ಸೂ. ಬೆಗಡುಗೊಂಡುದು ದ್ರೋಣ ಶಲ್ಯಾ
ದಿಗಳು ಪಾರ್ಥನ ವಿಕ್ರಮಾನಲ
ಮೊಗೆದು ಸುರಿದುದು ಸಕಲ ಕೌರವಸೈನ್ಯ ಸಾಗರವ

ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳತತಿ ಮುಂಜಾವದಲಿ ಹೆ
ಗ್ಗಾಳೆ ಮೊರೆದವು ಕುಣಿದು ಗಜರಿದವಾನೆ ಕುದುರೆಗಳು
ತೂಳುವರೆಗಳ ಭಟರ ಘೋಳಾ
ಘೋಳಿ ದೆಸೆಗಳ ಬಗಿಯೆ ಮೂಡಣ
ಶೈಲಮಂಚದಲುಪ್ಪವಡಿಸಿದನಬುಜಿನೀರಮಣ  ೧

ಲಳಿ ಮಸಗಿ ಹನುಮಿಸುತ ಖುರದಲಿ
ನೆಲನ ಕೆರೆದವು ಕುದುರೆ ಬರಿಕೈ
ಯೊಲೆದು ಕಂಭವ ಕೊಂಡು ಮಿಕ್ಕವು ಸೊಕ್ಕಿದಾನೆಗಳು
ಹೊಳೆಹೊಳೆದು ಹೊಂದೇರು ಹರಿದವು
ತಳಪಟಕೆ ಹೊದರೆದ್ದು ಗಗನದ  ೨
ಹೊಲಿಗೆ ಬಿಡೆ ಬೊಬ್ಬಿರಿದು ಕವಿದುದು ವಿಗಡ ಪಾಯದಳ ಲಲಿತ

ಮಂಗಳ ಪಾಠಕರ ಕಳ
ಕಳಿಕೆಗುಪ್ಪವಡಿಸಿದನವನಿಪ
ತಿಲಕನನುಜರು ಸಹಿತ ವೈದಿಕ ಕ್ರಿಯೆಯನನುಕರಿಸಿ
ನಳಿನನಾಭನ ಮಧುರವಾಣೀ
ಲುಳಿತ ಪರಮಾಶೀರ‍್ವಚನ ಪರಿ
ಕಲಿತ ಕವಚಿತಕಾಯ ಪಾಂಡವರಾಯ ಹೊರವಂಟ  ೩

ಗಗನ ಸರಸಿಯ ಪುಂಡರೀಕಾ
ಳಿಗಳೊ ಧವಳಚ್ಛತ್ರ ಪಂಕ್ತಿಯೊ
ಗಗನ ಗಂಗೆಯ ಬಹಳ ಕಾಲುವೆಗಳೊ ಪತಾಕೆಗಳೊ
ಗಗನ ಕುಂಭಿಯ ಗುಳದ ಕೆಲ ಚೌ
ರಿಗಳೊ ಸೀಗುರಿಗಳೊ ಕೃಪಾಣವೊ
ಗಗನ ಪೀವರ ತಾಳಪತ್ರಾವಳಿಯೊ ಹೊಸತಾಯ್ತು  ೪

ಉಬ್ಬಿದವು ಬೊಬ್ಬೆಗಳು ಬಿಲುದನಿ
ಗಬ್ಬರಿಸಿದವು ನಭವ ಗಜಹಯ
ದಬ್ಬರಣೆ ಗರುವಾಯಿಗೆಡಿಸಿತು ಸಿಡಿಲ ಸಡಗರವ
ಕೊಬ್ಬಿ ಹರಿದುದು ವಿವಿಧ ವಾದ್ಯದ
ನಿಬ್ಬರದ ನಿಡುದನಿಯು ಜಲನಿಧಿ
ಗಬ್ಬವಿಕ್ಕಿತು ಸೈನ್ಯಜಲಧಿಯ ಬಹಳ ಗರ್ಜನೆಗೆ ೫

ಕುಣಿದು ಮುಂಚಿತು ಚೂಣಿ ಸಮರಾಂ
ಗಣದ ಕೇಳೀಬಾಲಕರು ಸಂ
ದಣಿಸಿ ಹೊಕ್ಕರು ಜಯವಧೂಟೀವಿರಹ ಕಾತರರು
ಗಣನೆಯಿಲ್ಲದ ಗಜಹಯದ ಭಾ
ರಣೆಯ ಭಾರಿಯ ಭಟರೊಡನೆ ಥ
ಟ್ಟಣೆಯ ಮೇಲೆ ಮಹೀಶ ಹೊಕ್ಕನು ಕಾಳೆಗದ ಕಳನ  ೬

ಉದಯವಾಗದ ಮುನ್ನ ಕಳನೊಳು
ಹೊದರುಗಟ್ಟಿದ ವೈರಿಸೇನೆಯ
ಹದನಿವರ ಪಾಳಯಕೆ ಬಂದುದು ದಳದ ಕಳಕಳಿಕೆ
ಸದೆದುದನಿಬರ ಕಿವಿಯನೊಡೆ ತುಂ
ಬಿದವು ನಿಸ್ಸಾಳೌಘ ದಿಕ್ಕಿನ
ತುದಿಯ ತಿವಿದವು ಮೀರಿ ಗಳಹುವ ಗೌರುಗಹಳಗಳು  ೭

ಅರಸನುಪ್ಪವಡಿಸಿದನವನೀ
ಶ್ವರ ವಿಹಿತ ಸಂಧ್ಯಾಭಿವಂದನ
ವರ ಮಹೀಸುರವರ್ಗ ಸತ್ಕಾರವನು ನೆರೆ ಮಾಡಿ
ಸುರನದೀಜನ ಮನೆಗೆ ಬರಲಂ
ದಿರುಳ ಕಡೆಯಲಿ ನೃಪತಿಗಾ ವಿ
ಸ್ತರವ ವಿರಚಿಸಿ ಜೋಡ ತೊಟ್ಟನು ರಥದಿ ಮಂಡಿಸಿದ  ೮

