ಪಾರಂಪರಿಕ ಭಾಷಾಧ್ಯಯನ ಮಾದರಿಗಳಲ್ಲಿ ಭಾಷೆಯನ್ನು ಸಮಾಜಮುಕ್ತ ವಿಷಯವಾಗಿಯೆ ಪರಿಗಣಿಸಲಾಗುತ್ತಿತ್ತು. ಭಾಷೆಯಲ್ಲಿ ಕಾಣಿಸುವ ಬಹುರೂಪಿ ವೈವಿಧ್ಯತೆ, ವ್ಯತ್ಯಾಸಗಳನ್ನು ತಪ್ಪಾದ ಪ್ರಯೋಗಗಳೆಂದು ಭಾವಿಸಲಾಗುತ್ತಿತ್ತು. ಇಂತಹ ಭಾಷಿಕ ವ್ಯತ್ಯಸ್ತ ರೂಪಗಳಿಗೂ ಆ ಭಾಷೆಯ ಸಾಮಾಜಿಕ ರಚನೆಗೂ ಇರುವ ಸಂಬಂಧಗಳನ್ನು ಸಾಮಾಜಿಕ ಭಾಷಾಶಾಸ್ತ್ರ ಖಚಿತಪಡಿಸಿ ಭಾಷೆಯೊಳಗೆ ಕಾಣಿಸುವ ಇಂತಹ ವೈವಿಧ್ಯ, ವ್ಯತ್ಯಸ್ತ ರೂಪಗಳನ್ನು ಆ ಭಾಷೆಯ ಸಾಮಾಜಿಕ ಚಹರೆಗಳೆಂದು ನಿರೂಪಿಸಿದೆ. ಭಾಷೆಯ ಸಾಮಾಜಿಕ ಚಹರೆಗಳನ್ನು ಕೇವಲ ಭಾಷಿಕ ಪರಿಕರಗಳಿಂದಷ್ಟೇ ವಿವರಿಸುವುದು ಕಷ್ಟದ ಕೆಲಸ. ಒಂದೇ ಭಾಷೆಯನ್ನಾಡುವ ಭಾಷಿಕರು ವಿವಿಧ ಧರ್ಮ, ಜಾತಿ, ವರ್ಗ, ವೃತ್ತಿಗಳಿಗೆ ಸೇರಿದವರಾಗಿರುತ್ತಾರೆ. ಹಾಗೆಯೇ ಆ ಸಮಾಜದ ಸಂರಚನೆಯೊಳಗೆ ನಿರ್ವಹಿಸುವ ಜವಾಬ್ದಾರಿ, ಕೆಲಸಗಳಿಗೆ ಅನುಗುಣವಾಗಿ ಬೇರೆ ಬೇರೆ ಅಂತಸ್ತುಗಳಲ್ಲಿರುತ್ತಾರೆ. ಪ್ರತಿ ಭಾಷಿಕ ಸಮಾಜವು ಒಳ ವಿಭಜನೆಗಳಿಂದ ಕೂಡಿದ ಅನೇಕ ಘಟಕಗಳ ಮೊತ್ತವಾಗಿರುತ್ತದೆ. ಈ ವಿಭಜನೆಯು ಲಂಬಾಂತರ ಮತ್ತು ಸಮಾನಾಂತರ ಸ್ವರೂಪದಲ್ಲಿದ್ದು ಎಷ್ಟೋ ವೇಳೆ ಭಾಷಿಕರು ಈ ಲಂಬಾಂತರ ಮತ್ತು ಸಮಾನಾಂತರ ವಿಭಜನೆಯ ಎರಡೂ ಕಡೆಗಳಲ್ಲಿ ಸ್ಥಾನ ಪಡೆದುಕೊಂಡಿರುತ್ತಾರೆ. ಏಕರೂಪದ ವೃತ್ತಿ, ಸಮಾನ ಅಂತಸ್ತುಳ್ಳ ಜಾತಿಗಳು ಸಮಾನಾಂತರ ಘಟಕಗಳಾದರೆ. ಆರ್ಥಿಕತೆ, ವಯಸ್ಸು ಮುಂತಾದ ಅಂಶಗಳು ಲಂಬಾಂತರ ವಿಭಜನೆಯೆಂದು ತಿಳಿಯ ಬಹುದು. ಒಬ್ಬರೇ ವ್ಯಕ್ತಿ ಆರ್ಥಿಕ ಪ್ರಾಬಲ್ಯ ಹೊಂದಿದ್ದು ಸಾಮಾಜಿಕವಾಗಿ ಅತ್ಯಂತ ಕೆಳಜಾತಿಗೆ ಸೇರಿರಬಹುದು. ಇಂತಹ ಸಂದರ್ಭದಲ್ಲಿ ವ್ಯಕ್ತಿಯು ಸಮಾನಾಂತರ ಮತ್ತು ಲಂಬಾಂತರ ಘಟಕಗಳೆರಡರಲ್ಲಿಯೂ ಪ್ರತ್ಯೇಕ ಸ್ಥಾನ ಮಾನ ಮತ್ತು ಅಂತಸ್ತುಗಳನ್ನು ಪಡೆದಿರುತ್ತಾರೆ. ಸಾಮಾಜಿಕವಾಗಿ ಅಂತೆಯೇ ಭಾಷಿಕವಾಗಿ ಒಂದು ಸ್ಥಾನದ ಉನ್ನತಿ ಅಥವಾ ಅವನತಿ ಇನ್ನೊಂದರ ಮೇಲೆ ಪ್ರಭಾವ ಬೀರಬಹುದು. ಈ ಹಿನ್ನೆಲೆಯಲ್ಲಿ ಭಾಷೆಯ ಸಾಮಾಜಿಕ ಚಹರೆ ಗಳನ್ನು ವಿವರಿಸಿಕೊಳ್ಳಲು ಮತ್ತು ಅರ್ಥ ಮಾಡಿಕೊಳ್ಳಲು ಸಮಾಜೋಭಾಷಿಕ ವಾದ ವಿವಿಧ ನೆಲೆಗಳನ್ನು ಪರಿಶೀಲಿಸುವ ಅಗತ್ಯವಿದೆ. ಸಾಮಾಜಿಕ ಶ್ರೇಣೀಕರಣ, ಸಾಮಾಜಿಕ ಅಂತಸ್ತು ಮತ್ತು ಪಾತ್ರ, ಸಾಮಾಜಿಕ ಅನನ್ಯತೆ ಮತ್ತು ಅಂತರ, ಲಿಂಗ ಭಿನ್ನತೆಗಳನ್ನು ಇಲ್ಲಿ ಗಮನಿಸಬಹುದು.

ಸಾಮಾಜಿಕ ಶ್ರೇಣೀಕರಣ

ಭಾಷೆಯ ಸಾಮಾಜಿಕ ಚಹರೆಗಳನ್ನು ತೋರ್ಪಡಿಸುವ ಪ್ರಮುಖ ಅಂಶಗಳಲ್ಲಿ ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆ ಅಥವಾ ವಿವಿಧ ವರ್ಗಗಳಲ್ಲಿ ಭಾಷಿಕ ಸಮುದಾಯ ವಿಭಜನೆಯಾಗಿರುವ ರೀತಿಯೂ ಒಂದು. ‘ವರ್ಗ’ ಎಂದರೆ ಸಮಾನ ಸಾಮಾಜಿಕ, ಆರ್ಥಿಕ ಲಕ್ಷಣಗಳನ್ನು ಹೊಂದಿರುವ ಜನಸಮೂಹ ಎಂದು ಸ್ಥೂಲವಾಗಿ ಹೇಳಬಹುದಾದರೂ, ಸಮಾಜಶಾಸ್ತ್ರ ದಲ್ಲಿಯೇ ‘ವರ್ಗ’ ಎನ್ನುವ ಪರಿಕಲ್ಪನೆ ಚರ್ಚಾಸ್ಪದವಾಗಿದೆ. ಕೌಟುಂಬಿಕ ಪರಂಪರೆ, ಸಾಮಾಜಿಕ ಅಧಿಕಾರ ವಿತರಣೆ, ಶ್ರೇಣಿ, ಉದ್ಯೋಗ, ಒಡೆತನ ದಂತಹ ವಿಷಯಗಳು ‘ವರ್ಗ’ ಪರಿಕಲ್ಪನೆಯನ್ನು ಸಂಕೀರ್ಣಗೊಳಿಸುತ್ತವೆ. ಒಬ್ಬರೇ ವ್ಯಕ್ತಿ ಒಂದು ದೇವಾಲಯದ ಪುರೋಹಿತರಾಗಿದ್ದು, ಸಾಮಾಜಿಕ ಸಂದರ್ಭದಲ್ಲಿ ಉನ್ನತ ಶ್ರೇಣಿಯಲ್ಲಿದ್ದರೆ, ಅದೇ ವ್ಯಕ್ತಿ ಆರ್ಥಿಕವಾಗಿ ಕಡುಬಡವರಾಗಿದ್ದು ಆರ್ಥಿಕ ಶ್ರೇಣಿಯಲ್ಲಿ ಕೆಳಹಂತದಲ್ಲಿರಬಹುದು. ಭಾರತ ದಂತಹ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯುಳ್ಳ ರಾಷ್ಟ್ರಗಳಲ್ಲಿ ‘ವರ್ಗ’ ಪರಿಕಲ್ಪನೆಯನ್ನು ವಿಭಿನ್ನ ರೀತಿಯ ಮಾನದಂಡ ಗಳಿಂದ ವಿವರಿಸಿಕೊಳ್ಳ ಬೇಕಾಗುತ್ತದೆ.

ಆದರೆ ಭಾಷೆಯ ಸಾಮಾಜಿಕ ಅಧ್ಯಯನದ ಉದ್ದೇಶಕ್ಕೆ ‘ವರ್ಗ’ ಎನ್ನುವ ಅಂಶವನ್ನು ಸಮಾಜಶಾಸ್ತ್ರೀಯ ನೆಲೆಯ ಸಂಕೀರ್ಣತೆಯೊಂದಿಗೆ ವಿವರಿಸಿಕೊಳ್ಳದೆ ಸ್ಥೂಲವಾಗಿ ಉನ್ನತವರ್ಗ ಮತ್ತು ಕೆಳವರ್ಗ ಅಥವಾ ಮಧ್ಯಮವರ್ಗ ಮತ್ತು ಕೆಳವರ್ಗ ಎಂದು ವರ್ಗೀಕರಿಸಿಕೊಂಡರೆ ಸಾಕು ಎಂದು ಸಾಮಾಜಿಕ ಭಾಷಾಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಇದರಿಂದ ಭಾಷೆಗೂ ವ್ಯಕ್ತಿಯ ಸಾಮಾಜಿಕ ವರ್ಗದ ಹಿನ್ನೆಲೆಗೂ ಇರುವ ಪರಸ್ಪರ ಸಂಬಂಧಗಳನ್ನು ಕಂಡುಕೊಳ್ಳಬಹುದು.

ಭಾಷೆಯ ಬಗ್ಗೆ ಸಾಮಾನ್ಯವಾದ ಒಂದು ಸಾರ್ವತ್ರಿಕ ಕಲ್ಪನೆಯಿರುತ್ತದೆ. ಭಾಷೆಯಲ್ಲಿ ಉಚ್ಚಾರ ಹೇಗಿರಬೇಕು. ಯಾವುದೋ ಒಂದು ಉಚ್ಚಾರ ಸರಿ ಯಾವುದೋ ಒಂದು ಉಚ್ಚಾರ ತಪ್ಪು. ಉದಾಹರಣೆಗೆ ಅಕ್ಷರಸ್ಥ, ನಗರ ಪ್ರದೇಶದವರ ಮಾತಿನ ರೀತಿ ಸರಿಯಾದುದು, ಇತರರು ಮಾತನಾಡುವ ರೀತಿ ಗ್ರಾಮ್ಯ ಅಥವಾ ಒರಟಾದುದು ಎಂಬ ಕಲ್ಪನೆಗಳಿರುತ್ತವೆ. ಇಂತಹ ವರ್ಗೀಕರಣ ಅಥವಾ ಹೇಳಿಕೆಗಳಿಗೆ ಸಾಮಾಜಿಕ ಭಾಷಾಶಾಸ್ತ್ರಜ್ಞರ ಅಗತ್ಯವಿರದೆ ಯಾರು ಬೇಕಾದರೂ ಹೇಳಬಹುದು. ಆದರೆ ಭಾಷೆಯ ಸಾಮಾಜಿಕ ಚಹರೆ ಗಳನ್ನೂ ಅವುಗಳ ಲಕ್ಷಣಗಳನ್ನು ವಿವರಿಸಲು ಸಾಮಾಜಿಕ ಭಾಷಾಶಾಸ್ತ್ರಜ್ಞರ ಅವಶ್ಯಕತೆಯಿದೆ. ಇಂತಹ ಭಾಷಿಕ ವ್ಯತ್ಯಾಸಗಳಿಗೂ ಸಾಮಾಜಿಕ ಹಿನ್ನೆಲೆಗೂ ಇರುವ ಸಂಬಂಧವನ್ನು ಸಾಮಾಜಿಕ ಭಾಷಾಶಾಸ್ತ್ರ ದಲ್ಲಿನ ಅಧ್ಯಯನಗಳು ನಿರೂಪಿಸಿವೆ. ಕನ್ನಡದಲ್ಲಿಯೂ ಕಾಣಿಸಿಕೊಳ್ಳುವ ಉಚ್ಚಾರಣಾ ವ್ಯತ್ಯಾಸಗಳನ್ನು ಸರಿ ತಪ್ಪುಗಳ ಮಾದರಿಯಲ್ಲಿ ಸಾಮಾನ್ಯರು ಗಮನಿಸುತ್ತಾರೆ. ಆದರೆ ಈ ವ್ಯತ್ಯಾಸಗಳನ್ನು ಸಾಮಾಜಿಕ ಚಹರೆಗಳನ್ನಾಗಿ ನಿರೂಪಿಸಲು ಸಾಧ್ಯ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಉನ್ನತ ಸ್ಥಾನದಲ್ಲಿರುವ ವರ್ಗಗಳ ಬಳಕೆಯಲ್ಲಿ ಮಹಾಪ್ರಾಣಾಕ್ಷರಗಳು ಬಳಕೆ ಯಾಗುವುದು ಹೆಚ್ಚು. ಇತರ ವರ್ಗಗಳಲ್ಲಿ ಇದು ಕಡಿಮೆ. ವ್ಯಕ್ತಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ ಹೋದಂತೆ ಭಾಷೆಯ ಮೇಲೆ ಅದರ ಪ್ರಭಾವವನ್ನು ಕಾಣಬಹುದು. ಕನ್ನಡದ ಆಡುನುಡಿಗಳಲ್ಲಿ ಮಹಾಪ್ರಾಣಗಳ ಬಳಕೆ ಇಲ್ಲದೆಯೂ ಮತ್ತು ಊಷ್ಮಧ್ವನಿ ಗಳಾದ ಶ/ಸಗಳ ನಡುವೆ ವ್ಯತ್ಯಾಸವಿಡದೆ ಕನ್ನಡವನ್ನು ಬಳಸುವ ಒಂದು ವರ್ಗವಿದ್ದರೆ, ಇನ್ನೂ ಕೆಲವರು ಮಹಾಪ್ರಾಣಾಕ್ಷರಗಳನ್ನು ಮತ್ತು ಊಷ್ಮ ಧ್ವನಿಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸುವುದರಿಂದ ತಮ್ಮ ಸಾಮಾಜಿಕ ವರ್ಗವನ್ನು ಮೇಲ್ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾರೆ. ಇದನ್ನು ಕೆಲವು ಉದಾಹರಣೆಗಳಿಂದ ಖಚಿತ ಪಡಿಸಿಕೊಳ್ಳಬಹುದು.

