ಮರಣಭಯವನು ಯಕ್ಷನಿಂ ಪರಿ
ಹರಿಸಿ

[1]ಕೊಂಡಾಚರಿಸಿ[2] ಜೀವಂ
ಧರನು ಪದ್ಮೆಯೆನಿಪ್ಪ ಕಾಂತೆಯ ಪಡೆದನೊಲವಿನಲಿ

ಧರಣಿಪತಿ ಕೇಳಿತ್ತ ಜೀವಂ
ಧರನ ಕೈಯೊಳು ನೊಂದ ಪಟ್ಟದ
ಕರಿಕುಲಾಧೀಶ್ವರನು ಕಬಳವನಂದು ಮೊದಲಾಗಿ
ತೊಱೆದಿರಲು ಮಾವಂತರುಗಳತಿ
ಭರದಿ ಕಾಷ್ಠಾಂಗಾರಗಂದಾ[3] ತೆಱನ ಬಿನ್ನೈಸಲ್ಕೆ ಕಿಡಿಕಿಡಿಯಾಗಿ ಗರ್ಜಿಸಿದ  ೧

[4]ನಿರುತದಿಂದಲನಂಗಮಾಲೆಯ
ನೆರೆದ ತಪ್ಪೊಂದಖಿಳ ತುಱುಗಳ
ಮರಳಿಸಿದ ಖತಿಯೊಂದಖಿಳ ಭೂಪಾಲಕರ ಗೆಲಿದು[5] ಸುರುಚಿರದಿ ಗಂಧರ್ವದತ್ತೆಯ
ವರಿಸಿದತಿ ರೋಷಾಗ್ನಿಯೊಳಗಿದು
ಬೆರಸಿ ಮದನನ ಕರೆದು ಕಾಷ್ಠಾಂಗಾರನಿಂತೆಂದ       ೨

ಗರುಡನನು ನೀರೊಳ್ಳೆ ಸಿಂಹವ
ಕರಿ ಗಜೇಂದ್ರನ ನೊರಜು ವ್ಯಾಘ್ರನ
ಹರಿಣ ಕೆಣಕಿದ ಪರಿಯೊಳೆನ್ನನು ಹರದನಣುಗನಿವ
ಕೆರಳಿಸಿದನೀಕ್ಷಣವವನ ಮಂ
ದಿರವ ಮುತ್ತಿಯೆ ಹಿಡಿದು ತಾಯೆಂ
ದರಸ ನೇಮಿಸೆ ಬಂದು ಗೇಹವ ಮುತ್ತಿದನು ಮದನ    ೩

ತುರುಗಿ ಗಂಧೋತ್ಕಟನ ನಿಜ ಮಂ
ದಿರದ ದೞ ಮೋಹರಿಸೆ ಜೀವಂ
ಧರನು ಕೇಳಿದುವೆಳೆಯ ಕುಪಿತ ಕೃತಾಂತನಂದದಲಿ
ಕೆರಳಿ ಕಾಷ್ಠಾಂಗಾರ ಸಹಿತನಿ
ಬರನು ಸವರುವೆನೆಂದೊಡಾತನ
ಸೆಱಗ ಹಿಡಿದನುನಯದಿ ಗಂಧೋತ್ಕಟನು ತಾ ನುಡಿದ ೪

ಹರದರಾವೆಲೆ ಮಗನೆ ಕೇಳಾ
ವರಸಿಗಖಿಳಾಮಾತ್ಯರಿಗೆ ಕುವ
ರರಿಗೆ ತಳವಾಱರಿಗೆ ಕರಣ ನಿಯೋಗಿಗಳಿಗಂಜಿ
ಚರಿಸಬೇಕಿದು ನೀತಿ ಕಾರ್ಯಾಂ
ತರವೆ ಬೇಕೆಮಗೆಂದು ಜೀವಂ
ಧರನ ನಾನಾ ತೆಱದಿ ಸಂತೈಸಿದನು ವಿನಯದಲಿ      ೫

