ಈ ಪ್ರಬಂಧದಲ್ಲಿ ಮಂಡಿಸಿದ ವಿಷಯಗಳು ಮೂಲತಃ ಮೆದುಳು, ಅದರ ರಚನೆ, ಭಾಷಾ ಸಂಬಂಧಿತ ಕಾರ್ಯವಿಧಾನ, ಭಾಷೆ ಹಾಗೂ ಮೆದುಳುಗಳ ಜೊತೆಜೊತೆಯ ವಿಕಾಸ, ಮಾತನಾಡುವ ಕ್ರಮ, ಮಾತನಾಡುವಾಗ ಸಂಭವಿಸುವ ಸ್ವಾಭಾವಿಕ ಹಾಗೂ ಅಸ್ವಾಭಾವಿಕ ತಪ್ಪುಗಳು ಹಾಗೂ ಅದರ ಕಾರಣಗಳು – ಇವುಗಳ ಬಗ್ಗೆ ಓದುಗರಿಗೆ ಅತ್ಯಂತ ಪ್ರಾಥಮಿಕ ಮಾಹಿತಿ ನೀಡವುದಾಗಿದೆ. ಈ ವಿಷಯಗಳ ಬಗ್ಗೆ ಕಳೆದ 50 ವರ್ಷಗಳಲ್ಲಿ ಬಹಳಷ್ಟು ಸಂಶೋಧನೆಗಳು ನಡೆಯುತ್ತಿದ್ದರೂ ಹಲವಾರು ವಿಷಯಗಳು ಸಂಶೋಧನಾ ಘಟ್ಟದಲ್ಲೇ ಇದ್ದು ಖಚಿತ ತೀರ್ಮಾನಗಳು ತಿಳಿದು ಬಂದಿಲ್ಲ. ಆದಕಾರಣ ಈ ಲೇಖನವನ್ನು 90ರ ದಶಕದವರೆಗೆ ದೊರಕಿರುವ ಮಾಹಿತಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಹಲವಾರು ಕ್ಷೇತ್ರಗಳಲ್ಲಿರುವಂತೆ ಈ ಕ್ಷೇತ್ರದಲ್ಲೂ ಕೂಡ ಪಾರಿಭಾಷಿಕ ಪದಗಳಿಗೆ ಕನ್ನಡದಲ್ಲಿ ಸಂವಾದಿ ಪದಗಳು ಸಮರ್ಪಕವಾಗಿ ಬಳಕೆಯಾಗಿಲ್ಲ. ಈ ಸಂಬಂಧಿಸಿದ ಕುಂದುಕೊರತೆಗಳು ಪ್ರಸ್ತುತ ಲೇಖನದಲ್ಲಿ ಹಲವಾರು ಕಡೆ ಕಂಡುಬರಬಹುದು.

ಭಾಷೆ ಮತ್ತು ಮೆದುಳು

ಮೆದುಳು ನಮ್ಮ ದೇಹದ ಒಂದು ಅತಿ ಸೂಕ್ಷ್ಮವಾದ ಹಾಗೂ ಅತ್ಯಂತ ಮುಖ್ಯವಾದ ಅಂಗ. ಅದು ಕೇಂದ್ರ ನರಮಂಡಲದ ಮುಖ್ಯ ಭಾಗವಾಗಿದ್ದು ತೊಗಟೆ, ಮಿದುಳು, ಕಾಂಡ, ಕಿರ್ಮಿದುಳು ಮತ್ತು ಮಿದುಳು ಬಳ್ಳಿಗಳನ್ನು ಒಳಗೊಡಿದೆ. ಸುತ್ತಂಚಿನ ನರಮಂಡಲದ ಕೆಲವು ನರಗಳು ಮತ್ತು ಬೆನ್ನೆಲುಬಿನ ಕೆಲವು ನರಗಳು ಮಾತಿನ ಉತ್ಪತ್ತಿಯಲ್ಲಿ ಭಾಗವಹಿಸುತ್ತವೆ.

ನಿಡುಮೆದುಳು ಮತ್ತು ಅದಕ್ಕೆ ಹೊಂದಿಕೊಂಡಿರುವ ಮತ್ತಿತರ ರಚನೆಗಳು

ಮಿದುಳಿನ ತೊಗಟೆಯ ಮೇಲ್ಭಾಗದಲ್ಲಿ ನರ ನರಾಂಶ ಮತ್ತೆ ಕೆಳಭಾಗದಲ್ಲಿ ಬಿಳಿನರಾಂಶ ಇರುತ್ತದೆ. ಮಿದುಳಿನ ಎಡ ಮತ್ತು ಬಲ ಭಾಗದಲ್ಲಿ ಅರ್ಧವೃತ್ತಾಕಾರದ ಎರಡು ಭಾಗಗಳಿವೆ. ಅವು ಅಡ್ಡಸೇರದಿಂಡು ವಿನಿಂದ ಸೇರಿಕೊಂಡಿವೆ. ನಿಮ್ಮಿದುಳಿನ ಒಂದೊಂದು ಅರ್ಧವೃತ್ತಾಕಾರವು ನಿಡು ಮೆದುಳು, ನರಸೇತು ಮತ್ತು ಮೆದುಳು ಕಾಂಡ (ಮಜ್ಜೆ, ತಿರುಳು)ವನ್ನು ಹೊಂದಿರುವ ಮೆದುಳು ಬಳ್ಳಿಗೆ ಸೇರಿಕೊಂಡಿದೆ. ಮೆದುಳು ಬಳ್ಳಿಯು ಬಲ ಮತ್ತು ಎಡ ಅರ್ಧವೃತ್ತಾಕಾರದ ಅರೆಗೋಳಗಳನ್ನು ಹೊಂದಿರುವ ಕಿರ್ಮಿದುಳಿಗೆ ಸೇರಿಕೊಂಡಿದೆ.

ಅರೆಗೋಳಾಕಾರದ ನಿಮ್ಮಿದುಳು: ಒಂದೊಂದು ಅರೆಗೋಳದ ನಿಮ್ಮಿದುಳುಗಳು ಹಣೆಲುಬಿನ ಪಾಲೆ, ಕಪಾಲಭಿತ್ತಿಯ ಪಾಲೆ, ಹೆಡತಲೆಯ ಪಾಲೆ, ಕಣತಲೆಯ ಪಾಲೆಗಳನ್ನು ಹೊಂದಿವೆೆ. ಕೇಂದ್ರಮೋಳೆಯು ಹಣೆಲುಬಿನ ಪಾಲೆಯನ್ನು ಕಪಾಲಭಿತ್ತಿಯ ಪಾಲೆಯಿಂದ ಬೇರ್ಪಡಿಸುತ್ತದೆ. ಪಕ್ಕದ ಮೋಳೆಯು ಕಣತಲೆಯ ಪಾಲೆಯ ಮೇಲ್ಭಾಗದಲ್ಲಿ ಗಡಿರೇಖೆ ಗುರುತಿಸುತ್ತದೆ. ಹೆಡತಲೆಯ ಅರ್ಧವೃತ್ತಾಕಾರದ ಹಿಂಭಾಗದಲ್ಲಿರುವ, ದೃಷ್ಟಿ  ಸಾಮರ್ಥ್ಯಕ್ಕೆ ಕಾರಣವಾದ ನಿಡುಮಿದುಳು ತೊಗಟೆಯನ್ನು ಹೊಂದಿದೆ.

ಹಣೆಲುಬಿನ ಪಾಲೆ: ಮುಂಭಾಗದ ನೆರಿಯು ಅತಿಹೆಚ್ಚಿನ ಚಾಲನ ನರ ಜೀವಕೋಶಗಳನ್ನು (ಬೆಟ್ಸ್ ಅಥವಾ ಪಿರಮಿಡಲ್ ಜೀವಕೋಶಗಳು) ಒಳಗೊಂಡಿರುವ ನಿಮ್ಮಿದುಳ ತೊಗಟೆಯನ್ನು ಹೊಂದಿದೆ. ದೇಹವು ಹಣೆಲುಬಿನ ಪಾಲೆಯಲ್ಲಿ ತಲೆಕೆಳಗಾಗಿ ಬಿಂಬಿಸಲ್ಪಟ್ಟಿದೆ.

ಈ ಪಾಲೆಯು ದೇಹದ ಚಲನವಲನಗಳ ಹಿಡಿತಗಳನ್ನು ನಿಯಂತ್ರಿಸುತ್ತದೆ. ತಲೆ ನಿಲ್ಲಿಸುವುದು, ಆಡಿಸುವುದು, ಕತ್ತು ಕಣ್ಣುಗಳ ಚಲನೆ, ಮೂತ್ರಕೋಶ ಹಾಗೂ ಲೈಂಗಿಕ ಕಾರ್ಯಗಳಲ್ಲಿ ಸಹಕಾರಿಯಾಗಿದೆ. ವ್ಯಕ್ತಿತ್ವ ಮನೋಭಾವ, ಮನೋದ್ವೇಗ ಮತ್ತು ನಡುವಳಿಕೆಗಳು ಹಣೆಲುಬಿನ ಪಾಲೆಯ ವ್ಯಾಪ್ತಿಗೆ ಬರುತ್ತವೆ. ಹಾಗೆಯೇ ಭಾಷೆಗೆ ಸಂಬಂಧಪಟ್ಟ “ಬ್ರೋಕಾನ ಜಾಗ ” (ಮೂರನೆಯ ಹಣೆಲುಬಿನ ಸುರಳಿ) ಮಾತಿನ ಸಾಮರ್ಥ್ಯಕ್ಕೆ ಬಹಳ ಸಹಕಾರಿ ಯಾಗಿದೆ.

ಹಣೆಲುಬಿನ ಪಾಲೆಯ ಲಕ್ಷಣಾವಳಿಗಳು: ಹಣೆಲುಬಿನ ಮೆದುಳಿನಲ್ಲಿ ಹಾನಿ ಹೊಂದಿದವರಲ್ಲಿ ಸಮಾಜ ವಿರೋಧಿತನ, ಅದೇ ರೀತಿಯ ವ್ಯಕ್ತಿತ್ವ, ಮನೋದ್ವೇಗ ಮತ್ತು ಬುದ್ದಿಶಕ್ತಿಯ ತೊಂದರೆಗಳು ಕಂಡುಬರುತ್ತವೆ. ಚಾಲನಾ ಸ್ಥಳದಲ್ಲಿ ಏನಾದರೂ ಗಾಯವಾದರೆ ಪಾಲೆಯ ವಿರುದ್ಧ ಪಾರ್ಶ್ವ ಚಲನಶಕ್ತಿ ಕಳೆದುಕೊಂಡು ಪಾರ್ಶ್ವವಾಯುವಿಗೆ ದಾರಿ ಮಾಡಿಕೊಡುತ್ತದೆ. ಬ್ರೋಕಾನ ಜಾಗದಲ್ಲಿ ಏನಾದರೂ ಗಾಯವಾದರೆ ಅದು ಮಾತನಾಡುವ ತೊಂದರೆಗೆ ಕಾರಣವಾಗುತ್ತದೆ.

ಕಪಾಲಭಿತ್ತಿಯ ಪಾಲೆ : ಇದು  ಅರಿಯುವಿಕೆಗೆ ಮುಖ್ಯ ಕೇಂದ್ರವಾಗಿದ್ದು ಮೂಲ ಅರಿವು, ಅರಿವಿನ ಸೂಕ್ಷ್ಮ ಭೇದ ತೋರಿಕೆ, ವಸ್ತುಗಳ ಗಾತ್ರ, ಆಕಾರ ಮತ್ತು ಹೊಂದಾಣಿಕೆ ಸಂಬಂಧಿತ ಭೇದಗಳ ಅರಿವು ಇತ್ಯಾದಿಗಳನ್ನು ನಿಯಂತ್ರಿಸುತ್ತದೆ. ಸ್ಥಳಾವಕಾಶದ ಅರಿವಿನ ನಿಯಂತ್ರಣ ಮತ್ತು ದೇಹದ ಬಿಂಬ ಇವೆಲ್ಲಾ ಕಪಾಲ ಭಿತ್ತಿಯ ಪಾಲೆಯ ಮುಖ್ಯ ಕಾರ್ಯಗಳು.

ಕಪಾಲೆ ಭಿತ್ತಿಯ ಲಕ್ಷಣಕೂಟ : ಕಪಾಲಭಿತ್ತಿಯ ಪಾಲೆಯಲ್ಲಿ ಏನಾದರೂ ಗಾಯವಾದರೆ ಅದು ನಿತ್ರಾಣ, ತಿಳಿವುಗೇಡಿತನ, ಸ್ಥಳಾವಕಾಶದ ಅರಿವಿನಲ್ಲಿ ಹಾಗೂ ದೇಹ ಬಿಂಬದಲ್ಲಿ ತೊಂದರೆಗಳು ಇತ್ಯಾದಿಗಳಿಗೆ ದಾರಿ ಮಾಡಿಕೊಡುತ್ತದೆ.

ಕಣತಲೆಯ ಪಾಲೆ : ಮೇಲ್ಮುಖನಾದ ಅರೆಗೋಳದ ಕಣತಲೆಯ ಪಾಲೆಯಲ್ಲಿನ ಮುಖ್ಯ ಭಾಗವು ಗ್ರಹಿಕೆಯ ಕೆಲಸಗಳಲ್ಲಿ ಸಹಾಯಕಾರಿ ಯಾಗಿದೆ. ವರ್ನಿಕೆ ಕ್ಷೇತ್ರವು (ಚಿತ್ರ 1 ನೋಡಿ) ಶ್ರವಣಶಕ್ತಿಯ ಮುಖ್ಯ ಗ್ರಹಣ ಕೇಂದ್ರವಾಗಿದ್ದು ಶಬ್ದ ಹಾಗೂ ಮಾತನ್ನು ಗ್ರಹಿಸುವಲ್ಲಿ ತುಂಬಾ ಸಹಾಯಕಾರಿಯಾಗಿದೆ. ಇಲ್ಲಿ ಯಾವುದೇ ರೀತಿಯ ಗಾಯಗಳಾದಲ್ಲಿ ಭಾಷೆಯ ಗ್ರಹಿಕೆ ಮತ್ತು ಅರಿಯುವಿಕೆಯಲ್ಲಿ ತೊದರೆಯಾಗುತ್ತದೆ. ಹಾಗೂ ಕೆಲವೊಮ್ಮೆ ತಿಳಿವುಗೇಡಿತನಕ್ಕೆ ದಾರಿಮಾಡಿಕೊಡುತ್ತದೆ. ಇದರ ಮಧ್ಯಭಾಗವು ವಾಸನೆ, ರುಚಿ ಮತ್ತು ನೆನಪು ಕಾರ್ಯಗಳಿಗೆ ಹೊಣೆಯಾಗಿದೆ.

ಹೆಡತಲೆಯ ಪಾಲೆಗಳು : ಇವು ದೃಷ್ಟಿ ಸಂಬಂಧಿತ ಕಾರ್ಯ ನಿರ್ವಹಿಸುವುವು. ಇದನ್ನು ದೃಷ್ಟಿಪಾಲೆ ಅನ್ನುತ್ತಾರೆ. ಇದರಲ್ಲಿ ಉಂಟಾಗುವ ಪೂರ್ಣ ಅಥವಾ ಅಪೂರ್ಣ ಗಾಯಗಳು ಕೆಲವು ದೃಷ್ಟಿದೋಷಗಳಿಗೆ ಕಾರಣವಾಗುತ್ತವೆ.

ಕಿರ್ಮಿದುಳು : ಕಿರ್ಮಿದುಳು ದೇಹದ ಚಲನವಲನಗಳ ಸಮತೋಲನ ಕಾರ್ಯಗಳಲ್ಲಿ ಅತಿ ಹೆಚ್ಚಿನ ಪಾತ್ರ ವಹಿಸುತ್ತದೆ. ಈ ಕಿರ್ಮಿದುಳು ಮಾತಿನ ಕಾರ್ಯಕ್ಕೆ ಬಲು ಮುಖ್ಯ. ಏಕೆಂದರೆ ಮಾತನಾಡಲು ವಿವಿಧ ಸ್ನಾಯುಗಳ ಚಲನೆ ಅವಶ್ಯಕ. ಇದಕ್ಕೇನಾದರೂ ಗಾಯವಾದರೆ, ದೇಹದ ಚಲನವಲನದಲ್ಲಿ ಹೊಂದಾಣಿಕೆ ಇರುವುದಿಲ್ಲ.

ಮಿದುಳು ಬಳ್ಳಿ : ಸಂವಹನವು ಮಿದುಳು ಬಳ್ಳಿಯ ಮುಖ್ಯ ಕಾರ್ಯ ವಾಗಿದೆ. ದೇಹದ ವಿವಿಧ ಜ್ಞಾನೇಂದ್ರಿಯಗಳಿಂದ ಮತ್ತು ಒಳಾಂಗಗಳಿಂದ ಬರುವ ಆವೇಗಗಳು ಮಿದುಳಿನ ಹಿಂಬದಿ ಮತ್ತು ಮಗ್ಗಲು ತಂತುಗಳಿಗೆ ವರ್ಗಾವಣೆಯಾಗುತ್ತವೆ. ಇವುಗಳಲ್ಲಿ ಕೆಲವು ತಂತುಗಳು ಕಿರ್ಮಿದುಳು ಮತ್ತು ಶಿರಗುಳಿಯಲ್ಲಿ ಕೊನೆಗೊಂಡು ಮಾತನ್ನು ಹೊರಡಿಸುವ ಕಾರ್ಯಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಪಾತ್ರ ವಹಿಸುತ್ತವೆ.

ಶಿರಗುಳಿ : ನಿಡು ಮಿದುಳಿನಿಂದ ಶಿರಗುಳಿಗೆ ಅಥವಾ ಶಿರಗುಳಿಯಿಂದ ನಿಡುಮಿದುಳಿಗೆ ಹೊರಚಾಚಿಕೊಂಡಿರುವ ಜಾಡುಗಳು ನೇರವಾಗಿದ್ದು ಬಹಳಷ್ಟು ಮಾತಿಗೆ ಸಂಬಂಧಿಸಿದ ಸಂಯೋಜನೆಗಳು ಇಲ್ಲಿ ನೆಲಸಿವೆಯೆಂದು ಹಲವಾರು ತಜ್ಞರು ಅಭಿಪ್ರಾಯಪಡುತ್ತಾರೆ. ಇದು ಇಂದ್ರಿಯಾನುಭವಗಳ ಠಾಣೆ.