ಉನ್ನತವರ್ಗ ಇತರೆ ವರ್ಗ ಉನ್ನತವರ್ಗ ಇತರೆ ವರ್ಗ
ಘಂಟೆ ಗಂಟೆ ಶಂಖ ಸಂಕ
ಭದ್ರ ಬದ್ರ ಶಿವ ಸಿವ
ಛತ್ರಿ ಚತ್ರಿ ವಿಷ ಇಸ
ಧೂಳು ದೂಳು ಖುಶಿ ಕುಸಿ
ಮಠ ಮಟ ಭಾಷೆ ಬಾಸೆ

ಜಾತಿ

ಭಾರತೀಯ ಸಮಾಜದಲ್ಲಿ ಸಾಮಾಜಿಕ ಶ್ರೇಣೀಕರಣ ಮತ್ತು ಸಮುದಾಯಗಳ ನಡುವಿನ ಸಾಮಾಜಿಕ ನಿರ್ಬಂಧದೊಡನೆ ಅವುಗಳ ಪ್ರತ್ಯೇಕತೆಯನ್ನು ನಿರ್ವಹಿಸುವಲ್ಲಿ ಜಾತಿ ಪ್ರಮುಖ ಪಾತ್ರವಹಿಸುತ್ತದೆ. ಒಂದು ಭಾಷಿಕ ಸಮುದಾಯದ ಒಳ ಭಿನ್ನತೆಗಳಿಗೆ ಸಾಮಾಜಿಕವಾದ ‘ಜಾತಿ’ ವ್ಯವಸ್ಥೆಯೂ ಕಾರಣವಾಗುತ್ತದೆ.

ಪ್ರತಿ ಜಾತಿಯು ಮೂಲಭೂತವಾಗಿ ಭಿನ್ನವಾದ ನಂಬಿಕೆ, ರೀತಿ, ನಡೆವಳಿಕೆ ಗಳನ್ನು ಜೀವನ ಕ್ರಮವನ್ನು ಪಾರಂಪರಿಕವಾಗಿ ರೂಢಿಸಿ ಕೊಂಡಿರುತ್ತದೆ. ಈ ಕಾರಣಗಳಿಂದಾಗಿಯೂ ಬಳಸುವ ಭಾಷೆಯಲ್ಲಿ, ಭಾಷಾಭಿವ್ಯಕ್ತಿಯಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, ‘ಅಣಬೆ’ ಮತ್ತು ‘ನಾಯಿಕೊಡೆ’ ಎಂಬ ಎರಡು ಪದರೂಪಗಳು ಕನ್ನಡ ಭಾಷೆಯಲ್ಲಿವೆ. ಇದರಲ್ಲಿ ಈ ಪದಗಳು ಸೂಚಿಸುತ್ತಿರುವ ಸಸ್ಯವನ್ನು ಆಹಾರವನ್ನಾಗಿ ಸೇವಿಸುವ ಮತ್ತು ಸೇವಿಸದಿರುವ ಎರಡೂ ಜಾತಿಯ ಜನರಲ್ಲಿ ಕನ್ನಡ ಭಾಷಿಕ ರಿದ್ದಾರೆ. ‘ಅಣಬೆ’ ಎಂಬ ಪದವನ್ನು ಅದನ್ನು ಆಹಾರವಾಗಿ ಸ್ವೀಕರಿಸುವ ಜನರು ಬಳಸಿದರೆ, ನಾಯಿಕೊಡೆ ಎಂಬ ಪದವನ್ನು ಆಹಾರ ಕ್ರಮದಲ್ಲಿ ಆ ಸಸ್ಯವನ್ನು ನಿಷೇಧಿಸಿಕೊಂಡಿರುವ ಜಾತಿಯ ಜನರು ಬಳಸುತ್ತಾರೆ. ಪರಸ್ಪರರ ನಡುವಿನ ಬಳಕೆಯಲ್ಲಿ ಈ ಎರಡೂ ಪದಗಳು ಅರ್ಥವಾದರೂ ಒಂದು ಪದ ಕೇಳುವ ನೆಲೆಯಲ್ಲಿ ಮಾತ್ರ ಸಕ್ರಿಯವಾಗಿದ್ದು ಆಡುವ ನೆಲೆಯಲ್ಲಿ ನಿಷ್ಕ್ರಿಯವಾಗಿರುತ್ತದೆ. ಇವೆರಡೂ ಪದಗಳು ಒಟ್ಟು ಕನ್ನಡ ಪದಕೋಶದಲ್ಲಿವೆ.

ಜಾತಿಗಳ ಪ್ರತ್ಯೇಕತೆಯಿಂದಾಗಿ ಜಾತಿ ಸಮುದಾಯಗಳ ಭಾಷೆಗೆ ಕೆಲವು ವಿಶಿಷ್ಟ ಲಕ್ಷಣಗಳು ಪ್ರಾಪ್ತವಾಗಿರುತ್ತವೆ. ಅವು ಧ್ವನಿ, ಪದ, ವಾಕ್ಯ ರಚನೆ ಮತ್ತು ವ್ಯಾಕರಣ ಘಟಕಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಇಂತಹ ವೈಶಿಷ್ಟ್ಯ-ವಿಭಿನ್ನತೆಗಳನ್ನು ಆಧರಿಸಿ ಸಾಮಾಜಿಕ ಪ್ರಬೇಧಗಳನ್ನು ಗುರುತಿಸಲಾಗುತ್ತದೆ. ಧ್ವನಿ ಘಟಕಕ್ಕೆ ಸಂಬಂಧಿಸಿ ಕನ್ನಡದ ಒಂದು ಉದಾ ಹರಣೆಯನ್ನು ಗಮನಿಸಬಹುದು. ಪದಾದಿಯ -ಇ -ಎ ಸ್ವರಗಳ ಹಿಂದಿನ ಕಂಠ್ಯಧ್ವನಿ ‘ಕ್’ ವು ತಾಲವ್ಯ ‘ಚ್’ ಕಾರವಾಗಿ ಹುಣಸೂರು, ಪಿರಿಯಾಪಟ್ಟಣ ಪ್ರದೇಶದ ಉಪ್ಪಾರ ಜನರ ಕನ್ನಡದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ. (ಕೆರೆ-ಚೆರೆ, ಕೆಂಪು-ಚೆಂಪು, ಕಿವಿ-ಚಿವಿ, ಕಿಟಕಿ-ಚಿಟಕಿ) ಇದನ್ನು ಈಗಾಗಲೇ ಪ್ರಾದೇಶಿಕ ಕನ್ನಡದ ಲಕ್ಷಣವಾಗಿ ವಿವರಿಸಲಾಗಿದ್ದರೂ, ಕನ್ನಡ ಭಾಷೆಯ ಚಾರಿತ್ರಿಕ ಹಿನ್ನೆಲೆಯಲ್ಲಿ ಈ ಧ್ವನಿ ವ್ಯತ್ಯಾಸಗಳಿಗೆ ಕಾರಣಗಳಿದ್ದರೂ ಸಮಾಜೋಭಾಷಿಕ ಹಿನ್ನೆಲೆಯಲ್ಲಿ ಈ ವ್ಯತ್ಯಾಸ ಜಾತಿ ಬದ್ಧವಾಗಿಯೂ ಕಾಣಿಸಿಕೊಳ್ಳುತ್ತದೆ.

ಪದಕೋಶಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಜಾತಿ, ಸಮುದಾಯದ ಎಲ್ಲೆ ಯೊಳಗೆ ಮಾತ್ರ ಬಳಕೆಯಾಗಬಹುದಾದ ವಿಶಿಷ್ಟ ಪದಗಳು, ಕ್ರಿಯಾತ್ಮಕತೆಯ, ಅರ್ಥದ ದೃಷ್ಟಿಯಿಂದ ಬೇರೆ ಜಾತಿ ಸಮುದಾಯಗಳ ಬಳಕೆಗಿಂತ ಭಿನ್ನವಾದ ಆಯಾಮವನ್ನು ಪಡೆದಿರುವುದನ್ನು ನೋಡಬಹುದು. ಉದಾಹರಣೆಗೆ, ‘ಬುವ್ವ’ ಎನ್ನುವ ಪದ ಕನ್ನಡದಲ್ಲಿ ಬಳಕೆಯಲ್ಲಿದ್ದರೂ ಅದು ಎಲ್ಲ ಕನ್ನಡಿಗರಲ್ಲಿಯೂ ಬಳಕೆಯಲ್ಲಿಲ್ಲ. ಕೆಲವು ಸಂದರ್ಭಗಳಲ್ಲಿ ಶಿಶುಭಾಷಾ ರೂಪವಾಗಿ ‘ಅನ್ನ’ ಪದಕ್ಕೆ ಪರ್ಯಾಯವಾಗಿ ಬಳಕೆಯಾಗಬಹುದು. ಅದೇ ಮೈಸೂರು ಪ್ರದೇಶದ ಆದಿ ಜಾಂಬವರ ಕನ್ನಡದಲ್ಲಿ ಅದೊಂದು ವಿಶಿಷ್ಟ ಪದ. ಕುಲ ಸಂಬಂಧಿಯಾದ ಹೆಸರುಗಳ ಸೂಚನೆಯಲ್ಲಿ ಮಾತ್ರ ವಿಶೇಷವಾಗಿ ಬಳಕೆಯಾಗುತ್ತದೆ. ಕುಲದ ಹೆಸರುಗಳು ಆದಿ ಜಾಂಬವರಲ್ಲಿ ಈ ರೀತಿ ಇವೆ. ಉದಾಹರಣೆಗೆ, ಹೆಣದ ಬುವ್ವ, ಹೆಡಿಗೆ ಬುವ್ವ, ಮೊರದ ಬುವ್ವ ಇತ್ಯಾದಿ. ಹಾಗೆಯೇ ಕನ್ನಡದ ಸಾಮಾನ್ಯ ಪದಕೋಶದಲ್ಲಿ ನಿರ್ದಿಷ್ಟ ಅರ್ಥಗಳನ್ನು ಪಡೆದಿರುವ ಪದಗಳು ಜಾತಿ ಎಲ್ಲೆಯೊಳಗೆ ಭಿನ್ನಾರ್ಥಗಳನ್ನೋ, ಅರ್ಥವನ್ನು ಕುಗ್ಗಿಸಿಯೋ ಹಿಗ್ಗಿಸಿಯೋ ಬಳಕೆಯಾಗುತ್ತಿರುವುದನ್ನು ಕಾಣಬಹುದು. ಉದಾ. ಕುಲುಮೆ ಎನ್ನುವುದು ಕನ್ನಡದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿದೆ. ವೃತ್ತಿನಿರತ ಕಮ್ಮಾರರ ಕನ್ನಡದಲ್ಲಿ ಅದನ್ನು ‘ಕಾಳಮ್ಮ’ ಎಂದು ಕರೆಯುತ್ತಾರೆ. ಹಾಗೆಯೇ ‘ಹುಳಿ’ ಎಂಬುದು ಕನ್ನಡದಲ್ಲಿ ಒಂದು ರುಚಿ ಸೂಚಕ ಪದ ಆದರೆ ಕೆಲವು ಜಾತಿಗಳಲ್ಲಿ (ಉದಾ. ಬ್ರಾಹ್ಮಣ) ಅದೊಂದು ಸೇವಿಸಲು ಸಿದ್ಧಗೊಂಡ ಆಹಾರದ ಹೆಸರೂ ಆಗಬಹುದು. ಉದಾ. “ಅವ್ರೆಕಾಳು ಹುಳಿಯಲ್ಲಿ ಅನ್ನ ತಿನ್ನಿ…..” ಆದರೆ ಅದೇ ಆದಿಕರ್ನಾಟಕರ ಕನ್ನಡದಲ್ಲಿ ಇದೊಂದು ರುಚಿಸೂಚಕ ಪದ ಮಾತ್ರವಾಗಿದೆ.

ಕನ್ನಡದಲ್ಲಿ ಕೆಲವು ನಾಮಪದ, ಗುಣವಾಚಕ, ಕ್ರಿಯಾಪದಗಳಿಗೆ ಎರಡೆರಡು ಪರ್ಯಾಯಗಳಿದ್ದು ಸ್ಥೂಲವಾಗಿ ಇವುಗಳ ಬಳಕೆ ಉನ್ನತ ಜಾತಿ ಮತ್ತು ಕೆಳ ಜಾತಿಗಳ ನಡುವೆ ಪ್ರತ್ಯೇಕವಾಗಿ ಬಳಕೆಯಲ್ಲಿವೆ. ಈ ಎರಡೂ ರೂಪಗಳು ಎಲ್ಲರಿಗೂ ಅರ್ಥವಾಗುವಂತಿದ್ದರೂ ಇದರಲ್ಲಿ ಒಂದು ಮಾತ್ರ ಒಂದು ಜಾತಿಯವರ ಬಳಕೆಯಲ್ಲಿ ಸಕ್ರಿಯವಾಗಿರುತ್ತದೆ. ಇನ್ನೊಂದು ಕೇಳಿಸಿಕೊಳ್ಳಲು ಮಾತ್ರ ಸೀಮಿತವಾಗಿರುತ್ತದೆ.

