ಜನಪ ಕೇಳಾ ವಿಮಳ ಪುರದೊಳ
ಗನವರತಮಾ ಕ್ಷೇಮಲಕ್ಷ್ಮಿಯ
ಜನಪ ವರಿಸುತ ಕೆಲವು ದಿನವಲ್ಲಿರ್ದು ನೃಪ ತೆರಳಿ
ವನಕೆ ಬರುತಿರೆ ಹೊಲನ ಹರಗುತ
ಕನಲಿ ಸಂಸಾರಕ್ಕೆ ಬೞಲುವ
ವಿನುತ ಶೂದ್ರನ ಕಂಡು ಕೃಪೆಯಿಂದರಸನಿಂತೆಂದ     ೨೧

ಕಿಡುವ ಸಂಸಾರಕ್ಕೆ ನೀನಿಂ
ತೊಡಲ ಕಟ್ಟಲದೇಕೆ ದೇಹದೊ
ಳಿಡಿದ

[1]ದೋಷ[2]ಗಳೆಂಟ ಹಿಂಗಿಸುವಷ್ಟಗುಣಗಳನು
ಹಿಡಿದು ಜಿನಪನ ಭಜಿಸು ಮುಕ್ತಿಯ
ಪಡೆಯೆನಲು ತನಗದಱ ಭೇದವ
ಪೊಡವಿಪತಿ ತಿಳುಹೆನಲು ಶೂದ್ರಂಗರಸನಿಂತೆಂದ     ೨೨

ಸತ್ಯಹಿಂಸಾಸ್ತೇಯ ಪರಿಮಿತ
ವಸ್ತು ಸತ್ಕುಲಕಾಮಿನೀ ಸಾಂ
ಗತ್ಯ ಮಾಂಸಸುರಾ ಮಧುತ್ಯಾಗಂಗಳಿವು ತಾನು
ಯುಕ್ತ ಮೂಲ ಗುಣಾಷ್ಟಕವು ಸುಚ
ರಿತ್ರ ಧರ್ಮಜ್ಞಾನವಿವು ರ
ತ್ನತ್ರಯಗಳೆಂದಾ ಕೃಷೀವಲ[3]ಗಱುಹಿದನು ಭೂಪ[4]      ೨೩

ವಿಕಳನಹ ಶೂದ್ರಕಗೆ ಸುಕಮಾ
ರಕನು [5]ತಾನಿಂತರುಹ ಶಾಸ್ತ್ರ[6] ಪ್ರಕರವನು ವಿಸ್ತರಿಸಿ ಬೋಧಿಸಿ ಧಾರ್ಮಿಕನ ಮಾಡಿ
ಸುಕರ ಕರ್ಣಾಭರಣಗಳ ಶೂ
ದ್ರಕಗೆ ಕರುಣದೊಳಿತ್ತು ನರನಾ
ಯಕನು ಬೀೞ್ಕೊಟೆಯ್ದಿ ಬರುತಿರ್ದನು[7] ವನಾಂತ[8]ದಲಿ ೨೪

ಭೀಳಕಾನನದೊಳಗೆ ಭೂಮೀ
ಪಾಳ ಬರೆ ಮುಂದಿದಿರೊಳಮಳ
ಭ್ರೂಲತೆಯ ಚಾಪಕ್ಕೆ ಹಾರದ ನಾರಿಯಳವಡಲು
ಲೋಲಪಾಂಗದ ಬಾಣ ರಂಜಿಸೆ
ಬಾಲೆಯೊರ್ವಳು ಮನ್ಮಥನ ಕ
ಟ್ಟಾಳಿನಂತಿರೆ ಬರಲು ಕಂಡವನೀಶ ಬೆಱಗಾದ          ೨೫

