ಕನ್ನಡದಲ್ಲಿ ಮೊದಲಬಾರಿಗೆ ಜೀವಂಧರನ ಚರಿತ್ರೆಯನ್ನು ತಂದ ಶ್ರೇಯಸ್ಸು ಭಾಸ್ಕರನಿಗೆ ಸಲ್ಲುತ್ತಿದೆಯಾದರೂ, ಕ್ರಿ.ಶ. ೧೪೨೪ರ ಹೊತ್ತಿಗೆ ಜೀವಂಧರ ಚರಿತೆಯು ಸಂಸ್ಕೃತ, ಪ್ರಾಕೃತ, ತಮಿಳು ಭಾಷೆಗಳಲ್ಲಿ ಆಗಲೇ ಪ್ರಸಿದ್ಧವಾಗಿ, ಪಂಡಿತ ಪಾಮರರಿಗೆ ಪರಿಚಿತವಾಗಿ ಹೋಗಿತ್ತೆಂಬುದನ್ನು ಮರೆಯಕೂಡದು. ಈ ಅನ್ಯ ಭಾಷೆಯ ಗ್ರಂಥಗಳ ಪರಿಚಯ ಕವಿ ಭಾಸ್ಕರನಿಗೆ ಗೊತ್ತಿಲ್ಲವೆಂದಲ್ಲ. ಪ್ರಸ್ತುತ ತನ್ನ ಗ್ರಂಥವನ್ನು, ವಾದೀಭಸಿಂಹ ಸೂರಿಗಳು ನವಸಂಸ್ಕೃತದಲ್ಲಿ ರಚಿಸಿದ ಗ್ರಂಥಗಳ ಆಧಾರದ ಮೇಲೆಯೇ ರಚಿಸಿರುವುದಾಗಿ ಭಾಸ್ಕರನು ಸ್ಪಷ್ಟವಾಗಿ ಹೇಳಿದ್ದಾನೆ. ವಾದೀಭಸಿಂಹ ಸೂರಿಗಳು ರಚಿಸಿದ ಗ್ರಂಥಗಳೆಂದರೆ  – ಗದ್ಯ ಚಿಂತಾಮಣಿ ಮತ್ತು ಕ್ಷತ್ರ ಚೂಡಾಮಣಿ ಇವುಗಳಲ್ಲಿ ಯಾವುದೇ ಒಂದರ ಹೆಸರನ್ನು ಕವಿ ಭಾಸ್ಕರನು ಹೇಳದಿರುವುದರಿಂದ, ಇವೆರಡೂ ಗ್ರಂಥಗಳನ್ನು ಕವಿ ನೋಡಿರುವ ಶಕ್ಯತೆಯಿದೆ. ಅದರಂತೆ ಗುಣಭದ್ರಾಚಾರ್ಯರ ಉತ್ತರ ಪುರಾಣ ಹಾಗೂ ಜೀವಂಧರ ಚಂಪೂ ಇವುಗಳನ್ನು ಕವಿ ಚೆನ್ನಾಗಿ ಅರಿತಿದ್ದಾನೆ. ಆದರೂ ಸಹ ಕವಿ ಭಾಸ್ಕರನು ತನ್ನ ಗ್ರಂಥವನ್ನು ತನ್ನದೇ ಆದ ಕುಶಲತೆಯಿಂದ ಬರೆದಿದ್ದಾನೆನ್ನುವುದು ಆತನ ಗ್ರಂಥ ಓದಿದವರಿಗೆಲ್ಲ ಸ್ಪಷ್ಟವಾಗುತ್ತದೆ. ತಮ್ಮತನವನ್ನು ಕಾಯ್ದುಕೊಂಡು ಗ್ರಂಥ ರಚಿಸುವ ಕುಶಲತೆ ಕನ್ನಡ ಕವಿಗಳ ವೈಶಿಷ್ಟ್ಯವೇ ಆಗಿದೆ.

ಪ್ರಸ್ತುತ, ಹಿಂದಿನ ಗ್ರಂಥಗಳಲ್ಲಿರುವ ವಿಷಯ ನಿರೂಪಣೆ ಭಾಸ್ಕರನಲ್ಲಿ ಹೇಗೆ ಹೆಚ್ಚು ಕಡಿಮೆಯಾಗಿದೆಯೆಂಬುದನ್ನು ನೋಡಬಹುದು. ಹಿಂದೆ ಕೊಟ್ಟ ಕಥಾ ಸಾರದ ಹಿನ್ನೆಲೆಯಲ್ಲಿ ಕೆಳಗಿನ ಬದಲಾವಣೆಗಳು ತಮ್ಮಷ್ಟಕ್ಕೆ ತಾವೇ ಅರ್ಥವಾಗುವುದರಿಂದ ಪ್ರತ್ಯೇಕ ವಿವರಣೆಯನ್ನು ಕೊಡುವುದು ಅನವಶ್ಯಕವೆಂದು ಕೇವಲ ಬದಲಾವಣೆಗಳನ್ನು ಮಾತ್ರ ಕೊಡುತ್ತಾ ಸಾಗಿದೆ.

ಸತ್ಯಂಧರ ರಾಜನಿಗೆ ಸಮಸ್ತ ಕಾರ್ಯನಿಪುಣನಾದ ಕಾಷ್ಠಾಂಗಾರನೆಂಬ ಮಂತ್ರಿ ಇದ್ದನು ಮತ್ತು ರುದ್ರದತ್ತನೆಂಬ ಪುರೋಹಿತನಿದ್ದನು ಎಂದು ಉ. ಪುರಾಣದಲ್ಲಿ ಹೇಳಲಾಗಿದೆ. ಇದನ್ನೇ ಕ್ಷತ್ರಚೂಡಾಮಣಿಯಲ್ಲಿ ಕಾಷ್ಠಾಂಗಾರನೆಂಬ ಕೃತಘ್ನನಿಗೆ, ವಿಷಯ ಲಂಪಟನಾದ ಸತ್ಯಂಧರನು ರಾಜ್ಯಭಾರವನ್ನು ಒಪ್ಪಿಸಿದನೆಂದು ಹೇಳಲಾಗಿದೆ.

ಉ.ಪುರಾಣದಲ್ಲಿ ಸತ್ಯಂಧರ ಮಹಾರಾಜನನ್ನು ಕೊಲ್ಲಲು ಪ್ರಚೋದಿಸುವವನು ರುದ್ರದತ್ತ ಪುರೋಹಿತನು. ಅದಕ್ಕೆ ಕಾಷ್ಠಾಂಗಾರನು “ಭೃತ್ಯನಾದ ನನ್ನನ್ನು ರಾಜನು ಮಂತ್ರಿ ಪದದಲ್ಲಿ ಸೇರಿಸಿದನು. ಉಪಕಾರಸ್ಮರಣೆಯಿಲ್ಲದ… ಅಕೃತಜ್ಞನಂತೆ, ಹೇಗೆ ತಾನೇ ಅಪಕಾರವನ್ನು ಮಾಡುತ್ತೇನೆ…” ಎಂದು ಭಯವುಳ್ಳವನಾಗಿ ಕಿವಿಮುಚ್ಚಿಕೊಳ್ಳುತ್ತಾನೆ. ಆದರೆ ಸತ್ಯಂಧರನ ಮಗನಿಂದ ನಿನಗೆ ಮರಣವಾಗುತ್ತದೆಂಬ ಮಾತನ್ನು ರುದ್ರದತ್ತ ಪುರೋಹಿತನು ಹೇಳಿದಾಗ, ಉಳಿದ ಅರಸರನ್ನು ಭೇದೋಪಾಯದಿಂದ ತನ್ನತ್ತ ಮಾಡಿಕೊಂಡು ಸ್ವತಃ ಕಾಷ್ಠಾಂಗಾರನೇ ಅರಮನೆಯ ಮೇಲೆ ದಂಡೆತ್ತಿ ಹೋಗುತ್ತಾನೆ. ಯುದ್ಧದಲ್ಲಿ ಸೋಲುತ್ತಾನೆ. ಆದರೆ ಕಾಷ್ಠಾಂಗಾರನ ಮಗನಾದ ಕಾಲಾಂಗರಿಕನು ತನ್ನ ತಂದೆಗಾದ ಸೋಲಿನ ಸೇಡನ್ನು ತೀರಿಸಿಕೊಳ್ಳಲು, ದೊಡ್ಡ ಸೈನ್ಯದೊಂದಿಗೆ ಪುನಃ ಯುದ್ಧಕ್ಕೆ ಬಂದು, ಸತ್ಯಂಧರನನ್ನು ಯುದ್ಧದಲ್ಲಿ ಕೊಲ್ಲುತ್ತಾನೆ. ಕಾಷ್ಠಾಂಗಾರನು ರಾಜನಾಗುತ್ತಾನೆ. ಮದನನೆಂಬವನು ಯುದ್ಧಕ್ಕೆ ಹೋದಂತೆ ಕ್ಷತ್ರ ಚೂಡಾಮಣಿಯಲ್ಲಿ ಬರುತ್ತದೆ. ಈ ಸಂದರ್ಭವನ್ನು ಕವಿ ಭಾಸ್ಕರನು ಬಹು ಸ್ವಾರಸ್ಯವಾಗಿ ಮಾರ್ಪಡಿಸಿಕೊಂಡಿದ್ದಾನೆ. ಈ ಬಗ್ಗೆ ಮುಂದೆ ಪ್ರಸ್ತಾಪಿಸಲಾಗಿದೆ. ಕರ್ಮದ ಕೈವಾಡದಿಂದಾಗಿ ದುಷ್ಟ ಕಾಷ್ಟಾಂಗಾರನಿಗೆ ಮಂತ್ರಿ ಪದವಿಯನ್ನು ಸತ್ಯಂಧರನು ಕೊಟ್ಟನೆಂದು ಜೀವಂಧರ ಚಂಪೂದಲ್ಲಿ ಬಂದಿರುತ್ತದೆ.

