ಕುಂದುವಿಂದುವನೊಂದುವುದಱಿಂ
ದಿಂದು ಮುಖಿಯ ಮುಖೇಂದು ಗುಡೆ ಹೀ
ನೇಂದು ನೇತ್ರಚಕೋರಿಗಳು ಬಂದೊಂದಿ ತದ್ವಿತಯ (?) ಮಂದಹಾಸದೊಳೀಂಟಿ ಜೀರ್ಣಿಸ
ದಂದು ಕಾಱಿದಳಿಳೆಯೊಳತಿಯುದ
ಬಿಂದುಗಳನೆನೆ ಸುರಿದಳಂಗನೆ ಬಾಷ್ಟವಾರಿಯನು     ೪೧

ಇಂದು ಕಾಂತೋಪಲಜಲಂಗಳ
ತಂದು ಸ್ಮರತೀರ್ಥಪ್ರಸಾದವಿ
ದೆಂದು ಹೃದಯದೊಳುತ್ಕುಚಂಗಳೊಳುಱು ಕರಾಬ್ಜದಲಿ

[1]ಕಂಧ[2]ರದೊಳಾಸ್ಯದಿ ಕಪೋಲದಿ
ಕೆಂದಳದೊಳೊಲವಿಂದಲೇಕಾ
ಚಂದ್ರವದನೆಗೆ ಲೇಪಿಸಿದರಂಭೋಜನೇತ್ರೆಯರು       ೪೨

ಉರಿಯೊಳಾಜ್ಯವನೆಱೆದವೊಲು ತ
ತ್ತರುಣಿಗಾ ಶೈತ್ಯೋಪಚಾರವ
ವಿರಚಿಸಲು ತದ್ವಿರಹಶಿಖಯಿಮ್ಮಡಿಸಿ ಹಾಸಿರ್ದ
ಅರಳು ನೆಱೆ ಮಸಿಯಾಗೆ ಹಾರೋ
ತ್ಕರಗಳತಿ ಕಂದಿದುವು ಚಂದನ
ವಿರದೆ ಕತ್ತುರಿಯಾಯ್ತು ವಿರಹಾಗ್ನಿಯೊಳು ಕಾಮಿನಿಗೆ  ೪೩

ಬೆಂದ ವಿರಹಾನಲಗೆ ಶುಷ್ಕವ
ನೊಂದಿಸಂದೊಲು ತನುವಿನೊಳು ಸಿರಿ
ಗಂಧವಿಡಿಸಿ [3]ಜಲೇ[4]ಜಪತ್ರದಿ ಬೀಸಲಿಕೆ ಸತಿಯ
ಕೊಂದು ಕಳೆ ಕೈಯಾ[5]ಱೆ ನೀ ಪವ
ನೇಂಧನಾಗ್ನಿಯ ಸಂಗಮದೊಳುರಿ
ನಂದುವುದೆ ಘನವಹುದು ಮಾಣಿನ್ನೆಂದು ಹಲುಬಿದಳು  ೪೪

ರಮಣಿ ವಿರಹಾಗ್ನಿಯನು ತಾನುಪ
ಶಮಿಸೆ ಕಾಮಾಂಗಾಕೃತಿಯ ಚಂ
ದ್ರಮಗೆ ನಿತ್ಯಾರ್ಘ್ಯವನು ಮಂದಾನಿಲಗೆ ಭೋಜನವ
ವಿಮಲ ಚಂದ್ರಿಕೆಗಿಷ್ಟವನು ಸು
ಭ್ರಮರ ಶುಕಕಾರಾಮವೀವೆವು
ಕ್ಷಮಿಸೆನುತ ಹರಕೆಯನು ತಾಳ್ದರು ಹರಿಣನೇತ್ರೆಯರು ೪೫

