ಈ ಗ್ರಂಥ ಸಂಸ್ಕರಣ ಮಾಡುವಲ್ಲಿ ಒಂದು ತಾಳೆ ಓಲೆ ಗ್ರಂಥವನ್ನೂ (ಜ.ಪ್ರತಿ), ಒಂದು ಕಾಗದದ ಗ್ರಂಥವನ್ನೂ (ಮ ಪ್ರತಿ) ಹಾಗೂ ಕ್ರಿ.ಶ. ೧೯೦೮ ರಲ್ಲಿ ಮ.ಆ. ರಾಮಾನುಜ ಅಯ್ಯಂಗಾರ್ ಅವರು ಸಂಶೋಧಿಸಿ ಪ್ರಕಟಿಸಿದ ಒಂದು ಅಚ್ಚಿನ ಪ್ರತಿಯನ್ನೂ (ಪ ಪ್ರತಿ) ಬಳಸಿಕೊಳ್ಳಲಾಗಿದೆ.

ಇವುಗಳಲ್ಲಿ ‘ಜ’ಪ್ರತಿಯು ಜೈನ ಸಂಘ ಸಾಲಿಗ್ರಾಮದವರು ನಮಗೆ ದೇಣಿಗೆಯಾಗಿ ಕೊಟ್ಟ ಪ್ರತಿ. ಇದು ಸುಸ್ಥಿತಿಯಲ್ಲಿದ್ದು ಸಂಪೂರ್ಣವಿದೆ. ಇದು ಸುಮಾರು ಎರಡು ನೂರಾ ಐವತ್ತು ವರ್ಷಕ್ಕಿಂತ ಹಳೆಯದಿರಬಹುದೆಂದು ಅನ್ನಿಸುತ್ತಿದೆ. ಪಾಠಾಂತರಗಳನ್ನು ನಿರ್ಣಯಿಸುವಾಗ ಇದನ್ನು ಹೆಚ್ಚು ಉಪಯೋಗಿಸಲಾಗಿದೆ.

‘ಮ’ಪ್ರತಿ ಮದ್ರಾಸಿನ ಗವ್ಹರ್ನಮೆಂಟ ಓರಿಯಂಟಲ್ ಮ್ಯಾನ್ಯುಸ್ಕ್ರಿಪ್ಪಲಾಯಬ್ರರಿಯದು. ಅಲ್ಲಿಯದೇ ಹಳೆಯ ತಾಳೇ ಓಲೆಯ ಪ್ರತಿಯಿಂದ ನಕಲು ಮಾಡಿಸಿದ ಈ ಪ್ರತಿಯು ಈಗ ಕನ್ನಡ ಸಂಶೋಧನ ಸಂಸ್ಥೆಗೆ ಕಾಣಿಕೆಯಾಗಿ ಬಂದಿರುತ್ತದೆ. ಈ ಪ್ರತಿಯು ‘ಜ’ ಪ್ರತಿಯಿಂದ ಭಿನ್ನವಿದೆ. ಪಾಠಾಂತರ ಹಾಕುವಲ್ಲಿ ಇದರ ಉಪಯೋಗವನ್ನು ಸಹ ಸಾಕಷ್ಟು ತೆಗೆದುಕೊಳ್ಳಲಾಗಿದೆ. ಈ ಪ್ರತಿಯ ಕೊನೆಗೆ  – “ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೬೬೭ನೆಯ ಸಂದಕ್ರೋಧನ ಸಂವತ್ಸರದ ಫಾಲ್ಗುಣ ಶುದ್ಧ ೨ ರೇವತಿ ನಕ್ಷತ್ರದಲ್ಲು ಮೈಸೂರ ಬಸ್ತಿ ಶಾಂತಯ್ಯನವರ ಮಗ ದೊಡ್ಡಯ್ಯನು ತಮಗೆ ಬರೆದಂಥಾ ಜೀವಂಧರನ ಷಟ್ಪದಿ ಮೈಸೂರು ಚೈತ್ಯಾಲಯದಲ್ಲಿ ಸಂಪೂರ್ಣವಾಯ್ತು” ಎಂದಿದೆ. ಇದರಿಂದ ಈ ಪ್ರತಿ (ಅರ್ಥಾತ್ ಮೂಲ ತಾಳೆ ಓಲೆ ಪ್ರತಿ) ಕ್ರಿ.ಶ. ೧೭೪೬ನೆಯ ಇಸ್ವಿಯ ಕ್ರೋಧನ ಸಂವತ್ಸರದ ಫಾಲ್ಗುಣ ಶುದ್ಧ ರೇವತಿ ನಕ್ಷತ್ರದಲ್ಲಿ ಪ್ರತಿಮಾಡಲ್ಪಟ್ಟು ಸಂಪೂರ್ಣವಾಯಿತೆಂದು ತಿಳಿಯುತ್ತದೆ.

