ಗುರುಕಟಿ ಸ್ತನ ಸೋರ್ಮುಡಿಯ ಘನ
ತರದ ಭ

[1]ರಕೆ ಮೃದೂರು ಸೆಳೆನಡು
ಕೊರಲು ಮುಱಿಯದೆ ಮಾಣದಿರದೆಂದಳುಕಿ ಮಂಗಿಸುತ
ವರವದನ ಕಿಱುಬೆಮರಿದುದು ತನು
ಪರಿಮಳಕೆ ಕವಿವಗಳಿಗೆ ಹುಬ್ಬಲಿ
ಕೆರಳುತತಿ ನಟನೆಯಲಿ ನಡೆತರುತಿರ್ದಳೊಲವಿನಲಿ    ೬೧

ವರಕಟಾಕ್ಷಪ್ರಭೆಗಳನು ವಿ
ಸ್ತರದಿ ಪಸರಿಸುತಂಗವಟ್ಟದಿ
ಪರಿಮಳವ ಬೀಱುತ್ತ ಸೋ[2]ಲವ ವಿಟರಿಗೊಂದಿಸುತ
ಸ್ವರದೆ ಪಿಕವಣಕಿಸುತ ಸಡಿಲಿದ
ಭರದ ವೇಣಿಯ ವಾಮಹಸ್ತದೊ
ಳುರುತರದೊಳೊಂದಿಸುತ ಪದ್ಮಿನಿ ಬಂದಳೊಲವಿನಲಿ ೬೨

ಅರಸ ಕೇಳಿಂತವನಿಪಾಲರ
ಹೊರಗೆ ಸತಿ ಬಂದಬಲೆಯರ ಮೇ
ಲೊಱಗಿರಲು ಕೇಳಬಲೆ ಭೂಪರ ಹೆಸರುಗೊಂಡೊಲಿದು
ಅಱುಹುವೆವು ನಿನ್ನಿಷ್ಟ[3]ದಾತನ
ವರಿಸೆನುತ ಕರವೆತ್ತಿ ಕಕ್ಷಾಂ
ತರದ ಹೊಗರದು[4]ಗಲ್ಕೆ ಸತಿ[5]ಯರು ತೋಱಿದರು ಸಖಿ[6]ಗೆ         ೬೩

ನೂತನೋತ್ಪಲನೇತ್ರೆ ನೋಡಿ
ನ್ನೀತ ಕೇರಳನೀತ ಪಾಂಡಿಯ
ನೀತ ಸಿಂಗಳನೀತ ಬರ್ಬರನೀತ ಹಮ್ಮೀರ
ಈತ ಕೊಂಕಣನೀತ ಮಾಗಧ
ನೀತ ಕೋ[7]ಶನೀತ ನೈಷಧ
ನೀತನೆಂ[8]ದಬ್ಜಾ[9]ಕ್ಷಿಯರು ತೋಱಿದರು ಬೆರಲಿನಲಿ       ೬೪

ಪಾಟಲಾಧರೆ ನೋಡಿವನು ಕ
ರ್ಣಾಟನಿವ ಸೌರಾಷ್ಟ್ರನಿವ [10]ಕರ
ಹಾಟ[11]ನಿವ ಗುರ್ಜರಕುಲೀಂದ್ರ ಕಳಿಂಗನಿವನೆಂದೂ
ಲಾಟತಾನಿವನಂಧ್ರನಿವನು ಮ
ರಾಟನಿವ ಸೈಂಧವನು ಠಾನಿವ
ಭೋ[12]ಟನಿವನೆಂದಂಗನೆಗೆ ತೋಱಿದರು ನಾರಿಯರು  ೬೫

ನೀಲಕುಂತಳೆ ನೋಡಿವನು ಪಾಂ
ಚಾಲನಿವ ವೈದರ್ಭನಿವ ನೇ
ಪಾಳನಿವ ಗಾಂಧಾರನಿವ ಪೌಂಡ್ರಕಮಹೀಪಾಲ
ಚೋಳನಿವನು ತುರುಷ್ಕನಿವಮಲೆ
ಯಾಳನಿವ ಶಾತ್ವಲ[13]ದ ಭೂಮೀ[14] ಪಾಲನಿವನೆಂದಂಗನೆಗೆ ತೋಱಿದರು ನಾರಿಯರು      ೬೬

