ಜೈನ ಪಾರಿಭಾಷಿಕ ಶಬ್ದಗಳು

 
ಅಣುವ್ರತ – ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಐದು ವ್ರತಗಳು ೩ – ೯
ಅಷ್ಟಮದ – ಅನ್ನ, ಅರ್ಥ, ಯೌವನ, ಸ್ತ್ರೀ, ವಿದ್ಯೆ, ಕುಲ, ರೂಪ, ಉದ್ಯೋಗ ೧ – ೧೧
ಅರ್ಹತ್ಸ್ವಾಮಿ – ಜಿನ, ತೀರ್ಥಂಕರ, ಅರ್ಹಂತ, ಕರ್ಮ ಬಂಧವನ್ನು ಹರಿದೊಗೆದು ಭವ ಬಂಧದಿಂದ ಮುಕ್ತರಾಗಿ ಸಂಸಾರ ನಿಸ್ತರಣೋಪಾಯವನ್ನು ‘ಭವ್ಯ’ರಿಗೆ ಬೋಧಿಸಿ ಮೋಕ್ಷಕ್ಕೆ ಸಂದ ಮಹಾನ್ ಆತ್ಮರು. ೧ – ೧
 
ಆಚಾರ್ಯರು – ಪಂಚಾಚಾರ ಮೊದಲಾದವುಗಳನ್ನು ಆಚರಿಸುತ್ತ ಶಾಸ್ತ್ರ ವಿಶಾರದರೂ ಆತ್ಮರತರೂ ಆಗಿ ನಿಶ್ಚಯ ಮಾರ್ಗದಲ್ಲಿ ಸಾಗಿದವರು. ಶಿಷ್ಯರಿಗೆ ಧರ್ಮೋಪದೇಶ ಮಾಡುವವರು, ಧರ್ಮದಲ್ಲಿ ಶಾಸನಾಧಿಕಾರಿ ಇದ್ದವರು. ೧ – ೩
 
ಉಪಾಧ್ಯಾಯ – ರತ್ನತ್ರಯ ಧರ್ಮಯುಕ್ತರಾಗಿ ಮಹಾವ್ರತಗಳನ್ನಾಚರಿಸುತ್ತ ನಿಜ, ಶುದ್ಧ ಆತ್ಮಾನುಭವ ಆನಂದ ದಲ್ಲಿರುವವರು; ‘ಭವ್ಯ’ರಿಗೆ ಧರ್ಮೋಪದೇಶ, ಶಾಸ್ತ್ರ ಜ್ಞಾನ ಮಾಡಿಕೊಡುವವರು. ೧ – ೪
 
ಕೇವಲಿ – ಜ್ಞಾನಾವರಣಾದಿ ಘಾತಿಕರ್ಮಗಳ ನಾಶದಿಂದ ಲೋಕಾಲೋಕಗಳನ್ನು ತಿಳಿಯುವ ಜ್ಞಾನಪಡೆದ ಮಹಾತ್ಮರು. ೧ – ೭
 
ಗಣಧರ – ಯತಿ ಮುಂತಾದ ಹನ್ನೆರಡು ಗಣಗಳನ್ನು ಮಿಥ್ಯಾತ್ವಾದಿಗಳಿಂದ ಬಿಡಿಸಿ ರತ್ನತ್ರಯಗಳಲ್ಲಿ ಸ್ಥಾಪನ ಮಾಡುವ ಧರ್ಮಾಚಾರ್ಯರು. ಇವರು ಸಪ್ತರ್ಧಿಯುಕ್ತರು ಮತ್ತು ತೀರ್ಥಂಕರರ ಮುಖ್ಯ ಶಿಷ್ಯರಾಗಿದ್ದು, ಅವರ ‘ದಿವ್ಯ ಧ್ವನಿ’ಯನ್ನು ಅರ್ಥೈಸುವವರು. ೭ – ೫೮
ಗುಣಾಷ್ಟಕ – ಮುಕ್ತಿಹೊಂದಿದ ಜೀವರಿಗಿರುವ ಎಂಟು ಗುಣಗಳು ಸಮ್ಯಕ್ತ್ವ, ಆನಂತದರ್ಶನ, ಅನಂತಜ್ಞಾನ, ಅನಂತವೀರ್ಯ, ಸೂಕ್ಷ್ಮತ್ವ, ಅವಗಾಹನ, ಅಗುರುಲಘು ಮತ್ತು ಅವ್ಯಾಬಾಧ ೧೨ – ೨೩
 