ಸುತ್ತಂಚಿನ ನರಮಂಡಲ : ಈ 12 ಕಪಾಲದ ನರಗಳು ಮಾತಿಗೆ ಬಲು ಮುಖ್ಯ. ಅವುಗಳಲ್ಲಿ ಮೂರವಳಿ ನರ, ಮುಂದಲೆಯ ನರ, ನಾಳಕೋಶದ ಕಿವಿ, ಸುರಳಿಯ ನರ, ನಾಲಿಗೆ, ಗಂಟಳ್ಗುಳಿಯ ನರ,ಅಲೆಕುಳಿ ನರ ಮತ್ತು ನಾಲಿಗೆಯಡಿಯ ನರ ಮತ್ತಷ್ಟು ಮುಖ್ಯವಾಗಿವೆ.

ಮೂರವಳಿಯ ನರವು ಮಾತಿನ ಉಚ್ಚಾರಣೆಗೆ, ಮಾತಿಗೆ ಸಂಬಂಧಪಟ್ಟ ಸ್ನಾಯುಗಳ ಚಲನೆಗೆ ಬಹಳ ಸಹಕಾರಿಯಾಗಿದೆ. ಹಾಗೆಯೇ ಮುಖದ ನರವು ಮುಖದ ಚರಹೆಯ ಮುಖಾಂತರ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಸಹಕಾರಿಯಾಗಿದೆ. ನಾಳಕೋಶದ ಕಿವಿಸುರಳಿಯ ನರವು ಆಲಿಸುವಿಕೆಗೆ ನೆರವಾಗುತ್ತದೆ. ನಾಲಿಗೆ ಗಂಟಲ್ಗುಳಿಯ ನರವು ನೆತ್ತಲು ಗಂಟಲ್ಗುಳಿಯ ಮುಚ್ಚುವಿಕೆ ಮತ್ತು ನಾಲಿಗೆಯ ಹಿಂಭಾಗದ ಚಲನೆಗೆ ಸಹಕಾರಿಯಾಗಿದೆ. ಅಲೆಕುಳಿ ನರವು ಗಂಟಲು ಮಾತು ಚಟುವಟಿಕೆಗಳಿಗೆ ಹೊಣೆಯಾಗಿದೆ. ನಾಲಿಗೆಯ ಅಡಿಯ ನರವು ನಾಲಿಗೆಯು ಉಚ್ಚಾರಣೆಯ ಸಂದರ್ಭದಲ್ಲಿ ಮಾಡುವ ಚಲನೆಗಳನ್ನು ನಿಯಂತ್ರಿಸುತ್ತದೆ.

ಬೆನ್ನೆಲುವಿನ ನರಗಳು : ಮೂವತ್ತೊಂದು ಜೊತೆಯ ಬೆನ್ನೆಲುವು ನರಗಳು ಚಲನಾ ಶಕ್ತಿಗೆ ಸಂಬಂಧಿಸಿದ ನರೋದ್ವೇಗಗಳನ್ನು ಮಿದುಳು ಬಳ್ಳಿಯಿಂದ ಉಸಿರಾಟದ ಸ್ನಾಯುಗಳಿಗೆ, ಧ್ವನಿಯ ಹಾಗು ಉಚ್ಚಾರಣೆಯ ಸ್ನಾಯುಗಳಿಗೆ ವರ್ಗಾಯಿಸಿ ಅವುಗಳ ಕಾರ್ಯ ನಿರ್ವಹಣೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ.

ತಾವುಗೂಡಿಕೆ : ಮೆದುಳಿನ ಒಂದೊಂದು ಭಾಗವೂ ಒಂದೊಂದು ನಡುವಳಿಕೆಗೆ ಪ್ರೇರಕವಾಗಿದೆ. (ಉದಾ : ನೋಟ, ಮಾತು ಇತ್ಯಾದಿ) ಎಂಬುದು ಹಲವರ ಅಭಿಪ್ರಾಯ. ಈ ಸಮರ್ಥನೆಯನ್ನು ಮೆದುಳಿನ ತಾವುಗೂಡಿಕೆ ಎಂಬ ತತ್ವವನ್ನಾಗಿ ಪ್ರತಿಪಾದಿಸಿದ್ದಾರೆ. ಈ ಒಂದು ತತ್ವ ಪಾಲ್ ಪಿಯರಿ ಬ್ರೋಕಾ  (1824 – 1880) ಮತ್ತು ಕಾರ್ಲ್ ವರ್ನಿಕೆ (1841 – 1905) ಎಂಬ ಇಬ್ಬರು ನರವಿಜ್ಞಾನ ತಜ್ಞರಿಂದ ಮಂಡಿತವಾಗಿದೆ. ಇವರ ಪ್ರಕಾರ, ಮೆದುಳಿನ ಯಾವುದೇ ಒಂದು ನಿರ್ದಿಷ್ಟ ಭಾಗಕ್ಕೆ ಪೆಟ್ಟು ಬಿದ್ದು ಗಾಯವಾದಲ್ಲಿ ಅದು ಭಾಷಾ ಸಂಬಂಧಿತ ಕೆಲಸ ಕಾರ್ಯಗಳಲ್ಲಿ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಇವರು ತಮ್ಮ ರೋಗಿಗಳ ಮೇಲಿನ ಪ್ರಯೋಗಗಳಿಂದ ಕಂಡುಹಿಡಿದ ತೊಂದರೆಗೆ ಮಾತುಕಟ್ಟು ಅಥವಾ ವಾಕ್‌ಸ್ತಂಭನ (ಅಫೇಸಿಯಾ) ಎಂದು ಹೇಳುತ್ತಾರೆ. ಬ್ರೋಕಾನ ಜಾಗಕ್ಕೆ (ಚಿತ್ರ 3 ನೋಡಿ) ಗಾಯವಾದರೆ ಅದು ಮಾತನಾಡುವ ಚಟುವಟಿಕೆಗೆ ತೊಂದರೆಯಾಗದಂತೆ ಇರಿಸುತ್ತದೆ ಎಂಬುದನ್ನು ಈ ಇಬ್ಬರು ನರವಿಜ್ಞಾನ ತಜ್ಞರು ಕಂಡುಹಿಡಿದಿದ್ದಾರೆ. ಮೆದುಳಿನ ತೊಗಟೆಯಲ್ಲದೆ ಬೇರೆ ಬೇರೆಯ ಭಾಗಗಳು ಕೂಡ ಭಾಷಾ ಸಂಬಂಧಿತ ಕಾರ್ಯದಲ್ಲಿ ಭಾಗವಹಿಸುತ್ತವೆ ಎಂಬುದು ಈಗ ಸ್ಪಷ್ಟಗೊಂಡಿದೆ. ನರಭಾಷಾ ವಿಜ್ಞಾನಿಗಳು ತೊಗಟೆಯ ನರಾಂಗಗಳು ಹಾಗೂ ಎರಡು ಅರೆಗೋಳಗಳ ನಡುವಿನ ತೊಗಟೆಯ ಬಗ್ಗೆ ಕೆಲ ಮೂಲ ಕಲ್ಪನೆಗಳ್ನು ಪ್ರತಿಪಾದಿಸಿದ್ದಾರೆ. ಬ್ರೋಕಾನ ಹಾಗೂ ವರ್ನಿಕೆ ಜಾಗಗಳೊಡನೆ ಬೇರೆ ಜಾಗಗಳ ಭಾಷೆಗೆ ಸಂಬಂಧಿಸಿದ ಕಾರ್ಯಗಳ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಲೇ ಇವೆ. ಕೆಲವು ಅಪವಾದಗಳ ಹೊರತಾಗಿ ಬಹಳಷ್ಟು ಸಂಶೋಧನೆಗಳ ಪ್ರಕಾರ ಮೆದುಳಿಗೆ ಒದಗಿದ ಹಾನಿಯಿಂದ ಉಂಟಾದ ವಾಕ್‌ಸ್ತಂಭನ, ಮೂಕತನ ಇವುಗಳು ಮೂಲತಃ ಬ್ರೋಕಾನ ಹಾಗು ವರ್ನಿಕೆಯ ಜಾಗಗಳಿಗೆ ಆದ ಆಘಾತಕ್ಕೇ ಸಂಬಂಧಿಸಿವೆ. ಇವೆರಡು ಪ್ರಾಥಮಿಕ ಭಾಷಾ ಭಾಗಗಳಾಗಿಯೂ, ಬೇರೆ ಜಾಗಗಳು ದ್ವಿತೀಯ ಹಾಗೂ ಗೌಣ ಭಾಗಗಳಾಗಿಯೂ ಗುರುತಿಸಲ್ಪಟ್ಟಿವೆ.

ಪಟ್ಟಿ 1 ಅರೆಗೋಳಗಳ ಮೇಲುಗೈತನ

ಎಡ ನಿಮ್ಮಿದುಳು ಬಲ ನಿಮ್ಮಿದುಳು
ಭಾಷೆ ಭಾಷೇತರ ಶಬ್ದಗಳ ಪರಿಗ್ರಹಣೆ
ವಿಶ್ಲೇಷಣೆ ಸಂಗೀತ
ಸಮಯಬದ್ಧ ಪರಿಕ್ರಮ ನೋಟ ತಾಣ ಸಂಬಂಧಿತ ನೈಪುಣ್ಯ
ಓದು ಮತ್ತು ಬರೆಹ ಒಟ್ಟಾರೆ ವಿವೇಚನೆ
ಗಣಿತ ಲೆಕ್ಕಾಚಾರ ನಮೂನೆ ಗುರುತಿಸುವಿಕೆ

ಮೆದುಳಿನಲ್ಲಿ ಭಾಷಾನಿಯಂತ್ರಣ ನೆಲೆಗಳು

ಮಾತನಾಡಲು, ಕೇಳಿಸಿಕೊಳ್ಳಲು, ಓದಲು ಬರೆಯಲು ಹಾಗೂ ಸನ್ನೆ ಮಾಡಲು ಮುಖ್ಯವಾಗಿ ಕಾರಣವಾದ ಪ್ರದೇಶಗಳು ಸಿಲ್ವಿಯನ್ (ಮಗ್ಗುಲದ ಮೋಳೆ) ಮತ್ತು ರೋಲ್ಯಾಂಡಿಕ್ (ಮಧ್ಯದ ನೆರಿ) ಮೋಳೆಗಳ ವ್ಯಾಪ್ತಿಯಲ್ಲಿ ಬರುತ್ತವೆ. ಇವುಗಳೊಂದಿಗೆ ಇತರ ಕೆಲವು ಭಾಷಾ ಸಂಬಂಧಿತ ಪ್ರದೇಶಗಳನ್ನೂ ಗುರುತಿಸಲಾಗಿದೆ. ಕಪಾಲಭಿತ್ತಿಪಾಲೆಯ ಮುಂಭಾಗದಲ್ಲಿ ರೊಲ್ಯಾಂಡೋ ಮೋಳೆಯ ಆಚೀಚೆಗೆ ಅರಿಯುವಿಕೆಯ ನೆಲೆಗಳು ಸೇರಿಕೊಂಡಿದ್ದು ಮಾತು ಮತ್ತು ಶ್ರವಣ ಶಕ್ತಿಯ ಪ್ರದೇಶಗಳೊಡನೆ ಆಳವಾದ ಸಂಪರ್ಕ ಹೊಂದಿರು ತ್ತವೆ. ರೊಲ್ಯಾಂಡೋ ಮೋಳೆಯ ಮುಂಭಾಗವಿರುವ ಪ್ರದೇಶವು ಭಾಷೆಗೆ ಸಂಬಂಧಿಸಿದ ಸ್ನಾಯು ಚಲನಾ ಕಾರ್ಯಗಳಿಗೆ ಹೊಣೆಯಾಗಿದ್ದು ಮಾತನಾಡುವ ಹಾಗೂ ಬರೆಯುವ ಸಾಮರ್ಥ್ಯಕ್ಕೆ ಅವಶ್ಯವಾಗಿದೆ.

ಕಣತಲೆ ಪಾಲೆಯ ಮೇಲಿನ ಹಿಂಭಾಗದ ಪ್ರದೇಶವು ಮೇಲ್ಮುಖವಾಗಿ ಕಪಾಲಭಿತ್ತಿಯ ಪಾಲೆಯವರೆಗೂ ಹೋಗಿದೆ. ಇದು ಮಾತನ್ನು ಅರ್ಥಮಾಡಿ ಕೊಳ್ಳುವ ಕ್ರಿಯೆಯಲ್ಲಿ ಬಲು ಮುಖ್ಯ ಪಾತ್ರವಹಿಸುತ್ತದೆ. ಈ ಜಾಗವನ್ನೇ ವರ್ನಿಕೆ ಜಾಗ ಎಂದು ಗುರ್ತಿಸುವರು (ಚಿತ್ರ 1 ಮತ್ತು 3 ನೋಡಿ)

ಕಣತಲೆ ಪಾಲೆಯ ಮೇಲ್ಭಾಗವು ಶ್ರವಣ ಶಕ್ತಿಗೆ (ಕೇಳುವಿಕೆ, ಶಬ್ದಭಾಷಾ ಅರಿಯುವಿಕೆಗೆ) ಬಲು ಮುಖ್ಯ ಪ್ರದೇಶವಾಗಿದೆ. ಆಸ್ಟ್ರೇಲಿಯಾದ ತಜ್ಞರಾದ ಆರ್.ಎಲ್. ಹೆಷಲ್ (1824 -1881) ರವರ ಜ್ಞಾಪಕಾರ್ಥವಾಗಿ ಈ ಭಾಗವನ್ನು ಹೆಷಲ್‌ನೆರಿ ಎಂದು ಕರೆಯುವರು. ಹಣೆಲುಬಿನ ಪಾಲೆಯ ಕೆಳಮುಖದ ಹಿಂದಿನ ಭಾಗವು ಭಾಷಾ ನಿರೂಪಣೆಗೆ ಹೊಣೆಯಾಗಿದ್ದು  ಪ್ರತಿಯೊಂದು ಮಾತಿನ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತದೆ. ಇದನ್ನೇ ಬ್ರೋಕಾನ ಪ್ರದೇಶವೆಂದು ಗುರುತಿಸಿದ್ದಾರೆ. ಮತ್ತೊಂದು ಹಣೆಲುಬಿನ ಪಾಲೆಯ ಹಿಂಭಾಗದ ಪ್ರದೇಶವು ಬರವಣಿಗೆಗೆ ಸಂಬಂಧಿಸಿದ ಕೈಚಲನೆಯನ್ನು ತನ್ನ ಅಧೀನದಲ್ಲಿಟ್ಟುಕೊಂಡಿರಬಹುದೆಂದು ಊಹಿಸಲಾಗಿದೆ. ಇದನ್ನು ‘ಎಕ್ಸ್ನರರ ಕೇಂದ್ರ’ ಎಂದು ಜರ್ಮನ್ ನರ ತಜ್ಞರಾದ ನಿಗ್ಮಾನ್ ಎಕ್ಸ್ನರ್ (1846 – 1926)ರ ಜ್ಞಾಪಕಾರ್ಥವಾಗಿ ಕರೆಯಲಾಗಿದೆ. ಎಡಕಪಾಲ ಭಿತ್ತಿ ಪಾಲೆಯ ಒಂದು ಭಾಗವು ವರ್ನಿಕೆಯ ಕ್ಷೇತ್ರಕ್ಕೆ ಹತ್ತಿರದಲ್ಲಿದ್ದು ಅದು ಆಂಗಿಕ ಸಂಜ್ಞೆಗಳನ್ನು ನಿಯಂತ್ರಿಸುತ್ತದೆ.

ಹೆಡತಲೆ ಪಾಲೆಯ ಹಿಂಭಾಗವು ದೃಷ್ಟಿಗ್ರಹಣ ಕಾರ್ಯದಲ್ಲಿ ಪಾಲ್ಗೊಳ್ಳುತ್ತದೆ. ಇದು ಓದುವ ಹಾಗೂ ಬರೆಯುವ ಕೆಲಸಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಭಾಷೆಗೆ ಸಂಬಂಧಿಸಿದ ನರಮಂಡಲದ ಕಾರ್ಯವಿಧಾನ

ನರಮಂಡಲದ ಕೆಲವು ಸರಣಿಗಳು ಮಾತನಾಡುವ ಕಾರ್ಯದಲ್ಲಿ ಕೆಳಕಂಡಂತೆ ಪಾಲುಗೊಳ್ಳುತ್ತವೆ.

1. ಮಾತಿನ ಉತ್ಪತ್ತಿ : ಶಬ್ದವು ಮೊದಲು ಮೂಲಭೂತವಾಗಿ ವರ್ನಿಕೆಯ ಕ್ಷೇತ್ರದಿಂದ ಹೊರಬಿದ್ದು ಬ್ರೋಕಾನ ಕ್ಷೇತ್ರಕ್ಕೆ ರವಾನೆಗೊಂಡು ಅಭಿವ್ಯಕ್ತಿಗೊಳ್ಳುತ್ತದೆ. ಅನಂತರ ವಾಕ್ ಚಲನಕ್ಕೆ ಅನುಗುಣವಾಗಿ ಚಲನ ಭಾಗಕ್ಕೆ ಹೋಗಿ ವಿವಿಧ ಅಂಗಗಳ ಚಲನೆಯಿಂದ  ಶಬ್ದೋಚ್ಚಾರಣೆಗಳಾಗಿ ಹೊರಹೊಮ್ಮುತ್ತವೆ.

2. ಮಾತನ್ನು ಅರ್ಥಮಾಡಿಕೊಳ್ಳುವಿಕೆ : ಕಿವಿಯಿಂದ ಸ್ವೀಕೃತಗೊಂಡ ಶಬ್ದವು ಮೆದುಳಿನ ಆಲಿಸುವಿಕೆಯ ತೊಗಟೆಯ ಭಾಗದಲ್ಲಿ ಪ್ರವೇಶಿಸಿ ವರ್ನಿಕೆಯ ಕ್ಷೇತ್ರದಲ್ಲಿ ಅರ್ಥೈಸಲ್ಪಡುತ್ತದೆ.