ಉದಾಹರಣೆಗೆ,

ಉನ್ನತ ಜಾತಿ ಬಳಕೆ

ಕೆಳಜಾತಿಗಳ ಬಳಕೆ

ಇಡು    

ಮಡಗು

ಸ್ವಲ್ಪ

ವಸಿ

ಸಾರು

ಯಸ್ರು

ಇವೆ

ಅವೆ

ಇದೆ

ಅದೆ

ಇಷ್ಟಲ್ಲದೆ ಮಹಾಪ್ರಾಣಯುಕ್ತ ಉಚ್ಛಾರಣೆ, ಮಹಾಪ್ರಾಣ ರಹಿತ ಉಚ್ಛಾರಣೆ ಅನುನಾಸಿಕೀಕರಣ, ಧ್ವನಿಜಾರು, ವಾಕ್ಯಗಳ ಉಚ್ಛಾರಣೆಯ ದೀರ್ಘತ್ವ ಹ್ರಸ್ವತ್ವಗಳೆಲ್ಲವನ್ನು ನಿರ್ದಿಷ್ಟ ಜಾತಿಗಳ ಭಾಷಿಕ ಚಹರೆಗಳನ್ನಾಗಿ ಗುರುತಿಸಲಾಗುತ್ತದೆ. ಸಾಮಾಜಿಕರು ಪರಸ್ಪರ ಜಾತಿಗಳನ್ನು ಮೂದಲಿಸುವಾಗ ಇಂತಹ ಭಾಷಿಕ ಲಕ್ಷಣಗಳನ್ನು ಹೆಸರಿಸಿ, ಅನುಕರಿಸಿ ಹೀಯಾಳಿಸುವುದೂ ಇದೆ. ಹಾಗೆಯೇ ನಾಟಕ, ಸಿನಿಮಾ, ದೂರದರ್ಶನ ಧಾರಾವಾಹಿಗಳಲ್ಲಿ ಇಂತಹ ಭಾಷಿಕ ಲಕ್ಷಣಗಳನ್ನು ಅಳವಡಿಸಿ ಪಾತ್ರಗಳ ಸಾಮಾಜಿಕ ಸ್ಥಾನಮಾನ ಗಳನ್ನು ಗುರುತಿಸಲಾಗುತ್ತದೆ. ಕೆಳಜಾತಿಯ ಜನರು ಶೈಕ್ಷಣಿಕ, ಸಾಮಾಜಿಕವಾಗಿ ಉನ್ನತ ಸ್ಥಾನಗಳಿಗೆ ಹೋದಂತೆ ಇಂತಹ ಭಾಷಿಕ ಲಕ್ಷಣಗಳನ್ನು ಕಳಚಿಕೊಳ್ಳುತ್ತಾ ಪ್ರಮಾಣಿತ / ಶಿಷ್ಟ ಭಾಷಾ ಲಕ್ಷಣಗಳನ್ನು ಅಳವಡಿಸಿಕೊಳ್ಳುವುದನ್ನು ಕಾಣಬಹುದು.

ನಿರ್ಬಂಧಿತ ಮತ್ತು ವಿಸ್ತೃತ ಸಂಕೇತಗಳು

‘ನಿರ್ಬಂಧಿತ ಮತ್ತು ವಿಸ್ತೃತ ಸಂಕೇತಗಳು’ ಎಂಬ ಪರಿಕಲ್ಪನೆ ಸಾಮಾಜಿಕ ಭಾಷಾಶಾಸ್ತ್ರದಲ್ಲಿ 1970ರ ದಶಕದಲ್ಲಿ ಚರ್ಚಿತವಾದ ಪ್ರಮುಖ ಪ್ರಶ್ನೆಗಳಲ್ಲಿ ಒಂದು. ಈ ಚರ್ಚೆಯ ಮುಖ್ಯ ವಿಷಯ ಸಮಾಜದ ವಿವಿಧ ವರ್ಗಗಳಿಗೆ ಸೇರಿದ ಜನರು ಭಾಷಾ ಬಳಕೆಯಲ್ಲಿ ವಿಭಿನ್ನ ಸಾಮರ್ಥ್ಯ ವನ್ನು ತೋರ್ಪಡಿಸುವರೆ ಎಂಬ ಪ್ರಶ್ನೆಯನ್ನು ಆಧರಿಸಿತ್ತು.

ಸಮಾಜದಲ್ಲಿನ ವಿವಿಧ ಸಾಮಾಜಿಕ ವರ್ಗ ಮತ್ತು ಸಮುದಾಯಗಳ ಸಂಸ್ಕೃತಿವಾಹಕ ಸಂವಹನ ಮಾದರಿಗಳಲ್ಲಿ, ಸಮಾಜದಲ್ಲಿನ ಅಧಿಕಾರ ಹಂಚಿಕೆ, ಅದರ ನಿಯಂತ್ರಣ ತತ್ವಗಳು, ಪ್ರವೇಶ ಪಡೆಯುವುದರಿಂದ ಉಂಟಾಗುವ ಭಾಷಾ ಕಲಿಕೆಯಲ್ಲಿನ ವ್ಯತ್ಯಾಸಗಳನ್ನು ವಿವರಿಸುವ ಪ್ರಯತ್ನ ವನ್ನು ಈ ನಿರ್ಬಂಧಿತ ಮತ್ತು ವಿಸ್ತೃತ ಸಂಕೇತಗಳ ಪರಿಕಲ್ಪನೆ ಮಾಡುತ್ತವೆ. ವ್ಯಕ್ತಿಗಳ ಭಾಷಾ ಸಂಪನ್ಮೂಲ ಮತ್ತು ವ್ಯಕ್ತಿಗಳ ನಡುವಿನ ಸಾಮಾಜಿಕ ಸಂಬಂಧವನ್ನು ಆಧರಿಸಿ ಅರ್ಥ ನಿರ್ಮಾಣವು ಆಯ್ಕೆಯ ವಿಧಾನದಲ್ಲಿ ನಡೆಯುತ್ತದೆ ಎಂಬುದು ಈ ಸಿದ್ಧಾಂತದವರ ಪ್ರತಿಪಾದನೆ.

ಗಾಢ ಸಾಮಾಜಿಕ ಸಂಬಂಧಗಳಿರುವ ಎರಡು ಸಮುದಾಯಗಳು ಸಂವಹನದಲ್ಲಿ, ಅರ್ಥದ ಆಯ್ಕೆಯಲ್ಲಿ ಯಾವುದೇ ತೊಂದರೆ ಅನುಭವಿಸುವು ದಿಲ್ಲ. ಉದಾಹರಣೆಗೆ ಕನ್ನಡದಲ್ಲಿ ‘ಅಮ್ಮ’ ಎನ್ನುವ ಸಂಬಂಧವಾಚಕ ಪದವನ್ನು ವಿವಿಧ ಸಾಮಾಜಿಕ ಸಮುದಾಯಗಳು ಬೇರೆ ಬೇರೆ ಅರ್ಥದಲ್ಲಿ ಬಳಸುತ್ತಿವೆ. ಸಾಮಾಜಿಕವಾಗಿ ಹತ್ತಿರದ ಸಮುದಾಯಗಳು ಒಂದು ಅರ್ಥ ವನ್ನು ಪಡೆದಿದ್ದರೆ ಸಾಮಾಜಿಕ ಅಂತರವುಳ್ಳ ಸಮುದಾಯಗಳು ಬೇರೆ ಅರ್ಥ ವನ್ನು ಪಡೆದಿವೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಈಡಿಗ, ನಾಯಕ, ಕುಂಬಾರ, ಆದಿ ಕರ್ನಾಟಕ ಸಮುದಾಯಗಳಲ್ಲಿ ಅಮ್ಮ ಪದಕ್ಕೆ – ಅಜ್ಜಿ ಎಂಬ ಅರ್ಥವೂ ಬ್ರಾಹ್ಮಣ ಮುಂತಾದ ಮೇಲುಸ್ತರದ ಸಮುದಾಯ ಗಳಲ್ಲಿ ‘ಅಮ್ಮ’ ಪದಕ್ಕೆ ತಾಯಿ ಎಂಬ ಅರ್ಥವೂ ಇದೆ. ಒಂದೇ ಅರ್ಥವನ್ನು ಹೊಂದಿರುವ ಸಮುದಾಯಗಳು ಸಂವಹನದಲ್ಲಿ ಅರ್ಥದ ಆಯ್ಕೆಯ ವಿಷಯದಲ್ಲಿ ಗೊಂದಲಗೊಳ್ಳುವುದಿಲ್ಲ. ಅಂತರವುಳ್ಳ ಸಮುದಾಯಗಳ ನಡುವಿನ ಸಂವಹನದಲ್ಲಿ ಅರ್ಥದ ಆಯ್ಕೆಯ ವಿಷಯದಲ್ಲಿ ಗೊಂದಲವಾಗುತ್ತದೆ.

ವಿವಿಧ ಸಾಮಾಜಿಕ ವರ್ಗಗಳಿಗೆ ಸೇರಿದ ವಿಭಿನ್ನ ಕುಟುಂಬ, ರಚನೆ ಗಳೊಂದಿಗೆ ಸಂಕೇತಗಳ ಮೂಲ ಬೆಸೆದುಕೊಂಡಿರುತ್ತದೆ. ಮತ್ತು ನಿರ್ಣಾಯಕ ಸಾಮಾಜೀಕರಣದ ಸಂದರ್ಭಗಳ ಮೂಲಕ ಇದರ ಪ್ರಸರಣವಾಗುತ್ತದೆ. ಈ ಸಂಕೇತಗಳು ಸಮೂಹದ ನೀತಿ, ಅರ್ಥ, ಮೌಲ್ಯ, ನಿಯಮಗಳಿಗೆ ಅನು ಗುಣವಾಗಿ ಮಕ್ಕಳನ್ನು ಅವರು ನಿರ್ವಹಿಸಬೇಕಾದ ಪಾತ್ರಗಳಿಗೆ ಅನುಗುಣವಾಗಿ ರೂಪಿಸುತ್ತವೆ. ಪರಸ್ಪರ ತಿಳುವಳಿಕೆ ಇದ್ದು ಸಾಮಾಜಿಕ ಸಂಬಂಧಗಳು ಗಾಢವಾಗಿರುವ ಸ್ಥಳೀಯ ಸಂದರ್ಭಗಳಲ್ಲಿ ಅರ್ಥವನ್ನು ಸ್ಪಷ್ಟ ಮತ್ತು ನಿರ್ದಿಷ್ಟ ಪಡಿಸುವ ಅಗತ್ಯ ಕಡಿಮೆ ಇರುವಾಗ ನಿರ್ಬಂಧಿತ ಸಂಕೇತಗಳು ಹುಟ್ಟಿಕೊಳ್ಳುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಕ್ಷೀಣ ಸಾಮಾಜಿಕ ಸಂಬಂಧಗಳಿಂದಾಗಿ ಪರಸ್ಪರ ತಿಳುವಳಿಕೆ ಕಡಿಮೆಯಿದ್ದು ಅರ್ಥವನ್ನು ನಿರ್ದಿಷ್ಟ ಮತ್ತು ಸ್ಪಷ್ಟಪಡಿಸಿ ಕೊಳ್ಳುವ ಅಗತ್ಯ ಹೆಚ್ಚಿರುವಲ್ಲಿ ವಿಸ್ತೃತ ಸಂಕೇತಗಳು ಹುಟ್ಟಿಕೊಳ್ಳುತ್ತವೆ.

“ಮಧ್ಯಮ ವರ್ಗದ ಮಕ್ಕಳು ಮೇಲಿನ ಎರಡೂ ಬಗೆಯ ಸಂಕೇತಗಳನ್ನು ಗ್ರಹಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಕೆಳವರ್ಗದ ಮಕ್ಕಳ ಗ್ರಹಿಕೆ ನಿರ್ಬಂಧಿತ ಸಂಕೇತಗಳಿಗೆ ನಿಯಮಿತಗೊಂಡಿರುತ್ತದೆ. ಶೈಕ್ಷಣಿಕ ಮತ್ತು ಶಾಲೆಯ ಅಭ್ಯಾಸದ ಅಗತ್ಯಗಳಿಗೆ ಬೇಕಾದ ವಿಸ್ತೃತ ಸಂಕೇತಗಳ ಗ್ರಹಿಕೆಯಲ್ಲಿ ಕಷ್ಟವಾಗುತ್ತದೆ. ಇದಕ್ಕೆ ಕಾರಣ ಅವರು ನಿರ್ಬಂಧಿತ ಸಂಕೇತಗಳ ನಿಯಂತ್ರಣ ಕ್ಕೊಳಪಟ್ಟಿರುವುದೇ ಆಗಿರುತ್ತದೆ”. ಹೀಗೆ ಈ ಸಿದ್ಧಾಂತದ ಸಂಕೀರ್ಣತೆಗಳು ಕೆಲವು ವೇಳೆ ಮಧ್ಯಮ ವರ್ಗದ ಮಕ್ಕಳಲ್ಲಿ ಭಾವನಾ ಸ್ವರೂಪದ ಅಮೂರ್ತ ವಿಷಯಗಳ ಗ್ರಹಿಕೆ ಸಾಧ್ಯ ಮತ್ತು ಕೆಳವರ್ಗದ ಮಕ್ಕಳಲ್ಲಿ ಇದು ಸಾಧ್ಯವಿಲ್ಲ ಎನ್ನುವುದನ್ನು ಪ್ರಸ್ತಾಪಿಸುತ್ತವೆ. ವಾಸ್ತವವಾಗಿ ಈ ತರಹದ ವ್ಯತ್ಯಾಸಗಳು ಮಕ್ಕಳ ಭಾಷಾ ಸಂಪನ್ಮೂಲಗಳ ವ್ಯತ್ಯಾಸದ ಗುಣಲಕ್ಷಣಗಳಾಗಿರುತ್ತವೆ. ತನ್ನ ಸಿದ್ಧಾಂತದಲ್ಲಿ ಈ ತರಹದ ವಾದಗಳಿಗೆ ಯಾವುದೇ ಆಧಾರ ಅವಕಾಶ ಗಳಿಲ್ಲ; ಖಂಡಿತವಾಗಿಯೂ ಕೆಳವರ್ಗದ ಭಾಷಿಕರು ಅಮೂರ್ತ ಕಲ್ಪನೆಗಳನ್ನು ನಿರ್ಬಂಧಿತ ಸಂಕೇತಗಳಲ್ಲಿಯೇ ನಿರ್ವಹಿಸುವುದು ಸಾಧ್ಯವಿದೆ ಎಂದು ಈ ಸಿದ್ಧಾಂತದವರು ಬಲವಾಗಿ ಪ್ರತಿಪಾದಿಸುತ್ತಾರೆ.

