ಜಗತ್ತಿನಾದ್ಯಂತ ಎಲ್ಲ ದೇಶಗಳ ಐತಿಹ್ಯಗಳಲ್ಲಿ ಜನಪದ ಸಾಹಿತ್ಯದಲ್ಲಿ ಭಾಷೆಯ ಮಾಂತ್ರಿಕತೆಯ ಉಲ್ಲೇಖಗಳು ದೊರಕುತ್ತವೆ. ಮಾತಿಗೆ ಒಂದು ವಿಶಿಷ್ಟ ಅಲೌಕಿಕ ಶಕ್ತಿಯಿರುವುದನ್ನು ಎಲ್ಲ ಕಾಲದೇಶಗಳ ಜನರು ನಂಬಿ ಬಂದಿದ್ದಾರೆ. ಮಾತು ಬರೆಹವಾದಾಗ ಆ ಅಕ್ಷರ ರೂಪಕ್ಕೆ ಮತ್ತಷ್ಟು ಹೆಚ್ಚಿನ ಮಾಂತ್ರಿಕತೆ ಲಭಿಸುವುದೆಂಬ ನಂಬಿಕೆಗಳಿವೆ. ಆ ಬರೆಹಗಳನ್ನು ಓದಬಲ್ಲವರು, ಅರಿಯಬಲ್ಲವರು ಮಾತ್ರ ಆ ಮಂತ್ರಶಕ್ತಿಯನ್ನು ಬಳಸಬಲ್ಲರು ಹಾಗೂ ಹಿಡಿತದಲ್ಲಿಟ್ಟುಕೊಳ್ಳಬಲ್ಲರೆಂದು ತಿಳಿಯಲಾಗಿದೆ. ಭಾಷೆಯು ಮನುಷ್ಯರಿಗೆ ದೈವವಿತ್ತ ಕೊಡುಗೆಯಾಗಿರುವುದರಿಂದ ಅದಕ್ಕೆ ವಿಶೇಷವಾದ ಮಂತ್ರಶಕ್ತಿ ದೊರಕಿದೆಯೆಂದು ಅವರು ತಿಳಿಯುವುದುಂಟು. ಈ ನಂಬಿಕೆಯಿಂದಾಗಿ ಹಲವಾರು ಧಾರ್ಮಿಕ ಚಟುವಟಿಕೆಗಳು ಆಚರಣೆಗಳು ರೂಪುಗೊಂಡಿವೆ. ಮಾಂತ್ರಿಕತೆಯುಳ್ಳ ಮಾತು ಬರೆಹಗಳ ಸುತ್ತಮುತ್ತ ಸಮುದಾಯಗಳ ಜೀವನ ಕ್ರಮ ಬೆಳೆಯುತ್ತ ಬಂದಿದೆ.

