ಕವಿ ಕಾಲ ವಿಚಾರ

ಶರಗತಿತ್ರಯ ಚಂದ್ರ ಸಂಖ್ಯೆಯ
ವರ ಶಕಾಬ್ದ ಕ್ರೋಧಿ ಸಂವ
ತ್ಸರದ ಫಾಲ್ಗುಣ ಶುದ್ಧ ದಶಮಿ  ದಿನೇಶವಾರದಲಿ
ಮೆಱೆವ ಪೆನುಗೊಂಡೆಯ ಸುಶಾಂತೀ
ಶ್ವರನ ಜಿನವಾಸದಲಿ ಜೀವಂ
ಧರನ ಚರಿತೆಯ ರಚಿಸಿದನು ಜಾಣ್ಮೆಯಲಿ ಭಾಸ್ಕರನು

[1] ||

ಈ ಪದ್ಯದ ಪ್ರಕಾರ ಕವಿ ಭಾಸ್ಕರನು ಪೆನುಗೊಂಡೆಯ ಶಾಂತಿನಾಥ ಬಸದಿಯಲ್ಲಿ ಜೀವಂಧರ ಚರಿತೆಯನ್ನು ಶಕ ೧೩೪೫ನೆಯ ಕ್ರೋಧಿ ಸಂವತ್ಸರದ ಫಾಲ್ಗುಣ ಮಾಸದಲ್ಲಿ ಅಂದರೆ ಕ್ರಿ.ಶ. ೧೪೨೪ ರಲ್ಲಿ ರಚಿಸಿದ್ದಾನೆಂದು ತಿಳಿಯುತ್ತದೆ.

ಈ ಪದ್ಯವು ಇದೇ ರೀತಿಯಾಗಿ ಎಲ್ಲ ಹಳೆಯ ಗ್ರಂಥಗಳಲ್ಲಿ ಉಲ್ಲಿಖಿತವಿದೆ. ಸಂಶಯಕ್ಕೆ ಆಸ್ಪದ ಬರುವಂತೆ ಯಾವ ಪ್ರತಿಯಲ್ಲಿಯೂ ಇಲ್ಲದಿರುವುದರಿಂದ ಕವಿ ಹೇಳಿಕೊಂಡಿರುವ ಕಾಲವನ್ನು ನಾವು ಸಹಜವಾಗಿ ಒಪ್ಪಿ ಕವಿ ಭಾಸ್ಕರನು ಕ್ರಿ.ಶ. ೧೪೨೪ ರಲ್ಲಿ ಜೀವಿಸಿದ್ದನೆಂದು ಹೇಳಬಹುದಾಗಿದೆ. ಆದರೆ ಈ ಕಾಲವನ್ನು ಒಪ್ಪದೆ ಭಾಸ್ಕರ ಕವಿಯು ಕ್ರಿ.ಶ. ೧೬೦೪ರ ಸುಮಾರಕ್ಕೆ ಇದ್ದಿರಬೇಕೆಂದು ಊಹಿಸುವವರೂ ಉಂಟು.[2] ಆದರೆ ಅಲ್ಲಿಯ ಊಹೆಗೆ ಸಾಕಷ್ಟು ಸಮಾಧಾನಕರವಾದ ನಿರ್ದಿಷ್ಟ ಪ್ರಮಾಣಗಳು ಇನ್ನೂ ಬೇಕು ಎಂದು, ಹೀಗೆ ಊಹೆ ಮಾಡಿದ ಮಾನ್ಯ ಲೇಖಕರೇ ಹೇಳಿರುವುದರಿಂದ ಸದ್ಯಕ್ಕೆ ಆ ವಿಚಾರವನ್ನು ಅಷ್ಟಕ್ಕೇ ಬಿಟ್ಟು, ಕವಿಯೇ ಹೇಳಿಕೊಂಡಿರುವ ಕಾಲವನ್ನು ಒಪ್ಪಿ, ಭಾಸ್ಕರ ಕವಿಯು ಕ್ರಿ.ಶ. ೧೪೨೪ ರಲ್ಲಿ ತನ್ನ ಗ್ರಂಥವನ್ನು ಬರೆದು ಮುಗಿಸಿದ್ದಾನೆಂದು ಹೇಳಿ ಕ್ರಿ.ಶ. ೧೫ನೆಯ ಶತಮಾನದ ಆರಂಭದಲ್ಲಿ ಕವಿ ಭಾಸ್ಕರನು ಬಾಳಿದ್ದನೆಂದು ಹೇಳಬಹುದು. ಕನ್ನಡ ಕವಿಚರಿತೆಕಾರರೂ, ಡಾ. ರಂ.ಶ್ರೀ. ಮುಗಳಿ ಅವರೂ ಇದನ್ನೇ ಸಮರ್ಥಿಸಿದ್ದಾರೆ.[3]

ಜೀವಂಧರ ಚರಿತೆಯಲ್ಲಿ ಕವಿಯು ತನ್ನ ಬಗೆಗೆ ಹೆಚ್ಚಿನ ವಿವರಗಳನ್ನು ಕೊಟ್ಟಿಲ್ಲ. ಆದರೂ ಅತನೇ ಹೇಳಿಕೊಂಡಿರುವ –

ಕೃತಿಗೆ ನಾಮ ವಿಶುದ್ಧ ಗುಣನ
ಪ್ರತಿಮ ಜೀವಂಧರನ ಕಥೆ ತ –
ತ್ಕೃತಿಗಧಿಪ ಸರ್ವಜ್ಞನೀ ಕೃತಿ ರಚಿತ ಕವಿವರನು
ವಿತತ  ವಿಶ್ವಾಮಿತ್ರಗೋತ್ರಾ
ನ್ವಿತ ಸರಸ ಬಸವಾಂಕ ಸುತ ವಿ
ಶ್ರುತನು ಭಾಸ್ಕರನೆಂದೊಡೊಪ್ಪುವುದರಿದೆ ಧರಣಿಯಲಿ[4]

ಮತ್ತು

ಇದು ವಿನಮದಮರೇಂದ್ರ ಶ್ರೀಜಿನ
ಪದಕಮಲ ಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕ ಸುತ
ಚದುರ ಭಾಸ್ಕರ ರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದುವೆ[5] ……….. ………………………..

ಈ ಪದ್ಯಗಳ ಆಧಾರದಿಂದ ಭಾಸ್ಕರನು ಜೈನನಾಗಿದ್ದು ವಿಶ್ವಾಮಿತ್ರ ಗೋತ್ರಕ್ಕೆ ಸೇರಿದ ಬಸವ (ಋಷಭ) ನೆಂಬವನ ಮಗನೆಂದು ಗೊತ್ತಾಗುತ್ತದೆ. ಅಲ್ಲದೇ ಮೇಲೆ ಹೇಳಿದ ಕಾವ್ಯವನ್ನು ಬರೆದ ಶಕೆಯನ್ನು ಹೇಳುವ ಪದ್ಯದಲ್ಲಿ ಹೇಳಿಕೊಂಡಿರುವಂತೆ, ಈತನು ಹಿಂದುಪೂರ ಜಿಲ್ಲೆಯ ಪೆನುಗೊಂಡೆಯವನೆಂದೂ ಅಲ್ಲಿಯ ಶಾಂತಿನಾಥನ ಬಸದಿಯಲ್ಲಿ ಈ ಪುಣ್ಯಕಾವ್ಯವನ್ನು ಬರೆದನೆಂದೂ ತಿಳಿಯುತ್ತದೆ. ಭೂಸುರೋತ್ತಮ ಬಸವಣಾಂಕ ಎಂದು ಹೇಳಿರುವುದನ್ನು, ಕವಿ ಭಾಸ್ಕರನ ತಂದೆ ಮೊದಲು ಶೈವಬ್ರಾಹ್ಮಣನಾಗಿದ್ದು, ನಂತರ ಜೈನಧರ್ಮವನ್ನು ಒಪ್ಪಿಕೊಂಡಿರಬಹುದೆಂಬ ಸಂದೇಹಕ್ಕಾಸ್ಪದವಿತ್ತುದುಂಟು. ಆದರೆ ಹಾಗೇನೂ ಸಂಶಯ ಪಡುವ ಅವಶ್ಯಕತೆಯಿಲ್ಲ. ಏಕೆಂದರೆ ಜೈನರಲ್ಲಿ ಕವಿ ಭಾಸ್ಕರನಂತೆ ಕುಲಗೋತ್ರಗಳನ್ನು ಹೇಳಿಕೊಳ್ಳುವ ಜೈನ ಬ್ರಾಹ್ಮಣರು ಈಗಲೂ ಉಂಟು. ‘ಬಸವ’ ಎಂಬುದು ‘ಋಷಭ’ ದ ತದ್ಭವವಷ್ಟೇ!

ಜೈನ ಕವಿಗಳ ಸಂಪ್ರದಾಯದಂತೆ ಕವಿ ಭಾಸ್ಕರನೂ ಸಹ ತನ್ನ ಕಾವ್ಯವನ್ನು ಪಂಚಪರಮೇಷ್ಠಿಗಳ, ಸರಸ್ವತಿ, ಗಣಧರರ, ಪೂರ್ವಾಚಾರರ ಸ್ತುತಿಯಿಂದ ಆರಂಭ ಮಾಡಿ, ಕಂಕವಿಗಳ ನಿಂದೆ ಮಾಡಿ, ಸತ್ಕವಿಗಳನ್ನು ನೆನೆದು, ಗಣಧರರು ವಿರಚಿಸಿದ ಈ ಸತ್ಕೃತಿ (ಜೀವಂಧರ ಚರಿತೆ) ಯನ್ನು ವಿಸ್ತರಿಸಲು ತಾನು ಎಷ್ಟರವನು ಎಂದು ಕೇಳಿಕೊಂಡು, ಆದರೂ “ಕರುಣದಿ ಪರಮ ಭಕ್ತ್ಯಂಗನೆಯ ವಶದಿಂ ಪೇಱ್ವೆನೀಕೃತಿಯ” ಎಂದು ಹೇಳಿಕೊಂಡು ತನ್ನ ಕೃತಿಯನ್ನು ಆರಂಭ ಮಾಡಿದ್ದಾನೆ. ತನ್ನ ಕೃತಿಗೆ _

“ವಿನುತ ನೇಮಿಯ ರೀತಿ ಗುಣವ
ರ್ಮನ ಚಮತ್ಕೃತಿ ನಾಗವರ್ಮನ
ನೆನಹು ಹೊನ್ನನ ದೇಸೆ ವಿಜಯನ ಭಾವವಗ್ಗಳನ
ಸನುನಯೋಕ್ತಿ ಗಜಾಂಕುಶನ ಬಿ
ನ್ನಣ ಯಶಶ್ಚಂದ್ರನ ಬಹುಜ್ಞತೆ
ಯನುಕರಿಸಲೀ ಕಾವ್ಯದೊಳಗೆನಗವರ ಕರುಣದಲಿ[6] ||