ಈ ತರಹದ ಅಧ್ಯಯನಗಳಿಂದ ಭಾಷೆ ಮತ್ತು ಸಾಮಾಜಿಕ ವರ್ಗದ ಸಂಬಂಧಗಳು ಸರಳವಾಗಿರುವುದಿಲ್ಲ ಎಂಬುದು ತಿಳಿಯುತ್ತದೆ. ಭಾಷೆ ಕಲಿಯುವಾಗಿನ ಸಂದರ್ಭ, ಕುಟುಂಬ ಜೀವನದ ರಚನೆ ಇತ್ಯಾದಿ ಅಂಶಗಳು ಕಲಿಕೆಯ ಪ್ರಕ್ರಿಯೆಯಲ್ಲಿ ಮಧ್ಯೆ ಪ್ರವೇಶಿಸುತ್ತವೆ. ವಿವಿಧ ವರ್ಗದ ಜನಗಳ ಮಾತಿನ ಸಂದರ್ಭದಲ್ಲಿ ಈ ಅಂಶಗಳು ಪ್ರಭಾವ ಬೀರುತ್ತವೆ.

ಗೌರವ ಸೂಚಕ ನುಡಿ : ಭಾಷೆಯ ಸಾಮಾಜಿಕ ಚಹರೆಗಳನ್ನು ವ್ಯಕ್ತ ಗೊಳಿಸುವಲ್ಲಿ ಮುಖ್ಯವಾದುದು ಗೌರವ ಸೂಚಕ ನುಡಿಗಳ ಬಳಕೆ. ಪರಸ್ಪರ ಗೌರವ ಸೂಚಿಸಲು ಭಾಷೆಯಲ್ಲಿ ನಿರ್ದಿಷ್ಟ ರೂಪಗಳಿರುತ್ತವೆ. ಸಂಬೋಧನಾ ಮಾದರಿಗಳು ಬಹುವಚನಗಳ ಬಳಕೆ ಕನ್ನಡದಲ್ಲಿ ಈ ಕೆಲಸವನ್ನು ನಿರ್ವಹಿಸುತ್ತವೆ. ಗೌರವ ಸೂಚನೆ ಬಳಕೆಯಾಗುವ ಸಂದರ್ಭ, ಪ್ರಯೋಗಿಸುವ ಮತ್ತು ಸ್ವೀಕರಿಸುವ ವ್ಯಕ್ತಿಗಳನ್ನು ಅವಲಂಬಿಸಿ ವಿಭಿನ್ನ ಭಾಷಿಕ ರೂಪಗಳು ಪ್ರಯೋಗಗೊಳ್ಳುತ್ತವೆ. ಇವು ವ್ಯಕ್ತಿಗಳ ನಡುವಿನ ಸಾಮಾಜಿಕ ಅಂತರ, ಸಾಮೀಪ್ಯ, ವಯಸ್ಸು, ಲಿಂಗ, ಜಾತಿ, ರಕ್ತ ಸಂಬಂಧ, ಧಾರ್ಮಿಕ ಸ್ಥಾನಮಾನ ಇತ್ಯಾದಿ ಅಂಶಗಳಿಂದ ಪ್ರೇರಿತವಾಗಬಹುದು. ಉದಾಹರಣೆಗೆ ಕನ್ನಡದಲ್ಲಿ ವಯಸ್ಸಿನ ಅಂತರ ನಿರ್ವಹಣೆಗೆ ಹಿರಿಯರಿಗೆ ಗೌರವ ಸೂಚಕ ಬಹುವಚನ ರೂಪಗಳನ್ನು ಉಲ್ಲೇಖ ಮತ್ತು ಸಂಬೋಧನಾ ಸಂದರ್ಭಗಳಲ್ಲಿ ಬಳಸುತ್ತಾರೆ. ಕಿರಿಯರಿಗೆ ಏಕವಚನವನ್ನು ಬಳಸುತ್ತಾರೆ. ಹಾಗೆಯೆ ಜಾತಿ ಶ್ರೇಣೀಕರಣದಲ್ಲಿ ವಯಸ್ಸಿಗಿಂತ ಹೆಚ್ಚಾಗಿ ಆ ಜಾತಿಯ ಸಾಮಾಜಿಕ ಶ್ರೇಣಿ ಮುಖ್ಯ ಪಾತ್ರ ವಹಿಸುತ್ತದೆ. ಇದು ಹೆಚ್ಚಾಗಿ ಸಂಬೋಧನೆಯಲ್ಲಿ ವ್ಯಕ್ತವಾಗುತ್ತದೆ.

ಉದಾ: ಕನ್ನಡದಲ್ಲಿ ಸಾಮಾಜಿಕವಾಗಿ ಮೇಲ್ವರ್ಗದಲ್ಲಿರುವ ಕಿರಿಯ ವಯಸ್ಸಿನವರು ಸಾಮಾಜಿಕ, ಆರ್ಥಿಕವಾಗಿ ಕೆಳವರ್ಗದಲ್ಲಿರುವ ತಮ್ಮ ಕೆಲಸಗಾರರಿಗೆ ಏಕವಚನದಲ್ಲಿ ಸಂಬೋಧಿಸುವರು. ಅದೇ ವಯಸ್ಸಿನಿಂದ ಹಿರಿಯರಾದ ಕೆಳವರ್ಗದವರು ಮೇಲ್ವರ್ಗದ ಕಿರಿಯ ವಯಸ್ಕರಿಗೂ ಗೌರವ ಸೂಚಕ ಬಹುವಚನ ಪ್ರತ್ಯಯವನ್ನು ಹಚ್ಚಿಯೇ ಮಾತನಾಡುವುದು ಈ ಅಂಶಗಳನ್ನು ಸ್ಪಷ್ಟಪಡಿಸುತ್ತದೆ.

ಸಾಮಾಜಿಕ ಅಂತರ ಸೂಚಿಸಲು ಮತ್ತು ಗೌರವ ಸಂಬಂಧಗಳನ್ನು ಸೂಚಿಸಲು ಎಲ್ಲ ಭಾಷೆಗಳೂ ಸಾಮಾನ್ಯವಾಗಿ ಸಾಮಗ್ರಿಯನ್ನು ಹೊಂದಿರು ತ್ತವೆ. ಅವು ತಮ್ಮ ವ್ಯಾಕರಣ ಮತ್ತು ಪದಕೋಶಗಳಲ್ಲಿಯೇ ಇದನ್ನು ಸಂಕೇತಿಸಿಕೊಂಡು ವ್ಯವಸ್ಥೆ ಮಾಡಿಕೊಂಡಿರುತ್ತವೆ.

ಸಾಮಾಜಿಕ ಅಂತಸ್ತು ಮತ್ತು ಪಾತ್ರ : ‘ಅಂತಸ್ತು’ ಎಂದರೆ ಸಾಮಾಜಿಕ ರಚನೆಯಲ್ಲಿ ವ್ಯಕ್ತಿ ಪಡೆದುಕೊಳ್ಳುವ ಸ್ಥಾನಮಾನ. ಅಂದರೆ ಯಜಮಾನ, ಜವಾನ, ಅಧಿಕಾರಿ, ಗಂಡ, ಹೆಂಡತಿ ಇತ್ಯಾದಿ. ‘ಪಾತ್ರ’ ಎಂದರೆ ವ್ಯಕ್ತಿ ಗಳಿಸಿ ಕೊಂಡ ಅಂತಸ್ತಿಗೆ ಸಮಾಜವು ವ್ಯಕ್ತಿಯಿಂದ ಬಯಸುವ ಸಾಂಪ್ರದಾಯಿಕ ವರ್ತನಾ ವಿಧಾನ. ಸಾಮಾಜಿಕ ಪಾತ್ರಗಳಿಗೆ ಕೆಲವು ಪಾರಂಪರಿಕ ನಿಯಮ ಗಳಿರುತ್ತವೆ. ಉದಾಹರಣೆಗೆ ಸಮವಸ್ತ್ರ, ಕೂದಲವಿನ್ಯಾಸ ಇತ್ಯಾದಿ. ಒಬ್ಬರೇ ವ್ಯಕ್ತಿ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಿರುವ ಸಂದರ್ಭ ಗಳಿರುತ್ತವೆ. ಅಂದರೆ ಉದಾಹರಣೆಗೆ ಮನೆಯಲ್ಲಿ ಒಂದು ಅಂತಸ್ತಿದ್ದರೆ ಸಾಮಾಜಿಕ ವಾತಾವರಣದಲ್ಲಿ ಬೇರೆ ಬೇರೆ ಅಂತಸ್ತಿರುತ್ತದೆ. ಮನೆಗೆ ಹಿರಿಯರಾಗಿದ್ದು, ಯಜಮಾನ ಆಗಿದ್ದು, ಕಛೇರಿಯಲ್ಲಿ ದುಡಿಯುವ ಜವಾನ ಆಗಿದ್ದು, ಕ್ರೀಡಾ ತಂಡದಲ್ಲಿ ನಾಯಕನಾಗಿರುತ್ತಾನೆ. ಅದೇ ವ್ಯಕ್ತಿ ದೇವಸ್ಥಾನಕ್ಕೆ ಬಂದರೆ ಅರ್ಚಕ ಆಗಿರಬಹುದು. ಈ ಪ್ರತಿಯೊಂದು ಸ್ಥಾನಮಾನವು ಸಾಂಪ್ರದಾಯಿಕವಾಗಿ ಕೆಲವು ಭಾಷಿಕ ಲಕ್ಷಣಗಳನ್ನು ಹೊಂದಿರುತ್ತದೆ. ಅಂದರೆ ಪ್ರತಿ ಪಾತ್ರಕ್ಕೂ ಭಿನ್ನವಾದ ಸಂಬೋಧನಾ ರೂಪಗಳು, ವಿಶಿಷ್ಟವಾದ ಪದಕೋಶ ಇತ್ಯಾದಿ ಗಳನ್ನೊಳಗೊಂಡಿರುತ್ತದೆ. ಮನುಷ್ಯರು ತಮ್ಮ ಜೀವಿತಾವಧಿಯಲ್ಲಿ ಈ ತರಹದ ಹಲವು ಬಗೆಯ ಭಾಷಿಕ ವರ್ತನೆಗಳನ್ನು ಕಲಿಯುತ್ತಿರುತ್ತಾರೆ.

ವಿಶೇಷ ಸಂದರ್ಭಗಳಲ್ಲಿ ಮಾತ್ರ ಸಾಮಾಜಿಕ ಪಾತ್ರಗಳಿಗೆ ಸಂಪೂರ್ಣ ಬೇರೆಯದೇ ಭಾಷೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಮಸೀದಿಯಲ್ಲಿ ಕಾಜಿ ಕೂಗುವ ಅಂದರೆ ಪ್ರಾರ್ಥನೆಗೆ ಸೂಚನೆ ಕೊಡುವ ಉರ್ದು ಭಾಷಿಕ ವ್ಯಕ್ತಿ ‘ಅರಾಬಿಕ್’ ಭಾಷೆಯಲ್ಲಿ ಪ್ರಾರ್ಥನೆ, ಪ್ರವಚನ ಹಾಗೂ ಕೂಗುವಿಕೆಯನ್ನು ಕಲಿಯಬೇಕಾಗುತ್ತದೆ. ಹಾಗೆ ಕನ್ನಡ ಭಾಷಿಕ ವ್ಯಕ್ತಿ ಮದುವೆ ಸಂದರ್ಭಗಳಲ್ಲಿ ಪೌರೋಹಿತ್ಯಕ್ಕೆ ಸಂಸ್ಕೃತ ಕಲಿಯ ಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿಗಳು ವೃತ್ತಿಗನುಗುಣವಾಗಿ ತಮ್ಮ ಧ್ವನಿ, ತಾನ, ಏರಿಳಿತಗಳಲ್ಲಿ ವ್ಯತ್ಯಾಸ ಮಾಡಿಕೊಳ್ಳುವ ಅಗತ್ಯವೂ ಕಂಡುಬರುತ್ತದೆ. ಉದಾಹರಣೆಗೆ ಪೊಲೀಸ್ ಅಧಿಕಾರಿಗಳು, ವ್ಯಾಯಾಮ ಶಿಕ್ಷಕರು, ವೈದ್ಯರು ಮುಂತಾದವರು.

ಕೆಲವು ಪ್ರಕರಣಗಳಲ್ಲಿ ಸಾಮಾಜಿಕ ಪಾತ್ರಗಳಿಗೂ ಭಾಷಿಕ ಅಂಶಗಳಿಗೂ ಸಂಬಂಧವನ್ನು ಸುಲಭವಾಗಿ ಗುರುತಿಸಬಹುದು. ಆದರೆ ಕೆಲವು ಪಾತ್ರಗಳಲ್ಲಿ ಅಂದರೆ ಆ ಪಾತ್ರ ವಿಶೇಷವಾಗಿ ಸಾಮಾಜಿಕ ಪರಿಭಾಷೆಯಲ್ಲಿ ಸರಿಯಾಗಿ ಗುರುತಿಸಿಕೊಳ್ಳದಿದ್ದಾಗ ಸಾಮಾಜಿಕ ಪಾತ್ರಕ್ಕೂ ಭಾಷಿಕ ಅಂಶಗಳಿಗೂ ಸಂಬಂಧವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಅಪರಿಚಿತ ಸಂಸ್ಕೃತಿ ಮತ್ತು ಭಾಷೆಗಳ ವಿಷಯದಲ್ಲಿ ಸಹಾ ಸಾಮಾಜಿಕ ಪ್ರಭಾವವನ್ನು ಗುರುತಿಸುವಿಕೆಯ ಸಮಸ್ಯೆ ಇದೆ. ಕೆಲವು ಸಂಸ್ಕೃತಿಗಳಲ್ಲಿ ಊಟದ ಸಮಯದಲ್ಲಿ ಊಟದ ಗುಣಾವಗುಣಗಳ ಬಗ್ಗೆ ಪ್ರಶಂಸಿಸುವುದು ಒಳ್ಳೆಯ ನಡವಳಿಕೆಯಾದರೆ ಕೆಲವು ಸಮಾಜಗಳಲ್ಲಿ ಅದು ಅಪರಾಧವಾಗುತ್ತದೆ.

