ಸೀರೆ ಉಟ್ಟು, ಬಳೆ ತೊಟ್ಟು, ಕಾಲಿಗೆ
ಗೆಜ್ಜೆ ಕಟ್ಟಿದ್ದಾನೆ ಒಬ್ಬ ;
ಇನ್ನೊಬ್ಬ ಕಾವಿ ಉಟ್ಟು ಮೂಲೆಗೆ ಕೂತಿದ್ದಾನೆ.
ದನದ ಕೊಟ್ಟಿಗೆಯಲ್ಲಿ ಒಬ್ಬ, ಕುದುರೆ ಲಾಯದಲ್ಲಿ
ಮತ್ತೊಬ್ಬ.
ಇದ್ದಾಳೆ ಇವಳು ಅವರಿವರ ತಲೆಯ
ಹೇನು ಹೆಕ್ಕುತ್ತಾ
ಆಗಾಗ ನಮ್ಮನ್ನೂ ಕುಕ್ಕುತ್ತಾ.

ನಾನೂ ಇದ್ದೇನೆ – ಅಡುಗೆ ಮನೆಯಲ್ಲಿ
ಉರಿವ ಸೌದೆಗಳ ಜೊತೆಗೆ
ಪಾತ್ರೆಗಳಲ್ಲಿ ಕೊತ ಕೊತ ಕುದಿದು
ಹಳೆಯ ನೆನಪುಗಳನ್ನು ರುಬ್ಬುತ್ತಾ :

ಕಣ್ಣೆದುರು ತೇಲಿಬರುತ್ತವೆ :
ಕಂಡದ್ದು, ಕಲಿತದ್ದು ; ಬೆಂಕಿಗೆ ಬಿದ್ದು ಪಾರಾದದ್ದು ;
ಪಗಡೆ ದಾಳದ ಜೊತೆಗೆ ಉರುಳಿ ಬಿದ್ದದ್ದು ; ಬಿಚ್ಚಿದ
ಜಡೆಯ ನೆರಳಿನ ಕೆಳಗೆ ಭುಸುಗುಟ್ಟಿ ನರಳಿದ್ದು ;
ಕಾಡು ಪಾಲಾಗಿ ಅಲೆದದ್ದು.

ನಿಟ್ಟುಸಿರಲ್ಲಿ ಪಟ ಬಿಚ್ಚಿ ತೇಲುತ್ತವೆ : ಊರುಗಳು ;
ಮಹಾರಣ್ಯಗಳು ; ಋಷಿಗಳು ; ರಾಕ್ಷಸರು ;
ಬೆಳಗು ಬೈಗುಗಳು ; ಇನ್ನೂ ಏನೇನೋ
ಸುರುಳಿ ಬಿಚ್ಚುತ್ತವೆ
ಜೀವ ಹಿಂಡುತ್ತವೆ.
ಅಲ್ಲಿ ಊರಾಚೆ ಮಸಣದಲ್ಲಿ
ಇದ್ದ ಪೌರುಷವನ್ನು ದುಂಡಗೆ ಸುತ್ತಿ
ಹೆಣವಾಗಿ ಮಲಗಿಸಿದ್ದೇವೆ, ಮರದ
ಕೊಂಬೆಯ ಮೇಲೆ.

ನೋಡುತ್ತಿದ್ದೇನೆ, ಸುತ್ತಲೂ ಎಂತೆಂಥವೋ
ವಿಜೃಂಭಿಸಿ ಮೀಸೆ ತಿರುವುತ್ತವೆ,
ಏರಬಾರದ ಕಡೆಗೆ ಏರಿ, ಇಳಿಯಬಾರದ ಕಡೆಗೆ
ಇಳಿದು ಕೆಡಿಸಿ ಹೊಲಸೆಬ್ಬಿಸಿವೆ.

ಗೆರೆ ದಾಟಬಾರದ ನಾನು ಕಾಯುತಿದ್ದೇನೆ
ಉರಿವ ಸೌದೆಗಳ ಜೊತೆಗೆ
ಪಾತ್ರೆಗಳಲ್ಲಿ ಕೊತ ಕೊತ ಕುದಿದು ಕಾಯುತ್ತಿದ್ದೇನೆ.