ಸುರಪನೋ ದಿವಿಜೇಂದ್ರನಿವನಾ
ದರೆ ಶರೀರದಿ ಕಣ್ಗಳಿಲ್ಲಿವ
ವರಸುಧಾಕರನಾದೊಡಿಲ್ಲಕಳಂಕವಂಗಜನು
ನಿರುತ

[1]ವಾದರೆ[2] ಹಸ್ತಪದ್ಮದೊ
ಳರಳ ಸರಳಿಲ್ಲೀತ ಜೀವಂ
ಧರನೆನುತ ತದ್ವಿರಹದಲಿ ಬಂದಳು ನಿಜಾಲಯಕೆ       ೨೧

ವರಕುಮಾರಗೆ ಬೞಿಕ ಸುಪ್ರಿಯ
ಕರದಿ ತಚ್ಚಿತ್ತ ಪ್ರಪಂಚವ
ಬರೆಸಿ ಲೇಖೆಯ ನರಗಿಳಿಯ ಕಂಧರದೊಳಳವಡಿಸಿ
ಪುರುಷನಪ್ಪಂದದಲಿ ಜೀವಂ
ಧರನ ಕೂಡೆಂದಾ ಶುಕ್ರೇಂದ್ರನ
ತರುಣಿಯೊಲವಿಂದಟ್ಟಿ ನೆಱೆ ಕಂದಿದಳು ವಿರಹದಲಿ    ೨೨

ಧರಣಿಪತಿ ಕೇಳಿತ್ತ ಜೀವಂ
ಧರಗೆ ಗುಣಮಾಲೆಯ ಕಟಾಕ್ಷರ
ಸರಳು ನಟ್ಟುವು ಕೇಳಲರಿದಾಯ್ತಾಲಿಗಳ ನಲುಗಿ
ತರಹರಿಸಲಳವಡದೆ ಕಾಂತೆಯ
ವರಿಸಬೇಕೆಂದೆನುತ ನಿಜ ಮಂ
ದಿರಕೆ ಬಂದಾರಾಮದಲಿ ಹೊರೞಿದನು ವಿರಹದಲಿ     ೨೩

ಪರಮಹಂಸನ ಯೋಗಿ ನೆನೆವಾ
ಪರಿಯೊಳಾ ಗುಣಮಾಲೆಯನು ಹೃ
ತ್ಸರಸಿಜಾತದಿ ನೆನೆದು ತನಗರಗಳಿಗೆ ಯುಗವಾಗೆ
ಮೆಱೆವ ಕುಸುಮಾವಳಿಯ ತಳ್ಪದೊ[3]ಳಿರುತ[4] ತದ್ವಿರಹಾಗ್ನಿಯಲಿ ನೆಱೆ
ಕರಗಿ ಕಂದಿದನಾ ಕುಮಾರಕನಾ ವನಾಂತದಲಿ        ೨೪

ಗರುವತನ ಹಿಂಗಿದುದು ಧೈರ್ಯದ
ಗಿರಿ ಬಿಱಿದುದಱಿವಗಲಿದುದು ನಿಜ
ಪರಿಣತತ್ವವದೋಡಿದುದು ಗಂಭೀರ ಲಯವಾಯ್ತು
ಮಱವೆ ಬಲಿದುದು ವಿಮಲ ಲಜ್ಜಾ
ಶರಧಿ ಕಾಲ್ವೊೞೆಯಾಯ್ತು ಬಣ್ಣಿಸ
ಲರಿಯೆ ಕುವರನ ದೇಹದಂತಸ್ತಾಪವೇದನೆಯ         ೨೫