ಚಾತುರ್ವಿಧ ದಾನ – ಆಹಾರದಾನ, ಔಷಧ ದಾನ, ಅಭಯದಾನ, ಶಾಸ್ತ್ರದಾನ ೧೮ – ೧೮
 
ತ್ರಿವರ್ಗ – ಧರ್ಮ, ಅರ್ಥ, ಕಾಮ ೪ – ೯
ಪಂಚಾಚಾರ – ಜ್ಞಾನಾಚಾರ, ದರ್ಶನಾಚಾರ, ತಪಾಚಾರ ಮತ್ತು ವೀರ್ಯಾಚಾರ, ಇವು ಐದು ಆಚಾರಗಳು ೧ – ೩
ಭವ್ಯ – ಸಮ್ಯಕ್‌ಜ್ಞಾನ, ಸಮ್ಯಕ್‌ದರ್ಶನ, ಸಮ್ಯಕ್ ಚಾರಿತ್ರಗಳಿಂದ ಪರಿಣತನಾಗುವವನು ೧ – ೧೪
 
ರತ್ನತ್ರಯ – ಸಮ್ಯಕ್‌ಜ್ಞಾನ, ಸಮ್ಯಕ್‌ದರ್ಶನ, ಸಮ್ಯಕ್ ಚಾರಿತ್ರ ೧ – ೬
 
ವೀತರಾಗ – ಎಲ್ಲ ಮೋಹಕರ್ಮಗಳು ನಾಶವಾಗಿರುವ ಯಥಾಖ್ಯಾತ ಚಾರಿತ್ರಧಾರಕರಾದ ಮತ್ತು ಕೇವಲ ಜ್ಞಾನವುಂಟಾಗದಿರುವ ಮುನಿಗಳು ೧೨ – ೯
 