ಇಂದಲೇ ಪಾಂಡವರ ಚಿತ್ತಾ
ನಂದಚಿತ್ರಕೆ ಧೂಮದರುಶನ
ವಿಂದಲೇ ಕೌಂತೇಯರಿಗೆ ಸುರಪುರದ ವೈಹಾಳಿ
ಇಂದಲೇ ಪವನಜನ ಪಾರ್ಥನ
ಸಂದ ವಿಕ್ರಮವಿಷಕೆ ಗಾರುಡ
ವೆಂದೆನುತ ಬೊಬ್ಬಿರಿದು ಕವಿದುದು ಸಕಲ ಕುರುಸೇನೆ  ೯

ತರುಣ ರವಿಗಳ ತತ್ತಿಗಳ ಸಂ
ವರಿಸದಿರರೆನೆ ಮಾಣಿಕಂಗಳ
ತರತರದ ಕೀಲಣೆಯ ಹೊಂಗೆಲಸದ ಸುರೇಖೆಗಳ
ಕೊರಳ ಹೀರಾವಳಿಯ ರಶ್ಮಿಯ
ಹೊರಳಿಗಳ ಹೊದಕೆಗಳ ಕವಚದ
ಲರಿದಿಶಾಪಟ ಭೀಷ್ಮನೆಸೆದನು ರಥದ ಮಧ್ಯದಲಿ  ೧೦

ವೀರ ಸೇನಾಪತಿಯ ಸನ್ನೆಗೆ
ಭೂರಿಬಲ ಹಬ್ಬಿದುದು ದಿಕ್ಕುಗ
ಳೋರೆ ಹಿಗ್ಗಿದವಮಮ ತಗ್ಗಿದರಹಿಪ ಕೂರುಮರು
ಚಾರು ಚಾಮರ ಸಿಂಧ ಸತ್ತಿಗೆ
ಯೋರಣದ ಕಲ್ಪಾಂತ ಮೇಘದ
ಭಾರಣೆಯನೊಟ್ಟೈಸಿ ಥಟ್ಟಯಿಸಿತ್ತು ಕುರುಸೇನೆ  ೧೧

ಭುವನಗರ್ಭಿತವಾದುದಾ ಮಾ
ಧವನ ಜಠರದವೋಲು ವರ ಭಾ
ಗವತನಂತಿರೆ ವಿಷ್ಣುಪದ ಸಂಸಕ್ತ ತನುವಾಯ್ತು
ರವಿಯವೊಲು ಶತಪತ್ರ ಸಂಘಾ
ತವನು ಪಾದದಲಣೆದು ಕೆಂಧೂ
ಳವಗಡಿಸೆ ಕುರುಸೇನೆ ಕೈಕೊಂಡುದು ರಣಾಂಗಣವ  ೧೨

ಹೊಗರೊಗುವ ಝಳಪಿಸುವಡಾಯುಧ
ನೆಗಹಿ ತೂಗುವ ಲೌಡಿಗಳ ಮೊನೆ
ಝಗಝಗಿಸಿ ಝಾಡಿಸುವ ಸಬಳದ ತಿರುಹುವಂಕುಶದ
ಬಿಗಿದುಗಿವ ಬಿಲ್ಲುಗಳ ಬೆರಳೊಳ
ಗೊಗೆವ ಕೂರಂಬುಗಳ ಸುಭಟಾ
ಳಿಗಳೊಡನೆ ಗಾಂಗೇಯ ಹೊಕ್ಕನು ಕಾಳೆಗದ ಕಳನ  ೧೩

ವಿತತ ವಾಜಿವ್ರಜದ ಘನ ಹೇ
ಪಿತದ ಘಲ್ಲಣೆ ಗಜದಳದ ಬೃಂ
ಹಿತದ ಬಹಳಿಕೆ ರಥಚಯದ ಚೀತ್ಕೃತಿಯ ಚಪ್ಪರಣೆ
ನುತಪದಾತಿಯ ಗರ್ಜನೆ ಸಮು
ದ್ಧತ ಧನುಷ್ಟಂಕಾರ ರೌದ್ರಾ
ಯತ ಛಡಾಳಿಸಲೊಡ್ಡಿದರು ಮಂಡಳಿಸಿ ಮೋಹರವ  ೧೪

ಚೂಣಿ ತಲೆಯೊತ್ತಿದುದು ಹರಣದ
ವಾಣಿ ಕೇಣಿಯ ಕುಹಕವಿಲ್ಲದೆ
ಗೋಣುಮಾರಿಗಳೋಲಗದ ಹಣರುಣವ ನೀಗಿದರು
ಹೂಣಿಗರು ಹುರಿಬಲಿದು ಹಾಣಾ
ಹಾಣಿಯಲಿ ಹೊಯ್ದಾಡಿದರು ಘನ  ೧೫
ಶೋಣಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ

ಕೋಡಕೈಗಳ ಭಟರಲಲಗೆಡೆ
ಯಾಡಿದವು ಹೆಗಲಡ್ಡವರಿಗೆಯ
ನೀಡಿ ಮೈಮಣಿದೌಕಿ ತಿವಿದಾಡಿದರು ಸಬಳಿಗರು
ಕೂಡೆ ತಲೆವರಿಗೆಗಳಲುರೆ ಕೈ
ಮಾಡಿದರು ಖಡ್ಗಿಗಳು ಥಟ್ಟಿನ  ೧೬
ಜೋಡು ಜರಿಯಲು ಹೊಕ್ಕು ಬೆರಸಿದವಾನೆ ಕುದುರೆಗಳು

ಪಿರಿದು ಮೊನೆಗುತ್ತಿನಲಿ ನೆತ್ತರು
ಸುರಿದುದಡಹೊಯ್ಲಿನಲಿ ಖಂಡದ
ಹೊರಳಿ ತಳಿತುದು ಕಾಯವಜಿಗಿಜಿಯಾಯ್ತು ಲೌಡಿಯಲಿ
ಸರಳ ಚೌಧಾರೆಯಲಿ ಹಾಯ್ದವು
ಕರುಳು ಕಬ್ಬುನ ಕೋಲಿನಲಿ ಕ
ತ್ತರಿಸಿದವು ಕಾಲುಗಳು ಕೌತುಕವಾಯ್ತು ಚತುರಂಗ  ೧೭