ಎಂದು ಗಂಧೋತ್ಕಟನು ತನ್ನಯ
ನಂದನನ ಹೆಡಗೈಯ ಬಿಗಿದೆ
ಯ್ತಂದು ಕಾಷ್ಠಾಂಗಾರನಡಿಗಳಿಗೆಱಗಿ ಜೀವಕನ
ತಂದು ನಿಲಿಸಿಯೆ ಕೊಟ್ಟು ಕಾಯ್ ಬೇ
ಱೊಂದು ತಪ್ಪಿಲ್ಲಿವನ ಸಲಹುವು
ದೆಂದು ಕರುಣವ ತೋಱಿ ಬಿನ್ನೈಸಿದನು [6]ವಿನಯದಲಿ[7] ೬

ಹಸಿದ ಹೆಬ್ಬುಲಿಯಿದಿರಿನಲಿ ಮೃಗ
ನುಸುಳೆ ರಕ್ಷಿಸಿದಪುದೆ ಪಾಪ
ವ್ಯಸನಇ ಕಾಷ್ಠಾಂಗಾರನಿಗೆ ಕರುಣಾನುಭಾವದಲಿ
ಉಸಿರಿದೊಡೆ ದಯೆ ಹುಟ್ಟುವುದೆ ಭರ
ವಶದೊಳೀತನನರಿದು ಬಾಯೆಂ
ದಸಮ ಬಲನಟ್ಟಿದನು ಮದನನನಧಿಕ ರೋಷದಲಿ     ೭

ಅರಸ ಕೇಳಾ ಮದನನಾತನ
ಶಿರವ ವಿಚ್ಛೇದಿಸುವೆನೆಂದಾ
ಪುರದ ಬಹಿರುದ್ಯಾನದಲಿ ಬರಲಾಗ ಸುಕುಮಾರ
ನಿರುತದಲಿ ಯಕ್ಷೇಶ್ವರನ
ಹೃತ್ಸರಸಿಜಾತದಿ ನೆನೆಯಲಾತನ
ತೆಱನನಱಿದಟ್ಟಿದನು ಭರವಶದಿಂದ ವಿದ್ಯೆಗಳ          ೮

ಭರದೊಳಾ ವಿದ್ಯೆಗಳು ಜೀವಂ
ಧರ ಕುಮಾರನ೧ನುಯ್ದು ಯಕ್ಷೇ
ಶ್ವರನ[8] ಬಾಹೆಯೊಳಿರಿಸಲಿತ್ತ ಕುಮಾರಕನ ಶಿರವ
ತಱಿದೆನೆಂದಾ ಮದನ ಮರಳಿದು
ಬರೆ ಸಖರು ಗುಣಮಾಲೆ ಸಹಿತನ
ವರತ ಗಂಧೋತ್ಕಟನು ಚಿಂತಾಂಬುಧಿಯೊಳಳವೞಿದ         ೯

ಅರಸ ಕೇಳ್ ಬೞಿಕಿತ್ತ ಯಕ್ಷೇ
ಶ್ವರನು ಜೀವಂಧರನನುಯ್ದಾ
ದರದಿ ಶಶಿಕಾಂತೋದಕದೊಳುದ್ವರ್ತನಂಗೆಯ್ದು
ಪರಿಮಳ ದ್ರವ್ಯಾದಿ ವಸ್ತ್ರಾ
ಭರಣದಲಿ ಸತ್ಕರಿಸಿ ತನ್ನಯ
ಹೊರೆಯೊಳೊಲವಿಂದಿರಿಸಿಕೊಂಡಿರ್ದನು ಸುಲೀಲೆಯಲಿ        ೧೦

