`ವಿಜಯಾಚಲದ ದಕ್ಷಿಣದಲ್ಲಿರುವ ಗಾಂಧಾರ ದೇಶಕ್ಕೆ ಗರುಡದೇವನೆಂಬ ರಾಜನಿದ್ದಾನೆ. ಅವನ ರಾಣಿ ಧಾರಿಣಿ, ಅವರಿಗೆ ಗಂಧರ್ವದತ್ತೆ ಎಂಬ ಮಗಳಿದ್ದಾಳೆ. ಅವಳನ್ನು ರಾಜಪುರಿಯಲ್ಲಿ ವೀಣೆಯಲ್ಲಿ ಸೋಲಿಸಿದವನ ಸಂಗಡ ಮಾತ್ರ ಅವಳ ವಿವಾಹ ಮಾಡಬೇಕು, ಇಲ್ಲವಾದರೆ ಅಪಾಯವೊದಗಬಹುದೆಂದು ಅವಳನ್ನು ಈಕ್ಷಿಸಿದಪಾರ್ವರು ಹೇಳಿದ್ದಾರೆ. ಇದು ಹೇಗೆ ಸಾಧ್ಯವಾದೀತೆಂದು ಯೋಚಿಸುತ್ತಿರುವಾಗ ಗೆಳೆಯನಾದ ನಿನ್ನ ನೆನಪು ಬಂದಿತು. ಕಾರಣ ಈ ಉಪಾಯದಿಂದ ನಿನ್ನನ್ನು ಇಲ್ಲಿಗೆ ತಂದಿದ್ದೇನೆ. ನಿನ್ನ ಹಡಗು ಸುರಕ್ಷಿತವೇ ಇದೆ” ಎಂದು ಹೇಳಿ, ಶ್ರೀದತ್ತನನ್ನು ಗರುಡ ದೇವನಲ್ಲಿ ಕರೆದೊಯ್ದನು. ಅವನು ಗಂಧರ್ವದತ್ತೆಗೆ ಇನ್ನು ನಿನ್ನ ತಂದೆ ಶ್ರೀದೇವನೇ ಎಂದು ಹೇಳಿ, ಅತುಳೈಶ್ವರ್ಯದಿಂದ ಅವರನ್ನು ಬೀಳ್ಕೊಟ್ಟನು. ರಾಜಪುರಿಗೆ ಬಂದ ಶ್ರೀದತ್ತನು ರಾಜನಾದ ಕಾಷ್ಠಾಂಗಾರನ ಅಪ್ಪಣೆ ಪಡೆದು ಗಂಧರ್ವದತ್ತೆಯ ಸ್ವಯಂವರವನ್ನು ಏರ್ಪಡಿಸಿದನು. ಅನೇಕ ದೇಶದ ರಾಜಕುಮಾರರು ಬಂದು ಸ್ವಯಂವರಕ್ಕಾಗಿಯೇ ನಿರ್ಮಿತವಾದ ಸುಂದರವಾದ ಮಂಟಪದಲ್ಲಿ ಕುಳಿತರು. ಜೀವಂಧರನೂ ತನ್ನ ಐನೂರು ಗೆಳೆಯರೊಂದಿಗೆ ಬಂದು ಕುಳಿತಿದ್ದನು. ಅಲಂಕೃತಳಾದ ಗಂಧರ್ವದತ್ತೆ ಸಖಿಯರೊಡನೆ ಮಂಟಪದಲ್ಲಿ ಬರಲು, ಅನೇಕ ಜನ ರಾಜ ಕುಮಾರರು, ದಂಗಾಗಿ ನೆಟ್ಟ ದೃಷ್ಟಿಯಿಂದ ಅವಳನ್ನೇ ನೋಡುತ್ತ ಕುಳಿತರು. ಶ್ರೀದತ್ತನು ಕೊಟ್ಟ ಮಂದಾರ ಮಾಲೆಯನ್ನು ಹಿಡಿದು ಸರ್ವ ರಾಜಕುಮಾರರನ್ನು ನೋಡುತ್ತ ಬಂದ ಗಂಧರ್ವದತ್ತೆಯ ಮನ ಜೀವಂಧರನಲ್ಲಿ ಬೆರೆಯಿತು. ಆದರೂ ಅವಳು ಹಾಗೆಯೇ ಹಿಂದಿರುಗಿದಳು. ಆಗ ಶ್ರೀದತ್ತನು ವೀಣೆಯಲ್ಲಿ ಪ್ರವೀಣರಾದವರು ತಮ್ಮ ಕಲೆಯನ್ನು ಪ್ರದರ್ಶಿಸಬೇಕೆಂದು ಬಿನ್ನವಿಸಿದನು. ಆಗಲೇ ಸಭೆಯಲ್ಲಿ ತಂದಿಟ್ಟು ಪೂಜಿಸಿದ ‘ಘೋಷವತಿ’ ಎಂಬ ವೀಣೆಯನ್ನು ಬಾರಿಸಿ ತಮ್ಮ ಕಲೆಯನ್ನು ಪ್ರದರ್ಶಿಸಲು ಅನೇಕ ಜನ ರಾಜಪುತ್ರರು ಮುಂದಾದರು. ವೀಣೆಯನ್ನು ಹಿಡಿಯಲು ಬಾರದೆ, ಬಾರಿಸಲು ಬಾರದೆ, ವೀಣೆಯ ಕಡ್ಡಿಗಳನ್ನು ಮುರಿದು ಹಾಕಿ, ಅಪಸ್ವರ ಹೊರಡಿಸಿ, ಸ್ತ್ರೀ ಸಮೂಹದ ಹಾಸ್ಯಕ್ಕೆ ಪಾತ್ರರಾಗಿ ಹಿಂದಿರುಗಿದರು. ಆಗ ಜೀವಂಧರನು ತನ್ನ ಆಸನದಿಂದಿಳಿದು ಬಂದನು. ರಾಜಪುತ್ರರೇ ಸೋತಿರುವಾಗ, ವೈಶ್ಯರಾದ ನಮಗೇಕೆ ವೀಣೆಯ ವಿಷಯ ಎಂದು ಅನೇಕ ಜನ ವೈಶ್ಯರು, ಜೀವಂಧರನನ್ನು ಹಿಂದಿರುಗಿಸಲು ಪ್ರಯತ್ನಪಟ್ಟರಾದರೂ, ಜೀವಂಧರನು ವೀಣೆಗಳನ್ನಿಟ್ಟಲ್ಲಿ ಹೋಗಿ ಒಂದೊಂದನ್ನೇ ಪರೀಕ್ಷಿಸಿ, ದೋಷಯುಕ್ತ ವೀಣೆಗಳನ್ನು ಬಿಟ್ಟು, ಘೋಷವತಿ ವೀಣೆಯನ್ನೆತ್ತಿಕೊಂಡು ನಾನಾ ರಾಗಗಳಲ್ಲಿ ಅದನ್ನು ಬಾರಿಸಿದನು. ಅದಕ್ಕೆ ಮನಸೋತ ಗಂಧರ್ವದತ್ತೆ ಸಕಲ ಜನರೂ ಸಂತೋಷಪಡುತ್ತಿರುವಂತೆ. ಜೀವಂಧರನಿಗೆ ಮಾಲೆಯನ್ನು ಹಾಕಿದಳು. ಸುರರು ಹೂಮಳೆ ಸುರಿಸಿದರು. ಸಂತೋಷಗೊಂಡ ಶ್ರೀದತ್ತನು ಅಳಿಯ ಜೀವಂಧರನನ್ನು ಮನೆಗೆ ಕರೆದೊಯ್ದನು. ಆದರೆ ಜೀವಂಧರನ ಗೆಲುವನ್ನು ಸಹಿಸದ ಕಾಷ್ಠಾಂಗಾರನು, ಹಲಕೆಲವು ರಾಜಕುಮಾರರನ್ನೊಪ್ಪಿಸಿ, ಗಂಧರ್ವದತ್ತೆಯನ್ನು ಅಪಹರಿಸಲು ಯುದ್ಧಕ್ಕೆ ಸನ್ನದ್ಧನಾದನು. ಇದನ್ನು ತಿಳಿದ ಜೀವಂಧರನು, ತನ್ನ ಐನೂರು ಗೆಳೆಯರೊಂದಿಗೆ ರಥಗಳಲ್ಲಿ ಬಂದು, ಯುದ್ಧಕ್ಕೆ ಸೇರಿದ ರಾಜ ಕುಮಾರರನ್ನೆಲ್ಲ ಸದೆಬಡೆದನು. ನೃಪಸಮೂಹವನ್ನೆಲ್ಲ ಗೆದ್ದು ಬಂದ ಅಳಿಯ ಜೀವಂಧರನನ್ನು ಶ್ರೀದತ್ತನು ಸಂತೋಷದಿಂದ ಬಿಗಿದಪ್ಪಿ ಗಂಧರ್ವದತ್ತೆಯೊಡನೆ ಶುಭಲಗ್ನದಲ್ಲಿ ಅವರ ವಿವಾಹವನ್ನು ಜರುಗಿಸಿದನು.

ಚೈತ್ರ ಮಾಸದಲ್ಲಿ ಒಂದು ದಿವಸ ಕಾಷ್ಠಾಂಗಾರನು ತನ್ನ ನಾರೀಜನ, ಪರಿವಾರ ಸಹಿತ ಜಲಕೇಳಿಗೆಂದು ಒಂದು ಸರೋವರಕ್ಕೆ ಹೋದನು. ಜೀವಂಧರನೂ ತನ್ನ ಮಿತ್ರರೊಂದಿಗೆ ಅದೇ ಸರೋವರಕ್ಕೆ ಬಂದನು. ಅಲ್ಲಿದ್ದ ನದೀ ತೀರದಲ್ಲಿ ಬ್ರಾಹ್ಮಣರು ಯಜ್ಞವನ್ನು ಮಾಡುತ್ತಿದ್ದರು. ಆಗ ನಾಯಿಯೊಂದು ಬಂದು ಹವಿಸ್ಸನ್ನು ಮುಟ್ಟಲು ಸಿಟ್ಟಿಗೆದ್ದ ಬ್ರಾಹ್ಮಣರು ಅದನ್ನು ಸಾಯ ಬಡೆದರು. ಅದನ್ನು ಕಂಡ ಜೀವಂಧರನು ಅಲ್ಲಿಗೆ ಓಡಿ ಹೋಗಿ ಆ ನಾಯಿಗೆ ಶೈತ್ಯೋಪಚಾರ ಮಾಡಿದರೂ ಆ ನಾಯಿ ಬದುಕುವ ಲಕ್ಷಣ ಕಾಣಲಿಲ್ಲ. ಆಗ ಜೀವಂಧರನು ಅದರ ಕಿವಿಯಲ್ಲಿ ‘ಪಂಚಣಮೋಕಾರ ಮಂತ್ರ’ವನ್ನು ಉಪದೇಶಿಸಿದನು. ಅದನ್ನು ಕೇಳುತ್ತ ಸತ್ತ ನಾಯಿಯು ಸದ್ಭಾವದಿಂದ ಸತ್ತುದರ ಪರಿಣಾಮವಾಗಿ ಚಂದ್ರಾಭಪುರದಲ್ಲಿ ಯಕ್ಷನಾಗಿ ಹುಟ್ಟಿತು. ಕೂಡಲೇ ಜಾತಿ ಸ್ಮರನಾಗಿ, ತನಗೆ ಸದ್ಗತಿಯನ್ನು ದಯಪಾಲಿಸಿದ ಜೀವಂಧರನೆದುರು ಪ್ರತ್ಯಕ್ಷನಾಗಿ, ತನ್ನ ಕಥೆಯನ್ನು ಹೇಳಿ, ತನಗೆ ಸದ್ಗತಿ ಒದಗಿಸಿದ್ದಕ್ಕೆ ಜೀವಂಧರನ ಉಪಕಾರವನ್ನು ನೆನೆದು, ಸಂಕಟ ಸಮಯದಲ್ಲಿ, ತನ್ನನು, ನೆನೆಯಬೇಕೆಂದು ಕೇಳಿಕೊಂಡು ಆ ಯಕ್ಷನು ಹೊರಟು ಹೋದನು.