3. ಜೋರಾಗಿ ಓದುವಿಕೆ : ಬರಹ ರೂಪವು ಮೊದಲು ನೋಟಕ್ಕೆ ಸಂಬಂದಿಸಿದ ಹೆಡತಲೆ ಪಾಲೆಯ ದೃಷ್ಟಿಗೆ ಸಂಬಂಧಿಸಿದ ಜಾಗದಲ್ಲಿ ಸ್ವೀಕಾರಗೊಂಡು ಅನಂತರ ಕೋನದ ನೆರಿಯ ಮುಖಾಂತರ ವರ್ನಿಕೆಯ ಜಾಗಕ್ಕೆ ಕಳುಹಿಸಲ್ಪಡುತ್ತದೆ. ಇಲ್ಲಿ ಮೊದಲು ಶಬ್ದ ಸ್ವರೂಪದ ಅರಿಯುವಿಕೆ ಜರಗುತ್ತದೆ. ಅನಂತರ ಶಬ್ದೋತ್ಪತ್ತಿಯ ಕ್ರಮಗಳಿಗೆ ಅನುಗುಣವಾಗಿ ಬ್ರೋಕಾನ ಕ್ಷೇತ್ರಕ್ಕೆ ಬಂದು ಅಲ್ಲಿ ಉಚ್ಚಾರಣೆಗೆ ಬೇಕಾದ ಆದೇಶಗಳನ್ನು ಪಡೆದುಕೊಳ್ಳುತ್ತದೆ.

ಅರೆಗೋಳಗಳು ಮಗ್ಗುಲಾಗುವಿಕೆ ಮತ್ತು ಮುಂದಾಳುತನ

ಸಾಮಾನ್ಯವಾಗಿ ಮೆದುಳಿನ ಕೆಲಸ ಕಾರ್ಯಗಳ ಬಗ್ಗೆ ನಾವು ಚರ್ಚಿಸುವಾಗ ಇನ್ನೊಂದು ಮುಖ್ಯ ಅಂಗರಚನೆಯ ಸಂಗತಿ ನಮ್ಮ ಗಮನವನ್ನು ಸೆಳೆಯುತ್ತದೆ.

ಎಡ ಅರೆಗೋಳವು ದೇಹದ ಬಲಭಾಗದ ಮತ್ತು ಬಲ ಅರೆಗೋಳವು ದೇಹದ ಎಡಭಾಗದ ಚಲನವಲನಗಳಿಗೆ ಕಾರಣವಾಗಿ ಆಯಾ ದೇಹ ಭಾಗ ಗಳಿಂದ, ವಿವಿಧ ಇಂದ್ರಿಯಗಳಿಂದ ಬರುವ ಸಂಕೇತಗಳನ್ನು ತೆಗೆದುಕೊಂಡು ಕಾರ್ಯನಿರ್ವಹಿಸುತ್ತದೆ.

ಎರಡು ಅರೆಗೋಳಗಳಿಂದ ಹೊರಡುವ ನರತಂತುಗಳು ಮೆದುಳು ಬಳ್ಳಿಯ ಮೂಲಕ ಕೆಳಮುಖವಾಗಿ ಬರುವಾಗ ಎರಡು ಒಂದರ ಮೇಲೊಂದು  ಅಡ್ಡಲಾಗಿ ತಮ್ಮ ದಿಕ್ಕುಗಳನ್ನು ಬದಲಾಯಿಸಿಕೊಳ್ಳುತ್ತವೆ. ಆದ್ದರಿಂದ ಎಡ ಅರೆಗೋಳವು ದೇಹದ ಬಲಭಾಗಗಳ ಚಲನವಲನಗಳನ್ನು ಅಧೀನದಲ್ಲಿಟ್ಟು ಕೊಂಡಿರುತ್ತದೆ. ಆದ್ದರಿಂದಲೇ ಮೆದುಳಿಗೆ ಪೆಟ್ಟುಬಿದ್ದು ಆಘಾತವಾದರೆ ಆಘಾತಗೊಂಡ ಅರೆಗೋಳ, ತನ್ನ ವಿರುದ್ಧ ದಿಕ್ಕಿನ ಅಂಗಗಳ ಚಲನವಲನಗಳಿಗೆ ತೊಂದರೆಯನ್ನುಂಟು ಮಾಡುತ್ತದೆ. ಇದನ್ನು ಪಾರ್ಶ್ವವಾಯು ಎಂದು ಕರೆಯುತ್ತಾರೆ.

ಕಿವಿಯ ವಿಷಯದಲ್ಲೂ ಹೀಗೇ ಇದೆ. ಎರಡೂ ಕಿವಿಯಿಂದ ಬಂದ ಸುದ್ದಿಯು ಎರಡೂ ಅರೆಗೋಳಗಳಿಗೆ ಹೋಗುತ್ತದೆ. ಆದರೆ ಯಾವುದೇ ಕಿವಿಯ ವಿಷಯವು (ಕಿವಿಯ ಮೂಲಕ ಹಾದ ಶಬ್ದ ಅಥವಾ ಇನ್ನಿತರ ವಿಷಯವು) ಅದರ ವಿರುದ್ಧದ ಅರೆಗೋಳಕ್ಕೆ ಹೋಗುತ್ತದೆ. ಈ ಕ್ರಿಯೆಯು ಮೆದುಳಿನ ಕಾರ್ಯವನ್ನು ಕಂಡುಹಿಡಿಯುವುದರಲ್ಲಿ ತುಂಬಾ ಸಹಾಯಕಾರಿ ಯಾಗಿದೆ. ಹಾಗೆಯೇ ಕಣ್ಣುಗಳಲ್ಲಿ ಎಡದೃಷ್ಟಿ ತನ್ನ ಸಂಕೇತವನ್ನು ಬಲ ಅರೆಗೋಳಕ್ಕೆ ಕಳುಹಿಸಿಕೊಡುತ್ತದೆ. ಹಾಗೆಯೇ ಬಲದೃಷ್ಟಿಯ ಸಂಕೇತವನ್ನು ಎಡಅರೆಗೋಳಕ್ಕೆ ಕಳುಹಿಸುತ್ತದೆ. ಈ ಜೋಡಣೆಯು ಶಬ್ದದ ವಾಸ್ತವಿಕತೆ ಯನ್ನು ಸರಿಯಾಗಿ ಅನುಭವಿಸುವಲ್ಲಿ, (ಉದಾ: ಶಬ್ದ ವಸ್ತುಗಳ ಅಂತರ, ಗಾತ್ರ, ಆಕಾರ ಹಾಗೂ ಸ್ಥಳ) ಬಹಳ ಸಹಕಾರಿಯಾಗುತ್ತದೆ.

ಕಳೆದ ಸುಮಾರು ಒಂದು ಶತಮಾನದಿಂದಲೂ ಈ ಮೆದುಳಿನಲ್ಲಿನ ಎರಡು ಅರೆಗೋಳಗಳ ಕಾರ್ಯ ಸಂಬಂಧವನ್ನು ನರ ಮನೋವಿಜ್ಞಾನ ಮತ್ತು ಚಿಕಿತ್ಸಾ ನರವಿಜ್ಞಾನಗಳು ಸಂಶೋಧನೆಗೆ ಒಳಪಡಿಸಿವೆ. ಕೆಲವರ ಪ್ರಕಾರ ಸಾಮಾನ್ಯವಾಗಿ ಎಲ್ಲರಲ್ಲಿ ಎಡ ಅರೆಗೋಳ ಮುಖ್ಯ ಚಟುವಟಿಕೆಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡಿವೆ. ಆದರೆ ಇತ್ತೀಚೆಗೆ ಕಂಡಿರುವ ಪ್ರಕಾರ ಒಂದೊಂದು ಅರೆಗೋಳವು ತನ್ನದೇ ಆದ ಮುಖ್ಯ ಪಾತ್ರವಹಿಸುತ್ತದೆ. ಹಾಗೆಯೇ ಈ ಅರೆಗೋಳಗಳು ಕೆಲವು ಚಟುವಟಿಕೆಗಳಲ್ಲಿ ಅತಿ ಹೆಚ್ಚಿನ ಪಾತ್ರವಹಿಸಿ ಇನ್ನಿತರ ಚಟುವಟಿಕೆಗಳಲ್ಲಿ ನಿರ್ಲಿಪ್ತವಾಗಿ ಇರುತ್ತವೆ. ಈ ಹೆಚ್ಚಿನ ಚಟುವಟಿಕೆಗೆ ಸಂಬಂಧಪಟ್ಟಿರುವ ಅರೆಗೋಳಕ್ಕೆ ಮುಂದಾಳುತನದ ಅರೆಗೋಳ ಎನ್ನುತ್ತಾರೆ. ಹಾಗೆಯೇ ಅರೆಗೋಳದಲ್ಲಿನ ಹೆಚ್ಚಿನ ಕೆಲಸ ಕಾರ್ಯಗಳ ಬೆಳವಣಿಗೆಗೆ ಮಗ್ಗುಲಾಗುವಿಕೆ (ಲ್ಯಾಟರ್‌ಲೈಶೇಶನ್) ಎಂದು ಕರೆಯುತ್ತಾರೆ.

ಕಿರ್ಮಿದುಳಿನ ಮುಂದಾಳುತನದ ಬಗ್ಗೆ ಚರ್ಚಿಸುವಾಗ ಭಾಷೆ ಮತ್ತು ಕೈ ಬಳಕೆತನಗಳು ಮುಖ್ಯ ಹಾಗೂ ಬಹಳಷ್ಟು ಮಂದಿಯಲ್ಲಿ ಪರಸ್ಪರ ಹೊಂದಿಕೊಂಡಿರುವ ಅಂಶಗಳೆಂದು ತಿಳಿಯುತ್ತದೆ. ಎಡ ಅರೆಗೋಳವು ಸಾಮಾನ್ಯವಾಗಿ ಬಲಚರರಲ್ಲಿ ಭಾಷೆಗೆ ಮುಂದಾಳಾಗಿರುತ್ತದೆ. ಶೇಕಡ 95 ಗಿಂತ ಹೆಚ್ಚು ಜನರಲ್ಲಿ ಈ ಬಗೆ ಕಂಡುಬರುತ್ತದೆ. ಮೆದುಳಿನ ಎಡಭಾಗಕ್ಕೆ ಹಾನಿಯುಂಟಾದಾಗ ಭಾಷಾ ಸಾಮರ್ಥ್ಯಗಳನ್ನು ಮತ್ತು ದೇಹದ ಬಲಭಾಗದ ಸ್ವಾಧೀನವನ್ನು ಕಳೆದುಕೊಳ್ಳುವುದನ್ನು ಕಾಣಬಹುದು. ಆದರೂ ಕೆಲವೊಮ್ಮೆ ಪ್ರಾಧಾನ್ಯ ಹಾಗೂ ಕೈಬಳಕೆಯ ನಡುವೆ ಒಂದೇ ರೀತಿಯ ಸಂಬಂಧ ಕಂಡುಬರುವುದಿಲ್ಲ. ಎಡಚರ ಬಲ ಅರೆಗೋಳವು ಭಾಷೆಯ ಪ್ರಾಧ್ಯಾನದಲ್ಲಿ ಪಾಲ್ಗೊಳ್ಳುವುದು ಯಾವಾಗಲೂ ಸಾಧ್ಯ ಆಗುವುದಿಲ್ಲ. ಎಡಚರಲ್ಲಿ ಬಲ ಅರೆಗೋಳ ಪ್ರಾಧಾನ್ಯ ಹೊಂದಿರುವುದಿಲ್ಲ. ಇಂತಹವರಲ್ಲಿ ಹೆಚ್ಚಿನಂಶ ಎರಡೂ ಅರೆಗೋಳಗಳ ಚಟುವಟಿಕೆ (ಭಾಷಾ ಸಂಬಂಧಿತ) ಕಂಡುಬರಬಹುದು ಅಥವ ಎಡ ಅರೆಗೋಳವೇ ಪ್ರಾಧಾನ್ಯ ಆಗಿರಬಹುದು. ಒಂದು ರೀತಿಯ ಮಿಶ್ರ ಪ್ರಾಧಾನ್ಯ ಕೂಡ ಇರಬಹುದು. ಉದಾಹರಣೆಗೆ ಬಲಚರಲ್ಲಿ ಎಡಗಾಲು ಮತ್ತು ಬಲಗಣ್ಣು ಪ್ರಾಧಾನ್ಯ ಆಗಿರಬಹುದು, ಈ ತರಹದ ಅಂಶಗಳು ಪ್ರಾಧಾನ್ಯದ ಸಮಸ್ಯೆಗಳನ್ನು ಹಾಗೂ ಅದರ ಸಂಬಂಧಿತ ಸಂಶೋಧನೆಯನ್ನು ಮತ್ತಷ್ಟು ಗೊಂದಲಕ್ಕೀಡು ಮಾಡುತ್ತದೆ.

ಪ್ರತಿಯೊಂದು ಅರೆಗೋಳದ ವಿಶೇಷ ಬೌದ್ದಿಕ ಹಾಗೂ ನರಾಂಗ ಕ್ರಿಯೆ ಹಾಗೂ ಅದರ ಅಂಗರಚನೆಯು ಇನ್ನೂ ಪೂರ್ತಿಯಾಗಿ ತಿಳಿದಿಲ್ಲ. ಎರಡೂ ಅರೆಗೋಳಗಳ ಮುಖ್ಯ ಅಂಗರಚನೆಯ ಅಸಮಾನತೆ  (ಉದಾ: ಮಗ್ಗುಲ ಮೋಳೆಯ) ಉದ್ದ ಮತ್ತು ಕೋನಾಕಾರದಲ್ಲಿ ವ್ಯತ್ಯಾಸವಿದ್ದು ಎಡ ಅರೆಗೋಳದ ಈ ಅಂಗ ಹೆಚ್ಚು ಉದ್ದ ಹಾಗೂ ಕೋನವನ್ನು ಒಳಗೊಂಡಿದೆ. ಮತ್ತು ಅಗಲವಾದ ಕಣತೆರೆಯ ಜಾಗವನ್ನು ಹೊಂದಿದೆ. ಈ ರೀತಿಯ ವ್ಯತ್ಯಾಸಗಳು ಮಿದುಳ್ಗುಳಿ ಜಾಗಗಳು, ರಕ್ತ ಪರಿಚಲನೆ, ಕಣತಲೆ ಹಾಗು ಕಪಾಲ ಭಿತ್ತಿಯ ಪಾಲೆಗಳ ಉದ್ದ ಅಗಲಗಳು ಇತ್ಯಾದಿಯಲ್ಲಿ ಕಂಡು ಬಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇವು ಮಾನಸಿಕ ಬೌದ್ದಿಕ ಕ್ರಿಯೆಯಲ್ಲಿ ನಿಖರವಾಗಿ ಯಾವ ರೀತಿಯ ಹಾಗೂ ಎಷ್ಟರ ಮಟ್ಟಿಗೆ ಸಂಬಂಧ ಹೊಂದಿವೆ ಎಂಬುದು ಇನ್ನೂ ಪೂರ್ತಿಯಾಗಿ ತಿಳಿದುಬಂದಿಲ್ಲ. ಆದರೂ ಕೆಲವೊಂದು ಪ್ರಯೋಗ ಹಾಗು ರೋಗಲಕ್ಷಣಗಳ ಸಾಕ್ಷ್ಯಾಧಾರಗಳಿಂದ ಕೆಲವು ಸಾಮಾನ್ಯ ಲಕ್ಷಣಗಳು ರೂಪಿತವಾಗಿವೆ. ಇವುಗಳ ಪ್ರಕಾರ ಬಲಚರದಲ್ಲಿ ಎಡ ಅರೆಗೋಳವು ಪ್ರಧಾನ ಆಗಿದ್ದು ವಿಶ್ಲೇಷಣಾತ್ಮಕ ಕೆಲಸಗಳು ಪರೀಕ್ಷೆಗಳು, ಲೆಕ್ಕಾಚಾರ, ವಿಗಂಡಣೆ, ತರ್ಕಬದ್ಧ ಹಾಗೂ ವ್ಯವಸ್ಥಿತ ರಚನೆ ಮತ್ತು ಭಾಷಾ ಸಂಬಂಧಿತ ಚಟುವಟಿಕೆಗಳಲ್ಲಿ ತನ್ನ ಪ್ರಾಧಾನ್ಯ ತೋರುತ್ತದೆ. (ಪಟ್ಟಿ 1 ನೋಡಿ) ಹಾಗೆಯೇ ಬಲ ಅರೆಗೋಳವು ಅರಿಯುವಿಕೆ, ಪೂರ್ಣರೂಪಿಕೆ ಹೊಂದಾಣಿಕೆ, ಅಂಗಾಂಗ ಸಂಬಂಧಗಳು, ವಿಶೇಷ ವ್ಯವಸ್ಥಿತಗೊಂಡ ತಿಳಿಯುವಿಕೆ, ಸಂಗೀತ, ಭಾವನೆಗಳನ್ನು ಗುರ್ತಿಸುವಿಕೆ ಹಾಗೂ ಹೊರ ಹೊಮ್ಮಿಸುವ ಚಟುವಟಿಕೆಗಳಲ್ಲಿ ತನ್ನ ಪ್ರಾಧಾನ್ಯವನ್ನು ಸ್ಥಾಪಿಸಿದೆ.

