ತಪೋವನ. ಅಲ್ಲಿಗೆ ಒಬ್ಬ ರಾಜ ತನ್ನ ಇಬ್ಬರು ಹೆಂಡತಿಯರೊಡನೆ ಬಂದಿದ್ದಾನೆ.

ವಾಯುದೇವನ ಆಶೀರ್ವಾದದಿಂದ ಅವನ ಮೊದಲನೆಯ ಹೆಂಡತಿ ಕುಂತಿಗೆ ಒಬ್ಬ ಮಗ ಹುಟ್ಟಿದ.

ಒಮ್ಮೆ ತಾಯಿ ಕುಂತಿಯ ಕೈಲಿದ್ದ ಮಗು ಕೆಳಗೆ ಬಿತ್ತು. ಬಿದ್ದ ರಭಸಕ್ಕೆ ಕಲ್ಲು ಬಂಡೆ ಚೂರುಚೂರಾಯಿತು. ಮಗುವಿಗೆ ಏನೂ ಆಗಿರಲಿಲ್ಲ. ‘ಸಿಡಿಲಮರಿ’ ಯಂತಿದ್ದ ಮಗುವಿಗೆ ಭೀಮಸೇನ ಎಂದು ಹೆಸರಿಟ್ಟರು.

ಕಾಡಿನಿಂದ ಊರಿಗೆ

ಭೀಮಸೇನ, ಪಾಂಡುರಾಜ-ಕುಂತಿಯ ಎರಡನೆಯ ಮಗ. ಹಿರಿಯವನು ಯುಧಿಷ್ಠಿರ. ಭೀಮನ ತಮ್ಮ ಅರ್ಜುನ. ಪಾಂಡುರಾಜನ ಇನ್ನೊಬ್ಬ ಹೆಂಡತಿ ಮಾದ್ರಿ. ನಕುಲ ಸಹದೇವ ಅವಳ ಮಕ್ಕಳು. ಈ ಐವರೇ ಪಂಚ ಪಾಂಡವರು.

ಪಾಂಡು ಹಸ್ತಿನಾವತಿಯ ರಾಜ. ಒಮ್ಮೆ ಬೇಟೆಗೆಂದು ಕಾಡಿನೊಳಕ್ಕೆ ಹೊದ. ಆಕಸ್ಮಿಕವಾಗಿ ಒಬ್ಬ ಮುನಿಯಿಂದ ಶಾಪಗ್ರಸ್ತನಾದ. ದುಃಖವಾಯಿತು. ವೈರಾಗ್ಯ ಹುಟ್ಟಿತು. ಸೋದರ ಧೃತರಾಷ್ಟ್ರನಿಗೆ ರಾಜ್ಯವನ್ನೊಪ್ಪಿಸಿದ. ಹೆಂಡತಿಯರೊಂದಿಗೆ ಕಾಡಿಗೆ ಬಂದ.

ಶಾಪವೇ ಕಾರಣವಾಗಿ ಪಾಂಡುವಿಗೆ ಸಂತಾನವಾಗಲಿಲ್ಲ. ಹಿಂದೆ ಕುಂತಿಗೆ ದೂರ್ವಾಸಮುನಿಗಳು ಮಂತ್ರೋಪದೇಶ ಮಾಡಿದ್ದರು. ಮಂತ್ರಬಲದಿಂದಲೇ ದಂಪತಿಗಳು ಪಂಚ-ಪಾಂಡವರನ್ನು ಪಡೆದರು.

ಮಕ್ಕಳು ಬೆಳೆದರು. ಆಶ್ರಮದ ತುಂಬಾ ನಲಿದಾಡಿದರು. ರಾಜದಂಪತಿಗಳು ಆನಂದಪಟ್ಟರು. ಶುಕಮುನಿಗಳೇ ಕುಮಾರರಿಗೆ ಅಕ್ಷರ ಕಲಿಸಿ, ಶಸ್ತ್ರವಿದ್ಯೆ, ಶಾಸ್ತ್ರವಿದ್ಯೆಗಳನ್ನು ಕಲಿಸಿದರು.

ಮುಂದೊಂದು ದಿನ ಪಾಂಡುರಾಜ ಮೃತನಾದ. ತನ್ನ ಅವಳಿ ಮಕ್ಕಳನ್ನು ಕುಂತಿಗೆ ಒಪ್ಪಿಸಿದ ಮಾದ್ರಿಯೂ ಪತಿಯ ಚಿತೆಯೇರಿದಳು. ಶುಕಮುನಿಗಳು ಇವರನ್ನೆಲ್ಲಾ ಹಸ್ತಿನಾವತಿಗೆ ತಂದುಬಿಟ್ಟರು.

ಪಾಂಡುರಾಜನ ಅಣ್ಣ ಧೃತರಾಷ್ಟ್ರ ಹುಟ್ಟುಕುರುಡ. ನೂರು ಮಕ್ಕಳ ತಂದೆ. ಈ ನೂರು ಮಕ್ಕಳೇ ಕೌರವರು. ಮಕ್ಕಳಲ್ಲಿ ಹಿರಿಯವನು ದುರ್ಯೋಧನ. ಎರಡನೆಯವನು ದುಶ್ಯಾಸನ.

ಚೆಲ್ಲಾಟ ಛಲಕ್ಕೆ ತಿರುಗಿತು!

ರಾಜಕುಮಾರರಿಗೆ ಆಟದ ವಯಸ್ಸು.

ಬಗೆಬಗೆಯ ಆಟ. ಭೀಮನೇ ನಾಯಕ. ಇವನ ಕೈಗೆ ಸಿಕ್ಕ ದುರ್ಯೋಧನನಂತು ಹಣ್ಣುಗಾಯಿ ನೀರುಗಾಯಿ ಆಗುತ್ತಿದ್ದ.

ಗುದ್ದಿನ ಆಟದಲ್ಲೊಮ್ಮೆ ಕೌರವರೆಲ್ಲಾ ಸೇರಿ ಭೀಮನಿಗೆ ಒಂದೊಂದು ಗುದ್ದು ಹಾಕಿ ಓಡಿಹೋದರು. ಭೀಮ ಸಮಯ ಕಾಯುತ್ತಲೇ ಇದ್ದ.

ಒಂದು ದಿನ ಕೌರವರೆಲ್ಲಾ ಬಯಲಿನಲ್ಲಿ ಆಟ ಮುಗಿಸಿ ಬರುತ್ತಿದ್ದರು. ಮರಕೋತಿ ಆಡುವ ಮನಸ್ಸಾಯಿತು. ಎಲ್ಲರೂ ಮರವನ್ನೇರಿದರು. ತುದಿ ಕೊಂಬೆಗಳ ಮೇಲೆ ಅವಿತುಕೊಂಡಿದ್ದರು.

ಸಮಯ ಸಾಧಿಸುತ್ತಿದ್ದ ಭೀಮ ಓಡಿಬಂದು ಮರವನ್ನು ತಬ್ಬಿ ಗಲಗಲನೆ ಅಲುಗಿಸಿದ. ಮೇಲಿದ್ದವರು ಕಳಿತ ಹಣ್ಣುಗಳಂತೆ ಉದುರಿಬಿದ್ದರು. ಕೆಲವರ ತಲೆ ಒಡೆಯಿತು. ಕೆಲವರ ಬೆನ್ನುಮೂಳೆ ಮುರಿಯಿತು. ಕೆಲವರಿಗೆ ಕಲ್ಲು ಮುಳ್ಳು ತರಿದು ಗಾಯವಾಯಿತು.

ಭೀಮ ಕೌರವರನ್ನು ಗೋಳಾಡಿಸಿದ್ದು ನಾನಾ ರೀತಿ. ಅವರು ಅಷ್ಟು ಜನರೂ ಸೇರಿದರೂ ಅವನನ್ನು ಏನು ಮಾಡುವ ಹಾಗಿರಲಿಲ್ಲ. ಏಕೆಂದರೆ ಅವನು ತುಂಬ ಬಲಿಷ್ಠ.

‘ಈ ಭೀಮನಿಂದ ಯಾರಿಗೂ ಸುಖವಿಲ್ಲ. ಹೀಗೆಯೇ ಬಿಡಬಾರದು. ಸಮಯ ಸಾಧಿಸಬೇಕು. ಉಪಾಯವಾಗಿ ತೀರಿಸಿಬಿಡಬೇಕು’ — ಕೌರವ ಸಭೆಯಲ್ಲಿ ಒಮ್ಮತದ ತೀರ್ಮಾನವಾಯಿತು.

ಚೆಲ್ಲಾಟ ಛಲಕ್ಕೆ ತಿರುಗಿತು!

ಸಾವು ಇವನಿಗೆ ಹೆದರಿದೆಯೆ!

ರಾಜಕುಮಾರರು ಒಮ್ಮೆ ಜಲಕ್ರೀಡೆಗಾಗಿ ಪರಿವಾರದೊಡನೆ ಹೊರಟರು.

ರಾಜಕುಮಾರರೆಲ್ಲಾ ಜಲಕ್ರೀಡೆಯಾಡಲು ನೀರಿಗಿಳಿದರು. ಭೀಮ ಸಲಗನಂತೆ ನೀರಾಟವಾಡುತ್ತಿದ್ದ. ಕೌರವರನ್ನೆಲ್ಲ ಮುಳುಗಿಸಿ, ತೇಲಿಸಿ, ನೀರುಕುಡಿಸಿ ಸಾಕುಸಾಕು ಮಾಡಿದ.

ಆಟ ಮುಗಿದಮೇಲೆ ಎಲ್ಲರೂ ಸೊಗಸಾಗಿ ಊಟ ಮಾಡಿ ಮಲಗಿದರು. ನೀರಿನಲ್ಲಿ ಚೆನ್ನಾಗಿ ಆಡಿದ್ದ ಭೀಮನಿಗೆ ಒಳ್ಳೆಯ ನಿದ್ರೆ. ಮೈಮರೆತು ಮಲಗಿದ. ಇಂತಹ ಅವಕಾಶವನ್ನೇ ಕಾಯುತ್ತಿದ್ದರು ಕೌರವರು. ಅವನನ್ನು ಕಟ್ಟಿಹಾಕಿ, ಹೊತ್ತುಕೊಂಡುಹೋಗಿ, ಆಳವಾದ ನೀರಿನಲ್ಲಿ ಹಾಕಿದರು. ಭೀಮನ ‘ಪೀಡೆ ತಪ್ಪಿತು’ ಎಂದು ಹಾಯಾಗಿ ನಿಟ್ಟುಸಿರುಬಿಟ್ಟು ಹಿಂದಿರುಗಿದರು.

ನೀರಿನಲ್ಲಿ ಬಿದ್ದ ಭೀಮನಿಗೆ ಎಚ್ಚರವಾಯಿತು. ನೀರಿನಲ್ಲಿಯೇ ಕಟ್ಟುಗಳನ್ನು ಕಿತ್ತುಹಾಕಿದ. ಎದ್ದು ಬಂದ.

ಇನ್ನೊಮ್ಮೆ ಭೀಮ ನಿದ್ರೆ ಮಾಡುತ್ತಿದ್ದ ಸಮಯ. ಕೌರವರು ಭಯಂಕರ ವಿಷಸರ್ಪಗಳನ್ನು ತಂದು ಅವನ ಮೇಲೆ ಬಿಟ್ಟರು. ಸರ್ಪಗಳು ಅವನನ್ನು ಕಚ್ಚಲು ಪ್ರಯತ್ನ ಮಾಡಿದವು. ಅವನ ಚರ್ಮದಲ್ಲಿ ಅವುಗಳ ಹಲ್ಲುಗಳು ಇಳಿದರೆ ತಾನೆ! ಭೀಮನಿಗೆ ಎಚ್ಚರಿಕೆಯಾಯಿತು. ಅವನೇ ಸರ್ಪಗಳನ್ನು ಕೊಂದುಹಾಕಿದ.

