ಸ್ಮರನಿಭನೆ ಕೇಳಬಲೆ ತಾನೀ

[1] ಪರಿಯ ಶೋಕಿಸುತಿರಲದಾರೆಂ
ದಱಿಯೆವಾವೆಂದಾ ಕುಮಾರರು ಬೆಸಸೆ ಮಜ್ಜನನಿ
ನಿರುತವೆಂದುಬ್ಬೇಱಿ ಹೋದಸು
ಮರಳಿ ಬಂದೆಂದದಲಿ ಜೀವಂ
ಧರನು ಮಾತೆಯ ನೋಡ ಬರಲುನುವಾದನೊಲವಿನಲಿ         ೧೭

ಲಲನೆಯನು ಮಾವನ ಸಮೀಪದಿ
ನಿಲಿಸಿ ಸಖರೊಡನಾ ಕುಮಾರನು
ಹಲವು ಪಯಣದಿ ದಂಡಕಾಟವಿಗೆಯ್ದಿ ಕಂಗಳಲಿ
ಜಲ ಹರಿಯೆ ಕರಿಗಂದಿ ತಪದಲಿ
ಬಿೞಲಿ ತನ್ನಯ ಬರವ ಹಾರುತ
ಲಳವೞಿದ ತಜ್ಜನನಿಯನು ಕಂಡರಸ ಹೊರೞಿದನು   ೧೮

ಹಸಿದ ಹಸುವೆಳವುಲ್ಲ ಕವಿ ನವ
ರಸವನಂಬುಜ ರವಿಯನುತ್ಪಲ
ಸಸಿಯ ವಿಪ್ರ ನಿ[2]ಮಂತ್ರಣವ ನಿರ್ಧನಿಕನರ್ಥವನು
ಅಸತಿ ರಜನಿಯ ಮುನಿಪ ಮುಕ್ತಿಯ
ನೊಸೆದು ಪಡೆವಂದದಲಿ ಘನ ಸಂ
ತಸದಿ ಜೀವಂಧರನ ಕಂಡಪ್ಪಿದಳು ಹರಿಣಾಕ್ಷಿ  ೧೯

ಧರಣಿಪಾಲಲಲಾಮ ಸತ್ಯಂ
ಧರನ ಬಸಿಱಲಿ ಬಂದು ನೀನೀ
ಪರಿಯಲಿಪ್ಪರೆ ಕಂದಯೆಂದಾ ಸುತನ ಹಣೆ ಹಣೆಯ
ಹೊಱಿಸಿಕೊಂ[3]ಡತಿ ಮಱುಗೆ ತನ್ನಯ
ತೆಱನನಱುಹಲು ಸುತನ ವೃತ್ತಾಂ
ತರವನೆಲ್ಲವ ಕೇಳಿ [4]ಬೆಬ್ಬ[5]ಳಿದೞಲದಳು ರಮಣಿ        ೨೦

ಸರಸಜಾನನೆಯಿಂತು ಮಱುಗು
ತ್ತಿರಲು ಜೀವಂಧರನು ನಾನಾ
ಪರಿಯ ನಯದಿಂ ತಿಳುಹಿ ಜನನಿಯ ಶೋಕವನು ಬಿಡಿಸಿ
ದುರುಳ ಕಾಷ್ಠಾಂಗಾರಕನ ಸಂ
ಹರಿಸಿ ಕೊಳಬೇಕೆಂದು ರಾಜ್ಯವ
ಭರದೊಳೆನೆ ಸುಕುಮಾರಗಿಂತೆಂದಳು ಸರೋಜಾಕ್ಷಿ   ೨೧

ಎಲೆ ಮಗನೆ ತನ್ನಳವನಱಿದರಿ
ಗಳನು ಜಯಿಸಲು ಬೇಕು ನೀ ದು
ರ್ಬಲದಿ ನಡೆವುದನೀತಿಯೆನೆ ಕೋಪಾಗ್ನಿ ಪಲ್ಲವಿಸೆ
ಮುಳಿದು ಕಾಷ್ಠಾಂಗಾರಕನ ಕೊಂ
ದಿಳೆಯ ಕೊಂಬುದಿದೇನರಿದು ಎಂ
ದಲಘುಭುಜಬಲ ನುಡಿಯೆ ಮಗುೞಿಂತೆಂದಳಾ ರಮಣಿ ೨೨

ಜೀವಕನೆ ಕೇಳ್ ನಿಮ್ಮ ಸೋದರ
ಮಾವ ಗೋವಿಂದಾಖ್ಯ ತನ್ನ[6]ಯ
ಭಾವ ಸತ್ಯಂಧರನ ಕಾಷ್ಠಾಂಗಾರ ಕೊಂದುದಕೆ
ಆ ವಿರೋಧಿಯ ಕೊಲುವೆನೆಂದೇ[7] ಭಾವಿಸುತಲೈದಾನೆ ನೀನಾ
ಭೂವರನು ಸಹಿತೆಸಗು ಕಾರ್ಯವನೆಂದಳಿಂದುಮುಖಿ  ೨೩

ಎನಲು ಕಾರ್ಯವಿದೇನು ನೀ ಮಾ
ವನ ಸಮೀಪದೊಳಿರಲು ತಾ ಬಹೆ
ನೆನುತ ಗೋವಿಂಧ[8]ಕ್ಷಿತೀಶನ ಪುರಕೆ ಜನನಿಯನು
ಅನುನಯದೆ ಮುನ್ನಟ್ಟಿ ಸಖರೊ
ಗ್ಗಿನೊಳುಭಯ ಪಾರ್ಶ್ವದಲಿ ಬರೆ ಬಂ
ದನು ಕುಮಾರಲಲಾಮನೆಸೆವಾ[9] ರಾಜಪುರವರಕೆ      ೨೪

ಧಾರಣೀಪತಿ ಕೇಳು ಕಾಷ್ಠಾಂ
ಗಾರನಱಿವನೆನುತ್ತಲಾ ಸುಕು
ಮಾರನಾ [10]ಮಿತ್ರಾಳಿ[11]ಸಹಿತಾ ನಗರದುಪವನಕೆ
ಸೇರಿ ನಲವಿಂದಾ ಪುರದೊಳಿಹ
ನಾರಿಯರನೀಕ್ಷಿಸುವೆನೆನು[12]ತವೆ[13] ಹಾರುತಿರ್ದನು ಬಹಳ ಸೌಖ್ಯದೊಳರಸ ಕೇಳೆಂದ     ೨೫

ಇದು ವಿನಮದರೇಂದ್ರ ಶ್ರೀಜಿನ
ಪದಕಮಲಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದು ಕುಮಾರ ಪುರಪ್ರವೇಶ ನೃಪಾಲ ಕೇಳೆಂದ        ೨೬


[1] x (ಜ)

[2] ಮ (ಜ)

[3] ಕಂ (ಜ)

[4] ಬೆರಳು ಬ (ಜ)

[5] ಬೆರಳು ಬ (ಜ)

[6] ಮ್ಮ (ಜ)

[7] ದಾ (ಜ)

[8] ದಾ (ಜ)

[9] ದಾ (ಜ)

[10] ಸುಮಿತ್ರಾವಳಿ (ಜ)

[11] ಸುಮಿತ್ರಾವಳಿ (ಜ)

[12] ತ್ತ (ಜ)

[13] ತ್ತ (ಜ)