ಅದೇ ನದಿಯ ಇನ್ನೊಂದು ತೀರದಲ್ಲಿ ಜಲಕೇಳಿಗೆ ಬಂದಿದ್ದ ಅದೇ ಊರಿನ ಗುಣಮಾಲೆ, ಸುರಮಂಜರಿ ಎಂಬ ಇಬ್ಬರು ಮಕ್ಕಳು, ತಮ್ಮಲ್ಲಿದ್ದ ಸುವಾಸನೆಯ ಚೂರ್ಣದ ಶ್ರೇಷ್ಠತೆಯನ್ನು ಕುರಿತು, ತನ್ನದು ಮೇಲು ತನ್ನದು ಮೇಲು ಎಂದು ವಾದಿಸಲಾರಂಭಿಸಿದರು. ಯಾರದು ಶ್ರೇಷ್ಠ ಎಂಬುದನ್ನು ತಿಳಿಯಲು ಯಾರಾದರೂ ಜಾಣರಿಗೆ ತೋರಿಸಿ ನಿರ್ಣಯ ಪಡೆಯಲೆನ್ನಲು, ಅವರ ಸಖಿಯರು ಚೂರ್ಣವನ್ನು ತೆಗೆದುಕೊಂಡು ಜೀವಂಧರನಲ್ಲಿಗೆ ಬಂದರು. ಆಗ ಇಬ್ಬರ ಚೂರ್ಣಗಳನ್ನು ಪರೀಕ್ಷಿಸಿದ ಜೀವಂಧರನು ಗುಣಮಾಲೆಯ ಚೂರ್ಣವೇ ಶ್ರೇಷ್ಠವೆಂದನು. ಅದಕ್ಕೆ ಸಖಿಯರು “ಈ ಮೊದಲು ನೋಡಿದ ಜಾಣರು ಸುರಮಂಜರಿಯದೇ ಶ್ರೇಷ್ಠವೆಂದಿದ್ದರು. ಗುಣಮಾಲೆಯದೇ ಶ್ರೇಷ್ಠವೆಂದವರು ನೀವೊಬ್ಬರೇ” ಎಂದು ಹೇಳಿ ಹಾಸ್ಯಮಾಡಿ ನಕ್ಕರು. ಅದಕ್ಕೆ ಜೀವಂಧರನು ಕೂಡಲೇ ಗುಣಮಾಲೆಯ ಚೂರ್ಣವನ್ನು ಆಕಾಶದಲ್ಲಿ ತೂರಿದನು. ಅದರ ಸುವಾಸನೆಗೆ ಅಳಿಗಳು ಮುತ್ತಿಕೊಂಡವು. ನಂತರ ಸುರಮಂಜರಿಯ ಚೂರ್ಣವನ್ನು ಹಾರಿಸಲು ಅಲ್ಲಿಗೆ ಯಾವ ಅಳಿಯೂ ಬರಲಿಲ್ಲ. ಹೀಗೆ ಪ್ರತ್ಯಕ್ಷವಾಗಿ ಗುಣಮಾಲೆಯ ಚೂರ್ಣವೇ ಶ್ರೇಷ್ಠವೆಂದು ತೋರಿಸಿಕೊಟ್ಟ ಜೀವಂಧರನ ಜಾಣ್ಮೆಗೆ ಅವರೆಲ್ಲ ಮೆಚ್ಚಿ, ಅವನ ನಿರ್ಣಯವನ್ನು ಹೋಗಿ ಗುಣಮಾಲೆ ಸುರಮಂಜರಿಯರಿಗೆ ತಿಳಿಸಿದರು. ಸಖಿಯರ ಮುಖಾಂತರ ಜೀವಂಧರನ ವಿಚಾರ ತಿಳಿದು ಸುರಮಂಜರಿ ಜೀವಂಧರನ ಹೊರತಾಗಿ ಉಳಿದ ಪುರುಷರೆಲ್ಲರೂ ತನಗೆ ಸಹೋದರ ಸಮಾನರೆಂದು ಭಾವಿಸಿ, ಆತನನ್ನು ವರಿಸಬೇಕೆಂದು ವಿಚಾರದಿಂದ ನದಿಗೆ ಬಂದವಳು ಸ್ನಾನವನ್ನೂ ಮಾಡದೆ ಮನೆಗೆ ಹಿಂದಿರುಗಿದಳು. ತನ್ನ ಸಖಿ ವ್ಯಥೆಪಟ್ಟುಕೊಂಡು ಹೋದ ಬಗೆಗೆ ತಾನೂ ಚಿಂತೆಯಿಂದ ಬರುವ ಗುಣಮಾಲೆಯ ಮೇಲೆ ಒಂದು ಮದ್ದಾನೆ ಏರಿ ಬಂದಿತು. ಆನೆಯನ್ನು ಕಂಡ ಪರಿಚಾರಿಕೆಯರೆಲ್ಲ ಓಡಿದರು. ಅವಳ ಒಬ್ಬ ಸಖಿ ಮಾತ್ರ ಗುಣಮಾಲೆಯನ್ನು ರಕ್ಷಿಸಲು ಅವಳ ಮುಂದೆ ಬಂದಳು. ಮದ್ದಾನೆ ಗುಣಮಾಲೆಯನ್ನು ಸೊಂಡಿಲಿನಿಂದ ಹಿಡಿಯುತ್ತದೆನ್ನುವಷ್ಟರಲ್ಲಿ, ಅದನ್ನು ಕಂಡ ಜೀವಂಧರನು, ಸ್ತ್ರೀ ವಧೆಯನ್ನು ಕಂಡು ಸುಮ್ಮನಿರುವುದು ಪುರುಷ ಲಕ್ಷಣವಲ್ಲವೆಂದು ಭಾವಿಸಿ, ಕೂಡಲೇ ಮುನ್ನುಗ್ಗಿ, ಮದ್ದಾನೆಯ ಸೊಂಡಿಲನ್ನು ಹಿಡಿದೆಳೆದು ಆನೆಯ ಗಂಡಸ್ಥಲಕ್ಕೆ ಬಡಿಯಲು, ಮದವಿಳಿದ ಆನೆ ಅರಮನೆಗೆ ಓಡಿತು. ತನ್ನ ಪ್ರಾಣರಕ್ಷಣ ಮಾಡಿದ ಜೀವಂಧರನನ್ನು ಲಗ್ನವಾಗಬೇಕೆಂದು ಗುಣಮಾಲೆಗೆ ಆತುರವಾಯಿತು. ಅದರಂತೆ ಗುಣಮಾಲೆಯ ಕಟಾಕ್ಷಕ್ಕೆ ಸೋತ ಜೀವಂಧರನು ವಿರಹದಿಂದ ಬಳಲುವಂತಾಯಿತು. ಮನೆ ಸೇರಿದ ಗುಣಮಾಲೆಯು ತನ್ನ ಇಚ್ಛೆಯನ್ನು ಓಲೆಯಲ್ಲಿ ಬರೆದು ಅರಗಿಳಿಯ ಮುಖಾಂತರ ಜೀವಂಧರನಿಗೆ ಕಳುಹಿಸಿದಳು. ಆ ಪ್ರೇಮದೋಲೆ ಓದಿದ ಜೀವಂಧರನು ಅದೇ ಅರಗಿಳಿಯ ಮುಖಾಂತರ ತನ್ನ ಇಚ್ಛೆಯನ್ನು ಬರೆದು ಕಳುಹಿಸಿದನು. ಆ ಓಲೆ ನೋಡಿ ವಿರಹದ ಉದ್ವೇಗ ಹೆಚ್ಚಾದ ಗುಣಮಾಲೆಯ ವಿಷಯವನ್ನು ಅವಳ ಸಖಿಯರು, ಅವಳ ತಂದೆ ಕುಬೇರದತ್ತನಿಗೆ ತಿಳಿಸಲು. ಅವನು ಆ ಕೂಡಲೇ ಗಂಧೋತ್ಕಟನನ್ನು ಕಂಡು, ಗುಣಮಾಲೆಯನ್ನು ಜೀವಂಧರನಿಗೆ ಕೊಟ್ಟು ಮದುವೆಯನ್ನು ನೆರವೇರಿಸಿದನು.

ಜೀವಂಧರನು ಬಡೆದು ಕಳುಹಿಸಿದ ಆನೆಯು ಅನ್ನ, ನೀರು ಬಿಟ್ಟು ಸೊರಗುತ್ತ ನಡೆದ ವಿಷಯವನ್ನು ಸೇವಕರಿಂದ ತಿಳಿದ ದುಷ್ಟ ಕಾಷ್ಠಾಂಗಾರನು, ಕೋಪಗೊಂಡು, ಜೀವಂಧರನನ್ನು ಎಳೆದು ತರುವಂತೆ, ಮದನನಿಗೆ ಆಜ್ಞೆ ಮಾಡಿದನು. ಕೂಡಲೇ, ಮದನನು, ಸೈನ್ಯ ಸಮೇತ ಬಂದು ಗಂಧೋಕಟನ ಮನೆಯನ್ನು ಮುತ್ತಿದನು. ಅದನ್ನರಿತ ಜೀವಂಧರನು ಕಾಷ್ಠಾಂಗಾರನನ್ನು ನಿರ್ಮೂಲ ಮಾಡುವುದಾಗಿ ಸಿದ್ಧನಾದನು. ಅವನನ್ನು ಸಮಾಧಾನ ಪಡಿಸಿ ಗಂಧೋತ್ಕಟನು ಕಾಷ್ಠಾಂಗಾರನಲ್ಲಿಗೆ ಜೀವಂಧರ ಸಹಿತ ಬಂದು, ತನ್ನ ಮಗನನ್ನು ಕರುಣಿಸಬೇಕೆಂದು ಬೇಡಿಕೊಂಡನು. ಅನಾಯಸವಾಗಿ ಕೈಯಲ್ಲಿ ಸಿಕ್ಕ ಜೀವಂಧರನ ತಲೆ ಹೊಡೆದು ಬಾ ಎಂದು ಮದನನಿಗೆ ಕಾಷ್ಠಾಂಗಾರನು ಆಜ್ಞೆ ಮಾಡಿದನು. ಊರ ಹೊರಗಿನ ಉದ್ಯಾನಕ್ಕೆ ಜೀವಂಧರನನ್ನು ತಂದು ಆತನ ತಲೆ ಹೊಡೆಯಬೇಕೆನ್ನುವಾಗ, ಜೀವಂಧರನು ಯಕ್ಷನನ್ನು ನೆನೆದನು. ಕೂಡಲೇ ಆ ಯಕ್ಷನಿಂದ ಬಂದ ವಿದ್ಯೆಗಳು ಜೀವಂಧರನನ್ನು ಮಾಯೆಯಿಂದ ಎತ್ತಿಕೊಂಡು ಹೋಗಿ; ಯಕ್ಷನ ಸಮ್ಮುಖದಲ್ಲಿ ನಿಲ್ಲಿಸಿದವು. ಇತ್ತ ಜೀವಂಧರನ ತಲೆಯನ್ನು ಕತ್ತರಿಸಿದೆನೆಂಬ ಭ್ರಮೆಯಲ್ಲಿ ಮದನನು ಅರಮನೆಗೆ ಹಿಂದಿರುಗಿದನು. ಗಂಧೋತ್ಕಟ, ಗುಣಮಾಲೆಯರು ಜೀವಂಧರನ ಸಾವಿನ ಬಗ್ಗೆ ಚಿಂತಾಸಾಗರದಲ್ಲಿ ಮುಳಿಗಿದರು.