ಹಲವರ ಪ್ರಕಾರ, ಈ ಕಾರ್ಯ ವಿಭಜನೆ ಬಹಳ ಕೃತಕ ಹಾಗೂ ಅತ್ಯಂತ ಸರಳೀಕೃತವಾದುದು. ಎಡ ಅರೆಗೋಳವು ಮೆದುಳಿನ ವಿಶ್ಲೇಷಣಾತ್ಮಕ ಹಾಗೂ ಬೌದ್ದಿಕ ಭಾಗ ಮತ್ತು ಬಲ ಅರೆಗೋಳವು ಸೃಜನಶೀಲ ಹಾಗೂ ಭಾವನಾ ಶಕ್ತಿಯ ತಾಣ ಎಂಬ ಕಾರ್ಯ ವಿಭಜನೆ ಕಟ್ಟುನಿಟ್ಟಾದದ್ದು ಎಂದು ಹಲವರ ಅಭಿಪ್ರಾಯ. ಜೊತೆಗೆ, ಈಗ ತಿಳಿದಿರುವ ಮಟ್ಟಿಗೆ ಬಲ ಅರೆಗೋಳವೂ ಕೂಡ ಕೆಲವು ಬೌದ್ದಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತದೆ ಹಾಗೂ ಭಾಷೇತರ ಶ್ರವಣ ಶಕ್ತಿಯಲ್ಲಿ ಸ್ವಲ್ಪ ನಿಷ್ಕೃಷ್ಟವಾದರೂ, ಸಾಮರ್ಥ್ಯ ಖಂಡಿತ ಇದೆ. ಅದೂ ಅಲ್ಲದೆ ಕೆಲವು ಚಟುವಟಿಕೆಗಳು ಸಾಮಾನ್ಯ ವಾಗಿ ಎರಡೂ ಅರೆಗೋಳದ ವ್ಯಾಪ್ತಿಗೆ ಒಳಪಡುತ್ತವೆ ಎಂಬುದನ್ನು ಮರೆಯಬಾರದು. ಉದಾ: ಮುಖ ಪರಿಚಯ, ದಣಿವುಗೊಳ್ಳುವಿಕೆ ಹಾಗೂ ಏಕಾಗ್ರತೆಯ ಕೆಲವು ಅಂಶಗಳು ಇತ್ಯಾದಿ.

ಇತ್ತೀಚೆಗೆ ಸಂಶೋಧಕರ ಗಮನ ಸೆಳೆಯುತ್ತಿರುವ ಮತ್ತೊಂದು ಸಂಗತಿಯೆಂದರೆ, ಅರೆಗೋಳಗಳ ಪರಸ್ಪರ ಹೊಂದಾಣಿಕೆ ಕಾರ್ಯ ಸಾಮರ್ಥ್ಯ. ವಿಭಜಿತ ಕಾರ್ಯಗಳಿಗಿಂತ ಹೆಚ್ಚಾಗಿ ಒಗ್ಗಟ್ಟಿನ ಎಡಗೂಡಿಕೆಯ ಅಧ್ಯಯನದಿಂದ ಮೆದುಳಿನ ಅಂಗ ರಚನೆ ಹಾಗೂ ಬೌದ್ದಿಕ ಕ್ರಿಯೆಗೂ (ಉದಾ: ಭಾಷೆ) ಇರುವ ಸಂಬಂಧದ ಹೇಳಿಕೆಗಳನ್ನು ಈಗಿನ ನಮ್ಮ ಜ್ಞಾನದ ಮಿತಿಯಲ್ಲಿ ಅಥವ ಹಿನ್ನೆಲೆಯಲ್ಲಿ ನೋಡಿದಾಗ ಸಂಪೂರ್ಣ ತಾತ್ಪೂರ್ತಿಕ ಎಂದು ತಿಳಿಯಬೇಕು ಎಂಬುದು ಎಲ್ಲ ಸಂಶೋಧಕರ ಅಭಿಪ್ರಾಯ.

ಮಿದುಳಿನ ಅರೆಗೋಳದ ಪ್ರಾಬಲ್ಯ ಹಾಗೂ ಭಾಷೆಯ ಬೆಳವಣಿಗೆ

ಮಾನವ ಜಾತಿಯಲ್ಲಿ ಮಾತ್ರ ಕಂಡು ಬರುವ ಮತ್ತೊಂದು ಸಂಗತಿ ಎಂದರೆ ಮಿದುಳಿನ ಒಂದು ಪಾರ್ಶ್ವದಲ್ಲಿನ ಭಾಷೆಯ ನೆಲೆಗೊಳ್ಳುವಿಕೆ. ಸಾಮಾನ್ಯವಾಗಿ ಮನುಷ್ಯನ ಎಡ ಅರೆಗೋಳದಲ್ಲಿ ಭಾಷಾಕ್ರಿಯೆ ನೆಲೆ ಗೊಂಡಿರುತ್ತದೆ.

ಈ ಭಾಷಾ ಸಂಬಂಧಿತ ಅರೆಗೋಳದ ಪ್ರಾಬಲ್ಯ ಬೆಳವಣಿಗೆಯಾಗುವುದು ಶೈಶವಾವಸ್ಥೆಯ ನಾಲ್ಕೈದು ವರ್ಷಗಳಲ್ಲಿ. ಭಾಷಾ ಬೆಳವಣಿಗೆಯ ಹಂತಗಳಾದ ಎರಡು ವರ್ಷ (ವಾಕ್ ಪ್ರಯೋಗದ ಆರಂಭ), 5 ವರ್ಷ (ಮಾತೃಭಾಷೆಯ ಮೂಲ ರಚನೆಯ ಪ್ರಭುತ್ವ ನೈಪುಣ್ಯ ಸಾಧನೆ) ಹಾಗೂ ಹದಿಹರೆಯ (ಅನ್ಯಭಾಷೆಯ ಕಲಿಕೆ ಕಷ್ಟಕರವಾಗುವ ಹಂತ) ಇತ್ಯಾದಿಗಳು ಅರೆಗೋಳದ ಪ್ರಾಬಲ್ಯದ ಹಂತಗಳಾಗಿ ಪರಿಗಣಿಸ್ಪಟ್ಟಿವೆ.

ಮಿದುಳಿನ ಪ್ರಾಬಲ್ಯಕ್ಕೆ ಮತ್ತೊಂದು ಸಾಕ್ಷ್ಯಾಧಾರ ಎಂದರೆ ಮೆದುಳಿಗೆ ಉಂಟಾಗುವ ಆಘಾತ ಹಾಗೂ ಅದರಿಂದ ಚೇತರಿಸಿಕೊಳ್ಳುವಿಕೆ. ಮೆದುಳಿಗೆ ಉಂಟಾಗುವ ಹಾನಿಯಿಂದ ಮನುಷ್ಯರು ಎಷ್ಟು ಚೇತರಿಸಿಕೊಳ್ಳಬಹುದು ಎನ್ನುವುದು ಯಾವ ವಯಸ್ಸಿನಲ್ಲಿ ಈ ಆಘಾತ ಸಂಭವಿಸಿದೆ ಎಂಬುದರ ಮೇಲೆ ಆಧಾರಿತವಾಗಿದೆ.

ಉದಾಹರಣೆಗೆ : ನವಜಾತ ಶಿಶುವಿನಲ್ಲಿ ಮೆದುಳಿನ ಎಡ ಅರೆಗೋಳಕ್ಕೆ ಪೂರ್ಣ ಹಾನಿಯುಂಟಾಗಿದ್ದರೂ ಕೂಡ ಮಗುವಿಗೆ ವಾಕ್‌ಸ್ತಂಭನ ಉಂಟಾಗುವು ದಿಲ್ಲ. ಮಗು ಮಾತನ್ನು ಕಲಿಯುವುದರಲ್ಲಿ ಹೆಚ್ಚು ಅಡ್ಡಿ ಉಂಟಾಗುವುದಿಲ್ಲ. ಸ್ವಲ್ಪ ತಡವಾಗಬಹುದು ಅಷ್ಟೇ. ಇಂತಹ ಮಗುವು ಭಾಷೆಯನ್ನು ಅಚ್ಚುಕಟ್ಟಾಗಿಯೇ ಕಲಿಯಬಹುದು. ಆದರೆ ವಯಸ್ಕರಲ್ಲಿ ಮೆದುಳಿನ ಆಘಾತ ಉಂಟಾದರೆ ಇದೇ ರೀತಿಯ ಪ್ರಕ್ರಿಯೆ ಕಂಡುಬರುವುದಿಲ್ಲ. ಅವನು ವಾಕ್ ಸ್ತಂಭನದಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯಬಹುದು. ಕೆಲವು ಸಂದರ್ಭಗಳಲ್ಲಿ ಗಮನಾರ್ಹ ಸುಧಾರಣೆ ಕೂಡ ಕಂಡು ಬರದಿರಬಹುದು.

ಅದೂ ಅಲ್ಲದೆ, 2 ರಿಂದ 5 ವರ್ಷದ ಮಕ್ಕಳ ವಿಷಯದಲ್ಲಿ ಮತ್ತೊಂದು ಗಮನಾರ್ಹ ವಿಷಯ ಎಂದರೆ ಮೆದುಳಿನ ಯಾವ ಅರೆಗೋಳಕ್ಕೆ (ಎಡ / ಬಲ) ಆಘಾತ ಉಂಟಾದರೂ ವಾಕ್ ಸ್ತಂಭನ ಕಾಣಿಸಿಕೊಳ್ಳಬಹುದು. ಈ ತೊಂದರೆ ಬಹಳ ತಾತ್ಕಾಲಿಕ ಹಾಗೂ ಬಹಳಷ್ಟು ಮಟ್ಟಿಗೆ ತೀವ್ರವಾಗಿರುವುದಿಲ್ಲ. ಅದೇ ವಯಸ್ಕರಲ್ಲಿ ಇದು ಹೆಚ್ಚು ಉಗ್ರತೆಯಿಂದ ಹಾಗು ಹೆಚ್ಚು ಕಾಲ ಇರುವಂತಹ ತೊಂದರೆ ಉಂಟಾಗಬಹುದು.

ಭಾಷಾ ಬೆಳವಣಿಗೆ ಹಾಗು ಮೆದುಳು ಮಗ್ಗಲಾಗುವಿಕೆ

ಭಾಷೆ ಮಾನವ ಜಾತಿಯ ಒಂದು ವಂಶ ನಿರ್ದಿಷ್ಟ ಗುಣ. ಇದನ್ನು ಸಾಧ್ಯವಾಗಿರಿಸಿರುವುದು ಮಾನವನ ಸಂಕೀರ್ಣ ರಚನೆಯುಳ್ಳ ಸೃಜನಶಾಲಿ ಮೆದುಳು ಹಾಗು ನರಮಂಡಲ ಮತ್ತು ಅದಕ್ಕೆ ಪೂರಕವಾದ ದೇಹರಚನೆ.

ಲೆನ್ನೆಬರ್ಗ್ (1967)ನ ಪ್ರಕಾರ ಮಾನವನ ದೇಹರಚನೆ ಹಾಗೂ ನರಮಂಡಲದ ಪರಸ್ಪರ ಒಗ್ಗೂಡಿತ ಕಾರ್ಯವಿಧಾನ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಮೀನಿಗೆ ಈಜುವುದನ್ನು, ನಾಯಿಗೆ ಬೊಗಳುವುದನ್ನು ಹಾಗೂ ಮನುಷ್ಯ ಜೀವಿಗೆ ಮಾತಾಡುವುದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಇವು ಆಯಾ ಪ್ರಾಣಿಗಳ ನರಮಂಡಲದಲ್ಲಿ ಜನನಕ್ಕೆ ಮೊದಲೇ ಅಚ್ಚಾಗಿರುತ್ತವೆ. ಲೆನ್ನೆಬರ್ಗ್ ಭಾಷೆ ಹಾಗು ನರಮಂಡಲಗಳೂ ಒಟ್ಟೊಟ್ಟಿಗೆ ವಿಕಾಸವಾಗುವುದಕ್ಕೆ ಆಧಾರವಾಗಿ ಹಲವಾರು ನರ ಜೈವಿಕ ಕ್ರಿಯೆಗಳನ್ನು ಸೂಚಿಸುತ್ತಾರೆ. ಇವು ಹೀಗಿವೆ. ನರವಿಕಸನ, ಮೆದುಳು ಪ್ರಾಬಲ್ಯ ನಮ್ಯತೆ ಮಿದುಳಿನ ಸಮಸಾಮರ್ಥ್ಯ, ವಿಷಮಾವಸ್ಥೆ ಅವಧಿ (ಕ್ರಿಟಿಕಲ್ ಪಿರಿಯಡ್) ಇವುಗಳನ್ನು ಒಂದೊಂದಾಗಿ ನೋಡೋಣ.

1. ವಿಕಸನ : ಈ ತತ್ತ್ವದ ಪ್ರಕಾರ ಬೆಳವಣಿಗೆಯ ಪ್ರತಿ ಘಟ್ಟಗಳಲ್ಲಿ ಕೆಲವು ಸಾಮೂಹಿಕ, ದೈಹಿಕ, ಸಾಮಾಜಿಕ ನರಮಸ್ತಿಷ್ಕ ಸಂಬಂಧಿತ ಬೆಳವಣಿಗೆಗಳು ಕಂಡುಬರುತ್ತವೆ. ಇದೇ ಘಟ್ಟಗಳೊಂದಿಗೆ ಭಾಷಾ ಬೆಳವಣಿಗೆಯ ಹಂತಗಳನ್ನು ಹೊಂದಿಸಿ ನೋಡಬಹುದು. ಮಿದುಳಿನ ವಿಕಾಸದೊಂದಿಗೆ ಉದಾ. ವಾಕ್ಯ ಪ್ರಯೋಗದ ಆರಂಭ (2 ವರ್ಷ), ಮಾತೃ ಭಾಷೆಯ ಮೂಲ ರಚನೆಯ ಪ್ರಭುತ್ವ (5 ವರ್ಷ) ಹಾಗು ಅನ್ಯಭಾಷೆ ಕಲಿಕೆಯು ದುಸ್ಸಹವಾಗುವುದು (ಹದಿಹರೆಯ) ಇತ್ಯಾದಿ ದೈಹಿಕ ಹಾಗೂ ಭಾಷಾ ಬೆಳವಣಿಗೆಯ ಹಂತಗಳು ಉದಾ. ಕೂರುವುದು, ನಿಲ್ಲುವುದು, ನಡೆಯುವುದು ಹಾಗು ತೊದಲು ಭಾಷೆ, ಮೊದಲ ಮಾತು, ಪದ ಜೋಡಣೆ ಇತ್ಯಾದಿ ಜರಗುತ್ತಿರುತ್ತವೆ. ಮಸ್ತಿಷ್ಕದ ವಿಕಾಸವು ದೈಹಿಕ ಹಾಗೂ ಭಾಷಾ ಬೆಳವಣಿಗೆಯ ಭದ್ರ ಬುನಾದಿ.

ಮೆದುಳಿನ ದೈಹಿಕ ವಿಕಸನದ ಸಾಮೂಹಿಕ ಸಮವರ್ತಿಗಳೇ ನರರಚನೆ, ನರರಾಸಾಯನಿಕ ಹಾಗು ನರಮಸ್ತಿಷ್ಕ ಲಕ್ಷಣಗಳ ಬದಲಾವಣೆಗಳು. ಶೈಶವಾಸ್ಥೆಯಲ್ಲಿ ನರಕೋಶಗಳ ಸಂಖ್ಯೆಯಲ್ಲಿ ಏರಿಕೆಯಾಗದಿದ್ದರೂ ಗಾತ್ರದಲ್ಲಿ ಹೆಚ್ಚಾಗುತ್ತವೆ ಎಂದು ಅಧಿಕೃತ ಆಧಾರಗಳಿಂದ ಗೊತ್ತಾಗಿದೆ. ಈ ಬೆಳವಣಿಗೆ ಯಲ್ಲಿ 2 ವರ್ಷದ ಸುಮಾರಿಗೆ ಗಮನಾರ್ಹ ಏರುವಿಕೆ ಕಂಡುಬಂದಿದೆ. ಭಾಷಾ ಬೆಳವಣಿಗೆಯಲ್ಲಿ ನೋಡಿದರೆ ಇದು ಪದಜೋಡಣೆಯ ಆರಂಭದ ಹಂತ. ಈ ಪ್ರಮಾಣಾತ್ಮಕ ಹೆಚ್ಚಳ ಮೊದಲ ಎರಡು ವರ್ಷ ಬಹಳ ಹೆಚ್ಚಾಗಿರುತ್ತದೆ. ಅನಂತರ ಇಳಿಯಲಾರಂಭಿಸುತ್ತದೆ. ಹದಿಹರಯದವರೆಗೂ ಈ ಇಳಿತ ನಡೆಯುವುದು. ಅನಂತರದ ಅವಧಿಯಲ್ಲಿ ಬಹಳ ಕಡಿಮೆ ಇಳಿತ ಕಂಡುಬರುತ್ತದೆ. ಈ ಬದಲಾವಣೆಗಳೊಂದಿಗೆ ಮಿದುಳಿನ ತೂಕ ಏರುತ್ತದೆ. ಮೊದಲೆರಡು ವರ್ಷದಲ್ಲಿ ತೂಕದ ಹೆಚ್ಚಳ ಗರಿಷ್ಟ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಹೆಚ್ಚಳ ಶೇಕಡ 350 ರಷ್ಟು. ಇದಕ್ಕೆ ತದ್ವಿರುದ್ಧವಾಗಿ ಅನಂತರದ ಹತ್ತು ವರ್ಷಗಳಲ್ಲಿ ಬರಿಯ ಶೇಕಡ 35 ರಷ್ಟು ಮಾತ್ರ ತೂಕ ಹೆಚ್ಚಳ ಕಂಡುಬರುತ್ತದೆ.

ಹುಟ್ಟುವಾಗಿನ ಮೆದುಳಿನ ತೂಕ 300 ಗ್ರಾಂ ಇದ್ದರೆ ಎರಡು ವರ್ಷ ಹೊತ್ತಿಗೆ 1050 ಗ್ರಾಂ ಆಗಿರುತ್ತದೆ. ಹದಿವಯಸ್ಸಿನಲ್ಲಿ ಉದಾ. 14 ವರ್ಷದಲ್ಲಿ ಮೆದುಳಿನ ತೂಕ ಸಾಮಾನ್ಯ ವಯಸ್ಕನ ತೂಕ 1400 ಗ್ರಾಂ ಗಳಿಸುತ್ತದೆ. ಮತ್ತು ಅನಂತರದ ಅವಧಿಯಲ್ಲಿ ತೂಕದ ಹೆಚ್ಚಳ ಕಂಡುಬರುವುದಿಲ್ಲ.