ಸ್ಮಶಾನದಲ್ಲಿ ಬಂದ ಗಂಧೋತ್ಕಟನಿಗೆ ಸ್ವತಃ ವಿಜಯಾಮಹಾದೇವಿಯೇ ಭೆಟ್ಟಿಯಾಗಿ ತನ್ನ ಕೂಸನ್ನು ಕೊಡುತ್ತಾಳೆ, ಹಾಗೂ ಆತನನ್ನು ಯಾರಿಗೂ ತಿಳಿಯದಂತೆ ರಕ್ಷಿಸಲು ಹೇಳುತ್ತಾಳೆ  – ಉ.ಪು. ದಲ್ಲಿ, ಗಂಧೋತ್ಕಟನಿಗೆ ಸತ್ತ ಮಕ್ಕಳು ಹುಟ್ಟುವುದಕ್ಕೆ ಆತನ ಹಿಂದಿನ ಜನ್ಮದ ಕರ್ಮವೆಂದು ಹೇಳಿ, ಮುಂದೆ ಹುಟ್ಟುವ ಮಗನನ್ನು ಬದಲು ಮಾಡುವ ವಿಚಾರ ಹೇಳಿದವರು ಶೀಲಗುಪ್ತರೆಂಬ ಸ್ವಾಮಿಗಳೆಂದೂ, ಅದನ್ನು ಕೇಳಿದ ಒಂದು ಯಕ್ಷಿಣಿ ಗರುಡಮಂತ್ರವನ್ನು ಹೊಂದಿಕೊಂಡಿತ್ತೆಂದು, ಅದೇ ಮುಂದೆ ಸ್ಮಶಾನದಲ್ಲಿ ದಾಸಿಯಾಗಿ ಕಾಣಿಸಿಕೊಂಡು ವಿಜಯಾ ಮಹಾದೇವಿಗೆ ಸಹಾಯಮಾಡಿತೆಂದೂ ಹೇಳಲಾಗಿದೆ  – ಉ.ಪು. ದಲ್ಲಿ.

ಗಂಧೋತ್ಕಟನ ಮನೆಯಲ್ಲಿ ಬೆಳೆದ ಜೀವಂಧರನ ಜೊತೆಗೆ ಸತ್ಯಂಧರನ ಮಂತ್ರಿ ಸೇನಾಪತಿ, ಪುರೋಹಿತ, ರಾಜಶ್ರೇಷ್ಠಿಯವರ ಮಕ್ಕಳು ಬೆಳೆದರು  – ರಾಜಪುರಿಯ ೫೦೦ ಜನ ಮಕ್ಕಳೆಲ್ಲ.

ಜೀವಂಧರನಿಗೆ ವಿದ್ಯೆ ಕಲಿಸಿದ ಗುರು ತನ್ನ ವಿವರಗಳನ್ನು ಕೊಡುತ್ತಾನೆ.

ಸುರಮಂಜರಿ ಮೊದಲು ಲಗ್ನವಾಗುತ್ತಾಳೆ  – ಗಜಪ್ರಕರಣದಿಂದಾಗಿ ವೇಷಾಂತರದಲ್ಲಿ ಹೋಗಿ ಲಗ್ನವಾಗುವುದು ಗುಣವತಿಯನ್ನು, ವೃದ್ಧನ ವೇಷದಲ್ಲಿ ಹೋಗಿ ಕಾಷ್ಠಾಂಗಾರನಲ್ಲಿ ಊಟ ಮಾಡುತ್ತಾನೆ – ಜೀವಂಧರ. ನಾಯಿಯನ್ನು ಕೊಂದವರು ಹುಡುಗರು  – ಬ್ರಾಹ್ಮಣರಲ್ಲ. ವಿಮಳೆಯ ತಂದೆಯ ಹಳೆಯ ರತ್ನರಾಶಿ ಮಾರಾಟವಾದುದು ಜೀವಂಧರನು ಅವರ ಮನೆ ಜಗುಲಿಯ ಮೇಲೆ ಕೂತ ಕಾರಣಕ್ಕಾಗಿ ಎಂದು ನಂಬಿ ಅವಳನ್ನು ಜೀವಂಧರನಿಗೆ ಲಗ್ನ ಮಾಡಲಾಯಿತು.

ಜೀವಂಧರನ ಸೋದರ ಮಾವ ಕಾಷ್ಠಾಂಗಾರನಿಗೆ ಮಿತ್ರನ ಸೋಗಿನಲ್ಲಿ ಬಂದು ರಾಜಪುರಿಯಲ್ಲಿ ನಿಂತು ಮಗಳ ಸ್ವಯಂವರದಲ್ಲಿ ಜೀವಂಧರನ ಸತ್ಯಸಂಗತಿಯನ್ನು ವಿವರಿಸುತ್ತಾನೆ.

ಗಂಧೋತ್ಕಟನಿಗೂ, ನಂದೆಗೂ ಜೀವಂಧರನನ್ನು ಸಲಹಿಕೊಂಡು ಬಂದ ಮೇಲೆ ಹುಟ್ಟಿದ ನಂದಾಢ್ಯ ಎಂಬ ಮಗನ ಹಾಗೂ ಜೀವಂಧರನ ಹಿಂದಿನ ಭವಗಳ ಕಥೆಗಳ ವಿವರವಾಗಿ ನಿರೂಪಿತವಾಗಿವೆ. ಮೇಲಿನ ಅಂಶಗಳು ಬಹುಶಃ ಎಲ್ಲ ಗ್ರಂಥಗಳಲ್ಲಿಯೂ ಸ್ವಲ್ಪ ಹೆಚ್ಚು ಕಡಿಮೆ ಇವೆ. ಕಥೆಯ ಕೊನೆಯಲ್ಲಿ ಗುಣಭದ್ರಾಚಾರ್ಯರು ಜೀವಂಧರನ ಹಿಂದಿನ ಜನ್ಮಕ್ಕೆ ಸಂಬಂಧಿಸಿದ ಮಾತನ್ನೇ ಹೇಳಿ, ಕರ್ಮದ ಕೈವಾಡ ಎಂತಹ ವಿಚಿತ್ರವಾದುದು ಎಂದು ಉದ್ಗಾರ ತೆಗೆದಿದ್ದಾರೆ  – ಆ ಮಾತುಗಳು ಹೀಗಿವೆ –

“ಭಟ್ಟರೆ, ಬುದ್ಧಿಯಿಲ್ಲದ ಆ ಜಯದ್ರಥನು (ಜೀವಂಧರನ ಹಿಂದಿನ ಭವದಲ್ಲಿಯ ಹೆಸರು  – ಇದು ಯಶೋಧರ ಎಂದು ಕ್ಷತ್ರಚೂಡಾಮಣಿಯಲ್ಲಿದೆ) ದಯೆಯನ್ನು ಬಿಟ್ಟು ಹಂಸದ ಮರಿಯನ್ನು ಹದಿನಾರು ದಿನಗಳವರೆಗೆ ತಂದೆ ತಾಯಿಗಳಿಂದ ಬಿಡಿಸಿ (ಅವನೇ ಆಗಿರುವ ಈ) ಜೀವಂಧರನು ಹದಿನಾರು ವರ್ಷಗಳ ವರೆಗೆ ಸ್ವಜನರ ವಿಯೋಗವನ್ನು ಹೊಂದಿದನು. ಅಂತಹ ಪಾಪಕಾರ್ಯಗಳನ್ನು ನೀವು ಮಾಡಬೇಡಿ. ಈ ತಂದೆಯಾದ ಸತ್ಯಂಧರನ ಮರಣವೆಲ್ಲಿ? ಸ್ಮಶಾನದಲ್ಲಿ ಜೀವಂಧರನ ಜನ್ಮವೆಲ್ಲಿ? ವೈಶ್ಯ ಗಂಧೋತ್ಕಟನ ಸಮೀಪಾಗಮನವೆಲ್ಲಿ? ಯಕ್ಷನ ಉಪಕಾರವೆಲ್ಲಿ? ಆ ಜೀವಂಧರನ ಅಭ್ಯುದಯದ ವಿಧಾನವೆಲ್ಲಿ? ಶತ್ರು ಕಾಷ್ಠಾಂಗಾರಕನ ವಧೆಯಲ್ಲಿ? ದೈವದ ವಿಲಾಸವು ಆಶ್ಚರ್ಯವಾದುದು! ಭವ್ಯನೇ! ಇದನ್ನು ಈ ಜೀವಂಧರನಲ್ಲಿ ನೋಡು.”

