ಎಂದೊಡಾ ನೃಪನಿವಹ ಹರದನ
ಕಂದನಲ್ಲ ಮಹಾಬಲನು ಸ
ತ್ಯಂಧರನ ಮಗನಲ್ಲದಿರೆ

[1]ಹಿಂದೆಮ್ಮ[2] ಜಯಿಸುವನೆ
ಇಂದಿವನ ನುಡಿ[3]ಗೇಳೆ[4] ಹರಿವೆಮ
ಗೆಂದು ಕಾಷ್ಠಾಂಗಾರಕನನುೞಿ
ದಂದು ಜೀವಂಧರಗೆ ನೆರವಾದುದು ನೃಪವ್ರಾತ          ೪೧

ಕಾಲು ಹೊೞೆಯನು ದಾಟುವೊಡೆ ಹರಿ
ಗೋಲದೇಕಿವ ನನ್ನ ಸೇವಕ
ನಾಳಿನಾಳಿವಗೇಕೆ ಭೂಪರು ನೀವು ಪರಿಯಂತ
ಆಳು ಕುದುರೆಯ ಹಂಗು ಬೇಡೆನು
ತಾಲಿಯಲಿ ಕೆಂಪಡರೆ ರೋಷ
ಜ್ವಾಲೆ ಝೊಂಪಿಸೆ ಮಂಟಪವ ಸುಕುಮಾರ ಹೊಱವಟ್ಟ            ೪೨

ಉಭಯ ಪಾರ್ಶ್ವದೊಳಖಿಳ ಧರಣೀ
ವಿಭುಗಳೆಯ್ತರೆ ಹಿಂದೆ ಮಿತ್ರರು
ವಿಭವದಲಿ ಬರಲಿದಿರಿನಲಿ ಗೋವಿಂದ ನಡೆತರಲು
ವಿಭವದಲಿ ಬಿ[5]ಲುರಬಸವಾಶಾ
ತ್ರಿ[6]ಭುವನವ ಗೋೞಿಡಿಸಲಂಗಜ
ನಿಭನು ಸಮರಾಂಗಣಕೆ ನಡೆದನು ಸಕಲದೞಸಹಿತ     ೪೩

ಅರಸ ಕೇಳು ಕುಮಾರನೀಪರಿ
ಬರಲು ಕಾಷ್ಠಾಂಗಾರಕನ ದೞ
ನೆರೆದು ತಮ್ಮೊಳಗೆಂದರೀ ಸತ್ಯಂಧರನು[7] ನಮಗೆ
ಅರಸು ಪೂರ್ವದೊಳೆಂದು ಜೀವಂ
ಧರನ ಕಂಡುದು ಕಿಱಿದು ದೞಸಹಿ
ತಿರದೆ ಕಾಷ್ಠಾಂಗಾರ ತಾಗಿದನಾ ಕುಮಾರಕನ           ೪೪

ಒಂದು ಕಡೆಯಲಿ ರಿಪುಬಲವ ಗೋ
ವಿಂದ ಸವಱಿದಱನೊಂದೆಸೆಯ ನೃಪ
ವೃಂದ ಬಳಸಿದು[8]ದೊಂದು [9]ದೆಸೆ[10]ಯಲಿ ಮಿತ್ರರರಿಬಲವ
ಕೊಂದರಗ್ಗದ[11] ರಥಿಕರನು ಜೀ
ವಂಧರನು ಖಂಡಿಸಲು ಖಾತಿಯ
ನೊಂದಿ ಕಾಷ್ಠಾಂಗಾರ ತೆಗೆದೆಚ್ಚನು ಕುಮಾರಕನ        ೪೫