ಕಡಿದು ಚಿಮ್ಮಿದ ಬೆರಳುಗಳ ಹಿ
ಮ್ಮಡಿಯ ಘಾಯದ ನಾಳ ಹರಿದರೆ
ಮಡಿದ ಗೋಣಿನ ಬೆಸುಗೆ ಬಿರಿದ ಕಪಾಲದೋಡುಗಳ
ಉಡಿದ ತೊಡೆಗಳ ಹರಿದ ಹೊಟ್ಟೆಯ
ಹೊಡೆ ಮರಳಿದಾಲಿಗಳ ತೋಳಿನ
ಕಡಿಕುಗಳ ರಣಮಹಿ ಭಯಾನಕ ರಸಕೆ ಗುರಿಯಾಯ್ತು  ೧೮

ಕೊರಳ ತೆತ್ತುದು ಚೂಣಿ ದಳ ಮು
ಖ್ಯರಿಗೆ ಹೇಳಿಕೆಯಾಯ್ತು ಮೋಹರ
ವೆರಡರಲಿ ಮೊನೆಯುಳ್ಳ ನಾಯಕವಾಡಿ ನಲವಿನಲಿ
ಕರಿ ತುರಗ ರಥ ಪಾಯದಳದಲಿ
ಹೊರಳಿ ತಗ್ಗಿತು ರಥದ ಬಗ್ಗೆಯ
ಧರಧುರದ ದೆಖ್ಖಾಳ ಮಿಗೆ ನೂಕಿದರು ಸಂಗರಕೆ  ೧೯

ತಳಿತ ಸತ್ತಿಗೆಗಳ ಪತಾಕಾ
ವಳಿಯ ಪಡಪಿನ ಬಿರುದಿನುಬ್ಬಟೆ
ಗಳ ವಿಡಾಯಿಯ ಸಿಂಧ ಸೆಳೆ ಸೀಗುರಿಯ ಸುಳಿವುಗಳ
ಕಳಕಳಿಕೆ ಕಡು ಹೇರಿ ತಳ ಪಟ
ದೊಳಗೆ ತಲೆದೋರಿದರು ಫಡಫಡ
ಫಲುಗುಣನ ಬರಹೇಳೆನುತ ದ್ರೋಣಾದಿ ನಾಯಕರು  ೨೦

ದೊದ್ದೆ ತೆಗೆಯಲಿ ಪಾರ್ಥ ಪವನಜ
ರಿದ್ದರಾದರೆ ಬರಲಿ ಸಮರವ
ಹೊದ್ದಲಾಪರೆ ಹೊಗಲಿ ಹರಿ ತೋರಲಿ ಸಹಾಯತೆಯ
ಇದ್ದರೆಯು ರಣವಿಜಯ ವನಿತೆಗೆ
ಹೊದ್ದಿಗರು ದ್ರುಪದಾದಿ ರಾಯರ
ಹೊದ್ದಿಸಲು ಬೇಡವರಿಗಂಜುವೆವೆನುತ ನೂಕಿದರು  ೨೧

ಗುರುತನುಜ ವೃಷಸೇನ ಮಾದ್ರೇ
ಶ್ವರ ಜಯದ್ರಥ ಶಕುನಿ ದುಸ್ಸಹ
ಗುರು ಸುಶರ‍್ಮ ವಿಕರ್ಣ ಭೂರಿಶ್ರವ ಸುಲೋಚನರು
ಧರಣಿಪತಿ ಭಗದತ್ತ ಯವನೇ
ಶ್ವರ ಕಳಿಂಗ ಸುಕೇತು ದುರ್ಜಯ
ದುರುಳ ದುಶ್ಶಾಸನನಲಂಬುಸರೈದಿದರು ರಣವ  ೨೨

ಗೆದ್ದರೆಯು ಗೆಲವಿಲ್ಲ ಹಾರುವ
ರುದ್ದುರುಟುತನಕೇನನೆಂಬೆನು
ಗದ್ದುಗೆಯ ಹೊರೆಗರಸ ಕರೆದರೆ ಭವವ ಮರೆದಿರಲ
ಹದ್ದು ಕಾಗೆಯ ಮನೆಯ ಬಾಣಸ
ವಿದ್ಯೆಯೆಮ್ಮದು ಯಮನ ನಿಳಯಕೆ
ಬಿದ್ದಿನರು ನೀವೆಂದೆನುತ ಕಲಿ ಮತ್ಸ್ಯನಿದಿರಾದ  ೨೩

ನಕುಲ ಕುಂತೀಭೋಜಸುತ ಸೋ
ಮಕ ಘಟೋತ್ಕಚ ದ್ರುಪದ ಪ್ರತಿವಿಂ
ಧ್ಯಕ ಶತಾನೀಕಾಭಿಮನ್ಯು ಯುಯುತ್ಸು ಸೃಂಜಯರು
ಸಕಲ ಸನ್ನಾಹದಲಿ ಯುದ್ಧೋ
ದ್ಯುಕುತರಾದರು ಚಕಿತಚಾಪರು ಮುಕುತ
ಶಸ್ತ್ರಾವಳಿಯ ಮಳೆಗಾಲವನು ನಿರ‍್ಮಿಸುತ  ೨೪

ಹಿಡಿದನಶ್ವತ್ಥಾಮ ದ್ರುಪದನ
ಪಡೆಯೊಡನೆ ಬವರವನು ಕೃಪ ಮುಂ
ಗುದಿಯೊಡನೆ ಹೊಕ್ಕಿರಿದು ತಡೆದನು ಸಾತ್ಯಕಿಯ ರಥವ
ಕಡುಹು ಮಿಗೆ ಕೈದೋರಿ ಪವನಜ
ನೊಡನೆ ಗುರು ಕಾದಿದನು ರಾಯನ
ನುಡಿಸಿ ಕೌರವರಾಯ ತಾಗಿದನಾಹವಾಗ್ರದಲಿ  ೨೫