ಹೃದಯದಿನಿಯನ ತಡವಿ ನೋಡುವ
ವಿಧದಿ ಕರ ಕುಚಮಧ್ಯದಲಿ ಸಾ
ರ್ದುದು ಪತಿಯ ಧ್ಯಾನಿಸುವವೊಲು ಕಣ್ ಮುಚ್ಚಿದುವು ಸರವ
ಮುದದೊಳಾಲಿಸುವಂತೆ ತಾ[6] ಮಲ
ಗಿದಳು ಕಾಣದೆ ಜೀವವನು ನೀ
ಗಿದಳು ತಾನೆಂಬಂತೆ ಮೂರ್ಛಿತೆಯಾದೆಳಿಂದುಮುಖಿ  ೪೬

ತರುಣಿ ಸುಕುಮಾರಕನ ವಿರಹೋ
ತ್ಕರದಿ ಮೂರ್ಛಿತೆಯಾಗಿರಲು ಪಂ
ಕರುಹಮುಖಿಯರು ನಡುಗಿ ನಾವು ಕುಬೇರದತ್ತಂಗೆ
ಅಱುಹದಿರೆ ಕೇಡೆಮಗೆ ಬಹುದೆಂ
ದಿರದೆ ಕುಮುದಾಂಬಕಿಯ ಜನಕನ
ಹೊರೆಗೆ ಬಂದಡಿಗೆಱಗಿ ಬಿನ್ನೈಸಿದರು ವಿನಯದಲಿ      ೪೭

ವರವಣಿಗ್ವರ ನಿನ್ನ ಸುತೆಯುಱು
ತರದಿ ಜಲವನಕೇಳಿಗೆಯ್ಯು
ತ್ತಿರಲು ಚೀವಂಧರನ ಕಂಡತಿ ವಿರಹತಾಪದಲಿ
ತರುಣಿ ಬದುಕುವಳಲ್ಲ ನಾವದ
ನಱುಹೆ ಶುದ್ಧರು ತತ್ಕುಮಾರನ
ನೆರಹಬೇಕು ಮೃಗಾಕ್ಷಿಗೆನೆ ವೈಶ್ಯೇಂದ್ರ ಬೆಱಗಾದ      ೪೮

ಧರಣಿಯೊಳು ಸಮಕಲ ಸಮಾನೈ
ಶ್ವರಿಯ ಸಮಗುಣ ಸಮವಿಭವ ಸೌಂ
ದರಿಯ ಶೀಲಾಚರ ಸಮಯೌವನವು ಸಮನಿಸಲು
ಪರಿಣಯವನೆಸಗುವುದು ಮತವಾ
ಪರಿಯೊಳೆಮಗನುಕರಿಸಿತೆಂದತಿ
ಹರಷದಲಿ ಗಂಧೋತ್ಕಟನ ಕರೆಸಿದನು ವೈಶ್ಯೇಂದ್ರ    ೪೯

ಕರೆಸಿ ಗಂಧೋತ್ಕಟಗೆ ವಾಣಿಜ
ವರನು ನುಡಿದನು ಮತ್ಸುತೆಯ ನಿ
ನ್ನುಱು ಕುಮಾರಕಗೀವೆನೆನೆ[7] ಲೇಸೆಂದು ಹರುಷದಲಿ
ಸುರುಚಿರದ[8] ವೈವಾಹವನು ವಿ
ಸ್ತರಿಸೆ ಗುಣಮಾಲೆಯೊಳು ಜೀವಂ
ಧರನು ಸುಖದಿಂದಿರ್ದನಮರೇಂದ್ರನ ಸುತೇಜದಲಿ    ೫೦

ಇದು ವಿನಮದಮರೇಂದ್ರ ಶ್ರೀಜಿನ
ಪದಕಮಲಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದುವೆ ಗುಣಮಾಲೆಯ ವಿವಾಹ ನೃಪಾಲ ಕೇಳೆಂದ   ೫೧


[1] ತಂದು (ಜ, ಮ)

[2] ತಂದು (ಜ, ಮ)

[3] ಸರೋ (ಮ)

[4] ಸರೋ (ಮ)

[5] ಯ್ಯೆ (ಮ)

[6] ಮೌನದಿ (ಜ, ಮ)

[7] ಲೆ (ಜ, ಮ)

[8] ದಿ (ಜ, ಮ)