ಸೂ. ರಾಯದನುಜಘರಟ್ಟನಂಭೋ
ಜಾಯತಾಕ್ಷನ ಖಾತಿಯನು ಗಾಂ
ಗೇಯ ಭಯಭಕ್ತಿಯಲಿ ಗೆಲಿದನು ವರ ಸುದರ್ಶನವ

ಕೇಳು ಜನಮೇಜಯ ಧರಿತ್ರೀ
ಪಾಲ ದಿನಕರನುದಯದಲಿ ಮುಂ
ಗಾಳೆಗದ ಗಾಢಾಭಿಲಾಷರು ಬಂದು ಕಣನೊಳಗೆ
ಮೇಲುನೆಲನರಿದಖಿಲ ಕುರುಭೂ
ಪಾಲನನರೊಡ್ಡಿದರು ಲಕ್ಷ್ಮೀ
ಲೋಲನಾಜ್ಞೆಯಲಿವರು ಬಲಿದರು ತಮ್ಮ ಮೋಹರವ ೧

ದಳೆವೆರಡು ದಳಪತಿಗಳಿಬ್ಬರ
ತಳಿತ ಸನ್ನೆಯ ಚೌರಿಯಿಲಿ ಬಿಡೆ
ಹಳಚಿದುದು ಹೊಯ್ದಾಡಿ ಬಿದ್ದುದು ಪಾಯದಳವಂದು
ತುಳಿದು ಹೊಕ್ಕವು ದಂತಿಘಟೆ ದಳ
ವುಳಿಸಿ ಹರಿದವು ತೇರುಗಳು ತೋಳ್
ಬಳಲೆ ಹೊಯ್ದಾಡಿದರು ರಾವುತರಸಮ ಸಮರದಲಿ ೨

ಏನ ಹೇಳುವೆನುಭಯ ಬಲದಲಿ
ಲೂನ ನಿವಹದ ಹರವನಡೆಗೆಡೆ
ವಾನೆಗಳ ಹೊದರೆದೆ ಮುಗ್ಗಿದ ರಥದ ವಾಜಿಗಳ
ಮಾನವರ ಕಡಿಖಂಡ ದೊಂಡೆಯ
ನೇನನೆಂಬೆನು ಹರಿವ ರುಧಿರಾಂ
ಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ ೩

ಅಳಿದುದೆರಡರ ಚೂರ್ಣಿ ದೊರೆಗಳ
ಬಲಕೆ ಹೇಳಿಕೆಯಾಯ್ತು ಘನ ಸಂ
ಕುಲ ಸುವಿಗ್ರಹ ಸಾಧನರು ಕೈಮಾಡಿ ಕಡಿವಡೆಯೆ
ದಳವುಳಿಸಿದನು ಭೀಮ ಕೌರವ
ದಳವ ತರುಬಿದನಡ್ಡಬಿದ್ದರಿ
ಬಲದ ಸುಭಟರಿಗಿತ್ತನಮರಾವತಿಯ ಸಂಪದವ ೪

ಮುರಿದು ಬಹ ನಿಜಸೇನೆಗಭಯದ
ಸೆರಗ ಬೀಸುತ ಭೀಮಸೇನನ
ತರುಬಿ ನಿಂದನು ಭೀಷ್ಮ ಬಿಗಿದನು ಸರಳಲಂಬರವ
ತೆರಹುಗೊಡವಂಬುಗಳು ಭೀಮಗೆ
ಬೆರಗು ಬಲಿದುದು ಹೊಕ್ಕು ಸಾತ್ಯಕಿ
ಯಿರಿದು ಭೀಷ್ಮನ ಬಲದಲೂಡಿದನಖಿಳ ಖಗಕುಲವ ೫

ಬಳಿಕಸಾತ್ಯಕಿ ಭೀಷ್ಮರಿಗೆ ಬಲು
ಗಲಹ ಬಲಿದುದು ವಿಲಯ ರುದ್ರನ
ನಿಲವನೊಚ್ಚ ತಗೊಂಡ ಪರಬಲದೊಳಗೆ ಗಾಂಗೇಯ
ತಳಪಟವ ಮಾಡಿದನು ಭಾಷೆಯ
ಬಳಿಗೆ ಕೊಂದನು ಹತ್ತು ಸಾವಿರ
ನೆಲನ ವಲ್ಲಭರನು ಯುದಿಷ್ಠಿರರಾಯ ಸೇನೆಯಲಿ ೬