ಈ ಭವ್ಯಾವಳಿಗಳ ಕಥೆಗಳನ್ನು ಸಂಪೂರ್ಣ ಕೈಬಿಟ್ಟಂತೆ, ಗದ್ಯ ಚಿಂತಾಮಣಿಯಲ್ಲಿ ಉದ್ದಕ್ಕೂ ಬರುವ, ನಂದಿ ಮುನಿಯ ಭಸ್ಮಕರೋಗದ ಪ್ರಸಂಗವನ್ನು ಮೊಟಕುಗೊಳಿಸಿದ್ದಾನೆ – ಭಾಸ್ಕರ ಕವಿ. ಅದರಂತೆ ಕ್ಷತ್ರ ಚೂಡಾಮಣಿಯಲ್ಲಿ ಬರುವ, ಅಡವಿಯಲ್ಲಿ ಬೆಂಕಿಯ ಆಪತ್ತಿಗೆ ಸಿಕ್ಕ ಪ್ರಾಣಿಗಳನ್ನು ಯಕ್ಷನ ಸಹಾಯದಿಂದ ಮಳೆ ತರಿಸಿ ರಕ್ಷಿಸಿದ ಪ್ರಸಂಗವನ್ನೂ, ಅನಂಗಮಾಲೆಯ ಪ್ರಸಂಗದಲ್ಲಿ ಬರುವ ಸ್ತ್ರೀಯರ ಚಾರಿತ್ರ‍್ಯಕ್ಕೆ ಸಂಬಂಧಿಸಿ ಬರುವ ಉಪಕಥೆಯನ್ನೂ ಭಾಸ್ಕರ ಕವಿಯು ಸಂಪೂರ್ಣವಾಗಿ ಕೈಬಿಟ್ಟಿದ್ದಾನೆ. ಕನಕಮಾಲೆಯ ಲಗ್ನವಾದ ಪ್ರಸಂಗದಲ್ಲಿಯೂ ವ್ಯತ್ಯಾಸವಿದೆ. ಇಂತಹ ಅನೇಕ ಸಣ್ಣ ಪುಟ್ಟ ವಿವರಗಳ ಗೋಜಿಗೆ ಕವಿ ಭಾಸ್ಕರನು ಗಮನ ಕೊಟ್ಟಂತೆ ಕಾಣುವದಿಲ್ಲ.

ಈಗ, ಈ ಎಲ್ಲ ಗ್ರಂಥಗಳಲ್ಲಿರುವ ಹಾಗೂ ಕವಿ ಭಾಸ್ಕರನ ಪ್ರತಿಭೆಗೆ ಉಹಾ ಶಕ್ತಿಗೆ, ಲೋಕಾನುಭವಕ್ಕೆ ಕನ್ನಡಿ ಹಿಡಿದಂತಿರುವ ಒಂದೆರಡು ಸಂಗತಿಗಳನ್ನು ಇಲ್ಲಿ ನೋಡಬಹುದು.

ಕಾಷ್ಠಾಂಗಾರನಂತಹ ಕೃತಘ್ನನನ್ನು ಮಂತ್ರಿಯನ್ನಾಗಿ ಮಾಡಿಕೊಂಡುದಕ್ಕೆ ಸಮಾಧಾನಕರವಾದ ಉತ್ತರ ಯಾವ ಗ್ರಂಥದಲ್ಲಿಯೂ ಸಿಕ್ಕುವುದಿಲ್ಲ. ಉತ್ತರ ಪುರಾಣದಲ್ಲಿ “ಭೃತ್ಯನಾದ ನನ್ನನ್ನು “ರಾಜನು ಮಂತ್ರಿಯನ್ನಾಗಿ ಮಾಡಿದ್ದಾನೆ ಎಂಬ ಮಾತಿನಿಂದ ಕಾಷ್ಠಾಂಗಾರನು ಮೊದ ಮೊದಲು ನಿಕೃಷ್ಠ ಸ್ಥಿತಿಯಲ್ಲಿದ್ದನೆಂಬ ಕಲ್ಪನೆ ಬರಬಹುದಾಗಿದೆ. ಆದರೆ ಭಾಸ್ಕರ ಕವಿಯು ಕಾಷ್ಠಾಂಗಾರನು ಮಂತ್ರಿಯಾದುದನ್ನು ಒಂದು ಸ್ವಾರಸ್ಯವಾದ ಪ್ರಸಂಗವನ್ನೇ ಮಾಡಿದ್ದಾನೆ. ಕಾಷ್ಠಾಂಗಾರನು ಹೆಸರಿಗೆ ತಕ್ಕಮತೆ ಕಟ್ಟಿಗೆ ಮಾರುವವನೇ ಇದ್ದು, ಒಂದು ದಿವಸ ಆ ಊರಿನ ವೇಶ್ಯಾ ರತ್ನ ಪದ್ಮಾವತಿಯಿಂದ ಅಪಹಾಸ್ಯಕ್ಕೀಡಾಗಿ, ಅವಳನ್ನು ಹೊಂದಲು ಸಾವಿರ ಹೊನ್ನನ್ನು ಕೂಡಿಸಿ, ಕೊಡಲು ಹೋದ ದಿನ, ತನ್ನ ವೃತದ ದಿನವೆಂದು ಅವಳನ್ನು ಭೋಗಿಸದೆ ಬಂದುದು ಇವೆಲ್ಲ ಸಂಗತಿಗಳ ಮೂಲಕ ಆತನ ಛಲ, ಈರ್ಷೆ, ಉಪಾಯ ವೃತನಿಷ್ಠೆ. ಇಂದ್ರಿಯ ನಿಗ್ರಹ ಮೊದಲಾದ ಗುಣಗಳನ್ನು ವ್ಯಕ್ತಮಾಡಿದ್ದಾನೆ  – ಕವಿ ಭಾಸ್ಕರ. ಇಂತಹ ಗುಣಗಳಿಂದ ಕೂಡಿದ ವ್ಯಕ್ತಿಯನ್ನು ಸತ್ಯಂಧರನು ಮಂತ್ರಿಯನ್ನಾಗಿ ನಿಯಮಿಸಿದನೆಂದು ಹೇಳಿ. ಕಾಷ್ಠಾಂಗಾರನು ಮಂತ್ರಿ ಪದವಿಗೆ ಹೇಗೆ ಬಂದನೆಂಬುದನ್ನು ವಿವರಿಸಿದ್ದಾನೆ. ಇಷ್ಟೇ ಅಲ್ಲದೆ ಮಂತ್ರಿ ಪದವಿ ಅನಾಯಾಸವಾಗಿ ಕೈಗೆ ಸಿಕ್ಕಾಗ, ಆತನ ದುಷ್ಟ ಪ್ರಕೃತಿಯೇ ಜಾಗ್ರತವಾಗಿ, ಅವನು ಸತ್ಯಂಧರನನ್ನು ಕೊಂದುದು ಹಾಗೂ ಆತನ ಮಗನನ್ನೂ ಕೊಲ್ಲಲು ಪ್ರಯತ್ನಿಸುವುದು – ಮೊದಲಾದವುಗಳನ್ನು ವಿವರಿಸಿ, ಸರಿಯಾದ ಸಂಸ್ಕಾರವಿಲ್ಲದ ವ್ಯಕ್ತಿ ಹೇಗೆ ಕೃತಘ್ನನಾಗುತ್ತಾನೆಂಬುದನ್ನು ತೋರಿಸಿದ್ದಾನೆ. ಇಲ್ಲಿ ನಿಜವಾಗಿಯೂ ಕವಿ ಭಾಸ್ಕರನ ಕಲ್ಪನಾಶಕ್ತಿ ತಲೆದೂಗುವಂತಿದೆ.

ಇನ್ನೊಂದು ಪ್ರಸಂಗವೆಂದರೆ  – ಜೀವಂಧರನಿಗೆ ವೈರಾಗ್ಯ ಪ್ರಾಪ್ತವಾದ ಸಂಗತಿ. ಕಾಷ್ಠಾಂಗಾರನಿಂದ ರಾಜ್ಯ ಪಡೆದು ಸುಖ ಸಂತೋಷದಿಂದ ಮೂವತ್ತು ವರ್ಷ ರಾಜ್ಯವಾಳಿದ ಜೀವಂಧರನು “ಒಂದು ದಿವಸ ಅಶೋಕವನದಲ್ಲಿ ಪರಸ್ಪರವಾಗಿ ಜಗಳಾಡುವುದೂ, ಜ್ವಲಿಸುತ್ತಿರುವ ಕೋಪವೆಂಬ ಬೆಂಕಿಯುಳ್ಳವರೂ ಆದ ಕಪಿಗಳ ಹಿಂಡನ್ನು ನೋಡಿ” ಸಂಸಾರದ ಬಗ್ಗೆ ವೈರಾಗ್ಯ ಹೊಂದುವಂತಾಯಿತೆಂದು ಉ. ಪುರಾಣದಲ್ಲಿ ಹೇಳಾಗಿದೆ.

