ಬಂದು ಪಿತನಡಿಗೆಱಗಲಾ ಗೋ
ವಿಂದ ಕೆಲದಲಿ ಕುಳ್ಳಿರಿಸಿಕೊಂ
ಡೆಂದನೀ

[1] ಚಾಪದಲಿ ಯಂತ್ರವ ಜಯಿಸಿದಾ ನೃಪನ
ಕಂಧರದೊಳಿದ ಸೂಡೆನುತ ಸಾ
ನಂದದಲಿ ಮಂದಾರಮಾಲೆಯ
ನಂದನೆಯ ಹಸ್ತಾಬ್ಜದಲಿ ಕೊಟ್ಟನು ಮಹೀಪಾಲ          ೨೧

ವನಿತೆಯಾಕಾರವನು ಕಂಡಾ
ಜನಪರಚ್ಚರಿವಟ್ಟು ನಾವೀ
ಧನುವ ಬೇಗದೊಳೆತ್ತಿ ಯಂತ್ರವ ಮುಱಿದು ಕಾಮಿನಿಯ
ಅನುಕರಿಸಬೇಕೆಂದು ನೆನೆದು
ಬ್ಬಿನೊಳುಲಿದು ನಾ[2]ಮುಂದೆ ತಾ[3] ಮುಂ
ದೆ[4]ನುತಲೆದ್ದು ನೃಪಾಲಕರು ತುಡುಕಿದರು ಕಾರ್ಮುಕವ ೨೨

ನೊರಜುಗಳು ಕುಲಗಿರಿಯ[5]ನೆಱೆ[6] ಮು
ಕ್ಕುಱಿಕಿದಂತಾ ಚಾಪವನು ಭೂ
ವರರು[7] ಮುಸುಕಿಯದೆಂತು ನೆಗಪಲ್ಕಾಱದುದಱಿಂದ
ಇಱಿಕಿ ಮೊೞಕಾಲಿಕ್ಕಿ ದಂಡೆಯೊ
ಳೊಱಗಿ ಘಾಟದೊಳೆತ್ತಿ ಧನು ಮೈ
ಮುಱೆಯದಿರೆ ಬೆಂಡಾಗಿ ನೃಪರಿದ್ದರು ಕುಚೇಷ್ಟೆಯಲಿ    ೨೩

ಲಾಟ ಪರವಶನಾದ[8]ನಾ ಕ
ರ್ನಾಟ[9] ಮನಗುಂದಿದನು ಕೇರಳ
ಪಾಟಿಗೆಟ್ಟನು ಮಾಗಧನು ಹೊಡೆಗೆಡೆದ[10]ನವನಿಯ[11]ಲಿ
ಭೋಟ ಡೆಂಢೆಣಿಸಿದನು ವರ ಸೋ
ರಾಟ ಸೆಡೆದನು ವಿಗಡ ಧನುವಿನ
ತೋಟಿ ಬೇಡೆಂದಬಲೆಯರು ನಗುತಿರ್ದರೊಲವಿನಲಿ    ೨೪

ಗೌಳ ಗರುವಿಕೆಗೆಟ್ಟನಾ ಪಾಂ
ಚಾಳ [12]ದಂತ[13]ವಿಹೀನನಾದನು
ಚೋಳ ಭಂಗಾಕುಳಿತನಾದ ಕಳಿಂಗ ಕಂದಿದನು
ಮಾಳವನು ಗತಮಾನನಾದನು
ಕಾಲೊಡೆದು ಗತಮಾನನಾದನು
ಪಾಲರಿದ್ದರು ಭಂಗಜಲಧಿಯೊಳರಸ ಕೇಳೆಂದ           ೨೫

ಮೇಳವದಿ ನೃಪರೊಗ್ಗಿನಿಂದಾ
ಸ್ಥೂಳ ಚಾಪವ ತುಡುಕಲಾ ಧನು
ಮೇಲೆ ಬಡಿಗಲ್ಲುರುಳಿದಂತಿರಲದನದಂತೇಕೆ
ಚಾಳಯಿಸಿಕೊಂಡುೞಿದೆವಿನ್ನಾ
ಬಾಳೆ ಸಾಕೆಮಗೆಂದು ಭೂಪರು
ಚಾಳಿಸಿದೊಡಬಲೆಯರು ನಗುತಿರೆ ನಾಚಿ ತವಕದಲಿ    ೨೬