ಇನ್ನೊಂದು ಪ್ರಧಾನ ನರಮಸ್ತಿಷ್ಕ ವಿಕಸನದ ಸಹವರ್ತಿಯೆಂದರೆ ನರಕೋಶಗಳ ಪರಸ್ಪರ ಸಂಬಂಧ. ನರಕೋಶದಿಂದ ನರವಾಳ ಹಾಗೂ ಮರಾಕಾರಿಯ ಹೊರಚಾಚುವಿಕೆ ಗಾಢವಾದ ಜಾಲವನ್ನು ನಿರ್ಮಿಸುತ್ತದೆ. ನವಜಾತ ಶಿಶುವಿನಲ್ಲಿ ಮಿದುಳು ತೊಗಟೆಯಲ್ಲಿ ಒಂದೂ ಮರಾಕಾರಿ ಇರುವುದಿಲ್ಲ. ಅಥವಾ ಒಂದೆರಡು ಇರಬಹುದು ಅಷ್ಟೆ. ಕ್ರಮೇಣ ಅವು ಮಿದುಳಿನ ವಿವಿಧ ಭಾಗಗಳಲ್ಲಿ ನಿರ್ದಿಷ್ಟ ಅವಧಿಗಳಲ್ಲಿ ಕಂಡು ಬರಲಾರಂಭಿಸುತ್ತವೆ. ಈ ಮರಾಕಾರಿಗಳ ಅಂಕುರ ಕಡೆಯ ಹಂತ ನಾಲ್ಕು ವರ್ಷದ ಸುಮಾರಿಗೆ ನಡೆಯುವುದು. (ಡೇ ಕ್ರೇನಿಸ 1934). ಅದರ ನಂತರ ಮರಾಕಾರಿಗಳ ಅಂಕುರ ಬಹಳ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತವೆ. ಮೊದ ಮೊದಲು ರೋಲ್ಯಾಂಡೋನ ಮೋಳೆ ಅಥವಾ ಮಧ್ಯದ ಮೋಳೆ ಆಸುಪಾಸಿನಲ್ಲಿ ನಂತರ ಬ್ರೋಕಾನ ಕ್ಷೇತ್ರದಲ್ಲಿ, ಕೂಡುವಳಿ ಕ್ಷೇತ್ರಗಳಲ್ಲಿ ಅನಂತರ ಮುಂದಲ ಪಾಲೆ ಹಾಗೂ ಕಪಾಲ ಪಾಲೆಯ ಕೆಲವು ಜಾಗಗಳಲ್ಲಿ ಕಂಡುಬರುತ್ತದೆ.

ಮೆದುಳು ವಿಕಸನ ಆಗುತ್ತಿರುವ ಹಾಗೆ ನರಕೋಶಗಳ ನಡುವಿನ ಅಂತರ ಹೆಚ್ಚಾಗುತ್ತಾ ಬರುತ್ತದೆ ಮತ್ತು ನರಕೋಶಗಳ ನಡುವಿನ ಸಾಂದ್ರತೆ ಕಡಿಮೆ ಯಾಗುತ್ತಾ ಬರುತ್ತದೆ. ಈ ಸಾಂದ್ರತೆ ಕಡಿಮೆಯಾಗುವುದು ನರಕೋಶಗಳ ನರವಾಳ ಹಾಗು ಮರಾಕಾರಿಗಳ ಕ್ಲಿಷ್ಟ ಹಂದರಕ್ಕೆ ದಾರಿ ಮಾಡಿಕೊಡುತ್ತದೆ. ಈ ನರಕೋಶ ಸಾಂದ್ರತೆ ಕೂಡ ಮೊದಲೆರೆಡು ವರ್ಷಗಳಲ್ಲಿ ವೇಗವಾಗಿ ಇಳಿಕೆಯಾಗುತ್ತದೆ. ತದನಂತರ ನಿಧಾನವಾಗಿ ಇಳಿಕೆಯಾಗುತ್ತಾ ಬಂದು ಹದಿಹರಯದ ಸುಮಾರಿಗೆ ಗರಿಷ್ಠ ಸ್ಥಿತಿ ತಲುಪುತ್ತದೆ. ಅನಂತರ ಗಮನಾರ್ಹ ಬದಲಾವಣೆಗಳು ಇರುವುದಿಲ್ಲ.

ಹೀಗೆ ನರಕೋಶ ರಚನೆಯಲ್ಲಿ ಮೊದಲೆರಡು ವರ್ಷ ಅತ್ಯಂತ ಹೆಚ್ಚಿನ ವೇಗದ ಬೆಳವಣಿಗೆಯೂ ಆನಂತರದಲ್ಲಿ ಕಡಿಮೆ ವೇಗದ ಬೆಳವಣಿಗೆಯೂ ಹಾಗೂ ಹದಿಹರಯದ ಅನಂತರ ಅತ್ಯಂತ ಕಡಿಮೆ ವೇಗದ ಬೆಳವಣಿಗೆಯೂ ಕಂಡುಬರುತ್ತವೆ.

ಮೆದುಳಿನ ರಾಸಾಯನಿಕ ಜೋಡಣೆ

ನರಮಂಡಲದ ರಚನೆಗೆ ಸಂಬಂಧಿಸಿದ ಬದಲಾವಣೆಗಳೊಟ್ಟಿಗೆ ಮೆದುಳಿನ ರಾಸಾಯನಿಕ ಬದಲಾವಣೆಗಳೂ ಹಾಸು ಹೊಕ್ಕಾಗಿವೆ. ಉದಾಹರಣೆಗೆ, ನೆರೆ ನರಾಂಶದಲ್ಲಿ ಕೆಲವು ರಾಸಾಯನಿಕ (ಕೊಲೆಸ್ಟರಾಲ್ ಸೆರೆ ಬ್ರೊಸೈಡ್‌ಗಳು) ಮೊದಲೆರೆಡು ವರ್ಷದಲ್ಲಿ ಅಧಿಕ ಪ್ರಮಾಣದಲ್ಲಿ ಹೆಚ್ಚಾದರೆ, ಅಪಿಡ್ಸ್ ಮತ್ತು ಫಾಸ್ಪಟೈಡ್ಸ್ ನಂತಹವು ಜೀವನ ಪರ್ಯಂತವೂ ಹೆಚ್ಚಾಗುತ್ತ ಬರುತ್ತವೆ.

ವಿದ್ಯುತ್ತರಂಗ ಬದಲಾವಣೆಗಳು : ಮಿದುಳಿನ ವಿದ್ಯುತ್ ಕಂಪನದಲೆ ಗಳಲ್ಲಿಯೂ ಕೂಡ ವಯಸ್ಸಿಗೆ ಸಂಬಂಧಿಸಿದಂತೆ ಬದಲಾವಣೆಗಳಾಗುವುದು ಕಂಡು ಬಂದಿದೆ. ಮಿದುಳಿನ ಪ್ರಬಲವಾದ ಅಲೆಯ ಕಂಪನಗತಿ ವಯಸ್ಸಿ ನೊಂದಿಗೆ ಬದಲಾಗುತ್ತದೆಂದು ತಿಳಿದುಬಂದಿದೆ. ಭಾಷಾ ಬೆಳವಣಿಗೆಗೆ ಸಂಬಂಧಿಸಿದಂತೆ ಮೊದಲು ಎರಡು ವರ್ಷದಲ್ಲಿ ಈ ಕಂಪನಗತಿ ಗಮನಾರ್ಹ ಬದಲಾವಣೆಗೆ ಒಳಗಾಗುವುದು.

ಹಾಗಾಗಿ ಈ ಎಲ್ಲ ವಿಕಲ್ಪಗಳೂ ಮೊದಲನೆ ವರ್ಷದಲ್ಲಿ ಅತಿ ಹೆಚ್ಚಿನ ವಿಕಸನಕ್ಕೆ ಒಳಗಾಗುತ್ತದೆ. ಭಾಷೆ ಹೊರಹೊಮ್ಮುವ ವೇಳೆಗೆ (ಎರಡು ವರ್ಷದ ಸುಮಾರಿಗೆ) ಶೇಕಡ 60% ಗುಣಲಕ್ಷಣಗಳನ್ನು ಪಡೆದುಕೊಳ್ಳುತ್ತದೆ. ಈ ವಿಕಸನವು ಹದಿಹರೆಯದವರಿಗೆ ಕಡಿಮೆಯಾಗುತ್ತಾ ಬಂದು ನಂತರ ಸ್ಥಗಿತ ಸ್ಥಿತಿ ತಲುಪಿಬಿಡುತ್ತದೆ. ಅನಂತರ ಹೆಚ್ಚಿನ ಬದಲಾವಣೆ ಕಂಡು ಬರುವುದಿಲ್ಲ.

ಇದೇ ರೀತಿ ಲೆಕೋರ್ಸ್ (1975) ರವರು ಪ್ರತಿಪಾದಿಸುವ ಪ್ರಕಾರ ಮೈಲೆಂಜೆನಿಸಿಸ್ ಕೂಡ ಭಾಷಾ ಬೆಳವಣಿಗೆಯೊಟ್ಟಿಗೆ ಹಾಸುಹೊಕ್ಕಾಗಿ ಹೊಂದಿಕೊಂಡಿದೆ. ಲೆಕೋರ್ಸ್ ಹೇಳುವಂತೆ ರಗಟೆಯಡಿಯ ನರಮಂಡಲದ ರಚನೆಗಳು ಮೊದಲು ಮೈಲೊಜಿನಿಸಿಸ್‌ಗೆ ಒಳಗಾಗುತ್ತವೆ. ನಂತರ ರಗಟೆ (ಸಬ್ ಕಾರ‌್ಟಿಕಲ್)ಯ ರಚನೆಗಳು ಹಂತ ಹಂತವಾಗಿ ಇದೇ ಗತಿಯನ್ನು ಗಳಿಸುತ್ತವೆ. ಇವು ಭಾಷೆಯ ಬೆಳವಣಿಗೆಯ ಹಲವು ಹಂತಗಳಲ್ಲಿ ಪ್ರತಿನಿಧಿತವಾಗುತ್ತವೆ. ಉದಾಹರಣೆಗೆ: ಭಾಷಾನುಕರಣೆ ಅಥವಾ ಪುನರುಚ್ಚಾಣೆ. ನರಮಂಡಲದಲ್ಲಿ ಪೂರ್ತಿ ವಿಕಸನವಾಗದಿರುವಾಗಲೇ ಆರಂಭವಾದರೂ ಮಾತಿನ ಅನುಕರಣೆ ಪ್ರಬುದ್ಧವಾಗುತ್ತದೆ. ದೈಹಿಕ ನರಮಂಡಲದ ಪೂರ್ಣ ಬೆಳವಣಿಗೆಯ ನಂತರವೇ (4 ರಿಂದ 6 ತಿಂಗಳಲ್ಲಿ ಮೊದಲುಗೊಂಡು 30 ರಿಂದ 36 ತಿಂಗಳವರೆಗೆ) ಪೂರ್ಣಗೊಳ್ಳುತ್ತದೆ. ಹಾಗೆಯೇ ಪದಕೋಶ, ಪದಜೋಡಣೆ, ಅರ್ಥಕೋಶ, ಓದುವುದು, ಬರೆಯುವುದು ಇತ್ಯಾದಿ. ಎಲ್ಲ ವಯಸ್ಕರ ಮಿದುಳಿನಲ್ಲಿ ಅರೆಗೋಳದ ಅಸಮಾನತೆ ಸಾಮಾನ್ಯವೆಂಬಂತೆ ಕಂಡುಬರುತ್ತದೆ. (ಗೆಶ್‌ವಿಂಡ್ ಹಾಗೂ ಗಾಲಬರ್ಡಾ 1985). ಮೆದುಳಿನ ರಚನಾತ್ಮಕ ಅಸಮಾನತೆಗಳು ಭ್ರೂಣಾವಸ್ಥೆಯಲ್ಲಿ ಮತ್ತು ಕ್ರಿಯಾತ್ಮಕ ಅಸಮಾನತೆಗಳು ನವಜಾತ ಶಿಶುವಿನಲ್ಲಿ ಮೂಡುತ್ತವೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆ.

ಮೆದುಳಿನ ನಮ್ಯತೆ, ಸಮಸಾಮರ್ಥ್ಯ ಹಾಗು ಭಾಷಾ ಕಲಿಕೆಯ ವಿಷಮಾವಧಿ : ಮೆದುಳಿನ ಅರೆಗೋಳಗಳ ಸಮಸಾಮರ್ಥ್ಯವು ಭಾಷೆಗೆ ಸಂಬಂಧಿತ ಶಕ್ತಿ. ಇದು ನವಜಾತ ಶಿಶುಗಳಲ್ಲಿ ಕಂಡುಬರುವಂತಹ ಮೆದುಳಿನ ಸಾಮರ್ಥ್ಯ. ಹುಟ್ಟಿದ ಅನಂತರದ ಎರಡು ವರ್ಷಗಳಲ್ಲಿ ಮೆದುಳಿನ ಎರಡೂ ಗೋಳಾರ್ಧಗಳು ಸಮಮಟ್ಟದಲ್ಲಿ ಭಾಷಾಕಲಿಕೆಯ ಶಕ್ತಿ ಹೊಂದಿರುತ್ತವೆ. ಅನಂತರದ ಅವಧಿಯಲ್ಲಿ ಈ ಶಕ್ತಿ ಕ್ರಮೇಣ ನಶಿಸುತ್ತಾ ಹೋಗಿ ಹದಿಹರಯದ ಹೊತ್ತಿಗೆ ಪೂರ್ಣ ಕಡಿಮೆಯಾಗುತ್ತದೆ. ಮೆದುಳಿನ ಎರಡೂ ಪಾರ್ಶ್ವಗಳು ಮೊದಲು ಅತ್ಯಂತ ಹೆಚ್ಚು ನಮ್ಯತೆಯನ್ನು ಒಳಗೊಂಡಿದ್ದು ಯಾವ ಒಂದು ಭಾಗದಲ್ಲಿ ಅಡಚಣೆಯಾದರೂ ಮತ್ತೊಂದು ಭಾಗ ಈ ಕೆಲಸವನ್ನು ಹಮ್ಮಿಕೊಳ್ಳುವಂತಹ ಶಕ್ತಿ ಪಡೆದಿರುತ್ತದೆ. ಒಂದೇ ಪಾರ್ಶ್ವದೊಳಗೂ ಹಾಗೂ ಪಾರ್ಶ್ವಂತರದಲ್ಲಿಯೂ ಈ ಕಾರ್ಯದ ವರ್ಗಾವಣೆ ಸ್ವಾಭಾವಿಕವಾಗಿ ಸಾಧ್ಯವಿದೆ. ಈ ಪಾರ್ಶ್ವಗಳ ಆಂತರಿಕ ನಮ್ಯತೆ ಜೀವಿಗೆ ಒಂದು ವರದಾನ. ಏಕೆಂದರೆ ಒಂದು ಭಾಗಕ್ಕೆ ಉಗ್ರ ಹಾನಿಯುಂಟಾದಾಗ ಇನ್ನೊಂದು ಭಾಗ ಆ ಕೆಲಸವನ್ನು ಹಂಚಿಕೊಂಡು ಸಹಜ ಕಾರ್ಯ ನಿರ್ವಹಣೆಯಲ್ಲಿ ಹೆಚ್ಚು ಅಡಚಣೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಈ ಗೌಣ ಭಾಗಗಳು ಅದೇ ಅರೆಗೋಳದಲ್ಲಿರಬಹುದು, ಇಲ್ಲವೆ ವಿರುದ್ಧ ಅರೆಗೋಳದಲ್ಲಿರಬಹುದು. ಒಂದು ಅರೆಗೋಳವನ್ನು ಭಾಷಾ ಬೆಳವಣಿಗೆಯ ಮೊದಲೇ ಶಸ್ತ್ರಕ್ರಿಯೆ ಮೂಲಕ ತೆಗೆದಿರುವ ಸಂದರ್ಭಗಳಲ್ಲಿ ಭಾಷಾ ವಿಕಸನ ಖಂಡಿತವಾಗಿಯೂ ನಿಲ್ಲುವುದಿಲ್ಲ. ಕೆಲವು ಮಕ್ಕಳಲ್ಲಿ ಬರಿಯ ಬಲ ಅರೆಗೋಳವು ಇದ್ದಾಗಲೂ ಭಾಷಾ ಬೆಳವಣಿಗೆ ಕುಂಠಿತವಾಗದೆ ಮುಂದುವರಿಯುತ್ತದೆ. ಇದು ಎಡ ಅರೆಗೋಳದ ಕ್ರಿಯಾತ್ಮಕ ಶಕ್ತಿಗಿಂತ ಕಡಿಮೆ ಪರಿಪೂರ್ಣವಾಗಿರಬಹುದು. (ಡೆನ್ನಿಸ್ ಮತ್ತು ವಿಟ್ಹೇಕರ್ 1976). ಆದರೆ ತೀರ ಕಳಪೆಯಂತೂ ಅಲ್ಲ. ಹೀಗೆ ಎರಡೂ ಅರೆಗೋಳಗಳಲ್ಲಿ ಸಂಗತವಾದ ನಿಜವಾದ ಸಮಸಾಮರ್ಥ್ಯವಿಲ್ಲದಿದ್ದರೂ ಕೂಡ ಎರಡರಲ್ಲೂ ಸಾಮರ್ಥ್ಯವಿರುವುದಂತೂ ದಿಟ. ಜೊತೆಗೆ ಇದು ವಯೋಬದ್ಧ. ಭಾಷೆ ಹಾಗೂ ದೈಹಿಕ ಬೆಳವಣಿಗೆಗನುಗುಣವಾಗಿ ಬದಲಾಗುತ್ತಾ ಹೋಗುತ್ತದೆ ಎನ್ನುವುದೂ ನಂಬಲರ್ಹವಾಗಿದೆ. ಈ ಮೆದುಳಿನ ಕ್ರಿಯೆಗಳು ಏಕೆ ಮಗ್ಗುಲಾಗುತ್ತವೆ. ಒಂದು ಅರೆಗೋಳದಲ್ಲಿ ಏಕೆ ನೆಲೆಸುತ್ತವೆ ಎನ್ನುವುದನ್ನು  ವಿವಾದಕರವಾಗಿಯೇ ಉಳಿದಿದೆ. ಪ್ರಾಯಶಃ ಈ ಮಗ್ಗುಲಾಗುವಿಕೆ ಮೆದುಳಿನ ಕಾರ್ಯ ದಕ್ಷತೆ ಹಾಗೂ ಶಕ್ತಿಯನ್ನು ಹೆಚ್ಚಸಲಿರಬಹುದು. ಒಂದೇ ಅರೆಗೋಳದಲ್ಲಿ ಭಾಷಾ ಕ್ರಿಯೆಯು ಕೇಂದ್ರೀಕೃತಗೊಳ್ಳುವುದರಿಂದ ನರಜೈವಿಕ ಕ್ರಿಯೆಗಳು ಬೇಗನೆ, ನಿಖರವಾಗಿ ಹಾಗೂ ಹೆಚ್ಚು ಸಮಯ ಹಾಗೂ ಶಕ್ತಿ ವ್ಯಯವಾಗದಂತೆ ಏರುಪೇರಿಲ್ಲದೆ ನಡೆದುಹೋಗಬಹುದು. ಒಂದೇ ಅರೆಗೋಳದಲ್ಲಿರುವುದರಿಂದ ನರವಾಳಗಳು ಕ್ರಮಿಸಬೇಕಾದ ದೂರ ಕಡಿಮೆ ಯಾಗುತ್ತದೆ. ವ್ಹೀಟೀಕರ್ (1988)ರವರ ಪ್ರಕಾರ ಎರಡು ಅರೆಗೋಳಗಳು ಒಂದೇ ಕೆಲಸವನ್ನು ಮಾಡುವುದಾದರೆ ಮೆದುಳಿನ ಕಾರ್ಯದಕ್ಷತೆ ಅರ್ಧದಷ್ಟು ಕಡಿಮೆಯಾಗಿಬಿಡಬಹುದು. ಅಂತೆಯೇ ಒಂದೇ ಅರೆಗೋಳಗಳು ಒಂದೇ ಕೆಲಸವನ್ನು ಮಾಡುವುದಾದರೆ ಮೆದುಳಿನ ಕಾರ್ಯದಕ್ಷತೆ ಅರ್ಧದಷ್ಟು ಕಡಿಮೆಯಾಗಿ ಬಿಡಬಹುದು. ಅಂತೆಯೇ ಒಂದೇ ಅರೆಗೋಳದಲ್ಲಿ ಭಾಷಾ ಕಾರ್ಯ ಕೇಂದ್ರೀಕೃತವಾಗಿವುದು ಕೂಡ ಕಾರ್ಯದಕ್ಷತೆಯನ್ನು ಹೆಚ್ಚಿಸುತ್ತದೆ. ಈ ನಮ್ಯತೆ ಕೂಡ ಭಾಷಾ ಗಳಿಕೆಯಲ್ಲಿ ಮಹತ್ತರವಾದುದು. ಈ ಶಕ್ತಿ ಕೆಲವು ಸಂಶೋಧಕರ ಪ್ರಕಾರ ಐದು ವರ್ಷದವರೆಗೆ ಮತ್ತೆ ಕೆಲವರ ಪ್ರಕಾರ ಹದಿಹರಯದವರೆಗೆ ಹೆಚ್ಚು ಪ್ರಬಲವಾಗಿರುತ್ತದೆ. ಇದೇ ಸಮಯದಲ್ಲಿ ಮೆದುಳಿನ ಯಾವುದಾದರೂ ಒಂದು ಅರೆಗೋಳದಲ್ಲಿ (ಸಾಮಾನ್ಯವಾಗಿ ಎಡ ಗೋಳಾರ್ಧದಲ್ಲಿ) ಭಾಷಾಶಕ್ತಿ ಕೇಂದ್ರೀಕೃತಗೊಳ್ಳುತ್ತದೆ. ಈ ಕಾರ್ಯ ಪ್ರತಿಷ್ಠಾಪನೆ ಮೊದಲ ಎರಡು ವರ್ಷಗಳಲ್ಲಿ ಅತಿ ಪ್ರಬಲವಾಗಿಯೂ, ನಂತರದ ಅವಧಿಯಲ್ಲಿ ನಿಧಾನವಾಗಿಯೂ ರೂಪುಗೊಳ್ಳುತ್ತದೆ. ಈ ಕಾರ್ಯ ನಿರ್ದೇಶನ ಮುಗಿದ ನಂತರ ಕಾರ್ಯ ವರ್ಗಾವಣೆ ಬಹಳಷ್ಟು ಮಟ್ಟಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಮನುಷ್ಯನ ಹೊಸಭಾಷಾ ಕಲಿಕೆ ಈ ಅವಧಿಯ ನಂತರ ಕಷ್ಟಕರವಾಗುತ್ತದೆ. ಈ ಶೈಶಾವಸ್ಥೆಯಿಂದ ಹದಿಹರಯದವರೆಗಿನ ಕಾಲಾವಧಿಯನ್ನು ವಿಷಮಾವಸ್ಥೆಯ ಅವಧಿ (ಕ್ರಿಟಿಕಲ್ ಪಿರಿಯಡ್) ಎಂದು ಕರೆಯುತ್ತೇವೆ. ಈ ಅವಧಿ ಭಾಷಾ ಕಲಿಕೆಗೆ ಬಹಳ ಅನುಕೂಲಕರ. ಇದರ ನಂತರದ ಕಾಲ ಭಾಷಾಕಲಿಕೆಗೆ ಹೆಚ್ಚು ಅನುಕೂಲಕರವಲ್ಲವೆಂದು ಹಲವು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಅವಧಿಯ ಒಳಗೆ ಮೆದುಳಾಘಾತ ದಿಂದ ಚೇತರಿಸಿಕೊಳ್ಳಲು ಒಳ್ಳೆಯ ಅವಕಾಶ ಇರುತ್ತದೆ. ಆದ್ದರಿಂದಲೇ ಮಕ್ಕಳಲ್ಲಿ ಮೆದುಳಾಘಾತಗಳು ಭಾಷೆಯ ಮಟ್ಟಿಗೆ ಹೆಚ್ಚು ಉಗ್ರವಾಗಿರುವು ದಿಲ್ಲ. ಅದೇ ವಯಸ್ಕರಲ್ಲಿ ಈ ಗುಣಲಕ್ಷಣ ಕಂಡುಬರುವುದಿಲ್ಲ. ಸಣ್ಣ ಹಾನಿಗಳೂ ಕೇಂದ್ರೀಕೃತ ವಾಕ್‌ಸ್ತಂಭನವನ್ನು ಹೆಚ್ಚು ಖಾಯಂ ರೀತಿಯಲ್ಲಿ ಉಂಟು ಮಾಡುತ್ತವೆ.