ಕ್ಷತ್ರ ಚೂಡಾಮಣಿಯಲ್ಲಿ ಈ ಪ್ರಸಂಗ ಹೀಗೆ ವಿವರಿಸಲ್ಪಟ್ಟಿದೆ –

ವಸಂತಕಾಲದ ಒಂದು ದಿನ ಜೀವಂಧರನು ತನ್ನ ಎಂಟು ಜನ ಹೆಂಡಂದಿರೊಡಗೂಡಿ ಜಲಕ್ರೀಡೆಯಾಡಿ, ಬಳಲಿಕೆ ಕಳೆಯಲು ಒಂದು ಉದ್ಯಾನಕ್ಕೆ ಬಂದನು. ಅಲ್ಲಿ ಕೆಲವು ಕಪಿಗಳ ಚೇಷ್ಟೆ ಕಂಡನು. ಒಂದು ಗಂಡು ಕಪಿ ತಾನು ಮತ್ತೊಂದು ಹೆಣ್ಣು ಕಪಿಯ ಸಂಗಡ ಸೇರಿದುದಕ್ಕೆ ಕೋಪಗೊಂಡ ತನ್ನ ಹೆಣ್ಣು – ಕಪಿಯನ್ನು ಸಮಾಧಾನ ಮಾಡುತ್ತಿತ್ತು. ಏನು ಮಾಡಿದರೂ ಆ ಹೆಣ್ಣು ಕಪಿ ಸಮಾಧಾನ ಹೊಂದದಿರಲು, ಗಂಡು ಕಪಿಯು ಸತ್ತಂತೆ ಬಿದ್ದಿತು. ಅದರ ನಟನೆಯನ್ನು ತಿಳಿಯದ ಹೆಣ್ಣು ಕಪಿ ಕೋಪವನ್ನು ಬಿಟ್ಟು, ಆ ಗಂಡು ಕಪಿಯನ್ನು ಸಮಾಧಾನ ಮಾಡಿತು. ಹೆಣ್ಣು ಕಪಿಯ ಮೇಲೆ ಸಂತುಷ್ಟಗೊಂಡ ಗಂಡು ಕಪಿ, ಅದಕ್ಕೊಂದು ಹಲಸಿನ ಹಣ್ಣನ್ನು ಕಿತ್ತುಕೊಟ್ಟಿತು. ಅದನ್ನು ಕಂಡ ತೋಟಿಗನು ಕಪಿಯನ್ನು ಬೆದರಿಸಿ, ಅದರಿಂದ ಆ ಹಣ್ಣನ್ನು ಕಿತ್ತುಕೊಂಡನು. ಇದನ್ನೆಲ್ಲವನ್ನೂ ನೋಡಿದ ಜೀವಂಧರನಿಗೆ ಸಂಸಾರದಲ್ಲಿ ವೈರಾಗ್ಯವುಂಟಾಯಿತು. ಜೀವಂಧರ ಚಂಪೂವಿನಲ್ಲಿಯೂ ಈ ಪ್ರಸಂಗ ಹೀಗೆಯೇ ವರ್ಣಿತವಾಗಿದೆ.

ಆದರೆ ಭಾಸ್ಕರಲ್ಲಿ ಈ ಪ್ರಸಂಗವು ಹೀಗೆ ವರ್ಣಿತವಾಗಿದೆ  – ಒಂದು ದಿವಸ ಜೀವಂಧರನು ತನ್ನ ಅರಮನೆಯ ಉಪ್ಪರಿಗೆಯಲ್ಲಿ ತನ್ನ ರಾಣಿಯರ ಸಂಗಡ ವಿಹರಿಸುತ್ತ, ಎದುರಿನ ನಂದನವನದಲ್ಲಿದ್ದ ಕಪಿಗಳ ಆಟವನ್ನು ನೋಡುತ್ತಿದ್ದನು. ಆಗ ಒಂದು ಕಪಿ ಇನ್ನೊಂದು ಕಪಿಯೊಡನೆ ನೆರೆಯಲು, ಆ ಹೆಣ್ಣು ಕಪಿಯ ಪತಿ ಛಂಗನೆ ಹಾರಿ ಬಂದು ಸಿಟ್ಟಿನಿಂದ ಆ ಗಂಡುಕಪಿಯನ್ನು ಕೊಂದಿತು. ಆ ಕಾರಣದಿಂದ ಎರಡೂ ಪಕ್ಷಿಗಳ ಕಪಿಗಳು ಪರಸ್ಪರ ಹೋರಾಡಿ ಸತ್ತವು. ಇದನ್ನು ನೋಡಿದ ಜೀವಂಧರನಲ್ಲಿ ಸಂಸಾರದ ಬಗೆಗೆ ವೈರಾಗ್ಯ ಉಂಟಾಯಿತು. ಕಪಿಗಳನ್ನು ನಿರೀಕ್ಷಿಸುತ್ತಿದ್ದ ಜೀವಂಧರನಿಗೆ ವೈರಾಗ್ಯವುಂಟಾಯಿತೆಂಬ ಮಾತು ಎಲ್ಲ ಗ್ರಂಥಗಳಲ್ಲಿಯೂ ಇದೆ. ಆದರೆ ಭಾಸ್ಕರನು ಹೇಳುವ ಮಾತು ಕಪಿಗಳ ಜೀವನ ಕ್ರಮಕ್ಕೆ ಹೆಚ್ಚು ಸಮಂಜಸವಾಗಿ ಇರುವುದನ್ನು ನೋಡಿದಾಗ, ಕವಿ ಭಾಸ್ಕರನ ಲೌಕಿಕ – ಜ್ಞಾನದ ಬಗೆಗೆ ಮೆಚ್ಚುಗೆಯಾಗುವಂತಿದೆ. ಈ ರೀತಿ ಕವಿ ಭಾಸ್ಕರನು ಹಿಂದಿನ ಗ್ರಂಥಗಳಿಂದ ಉಪಕೃತನಿದ್ದರೂ, ತನ್ನ ತನವನ್ನು ತೋರಿಸಿ ಓದುಗನ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಅದರಂತೆ ಯುದ್ಧ ಭೂಮಿಯಲ್ಲಿ ವೈರಾಗ್ಯದಿಂದ ಜೀವಬಿಟ್ಟ ಸತ್ಯಂಧರನ ದೇಹವು ಗಾಳಿ ಬೀಸಿದಾಗ ಅಲ್ಲಾಡುವುದು, ಅದಕ್ಕೆ ಜೀವವಿದೆಯೆಂದು ಹೆಣಕ್ಕೆ ಬಾಣ ಬಿಡುವ ಚಿತ್ರ ಭಾಸ್ಕರನ ಊಹಾಶಕ್ತಿಯನ್ನು ಎತ್ತಿ ತೋರಿಸುತ್ತದೆ. ಬೇರೆ ಗ್ರಂಥಗಳಲ್ಲಿ ಸಂದರ್ಭ ಈ ರೀತಿಯಾಗಿ ವರ್ಣಿತವಾಗಿಲ್ಲ.