ಸೆಣಸು ಮಿಗಲಭಿಮನ್ಯು ಭೀಷ್ಮನ
ಕೆಣಕಿದನು ದುಶ್ಶಾಸನನು ಫಲು
ಗುಣನ ತರುಬಿದನಾ ಘಟೋತ್ಕಚನೊಡನೆ ಭಗದತ್ತ
ಕಣೆಗೆದರಿ ಸಹದೇವ ನಾರಾ
ಯಣಬಲವ ಬೆರಸಿದನು ಮತ್ಸ್ಯನ
ಹೊಣಕೆಯಿಂದ ಸುಶರ‍್ಮ ತಾಗಿದನರಸ ಕೇಳೆಂದ  ೨೬

ಬೆರಸಿ ಹೊಯ್ದರು ತಿವಿದರೆಚ್ಚರು
ಹರೆಗಡಿದರರೆಗಡಿದರೆತ್ತಿದ
ರರೆದರಿಟ್ಟೊರಸಿದರು ತರಿದರು ತುಳುಕಿ ತೂರಿದರು
ಸರಳು ಸರಿಯಲು ಜೋಡು ಜರಿಯಲು
ತುರಗ ಧೂಪಿಸೆ ಸಾರಥಿಯ ಕೈ
ಹರಿಯೆ ಕಾದಿತು ವೀರ ನಾಯಕವಾಡಿ ಧೈರ‍್ಯದಲಿ  ೨೭

ಕೆಲಬರಾಯುಧ ಮುರಿದು ಸಾರಥಿ
ಯಳಿದು ಕೆಲಬರು ರಥ ವಿಸಂಚಿಸಿ
ಕೆಲರು ಕೆಲಬರು ಬಳಲಿದರು ಪೂರಾಯ ಘಾಯದಲಿ
ಕೆಲರು ಜುಣುಗಿತು ಕಂಡ ಮುಖದಲಿ
ಕೆಲರು ಹರೆದರು ಕೈಮನದ ಕಡು
ಗಲಿಗಳಚ್ಚಾಳಾಗಿ ನಿಂದರು ಕೆಲರು ಕಾಳೆಗಕೆ  ೨೮

ಏರ ಸೂರೆಯ ಕಟ್ಟಿ ಹಿಂಗುವ
ಗಾರುತನ ತಾನೇನು ಸುಡು ಮುಂ
ಮಾರಿಗಳ ಮಾತೆತ್ತಲಡಸಿತು ಬಿರುದ ಸೈರಿಸುತ
ಆರಿ ಹೋಯಿತೆ ವೀರರಸ ತಲೆ
ದೋರ ಹೇಳಾ ರಣಕೆನುತ ಕೈ
ಮೀರಿ ಕವಿದರು ದ್ರುಪದ ಕೈಕೆಯ ಮತ್ಸ್ಯ ಸೃಂಜಯರು ೨೯

ಕಡುಹು ಮುರಿದುದು ಕೌರವೇಂದ್ರನ
ಪಡೆಯ ತರಹರ ದಿಕ್ಕುಗೆಟ್ಟುದು
ಮಡಮುರಿಯಲಂಗೈಸಿದರು ದುಶ್ಶಾಸನಾದಿಗಳು
ಕಡಲು ಮೈದೆಗೆವಂತೆ ಬಹ ಬಹು
ಪಡೆಯ ಕಂಡನು ದ್ರೋಣ ಫಡಫಡ
ಪಡೆಯ ತೆಗೆದರೆ ರಾಯನಾಣೆಯೆನುತ್ತ ಮಾರಾಂತ  ೩೦

ಸಾಹಸಿಕರೈ ದ್ರುಪದರಿವದಿರ
ಚೋಹದೋಲೆಯಕಾರತನ ಮನ
ಗಾಹಿನಲಿ ಹೆಮ್ಮಕ್ಕಳಿವದಿರು ಶಿವಶಿವಿವದಿರಿಗೆ
ಆಹವದೊಳೋಸರಿಸಿದರೆ ಭಟ
ಸಾಹಸಕೆ ಕಲೆ ಹೊದ್ದದೇ ಸುಡು
ದೇಹವೇತಕೆ ದೆಸೆಯೆ ಸಾಕೆನುತೈದಿದನು ದ್ರೋಣ  ೩೧

ಆವುದಂತರ ವನ ಕಳಭಕೈ
ರಾವತಕೆ ಮಝ ಭಾಪು ದ್ರೋಣನ
ಡಾವರಕೆ ಪಾಂಚಾಲನೈಸರವನು ಮಹಾದೇವ
ನಾವು ದ್ರುಪದನ ಕಾಣೆವಾವೆಡೆ
ಗಾ ವಿರಾಟನು ಸರಿದನೆತ್ತಲು
ತೀವಿದರು ಸೃಂಜಯರು ನೃಪ ನಾವರಿಯೆವಿದನೆಂದ  ೩೨

ಒಗ್ಗೊಡೆದು ರಿಪುಸೇನೆ ಸರಿದುದು
ತಗ್ಗಿತುಬ್ಬಾಳುಗಳ ನುಡಿ ಮನ
ನೆಗ್ಗಿದವು ಮಂಡಳಿಕರಿಗೆ ತಲೆ ಮುಸುಕು ಪಸರಿಸಿತು
ಲಗ್ಗೆವರೆಗಳಿಗಮಮ ಮೌನದ
ಸುಗ್ಗಿಯಾಯಿತು ಬಿರುದ ಬೈಚಿಡು
ತಗ್ಗಳೆಯರೊಳಸರಿಯೆ ಕಂಡನು ಪಾರ್ಥ ಖತಿಗೊಂಡ  ೩೩

