ಭಾಷೆಯ ಕೆಲಸವೆನ್ನಲು ಬಾರದು.

ಭಾವೋಪಯೋಗಿ

ನೀವು ರಸ್ತೆಯಲ್ಲಿ ನಡೆಯುತ್ತಿರುತ್ತೀರಿ. ಚಾಚಿಕೊಂಡಿರುವ ಚೂಪಾದ ಕಲ್ಲನ್ನು ಎಡವಿ ಬೆರಳಿಗೆ ನೋವಾಗುತ್ತದೆ. ಜತೆಗೆ ಚಪ್ಪಲಿ ಕಿತ್ತು ಹೋಗುತ್ತದೆ. ಬೇಸರದಿಂದ ಕಲ್ಲಿಗೋ ಚಪ್ಪಲಿಗೋ ಹಿಡಿಶಾಪ ಹಾಕುತ್ತೀರಿ. ಇಲ್ಲಿ ಭಾಷೆಯ ಕೆಲಸವೇನು ‘ಅಭಿಪ್ರಾಯ ಸಂವಹನ’ ಎನ್ನುವಂತಿಲ್ಲ. ಏಕೆಂದರೆ ಯಾರಿಗೆ ಅಭಿಪ್ರಾಯವನ್ನು ಸಂವಹನಗೊಳಿಸಲಾಗುತ್ತಿದೆ? ಅಲ್ಲಿ ಯಾರೂ ಇಲ್ಲ.

ಹೀಗೆ ಮೇಲೆ ಹೇಳಿದಂಥ ಸಂದರ್ಭಗಳಲ್ಲಿ ಮಾನಸಿಕ ಒತ್ತಡದಿಂದ ಬಿಡುಗಡೆ ಪಡೆಯಲು ನಾವು ಭಾಷೆಯ ನೆರವನ್ನು ಪಡೆಯುತ್ತಿರುತ್ತೇವೆ. ಕೋಪ, ದುಃಖ, ಉದ್ವೇಗ, ಭಯ ಮುಂತಾದ ಯಾವುದೇ ಭಾವದ ತೀವ್ರತೆಗೆ ಒಳಗಾದಾಗ ಒಂದಿಲ್ಲೊಂದು ಬಗೆಯಲ್ಲಿ ಭಾಷೆಯ ಬಳಕೆಯ ಮೂಲಕ ಆಯಾ ಭಾವದ ತೀವ್ರತೆಯನ್ನು ತೋರಿಸುತ್ತೇವೆ; ಆ ಭಾವದಿಂದ ಪರೋಕ್ಷವಾಗಿ ಬಿಡುಗಡೆಯನ್ನೂ ಪಡೆಯುತ್ತೇವೆ. ಇಂಥ ಸಂದರ್ಭದಲ್ಲಿ ಭಾಷೆ ‘ಭಾವೋಪಯೋಗಿ’ಯಾಗಿರುತ್ತದೆ. ಭಾಷೆಯನ್ನು ಹೀಗೆ ಭಾವೋಪಯೋಗಿ ನೆಲೆಯಲ್ಲಿ ಬಳಸುವಾಗ ನಾವು ಒಂಟಿಯಾಗಿರಬಹುದು; ಇಲ್ಲವೇ ಜತೆಯಲ್ಲಿ ಯಾರಾದರೂ ಇರಬಹುದು. ಗೊಣಗಾಟ, ಕಿರುಚಾಟ, ಬೈಗುಳಗಳ ರೀತಿಯಲ್ಲೇ ಉತ್ಸಾಹ, ಆನಂದಗಳನ್ನು ಭಾವೋಪಯೋಗಿ ಭಾಷೆಯಲ್ಲಿ ತೋರಿಸಬಹುದಾಗಿದೆ.

