ಚಲ್ಲಣವನಳವಡಿಸಿ ಜಾಱಿದ
ಚೊಲ್ಲೆ

[1]ಯವ ಮಿಗೆ[2] ಸಂವರಿಸಿಕೊಂ
ಡೆಲ್ಲಿ ನಲ್ಲನೆನುತ್ತ ನೀರ್ಮೊಗೆದೆಸೆವ ಸೋರ್ಮುಡಿಯ
ಮಲ್ಲಿಗೆಯರಳು ಸೂಸೆ ತವಕಾದಿ
ಹುಲ್ಲೆಗಣ್ಣವಳೊರ್ವಳುದಕವ
ನುಲ್ಲಸದಿ ಚೆಲ್ಲಿದಳು ಭೂಪನ ಮೇಲೆ ತವಕದಲಿ           ೬೧

ಅರಸನಕ್ಷಿಯೊಳುದಕವನು ವಿ
ಸ್ತರದಿ ಹೊಯ್ದಣಕಿಸುತ[3] ಸುರಮಂ
ಜರಿಯ ಸೋರ್ಮುಡಿವಿಡಿದು ಬಾಗಿಸಿ ಚಕ್ರವಾಕಗಳ
ತುಱುಗಿದುವು ಕನ್ನೆಯ್ದಿಲೆನೆ ಕ
ತ್ತಾರಿಯ ವಾರಿಯನೆತ್ತಿ ಜೀವಂ
ಧರನು ಸತಿಯ ಕುಚಂಗಳಲಿ ಸುರಿದನು ವಿನೋದದಲಿ ೬೨

ನಾರಿಯರ ತನುಲಿಪ್ತ ನವ ಕಾ
ಶ್ಮೀರ ಕುಚಕುಂಕುಮ ಸುಗಂಧದ
ಸಾರದಲಿ ಕೆಸಱಾದುವೀ ಜಲಕೇಳಿ ಸಾಕೆನಲು
ಜಾಱಿದಳಕಚ್ಯುತ ಕುಸುಮ ಕೆಂ
ಪೇಱಿದಕ್ಷಿ ಶಿತೋಷ್ಣ ನಗೆಮೊಗ
ಮಾರಚಿಹ್ನ[4]ಗಳೆಸೆಯೆ ಸತಿಯರು ನಿಂದರೞ್ತಿ[5]ಯಲಿ      ೬೩

ಕರದ ಕುಸುಮದ [6]ಕಂತುಕದ[7] ಪಂ
ಕರುಹದವ[8]ತಂಸ[9]ಗಳ ವೇಣಿಯೊ
ಳಿಱುಕಿದುತ್ಪಲದಂಗರುಚಿಯ ಮೃಣಾಳ ಕಂಕಣದ
ಹಱೆನೊಸಲ ಸುಲಪಲ್ಲ ಗಂಧದಿ
ಮೆಱೆವ ಮಕರಿಕೆ ಪತ್ರಗಳ ಸಡ
ಗರದ ಸತಿಯರು ಸಹಿತ ನೃಪ ಹೊಱವಟ್ಟನಾ ಕೊಳವ  ೬೪

ವೃತ್ತಕುಚಗಳ ಮೇಲೆ ಬಾಹಾ
ಸ್ವಸ್ತಿಕಾದರ್ಪಣವನಳಿಕುಳ
ಮುತ್ತಿತೆನೆ ಕಪ್ಪಿನಲಿ ಕುಂತಳವೆಸೆಯೆ ಸೀತ್ಕಾರ
ವಕ್ತ್ರದೊಳಗಿರೆ ತನುವನಂಬರ
ಹತ್ತಿರಲು ನಗ್ನತೆಯೊಳೊಂದಿಹ
ಚಿತ್ತಜನ ದೇವತೆಯರಂತೆಸೆದರು ಲತಾಂಗಿಯರು       ೬೫