ಮಂತ್ರ, ಸ್ತೋತ್ರ, ನಾಮಾವಳಿ ಮುಂತಾದ ಭಾಷಾ ರೂಪಗಳಿಗೆ ವಿಶೇಷ ಶಕ್ತಿಯಿದೆಯೆಂದು ತಿಳಿದು ಆ ಶಕ್ತಿಯನ್ನು ಪಡೆಯಲು, ಆ ಮೂಲಕ ಲೋಕದಲ್ಲಿ ಬಲಶಾಲಿಯಾಗಲೂ ಆ ಭಾಷಾ ರೂಪಗಳನ್ನು ಉಚ್ಚರಿಸ ಲಾಗುತ್ತದೆ. ಹಾಗೆ ಉಚ್ಚರಿಸುವುದರಿಂದ ವಸ್ತುಗಳ ಮೇಲೆ ಜೀವಿಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವೆಂದು ಜನರು ಭಾವಿಸುತ್ತಾರೆ. ರೋಗಗಳನ್ನು ವಾಸಿ ಮಾಡಲು, ಅನಿಷ್ಟಗಳನ್ನು ನಿವಾರಿಸಲು, ಒಳಿತನ್ನು ಕೋರಲು ಇಂಥ ಭಾಷಾ ರೂಪಗಳನ್ನು ಬಳಸುವುದುಂಟು. ವರ ಮತ್ತು ಶಾಪಗಳೂ ಇಂಥ ವಿಶಿಷ್ಟ ಶಕ್ತಿಯುಳ್ಳ ಭಾಷಾ ರೂಪಗಳಷ್ಟೆ. ‘ಕಲ್ಲಾಗಿ ಹೋಗು’ ಎಂದು ಶಪಿಸಿದಾಗ, ಹಾಗೆ ಉಚ್ಚರಿಸಿದಾಗ, ವ್ಯಕ್ತಿ ಕಲ್ಲಾಗಿ ಹೋಗುವ ಪ್ರಸಂಗಗಳನ್ನು ಗಮನಿಸಿ ದರೆ ಶಾಪದ ಸ್ವರೂಪ ತಿಳಿಯುತ್ತದೆ. ಮಯೂರನೆಂಬಾತ ಸೂರ್ಯಶತಕವೆಂಬ ಸ್ತುತಿಯನ್ನು ಪಠಿಸಿದಾಗ ಅವನಿಗೆ ಬಂದಿದ್ದ ರೋಗ ವಾಸಿಯಾಯಿತಂತೆ. ಕೆಟ್ಟ ಕನಸುಗಳು ಬೀಳದಿರಲೆಂದು ಮಲಗುವಾಗ ಮಕ್ಕಳಿಗೆ ನಿರ್ದಿಷ್ಟ ಸ್ತೋತ್ರ ವೊಂದನ್ನು ಹೇಳಿಕೊಳ್ಳಲು ಕೆಲವರು ಕಲಿಸುವು ದುಂಟು. ಮಾಂತ್ರಿಕ ಶಕ್ತಿಯುಳ್ಳ ಭಾಷಾ ರೂಪಗಳ ಪಾವಿತ್ರ್ಯವನ್ನೂ ಕಾಪಾಡಬೇಕೆಂದು ತಿಳಿಯುತ್ತಾರೆ. ಅವು ಗಳನ್ನು ಖಚಿತವಾಗಿ ಉಚ್ಚರಿಸದಿದ್ದರೆ ಅಪಾಯಗಳು ಸಂಭವಿಸುತ್ತವೆಂಬ ನಂಬಿಕೆಗಳಿವೆ. ಖಚಿತ ಉಚ್ಚಾರಣೆ, ಪುನರಾವರ್ತನೆಗಳಿಂದ ಮಂತ್ರಶಕ್ತಿ ಹೆಚ್ಚಾಗುವುದೆಂಬ ತಿಳುವಳಿಕೆಯಿದೆ. ಇಂಥ ಶಕ್ತಿಯುಳ್ಳ ಭಾಷಾ ರೂಪಗಳಿಗೆ ನಿರ್ದಿಷ್ಟವಾದ ಅರ್ಥವಿರಲೇ ಬೇಕೆಂದಿಲ್ಲ. ಅವುಗಳನ್ನು ಬಳಸದ ಜನರಿಗಂತೂ ಅವು ನಿರರ್ಥಕ ಶಬ್ದ ಸರಣಿಯಂತೆ ತೋರುತ್ತವೆ. ಆದರೆ ಸರಿಯಾಗಿ ಬಳಸುವುದರಿಂದ ಪರಿಣಾಮಕಾರಿ ಆಗುತ್ತವೆಂದು ತಿಳಿಯುತ್ತಾರೆ.

ಬರವಣಿಗೆ, ಅಕ್ಷರವನ್ನು ಮೊದಲ ಬಾರಿಗೆ ಕಂಡ ಆದಿವಾಸಿಗಳು ಅದರ ಬಗ್ಗೆ, ಅದರ ಸಾಮರ್ಥ್ಯದ ಬಗ್ಗೆ ಭಯಗ್ರಸ್ತರಾದ ನಿದರ್ಶನಗಳಿವೆ. ಅಕ್ಷರದಲ್ಲಿ ಶಕ್ತಿ ಸುಪ್ತವಾಗಿದ್ದು ಅದನ್ನು ಓದಿದವನಿಗೆ ವರವಾಗಲೂ ಬಹುದು. ಇಲ್ಲವೇ ಶಾಪವಾಗಲೂಬಹುದೆಂದು ತಿಳಿಯುತ್ತಾರೆ. ಶಿಲಾಶಾಸನ ಗಳನ್ನು ಓದಿದವರು ರಕ್ತಕಾರಿ ಸಾಯುತ್ತಾರೆಂಬ ನಂಬಿಕೆ ಇರುವಂತೆ ಬಹುಪಾಲು ಅಂಥ ಶಾಸನಗಳು ಹುದುಗಿಟ್ಟ ‘ನಿಧಿ’ಯ ರಹಸ್ಯವನ್ನು ಸೂಚಿಸುತ್ತವೆಂದೂ ನಂಬುತ್ತಾರೆ.

