ಕ್ಷೇಮಲಕ್ಷ್ಮಿಯ ವರಿಸಿ ದುಷ್ಟ
ಸ್ತೋಮವನು ಬೋಧಿಸುತ ನಡೆದಾ
ಕ್ಷೇಮಪುರದಲಿ ಕನಕಮಾಲೆಯನವನಿಪತಿ ಪಡೆದ

ಇಳೆಯ ಪತಿ ಕೇಳಾ ಕುಮಾರಕ
ತಿಲಕನಾ ಪದ್ಮೆಯೊಳು ಸೌಖ್ಯದೊ
ಳೊಲವಿನಲಿ ಚಂದ್ರಾಭನಗರಿಯೊಳೊಂದು ವರುಷವನು
ಕಳೆದು ಬೞಿಕಲ್ಲಿಂದ ನಡೆದ
ಗ್ಗಳದರಣ್ಯದೊಳಾಚರಿಪ ಸ
ಲ್ಲಲಿತ ಮಿಥ್ಯಾ ತಪಸಿಗಳ ಕಂಡವರಿಗಿಂತೆಂದ            ೧

ತಂಡುಲವು ದೊರಕದೆ ಜಲಾನಲ
ಭಾಂಡ ದೊರಕಿದೊಡೇನು ಸಫಲವ
ಖಂಡತತ್ತ್ವಜ್ಞಾನವಿಲ್ಲದೆ ಬೞಿದೆ ದೇಹವನು
ದಂಡಿಸಿದೊಡೇನಹುದ ಮುತ್ತುರಿ
ಗೊಂಡದೊಳಗಿರಲೇಕೆ ಜಡೆಗಳ
ಮಂಡೆಯಲಿ ಧರಿಸಿದ್ದೊಡೇನಹುದೆಂದನಾ ಮುನಿಯು  ೨

ಜಲದೊಳಗೆ ಮುೞುಗಲ್ಕೆ ಜಟಿಲಗ
ಳೊಳಗೆ ಸಿಕ್ಕಿಹ ಕೆಲವು ಜಂತುಗ
ಳೞಿವುವೀ ಪಂಚಾಗ್ನಿಯಿಂದವನಿಯೊಳಗಿಹ ಜೀವ
ಕೆಲವೞಿವುವೀ ಹೊದೆದ ಚರ್ಮದ
ಲಲೆವ ಕೆಲವಂಡಜಗಳೞಿವುವು
ತಿಳಿಯೆ ನಿಮ್ಮ ತಪಸ್ಸಿನಿಂದತಿ ಹಿಂಸೆ ಬಹುದೆಂದ      ೩

ಹೃದಯದಮಳ ಜ್ಯೋತಿಯನು ಬೆಳ
ಗದೆ ನವಾರತಿಯೆತ್ತಲೇನಹು
ದೊದವಿದೊಳಗಣ ಮಲವ ತೊಳೆಯದೆ ದೇಹಕಲ್ಮಷವ
ಮುದದಿ ತೊಳೆದೊಡದೇನು ಕರ್ಮವ
ಬಿದಿರಿಸದೆ ಮುಕ್ತಿಯನು ಸಾರುವ
ವಿಧವದೆಂತೆಂದವನಿಪತಿ ಜಱೆದನು ತಪಸ್ವಿಗಳ        ೪

ಒಂದಡಿಯನಿಳೆಗೂಱದಿಹ ನಿ

[1] [2]ರ್ಬಂಧವೇ[3]ಕೆಲೆ ಕಾಯಿ ಕಸುರನು
ತಿಂದು ಜೀವವ ಗಾಸಿಮಾಡುವುದೇಕೆ ಕರ್ಮಗಳ
ದಂದುಗವದೇಕಿವನುೞಿದು ಸಾ
ನಂದದಲಿ ಸರ್ವಜ್ಞನನು ಭಜಿ
ಸೊಂ[4]ದು ಮುಕ್ತಿಶ್ರೀಯನೆಂದು ಕುಮಾರ ಬೋಧಿಸಿದ  ೫