ಮಡದಿಯರು ಸತಿಗಖಿಳ ದೇಶದ
ಪೊಡವಿಪಾಲರ ತೋಱಿ ಜಲವುಱಿ
ದಡಸಿ ಹಂಸ ಕ್ಷೀರವೊಂದುವ ತೆಱದಿ ನೃಪಕುಲವ[15]ಕೊಡಹಿ[16] ಜೀವಂಧರ[17]ಗೆ ಚಿತ್ತವು[18]ತೊಡರೆ[19] ವೀಣೆಯೊಳೊಲವೆನೆಂದಾ
ಕುಡಿತೆಗಣ್ಣು ಮೊಗೆದು ಸೂಸಿದಳಖಿಳ ಭೂಮಿಪರ       ೬೭

ಕೆಲರು ಸೊಬಗಲಿ ನೋಡಿದಳು ಕೋ
ಮಲೆಯೆನುತ ಕೆಲ[20]ರೆಮ್ಮ[21] ಸಖಿಯರ
ನೊಲಿದು ಕೇಳಿದಳೆಂದು ಕೆಲರೆಮ್ಮೊಳು ಮಹಾಪ್ರಿಯವ
ತಳೆದಳೆಮ್ಮನು ನೋಡಿ ನಸುನಗು
ತೆಳಸಿದಳು ಸತಿಯೆಂದು ಭೂಪರು
ನಲಿಯುತಿರ್ದರು ಬಱಿಯ ಮಧುವಿನ ಬಾಯ ಸವಿಗಳಲಿ           ೬೮

ಕಲಶಕುಚ[22]ದಿಟ್ಟೆಡೆ[23]ಯೊಳವಱಿ
ದಳಕಪಾಶದಿ ಸಿಲುಕಿ ನಾಭಿಯೊ
ಳಿಱಿದು ದೃಕ್ಶರದಿಂದ ನೊಂದು ನಖಾಂಕುಶಕ್ಕಗಿದು
ಹೊಳೆವ ಬಾಸೆಯಡಾಯುಧದ ಹೊಯಿ
ಲ್ಗಳುಕಿ ಕೇಶಧ್ವಾಂತದಲಿ ಕಳ
ವಳಿಸಿ ಕಂಗಾಣದ ವಿಭೇದದೊಳಿರ್ದರಾ ನೃಪರು         ೬೯

ಬಱಿಕ ಸತಿ ಮಂಟಪವ ಪುಗಲೊಡ
ನೆಳಸಿ ಬಂದುದು ಸಕಲ ನೃಪಸಂ
ಕುಳವ ಕಳುಹುತ ನಯನ ಹೃತ್ಕರಣೇಂದ್ರಿಯಂಗಳಲಿ
ನಿಲಿಸಿದನುಪಮ ಪುತ್ಥಳಿಗಳಂ
ತೆವೆ ಮಿಡುಕದವನಿಪರು ಪೀಠಾ
ವಳಿಯೊಳಿರ್ದರು ಬಱಿಯ ಡಿಂಬದೊಳರಸ ಕೇಳೆಂದ  ೭೦

ಇದು ವಿನಮದಮರೇಂದ್ರ ಶ್ರೀಜಿನ
ಪದಕಮಲಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದು ಸಕಲ ಭೂಪಾವಲೋಕನವರಸ ಕೇಳೆಂದ          ೭೧


[1] ಭಾ (ಜ, ಮ)

[2] ಲು (ಜ, ಮ)

[3] ವಾ (ಮ)

[4] ನು (ಜ, ಮ)

[5] ಖಿ (ಜ, ಮ)

[6] ತಿ (ಜ, ಮ)

[7] ಕೌ (ಜ, ಮ)

[8] ದಂಬುಜಾ (ಜ, ಮ)

[9] ದಂಬುಜಾ (ಜ, ಮ)

[10] ಕಾಂಭೋಜ (ಜ, ಮ)

[11] ಕಾಂಭೋಜ (ಜ, ಮ)

[12] ಬೋ (ಜ, ಮ)

[13] ನೃ (ಜ, ಮ)

[14] ನೃ (ಜ, ಮ)

[15] ತೊಡರಿ (ಜ), ಕೊಡರಿ (ಮ)

[16] ತೊಡರಿ (ಜ), ಕೊಡರಿ (ಮ)

[17] ರೆ (ಪ)

[18] ವೊಡರಿ (ಜ, ಮ)

[19] ವೊಡರಿ (ಜ, ಮ)

[20] ರೆಂದು (ಜ, ಮ)

[21] ರೆಂದು (ಜ, ಮ)

[22] ವಿಟ್ಟೆದೆ (ಮ)

[23] ವಿಟ್ಟೆದೆ (ಮ)