ವಾಣಿಯೋ[9] ವಾಗ್ದೇವಿಯಾದೊಡೆ
ವೀಣೆ ಹಸ್ತದೋಳಿಲ್ಲ ಮೇಣ್ ಶ
ರ್ವಾಣಿಯಾದೊಡೆ ಲೋಚನತ್ರಯವಿಲ್ಲವಚ್ಯುತನ
ರಾಣಿಯೋ ಸಿರಿಯಾದೊಡಂಬುಜ
ಪಾಣಿಯಲ್ಲೀ ತರುಣಿಯಾರೆಂ
ದೇಣನೇತ್ರೆಯ ರೂಪಿಗವನೀಪಾಲ ಬೆಱಗಾದ ೨೬

ಸುದತಿ ಜೀವಂಧರನ ಮಿಗೆ ದೂ
ರದಲಿ ಕಂಡಚ್ಚರಿಯ ಬಡುತಾ
ಮದನ ಮರ್ತ್ಯಾಕಾರವನು ತಾಳಿದನೊ ಮೇಣಜನು
ಚದುರಿನಲಿ ಮೂಜಗದ ನಾನಾ
ವಿಧದ [10]ವಸ್ತುವ ರೂಪುವನು[11] ಮಾ
ಡಿದನೊ ತಾನೆಂದರಸನನು ನೋಡಿದಳು ನಳಿನಾಕ್ಷಿ   ೨೭

ಆ ರಮಣಿ ಜೀವಂಧರನ ಸಾ
ಕಾರವನು ಕಂಡಂಗಜಾತನ
ಕೂರಲಗಿನಿಂದಳುಕಿ ಪರವಶೆಯಾಗಿ ಬೞಿಕಱಿದು
ಭೂರಮಣ ಕೇಳೆಮ್ಮ ಭಾವನು
ಘೋರ ವಿಪಿನದಿ ಬಿಟ್ಟ ಪುಣ್ಯದಿ
ಸಾರಿದೆನು ನಾ ನಿನ್ನನೆಂದಿಂತೆಂದಳಾ ರಮಣಿ         ೨೮

ಎನಗೆ ತಕ್ಕನುರೂಪ ಪುರುಷನ
ವನಧಿಪರಿವೃತ ಭೂಮಿಯಲಿ ಮ
ಜ್ಜನಕ ನೋ[12]ಡಿಸಿ ಕಾಣದಿರಲಿಂದೆನ್ನ ಪುಣ್ಯದಲಿ
ಜನಪ ನಿನ್ನನು ಕಂಡೆ ನೀ ಕೂ
ಡನಘನಾ ವಿದ್ಯಾಧರ ಸ್ತ್ರೀ
ವಿನುತ ಕನ್ಯೆಯೆನಲ್ಕೆ ಸತಿಗವನೀಶನಿಂತೆಂದ ೨೯

ಕನ್ನೆ ನೀನಾದರೆ ವಧೂಮಣಿ
ನಿನ್ನ ಘನರೂಪೋನ್ನತಿಯ ಕಂ
ಡೆನ್ನ ಮನವೆಳ[13]ಸದ[14]ದು ಸತಿ ನಿನಗುಂಟು ಪುರುಷನೆನೆ
ತನ್ನೊಳಗೆ ಸತಿ ನೃಪನ ಸುಜ್ಞಾ
ನೋನ್ನತಿಗೆ ಬೆಱಗಾಗಿ ಪತಿಯಿ
ಲ್ಲೆನ್ನ ನಂಬಿ [15]ನೃಪಾಲ[16] ಕೂಡೆಂದೆಱಗಿದಳು ಪದಕೆ     ೩೦

ನಿನ್ನ ಕಂಡೆನ್ನಕ್ಷಿಗಳು ಸು
ಪನ್ನ ನಿನ್ನಯ ನುಡಿಯ ಕೇಳಿದು
ಕರ್ಣ ನಿನ್ನನು ನೆನೆದು ಮನ ನಿನ್ನಯ ಗುಣಾವಳಿಯ
ವರ್ಣಿಸೆನ್ನಯ ಜಿಹ್ವೆಯಾಗಳ
ಧನ್ಯವಾದುವು ನೆರೆದು ನೀ ಸಲ
ಹೆನ್ನನಂದಲಿ ವಿರಹದಲಿ ಕರಗಿವಳು ಕಮಲಾಕ್ಷಿ         ೩೧