ಸಪ್ತವ್ಯಸನ – ೧ ಜೂಜು ಆಡುವದು, ೨ ಮಾಂಸ ಸೇವನೆ, ೩ ಸುರಾಪಾನ, ೪ ವೇಶ್ಯಾಗಮನ ೫ ಬೇಟೆ, ೬ ಪರಧನ ಹರಣ, ೭ ಪರದಾರಗಮನ ೫ – ೫೭
ಸಪ್ತಾಂಗ – ರಾಜ್ಯಾಡಳಿತದ ಭದ್ರತೆಗೆ ಇರಬೇಕಾದ ಏಳು ಅಂಗಗಳು ಪ್ರಸಿದ್ಧ ಹೊಂದಿದ ದೇಶ, ಪರಾಕ್ರಮಿಯಾದ ರಾಜ, ವಿಶ್ವಾಸನೀಯನಾದ ಅಮಾತ್ಯ ಶ್ರೇಷ್ಠ, ಸರ್ವಸಂಗ್ರಹಿಯಾದ ದುರ್ಗ, ರತ್ನ ಭಂಡಾರ, ಮಹಾವೀರ ಸೈನ್ಯ ಮತ್ತು ಆಪ್ತಸ್ನೇಹಿತ, ೪ – ೬೨
ಸಮಸವರಣ – ಕೇವಲ ಜ್ಞಾನ ಪಡೆದು ಸರ್ವಜ್ಞನಾದ ತೀರ್ಥಂಕರನ ಧರ್ಮಬೋಧೆಗೆ ಅನುಕೂಲಿಸುವಂತೆ ಕುಬೇರನು ನಿರ್ಮಿಸುವ ಮಂಟಪಕ್ಕೆ ಸಮವಸರಣ ಎಂಬ ಹೆಸರು ೧ – ೩೭
ಸ್ಯಾದ್ವಾದ – ವಸ್ತುಗಳು ಅನೇಕ ಗುಣಗಳಿಗೆ ಆಶ್ರಯವಾದುದರಿಂದ ಅವನ್ನು ಹಲವು ಬಗೆಗಳಿಂದ ನಿರೂಪಿಸಬಹುದು. ಒಂದು ವಸ್ತುವನ್ನು ನಿರೂಪಿಸುವ ಎಲ್ಲ ಬಗೆಗಳನ್ನು ಎಣಿಸಿದರೆ ಅವು ಏಳು ಇವೆ. ಅವೆಂದರೆ ೧ ಸ್ಯಾದಸ್ತಿ ೨ ಸ್ಯಾನ್ನಾಸ್ತಿ ೩ ಸ್ಯಾದಸ್ತಿನಾಸ್ತಿ ೪ ಸ್ಯಾದವಕ್ತವ್ಯಂ ೫ ಸ್ಯಾದಸ್ತ್ಯ ವಕ್ತವ್ಯಂ ೬ ಸ್ಯಾನ್ನಾಸ್ತ್ಯ ವಕ್ತವ್ಯಂ ೭ ಸ್ಯಾದಸ್ತಿ ನಾಸ್ತವಕ್ತವ್ಯಂ. ಇವೇ ಸಪ್ತ ಭಂಗಿಗಳು. ಇವುಗಳಿಂದ ವಸ್ತುಸ್ವರೂಪವನ್ನು ವಿಚಾರ ಮಾಡುವುದೇ ಸ್ವಾದ್ಯಾದ. ಸ್ಯಾತ್ ಎಂದರೆ ಕಥನ್ ಚಿತ್ ಎಂದರೆ ಒಂದು ಅಪೇಕ್ಷೆಯಿಂದ ಇಲ್ಲವೆ ಒಂದು ದೃಷ್ಟಿಯಿಂದ ಇಲ್ಲವೆ ಒಂದು ರೀತಿಯಿಂದ ಎಂದು ಅರ್ಥವು. ೧ – ೧೪
ಸಾಧು – ಸರ್ವಸಾಧುಗಳು, ಮುನಿದೀಕ್ಷೆಯನ್ನು ಹೊಂದಿ, ರಾಗದ್ವೇಷಾದಿಗಳನ್ನು ತೊರೆದು, ಜ್ಞಾನ, ಧ್ಯಾನಗಳಲ್ಲಿ ಆಸಕ್ತರಾಗಿ ಸಿದ್ಧಿಯ ಸಾಧನೆಯಲ್ಲಿರುವ ಜಿನಮುನಿಗಳು. ೧ – ೫
ಸಿದ್ಧರು – ಅಷ್ಟ ಕರ್ಮದಿಂದ ಮುಕ್ತರಾಗಿ, ಅಷ್ಟ ಗುಣಗಳನ್ನು ಹೊಂದಿ, ಸಿದ್ಧಶಿಲೆಯಲ್ಲಿ ವಿರಾಜಮಾನರಾದ ಪರಮ ಆತ್ಮರು. ೧ – ೨
ಸುಪಂಚಮಂತ್ರ – “ಣಮೋ ಅರಹಂ ತಾಣಂ, ಣಮೋ ಸಿದ್ಧಾಣಂ, ಣಮೋ ಅಯರಿಯಾಣಂ, ಣಮೋ ಉವಝ್ಝಾಯಾಣಂ, ಣಮೋ ಳೋ ಏ ಸವ್ವ ಸಾಹೂಣಂ” – ಎಂದರೆ ಅರಹಂತರಿಗೆ, ಸಿದ್ಧರಿಗೆ, ಆಚಾರ್ಯರಿಗೆ, ಉಪಾಧ್ಯಾಯರಿಗೆ, ಲೋಕದಲ್ಲಿರುವ ಸರ್ವಸಾಧುಗಳಿಗೂ ನಮಸ್ಕಾರ. ಇದೇ ಪಂಚಮಂತ್ರ. ೧೦ – ೬