ಮೃಗನಯನೆ ಬಂದೆಸೆವ ಕಕ್ಷದ
ಹೊಗರೊ

[1]ಗೆಯೆ[2] ಮಂದಾರಮಾಲೆಯ
ನೆಗಪಿ ಭೂಸುರಕೋಟಿ ಜಯವೆನೆ ವಾದ್ಯನಿಘೋಷ
ಒಗೆಯೆ ತೂರ್ಯತ್ರಯ ವಿಜೃಂಭಿಸೆ
ಸು[3]ಗುಣ[4] ಜೀವಂಧರನ ಕೊರಲಿನೊ
ಳೊಗುಮಿಗೆಯ ಹರುಷದಲಿ ತಂದಿಕ್ಕಿದಳು ಕಮಲಾಕ್ಷಿ   ೨೧

ಕರದ ಮಣಿಮಯ ವೀಣೆಯಲಿ ಕಂ
ಧರದ ಕುಸುಮದ ಮಾಲೆಯಲಿ ಪರಿ
ಪರಿಯ ರತ್ನಾಭರಣದಲಿ ಕಾಂತಾಸಮೇತದಲಿ
ಅರಳುಗಂಗಳೊಳರುಣನಖ ಹೇ
ರುರದಿನಿಳೆಯ ಭುಜಂಗರುಚಿವೊಲು
ಮೆಱೆದನಾ ಸುಕುಮಾರನಭಿನವ ಕಾಮನಂದದಲಿ       ೨೨

ಬಱಿಕಲಾ ವೈಶ್ಯೇಂದ್ರನಾ ಕೋ
ಮಳೆ ಸಹಿತ ಜೀವಂಧರನ ನಿಜ
ನಿಳಯಕುಯ್ಯಲು ನೃಪರ ಕಾಷ್ಠಾಂಗಾರನತಿ ಮುಳಿದು
ಹುಱಿತ ವೀಣೆಯ ಹರದ ಬಾಜಿಸ
ಲೊಲಿದು ಮಾಲೆಯ ಸೂಡಿದಳು ಗಡ
ಲಲನೆ ಮಾಡಿ ವಿವಾಹವನು ನೀವೆಂದು ಖತಿಗೊಂಡ     ೨೩

ಕರಿ ತುರಗ ಮಹಿಳಾದಿ ರತ್ನಗ
ಳರಸುಗಳಿಗುಪಯೋಗ[5] ವಾಣಿಜ
ವರರಿಗಾ ಕ್ರಯವಿಕ್ರಯ ವ್ಯವಹರಣೆಯುಚಿತವದು
ತರುಣಿರತ್ನವು ಸಲ್ಲದಾ ಬೇ
ಹರಿಯನೀಕ್ಷಣ ಹಿಡಿದು ಬಿಟ್ಟಂ
ಬುರುಹಮುಖಿಯನು ಸೆಳೆಯದಿರೆ ಹಱಿವೆಮಗೆ ಬಹುದೆಂದ        ೨೪

ಕೆಲರಕೃತ್ಯದ ಭೀತಿಯಲಿ[6]ಮೇಣ್[7] ಕೆಲ[8]ಕೆಲವರಂದಾ[9]ಕುಮಾರಕ
ಗಳುಕಿ ಕೆಲರಾನಂದದಲಿ ಸತಿಯ[10]ಲ್ಲ ತಮಗೆಂದು
ಕೆಲರಿದೇಕೆ[11]ಮಗೆಂದು ನೃಪಸಂ
ಕುಲವು ದೊಲಗಿರಲವರನೆಲ್ಲರ
ಹಱಿದು ಕಾಷ್ಠಾಂಗಾರನೊಡಬಡಿಸಿದನು ಭೇದದಲಿ      ೨೫

ಆದೊಡೇಱೆಂದಾ ನೃಪಾಲಾಂ
ಬೋಧಿ ಬರಲಾ ವೈಶ್ಯನಳಿಯಂ
ಗಾದರದೊಳದನಱುಹಿ ಮನ್ನೆಯ ಗಂಡ ನೀನೇಱು
ಮೇದಿನೀಪತಿ ದಾಱಿ ಬಿದ್ಧಿನ
ವಾದುದಾ ಬೀಯಗರ ಸಂತೈ
ಸೂದೆನಲು ಸುಕುಮಾರಮಣಿ ನಸುನಗುತ ಹೊಱವಟ್ಟ ೨೬