ಎಂದು ತನ್ನ ಹಿಂದಿನ ಕನ್ನಡ ಕವಿಗಳನ್ನು ಬೇಡಿಕೊಂಡು,

ನಡೆವ ನೆಡಹುವನಲ್ಲದುಱೆದವ
ರೆಡಹುವರೆ ಕೃತಿನಡೆಸುವರೊಳೊಂ
ದೆಡೆಯಲನು ತಪ್ಪಿದರೆ ತಪ್ಪಲ್ಲಿಕ್ಷುಸಾರದಲಿ
ತೊಡರ್ದ ದೋಷವನುಱೆಯಲದು ತಾ
ಕಡೆಗೆ ಶರ್ಕರೆಯಹುದು ತಪ್ಪು
ಳ್ಳೆಡೆಯ ತಿದ್ದಿ ವಿದಗ್ಧರಧಿಕವ ಮಾಱ್ಪುದವನಿಯಲಿ[7] ||

ಎಂದು ವಿನಯವನುಸುರಿ

ಗರುಡನಭ್ರುವನಡರೆ ಪಿಕವಾ|
ಪರಿಯ ನೆಗೆವಂತನಿಲಸುತ ಸಾ|
ಗರವ ದಾಂಟಲು ನವಿಲು ಲಂಘಿಪ ತೆಱದಿ ಗಣಧರರು[8] ||

ವಿರಚಿಸಿಹ ಈ ಸತ್ಕೃತಿಯನ್ನು, ಕವಿವರನೂ, ವಿಶ್ರುತನೂ ಆದ ತಾನು ರಚಿಸಿರುವೆನೆಂದೊಡೆ “ಒಪ್ಪುವುದರಿದೆ ಧರಣಿಯಲಿ” ಎಂದು ತನ್ನ ಆತ್ಮವಿಶ್ವಾಸವನ್ನು ಪ್ರಕಟಿಸಿದ್ದಾನೆ. ಸರ್ವಜ್ಞನಾದ ಶ್ರೀ ಮಹಾವೀರಸ್ವಾಮಿಯೇ ಈ ಕೃತಿಗೆ ಅಧಿಪನು. ಅವನ ಸನ್ನಿಧಿಯಲ್ಲಿಯೇ ಇದ್ದ ಗೌತಮ ಗಣಧರರಿಂದಲೇ ಈ ಜೀವಂಧರ ಚರಿತೆಯು ಲೋಕಕ್ಕೆ ವಿದಿತವಾಯಿತು. ಆದರೂ ಭಾಸ್ಕರ ಕವಿಯು ತನ್ನ ಕೃತಿಯನ್ನು “ಕ್ರಿ.ಶ. ಸು ೧೨ನೆಯ ಶತಮಾನದಲ್ಲಿ, ದಕ್ಷಿಣದಲ್ಲಿ ಆಗಿ ಹೋದ ಒಡೆಯದೇವ ಇಲ್ಲವೆ ವಾದೀಭಸಿಂಹ” ಸೂರಿಗಳು ಸಂಸ್ಕೃತದಲ್ಲಿ ರಚಿಸಿದ ಜೀವಂಧರನ ಚರಿತೆಯನ್ನು ಆಧಾರವಾಗಿಟ್ಟುಕೊಂಡು ತನ್ನ ಕೃತಿ ರಚಿಸಿರುವುದಾಗಿ ಹೇಳಿದ್ದಾನೆ.

ಕಥಾಸಾರ

ಈಗ ಜೀವಂಧರ ಚರಿತೆಯಲ್ಲಿ ಬರುವ ಕಥಾಸಾರವನ್ನು ತಿಳಿದುಕೊಳ್ಳಬಹುದು.

“ಶೂರನೂ, ಪರಮ ಜೀವಭಕ್ತನೂ, ಧರ್ಮಿಷ್ಠನೂ ಆದ ಶ್ರೇಣಿಕ ಮಹಾರಾಜನು ಮಗಧ ಮಂಡಳವನ್ನು ಲೀಲೆಯಿಂದ ಪಾಲಿಸಿಕೊಂಡಿದ್ದನು. ಒಂದು ದಿನ ವನಪಾಲನು ಬಂದು ವಿಪುಳಾದ್ರಿಯಲ್ಲಿ ಭಗವಾನ್ ಮಹಾವೀರರ ಸಮವಸರಣವು ಬಂದಿದೆಯೆಂದು ಶ್ರೇಣಿಕ ಮಹಾರಾಜನಿಗೆ ಬಿನ್ನವಿಸಿಕೊಂಡನು. ಕೂಡಲೇ ಪೀಠದಿಂದಿಳಿದು ಭಯಭಕ್ತಿಯಿಂದ, ಸಮವಸರಣವು ಬಂದಿಳಿದ ದಿಕ್ಕಿನತ್ತ ನೋಡಿ ನಮಸ್ಕರಿಸಿ, ಆನಂದ ಭೇರಿಯನ್ನು ಹೊಯ್ಸಿ, ಸಕಲ ಬಂಧು ಬಾಂಧವರು, ಪರಿಜನ ಪುರಜನರಂದಿಗೆ ಹೊರಟು ಸಮವಸರಣಕ್ಕೆ ಹೋಗಿ ಭಗವಾನ್ ಮಹಾವೀರರನ್ನು ಕಂಡು, ಅನೇಕ ರೀತಿಯಿಂದ ಸ್ತುತಿಸಿ, ಅಲ್ಲಿಯೇ ಇದ್ದ ಗೌತುಮ ಮೊದಲಾದ ಗಣಧರರನ್ನು ಸ್ತುತಿಸಿ, “ಧರ್ಮಪಾರಾಯಣ ಪ್ರಸಂಗದಲ್ಲಿ” ಹರುಷದಲ್ಲಿದ್ದ ಶ್ರೇಣಿಕನು, ಅಲ್ಲಿಯೇ ಸಮೀಪದಲ್ಲಿ.

“ಅರುಹನನು ಹೃತ್ಪದ್ಮದಲಿ ತಂ
ದಿರಿಸಿ ರವಿಮಂಡಲಕೆ ದೃಷ್ಟಿಯ
ಹರಿಸಿ ಬಹಿರಿಂದ್ರಿಯದ ಬಱಲಿಕೆಯುಱೆದು ಸಾಕ್ಷಾತ
ನಿರಪಮಾನಂದೈಕ ತೇಜ
ಸ್ಫುರಿತಮಯ ತಾನಾಗಿ ತಪಮಾ
ಚರಿಪ ಮುನಿಪನ ಕಂಡು ಗೌತುಮಗೆ”[9] ಹೀಗೆ ಕೇಳಿದನು.

“ಭೂಲೋಕದ ಜನರಿಗೆ ತಪವನ್ನಾಚರಿಸುವುದು ಕರ್ತವ್ಯವು, ಅದು ದೇವತೆಗಳಿಗೆ ಸಲ್ಲದು, ಹೀಗಿರುವಾಗ ಈ ದೇವನು ಉಗ್ರೋಗ್ರ ತಪಸ್ಸನ್ನಾಚರಿಸುತ್ತಿರುವುದು ವಿಸ್ಮಯವಾಗಿದೆ.” ಅದಕ್ಕೆ ಸುಧರ್ಮನು “ಈತನು ಮನುಷ್ಯನೇ, ದೇವನಲ್ಲ. ಮಹಾತಿಶಯದ ತಪೋಗ್ನಿಯಿಂದಿದಿರಾತ ಕರ್ಮಾರಣ್ಯವನು ಖಂಡಿಸಿ, ಭವಾಟವಿಗೆ ಜ್ಯೋತಿಮಯ ತಾನಾಗಿ ಭುವನಖ್ಯಾತಿವೆತ್ತನು.” ಎಂದು ಹೇಳಿದನು. ಅದಕ್ಕೆ ಮಗಧಾಧಿಪತಿಯು, “ಇವನು ಮೊದಲು ದ್ವಿಜನೋ, ಮಹೀಪಾಲನೋ ವಣಿಗ್ ವಂಶಜನೋ, ಕೈಲಾಸ ಪರ್ವತದ ಖೇಚರನೋ? ಈತನ ವಿಷಯವನ್ನು ನನಗೆ ಹೇಳಿರಿ” ಎಂದು ಕೇಳಿದನು. ಅದಕ್ಕೆ ಸುಧರ್ಮನು ಆ ತಪಸ್ವಿಯ (ಜೀವಂಧರನ) ಕಥೆಯನ್ನು ಶ್ರೇಣಿಕನಿಗೆ ಹೀಗೆ ಹೇಳಿದನು.

“ಸಮುದ್ರದಿಂದ ಸುತ್ತುಗಟ್ಟಲ್ಪಟ್ಟ ಮಧ್ಯಮಲೋಕ, ಅಲ್ಲಿ ಜಂಬೂದ್ವೀಪ. ಅದರಲ್ಲಿ ಮಂದರ ಪರ್ವತ ಇಳೆಗೆ ಮೂಲಸ್ತಂಭವೆನ್ನುವಂತೆ ಆಕಾಶವನ್ನು ಮುಟ್ಟಿ ನಿಂತಿದೆ. ಆ ಮಹಾಮೇರುವಿನ ದಕ್ಷಿಣದಲ್ಲಿ ಆರ್ಯಖಂಡ. ಆ ಆರ್ಯಖಂಡದಲ್ಲಿ ಸಕಲ ಸೌಭಾಗ್ಯಗಳಿಂದ ಕೂಡಿದ ಹೇಮಾಂಗದ ವಿಷಯ ರಂಜಿಸುತ್ತಿತ್ತು. ಅದರ ನಟ್ಟನಡುವೆ ಭೂಸತಿಯ ಮುಖದಂತೆ ರಾಜಪುರಿ ಪಟ್ಟಣ ಶೋಭಿಸುತ್ತಿತ್ತು. ಸಕಲೈಶ್ವರ್ಯಗಳಿಂದ ಕೂಡಿದ ಆ ಪಟ್ಟಣವನ್ನು, ರಾಜ ಲಲಾಮ, ವಿದ್ಯಾಸೇತು, ಕಾಮರೂಪ ಮಹಾಮಹಿಮ, ಗುಣಧಾಮ, ಜಯಸಂಗ್ರಾಮನಾದ ಸತ್ಯಂಧರನೆಂಬ ರಾಜನು ಆಳುತ್ತಿದ್ದನು. ಅವನಿಗೆ ವಿಜಯಾವತಿ ಎಂಬ ರಾಣಿ ಇದ್ದಳು. ಈಕೆ ಸೊಬಗಿನಲಿ, ಪತಿವ್ರತಾ ಗುಣದಲಿ, ಸುಲಕ್ಷಣದಲಿ, ಸುಶೀಲದಲಿ, ಚತುರತೆಯಲಿ ಲೋಕದ ಸ್ತ್ರೀಯರನ್ನೆಲ್ಲ ಗೆದ್ದುದರಿಂದ ವಿಜಯಾವತಿ ಎಂಬ ಹೆಸರು ಈಕೆಗೆ ಅನ್ವರ್ಥಕವಾಗಿತ್ತು. ಇಂತಹ ಸ್ತ್ರೀರತ್ನದ ಸಂಗದಲ್ಲಿ ಸತ್ಯಂಧರನು ಅಭಿನವ ಮನೋಜನಂತೆ ಆನಂದದಲ್ಲಿ ಕಾಲ ಕಳೆಯುತ್ತಿದ್ದನು.