ಒಳ್ಳಿತೈ ಕೈಚಳಕ ಸರಿ ನಿನ
ಗಿಲ್ಲವಾರಲಿ ಕಲಿತೆ ದಿಟ ತ
ಪ್ಪಲ ನೀನೆಚ್ಚಂಬು ಬೀೞ್ವುದು ಗುಱಿಯ ಸರಿಸದಲಿ
ಪುಳ್ಳಿಗಳ ತಂದದನು ಮಾಱುವ
ಗಳ್ಳಗತಕವ ಬಲ್ಲೆಯಲ್ಲದೆ
ಬಿಲ್ಲುವಿದ್ಯವಿದೇಕೆ ನಿನಗೆಂದೆನುತ ಮುಳಿದೆಚ್ಚ ೪೬

ನೆಟ್ಟನೆನ್ನಯ ಪಟ್ಟದಾನೆಯ
ದಟ್ಟಿಸಲು ನಾ ನಿನ್ನ ಹೆಡಗುಡಿ
ಗಟ್ಟಿ ನಿನ್ನ ಸುಗಳೆಯುತಿರಲದನಪಹರಿಸಿಕೊಂಡು
ಗಟ್ಟಬೆಟ್ಟವ ಹೊಕ್ಕು ಭೀತಿಸಿ
ಕೆಟ್ಟು ಮಗುೞೆಯ್ತರಲು ನಿನ್ನನು
ದಿಟ್ಟನೆಂಬರೆ ಹೇೞೆನುತ ಖಳನೆಚ್ಚನವನಿಪನ ೪೭

ಜಾತಿಗಳ ಪತಿಕರಿಸಿದವ ವಿ
ಖ್ಯಾತಿಬಡುವನು ಖಲ್ಲರಪ್ಪ ಕು
ಜಾತಿಗಳ ಸಲಹಿದರಿಗಪಜಯವೆಂಬ ನುಡಿಯೆಮ್ಮ
ತಾತಗಱಿಯಲು ಬಂದುದೆಲವೋ
ಪಾತಕನೆ [12][ಚಿಃ][13] ಸ್ವಾಮಿದ್ರೋಹಿ ಕಿ
ರಾತ ಹೋಗೆಂದೆನುತ ಖಳನ ಕುಮಾರ ಮಗುೞೆಚ್ಚ     ೪೮

ಹರದನೊಳಗುಂಡುಟ್ಟು [14]ಬಳೆದ[15] ಬ್ಬರಿಸಿ ತಱುವಲಿತನದ ನುಡಿಗಳ
ಸೊರಹಿದೊಡೆ ಫಲವೇನು ನೀ ಕ್ಷತ್ರಿಯನೊ ವೈಶ್ಯಕನೋ
ನಿರುತ ನೀನಾರೀಗ ನಿನ್ನನು
ತಱಿದು ರಕ್ತವನಖಿಳ ಶಾಕಿನಿ
ಯರಿಗೆ ಬಡಿಸುವೆನೆನುತ ಕಾಷ್ಠಾಂಗಾರ [16]ಮುಳಿದೆ[17]ಚ್ಚ ೪೯

ಇವನ ನಾ ಸರಿ ಮಾಡಿಕೊಂಡಾ
ಹವವ [18]ಮಾಡ[19]ಲದೇಕೆ ಎನುತಾ
ರ್ದು ವಿರಳಾಸ್ತ್ರದೊಳವನ ರಥ ಸಾರಥಿ ಹಯಾವಳಿಯ
ಸವಱಿ ಕಾಷ್ಠಾಂಗಾರಕನ ಬಾಂ
ಧವ ಸಹಿತಲೊಂದಂಬಿನಲಿ ಕಡಿ
ದವನಿಪತಿ ಪಡೆದನು ಜಯಶ್ರೀಯನು ರಣಾಗ್ರದಲಿ       ೫೦

ದುರುಳ ಕಾಷ್ಠಾಂಗಾರಕನನೀ
ತೆಱದಿ ಜಯಿಸಿ ಸಮಸ್ತ ಭೂಪರ
ಪುರಕೆ ಮನ್ನಿಸಿ ಕಳುಹಿ ಶಾಸ್ತ್ರಕ್ರಮದಿ ಲಕ್ಷ್ಮಿಯನು
ಅರಸ ಪರಿಣಯವಾಗಿ ನಿಜ ಮಂ
ದಿರವ ಹೊಕ್ಕಾ ರಾಜ್ಯಪಟ್ಟವ
ಧರಿಸಿ ಜೀವಂಧರನು ತಾ[20]ಯೊಡನಿ[21]ರ್ದನೊಲವಿನಲಿ ೫೧