ಮಾತಿಗಿರುವ ಮಾಂತ್ರಿಕ ಶಕ್ತಿಗೆ ಮಂತ್ರಗಳು ನಿದರ್ಶನಗಳು: ಮಂತ್ರಗಳ ಸೂಕ್ತ ಉಚ್ಚಾರಣೆಯಿಂದ ಭೌತ ಜಗತ್ತಿನಲ್ಲಿ ಪರಿವರ್ತನೆಗಳನ್ನು ಉಂಟು ಮಾಡಲು ಸಾಧ್ಯವೆಂಬ ನಂಬಿಕೆಯುಂಟು, ಒಂದೇ ಮಂತ್ರವನ್ನು ಹಲವಾರು ಬಾರಿ ಉಚ್ಚರಿಸುವುದು ಒಂದು ವಿಧಾನ. ಸ್ತೋತ್ರ, ದಂಡಕ, ನಾಮಾವಳಿ, ಖಡ್ಗಮಾಲಾ ಎಂಬ ಹೆಸರಿನ ವಿವಿಧ ರಚನೆಗಳನ್ನು ಉಚ್ಚರಿಸುವುದು ಇನ್ನೊಂದು ವಿಧಾನ.

ಇಂಥ ಎಷ್ಟೋ ಮಂತ್ರಗಳನ್ನು ವೈಯಕ್ತಿಕ ನೆಲೆಯಲ್ಲಿ ಮಾತ್ರ ಇರಿಸಿಕೊಳ್ಳಲಾಗುವುದು. ಗುರುವಿನಿಂದ ರಹಸ್ಯವಾಗಿ ಪಡೆದ ಮಂತ್ರವನ್ನು ಸಾಧಕರು ಅನ್ಯರಿಗೆ ತಿಳಿಯದಂತೆ ತಾವು ಮಾತ್ರ ಉಚ್ಚರಿಸಿ ಸಾಧನೆ ನಡೆಸುವುದುಂಟು.

ಆಧುನಿಕ ಕಾಲದಲ್ಲೂ ಭಾಷೆಯ ಮಾಂತ್ರಿಕ ಶಕ್ತಿ ಬಗ್ಗೆ ನಂಬುಗೆಗಳಿವೆ. ಜಾಹೀರಾತುಗಳು ಇದಕ್ಕೊಂದು ನಿದರ್ಶನ. ‘ಮಾತಿನ ಮೋಡಿ’ ಎನ್ನುವ ಉಕ್ತಿಯಲ್ಲೇ ಮಾತಿಗಿರುವ ವಶೀಕರಣ ಶಕ್ತಿಯನ್ನು ನಾವು ಸೂಚಿಸುತ್ತೇವೆ. ನೆಪೋಲಿಯನ್‌ನಂಥ ವಿಸ್ತರಣಾಕಾಂಕ್ಷಿಗಳು ಭಾಷೆಯ ಈ ಸಾಮರ್ಥ್ಯವನ್ನು ತಿಳಿದವರಾಗಿದ್ದರು. ಯುದ್ದ ಪಡೆಗಳಿಗಿಂತ ವಾರ್ತಾ ಪತ್ರಿಕೆಗಳು ಶಕ್ತಿಶಾಲಿ ಯೆಂದು ಅವನು ತಿಳಿದಿದ್ದನು. ಹಾಗೆಯೇ ಒಂದು ರಾಷ್ಟ್ರದ ಪ್ರಭಾವದ ಏರಿಳಿತ ಅದರ ಬರವಣಿಗೆಯ ವ್ಯಾಪಕತೆಯನ್ನು ಅವಲಂಬಿಸಿರುವುದು ಗೋಚರಿಸುತ್ತದೆ. ಆದ್ದರಿಂದಲೇ ಅಧೀನ ರಾಷ್ಟ್ರವೊಂದರ ಅಧೀನತೆಯನ್ನು ಗಟ್ಟಿಗೊಳಿಸಲು ಆ ರಾಷ್ಟ್ರದ ಗ್ರಂಥ ಭಂಡಾರವನ್ನು ಸುಟ್ಟು ಬೂದಿ ಮಾಡುತ್ತಿದ್ದರು.