ಅತ್ತ ಯಕ್ಷನು ತನಗೆ ಉಪಕಾರ ಮಾಡಿದ ಜೀವಂಧರನು ಪ್ರತ್ಯಕ್ಷ ತನ್ನಲ್ಲಿ ಬಂದದ್ದರಿಂದ, ಬಹಳೇ ಸಂತುಷ್ಟನಾಗ ಜೀವಂಧರನನ್ನು, ದಿವ್ಯವಸ್ತ್ರಾಭರಣಗಳಿಂದ ಅಲಂಕರಿಸಿ ಅನೇಕ ರೀತಿಯಿಂದ ಸತ್ಕರಿಸಿ ಕೆಲವು ದಿನ ತನ್ನಲ್ಲಿಯೇ ಇರಿಸಿಕೊಂಡನು. ಜೀವಂಧರನೂ ಸಹ ಕೆಲವು ದಿವಸ ಆನಂದದಿಂದ ಯಕ್ಷನಲ್ಲಿ ಕಳೆದು, ನಂತರ ದೇಶ ಸಂಚಾರ ಮಾಡಬೇಕೆಂಬ ತನ್ನ ಇಚ್ಛೆಯನ್ನು ಅವನಿಗೆ ತಿಳಿಸಿದನು. ಆಗ ಯಕ್ಷನು ಜೀವಂಧರನಿಗೆ ‘ವಿನುತಗಾನ, ವಿಷಾಪಹಾರಣ, ಕಾಮರೂಪ’ ಗಳೆಂಬ ‘ವಿದ್ಯಾತ್ರಯ’ಗಳನ್ನು ತಿಳಿಸಿ ಕಳುಹಿಸಿಕೊಟ್ಟನು.

ಯಕ್ಷನಿಂದ ಬೀಳ್ಕೊಂಡ ಜೀವಂಧರನು ನಾನಾ ಜನಪದಂಗಳನ್ನು ನೋಡಿ, ಜಿನಗ್ರಹಂಗಳನ್ನೂ ಹೊಕ್ಕು ದೇವಾರ್ಚನ ಮಾಡಿ, ಒಂದು ದೊಡ್ಡ ಅರಣ್ಯವನ್ನು ದಾಟಿಕೊಂಡು, ಪಲ್ಲವ ದೇಶದ, ಧನಪತಿ ಎಂಬ ಅರಸನು ಆಳುತ್ತಿದ್ದ ಚಂದ್ರಾಭಪುರಕ್ಕೆ ಬಂದನು. ಅಲ್ಲಿಯ ಚೈತ್ಯಾಲಯದಲ್ಲಿ ಅರ್ಹಂತನನ್ನು ಪೂಜಿಸುತ್ತ ಕೆಲವು ದಿವಸ ಕಳೆದಿರಲು, ಧನಪತಿ ರಾಜನ ಮಗಳಾದ ಪದ್ಮೆ ಎಂಬವಳಿಗೆ ಹಾವು ಕಚ್ಚಿತು. ದುಃಖಿತನಾದ ರಾಜನು ತನ್ನ ಮಗಳನ್ನು ಬದುಕಿಸಿ ಕೊಟ್ಟವರಿಗೆ ಮಗಳು ಸಹಿತ ಅರ್ಧರಾಜ್ಯ ಕೊಡುವುದಾಗಿ ಡಂಗುರ ಸಾರಿಸಿದನು. ಅನೇಕ ದೇಶಗಳ ವೈದ್ಯರು ಬಂದು ಔಷಧ ಕೊಟ್ಟರು ಸಾರ್ಥಕವಾಗಲಿಲ್ಲ. ಆಗ ಅದೇ ಊರಿನಲ್ಲಿದ್ದ ಜೀವಂಧರನು, ಯಕ್ಷನು ಉಪದೇಶಿಸಿದ ‘ವಿಷಾಪಹರಣ’ ವಿದ್ಯೆಯ ಸದುಪಯೋಗವಾಯಿತೆಂದು ತಿಳಿದು, ಅರಮನೆಗೆ ಹೋಗಿ, ‘ಮಂತ್ರ’ವನ್ನು ಪದ್ಮೆಗೆ ಅಭಿಮಂತ್ರಿಸಲು, ಕಗ್ಗತ್ತಲೆಯೊಳಗೆ “ದಿನಪ ಸುಱೆವವೊಲು, ದುಷ್ಟೋರಗದ ವಿಷತೊಲಗಲಾಕ್ಷಣ ನಿದ್ದೆದಿಳಿವಂತಲಘುಕುಚೆ ತಾನೆದ್ದು ಕಣ್ದೆರೆದಳು ಸರಾಗದಲಿ” ಜೀವಂಧರನ ವಿಷಯಗಳನ್ನೆಲ್ಲವನ್ನೂ ತಿಳಿದು, ಧನದತ್ತನು ‘ತೊಲಗಿದಸಂಬಂದಂತೆ’ ಸಂತೋಷದಿಂದ ಅರ್ಧ ರಾಜ್ಯವನ್ನು ಕೊಟ್ಟು, ಮಗಳೊಂದಿಗೆ ಲಗ್ನವನ್ನು ನೆರವೇರಿಸಿದನು.

ಪದ್ಮೆಯೊಡನೆ ಲಗ್ನವಾದ ಜೀವಂಧರನು ಸಂತೋಷದಿಂದ ಒಂದು ವರುಷ ಚಂದ್ರಾಭಪುರದಲ್ಲಿಯೇ ಇದ್ದು, ನಂತರ ಅಲ್ಲಿಂದ ಹೊರಟು, ಒಂದು ಅರಣ್ಯವನ್ನು ಹೊಕ್ಕು ಅಲ್ಲಿ ಮಿಥ್ಯಾ ತಪಸ್ಸಿನಲ್ಲಿದ್ದ ತಪಸ್ವಿಗಳಿಗೆ ಸದುಪದೇಶ ಮಾಡಿ, ದಕ್ಷಿಣ ದಿಕ್ಕಿನಲ್ಲಿ ಹೆಸರಾದ ಬಂಧುರ ವಿಷಯದ ವಿಮಲಪುರ ಎಂಬ ಪಟ್ಟಣಕ್ಕೆ ಬಂದನು. ಆ ಪಟ್ಟಣಕ್ಕೆ ಗುಣಭದ್ರನೆಂಬವನು ರಾಜನಾಗಿದ್ದನು. ಅವನಿಗೆ ಕ್ಷೇಮಲಕ್ಷ್ಮಿ ಎಂಬ ಸುಂದರ ಮಗಳಿದ್ದಳು. ಆ ಊರಲ್ಲಿ ಒಂದು ಚೈತ್ಯಾಲಯವಿತ್ತು. ಸದಾ ಮುಚ್ಚಿರುತ್ತಿದ್ದ ಅದರ ಬಾಗಿಲುಗಳನ್ನು, ಜಿನಸ್ತುತಿ ಮಾಡಿ ಯಾವನು ತೆಗೆಯಿಸುವನೋ ಅವನಿಗೆ ತನ್ನ ಮಗಳನ್ನು ಕೊಡುವುದಾಗಿ ಸಾರಿದ್ದನು. ಈ ವಿಷಯ ತಿಳಿದ ಜೀವಂಧರನು ಚೈತ್ಯಾಲಯಕ್ಕೆ ಬಂದು ಜಿನನನ್ನು ಅನೇಕ ರೀತಿಯಿಂದ ಸ್ತುತಿಸಿದನು. “ದೇವಾಲಯದ ಬಾಗಿಲು ಮುಚ್ಚಿದರೆ ಹೇಗೆ? ಜನರು ತಮ್ಮ ಕಣ್ಣುಗಳಿಂದ, ಶಾಂತಿ ಜಿನೇಶನೇ ತಮ್ಮನ್ನು ನೋಡಿ ತಮ್ಮ ಕರ್ಮವೆಂಬ ಕತ್ತಲೆಯನ್ನು ದೂರ ಮಾಡಿಕೊಳ್ಳದಿದ್ದರೆ ಹೇಗೆ? ದಯವಿಟ್ಟು ಬಾಗಿಲನ್ನು ತೆರೆದು ಭವ್ಯಾತ್ಮರನ್ನು ರಕ್ಷಿಸು” ಎಂದು ಮುಂತಾಗಿ ಬೇಡಿಕೊಳ್ಳಲು “ಪರಮ ಮುಕ್ತಿಯ ಗೃಹದ ಬಾಗಿಲು ತೆರೆಯಿಸುವಾತಗಿದೇನು ಘನ” ವೆನ್ನುವಂತೆ ಬಸದಿಯ ಬಾಗಿಲು ತೆರೆಯಿತು. ಜನರೆಲ್ಲರೂ ಸಂತೋಷದಿಂದ ಶಾಂತೀಶ್ವರನ ದರ್ಶನ ಪಡೆದರು. ರಾಜನಾದ ಗುಣಭದ್ರನೂ ಬಂದು ಸಂತಸಗೊಂಡು ತನ್ನ ಮಗಳಾದ ಕ್ಷೇಮಲಕ್ಷ್ಮಿಯನ್ನು ಕೊಟ್ಟು ಲಗ್ನ ಮಾಡಿದನು.