ಹೀಗೆ ಸತ್ಯಂಧರನು ರಾಜ್ಯಭಾರ ಮಾಡುತ್ತಿರಲು, ಅದೇ ಊರಿನಲ್ಲಿ ಕಾಷ್ಠಾಂಗಾರನೆಂಬವನು, ಹೆಸರಿಗೆ ತಕ್ಕಂತೆ, ಕಟ್ಟಿಗೆಯನ್ನು ತಂದು ಮಾರಿ ಹೊಟ್ಟೆ ಹೊರೆಯುತ್ತ ಕಾಲ ಕಳೆಯುತ್ತಿದ್ದನು. ಹೀಗಿರುವಾಗ ಒಂದು ದಿನ, ಬೇಸಗೆಯಲ್ಲಿ, ಕಾಷ್ಠಾಂಗಾರನು ಅಡವಿಯಿಂದ ಕಟ್ಟಿಗೆ ಹೊರೆಯನ್ನು ಹೊತ್ತುಕೊಂಡು ಬರುತ್ತಿರುವಾಗ, ಬಿಸಿಲಿನ ತಾಪಕ್ಕೆ ಬೇಸತ್ತು, ತನ್ನ ಕಟ್ಟಿಗೆ ಹೊರೆಯನ್ನು, ಅದೇ ಊರಿನ ವೇಶ್ಯಾರತ್ನಳಾದ ಪದ್ಮಾವತಿ ಎಂಬವಳ ಮನೆಯ ಮುಂದೆ ಇಳಿಸಿ ವಿಶ್ರಮಿಸಿಕೊಳ್ಳುತ್ತಿದ್ದನು. ಅದೇ ಸಮಯದಲ್ಲಿ ತನ್ನ ಉಪ್ಪರಿಗೆಯಲ್ಲಿ ವಿಟನೊಡನೆ ಸರಸವಾಡುತ್ತಿದ್ದ ಪದ್ಮಾವತಿ ಕಾಷ್ಠಾಂಗರನನ್ನು ನೋಡಿ, “ಈತನಂತೆ ಕಷ್ಟಪಡುವವರು ಈ ಭೂಮಿಯಲ್ಲಿ ಉಂಟೇ” ಎಂದಳು. ಅದಕ್ಕೆ ಆ ವಿಟನು “ಈತನು ಚಂದ್ರಮುಖಿಯಾದ ನಿನ್ನನ್ನು ವರಿಸಲು ಬಂದವನು” ಎಂದು ಹಾಸ್ಯದಿಂದ ಅಣಕವಾಡಿದನು. ಆದಕ್ಕೆ ಆ ಪದ್ಮಾವತಿ ಹೇಸಿಕೊಂಡು “ಥೂ ಥೂ ಇಂತಹನನ್ನು ಹೊಂದುವುದಕ್ಕಿಂತ ಉರಿಯಲ್ಲಿ ಬೀಳುವದು ಲೇಸು” ಎಂದು ಅನೇಕ ವಿಧದಿಂದ ಜರೆದು ಕಾಷ್ಠಾಂಗಾರನ ಮೇಲೆ ಉಗುಳಿ ನಕ್ಕಳು. ಅದಕ್ಕೆ, ಆ ವಿಟನೂ ಕೈಚಪ್ಪಾಳೆ ತಟ್ಟಿ ಅಪಹಾಸ್ಯ ಮಾಡಿ ನಕ್ಕನು. ಇದನ್ನು ಪ್ರತ್ಯಕ್ಷ ಕೇಳಿ, ನೋಡಿ ಕಾಷ್ಠಾಂಗಾರನು ನಾಚಿಕೆಯಿಂದ ನೊಂದು ಕೊಂಡನು. ಅಲ್ಲದೆ ಆ ವೇಶ್ಯೆಯ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಬಗೆದು, ಆಕೆಗೆ ಕೊಡುವ ಒತ್ತಿ ಹಣ, ಸಹಸ್ರ ಕಾಂಚನವನ್ನು ಗಳಿಸಿ, ಆಕೆಯನ್ನು ನಾನಾ ತೆರದಿ ಭೋಗಿಸಬೇಕೆಂದು ನಿಶ್ಚಯಿಸಿ, ಆ ರೀತಿಯಲ್ಲಿ ದುಡಿಯಲು ಪ್ರಾರಂಭಿಸಿದನು. ದಿನಕ್ಕೆ ನಾಲ್ಕಾರು ಬಾರಿ ಕಟ್ಟಿಗೆ ತಂದು ಮಾರಿ ಹಣ ಉಳಿಸಲು ಆರಂಭಿಸಿದನು. ಹೀಗಿದ್ದಾಗ, ಒಂದು ದಿನ. ಆತನು ಆ ಪಟ್ಟಣದ ಚೈತ್ಯಾಲಯದ ಬಳಿಯಲ್ಲಿದ್ದಾಗ, ಅಲ್ಲಿದ್ದ ಗುರುಗಳ ಹತ್ತಿರ, ಆ ಊರಿನ ಶ್ರಾವಕರು ಅನೇಕ ರೀತಿಯ ಅಣುವ್ರತಗಳನ್ನು ಸ್ವೀಕರಿಸುತ್ತಿರುವುದನ್ನು ಕಂಡು, ಆಶ್ಚರ್ಯಪಟ್ಟು, ತಾನೂ ಆ ಗುರುಗಳ ಹತ್ತಿರ ಹೋಗಿ, ನಮಸ್ಕಾರ ಮಾಡಿ, ತನಗೂ ಒಂದು ವ್ರತವನ್ನು ದಯಪಾಲಿಸಬೇಕೆಂದು ಬೇಡಿದನು. ಅದಕ್ಕೆ ಮುನಿಗಳು “ಈ ವ್ರತವೆಂದರೇನು? ನೀ ಎಂದರೇನು? ಸರಿ ಹೋಗದು ಎಂದು ಹೇಳಿ ನಕ್ಕು. ಆದರೂ ಆತನ ಮೇಲೆ ಕೃಪೆ ಮಾಡಿ. “ಸುತನೇ ಪೌರ್ಣಮಿಯ ದಿನ ನೀನು ಸ್ತ್ರೀ ಸಂಗವನ್ನು ಮಾಡಬೇಡ, ಇದು ನಿನಗೆ ವ್ರತ. ಇದನ್ನು ನೀನು ಉಲ್ಲಂಘಿಸದೆ ನಡೆಯಿಸು” ಎಂದರು. ಅದಕ್ಕೆ ಕಾಷ್ಠಾಂಗಾರನು “ಹಸಾದ”ವೆಂದು ಮುನಿಗಳಿಗೆ ನಮಸ್ಕರಿಸಿ ಹೊರಟು ಹೋದನು.

ಕೆಲವು ಕಾಲ ಕಳೆಯಿತು. ಕಷ್ಟದಿಂದ ದುಡಿದ ಕಾಷ್ಠಾಂಗಾರನು ಪದ್ಮಾವತಿಗೆ ಕೊಡಬೇಕಾದ “ಒತ್ತಿಹಣ” ವನ್ನು ಕೂಡಿ ಹಾಕಿದನು. ಆಗ ವಿಟನು ತಿಳಿಯಬೇಕಾದ ಸಕಲ ಕಲೆಗಳನ್ನು ಬಲ್ಲವರಿಂದ ತಿಳಿದು, ಶೃಂಗಾರ ಮಾಡಿಕೊಂಡು, ಸಹಸ್ರ ಕಾಂಚನದೊಂದಿಗೆ ಪದ್ಮಾವತಿ ಮನೆಗೆ ಬಂದನು. ಬಾಗಿಲ ಬಳಿಯಲ್ಲಿದ್ದ ಹೊನ್ನಗಂಟೆಯನ್ನು ಬಾರಿಸಿ, ಬಂದ ಚೇಟಿಯರಿಗೆ “ಒತ್ತಿ ಹಣ”ವನ್ನು ಕೊಟ್ಟನು. ಅದನ್ನು ಸ್ವೀಕರಿಸಿ ಆತನನ್ನು ಬರಹೇಳಲು, ಕಾಷ್ಠಾಂಗಾರನು ಆ ಮಂದಿರದ ಸೊಬಗನ್ನು ನೋಡುತ್ತ, ಒಳಗೆ ಹೋಗಿ ಮಣಿ ಮಂಚವನೇರಿ ಕುಳಿತನು. ಲಲನೆಯರ ಮೃದುಗೀತ, ಶುಕ, ಕೋಕಿಲ ಮರಾಳಗಳ ಆಲಾಪವನ್ನು ಆಲಿಸುತ್ತಿರುವಾಗ ಸೂರ್ಯಾಸ್ತವಾಗಿ, ಚಂದ್ರೋದಯವಾಯಿತು. ಆಗ ಅಲ್ಲಿಗೆ ಬಂದ ಒಬ್ಬ ಭಾಮೆ “ನಿಮ್ಮ ಮನೆಯಲ್ಲಿ ಈ ಮಹೋತ್ಸವವೇನು” ಎಂದು ಕೇಳಲು, “ಇಂದು ಪೌರ್ಣಮಿ, ಅದಕ್ಕೆ ಈ ಉತ್ಸವ”ವೆಂದರು. ಈ ಮಾತು ಕಾಷ್ಠಾಂಗಾರನ ಕಿವಿಗೆ ಬಿತ್ತು. ಕೂಡಲೆ ಆತನು, “ಈ ದಿನ ಪೌರ್ಣಿಮೆ. ಈ ವಿಷಯ ತಿಳಿದುದು ಒಳ್ಳೆಯದೇ ಆಯ್ತು. ಇಲ್ಲವಾದರೆ ಮುನಿಗಳಿಂದ ಸ್ವೀಕರಿಸಿದ ವ್ರತ ಭಂಗವಾಗುತ್ತಿತ್ತು. ದೈವವೇ ಕಾಪಾಡಿತೆಂದು ವಿಚಾರಿಸಿ, ಹಣವನ್ನು ಕೊಟ್ಟು ಪದ್ಮಾವತಿಯನ್ನು ಒತ್ತಿಗೆ ಪಡೆದಾಗಲೇ ಆಕೆಯನ್ನು ಹೊಂದಿದಂತಾಯ್ತು. ಇನ್ನು ಕೇವಲ ದೈಹಿಕ ಸಂಗಕ್ಕೆ ಇಳಿದು, ವ್ರತ ಹಾನಿಯನ್ನು ಮಾಡಿಕೊಂಡು ನರಕಕ್ಕೆ ಇಳಿಯುವದರಲ್ಲಿ ಅರ್ಥವೇನಿದೆ?” ಹೀಗೆ ಬಗೆದು ಮೌನದಿಂದ ಮುಸುಕು ಹಾಕಿ ಮಲಗಿಬಿಟ್ಟನು.