ಭರದೊಳೈನೂರ್ವರು ಸುಮಿತ್ರರು
ಬೆರಸಿ ಮಣಿರಥವೇಱಿ ಜೀವಂ
ಧರನು ಬಿಲು ಜೇವೊಡೆದು ದಿವ್ಯಾಸ್ತ್ರದಲಿ ಕವಿದಿಸುತ
ಶರಧಿಯೊಳು ಮಂದರ ಮಹಾಚಲ
ತಿರುಗುವಂದದಿ ನೃಪರ ಬಲಸಾ
ಗರವ ಕಲಕಿಯೆ ಚಾರಿ[12]ವರಿದನು ಭೂಪ ಕೇಳೆಂದ        ೨೭

ಸರಲನೇ ಸೃಜಿಸಿದನೊ ಮೇಣ್ ಸರ
ಸಿರುಹಭವನಾಕಾಶ ವಿಶಿಖೋ
ತ್ಕರವ ಕಾಱಿತೊ ಬಾಣವಾರಿಧಿ ಮೇರೆದಪ್ಪಿದುದೋ
ವರ ದಿಶಾದೇವಿಯರು ಪೆತ್ತರೊ
ಸರಲನೆನೆ ನೃಪರಸ್ತ್ರನಿಚಯವ
ಸುರಿದರಾ ಸುಕುಮಾರಕನ ಮೇಲಧಿಕ ರೋಷದಲಿ       ೨೮

ತಳಿತ ಕಾರ್ಮುಗಿಲೊಳು ದಿವಾಕರ
ಹೊಳಹುದೋಱುವ ತೆಱದಿ ಕಗ್ಗ
ತ್ತಲೆಯೊಳಮೃತಮರೀಚಿ ಸುಱಿವಂ[13]ತಾ ನೃಪಾಲಕರು
ಮುಳಿದು ಕೈಕೊಂಡೆಚ್ಚ ಬಾಣಾ
ವಳಿಯನನಿತುಮನೊಂದು ಬಾಣದೊ
ಳಲಘು ಭುಜಬಲ ಕಡಿದು ಕೈಯೊಡನೆಚ್ಚು ಬೊಬ್ಬಿರಿದ  ೨೯

ಮರಳಿ ಭೂಮಿಪರಗ್ನಿ ಬಾಣವ
ಕಱೆಯೆ ವರುಷಾಸ್ತ್ರದಲಿ ಗಿರಿಗಳ
ಸರಲ ವಜ್ರಾಸ್ತ್ರದಲಿ ತಿಮಿರವ ಭಾಸ್ಕರಾಸ್ತ್ರದಲಿ
ಉರಗಬಾಣವ ಗರುಡಬಾಣೋ
ತ್ಕರದಿ ಮೇಘಾಸ್ತ್ರವನು ಮರುತನ
ಸರಲಿನಿಂದರಿದನು ಕುಮಾರಲಲಾಮನಾಜಿಯಲಿ        ೩೦

ಅರಸ ಕೇಳ್ ಮೊದಲೆಚ್ಚ ಬಾಣೋ[14]ತ್ಕರಗಳಿಂ ಬಱಿಕೆಚ್ಚ ಸರಲಾ
ಸರಲಿನಿಂ ಮುನ್ನರಿನೃಪರ ಕೀಲಿಸುವುದೆಂದೆನಲು
ವರ ಕುಮಾರನ ಚಾಪಕೌಶಲ
ಕರದ ಶರಸಂಧಾನವನು ಸಾಸಿರ ಮುಖಂಗಳ ಶೇಷಗಭಿವರ್ಣಿಸುವುದರಿದೆಂದ[15]    ೩೧