ತಳಿರುಗಳ ಕಂಡುರಿವ ಕಿಚ್ಚೆಂ
ದಳುಕಿ ಕುಸುಮವ ಚಿತ್ತಜನ ಸ
ಲ್ಲಲಿತ ಬಾಹುಗಳೆಂದು ಕೆಲಸಾರ್ದಳಿಯನಂಗಜನ
ಬಲವೆನುತ ಸೆಡೆದಿಕ್ಷುದಂಡಾ
ವಳಿಯನಾತನ ಚಾಪವೆಂದತಿ
ಕಳವಳಿಸುತಿರ್ದನು ಕುಮಾರಕನಧಿಕ ವಿರಹದಲಿ       ೨೬

ಬಱಿದೆ ನುಡಿವನು ನುಡಿಸೆ ಮೌನವ
ಧರಿಸುವನು ತವಕದಲಿ ನಡೆವನು
ಪರಕಿಸಲು ಕಾರ್ಯಾರ್ಥವಿಲ್ಲ ಲತಾಂಗಿ ಬಾರೆಂದು
ಬಱಿದೆ ಕರೆವನು ತನ್ನೊಳೇತಕೆ
ತರುಣಿ ಮುಳಿಸೆಂದೆನುತ ವಿರಹದಿ
ಮರುಳುಗೊಂಡನು ತತ್ಕುಮಾರಕನರಸ ಕೇಳೆಂದ     ೨೭

ಚಂದ್ರ ಚಂಡ ಮರೀಚಿಯಾದನು
ಗಂಧವಹನಲಗಾದ ಮಲಯಜ
ಗಂಧವುರಿಯಾದುದು ಸುಮಾಲ್ಯಗಳೆಸ್ತ್ರಮಯವಾಯ್ತು
ಕೆಂದಳಿರು ದಾವಾಗ್ನಿಯಾಗಿದೆ
ಯೊಂದು ದಿನವೆನಗೊಂದು ಯುಗವಾ
ಯ್ತೆಂದು ಮಮ್ಮಲ ಮಱುಗಿದನು ಸುಕುಮಾರ ವಿರಹದಲಿ        ೨೮

ವರಕುಮಾರಕನಿಂತು ವಿರಹದೊ
ಳುರಿಯುತಿರೆ ಶೈತ್ಯೋಪಚಾರೋ
ತ್ಕರವ ಮಾಡುವೆವೆಂದು ನಾನಾ ಗಂಧಗಳ ತರಿಸಿ
ತರುಣಿಯರು ಪನ್ನೀರೊಳರೆದದ
ನರಸನಂಗದೊಳೆಯ್ದೆ ಲೇಪಿಸಿ
ಭರದಿ ಬೀಸಿದರಾಲವಟ್ಟದೊಳರಸ ಕೇಳೆಂದ  ೨೯

ತರುಣಿಯಟ್ಟಿದ ಕೀರನಿತ್ತಲು
ಭರದಿ ಗುಣಮಾಲೆಯನು ನೆನೆದೆದೆ
ಜರಿಯುತಿಹ ಜೀವಂಧರನ ಹೊರೆಗೆಯ್ದಿ ಪೊಡೆಮಟ್ಟು
ತರುಣಿ ನಿನ್ನಯ ತೇಜ ಗುಣ ಸೌಂ
ದರಿಯಗಳ ನೀ ನೋಡಿ ಬಾಯೆಂ
ದಿರದೆ ಕಳುಹಿದಳೆನ್ನನೆನಲುಬ್ಬಿದನು ಸುಕುಮಾರ      ೩೦

ಧರಣೊಳು ಸತಿರತ್ನ [5]ವಾಕೆಯು[6] ಪುರುಷರತ್ನವು ನೀವು[7]ನಿಮ್ಮಿ[8] ಬ್ಬರಿಗೆ ಯೋಗವದಾಯ್ತು ಮೂಲೋಕಂಗಳಲಿ ನಿಮಗೆ
ಸರಿಸವಿಲ್ಲಾದಿಯಲಿ ನೀ ವಿ
ಸ್ತರದಿ ಮಾಡಿದ ಪುಣ್ಯವಿಂದುಪ
ಕರಿಸಿತೆಂದು ಶುಕ್ರೇಂದ್ರ ಲಿಖಿತವ [9]ಕೊಟ್ಟನಾ ನೃಪಗೆ[10] ೩೧