ಕ್ಷೇಮಲಕ್ಷ್ಮಿಯನ್ನು ಲಗ್ನವಾಗಿ ಅಲ್ಲಿ ಕೆಲವೊಂದು ದಿವಸ ಕಳೆದು, ನಂತರ ಅಲ್ಲಿಂದ ಹೊರಟು ಬರುವಾಗ, ದಾರಿಯಲ್ಲಿ ಹೊಲವನ್ನು ಊಳುವ, ಸಂಸಾರಕ್ಕೆ ಬೇಸತ್ತ ಒಬ್ಬ ರೈತನನ್ನು ಕಂಡು ಅವನಿಗೆ ಜೀವನದ ಸಾರ್ಥಕತೆ ಪಡೆಯಲು, ಸಪ್ತ ವ್ಯಸನಗಳಿಂದ ದೂರವಿದ್ದು ಅಣುವ್ರತಗಳನ್ನು ಪಾಲಿಸಿ, ರತ್ನತ್ರಯಗಳನ್ನು ಹೊಂದಿ, ಅಷ್ಟಕರ್ಮಗಳನ್ನು ದೂಡಿ, ಅಷ್ಟಗುಣಗಳನ್ನು ಹೊಂದಲು, ಧಮೋರ್ಪದೇಶ ಮಾಡಿ ಮುಂದೆ ನಡೆದನು. ಅಷ್ಟರಲ್ಲಿ ಅವನಿಗೆ ಎದುರಾಗಿ ಒಬ್ಬ ಸುಂದರ ತರುಣಿ ಬಂದಳು. ಅಂತಹ ವನದಲ್ಲಿ ಏಕಾಕಿಯಾಗಿ ಬರುವ ತರುಣಿಯನ್ನು ಕಂಡು ಜೀವಂಧರನಿಗೆ ಆಶ್ಚರ್ಯವೇ ಆಯಿತು, ಜೀವಂಧರನನ್ನು ನೋಡಿದ ಆ ಸ್ತ್ರೀ ಅವನನ್ನು ಮೋಹಿಸಿ, ತನ್ನನ್ನು ಮದುವೆಯಾಗೆಂದು ಪೀಡಿಸಲಾರಂಭಿಸಿದಳು. ಆಗ ಜೀವಂಧರನು “ಎಲೆ ತರುಣಿಯೇ ನೀನು ನಿಜವಾಗಿ ಸುಂದರಿ, ತರುಣಿ ಆದರೂ ನಿನ್ನನ್ನು ನೋಡಿ ನನ್ನ ಮನಸ್ಸು ನಿನ್ನ ಕಡೆ ಹರಿಯಲೊಲ್ಲದು. ಕಾರಣ ನೀನು ಕನ್ಯೆಯಲ್ಲ. ನಿನಗೆ ಪುರಷನಿರಲೇಬೇಕು” ಎಂದನು. ತನಗೆ ಲಗ್ನವಾಗಿಲ್ಲ ಎಂದು ಸುಳ್ಳು ಹೇಳಿದ ಆ ತರುಣಿ. ಜೀವಂಧರನ ಅಗಾಧವಾದ ಜ್ಞಾನಕ್ಕೆ ಅಚ್ಚರಿಪಟ್ಟು, ಪುನಃ ತನಗೆ ಲಗ್ನವಾಗಿಲ್ಲವೆಂದೇ ಸುಳ್ಳು ಹೇಳಿ, ತನ್ನನ್ನು ವರಿಸುವಂತೆ ಆಗ್ರಹ ಮಾಡಹತ್ತಿದಳು. ಅದಕ್ಕೆ ಜೀವಂಧರನು, ಆಕೆಗೆ “ಸುಳ್ಳನ್ನು ಹೇಳಿ, ದೇಹದ ಅಲ್ಪ ಸುಖಕ್ಕೆ ಮರುಳಾಗಿ ನಿನ್ನ ಶ್ರೇಯಸ್ಸಿಗೆ ಹಾನಿಯನ್ನು ತಂದುಕೊಳ್ಳಬೇಡ”ವೆಂದು ಉಪದೇಶಿಸಿದನು. ಅಷ್ಟರಲ್ಲಿ, ಮದನ ತಾಪದಿಂದ ಕಂಗೆಟ್ಟ ಒಬ್ಬ ಯುವಕನು ಅಲ್ಲಿಗೆ ಬಂದು, “ಅನೀತಿಯಿಂದ ನೀನು ನನ್ನನ್ನು ಬಿಟ್ಟು ಬಂದಿರುವಿ, ನಿನ್ನನ್ನಗಲಿ ನಾನೆಂತು ಜೀವಿಸಲಿ” ಎಂದು ಕೇಳಿದನು. ಆಗ ಜೀವಂಧರನು “ನೀನಾರು? ಈ ತರುಣಿ ನಿನಗೇನಾಗಬೇಕು?” ಎಂದು ಕೇಳಿದ್ದಕ್ಕೆ. ಆ ತರುಣನು “ನಾನೊಬ್ಬ ವಿದ್ಯಾಧರ. ಈಕೆ ನನ್ನ ಹೆಂಡತಿಯಾದ ಅನಂಗಮಾಲೆ” ಎಂದನು. “ಇವಳು ನಿನ್ನನ್ನು ಬಿಟ್ಟು ಬರಲು ಕಾರಣವೇನು?” ಎಂದು ಕೇಳಿದ ಜೀವಂಧರನಿಗೆ, ಆ ವಿದ್ಯಾಧರನು “ನೀರಡಿಸಿದ ನಾನು ನೀರು ಕುಡಿಯಲು ಸರೋವರಕ್ಕೆ ಹೋದೆನು. ಅಷ್ಟರಲ್ಲಿ ಈಕೆ ನನ್ನನ್ನು ಬಿಟ್ಟು ಬಂದಿದ್ದಾಳೆ. ಇವಳನ್ನು ಬಿಟ್ಟು ನಾನೆಂತು ಬದುಕಲಿ?” ಎಂದನು. ಅದಕ್ಕೆ ಜೀವಂಧರನು “ಸೇರದೊಡೆಯನ ಬಿಡದ ಭೃತ್ಯ… ಒಲ್ಲದ ಸತಿಗೆಳಿಸುವ ಮರ್ಥ್ಯ. ಪಾಮರ”ನೆಂದು. ಒಲ್ಲದ ಆಕೆಗೆ ಆಶೆ ಪಡುವುದು ಸರಿಯಲ್ಲವೆಂದು ತಿಳಿ ಹೇಳಿ. ಸ್ತ್ರೀಯರ ಮನವನ್ನು ತಿಳಿಯುವದು ಕಷ್ಟ, “ಸ್ತ್ರೀ ಮೋಕ್ಷ ನಿವಾಸಕ್ಕೆ ಕದವೆಂದೂ” ಮತ್ಸರವಶೌಚಕ ಪಾಪವಪ್ಪ ಬಲೆಯರಿಗೆಱಗದಿರೆಂ” ದೂ ಬೋಧಿಸಿದನು.

ಹೀಗೆ ವಿದ್ಯಾಧರನಿಗೆ ಬೋಧಿಸಿ, ವನಾಂತರವನ್ನು ದಾಟಿಕೊಂಡು, ಜೀವಂಧರನು ಹೇಮಾಭಪುರಿ ಎಂಬ ಪಟ್ಟಣಕ್ಕೆ ಬಂದನು. ಅಲ್ಲಿ ದೃಢಮಿತ್ರನೆಂಬ ಅರಸನು ರಾಜ್ಯವಾಳುತ್ತಿದ್ದನು. ಜೀವಂಧರನು ಅಲ್ಲಿಗೆ ಬಂದಾಗ, ದೃಢಮಿತ್ರ ರಾಜನ ಮಕ್ಕಳು ಉಪವನದಲ್ಲಿ ಆಡುತ್ತಿದ್ದರು. ಅವರು ಒಂದು ಮಾವಿನ ಗಿಡದ ತುದಿಯಲ್ಲಿ ಆದ ಹಣ್ಣೊಂದನ್ನು ಕೆಡುವಲು ಬಾಣ ಪ್ರಯೋಗ ಮಾಡಿದರು. ಅವರಿಗೆ ಗುರಿ ಸಾಧಿಸಲಿಲ್ಲ. ಅದಕ್ಕೆ ನೊಂದುಕೊಂಡ ಅವರು ಖಿನ್ನರಾಗಿರಲು, ಜೀವಂಧರನು ಬಾಣ ಪ್ರಯೋಗ ಮಾಡಿ ಆ ಹಣ್ಣನ್ನು ಬೀಳಿಸಿದನು. ಅವನ ಬಿಲ್ವಿದ್ದೆಗೆ, ರೂಪಕ್ಕೆ ಆಶ್ಚರ್ಯಪಟ್ಟ, ರಾಜಕುಮಾರರು, ಆತನನ್ನು ಅರಮನೆಗೆ ಕರೆತಂದರು. ಅಲ್ಲಿ ದೃಢ ಮಿತ್ರನು, ಜೀವಂಧರನನ್ನು ಮೆಚ್ಚಿಕೊಂಡು ತನ್ನ ಮಗಳಾದ ಕನಕಮಾಲೆಯನ್ನು ಧಾರೆ ಎರೆದು ಕೊಟ್ಟನು. ಪತ್ನಿ ಕನಕಮಾಲೆ ಹಾಗೂ ಆಕೆಯ ನೂರು ಜನ ಸಹೋದರರ ಸಂಗದಲ್ಲಿ ಜೀವಂಧರನು ಸಂತಸದಿಂದ ಹೇಮಾಭಪುರದಲ್ಲಿ ಕಾಲ ಕಳೆಯುತ್ತಿದ್ದನು.

ಇತ್ತ ರಾಜಪುರಿಯಲ್ಲಿ, ಕಾಷ್ಠಾಂಗಾರನು ಜೀವಂಧರನನ್ನು ಕೊಲ್ಲಿಸಿದನೆಂದೇ ಎಲ್ಲರೂ ನಂಬಿದ್ದರು. ಆದರೂ ಜೀವಂಧರನ ಹಿರಿಯ ಹೆಂಡತಿ ಗಂಧರ್ವದತ್ತೆ ಮಾತ್ರ ಎಳ್ಳಷ್ಟೂ ದುಃಖಿಸದೆ, ಸಕಲ ಶೃಂಗಾರಗಳೊಂದಿಗೆ, ಜಲಕೇಳಿ, ವನಕೇಳಿಗಳಲ್ಲಿ ಮಗ್ನಳಾಗಿ ಸುಖದಿಂದ ಕಾಲಕಳೆಯುತ್ತಿದ್ದಳು. ಅವಳು ಗಂಧರ್ವ ಕನ್ಯೆಯಾದುದರಿಂದ, ತನ್ನ ವಿದ್ಯಾಬಲದಿಂದ, ಅವಳು ಜೀವಂಧರನ ಅಸ್ತಿತ್ವವನ್ನು ತಿಳಿದಿದ್ದಳು. ಇದನ್ನರಿಯದ ಗಂಧೋತ್ಕಟನ ಮಗ ನಂದಾಢ್ಯನು ಸಿಡಿಮಿಡಿಗೊಂಡು “ಪುರುಷ ಪರವೊರಿಗೆ ಹೋದರೂ ಸತಿಯರು ಅಲಂಕಾರ ಮಾಡಿಕೊಳ್ಳುವದಿಲ್ಲ. ಹೀಗಿರುವಾಗ “ಗತಭರ್ತಾರೆ” ನೀನು ಹೀಗೆ ಶೃಂಗಾರ ಮಾಡಿಕೊಂಡು ಹೀಗೆ ಮೆರೆಯುವುದು ಯೋಗ್ಯವೇ?” ಎಂದು ತನ್ನ ಅತ್ತಿಗೆಯನ್ನು ಕೇಳಿದನು. ಅದಕ್ಕೆ ಗಂಧರ್ವದತ್ತೆ ಜೀವಂಧರನು ಬದುಕಿರುವುದನ್ನು ಹೇಳಿ, ಆತನು ದೇಶಾಂತರ ಸಂಚರಿಸುತ್ತ ಹಲವು ಲಗ್ನಗಳನ್ನು ಮಾಡಿಕೊಂಡು ಸುಖದಿಂದಿರುವನೆಂದು ಹೇಳಿದಳು. ಅಣ್ಣನಿರುವನೆಂಬುದನ್ನು ತಿಳಿದ ನಂದಾಢ್ಯನು ಸಂತೋಷಗೊಂಡು ತನ್ನನ್ನು ಅವನ ಬಳಿ ಕಳುಹಿಸುವಂತೆ ಗಂಧರ್ವದತ್ತೆಗೆ ವಿಜ್ಞಾಪಿಸಿಕೊಂಡನು. ಅದಕ್ಕೆ ಅವಳು ಅವನ ಕಣ್ಣು ಮುಚ್ಚಿ ವಿದ್ಯೆಗಳನ್ನು ನೆನೆಯಲು, ವಿದ್ಯೆಗಳ ಪ್ರಭಾವದಿಂದ ಮರುಕ್ಷಣದಲ್ಲಿ ನಂದಾಢ್ಯನು ಹೇಮಾಭಪುರಿಯಲ್ಲಿದ್ದನು. ಅಣ್ಣ ತಮ್ಮಂದಿರಿಬ್ಬರೂ ಪರಸ್ಪರರನ್ನು ಕಂಡು ಬಿಗಿದಪ್ಪಿಕೊಂಡರು. ಜೀವಂಧರನು ಊರು ಬಿಟ್ಟ ಮೇಲೆ ನಡೆದ ತನ್ನ ಕಥೆಯನ್ನೆಲ್ಲ ಹೇಳಿದನು. ನಂದಾಢ್ಯನು ಅವನ ಹಾಗೂ ಉಳಿದ ಕುಮಾರರ ಸಂಗದಲ್ಲಿ ಸುಖದಿಂದ ಇದ್ದನು.