ಬೀಳಲವನೀಪತಿಗಳತಿ ಹೀ
ಹಾಳಿಯಲಿ ಸಾತ್ಯಕಿ ಮುಳಿದು ಬಲು
ಗೋಲಿನಲಿ ಗಂಗಾಕುಮಾರನ ಸಾರಥಿಯನೆಸಲು
ಮೇಲುಗಾಳೆಗದವರ ಸೇರಿತು
ಸೋಲು ಕುರುಪತಿಗಾಯ್ತು ಕಿರಣದ
ಗೂಳಿಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ  ೭

ದಿನವೆರಡು ಹಿಂದಾದುದಿದು ಮೂ
ರನೆಯ ದಿವಸದ ಬಹಳ ವಿಗ್ರಹ
ದನುವನಾಲಿಸು ರಾಯ ಜನಮೇಜಯ ಮಹೀಪಾಲ
ದಿನಪನುದಯಾಚಲದ ಚಾವಡಿ
ವನೆಗೆ ಬರೆ ಬಲವೆರಡು ಗಳ ಗ
ರ್ಜನದಿ ಬಂದೊಡ್ಡಿದುವು ಕಳನೊಳು ಖತಿಯ ಪಡಪಿನಲಿ ೮

ಸೂಳು ಮಿಗಲಳ್ಳಿರಿವ ನಿಸ್ಸಾ
ಳೋಳಿಗಳ ತಂಬಟದ ಕೊಂಬಿನ
ಗಾಳುಗಜರಿನ ಕಹಳೆಗಳ ಕಳಕಳದ ಬೊಗ್ಗುಗಳ
ಮೇಳವಣೆ ಭುಗಿಲಿಡಲು ಬೊಬ್ಬೆಯ
ಘೋಳ ಘೋಷದ ರಭಸ ದೆಸೆಗಳ
ಸೀಳೆ ಸಿಡಿಲೆದ್ದೆರಡು ಬಲ ಹೊಯ್ದಾಡಿ ತೊಡಗಲಸಿ ೯

ಜೋಳವಾಳಿಯೊಳುಂಡು ಮಾಡಿದ
ಸಾಲವನು ತಲೆಗಳಲಿ ತಿದ್ದಿದ
ರಾಳ ತರುಬುವ ಪತಿಗೆ ಹರುಷವ ಮಾಡಿ ತಮತಮಗೆ
ಕಾಲನೂರೈದದು ಸುರಸ್ತ್ರೀ
ಜಾಲ ನೆರೆಯದು ಗಗನ ಸುಭಟರ
ಸಾಲೊಳಡಗಿತು ಚಿತ್ರವೆನೆ ಹೊಯ್ದಾಡಿತುಭಯಬಲ ೧೦

ಬರಲಿ ಸಮರಕೆ ಸಾತ್ಯಕಿಯ ನೀ
ಕರೆಯೆನುತ ಬಿಲುದುಡುಕಿ ರಥದಲಿ
ಸರಿಸತಾಳಧ್ವಜವನೆತ್ತಿಸಿ ಸಮರಥರ ನೆರಹಿ
ಸರಳ ತೂಗುತ ಮಾರುಬಲವನು
ತರುಬಿ ನಿಂದನು ಭೀಷ್ಮ ನಗ್ಗದ
ಬಿರುದ ಸಂಭಾವಿಸುತ ಪಾಠಕಕೋಟಿ ಗಡಬಡಿಸಿ ೧೧

ಕಾಲಯಮನೋ ಭೀಷ್ಮನ ಫಟ
ಮೇಳವೇ ಮಝ ಭಾಪು ಮಾರಿಯ
ತಾಳಿಗೆಗೆ ತುತ್ತಾದವೇ ತಡವೇಕೆ ತೆಗೆಯೆನುತ
ಆಳು ಮುರಿದುದು ಮೋಹರದ ಭೂ
ಪಾಲಕರು ಹುರಿಯೊಡೆದು ದೊರೆಗಳ
ಮೇಲೆ ಬಿಸುಟರು ವೀರಗಂಗಾತನುಜನುಪಟಳವ ೧೨