ರಣಕೆ ತವಕಿಸಿ ಬಳಿಕ ತಾಗುವ
ಕಣೆಯ ದಾಳಿಗೆ ತಳ್ಳುವಾರುವ
ಗುಣವಿದೆಂತುಟೊ ಭಂಡರಿವದಿರ ಹೋಗಹೇಳೆನುತ
ಕೆಣಕಿದನು ಬಿಲುದಿರುವನುರು ಮಾ
ರ್ಗಣದ ಹೊದೆಗಳ ಕೆದರಿ ಸಮರಾಂ
ಗಣಕೆ ಸಮ್ಮುಖನಾದನರ್ಜುನ ಸಿಂಹನಾದದಲಿ  ೩೪   ಹೋರಬೇಕೇ ದ್ರುಪದನಾನ
ಲ್ಲಾರಯಿದು ಕಾದುವುದು ಚಾಪದ
ಚಾರುವಿದ್ಯೆಯ ನಿಮ್ಮೊಳರಿದುದ ನಿಮಗೆ ತೋರಿಸುವೆ
ಸೈರಿಸುವುದೀ ಬಾಲಭಾಷೆಗೆ
ವೈರಬಂಧವ ಬಿಡುವದೆನುತಾ
ಚಾರಿಯನ ರಥಹಯವ ಹೊದಿಸಿದನಸ್ತ್ರನಿಕರದಲಿ  ೩೫

ಕವಿವ ಕಣೆಗಳ ದಡ್ಡಿಗಳನೊಡೆ
ತಿವಿದು ತುಳುಕಿದನಂಬಿನಬುಧಿಯ
ನವಿರಳಾಸ್ತ್ರಾನೀಕ ಡಾವರಿಸಿದವು ದಿಗುತಟವ
ಅವನಿಯೋ ದಿಕ್ಕುಗಳೊ ಪಾರ್ಥನೊ
ರವಿಯ ಕಾಣೆನು ಭಾಪು ಕಲಶೋ
ದ್ಭವನ ಕೈಮೈಯೆನುತ ಬೆರಗಿನೊಳಿರ್ದುದಮರಗಣ  ೩೬

ಈತನಸ್ತ್ರವ ಕಡಿದು ಬಾಣ
ವ್ರಾತವನು ತೆರಳಿಚಿದನರ್ಜುನ
ಸೇತುವಾದವು ಸರಳು ವೈಹಾಯಸ ಮಹಾರ್ಣವಕೆ
ಕೇತುವಾದವು ರವಿರಥಕೆ ಪುರು
ಹೂತನಾದವು ಗಿರಿಕುಳಕೆ ಕೈ
ಸೋತುವಿವ ತರಿದೊಟ್ಟಿ ಬಳಲಿದು ನಿಂದನಾ ದ್ರೋಣ  ೩೭

ತ್ರಾಣ ಕೋಮಲವಾಯ್ತು ತೆಗೆಯಲಿ
ದ್ರೋಣನಾವೆಡೆ ಪಾಯದಳ ಬಿಡು
ಹೂಣಿಗರ ಬರಹೇಳು ಬಾಣದ ಬಂಡಿ ಸಾವಿರವ
ಶೋಣಿತದ ಸಾಗರದಿನವನಿಯ
ಕಾಣೆ ಹೂಳಲಿ ಪಾದರಜದಲಿ
ಕೇಣಿಗೊಂಡನು ವೈರಿಸೇನೆಯನಮಮ ಕಲಿ ಪಾರ್ಥ  ೩೮

ನರನೆ ಹೊಕ್ಕವನಾದಡಯ್ಯನ
ಹರಿಬವೆನ್ನದೆನುತ್ತ ಬಿಲುದಿರು
ಮೊರೆಯೆ ಮೋಹರಗಡಲ ಕವಿಸಿದನಂದು ಗುರುಸೂನು
ಗುರುಸುತನ ಬಳಿವಿಡಿದು ಕಡುಹಿನ
ಲುರವಣಿಸಿದರು ಶಕುನಿ ಯವನೇ
ಶ್ವರ ಕಳಿಂಗ ಸುಕೇತು ಭೂರಿಶ್ರವರು ಬಿಲುದುಡುಕಿ  ೩೯

ಸಾಲ ಮಕುಟದ ಮಾಣಿಕದ ಮಣಿ
ಮಾಲಿಕೆಯ ರಶ್ಮಿಗಳು ಸೂರ‍್ಯನ
ಸೋಲಿಸಲು ಸಮರವನು ಹೊಕ್ಕರು ಕುರುಹಿನತಿಬಳರು
ಕೋಲ ತೆಗಹಿನ ಕಿರಿಗಡಿಯ ಕ
ಣ್ಣಾಲಿಗಳ ಕೆಂಪುಗಳ ಹೊಗರು ಛ
ಡಾಳಿಸಲು ಬಲುಖತಿಯ ಸುಭಟರು ಹಳಚಿತರ್ಜುನನ  ೪೦

ಏನ ಹೇಳುವೆನವರ ಶರ ಸಂ
ಧಾನವನು ಕಲಿ ಪಾರ್ಥನನುಸಂ
ಧಾನವನು ಕೈಯೊಡನೆಯನಿಬರ ಕಣೆಯ ಖಂಡಿಸಿದ
ದಾನವಾಮರರೊಳಗೆ ಸುಭಟ ನಿ
ಧಾನವನು ಪಡಿಗಟ್ಟಬಾರದು
ಮಾನವರ ಮಾತೇತಕೆಂದನು ಸಂಜಯನು ನಗುತ  ೪೧

ಹಿಳುಕು ಹಿಳುಕುಗಳಡಸಿ ದೆಸೆ ಕ
ತ್ತಲಿಸಿ ಕೈಕೊಂಡವು ಪತತ್ರಾ
ವಳಿಯ ಪವನನ ಹೊಯ್ಲಿನಲಿ ಬಾಯ್ಧಾರೆ ಕಿಡಿಯೇಳೆ
ಬಳಿಸರಳ ಬಿಲ್ಲಾಳ ದಡ್ಡಿಯ
ಬಲುಹು ತರುಬಿತು ಪಡಿಮುಖದ ಮಂ
ಡಳಿಕರೆಸುಗೆಯನಮಮ ಸಮತಳಿಸಿತ್ತು ರಣಕೇಳಿ  ೪೨