ಸಾಮಾಜಿಕ ಅನನ್ಯತೆ ಮತ್ತು ಅಂತರ: ಒಂದು ಸಾಮಾಜಿಕ ಗುಂಪಿನೊಂದಿಗೆ ವ್ಯಕ್ತಿಯ ಅನನ್ಯತೆ ಅಥವಾ ಅಂತರವನ್ನು ಗುರುತಿಸುವಲ್ಲಿ ಅವರು ಬಳಸುವ ಭಾಷಾರೂಪಗಳು ನೆರವಾಗುತ್ತವೆ. ಸಾಮಾಜಿಕ ಗುಂಪಿನೊಂದಿಗೆ ವ್ಯಕ್ತಿಯ ಅನನ್ಯತೆ ಅಥವಾ ಅಂತರದ ಪ್ರಮಾಣವನ್ನು ಅವಲಂಬಿಸಿ ಭಾಷಾರೂಪಗಳು ಬಳಕೆಯಾಗುತ್ತವೆ. ಅನನ್ಯತೆ ಅಥವಾ ಅಂತರ ಸೂಚಕಗಳು ಕುಟುಂಬ, ಲಿಂಗ, ಜನಾಂಗ, ಜಾತಿಯಂತಹ ಸಾಮಾಜಿಕ ವರ್ಗಗಳಿಗೆ ಸಂಬಂಧಿಸಿರ ಬಹುದು ಅಥವಾ ಸಾಮಾಜಿಕ ರಚನೆಯ ವ್ಯಾಖ್ಯಾನದಲ್ಲಿ ಪರಿಗಣಿಸುವ ಯಾವುದೇ ಗುಂಪು ಸಂಸ್ಥೆಗಳೊಂದಿಗಿರಬಹುದು. ಇದು ಜನಸಮೂಹದ ಕಿರಿಯ ವಯಸ್ಕ ಗುಂಪನ್ನೂ ಒಳಗೊಳ್ಳಬಹುದು. ಅಂದರೆ ಸಣ್ಣಮಕ್ಕಳ ಗುಂಪು, ಬೀದಿ ಹುಡುಗರ ಗುಂಪು ಅಥವಾ ಸಂಪೂರ್ಣ ವಿರುದ್ಧವಾದ ಧಾರ‌್ಮಿಕ ಸಂಘಟನೆ ಮತ್ತು ರಾಜಕೀಯ ಪಕ್ಷಗಳು. ಇದರಲ್ಲಿ ಅನನ್ಯತೆ ಮತ್ತು ಅಂತರದ ಚಿಹ್ನೆಗಳು ಒಂದು ಪದ, ಪದಪುಂಜ, ಅಥವಾ ಉಚ್ಚಾರಣೆ ಯಂತಹ ಸಣ್ಣ ಘಟಕದಿಂದ ಹಿಡಿದು ಭಾಷೆಯಷ್ಟು ದೊಡ್ಡದೂ ಆಗಿರಬಹುದು.

ಉದಾಹರಣೆಗೆ ಸಾಮಾನ್ಯವಾಗಿ ಕಿರಿಯ ವಯಸ್ಕರು ತಮ್ಮ ನಡುವೆ ಗೌರವ ಸೂಚಕ ಸಂಬೋಧನೆಗಳನ್ನು ಬಳಸುವುದಿಲ್ಲ. ಹಾಗೆಯೇ ಒಂದು ಧಾರ‌್ಮಿಕ ಗುಂಪಿಗೆ ಸೇರಿದವರು ತಮ್ಮ ಧಾರ‌್ಮಿಕ ಚೌಕಟ್ಟಿನ ಚಹರೆಯನ್ನು ವ್ಯಕ್ತಪಡಿಸಲು ಕೆಲವು ನಿರ್ದಿಷ್ಟ ರೀತಿಯ ಮಾತಿನ ಕ್ರಮಗಳನ್ನು ಅನುಸರಿಸ ಬಹುದು. ಕೆಲವು ಸಮುದಾಯಗಳಲ್ಲಿ ತಮ್ಮ ಸಮುದಾಯದ ಹಿರಿಯರ ಹೆಸರುಗಳನ್ನು ಸಂಬೋಧಿಸುವುದಿಲ್ಲ. ಹಾಗೆಯೇ ನಿರ್ದಿಷ್ಟ ನಂಬಿಕೆಗಳನ್ನು ಹೊಂದಿರುವ ಸಾಮಾಜಿಕ, ಧಾರ‌್ಮಿಕ ಗುಂಪು ತಮ್ಮ ಭೇಟಿ ವಿದಾಯದ ಸಂದರ್ಭಗಳಲ್ಲಿ ನಿರ್ದಿಷ್ಟ ಭಾಷಾರೂಪಗಳನ್ನು ತಮ್ಮ ಅನನ್ಯತೆಯ ಚಹರೆಯಾಗಿ ಬಳಸಬಹುದು. ಉದಾಹರಣೆಗೆ ಜೈಭೀಮ್, ಜೈಹಿಂದ್, ಜೈರಾಮ್ ಇತ್ಯಾದಿ. ಹಾಗೆಯೇ ಉಪಾಧ್ಯಾಯರ ಗುಂಪು, ಶಿಕ್ಷಕಿಯರ ಗುಂಪು ತಮ್ಮ ನಡುವಿನ ಸಂವಹನದಲ್ಲಿ ಕೆಲವು ಸಾಮಾನ್ಯ ಭಾಷಾ ರೂಪಗಳನ್ನು ಬಳಸಬಹುದು.

ವಿಭಿನ್ನ ಭಾಷೆಗಳು

ಸಾಮಾಜಿಕ ಅನನ್ಯತೆ ಮತ್ತು ಅಂತರ ನಿರ್ವಹಣೆಯಲ್ಲಿ ಒಂದೇ ಭಾಷೆಯ ಭಿನ್ನ ರೂಪಗಳು ಬಳಕೆಯಾದಂತೆ, ಒಂದೇ ಸಮಾಜದಲ್ಲಿ ಬೇರೆ ಬೇರೆ ಭಾಷೆಗಳು ಬಳಕೆಯಾಗುತ್ತವೆ. ಏಕಭಾಷಿಕ ಸಮಾಜಗಳಲ್ಲಿ ಇದು ಕಂಡುಬರದಿದ್ದರೂ ದ್ವಿಬಹುಭಾಷಿಕ ಸಮಾಜಗಳಲ್ಲಿ ಈ ಬಗೆಯ ನಿರ್ವಹಣೆ ಹೆಚ್ಚಾಗಿರುತ್ತದೆ. ಸಾಮಾಜಿಕ ಸಂಬಂಧಗಳ ಸ್ವರೂಪ ಮತ್ತು ಸಾಮಾಜಿಕ ಸಂದರ್ಭಗಳನ್ನವಲಂಬಿಸಿ ನಿರ್ದಿಷ್ಟ ಭಾಷೆಯನ್ನು ಸಾಮಾಜಿಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹ ಸಮಾಜಗಳಲ್ಲಿ ಸಾಮಾಜಿಕ ರಚನೆಯಲ್ಲಿನ ಭಿನ್ನತೆಗಳನ್ನು ಭಾಷೆಗಳೇ ಸೂಚಿಸುತ್ತವೆ.

ಜೆ. ರೂಬಿನ್ (1968) ರ ಒಂದು ಅಧ್ಯಯನ ಪರಾಗ್ವೆಯಲ್ಲಿ ಗುರಾನಿ ಮತ್ತು ಸ್ಪ್ಯಾನಿಷ್ ಭಾಷೆಗಳ ಬಳಕೆಯನ್ನು ಈ ಹಿನ್ನೆಲೆಯಲ್ಲಿ ಉದಾಹರಿಸು ತ್ತದೆ. ಇಟ್‌ಪುಅಮಿ ಮತ್ತು ಲ್ಯೂಕ್‌ನ ದ್ವಿಭಾಷಿಕ ಜನರಲ್ಲಿ ಹೆಂಡತಿ, ಮಕ್ಕಳು, ಪ್ರಿಯರು, ಯಜಮಾನರು, ಅರ್ಚಕರು ಮುಂತಾದ ಆಪ್ತವಲಯದ ಜನಗಳೊಂದಿಗೆ ‘ಗುರಾನಿ’ ಭಾಷೆಯನ್ನು ಬಹುಜನರು ಬಳಸುತ್ತಾರೆ. ಇದು ಸಂಬೋಧಕರು ಮತ್ತು ಸಂಬೋಧಿಸಲ್ಪಡುವವರ ನಡುವಿನ ಅನನ್ಯತೆ, ಆತ್ಮೀಯತೆಯನ್ನು ಸೂಚಿಸಿದರೆ, ಅದೇ ಜನರಲ್ಲಿ ಕೇವಲ ಪರಿಚಿತರು ಅಥವಾ ಅಪರಿಚಿತರು, ಉದಾಹರಣೆಗೆ ರೋಗಿ-ವೈದ್ಯ, ವಿದ್ಯಾರ್ಥಿ-ಬೋಧಕ, ನಿರ್ವಾಹಕ-ಪ್ರಯಾಣಿಕರ ನಡುವೆ ಸ್ಪ್ಯಾನಿಶ್ ಬಳಕೆಯಾಗುತ್ತದೆ. ಇದು ಸಾಮಾಜಿಕ ಅಂತರವನ್ನು ಸೂಚಿಸುತ್ತದೆ. ನ್ಯಾಯಾಲಯದ ಕಲಾಪಗಳು ಸ್ಪ್ಯಾನಿಶ್‌ನಲ್ಲಿ ಆರಂಭವಾಗಿ ಗುರಾನಿಯಲ್ಲಿ ಕೊನೆಗೊಳ್ಳುತ್ತವೆ.

ಕೊಲಂಬಿಯಾದಲ್ಲಿರುವ ಇಪ್ಪತ್ತು ಇಂಡಿಯನ್ ಬುಡಕಟ್ಟುಗಳೂ ಪ್ರತಿಯೊಂದು ಪ್ರತ್ಯೇಕ ಭಾಷೆಗಳನ್ನು ಹೊಂದಿವೆ. ಆದರೂ ತಮ್ಮ ನಡುವಿನ ಅನನ್ಯತೆಯನ್ನು ಉಳಿಸಿಕೊಳ್ಳಲು ಸ್ಥಳೀಯ ಒಂದು ಭಾಷೆಯನ್ನು ಎಲ್ಲಾ ಬುಡಕಟ್ಟುಗಳೂ ಬಳಸುತ್ತಿವೆ. ಆದರೂ ಅಂತರವನ್ನು ಕಾಯ್ದುಕೊಳ್ಳಲು, ಒಂದು ಪ್ರದೇಶದಲ್ಲಿ ಹರಡಿರುವ ಏಕರೂಪ ಸಂಸ್ಕೃತಿ ಮತ್ತು ಒಂದು ಸಂಪರ್ಕ ಭಾಷೆಯನ್ನು ಮೀರಿಯೂ ಪ್ರತಿ ಬುಡಕಟ್ಟಿನವರೂ ಕನಿಷ್ಠ ಮೂರರಿಂದ ಹತ್ತು ಭಾಷೆಗಳವರೆಗೂ ಕಲಿಯುತ್ತಾರೆ. ಹಾಗೆಯೇ ಭಾಷೆಗಳ ನಡುವೆ ಪ್ರತ್ಯೇಕತೆಯನ್ನು ಖಚಿತವಾಗಿ ನಿರ್ವಹಿಸುತ್ತಾರೆ. ಈ ಇಂಡಿಯನ್ ಬುಡಕಟ್ಟಿನ ಜನರು ಅವರವರಲ್ಲೇ ಭಾಷೆ ಬೆರಕೆಯಾಗದಂತೆ ಗಮನ ನೀಡುತ್ತಾರೆ. ಒಂದೇ ಊರಿಗೆ ಒಂದೊಂದು ಬುಡಕಟ್ಟಿನ ಭಾಷೆಯಲ್ಲಿಯೂ ಪ್ರತ್ಯೇಕ ಹೆಸರುಗಳಿವೆ. ಬುಡಕಟ್ಟಿನ ಪ್ರತ್ಯೇಕತೆಯನ್ನು ಗುರುತಿಸಲು ಭಾಷೆಯೇ ಮಾನದಂಡವಾಗಿರುತ್ತದೆ. ಇಲ್ಲಿನ ಪ್ರತಿ ಬುಡಕಟ್ಟಿನ ವ್ಯಕ್ತಿಯೂ ತಾನು ಯಾವ ಬುಡಕಟ್ಟಿಗೆ ಸೇರಿದವನೆಂದು ಗುರುತಿಸಿಕೊಳ್ಳಲು ತನ್ನ ಪಿತೃಭಾಷೆಯೊಂದಿಗೆ ಮಾತನ್ನು ಆರಂಭಿಸುತ್ತಾನೆ. ಭಾಷೆಯು ಈ ಬುಡಕಟ್ಟುಗಳ ಎಲ್ಲಾ ಸಾಮಾಜಿಕ ವರ್ತನೆಗಳಿಗೂ ಆಸರೆಯಾಗಿದೆ. ಉದಾಹರಣೆಗೆ ಸಂಶೋಧಕರು ‘ಬಾರ’ ಇಂಡಿಯನ್ ಬುಡಕಟ್ಟಿನವರನ್ನು ಅವರ ವೈವಾಹಿಕ ಸಂಬಂಧಗಳ ಬಗೆಗೆ ಪ್ರಶ್ನಿಸಿದಾಗ ಬಂದ ಉತ್ತರ ಹೀಗಿದೆ: ‘ಭಾಷೆಯನ್ನು ನನ್ನೊಂದಿಗೆ ಹಂಚಿಕೊಂಡಿರುವವರೆಲ್ಲರೂ ನನ್ನ ಸಹೋದರರು, ಬೇರೆ ಬೇರೆ ಭಾಷೆಗಳನ್ನು ಮಾತನಾಡುವವರು ನನ್ನ ಸಹೋದರರಲ್ಲದ ಕಾರಣ ನಾನು ಬೇರೆ ಭಾಷಿಕ ಬುಡಕಟ್ಟಿನ ಹೆಣ್ಣನ್ನು ಮದುವೆ ಯಾಗಬಹುದು’ ಎನ್ನುವುದಾಗಿತ್ತು. ಹಾಗೆಯೇ ಇನ್ನೊಬ್ಬ ಬುಡಕಟ್ಟಿನವರನ್ನು ನೀವೆಲ್ಲಾ ಒಂದೇ ಸಾಮಾನ್ಯ ಭಾಷೆಯನ್ನು ಬಿಟ್ಟು ಬೇರೆ ಬೇರೆ ಭಾಷೆಗಳನ್ನು ಬಳಸುವುದೇಕೆಂದು ಪ್ರಶ್ನಿಸಿದಾಗ ‘ನಾವೆಲ್ಲಾ ಒಂದೇ ತುಕಾನೋಯವರಾದರೇ  ನಮ್ಮ ಹೆಂಗಸರನ್ನು ನಾವು ಎಲ್ಲಿಂದ ಪಡೆಯಬೇಕು?’ ಎಂಬ ಉತ್ತರ ಬಂದಿತು. ಇದು ಭಾಷೆಗಳ ಮೂಲಕ ಕಾಣುವ ಒಂದು ಸಮಾಜದಲ್ಲಿನ ಭಿನ್ನತೆಯ ಅಂತಸ್ಥ ಸ್ವರೂಪಗಳನ್ನು ಪರಿಚಯಿಸುತ್ತದೆ.