ಪೊಡವಿಪಾಲಕರತುಳ ಧನುವಿಗೆ
ಸೆಡೆಯೆ ಕಾಷ್ಠಾಂಗಾರ ಕೋಪದಿ
ಘುಡುಘುಡಿಸಿ ಚಾಪವನು ಮುಱಿದಂಗನೆಯ ಮುಂದಲೆಯ
ಪಿಡಿದು ತಹೆನೆಂದೆದ್ದು ತೊಡರು
ಗ್ಗಡಿಸೆ ಬಂದು ನಿಜಾಂಬರವನಳ
ವಡಿಸಿಕೊಂಡಬಲೆಯರ ನೋಡುತ ತುಡುಕಿದನು ಧನು[14]ವ        ೨೭

ತುಡುಕಲಾ ಕೋದಂಡವಿಳೆಯೊಳು
ನೆಡಸಿದದ್ರಿಯ ವಿಧದೊಳಿರೆ ಮೈ
ಯ[15]ಡರಿ ಬಲಿದೌಡೊತ್ತಿ ಮೊಣಕಾಲಿಕ್ಕಿ ನೆಗಪುತಿರೆ
ಮಿಡುಕದಿರೆ ಝೋಂಪಿಸಿ ಧರಿತ್ರಿಗೆ
ಕೆಡೆದ ಕಾಷ್ಠಾಂಗಾರಕನನಾ
ಮಡದಿಯರು ಕಂಡೆಯ್ದೆನಗುತಿರ್ದರು [16]ಸುಲೀಲೆಯ[17]ಲಿ            ೨೮

ಧಾರಿಣೀಪತಿ ಕೇಳು ಕಾಪ್ಠಾಂ
ಗಾರ ಮುಖ್ಯ ನೃಪಾಲಕರನಾ
ಭಾರಿ ಧನು ಭಂಗಿಸಲು ಗೋವಿಂದ ಕ್ಷಿತೀಶ್ವರನು
ಮಾರನಿಭ ಜೀವಂಧರನ ಕ
ಣ್ಣೋರೆಯಿಂದೀಕ್ಷಿಸಲು ನಗುತ ಕು
ಮಾರನೆದ್ದನು [18]ತೊಡರ[19] ಝಣಝಣರವದ ಘೋಷದಲಿ          ೨೯

ದೇಹಕಾಂತಿ ದಿಶಾವಳಿಯ ನೆಱೆ
ಮೋಹಿಸಲು ನೃಪನಿವಹ ಕಂಡಿವ
ಸಾಹಸಿಗನೆತ್ತುವನು ಚಾಪವನೆಂದು ಕಾಂತೆಯರು
ಮೋಹನಾಕಾರನು[20] ಸಲಕ್ಷಣ
ದೇಹಿಕನು ಸತಿಗೀತನೆನಲು
ತ್ಸಾಹದಲಿ ಜೀವಂಧರನು ಬಂದೆಯ್ದಿದನು ಧನುವ        ೩೦

ಕುಸುಮಮಾಲೆಯ ಧರಿಸುವಂದದೊ
ಳಸಮ ಬಲನಾ ಕಾರ್ಮುಕವ ಲೆ
ಕ್ಕಿಸದೆ ಸರ್ವಜ್ಞನನು ನೆನೆದೊಲಿದೆತ್ತಿ ಗುಣವೊಂದೆ
ವಸುಧೆ ನಡುಗಲು ಬಿಲ್ಲ ಟಂಕೃತಿ
ಯೆಸಗಿ ಕೂರಂಬುಗಳ ಕೊಂಡಾ
ಗಸದ ಯಂತ್ರದ ನೆೞಲ ನೋಡಿ ಕುಮಾರ ಹರಿಯೆಚ್ಚ   ೩೧