ಹರಿಯುಪಾಯ ನದೀಸುತನ
ಬ್ಬರಣೆ ದ್ರೋಣನ ಚಾಪವಿದ್ಯಾ
ಪರಿಣತತ್ವವು ನರನ ಶರಸಂಧಾನವರ್ಕಜನ
ನಿರುಪಮದ ದೃಢಮುಷ್ಟಿ ರಾಮನ
ತರಹರಣೆ ಮಾರುತನ ದೋರ್ವಲ
ವೆರಸಿತಾ ಸುಕುಮಾರಕಗೆ ತಾನಾಹವಾಗ್ರದಲಿ           ೩೨

ಸುರಗಿಯಲಿ ಕೆಲಬರನು ಮತ್ತಾ
ಪರಿಘದಲಿ ಕೆಲಬರನು ಘನತೋ
ಮರದಿ ಕೆಲಬರ ನಿಟ್ಟಿಯಲಿ ಚಕ್ರದಲಿ ಕೆಲಬರನು
ವರ ಕೃಪಾಣದಿ ಕೆಲಬರನು ಕ
ಕ್ಕರದಿ ಕೆಲಬರ ಭಿಂಡಿವಾಳದಿ
ತಱಿದನಾ ಸುಕುಮಾರ[16]ನಾ ಮೋಹರವ[17]ನಾಜಿಯಲಿ ೩೩

ಕೆಲರು ದೆಸೆಗೆಟ್ಟೋಡಿದರು ಕೆಲ
ಕೆಲರು ಜೀವವ ಕಾಯೆನುತ ಕೆಲ
ಕೆಲರು ಕಾಷ್ಠಾಂಗಾರನಿಂ ನಾವ್ ಕೆಟ್ಟೆವೆಂದೆನುತ
ಕೆಲರು ಮೂರ್ಛಿತರಾಗಿ ಕೆಲರಳ
ವಱಿದು ಕೆಲರರಱಿದಿಂತು ನೃಪಸಂ
ಕುಲವು ನುಗ್ಗಾಯಿತ್ತು ಹೇಱುವೆನೇನನದ್ಭುತವ            ೩೪

ನರಿಗಳೊಳು ಮೃಗರಾಜ ವಿಪಿನಾಂ
ತರದೊಳಾ ದಾವಾಗ್ನಿ ಫಣಿಗಳ
ನೆರವಿಯಲಿ ಸೌಪರ್ಣ ಕುಱಿವಿಂಡಿನಲಿ ಬಲುತೋಳ
ಸರಸಿಯಲಿ ಗಜ ಹೊಕ್ಕವೊಲು ಮೋ
ಹರವ ಸವಱಲು ನೆರೆದ ಕಾಗೆಯ
ಹರಳನಿಟ್ಟಂತೆಂಟು ದೆಸೆಗೋಡಿತು ನೃಪಸ್ತೋಮ        ೩೫

ಅರಸ ಕೇಳಿಂತವನಿಪಾಲರ
ವರ ಕುಮಾರಕ ಜಯಿಸಿ [18]ನೃಪ[19]ಮಂ
ದಿರಕೆ [20]ಬರಲ[21]ಳಿಯನನು ವಾಣಿಜವರನು ಬಿಗಿಯಪ್ಪಿ
ಕರೆದು ವಿಪ್ರರ ಲಗ್ನವಿದೆ ಹ
ತ್ತಿರಕೆ ಬಂದುದು ಬೇಗ ವಿಧಿಸೆಂ
ದಿರದೆ ಮಧುಪರ್ಕಾದಿಗಳ ಮಾಡಿಸಿದನೊಲವಿನಲಿ      ೩೬

ತರುಣಿಸಹಿತ್ಯ ಕುಮಾರ ಮಣಿವಿ
ಸ್ಫುರಿತ ಮೆಟ್ಟಕ್ಕಿಯನು ಮೆಟ್ಟಿಸೆ
ಕರದಿ ಜೀರಿಗೆ ಬೆಲ್ಲವನು ತಾಳ್ದೆಸೆವ ಶುಭಲಗ್ನ
ನೆಱೆ ತಳೆಯಲಾ ಬಳಿಕ ವಾಣಿಜ
ವರನು ಜೀವಂಧರಗೆ ಧಾರೆಯ
ನೆಱೆದನಾ ವೈಶ್ಯೇಂದ್ರ ವೈವಾಹಿಕ ವಿಧಾನದಲಿ          ೩೭