ವಿಭಿನ್ನ ಬಗೆಗಳು / ದ್ವಿಸ್ತರತೆ

ಒಂದು ಭಾಷಿಕ ಸಮುದಾಯದ ವ್ಯಕ್ತಿಗಳು ತಮ್ಮ ನಡುವಿನ ಅಂತರ, ಆತ್ಮೀಯತೆಗಳನ್ನು ವ್ಯಕ್ತಪಡಿಸಲು, ಸಾಮಾಜಿಕ ರಚನೆಯಲ್ಲಿ ವ್ಯಕ್ತಿಗಳ ನಡುವಿನ ಅಂತರ ಸಾಮೀಪ್ಯವನ್ನು ತೋರ್ಪಡಿಸಲು ಹಾಗೂ ವಿವಿಧ ಸಾಮಾಜಿಕ ಸಂದರ್ಭಗಳಿಂದ ನಿಯಂತ್ರಿಸಲ್ಪಡುವ ವ್ಯಕ್ತಿಯ ಸಾಮಾಜಿಕ ಪಾತ್ರಗಳ ನಿರ್ವಹಣೆಗಾಗಿ, ವ್ಯಕ್ತಿಗಳು ಒಂದೇ ಭಾಷೆಯಲ್ಲಿನ ವಿವಿಧ ಪ್ರಬೇಧ ಗಳಿಗೆ ಜಿಗಿಯುತ್ತಿರುತ್ತಾರೆ. ಉದಾಹರಣೆಗೆ ಒಬ್ಬ ರಾಜಕಾರಣಿ ಭಾಷಣ ಮಾಡುವ ಸಂದರ್ಭದಲ್ಲಿ ಎಲ್ಲ ಜನರಿಗೂ ಅರ್ಥವಾಗುವ ಪ್ರಭೇದದಲ್ಲಿ ಮಾತನಾಡಿ ತನ್ನ ಮನೆಯವರೊಡನೆ ಊರಿನವರೊಡನೆ ಬೇರೊಂದು ಪ್ರಭೇದದಲ್ಲಿ ಮಾತನಾಡಬಹುದು. ಹಾಗೆಯೇ ಒಬ್ಬ ಕಾಲೇಜು ಉಪನ್ಯಾಸಕ ವಿಚಾರ ಸಂಕಿರಣದಲ್ಲಿ ಪತ್ರಿಕೆ ಮಂಡಿಸುವಾಗ ಒಂದು ಪ್ರಭೇದದಲ್ಲಿ ಮಾತನಾಡಿ ಅಥವಾ ಓದಿ ಅದೇ ವಿಷಯದ ಚರ್ಚೆಯನ್ನು ಮಾಡುವಾಗ ಬೇರೊಂದು ಪ್ರಭೇದದಲ್ಲಿ ಮುಂದುವರೆಯ ಬಹುದು. ಹಾಗೆಯೇ ಹರಿಕತೆ ವಿದ್ವಾಂಸನೊಬ್ಬ ಹರಿಕತೆ ಮಾಡುವಾಗ ಮೂಲಕತೆಯ ಪಠ್ಯಭಾಗವನ್ನು ಶಿಷ್ಟ ಪ್ರಭೇದದಲ್ಲಿ ಮಾಡುತ್ತಾ ಅರ್ಥ ವಿವರಿಸುವಾಗ ಉಪಕತೆಗಳನ್ನು ನಿರೂಪಿಸುವಾಗ ಹಾಸ್ಯ ಸಂದರ್ಭಗಳನ್ನು ನಿರ್ವಹಿಸುವಾಗ ಸ್ಥಳೀಯ ಪ್ರಭೇದವನ್ನು ಬಳಸುವನು. ಹಾಗೆಯೇ ಅರ್ಚಕನೊಬ್ಬ ಪೂಜಾ ಸಂದರ್ಭದಲ್ಲಿ ಕುಲಗೋತ್ರ ವಿಚಾರಿಸುವಾಗ ಸ್ಥಳೀಯ ಪ್ರಭೇದದಲ್ಲಿ ವಿಚಾರಿಸಿ ಅದನ್ನೇ ೇವರಿಗೆ ಮಂತ್ರ ಹೇಳುವಾಗ ಸಂಸ್ಕೃತದಲ್ಲಿ ಹೇಳಬಹುದು.

ಒಂದು ಭಾಷೆಯಲ್ಲಿ ಎರಡು ಸಂಪೂರ್ಣ ವಿಭಿನ್ನ ಪ್ರಭೇದಗಳು ಬಳಕೆಯಲ್ಲಿದ್ದು ಅವು ಸಾಮಾಜಿಕ ರಚನೆಯನ್ನು ಗುರುತಿಸುವ ಅಂಶಗಳಾಗಿ ದ್ದಾಗ ಎರಡೂ ಪ್ರಭೇದಗಳೂ ಸಹವರ್ತಿಗಳಾಗಿ ಬಳಕೆಯಲ್ಲಿರುತ್ತವೆ. ಇವುಗಳಲ್ಲಿ ಒಂದು ಪ್ರಭೇದವು ಸಾಮಾನ್ಯ ಸಂಭಾಷಣೆ ಅಥವಾ ಮಾತಿನ ಸಂದರ್ಭಗಳಲ್ಲಿ ಬಳಕೆಯಾದರೆ ಇನ್ನೊಂದು ಪ್ರಭೇದವು ವಿಶೇಷ ಉದ್ದೇಶಗಳಿಗೆ ಅಂದರೆ ಔಪಚಾರಿಕ ಮಾತಿನಲ್ಲಿ ಮತ್ತು ಬರಹದಲ್ಲಿ ಬಳಕೆಯಾಗುತ್ತದೆ. ಪಾರಂಪರಿಕವಾಗಿ ಸಾಮಾನ್ಯ ಸಂದರ್ಭಗಳಲ್ಲಿ ಬಳಕೆಯಾಗುವ ಪ್ರಭೇದವು ಕೆಳಮಟ್ಟದ್ದು ಮತ್ತು ಔಪಚಾರಿಕ ಮಾತಿನ ಗುರುತಿಸುತ್ತಾರೆ.

ಈ ತರಹದ ದ್ವಿಸ್ತರತೆಯ ಪರಿಸ್ಥಿತಿಯು ತುಂಬಾ ವ್ಯಾಪಕವಾಗಿದೆ. ಕೆಲವು ಉದಾಹರಣೆಗಳೆಂದರೆ ಅರಾಬಿಕ್, ಆಧುನಿಕ ಗ್ರೀಕ್ ಮತ್ತು ಸ್ವಿಸ್, ಜರ್ಮನ್ ಈ ಭಾಷಾ ಸಮುದಾಯಗಳಲ್ಲಿ ಉನ್ನತ ಮತ್ತು ಕೆಳ ಎಂಬ ಭೇದವನ್ನು ಗುರುತಿಸುತ್ತಾರೆ ಮತ್ತು ಎರಡೂ ಪ್ರಭೇದಗಳಿಗೂ ಪ್ರತ್ಯೇಕ ಹೆಸರುಗಳಿರುತ್ತವೆ.

ಉದಾ: ಉನ್ನತ ಪ್ರಬೇಧ ಕೆಳ ಪ್ರಬೇಧ
ಗ್ರೀಕ್ katharevousa dhimotiks
ಅರಾಬಿಕ್ al-fusha al-ammiyyah
ಸ್ವಿಸ್ ಜರ್ಮನ್ hochdeuth 

(High German)

Schweitzer deutsch 

(Swiss German)

ಉನ್ನತ ಮತ್ತು ಕೆಳ ಪ್ರಭೇದಗಳ ನಡುವಿನ ಭೇದವು ಕಾರ್ಯಾತ್ಮಕವಾಗಿ ಸಾಮಾನ್ಯವಾಗಿ ಸ್ಪಷ್ಟವಾಗಿದೆ.

ಉಪನ್ಯಾಸ, ವರದಿ, ಸುದ್ದಿಪ್ರಸಾರ, ಭಾಷಣ, ಪತ್ರಿಕಾ ಸಂಪಾದಕೀಯಗಳು ಮತ್ತು ಸಾಂಪ್ರದಾಯಿಕ ಕಾವ್ಯಗಳಲ್ಲಿ ಉನ್ನತ ಪ್ರಭೇದವು ಬಳಕೆಯಾಗುತ್ತದೆ. ಇದು ಶಾಲೆಯಲ್ಲಿ ಕಲಿಯಬೇಕಾದ ಭಾಷೆ, ಕೆಳಪ್ರಭೇದವು ಪ್ರತಿನಿತ್ಯದ ಸಂಭಾಷಣೆಯಲ್ಲಿ ಮತ್ತು ಚರ್ಚೆಗಳಲ್ಲಿ, ಜಾನಪದ ಸಾಹಿತ್ಯ ಮತ್ತು ಅನೌಪಚಾರಿಕ ಸಂದರ್ಭಗಳಲ್ಲಿ ಬಳಕೆಯಾಗುತ್ತದೆ.

ಉನ್ನತ ಮತ್ತು ಕೆಳ ಪ್ರಭೇದಗಳು ಧ್ವನಿ, ವ್ಯಾಕರಣ ಮತ್ತು ಪದಕೋಶ ಗಳಲ್ಲಿ ವ್ಯತ್ಯಾಸಗಳನ್ನು ಪ್ರದರ್ಶಿಸುತ್ತವೆ. ಇದಕ್ಕೆ ಸಾರಾಸಗಟು ಉದಾಹರಣೆ ಗಳು ಕನ್ನಡದಲ್ಲಿ ದೊರೆಯಲಾರವು. ಇತರೆ ಭಾಷೆಗಳಿಂದ ಉದಾಹರಿಸುವುದಾದರೆ ಶಾಸ್ತ್ರೀಯವಾದ ಅರಬ್ ಭಾಷೆಯಲ್ಲಿ ಮೂರು ನಾಮ ವಿಭಕ್ತಿಗಳಿದ್ದರೆ ಆಡು ಅರಾಬಿಕ್‌ನಲ್ಲಿ ಒಂದೂ ಇಲ್ಲ. ಹಾಗೆಯೇ ಗ್ರೀಕ್‌ನಲ್ಲಿ ಹಲವಾರು ಜೋಡಿ ಪದಗಳಿವೆ. ಉದಾ: ವೈನ್ ಅನ್ನು ಸೂಚಿಸಲು ಉನ್ನತ ಪ್ರಭೇದದಲ್ಲಿ ಇನೊಸ್ ಎಂದಿದ್ದರೆ ಕೆಳ ಪ್ರಭೇದದಲ್ಲಿ ಕ್ರಸಿ. ಗ್ರೀಕ್‌ನ ಮೆನುಕಾರ್ಡಿನಲ್ಲಿ ಬರಹ ಉನ್ನತ ಪ್ರಭೇದದಲ್ಲಿದ್ದರೆ ಅದನ್ನು ಓದಿಕೊಂಡು ಕೆಳಪ್ರಭೇದದಲ್ಲಿ ಜನ ಕೇಳುತ್ತಾರೆ. ಕನ್ನಡದಲ್ಲಿ ಇಂತಹ ಕೆಲವು ಉದಾಹರಣೆಗಳನ್ನು ನೋಡಬೇಕೆಂದರೆ ಮದುವೆಯ ಸಂದರ್ಭದಲ್ಲಿ ಗಂಡು ಹೆಣ್ಣಿಗೆ, ತಾಳಿ, ಅಕ್ಕಿ, ಹಾಲು ಇವುಗಳೆಲ್ಲದಕ್ಕೂ ಸಾಮಾನ್ಯ ಸಂದರ್ಭದ ಹೆಸರನ್ನಲ್ಲದೆ ಬೇರೆ ಬೇರೆ ಹೆಸರಿನಿಂದ ಗುರುತಿಸುವುದು. ಮತ್ತೊಂದು ಉದಾಹರಣೆಯನ್ನು ನೋಡಬಹುದು. ಪತ್ರ ಬರೆಯುವಾಗಿನ ಭಾಷೆ ಪತ್ರದಲ್ಲಿ ಅದು ಒಂದು ಉನ್ನತ ಪ್ರಭೇದದ ಅನುಕರಣೆಯಾಗಿದ್ದು ಅದೇ ವಿಷಯಗಳನ್ನು ದೂರವಾಣಿಯ ಮುಖಾಂತರ ಅಥವಾ ಮುಖತಃ ಭೇಟಿಯ ಸಂದರ್ಭಗಳಲ್ಲಿ ಸಾಮಾನ್ಯ ಅಥವಾ ಕೆಳ ಪ್ರಭೇದದಲ್ಲಿ ಮಾತನಾಡುತ್ತೇವೆ. ದ್ವಿಸ್ತರತೆಯಲ್ಲಿ ಉನ್ನತ ಅಥವಾ ಕೆಳಪ್ರಭೇದದ ಆಯ್ಕೆಯು ಸಾಮಾಜಿಕ ಅನನ್ಯತೆಯ ಸೂಚಿಯಾಗಿರುತ್ತದೆ. ಒಬ್ಬ ಕನ್ನಡಿಗ ಪುಸ್ತಕ ಅಥವಾ ದಿನಪತ್ರಿಕೆಯ ಭಾಷೆಯಂತೆ ದಿನನಿತ್ಯದ ವ್ಯವಹಾರದಲ್ಲಿ ಮಾತನಾಡಿದರೆ ಬಹಳ ಕೃತಕವಾಗಿ ಕಾಣಿಸುತ್ತದೆ. ರಾಜಕೀಯ ಧಾರ‌್ಮಿಕ ವಿಷಯಗಳು ಉನ್ನತ ಪ್ರಭೇದವನ್ನೊಳಗೊಂಡಿರುತ್ತವೆ. ಉನ್ನತ ಪ್ರಭೇದವು ಯಾವಾಗಲೂ ಸುಂದರ ಮತ್ತು ತರ್ಕಬದ್ಧವಾದುದು ಎಂಬ ನಂಬಿಕೆಯಿದೆ. ಆದ್ದರಿಂದ ಧಾರ‌್ಮಿಕ ವಿಷಯಗಳ ಅಭಿವ್ಯಕ್ತಿಗೆ ಉನ್ನತ ಪ್ರಭೇದವು ಸರಿಯಾದದ್ದು ಎನ್ನುವ ಭಾವನೆಯಿದೆ. ಉದಾ: ಗ್ರೀಸಿನಲ್ಲಿ ಧಾರ‌್ಮಿಕ ಹೊಸ ಒಡಂಬಡಿಕೆಗಳು ಥಿನೊಟಿಕಿ ಎಂಬ ಕೆಳಪ್ರಭೇದದಲ್ಲಿ ಅನುವಾದಗೊಂಡಾಗ ತೀವ್ರತರವಾದ ಸಂಘರ್ಷಗಳು ಉಂಟಾದವು. ಹಾಗೆಯೆ ಅರಾಬಿಕ್ ಭಾಷಿಕರೂ ದೇವಭಾಷೆ ಮತ್ತು ಕುರಾನ್‌ನ ಭಾಷೆಯಾದ ಶಾಸ್ತ್ರೀಯ ಅರಬ್‌ನಲ್ಲಿ ಒಲವುಳ್ಳವರಾಗಿದ್ದಾರೆ.

