ಗದುಗಿನಲ್ಲಿ ಜನಿಸಿ, ನಾದದ ಬೆನ್ನುಹತ್ತಿ ಜಗತ್ತನ್ನೆಲ್ಲ ಸುತ್ತಾಡಿ, ಪುಣೆಯಲ್ಲಿ ನೆಲೆಸಿದ ಪಂ. ಭೀಮಸೇನ್‌ ಜೋಶಿಯವರು ಅಂತರರಾಷ್ಟ್ರೀಯ ಖ್ಯಾತಿ ಹಿಂದೂಸ್ಥಾನಿ ಗಾಯಕರು. ಕಿರಾಣಾ ಘರಾಣೆಯ ಸರ್ವೋಚ್ಚಗಾಯಕರು. ವಿಶ್ವಕನ್ನಡಿಗರು.

ಪಂ. ಭೀಮಸೇನ ಜೋಶಿಯವರು ಜನಿಸಿದ್ದು ೧೯೨೨ರ ಫೆಬ್ರವರಿ ೧೪ ರಂದು; ಗದುಗಿನಲ್ಲಿ ಮೂಲತಃ ಅವರದು ಹೊಂಬಳದ ಜೋಶಿ ಮನೆತನ. ಅವರದು ಸಂಸ್ಕೃತ, ಸಂಗೀತ ಹಾಗೂ ವೈದಿಕ ಪರಂಪರೆಯ ಮನೆತನ. ತಂದೆ ಗುರುರಾಜ ಜೋಶಿಯವರು ಹೈಸ್ಕೂಲು ಮುಖ್ಯೋಪಾಧ್ಯಾಯರು, ಕನ್ನಡ-ಇಂಗ್ಲೀಷ-ಸಂಸ್ಕೃತ ವಿದ್ವಾಂಸರು. ತಾಯಿ ಗೋದಾವರಿ ದಾಸರ ಪದಗಳ ಸುಶ್ರಾವ್ಯ ಹಾಡುಗಾರ್ತಿ. ಚಿಕ್ಕಪ್ಪ ಜಿ.ಬಿ. ಜೋಶಿ (ಜಡಭಾರತ) ಲೇಖಕ ಹಾಗೂ ನಾಟಕಕಾರರು. ಧಾರವಾಡ ಮನೋಹರ ಗ್ರಂಥಮಾಲೆಯ ಪ್ರವರ್ತರು. ಇಂತಹ ಪರಿಸರದಲ್ಲಿ ಹುಟ್ಟಿ ಬೆಳೆದ ಭೀಮಸೇನರಿಗೆ ಶಾಲೆಯ ಶಿಕ್ಷಣಕ್ಕಿಂತ ಸಂಗೀತದ ಒಲವೇ ಹೆಚ್ಚು.

ಅಬ್ದುಲ್‌ ಕರೀಮಖಾನ್‌, ರಾಮಕೃಷ್ಣಬುವಾ ವಝೇ ಮುಂತಾದ ಸಂಗೀತ ದಿಗ್ಗಜರ ಗ್ರಾಮಫೋನ್‌ ರಿಕಾರ್ಡ್‌ ಕೇಳಿ ತಾನೂ ಅವರಂತೆ ಹೆಸರಾಂತ ಸಂಗೀತಗಾರನಾಗಬೇಕೆಂದು ಹಂಬಲ. ಅಗಸರ ಚನ್ನಪ್ಪ ಎಂಬುವರಿಂದ ಸಂಗೀತದ ಶ್ರೀಕಾರ. ಹೆಚ್ಚಿನ ಸಂಗೀತ ವಿದ್ಯೆ ಸಂಪಾದನೆಗಾಗಿ ಮನೆಬಿಟ್ಟು ಓಡಿಹೋದರು. ಗದುಗಿನಿಂದ, ವಿಜಾಪೂರ, ಪುಣೆ, ಕೊಲ್ಕತ್ತಾ, ಜಲಂಧರ, ದೆಹಲಿ, ಗ್ವಾಲಿಯರ್ – ಹೀಗೆ ದೇಶದೆಲ್ಲಡೆ ಸುತ್ತಾಡಿ ಸಂಗೀತದ ಬೆನ್ನುಹತ್ತಿ ಕೊನೆಗೆ ಕುಂದಗೋಳಕ್ಕೆ ಬಂದು ಸವಾಯ್‌ ಗಂಧರ್ವರೆಂದೇ ಹೆಸರು ಪಡೆದ ರಾಮಭಾವು ಕುಂದಗೋಳಕರ ಅವರಲ್ಲಿ ಐದು ವರ್ಷಗಳ ಕಾಲ ಕಿರಾಣಾ ಘರಾಣೆಯ ಶಿಕ್ಷಣ ಪಡೆದು, ಕಠಿಣ ರಿಯಾಜ್‌ ಮಾಡಿ ಮಹಾನ್‌ ಗಾಯಕರೆನಿಸಿ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದರು. ಪುಣೆ, ಮುಂಬೈ, ದೆಹಲಿ, ನಾಗಪುರ – ಹೀಗೆ ದೇಶದ ತುಂಬೆಲ್ಲ ಸಂಗೀತ ಕಾರ್ಯಕ್ರಮ ನೀಡಿದರು.

