ಧರೆಗೆ ಬಾಹಿಯನಾದೆ ಮನೆಯೆ
ಲ್ಲರಿಗೆ ಹಗೆಯಾದೆನು ಮನೋಜನ
ಶರಕೆ ಗುಱಿಯಾದೆನು ವಿಚಾರಿಸಲಲ್ಪ ಸುಖವೆಂದು
ಅಱಿಯದಾದೆನು ಜಾತಿವೃತ್ತಿಗೆ
ಹೊಱಬಿಗನು ತಾನಾದೆನಿನ್ನಾ
ದರೆ ಸಲಹಬೇಕೆಂಬ ವಿಟರ ನೃಪಾಲನೀಕ್ಷಿಸಿದ ೬೧

ನಾಳೆ ಬರುತಿದೆ ಹಬ್ಬ ಸಿರಿಯಂ
ತಾಲಯದಿ ಹೂೞಿರದೆ ಮರುಳೆ ಕ
ರಾಳನನು ನೂಕು

[1]ವುದು[2] ಬೀಯಕ್ಕೇನ ಮಾಡುವೆನು
ಏೞ ಮಂದಿರ ಹುಣಿಸೆಗೊಂದಿದ
ಕೋಲಿನಾಣಿಲಿನೆಲ್ಲ ಹಡೆಗೆ ವಿ
ಲೋಲೆಯೆಂದುಱೆ ಜಡಿವ ಮುದುಗುಂಟಣಿಯನೀಕ್ಷಿಸಿದ ೬೨

ಒಡವೆಯುಳ್ಳಂದಾತ್ಮಜೆಯ ಕರೆ
ದೆಡೆಗೆ ತವಕದಲಟ್ಟಿ ಧನ ತೀ
ರ್ದೊಡೆ ಕನಲಿ ನಿಂದೆಡೆಯ ನೀರನು ಚೆಲ್ಲಿ ಲಜ್ಜೆಯಲಿ
ಜಡಿದು ಕುಳ್ಳಿರ್ದೆಡೆಯ ಕೊಡದವ
ಗಡಿಸಿ ಬಲುಹಿಂದೋಪರನು ಪೊಱ
ಮಡಿಸುತಿಹ ಸಂಪನ್ನೆಯರ[3] ಭೂಪಾಲನೀಕ್ಷಿಸಿದ          ೬೩

ಇತ್ತು[4]ದೊಂದರೆ ಕಾಸು ಬಿಡದುದ
ಯಾಸ್ತಮಾನವು ಕದಲ[5]ನಿದನೇಂ
ಸತ್ತನೊ ಮೇಣ್ ದೈವ ಸೋಕಿತೊ ಬ್ರಹ್ಮರಾಕ್ಷಸನು
ತುತ್ತಿದನೊ ನೆಲಕಿೞಿದನೋ ಸುತೆ
ಗೆತ್ತ ಬಂದುದು ಮಾರಿ ಕೆಟ್ಟೆನೆ
ನುತ್ತ ಮೊರೆಯಿಡುತಿರ್ಪ ಮುದುಗುಂಟಿಣಿಯನೀಕ್ಷಿಸಿದ ೬೪

ಸುಡುಸುಡೆಲೆ ಮುದುದೊತ್ತೆ ಸೌಖ್ಯವ
ಕಡಿವ ಕೊಡಲಿ ಕಠೋರೆ ಖಳೆ ಹೆ
ಣ್ಣೊಡನೆ ಹುಟ್ಟಿದ ನೀಚೆ ಚಿಕ್ಕಂದರಳ ನರದಿಂ[6]ದ
ಬಿಡದೆ ಬಾಯುಂಟೆಂದು ಬೂತು
ಗ್ಗಡಿಸುತಿಹೆ ಮಾಣೆಂದು ಜನನಿಯ
ಜಡಿದು ನುಡಿವ ಲತಾಂಗಿಯರ ನಗುತರಸನೀಕ್ಷಿಸಿದ    ೬೫