ಬೞಿಕ ಜೀವಕ ಹಿಂದೆ ದೇಶಂ
ಗಳ ಪರಿಭ್ರಮಣೆಯಲಿ ಪಡೆದಾ
ಲಲನೆಯರು ಮೂವರನು ರಾಜಪುರಕ್ಕೆ ತಾ ಕರೆಸಿ
ಹೊೞಲೊಳಿಹ ಕಾಂತೆಯರು ಸಹ ಭೂ
ವಳಯಪಾಲಕನಷ್ಟವಹ ಕೋ
ಮಳೆಯರೊಡಗೂಡಿರ್ದನಮರೇಂದ್ರ[22]ನ ಸು[23]ಲೀಲೆಯಲಿ          ೫೨

ಮಹಿಷಿ ಪಟ್ಟವನೊಸೆದು ವಿಮಳೋ
ತ್ಸಹದೊಳಾ ಗಂಧರ್ವದತ್ತೆಗೆ
ವಹಿಸಿ ಗಂಧೋತ್ಕಟನ ಮನ್ನಿಸಿ ಸಕಲ ಮಿತ್ರರಿಗೆ
ಬಹಳ ಪದವಿಯನಿತ್ತು ತತ್ಸ
ನ್ನಹಿತ ನಂದಾಢ್ಯಂಗೆ ರಿಪುನಿ
ಗ್ರಹವ ಯುವರಾಜತ್ವವಿತ್ತನು ಬಹಳ ಹರ್ಷದಲಿ           ೫೩

ಕ್ರೂರ ಕಾಷ್ಠಾಂಗಾರಕನ ಕೈ
ಸಾರಿದವದಿರ ಸದೆದು ಧೀರೋ
ದಾರರಾಗಿಹ ಪೂರ್ವ ಸಚಿವರಿಗವ[24]ರ ಪದವಿತ್ತು
ಮೂಱು ಲೋಕದಿ ತನ್ನ ಕೀರ್ತಿಯ
ಬೀಱಿ ಸದ್ಧರ್ಮದಿ ಕುಮಾರಕ
ಧಾರಿಣಿಯ ಪಾಲಿಸುತಲಿರ್ದನು ಬಹಳ ಸೌಖ್ಯದಲಿ      ೫೪

ಇದು ವಿನಿಮದಮರೇಂದ್ರ ಶ್ರೀಜಿನ
ಪದಕಮಲಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದುವೆ ಪಟ್ಟೋತ್ಸಾಹ ವರ್ಣನೆಯರಸ ಕೇಳೆಂದ         ೫೫


[1] x (ಜ)

[2] x (ಜ)

[3] ಗಳಿಗೆ (ಜ)

[4] ಗಳಿಗೆ (ಜ)

[5] ಬ (ಜ)

[6] + ವಿ (ಜ)

[7] + ಮಿಗೆ (ಜ)

[8] ತ (ಜ)

[9] ಕಡೆ (ಜ)

[10] ಕಡೆ (ಜ)

[11] ಳ (ಜ)

[12] ಸಾ (ಜ)

[13] ಸಾ (ಜ)

[14] ಬೆಳದು (ಜ)

[15] ಬೆಳದು (ಜ)

[16] ಮಗುಳೆ (ಜ)

[17] ಮಗುಳೆ (ಜ)

[18] ನೆಸಗ (ಜ)

[19] ನೆಸಗ (ಜ)

[20] ಯ ಸಹಿತಿ (ಜ)

[21] ಯ ಸಹಿತಿ (ಜ)

[22] x (ಜ)

[23] x (ಜ)

[24] ಮ (ಜ)