ವಿಷಮಾವಸ್ಥೆಯ ಅವಧಿಯ ಕೊನೆಗೆ ಮೆದುಳು ಭಾಷೆಯ ಮಟ್ಟಿಗೆ ತನ್ನ ನಮ್ಯತೆಯನ್ನು ವರ್ಗಾಂತರಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಈ ನಮ್ಯತೆ ವಯಸ್ಸಾದಂತೆ ನಶಿಸಿಹೋಗುತ್ತದೆ.

ವ್ಯತಿರಿಕ್ತವಾದ ಸಾಕ್ಷ್ಯಾಧಾರಗಳು

ಇತ್ತೀಚಿನ ಕೆಲ ಅಧ್ಯಯನಗಳಿಂದ ಪೂರ್ಣ ನಿಖರವಾದ ಮಾಹಿತಿಗಳು ತಿಳಿದು ಬಂದಿಲ್ಲವಾದರೂ ನಿಮ್ಮಿದುಳಿನ ನಮ್ಯತೆ ಹಾಗೂ ಮಗ್ಗಲಾಗುವಿಕೆ ಬಗೆಗೆ ಕೆಲವು ಚರ್ಚಾರ್ಹ ಮಾಹಿತಿಗಳು ದೊರೆತಿವೆ. ಸಾಮಾನ್ಯ ಮಕ್ಕಳ ಭಾಷಾ ಬೆಳವಣಿಗೆಯ ಅಧ್ಯಯನದಿಂದ ದೊರೆತ ಮಾಹಿತಿಗಳು ಕೂಡ ಮಿಶ್ರ ರೀತಿಯವಾಗಿವೆ. ಧ್ವನಿ ಉಚ್ಚಾರಣೆ ಮತ್ತು ವ್ಯಾಕರಣಕ್ಕೆ ಸಂಬಂಧಿತ ಕೆಲ ಅಂಶಗಳು ಬಹಳಷ್ಟು ಮಟ್ಟಿಗೆ ಐದು ವರ್ಷಗಳೊಳಗೆ ಚೆನ್ನಾಗಿ ಅಭಿವೃದ್ದಿ ಹೊಂದಿರುತ್ತವೆ ಎನ್ನುವುದು ನಿಜವಾದರೂ ಕೆಲವು ಮೇಲ್ತರಗತಿಯ ಭಾಷಾ ಸಂಬಂಧಿತ ಚಟುವಟಿಕೆಗಳು, (ಉದಾ: ಶಬ್ದಾರ್ಥ ರಚನೆ ಮತ್ತು  ವ್ಯಾವಹಾರಿಕ ಭಾಷಾ ಬಳಕೆ ಇತ್ಯಾದಿಗಳು) ಹದಿಹರೆಯದಲ್ಲೂ ಹಾಗೂ ನವ ವಯಸ್ಕರಲ್ಲಿ ಬೆಳೆಯುತ್ತಾ ಇರುತ್ತವೆ ಎನ್ನುವುದು ನಿಚ್ಚಳವಾಗಿದೆ. ಹುಟ್ಟುವ ಮೊದಲೇ ನಿಮ್ಮಿದುಳಿನ ಅಂಗರಚನೆಯಲ್ಲಿ ಅಸಮಾನತೆಯು ಕಂಡುಬಂದು ಎಳೆಗೂಸುಗಳಲ್ಲಿ ಕೆಲವು ಕಾರ್ಯ ರೂಪದ ಅಸಮಾನತೆಗಳು ಕೂಡ (ಉದಾ: ಬಲಗಡೆಗೆ ಮಗ್ಗಲಾಗುವುದು, ಬಲಗೈಯಿಂದ ಹಿಡಿದು ಕೊಳ್ಳುವುದು, ಮಾತನ್ನು ಕೇಳಿಸಿಕೊಳ್ಳುವುದರಲ್ಲಿ ಬಲಕಿವಿಯು ಎಡಗಿವಿಗಿಂತ ಪ್ರಮುಖವಾಗುವುದು ಇತ್ಯಾದಿ) ಕಂಡು ಬಂದಿವೆ. ಮೂರು ವರ್ಷದ ಮೊದಲೇ ಭಾಷಾ ಮಗ್ಗುಲಾಗುವಿಕೆಯು ಸಂಪೂರ್ಣವಾಗಿ ರೂಪುಗೊಳ್ಳ ಬಹುದು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಲೆನ್ನೆಬರ್ಗ್‌ನ (1967) ಹದಿಹರೆಯದವರೆಗೆ ನಮ್ಯತೆ ಹಾಗು ಭಾಷಾ ಕಲಿಕೆಯ ವಿಷಮಾವಧಿಯ ತತ್ವಕ್ಕೆ ಆಧಾರಗಳು ಸಿಗುವುದಿಲ್ಲ. ವಯಸ್ಕರು ಹೊಸದಾಗಿ ಭಾಷೆಯನ್ನು ಕಲಿಯಲು ಹಾಗು ಅದರಲ್ಲಿ ನೈಪುಣ್ಯತೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಕೂಡಾ ಚರ್ಚಾಸ್ಪದವಾಗಿದೆ. ಹಲವು ವಯಸ್ಕರಲ್ಲಿ (ಎಲ್ಲರಲ್ಲೂ ಅಲ್ಲ) ಈ ಸಾಧ್ಯತೆ ಕಡಿಮೆಯಾದರೂ ಇದಕ್ಕೆ ಕಾರಣ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ಸಂಬಂಧಿತ ಅಂಶಗಳಿರಬಹುದೇ ಹೊರತು ಮೆದುಳಿನ ಕಾರ್ಯ ಕ್ಷಮತೆಯ ಕುಂದು ಮಾತ್ರವೇ ಕಾರಣವಾಗಲಾರದು ಎಂದು ತಿಳಿಯಲಾಗುತ್ತಿದೆ. ಅದೂ ಅಲ್ಲದೆ ಮೆದುಳಿನಲ್ಲಿ ಹಾನಿ ಉಂಟಾದವ ಭಾಷಾ ಸಾಮರ್ಥ್ಯ ಮತ್ತು ಹುಟ್ಟಿದ ಐದು ತಿಂಗಳೊಳಗೆ ಎಡನಿಮ್ಮಿದುಳನ್ನು ಕೊಯ್ದು ತೆಗೆದ ಮಕ್ಕಳಲ್ಲಿ ಕಂಡು ಬಂದ ಭಾಷಾ ನೈಪುಣ್ಯ – ಇವೆರಡೂ, ಮೆದುಳು ಪೂರ್ಣವಾಗಿ ಇರುವವರಲ್ಲಿ ಕಂಡು ಬಂದ ಭಾಷಾ ಸಾಮರ್ಥ್ಯಗಳಿಗಿಂತ ಕಡಿಮೆಯಾಗಿರುವುದು ಅಧ್ಯಯನಗಳಿಂದ ಕಂಡು ಬಂದಿದೆ. ಹಾಗಿರುವಲ್ಲಿ ಎಳೆವಯಸ್ಸಿನ ಮೆದುಳ ನಮ್ಯತೆ ಬಲನಿಮ್ಮಿದುಳಿಗೆ ವರ್ಗಾಂತರಗೊಳ್ಳುವ ಭಾಷಾ ಮಗ್ಗುಲಾಗುವಿಕೆಯ ತತ್ವವನ್ನು ಕೂಡ ಬದಲಾಯಿಸಬೇಕಾಗಿರುವುದು ಹೆಚ್ಚು ಪ್ರಸ್ತುತ. ಸದ್ಯದ ಪರಿಸ್ಥಿತಿಯಲ್ಲಿ ಭಾಷೆ ಮತ್ತು ನಿಮ್ಮಿದುಳು ಮಗ್ಗುಲಾಗುವಿಕೆಗೆ ಇರುವ ಸಂಬಂಧ ಕ್ಲಿಷ್ಟ ಹಾಗೂ ಸುಲಭವಾಗಿ  ಅರ್ಥವಾಗುವಂತಹುದಲ್ಲ. ಈ ವಿಷಯ ನರಭಾಷಾ ವಿಜ್ಞಾನಿಗಳಿಗೊಂದು ಸವಾಲಾಗಿದ್ದು, ಹೆಚ್ಚು ನಿಖರವಾದ ಮಾಹಿತಿಗಳು ದೊರಕುವವರೆಗೆ ಈ ಸಂಬಂಧಿತ ತೀರ್ಮಾನಗಳನ್ನು ಮುಂದೂಡುವುದೇ ಸಮಂಜಸ ಎಂದು ಹಲವರ ಅಭಿಪ್ರಾಯ.

ದ್ವಿ ಭಾಷಿಕ / ಬಹು ಭಾಷಿಕರಲ್ಲಿ ಮೆದುಳಿನ ಪ್ರತಿಷ್ಠಾಪನೆ: ಇಷ್ಟರವರೆಗೆ ಮಾತೃಭಾಷೆಯನ್ನು ಕಲಿಯುವವರ ಮೆದುಳಿನಲ್ಲಿ ಭಾಷೆಯ ಕೇಂದ್ರೀಕರಣದ ಬಗ್ಗೆ ತಿಳಿದುಕೊಂಡೆವು. ಈಗ ಎರಡು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುವವರಲ್ಲಿ ಮೆದುಳಿನ ಭಾಷಾ ಕೇಂದ್ರೀಕರಣ ಹೇಗಾಗುವುದು ಎಂಬುದನ್ನು ತಿಳಿದುಕೊಳ್ಳೋಣ.

ದ್ವಿಭಾಷಿಕತೆ ಮತ್ತು ಬಹುಭಾಷಿಕತೆ ಎನ್ನುವ ಪದಗಳು ಕ್ರಮವಾಗಿ ಮನುಷ್ಯರಲ್ಲಿ ಎರಡು ಅಥವಾ ಹೆಚ್ಚು ಭಾಷೆಗಳ ಪ್ರವೀಣತೆಯನ್ನು ಸೂಚಿಸುತ್ತದೆ. ಆದರೆ  ಸಾಮಾನ್ಯವಾಗಿ ದ್ವಿಭಾಷಿಕ ಎನ್ನುವ ಪದವು ಆಂಗ್ಲ ಭಾಷೆಯಲ್ಲಿಯಂತೂ ದ್ವಿಭಾಷಿಕ ಹಾಗೂ ಬಹುಭಾಷಿಕರಿಗೂ ಮತ್ತು ಸಾಮಾಜಿಕ ಬಹುಭಾಷಿಕತೆಗೂ ಅನ್ವಯಿಸುವಂತೆ ಬಳಕೆಗೊಂಡಿದೆ. ದ್ವಿಭಾಷಿಕ ಬಹುಭಾಶಿಕರಲ್ಲಿ ಮೆದುಳಿನ ಭಾಷಾ ಸಂಘಟನೆಯನ್ನು ಅರಿಯಬೇಕಾದರೆ ಎರಡು ವಿಧಾನಗಳನ್ನು ಅನುಸರಿಸಬಹುದು. 1) ಆಧುನಿಕ ಯಂತ್ರೋಪಕರಣ ಗಳ ಬಳಕೆ, ಎಂಜಿಯೋಗ್ರಫಿ, ಮೆದುಳಿನ ಕ್ಷಕಿರಣ ಮೆದುಳಿನ ರಕ್ತವಾಹನ ಕ್ರಮ ಇತ್ಯಾದಿ. 2) ವಾಕ್ ಸ್ತಂಭನ ಉಂಟಾಗಿರುವುದನ್ನು ಕೂಲಂಕುಷವಾಗಿ ಪರಾಂಬರಿಸುವುದು. ವಾಕ್ ಸ್ತಂಭನ ಉಂಟಾದಾಗ  ಯಾವ ಭಾಷೆಯ ಉಪಯೋಗವನ್ನು ಕಳೆದುಕೊಳ್ಳುತ್ತಾರೆಂಬುದು ಅವರು ಈ ಮೆದುಳಾಘಾತ ಸಂಭವಿಸುವ ಮೊದಲು ಹಲವು ಭಾಷಾ ಪ್ರಯೋಗ ಹೇಗೆ ಮಾಡುತ್ತಿದ್ದ ರೆಂಬುದರ ಮೇಲೆ ಅವಲಂಬಿಸಿದೆ. ಹಾಗೂ ಯಾವ ಭಾಷೆಯನ್ನು ಹೇಗೆ ಮಾಡುತ್ತಿದ್ದರೆಂಬುದರ ಮೇಲೆ ಅವಲಂಬಿಸಿದೆ. ಹಾಗೂ ಯಾವ ಭಾಷೆಯನ್ನು ಹೇಗೆ, ಎಷ್ಟರಮಟ್ಟಿಗೆ ಉಪಯೋಗಿಸುತ್ತಿದ್ದರು ಅನ್ನುವ ವಿಷಯದ ಮೇಲೆ ಆಧಾರಿತವಾಗಿದೆ. ಸಾಮಾನ್ಯವಾಗಿ ದ್ವಿಭಾಷಿಕರಲ್ಲಿ ಹಲವು ವಾಕ್‌ಸ್ತಂಭನ ಉಂಟಾದಾಗ ಭಾಷಾ ತೊಂದರೆಯ ತೀವ್ರತೆ ಒಂದು ಭಾಷೆಯಲ್ಲಿದ್ದಂತೆ ಮತ್ತೊಂದರಲ್ಲಿ ಇಲ್ಲದಿರಬಹುದು ಹಾಗೂ ಕೆಲವು ಬಾರಿ ವಾಕ್‌ಸ್ತಂಭನದಲ್ಲಿ ವೈವಿಧ್ಯ (ಹಲವು ಭಾಷೆಗಳಿಗೆ ಸಂಬಂಧಪಟ್ಟಂತೆ) ಕಂಡುಬರಬಹುದು. ಪ್ಲಾರಡಿಸ್ (1977) ಎನ್ನುವವರು ದ್ವಿಭಾಷಿಕರು ವಾಕ್‌ಸ್ತಂಭನದಿಂದ ಎಂಟು ರೀತಿಯಲ್ಲಿ ಚೇತರಿಸಿಕೊಳ್ಳುವುದನ್ನು ಗುರುತಿಸಿದ್ದಾರೆ.