ತರುಣಿಯರ ಮುಖಚಂದ್ರನಿಂ ಶಶಿ
ಪರಿಭವಂಬಡೆದಾ ಕುಚಾದ್ರಿಯೊ
ಳುರುೞಿ ಕಡಿಕಡಿಯಾ[10]ದುದೆ[11]ನಲಂಗದಲಿ ನಖವೆಸೆಯೆ
ಭರಕೆ ಬೀಳುವೆನೆಂದು ಮೊಲೆಗಜ
ನಿ[12]ರದೆ ನೀಲದ ಮೊಳೆಯನೊಂದಿದ
ತೆಱದೆ ಕುಚಚೂಚಕಗಳೆಸೆದುವು ಕೋಮಲಾಂಗಿಯರ  ೬೬

ಕರದಲಂಗಜ ಮುದ್ರೆಗಳನಾ
ತರುಣಿಯರು ನಸು ಬಾಗಿ ನಗ್ನಾಂ
ತರದಿ ಮುಚ್ಚಲು ಬೆರಳುಗಳು ಪಿಡಿವಣಿಗಳಂತಿರಲು
ಸ್ಮರನಿಧಾನವ ಕಾಯ್ದುಕೊಂಡಿಹ
ಮೆಱೆವ ಪಂಚಮ ಶಿರದ ಫಣಿಪನ
ತೆಱದಿ ಹಸ್ತಗಳೆಸೆದವಾ ಕಮಳಾಯತಾಕ್ಷಿಯರ           ೬೬*

ಲಲಿತ ವದನಾಂಭೋರುಹಕೆ ಕವಿ
ದಳಿಯೊ ಮುಖಚಂದ್ರನ ಕಲಂಕೋ
ಜ್ವಲವಿದೆನಲಧರದಲಕ್ಷತೆಗಳೊಪ್ಪಿರಲು
ವಿಲಸಿತಾಸ್ತ ಸುಧಾಕರಂಗ
ವ್ವಳಿಪ ಕೃಷ್ಣಭುಜಂಗನೆನೆ ಕ
ಣ್ಗೊಳಿಸಿದುವು ನವರೋಮರಾಜಿಗಳಾ ಲತಾಂಗಿಯರ  ೬೭

ಲಲನೆಯರ ಲಾವಣ್ಯರಸವು
ಚ್ಚಳಿಸಿತೋ ನಾವಬಲೆಯರ ಸ
ಲ್ಲಲಿತ ತನುಸೋಂಕಿನಲಿ ಸುಖದಿಂದಿರ್ದೆವಿನ್ನೆಂದು
ಕಳೆವರೆಂದಳವೞಿದು ಜರಿದಳ
ವ[13]ೞಿವ ಕಣ್ಣಿನ [14]ನೀರ್ಗಳೆನೆ ಕೋ
ಮಲೆಯರುಟ್ಟಂಬರದ[15] ನೀರ್ಗಳುಸುರಿದುವೊಗ್ಗಿನಲಿ    ೬೮

ಬಿೞಿಕ[16] ಹೊಸ ಮಡಿವರ್ಗಗಳ ಕೋ
ಮಲೆಯರಿಗೆ ಕೊಟ್ಟರಸ ಕೃತಕಾ
ಚಲಕೆ ಬಂದಿರೆ ಮಱುದಿವಸ ನವರತ್ನದುಯ್ಯಲೆಯ
ನಲಿದು ಕಾಂತೆಯರೇಱೆ ತನುಲತೆ
ಹೊಳೆಯೆ ಭೂವರನಂಕಮಾಲೆಯ
ನೊಲಿದು ಪಾಡುತಲಾಡಿದರು ಪರಮಾನುರಾಗದಲಿ     ೬೯