ಇನ್ನು ಜೀವಂಧರ ಚರಿತೆಯನ್ನು ಕಾವ್ಯ ಎಂಬ ದೃಷ್ಟಿಯಿಂದ ಸ್ವಲ್ಪನೋಡಬಹುದು. “ಧರ್ಮಮುಮಂ ಕಾವ್ಯಧರ್ಮಮುಮಂ” ಎರಡನ್ನೂ ತಮ್ಮ ಗ್ರಂಥಗಳಲ್ಲಿ ಸಾಧಿಸುವ ಪ್ರಯತ್ನವನ್ನು ಜೈನಕವಿಗಳು ಮಾಡಿದ್ದಾರೆ. ಜೀವಂಧರ ಚರಿತೆಯನ್ನು ಓದಿದಾಗ ಅಲ್ಲಲ್ಲಿ ಈ ಮಾತು ಕಣ್ಣಿಗೆ ಬೀಳುತ್ತದೆಯಾದರೂ ಸಮಗ್ರ ಗ್ರಂಥವನ್ನು ಓದಿದಾಗ ಕವಿ ಭಾಸ್ಕರನ ದೃಷ್ಟಿ ಕಾವ್ಯಧರ್ಮವನ್ನು ಪಾಲಿಸುವುದರ ಕಡೆಗೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಜೀವಂಧರ ಒಬ್ಬ ಪುಣ್ಯ ಪುರುಷ. ಆತನ ಕಥೆ ಜನರಿಗೆ ಮೆಚ್ಚಿಗೆ ಆಗಿದೆ. ಅದನ್ನು ಸಾಮಾನ್ಯ ಜನತೆಗೆ ತಿಳಿಸಬೇಕು. ನಿಜ. ಆದರೆ ಆತನ ಚರಿತ್ರೆಯ ಜೊತೆಗೆ ಜನರಿಗೆ ನೀತಿ ಬೋಧೆ ಮಾಡುವುದೇ ಕವಿಗೆ ಬೇಕಾದ ಮಾತಾಗಿದೆ. ಕಾಷ್ಠಾಂಗಾರನಿಗೆ ಮಂತ್ರಿ ಪದವಿ ಕೊಡುವಾಗ ಮಂತ್ರಿ ಎಂದರೆ ಹೇಗಿರಬೇಕು ಎಂಬ ವಿಷಯಕ್ಕೆ ಸಾಕಷ್ಟು ಪದ್ಯಗಳನ್ನು ಬರೆದಿದ್ದಾನೆ. ಸತ್ಯಂಧರ ಮಹಾರಾಜನು ಯುದ್ಧ ಮಾಡುತ್ತಿದ್ದಂತೆಯೇ ತಾನು ಸಾಯುವದು ಖಂಡಿತ, ಆದ್ದರಿಂದ ಹಿಂಸೆಯಲ್ಲಿ ತೊಡಗುವುದೇತಕ್ಕೆ ಎಂದು ಶಸ್ತ್ರಸನ್ಯಾಸ ಮಾಡುತ್ತಾನೆ. ಆಗ ಸಂಸಾರದ ಅಸಾರತೆಯನ್ನು ಕುರಿತು ಸಾಕಷ್ಟು ಪದ್ಯ ಬರೆದಿದ್ದಾನೆ. ಯುದ್ಧದ ಭೀಕರ, ಭಯಾನಕ ಪ್ರಸಂಗದಲ್ಲಿ ಈ ರೀತಿ ಒಮ್ಮೆಲೇ ಬರುವ ಈ ನೀತಿಬೋಧೆಯಿಂದ ರಸಭಂಗವಾಗುತ್ತದೆ; ಓದುಗನಿಗೆ ನಿರಾಶೆಯಾಗುತ್ತದೆ ಅದರಂತೆ ಸ್ಮಶಾನದಲ್ಲಿ ದಾಸಿಯ ರೂಪದಲ್ಲಿದ್ದ ವ್ಯಂತರರಾಇ ವಿಜಯಾದೇವಿಗೆ ಮಾಡುವ ಉಪದೇಶ, ಜೀವಂಧರನಿಗೆ ಗುರು ಮಾಡುವ ಉಪದೇಶ, ಒಕ್ಕಲಿಗನನ್ನು ಸಮ್ಯಕ್ – ದೃಷ್ಟಿ ಶ್ರಾವಕನನ್ನು ಮಾಡುವಾಗ ಜೀವಂಧರನು ಹೇಳುವ ಮಾತುಗಳು, ಅನಂಗಮಾಲೆಯ ಗಂಡನಿಗೆ ಸ್ತ್ರೀಯರ ಬಗ್ಗೆ ಜೀವಂಧರ ಹೇಳುವ ಮಾತುಗಳು, ಕರ್ಮ ಮನುಷ್ಯನನ್ನು ಏನೇನೋ ಸ್ಥಿತಿಗೆ ಒಯ್ದುಬಿಡುತ್ತದೆಂದೂ, ಧರ್ಮದಿಂದ ನಡೆದರೆ ಒಳಿತಾಗುತ್ತದೆಂದೂ ಹೇಳುವ ನುಡಿಗಳು – ಓದುಗನಿಗೆ ಧರ್ಮ, ರೀತಿ, ನೀತಿ ನಿಯಮಗಳನ್ನು ಸ್ಪಷ್ಟವಾಗಿ ಪದೇ ಪದೇ ಹೇಳಬೇಕೆಂಬುದೇ ಕವಿ ಭಾಸ್ಕರನಿಗೆ ಬೇಕಾದ ಮಾತಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಕಾರಣ ಭಾಸ್ಕರನ ಈ ಗ್ರಂಥ ನೀರಿ ಬೋಧಿಸಲೆಂದೇ ಬರೆದ ಧರ್ಮ ಕಾವ್ಯವೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲವೆನ್ನಿಸುತ್ತದೆ. ಕ್ಷತ್ರ ಚೂಡಾಮಣಿ ಗ್ರಂಥವನ್ನು ಅನುಸರಿಸಿ ಬರೆದ ಕವಿ ಭಾಸ್ಕರನು ಆ ಗ್ರಂಥದಿಂದಲೇ ಸ್ಫೂರ್ತಿ ಪಡೆದಿದ್ದಾನೆನ್ನುವುದನ್ನು ಮರೆಯುವಂತಿಲ್ಲ.

ಜೀವಂಧರ ಚರಿತೆ ಹೆಸರಿಗೆ ಜೈನ ಧಾರ್ಮಿಕ ಗ್ರಂಥವಾದರೂ ಅದರಲ್ಲಿ ಬರುವ ನೀತಿ, ಧರ್ಮ, ಭಕ್ತಿ ನಿರೂಪಣೆ, ವೈದಿಕ ದೇವತೆಗಳ, ಪುರಾಣ ಪುರುಷರ ದೃಷ್ಟಾಂತ ಮುಂತಾದವುಗಳನ್ನು ಗಮನಿಸಿದರೆ, ಕವಿದೃಷ್ಟಿ ಮತಾತೀತವಾಗಿದೆ, ಮಾನವನ ಏಳ್ಗೆಗಾಗಿ ಬರೆಯಲ್ಪಟ್ಟ ಗ್ರಂಥವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಉದಾಹರಣೆಗಳನ್ನು ಪ್ರತ್ಯೇಕವಾಗಿ ಕೊಡುವ ಅವಶ್ಯಕತೆಯಿಲ್ಲ  – ಗ್ರಂಥ ಓದುತ್ತ ಹೋದಂತೆ ಸಾಕಷ್ಟು ಉದಾಹರಣೆಗಳು ಸುಲಭವಾಗಿ ಸಿಕ್ಕುತ್ತವಾದ್ದರಿಂದ!