ತರುಣಿ ರೋಷ[7]ದೊಳ[8]ಪರ ಮುಖವಾ
ಗಿರಲು ನಿನ್ನ ಕುಚಾಸ್ಯವೀಕ್ಷಿಸಿ
ನೆರೆಯಲೆನ್ನಯ ಕಂಗಳೆಂದೆಂದೆಸಗೆ ನಿನ್ನ ಕಟಿ
ತುಱುಬು ಸಾಲದೆ ಸುರನದಿಯ ತಡಿ
ಯೆರಡಕುಂಟೆ ವಿಭೇದವೆಂದಡಿ
ಗೆಱಗಿ ತಿಳುಹುವ ವಿಟನನವನೀಪಾಲನೀಕ್ಷಿಸಿದ           ೬೬

ಅಳಿಯು ಸಲೆ ಪೂಗಾಶ್ವಶುಕ ಕೋ
ಕಿಳ ಲತಾ ವೀಣಾಶ್ರು ಫಣಿ ಸ
ಜ್ಜಳಜ ಕಂಬು ಪತಿ‌ವ್ರತಾ ಸುರಚಾಪ ಸೊಡರಕ್ಕೆ
ಬಲೆ ಜಿಗುಳಿ ಕಿಚ್ಚೆರಳೆ ಸೋಗೆಗ
ಳೆಳಗನಂ ಮಧುವಂಚೆ ಹಂಸಾ
ವಳಿಯ ಹೊತ್ತಿರು ಮಗಳೆ ನೀನೆಂದೊರ್ವಳಱುಹಿದಳು  ೬೭

ಒಬ್ಬನೊಳು ಮಾತಾಡುತೊಬ್ಬಗೆ
ಹುಬ್ಬ ಹಾಯ್ಕುತ ಕೆಲೆಯುತೊಬ್ಬನ
ನುಬ್ಬಿಸುತ ಮತ್ತೊಬ್ಬನೊಳು ನಗುತೊಬ್ಬಗೊಲವೆಸಗಿ
ಒಬ್ಬ ಬರಲೊಬ್ಬರ ನಿರೀಕ್ಷಿಸ
ಲೊಬ್ಬನಿವಳೆನಗೊಲಿದಳೆಂದುಲಿ
ದುಬ್ಬುತಿರ್ದಳು ವಿಟವಿದಗ್ಧೆಯದೊರ್ವಳಿರುಳಿನಲಿ        ೬೮

ನೋಟ ಸವಿ ನುಡಿಯೊಂದು ಸವಿ ಹೊ
ಯ್ದಾಟ[9] ಸವಿ ಬಯ್ಯತಿ ಸವಿಯು ಬೂ
ತಾಟ ಸವಿ [10][ಚುಂಬನವು ಸವಿ ಬಿಡೆಯಪ್ಪು][11] ದಧಿಕ ಸವಿ
ತೋಟಿ ಸವಿ ಮುಳಿಸೊಂದು ಸವಿಯೊಡ
ಗೂಟ ಸವಿಯೆನಿಪಬಲೆಯರ ತನಿ
ಬೇಟಕಿಂದಿಳೆಯೊಳಗೆ ಸವಿಯಿಲ್ಲೆಂದು ವಿಟ ನುಡಿದ     ೬೯

ಹರಿದು ರಾಗಿಸಿ ಗಳಹಿ ಮಣಿಯೋ
ವರಿಯ ವೀಣೆಯ ಕಳೆಯ ಖಡ್ಡಿಯ
ನಿರದೆ ಕಸವೆಂದುಚ್ಚಿದನು ಪಡಿಗವನು ತಂದಿಡಲು
ತರುಣಿ ತೆಗೆ ಹಸಿವಾಗದೆನ[12]ಲ
ಚ್ಚ[13]ರಿಯದಲಿ ಸಿರಿಗಂದವಿತ್ತರೆ
ಸುರಿವ ಗಾವಿಲ ವಿಟರ ನಗುವಬಲೆಯರನೀಕ್ಷಿಸಿದ        ೭೦