ಕೌರವರು ಪೆಚ್ಚಾದರು. ಆದರೂ ಏನಾದರು ಮಾಡಿ ಭೀಮನನ್ನ ಕೊಲ್ಲಬೇಕು ಎಂದು ಸಂಕಲ್ಪ ಮಾಡಿದರು. ಅವನ ಊಟದಲ್ಲಿ ಬಹು ಬಲವಾದ ವಿಷ ಹಾಕಿದರು. ಭೀಮ ವಿಷವನ್ನು ತಿಂದ, ಜೀರ್ಣಿಸಿಕೊಂಡ. ಕೌರವರ ನಿರಾಸೆಗೆ ಪಾರವೇ ಇಲ್ಲ.

ವೈರದ ಕಾವು ಧಗಧಗಿಸಿತು

ದ್ರೋಣಾಚಾರ್ಯರು ಪಾಂಡವ-ಕೌರವರಿಗೆ ಗುರುಗಳಾಗಿ ಬಂದರು. ಅವರು ಬಹು ಸಮರ್ಥರು ಆಚಾರ್ಯರು ರಾಜಕುಮಾರರಿಗೆ ಕ್ಷತ್ರಿಯೋಚಿತ ವಿದ್ಯಾಭ್ಯಾಸ ಮಾಡಿಸಿದರು. ಶಿಷ್ಯರು ಆಸಕ್ತಿವಹಿಸಿ ಕಲಿತರು.

ಅರ್ಜುನ ಬಿಲ್ಲುವಿದ್ಯೆಯಲ್ಲೂ ಭೀಮ ದುರ್ಯೋಧನರು ಗದಾವಿದ್ಯೆಯಲ್ಲು ಪರಿಣಿತರಾದರು.

ಶಿಕ್ಷಣದ ಕೊನೆಯ ದಿನ. ಆಚಾರ್ಯರೇ ಶಿಷ್ಯರಿಗೆ ಪಾಂಡಿತ್ಯ ಪರೀಕ್ಷೆಯೊಂದನ್ನೇರ್ಪಡಿಸಿದರು. ಭೀಷ್ಮ, ಧೃತರಾಷ್ಟ್ರರೇ ಮೊದಲಾದವರು ಸಭೆಗೆ ಬಂದರು. ಶಿಷ್ಯರು ತಮ್ಮ ಪಾಂಡಿತ್ಯ ಪ್ರದರ್ಶನ ನೀಡಿದರು.

ಭೀಮ-ದುರ್ಯೋಧನ ರಂಗವನ್ನು ಪ್ರವೇಶಿಸಿದರು. ಇಬ್ಬರ ಕೈಗಳಲ್ಲೂ ನೋಡಿದರೆ ಎದೆ ನಡುಗುವಂತಹ ಗದೆಗಳು. ಗದಾಯುದ್ಧದ ಪ್ರದರ್ಶನ ನಡೆಯಿತು. ಇಬ್ಬರ ಬಲ ಚಾತುರ್ಯಗಳನ್ನು ನೋಡಿ ಸಭಿಕರು ಬೆರಗಾದರು. ಕೆಲವರು ಭೀಮನನ್ನು ಹೊಗಳಿದರು. ಇನ್ನೂ ಕೆಲವರು ದುರ್ಯೋಧನನನ್ನು ಮೆಚ್ಚಿದರು.

ಇನ್ನೇನಾದರು ಪ್ರಮಾದವಾದೀತು ಎಂದು ಗುರು ದ್ರೋಣರು ತಮ್ಮ ಮಗ ಅಶ್ವತ್ಥಾಮನನ್ನು ಕರೆದು “ಇನ್ನು ಗದಾಪ್ರದರ್ಶನ ಸಾಕು. ಇಬ್ಬರೂ ಹೊರಟುಹೋಗಲಿ”, ಎಂದು ಹೇಳಿ ಕಳುಹಿಸಿದರು.

ಸಭೆ ಮುಗಿದನಂತರ ಜನರು ಯುಧಿಷ್ಠಿರನನ್ನೂ ಅವನ ತಮ್ಮಂದಿರನ್ನೂ ಹೊಗಳುತ್ತಿದ್ದರು. ‘ಯುಧಿಷ್ಠಿರನು ರಾಜನಾದರೆ ರಾಜ್ಯವನ್ನು ಚೆನ್ನಾಗಿ ಆಳುತ್ತಾನೆ; ಧೃತರಾಷ್ಟ್ರ, ಗಾಂಧಾರಿ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾರೆ’ ಎಂದು ಆಡಿಕೊಳ್ಳುತ್ತಿದ್ದರು. ಇವೆಲ್ಲವನ್ನೂ ತಿಳಿದು ದುರ್ಯೋಧನನಿಗೆ ಹೊಟ್ಟೆ ಉರಿಯಿತು. ತಂದೆಯ ಬಳಿ ಹೋಗಿ ತನ್ನ ದುಃಖವನ್ನು ತೋಡಿಕೊಂಡ. ಪಾಂಡವರು ಹಸ್ತಿನಾವತಿಯನ್ನು ಬಿಟ್ಟು ವಾರಣಾವತ ನಗರದಲ್ಲಿ ಇರಲಿ ಎಂದು ಹಠ ಹಿಡಿದ. ಮಗನ ಮೇಲಿನ ಮೋಹದಿಂದ ಧೃತರಾಷ್ಟ್ರ ಒಪ್ಪಿದ.

ದುರ್ಯೋಧನನ ಸಂಚಿನಂತೆ ವಾರಣಾವತದಲ್ಲಿ ಅರಗಿನ ಅರಮನೆಯೊಂದು ಮೊದಲೇ ನಿರ್ಮಾಣವಾಗಿತ್ತು. ಅಲ್ಲಿಗೆ ಪಾಂಡವರೂ ಕುಂತಿಯೂ ಹೊರಟರು.

ಕೌರವರು ರಾತ್ರಿ ವೇಳೆ ಅರಮನೆಗೆ ಬೆಂಕಿ ಹಚ್ಚುವ ಏರ್ಪಾಟು ಮಾಡಿದ್ದರು. ಪಾಂಡವ-ಕೌರವರ ಚಿಕ್ಕಪ್ಪ ವಿದುರನಿಗೆ ಇದು ತಿಳಿಯಿತು. ತನೇ ಗುಟ್ಟಾಗಿ ಅರಮನೆಗೊಂದು ಸುರಂಗ ತೋಡಿಸಿ ಪಾಂಡವರಿಗೆ ತಿಳಿಸಿದ. ಅರ್ಧ ರಾತ್ರಿಯಲ್ಲಿ ಪಾಂಡವರೇ ಅರಗಿನ ಮನೆಗೆ ಬೆಂಕಿ ಹಚ್ಚಿದರು. ಅರಗಿನ ಮನೆ ಧಗಧಗಿಸಿ ಉರಿಯಿತು. ಪಾಂಡವರು ಸುರಂಗಕ್ಕಿಳಿದರು. ಒಳಗಿದ್ದ ವೈರಿಗಳು ಬೆಂದುಹೋದರೆಂದೇ ಕೌರವರು ಲೆಕ್ಕಹಾಕಿದರು.

ಹೂವಿನಂತೆ ಮೃದು — ವಜ್ರದಷ್ಟು ಕಠೋರ

ಸುರಂಗಕ್ಕಿಳಿದ ಭೀಮ ತಡಮಾಡಲಿಲ್ಲ. ತಾಯಿಯನ್ನೂ ಬೆನ್ನಮೇಲೂ ಯುಧಿಷ್ಠಿರ-ಅರ್ಜುನರನ್ನು ಭುಜಗಳ ಮೇಲೂ ಕೂರಿಸಿಕೊಂಡ. ನಕುಲ, ಸಹದೇವರನ್ನು ಕಂಕುಳಲ್ಲಿರಿಸಿಕೊಂಡು ಹೊರಟ. ಬಹುದೂರ ನಡೆದು ಗೊಂಡಾರಣ್ಯವೊಂದನ್ನು ಪ್ರವೇಶಿಸಿದ.

ಆನಂತರ ಎಲ್ಲರೂ ನಡೆಯಲಾರಂಭಿಸಿದರು. ಸ್ವಲ್ಪ ದೂರ ಹೋಗುವ ಹೊತ್ತಿಗೆ ಅವರಿಗೆಲ್ಲ ಆಯಾಸ, ಬಾಯಾರಿಕೆ, ತೂಕಡಿಕೆ. ಯುಧಿಷ್ಠಿರನು ಭೀಮನಿಗೆ, “ದಾರಿಯೇ ಕಾಣುತ್ತಿಲ್ಲ. ನಡೆಯುವುದೂ ಕಷ್ಟವಾಗಿದೆ. ನೀನೇ ನಮಗೆ ಈಗ ಆಧಾರ” ಎಂದು ಹೇಳಿದ. ನಡೆದು ನಡೆದು ಅವರಿಗೆ ಇನ್ನು ಹೆಜ್ಜೆ ಇಡಲು ಸಾಧ್ಯವಿಲ್ಲ ಎನ್ನುವಂತಾಯಿತು. ಅಲ್ಲೊಂದು ದೊಡ್ಡ ಆಲದ ಮರ. ಭೀಮನು ಅವರಿಗೆ “ನೀವೆಲ್ಲ ವಿಶ್ರಮಿಸಿಕೊಳ್ಳಿ. ನಾನು ನೀರನ್ನು ಹುಡುಕಿ ತರುತ್ತೇನೆ” ಎಂದು ಹೇಳಿದ. ಅವರೆಲ್ಲ ಮರದ ಕೆಳಗೆ ಕುಳಿತರು.

ಭೀಮನು ನೀರನ್ನು ತೆಗೆದುಕೊಂಡು ಬರುವ ಹೊತ್ತಿಗೆ ಎಲ್ಲರೂ ನಿದ್ರೆ ಮಾಡುತ್ತಿದ್ದರು.

ಭೀಮನು ಅಲ್ಲಿಯೇ ಕುಳಿತ. ಅವರೆಲ್ಲರನ್ನೂ ನೋಡಿ ಅವನಿಗೆ ತುಂಬಾ ದುಃಖವಾಯಿತು. ‘ಕುಂತಿ ಪಾಂಡು ಮಹಾರಾಜನ ಹೆಂಡತಿ. ಎಷ್ಟು ವೈಭವದಿಂದ ಬಾಳಿದವಳು! ಈ ಅಣ್ಣ ತಮ್ಮಂದಿರು ಎಲ್ಲರೂ ರಾಜಕುಮಾರರು, ಮಹಾವೀರರು. ಇವರೆಲ್ಲ ಎಂತಹ ಕಷ್ಟಕ್ಕೆ ಸಿಕ್ಕರು!’ ಎಂದು ಮರುಗಿದ. ಕಣ್ಣಿನಲ್ಲಿ ನೀರು ತುಂಬಿತು.

ತಾಯಿಗಾಗಿ, ಸಹೊದರರಿಗಾಗಿ ಮರುಗಿದ

ಆ ಕಾಡಿನಲ್ಲಿ ಹಿಡಿಂಬಾಸುರ ಎಂಬ ರಾಕ್ಷಸ. ಅವನ ತಂಗಿ ಹಿಡಿಂಬ ನೋಡುವುದಕ್ಕೆ ಭಯಂಕರ, ಮಹಾ ಪರಾಕ್ರಮಶಾಲಿ. “ದೂರದಿಂದ ಪಾಂಡವರನ್ನು ಕಂಡ. ತಂಗಿಯನ್ನು ಕರೆದು, ಅವರು ಯಾರು ನೋಡು. ಸಾಧ್ಯವಾದರೆ ಕೊಂದು ತಂದುಬಿಡು” ಎಂದ.

ಹಿಡಿಂಬೆ ಪಾಂಡವರಿದ್ದ ಸ್ಥಳಕ್ಕೆ ಬಂದಳು. ಸುಂದರನಾದ ಭೀಮಸೇನನನ್ನು ನೋಡಿದಳು. ಅವನನ್ನು ನೋಡಿದರೇ ಅವನ ಆನೆಬಲ ಕಾಣುತ್ತಿತ್ತು. ಮುಖದಲ್ಲಿ ದುಃಖ ಮನೆಮಾಡಿದ್ದರೂ ಅಸಾಧಾರಣ ತೇಜಸ್ಸು. ಅವನಲ್ಲಿ ಅವಳಿಗೆ ಪ್ರೀತಿಯುಂಟಾಯಿತು.