ನಂದಾಢ್ಯನು ಅಣ್ಣನ ಬಳಿಗೆ ಹೋದ ಸಂಗತಿ ತಿಳಿದ ಉಳಿದ ಐದನೂರು ಜನ ಮಿತ್ರರು ತಮ್ಮನ್ನೂ ಹೇಮಾಭಪುರಕ್ಕೆ ಕಳುಹಿಸಲು ಗಂಧರ್ವದತ್ತೆಗೆ ಬಿನ್ನವಿಸಿ ಕೊಂಡರು. “ಐದು ನೂರು ಜನರನ್ನು ಒಮ್ಮೆಲೆ ದೇಶಾಂತರ ಒಯ್ಯುವುದು ವಿದ್ಯೆಗಳಿಗೆ ಸಾಧ್ಯವಿಲ್ಲ. ಕಾರಣ ನೀವು ವ್ಯಾಪಾರಸ್ಥರಂತೆ ಪ್ರವಾಸ ಕೈಕಂಡು ಹೋಗಿರೆ”ಂದು ಹೇಳಿದ ಗಂಧರ್ವದತ್ತೆ ಹೇಮಾಭಪುರದ ಮಾರ್ಗವನ್ನು ತಿಳಿಸಿಕೊಟ್ಟಳು. ಅದರಂತೆ ಹೊರಟ ಅವರು ಅನೇಕ ದೇಶಗಳನ್ನು ದಾಟಿ ಹೇಮಾಭಪುರಕ್ಕೆ ಬಂದು, ಆ ಊರ ಅರಸನ ಗೋ ಸಮೂಹವನ್ನು ಹಿಡಿದರು. ಗೋಪಾಲಕರಿಂದ ಸಂಗತಿ ತಿಳಿದ ದೃಢಮಿತ್ರನು ಚಿಂತೆಯಲ್ಲಿರುವಾಗ ಗೋವುಗಳ ನ್ನು ಬಿಡಿಸಿ ತರಲು ಜೀವಂಧರನೇ ಹೊರಟನು. ಊರ ಹೊರಗೆ ಬಂದು ನೋಡಿದಾಗ ತನ್ನ ಧ್ವಜವಾದ ಅಶ್ವಧ್ವಜವನ್ನೇ ಕಂಡು, ಅವರು ತನ್ನ ಮಿತ್ರರೆಂದು ತಿಳಿದು, ಅವರನ್ನು ಕರೆತಂದು ಅರಸ ದೃಢಮಿತ್ರನಿಗೆ ಅವರ ಪರಿಚಯಮಾಡಿಕೊಟ್ಟು, ಅವರೊಂದಿಗೆ ಸಂತಸದಿಂದಿದ್ದನು.

ಹೀಗಿರುವಾಗ ಒಂದು ದಿನ ಆ ಮಿತ್ರರು, ತಾವು ಹೇಮಾಭಪುರಕ್ಕೆ ಬರುವಾಗ, ದಾರಿಯಲ್ಲಿ ಹತ್ತಿದ ದಂಡಕಾರಣ್ಯದಲ್ಲಿ ಒಬ್ಬ ತಪಸ್ವಿನಿಯನ್ನು ಕಂಡೆವೆಂತಲೂ, ಕಾಷ್ಠಾಂಗಾರನು ಸತ್ಯಂಧರನನ್ನು ಕೊಂದ ಮೇಲೆ ತನಗೆ ಹುಟ್ಟಿದ ಒಬ್ಬ ಮಗನನ್ನು ಯಾರೋ ಒಬ್ಬರು ಬಂದು ಒಯ್ದರೆಂದೂ, ತಮ್ಮನ್ನು ಕಂಡ ಆಕೆಗೆ ತನ್ನ ಮಗನೇ ಬಂದಂತಾಯಿತೆಂದು ಹೇಳಿ ಬಹಳೇ ದುಃಖಪಟ್ಟಳೆಂದೂ ಹೇಳಿದರು. ಆಕೆಯೇ ತನ್ನ ತಾಯಿಯೆಂದು ಕೂಡಲೇ ಗ್ರಹಿಸಿದ ಜೀವಂಧರನು ಕನಕಮಾಲೆಯನ್ನು ಅವಳ ತಂದೆಯ ಮನೆಯಲ್ಲಿಯೇ ಬಿಟ್ಟು, ಆಕೆಯ ಭೆಟ್ಟಿಗಾಗಿ ಹೊರಟೇ ಬಿಟ್ಟನು. ದಂಡ ಕಾರಣ್ಯಕ್ಕೆ ಬಂದು ತಪಸ್ಸನ್ನು ಮಾಡುತ್ತು ಕಂದಿಹೋಗಿ, ತನ್ನ ಬರವನ್ನೇ ಹಾರಯಿಸುತಿದ್ದ ತಾಯಿಯನ್ನು ಕಂಡು ಅವಳಿಗೆ ನಮಸ್ಕರಿಸಿದನು. ಮಗನನ್ನು ಕಂಡು ಸಂತೋಷದಿಂದ ಆತನನ್ನು ಬಿಗಿದಪ್ಪಿಕೊಂಡ ತಾಯಿಗೆ, ಕೂಡಲೇ ಕಾಷ್ಠಾಂಗಾರನನ್ನು ಕೊಂದು ರಾಜ್ಯವನ್ನು ಪಡೆಯುವುದಾಗಿ ಜೀವಂಧರನು ಹೇಳಿದನು. ಅದಕ್ಕೆ ಅವನ ತಾಯಿಯು “ತನ್ನ ಶಕ್ತಿಯನ್ನರಿತು ವೈರಿಯನ್ನು ಎದುರಿಸಿ ಜಯಿಸಬೇಕು. ಕಾರಣ ಈಗ ನೀನು ನಿನ್ನ ಸೋದರಮಾವನಾದ ಗೋವಿಂದನ ಸಹಾಯವನ್ನು ಪಡೆದು ಮುಂದಿನ ಕೆಲಸ ಮಾಡು” ಎಂದು ಹೇಳಲು ಕೂಡಲೇ ತಾಯಿಯನ್ನು, ಸೋದರಮಾವನಲ್ಲಿಗೆ ಕರೆದೊಯ್ದು, ಆಕೆಯನ್ನು ಅಲ್ಲಿ ಬಿಟ್ಟು, ರಾಜಪುರಿಗೆ ಮಿತ್ರರೊಂದಿಗೆ ಬಂದನು.

ರಾಜಪುರಿಗೆ ಬಂದು ತನ್ನ ವೃತ್ತಾಂತವನೆಲ್ಲ ಗಂಧೋತ್ಕಟನಿಗೆ ತಿಳಿಸಿದನು. ಜೀವಂಧರನು ಮರಳಿ ಬಂದುದಕ್ಕೆ ಗಂಧರ್ವದತ್ತೆ, ಗುಣಮಾಲೆಯರು ಹರ್ಷಗೊಂಡರು. ಹೀಗೆ ಒಂದು ದಿನ ಜೀವಂಧರನು ಊರಲ್ಲಿ ತಿರುಗಾಡುತ್ತ ಸಾಗಿರುವಾಗ ಅದೇ ಊರಿನ ಸಾಗರದತ್ತನೆಂಬ ಶೆಟ್ಟಿಯ ಮಗಳು ವಿಮಲೆ ಎಂಬವಳು ಮೇಲುಪ್ಪ ರಿಗೆಯ ಮೇಲೆ ಚೆಂಡಾಡುತ್ತಿದ್ದಳು. ಚೆಂಡು ಕೈತಪ್ಪಿ ಕೆಳಗೆ ಬಿತ್ತು. ಚೆಂಡು ಎಲ್ಲಿಂದ ಬಂತೆಂದು ಜೀವಂಧರನು ಮೇಲೆ ನೋಡಿದಾಗ ಸುಂದರಳಾದ ವಿಮಲೆಯನ್ನು ಕಂಡನು. ಇಬ್ಬರ ದೃಷ್ಟಿಗಳು ಒಂದಾಗಿ; ಒಬ್ಬರನ್ನೊಬ್ಬರು ಮೆಚ್ಚಿಕೊಂಡರು. ವಿಮಲೆಯ ಸಖಿಯರಿಂದ ಸಂಗತಿಯನ್ನು ತಿಳಿದ ಸಾಗರದತ್ತನು, ಗಂಧೋತ್ಕಟನನ್ನು ಕಂಡು ಜೀವಂಧರನ ಸಂಗಡ ವಿವಾಹವನ್ನು ಸಡಗರದಿಂದ ಮಾಡಿ, ಸಂತಸದಿಂದಿದ್ದನು.

ಒಂದು ದಿನ ನಗರದ ಉದ್ಯಾನದಲ್ಲಿ ಗೆಳೆಯರ ಸಂಗಡ ವಿಹರಿಸುತ್ತಿದ್ದಾಗ ಜೀವಂಧರನು, “ವಿಮಳೆಯಂತಹ ಸುಂದರಿಯೇ ನನ್ನನ್ನು ಮೆಚ್ಚಿ ಲಗ್ನವಾದಳೆಂದ ಮೇಲೆ, ಉಳಿದವರು ನನಗೆ ವಶವಾಗದಿರುವರೇ?” ಎಂದು ನಗೆಯಾಡಿದನು. ಅದಕ್ಕೆ ಒಬ್ಬ ಸುಖನು “ಮರುಳು ಜೀವಂಧರ, ಒಬ್ಬ ಬಡ ವ್ಯಾಪಾರಿಯ ಮಗಳು ನಿನ್ನನ್ನು ಲಗ್ನವಾದಳೆಂದು ಬೇಕಾದವರು ನಿನಗೆ ವಶವಾಗುತ್ತಾರೆಂದು ಜಂಬ ಕೊಚ್ಚಬೇಡ. ಈ ಊರಿನ ಸುರಮಂಜರಿಯು ನಿನ್ನನ್ನು ಮೋಹಿಸಿದರೆ ನೀನು ಹೇಳುವುದನ್ನು ಒಪ್ಪುತ್ತೇನೆ” ಎಂದು ಅಣಕವಾಡಿದನು. ಅದಕ್ಕೆ ಜೀವಂಧರನು ಅದೇನು ಮಹಾಕಾರ್ಯ? ಈಗಲೇ ನೆರವೇರಿಸುವೆನೆಂದು, ಗೆಳೆಯರನ್ನು ಕಾಮದೇವನ ಗುಡಿಯಲ್ಲಿ ನಿಲ್ಲಲ್ಲು ಹೇಳಿ, ತಾನು ಸುರಮಂಜರಿಯ ಮನೆಯತ್ತ ಗಾಳಿವೇಗದಿಂದ ನಡೆದನು. ಪುರುಷರನ್ನು ಆಕೆಯ ಮನೆಯತ್ತ ಬಿಡರೆಂದು ತಿಳಿದ ಜೀವಂಧರನು. ಯಕ್ಷನು ಕೊಟ್ಟ ಕಾಮರೂಪ ವಿದ್ಯೆಯ ಸಹಾಯದಿಂದ ಒಬ್ಬ ಹಣ್ಣು ಹಣ್ಣು ಮುದುಕನಾಗಿ ಆಕೆಯ ಬಾಗಿಲಿಗೆ ಬಂದನು. ಪ್ರತಿಹಾರಿಗಳು ‘ಇಲ್ಲಿಗೇಕೆ ಬಂದೆ’ ಎಂದು ತಡೆಯಲು, “ಕನ್ಯಾ ಭಿಕ್ಷೆಗೆ ಬಂದೆನೆಂದು” ಹೇಳಿದನು. “ಇಂತಹ ವೃದ್ಧಾಪ್ಯದಲ್ಲಿ ಇವನಿಗೆಂತಹ ಕನ್ಯಾ ಭಿಕ್ಷೆಯೇ” ಎಂದು ಹಾಸ್ಯಮಾಡಿ ಅವನನ್ನು ಒಳಗೆ ಕಳುಹಿಸಿದರು. ಒಳಗೆ ಬಂದು ತಲೆ ತಿರುಗಿ ಬಿದ್ದಂತೆ ನಟಿಸುತ್ತ, ಸುರಮಂಜರಿಗೆ, ‘ಕನ್ಯಾ ಭಿಕ್ಷೆ ನೀಡು” ಎಂದು ಮೆಲ್ಲನೆ ನುಡಿದನು. ಅವನ ಸ್ಥಿತಿಯನ್ನು ಕಂಡು ದಯೆಯಿಂದ ಮರುಗಿದ ಸುರಮಂಜರಿ ಅವನಿಗೆ ಸ್ನಾನಾದಿಗಳನ್ನು ಮಾಡಿಸಿ, ಊಟೋಪಚಾರ ಮಾಡಿಸಿದಳು. ಅಷ್ಟರಲ್ಲಿ ಸೂರ್ಯಾಸ್ತವಾಗಿ ಕತ್ತಲಾಯಿತು. ಪೂರ್ವದಿಗಂತದಲ್ಲಿ ಚಂದ್ರೋದಯವಾಯಿತು. ಅಂತಹ ಆಲ್ಹಾದಕರವಾದ ವಾತಾವರಣದಲ್ಲಿ ಜೀವಂಧರನು, ಯಕ್ಷನುಕೊಟ್ಟ, ವಿನುತಗಾನ ವಿದ್ಯೆಯ ಸಹಾಯದಿಂದ ಅಮೋಘವಾದ ಸಂಗೀತವನ್ನು ಹಾಡಲಾರಂಭಿಸಿದನು. ಆ ಸಂಗೀತದಿಂದ ರೋಮಾಂಚನ ಪಡೆದ ಸುರಮಂಜರಿಯು, ಈ ಮೊದಲು ತನ್ನನ್ನು ಆಕರ್ಷಿಸಿದ ಜೀವಂಧರನನ್ನು ನೆನೆದು, ಅವನ ವಿಷಯಕ್ಕೆ ಈ ವೃದ್ಧನಿಗೇನಾದರೂ ಗೊತ್ತಿರಬಹುದೆ ಎಂದು ಒಂದು ಕೇಳಿದಳು. ಅದಕ್ಕೆ ಕಪಟವೇಷದಲ್ಲಿದ್ದ ಜೀವಂಧರನು, “ಜೀವಂಧರನೇ ನಿನಗೆ ಪತಿಯಾಗುವನು, ನಾಳೆ ನೀನು ಊರ ಹೊರಗಿನ ಕಾಮದೇವನ ಗುಡಿಗೆ ಬಂದರೆ ಆತನ ದರ್ಶನವಾಗುವದೆಂದು” ಹೇಳಿದನು ಆ ಮಾತಿನಿಂದ ಹರ್ಷಗೊಂಡ ಸುರಮಂಜರಿ, ಬೆಳಗಗುತ್ತಲೇ ವೃದ್ಧನನ್ನೊಡಗೊಂಡು, ಕಾಮದೇವ ಗುಡಿಗೆ ಬಂದಳು. ಕಾಮದೇವನನ್ನು ಆಕೆ ಅಷ್ಟವಿಧದರ್ಚನೆಗಳಿಂದ ಪೂಜಿಸುತ್ತಿರುವಾಗ, ಜೀವಂಧರನ ಕಪಟವೇಷ ಮಾಯವಾಯಿತು. ಕಣ್ತುಂಬ ತನ್ನನ್ನೇ  ನೋಡುತ್ತಿರುವ ಸುರಮಂಜರಿಯನ್ನು ತನ್ನನ್ನು ಅಣಕು ಮಾಡಿದ ಸಖನಿಗೆ ತೋರಿಸಿ, ಆಕೆ ಒಲಿದು ಬಂದ ವಿಷಯವನ್ನು ತಿಳಿಸಿದನು. ಮಗಳು ಜೀವಂಧರನಿಗೆ ಒಲಿದ ಸಂಗತಿ ತಿಳಿದ ಸುರಮಂಜರಿಯ ತಂದೆ, ಅವರಿಬ್ಬರ ಮದುವೆಯನ್ನು ನೆರವೇರಿಸಿದನು. ಸುರಮಂಜರಿಯ ಸಂಗದಲ್ಲಿ ಜೀವಂಧರನು ಸುಖದಿಂದ ಇದ್ದನು.