ಹರುಷದಲಿ ಕೆಲದಿವಸ ಜೀವಂ
ಧರನು ಮುದದಿಂದಿರ್ದು ಯಕ್ಷೇ
ಶ್ವರಗೆ ನುಡಿದನು ಸಕಲ ದೇಶಾಂತರವನನಿತುವನು
ಪರಿಕಿಸಿಯೆ ಬಹೆನೆಂದೊಡಾತಂ
ಗುರುತರದಿ ಮೇಲಪ್ಪ ಲಾಭೋ
ತ್ಕರದ ಫಲಸಿದ್ಧಿಗಳ ತಿಳಿದಿಂ[9]ತೀಗ[10] ಹೋಗೆಂದ       ೧೧

ಎನಲು ಯಕ್ಷಾಧೀಶ್ವರನ ಪದ
ವನಜದಲಿ ಬಂದೆಱಗಿಯಾತಗೆ
ವಿನುತ ಗಾನ ವಿಷಾಪಹಾರಣ ಕಾಮರೂಪಗಳು
ಎನಿಪ ವಿದ್ಯಾತ್ರಯವನೊಲಿದಿ
ತ್ತನುನಯದಿ[11] ತನ್ಮಂತ್ರಗಳನೊರೆ
ದನಘನೊಲವಿಂದಪ್ಪಿ ಕಳುಹಿದನಾ ಕುಮಾರಕನ       ೧೨

ವಿನುತ ಯಕ್ಷೇಶ್ವರನ ಬೀೞ್ಕೊಂ
ಡನಘ ಜೀವಂಧರನು ನಾನಾ
ಜನಪದಂಗಳ ಕೞಿದು ಬಂದಾನಂದಲೀಲೆಯಲಿ
ಜಿನಗೃಹಂಗಳ ಹೊಕ್ಕು ದೇವಾ
ರ್ಚನೆಯ ಮಾಡುವ ಬೞಿಕ ಘನಕಾ
ನನವನೆಯ್ದಿದನಾ ಕುಮಾರಕನರಸ ಕೇಳೆಂದ ೧೩

ಲಲಿತ ರಂಭಾನ್ವಿತದಿ ಸುಮನಾ
ವಳಿಯಿನಿಂದ್ರಾಣೀ ಸಮೇತದಿ
ಸುಲಲಿತಾಮೃತ ವಜ್ರ ಮಂದಾರಪ್ರಯುಕ್ತದಲಿ
ವಿಲ[12]ಸದ[13]ಮರೀವೃಂದದಿಂದು
ಜ್ವಲ ಸಹಸ್ರಾಕ್ಷಾನ್ವಿತದಿ ಕಂ
ಗೊಳಿಸಿತಾ ಕಾಂತಾರ ವಿಮಲ ಸ್ವರ್ಗದಂದದಲಿ        ೧೪

ವಿನುತ ಭಲ್ಲವ್ರಾತ ಬಾಣಾ
ಸನದಿ ನಾಗಾನೀಕ ಭೂಭೃ
ದ್ಘನದಿ ಕಂಚುಕಿ ವಾಜಿಕುಲ ವಿಜಯಾಭಿರಾಮದಲಿ
ಅನಿಲಘೋಷಿ ಸು[14]ಖಡ್ಗ ಧೇನು
ಪ್ರಣಿತ ಚಕ್ರದಿ ಭೂಮಿಪರ ವಾ
ಹಿನಿಯವೊಲು ತದ್ಗಹನ ರಂಜಿಸಿತಧಿ[15]ಕ ವಿಭವದಲಿ[16]   ೧೫

ಶ[17]ರದವವ್ಯಾಕುಲ ಮೃಗಾರವ
ಕರುಣವುಜ್ವಲ ಶರಭರೌದ್ರಾ
……..ಷ್ಟವ ಗುಹಾಸ್ಯದಿ ಮಾಂಸ ಬೀಭತ್ಸು
ಹರಿಗಳ[18]ಬ್ಬರ ವೀರ ಮುನಿಪನ
ಶರವು ಶಾಂತ ಸಮಸ್ತಮೃಗಸಂ
ಹರಿತವದ್ಭುತವಾಗೆ ಬೀೞಿತರಣ್ಯ ನವರಸವ  ೧೬