ಅವಳು ತನ್ನ ಭಯಾನಕ ರೂಪವನ್ನು ಮಾರ್ಪಡಿಸಿ ಸುಂದರ ಸ್ತ್ರೀಯಾದಳು. ಭೀಮನ ಬಳಿಗೆ ಬಂದು ನಿಜವನ್ನೇ ಹೇಳಿದಳು. “ನನ್ನನ್ನು ಮದುವೆಯಾಗು. ರಾಕ್ಷಸರ ತೊಂದರೆಯನ್ನು ತಪ್ಪಿಸುತ್ತೇನೆ” ಎಂದಳು

ಭೀಮ ಒಪ್ಪಲಿಲ್ಲ. ಅವರು ಮಾತನಾಡುತ್ತಿರುವಾಗಲೇ, ತಂಗಿ ಇನ್ನೂ ಬರಲಿಲ್ಲ ಎಂದು ಹುಡುಕಿಕೊಂಡು ಬಂದ ಹಿಡಿಂಬ. ಹಲ್ಲುಕಡಿಯುತ್ತಾ ಭೀಮನ ಮೇಲೆ ಬಿದ್ದ. ಭೀಮನಿಗೆ ರೋಷವುಕ್ಕಿತು. ಹಿಡಿಂಬನನ್ನು ಹಿಡಿದೆತ್ತಿ ಗಿರಿಗಿರನೆ ತಿರುಗಿಸಿ ನೆಲಕ್ಕೆ ಅಪ್ಪಳಿಸಿಬಿಟ್ಟ. ಮಲಗಿದವರಿಗೆ ಎಚ್ಚರಿಕೆಯಾಗಬಾರದು ಎಂದು ಅವನನ್ನು ದೂರ ಎಳೆದುಕೊಂಡು ಹೋದ. ಹೋರಾಟದ ಮಧ್ಯೆಯೂ ಇತರರ ಯೋಚನೆ ಅವನಿಗೆ!

ಹಿಡಿಂಬ ಎದ್ದು ಭೀಮನ ಮೇಲೆ ಎರಗಿದ. ಘೋರ ಹೋರಾಟವಾಯಿತು. ಹಿಡಿಂಬ ಭೀಮನ ಕೈಯಲ್ಲಿ ಸತ್ತ.

ಈ ಮಧ್ಯೆ ಮಲಗಿದ್ದವರಿಗೆ ಎಚ್ಚರಿಕೆಯಾಯಿತು. ಹೋರಾಟ ಮುಗಿದನಂತರವೂ ಭೀಮ ಹಿಡಿಂಬೆಯನ್ನು ಮದುವೆಯಾಗಲು ಒಪ್ಪಲಿಲ್ಲ. ಯುಧಿಷ್ಠರನು ಅವಳಲ್ಲಿ ಕನಿಕರಪಟ್ಟು ಮಾತನಾಡಿದ. ಭೀಮನು ಅವಳ ಕೈಹಿಡಿಯಲು ಒಪ್ಪಿದ. ಭೀಮ-ಹಿಡಿಂಬೆಯರು ಸ್ವಲ್ಪ ಕಾಲ ಸಂತೋಷವಾಗಿದ್ದರು.

ಕೆಲವು ದಿನಗಳಲ್ಲಿ ಹಿಡಿಂಬೆ ಒಬ್ಬ ಮಗನನ್ನು ಹೆತ್ತಳು. ಅವನೇ ಘಟೋತ್ಕಚ. ಮಹಾವೀರ.

ಅನಂತರ ಪಾಂಡವರು ತಮ್ಮ ಪ್ರಯಾಣವನ್ನು ಮುಂದುವರಿಸಿದರು.

ಆಪದ್ಬಾಂದವ

ಪಾಂಡವರು ಏಕಚಕ್ರನಗರ ಎಂಬ ಸ್ಥಳಕ್ಕೆ ಬಂದರು. ಬ್ರಾಹ್ಮಣನೊಬ್ಬ ಬಿಡಾರ ನೀಡಿದ. ದಿನವು ಭಿಕ್ಷಾನ್ನದ ಊಟ!

ಕುಂತಿ ಭಿಕ್ಷಾನ್ನದಲ್ಲಿ ಅರ್ಧ ಭೀಮನಿಗೆ, ಇನ್ನರ್ಧ ಐವರಿಗೆ ಹಂಚುತ್ತಿದ್ದಳು. ಆದರೂ ಹಸಿವೋ ಹಸಿವು ಭೀಮನಿಗೆ!

ಒಂದು ದಿನ ಕುಂತಿಯೆಂದಳು — “ಮಗನೇ, ಬಂಡಿಯ ಭೊಜನ ಸಿದ್ಧವಾಗಿದೆ. ಗಾಡಿಯನ್ನು ಕಟ್ಟು, ಬಾ” ಭೀಮನಿಗೆ ಆಶ್ಚರ್ಯ. “ಯಾರಿಗಮ್ಮಾ ಈ ಊಟ?” ಎಂದ. “ಹೇಳುವೆ ಕೇಳು” ತಾಯಿ ಹೇಳಿದಳು.

ಆ ಊರಿನ ದಕ್ಷಿಣದ ಬೆಟ್ಟದಲ್ಲಿರುವ ಬಕಾಸುರನಿಗೆ ಈ ಬಂಡಿಯ ಭೋಜನ ಸಲ್ಲಬೇಕಿತ್ತು.

ಬಕ ಊರಿಗೆ ನುಗ್ಗಿ, ಜನರನ್ನು ಹಿಡಿದು ತಿನ್ನುತ್ತಿದ್ದ. ಕಿರುಕುಳ ತಡೆಯಲಾರದೆ ಪುರಜನರು ಅವನೊಡನೆ ಒಪ್ಪಂದಮಾಡಿಕೊಂಡಿದ್ದರು. ಬಕನಿಗೆ ಎರಡು ಕೋಣ, ಹನ್ನೆರಡು ಖಂಡುಗ ಅಕ್ಕಿಯ ಅನ್ನ, ತಕ್ಕ ಪರಿಕರ, ಒಬ್ಬ ಮನುಷ್ಯ — ಪ್ರತಿ ದಿನ ಸಲ್ಲಬೇಕು.

ಇಂದು ಇವರಿದ್ದ ಮನೆಯ ಬ್ರಾಹ್ಮಣನ ಸರದಿ. ತಮ್ಮ ಒಬ್ಬನೇ ಮಗನನ್ನು ಕಳಿಸಲಾರದೆ ದಂಪತಿಗಳು ಗೋಳಿಟ್ಟರು. ಕುಂತಿಯ ಕರುಳು ಹಿಂಡಿತು. ತನ್ನೈವ ಮಕ್ಕಳಲ್ಲಿ ಭೀಮನನ್ನೇ ಕಳಿಸುವೆನೆಂದಳು. ಭೀಮ ಬಕನನ್ನು ಕೊಂದು ಊರನ್ನೇ ಉಳಿಸುತ್ತಾನೆ. ಎಂದು ಅವಳಿಗೆ ಭರವಸೆ.

ಭೀಮ ಬಂಡಿಯನ್ನೇರಿ ಹೊರಟ. ಭಕ್ಷ್ಯಗಳ ಪರಿಮಳ ಸವಿದು ಬಾಯಲ್ಲಿ ನೀರೂರಿತು. ಭೀಮನಿಗೆ ಯಾರದೇನು ಆತಂಕ? ಊಟಕ್ಕೆ ಕುಳಿತ.

“ಲೋ ವೃಕೋದರಾ, ನನ್ನ ಪಾಲನ್ನು ತಿನ್ನುವೆಯಾ?”

ಅಬ್ಬರಿಸುತ್ತಾ ಓಡಿ ಬಂದ ಬಕ. ಮಾತನಾಡಲು ಭೀಮನಿಗೆ ಸಮಯವೆಲ್ಲಿ? ಬಕ ತುತ್ತಿಗೊಂದು ಗುದ್ದು ಬಿಗಿದ. ಗುದ್ದಿಗೊಂದು ತುತ್ತು ಭೀಮನ ಹೊಟ್ಟೆಗಿಳಿಯಿತು.

ಬಂಡಿ ಬರಿದಾಯಿತು. ಹಸಿದ ಬಕ ಮತ್ತೂ ಕೆರಳಿದ. ಲಗುಬಗೆಯಿಂದ ಒಂದು ಮರವನ್ನೇಕಿತ್ತು ಭೀಮನ ಮೇಲೆಸೆದ. ಭೀಮನೂ ಇನ್ನೊಂದು ಮರ ಕಿತ್ತು ಬಕನ ಮೇಲೆಸೆದ. ಬಕ ಭಿಮನನ್ನೆತ್ತಿ ಅಪ್ಪಳಿಸುವುದರಲ್ಲಿದ್ದ. ಭೀಮ ಬಕನನ್ನು ಚಾತುರ್ಯದಿಂದ ಅದುಮಿ ಹಿಡಿದು ಕೆಡಹಿದ. ಕುತ್ತಿಗೆ ಅವುಕಿ, ಸೊಂಟದ ದಟ್ಟಿ ಹಿಡಿದು ಲಟಲಟನೆ ಮುರಿದುಹಾಕಿದ. ರಾಕ್ಷಸ ಭಯಂಕರವಾಗಿ ಅರಚುತ್ತಾ ರಕ್ತಕಾರಿ ಕೊನೆಯುಸಿರೆಳೆದ.

ಪೊದೆ ಪೊಟರೆಗಳಲ್ಲಿದ್ದ ಅವನ ಕಡೆಯ ರಾಕ್ಷಸರು ಓಡಿಬಂದರು.

“ಎಲಾ ಕುನ್ನಿಗಳೇ, ಇನ್ನಾರಿಗೂ ತೊಂದರೆ ಮಾಡದಿದ್ದರೆ ಬದುಕುತ್ತೀರಿ. ಇಲ್ಲವೊ ನಿಮಗೂ ಇದೇ ಗತಿ ಜೋಕೆ!” ಅಬ್ಬರಿಸಿದ ಭೀಮ. ರಾಕ್ಷಸರು ಓಡಿಹೊದರು.

ಭಿಕ್ಷೆಯನ್ನು ಸಮನಾಗಿ ಹಂಚಿಕೊಳ್ಳಿ

ಏಕಚಕ್ರನಗರದಲ್ಲಿದ್ದ ಪಾಂಡವರಿಗೆ ಒಂದು ವಾರ್ತೆ ಸಿಕ್ಕಿತು. ಪಾಂಚಾಲನಗರದ ರಾಜ ದ್ರುಪದ. ಅವನ ಮಗಳು ದ್ರೌಪದಿ. ತುಂಬಾ ಸುಂದರಿ. ಅವಳಿಗೆ ಸ್ವಯಂವರ. ಅನೇಕ ಬ್ರಾಹ್ಮಣರೊಡನೆ ಪಾಂಡವರೂ ಹೊರಟು ರಾಜಸಭೆಗೆ ಬಂದರು.

ಸ್ವಯಂವರಕ್ಕೆ ಅನೇಕ ಮಂದಿ ರಾಜರು ಬಂದಿದ್ದರು. ದ್ರುಪದ ಏರ್ಪಡಿಸಿದ ಪರೀಕ್ಷೆಯಲ್ಲಿ ಗೆದ್ದವನು ಬ್ರಾಹ್ಮಣ ವೇಷದಲ್ಲಿದ್ದ ಅರ್ಜುನನೇ.

ಮನೆಗೆ ಬಂದ ಪಾಂಡವರು ಸಂತೋಷದಿಂದ ತಾಯಿಗೆ ಹೇಳಿದರು — “ಅಮ್ಮಾ ‘ಭಿಕ್ಷೆ’ಯನ್ನು ತಂದಿದ್ದೇವೆ”.

“ಆಗಲಿ. ನೀವೆಲ್ಲರೂ ಸಮನಾಗಿ ಹಂಚಿಕೊಳ್ಳಿ” ಒಳಗಿದ್ದ ಕುಂತಿ ಹೇಳಿದಳು.

ತಾಯಿಯ ಮಾತೇ ವೇದವಾಕ್ಯವಾಯಿತು.