‘ಪ’ ಪ್ರತಿ ಶ್ರೀ ಮ.ಆ.ರಾಮಾನುಜ ಅಯ್ಯಂಗಾರ್ ಅವರು ಕ್ರಿ.ಶ. ೧೯೦೮ ರಲ್ಲಿಯೇ ಸಂಶೋಧಿಸಿ ಪ್ರಕಟಿಸಿದ ಅಚ್ಚಾದ ಪ್ರಗತಿ. ಮೇಲಿನ ಎರಡು ಪ್ರತಿಗಳಿಂದಲೂ ಭಿನ್ನವಾಗಿಯೇ ಇದೆ. ಕಾರಣ ಶ್ರೀ ಅಯ್ಯಂಗಾರರ ಗಮನಕ್ಕೆ ಮೇಲಿನ ಎರಡು ಪ್ರತಿಗಳು ಬಿದ್ದಿರಲಿಲ್ಲವೆಂದು ನಂಬಬಹುದಾಗಿದೆ. ಕಾರಣ ಈ ಪ್ರತಿಯನ್ನೂ ಸಹ, ಸಾಕಷ್ಟು ಹಳೆಯದಿರುವದರಿಂದ, ಒಂದು ಸ್ವತಂತ್ರ ಪ್ರತಿಯಂತೆ ಬಳಸಿಕೊಳ್ಳಲಾಗಿದೆ.

ಹೀಗೆ ಮೂರು ಪ್ರತಿಗಳ ಸಹಾಯದಿಂದ ಸಂಸ್ಕರಣ ಮಾಡಿ, ಯಾವ ಪ್ರತಿಯ ಪಾಠಾಂತರ ಸರಿಯಿದೆಯೋ ಅದನ್ನು ಸ್ವೀಕರಿಸಿ, ಉಳಿದೆರಡರ ಪಾಠಾಂತರಗಳನ್ನು ಅಡಿ ಟಿಪ್ಪಣೆಯಲ್ಲಿ ಕೊಡಲಾಗಿದೆ.

ಅಮೂಲ್ಯವಾದ ತಮ್ಮ ಗ್ರಂಥಗಳನ್ನು ನಮಗೆ ಎರವಲಾಗಿ ಕೊಟ್ಟು ಈ ಕೃತಿಯ ಬೆಳಕಿಗೆ ಬರಲು ಸಹಾಯ ಮಾಡಿದ ಮಹನೀಯರಿಗೆ ನಾವು ಋಣಿಯಾಗಿದ್ದೇವೆ.

ಸಾಕಷ್ಟು ಜಾಗ್ರತೆ ವಹಿಸಿ ಈ ಗ್ರಂಥವನ್ನು ಸಂಪಾದಿಸಿದ್ದರೂ, ಅದರಲ್ಲಿ ನ್ಯೂನತೆಗಳಿಲ್ಲವೆಂದು ಹೇಳುವ ಸಾಹಸ ನಮಗಿಲ್ಲ. ಹಳೆಯ ಕಾಲದ ಗ್ರಂಥ ಸಂಸ್ಕರಣ ಕಾರ್ಯ ಎಂತಹ ಕಠಿಣವೆಂಬುದನ್ನು ಮನದಂದು ಸಹೃದಯರು ಈ ಕೃತಿಯನ್ನು ಸಂತೋಷದಿಂದ ಸ್ವೀಕರಿಸುವರೆಂದು ನಂಬುತ್ತೇವೆ.

ಸಂಪಾದಕರು

* * *