ಪಂ. ಭೀಮಸೇನ ಜೋಶಿಯವರ ಹಾಡುಗಾರಿಕೆ ಕಿರಾಣಾಘರಾಣೆಗೆ ಅವರು ಕೊಟ್ಟಿರುವ ಅಪೂರ್ವ ಕಾಣಿಕೆ. ಅಬ್ದುಲ್‌ ಕರೀಮಖಾನರ ಸ್ವರ ಸಾಧನೆ ಮತ್ತು ಸವಾಯ್‌ ಗಂಧರ್ವರ ಕುಶಲಕರ್ಮ ಇವೆರಡೂ ಅವರ ಹಾಡುಗಾರಿಕೆಯಲ್ಲಿ ಸಮ್ಮಿಳಿತವಾಗಿವೆ. ಅವರು ಸ್ವರಗಳನ್ನು ಯಾಂತ್ರಿಕವಾಗಿ ಹಾಡದೆ ಭಾವನೆಗಳನ್ನು ಸಂಗೀತಾತ್ಮಕವಾಗಿ ನಿರೂಪಿಸಲೆತ್ನಿಸುತ್ತಾರೆ. ೧೯೬೪ ರಿಂದ ೧೯೮೨ ರ ಮಧ್ಯದಲ್ಲಿ ಅವರು ಇಟಲಿ, ಅಮೆರಿಕಾ, ಕಾಬೂಲ, ಇಂಗ್ಲೆಂಡ್‌, ಕೆನಡಾ ದೇಶಗಳಲ್ಲಿ ಭಾರತೀಯ ಸಂಗಧೀತದ ಸಾರಿಯನ್ನು ತಮ್ಮ ಕಂಠದಿಂದ ಪ್ರಸಾರ ಮಾಡಿದ್ದಾರೆ. ಡಚ್‌ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಎಮ್‌. ಲೂಯಿಸ್‌ ೧೯೬೫ರಲ್ಲಿ ಭೀಮಸೇನರ ಕುರಿತು ಚಲನಚಿತ್ರ ತಯಾರಿಸಿದ್ದಾರೆ. ಕೆನಡಾದ ವಾಣಿಜ್ಯೋದ್ಯಮಿ ಜೇಮ್ಸ್‌ ಬೆವರಿಜ್‌ ಅವರ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ‘ಮಿಯಾಮಲ್ಹಾರ್’ ಅದರ ಹೆಸರು.

ಪುಣೆಯಲ್ಲಿ ನೆಲೆಸಿರುವ ಪಂ. ಭೀಮಸೇನ ಜೋಶಿಯವರು ತಮ್ಮ ಗುರು ಪಂ. ಸವಾಯಿ ಗಂಧರ್ವ ಹೆಸರಿನಲ್ಲಿ ಪ್ರತಿವರ್ಷ ಪುಣೆಯಲ್ಲಿ ‘ಸವಾಯ್‌ ಗಂಧರ್ವ ಸಂಗೀತೋತ್ಸವ’ ಮಾಡುತ್ತಿದ್ದಾರೆ. ಅದು ದೇಶದ ಪ್ರತಿಷ್ಠಿತ ಸಂಗೀತೋತ್ಸವ ಎಂಬ ಅಗ್ಗಳಿಕೆ ಪಡೆದಿದೆ. ‘ಕಲಾಶ್ರೀ’ ಎಂಬ ರಾಗ ರಚಿಸಿರುವ ಅವರ ಕಂಠ ಸಿರಿಯಲ್ಲಿ ಖಯಾಲ್‌, ಠುಮ್ರಿ, ನಾಟ್ಯಗೀತ, ಚಿತ್ರಗೀತೆ, ಅಭಂಗ -ಕೇಳುವುದೇ ಒಂದು ಅನಿರ್ವಚನೀಯ ಆನಂದ. ‘ಸಂತವಾಣಿ’ ಅವರ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು. ಪಂ. ಭೀಮಸೇನ ಜೋಶಿಯವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (೧೯೭೨-೭೩), ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದ ‘ಪದ್ಮಶ್ರೀ’ (೧೯೭೨) ‘ಪದ್ಮಭೂಷಣ’ (೧೯೪೮), ‘ಪದ್ಮವಿಭೂಷಣ’, ಗುಲಬರ್ಗಾ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌, ‘ಮಹಾರಾಷ್ಟ್ರಭೂಷಣ’, ‘ಸ್ವರಾಧಿರಾಜ್‌’, ‘ಮಾಣಿಕರತ್ನ’ ‘ಕರ್ನಾಟಕ ರತ್ನ’ (೨೦೦೫), ಮಧ್ಯಪ್ರದೇಶದ ‘ತಾನಸೇನ ಪ್ರಶಸ್ತಿ’, ‘ಕಾಳಿದಾಸ ಸಮ್ಮಾನ’, ಕೇರಳ ಸರ್ಕಾರದ ‘ಸ್ವಾತಿ ಸಂಗೀತ ಪುರಸ್ಕಾರ (೨೦೦೩) ಮುಂತಾದ ಪ್ರಶಸ್ತಿ ಅವರನ್ನರಸಿ ಬಂದಿವೆ. ಅವರ ಶಿಷ್ಯ ಸಂಪತ್ತು ಅಪಾರ. ಅಂಥವರಲ್ಲಿ ಮಾಧವಗುಡಿ, ಶ್ರೀಪತಿ ಪಾಡಿಗಾರ, ಅನಂತ ದೇಶದಾಳ, ಶ್ರೀಕಾಂತ ದೇಶಪಾಂಡೆ, ವಿನಾಯಕ ತೊರವಿ, ಅರವಿಂದ ಹುಯಿಲಗೋಳ, ನಾರಾಯಣ ದೇಶಪಾಂಡೆ, ರಾಮಕೃಷ್ಣ ಪಟವರ್ಧನ ಹಾಗೂ ಶ್ರೀನಿವಾಸ ಜೋಶಿ (ಮಗ) ಮುಂತಾದವರು ಉಲ್ಲೇಖನೀಯರಾಗಿದ್ದಾರೆ.