ಸೋಲುಮಿಗಲೊಳಸರಿವ ಬಿರುದರ
ಬೀಳಗೆಡಹಿಸಿ ಕಪಿಯ ಹಳವಿಗೆ
ಗೋಲನೆತ್ತಿಸಿ ಕೆಲಬಲದ ಮನ್ನೆಯರ ಕೈವೀಸಿ
ಆಲಿಯಲಿ ಕಿಡಿ ಸೂಸೆ ಮೀಸೆಯ
ಮೇಲುದಿರುಹುತಲೌಡುಗಚ್ಚಿ ಕ
ರಾಳರೋಷ ಮಹೋಗ್ರ ವೀರನು ಪಾರ್ಥನಿದಿರಾದ ೧೩

ತೊಲತೊಲಗು ಕಲಿ ಭೀಷ್ಮ ವೃಧ್ದರಿ
ಗೆಳಭಟರಕೂಡಾವುದಂತರ
ವಳಿಬಲರ ಹೆದರಿಸಿದ ಹೆಕ್ಕಳವೇಕೆ ಸಾರೆನುತ
ತುಳುಕಿದನು ಕೆಂಗೋಲ ಜಲಧಿಯ
ನೆಲನದಾವುದು ದಿಕ್ಕದಾವುದು
ಸಲೆ ನಭೋಮಂಡಲವದಾವುದೆನಲ್ಕೆ ಕಲಿ ಪಾರ್ಥ ೧೪

ಪೂತರೇ ಕಲಿ ಪಾರ್ಥ ವಿಶಿಖ
ವ್ರಾತಮಯವಾಯ್ತವನಿ ಕಾರ‍್ಮುಕ
ಭೂತನಾಥನ ಗರುಡಿಯಲ್ಲಾ ಕಲಿತ ಮನೆ ನಿನಗೆ
ಅತುಕೊಳ್ಳಾದಡೆಯೆನುತ ಕಪಿ
ಕೇತನನ ಶರಹತಿಯನಾಂತಾ
ಮಾತು ಹಿಂಚಿತು ಕಡಿದು ಬಿಸುಟನು ಕೃಷ್ಣ ಬೆರಗಾಗೆ ೧೫

ಆ ಸಮಯದೊಳು ರಣದೊಳೌಕಿದ
ರಾ ಸುಯೋದನ ಶಲ್ಯ ಸಲೆದು
ಶ್ಯಾಸನನು ಕೃಪ ಶಕುನಿ ಗುರುಸುತರಾದಿ ಯಾದವರು
ಸೂಸಿದರು ಸರಳುಗಳನರ್ಜುನ
ಘಾಸಿಯಾದನು ವಿಲಯ ಮೇಘದ
ಮೀಸಲಿನ ಮಳೆಗಾಲವೆನೆ ಮೋಹಿದುದು ಶರಜಾಲ ೧೬

ಕುದುರೆ ಕಂಗೆಟ್ಟವು ಮುರಾರಿಯ
ಹೃದಯ ಸಂಚಲವಾಯ್ತು ಗಾಲಿಗ
ಳದುರಿದುವು ಗರುವಾಯಿಗೆಟ್ಟನು ಮೇಲೆ ಹನುಮಂತ
ಹೆದರಿದರು ನಾಯಕರು ಪಾಂಡವ
ರದಟು ಮುರಿದುದು ಸುರರು ಚಿಂತಿಸಿ
ಕುದಿದರರ್ಜುನಪಕ್ಷಪಾತ ವ್ಯರ್ಥವಾಯ್ತೆಂದು ೧೭

ತೆರಳುವನೆ ಬಿಲುಗಾರರಿಗೆ ವರ
ಗುರುವಲಾ ಕಲಿ ಪಾರ್ಥನನಿಬರ
ಸರಳ ಕಡಿದನು ಕೃಪನನೆಚ್ಚನು ಗುರುಸುತನ ರಥವ
ಉರುಳೆಗಡಿದನು ಶಲ್ಯನನು ಹೇ
ವರಿಸಲೆಚ್ಚನು ಕೌರವನ ಹೇ
ರುರದಲಂಬನು ಹೂಳಿದನು ಸೀಳಿದನು ಸಮರಥರ ೧೮