ಎಸುವನೊಬ್ಬನೆ ಪಾರ್ಥನನಿತುವ
ಕುಸರಿದರಿವರು ಗುರುಸುತಾದಿಗ
ಳೆಸುವರನಿಬರು ತರಿವನೊಬ್ಬನೆ ಅಮರಪತಿಸೂನು
ಎಸುವರಿವರರ್ಜುನನ ಮೈಯ್ಯಲಿ
ಮಸೆಯ ಕಾಣೆನು ಪಾರ್ಥನನಿಬರ
ವಿಶಿಖವನು ನೆರೆಗಡಿದು ಕೆತ್ತುವನನಿಬರೊಡಲುಗಳ  ೪೩

ಕೋಲ ಕೋಳಾಹಳಕೆ ಸೈರಿಸ
ದಾಳ ನಾಯಕವಾಡಿ ಹರಿಗೆಯ
ಹೇಳಿದರು ಚಾಚಿದರು ಬಲುಬದ್ಧರದ ಬಂಡಿಗಳ
ಹೂಳೆ ಬೀಸಿದ ಗುಳದ ಕರಿಗಳ
ಹೇಳಿದರು ಬಲ ಮುರಿದಡಾಕೆಗೆ
ಮೇಲೆ ನಾವಿಹೆವೆಂದು ನಿಂದರು ಗುರುಸುತಾದಿಗಳು  ೪೪

ಹರಿಬದಾಹವವೆಂಬರಾವೆಡೆ
ಹರೆದರೇ ರಣಹೇಡಿಗಳು ನುಡಿ
ಯುರಿಯ ಹೊರುವುದು ಘಾಯವತಿಶೀತಳ ಮಹಾದೇವ
ಅರಮನೆಯ ಕಾಲಾಳು ಕರಿ ರಥ
ತುರಗವಳಿದರೆ ತಮಗೆ ನಷ್ಟಿಯೆ
ಗರುವನೈ ಗುರುತನುಜನೆನುತೈದಿದನು ಕಲಿ ಪಾರ್ಥ  ೪೫

ಒಗ್ಗಿ ಕವಿತಹ ತುರಗ ಸೇನೆಯ
ನಗ್ಗಡಲೊಳಿಕ್ಕಿದನು ಕರಿಗಳ
ಮೊಗ್ಗರವ ಮೆದೆಗೆಡಹಿದನು ಹುಡಿಮಾಡಿದನು ರಥವ
ಮುಗ್ಗಿ ಬೀಳುವ ಪಾಯದಳವನು
ನುಗ್ಗುನುಸಿಮಾಡಿದನು ರಕುತದ
ಸುಗ್ಗಿಯಾದುದು ಶಾಕಿನಿಯರಿಗೆ ಕಳನ ಚೌಕದಲಿ  ೪೬

ಜೋಡನೊಡೆಹಾಯ್ದಂಬು ಧರಣಿಯೊ
ಳಾಡಿದವು ಗುಳ ಸರಿದ ಕರಿಗಳ
ತೋಡಿ ನೆಟ್ಟವು ಬದ್ಧರಂಗಳ ಬಾದಣವ ಕೊರೆದು
ಈಡಿರಿದವರಿಸುಭಟರೊಡಲಿನ
ಜೋಡುಗಳ ಜರಿಯೊಡೆದು ತಳಪಟ
ಮಾಡಿದವು ಚತುರಂಗಬಲವನು ಪಾರ್ಥನಂಬುಗಳು  ೪೭

ತಾರು ಥಟ್ಟಿಗೆ ಕೆಡೆದವಾನೆಗ
ಳಾರು ಸಾವಿರ ತುರಗದಳದಸು
ಸೂರೆ ಹೋದುದು ಸಮರದಲಿ ಹದಿನೆಂಟು ಸಾವಿರವು
ಕಾರಿದರು ಕರುಳನು ಪದಾತಿಗ
ಳಾರು ಲಕ್ಷವು ಮೊದಲ ಲಗ್ಗೆಗೆ
ಮೂರು ಸಾವಿರ ತೇರು ನೆಗ್ಗಿದವೊಂದು ನಿಮಿಷದಲಿ  ೪೮

ಹೆಣನ ತುಳಿದೊತ್ತೊತ್ತೆಯಲಿ ಸಂ
ದಣಿಸಿ ಕವಿದುದು ಮತ್ತೆ ದಳ ಭಾ
ರಣೆಯ ಬಿಂಕವನೇನನೆಂಬೆನು ಬಲಿದ ಲಗ್ಗೆಯಲಿ
ಕೆಣಕಿದವು ಕರಿಘಟೆಗಳೊಂದೆಸೆ
ಯಣುಕಿದವು ಹಯರಥವದೊಂದೆಸೆ
ಕಣೆಗೆದರಿ ಕಾಲಾಳದೊಂದೆಸೆ ಮುಸುಕಿತರ್ಜುನನ  ೪೯

ಸವೆದು ಸವೆಯದು ಪೂತು ಮಝ ಕೌ
ರವನ ಸೇನಾಜಲಧಿ ನಾಯಕ
ನಿವಹವನಿತುವ ನೂಕಿ ಸವೆಯರು ಗುರುಸುತಾದಿಗಳು
ಕವಿಯಲೀ ಬಲ ಮತ್ತೆ ಸಂದಣಿ
ತವಕಿಸಲಿ ತಾವನಿಬರುರೆ ಮಗು
ಳವಗಡಿಸಲಿ ವಿನೋದವೈಸಲೆಯೆನುತ ನರನೆಚ್ಚ  ೫೦