ಶ್ರೀಕೃಷ್ಣನ ಸಮ್ಮುಖದಲ್ಲಿ ವೈಭವದಿಂದ ವಿವಾಹ ನಡೆಯಿತು. ದ್ರೌಪದಿ ಪಾಂಡವರ ಹೆಂಡತಿಯಾದಳು.

ಧೃತರಾಷ್ಟ್ರ, ಭೀಷ್ಮರು ದುರ್ಯೋಧನನಿಗೆ ಬುದ್ಧಿವಾದ ಹೇಳಿ ಅರ್ಧ ರಾಜ್ಯವನ್ನು ಕೊಡಿಸಿದರು. ಪಾಂಡವರು ಇಂದ್ರಪ್ರಸ್ಥವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯವಾಳತೊಡಗಿದರು.

ದುರ್ಯೋಧನನ ಎದೆಯಲ್ಲಿ ಮತ್ತೆ ದ್ವೇಷದ ಉರಿ ಎದ್ದಿತು.

ನೀನೇ ನನ್ನ ಸಮಾನ ಜೋಡಿ!

ಧರ್ಮರಾಯನು ಕ್ಷೇಮಕ್ಕಾಗಿ ರಾಜಸೂಯಯಾಗ ಮಾಡಲು ನಿಶ್ಚಯಿಸಿದ. ಆ ಯಾಗಕ್ಕೆ ಭೂಮಂಡಲವನ್ನೆಲ್ಲಾ ಗೆದ್ದು ಕಪ್ಪಕಾಣಿಕೆ ತರಬೇಕಾಗಿತ್ತು. ಅಣ್ಣನ ಅಪ್ಪಣೆ ಪಡೆದು ತಮ್ಮಂದಿರೆಲ್ಲಾ ವಿಜಯಯಾತ್ರೆ ಕೈಗೊಂಡರು.

ಈ ನಡುವೆ ಮಗಧದೇಶದ ರಾಜ ಜರಾಸಂಧನಿಗೆ ತಾನು ಅಜೇಯನಾಗಬೇಕೆಂಬ ಆಸೆ ಹುಟ್ಟಿತು. ಅದಕ್ಕಾಗಿ ಮಹೇಶ್ವರನ ಉಪಾಸನೆ ಮಾಡುತ್ತಿದ್ದ. ಬಲಿ ಕೊಡಲು ಅನೇಕ ವಿರೋಧಿರಾಜರನ್ನು ತಂದು ಸೆರೆಮನೆಯಲ್ಲಿಟ್ಟಿದ್ದ. ಹಾಗಾಗಿ ಅನೇಕ ರಾಜರಿಂದ ಯಾಗಕ್ಕೆ ಕಪ್ಪಕಾಣಿಕೆ ಬರುವಂತಿರಲಿಲ್ಲ. ಶ್ರೀಕೃಷ್ಣನಿಗೆ ಈ ವಿಷಯ ಗೊತ್ತಾಯಿತು. ಭೀಮಾರ್ಜುನರೊಡನೆ ಮಗಧಕ್ಕೆ ಬಂದು ಜರಾಸಂಧನನ್ನು ಕೇಳಿದ.

“ರಾಜರನ್ನೆಲ್ಲಾ ಬಿಡುತ್ತಿಯೋ? ನಮ್ಮೊಡನೆ ಯುದ್ಧಮಾಡುತ್ತಿಯೋ?”

“ಯುದ್ಧವೇ ಆಗಲಿ” ಎಂದ ಜರಾಸಂಧ. ಪುನಃ ಹೇಳಿದ, “ಕೃಷ್ಣಾ, ನಾನು ಶೂರ. ನೀನು ಹೇಡಿ. ನಿನ್ನೊಡನೆ ಯುದ್ಧಮಾಡಲಾರೆ. ಈ ಅರ್ಜುನ ಪಾಪ ಇನ್ನೂ ಹುಡುಗ! ಆ ಭೀಮನೇ ನನಗೆ ಸಮಾನ ಜೋಡಿ!” ಎನ್ನುತ್ತಾ ಭೀಮನನ್ನು ಯುದ್ಧಕ್ಕೆ ಕರೆದ.

ಇಬ್ಬರೂ ಸಾಹಸಿಗಳೇ! ಭಯಂಕರ ಯುದ್ಧವೇ ಆಯಿತು. ಜರಾಸಂಧನು ಮಹಾ ಪರಾಕ್ರಮಶಾಲಿ. ವೀರಾವೇಶದಿಂದ ಹೋರಾಡಿದ. ಕಡೆಗೆ ಭೀಮನು ಜರಾಸಂಧನನ್ನು ಎರಡು ತೋಳಿನಿಂದಲೂ ಮೇಲಕ್ಕೆತ್ತಿ ಗರಗರನೆ ತಿರುಗಿಸಿ ನೆಲಕ್ಕೆ ಕೆಡವಿದ. ಜರಾಸಂಧನ ಪ್ರಾಣ ಹೋಯಿತು.

ಅನಂತರ ಸೆರೆಯಲ್ಲಿದ್ದ ರಾಜರು ಬಿಡುಗಡೆ ಹೊಂದಿದರು. ತಮ್ಮ ತಮ್ಮ ರಾಜ್ಯಕ್ಕೆ ತೆರಳಿ ಯಾಗಕ್ಕೆ ಉದಾರವಾಗಿ ಕಪ್ಪಕಾಣಿಕೆಗಳನ್ನು ತಂದು ಸಲ್ಲಿಸಿದರು. ಭೀಮಾರ್ಜುನರು ಅಪಾರ ಧನಕನಕಗಳನ್ನು ತಂದು ಅಣ್ಣನಿಗೊಪ್ಪಿಸಿದರು.

ಮತ್ತೆ ಕಿಚ್ಚು ಹತ್ತಿತ್ತು

ರಾಜಸೂಯಯಾಗಕ್ಕೆ ಅದ್ದೂರಿಯ ಸಿದ್ಧತೆ ನಡೆಯಿತು. ಮಹರ್ಷಿಗಳೂ ರಾಜಾದಿರಾಜರೂ ಯಾಗವನ್ನು ನೋಡಲು ಬಂದರು. ಭೀಷ್ಮರೂ ದ್ರೋಣರೂ ಆಗಮಿಸಿದರು. ಒಲ್ಲದ ಮನಸ್ಸಿನಿಂದ ಕೌರವರೂ ಬಂದರು.

ಮಯ ಒಬ್ಬ ಪ್ರಸಿದ್ಧ ಶಿಲ್ಪಿ. ಅವನಿಗೆ ಶಿಲ್ಪಶಾಸ್ತ್ರದ ಚಮತ್ಕಾರಗಳೆಲ್ಲಾ ಬರುತ್ತಿದ್ದವು. ಯಾಗದ ಸಲುವಾಗಿ ದೊಡ್ಡ ಸಭಾಂಗಣವನ್ನು ನಿರ್ಮಿಸಿದ್ದ. ಅದರ ಅಂದ, ಅಲಂಕಾರ, ವೈಭವಗಳನ್ನು ಕಂಡವರೆಲ್ಲಾ ‘ಅದ್ಭುತವಾಗಿದೆ’ ಎಂದರು. ದುರ್ಯೋಧನನಿಗೂ ಕುತೂಹಲ ಕೆರಳಿತು. ನೋಡಲು ಹೊರಟ.

ಸಭಾಂಗಣದಲ್ಲಿ ನೀರಿಲ್ಲದ ಕಡೆ ಬಟ್ಠೆ ಮುದುರಿ ಕೊಂಡು ಹೆಜ್ಜೆ ಇಟ್ಟ. ಇದು ನೆಲವೆಂದು ಭ್ರಮಿಸಿ ನೀರಿನ ಕೊಳದಲ್ಲಿ ಮುಳುಗಿದ.

ದುರ್ಯೋಧನ ಕೋಪವನ್ನು ನುಂಗಿ ಹೆಬ್ಬಾಗಿಲ ಕಡೆ ನುಗ್ಗಿದ. ಅದು ಬಾಗಿಲ ಆಕೃತಿ! ಗೋಡೆ ಹಣೆಗೆ ಅಪ್ಪಳಿಸಿತು. ಸಖಿಯರೊಡನಿದ್ದ ದ್ರೌಪದಿ ಕಿಲಕಿಲನೆ ನಕ್ಕಳು. ಭೀಮಾರ್ಜುನರಿಗೂ ನಗೆ ತಡೆಯದಾಯಿತು.

ಮೇಲಿಂದಮೇಲೆ ಅಪಮಾನ! ದುರ್ಯೋಧನ ಕೆಣಕಿದ ಫಣಿಯಾಗಿದ್ದ. ‘ಸಮಯ ಬರಲಿ. ಈ ಪಾಂಡವರ ಸೊಕ್ಕು ಮುರಿಯದೇ ಬಿಡುವುದಿಲ್ಲ’ ಎಂದು ಬುಸುಗುಟ್ಟುತ್ತಾ ರಾಜಧಾನಿ ಹಿಂದಿರುಗಿದ.

ಕಪಟದ ದಾಳ ಉರುಳಿತು

ದುರ್ಯೋಧನನ ಸಂಕಟ ಹೇಳತೀರದು. ಪಾಂಡವರನ್ನು ಜೂಜಿನಲ್ಲಿ ಮೋಸದಿಂದ ಸೋಲಿಸಬೇಕೆಂದು ಅವನ ಮಾವ ಶಕುನಿ ಹೇಳಿಕೊಟ್ಟ. ಮತ್ತೆ ಮಗನ ಮೋಹಕ್ಕೆ ಧೃತರಾಷ್ಟ್ರ ತಲೆಬಾಗಿದ.

ಹಸ್ತಿನಾಪುರಕ್ಕೆ ಬರಬೇಕೆಂದು ಪಾಂಡವರಿಗೆ ಕರೆ ಹೋಯಿತು. ಜೂಜಾಡುವುದು ತಪ್ಪೆಂದು ತಿಳಿದು, ಇಷ್ಟವಿಲ್ಲದಿದ್ದರೂ ಕಡೆಗೆ ಯುಧಿಷ್ಠಿರ ಒಪ್ಪಿ ಪಗಡೆಯಾಟಕ್ಕೆ ಕುಳಿತ. ದುರ್ಯೋಧನನ ಪರ ಶಕುನಿ ಆಡಲು ಕುಳಿತ.

ಇಬ್ಬರೂ ಪಣ ಇಟ್ಟು ಆಡಿದರು. ಯುಧಿಷ್ಠಿರನಿಗೆ ಗರ ಬೀಳಲಿಲ್ಲ. ಯುಧಿಷ್ಠಿರನ ರಾಜ್ಯವೂ ಹೋಯಿತು. ತಾನೂ ಅಲ್ಲದೆ ಅವನ ತಮ್ಮಂದಿರೂ ಕೌರವನ ಅಡಿಯಾಳಾದರು!

ಶಕುನಿ ಹೇಳಿದ —

“ಇನ್ನೊಂದೇ ಆಟ. ನೋಡು, ದ್ರೌಪದಿಯನ್ನು ಪಣವಾಗಿಡು. ನೀನು ಗೆದ್ದರೆ ಎಲ್ಲವನ್ನೂ ಹಿಂದಕ್ಕೆ ಕೊಡುತ್ತೇವೆ”. ಯುಧಿಷ್ಠಿರ ದ್ರೌಪದಿಯನ್ನೂ ಸೋತ.

ಭೀಮಪ್ರತಿಜ್ಞೆ

ದುರ್ಯೋಧನ ದ್ರೌಪದಿಯನ್ನು ಸಭೆಗೆ ಕರೆಸಿದ. ದುಶ್ಯಾಸನ ಅವಳ ಸೀರೆಯನ್ನು ಸೆಳೆದ.

ದ್ರೌಪದಿ ಇದು ಅನ್ಯಾಯ ಎಂದು ಸಾರಿದಳು. ಹಿರಿಯರಿಗೆ, ಮಾವನಿಗೆ, ಗಂಡಂದಿರಿಗೆ ಮೊರೆ ಇಟ್ಟಳು. ಅಲ್ಲಿ ಯಾರೂ ಮಾನ ಉಳಿಸುವವರಿರಲಿಲ್ಲ. ಶ್ರೀಕೃಷ್ಣನೇ ಅವಳಿಗೆ ಅಕ್ಷಯಾಂಬರವಿತ್ತು ಕಾಪಾಡಿದ.