ಭಾಷೆ ಭಾವೋಪಯೋಗಿಯಾದಾಗ ಉಚ್ಚರಿಸುವವರ ಭಾವಸ್ಥಿತಿಯನ್ನು ಸೂಚಿಸುತ್ತಿರುವಂತೆ ಕೆಲವೊಮ್ಮೆ ಕೇಳುವವರಲ್ಲೂ ನಿರ್ದಿಷ್ಟ ಭಾವೋದ್ದೀಪಕ್ಕೆ ಕಾರಣವಾಗುವುದು ಸಾಧ್ಯ. ಇಂಥಲ್ಲಿ ಅಭಿಪ್ರಾಯ ಸಂವಹನದ ಬದಲು ಭಾವಸಂಹವನ ನಡೆದಿರುತ್ತದೆ. ಸಾಮಾನ್ಯ ವ್ಯವಹಾರದ ಕೆಲವು ಸಂದರ್ಭ ಗಳಿಂದ ಹಿಡಿದು ಭಾಷೆಯಲ್ಲಿ ರಚನೆಗೊಳ್ಳುವ ಕಾವ್ಯದವರೆಗೆ ಈ ಬಗೆಯ ಸಂವಹನದ ವ್ಯಾಪ್ತಿ ಹರಡಿದೆ.

ಭಾವೋಪಯೋಗಿ ಭಾಷೆಯು ಅಯ್ಯೋ!, ಥತ್, ಛೇ, ಥೂ ಮುಂತಾದ ಪದಗಳ ರೂಪದಲ್ಲಿರಬಹುದು. ಮಾತಿನ ನಡುವೆ ಬರುವ ಹಾಂ, ಊಂ ಮುಂತಾದ ಧ್ವನಿಗಳಾಗಿರಬಹುದು. ಮಾತಾಡುವ ವ್ಯಕ್ತಿಯ ಭಾವಸ್ಥಿತಿಯನ್ನು ಸೂಚಿಸುವ ಧ್ವನಿಯ ಏರಿಳಿತದ ರೂಪದಲ್ಲಿ ವ್ಯಕ್ತವಾಗಬಹುದು. ಇವು ದಿನವೂ ಎದುರಾಗುವ ಸಂದರ್ಭಗಳು. ಇವಲ್ಲದೆ ಭಾಷೆಯ ಕಲಾತ್ಮಕ ಉಪಯೋಗದ ವಲಯವಾದ ಕಾವ್ಯಗಳಲ್ಲಿ ಭಾವೋಪಯೋಗಿ ನೆಲೆಯ ಸೂಕ್ಷ್ಮ ಹಾಗೂ ಸಂಕೀರ್ಣ ಸ್ವರೂಪಗಳು ಕಾಣಸಿಗುತ್ತವೆ. ಆದರೆ ಸಾಮಾನ್ಯವಾಗಿ ಕಾವ್ಯಗಳಲ್ಲಿ ವಿಷಯ ಸಂವಹನಕ್ಕೆ ಅವಕಾಶಗಳಿರುತ್ತವೆ. ಭಾವ ಮತ್ತು ವಿಷಯಗಳಲ್ಲಿ ಯಾವುದು ಪ್ರಧಾನವೆಂಬ ಪ್ರಶ್ನೆ ಬಿಡಿಸಲಾಗದೆ ಹಾಗೇ ಉಳಿಯುತ್ತದೆ.

ಸಾಮಾಜಿಕ ಕಲೆ

ಪರಿಚಿತರು ಎದುರು ಬಂದರೆ ‘ನಮಸ್ಕಾರ ಚೆನ್ನಾಗಿದ್ದೀರಾ?’ ಎನ್ನುತ್ತೇವೆ. ಅಥವಾ ಬೀಳ್ಕೊಡುವಾಗ ‘ಹೋಗಿ ಬರ‌್ತೀರಾ?’ ಎನ್ನುತ್ತೇವೆ. ಅಶುಭವೆನಿಸಿದ ಮಾತು ಬಂದಾಗ ‘ಬಿಡ್ತು’ ಎನ್ನುತ್ತೇವೆ. ಇಂಥ ನೂರಾರು ಸಂದರ್ಭಗಳಲ್ಲಿ ನಾವು ಭಾಗಿಗಳಾಗಿದ್ದೇವೆ. ಇಲ್ಲಿ ಭಾಷೆಯ ಉಪಯೋಗದ ನೆಲೆ ಯಾವುದು? ಕೇವಲ ಆರೋಗ್ಯದ ಮಾಹಿತಿಯನ್ನು ಪಡೆಯಲು ಮೊದಲ ಪ್ರಶ್ನೆಯನ್ನು ನಾವು ಕೇಳುವುದಿಲ್ಲ. ಒಂದು ಸಾಮಾಜಿಕ ಸಂಬಂಧವನ್ನು ನಿಶ್ಚಿತಗೊಳಿಸಿ ಕೊಳ್ಳಲು ಇಂಥ ಮಾತುಗಳನ್ನು ಬಳಸುತ್ತಿರುತ್ತೇವೆ. ಆ ಸಂಬಂಧಕ್ಕೆ ಧಕ್ಕೆಯೊದಗಿದಾಗ ಸಾಮಾನ್ಯವಾಗಿ ಈ ಬಗೆಯ ಮಾತುಕತೆಗಳೂ ಗೈರು ಹಾಜರಾಗುತ್ತವೆ. ಚಿಕ್ಕಮಕ್ಕಳು ಮುನಿಸಿಕೊಂಡಾಗ ಟೂ ಬಿಡುತ್ತಾರೆ. ಅದರರ್ಥ ಮಾತಾಡುವುದನ್ನು ನಿಲ್ಲಿಸುವುದು.

