ಜಾರೆಯರು ಮಣಿಸೇಸೆದಳಿದರೊ
ಕಾರಿರುಳಿಗಮರಿಯರ ಮುತ್ತಿನ
ಹಾರ ಹರಿದೊಕ್ಕುವೊ ಚಕೋರಕೆ ಧಾತ್ರಿ ಕುಟುಕುಗಳ
ಬೀಱಿದಳೊ ಹೞಮುಗಿಲು ಧರಣಿಗೆ
ಜಾರಿದಪುದೆಂದಜನು ಬೆಳ್ಳಿಯ
ತೋರ ಮೊಳೆಗಳ ಬಲಿದನೆನೆ ಮೂಡಿದುವು ತಾರಾಳಿ  ೨೧

ವಿರಹಿ

[1]ಗಳ[2] ಸುಡುವಗ್ನಿಯೊ ಪು
ಷ್ಕರ ನದಿಯೊಳೋಲಾಡಲೆಂದೆನು
ತುರುತರದಿ ಬಹ ರಾಜಹಂಸೆಯೊ ತಿಮಿರವೆಂದೆಂಬ
ಕರಿಯ ವಿದಳಿಪ ಸಿಂಹವೋ ಗಿರಿ
ಮಱೆಯ ತವಸಿಯನಱಸಿ ಪಿಡಿವಾ
ಸ್ಮರನ ದೀವಿಗೆಯೆನಲು ಶಶಿಯುದಯಾದ್ರಿಯಲಿ ಮೆಱೆದ        ೨೨

ಭೂಮಿಪತಿ ಕೇಳಿಂತೆಸೆವ ಹಿಮ
ಧಾಮನುದಯದೊಳಮಲ ಹರ್ಮ್ಯದ
ಸೀಮೆಯಲಿ ನೃಪ ಮಲಗಿ ಸತಿಯನುಪಾಯದಿಂದೀಗ
ಪ್ರೇಮಬಡಿಸಲು ಬೇಕೆನುತ್ತ ಸ
ನಾಮ ಯಕ್ಷಾಧಿಪನು ತನಗಿ
ತ್ತಾ ಮಹಾ ಗಾನೋಕ್ತಿಯಲಿ ಪಾಡಿದನು ಲೀಲೆಯಲಿ    ೨೩

ಸರಿಗಮಪಧನಿಸೆಂ[3]ಬ ಸಪ್ತ
ಸ್ವರ ಸ[4]ಮೇಳದಿ ಪಾಡೆ ಸುರಮಂ
ಜರಿಯ ತನು ರೋಮಾಂಚವೆಸಗಲು ಮುನ್ನ ಚಿತ್ತವನು
ಭರವಶದಿ ಕದ್ದುಯ್ದ ಜೀವಂ
ಧರನ ನೆನೆದು ವಿ[5]ದಗ್ಧನೀತನು[6] ಪುರುಷನನ[7]ನು ಬೆಸಗೊಂಬೆನೆಂದಿಂತೆಂದಳಾ ರಮಣಿ ೨೪

ಎಲೆ ಮಹಾತ್ಮಕ ನೀನಖಿಳ ಕಲೆ
ಗಳೊಳಭಿಜ್ಞನು ನಿನ್ನ ನಾ ಬೆಸ
ಗೊಳುವೆನೆನ್ನ[8]ಯ ಮನವ[9] ಜೀವಂಧರನು ಕದ್ದುಯ್ದು
ನಿಲುಕಿ ನೋಡನು ತತ್ಕುಮಾರಕ
ತಿಲಕ ವಲ್ಲಭನಹನೆ ತನಗೆನೆ
ಫಲಿಸುವುದು ನಿನಗೆಂದು ಕಪಟಿ ಲತಾಂಗಿಗಿಂತೆಂದ    ೨೫

ಭಾಮೆ[10] ಕೇಳೀ ಪುರದ ಹೊಱಗಣ
ಕಾಮದೇವನ ತದ್ವಿಧಾನದಿ
ನೇಮದಲಿ ನೋಡಲ್ಕೆ ಪತಿ ಪ್ರತ್ಯಕ್ಷನಹನೆನಲು
ಆ ಮಹಿಳೆ ನಲವಿಂದಲದ ಸು
ಪ್ರೇಮದಿಂದೀಕ್ಷಿಸುವೆನೆಂ[11]ದೆನ[12] ಲಾ ಮಿಹಿರನುದಯಾದ್ರಿಗೆಯ್ತಂದನು ಸರಾಗದಲಿ         ೨೬