ಸಿರಿಯ ಸಪ್ರಭೆ ವೃದ್ಧಿ ವಿವಿಧಾ
ಭರಣವಿತ್ತಡೆ ಹಾನಿ…ಯನ
ವರತ ರಮಿಸಲು ನಿಂದೆಯಿಲ್ಲೋಕರಿಕೆ ಬೞಿಕೆಲ್ಲ
ಗ[14]ರುವನಹನೆಲ್ಲರೊಳು ಸುತರವ
ತರಿ[15]ಸಿ ಸುಗ[16]ತಿ ಕುಲಾಂಗನೆಯೊಳಿದ
ನಱಿದು ಬಿಡ ದುರ್ಮಾರ್ಗವೇಶಿಯನೆಂದು ವಿಟ ಜಱೆದ ೭೧

ಹರೆದಳಕ ಬೆಳುಪಾದಧರ ನೀ
ರೂರೆವ ತನು ಬಿಗುಹಡಗಿದುತ್ಕುಚ
ವರ ನಖಾಂಕಿತ ವಕ್ಷ ಡಗೆ ಹೊಯ್ವಳ್ಳೆ ಕೆಂಗಣ್ಣು
ಜರಿದ ನಿಱಿ ಬಿಡುಮುಡಿ ಹಸಾನನ
ಮೆಱೆಯುತಿರೆ ಸುರತಾಂತ[17]ದಲಿ ತೆಂ
ಬೆಲರ ತಾವುತ್ತಿರ್ದ ಸೌಧದ ಸತಿಯನೀಕ್ಷಿಸಿದ ೭೨

ತನುವ ತೊಯ್ ಕುಸುಮಗಳ ತಿಗು[18]ರರ
ಗಿಣಿಯನರೆ ಕುಂಕುಮವನೊಂದಿಸು
ಮನೆಯ ತೆಯ್ ಮಲಯಜವ ಧವಳಿಸು ಜರೆಯ ತರಿ ಫಲವ
ಹೆಣೆ ಲಲಾಮವ ಕಟ್ಟು ಪಾನವ
ಹಣೆಗೆ ರಚಿಸೆಂದೊರ್ವಳಬಲಾ
ಜನದೊಡನೆ ತಾ ನುಡಿದಳಿನಿಯನನುಱಿದ ವಿಕಳದಲಿ  ೭೩

ಹರೆದುವಳಕವಿದೇನು ಗಾಳಿಯೊ
ಳುರುೞಿತೇಕೆ ಸುಗಂಧ ಮೇಲಿದೆ
ವೆರಸಿತೇಕೆ ಬೆಮರ್ತು ಬಿಸಿಲಿಂ ಕೆ[19]ಟ್ಟುದೇಕೆ ನಿಱಿ
ಹರಿದು ನಖವೆನೆ ಕೇತಕಿಯ ಮು
ಳ್ಳೊರಸಿದತೋಪರೊಳು ನೆರೆದೀ
ಪರಿಯೊಳೊಡತಿಗೆ ಹುಸಿವ ಕೆಳದಿಯನರಸನೀಕ್ಷಿಸಿದ   ೭೪

ಜಱೆದೊಡದ ಲೆಕ್ಕಿಸನು ಬೈದರೆ
ಪರಿಹರಿಸಿ ಬಗೆಗೊಳ್ಳದೀ ಮುಖ
ಸರಸಿಜವ ಚುಂಬಿಸುವ ನೂಕಿದೊಡಪ್ಪುವನು ಹೊಡೆಯೆ
ಕರವನೊತ್ತುವನೊದೆದೊಡಡಿವಿಡಿ
ದೆಱಗುವನು ತಾನೆಂತವಗೆ ನಿ
ಷ್ಕರುಣದಲಿ ತಾಳುವೆನು ರೋಷವನೆಂದಳಿಂದುಮುಖಿ ೭೫

ಸರಸ ವಚನಾಮೃತವ ಕರ್ಣದಿ
ಸುರಿಯುತಾಲಿಂಗನವೆಸಗಿ ಚಾ
ತುರದಿ ಚುಂಬಿಸಿ ಲಲ್ಲೆಗೈದು ಮನೋಜರಸವುದಿಸೆ
ಪುರುಷಗಿನ ಶಶಿ[20]ರಸವು[21] ತೀವಿರೆ
ನೆರೆವುದನು ಸದ್ವಿಟನು ಯಮಕಿಂ
ಕರನವೊಲು ಕೂಡುವನು ನರಪಶುವೆಂದಳಿಂದುಮುಖಿ ೭೬