ಕೆಲವು ಸಂದರ್ಭಗಳಲ್ಲಿ ದ್ವಿಸ್ತರತೆಯ ಸ್ಥಿತಿಯು ಅಸ್ಥಿರವಾಗುತ್ತದೆ. ಅಂದರೆ ರಾಷ್ಟ್ರೀಯ ಅನನ್ಯತೆಯ ದೊಡ್ಡ ಚಳುವಳಿಗಳು, ರಾಜಕೀಯ ಸಂಘಟನೆಯಾಗುವುದು ಇಂತಹ ಸಂದರ್ಭಗಳಲ್ಲಿ ಕೆಳ ಅಥವಾ ಉನ್ನತ ಪ್ರಭೇದದ ಪರವಾದ ಚರ್ಚೆಗಳು ನಡೆಯುತ್ತವೆ. ಉನ್ನತ ಪ್ರಭೇದದ ಬೆಂಬಲಿಗರು ಉನ್ನತ ಪ್ರಭೇದ ಹೇಗೆ ಪಾರಂಪರಿಕವಾಗಿ ಮುಖ್ಯವಾದುದು ಮತ್ತು ವಿವಿಧ ಉಪಭಾಷೆಗಳ ನಡುವೆ ಹೇಗೆ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತದೆ ಎಂಬ ವಿಚಾರಗಳಿಗೆ ಒತ್ತುಕೊಡುತ್ತಾರೆ. ಕೆಳಪ್ರಭೇದದ ಬೆಂಬಲಿಗರು ದಿನನಿತ್ಯದ ಬಳಕೆಯ ಭಾಷೆಯು ಹೇಗೆ ಜನರ ಎಲ್ಲ ಭಾವನೆಗಳ ಅಭಿವ್ಯಕ್ತಿಯ ಸಾಧನವಾಗಬಹುದು ಮತ್ತು ಎಲ್ಲಾ ಹಂತಗಳಲ್ಲಿಯೂ ಪರಿಣಾಮಕಾರಿಯಾದ ಸಂರ್ಪಕ ಸಾಧನವಾಗುತ್ತದೆ ಎನ್ನುವ ವಿಷಯಕ್ಕೆ ಒತ್ತುಕೊಡುತ್ತಾರೆ. ಮಿಶ್ರ ಸ್ಥಿತಿಗಳು ಸುಧಾರಿಸಿದ ಉನ್ನತ ಅಥವಾ ಕೆಳ ಪ್ರಭೇದವನ್ನು ಬೆಂಬಲಿಸುತ್ತವೆ. ಕೆಳಪ್ರಭೇದವನ್ನು ಆಧರಿಸಿ ಸುಧಾರಿಸಿದ ಪ್ರಭೇದವು ಚೀನಾ, ಗ್ರೀಸ್, ಹಯಿಟಿ ಮತ್ತಿತರ ಪ್ರದೇಶಗಳಲ್ಲಿ ಕಂಡುಬರುತ್ತದೆ.

ವಿಭಿನ್ನ ಪದಗಳು ಮತ್ತು ಪದಪುಂಜಗಳು : ಹಲವಾರು ವಿಶಿಷ್ಟ ಭಾಷಿಕ ಲಕ್ಷಣಗಳು ಒಂದೇ ಭಾಷಿಕ ಸಮುದಾಯದಲ್ಲಿ ಬಳಕೆಯಾಗುವುದರಿಂದ ಭಾಷೆಯಲ್ಲಿ ವಿವಿಧ ಪ್ರಭೇದಗಳನ್ನು ಗುರುತಿಸಬಹುದು. ಆದರೆ ಒಂದೇ ಒಂದು ಭಾಷಿಕ ಲಕ್ಷಣದಿಂದಲೂ ಸಾಮಾಜಿಕ ಅಂತರವನ್ನು ಗುರುತಿಸ ಬಹುದು. ಅಂದರೆ ಜನರು ವ್ಯವಹರಿಸುವಾಗ ಬಳಸುವ ಮಾತು, ಸಂಬೋಧನಾ ರೀತಿಯಂತಹ ಒಂದೇ ಲಕ್ಷಣವೂ ಸಹಾ ಅಂತರವನ್ನು ಗುರುತಿಸಲು ಸಾಕಾಗುತ್ತದೆ. ಉದಾಹರಣೆಗೆ,

ಏನೂಂದ್ರೆ ಇಲ್ಬನ್ನಿ, ಇವ್ಳೇ ಬಾಗಿಲು ತೆಗಿಯೇ..

ಇಲ್ಲಿ ಏನೂಂದ್ರೆ ಎನ್ನುವುದು ಹೆಂಡತಿಯ ಮಾತಾದರೆ, ಇವ್ಳೇ ಗಂಡನ ಮಾತಾಗಿರುತ್ತದೆ. ಇಂತಹ ಲಕ್ಷಣಗಳನ್ನು ರೇಡಿಯೋ ನಾಟಕಗಳಂತಹ ಶ್ರವಣ ಮಾಧ್ಯಮಗಳಲ್ಲಿ ಹೆಚ್ಚಾಗಿ ಗುರುತಿಸಬಹುದು.

ಇನ್ನೊಂದು ಸಂಭಾಷಣೆಯನ್ನು ಗಮನಿಸಿ.

ಸಿದ್ದಿ ಸಾಂಬಾರು ಏನು ಮಾಡಿದ್ದೆ?

ಅಮ್ನೋರೆ ಕಾಳಿನ ಯಸ್ರು ಮಾಡಿದ್ದೆ.

ಇದು ಇಬ್ಬರು ಸ್ತ್ರೀಯರ ನಡುವಿನ ಸಂಭಾಷಣೆ. ಇಲ್ಲಿ ‘ಸಾಂಬಾರು’ ಪದ ಬಳಸುತ್ತಿರುವವರು ಮೇಲ್ವರ್ಗದ ಶಿಕ್ಷಿತ ಸ್ತ್ರೀಯಾದರೆ, ಅದೇ ಪದಕ್ಕೆ ‘ಯಸ್ರು’ ಪದ ಬಳಸುತ್ತಿರುವವರು ಕೆಳವರ್ಗದ ಅನಕ್ಷರಸ್ಥ ಮಹಿಳೆ. ಈ ಮಾದರಿಯ ಒಂದೊಂದು ಪದ ಬಳಕೆಯೂ ಸಹಾ ಸಾಮಾಜಿಕ ಅಂತರದ ಸೂಚಕಗಳಾಗಬಹುದು.

ಸಂಬೋಧನಾ ಮಾದರಿಗಳು : ಭಾಷೆಯಲ್ಲಿನ ಸಂಬೋಧನಾ ಮಾದರಿಗಳು ಸಾಮಾಜಿಕ ರಚನೆಯ ವಿನ್ಯಾಸವನ್ನು ಪ್ರತಿಫಲಿಸುವ ಅಂಶಗಳಾಗಿರುತ್ತವೆ. ಸಾಮಾಜಿಕವಾಗಿ ಸ್ಥಿರವಾದ ಲಿಂಗ, ಜಾತಿಯಂತಹ ಅಂಶಗಳಲ್ಲಿ ಮತ್ತು ಚಲನೆಯುಳ್ಳ ಸಾಮಾಜಿಕ ಅಂಶಗಳಾದ ವಯಸ್ಸು, ಆರ್ಥಿಕತೆ ಸಾಮಾಜಿಕ ಸ್ಥಾನಮಾನದಂತಹ ಅಂಶಗಳಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತದೆ.

ಕನ್ನಡದ ಜಾತಿ ಶ್ರೇಣೀಕರಣದಲ್ಲಿ ಸಾಮಾನ್ಯವಾಗಿ ಕಾಣುವ ಕೆಳವರ್ಗ ಮತ್ತು ಮೇಲ್ವರ್ಗದ ನಡುವಿನ ಸಂಬೋಧನಾ ಮಾದರಿಗಳಲ್ಲಿ ಕೆಳವರ್ಗದ ವ್ಯಕ್ತಿಗಳು ಮೇರ್ಲ್ವಗದ ವ್ಯಕ್ತಿಗಳಿಗೆ ಗೌರವ ಸೂಚಕ ಬಹುವಚನ ಪ್ರತ್ಯಯ ಗಳನ್ನು ಮತ್ತು ಸ್ವಾಮಿ, ಬುದ್ದಿ, ಧಣಿ, ಐಯ್ನೋರೆ, ಅಮ್ನೋರೆ ಎಂಬ ಸಂಬೋಧನಾ ರೂಪಗಳನ್ನು ಬಳಸುತ್ತಾರೆ. ಅದೇ ಮೇಲ್ವರ್ಗದವರು ಹೆಸರುಗಳನ್ನೋ, ಅಡ್ಡ ಹೆಸರುಗಳನ್ನೋ ಮಾತ್ರ ಬಳಸುತ್ತಾರೆ.

ಉದಾಹರಣೆಗೆ ‘ಸ್ವಾಮಿ ನಿಮ್ಮನೆತಾಕೆ ಹೊತ್ತಾರೆ ಬತ್ತಿನಿ’ ಎಂದು ಕೆಳವರ್ಗದ ಹಿರಿಯ ವ್ಯಕ್ತಿ ಮೇಲ್ವರ್ಗದ ವ್ಯಕ್ತಿಗೆ ಸಂಬೋಧಿಸಿದರೆ ಮೇಲ್ವರ್ಗದ ಕಿರಿಯ ವ್ಯಕ್ತಿ ಕೆಳವರ್ಗದ ಹಿರಿಯ ವ್ಯಕ್ತಿಗೆ ‘ಲೋ ಸಿದ್ಧ ಬೆಳಿಗ್ಗೆನೆ ಹೊಲ್ದತ್ರ ಬಾ’ ಎನ್ನಬಹುದು. ಪ್ರಾದೇಶಿಕವಾಗಿ ಇದರಲ್ಲಿ ವ್ಯತ್ಯಾಸಗಳಿರಬಹುದಾದರೂ, ಉದಾಹರಣೆಗೆ ಬಳ್ಳಾರಿ ಪ್ರದೇಶದ ಕನ್ನಡದಲ್ಲಿ ಬಹುವಚನ ರೂಪಗಳ ಬಳಕೆಗಿಂತ ಸಂಬೋಧನಾ ರೂಪಗಳು ಮಾತ್ರ ಪ್ರಾಮುಖ್ಯ ಪಡೆಯುತ್ತವೆ. ಧಣಿ, ಅವ್ವ, ಅಮ್ಮ ಎನ್ನುವ ರೂಪಗಳು ಮಾತ್ರ ಗೌರವ ಸೂಚಕಗಳಾಗಿ ಕೆಲಸ ಮಾಡುತ್ತವೆ.

ಉದಾಹರಣೆಗೆ,

ಧಣಿ ನಾಳೆ ಕೆಲ್ಸಕ್ ಬರ್ತಿನಿ.

ಅವ್ವ ಬಂದಾಳ ನೋಡು

– ಇವೆರಡೂ ಪ್ರಯೋಗಗಳಲ್ಲಿ ಬಹುವಚನ ರೂಪಗಳಿಲ್ಲದಿದ್ದರೂ ಗೌರವ ಸೂಚಕ ರೂಪಗಳಿವೆ. ಈ ಸಂಬೋಧನಾ ಮಾದರಿಗಳು ಸಾಮಾಜಿಕ ಅಂತರವನ್ನು ಸೂಚಿಸುತ್ತವೆ.

ಲಿಂಗ ಭಿನ್ನತೆ : ಭಾಷೆಯಲ್ಲಿ ಲಿಂಗ ಭಿನ್ನತೆಯನ್ನು ಸೂಚಿಸುವ ಕೆಲವು ಸ್ಥಿರ ಲಕ್ಷಣಗಳಿರುತ್ತವೆ. ಹಾಗೆಯೇ ಸಾಮಾಜಿಕ ಸ್ತರ ವಿನ್ಯಾಸದಲ್ಲಿ ಸ್ತ್ರೀ-ಪುರುಷರ ಸ್ಥಾನಮಾನಗಳನ್ನು, ಸಾಮಾಜಿಕ ಅನನ್ಯತೆಯ ಚಹರೆಗಳನ್ನು ಮತ್ತು ಸಾಮಾಜಿಕ ತಾರತಮ್ಯಗಳನ್ನು ಕಾಣಿಸುವ ಅನೇಕ ಭಾಷಾಂಶಗಳು ಕ್ರಿಯಾಶೀಲವಾಗಿರುತ್ತವೆ.

ಕನ್ನಡದಲ್ಲಿ ಲಿಂಗ ಭಿನ್ನತೆಯನ್ನು ಸೂಚಿಸುವ ಸ್ಥಿರ ಭಾಷಿಕ ಘಟಕಗಳಲ್ಲಿ ಹೆಸರುಗಳು ಮುಖ್ಯವಾದವು. ಸ್ತ್ರೀಯರಿಗೆ ಹೆಸರುಗಳನ್ನಿಡುವಾಗ ನಿರ್ದಿಷ್ಟ ಆಕರವನ್ನು ಬಳಸಿದರೂ ವ್ಯಕ್ತಿ ಸ್ತ್ರೀಯೋ ಪುರುಷನೋ ಎಂದು ಸೂಚಿಸುವ ವಾರ್ಗಿಕಗಳನ್ನು ನಿರ್ದಿಷ್ಟಪಡಿಸಲಾಗುತ್ತದೆ. ಹಾಗೆಯೇ ಪುರುಷರ ಹೆಸರು ಗಳನ್ನು ಸ್ತ್ರೀಯರಿಗಿಂತ ಭಿನ್ನವಾಗಿರುವಂತೆ ಇಡಲಾಗುತ್ತದೆ.