ವ್ಯಕ್ತಿಗಳ ನಡುವೆ ಇರುವ ಸಾಮಾಜಿಕ ಸಂಬಂಧದ ಸ್ವರೂಪ, ಒಂದು ಸಾಮಾಜಿಕ ಸಂದರ್ಭದಲ್ಲಿ ಭಾಗಿಗಳಾಗುವ ವ್ಯಕ್ತಿಗಳ ಪಾತ್ರ ಇವುಗಳಿಗೆ ಹಲವು ನೆಲೆಗಳಿರುತ್ತವೆ. ವಯಸ್ಸಿನ ಅಂತರವಿರುವವರು ಪರಸ್ಪರ ಭೇಟಿ ಯಾದಾಗ ‘ನಮಸ್ಕಾರ’ ಎನ್ನುವ ಪದವನ್ನು ಯಾರು ಬಳಸಬೇಕು ಎಂಬುದು ಖಚಿತವಿರುತ್ತದೆ. ಆದರೆ ಇಬ್ಬರು ಆಪ್ತರು, ಗೆಳೆಯರು ಭೇಟಿಯಾದಾಗ ಬಳಕೆಯಾಗುವ ನಿಯಮವೇ ಬೇರೆ. ಸಾಮಾಜಿಕ ಸಂದರ್ಭದಲ್ಲಿರುವ ವ್ಯಕ್ತಿಗಳ ನಡುವಣ ಸಂಬಂಧದ ಸಂಕೀರ್ಣತೆಯೂ ಕೂಡ ಅಲ್ಲಿನ ಭಾಷಾ ವ್ಯವಹಾರದ ವಿವಿಧ ನೆಲೆಗಳಲ್ಲಿ ಬೆರೆತುಕೊಂಡಿರುತ್ತದೆ.