ಇಳೆಯ ಪತಿ ಕೇಳಖಿಳ ದೇಶವ
ಕಳೆದು ಪಲ್ಲವದೇಶದೊಳು ನೃಪ
ತಿಲಕ ಧನಪತಿಯಾಳುತಿಹ ಚಂದ್ರಾಭಪು[19]ರವೆಂ[20]ಬ
ಹೊೞಲನೆಯ್ದಿಯೆ ಜೀವಕನು ಸ
ಲ್ಲಲಿತ ಚೈತ್ಯಾಲಯದೊಳರ್ಹನ
ನಿರದೆ ಪೂಜಿಸುತಿರ್ದ ಕತಿಪಯ ದಿವಸ ಭಕ್ತಿಯಲಿ      ೧೭

ಮಾರನಿಭನಾ ಪುರದೊಳಿಂತು ವಿ
ಹಾರಿಸುತ್ತಿರಲಾ ನೃಪನ ಸುಕು
ಮಾರಿ ನಾರೀರತ್ನವೆನಿಸುವ ಪದ್ಮೆಯೆಂಬವಳು
ಕ್ರೂರ ಫಣಿದಷ್ಟದೊಳು ಮೂರ್ಛೆಯೊ
ಳಾ ರಸೆಯೊಳೊರಗಿರಲು ಶಸ್ತ್ರ ಶ
ರೀರದಲಿ ಮುಱಿದಂತೆ ತತ್ಪಿತನಲ್ಲಿಗೆಯ್ತಂದ  ೧೮

ಲಲನೆಯಂಗದೊಳುಷ್ಣವನು ಕರ
ತಲ ನಖಂಗಳೊಳರುಣತೆಯನಂ
ಗುಲಗಳಲಿ ಚಿಟುಕನು ಮುಖದ ಸುಭಗತೆಯನಕ್ಷಿಯಲಿ
ಹೊಳೆಹ ಮೂಗಿನೊಳುಸಿರ ಕೇಶದಿ
ಬಲುಹ ನಾಲಗೆಯಲ್ಲಿ ದ್ರವವನು
ಇಳೆಯ ಪತಿ ಕಾಣದೆ ಕರಗಿ ಕಂಗೆಟ್ಟು ಬಸವೞಿದ       ೧೯

ವರಕುಮಾರಿಯ ಜೀವವನು ಪಡೆ
ದರಿಗೆ ಸುತೆಸಹಿತರ್ಧ ರಾಜ್ಯವ
ನಿರುತದಲಿ ತಾನೀವೆನೌಷಧಯಂತ್ರತಂತ್ರದಲಿ
ಪರಿಣತರು ಬಂದಹಿವಿಷವ ಪರಿ
ಹರಿಸಿ ನೀವೆಂದಖಿಳ ದೇಶಾಂ
ತರಗಳಲಿ ಸಾಱಿಸಿದನಾ ಜನಪತಿಯು[21] ಲೋಕದಲಿ   ೨೦


[1] x (ಜ, ಮ)

[2] x (ಜ, ಮ)

[3] ತಾ (ಜ, ಮ)

[4] x (ಮ)

[5] x (ಮ)

[6] ಭೀತಿಯಲಿ (ಜ, ಮ)

[7] ಭೀತಿಯಲಿ (ಜ, ಮ)

[8] x (ಮ)

[9] ತೆಂದ (ಮ)

[10] ತೆಂದ (ಮ)

[11] ದ (ಜ. ಮ)

[12] ಸಿ ತ (ಜ. ಮ)

[13] ಸಿ ತ (ಜ. ಮ)

[14] ತ (ಜ. ಮ)

[15] ರಸ ಕೇಳೆಂದ (ಮ)

[16] ರಸ ಕೇಳೆಂದ (ಮ)

[17] ವ (ಜ, ಮ)

[18] ಳು (ಜ, ಮ)

[19] ವೆಂದೆಂ (ಜ, ಮ)

[20] ವೆಂದೆಂ (ಜ, ಮ)

[21] ವಿ (ಜ. ಮ)