ಇತ್ತ ಪದ್ಮಾವತಿ ಶೃಂಗಾರ ಶೋಭಿತಳಾಗಿ ಒಂದು ಮಂಚವನ್ನೇರಿದಳು. ಆದರೆ ಕಾಷ್ಠಾಂಗಾರನಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಅದಕ್ಕೆ ಪದ್ಮಾವತಿ ಆದರೆ ಕಾಷ್ಠಾಂಗಾರನಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಅದಕ್ಕೆ ಪದ್ಮಾವತಿ ಚಕಿತಳಾಗಿ, “ಅವನ ಹಣ ಪಡೆದು ಆತನಲ್ಲಿ ನೆರೆಯದಿದ್ದರ ಹಣದ ಋಣಕ್ಕೆ ಒಳಗಾಗುತ್ತೇನೆ. ಅವನಾಗಿಯೇ ಮೌನದಿಂದಿರುವಾಗ ಆತನನ್ನು ಮುಟ್ಟಿದರೆ ಪರ ಪುರುಷನನ್ನು ಮುಟ್ಟಿದ ಪಾಪಕ್ಕೆ ಗುರಿಯಾಗುತ್ತೇನೆ. ಏನು ಮಾಡಲಿ?” ಎಂದು ಚಿಂತಿಸುತ್ತ ಹಾಗೆಯೇ ಮಲಗಿದಳು. ನಡುರಾತ್ರಿಯಲ್ಲಿ ಕಾಷ್ಠಾಂಗಾರನು ಎದ್ದು ಹೊರಟು ಹೋದನು.

ಮರುದಿನ ಬೆಳಿಗ್ಗೆ ಎದ್ದ ಪದ್ಮಾವತಿ ವಿಟನಿಲ್ಲದುದನ್ನು ಕಂಡು “ಅಯ್ಯೋ ಕೆಟ್ಟೆನು” ಎನುತ ಸತ್ಯಂಧರ ರಾಜನಲ್ಲಿ ಹೋಗಿ, “ಕಾಮ ಜಯಂತರಂತಹರೂ ಕೂಡ ನನ್ನ ಸಂಗವನ್ನು ಹೊಂದದೆ ಹೋಗಲಾರರು. ಹೀಗಿರುವಾಗ ಒಬ್ಬ ಸಾಮಾನ್ಯನು ಬಂದು ಹಾಗೇ ಹೋದುದು ಆಶ್ಚರ್ಯ” ಎಂದು ದೂರಿತ್ತಳು. ಆ ವಿಶೇಷ, ವಿಚಿತ್ರ ವ್ಯಕ್ತಿಯನ್ನು ಹುಡುಕಲು  ರಾಜನು ಪಟ್ಟಣದ ಎಲ್ಲ ಹೆಬ್ಬಾಗಿಲುಗಳನ್ನು ಮುಚ್ಚಿಸಿ, ಒಂದನ್ನೇ ತೆರೆದು, ಊರೊಳಗಿನ ಎಲ್ಲ ಪುರಂಪರಂ ಆ ದ್ವಾರದಿಂದ ಹೊರಗೆ ಹೋಗಬೇಕೆಂದೂ, ಯಾರಾದರೂ ಪುರುಷರು ಉಳಿದರೆ ದಂಡಿಸುವೆನೆಂದೂ ಡಂಗುರ ಸಾರಿಸಿದನು ಮತ್ತು ಪದ್ಮಾವತಿಯನ್ನು ಮರೆಯಲ್ಲಿ ಕುಳ್ಳಿರಿಸಿ, ಆಕೆಗೆ ಹಿಂದಿನ ರಾತ್ರಿ ಬಂದ ವಿಟನನ್ನು ಗುರುತಿಸಲು ಹೇಳಿದನು. ಪುರುಷರೆಲ್ಲರೂ ಹೊರಗೆ ಹೋಗುತ್ತಿರುವಾಗ ಕಾಷ್ಠಾಂಗಾರನೂ, ತನ್ನ ಹಿಂದಿನ ವೇಷದಲ್ಲಿ ಅಂದರೆ ಕಂಬಳಿ, ಕೊಡಲಿ, ಹಗ್ಗಗಳನ್ನು ಹೊತ್ತುಕೊಂಡು ಹೋಗುತ್ತಿರುವಾಗ – “ತುಂಟ ಸಿಕ್ಕಿದ” ನೆಂದು ಹಿಡಿದು, ಅವನನ್ನು ಅರಸನಲ್ಲಿಗೆ ತಂದಳು ವೇಶ್ಯೆ  – ಪದ್ಮಾವತಿ! ಅವನನ್ನು ನೋಡಿ ಬೆರಗಾದ ಅರಸನು, ಅಂತಹನು ಬಂದಿರಲು ಸಾಧ್ಯವೇ ಎಂದು ಪ್ರಶ್ನಿಸಲು, ಕಾಷ್ಠಾಂಗಾರನೂ ತಾನೂ ಅವಳಲ್ಲಿಗೆ ಹೋದವನಲ್ಲವೆಂದು ಜಾರಿಕೊಳ್ಳಲು ಪ್ರಯತ್ನಿಸಿದನು. ಆಗ ಪದ್ಮಾವತಿ “ರಾತ್ರಿ ಈತನು ಬಂದವನಲ್ಲದಿದ್ದರೆ ನಾನು (ನಿನ್ನ) ಸತಿಯರಿಗೆ ನೀರು ಹೊರುತ್ತೇನೆ” ಎಂದು ಹೇಳಿದಳು. ಆಗ ರಾಜನು ಕಾಷ್ಠಾಂಗಾರನನ್ನು ಮುಂದಕ್ಕೆ ಕರೆದು ನಿಜ ಸಂಗತಿಯನ್ನು, ಯಾವ ಭಯವಿಲ್ಲದೆಯೇ ಹೇಳಬೇಕೆಂದು ಕೇಳಿದನು. ಅದಕ್ಕೆ ಕಾಷ್ಠಾಂಗಾರನು ತಾನು ಉಗುಳಿಸಿಕೊಂಡುದು ಮೊದಲಾಗಿ, ಅವಳನ್ನು ಬಿಟ್ಟು ಹೋಗುವ ತನಕ ನಡೆದುದೆಲ್ಲವನ್ನೂ ವಿವರಿಸಿದನು. ಕಾಷ್ಠಾಂಗಾರನ ಕಥೆಯನ್ನು ಕೇಳಿದ ರಾಜನು “ಆತನ ಛಲ, ಉಪಾಯ, ಅಂತ ರಂಗದ ನೆನಹು ಹಾಗೂ ಗುರುಭಾವನೆಗೆ ಬೆರಗಾದನು.” ಆತನನ್ನು ಹಳಿದುದು ನಿಜವೆಂದು ಪದ್ಮಾವತಿಯು ರಾಜನ ಸಮ್ಮುಖದಲ್ಲಿ ಒಪ್ಪಿಕೊಂಡ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು, ಕಾಷ್ಠಾಂಗಾರನು ವೇಶ್ಯೆಯರನ್ನೂ, ವೇಶ್ಯಾ ಸಂಗವನ್ನೂ ಚನ್ನಾಗಿ ಹಳಿದನು. ಇದನ್ನು ಕೇಳಿ, ಮೊದಲೇ ಆತನ ಗುಣಗಳಿಗೆ ಮಾರು ಹೋದ ಸತ್ಯಂಧರನು, ಏನನ್ನೂ ವಿಚಾರಿಸದೆ, ಕಾಷ್ಠಾಂಗಾರನಿಗೆ ಮಂತ್ರಿ ಪದವಿಯನ್ನು ಕೊಡಲು ನಿರ್ಧರಿಸಿದನು. ಅದನ್ನು ತಡೆಯಲು ಉಳಿದ ಮಂತ್ರಿಗಳು ಪ್ರಯತ್ನಿಸಿದರೂ, ಸತ್ಯಂಧರನು ಕಾಷ್ಠಾಂಗಾರನನ್ನು, ಅವನ ಕುಲ, ಗೋತ್ರ, ಯೋಗ್ಯತೆ ಮೊದಲಾದವುಗಳನ್ನು ನೋಡದೆ ಮಂತ್ರಿಯನ್ನಾಗಿ ಮಾಡಿಯೇಬಿಟ್ಟನು. ನಿರಾಶರಾದ ಮಂತ್ರಿಗಳು ತಮ್ಮ ತಮ್ಮ ಮನೆಗಳಿಗೆ ಹೋದರು. ಕರ್ಮದ ಫಲವನ್ನು ಯಾರೂ ತಪ್ಪಿಸಲಾರರಲ್ಲವೇ?