ವಿಮಳಮತಿ ಕೇಳ್ ವಿಗಡಯಂತ್ರವ
ನಿಮಿಷದಲಿ ಜಯಿಸಿದ ಕುಮಾರಕ[21] ನಮಿತ ಚಾಪಕಳಾವಿಧತ್ವವೆ ಸೂತ ಮಾಗಧರು
ಅಮಮ ಭಲರೇ ಪೂತುರೆನೆ ಸಂ
ಭ್ರಮದೆ ವಣಿಜರು ನಲಿಯೆ ಸತಿಯರು
ತಮ ತಮಗೆ ಬೆಱಗಾಗೆ ಜೀವಂಧರನು ನೆಱೆ ಮೆಱೆದ    ೩೨

ಕೇಕಿಯಂತ್ರವ ಗೆಲಿದ ಪುಣ್ಯ
ಶ್ಲೋಕಿ ಜೀವಂಧರನ ಮೇಲೆ ದಿ
ವೌಕಸರು ನೆಱೆ ಮೆಚ್ಚಿ ಪೂಮೞೆಗಱೆಯಲಾ ಯೆಡೆಗೆ
ಲೋಕಮೋಹಿನಿ ಲಕ್ಷ್ಮಿ ಹರ್ಷೋ
ದ್ರೇಕದಲಿ ಮನ್ಮಥನ ಪಟ್ಟದ
ನೇಕಪವು ಬಪ್ಪಂತೆ ಬರುತಿರ್ದಳು ಸರಾಗದಲಿ[22]          ೩೩

ಮಿಸುಪ ಲಾವಣ್ಯಾಮೃತದಿ ದೆಸೆ
ಮುಸುಕೆ ಕಚಕುಚಭರಕೆ ಗಳ ನಡು
ಕುಸಿಯೆ ಜೀವಂಧರನನಾಲೋಕಿಸುತಲಾ ರಮಣಿ
ಕುಸುಮಶರ ನಿಶಿತಾಸ್ತ್ರದಂದದಿ
ಶಶಿವದನೆ ಮೃದುಗತಿಗಳ[23]ಲಿ ಬರೆ
ವಸುಮತೀಶರು ಕಳವಳಿಸಲೆಯ್ದಿದಳು ವಲ್ಲಭನ          ೩೪

ಕೆಲಬರನು ಸತಿರೂಪಿನಲಿ [24]ಕೆಲ[25] ಕೆಲ[26]ರ ಸೊಬಗಲಿ ನೋಟದಿಂದವೆ
ಕೆಲಬರನು ನವ ಹಾವಭಾವದಿ ಕೆಲರ ನಗೆಯಿಂದ
ಕೆಲಬರನು ವಚನಾಮೃತದಿ ಕೆಲ
ಕೆಲರ ಜಾಣಿಂದಿಂತು ನೃಪಸಂ
ಕುಳದ ಚಿತ್ತವ ಸೂಱೆಗೊಳುತಿರ್ದಳು ಸ[27]ರೋಜಾಕ್ಷಿ[28]   ೩೫

ಮದನನಾನೆಯ ಸುಂಡಿಲೆನೆ ಶಶಿ
ವದನೆ ಕಕ್ಷಪ್ರಭೆ ದಿಶಾವಳಿ
ಪುದಿಯೆ ಕರದಿಂದೆತ್ತಿ ನವ ಮಂದಾರ ಮಾಲೆಯನು
ಚದುರ ಜೀವಂಧರನ ಕೊರಲಿನೊ
ಳುದಿತ ಲಜ್ಜಾ ಹರ್ಷ ಭಯ ಸ
ಮ್ಮುದದಿ ಸೂಡಿದಳೊಲ್ದು[29] ಲಕ್ಷ್ಮಿ ಜಯಪ್ರಘೋಷದಲಿ   ೩೬