1. ಎರಡು ಭಾಷೆಗಳಲ್ಲಿ ಸಮಾನ ಚೇತರಿಕೆ.

2. ಒಂದು ಭಾಷೆಯ ತೀವ್ರ ಚೇತರಿಕೆ ಮತ್ತೊಂದು ಭಾಷೆಯ ಸಾಧಾರಣ ಚೇತರಿಕೆ.

3. ಒಂದು ಭಾಷೆಯ ಸಾಮರ್ಥ್ಯ ಮರುಗಳಿಕೆಯಾದ ಆನಂತರ ಮತ್ತೊಂದು ಭಾಷೆಯ ಸಾಮರ್ಥ್ಯದ ಗಳಿಕೆ.

4. ಒಂದು ಭಾಷೆಯ ಚೇತರಿಕೆಯಾಗುತ್ತ ಹೋದಂತೆ ಮತ್ತೊಂದು ಭಾಷೆಯ ವಾಕ್ ಸ್ತಂಭನ ತೀವ್ರವಾಗುವುದು.

5. ಮಿಶ್ರ ರೀತಿಯ ಚೇತರಿಕೆ.

6. ಒಮ್ಮೆಗೇ ಎರಡೂ ಭಾಷೆಗಳ ಸಾಮರ್ಥ್ಯ ಮರುಗಳಿಕೆ.

7. ಒಂದು ಭಾಷೆಯ ಕೆಲವು ಅಂಶಗಳು ಮತ್ತೊಂದು ಭಾಷೆಯ ಕೆಲವು ಅಂಶಗಳು ಬೆರೆತುಕೊಂಡ ಮರುಗಳಿಕೆ.

8. ಒಂದಾದ ಮೇಲೊಂದರಂತೆ ಎರಡೂ ಭಾಷೆಯ ಬೇರೆ ಬೇರೆ ಅಂಶಗಳನ್ನು ಮರಳಿ ಪಡೆಯುವುದು.

ಮೊದಲನೆಯದನ್ನು ಹೊರತುಪಡಿಸಿದರೆ ಉಳಿದಂತೆ ಭಾಷಿಕರ ಮೆದುಳಿನಲ್ಲಿ ಭಾಷೆಗಳು ಬೇರೆ ಬೇರೆಯಾಗಿ ವ್ಯವಸ್ಥಿತಗೊಂಡಿರುತ್ತವೆಂದು ತಿಳಿಯಲು ಕಾರಣಗಳಿವೆ.

ಇವುಗಳನ್ನು ಗಮನಿಸಿದರೆ ಒಂದಂತೂ ಸ್ಪಷ್ಟವಾಗುತ್ತದೆ. ದ್ವಿಭಾಷಿಕರಲ್ಲಿ ಏಕಭಾಷಿಕರಿಗಿಂತ ಭಿನ್ನವಾದ ಮೆದುಳಿನ ಭಾಷಾ ರಚನೆ ಹಾಗೂ ಕೇಂದ್ರೀಕರಣ ಸ್ವಲ್ಪ ಮಟ್ಟಿಗಾದರೂ ಭಿನ್ನತೆ ಕಂಡು ಬರುವ ಸಾಧ್ಯತೆಯಿದೆ.

ಈ ಭಿನ್ನತೆ ಹಾಗೂ ವೈವಿಧ್ಯಗಳಿಗೆ ಕೂಡ ಹಲವಾರು ಕಾರಣಗಳನ್ನು ಕೊಡಲಾಗಿದೆ. ರಿಬಟ್ (1882)ನ ಪ್ರಕಾರ ಮೊದಲು ಕಲಿತ ಭಾಷೆಯಲ್ಲಿ ಆರಂಭದ ಚೇತರಿಸಿಕೊಳ್ಳುವಿಕೆ ಕಂಡು ಬರಬಹುದು. ಪಿಟ್ರೆಸ್ (1895)ನ ಪ್ರಕಾರ ಮೆದುಳಾಘಾತದ ಸಮಯದಲ್ಲಿ ಯಾವ ಭಾಷೆ ಹೆಚ್ಚು ಬಳಕೆ ಯಲ್ಲಿತ್ತೋ ಅದು ಬೇಗೆ ಚೇತರಿಸಿಕೊಳ್ಳಬಹುದು. ಮತ್ತಿತರರ ಪ್ರಕಾರ ಯಾವ ಭಾಷೆ ಪ್ರಿಯವೋ ಆ ಭಾಷೆಯಲ್ಲಿ ಬೇಗ ಚೇತರಿಕೆ ಕಂಡು ಬರಬಹುದು. ಓಬ್ಲರ್ ಹಾಗೂ ಅಲ್ಬರ್ಟ್ (1977)ರ ಪ್ರಕಾರ ಪಿಟ್ರೆಸ್ ಅವರ ಅಭಿಪ್ರಾಯ ಹೆಚ್ಚು ಸಮಂಜಸವಾಗಿದೆ.

ಕೆಲವರ ಮೆದುಳಿನಲ್ಲಿ ಭಾಷಾಂತರಿಸುವ ಸ್ವಿಚ್ ಇರಬಹುದು ಎಂದು ಅಭಿಪ್ರಾಯ ಪಟ್ಟಿದ್ದರೂ ಅದರ ರಚನೆ ಅದರ ಖಚಿತ ಅಸ್ತಿತ್ವ ಮತ್ತಿತರ ಮಾಹಿತಿಗಳು ತಿಳಿದಿಲ್ಲವಾದ್ದರಿಂದ ಈ ಅಭಿಪ್ರಾಯ ಹೆಚ್ಚು ಪ್ರಚಲಿತವಾಗಿಲ್ಲ.

ಏಕಭಾಷಿಕರಲ್ಲಿ ಒಂದೇ ಅರೆಗೋಳ ಭಾಷಾ ಸಂಬಂಧಿತ ಕ್ರಿಯೆಗಳಲ್ಲಿ ಚಟುವಟಿಕೆಯಿಂದಿದ್ದರೆ, ದ್ವಿಭಾಷಿಕರಲ್ಲಿ ಎರಡೂ ಅರೆಗೋಳಗಳು ಮಹತ್ತರ ಪಾತ್ರವನ್ನು ನಿಭಾಯಿಸುತ್ತಿರಬಹುದು ಎಂದು ಹಲವರ ಅಂಬೋಣ. ಎರಡನೆಯ ಭಾಷಾ ಕಲಿಕೆಯಲ್ಲಿ ಮತ್ತೊಂದು ಅರೆಗೋಳ ಹೆಚ್ಚು ಪ್ರಾಧಾನ್ಯ ವಹಿಸುತ್ತಿರಬಹುದು ಎಂಬುದು ಕೂಡ ಹಲವರ ಅಭಿಪ್ರಾಯ. ಆದರೆ ಸಂಶೋಧನೆಗಳು ತಮ್ಮ ಸಂಶೋಧನಾ ಮಾಹಿತಿಯಲ್ಲಿ ಹೆಚ್ಚು ನಿಖರವಾದ ಹಾಗೂ ಪರಸ್ಪರ ಹೊಂದಿಕೆಯಾಗುವ ಅಂಶಗಳನ್ನು ಬಳಸಿಕೊಂಡಿಲ್ಲವಾದ ಕಾರಣ ತೀರ್ಮಾನಗಳನ್ನು ಒಪ್ಪುವುದಾಗದು. ಈ ರೀತಿಯ ಸಂಶೋಧನೆಗಳು ಇನ್ನೂ ನಡೆಯುತ್ತಿವೆ.

ದ್ವಿಭಾಷಿಕರ ಮಿದುಳಿನ ಒಂದು ಅರೆಗೋಳವನ್ನು ನಿಷ್ಕ್ರಿಯಗೊಳಿಸಿ ಅಥವಾ ಸಂಪೂರ್ಣವಾಗಿ ತೆಗೆದು ಹಾಕಿ ಅನಂತರ ಅವರ ಭಾಷಾ ಸಾಮರ್ಥ್ಯ ಗಳ ಬಗೆಗೆ ಸಂಶೋಧನೆ ನಡೆಸಿದರೆ ಹೆಚ್ಚಿನ ಉಪಯುಕ್ತ ಮಾಹಿತಿಗಳು ದೊರಕಬಹುದು. ಆದರೆ ಈ ಬಗೆಯ ಪ್ರಯೋಗ ನಡೆದಿಲ್ಲ.

ದ್ವಿಭಾಷಿಕರಲ್ಲಿ ಭಾಷಾ ಬೆಳವಣಿಗೆಯ ವಿಷಮಾವಧಿಯ ಮೇಲೂ ಹಲವಾರು ಅಭಿಪ್ರಾಯಗಳು ವ್ಯಕ್ತಗೊಳಿಸಲ್ಪಟ್ಟಿವೆ. ಹದಿಹರೆಯದಲ್ಲಿ ಎರಡನೆಯ ಭಾಷೆಯನ್ನು ಕಲಿಯುವಲ್ಲಿ ವಿಷಮಾವಧಿಯ (ಲೆನ್ನೆ ಬರ್ಗ 1967) ಕಂಡು ಬಂದು ಇದು ಮೆದುಳಿನಲ್ಲಿ ಭಾಷಾ ಮಗ್ಗುಲಾಗುವಿಕೆಯನ್ನು ನಿಯಂತ್ರಿಸುತ್ತದೆ. ಇನ್ನೊಂದು ಅಭಿಪ್ರಾಯದ ಪ್ರಕಾರ ಎರಡನೆ ಭಾಷೆಯನ್ನು ಕಲಿಯುವವರಲ್ಲಿ ಮೊದಲ ಹಂತಗಳಲ್ಲಿ ಬಲ ಅರೆಗೋಳವು ಪ್ರಬಲವಾಗಿದ್ದು ನಂತರದ ಹಂತಗಳಲ್ಲಿ ಎಡ ಅರೆಗೋಳವು ಪ್ರಬಲವಾಗುತ್ತದೆ. ಇದರಲ್ಲೂ ಕೂಡಾ ಭಿನ್ನಾಭಿಪ್ರಾಯಗಳಿದ್ದು ವಿಷಮಾವಸ್ಥೆಯ ಅವಧಿ ಎಲ್ಲರಲ್ಲೂ ಕಂಡು ಬರದಿರುವ ಸಾಧ್ಯತೆಗಳಿವೆ. ಕೆಲವು ದ್ವಿಭಾಷಿಕರು ವಿಷಮಾವಸ್ಥೆಯ ಅವಧಿಯನ್ನು ಮೀರಿಯೂ ಯಾವ ತೊಂದರೆಗಳೂ ಇಲ್ಲದೆ ಮಾತೃ ಭಾಷಿಕರಂತೆ ಎರಡನೇ ಭಾಷೆಯಲ್ಲಿ ನೈಪುಣ್ಯವನ್ನು ಸಾಧಿಸಿರುವುದು ಕಂಡು ಬಂದಿದೆ. ಇದು ಬಹುಶಃ ಕೆಲವರಲ್ಲಿ ಮೆದುಳಿನ ಭಾಷಾ ಸಂಬಂಧಿತ ರಚನೆ ಹಾಗೂ ಕೇಂದ್ರೀಕರಣ ಭಿನ್ನವಾಗಿರುವ ಸಾಧ್ಯತೆಯನ್ನು ಪ್ರತಿಪಾದಿಸುತ್ತವೆ. ಈ ಎಲ್ಲಾ ಅಭಿಪ್ರಾಯಗಳಿಂದ ಈ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಂಶೋಧನೆ ಗಳು ಅಗತ್ಯವಾಗಿವೆ ಎಂದು ಸ್ಪಷ್ಟವಾಗುತ್ತದೆ.

ಭಾಷಾ ನ್ಯೂನತೆಗಳು

ಭಾಷೆ ಒಂದು ಸಂಪರ್ಕ ಸಾಧನ. ಸಮಾಜದಲ್ಲಿ ಒಬ್ಬರಿಗೊಬ್ಬರು ಹೇಳಿ, ಕೇಳಿ ಅರ್ಥಮಾಡಿಕೊಳ್ಳುವಂತಹ ಮಾಧ್ಯಮ ಭಾಷೆ. ದಿನನಿತ್ಯದಲ್ಲಿ, ಮಾತಿನ ಭಾಷೆಯ ಬಳಕೆಯಲ್ಲಿ ಹಲವಾರು ಸಣ್ಣಪುಟ್ಟ ಕುಂದು ಕೊರತೆ ಗಳಿರಬಹುದು. ಉದಾ. ಪೂರ್ತಿ ಅರ್ಥವಾಗದಿರುವುದು, ಸರಿಯಾಗಿ ಹೇಳದೆ ಇರುವುದು, ಅನ್ನಿಸಿದ್ದೆಲ್ಲಾ ಹೇಳಲಾಗದಂತೆ ಪರಿಸ್ಥಿತಿ ಇತ್ಯಾದಿ. ಇವು ಮಾನವ ಜಾತಿಯಲ್ಲಿರುವ ಪರಸ್ಪರ ವ್ಯತ್ಯಾಸಕ್ಕೆ, ಏರುಪೇರಿಗೆ ಅನುಗುಣವಾಗಿದೆ. ಭಾಷೆ ಹಾಗು ಮೆದುಳಿಗಿರುವ ಸಂಬಂಧ ಈ ವ್ಯತ್ಯಾಸಕ್ಕಿಂತಲೂ ಸೂಕ್ಷ್ಮವಾಗಿದೆ. ಬಹಳಷ್ಟು ಮಾತಿನ / ಭಾಷೆಯ ಕುಂದು ಕೊರತೆಗಳಿಗೆ ಮೆದುಳಿನ ನ್ಯೂನತೆ, ಹಾನಿ ಮತ್ತು ಆಘಾತಗಳು ಕಾರಣವಾಗಿರಬಹುದು.

ಮಕ್ಕಳಲ್ಲಿ ಭಾಷಾ ಕಲಿಕೆಯ, ಭಾಷೆಯ ಬೆಳವಣಿಗೆಯಲ್ಲಿ ಕಂಡು ಬರುವಂತಹ ತೊಂದರೆಗಳು ಹಲವಾರು. ಹುಟ್ಟಿನಿಂದಲೇ ಇರುವ ಕಿವುಡಿನಿಂದ ಉಂಟಾಗುವಂತಹವು ಮಾತಿನ ಅಂಗಾಂಗಗಳ ನ್ಯೂನತೆಗಳಿಂದ ಸಂಭವಿಸು ವಂತಹವು, ಬುದ್ದಿಮಾಂದ್ಯ, ಮೆದುಳಿನ ಕಾರ್ಯ ನ್ಯೂನತೆ ಅಥವಾ ಮೆದುಳ ಹಾನಿಯಿಂದ ಉಂಟಾಗುವಂತಹವು ಇತ್ಯಾದಿ. ವಯಸ್ಕರಲ್ಲಿ ಸಾಮಾನ್ಯವಾಗಿ ಬಾಯಿ ತಪ್ಪುಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಆಗುವ ಹಲವು ರೀತಿಯ ವಾಕ್ ಸ್ತಂಭನ ಇತ್ಯಾದಿ. ಇವುಗಳನ್ನು ಒಂದೊಂದಾಗಿ ಗಮನಿಸೋಣ.