ಕಾಷ್ಠಾಂಗಾರನಿಗೆ ಮಂತ್ರಿ ಪದವಿಯನ್ನು ಒಪ್ಪಿಸಿದ ಸತ್ಯಂಧರನು ಭೋಗಾಸಕ್ತನಾಗಿ ಅರಮನೆಯನ್ನೇ ಆಶ್ರಯಿಸಿದನು  – ಸಕಲ ರಾಜ್ಯದ ಭಾರವನ್ನು ಮಂತ್ರಿ ಕಾಷ್ಠಾಂಗಾರನ ಮೇಲೆ ವಹಿಸಿ! ಹೀಗಿರುವಾಗ ಒಂದು ದಿನ ರಾತ್ರಿ ರಾಣಿ ವಿಜಯಾವತಿಯು, ಒಂದು ಅಶೋಕ ವೃಕ್ಷವು ಉರುಳಿ ಬಿದ್ದಂತೆಯೂ ಮತ್ತು ಅದು ಕೂಡಲೇ ಚಿಗುರಿ ಅದಕ್ಕೆ ಎಂಟು ಹೂವಿನ ಮಾಲೆಗಳು ಎದ್ದಂತೆಯೂ, ಒಂದು ಸ್ವಪ್ನವನ್ನು ಕಂಡಳು. ಅದರ ಫಲವೇನೆಂದು ರಾಜನನ್ನು ಕೇಳಿದಾಗ, ಸತ್ಯಂಧರನು, “ಅಶೋಕ ಚಿಗುರುವುದೆಂದರೆ ನಿನಗೊಬ್ಬ ಸುಪುತ್ರನಾಗುವನೆಂದೂ, ಎಂಟು ಮಲೆಗಳು ಹೊಂದುವುದೆಂದರೆ ಅವನು ಎಂಟು ಲಗ್ನ ಮಾಡಿಕೊಳ್ಳುವನೆಂದೂ ಸ್ವಪ್ನದ ಅರ್ಥವೆಂದು” ಹೇಳಿದನು. ಅಶೋಕ ವೃಕ್ಷ ಉರುಳಿ ಬೀಳುವುದೆಂದರೆ ಪ್ರತ್ಯಕ್ಷ ತನ್ನ ಮರಣವೇ ಎಂದು ಸತ್ಯಂಧರನು ಹೇಳದಿದ್ದರೂ, ಅದನ್ನು ಗ್ರಹಿಸಿದ ರಾಣಿ ಕೂಡಲೇ ಮೂರ್ಛೆ ಹೋದಳು. ರಾಣಿಯ ಮೂರ್ಛೆಯನ್ನು ಕಂಡು ರಾಜನೂ ಮೂರ್ಛಿತನಾದನು. ಸ್ವಲ್ಪ ಕಾಲಾವಕಾಶದ ನಂತರ ಎಚ್ಚತ್ತ ರಾಜನು ತನ್ನಷ್ಟಕ್ಕೆ ತಾನೇ ಧೈರ್ಯಹೊಂದಿ, ಪರಮ ಜಿನನನ್ನು ಸ್ಮರಿಸಿ, ಗಂಧೋದಕದ ಸಹಾಯದಿಂದ ರಾಣಿಯನ್ನು ಎಚ್ಚರಿಸಿ, ಅನೇಕ ರೀತಿಯಿಂದ ಅವಳಿಗೆ ಸಮಾಧಾನ ಹೇಳಿ, ಸಂತಸದಿಂದ ಇರಲು ಕೇಳಿಕೊಂಡನು. ಕೆಲ ಕಾಲ ಉರುಳಿತು. ಸ್ವಪ್ನದ ಫಲವು ಕಣ್ಣಿಗೆ ಕಾಣುವಂತೆ ರಾಣಿ ಗರ್ಭವತಿಯಾದಳು. ಅದನ್ನು ನೋಡಿದ ರಾಜನು ತನ್ನ ಮರಣವು ಸಮೀಪಿಸಿತೆಂದು ತಿಳಿದು, ಹುಟ್ಟುವ ಮಗುವು ಸುರಕ್ಷಿತವಾಗಿರಲೆಂದು ಬಗೆದು ಒಂದು “ಕೇಕಿಯಂತ್ರ”ವನ್ನು ಮಾಡಿಸಿದನು. ಅದರಲ್ಲಿ ಕುಳಿತರೆ ಅದು ಆಕಾಶಕ್ಕೆ ಹಾರಿ, ಊರ ಹೊರಗಿನ ಉದ್ಯಾನದಲ್ಲಿಳಿದು, ಪುನಃ ಹಿಂದಿರುಗಿ ಬರುತ್ತಿತ್ತು. ಇಂತಹ ಈ ಮಯೂರ ಯಂತ್ರದಲ್ಲಿ ಕುಳಿತು ಹಾರಾಡುತ್ತ ಜಲಕೇಳಿ, ವನಕೇಳಿಗಳಲ್ಲಿ ಕಾಲಕಳೆಯುತ್ತ, ರಾಜನು ರಾಣಿಯನ್ನು ಸಂತೋಷದಲ್ಲಿಟ್ಟುಕೊಂಡು ತಾನೂ ಉತ್ಸಾಹದಲ್ಲಿಯೇ ಇದ್ದನು.

ಇತ್ತ ರಾಜ್ಯಭಾರವನ್ನು ವಹಿಸಿಕೊಂಡ ಕಾಷ್ಠಾಂಗಾರನು, ಉಪಕಾರವನ್ನು ಮಾಡಿದ ರಾಜನಿಗೆ ಅಪಕಾರವನ್ನೇ ಬಗೆಯಲುದ್ಯುಕ್ತನಾದನು. ಅವನು ಸುತ್ತು ಮುತ್ತಲಿನ ಮಾಂಡಲಿಕ ಸಾಮಂತರಾಜರನ್ನು ಉಪಾಯದಿಂದ ತನ್ನ ವಶಮಾಡಿಕೊಂಡನು. ಸರ್ವಶಕ್ತ ಸ್ವತಂತ್ರನಾದ ತಾನು ಸತ್ಯಂಧರನ ಆಧೀನಕ್ಕೊಳಪಟ್ಟರು ವದು ಸರಿಯಲ್ಲವೆಂದೂ, ರಾಜನನ್ನು ಕೊಂದು ತಾನೇ ರಾಜನಾಗಬೇಕೆಂದೂ, ಬಗೆದ ಕಾಷ್ಠಾಂಗಾರನು ಉಪಾಯದಿಂದ ಈ ಕಾರ್ಯ ಸಾಧಿಸಬೇಕೆಂದು ಮಂತ್ರಿ ಸಾಮಂತರ ಸಭೆ ಕರೆದು, ‘ಒಂದು ರಾಜದ್ರೋಹ ದೇವತೆ ಪ್ರತಿನಿತ್ಯವೂ ರಾತ್ರಿ ನನ್ನ ಕನಸಿನಲ್ಲಿ ಬಂದು ಸತ್ಯಂಧರ ಮಹಾರಾಜನನ್ನು ವಧಿಸಬೇಕೆಮದು ನನ್ನ ಎದೆ ಮೆಟ್ಟಿ ಹೇಳುತ್ತಲಿದೆ. ರಾಜದ್ರೋಹಕ್ಕೆ ಹೆದರಿ ಸುಮ್ಮನೆ ಕಾಲ ತಳ್ಳುತ್ತ ಬಂದು ನನ್ನನ್ನು ನಿನ್ನೆ ರಾತ್ರಿ ಆ ದೇವತೆ ಕೂಡಲೆ ರಾಜನನ್ನು ವಧಿಸದಿದ್ದರೆ ನನ್ನ ವಂಶವನ್ನೇ ನಿರ್ಮೂಲನ ಮಾಡುವುದಾಗಿ ಹೇಳಿತು. ಇದಕ್ಕೇನು ಉಪಾಯ?” ಎಂದ ಸಭೆಗೆ ಕೇಳಿಕೊಂಡನು. ಇಡೀ ಸಭೆಯೇ ಕಣ್ಣೀರು ಕರೆಯಿತು. ಆಗ ಧರ್ಮದತ್ತನೆಂಬ ಆಮಾತ್ಯನು, ಕಾಷ್ಠಾಂಗಾರನ ಕಪಟವನ್ನು ತಿಳಿದು, ಸಿಟ್ಟಿನಿಂದ, ರಾಜ ಕಾರ್ಯಕ್ಕಾಗಿ ಪ್ರಾಣಹೋದರೂ ಚಿಂತೆಯಿಲ್ಲವೆಂದು ಅಂತಹ ಪಾಪದ ಕಾರ್ಯವನ್ನು ಮಾಡಬಾರದೆಂದೂ, ಬೇಕಾದರೆ ಆ ದೇವತೆಯೇ ಬಂದು ರಾಜನನ್ನು ವಧಿಸಲೆಂದೂ ಹೇಳಿದನು. ಆತನ ನೀತಿಯ ನುಡಿಗಳು ಕಾಷ್ಠಾಂಗಾರನಿಗೆ ಸೇರಲಿಲ್ಲ. ಆ ಕೂಡಲೇ ಅದೇ ಸಭೆಯಲ್ಲಿದ್ದ ಮದನನೆಂಬ ಪಾಪಿಯು ಕಾಷ್ಠಾಂಗಾರನ ಕಾರ್ಯವನ್ನು ಮೆಚ್ಚಿ ಮಾತನಾಡಿ, ಕೂಡಲೇ ಸತ್ಯಂಧರನ ಕೊಲೆ ಮಾಡುವುದೇ ವಿಹಿತವೆಮದು ನುಡಿದು, ತಾನೇ ಆ ಕಾರ್ಯ ಮಾಡಲು ಸಿದ್ಧನೆಂದೂ ಹೇಳಿದನು. ಅದನ್ನು ಮೆಚ್ಚಿದ ಕಾಷ್ಠಾಂಗಾರನು ಕೂಡಲೇ ತನ್ನ ಚತುರಂಗ ಸೈನ್ಯ ಸಮೇತ ಮದನನು ಹೋಗಿ ಸತ್ಯಂಧರನನ್ನು ಕೊಂದು ಬರಬೇಕೆಂದು ಕಳುಹಿದನು. ಮದನನ ಸೈನ್ಯ ಅರಮನೆಯನ್ನು ಮುತ್ತಿತ್ತು. ಸೇವಕರಿಂದ ವಿಷಯವನ್ನು ತಿಳಿದ ಸತ್ಯಂಧರನು, ಮಂತ್ರಿಗಳ ಮಾತನ್ನು ಲಕ್ಷಕ್ಕೆ ತಾರದೆ ಕಾಷ್ಠಾಂಗಾರನಂತಹ ದುರ್ಜನನನ್ನು ಮಂತ್ರಿಯನ್ನು ಮಾಡಿದುದು ಅನುಚಿತ ಕಾರ್ಯವಾಯಿತೆಂದು ಚಿಂತಿಸಿದನು. ಆದರೂ ಚಿಂತಿಸುತ್ತ ಸಮಯ ಕಳೆಯುವ ಕಾಲ ಅದಲ್ಲವೆಂದು ತಿಳಿದು, ಕೂಡಲೇ ಕಾಷ್ಠಾಂಗಾರನನ್ನು ಸದೆಬಡೆದು ಬರುವೆನೆಂದು ಕೋಪಾಟೋಪದಿಂದ ಯುದ್ಧಕ್ಕೆ ಅಣಿಯಾದನು. ಅದನ್ನು ಕಂಡ ವಿಜಯಾವತಿ ಮೂರ್ಛಿತಳಾದಳು. ಶೈತ್ಯೋಪಚಾರದಿಂದ ಆಕೆಯನ್ನು ಎಚ್ಚರಿಸಿ ಇನ್ನೂ ಪೂರ್ಣಪ್ರಜ್ಞೆ ಬರದ ಅವಳನ್ನು ಕೇಕಿಯಂತ್ರದಲ್ಲಿ ಮಲಗಿಸಿ, ತನ್ನ ವಂಶ ವೃಕ್ಷವು ಉಳಿಯಲೆಂದು ಹಾರೈಸಿ, ಆ ಯಂತ್ರದ ಕೀಲುಗಳನ್ನು ಒತ್ತಿದನು. ಯಂತ್ರವು ವಾಯುಮಾರ್ಗದಲ್ಲಿ ಹೋದುದೇ ತಡ, ಸತ್ಯಂಧರನು, ವಜ್ರಾಯುಧವನ್ನು ಹಿಡಿದ ಇಂದ್ರನಂತೆ, ಸಿಟ್ಟಿಗೆದ್ದ ಕಾಲರುದ್ರನಂತೆ ವೈರಿಗಳ ಸೈನ್ಯವನ್ನು ತರಿದೊಗೆಯಲಾರಂಭಿಸಿದನು. ವೈರಿ ಸೈನ್ಯವು ನುಚ್ಚುನುರಿ ಆಗುತ್ತಿದ್ದರೂ, ಸತ್ಯಂಧರನಿಗೆ ಸಮಾಧಾನವಾಗಲಿಲ್ಲ. ತನ್ನ ಪತ್ನಿಗೆ ಬಿದ್ದ ಸ್ವಪ್ನವು ನೆನಪಾಗಿ, ತಾನು ಸಾಯುವುದು ಖಂಡಿತ, ಕಾರಣ ನಶ್ವರವಾದ ಈ ದೇಹ, ರಾಜ್ಯ, ಐಶ್ವರ್ಯ ಇವುಗಳ ಮೇಲಿನ ಆಶೆಯಿಂದ ನರಹತ್ಯೆ ಮಾಡಿ ನರಕಕ್ಕೆ ಇಳಿಯುವುದು ಒಳಿತಲ್ಲವೆಂದು ಭಾವಿಸಿ, ಸಂಸಾರಕ್ಕೆ ಹೇಸಿ, ಕರ್ಮದ ಕೈವಾಡಕ್ಕೆ ಹೆದರಿ, ಶಸ್ತ್ರ ಸನ್ಯಾಸವನ್ನು ಮಾಡಿದನು. ಶಸ್ತ್ರ ಸನ್ಯಾಸ ಮಾಡಿ,