ಏರುವಡೆದನು ಶಲ್ಯ ರಕುತವ
ಕಾರಿದನು ದುಶ್ಯಾಸನನು ಕೈ
ಮೀರಿ ಕೈಕೊಂಡೆಚ್ಚು ನೊಂದನು ಮತ್ತೆ ಗುರುಸೂನು
ಹೇರಿದರು ಹಿಳುಕುಗಳ ಮೈಯಲಿ
ಜೋರು ಮಸಗಲು ಭೀಷ್ಮ ಕಡುಗಾ
ಹೇರಿದನು ರೋಷಾಗ್ನಿ ವಿಕಟಜ್ವಾಲೆಮುಖನಾದ ೧೯

ಮೊಗದ ಹೊಗರವಗಡಿಸೆ ಸುಯಿಲಲಿ
ಹೊಗೆಯ ಹೊದರಂಕುರಿಸೆ ಬಿಡುಗ
ಣ್ಣುಗಳೊಳೊಕ್ಕುದು ಕೆಂಪು ಸೊಂಪಡಗಿತು ಮುಖಸ್ನೇಹ
ತೆಗೆವೆನುರ್ಜನನಸುವನೆನುತಾ
ಳುಗಳ ದೇವನು ಭೀಷ್ಮನಡಿಗಡಿ
ಗೊಗುಮಿಗೆಯ ಕೋಪದಲಿ ಕೋದನು ಸರಳಿನಲಿ ನರನ ೨೦

ನೊಂದು ಸೈರಿಸಿ ಮತ್ತೆ ಸರಳಿನ
ಸಂದಣಿಯ ಸೈಗರೆದನರ್ಜುನ
ನಿಂದುಧರ ಮಝ ಭಾಪುರೆನೆ ಪಸರಿಸಿದವಂಬುಗಳು
ಮುಂದೆ ನಿಲಲರಿಯದೆ ವಿತಾಳಿಸಿ
ಮಂದಗತಿಯೊಳು ಕೆಲಸಿಡಿದು ಹರಿ
ನಂದನನ ಬಿಡದೆಸುತ ಬಂದನು ಭೀಷ್ಮ ಮುಳಿಸಿನಲಿ  ೨೧

ಎತ್ತಲೊಲೆದನದೆತ್ತ ಸರಿದನ
ದೆತ್ತ ಜಾರಿದನೆತ್ತ ತಿರುಗಿದ
ನೆತ್ತ ಹಿಂಗಿದನೆತ್ತ ಲೌಕಿದನೆತ್ತ ಲುರುಬಿದನು
ಅತ್ತಲತ್ತಲು ರಥಹಯವ ಬಿಡ
ದೊತ್ತಿ ಬೀದಿಗೆ ನೂಕಿ ಪಾರ್ಥನ
ಮುತ್ತಯನ ಸಂಮುಖಕೆ ಬಿಡದೌಕಿದನು ಮುರವೈರಿ ೨೨

ಕೆರಳಿದನು ಕಲಿ ಭೀಷ್ಮನರ್ಜುನ
ನುರವಣೆಯ ಗೆಲುವರೆ ಮುರಾರಿಯ
ಭರವಸವ ತಗ್ಗಿ ಸಿದಡಲ್ಲದೆ ಕಾದಲರಿದೆನುತ
ಹರಿಯ ಸಿರಿಯೊಡಲಿನಲಿ ಸರಳಿನ
ಸರಿವಳೆಯ ಸೈಗರೆಯೆ ಜೋಡಿನ
ಸರಪಳಿಯಲಕ್ಕಾಡಿದವು ಕಲಿ ಭೀಷ್ಮನಂಬುಗಳು ೨೩

ಮತ್ತೆ ರಥವನು ಹರಿಸಿ ಭೀಷ್ಮನ
ಹತ್ತೆ ಬರೆ ಕಟ್ಟಳವಿಯಲಿ ಹಾ
ಮುತ್ತಯನು ಸಿಲುಕಿದನು ಶಿವಶಿವಯೆನುತ ಬಲ ಬೆದರೆ
ಹತ್ತು ಶರದಲಿ ಕೃಷ್ಣರಾಯನ
ಮತ್ತೆ ಮುಸುಕಿದ ಬಹಳ ಭಾರ್ಗವ
ದತ್ತ ಬಾಣವ ತೊಡಚಿ ದೇವನ ನೊಸಲ ಕೀಲಿಸಿದ ೨೪