ಅರಸ ನಿನ್ನ ಮುಖೇಂದುರಶ್ಮಿಯ
ಸುರಿದು ವಿರಹಾಗ್ನಿಯನು ನಂದಿಸು
ಪುರುಷ ನಿನ್ನ ವಚಾಮೃತವನೆಱೆದೆನ್ನ ತೃಷ್ಣೆಯನು
ಪರಿಹರಿಸು ಕಾಮಾಂಧವನು ನಿ
ನ್ನುರುತರಾಕ್ಷಿಪ್ರಭೆಯೊಳುಗಿದತಿ
ಕರುಣದಲಿ ತನ್ನಸುವನುೞುಹೆಂದಳು ಸರೋಜಾಕ್ಷಿ     ೩೨

ತೋಯಜಾನನೆಯಿಂತು ವಿರಹದೊ
ಳಾಯಸಂಬಡೆ ನೃಪತಿ ಕಂಡೆಲೆ
ತಾಯೆ ನಿನ್ನಯ ಪುರುಷನೊಳು ನೀ ಸುಖದೊಳಿರು ಬಱಿದೆ
ಕಾಯದಲ್ಪ ಸುಖಕ್ಕೆ ಘನ ನಿ
ಶ್ರೇಯಸಕೆ ಬಹಿಯಾಗಬೇಡೆಂ
ದಾ ಯುವತಿಗೀ ತೆಱದೆ ಬುದ್ಧಿಯ ಹೇೞಿದನು ಭೂಪ   ೩೩

ಲಲನೆಯರುಗಳು ಬೆಂಕಿಯಂದದಿ
ಪುರುಷರಾ ನವನೀತದಂದದಿ
ಕಲಕೆ ಕರಗದೆ ಮಾಣರದಱೊಳು ಬಾಲೆ ವೃದ್ಧ ಸತಿ
ಲಲಿತ ಮಾತೃ ದುಹಿತೃ ಸುವ್ರತ
ಕಲಿತೆಯೆನಿಪಬಲೆಯರ ಬಿಡಬೇ
ಕೆಲೆ ರಮಣಿ ನೀ ತನಗಸಂಗತವೆಂದನಾ ಭೂಪ        ೩೪

ಭೂತಳೇಶ್ವರನೊಡಬಡದೆ ತಾ
ನೀ ತೆಱದಿ ಕಾಮಿನಿ[17]ಯ ಬೋಧಿಸ
ಲಾ ತತುಕ್ಷಣ ಮದನತಾಪದೊಳೊರ್ವ ಕಂಗೆಟ್ಟು
ಧಾತುಗುಂದಿ – ಲತಾಂಗಿ ತನ್ನನ
ನೀತಿಯಲಿ ನೀ[18] ಬಿಟ್ಟು ಬಂದೆಯ
ದೇತೆಱದಿ ತಾನುೞಿವೆನೆನಲವಗರಸನಿಂತೆಂದ         ೩೫

ತರುಣಿಯಿವಳೇನಹಳು ನೀನಾ
ರಱುಹು [19]ತನಗಿ[20]ದನೆನಲು ವಿದ್ಯಾ
ಧರನು ನಾನೆನ್ನರಸಿಯೀಕೆಯನಂಗಮಾಲೆಯೆನೆ
ಅರಸ ವಿಸ್ಮಯಬಟ್ಟು ಸತಿ ನಿ
ಷ್ಟುರುಷೆಯೆಂದನ್ಯಾಯವಾಡಿದ
ಪರಿಯ ತನ್ನಱಿಕೆಯನು ನೆನೆದವಗರಸನಿಂತೆಂದ      ೩೬