ತುದಿಗೊಳಿಸಿ ವಾಮಾಂಘ್ರಿ ಮಣೆಯೊಂ
ದಿದ ಸುದಕ್ಷಿಣಪಾದ ರಜ್ಜುವ
ಹುದುಗಿದೊಳದೊಡೆ ಹೊಳೆವ ಕಣ್ ಹೊಗರಿಡುವ ದೋರ್ಮೂಲ
ಅದಿರ್ವ ಮೊಲೆ ನೀಳ್ದಂ[17]ಗ ರಂಜಿಸೆ
ಮೃದುತರದಿ ಶುಕ ಪಾಡೆ ಚಾಪವ
ಮದನನೇಱಿಸಲಾಡಿದರು ಕಾಮಿನಿಯರುಯ್ಯಲನು      ೭೦

ಲಲಿತ ದೃಗುಬಾಣದಲಿ ಬೆಳುದಿಂ
ಗಳನಿಸುತ ಸೋರ್ಮುಡಿಯೊಳನಿಲನ
ಸೆಳೆದು ಮುಖಶಶಿಯಿಂ ಶಶಾಂಕನನಟ್ಟಿ ಜಘನದಲಿ
ಕುಲಗಿರಿಯ ಸೋವಿಸಿ ಘನಸ್ತನ
ಗಳಲಿ ದಿಗ್ಗಜಕುಂಭಗಳ ಸೆಳೆ
ದೊಲೆದು ನಲಿದುಯ್ಯಲೆಯನಾಡಿದರಾ ಮೃಗಾಕ್ಷಿಯರು ೭೧

ಮಡದಿಯರು ಹೊಮ್ಮಿಣಿಗಳನು ಕೈ
ದುಡುಕಿ ತೆಗೆವ ಬೆಡಂಗು ಮನ್ಮಥ
ಕಡುಗಿ ಬಾಳುಗಿವಂದಮಾಗೆ ನಿತಂಬ ತನು ನಡುಗೆ
ಮುಡಿ ಕುಚದ್ವಯ ಕುಣಿ[18]ಯಲಾ[19] ಸೆಳೆ
ನಡು ಸೆಳೆಯೆ ಮೇಖಲೆ ಜಗುೞೆ ಮುಖ ಬೆಮ
ರಿಡಲು ನಲಿದೊಲೆದಾಡಿದರು ಕೋಮಳೆಯರುಯ್ಯಲೆಯ          ೭೨

ಬೞಿಕ ಜೀವಂಧರ ನೃಪಾಲಕ
ತಿಲಕ ನವಿಲುಯ್ಯಲೆಯನಷ್ಟಮ
ಲಲನೆಯರು ಸಹಿತಾಡಿ ಸರ್ವ ಸುಖಂಗಳನು ಸವಿದು
ಹೊೞಲಿಗಾ ಬನವುೞಿದು ಬಂದ
ಗ್ಗಳನು ಸದ್ಧರ್ಮದಲಿ ಭೂಮೀ
ತಳವ ಪಾಲಿಸುತಿರ್ದನಮರೇಂದ್ರನ ಸುತೇಜದ[20]ಲಿ     ೭೩

ಇದು ವಿನಮದಮರೇಂದ್ರ ಶ್ರೀಜಿನ
ಪದಕಮಲ ಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದುವೆ ನಂದನವನವಿಹಾರಣವೀ ಪ್ರಬಂಧದಲಿ           ೭೪


[1] ಪದ (ಜ)

[2] ಪದ (ಜ)

[3] ವ (ಜ)

[4] ಹ್ನೆ (ಪ)

[5] ರ್ತ್ತಿ (ಜ)

[6] ಕಂದಕಂದುಕ (ಜ)

[7] ಕಂದಕಂದುಕ (ಜ)

[8] ಸಂತ (ಜ)

[9] ಸಂತ (ಜ)

[10] ಡದವೆ (ಜ)

[11] ಡದವೆ (ಜ)

[12] ಕಿ (ಜ)

* ಈ ಪದ್ಯವು ಪ ಪ್ರತಿಯಲ್ಲಿಲ್ಲ.

[13] ಲ (ಜ)

[14] x (ಜ)

[15] x (ಜ)

[16] x (ಜ)

[17] ಳಂ (ಜ)

[18] ಯ (ಜ)

[19] ಯ (ಜ)

[20] x (ಜ)