“ಉರುತರದಿ ಪದ್ಮಾಸವನನು
ಕರಿಸಿ ಬಹಿರಿಂದ್ರಿಯದಳವನಪ
ಹರಿಸಿ ರವಿಮಂಡಲಕೆ ದೃಷ್ಟಿಯ ಹರಿಸಿ ಹೃದಯದಲಿ
ನಿರುಪಮಾತ್ಮನನಿರಿಸಿ ಕರ್ಮವ
ನೊಱಸಿ ಸಂಸಾರಾಂಬುಧಿಯನು
ನುತ್ತರಿಸಿ ಸತ್ಯಂಧರನು ಪಡೆದನು ದಿವ್ಯಸಂಪದವ”[10]

ನಿಂತ ಕ್ಷಣದಲ್ಲೇ ಕರ್ಮವನು ಒರಸಿ ಮೋಕ್ಷಕ್ಕೆ ಹೋದ ಸತ್ಯಂಧರನ ದೇಹ ಮಾತ್ರ ರಣರಂಗದಲ್ಲಿರಲು, ರಾಜನು ಸತ್ತನೆಂದು ಸೈನಿಕರು ಬೊಬ್ಬಿರಿಯುತ್ತ ಅದರೆಡೆಗೆ ಬಂದರು. ಆಗ ಗಾಳಿಗೆ ಆ ಮೃತ ದೇಹವು ಅಲ್ಲಾಡಲು, ಜೀವ ಮರುಕಳಿಸಿತೆಂದು ಆ ಶವವನ್ನೇ ಬಾಣದಿಂದ ಹೊಡೆದು ಕೆಡವಿ ತಮ್ಮ ಕಾರ್ಯ ಸಾಧಿಸಿತೆಂದರು. ಅರಸು ಸತ್ಯಂಧರನು ಸತ್ತುದಕ್ಕೆ ಪುರ ನಿವಾಸಿಗಳೆಲ್ಲರೂ ದುಃಖ ಸಾಗರದಲ್ಲಿ ಮುಳುಗಿದರು. ಮಂತ್ರಿಗಳು ಹಾವಿಗೆ ಹಾಲೆರೆದಂತೆ, ದುಷ್ಟ ಕಾಷ್ಠಾಂಗಾರಗೆ ರಾಜ್ಯವನ್ನೊಪ್ಪಿಸಿ ರಾಜನು ಹಾಳಾದನೆಂದು ಮರ ಮರ ಮರುಗಿದರು.

ಇತ್ತ ಸತ್ಯಂಧರನು ಬಿಟ್ಟ ಮಯೂರ ಯಂತ್ರವು ಹಾರಿ ಹೋಗಿ ಆ ಊರಿನ ಸ್ಮಶಾನದಲ್ಲಿ ಇಳಿಯಿತು. ಅಲ್ಲಿ ವಿಜಯಾವತಿ ಮೆಲ್ಲನೆ ಕಣ್ತೆರೆದು, ಚೇತರಿಸಿಕೊಂಡು, ಹತ್ತೂ ದಿಕ್ಕುಗಳನ್ನು ನೋಡುತ್ತ ರಾಜನನ್ನು ಕಾಣದೆ ಮರುಗಿದಳು. ಅಲ್ಲಿಂದೆದ್ದು ಕಲ್ಲು ಮುಳ್ಳೆನ್ನದೆ, ಕಾಡು ಬೀಡೆನ್ನದೆ ಸುತ್ತಲೂ ರಾಜನನ್ನು ಹುಡುಕಿದಳು. ಕೊನೆಗೆ ಕಂಗೆಟ್ಟು ಬಸವಳಿದು, ದುಷ್ಟ ಕಾಷ್ಠಾಂಗಾರನಿಂದ ಹತನಾದನೋ ಏನೆಂದು ಪುನಃ ಆ ಸುಡುಗಾಡಿಗೇ ಬಂದಳು. ಆಗ ಅವಳಿಗೆ ನವಮಾಸ ಪೂರ್ಣವಾಗಿ “ವರ ಶುಭ ಲಗ್ನದಲಿ, ಸೂರ್ಯನಿಗೆಣೆಯಾದ ಸುಕುಮಾರನ”ನ್ನು ಹಡೆದಳು. ಅರಮನೆಯಲ್ಲಿ ಹುಟ್ಟಬೇಕಾದ ಸುಕುಮಾರನು ಸುಡುಗಾಡಿನಲ್ಲಿ ಹುಟ್ಟಿದುದಕ್ಕೆ ರಾಣಿಯು ಹಳಹಳಿಸುತ್ತಿರುವಾಗ, ಆ ಕುಮಾರನ ಪುಣ್ಯ ದೇವತೆಯೇ ಧಾತ್ರಿವೇಷದಿಂದ ಬಂದು ಕಾಣಿಸಿಕೊಂಡಳು. ಆಗ ರಾಣಿ “ಹರಣ ಬಂದಂತಿಲ್ಲಿಗೆಂತಲೆ ತರುಣಿ ಬಂದೆಯೆನುತ್ತ “ಶೋಕಿಸುತಿರಲು, ಆ ದೇವತೆ ದಾದಿಯಂತಲೇ ಮಾತನಾಡಿ, “ನೀನು ಇನ್ನು ಅಳಬೇಡ, ಈ ಬಾಲಕಗೆ ಶುಭ ಲಕ್ಷಣದ ರೇಖೆಗಳಿವೆ, ಇವನು ತನ್ನ ಎಲ್ಲ ಶತ್ರುಗಳನ್ನು ಸೀಳಿ, ತನ್ನ ರಾಜ್ಯವನ್ನು ಪಾಲಿಸುವನು, ಇದು ತಪ್ಪದು. ಅಲ್ಲದೆ ಇಲ್ಲಿಗೆ ಈಗೊಬ್ಬ ಮಹಾತ್ಮನು ಬರುತ್ತಾನೆ. ಅವನು ಈ ನಿನ್ನ ಮಗನನ್ನು ತಕ್ಕೊಂಡು ಹೋಗುತ್ತಾನೆ. ಅವನಲ್ಲಿ ಬೆಳೆದೇ ಈ ಕುಮಾರನು ತನ್ನ ರಾಜ್ಯವನ್ನು ಪಡೆಯುತ್ತಾನೆ. ಅದಕ್ಕೆ ನೀನು ಆತಂಕವನ್ನೊಡ್ಡಬೇಡ” ಎಂದು ಹೇಳಿದಳು. “ಕಂದಾ ನಿನ್ನನ್ನು ಸಲುಹಲಾರದೆ ಪರರಿಗೊಪ್ಪಿಸುವಂತಾಯಿತೆ” ಎಂದು ವಿಜಯಾವತಿ ದುಃಖಿಸುತ್ತ. ಹಣೆ ಹಣೆ ಬಡೆದುಕೊಂಡು, “ತನ್ನಯ ಬೆರಲ ಮಣಿ ಮುದ್ರಿಕೆಯ ತೆಗೆದು ಸುತನಿಗಿಟ್ಟು” ಮರೆಯಾದಳು.