*ವರ ಕುಮಾರನಾ ಲಖಿತವನು [11]ವಿ
ಸ್ತರ[12]ದಿ ವಾಚಿಸಿ*ನೋಡಿ ಕಾಂತೆಯ
ಪರಮ ಮೋಹಕ ಮೆಚ್ಚಿ ನೆನೆದಂತಾಯಿತೆಂದೆನುತ
ಹರುಷದಲಿ ಕೀರೇಂದ್ರ ನುಡಿದುರು
ತರದ ವಚನಾಮೃತವ ಸವಿದಾ
ದರದಿ ಮಗುೞಟ್ಟಿದನು ಸುಕುಮಾರಕನು ಶುಕಪತಿಯ  ೩೨

ಅರಸ ಕೇಳ್ ಶುಕಪತಿಯ ಜೀವಂ
ಧರನು ಪ್ರಿಯದಿಂದಟ್ಟಿ ವಿರಹದೊ
ಳುರಿಯುತಿರೆ ಬೞಿಕಿತ್ತ ಗುಣಮಾಲೆಯ ಸಮೀಪಕ್ಕೆ
ಭರದಿ ಬಂದು ಕುಮಾರನಭ್ಯಂ
ತರವನುಱು ಕೀರೇಂದ್ರ ನೆಱೆ ವಿ
ಸ್ತರಿಸಲಿಮ್ಮಡಿಯಾಯ್ತು ವಿರಹ ಮೃಗಾಕ್ಷಿಗೊಗ್ಗಿನಲಿ     ೩೩

ಸ್ವರವು ಕೋಗಿಲೆಯೆಂದು ಮೌನವ
ಧರಿಸಿ ಮುಖ ಶಶಿಯೆಂದು ಮುಕುರವ
ಪರಿಕಿಸಳು ಗತಿ ಹಂಸೆಯೆಂದಡಿಯಿಡಳು ವಾಕ್ಕು ಶುಕ
ನಿರುತವೆಂದುಸಿರಳು ಕುರುಳು ಮಧು
ಕರಗಳೆಂದಳವೞಿದು ಹೆದಱುವ
ಳರಸಿಗಾಮದು ತನ್ನ ತನು ನಂಜಾಗಿ ವಿರಹದಲಿ       ೩೪

ಸ್ಮರನು ತಾ ಮೈದೋಱ ಕೋಕಿಲ
ಪರಭೃತನು ಹಿಮಕರನು ದೋಷಾ
ಕರನು ಶುಕ ವಾಚಾಳ ಚೂತ ಕುಜಾತ ಮಧು ಹೊಸಬ
ಮರುತ ಚಂ[13]ಚಲ ಮಧುಪನುದ್ಭ್ರಮ
ಕರ ಮರಾಳನು ಮಂದನಾರ್ಗಿ
ನ್ನಱುಹುವೆನು ತನ್ನಯ ತೆಱನನೆಂದೞಲಿದಳು ರಮಣಿ  ೩೫

ತರುಣಿ ಚಂದನದಿಂದ ಚಂದ್ರನ
ಬರೆದು ಕಾಮನ ಮಿತ್ರನೆಂದದ
ನೊಱಸುವಳು ಶುಕವವನ ವಾಹನವೆಂದು ಹೆಱಸಾರಿ
ವರ ಮರಾಳ ಪಿಕಾಳಿ[14]ಗಳನಾ
ಸ್ಮರನ ವೀರ ಭಟಾಳಿಯೆಂದೆದೆ
ಜರಿಯುತಿರ್ದಳು ಕಾಂತೆ ವಿರಹದೊಳಿಂತು ಭ್ರಮಿತದಲಿ         ೩೬