ಇನಿಯ ಬಾರದೆ ಹೊತ್ತು ಹೋಯ್ತ[22]ಕ
ಟೆನುತ ಸುಯ್ದು ನಿರಾಶೆಯಾಯಿ
ತ್ತೆನುತ ಬೇಸತ್ತೞಲಿ ಮುಳಿದು ವಿಲೇಪನವನುೞಿದು
ವಿನುತ ಮಾಲ್ಯವನುಗಿದು ಮಣಿಮಂ
ಡನವ ತೆಗೆದೀಡಾಡಿ ದೀಪವ
ಕನಲಿ ಸೆಱಗಲಿ ಬೀಸಿದಬಲೆಯನ[23]ರಸನೀಕ್ಷಿಸಿದ         ೭೭

ಸುರಧನುವಿನಂದದಲಿ ನೀರ
ಕ್ಷರದವೊಲು ಮಿಂಚಂತೆ ಕನಸಿನ
ಪರಿಯೊಳಭ್ರಚ್ಛಾಯೆಯಂತೆ ನಿಹಾರದಂದದಲಿ
ತೆ[24]ರೆಯವೊಲು ಮೃಗತೃಷ್ಣೆಯವೊಲಂ
ಬುರುಹನೇತ್ರೆಯರೊಲುಮೆಗಳು ಸು
ಸ್ಥಿರಗಳಲ್ಲೆಂದೊರ್ವ ವಿಟನೊರ್ವಂಗೆ ನೇಮಿಸಿದ          ೭೮

ತರುಣಿಯರಿಗಾಕಾರವನು ವಿ
ಸ್ತರದಿ ತೋಱಿಸಿ ಭದ್ರವಶ್ಯಾ
ಕರುಷ ಮಾಯದಿ ಕೂಚಿಮಾರ ವಚೋವಿಲಾಸದಲಿ
ಮೆಱೆವನಾ ಪಾಂಚಾಲ ವಸ್ತ್ರಾ
ಭರಣ ಕಾಂಚನವಿತ್ತು ದತ್ತಕ
ನೆರೆವನವರಿಂಗಿತವನಱಿ ಸುತೆಯೆಂದಳಿಂದುಮುಖಿ     ೭೯*

ಸರಸ ಶೂರನುದಾರನೊಳು ೧ಚಾ
ತುರಿಯನೊಳು[25] ರತಿಯೊಳು ಪ್ರಗಲ್ಭನೊ
ಳುರು ಕಳಾವಿದ ಸತ್ಯವಿದನಲಿ ಕನ್ನೆತನವೞಿದ
ಪುರುಷನೊಳು ಗಾಯಕನೊಳಿಷ್ಟವ
ಭರದಿ ಮಾಡುವನೊಳು ಪ್ರಸಿದ್ಧನೊ
ಳೆಱಕವುಂಟಂಗನೆಯರಿಗೆ ದಿಟವೆಂದು ವಿಟ ನುಡಿದ      ೮೦


[1] x (ಜ)

[2] x (ಜ)

[3] + ನು (ಜ)

[4] ತ್ತ (ಜ)

[5] ನ (ಜ)

[6] ನಿಂ (ಜ)

[7] ದಿಯ (ಜ)

[8] ದಿಯ (ಜ)

[9] + ವತಿ (ಜ)

[10] ದು ಸಬಳಿಸುತಿಪ್ಪ (ಜ)

[11] ದು ಸಬಳಿಸುತಿಪ್ಪ (ಜ)

[12] ಲಾಶ್ಚ (ಪ)

[13] ಲಾಶ್ಚ (ಪ)

[14] ನ (ಜ)

[15] ಸು (ಜ)

[16] ಸು (ಜ)

[17] ಸತ್ಯ (ಜ)

[18] ವು (ಜ)

[19] ಗೆ (ಜ)

[20] ಸ (ಜ)

[21] ಸ (ಜ)

[22] ತ್ತ (ಜ)

[23] x (ಜ)

[24] ಧ (ಜ)

* ಈ ಪದ್ಯವು ಜ ಪ್ರತಿಯಲ್ಲಿ ೭೩ನೆಯದಾಗಿದೆ.

[25] x (ಜ)