ಭೀಮ ಒಂದು ದಿನವು ಅಣ್ಣನಿಗೆ ಎದುರಾಡಿದವನಲ್ಲ. ಇಂದು ಮೊದಲ ಬಾರಿಗೆ ಗುಡುಗಿದ —

“ಅಣ್ಣಾ ಸಹನೆಗೂ ಮಿತಿಯಿದೆ. ಧರ್ಮಪತ್ನಿಯನ್ನಿಟ್ಟು ಪಗಡೆಯಾಡಿದೆಯಲ್ಲವೇ? ಆ ನಿನ್ನ ಕೈಗಳನ್ನು ಸುಟ್ಟುಬಿಡುವೆ. ಹೋಗೂ ಸಹದೇವ ಬೆಂಕಿಯನ್ನು ತಾ”.

ಅರ್ಜುನ ಅಣ್ಣನ್ನು ತಡೆದ.

ದುರ್ಯೋಧನ ಯುಧಿಷ್ಠಿರನನ್ನು ಗೇಲಿ ಮಾಡಿದ. ಭೀಮನನ್ನು ಅಣಕಿಸಿದ. ತೊಡೆ ತಟ್ಟಿಕೊಂಡು ಕೇಕೆ ಹಾಕಿದ.

ಇಷ್ಟಾದರೂ ಯಾರೂ ತಲೆಯೆತ್ತಿದವರಿಲ್ಲ. ವಿವೇಕ ಹೇಳಿದವರಿಲ್ಲ. ಎಲ್ಲರೂ ಜೀವಂತ ಪ್ರೇತಗಳಾಗಿ ಕುಳಿತಿದ್ದಾರೆ.

ಭೀಮನ ಸಹನೆ ಮೀರಿತು. ಸೈರಣೆ ಸಿಡಿಯಿತು.

“ಅಣ್ಣಾ, ಇನ್ನು ನನ್ನ ಕೋಪದ ಜ್ವಾಲೆ ಆರದು. ಇಗೋ ಸಭೆಯವರೆಲ್ಲ ನನ್ನ ಪ್ರತಿಜ್ಞೆ ಕೇಳಿ. ದುರುಳ ದುಶ್ಯಾಸನನ ಬಿಸಿರಕ್ತ ಹೀರುತ್ತೇನೆ. ಎಲವೋ ಧೂರ್ತ ದುರ್ಯೋಧನಾ, ದ್ರೌಪದಿಯೆದರು ನಿನ್ನ ತೊಡೆ ತಟ್ಟಿ ತೋರಿಸಿದೆಯಲ್ಲವೇ? ಅದೇ ತೊಡೆಯನ್ನು ಕುಟ್ಟಿ ಪುಡಿ ಮಾಡುತ್ತೇನೆ” ಎಂದು ವಿರ ಪ್ರತಿಜ್ಞೆ ಮಾಡಿದ. ಅವನ ಪ್ರಜ್ವಲಿಸುವ ಕೋಪ ಕಂಡು, ಭಯಂಕರ ಪ್ರತಿಜ್ಞೆ ಕೇಳಿ ಸಭೆಯೇ ನಡುಗಿತು. ಕೌರವನು ಥರಥರನೆ ನಡುಗಿದರು. ಧೃತರಾಷ್ಟ್ರನು ಪಾಂಡವರಿಗೆ ರಾಜ್ಯವನ್ನು ಹಿಂದಿರುತಿಸಿ ಕೊಟ್ಟು ಸಮಾಧಾನಪಡಿಸಿ ಕಳಿಸಿದ.

ವನವಾಸಕ್ಕೆ

ತಾವು ಗೆದ್ದುಕೊಂಡ ರಾಜ್ಯವನ್ನು ಹಿಂದಿರುಗಿಸಿದುದು ಕೌರವರಿಗೆ ಒಪ್ಪಿಗೆಯಾಗಲಿಲ್ಲ. ರಾಜ್ಯವನ್ನು ಮರಳಿ ಪಡೆಯುವುದೇ ದರ್ಯೋಧನನ ಗುರಿ. ಜೂಜಾಟವೇ ಅದಕ್ಕೆ ಸಾಧನ!

ಸರಿ, ಯುಧಿಷ್ಠಿರನಿಗೆ ಪುನಃ ಕರೆ ಹೋಯಿತು. ಆಟಕ್ಕೆ ಮೊದಲು ಶಕುನಿ ಒಂದು ಶರತ್ತು ಹಾಕಿದ. ಸೋತವರು ಹನ್ನೆರಡು ವರ್ಷ ವನವಾಸಕ್ಕೆ ಹೋಗಬೇಕು; ಒಂದು ವರ್ಷ ಅಜ್ಞಾತವಾಸ ಅನುಭವಿಸಬೇಕು. ಅಜ್ಞಾತವಾಸದಲ್ಲಿ ಸುಳಿವು ಸಿಕ್ಕೆರೆ ಮರಳಿ ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಅನುಭವಿಸಬೇಕು.

ಯುಧಿಷ್ಠಿರನಿಗೆ ಕೆಡುವ ಬುದ್ಧಿ! ಅದಕ್ಕೂ ಒಪ್ಪಿದ. ದುರ್ವಿಧಿ ಮತ್ತೆ ಕಾಡಿತು. ಆಟದಲ್ಲಿ ಪಾಂಡವರಿಗೇ ಸೋಲಾಯಿತು.

ಪಾಂಡವರು ರಾಜವೈಭವವನ್ನೆಲ್ಲಾ ಬಿಟ್ಟುಕೊಟ್ಟರು. ನಾರುಮಡಿಯುಟ್ಟು ಕಾಡಿಗೆ ಹೊರಟರು.

ಅವರನ್ನು ಕಂಡು ದುಶ್ಯಾಸನನೂ ದುರ್ಯೋಧನನೂ ಅಪಹಾಸ್ಯ ಮಾಡಿದರು. ಭೀಮನು ಕೋಪದಿಂದ ‘ದುಶ್ಯಾಸನಾ, ಯುದ್ಧದಲ್ಲಿ ನಿನ್ನನ್ನು ಸಿಗಿದು ರಕ್ತವನ್ನು ಕುಡಿಯುತ್ತೇನೆ. ದುರ್ಯೋಧನಾ, ನಿನ್ನನ್ನು ಮೆಟ್ಟಿ ಕೊಲ್ಲುತ್ತೇನೆ’ ಎಂದು ಮತ್ತೆ ಪ್ರತಿಜ್ಞೆ ಮಾಡಿದನು.

ವನವಾಸಕ್ಕೆ ಹೊರಟ ಪಾಂಡವರು ಬಹುದೂರದ ಕಾಮ್ಯಕವನಕ್ಕೆ ಬಂದರು.

ಕಾಡಿನಲ್ಲಿ ಒಬ್ಬ ರಾಕ್ಷಸ ಬಂದ. ಹೆಸರು ಕಿರ್ಮೀರ! ಭೀಮನ ಏಟಿಗೆ ಆ ರಾಕ್ಷಸ ಕಿರುಚುತ್ತಾ ಕೆಳಗೆ ಬಿದ್ದ.

ನಾನು ಮುದುಕ

ಒಂದು ದಿನ ಗಾಳಿಯಲ್ಲಿ ಒಂದು ಹೂವು ಹಾರಿ ಬಂದಿತು. ಅದು ದಿವ್ಯವಾದ ಸೌಂಗಧಿಕಾ ಪುಷ್ಟ. ಅದನ್ನು ಕಂಡು ದ್ರೌಪದಿಗೆ ತುಮಬ ಸಂತೋಷವಾಯಿತು. ಅಂತಹ ಹೂವುಗಳನ್ನು ತಂದುಕೊಡು. ಎಂದು ಭಿಮನನ್ನು ಕೇಳಿದಳು. ಅವನಿಗೆ ದ್ರೌಪದಿಯಲ್ಲಿ ತುಂಬ ಪ್ರೀತಿ ಮಾತ್ರವಲ್ಲ ಮರುಕ. ರಾಜಪುತ್ರಿಯಾದ ಅವಳು ತಮ್ಮ ಕೈಹಿಡಿದು ಎಷ್ಟೆಷ್ಟು ಬವಣೆ ಪಟ್ಟಳು, ಈಗಲೂ ವನವಾಸದಲ್ಲಿ ಎಷ್ಟು ತೊಳಲುತ್ತಿದ್ದಾಲೆ ಎಂದು ದುಃಖ. ಅವಳಿಗೆ ಸಂತೋಷವಾಗಲಿ ಎಂದು ಹೂವುಗಳನ್ನು ತರಲು ಹೊರಟ.

ಮುಂದೆ ಹೊರಟ ಭೀಮ ಒಂದು ಬಾಳೆಯ ತೊಟದ ಬಳಿಗೆ ಬಂದ. ಅಲ್ಲೊಬ್ಬ ವಾನರ ತನ್ನ ಬಾಲವನ್ನು ದಾರಿಗಡ್ಡಲಾಗಿಟ್ಟು ಕುಳಿತಿದ್ದ. ಅವನ ಬಳಿ ನಿಂತು ಭೀಮ ಸಿಂಹನಾದ

ವಾನರ, “ಅಯ್ಯಾ, ನೀನು ತಿಳಿದವನು, ಹೀಗೆ ತೊಂದರೆ ಕೊಡಬಾರದು” ಎಂದು ಹೇಳಿದ.

ಭೀಮನು, “ನಾನು ಭೀಮ, ಚಂದ್ರವಂಶದ ರಾಜಕುಮಾರ. ನನಗೆ ದಾರಿ ಬಿಡು. ನಿನ್ನನ್ನು ದಾಟಿ ನಿನ್ನಲ್ಲಿರುವ ಪರಮಾತ್ಮನಿಗೆ ಅಪಮಾನ ಮಾಡಲು ಇಷ್ಟವಿಲ್ಲ. ಇಲ್ಲದಿದ್ದರೆ ಹನುಮಂತನು ಸಮುದ್ರವನ್ನು ದಾಟಿದ ಹಾಗೆ ನಿನ್ನನ್ನು ಈ ಬೆಟ್ಟವನ್ನೂ ದಾಟಿಕೊಂಡು ಹೋಗುತ್ತಿದ್ದೆ” ಎಂದ.

ವಾನರ : ಈ ಹನುಮಂತ ಎನ್ನುವವನು ಯಾರು?

ಭೀಮ : ಹನುಮಂತನು ನನ್ನ ಅಣ್ಣ. ಮಹಾ ಗುಣವಂತ, ಬುದ್ಧಿವಂತ, ಬಲಶಾಲಿ, ಶ್ರೀರಾಮನ ಭಕ್ತ. ಹೂಂ ಏಳು. ನನಗೆ ದಾರಿ ಬಿಡು.

ವಾನರ : ಅಯ್ಯಾ ಸಿಟ್ಟು ಮಾಡಿಕೊಳ್ಳಬೇಡ, ನಾನು ಮುದುಕ, ಏಳಲಾರೆ. ಈ ಬಾಲವನ್ನು ಅತ್ತ ಸರಿಸಿ ಹೋಗು.

ಭೀಮನಿಗೆ ಅದೆಷ್ಟರ ಕೆಲಸ! ಗದೆಯ ಮೊನೆಯಿಂದ ನೂಕಿದ. ಕಾಲಿನಿಂದ ದಬ್ಬಿದ. ತನ್ನ ಬಲವಷ್ಟನ್ನೂ ಉಪಯೋಗಿಸಿದರೂ ಬಾಲವನ್ನು ಕದಲಿಸಲಾಗಲಿಲ್ಲ.

ತಾನೇ ಏಕಯಕ ಶೂರನೆಂದಿದ್ದವನಿಗೆ ಇನ್ನೊಬ್ಬ ಶೂರ ಎದುರಾಗಿದ್ದ. ಆದರೆ ಭೀಮ ಕರುಬಲಿಲ್ಲ. ನಮ್ರನಾಗಿ ಬೇಡಿದ –

“ವಾನರ ಶ್ರೇಷ್ಠಾ, ನೀನೇ ಬಲಶಾಲಿ, ನೀನಾರೆಂದು ಹೇಳು”.