ಈ ಮೇಲಿನ ಸಂದರ್ಭಗಳ ಭಾಷಾ ವ್ಯವಹಾರಗಳಲ್ಲಿ ಮಾತುಗಳ ರಚನೆಯಲ್ಲಿ ಸಾಮಾನ್ಯವಾಗಿ ನಿರ್ದಿಷ್ಟ ರೂಪಗಳು ಆವರ್ತಗೊಳ್ಳುತ್ತಿರುತ್ತವೆ. ಆ ಮಾತುಗಳಿಗೆ ಎಷ್ಟೋ ವೇಳೆ ನಿರ್ದಿಷ್ಟ ಅರ್ಥವಿರುವುದಿಲ್ಲ. ಅರ್ಥವಿದ್ದರೂ ಆ ಸಂದರ್ಭದಲ್ಲಿ ಅದು ಮುಖ್ಯವಾಗಿರುವುದಿಲ್ಲ. ವಾಚ್ಯಾರ್ಥವನ್ನೇ ಪರಿಗಣಿಸಿದರೆ ಕೆಲವೊಮ್ಮೆ ಉಕ್ತಿಗಳು ಅಸಂಬದ್ಧವಾಗಿಯೂ ಕಾಣುತ್ತವೆ. ಬೆಳಿಗ್ಗೆ ಎದ್ದು ಎದುರಾದ ಪರಿಚಿತರಾದವರನ್ನು ‘ಎದ್ದಿರಾ?’ ಎಂದು ಕೇಳುತ್ತೇವೆ. ನಿದ್ರೆಯಿಂದ ಎದ್ದು ಎದುರಾಗಿರುವವರನ್ನು ‘ಎದ್ದಿರಾ?’ ಎಂದು ಕೇಳುವುದು ಅಸಹಜವೆಂದು ತೋರುತ್ತದೆ. ಆದರೆ ಸಹಜವಾಗಿ ಕೇಳುವ  ವ್ಯಕ್ತಿ ಅಥವಾ ಕೇಳಲಾದ ವ್ಯಕ್ತಿ ಈ ಉಕ್ತಿಯನ್ನು ಅಸಹಜವೆಂದು ಭಾವಿಸುವುದಿಲ್ಲ. ಸಾಮಾಜಿಕ ವ್ಯವಹಾರವನ್ನು ಮೊದಲು ಮಾಡುವ, ಮುಂದುವರೆಸುವ ಹಾಗೂ ಕೊನೆಗೊಳಿಸುವ ಕ್ರಿಯೆಗಳಿಗೆ ಈ ಮಾದರಿಯ ಉಕ್ತಿಗಳು ಅತ್ಯವಶ್ಯಕವಾಗಿರುತ್ತವೆ. ಈ ಬಗೆಯ ಭಾಷೆಯ ಉಪಯೋಗವನ್ನು ‘ಸಂಬಂಧೋಪಯೋಗಿ’ ಎನ್ನಬಹುದು. ಏಕೆಂದರೆ ಇಂಥ ಮಾತುಗಳನ್ನು ಬಳಸಿದಾಗ ಸಾಮಾಜಿಕ ಸಂಬಂಧ, ಅದು ತೋರಿಕೆಯಾಗಿದ್ದರೂ, ಇರುವುದು ಸ್ಪಷ್ಟವಾಗುತ್ತದೆ. ಈ ಮಾತುಗಳು ಇಲ್ಲದಿದ್ದರೆ ಅಥವಾ ಸೂಕ್ತ ಭಾಷಿಕ ಪ್ರತಿಕ್ರಿಯೆ ಇಲ್ಲದಿದ್ದರೆ ಆಗ ಈ ಸಂಬಂಧಕ್ಕೆ ಧಕ್ಕೆಯೊದಗಿರುವುದು ಖಚಿತಗೊಳ್ಳುತ್ತದೆ.

ಭಾಷೆಯ ಸಂಬಂಧೋಪಯೋಗಿ ನೆಲೆ ಪ್ರತಿ ಭಾಷೆಯಲ್ಲೂ ವಿಶಿಷ್ಟವಾದ ರೀತಿಯಲ್ಲೇ ಕಂಡುಬರುತ್ತದೆ. ಅಂದರೆ ಒಂದೊಂದು ಭಾಷಿಕ ಸಮುದಾಯವೂ ನಿರ್ದಿಷ್ಟ ಸಾಮಾಜಿಕ ಸಂದರ್ಭದಲ್ಲಿ ಬಳಕೆಯಾಗುವ ಉಕ್ತಿ ರೂಪವನ್ನು ತನ್ನದೇ ಆದ ರೀತಿಯಲ್ಲಿ ರೂಪಿಸಿಕೊಂಡಿರುತ್ತದೆ. ಒಂದು ಭಾಷೆಗೆ ವಿಶಿಷ್ಟ ವಾದ ಉಕ್ತಿಯನ್ನು ಇನ್ನೊಂದು ಭಾಷೆಯ ಸಂದರ್ಭದಲ್ಲಿ ಬಳಸಲು ಆಗುವುದಿಲ್ಲ. ಬಳಸಿದರೆ ಸಾಮಾಜಿಕ ಸಂಬಂಧಗಳು ಏರುಪೇರಾಗಲೂ ಬಹುದು. ಹಲೋ ಎಂದು ಇಂಗ್ಲಿಶ್ ಉಕ್ತಿಗೆ ಈಗ ಸಾರ್ವತ್ರಿಕ ಬಳಕೆಯ ಸ್ವರೂಪ ದೊರಕಿದೆಯೆಂದು ತೋರಿದರೂ ಹಾಗಿಲ್ಲ. ದೂರವಾಣಿ ಸಂಭಾಷಣೆ ಮೊದಲಾಗುವಾಗ ಕರೆಯನ್ನು ಪಡೆದ ವ್ಯಕ್ತಿಯ ಮೊದಲ ಮಾತು ಯಾವಾಗಲೂ ಹಲೋ ಆಗಿರುವುದೆಂದು ತಿಳುವಳಿಕೆ ಸರಿಯಲ್ಲ. ಬೇರೆ ಬೇರೆ ಭಾಷಿಕರು ಬೇರೆ ಬೇರೆ ಭಾಷಿಕ ತಂತ್ರಗಳನ್ನು ಇದಕ್ಕೆ ಬಳಸುತ್ತಾರೆ. ಮಧ್ಯ ಆಫ್ರಿಕಾದ ಬುರುಂಡಿ ದೇಶದ ರುಂಡಿ ಜನಾಂಗದ ಹೆಂಗಸರು ಸಂಭಾಷಣೆಯ ಕೊನೆಗೆ ಮನೆಗೆ ಹೋಗುವಾಗ ‘ಮನೆಗೆ ಹೋಗಬೇಕು, ಇಲ್ಲದಿದ್ದರೆ ನನ್ನ ಗಂಡ ಹೊಡೆಯುತ್ತಾನೆ’ ಎಂಬ ಅರ್ಥದ ಮಾತನ್ನು ಹೇಳುವುದುಂಟು.