ಕಾಷ್ಠಾಂಗಾರನನ್ನು ಕಾಣಲು ಅಖಿಳ ರಾಜರೆಲ್ಲ ಬಂದಿದ್ದರಾದರೂ ಗೋವಿಂದ ರಾಜನು ಮಾತ್ರ ಬಂದಿರಲಿಲ್ಲ. ವರ್ಗದಿಂದ ಬಾರದ ಆತನನ್ನು ತನ್ನಲ್ಲಿ ಕರತರ ಬೇಕೆಂದು ಕಾಷ್ಠಾಂಗಾರನು ಆಜ್ಞೆ ಕಳುಹಿಸಿದನು. ಅದನ್ನು ಕಂಡ ಗೋವಿಂದನು, ಕಾಷ್ಠಾಂಗಾರನನ್ನು ನಾಶಮಾಡಿ, ತನ್ನ ಮಗಳನ್ನು ಜೀವಂಧರನಿಗೆ ಕೊಟ್ಟು ಲಗ್ನ ಮಾಡುವ ಯೋಜನೆಯೊಂದಿಗೆ ರಾಜಪುರಿಗೆ ಬಂದನು. ಅಲ್ಲಿ ಕಾಷ್ಠಾಂಗಾರನನ್ನು ಕಂಡು ತನ್ನ ಮಗಳ ಸ್ವಯಂವರವನ್ನು ಹೂಡಿದನು. ರಾಜಕುಮಾರಿ ಲಕ್ಷ್ಮಿಯನ್ನು ಪಡೆಯಲು “ಭೂಮಿಯೇ ಬೆಸಲಾದಂತೆ” ರಾಜಕುಮಾರರು ಬಂದರು. ಆಕಾಶದಲ್ಲಿ ಒಂದು ಕೇಕಿಯಂತ್ರವನ್ನು ಕಟ್ಟಿ, ಆ ಯಂತ್ರವನ್ನು ಭೇದಿಸಿದವನಿಗೆ ಲಕ್ಷ್ಮಿಯನ್ನು ಧಾರೆ ಎರೆದುಕೊಡುವುದಾಗಿ ಗೋವಿಂದರಾಜನು ಸಾರಿದನು. ರತಿಯಂತಹ ಲಕ್ಷ್ಮಿಯನ್ನು ಪಡೆಯಬೇಕೆಂಬ ಹುಚ್ಚು ಹುಮ್ಮಸ್ಸಿನಿಂದ ಅನೇಕ ರಾಜರು ಬಂದು ಬಿಲ್ಲಿಗೆ ಕೈ ಹಾಕಿದರು. ಆದರೆ ಯಾರಿಂದಲೂ ಸಾಧ್ಯವಾಗಲಿಲ್ಲ. ಕೊನೆಗೆ ಕಾಷ್ಠಾಂಗಾರನೇ ಬಿಲ್ಲನ್ನು ಎತ್ತಲು ಬಂದು, ನೆಲಕ್ಕೆ, ಬಿದ್ದನು. ಆಗ ಗೋವಿಂದ ರಾಜನು ಜೀವಂಧರನಿಗೆ ಕಣ್ಸನ್ನೆ ಮಾಡಲು ಆತನು ಎದ್ದು ಬಂದು, ಲೀಲಾಜಾಲವಾಗಿ ಆ ಕೇಕಿಯಂತ್ರವನ್ನು ಬೇಧಿಸಿದನು. ಸತ್ತನೆಂದು ತಿಳಿದ ಜೀವಂಧರನು ಪುನಃ ಬಂದದ್ದನ್ನು ಕಂಡು ಕೋಪಗೊಂಡ ಕಾಷ್ಠಾಂಗಾರನು, ಲಕ್ಷ್ಮಿಯನ್ನು ಗೆದ್ದದ್ದಕ್ಕಂತೂ, ಬಹಳೇ ರೊಚ್ಚಿಗೆದ್ದು ಅವನನ್ನು ಕೊಂದು, ಲಕ್ಷ್ಮಿಯನ್ನು ಪಡೆಯುವಂತೆ, ಅನ್ಯರಾಜರನ್ನು ಪ್ರೋತ್ಸಾಹಿಸಿದನು. ಆದರೆ ಗೋವಿಂದನು, ಜೀವಂಧರನು ಸತ್ಯಂಧರ ರಾಜನ ಮಗನೆಂದೂ, ಆ ದೇಶದ ರಾಜನೆಂದೂ ಎಲ್ಲರಿಗೆ ತಿಳಿಸಿ ಹೇಳಿದನು, ಅದನ್ನು ಕೇಳಿದ ರಾಜರು ಅದನ್ನು ನಂಬಿದರು ಮತ್ತು ಈ ಹಿಂದೆ ತಾವು ಜೀವಂಧರನಿಂದ ಸೋತುದನ್ನು ನೆನೆದು, ಹರದ ಮಗನಲ್ಲ, ಕ್ಷತ್ರಿಯನೇ ಎಂದು ಹೇಳಿ ಕಾಷ್ಠಾಂಗಾರನನ್ನು ಬಿಟ್ಟು ಜೀವಂಧರನ ಪಕ್ಷಕ್ಕೆ ಸೇರಿದರು. ಜೀವಂಧರನಿಗೂ, ಕಾಷ್ಠಾಂಗಾರನಿಗೂ ಘೋರವಾದ ಯುದ್ಧ ನಡೆದು, ಜೀವಂಧರನು ವಿಜಯಶ್ರೀಯನ್ನು ಪಡೆದನು.

ವಿಜಯಶ್ರೀಯನ್ನು ಪಡೆದ ಜೀವಂಧರನು ರಾಜಕುಮಾರಿ. ಲಕ್ಷ್ಮಿಯನ್ನು ಸಂಭ್ರಮದಿಂದ ಲಗ್ನವಾದನು. ಅನ್ಯದೇಶಗಳ ಅರಸರನ್ನು ಗೌರವದಿಂದ ಅವರವರ ದೇಶಗಳಿಗೆ ಕಳುಹಿಸಿ, ತನ್ನ ತಾಯಿಯನ್ನೂ, ಈ ಹಿಂದೆ ಸಂಚಾರದಲ್ಲಿ ಲಗ್ನವಾದ ಪದ್ಮೆ, ಕನಕಮಾಲೆ, ಕ್ಷೇಮಲಕ್ಷ್ಮಿಯರನ್ನೂ ಕರೆಯಿಸಿಕೊಂಡನು. ಕಾಷ್ಠಾಂಗಾರನ ಆಳಿಕೆಯಲ್ಲಿದ್ದ ಅವನ ಅನುಚರರನ್ನು ತಳ್ಳಿಹಾಕಿ, ಮೊದಲಿದ್ದ ಮಂತ್ರಿ ಮೊದಲಾದವರಿಗೆ ಅವರವರ ಪದವಿಗಳನ್ನು ಕೊಟ್ಟು ಮನ್ನಿಸಿ, ಗಂಧರ್ವದತ್ತೆಯನ್ನು ಪಟ್ಟಮಹಿಷಿಯನ್ನಾಗಿಟ್ಟುಕೊಂಡು, ಪಟ್ಟಗಟ್ಟಿಸಿಕೊಂಡು ಸುಖದಿಂದ ರಾಜ್ಯವನ್ನು ಪರಿಪಾಲಿಸುತ್ತಿದ್ದನು.