ಅಗಲದಲಿ ದಿಗುವಲಯವೀಯಂ
ಬುಗಳನೀದುದೊ ಮೇಣು ಬಾಣದ
ಮುಗಿಲ ಮೂಲೆಯ ಕೊಯಿದರೋ ಜರುಹಿದರೊ ಶರನಿಧಿಯ
ಝಗಝಗಿಸಿ ಹೊಳೆಹೊಳೆವ ಬಾಯ್ಧಾ
ರೆಗಳ ಬೆಳಗಿನ ದಾಳಿ ಧೀಂಕಿಡೆ
ಮೊಗೆದವರ್ಜುನನಂಬು ರಿಪುಚತುರಂಗ ಜೀವನವ  ೫೧

ಮತ್ತೆ ಮುರಿದನು ಹತ್ತು ಸಾವಿರ
ಮತ್ತಗಜವನು ರಥಚಯವ ನು
ಗ್ಗೊತ್ತಿದನು ಹನ್ನೆರಡು ಸಾವಿರವನು ರಣಾಗ್ರದಲಿ
ಹೊತ್ತಿತಾತನ ವಿಕ್ರಮಾಗ್ನಿಗೆ
ಹತ್ತುಕೋಟಿ ಪದಾತಿ ರಾವ್ತರು
ತೆತ್ತರಸುವನು ಲಕ್ಷ ಕೌರವರಾಯ ಸೇನೆಯಲಿ  ೫೨

ತೀರಿತಡವಿಯ ಕಡಿತ ಗಿರಿಗಳ
ಹೋರಟೆಗೆ ಹೊಗಬೇಕು ಸೇನೆಗೆ
ಪಾರುಖಾಣೆಯ ಕೊಟ್ಟೆವಾಗಳೆ ಗುರುಸುತಾದಿಗಳ
ಭಾರನೆಗೆ ಕೊಡಬೆಕು ಸಮಯವ
ನಾರುಭಟೆಯಲಿ ಮಲೆವುದೈ ಕೈ
ವಾರವೇಕೀ ಕಾಯದಲಿ ಕಕ್ಕುಲಿತೆ ಬೇಡೆಂದ  ೫೩

ಜೇನ ಹುಟ್ಟಿನ ಹುಳುವ ಬಡಿದ ಸ
ಗಾನತನ ತಾನೇನು ಚೂಣಿಯ
ಸೇನೆಗೀನೆಯ ಸವರಲಾಯಿತೆ ಶೌರ‍್ಯಸಿರಿ ನಿನಗೆ
ನಾನದಾರೆಂದರಿಯೆ ಫಡ ಗುರು
ಸೂನುವಲ್ಲಾ ವೈರಿತಿಮಿರಕೆ
ಭಾನು ಬಗೆಯೈಯೆನುತ ಹೊಕ್ಕನು ದ್ರೋಣನಂದನನು  ೫೪

ಬಳಿಯಲೊಡಗವಿಯಿತ್ತು ಚಾತು
ರ್ಬಲ ಸಹಿತ ದ್ರೋಣಾದಿಗಳು ತೋ
ರಳವ ಹಿಡಿ ಹಿಡಿ ಧನುವ ಸುರಿ ಸುರಿ ಸರಳ ಸರಿವಳೆಯ
ಗಳಹದಿರು ಮೈದೋರು ದಾನವ
ಕುಲದಿಶಾಪಟ ಸಹಿತ ನೀನೆಸು
ಕಳೆಯದಿರು ಕಾಲವನೆನುತ ಕವಿದೆಚ್ಚರತಿರಥರು  ೫೫

ಗುರುಸುತನ ಕೂರಂಬು ದ್ರೋಣನ
ಸರಳಸಾಗರ ಶಲ್ಯನಂಬಿನ
ಹೊರಳಿ ಶಕುನಿಯ ಬಾಣಪಂಜರ ಕೃಪನ ಶರಮೇಘ
ಕುರುಪತಿಯ ನಾರಾಚ ವರದು
ರ್ಧರುಷ ಸೈಂಧವ ಶಕುನಿ ಕೃತವ
ರ್ಮರ ಶರಾವಳಿ ಹೂಳಿದವು ದ್ಯಾವಾಮಹೀತಳವ  ೫೬

ಉರಿಯ ರಾಜ್ಯವ ಸೂರೆಗೊಳಲೆನು
ತರಗು ಪರಿದವೊಲಾಯ್ತು ಮೇಘದ
ನೆರವಿ ಗಾಳಿಯ ಮನೆಗೆ ಬಿದ್ದಿನ ಬಂದ ತೆರೆನಾಯ್ತು
ಗಿರಿಯ ಮಕ್ಕಳು ನಗುತ ವಜ್ರದ
ಕರವ ಹೊಯ್ದಂತಾಯ್ತು ಪಾರ್ಥನ
ಸರಳ ಸೀಮೆಯ ಬೆರಸಿದವು ರಿಪುಸುಭಟರಂಬುಗಳು  ೫೭

ಸಹಜಕೀತನು ಚಾಪಧರ ಗುರು
ವಹುದು ಗುರುಗಳ ಮಗನೆ ಗುರುವೆಮ
ಗಹುದು ನೋಳ್ಪಡೆ ಶಿವಶಿವಾ ಕಲಿ ಶಲ್ಯ ಮಾವನಲೆ
ಮಹಿಮರಿವರೆಮ್ಮೊಡನೆಯೋದಿದ
ರಹರು ನಾವಿನ್ನಾರ ಕಳೆವೆವು
ಸಹಸ ಲೇಸೆಂದೆಚ್ಚನವರವರಸ್ತ್ರ ರಥ ಧನುವ  ೫೮

ಮತ್ತೆ ಹೊಸ ರಥ ನೂತನಾಸ್ತ್ರದ
ಲುತ್ತಮ ಪ್ರತ್ಯುಗ್ರ ಚಾಪದ
ಲೊತ್ತರಿಸಿ ಕವಿದುದು ಕಿರೀಟಿಯ ರಥವ ಮುರಿಯೆಸುತ
ಮತ್ತೆ ಕಡಿದನು ರಥವ ಚಾಪವ
ಮತ್ತೆ ಹೊಸ ಹೂಟೆಯೊಳು ಹೊಕ್ಕರು
ತೆತ್ತು ಸವೆಯರು ಶೌರ‍್ಯದಭಿಮಾನವನು ಪಟುಭಟರು  ೫೯