ಕೆಂಗರಿಯ ಮರಿದುಂಬಿ ತಾವರೆ
ಗಂಗವಿಸುವವೊಲಸುರರಿಪುವಿನ
ಮಂಗಳಾನನಕಮಲದಲಿ ಶರವಾಳೆ ಗರಿಗಡಿಯೆ
ತುಂಗವಿಕ್ರಮನೆಂಬ ಕಿತ್ತು ತ
ದಂಗರಕ್ತವಿಷೇಕರೌದ್ರಾ
ಲಿಂಗಿತನು ಬಲುಖತಿಯ ಹಿಡಿದನು ಭೀಷ್ಮನುಪಟಳಕೆ ೨೫

ಕೆಂಪ ಕಾರಿದವಾಲಿಗಳು ಮೈ
ಕಂಪಿಸಿದುದಡಿಗಡಿಗೆ ರೋಷದ
ಬಿಂಪಿನೊಳು ತಗ್ಗಿದನು ಗಂಟಿಕ್ಕಿದನು ಹುಬ್ಬುಗಳ
ಸೊಂಪುಗೆಟ್ಟುದು ಸಿರಿವದನ ಮನ
ದಿಂಪು ಬೀತುದು ಭಕ್ತ ಮೋಹದ
ಲಂಪು ಮಸುಳಿತು ಬಿಸುಟು ಕಳೆದನು ಹಯದ ವಾಘೆಗಳ ೨೬

ಕೆಂಡವಾಗಲಿ ಲೋಕ ದಿವಿಜರ
ಹೆಂಡಿರೋಲೆಯು ಕಳೆದು ಹೋಗಲಿ
ದಿಂಡುಗೆಡೆಯಲಿ ಮೇರು ಮೇದಿನಿ ನಿಲಲಿ ವಿತಳದಲಿ
ಗಂಡುಗೆಡಿಸಿದರಿಲ್ಲ ದಾನವ
ದಿಂಡೆಯರು ಹಲರೆಮ್ಮೊಡನೆ ಮಾ
ರ್ಕೊಂಡವರು ಮಾಮಾಪ್ರತಿಜ್ಞಾಯ ತೊಡಕು ಬೇಡೆಂದ ೨೭

ಸಕಲ ಜಗದಳಿವಿನಲಿ ರುದ್ರಾ
ತ್ಮಕನು ವಿಷ್ಣುವೆ ಎಂಬ ನುಡಿ ಸು
ವ್ಯಕುತವಾಗಲು ತೋರಿದನು ಘನರೋಷ ತಾಮಸವ
ಚಕಿತವದನದ ಕೆಂಪಿನಬುಜಾಂ
ಬಕಯುಗಳನೊಲೆದೊಲೆದು ರೋಷ
ಪ್ರಕಟಪಾವಕ ವಿಸ್ಫು ಲಿಂಗಿತನಾದನಡಿಗಡಿಗೆ ೨೮

ಎಲೆಲಿದೆತ್ತಣ ಧರಣಿಯೆತ್ತಣ
ಕುಲಗಿರಿಗಳೆತ್ತಣ ದಿಶಾಗಜ
ಕುಲವಿದೆತ್ತಣ ಸುರರಿದೆತ್ತಣ ಹರ ಚತುರ‍್ಮುಖರು
ಸಲಹುವೈಯನು ಮುಳಿದು ಲೋಕದ
ಕೊಲೆಗೆಲಸಕಂಗೈಸಿದನೆ ಹಾ
ಪ್ರಳಯವಾದುದಕಾಲದಲಿಯೆಂದಮರರೆದೆಯಯೀರೆ ೨೯

ನಳಿನಪತ್ರೋದಕದವೊಲು ಮಾ
ರೊಲೆದುದಬುಜಭವಾಂಡವಂಬುಧಿ
ಯಿಳಿದು ಗುಲ್ಫದ್ವಯಸವಾದುದು ಕಮಠನೆದೆಯೊಡೆಯೆ
ನೆಲನನಿದ ಹಿಂದಿಕ್ಕಿಕೊಂಬ
ಗ್ಗಳೆಯರಾರೋ ಶಿವಶಿವಾ ಜಗ
ದಳಿವು ಜೋಡಿಸಿತೆನುತ ನಡುಗಿದನಬುಜಭವನಂದು ೩೦