ಕಾಲಜ್ಞಾನ ವಚನಗಳು. ಮುಂದೆ ಸಂಭವಿಸಲಿರುವ ಘಟನೆಗಳನ್ನು ಹೇಳುವ ವಚನಗಳು. ಮಧ್ಯಯುಗದ ಹಲವು ಸಾಧಕರ ಹೆಸರಿನಲ್ಲಿವೆ. ಇವು ತೋಂಡಿಯಲ್ಲಿ ಪ್ರಚಾರದಲ್ಲಿವೆ. ಊರುಗಳಿಗೆ ಬರುವ ಸುಡಗಾಡು ಸಿದ್ಧರು ಇಂಥ ವಚನಗಳನ್ನು ಹೇಳುತ್ತಾರೆ.

ಮಾತಾಂಗವಳಿದಾವು ಮನ್ಮಥ ಕೆಟ್ಟಾವು

ಆತನ ಮಾತು ಹುಸಿಯಲ್ಲ ಸುವ್ವಿ

ಆತನ ಮಾತು ಹುಸಿಯಲ್ಲ ಹಂಪೆಯ

ಗೋಪುರವೆಲ್ಲಾ ಲಯವೆದ್ದೊ ಸುವ್ವಿ

ನೀಲಮ್ಮನ ಕಾಲಜ್ಞಾನ

ಹೀಗೆಯೇ ‘ಸಂಬಂಧೋಪಯೋಗಿ’ ನೆಲೆಯಲ್ಲಿ ಭಾಷೆಯನ್ನು ಬಳಸುವ ಪ್ರಮಾಣ ಕೂಡ ಭಾಷಿಕರಿಂದ ಭಾಷಿಕರಿಗೆ ಬೇರೆ ಬೇರೆಯಾಗಿರುತ್ತದೆ. ಸಾಮಾಜಿಕ ಸಂಬಂಧಗಳನ್ನು ಅತ್ಯಂತ ಕನಿಷ್ಠ ಉಕ್ತಿಗಳಿಂದ ನಿರ್ವಹಿಸುವ ಭಾಷಿಕ ಸಮುದಾಯಗಳೂ ಇವೆ.