ಅದೇ ಊರಿನಲ್ಲಿ ಗಂಧೋತ್ಕಟನೆಂಬ ರಾಜಶ್ರೇಷ್ಠಿ ಇದ್ದನು. ಅವನಿಗೆ ಹುಟ್ಟಿದ ಕೂಡಲೇ ಮಕ್ಕಳು ಸಾಯುತ್ತಿದ್ದವು. ಅದು ಹಾಗೇಕೆಂದು ಅವನು “ಸುವ್ರತ” ರೆಂಬ ಮುನಿಗಳನ್ನು ಕೇಳಿದಾಗ ಅದು ಕರ್ಮವಶ” ವೆಂದು ಅವರು ಹೇಳಿ, “ಆದರೂ ಹೆದರಬೇಡ, ಈಗ ಹುಟ್ಟಿ ಸತ್ತ ಈ ಮಗುವನ್ನು ಸುಡುಗಾಡಿನಲ್ಲಿಟ್ಟು, ಆ ಸ್ಥಳದಲ್ಲಿರುವ ಮಗುವನ್ನು ಎತ್ತಿಕೊಂಡು ಬಾ” ಎಂದು ಹೇಳಿದ್ದರು. ಅದರಂತೆ ಆ ಶ್ರೇಷ್ಠಿಯು ಆ ದಿನ ತನ್ನ ಸತ್ತ ಶಿಶುವನ್ನು ಹೊತ್ತು ಸ್ಮಶಾನಕ್ಕೆ ತಂದು ಅದನ್ನಲ್ಲಿಟ್ಟು, ಮುನಿ ಹೇಳಿದಂತೆ ನೋಡಲು, “ನಿರ್ಧನ ಮಣಿಯ ಪಡೆದಂತೆ, ಪರುಷವೋ ಕೌಸ್ತುಭವೋ” ಎನ್ನುವಂತಿದ್ದ ಶಿಶುವನ್ನು ಕಂಡು, ಸಂತಸದಿಂದ ಅದನ್ನೆತ್ತಿಕೊಂಡನು. ಆಗ ಶಿಶು ಸೀನಲು, “ಮಹಾಸ್ಥಿರ ಜೀವಿಯಾಗೆಂದು” ತಾಯಿ ಹರಿಸಿದಳು. ಯಾರೆಂದು ಅತ್ತಿತ್ತ ನೋಡಿದ ವಣಿಗ್ವರನು, ಸತ್ತ ಕೂಡಿಗೆ ಬದಲಾಗಿ ಜೀವಂತ ದೊರೆತ ಈ ಕೂಸಿಗೆ “ಜೀವಂಧರ” ನೆಂದು ಹೆಸರಿಟ್ಟು ಮನೆಗೆ ಬಂದು, ತನ್ನ ಹೆಂಡತಿಗೆ, “ಹಿಂದಿನ ಶಿಶುಗಳು ಜೀವದಿಂದಿದ್ದರೂ ಕಾಡಲ್ಲಿ ಬಿಸುಟು ಬಿಟ್ಟೆನೆಂದು ಕಾಣುತ್ತದೆ.  ಇವತ್ತಿನ ಈ ಸತ್ತ ಶಿಶುವನ್ನು ಸ್ಮಶಾನದಲ್ಲಿಟ್ಟಾಗ ಅದಕ್ಕೆ ಜೀವವಿದ್ದುದು ಕಂಡು ಬಂದು ಅದನ್ನು ಮರಳಿ ತಂದಿದ್ದೇನೆ, ತೆಗೆದುಕೋ” ಎಂದನು. ಗಂಡನ ಈ ನುಡಿ ಕೇಳಿ “ತೊಲಗಿದ ಹರಣ ಬಂದಂದದಲಿ” ಹರುಷದಿಂದ ಮಗುವನ್ನಪ್ಪಿಕೊಂಡು ಆ ಕ್ಷಣದಲ್ಲಿಯೇ ಅರುಹನನ್ನು ನೆನೆದು ನಾನಾ ರೀತಿ ನಿವಾಳಿ ತೆಗೆದು ಶಾಂತಿ ಮಾಡಿದಳು.

ಇತ್ತ ಧಾತ್ರಿ ವೇಷದಲ್ಲಿದ್ದ ಪುಣ್ಯದೇವತೆ, ವಿಜಯಾವತಿಯನ್ನು ಮುನಿಗಳ ತಪೋವನಕ್ಕೆ ಕರೆದೊಯ್ದು ಬಿಟ್ಟು ಮಾಯವಾಯಿತು. ಬಿಸಿಲು, ಗಾಳಿ ಎಂದರೇನು ಕಂಡರಿಯದ ರಾಣಿಯು ತಪೋವನದಲ್ಲಿ ಜೀವನ ಕಳೆಯುವಂತಾದುದನ್ನು ಕಂಡು “ವಿಧಿಯನು ಕಳಿವರಾರೆಂದಱಲಿತಬಲೆಯ ನೋಡಿ ಸುರನಿಕರ.”

ಇತ್ತ ನಗರದಲ್ಲಿ ಗಂಧೋತ್ಕಟನು ಪುತ್ರೋತ್ಸವವನ್ನು ಮಾಡಿದನು. ಕಾಷ್ಠಾಂಗಾರನು ರಾಜ್ಯಾಭಿಷೇಕವನ್ನು ನೆರವೇರಿಸಿಕೊಂಡು ತನ್ನ ಬಗೆಗೆ ಪುರಜನ ಪರಿಜನರ ಅಭಿಪ್ರಾಯವೇನಿದೆಯೆಂದು ತಿಳಿದುಕೊಂಡು ಬರಲು ದೂತರನ್ನು ಅಟ್ಟಿದನು. ಅವರು ಊರೆಲ್ಲ ಸುತ್ತಾಡಿ ಬಂದು ಗಂಧೋತ್ಕಟನ ಮನೆಯಲ್ಲಿ ನಡೆದ ಉತ್ಸವವನ್ನು ಬಿಟ್ಟರೆ, ಬೇರೆಲ್ಲ ಕಡೆಗೂ ಸತ್ಯಂಧರ ಮಹಾರಾಜನ ಬಗೆಗೆ ಚಿಂತಿಸುವ ಜನರೇ ಇದ್ದಾರೆಂದು ತಿಳಿಸಿದರು. ಕೂಡಲೇ ಕಾಷ್ಠಾಂಗಾರನು ಗಂಧೋತ್ಕಟವನ್ನು ಕರೆದು, ಅವನು ಜರುಗಿಸಿದ ಉತ್ಸವಕ್ಕೆ ಕಾರಣವನ್ನು ಕೇಳಿದನು. ಅದಕ್ಕೆ ಆ ವೈಶ್ಯಶ್ರೇಷ್ಠನು “ತಾವು ಅರಸರಾಗಿ ಪಟ್ಟವನ್ನು ಕಟ್ಟಿಕೊಂಡುದಕ್ಕೆ ಉತ್ಸವವನ್ನು ಮಾಡಿದೆನೆಂದು” ಹೇಳಿದನು. ಅದಕ್ಕೆ ಸಂತೋಷಪಟ್ಟ ಆ ದುಷ್ಟಕಾಷ್ಠಾಂಗಾರನು, ಅವನಿಗೆ ಧನವನ್ನು ಕೊಟ್ಟು, “ಬೇಕಾದುದನ್ನು ಬೇಡಿಕೋ” ಎಂದನು. ಅದಕ್ಕೆ ಗಂಧೋತ್ಕಟನು “ಈ ದಿನ ಈ ಊರಲ್ಲಿ ಜನಿಸಿದ ಎಲ್ಲ ಮಕ್ಕಳೂ ನನ್ನ ಮಗನೊಡನೆ ನನ್ನ ಮನೆಯಲ್ಲಿ ಬೆಳೆಯಲಿ” ಎಂದು ಬೇಡಿಕೊಂಡನು. ಅರಸನ ಆಜ್ಞೆಯಂತೆ, ಆ ದಿನ, ಆ ಊರಲ್ಲಿ ಜನಿಸಿದ ಐದುನೂರು ಮಕ್ಕಳು ಗಂಧೋತ್ಕಟನ ಮನೆ ಸೇರಿ, ಜೀವಂಧರ ಕುಮಾರನ ಸಂಗಡ ಬೆಳೆಯತೊಡಗಿದವು.

ಜಾತ ಕರ್ಮಾದಿ ನಾಮಕರಣ ವಿಧಿಗಳನ್ನು ಹೊಂದಿದ ಆ ಐದುನೂರು ಜನ ಮಕ್ಕಳೊಂದಿಗೆ ಜೀವಂಧರನು, ‘ಹರಿಣ ಪಕ್ಷದ ಚಂದ್ರನಂತೆ”, ಬೆಳೆಯುತ್ತ

ನಡೆಗಲಿತ ಸ್ಯಾದ್ವಾದ ಮಾರ್ಗದಿ
ನುಡಿಗಲಿತ ಜಿನಧರ್ಮ ಶಾಸ್ತ್ರದಿ
ಯುಡಲು ತೊಡಲುಣಕಲಿತ ಸರ್ವೇಶ್ವರನ ಬೇಳುಡೆಯ
ಇಡಿದ ಭಿತ್ತಿಯ ಚಿತ್ರಗಳ ಮಿಗೆ
ಹಿಡಿದುಕೊಡು ತನಗೆಂದು ದಾದಿಯ
ಬಿಡದೆ ಕಾಡುತಲಾ ಕುಮಾರಕ ಬಳೆದನೊಲವಿನಲಿ![11]