ಮರುಮಥನ ಕೆಲ್ಲೈಸಿ ನೋಡಿದ
ನುರು ಭಯಂಕರ ಚಕ್ರವನು ದು
ರ್ಧರುಷಧಾರಾ ಲೂಯಮಾನ ನಿಶಾತಚಕ್ರವನು
ತರಳ ತರಣೀ ಚಕ್ರವನು ಸಂ
ಗರ ವಿನಿರ್ಜಿತ ಚಕ್ರವನು ಭಯ
ಭರವಿವರ್ಜಿತ ಚಕ್ರವನು ಕಡುಗೋಪ ಕುಡಿಯಿಡಲು ೩೧

ನಿಶಿತ ಧಾರೆಯ ಹೊಳಹು ಸೂರ್ಯನ
ಮುಸುಕಿದುದು ಪರಿಲೂನದೈತ್ಯ
ಪ್ರಸರಗಳನಾಳೀವಿನಿಸ್ಸೃತ ರುಧಿರ ಬಂಧುಗಳ
ಮಿಸುಪ ಮೊಳೆಗಳ ಮುರಿವುಗಳ ನೆಣ
ವಸೆಯ ತೊರಳೆಯ ತೊಂಗಲಿನೊಳಂ
ದೆಸೆವ ಚಕ್ರವ ನೋಡಿದನು ದೈತ್ಯಾರಿ ಕೋಪದಲಿ ೩೨

ಹರಿದು ಹಬ್ಬುವ ಬಳ್ಳಿವೆಳಗಿನ
ಮುರಿವು ಮಂಡಳಿಸಿದುದು ಶತಸಾ
ವಿರ ದಿವಾಕರ ಬಿಂಬವೆಸೆದುದು ಝಳದ ಹೊಯಿಲಿನಲಿ
ಸುರನರೋರಗ ಜಗದ ಕಂಗಳ
ತೆರಹು ಕೆತ್ತವು ಬತ್ತಿದುದಧಿಯೊ
ಳುರಿಮಣಲು ಮಾಣಿಕದ ಹುರಿದುದು ಚಕ್ರದೂಷ್ಮೆಯಲಿ ೩೩

ನರನ ತೇರಿನ ಕುದುರೆಗಳು ಡಾ
ವರಿಸಿದುವು ಡಗೆ ಹೊಯ್ದು ಮಿಗೆ ದ
ಳ್ಳುರಿಯ ಸಸಿಯಂತಾದನರ್ಜುನದೇವ ನಿಮಿಷದಲಿ
ಕರಗಿ ಕೊರಗಿತು ಲೋಕ ಕೌರವ
ಧರಣಿಪಾಲರಿದೆತ್ತಣುರಿಯೋ
ಹರ‍್ಞನ ಕಣ್ಗಿಚ್ಚಲ್ಲಲೇ ಹಾಯೆನುತ ಹಲುಬಿದರು. ೩೪

ತುಡುಕಿದನು ಚಕ್ರವನು ರಥದಿಂ
ಪೊಡವಿಯೊಳು ದುಮ್ಮಿಕ್ಕಿದನು ಹ
ತ್ತಡವ ಹಾಯಿಕಿ ಹರಿದನೊಡಬಿದ್ದವರನೊಡೆ ತುಳಿದು
ಸುಡುವೆನಹಿತಾನ್ವಯವ ಭೀಷ್ಮನ
ಕಡಿದು ಭೂತಗಣಕ್ಕೆ ಬೋನವ
ಬಡಿಸುವೆನು ನೋಡಿಲ್ಲಿ ಮೇಳವೆಯೆನುತ ಸೈವರಿದ  ೩೫

ಶಿವಶಿವೆಂದುದು ನಿಖಿಳಜಗ ಕೌ
ರವರು ಕಂಪಿಸಿ ಥಟ್ಟುಗೆಡೆದರು
ಭುವನದಲಿ ಭಾರಿಸಿತು ಜಯಜಯ ಜಯಮಹಾಧ್ವಾನ
ತವತವಗೆ ತಳ್ಳಂಕದಲಿ ಪಾಂ
ಡವರು ನಡುಗಿತು ಪಾರ್ಥ ಬಲುಗರ
ವವಚಿದಂತಿರೆ ಮೂಕನಾದನು ಬೆರಳ ಮೂಗಿನಲಿ  ೩೬

