ಘನ ದಶನೆ ಲಂಬೋಷ್ಠಿ ವಿಷಮ
ಸ್ತನೆ ನ

[1]ತಶ್ರುತೆ ಶೂರ್ಪನಖಿ ವಾ
ಮನೆ ವಿಕಳೆ ರೋಮಾಂಗಿ ಮಾರ್ಜಾಲಾಕ್ಷಿ[2] ಕಪಿಲಕಚೆ
ಶುನಕಯಾನೆ ಶಿಲಾಂಘ್ರಿ ಸೂಚ್ಯಾ
ನನೆ ಋಜಾದುರ್ಗಂಧೆಯೆನಿಪಂ
ಗನೆಯರಿಂದ ಗತಾಯು ಪುರುಷರಿಗೆಂದು ವಿಟ ನುಡಿದ ೮೧

ಪುರುಷ ವಿದ್ವೇಷಿಣಿ ನಪುಂಸಕ
ನರಸಿ ರೋಗಿಯ ಭಾರ್ಯೆ ಮೂಢನ
ತರುಣಿ ವೃದ್ಧನ ವಧು ಮಲಿನ ವಧು ದರಿದ್ರ ವಧು
ವರ ಕಲಾವಿದೆ ಬಾಲೆ ಕಾಮಾ
ತುರೆ ವಿದಗ್ಧಪ್ರಕಟದಂಗನೆ
ಯರುಗಳೊಂದುವರಪ್ರಯತ್ನದೊಳೆಂದು ವಿಟ ನುಡಿದ  ೮೨

ನೂತನ ಪ್ರಸವಾಂಗನೆಯರು
ಸ್ನಾತೆ ನಾಟ್ಯಸ್ವರದ[3]ದಾಂಗಿ ರ
ತಾತುರೆ ನವಜ್ವರಿತೆ ಪಥೇಷಣೊನ್ಮೇಷೆ ಗರ್ಭವತಿ
ಖ್ಯಾತೆ ವಿರಹ ಪ್ರಣಯಕಲಹೋ
ಪೇತೆ ಮಧುಮದೆಯೆನಿಪ ಸತಿಗೆ ಮ
ಹಾತಿ ಕಾಮೋದ್ರೇಕ ಜನಿಸಿಹುದೆಂದು ವಿಟ ನುಡಿದ     ೮೩

ಫಲ ಕುಸುಮ ತಾಂಬೂಲ ಮಧುರಾ
ವಳಿಗಳತಿ ಬಾಲೆಯನು ಭೂಷಣ
ಲಲಿತವಸ್ತು ಪ್ರತತಿಯಿತ್ತೊಡಬಡಿಸು ಯೌವನೆಯ
ಹಲವು ಪರಿಯ ಕಳಾವಿಧೋಕ್ತಿಯೊ
ಳೊಲಿಸು ಪ್ರೌಢೆಯನಿಚ್ಚೆಯಿಂದು[4] ಜ್ವಲ ಗುರುತ್ವದೊಳೊಲಿಸು ಲೋಲೆಯನೆಂದು ವಿಟ ನುಡಿದ      ೮೪

ದಾಸಿ ರಜಕ ಕ್ಷೌರಕ ಸ್ತ್ರೀ
ವೇಸಿ ವೈದ್ಯಸಗೋತ್ರೆ ಭಿಕ್ಷುಕಿ
ದೇಶ ಕಾಲೋಪಾಯ ಕೋವಿದೆ ಪೂತೆ ಚಿತ್ರಕರ
ಯೋಷಿ ರೋ[5]ಗಿಣಿ[6] ಸೂಲಗಿತ್ತಿ ನಿ
ರೋಷಿ ಸೂಚನೆಗೂಡಿ ಗುಣ ಮೆಱೆ
ವಾ ಸತಿಯರನು ಮಾಡು ದೂತಿಯನೆಂದು ವಿಟ ನುಡಿದ           ೮೫

ವಿರಳರಂತಸ್ಥೂಲ ನಾಸಿಕ
ದುರಿಯಚಾಂಕದ ರೋಮ ಪೃಷ್ಠಾಂ
ತರದ ಸುೞಿ ನಸು ನಾಭಿಕೂಪ ಕಪೋಲ ಭ್ರೂಬಂಧ
ಧರಣಿ ಸೋಂಕದ ಕಿಱುವೆರಳು ಹೆ
ಬ್ಬೆರಲು ಮಿಕ್ಕುೞಿದಂಘ್ರಿಯಂಗುಲಿ
ಮೆಱೆಯುತಿರಲತಿ ಜಾರೆಯವಳೆಂದೊರ್ವ ವಿಟ ನುಡಿದ            ೮೬

ಮಾಲಿಕ ವ್ಯವಹಾರ ಕಮ್ಮಡಿ
ವಾಳ ಚಿಪ್ಪಿಗ ಚಿನ್ನಗೈಕ ನೃ
ಪಾಲ ಸೇವಕನಕ್ಕಸಾಲೆ ವಿದೂಷ ತಳವಾಱ
ಜಾಲೆಗಾಱ ಕಳಾಕುಶಲ ತಾಂ
ಬೂಲಿಕರ ಶುಕ ವಿಶ್ವವಾಗ್ಮಿಯ
ನಾಳಬೇಹುದು ಚದುರ ಕುಶಲರಿಗೆಂದು ವಿಟ ನುಡಿದ ೮೭

ಧರಣಿಪತಿ ಕೇಳಿಂತು ಜೀವಂ
ಧರನು ವಿವಿಧ ವಿಚಿತ್ರ ರಚನೆಯ
ನುರುತರದಿ ನೋಡುತ್ತ ವಿಟರು ವಿನೋದಿಗಳು ಸಹಿತ
ಪುರವ ರಾತ್ರಿಯ ಚರಿಸಿ ವಹಿಲದಿ
ಮರಳಿ ತನ್ನರಮನೆ[7]ಯನೆ[8]ಯ್ದಿಯೆ
ಪರಮ ಹರ್ಷದೊಳಿರ್ದನಮರೇಂದ್ರನ ಸುತೇಜದಲಿ     ೮೮

ಇದು ವಿನಮದಮರೇಂದ್ರ ಶ್ರೀಜಿನ
ಪದಕಮಲ ಷಟ್ಚರಣ ವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರರಚಿತ ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದುವೆ ಪುರ ರಾತ್ರೀವಿಹಾರಣವರಸ ಕೇಳೆಂದ            ೮೯


[1] ನು (ಜ)

[2] + ಕಪಿ (ಜ)

[3] x (ಜ)

[4] ತು (ಜ)

[5] ಗವತಿ (ಜ)

[6] ಗವತಿ (ಜ)

[7] ಗೆ ಎ (ಜ)

[8] ಗೆ ಎ (ಜ)