ಕವಿ ಭಾಸ್ಕರನಿಗೆ ತನ್ನ ಗ್ರಂಥವನ್ನು ಶಕ್ಯವಿದ್ದಷ್ಟು ಸರಳ ಮಾಡಬೇಕೆಂಬ ಇಚ್ಛೆ ಇದ್ದಿರಬೇಕು. ಅಂತಲೆ ಆತನು, ಹಿಂದಿನ ಗ್ರಂಥಗಳಲ್ಲಿ ಬರುವ ಭವಾವಳಿಗಳನ್ನು, ಅನವಶ್ಯಕ ಉಪಕಥೆಗಳನ್ನು ಬಿಡಲು ಪ್ರಯತ್ನಿಸಿದ್ದುಂಟು. ಆದರೂ ತನ್ನ ಕಾವ್ಯದಲ್ಲಿ  ಹದಿನೆಂಟು ವರ್ಣನೆಗಳನ್ನು ತರಬೇಕೆಂಬ ಸಂಪ್ರದಾಯವನ್ನು ಕವಿ ಕೈಬಿಟ್ಟಿಲ್ಲ. ಹದಿನೆಂಟು ವರ್ಣನೆಗಳಿಲ್ಲದಿದ್ದರೆ ಮಹಾಕಾವ್ಯ ಆಗುವುದು ಹೇಗೆ ಎಂಬ ಪ್ರಾಚೀನ ವಿಚಾರ ಕವಿಯಲ್ಲಿ ಜಾಗ್ರತವಿದ್ದಂತೆ ಕಾಣುತ್ತದೆ. ಅಂತಲೆ ಆತನು, ಅವಶ್ಯವಿಲ್ಲದಿದ್ದರೂ ವೇಶ್ಯಾವಾಟದ ವರ್ಣನೆ ತಂದಿದ್ದಾನೆ. ಎಲ್ಲ ಕಷ್ಟ ನಷ್ಟಗಳನ್ನೂ ಅನುಭವಿಸಿ, ಪುಣ್ಯವಂತನೂ, ಶೀಲವಂತನೂ ಆದ ಜೀವಂಧರನು ರಾಜ್ಯವನ್ನು ಸುಖದಿಂದ ಆಳುತ್ತಿದ್ದನು. ಎಂಟು ಜನ ಹೆಂಡಂದಿರ ಸಂಗದಲ್ಲಿ ತೃಪ್ತಿ ಪಡೆದು ಸಂಸಾರ ನಡೆಯಿಸಿದ ಜೀವಂಧರನನ್ನು ಕವಿ ಒಮ್ಮೆ ಜಲ ಕ್ರೀಡೆಗೆ – ವನಕ್ರೀಡೆಗೆ ಕಳುಹಿಸುತ್ತಾನೆ. ಇನ್ನೊಮ್ಮೆ ತನ್ನ ಸಖರೊಂದಿಗೆ ಬೆಳದಿಂಗಳ ರಾತ್ರಿಯಲ್ಲಿ ಪುರವನೆಲ್ಲ ಸಂಚರಿಸಿ ವೇಶ್ಯಾವಾಟದ ವಿವಿಧ ಚಟುವಟಿಕೆಗಳನ್ನು ನೋಡಿ ಬರುವಂತೆ ವರ್ಣಿಸುತ್ತಾನೆ. ಈ ಎರಡೂ ಪ್ರಸಂಗಗಳು, ಅದರಲ್ಲೂ ಎರಡನೆಯ ಪ್ರಸಂಗವು, ಕವಿಯ ಸಾಮಯಿಕತೆಯನ್ನು ಎತ್ತಿ ತೋರಿಸುತ್ತದೆ. ಜೀವಂಧರನು ಗೋವುಗಳನ್ನು ಗೆದ್ದು ತಂದು ಗೋವಿಂದೆಯನ್ನು ಪದ್ಮಾಸ್ಯನೆಂಬ ತನ್ನ ತಮ್ಮನಿಗೆ ಲಗ್ನ ಮಾಡಿದನೆಂದು ಮೊದಲು ಹೇಳಿದ ಕವಿ. ನಂತರ ಆತನನ್ನು ನಂದಾಢ್ಯನೆಂದು ಕರೆದಿದ್ದಾನೆ. ಅದರಂತೆ ಸಮವಸರಣದಲ್ಲಿ ತಪಸ್ಸಿಗೆ ನಿಂತ ಜೀವಂಧರಸ್ವಾಮಿಯನ್ನು ನೋಡಿ ಶ್ರೇಣಿಕ ಮಹಾರಾಜನು ಗೌತಮ – ಗಣಧರರಿಗೆ ಪ್ರಶ್ನೆ ಮಾಡುತ್ತಾನೆ. ಆತನ ಬಗೆಗೆ ಸುಧರ್ಮ ಗಣಧರರು ಕಥೆ ಹೇಳಲು ಆರಂಭ ಮಾಡುತ್ತಾರೆ. ಜೀವಂಧರಸ್ವಾಮಿ ಇನ್ನೂ ಜೀವಂತವಿರುವಾಗ, ಅವನನ್ನು ನೋಡಿಯೇ ಕಥೆ ಹೇಳುತ್ತಿರುವಾಗ ಆತನು ಮೋಕ್ಷಕ್ಕೆ ಹೋದನೆಂದು ಹೇಳಿ ಹಾಗೆ ಮೋಕ್ಷ ಪಡೆದು ಸರ್ವೇಶ್ವರನು ತಾನಾದ ಜೀವಂಧರ ನೃಪಾಲನೀತನೆಂದು ಗೌತಮರು ಹೇಳಿ, ಜೀವಂಧರನನ್ನು ತೋರಿಸಿದರೆಂದು ಕಥೆ ಮುಕ್ತಾಯ ಮಾಡುವುದನ್ನು ನೋಡಿದರೆ, ಕವಿ ಭಾಸ್ಕರನು ಇಂತಹ ಸಣ್ಣ ಪುಟ್ಟ ಅವಾಂತರಗಳ ಬಗೆಗೆ ಲಕ್ಷಕೊಟ್ಟಂತಿಲ್ಲ. ಕ್ಷತ್ರ ಚೂಡಾಮಣಿಯಲ್ಲಿಯೂ ಹೀಗೆಯೇ ಹೇಳಿದೆ. ಆದರೆ ಉತ್ತರ ಪುರಾಣದಲ್ಲಿ ಮಾತ್ರ ಹೀಗೆ ತಪ್ಪು ಮಾಡಿಲ್ಲ. ‘ಹೀಗೆ ಕರ್ಮಕ್ಷಯ ಮಾಡಿಕೊಂಡು ಶ್ರೀ ಮಹಾವೀರಸ್ವಾಮಿಯ ಸಮವಸರಣದಲ್ಲಿ ತಪಸ್ಸು ಮಾಡುತ್ತಿರುವ ಈ ಜೀವಂಧರ ಸ್ವಾಮಿ ಮೋಕ್ಷಕ್ಕೆ ಹೋಗುತ್ತಾನೆಂದು ಹೇಳಲಾಗಿದೆ.’ ಇಂತಹ ಸಣ್ಣಪುಟ್ಟ ದೋಷಗಳತ್ತ ಕವಿ ಗಮನಕೊಟ್ಟಂತಿಲ್ಲ. ಕವಿಯ ಗಮನ ಕೇವಲ ಜೀವಂಧರನ ಪಾತ್ರದ ಮುಖಾಂತರ ಸಾಮಾನ್ಯ ಜನತೆಗೆ ಕರ್ಮದ ಮಹತ್ವವನ್ನು ಹೇಳಿ, ಅದನ್ನು ಧರ್ಮದತ್ತ, ನೀತಿಯತ್ತ ತರುವ ಉದ್ದೇಶವಿದ್ದಂತೆ ಇದೆ. ಈ ಉದ್ದೇಶದಲ್ಲಿ ಕವಿ ಸಫಲನಾಗಿದ್ದಾನೆಂದೇ ಹೇಳಬಹುದು. ಜೀವಂಧರನು ಶುಭಾಶುಭ ಕರ್ಮಗಳ ಫಲವನ್ನು ಪ್ರತ್ಯಕ್ಷ ತೋರಿಸುವ ಪ್ರತೀಕವಾಗಿದ್ದಾನೆ. ಸ್ಮಶಾನದಲ್ಲಿ ಹುಟ್ಟಿ, ರಾಜನ ಮಗನಾದರೂ ಪರದೇಶಿಯಂತೆ ವೈಶ್ಯನೊಬ್ಬನ ಮನೆಯಲ್ಲಿ ಬೆಳೆಯುತ್ತಾನೆ. ಅಶುಭ ಕರ್ಮದ ಫಲವಾಗಿ ತಂದೆ ತಾಯಿಗಳಿಂದ ದೂರನಾಗುತ್ತಾನೆ. ಆದರೂ ಶುಭ ಕರ್ಮದ ಫಲವಾಗಿ ಶಸ್ತ್ರ, ಶಾಸ್ತ್ರ ವಿದ್ಯೆಗಳಲ್ಲಿ ಪ್ರವೀಣನಾಗಿ, ದಯಾಧರ್ಮವನ್ನು ಆಚರಿಸುತ್ತ, ನಿಕೃಷ್ಟ ಸ್ಥಿತಿಯಲ್ಲಿದ್ದವರಿಗೆ ಅನುಕಂಪೆ ತೋರಿಸುವ ವಿವೇಕವುಳ್ಳ ವೀರಧೀರನಾಗಿ ಕಂಗೊಳಿಸುತ್ತಾನೆ. ಎಂಟು ಜನ ಸ್ತ್ರೀಯರನ್ನು ಲಗ್ನಮಾಡಿಕೊಂಡು ಭೋಗದಲ್ಲಿದ್ದರೂ, ಕಂಡ ಕಂಡ ಸ್ತ್ರೀಯರಿಗೆ ಇಚ್ಛಿಸುವ ಕಾಮುಕನಲ್ಲ; ಸಂಪೂರ್ಣ ಸಂಯಮಿ; ಶುಚಿ. ತಂದೆಯ ಪಟ್ಟವನ್ನು ಮರಳಿ ಪಡೆದು ಚಕ್ರವರ್ತಿಯಾದರೂ ಉಪಕಾರವನ್ನು ಮಾಡಿದ ಜನರನ್ನು ಮರೆಯುವ ಕೃತಘ್ನನಲ್ಲ; ಪ್ರಜೆಗಳ ಹಿತೈಷಿ, ರಕ್ಷಕ! ಭೋಗದ ತುಟ್ಟ ತುದಿಯಲ್ಲಿದ್ದರೂ ಮೈ ಮರೆಯದ ಜಾಣ. ಅಂತೆಯೇ ಸಾಮಾನ್ಯ ಮಂಗಗಳ ಆಟದಿಂದ ವೈರಾಗ್ಯವನ್ನು ಹೊಂದಿ, ಮೋಕ್ಷಲಕ್ಷ್ಮಿಯನ್ನು ಸಾಧಿಸಿದ ಮಹಾತ್ಮ.

ಸಾಮಾನ್ಯ ಸಂಸಾರಿ ಜೀವಿಯಾದ ಒಂದು ಆತ್ಮವು ಪರಮಾತ್ಮನಾಗಬಲ್ಲದು  – ಇದಕ್ಕೆ ಜೀವಂಧರನೇ ಸಾಕ್ಷಿ ಎನ್ನುವುದನ್ನು ವಿವರಿಸುವ ಜೀವಂಧರನ ಚರಿತೆಯನ್ನು ಕನ್ನಡ ಜನತೆಗೆ ಮೊಟ್ಟ ಮೊದಲು ಕೊಟ್ಟ ಶ್ರೇಯಸ್ಸಿನಂತೆ ಭಾಮಿನಿ ಷಟ್ಪದಿಯನ್ನು ಬಳಸಿಕೊಂಡು ಕಾವ್ಯ ಬರೆದ ಮೊದಲನೆಯ ಜೈನಕವಿ ಎಂಬ ಶ್ರೇಯಸ್ಸೂ ಭಾಸ್ಕರನದಾಗಿದೆ. ಸರಾಗವಾಗಿ ಓಡುವ ಅವನ ಭಾಮಿನಿ ಷಟ್ಪದಿ, ಅಲಲ್ಲಿ ಕಂಡುಬರುವ ರೂಪಕಗಳು, ಸುಂದರವಾದ ಕಲ್ಪನೆಯಿಂದೊಡಗೂಡಿದ ಪದ್ಯಗಳು, ಭಾಷೆಯ ಮೇಲಿನ ಪ್ರಭುತ್ವ, ಲೋಕೋಕ್ತಿಗಳು, ಮೊದಲಾದವು ಕವಿ ಭಾಸ್ಕರನ ಪ್ರತಿಭೆ, ಪಾಂಡಿತ್ಯ, ಲೋಕಜ್ಞಾನಗಳನ್ನು ಎತ್ತಿ ತೋರಿಸುತ್ತವೆ  – ಅವನೊಬ್ಬ ಒಳ್ಳೆಯ ಕವಿ ಎಂಬುದನ್ನು ಸಾರಿ ಹೇಳುತ್ತವೆ. ಈ ಮಾತನ್ನು ಬಹುಶಃ ಭಾಸ್ಕರನನ್ನು ಓದಿದ ಮಹನೀಯರೆಲ್ಲರೂ ಒಪ್ಪುತ್ತಾರೆ. ಆದರೂ ಭಾಸ್ಕರನು ಹಿಂದಿನ ಕವಿಗಳಿಂದ ಉಪಕೃತನಾದುದೇ ಹೆಚ್ಚು. ಹಿಂದಿನ ಕವಿಗಳ ಪದ್ಯಗಳನ್ನು, ಪದ್ಯಗಳ ಸಾಲುಗಳನ್ನು, ಪದಗಳನ್ನು ಧಾರಾಳವಾಗಿ ಉಪಯೋಗಿಸಿಕೊಂಡಿದ್ದರೂ ಅವರ ಹೆಸರುಗಳನ್ನು ಅವರು ಸ್ಮರಿಸಿಲ್ಲವೆಂದೂ