ನಾರಿ ವಿರಹಾನ್ನಿಯನು ಸೈರಿಸ
ಲಾಱದಬ್ಜಾಕರವ ಹುಗೆ ತ
ನ್ಮಾರಶಿಖಿಯಿಂದಾ ಕೊಳನ ನೀರುಕ್ಕಿ ಬರುತಿರಲು
ನಾರಿಯರು ಬೆಱಗಾಗಿ ಬಹು ವಿ
ಸ್ತಾರದಲಿ ಶೈತ್ಯೋಪಚಾರವ
ನಾ ರಮಣಗೆಸಗಿದರು ಭೂಮೀಪಾಲ ಕೇಳೆಂದ         ೩೭

ಹರಳು ಕಣ್ಣೊಳು ಸಿಲುಕೆ ಸೈರಿಸ
ಲರಿದು ನಳಿತೋಳುಗಳೊಳಾ ಪೇ
ರುರ ವಿಶಾಲಾಕ್ಷಿಗಳ ನಿಡುಹುಬ್ಬುಗಳ ನಗೆಮೊಗದ
ಹೆಱೆನೊಸಲ ಸುಲಿಪಲ್ಲುಗಳಲೆಸೆ
ವರಸ ಕಣ್ಣೊಳು ತೊೞಲುತಿರಲೇ
ತೆಱದಿ ನಾ ಜೀವಿಸುವೆನೆಂದೞಲಿದಳು ಹರಿಣಾಕ್ಷಿ        ೩೮

ಉರಿಯ ಸೈರಿಸಲಾಱೆ ಬೇಗದಿ
ಹರಣ ಹೋಹಂತೀಕ್ಷಿಸುವೆ ಹಿಮ
ಕರನ ನೆಱೆಯಪ್ಪುವೆನು ಮರುತನನಳಿಪಿಕಾದಿಗಳ
ಸರವನಾಲಿಪೆನಲ್ಲದಿರೆ ಮಧು
ರರವವನು ಸೇವಿಸುವೆನೆಂದು
ಬುರುಹಲೋಚನೆ ಸಾವ ನಿಶ್ಚಯಿಸಿದಳು ಚಿತ್ತದಲಿ      ೩೯

ಹರಣವುೞಿಯದದೆಂತು ತನ್ನಯ
ವರ ಶರೀರ ಪೃಥ್ವಿಯನು (?) ನೃಪವರ
ಚಲಿಸುವೆಡೆಯಲಿ ಜೀವವನು ತನ್ಮುಕುರದಲಿ ಜಲವ
ಸರಸಿಯಲಿ ನಾಕವನು ಧವನೋ
ವರಿಯೊಳನಿಲನ ತಾಳವೃಂತದೊ
ಳಿರಿಸಿ ಸಲಹೆಂತಾದೊಡೆಂದೞಲಿದಳು ಹರಿಣಾಕ್ಷಿ       ೪೦


[1] ನಾದಡೆ (ಜ), ನಾದೊಡೆ (ಮ)

[2] ನಾದಡೆ (ಜ), ನಾದೊಡೆ (ಮ)

[3] ಳುರುಳಿ (ಜ, ಮ)

[4] ಳುರುಳಿ (ಜ, ಮ)

[5] ಮಾವು (ಜ), ವಾವುದು (ಮ)

[6] ಮಾವು (ಜ), ವಾವುದು (ಮ)

[7] ತಾನಿ (ಜ, ಮ)

[8] ತಾನಿ (ಜ, ಮ)

[9] ನು ಸುಸ್ಥಿರದಿ (ಮ)

[10] ನು ಸುಸ್ಥಿರದಿ (ಮ)

* x (ಮ)

[11] ಸುಸ್ಥಿ (ಜ)

[12] ಸುಸ್ಥಿ (ಜ)

* x (ಮ)

[13] ಸಂ (ಜ, ಮ)

[14] ದಿ (ಜ, ಮ)