ವಾನರನು “ಅಯ್ಯಾ, ನಾನು ರಾಮಭಕ್ತನಾದ ಹನುಮಂತ. ಇಲ್ಲಿ ಅಪ್ಸರೆಯರೂ ಗಂಧರ್ವರೂ ರಾಮ ನಾಮಗಾನ ಮಾಡುತ್ತಿರುತ್ತಾರೆ. ಕೇಳುತ್ತ ಸುಖವಾಗಿದ್ದೇನೆ” ಎಂದ.

ಭೀಮನಿಗೆ ರೋಮಾಂಚನವಾಯಿತು. ಇವನೇ ತನ್ನ ಅಣ್ಣ. ಮಹಾವೀರ, ಹನುಮಂತ.

ಅವನಿಗೆ ಭೀಮ ನಮಸ್ಕರಿಸಿದ. “ಸಮುದ್ರವನ್ನು ಹಾರಿದಾಗ ನಿನ್ನ ರೂಪ ಹೇಗಿತ್ತು. ನೋಡಬೇಕೆಂದು ಆಸೆಯಾಗಿದೆ” ಎಂದು ಪ್ರಾರ್ಥಿಸಿದ. ಹನುಮಂತನು ತೇಜೋಮಯವಾದ ಆ ರೂಪವನ್ನು ತೋರಿಸಿದ. ಭಿಮನನ್ನು ಆಶೀರ್ವದಿಸಿದ.

ಹನುಮಂತನೇ ಸೌಗಂಧಿಕಾ ಪುಷ್ಪದ ನೆಲೆ ತಿಳಿಸಿ ಹೊರಟುಹೋದ.

ಭೀಮ ಬೇಕಷ್ಟು ಹೂವುಗಳನ್ನಾಯ್ದು ಹಿಂದಿರುಗುತ್ತಿದ್ದ. ಬರುವಾಗಲೇ ಪಾಂಡವರಿಗೆ ಮತ್ತೊಂದು ವಿಪ್ಪತ್ತು ಎರಗಿದ್ದುದು ಕಂಡಿತು. ಜಟಾಸುರನೆಂಬಾತ, ಸೊದರರನ್ನೂ ದ್ರೌಪದಿಯನ್ನೂ ಅಪಹರಿಸಿಕೊಂಡು ಓಡುತ್ತಿದ್ದಾನೆ! ಭೀಮ ಅವನನ್ನು ಕೊಂದು ಎಲ್ಲರೊಡನೆ ಪರ್ಣಕುಟಿಗೆ ಆಗಮಿಸಿದ.

ಮೂರು ಲೋಕದ ವೀರ ಅಡಿಗೆಯ ಮನೆಯಲ್ಲಿ

ಪಾಂಡವರು ಒಂದು ವರ್ಷದ ಅಜ್ಞಾತವಾಸ ಕಳೆಯಲು ವೇಷಾಂತರಗಳಿಂದ ಮತ್ಸ್ಯದೇಶಕ್ಕೆ ಬಂದರು. ವಿರಾಟರಾಜನ ಅರಮನೆಯಲ್ಲಿ ಉದ್ಯೋಗ ದೊರಕಿಸಿಕೊಂಡರು. ಧರ್ಮರಾಯ ಯತಿಯ ವೇಷದ ಕಂಕ ಭಟ್ಟನಾದ. ಭಿಮ ಅಡಿಗೆಯ ವಲಲನಾದ. ಅರ್ಜುನ ನಾಟ್ಯ ಕಲಿಸುವ ಬೃಹನ್ನಳೆಯಾಗಿ ನಾಟ್ಯಶಾಲೆ ಸೇರಿದ. ನಕುಲ ಸಹದೇವರು ಗೋಶಾಲೆ ಸೇರಿದರು. ದ್ರೌಪದಿ ರಾಣಿಯ ಸೇವಕಿ ಸೈರಂಧ್ರಿಯಾದಳು.

ಇಷ್ಟಾದರೂ ಕೌರವನ ಕುತಂತ್ರಕ್ಕೆ ಕೊನೆಯಿಲ್ಲ. ಪಾಂಡವರನ್ನು ಪತ್ತೆ ಹಚ್ಚಲು ಜಟ್ಟಿಗಳಿಬ್ಬರನ್ನು ಕಳಿಸಿದ. ವಲಲನೆ ಅವರನ್ನು ಸೋಲಿಸಿ ಓಡಿಸಿದ.

ದ್ರೌಪದಿಯೊಮ್ಮೆ ಭಯದಿಂದ ಸಭಾಭವನದ ಬಳಿ ಓಡಿಬಂದಳು. ವಿರಾಟನ ಮೈದುನ ಕೀಚಕ ಅವಳನ್ನಟ್ಟಿಕೊಂಡು ಬರುತ್ತಿದ್ದ.

ಕಂಕಭಟ್ಟ ರಾಜನಿಗೆ ಪುಣ್ಯಶ್ರವಣ ಹೇಳುತ್ತಿದ್ದ. ವಲಲನೂ ಆಲಿಸುತ್ತಾ ನಿಂತಿದ್ದ.

ಕೀಚಕನಿಗೆ ಸೈರಂಧ್ರಿಯಲ್ಲಿ ಮೋಹವುಂಟಾಗಿತ್ತು. ಅವಳು ಅವನಿಂದ ತಪ್ಪಿಸಿಕೊಂಡು ಓಡಿಬಂದಿದ್ದಳು. ಅವಳನ್ನು ಅಟ್ಟಿಸಿಕೊಂಡು ಬಂದಿದ್ದ ಕೀಚಕ, ರಾಜನೆದುರಿಗೆ ಅವಳ ಕೂದಲು ಹಿಡಿದು ಬೀಳಿಸಿ ಒದ್ದ. ಭಿಮನಿಗೆ ಕೋಪದಿಂದ ಮೈ ಉರಿಯಿತು. ಎದುರಿಗಿದ್ದ ವೃಕ್ಷವನ್ನು ನೋಡಿದ. “ವಲಲ, ಆ ಮರದ ಮೇಲೇಕೆ ಕೋಪ? ಈಗಲೇ ಕಡಿಯಬೇಡ! ಕೆಲವು ದಿನ ತಾಳು” ಎಂದು ತಡೆದ ಕಂಕಭಟ್ಟ.

ದ್ರೌಪದಿ ವಿರಾಟನಿಗೆ ಮೊರೆ ಇಟ್ಟಳು, ರಾಣಿ ಸುದೇಷ್ಣೆಗೆ ದುಃಖ ಹೇಳಿಕೊಂಡಳು. ಅವರು ಯಾರೂ ಕೀಚಕನನ್ನು ತಡೆಯಲು ಸಮರ್ಥರಲ್ಲ. ನುಣುಚಿಕೊಂಡರು. ಕೀಚಕನೋ ವೀರರಲ್ಲಿ ವೀರ.

ನಾಟ್ಯಶಾಲೆಯಲ್ಲಿ ಮೃತ್ಯು

ಕೀಚಕನನ್ನು ನೆನೆದು ದ್ರೌಪದಿ ಕನಲಿದಳು. ರಾತ್ರಿಯೇ ಬಂದು ಭೀಮನನ್ನು ಕೆಣಕಿದಳು. ಅವನ ಮುಂದೆ ತನ್ನ ದುಃಖವನ್ನೆಲ್ಲಾ ತೋಡಿಕೊಂಡಳು. “ಭೀಮಾ, ನಾನು ತುಂಬ ಪಾಪ ಮಾಡಿದವಳಿರಬೇಕು. ನಿಮ್ಮಂತಹ ವೀರಪತಿಗಳು ಇತರರ ಚರಣಸೇವಕರಾಗಿರುವುದನ್ನು ನೋಡಿಕೊಂಡು, ನಾನು ಇತರರ ಸೇವೆ ಮಾಡುತ್ತ, ಅವರೇನೆಂದು ಬಿಡುವರೋ ಎಂದು ಭಯಪಡುತ್ತ ಇನ್ನೂ ಬದುಕಿದ್ದೇನಲ್ಲ! ಈಗ ಸುದೇಷ್ಣೆಯ ತಮ್ಮ, ಈ ದುಷ್ಟ ಕೀಚಕ ನನನ್ನು ಗೋಳಾಡಿಸುತ್ತಾನೆ, ಒದ್ದು ಅಪಮಾನ ಮಾಡಿದ್ದಾನೆ, ಇನ್ನೂ ನಾನು ಏನೇನು ಅನುಭವಿಸಬೇಕೋ!” ಎಂದಳು.

ಭೀಮನ ಮನಸ್ಸು ಕರಗಿತು. ಕಣ್ಣಿನಲ್ಲಿ ನೀರು ಉಕ್ಕಿತು. “ಭದ್ರೆ, ನೀನು ಗುಣವಂತಳು. ಇನ್ನು ಕೆಲವೇ ದಿನಗಳಲ್ಲಿ ಅಜ್ಞಾತವಾಸ ಮುಗಿಯುತ್ತದೆ. ತಾಳ್ಮೆ ತಂದುಕೊ. ಇಂದು ನಿನ್ನನ್ನು ಕೀಚಕ ಕಾಡಿದಾಗ ಅವನನ್ನು ಸಿಗಿಯಬೇಕೆಂದಿದ್ದೆ, ಅಣ್ಣ ತಡೆದ” ಎಂದು

ದ್ರೌಪದಿ ಹೇಳಿದಳು:

“ನೀನೊಬ್ಬನೇ ಧೀರಪತಿಯೆಂದು ಬಂದೆ. ಸೌಟು ಹಿಡಿದ ಕೈಗಳು ಬಲಹೀನವಾದುವೇ? ಮಾನ ಹೋದ ಮೇಲೆ ಬದುಕಿ ಏನು ಫಲ? ಪ್ರಾಣತ್ಯಾಗ ಮಾಡುವೆ. ಅಪ್ಪಣೆ ಕೊಡು”.

ಭೀಮನ ಕರುಳು ಹಿಂಡಿತು.

“ಆಗಲಿ, ಅಣ್ಣನ ಮಾತು ಮೀರಿದೆನೆಂದರು ಸರಿ. ಹೋಗು. ನಾಳೆ ಕೀಚಕನನ್ನು ನಾಟ್ಯಶಾಲೆಗೆ ಬರಮಾಡು”.

ಅಂದು ರಾತ್ರಿ ವಲಲ ಹೆಣ್ಣು ವೇಷದಲ್ಲಿ ನಾಟ್ಯಶಾಲೆಗೆ ಬಂದ. ಕತ್ತಲೆಯಲ್ಲಿ ಕೀಚಕನೂ ಬಂದ. ಅವರಿಬ್ಬರಿಗೂ ಭಯಂಕರ ಹೋರಾಟವಾಯಿತು. ಭೀಮನೇ ಕೀಚಕನ ಗೋಣುಮುರಿದು ಸಾಯಿಸಿದ.

ಕೀಚಕನ ಸಾವಿನ ಸುದ್ದಿ ಹರಡಿತು. ಕೊಂದವನು ಭೀಮನೇ ಎಂದು ಊಹಿಸಿದ. ಪಾಂಡವರನ್ನು ಗೊತ್ತು ಹಚ್ಚುವ ಸಂಚು ಹೂಡಿದ. ಸೈನಿಕರನ್ನಟ್ಟಿ ವಿರಾಟನ ಗೋವುಗಳನ್ನು ಹಿಡಿಸಿದ. ಭೀಮಾರ್ಜುನರೇ ಗೆದ್ದು ಗೋವುಗಳನ್ನು ತಂದು ವಿರಾಟನಿಗೊಪ್ಪಿಸಿದರು.

ಅಂದೇ ಅಜ್ಞಾತವಾಸ ಮುಗಿಸಿದ ಪಾಂಡವರು ಮಾರುವೇಷ ಕಳಚಿ ನಿಜರೂಪ ತೋರಿದರು. ವಿರಾಟನಿಗೆ ಆಶ್ಚರ್ಯ! ಅವರಿಗೆ ಸ್ನೇಹಹಸ್ತ ನೀಡಿದ. ಮಗಳು ಉತ್ತರೆಯನ್ನು ಅರ್ಜುನನ ಮಗ ಅಭಿಮನ್ಯುವಿಗೆ ಮದುವೆ ಮಾಡಿಕೊಟ್ಟು ಬೀಗನೂ ಆದ.