ಗರುಡಮತದಿಂದಲ್ಲದಹಿಭಯ
ಕರಗುವುದೆ ಸರ್ವಜ್ಞನಾಮ
ಸ್ಮರಣೆಯಿಂದಲ್ಲದೆ ಭವಾಂಭೋರಾಶಿ ಬತ್ತುವುದೆ
ನೆರೆದು ಹಿಂಸೆಯ ಮಾೞ್ಪ ನಿಮ್ಮಾ
ಚರಣೆಯೇಕಿದನುೞಿದಹಿಂಸಾ
ಪರಮಧರ್ಮವೆನಿಪ್ಪ ಶ್ರುತಿವಿಡಿದೆಸಗಿ ನೀವೆಂದ        ೬

ಅವ್ಯಯನನಂತಾತ್ಮನದ್ವಯ
ದಿವ್ಯ[5]ತೇಜನ[6]ಗಮ್ಯ ತ್ರಿಜಗ
ತ್ಸೇವ್ಯನಹ ಜಿನಪತಿಯ ಪಡೆದಾ ಮತದಿ ತಪವೆಸಗಿ
ನವ್ಯ ಮುಕ್ತಿಶ್ರೀಯ ಪಡೆವುದು
ಭವ್ಯವೆನೆಹರೊಳಗೆ ಕೆಲಬರು
ಭವ್ಯರಾಗೆ ಕುಮಾರ ಹರುಷದಿ ಮತ್ತೆ ಗಮನಿಸಿದ       ೭

ಮಱೆವ ದಕ್ಷಿಣ ದಿಕ್ಕಿನಲಿ ಬಂ
ಧುರವ ವಿಷಯದಿ ವಿಮಳ ಪುರವರ
ಕರಸು ನರಪತಿಯಾ ಪುರದಿ ಗುಣಭದ್ರನೆಂದೆಂಬ
ಪರದನಿಹನಾತನ ಕುಮಾರಿತಿ
ವರಸತಿಯ ಮಾಣಿಕ್ಯವೆನೆ ವಿ
ಸ್ತರ[7]ದೊಳೆಸೆ[8]ದಳು ಮದನಮೋಹನಮೂರ್ತಿಯಂದದಲಿ       ೮

ಆ ತನೂಜೆಯನಾ ಪುರದೊಳೆಸೆ
ವಾತಿಶಯದ ಸಹಸ್ರಕೂಟ
ಖ್ಯಾತ ಜಿನಚೈತ್ಯಾಲಯವದುಂಟಾ ಕವಾಟಗಳ
ವೀತರಾಗನ [9]ನುತಿಯಿಸಿ[10] [ತೆಱೆಸಿ] ದಾತಗೀವೆನೆನುತ್ತ ತನುಜೆಯ
ನೋತು ರಕ್ಷಿಸುತಿರ್ದನಾ ಗುಣಭದ್ರನೊಲವಿನಲಿ       ೯

ಅರಸ ಕೇಳ್ ಜೀವಂಧರನು ತ
ತ್ಪುರಕೆ ಬಂದಾ ಹೊೞಲ ಜಿನಮಂ
ದಿರದ ಬಾಗಿಲದೆಂತು ಮುಚ್ಚಿಯೆ ತೆಱೆಯದಾ ಸ್ಥಿತಿಯ
ಪುರಜನದಿನಱಿದಾ ಕವಾಟವ
ತೆಱೆಸಿ ದೇವನ ನೋಡಬೇಕೆಂ
ದರುಹಗಭಿಮುಖವಾಗಿ ಸಂಸ್ತುತಿಸಿದನು ಜೀವಪತಿಯ ೧೦

ಜಯಜಯ ಮಹಾಮಹಿಮ ನಿರುಪಮ
ಜಯಜಯ ಜಯಾನಂದ ಶುಭಕರ
ಜಯಜಯ ಜಗನ್ನಾಥ ಜನನವಿದೂರ ವಿಜ್ಞಾನ
ಜಯಜಯ ತ್ರಿದಶೇಂದ್ರ ವಂದಿತ
ಜಯತು ಶಾಶ್ವತ ಜಯ ಜಗತ್ಪತಿ
ಜಯಜಯೆಂದು ಕುಮಾರ ಸಂಸ್ತುತಿಸಿದನು ಜಿನಪತಿಯ         ೧೧