ಹೀಗೆ ಬೆಳೆದ ಜೀವಂಧರನಿಗೂ ಹಾಗೂ ಉಳಿದ ಐದು ನೂರು ಜನ ಮಕ್ಕಳಿಗೆ ಉಪನಯನ ಮಾಡಿ ‘ನಂದಿ ಮುನಿ’ಯೆಂಬ ಮುನಿಯ ಬಳಿ ವಿದ್ಯೆ ಕಲಿಸಲಾಯಿತು. ಆ ಮುನಿ ಅವರೆಲ್ಲರನ್ನು ಅರವತ್ತು ನಾಲ್ಕು ವಿದ್ಯೆಗಳಲ್ಲಿ ಪ್ರವೀಣರನ್ನಾಗಿ ಮಾಡಿದನು. ಒಂದು ದಿನ ಏಕಾಂತದಲಿ ನಂದಿ ಮುನಿ ಜೀವಂಧರನಿಗೆ ತನ್ನ ಭಸ್ಕಮರ ರೋಗದ ಸಂಗತಿಯನ್ನು ತಿಳಿಸಿ, ಆ ರೋಗವು ಜೀವಂಧರನ ಕೈತುತ್ತು ಅನ್ನದಿಂದ ನಿವಾರಣೆಯಾದ ವಿಷಯವನ್ನು ಅರುಹಿ, ಆತನಿಗೆ ಧರ್ಮಾಧರ್ಮದ ಸೂಕ್ಷ್ಮತೆಯನ್ನು ಬೋಧಿಸಿ, ಜೀವಂಧರನು ಸತ್ಯಂಧರ ರಾಜನ ಮಗನೆಂದೂ, ಗಂಧೋತ್ಕಟನ ಮಗನಲ್ಲವೆಂದೂ ಹೇಳಿ, ಕಾಷ್ಠಾಂಗಾರನು ಸತ್ಯಂಧರನನ್ನು ಕೊಂದು ರಾಜ್ಯ ಅಪಹರಿಸಿದ ವಿಷಯವನ್ನು ತಿಳಿಸಿದನು. ಆಗ ಜೀವಂಧರನು ಧರ್ಮೋಪದೇಶಕ್ಕೆ ಹರುಷವನ್ನು ತಾಳಿ, ತನ್ನ ತಂದೆಯನ್ನು ಕಾಷ್ಠಾಂಗಾರನು ಕೊಂದನೆಂದುದಕ್ಕೆ “ಘುಡು ಘುಡಿಸಿ, ಕನಲಿ, ಗರ್ಜಿಸಿ, ಕಣ್ಣಿನಲಿ ಕೆಂಪನುಕರಿಸೆ ಪುರವುರುಹಿದೀಶ್ವರನೆನಲು ಕಿಡಿಕಿಡಿವೋಗಿ ಮುಳಿದು” ಕಾಷ್ಠಾಂಗಾರನನ್ನು ಕೊಂದು ತಾನೇ ರಾಜನಾಗುವೆನೆಂದು ಶಸ್ತ್ರಗಳನ್ನು ಧರಿಸಿ ನಿಂದನು. ಅದಕ್ಕೆ ಆ ಮುನಿಯು ಯಾವ ಕಾರ್ಯಕ್ಕೂ ಸರಿಯಾದ ಸಮಯ ಬೇಕಾಗುತ್ತದೆಂದು ಹೇಳಿ, ಸರಿಯಾದ ದೇಶ ಕಾಲಗಳ ಹಿನ್ನೆಲೆಯಲ್ಲಿ ಕಾರ್ಯ ಸಾಧಿಸಬೇಕೆಂದೂ. ವಿನಃಕಾರಣ ಸಿಟ್ಟು ಒಳ್ಳೆಯದಲ್ಲವೆಂದೂ ಉಪದೇಶ ಮಾಡಿ. ಜೀವಂಧರನನ್ನು ಸಮಾಧಾನ ಮಾಡಿ, ಆ ನಂದಿ ಮುನಿ ದೀಕ್ಷೆ ವಹಿಸಿ ತಪಸ್ಸನ್ನಾಚರಿಸಿ, ಕರ್ಮ ಕಳೆದುಕೊಂಡು ಮುಕ್ತಿಯನ್ನು ಹೊಂದಿದನು.

ಇತ್ತ ಒಂದು ದಿನ ಕಾಷ್ಠಾಂಗಾರನು ಸಭೆಯಲ್ಲಿದ್ದಾಗ, ಸಹಸ್ರಾರು ಶಬರರು ತಮ್ಮ ದನಕರುಗಳನ್ನು ಅಪಹರಿಸಿದ್ದಾರೆಂದೂ, ಅವುಗಳನ್ನು ಬಿಡಿಸಿ ಕೊಡಬೇಕೆಂದು ಜನರು ಬೇಡಿಕೊಂಡರು. ಅದನ್ನು ಕೇಳಿ ಸಿಡಿಮಿಡಿಗೊಂಡ ಕಾಷ್ಠಾಂಗಾರನು ಶಬರರನ್ನು ಸದೆಬಡೆಯಲು ಸನ್ನದ್ಧನಾದನು. ಅದನ್ನು ಕಂಡ ಮದನನು “ನೊರಜ ಕೊಲುವಡೆ ಕೈದು ವೇತಕೆ, ಧರಣಿಪತಿ ಹುಲು ಬೇಡರನು ಸಂಹರಿಸಿ ಬಹುದಕೆ ನೀವು ಪರಿಯಂತೇಕೆ,” ಎಂದು ಹೇಳಿ ಸೈನ್ಯ ಸಮೇತನಾಗಿ ಹೋಗಿ ಶಬರರಿಂದ ಏಟು ತಿಂದು ಹಿಂದಿರುಗಿದನು. ಆಗ ಕಾಷ್ಠಾಂಗಾರನು ಸ್ವತಃ ಹೋಗಿ ಸೋಲನ್ನಪ್ಪಿ ಮರಳಿದನು, ಆಗ ತುರು ಪಟ್ಟಿಗಳ ಒಡೆಯನಾದ ನಂದಗೋಪನು,ತನ್ನ ಗೋಸಮೂಹವನ್ನು ಹಿಂದಿರುಗಿಸಿ ಕೊಟ್ಟವರಿಗೆ, ಬಂಗಾರದ ಏಳು ಪುತ್ಥಳಿಗೆಗಳನ್ನು, ತನ್ನ ಮಗಳನ್ನೂ ಕೊಡುವುದಾಗಿ ಡಂಗುರ ಸಾರಿಸಿದನು. ಡಂಗುರವನ್ನು ಕೇಳಿದ ಪುರಜನರು, ಹೆಣ್ಣಿಗಾಗಿ ಹೋಗಿ ಜೀವ ಕೊಡುವುದು ಯಾವ ರೀತಿ ಎಂದು ಹೆದರಿ ಯಾರೂ ಮುಂದೆ ಬರಲಿಲ್ಲ. “ಗುರುಗಳಿಗೆ, ಗೋಬ್ರಾಹ್ಮಣರಿಗೆ, ಹೆಣ್ಣು ಮಕ್ಕಳಿಗೆ ಸಂಕಟ ಬಂದಾಗ, ಪುರುಷನಾದವನು ಅದನ್ನು ಪರಿಹರಿಸಬೇಕೆಂದು” ವಿಚಾರಿಸಿ, ಕೂಡಲೇ ಗೋವುಗಳನ್ನು ರಕ್ಷಿಸಲು ಜೀವಂಧರನು ಹೊರಟನು. ಅವನ ಸಂಗಡ ಅವನ ತಮ್ಮಂದಿರೂ ಹೊರಟರು. ಕ್ಷಣಾರ್ಧದಲ್ಲಿ ಆ ದುಷ್ಟ ಬೇಡ ಪಡೆಯನ್ನು ಸದೆಬಡೆದು ಗೋವುಗಳನ್ನು ಬಿಡಿಸಿ ತಂದನ. ತನ್ನ ಮಾತಿನಂತೆ ತನ್ನ ಮಗಳು ಗೋವಿಂದೆಯನ್ನು ಹಾಗೂ ಬಂಗಾರ ಪುತ್ಥಳಿಗಳನ್ನೂ ಕೊಡಬಂದ ನಂದಗೋಪನಿಗೆ, ತಿಳಿಸಿ ಹೇಳಿ, ಆ ಕನ್ಯೆಯನ್ನು ತನ್ನ ಸಹಜಾತನಾದ ಪದ್ಮಾಸ್ಯನೊಂದಿಗೆ ಶುಭ ಮುಹೂರ್ತದಲ್ಲಿ ಲಗ್ನ ಮಾಡಿಸಿ ಜೀವಂಧರನು ಸುಖದಿಂದಿದ್ದನು.

ರಾಜಪುರಿ ಪಟ್ಟಣದಲ್ಲಿಯೇ ಶ್ರೀದತ್ತನೆಂಬ ವಣಿಕ ಶ್ರೇಷ್ಠನಿದ್ದನು. ಅಪಾರವಾದ ಆಸ್ತಿ ಇದ್ದರೂ, ಸ್ವತಃ ದುಡಿದು ಗಳಿಸಬೇಕೆಂದು ಆತನು ಒಮ್ಮೆ ಬೆಲೆಯುಳ್ಳ ಸರಕುಗಳನ್ನು ಹಡಗಿನಲ್ಲಿ ಹೇರಿಕೊಂಡು ಸಮುದ್ರ ಪ್ರಯಾಣ ಮಾಡಿ, ಒಂದು ದ್ವೀಪಕ್ಕೆ ಹೋಗಿ, ತನ್ನ ಸರಕನ್ನು ಮಾರಿ ಲಾಭ ಮಾಡಿಕೊಂಡು ನಗರಕ್ಕೆ ಹಿಂದಿರುಗುತ್ತಿದ್ದನು. ಹಡಗು ಸಮುದ್ರ ಮಧ್ಯದಲ್ಲಿದ್ದಾಗ ಹಡಗಿನಲ್ಲಿ ಬಿರುಕುಂಟಾಗಿ ನೀರು ತುಂಬಿ ಹಡಗು ಮುಣಗಿತು. ಹಡಗಿನ ದೊಡ್ಡ ಸ್ತಂಭವನ್ನು ಹಿಡಿದುಕೊಂಡ ಶ್ರೀದತ್ತನು ಮತ್ತೊಂದು ದ್ವೀಪ ಸೇರಿದಾಗ, ಅಲ್ಲಿ ಅವನಿಗೊಬ್ಬ ಮನುಷ್ಯ ಕಾಣಿಸಿದನು. ಅವನಿಗೆ ತನ್ನ ವೃತ್ತಾಂತವನ್ನು ಶ್ರೀದತ್ತ ಹೇಳಿದನು. ಅದಕ್ಕೆ ಆತನು ಅವನನ್ನು ವಿಜಯಾರ್ಧ ಪರ್ವತಕ್ಕೆ ಕರೆದೊಯ್ದು ತನ್ನ ವೃತ್ತಾಂತವನ್ನು ಹೇಳಲಾರಂಭಿಸಿದನು.

[1] ಜೀ. ಚ. ಸಂ. ೧೮, ಪ. ೧೯.

[2] ಪ್ರ.ಕ.ಸಂ. ೪೨- ಶ್ರೀ ಎಚ್. ದೇವೀರಪ್ಪ, ಎಂ.ಎ. ಅವರ “ಕುಮಾರವ್ಯಾಸ ಭಾಸ್ಕರರ ಕಾಲ ಕುರಿತು.”

[3] ಕ.ಕ. ಚ. ಭಾಗ ೨. ಪುಟ ೪೭ ಮತ್ತು ಕ.ಸಾ.ಚ. ೧೯೫೩ – ಪು ೨೩೭.

[4] ಜೀ.ಚ.ಸಂ.೧ . ಪ.೩೪

[5] ಪ್ರತಿ ಸಂಧಿಯ ಕೊನೆಯ ಪದ್ಯ.

[6] ಜೀ. ಚ. ಸಂ. ೧, ಪ ೩೧

[7] ಜೀ. ಚ. ಸಂ. ೧. ಪ ೨೯

[8] ಜೀ. ಚ. ಸಂ. ೧. ಪ ೩೩

[9] ಜೀ.ಚ.ಸಂ. ೧, ಪ ೪೭.

[10] ಜೀ. ಚ.ಸಂ. ೪, ಪ ೯೯.

[11] ಜೀ. ಚ.ಸಂ. ೫; ಪ ೫೪