ವಂಶ ನಾಶವಾಗದಿರಲಿ ಎಂದು

ಪಾಂಡವರು ವನವಾಸವನ್ನೂ ಅಜ್ಞಾತವಾಸವನ್ನೂ ಮುಗಿಸಿದರು. ಮಾತಿನಂತೆ ದುರ್ಯೋಧನನು ರಾಜ್ಯವನ್ನು ಪಾಂಡವರಿಗೆ ಹಿಂದಿರುಗಿಸಲಿಲ್ಲ. ಪಾಂಡವರು ಕೃಷ್ಣನೊಡನೆ ಸಮಾಲೋಚಿಸಿದರು.

ಯುಧಿಷ್ಠಿರನೆಂದ —

“ನಾವೂ ಕೌರವರೂ ಸೋದರರು. ರಾಜ್ಯಕ್ಕಾಗಿ ಅಣ್ಣತಮ್ಮಂದಿರು ಯುದ್ಧ ಮಾಡಿದರೆ ಅಪಕೀರ್ತಿ. ಅಲ್ಲದೆ ದ್ವೇಷದಿಂದ ದ್ವೇಷವೇ ಬೆಳೆಯುತ್ತಿದೆ. ನನಗೆ ರಾಜವೈಭವವೇ ಬೇಡ. ಐದು ಊರು ಕೊಡಲಿ, ಸಾಕು. ಕೃಷ್ಣಾ ಕೇಳಿ ಬಾ”.

ಭೀಮ ಅಣ್ಣನ ಮಾತಿಗೆ ದನಿಗೂಡಿಸಿದ —

“ಕೃಷ್ಣಾ, ದುರ್ಯೋಧನನೇನೋ ಕೆಟ್ಟವನೇ. ಹಿರಿಯರ ಮಾತನ್ನೂ ಕೇಳುವುದಿಲ್ಲ. ಅದರೂ ಯುದ್ಧವಾದರೆ ಕುಲವೇ ನಾಶವಾಗುತ್ತದೆ. ಆದುದರಿಂದ ಒಳ್ಳೆಯ ಮಾತನ್ನೇ ಹೇಳು. ಯುದ್ಧವನ್ನು ತಪ್ಪಿಸು”.

ಕೃಷ್ಣನಿಗೆ ಅಚ್ಚರಿಯಾಯಿತು. ‘ಇದೇನು, ಬೆಟ್ಟ ಹಗುರವಾಯಿತು. ಬೆಂಕಿ ತಣ್ಣಗಾಯಿತು! ಭೀಮನಿಂದ ಈ ಸಂಧಾನದ ಮಾತೇ?’ ಎಂದುಕೊಂಡು, “ಏನು ಭೀಮ! ನಿನ್ನ ಪ್ರತಿಜ್ಞೆಗಳನ್ನು ಮರೆತೆಯಾ? ನಿನ್ನ ಚಂಚಲ ಮನಸ್ಸು ಕಂಡು ನನಗೆ ಆಶ್ಚರ್ಯವಾಗಿದೆ. ನಿನ್ನ ಪರಾಕ್ರಮ ಏನಾಯಿತು?” ಎಂದ.

'ಪಾಂಡವರ ಶತ್ರುಗಳನ್ನು ಹೊಸಕಿ ಹಾಕಿಬಿಟ್ಟೇನು!'

ಭೀಮನಿಗೆ ಚಾಟಿಯಿಂದ ಹೊಡೆದಂತಾಯಿತು. “ಕೃಷ್ಣ ನೀನು ನನ್ನ ಮಾತನ್ನು ತಪ್ಪು ತಿಳಿದುಕೊಂಡೆ. ನನ್ನ ಪರಾಕ್ರಮ ನಿನಗೆ ತಿಳಿಯದೆ? ಪಾಂಡವರ ಶತ್ರುಗಳನ್ನು ಹೊಸಕಿ ಹಾಕಿಬಿಟ್ಟೇನು! ನಮ್ಮ ಭರತವಂಶ ನಾಶವಾಗದಿರಲಿ ಎಂಬ ದಯೆಯಿಂದ ನಾನು ಎಲ್ಲಾ ಅಪಮಾನಗಳನ್ನೂ ನುಂಗಿ ಕೊಂಡು, ಸ್ನೇಹ-ಶಾಂತಿಗಳನ್ನು ಬಯಸಿದೆ” ಎಂದು ಹೇಳಿದ. 

 ಅರ್ಜುನ, ನಕುಲರೂ ‘ಯುಧಿಷ್ಠಿರನ ಮಾತೇ ಸರಿ’ ಎಂದರು. ಸಹದೇವನೊಬ್ಬ ಯುದ್ಧವೇ ಆಗಲೆಂದ.

ದ್ರೌಪದಿ ಕಣ್ಣೀರು ಕರೆಯುತ್ತ ಹೇಳಿದಳು. “ಕೃಷ್ಣಾ, ನಾನು ಪಟ್ಟ ಪಾಡನ್ನು ಇವರೆಲ್ಲಾ ಮರೆತರು. ಅಣ್ಣಾ, ಯುದ್ಧವನ್ನೇ ಸಾರು” ಎಂದು ಒತ್ತಾಯಪಡಿಸಿದಳು.

ಭೀಮನೇ ಒಂದು ಸೈನ್ಯ!

ಕೌರವ-ಪಾಂಡವ ಸೈನ್ಯಗಳು ಕುರುಕ್ಷೇತ್ರದಲ್ಲಿ ಸೇರಿದವು. ಯುದ್ಧಹದಿನೆಂಟು ದಿನ ನಡೆಯಿತು. ಇದೇ ಮಹಾಭಾರತ ಯುದ್ಧ.

ಭೀಮನ ಸಿಂಹನಾದಕ್ಕೆ ಗಜಸೈನ್ಯವೆಲ್ಲಾ ಚೆಲ್ಲಾಪಿಲ್ಲಿಯಾಯಿತು. ಅವನ ಗದೆಯ ಪ್ರಹಾರಕ್ಕೆ ಕುದುರೆಗಳೆಲ್ಲ ಓಡಿದವು. ಅವನ ಅಸಮಾನ ಸಾಹಸಕ್ಕೆ ಸಯನಿಕರೆಲ್ಲಾ ಹೆದರಿ ಪಲಾಯನ ಮಾಡಿದರು.

ಭೀಮಸೇನ ಕೌರವ ಪಾಳಯಕ್ಕೆ ಆನೆಯಂತೆ ನುಗ್ಗಿ ವೈರಿಗಳನ್ನು ಹಿಮ್ಮೆಟ್ಟಿಸುತ್ತಿದ್ದ. ಧೃತರಾಷ್ಟ್ರನ ತೊಂಬತ್ತೆಂಟು ಮಕ್ಕಳನ್ನೂ ಮುಗಿಸಿದ. ದುರುಳ ದುಶ್ಯಾಸನನಿಗಾಗಿ ಹುಡುಕಿದ. ಅವನ ಬೆನ್ನಟ್ಟಿ ಹಿಡಿದು ಕೆಡವಿದ. ಮಯಮೇಲೆ ಕುಳಿತು, ಹೊಟ್ಟೆಯನ್ನು ಬಗೆದು, ರಕ್ತಹೀರಿ, ಕ್ರೋಧದ ಹಸಿವು ತೀರಿಸಿಕೊಂಡ.

ಪ್ರತಿಜ್ಞೆ ಪೂರೈಸಿತು

ಯುದ್ಧ ಮುಗಿಯುತ್ತ ಬಂದಿತು. ಕೌರವರ ಕಡೆ ವೀರಾಧಿವೀರರೆಲ್ಲ ಸತ್ತರು. ದುರ್ಯೋಧನ ಮಾತ್ರ ಕಾಣೆಯಾಗಿದ್ದ.

ಪಾಂಡವರೂ ಕೃಷ್ಣನೂ ಹುಡುಕಿಕೊಂಡು ಹೊರಟರು. ದುರ್ಯೋಧನ ದ್ವೈಪಾಯನ ಸರೋವರದಲ್ಲಿ ಅಡಗಿರುವ ಸಮಾಚಾರ ತಿಳಿಯಿತು. ಅಲ್ಲಿಗೆ ಬಂದರು.

“ಎಲವೋ ರಣಹೇಡಿ! ದುಶ್ಯಾಸನಾದಿಗಳ ರಕ್ತ ಸವಿದು ಇದೋ ಬಂದಿರುವೆ. ನಿನ್ನ ರಕ್ತದ ರುಚಿ ನೋಡದೇ ಬಿಡುವೆನಂದುಕೊಂಡೆಯಾ? ಮೊದಲು ಈ ನೀರನ್ನೆಲ್ಲಾ ಕುಡಿದು ಬಳಿಕ ನಿನ್ನ ಸವಿ ನೋಡುವೆ” ಎಂದು ಭೀಮ ಆರ್ಭಟಿಸಿದ. ಆದರೂ ದುರ್ಯೋಧನ ಮೇಲೆ ಬರಲಿಲ್ಲ. ಭೀಮ ಮೂದಲಿಸಿದ.

ದುರ್ಯೋಧನ ಕೆರಳಿದ. “ಭೀಮನೆಲ್ಲಿ? ಎಲ್ಲಿ ಆ ವೃಕೋದರ?” ಆರ್ಭಟಿಸುತ್ತಾ ಮೇಲೆದ್ದು ಬಂದ.

ಗದೆಗೆ ಗದೆ ಘಟ್ಟಣಿಸಿತು.

ಆ ಮೂಜಗವೀರರು ಆನೆಯಂತೆ ಘೀಳಿಟ್ಟರು. ಸಿಂಹದಂತೆ ಗರ್ಜಿಸಿದರು. ರೋಷದಿಂದ ನುಗ್ಗಿದರು, ತಿವಿದರು. ಬಿದ್ದರು ಮೇಲೆದ್ದರು. ಹೋರಾಡಿದರು.

“ಇದು ನನ್ನ ಸೋದರನನನ್ನು ಕೊಂದುದಕ್ಕೆ! ಇದು ದುಶ್ಯಾಸನನು ಬಗೆದುದಕ್ಕೆ!” ಎನ್ನುತ್ತಾ ಗದೆಯಿಂದ ಅಪ್ಪಳಿಸಿದ ದುರ್ಯೋಧನ.

“ಎಲವೊ! ಇದು ವಿಷಾನ್ನಕ್ಕೆ! ಇಗೋ ಮೋಸದ ಜೂಜಿಗೆ! ಇದೋ ದ್ರೌಪದಿಯ ಮಾನಭಂಗಕ್ಕೆ!”

ಭೀಮನೂ ಮೇಲಿಂದಮೇಲೆ ದಂಡಿಸಿದ. ದುರ್ಯೋಧನನೂ ಹಿಮ್ಮೆಟ್ಟಲಿಲ್ಲ. ಅವನ ಪೆಟ್ಟಿಗೊಮ್ಮೆ ಭೀಮನು ತತ್ತರಿಸಿದ. ಯುಧಿಷ್ಠಿರ-ಅರ್ಜುನರಿಗೆ ಆತಂಕವಾಯಿತು. ಕೃಷ್ಣನು ಅರ್ಜುನನಿಗೆ “ಭಿಮನು ದುರ್ಯೋಧನನ ತೊಡೆಗಳನ್ನು ಮುರಿಯುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ. ಅದನ್ನು ತೀರಿಸಿಕೊಳ್ಳಬೇಕು” ಎಂದ. ಅರ್ಜುನನು ಭೀಮನಿಗೆ ಕಾಣುವ ಹಾಗೆ ತನ್ನ ಎಡದ ತೊಡೆಯನ್ನು ತಟ್ಟಿ ತೋರಿಸಿದ. ಭೀಮ ಶತ್ರುವಿನ ತೊಡೆಗೆ ಗುರಿಯಿಟ್ಟು ಗದೆಯನ್ನಪ್ಪಳಿಸಿದ. ಕೌರವ ಭೂಪತಿಯ ತೊಡೆ ಮುರಿಯಿತು. ರಾಜಮುಕುಟ ಕೆಳಗೆ ಬಿತ್ತು. ದುರ್ಯೋಧನ ಮಣ್ಣಿನಲ್ಲಿ ಹೊರಳಾಡಿದ.