ಅಕ್ಷಯ ವಿಶಾಲಾಕ್ಷ ಸುಲಲಿತ
ವಕ್ಷ ಮೋಕ್ಷಾಧ್ಯಕ್ಷ ತ್ರಿಭುವನ
ರ[11]ಕ್ಷ ನುತಜನಪಕ್ಷ ಸಂಪೂಜಿತ ಸಹಸ್ರಾಕ್ಷ
ಅಕ್ಷರ ನಿರಾಪೇಕ್ಷ ಮನ್ಮಥ
ಶಿಕ್ಷ ಕಾಲಕ್ಷಯ ಮಹಾತ್ಮ ಸು
ದಕ್ಷ ಯಕ್ಷಾಧೀಶ ಸನ್ನುತ ಕರುಣಿಸೆನಗೆಂದ    ೧೨

ಮಿತ್ರಶತಕೋಟಿಪ್ರಕಾಶ ಪ
ವಿತ್ರಗಾತ್ರ ಪರೇಶ ಮುಕ್ತಿಕ
ಳತ್ರ ನವಶತಪತ್ರನೇತ್ರ ಭವಾಬ್ಧಿನಿಸ್ತರಣ
ಭೈತ್ರ ವಿಮಲಚರಿತ್ರ ಸುಮುನಿ
ಸ್ತೋತ್ರಪಾತ್ರ ಸುವಕ್ತ್ರ ಘನರ
ತ್ನತ್ರಯಾಭರಣಾಂಕ ಕದಗಳ ತೆಗೆಯಬೇಕೆಂದ         ೧೩

ಮಾರಮದಸಂಹಾರ ಕರುಣಾ
ಕಾರ ಗುಣಮಣಿಹಾರ ಭುವ[12]ನಾ
ಧಾ[13]ರ ಧವಳ ಶರೀರ ಧರ್ಮಾಗಾರ ಸಾಕಾರ
ಘೋರಭವಭಯದೂರ ಕರುಣಾ
ಕಾರ ನುತ ಮಂದಾರ ವಿಗತ ವಿ
ತಾರ ಸಾರಾಸಾರ ಜಿನಪತಿ ಕರುಣಿಸೆನಗೆಂದ ೧೪

ಸುಸ್ಥಿರಾತ್ಮ ಸಮಸ್ತ ಸುರನರ
ಮಸ್ತಕಸ್ಥಾಪಿತ ಸುರತ್ನಗ
ಭಸ್ತಿಮಾಲಾಲಾಲಿತಾಂಘ್ರಿದ್ವಯ ಭವಾಂಬುನಿಧಿ
ನಿಸ್ತರಣ ವಾಸ್ತೋಷ್ಪ[14]ತೀಂದ್ರ ಬು
ಧಸ್ತುತ ಪ್ರಜ್ಞಾನ ವಿಪು[15]ಲೋ
ರಸ್ಥಲ ವಿಶಾಲಾಕ್ಷ ನಿರ್ಮಲ ಕರುಣಿಸೆನಗೆಂದ ೧೫

ದೇವ ನಿಮ್ಮಾಲಯದ ಕದಗಳು
ಆವ ತೆಱದಲಿ ಮುಚ್ಚಿದೊಡೆ ಲೋ
ಕಾವಳಿಯ ಕದ ಕೆತ್ತಿಹುವು ಶಾಂತೀಶ್ವರನೆ[16] ನಿಮ್ಮ
ಪಾವನಾಕೃತಿಯೀಕ್ಷಿಸದೆ ಕ
ಣ್ಗಾವರಿಸುತಿದೆ ಕಾವಳವು ಕರು
ಣಾವಲಂಬನದಿಂ ಕವಾಟವತೆಱೆದು ಸಲಹೆಂದ         ೧೬