ತರುಣಿಯೆಸಗಿದ ತಪ್ಪದಾವುದು
ತೊರೆದಳೇನು ನಿಮಿತ್ತವೆನೆ ಭೂ
ಮರನೆ ಚಿತ್ತೈಸೆಂದು ಕೊರತೆಯದಿಲ್ಲ ನೀರಡಸಿ
ಸರಸಿಗೆಯ್ದಿದೆನಿತ್ತಲುೞಿದಂ
ಬುರುಹಲೋಚನೆ ಬಂದಳೀಕೆಯ
ನೆರೆಯದಿರಲಾನುೞಿಯೆನೆನಲವಗರಸನಿಂತೆಂದ      ೩೭

ಸೇರದೊಡೆಯನ ಬಿಡದ ಭೃತ್ಯ ವಿ
ಚಾರವಿಲ್ಲದ ಮಂತ್ರಿ ಧೀರೋ
ದ್ಧಾರನಲ್ಲದ ಭೂಪ ಸಮರದಿ ಭೀತಿಗೊಂಬ ಭಟ
ವೈರಿಗಳನೊಂದಿಹನು ವಿಮಲಾ
ಚಾರವುೞಿದಿಹ ವಿಪ್ರನೊಲ್ಲದ
ನಾರಿಗೆಳಸುವ ಮರ್ತ್ಯ ಪಾಮರನೆಂದನಾ ಭೂಪ      ೩೮

ಅದಱಿನಿನ್ನುವನೊಲ್ಲದುೞಿದೀ
ಸುದತಿಗೆಳಸುವುದನುಚಿತವು ತಾ
ನಿದ ವಿಚಾರಿಸಿಯಲ್ಪಸುಖ ಮುಕ್ತಿಯ ನಿವಾಸಕ್ಕೆ
ಕದವು ಮಲದುರ್ಗಂಧ ತೆಱೆದಿಹ
ಸದನ ಕಾಮಿನಿಯೆಂದು ನಾನಾ
ವಿಧದೊಳಾ ವಿದ್ಯಾಧರಗೆ ಭೂಪಾಲ ನೇಮಿಸಿದ        ೩೯

ಯುವತಿಯರ ನುಡಿಯೊಂದು ಮನದಂ
ಘವಣೆ ಬೇಱೊಂದವರು ಮಾಡುವ[21] ವ್ಯವಹರಣೆ ಬೇಱವರು ವಿಧಿಸುವ ಕೃತ್ಯ ಬೇಱೊಂದು
ಅವನಿಯೊಳು ಕಾಮಿನಿಯರನು ನಂ
ಬುವನು ಖೂಳನು ಹರ ವಿರಿಂಚಿ
ಪ್ರವರರಱಿಯರು ಸತಿಯರಿಚ್ಛೆಯನೆಂದನಾ ಭೂಪ     ೪೦


[1] ದುರಿತ

[2] ದುರಿತ

[3] x (ಜ)

[4] ಪಾಲ (ಜ)

[5] [ತಾನಾರ್ಹತಚ್ಛಾಸ್ತ್ರ] (ಪ), ತಾನಿಂತುರುಹ ಶಾಸ್ತ್ರ (ಜ)

[6] [ತಾನಾರ್ಹತಚ್ಛಾಸ್ತ್ರ] (ಪ), ತಾನಿಂತುರುಹ ಶಾಸ್ತ್ರ (ಜ)

[7] x (ಜ)

[8] + ರ (ಜ)

[9] ಯೊಳು (ಜ)

[10] ಸುವಸ್ತುವ [ತಂದಿವನ] (ದ), ದ ವಸ್ತುವ ಮ ರೂಪುವನು (ಜ)

[11] ಸುವಸ್ತುವ [ತಂದಿವನ] (ದ), ದ ವಸ್ತುವ ಮ ರೂಪುವನು (ಜ)

[12] ಮಾ (ಜ)

[13] ಸೂ (ಜ)

[14] ಸೂ (ಜ)

[15] x (ಜ)

[16] x (ಜ)

[17] x (ಜ)

[18] x (ಜ)

[19] ತಾನಿ (ಜ)

[20] ತಾನಿ (ಜ)

[21] x (ಜ)