ಉದಾಹರಣೆಗೆ ಹೆಸರುಗಳಲ್ಲಿ ಭಿನ್ನತೆ –

ಸ್ತ್ರೀ ಹೆಸರು

ಪುರುಷ ಹೆಸರು

ಸರಸ್ವತಿ

ರಾಮ
ಲಕ್ಷ್ಮಿ ಶಿವ
ಪಾರ್ವತಿ ಶಂಕರ
ಸೀತೆ ಲಕ್ಷ್ಮಣ

ವಾರ್ಗಿಕಗಳಲ್ಲಿ ಭಿನ್ನತೆ

ರಾಜಮ್ಮ ರಾಜಪ್ಪ
ತಿಮ್ಮಕ್ಕ ತಿಮ್ಮಪ್ಪ
ಪುಟ್ಟನಂಜಿ ಪುಟ್ಟನಂಜ

 

 

 

ಕನ್ನಡ ಭಾಷಿಕ ಸಮಾಜದಲ್ಲಿ ಪುರುಷರ ಹೆಸರುಗಳಲ್ಲಿ ಜಾತಿವಾಚಕ ವೃತ್ತಿವಾಚಕ ವಾರ್ಗಿಕಗಳು ಹೆಸರಿನೊಂದಿಗೆ ಅಂಟಿ ಬರುತ್ತವೆ. ಸ್ತ್ರೀಯರ ಹೆಸರುಗಳಲ್ಲಿ ಇವುಗಳ ದಾಖಲಾತಿ ಇಲ್ಲ. ಇತ್ತೀಚೆಗೆ ಸ್ತ್ರೀಯರ ಹೆಸರುಗಳಲ್ಲಿ ಇವು ಕಂಡುಬಂದರೂ ಅವು ಗಂಡನ ವೃತ್ತಿ, ಜಾತಿ ಹೆಸರುಗಳ ಸೂಚಕವಾಗಿ ಮಾತ್ರ ಬಳಕೆಯಾಗುತ್ತಿವೆ.

ಉದಾಹರಣೆಗೆ

ಪುರುಷ ಜಾತಿ, ವೃತ್ತಿ ಸೂಚಕ ಹೆಸರುಗಳು ಸ್ತ್ರೀ ಹೆಸರುಗಳು
ಶಂಕರಗೌಡ ಶಂಕರಮ್ಮ
ಹನುಮಣ್ಣನಾಯಕ ಲಕ್ಷ್ಮಮ್ಮ
ಬಸಪ್ಪ ಮಾದರ ನಂಜಮ್ಮ
ರಾಜಪ್ಪ ಬಡಿಗೇರ

ಸರಸ್ವತಮ್ಮ

ಗುಂಡಾಭಟ್ಟ ವಿಜಯಮ್ಮ

ಗಂಡನ/ತಂದೆಯ ಜಾತಿ, ಕುಟುಂಬ ನಾಮಗಳು ಸ್ತ್ರೀಯರ ಹೆಸರುಗಳಲ್ಲಿ ವಾರ್ಗಿಕಗಳಾಗಿ ಸ್ಥಾನ ಪಡೆಯುತ್ತವೆ.

ಉದಾಹರಣೆಗೆ

ವಿಮಲ ಪತ್ತಾರ

ಸಂಗೀತ ಕಟ್ಟಿ

ಸುಮಂಗಲಾ ಹಿರೇಮಠ – ಇತ್ಯಾದಿ

ಕೆಲವು ನಿರ್ದಿಷ್ಟ ಭಾಷಿಕ ವರ್ತನೆಗಳು ಸ್ತ್ರೀಯರದೆಂದು ಮತ್ತೆ ಕೆಲವನ್ನು ಪುರುಷರದೆಂದು ಒಂದು ಭಾಷಿಕ ಸಮುದಾಯ ನಂಬಿರುತ್ತದೆ. ಅಂಥ ನಿರ್ದಿಷ್ಟ ಭಾಷಿಕ ಲಕ್ಷಣಗಳನ್ನು ಉಲ್ಲಂಘಿಸಿ ಪರಸ್ಪರರ ಭಾಷಿಕ ವಲಯದೊಳಗೆ ಪ್ರವೇಶಿದರೆ ಗಂಡಸರನ್ನು ಹೆಣ್ಣಿಗನೆಂದೂ ಹೆಂಗಸರನ್ನು ಗಂಡುಬೀರಿಯೆಂದು ಸಮಾಜ ಭಾವಿಸುವುದುಂಟು. ಇವನ್ನು ಸ್ತ್ರೀ ಪುರುಷರ ಬಯ್ಗಳ ರೂಪಗಳನ್ನು ಪರಿಶೀಲಿಸುವುದರಿಂದ ಖಚಿತಪಡಿಸಿಕೊಳ್ಳಬಹುದು. ಸಾಮಾನ್ಯವಾಗಿ ಶಾಪರೂಪದ ಬಯ್ಗಳು ಅನೈತಿಕವರ್ತನೆ ಸಂಬಂಧಿ ಬಯ್ಗಳಗಳನ್ನು ಸ್ತ್ರೀ ಭಾಷೆಯ ಲಕ್ಷಣವೆಂದು, ಹಾಗೆಯೇ ಅವಹೇಳನಕಾರಿ, ಹುಟ್ಟಿನ ಮೂಲಕ್ಕೆ ಸಂಬಂಧಿಸಿದ ಬಯ್ಗಳುಗಳನ್ನು, ಲೈಂಗಿಕ ಆಕ್ರಮಣ ಶೀಲತೆಯ ಬಯ್ಗಳಗಳನ್ನು ಪುರುಷ ಭಾಷೆಯ ಲಕ್ಷಣವೆಂದು ಕನ್ನಡ ಸಮಾಜ ಭಾವಿಸುತ್ತದೆ.

ಉದಾಹರಣೆಗೆ

ನಿನ್ ಮನೆ ಹಾಳಾಗ,

ನಿನಗೆ ಬರ್‌ಬಾರ್ದ ರೋಗ ಬಂದು ಹೊತ್ಕೊಂಡೋಗ,

ನಿನ್ ಕೈ ಸೇದೋಗ

ನೀನ್ ಹೋದದಾರಿ ತಿರ್ಗಿಬರ್ದೇ ಇರಾ

– ಇಂತಹ ಬಯ್ಗಳು ಪುರುಷರು ಪ್ರಯೋಗಿಸದರೆ ಹೆಣ್ಣಿಗನೆಂದೂ,

ಕಳ್ಳ ನನ್ಮಗನೇ….

ನಿನ್ನ ಕೆಡವಿ ಬಡಿಯುತ್ತೇನೆ

ಅಟ್ಟಾಡಿಸಿ ಬಡಿಯುತ್ತೇನೆ.

– ಇಂತಹ ಬಯ್ಗಳನ್ನು ಸ್ತ್ರೀಯರು ಬಳಸಿದರೆ ಗಂಡುಬೀರಿ ಎಂದು ಸಮಾಜ ಭಾವಿಸುತ್ತದೆ.

ಭಾಷಾ ಬಳಕೆಯಲ್ಲಿ ಸ್ತ್ರೀ-ಪುರುಷರ ನಡುವೆ ಕೆಲವು ನಿರ್ಬಂಧ, ನಿಯಮಗಳನ್ನು ಕೆಲವು ಭಾಷಿಕ ಸಮಾಜಗಳು ನಿರ್ವಹಿಸುತ್ತಿರುತ್ತವೆ. ಕನ್ನಡ ಸಮಾಜದ ಕೆಲವು ವರ್ಗಗಳಲ್ಲಿ ಸ್ತ್ರೀಯರು ಗಂಡನ ಹೆಸರನ್ನು ಹೇಳುವುದಿಲ್ಲ. ಸಂಬೋಧಿಸುವುದಿಲ್ಲ ಹಾಗೂ ಗಂಡನೂ ಎಷ್ಟೋ ವೇಳೆ ಸ್ತ್ರೀಯರ ಹೆಸರನ್ನು ಸಂಬೋಧಿಸುವುದಿಲ್ಲ. ಪ್ರಸ್ತಾಪಿಸಬೇಕಾದಾಗ ಪರ್ಯಾಯ ರೂಪಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ ಸ್ತ್ರೀಯರು, ನಮ್ಮೆಜಮಾನ್ರು, ಇವರು, ನಮ್ಮ ಮನೆಯವ್ರ, ರೂಪಗಳನ್ನು ನಮ್ಮನೆಯವ್ಳ, ನನ್ಹೆಂಡ್ತಿ ಮಾದರಿಯ ರೂಪ ಗಳನ್ನು ಪುರುಷರು ಬಳಸುತ್ತಾರೆ. ಅದೇ ಸಂಬೋಧನೆ ಯಲ್ಲಿ, ಸ್ತ್ರೀಯರು ರೀ, ಏನೂಂದ್ರೆ, ಇಲ್ನೋಡಿ….. ಮಾದರಿಯ ರೂಪಗಳನ್ನು, ಪುರುಷರು ಲೇ, ಇವ್ಳೇ, ಏನೇ ಮಾದರಿಯ ರೂಪಗಳನ್ನು ಬಳಸುತ್ತಾರೆ. ಹಾಗೆಯೇ ಸ್ತ್ರೀಯರು ಪುರುಷರಿಗೆ ಬಹುವಚನವನ್ನು ಪುರುಷರು ಏಕವಚನವನ್ನು ಬಳಸಿದರೂ ಸಾಮಾಜಿಕವಾಗಿ ಕೆಳವರ್ಗದ ಮತ್ತು ಅತ್ಯಂತ ಆಧುನಿಕ ಸಮಾಜಗಳಲ್ಲಿ ಅಷ್ಟು ನಿರ್ಬಂಧಿತವಾಗಿಲ್ಲ. ಇದರ ಜೊತೆಗೆ ಕೆಲವು ಸಮಾಜಗಳಲ್ಲಿ ಸ್ತ್ರೀ-ಪುರುಷರ ಭಾಷಿಕ ವರ್ತನೆಗಳ ಬಗೆಗೆ ಸಾಮಾನ್ಯವಾದ ಕೆಲವು ನಂಬಿಕೆಗಳಿರುತ್ತವೆ.

ಉದಾಹರಣೆಗೆ, ಸ್ತ್ರೀಯರು ವಾಚಾಳಿಗಳೆಂದು, ಗುಟ್ಟನ್ನು ರಟ್ಟು ಮಾಡುವವರು ಎಂದು, ನಿರ್ಣಯಾತ್ಮಕವಾದ, ಖಚಿತವಾದ ತೀರ್ಮಾನಗಳನ್ನು ಮಾತಿನಲ್ಲಿ ವ್ಯಕ್ತಪಡಿಸಲಾರದವರೆಂಬ ನಂಬಿಕೆಗಳಿವೆ.

ಉದಾಹರಣೆಗೆ ಅಲ್ವಾ, ಮಾಡ್ಬಹುದಾ, ಆಗುತ್ತಾ ಮುಂತಾದ ರೂಪಗಳನ್ನು ಸ್ತ್ರೀಯರು ಹೆಚ್ಚಾಗಿ ಬಳಸುತ್ತಾರೆ ಹಾಗೂ ಪುರುಷರು, ಗಂಭೀರ ಮಾತುಗಳನ್ನು ಆಡುವವರು ಖಚಿತವಾದ ನಿರ್ಣಯಗಳನ್ನು ಮಾತಿನಲ್ಲಿ ವ್ಯಕ್ತಪಡಿಸುವವ ರೆಂದು ನಂಬಲಾಗುತ್ತದೆ.

ಇಷ್ಟಲ್ಲದೆ, ನಮ್ಮ ಒಟ್ಟು ಸಮಾಜದ ಭಾಷಿಕ ವರ್ತನೆಯಲ್ಲಿ ಲಿಂಗ ತಾರತಮ್ಯದ ಆ ಮೂಲಕ ಸಾಮಾಜಿಕ ಅಸಮಾನತೆಯ ಕುರುಹುಗಳೂ ಕಾಣುತ್ತವೆ. ಉದಾ. ಕನ್ನಡ ಬರೆಹದ ಮಾದರಿಗಳಲ್ಲಿ ಮಾನವ, ಮನುಷ್ಯ, ವ್ಯಕ್ತಿ – ಈ ನಾಮಪದಗಳು ಪುರುಷ ಸೂಚಕಗಳಾಗಿವೆ. ಇತಿಹಾಸದ ಪಾಠಗಳಲ್ಲಿ ಆದಿ ಮಾನವನು ಬೇಟೆಯಾಡುತ್ತಿದ್ದನು, ಮಾನವನು ಭೂಮಿಯ ಮೇಲೆ ನಡೆದಾಡಲಾರಂಭಿಸಿ…… ವರ್ಷಗಳಾದವು. ಮನುಷ್ಯನಿಗೆ ವಿಶಿಷ್ಟವಾದ ಬುದ್ದಿಶಕ್ತಿಯಿದೆ. ಈ ತರಹದ ವಾಕ್ಯಗಳಲ್ಲಿ ಮಾನವಳು, ಮನುಷ್ಯಳು ಬಳಕೆಯಾಗುತ್ತಿಲ್ಲ. ಇದು ಸ್ತ್ರೀಯರ ಬರೆಹಗಳಲ್ಲೂ ಕಾಣುತ್ತದೆ. ಇತ್ತೀಚೆಗೆ ಬರೆಹದಲ್ಲಿ ಇಂತಹ ತಾರತಮ್ಯಗಳನ್ನು ಮೀರಲು, ಮಾನವರು, ಮನುಷ್ಯರು ಎಂಬ ರೂಪಗಳನ್ನು ಬಳಸಿ ಸರಿಪಡಿಸಿಕೊಳ್ಳಲಾಗುತ್ತಿದೆ.

ಈ ಮೇಲೆ ವಿವರಿಸಿದ ಅಂಶಗಳಲ್ಲದೆ ಭಾಷೆಯ ಸಾಮಾಜಿಕ ಚಹರೆಗಳನ್ನು ಹೊರಗೆಡಹುವ ಭಾಷೆ ಮತ್ತು ಸಮಾಜದ ನಡುವಿನ ಸಂಬಂಧಗಳನ್ನು ನಿರ್ವಚಿಸುವ ಅನೇಕ ಅಂಶಗಳಿವೆ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಈ ಕ್ಷೇತ್ರದಲ್ಲಿ ಅಧ್ಯಯನಗಳು ಇನ್ನೂ ನಡೆಯಬೇಕಿದೆ.