ಭೀಮನ ಏಟಿಗೆ ತೊಡೆ ಮುರಿದುಕೊಂಡು ದುರ್ಯೋಧನ ಉರುಳಿದ

“ಹಿಂದೆ ನಮ್ಮನ್ನು ಹಸು ಎಂದು ಹಾಸ್ಯ ಮಾಡಿದನಲ್ಲವೆ ಇವನು?” ಎಂದು ಮೂದಲಿಸಿದ ಭೀಮ. ಅಟ್ಟಹಾಸದಿಂದ ಕೌರವನ ಕಿರೀಟವನ್ನು ತುಳಿದು ಅವಮಾನಗೊಳಿಸಿದ.

ಛಲವೇ ಮೂರ್ತಿ ತಾಳಿದಂತೆ ಬದುಕಿದ ವೀರ ದುರ್ಯೋಧನನ ಪ್ರಾಣ ಹಾರಿಹೋಯಿತು.

ಇಲ್ಲಿಗೂ ಪಾಂಡವರ ಕಷ್ಟಗಳು ತಪ್ಪಲಿಲ್ಲ. ಅಂದೇ ರಾತ್ರಿ ಕೌರವರ ಅಭಿಮಾನಿ ಅಶ್ವತ್ಥಾಮ ಪಾಂಡವರ ಪಾಳಯಕ್ಕೆ ನುಗ್ಗಿ ಅನೇಕರನ್ನು ಕತ್ತರಿಸಿಹಾಕಿದ. ಪಾಂಡವರ ಮಕ್ಕಳಾದ ಉಪಪಾಂಡವರನ್ನು ಕೊಂದು ಹಾಕಿದ. ಸುದ್ದಿ ತಿಳಿದಾಗ ದ್ರೌಪದಿಯ ದುಃಖ ಕಟ್ಟೊಡೆಯಿತು. ಮೂರ್ಛೆ ಹೋದಳು ಮತ್ತೆ ಪ್ರಜ್ಞೆ ಮರಳಿದಾಗ, “ಭೀಮಸೇನ, ಈಗ ಹೋಗಿ ಅಶ್ವತ್ಥಾಮನನ್ನು ಕೊಲ್ಲು. ಅವನಿಗೆ ಶಿಕ್ಷೆಯಾಗಲಿ” ಎಂದು ಬೇಡಿದಳು.

ಭೀಮನು ರಥದಲ್ಲಿ ಕುಳಿತು ಹೊರಟೇ ಬಿಟ್ಟ. ಅಶ್ವತ್ಥಾಮನ ಹಣೆಯಲ್ಲಿದ್ದ ದಿವ್ಯಮಣಿಯನ್ನು ತಂದು ಕೊಟ್ಟು, ಪಾಂಡವರು ದ್ರೌಪದಿಯನ್ನು ಸಮಾಧಾನ ಮಾಡಿದರು.

ರಾಜಧುರೀಣನ ಮಹಾಯಾತ್ರೆ

ಮಹಾಭಾರತ ಯುದ್ಧ ಮುಗಿದು ಯುಧಿಷ್ಠಿರ ವಿಜಯಿಯಾದ. ಆದರೆ ಅವನ ಮನಸ್ಸಿಗೆ ಸಮಾಧಾನವಿಲ್ಲ.

ಯಾವ ಪುರಷಾರ್ಥ ಸಾಧಿಸಿದಂತಾಯಿತೆಂದು ಚಿಂತಿಸಿದ ಯುಧಿಷ್ಠಿರ. ತನ್ನ ಎಲ್ಲ ಬಂಧು-ಬಾಂಧವರನ್ನು ಕೊಂದ ಪಾಪ ಅಂಟಿದೆ. ಯಾವ ಸುಖಕ್ಕಾಗಿ ಈ ರಾಜ್ಯ ಆಳಬೇಕು? ತಾನು ರಾಜನಾಗುವುದೇ ಇಲ್ಲವೆಂದು ನಿಶ್ಚಯಿಸಿದ.

ಆಗ ಯುವರಾಜ ಭೀಮಸೇನ ಸಂತೈಸಿದ —

“ಅಣ್ಣಾ, ನಾವು ಧರ್ಮಯುದ್ಧ ಮಾಡಿದೆವು. ಅಧರ್ಮದಿಂದ ಕೌರವರು ತಮ್ಮ ನಾಶಕ್ಕೆ ಕಾರಣರಾದರು. ಇನ್ನು ಪ್ರಜೆಗಳನ್ನು ಸಂರಕ್ಷಿಸುವುದೇ ನಮ್ಮ ಧರ್ಮ”.

ಸೋದರನ ಮಾತಿಗೆ ತಲೆದೂಗಿ ಯುಧಿಷ್ಠಿರ ಸಿಂಹಾಸನವೇರಿದ.

ಭೀಮ ಅಣ್ಣನ ಸೇವಕನಾಗಿ, ಎಲ್ಲರ ಪ್ರೀತಿಗೆ ಪಾತ್ರನಾಗಿ, ಧರ್ಮಸಾಮ್ರಾಜ್ಯದ ಆಧಾರಸ್ಥಂಭವಾಗಿ ಬಹುಕಾಲ ಬಾಳಿದ.

ಹಿರಿಯರೆಲ್ಲರೂ ತೀರಿಕೊಂಡರು. ಶ್ರೀಕೃಷ್ಣನೂ ಇಹಲೋಕ ತ್ಯಜಿಸಿದ. ಬಹುಕಾಲ ರಾಜ್ಯವಾಳಿದ ಯುಧಿಷ್ಠಿರನಿಗೆ ವೈರಾಗ್ಯ ಹುಟ್ಟಿತು. ಅಭಿಮನ್ಯುವಿನ ಮಗ ಪರೀಕ್ಷಿತನಿಗೆ ಪಟ್ಟಕಟ್ಟಿ ತಮ್ಮಂದಿರೊಡನೆ ಮಹಾಯಾತ್ರೆ ಕೈಗೊಂಡ.

ಅನೇಕ ಸ್ಥಳಗಳನ್ನು ದಾಟಿ ಮೇರುಪರ್ವತಕ್ಕೆ ಬಂದರು. ದಾರಿಯಲ್ಲಿ ಒಬ್ಬೊಬ್ಬರೇ ದೇಹತ್ಯಾಗ ಮಾಡಿದರು. ಭೀಮನ ಚೇತನವೂ ಸ್ವರ್ಗ ಸೇರಿತು. ಅಸಮಾನ ಶೂರನೆಂಬ ಕೀರ್ತಿ ಅಜರಾಮರವಾಯಿತು.

ಹೀಗಾದರೆ ಜೀವನ ಸಾರ್ಥಕ

ವೀರರಲ್ಲಿ ವೀರ, ಆನೆಗಳನ್ನು ಕೊಂದು ರಥಗಳನ್ನು ಪುಡಿಮಾಡಿ ವೃಕ್ಷಗಳನ್ನೇ ಕಿತ್ತು ಶತ್ರುಗಳನ್ನು ಸದೆ ಬಡಿಯಬಲ್ಲ, ಭಯವೆಂದರೆ ಏನೆಂದು ತಿಳಿಯದ ಅಪ್ರತಿಮ ಶೂರ ಭಿಮಸೇನ. ಪೌರುಷ, ಪರಾಕ್ರಮಗಳ ಮೂರ್ತಿ.

ಅವನು ಪಟ್ಟ ಕಷ್ಟವೇನು ಕಡಿಮೆಯಲ್ಲ. ಚಿಕ್ಕಂದಿನಲ್ಲೆ ತಂದೆಯನ್ನು ಕಳೆದುಕೊಂಡ. ಕೌರವರ ಕೈಯಲ್ಲಿ ಹಿಂಸೆಯೋ ಹಿಂಸೆ. ಕೆಲವು ದಿನಗಳು ಸುಖವಾಗಿದ್ದೆವು ಎನ್ನುವ ಹೊತ್ತಿಗೆ, ಅಣ್ಣ ಯುಧಿಷ್ಠಿರ ಪಗಡೆಯಲ್ಲಿ ಸೋತ. ವೀರಾಧಿವೀರ ಭೀಮಸೇನನ ಕಣ್ಣೆದುರಿಗೆ ತುಂಬು ಸಭೆಯಲ್ಲಿ ಅವನ ಹೆಂಡತಿಗೆ ಅಪಮಾನ. ಮತ್ತೆ ವನವಾಸ. ಮೂರು ಲೋಕದ ವಿರ ಅಡಿಗೆಯವನಾಗಿ ಮತ್ತೊಬ್ಬರ ಸೇವೆ ಮಾಡುವ ಪಾಡು. ಯುದ್ಧದಲ್ಲಿ ಘಟೋತ್ಕಚ ಸತ್ತ, ಉಪಪಾಂಡವರು ಸತ್ತರು.

ಆದರೆ ಎಂದೂ ಭೀಮನು ಅಣ್ಣ, ಕೃಷ್ಣ ಇವರಿಬ್ಬರ ಮಾರ್ಗದರ್ಶನಕ್ಕೆ ಕಟ್ಟುಬಿದ್ದವನು. ಅಸಮಾನ ವೀರನಾದರೂ ಕರುಣೆ, ಧರ್ಮ ಅರಿಯದವನಲ್ಲ. ಬಲದಿಂದ ಕೊಬ್ಬಿ ಅನ್ಯಾಯ ಮಾಡಿದವನಲ್ಲ. ಅರಗಿನ ಮನೆಯಿಂದ ಹೊರಬಂದು ಕಾಡಿನಲ್ಲಿ ಮಲಗಿದ ತಾಯಿ ಮತ್ತು ಸಹೋದರರನ್ನು ಕಂಡು ಕಣ್ಣೀರಿಟ್ಟ. ಕೃಷ್ಣ ಸಂಧಾನಕ್ಕೆ ಹೊರಟಾಗ, ಭರತವಂಶ ನಾಶವಾಗುತ್ತದೆ ಎಂಬ ಸಂಧಾನಕ್ಕೆ ಹೊರಟಾಗ, ಭರತವಂಶ ನಾಶವಾಗುತ್ತದೆ ಎಂಬ ದಯಾ ಬುದ್ಧಿಯಿಂದ ತನ್ನ ಅಪಮಾನ, ಕೋಪಗಳನ್ನು ನುಂಗಿ ಕೊಂಡ. ಯುದ್ಧ ಮುಗಿದ ನಂತರ ಯುಧಿಷ್ಠಿರನು ದುಃಖದಿಂದ ಮಂಕಾಗಿ, “ನನಗೆ ಈ ರಾಜ್ಯ ಬೇಡ, ಕಾಡಿಗೆ ಹೋಗುತ್ತೇನೆ. ತಮ್ಮಂದಿರೇ, ಆಳಿಕೊಂಡಿರಿ” ಎಂದ. ಆಗ ಭೀಮ ಹೇಳಿದ: “ಕಾಡಿನಲ್ಲಿರುವುದರಿಂದ ಸ್ವರ್ಗ ಸಿಕ್ಕುವ ಹಾಗಿದ್ದರೆ ಜಿಂಕೆಗಳೂ ಪಕ್ಷಿಗಳೂ ಹಂದಿಗಳೂ ಸ್ವರ್ಗಕ್ಕೆ ಹೋಗಬೇಕಲ್ಲವೆ! ಮಾಡಬೇಕಾ ಕರ್ತವ್ಯವನ್ನು ಬಿಟ್ಟು ಹೋದರೆ ಜೀವನ ಸಾರ್ಥಕವಲ್ಲ. ಕರ್ತವ್ಯ ಎಷ್ಟೇ ಕಷ್ಠವಾಗಿರಲಿ, ಬೇಕಿಲ್ಲದಿರಲಿ ಮಾಡಿದರೇ ಜೀವನ ಸಾರ್ಥಕ”.

ಎಷ್ಟು ದೊಡ್ಡ ಮಾತು!