ಜಗಭರಿತ ನೀನಭವ ಮಿಗೆ ಮೂ
ಜಗಕೆ ಗತಿ ಮತಿ ನೀನೆ [17]ಕೇಳೈ[18] ಜಗದುದಯ ನೀನಖಿಳ ಜಗದಾರಾಧ್ಯ[19] ವಿಭು ನೀನೆ
ಜಗಕೆ ಕಣ್ ಸುಗುಣನು ಸದಮಲ
ನಗಣಿತನೆ ನೀನಿಂತು ಬಾಗಿಲ
ತೆಗೆಯದಿಹುದುಚಿತವೆ ಕೃಪಾಕರ ತೆಗೆಯಬೇಕೆಂದ     ೧೭

ಭಾಸುರಾತ್ಮಕ ನೀನೆ ರಾಗ
ದ್ವೇಷರಹಿತನು ನೀನೆ ಮಾಯಾ
ಪಾಶಮೋಚನ ನೀನೆ ಸಕಲ ಜಗದ್ಗುರುವು ನೀನೆ
ದೋಷರಹಿತನು ನೀನೆ ಕರುಣಾ
ವಾಸ ನೀನೆ ಮಹೇಶ ನೀನೆ ಸು
ರೇಶನುತ ನೀನೆಂದು ಸಂಸ್ತುತಿಸಿದನು ಜಿನಪತಿಯ    ೧೮

ಪರಮ ಮುಕ್ತಿಯ ಗೃಹದ ಬಾಗಿಲ
ತೆಱೆಸುವಾತಗಿದೇನು ಘನವೆಂ
ದಱುಹುವಂತಾ ವಜ್ರಮಯದ ಕವಾಟ ತೆಱೆದಿರಲು
ಪುರಜನವು ಬೆಱಗಾಗಿ ಶಾಂತೀ
ಶ್ವರನನರ್ಚಿಸುತಿರಲು ಜೀವಂ
ಧರನೆಡೆಗೆ ಗುಣಭದ್ರ ಹರುಷದಿ ಬಂದು ತಾ ನುಡಿದ    ೧೯

ನೀ ಮಹಾತ್ಮಕನ[20]ದಱಿನೀ[21] ಸು
ತ್ರಾಮನುತ ಜಿನಪತಿಯ ವಾಸದ
ಹೇಮಮಯದೀ ಕದವ ತೆಗೆ[22]ಸಿದೆಯಾಗಿ ನನ್ನ ಸುತೆ
ಕ್ಷೇಮಲಕ್ಷ್ಮಿಯ ಕುಡುವೆನಾಕೆಯ
ಕಾಮಿಸುವುದೆನೆ ಮದುವೆಯಾಗಿ ಸ
ನಾಮ ಜೀವಕನಾ ಸತಿಯ ಕೂಡಿರ್ದನೊಲವಿನಲಿ      ೨೦


[1] ನೆಂ (ಜ, ಮ)

[2] ಬಂದವೇ (ಜ), ಬಂದಬೇ (ಮ)

[3] ಬಂದವೇ (ಜ), ಬಂದಬೇ (ಮ)

[4] ಸೆಂ (ಜ), ಸಿಂ (ಮ)

[5] ಮೂರ್ತಿಯ (ಮ)

[6] ಮೂರ್ತಿಯ (ಮ)

[7] ದಿ ಮೆಱೆ (ಮ)

[8] ದಿ ಮೆಱೆ (ಮ)

[9] ನಿಂತು ಸ್ತುತಿಯಿಸಿ (ಜ, ಮ)

[10] ನಿಂತು ಸ್ತುತಿಯಿಸಿ (ಜ, ಮ)

[11] ದ (ಪ)

[12] ನಕುದಾ (ಜ)

[13] ನಕುದಾ (ಜ)

[14] ತ್ಪ (ಜ, ಮ)

[15] ಮ (ಜ)

[16] x (ಜ)

[17] x (ಜ)

[18] x (ಜ)

[19] ಜ್ಯ (ಜ)

[20] ಲ್ಲದಿರೆ (ಜ)

[21] ಲ್ಲದಿರೆ (ಜ)

[22] ರ (ಜ)