ನಾದಶಕ್ತಿ

ಹಲವು ಕೆಲಸಗಾರರು ಒಟ್ಟಾಗಿ ಒಂದೇ ಕೆಲಸ ಮಾಡುವಾಗ ಐಸಾ ಕೂಗುವುದನ್ನು ಗಮನಿಸಿದ್ದೇವೆ. ಯಾರಾದರೊಬ್ಬ ವ್ಯಕ್ತಿ ಪದಗುಚ್ಛವೊಂದನ್ನು ಉಚ್ಚರಿಸಿದಾಗ ಉಳಿದವರೆಲ್ಲ ಐಸಾ ಎನ್ನುತ್ತಿರುತ್ತಾರೆ. ಮೊದಲು ಹೇಳುವ ಪದಗುಚ್ಛಕ್ಕೆ ಯಾವುದೇ ವಿಶೇಷ ಅರ್ಥ ಅಥವಾ ಮಹತ್ವ ಇರಬೇಕೆಂದಿಲ್ಲ. ಮಕ್ಕಳ ಆಟಗಳಲ್ಲಿ ಬರುವ ಪ್ರಾಸಬದ್ಧವಾದ ಸಾಲುಗಳನ್ನು ಗಮನಿಸಿದರೂ ಅಲ್ಲಿನ ಪದಗಳಿಗೆ ಯಾವುದೇ ವಿಶಿಷ್ಟ ಅರ್ಥವಿರುವಂತೆ ತೋರುವುದಿಲ್ಲ. ಅಥವಾ ಇರಬಹುದಾದ ಅರ್ಥ ಕೂಡ ಮಕ್ಕಳಿಗೆ ಮಹತ್ವವೆಂದು ಅನಿಸುವುದಿಲ್ಲ. ಅವರು ಪುನರಾವರ್ತನೆಯಾಗುವ ನಾದ ಹಾಗೂ ಲಯದೆಡೆಗೆ ಮಾತ್ರ ಆಕರ್ಷಿತರಾಗುತ್ತಾರೆ. ಅವರ ಕುಣಿತ, ಓಟ, ಆಟದ ಚಲನೆಗಳಿಗೆ ಅನುಗುಣವಾಗಿ ಉಚ್ಚರಿತವಾಗುವ ನಾದ ಇಲ್ಲಿ ಮುಖ್ಯ.

ತೋರಿಕೆಗೆ ಭಾಷೆಯ ಬಳಕೆಯಾಗುತ್ತಿದ್ದರೂ ಅರ್ಥ ಅಮುಖ್ಯವಾಗುವ ಪ್ರಸಂಗಗಳಲ್ಲಿ ಹಲವು ಬಗೆಗಳಿವೆ. ಆಚರಣೆಗಳಲ್ಲಿ ಬಳಕೆಯಾಗುವ ಘೋಷಗಳು, ಕೆಲಸಗಾರರಲ್ಲಿ ಉತ್ಸಾಹ ತುಂಬುವ ಕೂಗುಗಳು, ಮಕ್ಕಳ ಆಟದ ಹಾಡುಗಳು, ಬೃಹತ್ ಸಭೆಯ ಘೋಷಣೆಗಳು ಇವೆಲ್ಲ ಮೇಲೆ ಹೇಳಿದ ರೀತಿಯ ಬಳಕೆಗಳು. ಜನಪ್ರಿಯ ಗೀತೆಗಳನ್ನು ಹಾಡುವವರು ಮಾತುಗಳನ್ನು ಮರೆತರೂ ಗುನುಗುನಿಸುವ ವಿಧಾನ ಇನ್ನೊಂದು ನಿದರ್ಶನ. ಅಂಥ ಗೀತೆಗಳಲ್ಲಿ ಭಾಷೆ ಇರುತ್ತದೆ. ಆದರೆ ಆಕರ್ಷಣೆಗೆ ಕಾರಣವಾಗುವುದು ನಾದವೇ ಹೊರತು ಅರ್ಥವಲ್ಲ.

ತೋಂಡಿಯಲ್ಲಿರುವ ಕಾವ್ಯದಲ್ಲಿ ಆವರ್ತಗೊಳ್ಳುವ ನಿರರ್ಥಕ ಪದಗುಚ್ಛಗಳಿರುತ್ತವೆ. ಹಾಗೆಯೇ ಒಂಟಿಯಾಗಿರುವ ವ್ಯಕ್ತಿ ಹಾಡಿಕೊಳ್ಳುವ ಹಾಡುಗಳಲ್ಲೂ ನಾದವೇ ಮುಖ್ಯ; ಅರ್ಥವಲ್ಲ. ಈ ಎಲ್ಲ ಸಂದರ್ಭಗಳನ್ನು ಗಮನಿಸಿದರೆ ಭಾಷೆಯ ‘ನಾದೋಪಯೋಗಿ’ ಲಕ್ಷಣ ಮನದಟ್ಟಾಗುತ್ತದೆ. ಭಾಷೆ ಇದ್ದರೂ ಇಲ್ಲದ ನೆಲೆಯಿದು.