[1], ಕವಿ ಕುಮಾರವ್ಯಾಸನ ಪ್ರಭಾವವು ಕವಿ ಭಾಸ್ಕರನ ಮೇಲೆ ಆದುದು ಖಚಿತವೆನ್ನಿಸುತ್ತಿದ್ದರೂ “ಕುಮಾರವ್ಯಾಸ ಹಾಗೂ ಭಾಸ್ಕರ ಇಬ್ಬರಿಗೂ ಮೂಲ ಪ್ರೇರಕವಾದ ಇನ್ನೊಂದು ಗ್ರಂಥವಿರಬಹುದು. ಹಾಗೆ ತಿಳಿದುಕೊಳ್ಳಲು ಕೆಲಮಟ್ಟಿಗೆ ಅವಕಾಶವಿದೆ, ಆದರೂ ಜೀವಂಧರ ಚರಿತೆ’ ಕಲ್ಪನೆಯ ಸೌಷ್ಠವದಿಂದಲೂ ಶೈಲಿಯ ಲಾಲಿತ್ಯದಿಂದಲೂ ತಕ್ಕಮಟ್ಟಿಗೆ ಒಳ್ಳೇಯ ಕಾವ್ಯವಾಗಿ ಪರಿಣಮಿಸಿದೆ”[2]ಯಂದೂ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದುಂಟು. ಅವರ ಅಭಿಪ್ರಾಯಗಳು ಪ್ರಾಯಶಃ ಸತ್ಯವೂ ಇರಬಹುದು.[3] ಇದರರ್ಥ ಕವಿಯಾದವನು ತನ್ನ ಹಿಂದೆ ರಚಿತವಾದ ಸಾಹಿತ್ಯವನ್ನು ಓದಿರಬಾರದೆಂದಲ್ಲ. ಓದಿದ್ದರೆ, ಓದಿ ಅದರಿಂದ ಪ್ರಭಾವಿತನಾಗಿದ್ದರೆ ಅದರಲ್ಲಿ ಅಪರಾಧವೂ ಇಲ್ಲ. ಕಾಳಿದಾಸ, ಬಾಣ, ಪಂಪ, ರನ್ನರಂತಹ ಮಹಾಕವಿಗಳಿಗೂ ಈ ಮಾತು ಅನ್ವಯಿಸಬಹುದು. ಭಾಸ್ಕರ ಕವಿ ತನ್ನ ಗ್ರಂಥವನ್ನು ವಾದೀಭಸಿಂಹಸೂರಿಗಳ ಸಂಸ್ಕೃತ ಕಾವ್ಯಗಳನ್ನು ಓದಿ ಬರೆದುದಾಗಿ ಹೇಳಿದ್ದಾನೆ. “ಗದ್ಯ ಚಿಂತಾಮಣಿ” ಉತ್ತರ ಪುರಾಣದ ಮೇಲೆ ಆಧಾರಿತವಾಗಿದ್ದರೆ, ‘ಕ್ಷತ್ರಚೂಡಾಮಣಿ’, ‘ಜೀವಕ ಚಿಂತಾಮಣಿ’ ಎಂಬ ತಮಿಳು ಕಾವ್ಯವನ್ನು ಅನುಸರಿಸ ಬರೆದುದಾಗಿದೆ. ‘ಜೀವಕ ಚಿಂತಾಮಣಿ’ಯಂತೂ ತಮಿಳರ ವೇದವಾಗಿದೆ. ವಾದೀಭಸಿಂಹಸೂರಿಗಳೂ ಸಹ ಜನರಿಗೆ ಧರ್ಮ, ನೀತಿ, ನಿಯಮಗಳನ್ನು ಬೋಧಿಸಲೆಂದೇ ತಮ್ಮ ಗ್ರಂಥಗಳನ್ನು ಬರೆದರು.ಇವುಗಳನ್ನು ಅನುಸರಿಸಿ, ಇದೇ ಉದ್ದೇಶವಿಟ್ಟುಕೊಂಡು ತನ್ನ ಜೀವಂಧರ ಚರಿತೆಯನ್ನು ಬರೆದಿದ್ದಾರೆ  – ಕವಿ ಭಾಸ್ಕರನು. ಕ್ರಿ.ಶ. ೧೯೦೩ ರಲ್ಲಿ ಶ್ರೀ ಟಿ.ಎಸ್. ಕುಪ್ಪುಸ್ವಾಮಿ ಶಾಸ್ತ್ರಿ ಅವರು ‘ಕ್ಷತ್ರ ಚೂಡಾಮಣಿ’ ಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಆ ಗ್ರಂಥದ ಕರ್ತೃ ಹಿಂದಿನ ಕವಿಗಳಿಗೆ ಋಣಿಯಾದ ಅಂಶವನ್ನು ಅಡಿಟಿಪ್ಪಣಿಗಳಲ್ಲಿ ಕೊಟ್ಟಿದ್ದಾರೆ. ಒಂದೇ ಮಾತನ್ನು ಡಾ. ಎ.ಎನ್. ಉಪಾಧ್ಯೆ ಅವರು ಹೀಗೆ ಬರೆದಿದ್ದಾರೆ. “The Most important feature of this edition is that in the foot – notes, besides some explainatory notes, the learned editor has quoted parallels from sanskrit and Tamil works like Gadyachintamani, Champu Jivandhar, Jivaka Chintamani, Raghuvans, Panchatantra, Kumar Sambhav, Kadambari, Uttar purana, Satakas of Bhartruhari, Meghuduta, Sakuntala etc.”[4] ವಾದೀಭಸಿಂಹಸೂರಿಯ ಗ್ರಂಥದಲ್ಲಿರುವ ಮೇಲ್ಕಾಣಿಸಿದ ಕವಿಗಳ ಪ್ರಭಾವದೊಂದಿಗೆ, ತನ್ನ ಹಿಂದಿನ ಕವಿಗಳಾದ ಪಂಪ, ರನ್ನ, ಜನ್ನ ನೇಮಿಚಂದ್ರ, ಅಭಿನವಪಂಪ, ಹರಿಹರ, ರಾಘವಾಂಕ ಮೊದಲಾದವರ ಪ್ರಭಾವವು ಕವಿ ಭಾಸ್ಕರನ ‘ಜೀವಂಧರ ಚರಿತೆ’ಯಲ್ಲಿ ಕಂಡರೆ ಆಶ್ಚರ್ಯ ಪಡಬೇಕಾಗಿಲ್ಲ. ಷಟ್ಪದಿ ಸಂಸ್ಥಾಪನಾಚಾರ್ಯನಾದ ರಾಘವಾಂಕನ ಕಾವ್ಯಗಳು ಜನ ಮೆಚ್ಚುಗೆಯನ್ನು ಪಡೆದವೆಂದೇ ಷಟ್ಪದಿಯಲ್ಲಿಯೂ ಕಾವ್ಯ ಬರೆಯಲು ಕವಿಗಳು ಮುಂದಾದರು. ಕಾರಣ ಪಂಪನ ಚಂಪೂ ಮಾರ್ಗವನ್ನು ಬಿಟ್ಟು ಸಾಂಗತ್ಯ. ಷಟ್ಪದಿಗಳಲ್ಲಿ ಕಾವ್ಯ ಬರೆಯಲು ಮುಂದೆ ಬಂದ ಜೈನಕವಿಗಳು ರಾಘವಾಂಕನ ಕಾವ್ಯಗಳನ್ನು ಓದಿಲ್ಲವೆಂದರೆ ಅಚ್ಚರಿಯಾಗಬಹುದು. ಜೀವಂಧರ ಚರಿತೆಯಲ್ಲಿಯ “ಕೃತಿಗೆ ನಾಮ ವಿಶುದ್ಧ ಗುಣನಪ್ರತಿಮ ಜೀವಂಧರನ ಕಥೆ”, “ನಡೆವನೆಡಹುವ ನಲ್ಲದುಱೆದವರೆಡಹುವರೆ”, ‘ಪುರದ ಪುಣ್ಯ ಪುರುಷ ರೂಪಿಂದುರಿದು ಹೋದುದು”, ಮುಂತಾದ ಪದ್ಯಗಳಲ್ಲಿ ಹರಿಶ್ಚಂದ್ರ ಕಾವ್ಯದ “ಕೃತಿಗೆ ನಾಮಂ ಹರಿಶ್ಚಂದ್ರ ಚರಿತ್ರವೀ”, “ನಡೆವರೆಡಹದೆ ಕುಳಿತರೆಡಹುವರೆ” “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ” ಮೊದಲಾದ ಪದ್ಯಗಳ ಛಾಯೆಯನ್ನು ಗಮನಿಸಿದಾಗ, ಕವಿ ಭಾಸ್ಕರನು ಹರಿಶ್ಚಂದ್ರಕಾವ್ಯವನ್ನು ತಪ್ಪದೇ ಓದಿದ್ದನೆನ್ನುವ ಮಾತು ಸ್ಪಷ್ಟವಾಗುತ್ತದೆ. ಜೀವಂಧರ ಚರಿತೆಯಲ್ಲಿ ಬರುವ ಸೂಳಿಗೇರಿಯ ವರ್ಣನೆಯು ಕವಿ ರಾಘವಾಂಕನ ‘ಸೋಮನಾಥ ಚರಿತೆ’ಯ ಸೂಳಿಗೇರಿ ವರ್ಣನೆಯಿಂದ ಸ್ಫೂರ್ತಿ ಪಡೆದಿದೆ ಎಂಬುದನ್ನು ಸಿದ್ಧಮಾಡಬೇಕಾಗಿಲ್ಲ. ಅಭಿನವಪಂಪನ ಛಾಯೆಯುಳ್ಳ ಪದ್ಯವೂ ಜೀವಂಧರ ಚರಿತೆಯಲ್ಲಿದೆ.