ಸರಳ ಕವಿಸಿದರಿವರು ಮತ್ತದ
ಪರಿಹರಿಸಿದನು ಪಾರ್ಥನಾತನ
ಸರಳುಗಳ ಸಂವರಿಸಿ ಮುಸುಕಿದರರ್ಜುನನ ರಥವ
ತೆರಳೆಗಡಿದನು ಮತ್ತೆ ದ್ರೋಣನ
ಗುರುಸುತನ ಸೈಂಧವನ ಮಾದ್ರೇ
ಶ್ವರನ ಚಾಪವ ಕಡಿದು ಹೂಳಿದನೊಡಲೊಳಂಬುಗಳ ೬೦

ಘಾಯವಡೆದರು ಸುರಿವ ಸರಳಿಗೆ
ನಾಯಕರು ಮರಳಿದರು ಪೌರುಷ
ಮಾಯವಾಯಿತು ತನು ನಡುಗಿತಡಿಗಡಿಗೆ ಡೆಂಡಣಿಸಿ
ಕಾಯಗಟ್ಟಿತು ಭೀತಿ ಬಿರುದಿನ
ಬಾಯೆಣಿಕೆ ಬಯಲಾಯ್ತು ಜೀವದ
ಬೀಯಕಿವರಂಜಿದರು ನೆನೆದರು ಮನೆಯ ರಾಣಿಯರ  ೬೧

ದಿಟ್ಟತನ ಪೊಳ್ಳಾಯ್ತು ಶೌರ‍್ಯದ
ಘಟ್ಟಿ ಕರಗಿತು ಸುಭಟಧರ‍್ಮದ
ಬಟ್ಟೆಯನು ಹೂಳಿದರು ಹಂಗಿಗರಾದರಿಹಪರಕೆ
ಬೆಟ್ಟವಾಯಿತು ಭಂಗ ಭರದಲಿ
ಬಿಟ್ಟುಹೋಯಿತು ರಾಯದಳ ಜಗ
ಜಟ್ಟಿಗಳು ಭಗದತ್ತ ಸೈಂಧವ ಗುರುಸುತಾದಿಗಳು  ೬೨

ಉಲಿವ ಭಟ್ಟರ ಬಾಯ ಹೊಯ್ ರಥ
ದೊಳಗೆ ಕೆಡಹಲಿ ಧ್ವಜದ ಕಂಭವ
ನುಲುಕದಂತಿರೆ ರಥವ ಹರಿಸಲಿ ಸೂತಕುನ್ನಿಗಳು
ತಲೆಮುಸುಕನಿಡಿ ಛತ್ರ ಚಮರವ
ನೆಲಕೆ ಬಿಸುಡಲಿ ಹೆಸರುಗೊಂಡರ
ನುಳುಹಲಾಗದು ಬೀಳಗುತ್ತುವದೆನುತ ತಿರುಗಿದರು  ೬೩

ಒಟ್ಟಿದವು ಕೈದುಗಳು ಸತ್ತಿಗೆ
ಬೆಟ್ಟವಾದವು ಸಿಂಧಸೆಳೆಗಳು
ನಟ್ಟಡವಿ ಪವಡಿಸಿದ ತೆರನಾದುದು ರಣಾಗ್ರದಲಿ
ಥಟ್ಟು ಮುರಿದುದು ಕೂಡೆ ತೆರೆ ಸಾ
ಲಿಟ್ಟ ಸಾಗರದಂತೆ ರಾಯ ಘ
ರಟ್ಟ ಕಂಡನು ಕೌರವೇಶ್ವರ ಸಕಲ ಮೋಹರವ  ೬೪

ಹೊರಳಿಯೊಡೆದು ಮಹಾಪ್ರಧಾನರು
ಮರಳಿದರಲಾ ಪೂತು ಮಝ ಧರ
ಧುರವ ಮಾಡಿದರೇಕೆ ಕರೆಕರೆ ಬಿರುದ ಬೆಸಗೊಂಬ
ಗುರುತನಯನೋ ಚಾಪವಿದ್ಯಾ
ಧರನೊ ಶಲ್ಯನೊ ಕೃಪನೊ ಶಕುನಿಯೊ
ರವಮಹಾರಥರಿದ್ದರೋಡುವರಲ್ಲ ದಿಟವೆಂದ  ೬೫

ಹೊರೆದವನ ಕಾರ‍್ಯಾರ್ಥಲಾಭವ
ಸರಕುಮಾಡರು ಜಯವಧುವನೆ
ದ್ದೆರಗಿ ನೋಡರು ವಾರ್ತೆಗೆಯ್ಯರು ಮುಕ್ತಿವಧುವಿಂಗೆ
ಧರೆಯ ಪರಮಖ್ಯಾತಿ ಪೂಜೆಯ
ಸರಕು ಗಣಿಸರು ಶಿವಶಿವಾ ಸಂ
ಗರಕೆ ದ್ರೋಣಾದಿಗಳ ವೋಲು ವಿರಕ್ತರಾರೆಂದ  ೬೬

ಆನೆಗಳು ಮರಳಿದವು ಸುಭಟ ನಿ
ಧಾನರೋಸರಿಸಿದರು ಫಡ ಸುರ
ಧೇನುಗಳಲಾ ಕರೆಯರೇ ಪರಬಲಕ್ಕೆ ವಾಂಛಿತವ
ಈ ನಪುಂಸಕರುಗಳ ನಂಬಿದ
ನಾನು ನೀತಿಜ್ಞನೆ ಮಹಾದೇ
ವೇನ ಹೇಳುವೆನೆನುತ ಭೀಷ್ಮನ ಹೊರೆಗೆ ನಡೆತಂದ  ೬೭