ಸಾಮಾನ್ಯರಲ್ಲಿ ಬಾಯಿತಪ್ಪುಗಳು

ಕೆಲವರು ಸಹಜ ಸ್ಥಿತಿಯಲ್ಲಿಯೂ ಮಾತನಾಡುವಾಗ ಕೆಲವು ತಪ್ಪುಗಳನ್ನು ಮಾಡಬಹುದು. ಇವು ಉದ್ದೇಶಪೂರಿತವಲ್ಲದಿದ್ದರೂ ಮಾತನಾಡುವಾಗ ತಾನಾಗಿಯೇ ಘಟಿಸುವಂತಹ ತಪ್ಪುಗಳು. ಇವುಗಳನ್ನು ಬಾಯಿ ತಪ್ಪು ಎಂದು ಹೇಳುತ್ತಾರೆ. ಸಹಜ ಸನ್ನಿವೇಶಗಳಲ್ಲಿ ಇವು ಸರ್ವೇಸಾಮಾನ್ಯ. ಈ ಸಂದರ್ಭದಲ್ಲಿ ಶಬ್ದಗಳು, ಅಕ್ಷರಗಳು, ಪದಗಳು ಹಾಗೂ ಕ್ಲಿಷ್ಟ ವ್ಯಾಕರಣ ಘಟಕಗಳು ಬದಲಾವಣೆಗೊಳ್ಳುತ್ತವೆ. ಮಾತನಾಡುವವರ ಗಮನಕ್ಕೆ ಇವು ತಕ್ಷಣ ಬಂದು ಅವರು ಸರಿಪಡಿಸಲು ಪ್ರಯತ್ನಿಸುತ್ತಾರೆ. ಈ ರೀತಿಯ ತಪ್ಪುಗಳು ಆಂಗ್ಲ ಭಾಷೆಯಲ್ಲಿ ಹೆಚ್ಚು ಸಂಗ್ರಹಗೊಂಡಿದ್ದು ನಾನಾ ರೀತಿಯ ವಿಶ್ಲೇಷಣೆಗೆ  ಒಳಗಾಗಿವೆ. ಇವುಗಳನ್ನು ಸ್ಪೂನರಿಸಂ ಎಂದು ಕೂಡ ಕರೆಯುತ್ತಾರೆ. ಸ್ಪೂನರ್ (1844-1930) ಎಂಬ ಆಂಗ್ಲ ಪಾದ್ರಿಯ ಹೆಸರಿನಲ್ಲಿ ಈ ದೋಷವನ್ನು ಗುರುತಿಸಲಾಗಿದೆ.

ಮನೋವಿಜ್ಞಾನಿ ಫ್ರಾಯ್ಡಾನ ಪ್ರಕಾರ ಬಾಯಿ ತಪ್ಪುಗಳು ಮಾನಸಿಕ ಒತ್ತಡ ಹಾಗೂ ಗೊಂದಲಕ್ಕೆ ಸಂಬಂಧಪಟ್ಟ ಲಕ್ಷಣಗಳು. ಆದರೆ ಇತ್ತೀಚಿನ ಸಂಶೋಧನೆಗಳು ಈ ತಪ್ಪುಗಳನ್ನು ಅಭ್ಯಸಿಸಿ ಮೆದುಳು ಅದೂ ಮನಸ್ಸು ಹೇಗೆ ಕಾರ್ಯ ನಿರ್ವಹಿಸುತ್ತದೆ, ಭಾಷೋತ್ಪತ್ತಿಯಲ್ಲಿ ಯಾವ ರೀತಿಯ ಕ್ರಮೋಲ್ಲಂಘನೆಗಳು ಘಟಿಸುತ್ತವೆ, ಮಾತಿನ ಶಬ್ದ ಜೋಡಣೆಯ ಕ್ರಮದಲ್ಲಿ ಯಾವ ರೀತಿ ಆಚರಣೆಗಳು ಸಂಭವಿಸುವುವು ಇತ್ಯಾದಿಗಳಿಗೆ ಸೂಕ್ತ ವಿವರಣೆ ಗಳನ್ನು ಕೊಟ್ಟಿದ್ದಾರೆ.

ಬಾಯಿ ತಪ್ಪುಗಳ ಬಗ್ಗೆ ನರಭಾಷಾ ವಿಜ್ಞಾನಿಗಳ ಅಧ್ಯಯನದಂತೆ ಈ ತಪ್ಪುಗಳು ಕ್ರಮರಹಿತ ಅಲ್ಲ. ತಪ್ಪಿನಲ್ಲಿಯೂ ಒಂದು ರೀತಿಯ ಮೂಲಕ್ರಮ ಇರುತ್ತದೆ. ಉದಾಹರಣೆಗೆ ಬಾಯಿ ತಪ್ಪಿದಾಗ ಹೇಳಿದ ಎರಡು ಪದಗಳಲ್ಲಿ – ಉದ್ದೇಶಿತ ಪದ ಹಾಗೂ ಉಚ್ಚಾರಗೊಳ್ಳುವ ಪದ ಸಮಾನತೆ ಇರುತ್ತವೆ. ಇವು ಶಬ್ದಗಳ ಧ್ವನಿ ಏರಿಳಿತದ ಕ್ರಮ ಹಾಗೂ ವಾಕ್ಯರಚನಾ ಕ್ರಮಗಳನ್ನು ಉಲ್ಲಂಘಿಸುವುದಿಲ್ಲ. ಕೋಡುಬಳೆ ಎನ್ನುವ ಬದಲು ಬೋಡುಕಳೆ ಎಂದರೆನ್ನೋಣ. ಇಲ್ಲಿ ಮೂಲ ಪದದ ರಚನೆ ಹಾಗೇ ಉಳಿದಿದೆ. ಹೀಗಾಗಿ ಉಚ್ಚರಿಸಲ್ಪಟ್ಟ ಪದ ತಪ್ಪಾಗಿದ್ದರೂ ಕೂಡ ಕ್ರಮಬದ್ಧವಾಗಿರುತ್ತದೆ. ಇದೊಂದು ಬಹಳ ಸಣ್ಣ ಉದಾಹರಣೆ ಅಷ್ಟೆ. ಇವುಗಳಲ್ಲಿ ಹಲವಾರು ಮಾದರಿಗಳನ್ನು ಗಮನಿಸಬಹುದು.

ಪಟ್ಟಿ 2 ವಾಕ್ ಸ್ತಂಭನಗಳು

ಬ್ರೋಕಾನ ವಾ.ಸ್ತ. ವರ್ನಿಕೆಯ ವಾ.ಸ್ತ. ಪ್ರವಾಹಕ ವಾ.ಸ್ತ. ಪೂರ್ಣ ವಾ.ಸ್ತ.
ಉಚ್ಚಾರಣೆ +
ಅರ್ಥೈಸುವಿಕೆ # #
ಪದ ಹಾಗೂ ವಾಕ್ಯ ರಚನೆ # #
ಪುನರುದ್ಧಾರ #
(- = ಪೂರ್ಣ ತೊಂದರೆ, + = ತೊಂದರೆ ಇಲ್ಲ, # = ಸ್ವಲ್ಪ ಮಟ್ಟಿಗೆ ನ್ಯೂನತೆ)

ಸರ್ವೇ ಸಾಮಾನ್ಯ ಬಾಯಿ ತಪ್ಪುವಿಕೆ

ಫ್ರಾಮ್‌ಕಿನ್ (1973) ಇವರು ಏಳು ರೀತಿಯ ಬಾಯಿ ತಪ್ಪುಗಳನ್ನು ಗುರುತಿಸುತ್ತಾರೆ. ಇವು ಆಂಗ್ಲಭಾಷೆಯಲ್ಲಿ ಹೆಚ್ಚು ಅಧ್ಯಯನಗೊಂಡಿದ್ದು ಹಲವಾರು ಸಂಶೋಧನೆಗಳಿಗೆ ದಾಖಲೆ ಇದೆ. ಫ್ರಾಮ್‌ಕಿನ್ (1973) ಅವರ ಪ್ರಕಾರ ಬಾಯಿತಪ್ಪುಗಳನ್ನು ಕೆಳಕಂಡಂತೆ ವಿಂಗಡಿಸಬಹುದು.

1. ನಿರೀಕ್ಷಣೆ ತಪ್ಪುಗಳು

2. ಶಬ್ದ ಮರಳಿಸುವಿಕೆ

3. ಹಿಂದು ಮುಂದಾಗುವಿಕೆ

4. ಮಿಶ್ರ ಪದಗಳು

5. ಪದ ಲೋಪ

6. ತಪ್ಪು ಪ್ರತ್ಯಯ ಬಳಕೆ

7. ಪದ ಪಲ್ಲಟ

ಇವು ಕನ್ನಡ ಭಾಷೆಯಲ್ಲಿ ಹೆಚ್ಚು ಅಧ್ಯಯನಗೊಂಡಿಲ್ಲ ಹಾಗೂ ಅದಕ್ಕೆ ದಾಖಲೆಗಳಿಲ್ಲ. ಹೆಚ್ಚಿನ ಮಾಹಿತಿಗಾಗಿ ಓದುಗರು ಮೇಲೆ ಹೇಳಿದ ಆಕರವನ್ನು ನೋಡಬಹುದು.

ವಾಕ್ಸ್ತಂಭನ

ಮೆದುಳಿಗುಂಟಾದ ಹಾನಿಯಿಂದ ಕೆಲವು ಭಾಷಾ ತೊಂದರೆಗಳು ಸಂಭವಿಸಬಹುದು. ಇವುಗಳನ್ನು ವಾಕ್‌ಸ್ತಂಭನ (ಅಫೇಸಿಯಾ) ಎಂದು ಕರೆಯುತ್ತಾರೆ. ಮೆದುಳಿನ ಯಾವ ಭಾಗಗಳಿಗೆ ಘಾಸಿಯುಂಟಾಗಿದೆ ಎಂಬುದನ್ನು ಅನುಸರಿಸಿ ಬೇರೆ ಬೇರೆ ರೀತಿಯ ಭಾಷೆ ಸಂಬಂಧಿತ ತೊಂದರೆಗಳು ಕಂಡು ಬರುತ್ತವೆ. ಒಂದೇ ರೀತಿಯ ಮೆದುಳಿನ ಗಾಯ ಬೇರೆ ಬೇರೆ ರೀತಿಯ ಲಕ್ಷಣಗಳನ್ನು ಹೊರಹೊಮ್ಮಿಸಬಹುದು. ಈ ಲಕ್ಷಣಗಳ ಉಗ್ರತೆ ಹಾಗೂ ತೀವ್ರತೆಗಳು ಪ್ರತಿಯೊಬ್ಬರಲ್ಲೂ ಬೇರೆ ಬೇರೆಯಾಗಬಹುದು. ಇಂತಹ ಕೆಲವು ಮೂಲಭೂತ ಲಕ್ಷಣಗಳನ್ನು ಜಟಿಲಗೊಂಡ ಪ್ರಸಂಗಗಳಲ್ಲೂ ಗುರುತಿಸಬಹುದು. ಈ ಲಕ್ಷಣಗಳು ಕೆಳಕಂಡಂತಿವೆ.

1. ಬ್ರೋಕಾನ ವಾಕ್ಸ್ತಂಭನ : ಬ್ರೋಕಾನ ವಾಕ್‌ಸ್ತಂಭನ ಇದು ಬ್ರೋಕಾನ ಕ್ಷೇತ್ರಕ್ಕೆ ಉಂಟಾಗುವ ಘಾಸಿಯಿಂದ ಉಂಟಾಗಿ ಹಲವು ಲಕ್ಷಣಾವಳಿಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾದವು: ಉತ್ತಮ ಗ್ರಹಣಶಕ್ತಿ, ಉಚ್ಚಾರಣಾದೋಷಗಳು, (ಒಂದು ಶಬ್ದಕ್ಕೆ ಬದಲಾಗಿ ಮತ್ತೊಂದನ್ನು ಬಳಸುವುದು, ಶಬ್ದಗಳನ್ನು ಬಿಟ್ಟು ಬಿಡುವುದು ಇತ್ಯಾದಿ) ಪದ ಹಾಗೂ ವಾಕ್ಯ ಜೋಡಣೆಗಳಲ್ಲಿ ತೊಂದರೆಗಳು (ಉದಾ: ವ್ಯಾಕರಣ ಬದ್ದವಲ್ಲದ ಜೋಡಣೆಗಳು) ನಾಮಪದಗಳನ್ನು ಮಾತ್ರ ಬಳಸುವಿಕೆ, ಅಪೂರ್ಣ ಪದ ಹಾಗೂ ವಾಕ್ಯಗಳನ್ನು ಬಳಸುವಿಕೆ. ಇವುಗಳು ವ್ಯಕ್ತಿಯ ಯಾವುದೇ ಭಾಷೆಯ ಬಳಕೆಯಲ್ಲೂ ಕಂಡುಬರಬಹುದು. ಉದಾ: ‘ರಾಮ ಊಟ’ ಎನ್ನುವ ವಾಕ್ಯ ‘ರಾಮ ಊಟ ಮಾಡುತ್ತಿದ್ದಾನೆ’ ಎಂಬ ವಾಕ್ಯದ ಬದಲು ಉಪಯೋಗವಾಗಬಹುದು. ಇಂಥ ಬಳಕೆಗಳಲ್ಲಿ ವಾಕ್ಯ ರಚನಾ ಜ್ಞಾನದ ನ್ಯೂನತೆಯೂ ಕಂಡು ಬರಬಹುದು.

2. ವರ್ನಿಕೆಯ ವಾಕ್ಸ್ತಂಭನ : ಇದು ಬ್ರೋಕಾನ ವಾಕ್‌ಸ್ತಂಭನಕ್ಕೆ ತದ್ವಿರುದ್ಧವಾಗಿದ್ದು, ವರ್ನಿಕೆಯ ಕ್ಷೇತ್ರಕ್ಕೆ ಸಂಭವಿಸುವ ಮೆದುಳ ಹಾನಿಯಿಂದ ಕಂಡು ಬರುತ್ತದೆ. ಮೊದಲೇ ಹೇಳಿದ ಹಾಗೆ ಈ ಕ್ಷೇತ್ರವು ಮಾತಿನ ಗ್ರಹಣಕ್ಕೆ ಅಲ್ಲದೇ ಮಾತಿನ ಉತ್ಪತ್ತಿಯಲ್ಲಿ ಪದಗಳ ಆಯ್ಕೆಗೂ ಕಾರಣವಾಗಿದೆ. ವರ್ನಿಕೆಯ ವಾಕ್‌ಸ್ತಂಭನದಲ್ಲಿ ಮುಖ್ಯ ತೊದರೆಗಳು ಎಂದರೆ ಮಾತಿನ ಗ್ರಹಣ ಶಕ್ತಿಯಲ್ಲಿ ಅಭಾಸ ಹಾಗೂ ಅರ್ಥಪೂರ್ಣ ಪದಜೋಡಣೆಯಲ್ಲಿ ಉಂಟಾಗುವ ಕುಂದು ಕೊರತೆಗಳು. ಮೇಲ್ನೋಟಕ್ಕೆ ಮಾತು ನಿರರ್ಗಳ ಎನಿಸುತ್ತದೆಯಾದರೂ ಅವರ ಮಾತು ಅರ್ಥಬದ್ಧವಾಗಿರುವುದಿಲ್ಲ, ಸಂದರ್ಭೋ ಚಿತವಲ್ಲ ಎಂದು ಗುರುತಿಸಬಹುದು.

3. ಪ್ರತಿವಹನದ ವಾಕ್ಸ್ತಂಭನ : ಈ ತೊಂದರೆಯು ವರ್ನಿಕೆ ಹಾಗೂ ಬ್ರೋಕಾನ ಕ್ಷೇತ್ರಗಳಿಗಿರುವ ನರ ತಂತು ಜೋಡಣೆಯ ಹಾನಿಯಿಂದ ಉಂಟಾಗುತ್ತದೆ. ಇಲ್ಲಿ ಶಬ್ದೋಚ್ಚಾರಣೆಯ ತೊಂದರೆಯಿಲ್ಲದಿದ್ದರೂ ವರ್ನಿಕೆಯ ವಾಕ್‌ಸ್ತಂಭನದಂತೆ ಮಾತಿನ ಗ್ರಹಣ ಶಕ್ತಿಯಲ್ಲಿ ಸ್ವಲ್ಪ ಮಟ್ಟಿಗೆ ಕೊರತೆಯಿದ್ದು ಅರ್ಥಬದ್ಧವಲ್ಲದ ಮಾತು ಕೆಲ ಬಾರಿ ಕಂಡುಬರಬಹುದು. ಮುಖ್ಯವಾಗಿ ಪುನರುಚ್ಚಾರಣೆಯಲ್ಲಿ ತೊಂದರೆಯಿದ್ದು ಮತ್ತೊಬ್ಬರು ಹೇಳಿದ್ದನ್ನು ನಕಲು ಮಾಡಲಾರದಾಗದಂತಹ ಪರಿಸ್ಥಿತಿ ಇರುತ್ತದೆ.

4. ಪೂರ್ಣ ವಾಕ್ಸ್ತಂಭನ : ಈ ಸನ್ನಿವೇಶದಲ್ಲಿ ಮೆದುಳಿನ ಭಾಷಾ ಸಂಬಂಧಿತ ಕ್ಷೇತ್ರಗಳೆಲ್ಲ ತೊಂದರೆಗೊಳಗಾಗಿದ್ದು ಮಾತಿನ ಗ್ರಹಿಕೆ ಹಾಗೂ ಅಭಿವ್ಯಕ್ತಿಸುವಿಕೆ ಎರಡೂ ಕುಂಠಿತವಾಗುತ್ತದೆ. ಪರಿಸ್ಥಿತಿ ಉಗ್ರವಾದಾಗ ಮಾತಿನ ಸಂಸ್ಕರಣ ಪೂರ್ತಿಯಾಗಿ ಇಲ್ಲವಾಗಬಹುದು.

5. ಪದಗುರುಡು ಮತ್ತು ಬರಹಕೊರೆ : ಈ ತೊಂದರೆಗಳು ಒಟ್ಟಾಗಿ ಅಥವಾ ಒಂದೊಂದಾಗಿ ಕಂಡು ಬರಬಹುದು. ಕೋನದ ನೆರಿಗೆ ಉಂಟಾಗುವ ಗಾಯದಿಂದ ಕಂಡು ಬರುವ ಈ ತೊಂದರೆಗಳು ಬೇರೆ ರೀತಿಯ ವಾಕ್ ಸ್ತಂಭನಗಳೊಂದಿಗೆ ಉದ್ಭವಿಸಬಹುದು. ದೃಷ್ಟಿ ತೊಂದರೆಯಿಲ್ಲದಿದ್ದರೂ ಓದುವಿಕೆ / ಬರೆಯುವಿಕೆ ಕುಂಠಿತವಾಗುತ್ತದೆ. ಕೆಲವರು ಅಕ್ಷರ ಅಥವಾ ಪದ ನಕಲು ಮಾಡಬಹುದು. ಆದರೆ ಸ್ವತಃ ಬರೆಯುವ ಮತ್ತು ಓದುವ ಶಕ್ತಿ ಕಳೆದುಕೊಳ್ಳಬಹುದು.