ಒಟ್ಟಿನಲ್ಲಿ ಕವಿ ಭಾಸ್ಕರನು ತನ್ನ ಹಿಂದಿನ ಕನ್ನಡ ಕವಿಗಳನ್ನು ಚನ್ನಾಗಿ ಓದಿಕೊಂಡಿದ್ದನೆಂಬುದೇ ಇದರರ್ಥ. ತಾನು ಓದಿಕೊಂಡ ಸಂಸ್ಕರತ, ಕನ್ನಡ ಗ್ರಂಥಗಳ ಹಿನ್ನೆಲೆಯಲ್ಲಿ ಧರ್ಮ, ನೀತಿಗಳನ್ನು ತಿಳಿದು ‘ಜನಬದುಕಲೆಂದು’ ಕವಿ ಭಾಸ್ಕರನೂ ತನ್ನ ‘ಜೀವಂಧರ ಚರಿತೆ’ಯನ್ನು ರಚಿಸಿದ್ದಾನೆ. ಶಾಸ್ತ್ರಕಾವ್ಯವೆನ್ನಲಡ್ಡಿಯಿಲ್ಲದ ಆತನ ಗ್ರಂಥದಲ್ಲಿ ಅನೇಕ ಗ್ರಂಥಗಳ ಛಾಯೆ ಕಂಡರೂ ಕಾಣಬಹುದಾಗಿದೆಯಲ್ಲದೆ, ವಸ್ತು ನಿರೂಪಣೆ ಪಾತ್ರಪೋಷಣೆ ಮೊದಲಾದವುಗಳಲ್ಲಿ ಅಸ್ತವ್ಯಸ್ತತೆಯೂ ಕೂಡ ಕಾಣಿಸಿಕೊಳ್ಳಬಹುದಾಗಿದೆ. ಇದೇ ಮಾತನ್ನು ಶ್ರೀ. ಡಿ.ಎಲ್. ನರಸಿಂಹಾಚಾರ್ಯರು ಹೀಗೆ ಹೇಳಿದ್ದಾರೆ. – “ಇದರ (ಜೀವಂಧರ ಚರಿತೆ) ವಸ್ತು ರಚನೆಯಲ್ಲಿ ಸರಿಯಾದ ಕ್ರಮವಿಲ್ಲ. ಎಲ್ಲ ಸಂದರ್ಭಗಳನ್ನು ಪೋಣಿಸಿರುವವನು ಕಥಾನಾಯಕ. ಒಟ್ಟಿನಲ್ಲಿ ಅಕ್ರಮವಾದ ಕಥಾನಿರೂಪಣೆ ಇದ್ದರೂ ಈ ಗ್ರಂಥ ಸ್ವಾರಸ್ಯವಾಗಿದೆ.[5]

ಹೀಗೆ ಸ್ವಾರಸ್ಯಕರವಾದ, ಪುಣ್ಯಪ್ರದವಾದ ಜೀವಂಧರ ಚರಿತೆಯನ್ನು ನಿರರ್ಗಳವಾಗಿ ಹರಿಯುವ ಭಾಮಿನಿ ಷಟ್ಪದಿಯಲ್ಲಿ ಕನ್ನಡ ಜನತೆಗೆ ಒದಗಿಸಿದ ಮೊಟ್ಟ ಮೊದಲನೆಯ ಜೈನಕವಿ ಎಂಬ ಶ್ರೇಯಸ್ಸಿಗೆ ಪಾತ್ರನಾದ ಕವಿ ಭಾಸ್ಕರನ ಸ್ಥಾನ ಕನ್ನಡ ಸಾಹಿತ್ಯಾಕಾಶದಲ್ಲಿ, ಭಾಸ್ಕರನಷ್ಟು ಮಹಾನ್ ಆಗದೇ ಹೋದರೂ, ಶುಭ್ರವಾದ ನಕ್ಷತ್ರಗಳ ಪ್ರಕಾಶದಂತೆ ಪಾವನವೂ ಶಾಶ್ವತವೂ ಆಗಿದೆಯೆನ್ನಲು ಯಾವ ಆತಂಕವೂ ಇಲ್ಲ.

ಕೊನೆಯದಾಗಿ ಈ ಗ್ರಂಥವನ್ನು ಸಂಪಾದಿಸಲು ಪ್ರೋತ್ಸಾಹಿಸಿ, ಮಾರ್ಗದರ್ಶನ ಮಾಡಿದ್ದಲ್ಲದೆ, ಸುಂದರವಾದ ಹಾಗೂ ಬೋಧಪ್ರದವಾದ ಮುನ್ನುಡಿಯನ್ನು ಬರೆದ, ಕ.ವಿ.ವಿ. ಕನ್ನಡ ವಿಭಾಗದ ಪ್ರಮುಖ ಪ್ರಾಧ್ಯಾಪಕರೂ, ಕವಿಗಳು, ವಿಮರ್ಶಕರೂ, ಭಾಷಾ ಶಾಸ್ತ್ರಜ್ಞರೂ ಆದ ಡಾ.ಆರ್.ಸಿ.ಹಿರೇಮಠ, ಎಂ.ಎ., ಪಿಎಚ್.ಡಿ. ಅವರಿಗೆ ನಾವು ಉಪಕೃತರಾಗಿದ್ದೇವೆ. ಈ ಗ್ರಂಥವನ್ನು ಅಚ್ಚು ಮಾಡಿಸಿ, ಪ್ರಕಟಿಸುತ್ತಿರುವ ಕ.ವಿ.ವಿ. ಅಧಿಕಾರಿಗಳಿಗೂ ನಮ್ಮ ಅನಂತ ಕೃತಜ್ಞತೆಗಳು. ಅದರಂತೆ ಈ ಗ್ರಂಥವನ್ನು ಸಂಪಾದಿಸುವಲ್ಲಿ ಸಹಾಯಮಾಡಿದ ಶ್ರೀವೀರೇಶವಾಲಿ, ಎಂ.ಎ., ಶ್ರೀ ಎಸ್.ಪಿ.ಪಾಟೀಲ, ಎಂ.ಎ, ಹಾಗೂ ಶ್ರೀ ಟಿ. ಎಫ್. ದೇಸಾಯಿ ಅವರಿಗೂ ನಮ್ಮ ನೆನಕೆಗಳು ಸಲ್ಲಬೇಕು. ಕೊನೆಯದಾಗಿ ಈ ಗ್ರಂಥವನ್ನು ಅಚ್ಚು ಮಾಡಿದ ವಸಂತ ಪ್ರೆಸ್ಸಿನ ಮಾಲೀಕರಿಗೂ ನಾವು ಋಣಿಯಾಗಿದ್ದೇವೆ.

ಬಿ.ಎಸ್.ಕುಲಕರ್ಣಿ
ಸಂಪಾದಕರು
ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ

* * *

[1] “ಭಾಸ್ಕರ ಕವಿಯ ಜೇಬಿನಲ್ಲಿ ಕುಮಾರವ್ಯಾಸನ ನಾಣ್ಯಗಳು” ಎಂಬ ಸುಜನಾ ಅವರ ಲೇಖನ ಪ್ರ. ಕ. ಸಂಪುಟ ೪೧, ಸಂಚಿಕೆ ೩, ಪುಟ ೧೯೧-೨೦೪.

[2] ಕನ್ನಡ ಸಾಹಿತ್ಯ ಚರಿತ್ರೆ- ೧೯೫೩, ರಂ. ಶ್ರೀ. ಮುಗಳಿ, ಪುಟ, ೨೩೭-೩೫೭

[3] ಈ ಅಭಿಪ್ರಾಯಗಳು ಕುಮಾರವ್ಯಾಸನು ಭಾಸ್ಕರನಿಗಿಂತ ಮೊದಲು ಆದವನು ಎಂದು ಗ್ರಹಿಸಿದವುಗಳಾಗಿವೆ. ಆದರೆ ಕವಿ ಕುಮಾರವ್ಯಾಸನ ಕಾಲ ನಿರ್ಣಯ ಇನ್ನೂ ನಿರ್ದುಷ್ಟವಾಗಿಲ್ಲವೆಂಬ ಅಂಶವನ್ನು ಇಲ್ಲಿ ನೆನಪಿಡಬೇಕು.

[4] J.C. ಜ್ಞಾನಪೀಠ ೧೯೫೮, ಮುನ್ನುಡಿ, ಪುಟ ೧೨.

[5] ವಿಜಯನಗರದ ಕನ್ನಡ ಸಾಹಿತ್ಯ – ಪ್ರ.ಕ. ೨೨-೪ ಪುಟ ೧೨