ಹರಿ ಮುಕುಂದ ಮುಕುಂದ ಲಕ್ಷ್ಮೀ
ವರ ನೃ ಕೇಸರಿಯೆನುತ ಚಾಪವ
ಶರವನವನಿಗೆ ಬಿಸುಟು ಮೈಯಿಕ್ಕಿದನು ಕಲಿ ಭೀಷ್ಮ
ಕರಯುಗವ ಮುಗಿದೆದ್ದು ಮುರಹರ
ಸರಸಿಜಾಂಬಕ ರಾಮ ರಕ್ಷಿಸು
ತರಳನಲಿ ಗುಣದೋಷದರಕೆಯೆ ದೇವ ಹೇಳೆಂದ  ೩೭

ದೇವ ನಿಮ್ಮಯ ಖಾತಿ ಪರಿಯಂ
ತಾವು ಲಕ್ಷ್ಯವೆ ಜೀಯ ನೊರಜಿನ
ದೇವಗಿರಿಯಂತರವೆ ಸಂಭಾವನೆಯೆ ನನ್ನೊಡನೆ
ದೇವ ಮುನಿಗಳ ನಗೆಯ ನೋಡದಿ
ದಾವುದುಚಿತವ ಮಾಡಿದಿರಿ ಮಹಿ
ಮಾವಲಂಬವ ಮರೆದುದಕೆ ನಗೆ ಬಂದುದೆನಗೆಂದ  ೩೮

ಅಲಸಿಕೆಯೊಳೈನೂರು ಸಾವಿರ
ನಳಿನಭವರಡೆಗೆಡೆವರೆಂಬ
ಗ್ಗಳಿಕೆಯೆತ್ತಲು ಹುಲುಮನುಜ ನಾನೆತ್ತಲಿದಿರಾಗಿ
ಮುಳಿದು ಹರಿತಹುದೆತ್ತಲಿದು ನಿ
ನ್ನ ಳತೆಗೈದುವುದಲ್ಲ ಲಜ್ಜೆಗೆ
ನೆಲೆಯ ಮಾಡಿದೆ ಹೂಡಿದೈ ದುರಿಯಶವನೆನಗೆಂದ  ೩೯

ರೋಮ ರೋಮದೊಳಖಿಲ ಭುವನ
ಸ್ತೋಮ ನಲಿದಾಡುವುದು ಗಡ ನಿ
ಸ್ಸೀಮತನ ಗಡ ನಾವು ವೈರಿಗಳೆಂದು ಕೋಪಿಸುವ
ಈ ಮರುಳುತನವೆತ್ತಲೀ ರಣ
ತಾಮಸಿಕೆ ತಾನೆತ್ತಣದು ರಘು
ರಾಮ ರಕ್ಷಿಸು ಬಯಲಿನಾಡಂಬರವಿದೇನೆಂದ ೪೦

ನೀನು ಖತಿಯನು ಹಿಡಿಯೆ ನಿನ್ನ ಸ
ಘಾನತನವನು ಬಲ್ಲೆ ಯೋಗಿಗ
ಳೇನನೆಂಬರು ತಮ್ಮೊಳಗೆ ಕೈಹೊಯ್ದು ಮಿಗೆ ನಗುತ
ಮಾನವರು ಕಡುಮೂರ್ಖರೆಂದೇ
ಮಾನಗರ‍್ವವ ತಳೆದ ಸಾಕಿ
ನ್ನೇನ ಹೇಳುವೆ ನಿನ್ನ ಠಕ್ಕನು ಬಲ್ಲೆ ಹೋಗೆಂದ  ೪೧

ಶತ ಪಿತಾಮಹರಡಗರೇ ನೀ
ಮತಿ ಮುರಿಯೆ ಮೇಣ್ ಭ್ರೂವಿಲಾಸ
ಸ್ಥಿತಿಯೊಳೇನುತ್ಪತ್ತಿಯಾಗದೆ ಬ್ರಹ್ಮಕೋಟಿಗಳು
ಅತಿಶಯದ ಮಹಿಮಾಸ್ಪದನು ನೀ
ನತಿ ಗಹನನೆಂಬಗ್ಗಳಿಕೆಗಿದು
ಕೃತಕವಲ್ಲಾ ದೇವ ಹೇಳೆನ್ನಾಣೆ ಹೇಳೆಂದ  ೪೨