ಸ್ಮರನು ರತಿ ದಿವಿಜೇಂದ್ರ ಶಚಿ ಹಿಮ
ಕರನು ರೋಹಿಣಿ ವಿಷ್ಣುಸಿರಿ ಶಂ
ಕರ ಭವಾನಿ ವಿರಿಂಚಿ ವಾಕ್ಸತಿಗೂಡಿ ಬಾಳ್ವಿಂತೆ
ಸ್ಥಿರದೊಳಿರಿ ನೀವೆಂದು ಸತಿಯರು
ಹರಸಿ ಮಣಿಮಯ ಸೇಸೆಯಿಕ್ಕಲು
ವಿರಚಿಸೆ ಧರಾಮರರು ಪಾಣಿಗ್ರಹಣಕೃತ್ಯಗಳ  ೩೮

ಲಲಿತ ಶಾಸ್ತ್ರಕ್ರಮದಿ ಹೋಮಂ
ಗಳನು ಬೇಳಿದ [22]ಬಳಿಕ[23] ವಿಪ್ರಾ
ವಳಿಯ ಭೂ ಕನ್ಯಾದಿ ದಾನಂಗಳಲಿ ಸತ್ಕರಿಸಿ
ಹೊಳಲನರ್ಚಿಸಿ ನಾಕ[24]ಬಲಿ ದಿ
ಗ್ಬಲಿ ಸುಶಾಂತಿಗಳಾದಿ ಕೃತ್ಯಂ
ಗಳನು ನಾನಾ ವಿಭವದಲಿ ವೈಶ್ಯೇಂದ್ರ ಮಾಡಿಸಿದ      ೩೯

ಬಳಿಕ ಗಂಧೋತ್ಕಟನು ದಂಪತಿ
ಗಳನು ಮುದದಿ ಗೃಹಪ್ರವೇಶವ
ನೊಲಿದು ಶುಭದಿವಸದಲಿ ಮಾಡಿಸಲಾ ವಧೂವರರು
ಲಲಿತ ಸುಕಲಾವಿಧದಿ ಭೂಮಿಪ
ತಿಲಕ ಜೀವಂಧರನು ಸಂತಸ[25]ಗೊಳುತ[26]ರಮಿಸುತ್ತಿರ್ದನಭಿನವ ಕಾಮನಂದದಲಿ     ೪೦

ಇದು ವಿನಮದಮರೇಂದ್ರ ಶ್ರೀಜಿನ
ಪದಕಮಲ ಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದುವೆ ವೈವಾಹ ಪ್ರವರ್ಣನೆಯರಸ ಕೇಳೆಂದ            ೪೧


[1] ದವೆ (ಜ, ಮ)

[2] ದವೆ (ಜ, ಮ)

[3] ಭಗ (ಜ, ಮ)

[4] ಭಗ (ಜ, ಮ)

[5] ಗ್ಯ (ಜ, ಮ)

[6] x (ಜ, ಮ)

[7] x (ಜ, ಮ)

[8] ರಳವಿಯಲಿ ಕೆಲರಾ (ಜ, ಮ)

[9] ರಳವಿಯಲಿ ಕೆಲರಾ (ಜ, ಮ)

[10] ಯಿ (ಜ, ಮ)

[11] ನೆ (ಜ), ನ (ಮ)

[12] ರು (ಜ, ಮ)

[13] ದುದೊ (ಜ, ಮ)

[14] x (ಮ)

[15] x (ಮ)

[16] x (ಜ, ಮ)

[17] x (ಜ, ಮ)

[18] ನಿಜ (ಜ, ಮ)

[19] ನಿಜ (ಜ, ಮ)

[20] ಬಂದ (ಜ, ಮ)

[21] ಬಂದ (ಜ, ಮ)

[22] ಸಕಲ (ಜ, ಮ)

[23] ಸಕಲ (ಜ, ಮ)

[24] ಗ (ಜ, ಮ)

[25] ಮೆಱಸಿ (ಜ), ವೆರಸಿ (ಮ)

[26] ಮೆಱಸಿ (ಜ), ವೆರಸಿ (ಮ)