ಬಿಸಜಸಖನುದಯದಲಿ ಸತಿ ಮನ
ಮೊಸೆದು ತದ್ದ್ರವ್ಯಗಳ ಸಂಪಾ
ದಿಸಿ ಮಹಾತ್ಮಕಗಱುಹೆ ತನ್ನಯ ಹಿಂದೆ ಬಾಯೆನಲು
ಹುಸಿ ಜರಾತ್ಮಕ ಕಾಮದೇವನ
ವಸತಿಗೆಯ್ದಲು ಬೆನ್ನೊಳಾ ಕ
ರ್ಕಶಪಯೋಧರೆ ಸಾರಿದಳು ತದ್ದೇವತಾಲಯಕೆ         ೨೭

ವನಿತೆ ಭಕ್ತಿಯೊಳಷ್ಟವಿಧದ
ರ್ಚನೆಗಳಿಂದಾ ಕಾಮದೇವನ
ಸನುನಯದೊಳರ್ಚಿಸಲು ಜೀವಂಧರನು ಮುನ್ನಿರ್ಪ
ಮನಸಿಜಾಕೃತಿ ಧರಿಸಿ ಕಪಟದ
ಘನ ಜರತ್ವವನುೞಿದು ರಂಜಿಸ
ಲಿನಿಯನನು ಮನದಣಿಯಲೀಕ್ಷಿಸುತ್ತಿರ್ದಳಿಂದುಮುಖಿ  ೨೮

ಆ ಮಹಾ ಪುರುಷನ ವಿನೂತನ
ಕಾಮನನು ಸಕಲೈಶ್ವರಿಯ ಸು
ತ್ರಾಮನನು ಗುಣಧಾಮನನು ಸುಭಗಾಭಿರಾಮನನು
ಕೋಮಲನನಚಲನ ಕುಮಾರ ಲ
ಲಾಮನನು ನಿರ್ಮಲನ ಜಯಸಂ
ಗ್ರಾಮನಾಕಾರವನು ಕಂಡುಬ್ಬಿದಳು ಕಮಲಾಕ್ಷಿ           ೨೯

ತನುವಿನಲಿ ರೋಮಾಂಚವತಿ ಕಂ
ಪನವು ನೇತ್ರದೊಳಶ್ರು ಕೆಂಪಾ
ನನದಿ ಸಂಸ್ಥಿತ ಸೊಂಪು ಕದಪಿನೊಳುಷ್ಣ ಘರ್ಮಾಂಬು
ಮನದೊಳಂಗಜತಾಪವುನ್ಮೋ
ಹನವು ಬಗೆಯೊಳು ಲಜ್ಜೆ ಭಯ ಸಂ
ಜನಿಸೆ ಸುರಮಂಜರಿ ನಿರೀಕ್ಷಿಸಿದಳು ಕುಮಾರಕನ       ೩೦

ಸುದತಿ ಬೞಿಕಾ ವೃದ್ಧನನು ಕಾ
ಣದೆ ಮಹಚ್ಚರಿವಡಲು ಸಂಕೇ
ತದಲಿ ಜೀವಂಧರನು ಮುನ್ನಣಕಿಸಿದ ಮಿ[13]ತ್ರಂಗೆ
ವಿಧುವದನೆ ತನಗೊಲಿದು ಬಂದಾ
ವಿಧವ ತೊಱಲು ನಾಚಿ ಸಲುವುದು
ಮದನನಿಭ ನಿನಗೆಂದು ಸಖ ಹೊಗೞಿದನು ಜೀವಕನ   ೩೧

ಇತ್ತ ಸುರಮಂಜರಿಯ ಪಿತನಾ
ವಾರ್ತೆಯಱಿದಿಬ್ಬರನು ಕರೆತಂ
ದುತ್ತರೋತ್ತರವಾಯ್ತು ಸತಿಗೆಂದತಿ ವಿಳಾಸದಲಿ
ಪುತ್ರಿಯನು ಜೀವಂಧರಗೆ ಸುಮು
ಹೂರ್ತದಿಂದಲಿ ಧಾರೆಯೆಱೆಯೆ ಪ
ವಿತ್ರ ಸುರಮಂಜರಿಯ ರಮಿಸುತ್ತಿರ್ದನೊಲವಿನಲಿ       ೩೨

ಇದು ವಿನಮದಮರೇಂದ್ರ ಶ್ರೀಜಿನ
ಪದಕಮಲಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದುವೆ ಸುರಮಂಜರಿಯ ಪರಿಣತೆಯೋ ಪ್ರಬಂಧದಲಿ ೩೩

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1] ಯರ (ಪ)

[2] ಯರ (ಪ)

[3] ವೆಂ (ಜ)

[4] ದ (ಜ)

[5] ವಿವಿಧನೀತ (ಜ)

[6] ವಿವಿಧನೀತ (ಜ)

[7] x (ಜ)

[8] x (ಜ)

[9] x (ಜ)

[10] ಬರೆ (ಜ)

[11] ತಾ (ಜ)

[12] ತಾ (ಜ)

[13] ಸೂ (ಜ)