ಕಾಲಕ್ರಮದಲ್ಲಿ, ಜೀವಂಧರನು ತನ್ನ ಎಂಟು ಜನ ಹೆಂಡಂದಿರಾದ ಗಂಧರ್ವ ದತ್ತೆ ಗುಣಮಾಲೆ, ಪದ್ಮೆ, ಕ್ಷೇಮಲಕ್ಷ್ಮಿ, ಕನಕಮಾಲೆ, ವಿಮಲೆ, ಸುರಮಂಜರಿ ಮತ್ತು ಲಕ್ಷ್ಮಿ  – ಇವರಿಂದ ಒಬ್ಬೊಬ್ಬ ಮಗನನ್ನು ಪಡೆದು, ಅನೇಕ ವರ್ಷಗಳ ಕಾಲ, ಇಂದ್ರನಂತೆ ವೈಭವದಿಂದ ಕಾಲಕಳೆದನು. ಒಂದು ದಿನ ವನಪಾಲಕನು ಬಂದು, ನಂದನವನಕ್ಕೆ ಬಂದು ಅದರ ವೈಭವವನ್ನು ಈಕ್ಷಿಸಿಸಬೇಕೆಂದು ಬೇಡಿಕೊಂಡನು. ಆಗ ಜೀವಂಧರನು ತನ್ನ ಸತಿಯರು ಸಹಿತ ಆ ವನಕ್ಕೆ ಹೋಗಿ ಎರಡು ತಿಂಗಳು ಕಳೆದು ಬಂದನು. ಹೀಗೆ ಜೀವಂಧರನು ರಾಜನಾಗಿ ಸುಖದಿಂದ ಕಾಲಕಳೆಯುವುದನ್ನು ಕಂಡ ತಾಯಿ ವಿಜಯಾವತಿ, ಆನಂದದಿಂದ ತಾನೂ ಕೆಲವು ಕಾಲ ಕಳೆದು, ನಂತರ ತಪಸ್ಸಿಗಾಗಿ ಕಾಡಿಗೆ ಹೊರಟು ಹೋದಳು. ತಾಯಿ ಹೋದ ಚಿಂತೆ ಕೆಲವು ದಿವಸ ಇದ್ದರೂ, ಅದನ್ನು ಮರೆತು, ರಾಜ್ಯವನ್ನು ಪರಿಪಾಲಿಸುತ್ತಿದ್ದ ಜೀವಂಧರನು, ಒಂದು ದಿನ ಚೈತ್ಯಾಲಯಕ್ಕೆ ಹೋಗಿ ಅರ್ಹಂತನ ಪೂಜೆ ಮಾಡಿ ಅರಮನೆಗೆ ಬಂದು ಆ ರಾತ್ರಿ ತನ್ನ ಸೇವಕರು, ಸಖರು, ಮಂತ್ರಿಸುತರು, ನಟರು, ವಿಟರು ಮೊದಲಾದವರ ಸಂಗಡ ಪಟ್ಟಣದಲ್ಲೆಲ್ಲ ಸುತ್ತಾಡಿ ರಾತ್ರೀ ವಿಹಾರದಲ್ಲಿ ನಡೆದ ಅನೇಕ ರೀತಿಯ ವಿನೋದಗಳನ್ನು ನೋಡಿ ಮನೆಗೆ ಮರಳಿದನು.

ಹೀಗಿರುವಾಗ, ಒಂದು ದಿನ ಜೀವಂಧರನು ತನ್ನ ಅರಮನೆಯ ‘ದವಳಾರ’ ದಲ್ಲಿ ತನ್ನರಸಿಯರು ಸಹಿತ ವಿಹರಿಸುತ್ತಿದ್ದನು. ಎದುರಿಗಿದ್ದ ನಂದನವನದಲ್ಲಿ ಕಪಿಗಳ ಹಿಂಡು ಆಡುತ್ತಲಿದ್ದಿತು. ವಿನೋದದಿಂದ ಜೀವಂಧರನು ಅವುಗಳ ಆಟವನ್ನು ನೋಡುತ್ತಿದ್ದನು. ಅಷ್ಟರಲ್ಲಿ ಒಂದು ಮಂಗವು ಬಂದು ಇನ್ನೊಂದು ಮಂಗನೊಡನೆ ನೆರೆಯಲು, ಅದನ್ನು ಕಂಡ ಆ ಹೆಣ್ಣು ಕಪಿಯ ಗಂಡ, ಕೋಪದಿಂದ ಛಂಗನೆ ನೆಗೆದು ಬಂದು ಮತ್ತೊಂದು ಗಂಡು ಕಪಿಯನ್ನು ಹೊಡೆದು ಕೊಂದಿತು. ಅದೇ ಕಾರಣವಾಗಿ ಆ ಕಪಿ ಹಿಂಡು ಇಬ್ಭಾಗವಾಗಿ, ಪರಸ್ಪರ ಹೊಡೆದಾಡಿ ಎಲ್ಲವೂ ಸತ್ತುಬಿದ್ದವು. ಕ್ಷಣಕಾಲದ ಹಿಂದೆ ಸಂತೋಷದಿಂದ ಆಡಿಕೊಂಡಿದ್ದ ಕಪಿಗಳು, ಈಗ ಸತ್ತು ಬಿದ್ದುದನ್ನು ಕಂಡು ಜೀವಂಧರನು “ಈ ನರರ ಸಂಸಾರವೂ ಸಹ, ಈ ಮಂಗಗಳಂತೆ, ವಿಯೋಗ, ಅಸ್ಥಿರ”ವೆಂದು ವಿಚಾರಿಸಿ, ವೈರಾಗ್ಯವನ್ನು ಹೊಂದಿ, ತಪ್ಪಕ್ಕೆ ಹೋಗಲು ಸನ್ನದ್ಧನಾದನು. ಕೂಡಲೇ ರಾಜ್ಯಭಾರವನ್ನು ತನ್ನ  ಹಿರಿಯ ಮಗನಾದ ವಸುಂಧರನಿಗೆ ಒಪ್ಪಿಸಲು ಅಣಿಯಾದನು. ಆಗ ಆ ಕುಮಾರನು, “ಅಷ್ಟು ದೊಡ್ಡ ರಾಜ್ಯದ ಭಾರವನ್ನು ತಾನು ಹೊರಲು ಸಾಧ್ಯವೇ? ಆನೆಹೊತ್ತ ಭಾರವನ್ನು ಆಡು ಹೊರಲು ಸಾಧ್ಯವೇ?” ಎನ್ನಲು, ಜೀವಂಧರನು, ಅವನನ್ನು ನಯನೀತಿಗಳಿಂದ ಒಪ್ಪಿಸಿ, ಅವನಿಗೆ ಪಟ್ಟವನ್ನು ಕಟ್ಟಿ, ಧರ್ಮದಿಂದ ರಾಜ್ಯವಾಳುವಂತೆ ಉಪದೇಶಿಸಿ, ತಾನು ಮುನಿಗಳ ಹತ್ತಿರ ದೀಕ್ಷೆ ಪಡೆದು, ಮಹಾವೀರ ಸ್ವಾಮಿಗಳ ಸಮವಸರಣದಲ್ಲಿಯೇ, ನಿರಶನ ವ್ರತದಿಂದ ಉಗ್ರೋಗ್ರ ತಪಸ್ಸನ್ನಾಚರಿಸಿ ಮೋಕ್ಷವನ್ನು ಪಡೆದನು.

ಮೋಕ್ಷ ಪಡೆದು ನಿಜವಾದ ಸರ್ವೇಶರನೇ ತಾನಾದ ಜೀವಂಧರನ ಚರಿತ್ರೆಯನ್ನು ಗೌತಮ ಗಣಧರರಿಂದ ಕೇಳಿದ ಶ್ರೇಣಿಕ ಮಹಾರಾಜನು ವಿಸ್ಮಯಪಟ್ಟು ಆನಂದ ಸಾಗರದಲ್ಲಿ ಓಲಾಡಿದನು. ನಂತರ ಆ ಮುನಿಗಳಿಗೆಲ್ಲ ವಂದಿಸಿ, ಬೀಳ್ಕೊಟ್ಟು ತನ್ನ ಪಟ್ಟಣಕ್ಕೆ ಮರಳಿದ ಶ್ರೇಣಿಕ ಮಹಾರಾಜನು, ಜೀವಂಧರನ ಕಥೆಯನ್ನು ಆಗಾಗ ನೆನೆನೆನೆದು ಪುಳಕಿತನಾಗುತ್ತ, ಸುಖದಿಂದ ರಾಜ್ಯವನ್ನು ಆಳುತ್ತಿದ್ದನು.

ಜೀವಂಧರಚರಿತೆಯನ್ನು ಓದಿದವರಿಗೆ, ಕೇಳಿದವರಿಗೆ ಒಂದು ರೀತಿಯ ಆಶ್ಚರ್ಯವೇ ಆಗುತ್ತದೆ. ಜೀವಂಧರನ ಜನನ, ಆತನು ಬೆಳೆದ ರೀತಿ, ಸಂಪಾದಿಸಿದ ಶ್ರೇಯಸ್ಸು  – ಎಲ್ಲವೂ ಒಂದು ಆತ್ಮಕ್ಕೆ ಅಂಟಿಕೊಂಡ ಕರ್ಮದ ಕೈವಾಡ ಹೇಗೆ ತನ್ನ ಪ್ರಭಾವವನ್ನು ಬೀರುತ್ತದೆಂಬುದನ್ನು ತೋರಿಸುತ್ತದೆ. ತೀರ್ಥಂಕರರು, ಚಕ್ರವರ್ತಿಗಳು, ಕಾಮದೇವರು, ಬಲದೇವರು, ವಸುದೇವರು, ಪ್ರತಿವಾಸುದೇವರು ಮೊದಲಾದವರ ಕಥಾ ನಿರೂಪಣೆಯಲ್ಲಿ ಕರ್ಮದ ಬಂಧನ ಹಾಗೂ ಅದರ ಫಲಾಫಲಗಳನ್ನು ವಿವರಿಸಿದ್ದರೂ ಸಹ, ಸಾಮಾನ್ಯ ಮಾನವರಲ್ಲಿಯೂ ಪುಣ್ಯಜೀವಿಗಳಿದ್ದರೂ ಅವರು ಮಾಡಿದ ಶುಭಾಶುಭ ಕರ್ಮದ ಫಲವನ್ನುಂಡು, ಅವರು ಕರ್ಮ ನಿರ್ಜರೆ ಮಾಡಿಕೊಂಡು ಮೋಕ್ಷಕ್ಕೆ ಹೋದರು ಎಂಬುದನ್ನು ನಿರೂಪಿಸಲು, ಜೈನಾಚಾರ್ಯರು ಅನೇಕ ಕಥೆಗಳನ್ನು ಬರೆದುದುಂಟು. ಯಶೋಧರ, ಜೀವಂಧರ, ನಾಗಕುಮಾರ, ಧನ್ಯಕುಮಾರ, ಜಿನದತ್ತ ಮೊದಲಾದವರನ್ನು ಕುರಿತು ಬರೆದ ಕಥೆಗಳನ್ನು ಇಲ್ಲಿ ನೆನೆಪಿಗೆ ತಂದುಕೊಳ್ಳಬಹುದು. ಯಶೋಧರ ಚರಿತೆಯಂತೆ ಕರ್ಮದ ಕೈವಾಡವನ್ನು ತೋರಿಸುವ ಜೀವಂಧರ ಚರಿತೆ, ಬಹುಜನ ಸಮಾಜಕ್ಕೆ ಮೆಚ್ಚಿಗೆಯಾದಂತೆ ಕಂಡು ಬರುತ್ತದೆ. ಅಂತಲೆ ಅದು ಬಹು ಪ್ರಾಚೀನ ಕಾಲದಿಂದಲೂ, ಭಾರತದಾದ್ಯಂತ, ಬೇರೆ ಬೇರೆ ಭಾಷೆಗಳಲ್ಲಿ ಪ್ರಚಾರದಲ್ಲಿ ಬಂದಿದೆ.