[30]ಭಾವೆ[31] ಜೀವಂಧರಗೆ ಮಾಲೆಯ
ನೀ ವಿಧದಿ ಸೂಡಲು ಸಮಸ್ತ ನೃ
ಪಾವಳಿ ಮಹಾ ನಾಚಿ ತಲೆಗಳ ಕುತ್ತಿ ಕಾಮದಲಿ
ಬೇವುತಬಲೆಯ ಬಯ್ಯುತಿವ ತಾ
ನಾವ ದೇಶದ ನೃಪನೊ ಎಂದುಱೆ
ಭಾವಿಸಲು ಗೋವಿಂದನಂದು ಗ[32]ಭೀರದಲಿ ನುಡಿದ     ೩೭

ಈ ಮಹಾತ್ಮಕ[33] ವಾರ್ಧಿಪರಿವೃ[34]ತ
ಭೂಮಿಪತಿ ಸತ್ಯಂಧರನ ಸುತ
ನೀ ಮಹಿಮನೆನ್ನಳಿಯ ಜೀವಂಧರ ಮಹಾಬಲನು
ಕಾಮಿನೀಕಂದರ್ಪನೀತ ಸ
ನಾಮನೀತನು ಶತ್ರುಕುಲ ನಿ
ರ್ಧೂಮನೆಂದು ಕುಮಾರಕನ ಗೋವಿಂದ ಬಣ್ಣಿಸಿದ      ೩೮

ಧರಣಿಪಾಲರ ಸಭೆಯೊಳಾತನ
ತೆಱನನಿಂತೀ ಪರಿಯೆ ಬಣ್ಣಿಸೆ
ಕೆರಳಿ ಕಾಷ್ಠಾಂಗಾರನಾ ಗೋವಿಂದನನು ಜಱೆದು
ಹರದನಂದನ ಮಡಿದ ಸತ್ಯಂ
ಧರನ ಮಗ [35]ಗಡ[36] ನಿನ್ನನೀತನ
ತಱಿದು ಕನ್ನೆಯ ಸೆಳೆವೆ ಫಡ ಹೋಗೆನುತ ಗರ್ಜಿಸಿದ   ೩೯

ಖೂಳ ಕಾಷ್ಠಾಂಗಾರನಖಿಳ ನೃ
ಪಾಳಿಗೆಂದನು ಬಣಗನಿವನೀ
ಜಾಳು ಜಂತ್ರವ ಗೆಲಿದ ಗಡ [37]ನಲಿದೊಲಿದು[38] ಮಾಲೆಯನು
ಬಾಲೆ ಸೂಡಿದಳೆಂದು ಹೊಗೞುವ
ನಾಳೆ ನಾಳಿವನಿವದಿರೆಲ್ಲರ
ಸೀೞಿ ಕನ್ನೆಯ ಸೆಳೆಯದಿರೆ ಪೞಿಯೆಮಗೆ ಬಹುದೆಂದ  ೪೦


[1] ನಾ (ಜ)

[2] x (ಜ)

[3] x (ಜ)

[4] ಚೆ (ಜ)

[5] ದಿರೆ (ಜ)

[6] ದಿರೆ (ಜ)

[7] ಸು (ಜ)

[8] ನಕಟ (ಜ)

[9] ನಕಟ (ಜ)

[10] ನೊಲವಿನ (ಜ)

[11] ನೊಲವಿನ (ಜ)

[12] x (ಜ)

[13] x (ಜ)

[14] ನ (ಜ)

[15] ದ (ಜ)

[16] ಸರಾಗದ (ಜ)

[17] ಸರಾಗದ (ಜ)

[18] ತೋರ (ಜ)

[19] ತೋರ (ಜ)

[20] ವ (ಜ)

[21] ನ (ಜ)

[22] + ಸರೋಜಾಕ್ಷಿ (ಜ)

[23] x (ಜ)

[24] x (ಜ)

[25] x (ಜ)

[26] + ಬ (ಜ)

[27] ರಾಗದಲಿ (ಜ)

[28] ರಾಗದಲಿ (ಜ)

[29] ಲಿದು (ಜ)

[30] x (ಜ)

[31] x (ಜ)

[32] ಗಂ (ಜ)

[33] ನು (ಜ)

[34] ಮಿ (ಜ)

[35] x (ಜ)

[36] x (ಜ)

[37] ನಿವನಲ್ಲಿ (ಜ)

[38] ನಿವನಲ್ಲಿ (ಜ)