ದೇವ ನೀ ದಿಟ ಕೊಲುವಡೆಯು ನಾ
ಸಾವೆನೇ ತಾನಾವನೆಂಬುದ
ದೇವರರಿಯಿರಲೈ ವೃಥಾ ಸಂಭಿನ್ನ ರೋಷದಲಿ
ದೇವನಾಮದ ಜೋಡು ನಮ್ಮನು
ಕಾವುದೈ ನೀ ಮುನಿದಡೆಯು ನಿಮ
ಗಾವು ಹೆದರೆವು ನಾಮಧಾರಿಗಳತುಳ ಬಲರೆಂದ  ೪೩

ಭಂಗವಲ್ಲಿದು ನಿನ್ನ ಘನತೆಗೆ
ಡಿಂಗರಿಗರೇ ಮಿಗಿಲು ನಿನಗೆಯು
ಡಿಂಗರಿಗರೇ ಬಲ್ಲಿದರು ದಾಕ್ಷಿಣ್ಯವೇನಿದಕೆ
ಮಂಗಳಾತ್ಮಕ ಕೇಳು ನಿನ್ನಯ
ಹಂಗನೊಲ್ಲೆನು ಮುಕುತಿ ಪಥದೊಳ
ಭಂಗಪೆಂಡೆಯದಾಳಲೈ ನಿಮ್ಮಡಿಯ ಸಿರಿನಾಮ  ೪೪

ಕಳುಹಿ ಕಳೆದವು ಖಾತಿಯನು ನೀ
ನುಳುಹಿಕೊಂಬುದು ತೇಜವನು ದಿಟ
ಕೊಲುವ ಮನವೇ ಬಿಸುಡು ಚಕ್ರಧಿವನೆನ್ನ ಕಾಯದಲಿ
ಅಳುಕಿ ಕೂದಲು ಹರಿದುದಾದರೆ
ಬಳಿಕ ನಾ ಡಿಂಗರಿಗನಲ್ಲೀ
ಕಳಕಳಕೆ ನಾನಂಜುವವನೇ ದೇವ ಮರಳೆಂದ  ೪೫

ನಚ್ಚಿದಾಳಿನ ಬಿನ್ನಹಕೆ ಹರಿ
ಮೆಚ್ಚಿ ಮನದಲಿ ನಾಚಿ ಚಕ್ರವ
ಮುಚ್ಚಿದನು ಮುರಿದನು ಕಿರೀಟಿಯ ರಥದ ಹೊರೆಗಾಗಿ
ಬೆಚ್ಚಿ ಬೆದರುವ ಸೇನೆಗಭಯವ
ಹಚ್ಚಿಕೊಟ್ಟನು ವೀರಭೀಷ್ಮನ
ನಿಚ್ಚಟದ ಭಕ್ತಿಯನು ನೆನೆನೆನೆದೊಲೆದ ಹರಿ ಶಿರವ  ೪೬

ಹೋದುದೊಂದಪಮೃತ್ಯು ಲೋಕಕೆ
ತೀದುದಿಲ್ಲಾಯುಷ್ಯ ಮಹದಪ
ವಾದ ದೇವಂಗಾಗಿ ತಪ್ಪಿತು ಮುಚ್ಚು ಮರೆಯೇಕೆ
ಕಾದುಕೊಂಡನು ಭೀಷ್ಮನೀ ಕಮ
ಲೋದರನ ಕೆರಳಿಚಿಯು ಭಕುತಿಯ
ಲಾದರಿಸಿದನು ಪುಣ್ಯವೆಂದನು ಕಮಲಭವ ನಗುತ  ೪೭

ನಡುಗುವರ್ಜುನದೇವನನು ತೆಗೆ
ದಡಿಗಡಿಗೆ ತಕ್ಕೈಸಿ ಭೀತಿಯ
ಬಿಡಿಸಿ ವಾಘೆಯ ಕೊಂಡು ತುರಗವನೆಡಬಲಕೆ ತಿರುಹಿ
ನಡಸಿದನು ಕಾಳೆಗಕೆ ಬಳಿಕವ
ಗಡ ಮುರಾಂತಕ ಮರಳಿ ಚಕ್ರವ
ತುಡುಕದಿರನೆಂದಸ್ತಗಿರಿಯನು ಸೂರ‍್ಯ ಮರೆಗೊಂಡ  ೪೮