ಈಗ ದೊರೆತಿರುವ ಜೀವಂಧರನ ಚರಿತೆಯನ್ನೊಳಗೊಂಡ ಅತೀ ಪ್ರಾಚೀನ ಗ್ರಂಥವೆಂದರೆ ಕ್ರಿ.ಶ. ೮೯೭ ರಲ್ಲಿ ಬಾಳಿದ ಗುಣಭದ್ರಾಚಾರ್ಯರ ‘ಉತ್ತರ ಪುರಾಣ’ ವಾಗಿದೆ. ಮಹಾವೀರ ಸ್ವಾಮಿಯ ಕಥೆಯಲ್ಲಿ ಅಡಕವಾಗಿರುವ ಜೀವಂಧರ ಚರಿತ್ರೆಯು ಉತ್ತರ ಪುರಾಣದ ೭೫ನೆಯ ಪರ್ವದ ೭೩೨ – ೧೨೪೦ ಈ ಶ್ಲೋಕಗಳಲ್ಲಿ ನಿರೂಪಿತವಾಗಿದೆ. ಇದಕ್ಕೂ ಪೂರ್ವದಲ್ಲಿ ಲಿಖಿತವಾದ ಜೀವಂಧರನ ಕಥೆ ಸಿಕ್ಕುತ್ತಿಲ್ಲವಾದರೂ, ಈ ಕಥೆಯ ಬೇರುಗಳು ಗುಣಾಢ್ಯನ ಬೃಹತ್ಕಥೆಯಲ್ಲಿರಬಹುದೆಂದೂ, ಪೈಶಾಚಿ ಭಾಷೆಯಲ್ಲಿದ್ದ ಗ್ರಂಥವನ್ನು ಗುಣಭದ್ರಾಚಾರ್ಯರು ನೋಡಿರುವ ಶಕ್ಯತೆ ಇದೆಯೆಂದೂ ಡಾ.ಎ.ಎನ್. ಉಪಾಧ್ಯೆ ಅವರು ಹರಿಚಂದ್ರನ ಜೀವಂಧರ ಚಂಪೂ ಗ್ರಂಥಕ್ಕೆ ಬರೆದ ಮುನ್ನುಡಿಯಲ್ಲಿ ಸೂಚಿಸಿದ್ದಾರೆ.

[1]

ಗ್ರಹಸ್ಥಾಶ್ರಮದಲ್ಲಿದ್ದುಕೊಂಡು, ತನ್ನ ಶುಭಾಶುಭ ಕರ್ಮದ ಫಲಾನುಸಾರವಾಗಿ ಕಷ್ಟವನ್ನೂ, ಸುಖವನ್ನೂ ಅನುಭವಿಸಿ, ಕೊನೆಗೆ ಮೋಕ್ಷಕ್ಕೆ ಹೋದ ಜೀವಂಧರನ ಕಥೆಯು ಸಾಮಾನ್ಯರಿಗೆ ಬಹು ಮೆಚ್ಚಿಗೆಯಾಯಿತೆಂದು ಕಾಣುತ್ತದೆ. ಅಂತಲೆ ಅದು ಸಂಸ್ಕೃತದಿಂದ ಪ್ರಾಕೃತ ಭಾಷೆಗೆ ಬಂದು, ಅಲ್ಲಿಂದ ಭಾರತದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿಯೂ ಮೂಡಿ ನಿಂತಿದೆ.

ಜೀವಂಧರನ ಕಥೆಯನ್ನೊಳಗೊಂಡ, ಈ ವರೆಗೆ ದೊರೆತ ಗ್ರಂಥಗಳು ಕೆಳಗಿ ನಂತಿವೆ: –

(೧) ಜೀವಂಧರನ ಚರಿತೆ : ಮೇಲೆ ಉಲ್ಲೇಖಿತವಾದ ಗುಣಭಧ್ರಾಚಾರ್ಯರ ಉತ್ತರ ಪುರಾಣದಲ್ಲಿ ಬಂದಿರುವ ಕಥೆ. ಇದು ಸಂಸ್ಕೃತದಲ್ಲಿದೆ.

(೨) ಜೀವಂಧರ ಚರಿತೆ : ಕ್ರಿ. ಶ. ೯೬೫ ರಲ್ಲಿ ಪುಷ್ಪದಂತನಿಂದ ಅಪಭ್ರಂಶದಲ್ಲಿ ರಚಿತವಾದ ಮಹಾಪುರಾಣದಲ್ಲಿ ಬಂದಿರುವ ಜೀವಂಧರನ ಚರಿತ್ರೆ.

(೩) ಗದ್ಯ ಚಿಂತಾಮಣಿ : ಇದು ಅಲಂಕಾರಯುಕ್ತ ಸಂಸ್ಕೃತದಲ್ಲಿ ಒಡೆಯದೇವ ವಾದೀಭಸಿಂಹನಿಂದ ರಚಿತವಾದ ಗದ್ಯಗ್ರಂಥ (೧೧ನೆಯ ಶತಮಾನ).

(೪) ಕ್ಷತ್ರ ಚೂಡಾಮಣಿ : ಇದೂ ಸಹ ವಾದೀಭಸಿಂಹನಿಂದ ಸಂಸ್ಕೃತದಲ್ಲಿ ಅನುಷ್ಟುಬ್ ಪದ್ಯಗಳಲ್ಲಿ ರಚಿತವಾದ ಗ್ರಂಥ. (೧೧ನೆಯ ಶತಮಾನ).

(೫) ಜೀವಂಧರ ಚಂಪೂ : ಇದು ಚಂಪೂರೂಪದಲ್ಲಿ ಬರೆದ ಸಂಸ್ಕೃತ ಗ್ರಂಥ, ಇದನ್ನು ಹರಿಚಂದ್ರ ಎಂಬ ಮಹಾಕವಿ ರಚಿಸಿದ್ದಾನೆ. (೧೧ನೆಯ ಶತಮಾನ).

(೬) ಜೀವಂಧರ ಚರಿತ್ರ : ಶುಭಚಂದ್ರ ಎಂಬ ಕವಿಯಿಂದ ಸಂಸ್ಕೃತದಲ್ಲಿ ರಚಿತವಾದ ಗ್ರಂಥ.

(೭) ಜೀವಕ ಚಿಂತಾಮಣಿ : ತಮಿಳು ಸಾಹಿತ್ಯದ ಐದು ಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿತವಾದ ಈ ಗ್ರಂಥವು ತಮಿಳು ಭಾಷೆಯಲ್ಲಿ ತಿರುತಕ್ಕ ದೇವರ್ ಎಂಬವನಿಂದ ರಚಿತವಾದ ಗ್ರಂಥ. ಇದಕ್ಕೆ ನಚ್ಚಿನಾರ್ ಕಿನಿಯಾರ್ ಎಂಬವನಿಂದ ಉತ್ತಮ ಟೀಕೆಯೂ ಇದೆ. (೧೦ – ೧೧ನೆಯ ಶತಮಾನ)

(೮) ಜೀವಂಧರ ಚರಿತೆ : ಬಹುಶಃ ಅಪಭ್ರಂಶದಲ್ಲಿರುವ ಜೀವಂಧರ ಕಥೆಯನ್ನೊಳಗೊಂಡಿರುವ ಗ್ರಂಥ. ಇದನ್ನು ರಯಿಧು ಎಂಬ ಕವಿ ಕ್ರಿ.ಶ. ೧೪೩೯ ರ ಸುಮಾರಿಗೆ ಬರೆದಿದ್ದಾನೆ.

(೯) ಜೀವಂಧರ ಚರಿತೆ : ಭಾಸ್ಕರ ಕವಿಯಿಂದ ಕನ್ನಡದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಪ್ರಸ್ತುತ ಗ್ರಂಥ.

(೧೦) ಜೀವಂಧರ ಸಾಂಗತ್ಯ : ಕನ್ನಡದಲ್ಲಿ ಕವಿ ತೆರಕಣಾಂಬಿ ಬೊಮ್ಮರಸನಿಂದ ಸಾಂಗತ್ಯದಲ್ಲಿ ರಚಿತವಾದ ಗ್ರಂಥ. (ಸು. ಕ್ರಿ. ಶ. ೧೪೮೫, ಭಾಸ್ಕರ ಕವಿಯಿಂದ ಈ ಕವಿ ಪ್ರಭಾವಿತನಾಗಿರಬಹುದೆಂದು ಅನ್ನಿಸುತ್ತದೆ. ಆದರೂ ಆತನಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿವೆ.)

(೧೧) ಜೀವಂಧರ ಷಟ್ಪದಿ : ಕೋಟೇಶ್ವರನೆಂಬ ಕವಿಯಿಂದ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಕನ್ನಡ ಗ್ರಂಥ. ಇದು ಅಪೂರ್ಣವಿದೆ. (ಸು. ಕ್ರಿ.ಶ. ೧೫೦೦).

(೧೨) ಜೀವಂಧರ ಚರಿತೆ : ಬ್ರಹ್ಮಕವಿ ಎಂಬವನಿಂದ ಸಾಂಗತ್ಯದಲ್ಲಿ ರಚಿತವಾದ ಕನ್ನಡ ಗ್ರಂಥ. ಇದರ ವಿವರ ತಿಳಿಯುವದಿಲ್ಲ.

(೧೩) ಜೀವಂಧರ ರಾಸ : ಬ್ರಹ್ಮಜಿನದಾಸ ಎಂಬ ಕವಿಯಿಂದ ಗುಜರಾತಿಯಲ್ಲಿ ರಚಿತವಾದ ಗ್ರಂಥ (೧೫ನೆಯ ಶತಮಾನ)

(೧೪) ಜೀವಂಧರ ಪುರಾಣ : ಜಿನಸಾಗರ ಎಂಬವರಿಂದ ಮರಾಠಿಯಲ್ಲಿ ರಚಿತವಾದ ಗ್ರಂಥ. (ಗುಜರಾತಿ ಗ್ರಂಥದ ಆಧಾರದ ಮೇಲೆ ರಚಿತವಾದ ಈ ಗ್ರಂಥ ೧೮ನೇ ಶತಮಾನದ್ದು.)

(೧೫) ‘ಜೀವಂಧರ ನಾಟಕ’ ಎನ್ನುವ ಗ್ರಂಥವೂ ಇದೆಯೆಂದು ಪ್ರತೀತಿ. ಆದರೆ ಗ್ರಂಥ ಸಿಕ್ಕಿಲ್ಲ.[2]

(೧೬) ಜೀವಂಧರ ಚರಿತೆ : ಕೂಡಲಗಿರಿಯಾಚಾರ್ಯ ಎಂಬ ಕವಿಯಿಂದ ಕನ್ನಡದಲ್ಲಿ ರಚಿತವಾದ ಗ್ರಂಥ. (೧೯ನೆಯ ಶತಮಾನ).[3]

ಮೇಲಿನ ಗ್ರಂಥಗಳಲ್ಲಿ ಕನ್ನಡ ಗ್ರಂಥಗಳೇ ಐದು ಇವೆಯೆಂಬುದನ್ನು ಲಕ್ಷಿಸಿದರೆ, ಕನ್ನಡ ನಾಡಿನಲ್ಲಿ ಜೀವಂಧರನ ಚರಿತ್ರೆಯು ಎಷ್ಟು ಜನಪ್ರಿಯವಾಗಿರಬೇಕೆಂಬುದರ ಕಲ್ಪನೆ ಬರುವಂತಿದೆ. ಇಂತಹ ಒಂದು ಪುಣ್ಯ ಚರಿತ್ರೆಯನ್ನು ಕನ್ನಡ ಜನತೆಗೆ ಮೊಟ್ಟ ಮೊದಲಿಗೆ ಒದಗಿಸಿದ ಶ್ರೇಯಸ್ಸು ಕವಿ ಭಾಸ್ಕರನಿಗೆ ಸಲ್ಲುತ್ತದೆ.

[1] ಜೀವಂಧರ ಚಂಪೂ, ಹರಿಚಂದ್ರ, ಭಾ. ಜ್ಞಾ. ಪೀಠ, ೧೯೫೮. ಮುನ್ನುಡಿ ಪುಟ ೧೮.

[2] ೧-೧೫ ಈ ವಿಷಯವನ್ನು ಜೀವಂಧರ ಚಂಪೂ ಗ್ರಂಥಕ್ಕೆ ಬರೆದ ಡಾ. ಎ.ಎನ್. ಉಪಾಧ್ಯೆ ಅವರ ಮುನ್ನುಡಿಯಿಂದ ಸಂಗ್ರಹಿಸಲಾಗಿದೆ.

[3] ಕ. ಕ. ಚ. ಭಾಗ ೩, ಪುಟ ೨೨೪.